ನವೆಂಬರ್ 15, 2023ರಂದು ಎನ್.ಶಂಕರಯ್ಯ ಕೊನೆಯುಸಿರೆಳೆದರು. ಅವರಿಗೆ 102 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಚಂದ್ರಶೇಖರ್ ಮತ್ತು ನರಸಿಂಹನ್ ಮತ್ತು ಪುತ್ರಿ ಚಿತ್ರಾ ಅವರನ್ನು ಅಗಲಿದ್ದಾರೆ.

2019ರ ಡಿಸೆಂಬರ್‌ ತಿಂಗಳಿನಲ್ಲಿ ಪಿ. ಸಾಯಿನಾಥ್ ಮತ್ತು ಪರಿಗೆ ನೀಡಿದ ಸಂದರ್ಶನದಲ್ಲಿ ಶಂಕರಯ್ಯ ಅವರು ತಮ್ಮ ಜೀವನದ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದರು. ಅವರ ಬದುಕು ಬಹುತೇಕ ಹೋರಾಟಗಳಿಂದಲೇ ಕೂಡಿತ್ತು. ಓದಿ: ಶಂಕರಯ್ಯ: ಒಂಭತ್ತು ದಶಕಗಳ ಕ್ರಾಂತಿಕಾರಿ

ಈ ಸಂದರ್ಶನದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಅವರಿಗೆ 99 ವರ್ಷವಾಗಿತ್ತು. ಆದರೆ ವಯಸ್ಸು ಅವರ ಮೇಲೆ ಪ್ರಭಾವ ಬೀರುವಲ್ಲಿ ಸೋತಿತ್ತು. ಅಂದಿಗೂ ಅವರ ದನಿ ದೃಢವಾಗಿತ್ತು, ನೆನಪುಗಳು ಅಚ್ಚೊತ್ತಿದಂತೆ ಸ್ಪಷ್ಟವಾಗಿತ್ತು. ಅವರು ಜೀವನೋತ್ಸಾಹ ಮತ್ತು ಭರವಸೆಯ ಪ್ರತೀಕದಂತಿದ್ದರು.

1941ರಲ್ಲಿ ಮಧುರೈನ ಅಮೆರಿಕನ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಮತ್ತು 1946ರಲ್ಲಿ ಮಧುರೈ ಪಿತೂರಿ ಪ್ರಕರಣದಲ್ಲಿ ಆರೋಪಿಯಾಗಿ ಶಂಕರಯ್ಯ ಒಟ್ಟು ಎಂಟು ವರ್ಷಗಳ ಕಾಲ ಜೈಲಿನಲ್ಲಿದ್ದರು. ಭಾರತ ಸರ್ಕಾರವು ಮಧುರೈ ಪಿತೂರಿಯನ್ನು ಸ್ವಾತಂತ್ರ್ಯ ಚಳವಳಿಯ ಭಾಗವೆಂದು ಗುರುತಿಸಿದೆ.

ಆ ಸಮಯದಲ್ಲಿ ಶಂಕರಯ್ಯ ಒಬ್ಬ ಒಳ್ಳೆಯ ವಿದ್ಯಾರ್ಥಿಯಾಗಿದ್ದರಾದರೂ ಅವರಿಗೆ ತಮ್ಮ ಪದವಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಆಗ ಎಂದರೆ 1941ರಲ್ಲಿ ಅಂತಿಮ ಬಿಎ ಪರೀಕ್ಷೆಗೆ ಕೇವಲ 15 ದಿನಗಳು ಮಾತ್ರ ಬಾಕಿಯಿರುವಾಗ ಬ್ರಿಟಿಷ್ ಆಡಳಿತದ ವಿರುದ್ಧ ಪ್ರತಿಭಟಿಸಿದ್ದಕ್ಕಾಗಿ ಅವರನ್ನು ಬಂಧಿಸಲಾಯಿತು.

ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಒಂದು ದಿನ ಮೊದಲು ಅವರನ್ನು, ಎಂದರೆ ಆಗಸ್ಟ್ 14, 1947ರಂದು ಬಿಡುಗಡೆ ಮಾಡಲಾಯಿತು. 1948ರಲ್ಲಿ ಕಮ್ಯುನಿಸ್ಟ್ ಪಕ್ಷವನ್ನು ನಿಷೇಧಿಸಿದ ನಂತರ ಶಂಕರಯ್ಯ ಮೂರು ವರ್ಷಗಳ ಕಾಲ ಭೂಗತರಾಗಿದ್ದರು. ರಾಜಕೀಯವಾಗಿ ಪ್ರಚೋದಿತ ವಾತಾವರಣದಲ್ಲಿ ಬೆಳೆದ ಶಂಕರಯ್ಯ ಅವರ ಅಜ್ಜ (ಅಮ್ಮನ ಅಪ್ಪ) ಪೆರಿಯಾರ್‌ ಅನುಯಾಯಿಯಾಗಿದ್ದರು - ಶಂಕರಯ್ಯ ಅವರು ತಮ್ಮ ಕಾಲೇಜು ದಿನಗಳಲ್ಲಿ ಎಡಪಂಥೀಯ ಚಳವಳಿಯ ಪರಿಚಯ ಹೊಂದಿದ್ದರು. ಜೈಲಿನಿಂದ ಬಿಡುಗಡೆಯಾದ ನಂತರ ಮತ್ತು ಭಾರತ ಸ್ವಾತಂತ್ರ್ಯಗೊಂಡ ನಂತರ, ಶಂಕರಯ್ಯ ಕಮ್ಯುನಿಸ್ಟ್ ಚಳುವಳಿಯಲ್ಲಿ ಸಕ್ರಿಯರಾಗಿದ್ದರು. ಅವರು ತಮಿಳುನಾಡಿನಲ್ಲಿ ರೈತ ಚಳುವಳಿಯನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು ಮತ್ತು ಅಲ್ಲಿನ ಇತರ ಅನೇಕ ಹೋರಾಟಗಳನ್ನು ಮುನ್ನಡೆಸಿದರು.

ಕಮ್ಯುನಿಸ್ಟ್‌ ಹೋರಾಟಗಾರರು ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದುಕೊಂಡೇ ಇತರ ವಿಷಯಗಳ ಕುರಿತಾಗಿಯೂ ಹೋರಾಡುತ್ತಿದ್ದರು. ಅದೇ ರೀತಿ ಶಂಕರಯ್ಯ ಕೂಡಾ ಸ್ವಾತಂತ್ರ್ಯ ಹೋರಾಟದ ಜೊತೆಗೆ ಹತ್ತು ಹಲವು ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ನಾವು ಸಮಾನ ವೇತನ, ಅಸ್ಪೃಶ್ಯತೆ ಸಮಸ್ಯೆಗಳು ಮತ್ತು ದೇವಾಲಯ ಪ್ರವೇಶ ಚಳವಳಿಗಳಿಗಾಗಿ ಹೋರಾಟ ನಡೆಸಿದ್ದೆವು” ಎಂದು ಅವರು ಪರಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. "ಜಮೀನ್ದಾರಿ ವ್ಯವಸ್ಥೆಯನ್ನು ರದ್ದುಗೊಳಿಸುವುದು ನಮ್ಮ ಪ್ರಮುಖ ಗುರಿಯಾಗಿತ್ತು. ಕಮ್ಯುನಿಸ್ಟ್‌ ಹೋರಾಟಗಾರರ ಹೋರಾಟಗಳು ಈ ನಿಟ್ಟಿನಲ್ಲಿರುತ್ತಿದ್ದವು.”

ಸಾಯಿನಾಥ್, ಒಂಬತ್ತು ದಶಕಗಳ ಕ್ರಾಂತಿಕಾರಿ ಎನ್ನುವ ಹೆಸರಿನ ಶಂಕರಯ್ಯ ಅವರೊಂದಿಗಿನ ಸಂದರ್ಶನವನ್ನು ಓದಿ, ಮತ್ತು ಅವರ ಕುರಿತಾದ ವೀಡಿಯೊವನ್ನು ವೀಕ್ಷಿಸಿ.

ಅನುವಾದ: ಶಂಕರ. ಎನ್. ಕೆಂಚನೂರು

Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru