“ನನ್ನ ಶ್ವಾಸಕೋಶ ಕಲ್ಲಿನಂತಾಗಿದೆ. ನನಗೆ ನಾಡೆಯಲು ಸಾಧ್ಯವಾಗುತ್ತಿಲ್ಲ”‌ ಎನ್ನುತ್ತಾರೆ ಮಾಣಿಕ್‌ ಸರ್ದಾರ್.

55 ವರ್ಷದ ಈ ವರ್ಷದ ವ್ಯಕ್ತಿಗೆ 2022ರ ನವೆಂಬರ್ ತಿಂಗಳಿನಲ್ಲಿ ಸಿಲಿಕೋಸಿಸ್ ಇರುವುದು ಪತ್ತೆಯಾಯಿತು. ಇದೊಂದು ಗುಣಪಡಿಸಲಾಗದ ಶ್ವಾಸಕೋಶದ ಕಾಯಿಲೆ. “ನಾನೀಗ ಮುಂಬರು ಚುನಾವಣೆಗಳ ಕುರಿತು ಯೋಚಿಸುವ ಸ್ಥಿತಿಯಲ್ಲಿಲ್ಲ. ನನಗೆ ನನ್ನ ಕುಟುಂಬದ್ದೇ ಚಿಂತೆಯಾಗಿದೆ” ಎಂದು ಅವರು ಹೇಳುತ್ತಾರೆ.

ನಬಾ ಕುಮಾರ್ ಮಂಡಲ್ ಕೂಡ ಸಿಲಿಕೋಸಿಸ್ ರೋಗಿ. ಅವರು ಹೇಳುತ್ತಾರೆ, "ಚುನಾವಣೆಗಳೆಂದರೆ ಸುಳ್ಳು ಭರವಸೆಗಳಷ್ಟೇ. ಮತಾದಾನವೆನ್ನುವುದು ನಮ್ಮ ಪಾಲಿಕೆ ಒಂದು ವಾಡಿಕೆಯ ಕೆಲಸವಾಗಿ ಹೋಗಿದೆ. ಯಾರು ಅಧಿಕಾರಕ್ಕೆ ಬಂದರೂ, ನಮ್ಮ ಬದುಕಿನಲ್ಲಿ ಯಾವ ವ್ಯತ್ಯಾಸವು ಕಾಣುವುದಿಲ್ಲ" ಎಂದು ಅವರು ಹೇಳಿದರು.

ಮಾಣಿಕ್ ಮತ್ತು ನಬಾ ಇಬ್ಬರೂ ಪಶ್ಚಿಮ ಬಂಗಾಳದ ಮಿನಾಖಾನ್ ಬ್ಲಾಕ್ ಜುಪ್ಖಾಲಿ ಗ್ರಾಮದ ನಿವಾಸಿಗಳು. ಇಲ್ಲಿ 2024ರ ಸಾರ್ವತ್ರಿಕ ಚುನಾವಣೆಯ ಕೊನೆಯ ಹಂತದಲ್ಲಿ ಜೂನ್ 1ರಂದು ಮತದಾನ ನಡೆಯಲಿದೆ.

ಇಬ್ಬರೂ ಒಂದು ಅಥವಾ ಒಂದೂವರೆ ವರ್ಷಗಳ ಕಾಲ ನಿರಂತರವಾಗಿ ಕಾರ್ಖಾನೆಗಳಲ್ಲಿ ಕೆಲಸ ಮಾಡಿದ್ದರು. ಅಲ್ಲಿ ಸಿಲಿಕಾ ಧೂಳಿಗೆ ಒಡ್ಡಿಕೊಳ್ಳುವುದರಿಂದ ಉಂಟಾಗುವ ಅನಾರೋಗ್ಯದಿಂದ ಬಳಲುತ್ತಿರುವ ಅವರು ವೇತನ ನಷ್ಟಕ್ಕೂ ಒಳಗಾಗಿದ್ದಾರೆ. ಇಂತಹ ಹೆಚ್ಚಿನ ದೊಡ್ಡ ಉತ್ಪಾದನೆಯ ಕಾರ್ಖಾನೆಗಳು ಕಾರ್ಖಾನೆಗಳ ನಿರ್ದೇಶನಾಲಯದಲ್ಲಿ ನೋಂದಾಯಿಸಲ್ಪಟ್ಟಿರುವುದಿಲ್ಲ. ಅಲ್ಲದೆ ಈ ಕಾರ್ಖಾನೆಗಳು ನೇಮಕಾತಿ ಪತ್ರ ಅಥವಾ ಗುರುತಿನ ಚೀಟಿಗಳನ್ನು ನೀಡದ ಕಾರಣ ಅವರಿಗೆ ಪರಿಹಾರ ಸಹ ಸಿಗುವುದಿಲ್ಲ. ಇಂತಹ ಅನೇಕ ಕಾರ್ಖಾನೆಗಳು ವಾಸ್ತವದಲ್ಲಿ ಕಾನೂನುಬಾಹಿರ ಅಥವಾ ಅರೆ-ಕಾನೂನುಬದ್ಧ. ಇವುಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ನೋಂದಣಿಯೂ ಆಗಿರುವುದಿಲ್ಲ.

PHOTO • Ritayan Mukherjee
PHOTO • Ritayan Mukherjee

ಮಾಣಿಕ್ ಸರ್ಕಾರ್ (ಎಡ) ಮತ್ತು ಹರ ಪಾಯಿಕ್ (ಬಲ) ಪಶ್ಚಿಮ ಬಂಗಾಳದ ಉತ್ತರ 24 ಪರಗಣದ ಜುಪ್ಖಾಲಿ ಗ್ರಾಮದ ನಿವಾಸಿಗಳು. ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರೂ ಸಿಲಿಕಾ ಧೂಳಿಗೆ ಒಡ್ಡಿಕೊಳ್ಳುವುದರಿಂದ ಉಂಟಾಗುವ ಸಿಲಿಕೋಸಿಸ್ ಸೋಂಕಿಗೆ ಒಳಗಾಗಿದ್ದಾರೆ

ಈ ಕೆಲಸದಲ್ಲಿ ಅಪಾಯವು ಸ್ಪಷ್ಟವಾಗಿದ್ದರೂ ಸುಮಾರು ಒಂದು ದಶಕದಷ್ಟು ಕಾಲ 2000 ಮತ್ತು 2009ರ ನಡುವೆ, ಮಾಣಿಕ್ ಮತ್ತು ನಬಾ ಕುಮಾರ್ ಅವರಂತಹ ಉತ್ತರ 24 ಪರಗಣಗಳ ಅನೇಕ ನಿವಾಸಿಗಳು ಉತ್ತಮ ಜೀವನೋಪಾಯವನ್ನು ಹುಡುಕಿಕೊಂಡು ಈ ಕಾರ್ಖಾನೆಗಳಲ್ಲಿ ಕೆಲಸ ಮಾಡಲು ವಲಸೆ ಹೋಗಿದ್ದರು. ಹವಾಮಾನ ಬದಲಾವಣೆ ಮತ್ತು ಬೆಳೆ ಬೆಲೆಗಳ ಕುಸಿತವು ಅವರ ಸಾಂಪ್ರದಾಯಿಕ ಆದಾಯ ಮೂಲವಾಗಿದ್ದ ಕೃಷಿಯನ್ನು ತೊರೆಯುವಂತೆ ಮಾಡಿದವು.

“ನಾವು ಅಲ್ಲಿಗೆ ಕೆಲಸ ಹುಡುಕಿಕೊಂಡು ಹೋಗಿದ್ದೆವು” ಎನ್ನುತ್ತಾರೆ ಹರ ಪಾಯಿಕ್. ಜುಪಖಾಲಿ ಗ್ರಾಮದ ಇನ್ನೊಬ್ಬ ನಿವಾಸಿಯಾದ ಇವರು “ನಾವು ಸಾವಿನ ಬಾಯಿಗೆ ಹೋಗುತ್ತಿದ್ದೇವೆ ಎನ್ನುವುದರ ಕುರಿತು ಹೆಚ್ಚು ಮಾಹಿತಿಯಿರಲಿಲ್ಲ” ಎನ್ನುತ್ತಾರೆ.

ಈ ರ್ಯಾಮಿಂಗ್‌ ಮಾಸ್ ಕಾರ್ಖಾನೆಗಳಲ್ಲಿನ ಕಾರ್ಮಿಕರು ಸಿಲಿಕಾ ಸೂಕ್ಷ್ಮ ಕಣಗಳ ನಡುವೆ ಕೆಲಸ ಮಾಡುವುದರಿಂದಾಗಿ ಅವರು ಅದನ್ನು ನಿರಂತರವಾಗಿ ಉಸಿರಾಡುತ್ತಿರುತ್ತಾರೆ.

ಸ್ಕ್ರ್ಯಾಪ್ ಲೋಹ, ಲೋಹವಲ್ಲದ ಖನಿಜಗಳನ್ನು ಕರಗಿಸಲು ಮತ್ತು ಉಕ್ಕಿನ ಉತ್ಪಾದನೆಯಲ್ಲಿ ಇಂಡಕ್ಷನ್ ಫರ್ನೇಸ್‌ಗಳ ಒಳಪದರದಲ್ಲಿ ರ್ಯಾಮಿಂಗ್‌ ಮಾಸ್ ಪ್ರಮುಖ ಅಂಶವಾಗಿದೆ. ಸುಟ್ಟ ಇಟ್ಟಿಗೆಯಂತಹ ಉತ್ಪನ್ನಗಳನ್ನು ತಯಾರಿಸಲು ಸಹ ಇದನ್ನು ಬಳಸಲಾಗುತ್ತದೆ.

ಇಲ್ಲಿ, ಈ ಕಾರ್ಖಾನೆಗಳಲ್ಲಿ, ಕಾರ್ಮಿಕರು ನಿರಂತರವಾಗಿ ಸಿಲಿಕಾ ಧೂಳಿಗೆ ತಮ್ಮ ದೇಹವನ್ನು ಒಡ್ಡಿಕೊಳ್ಳುತ್ತಾರೆ. "ನಾನು ಸೈಟ್ ಬಳಿಯ ಪ್ರದೇಶದಲ್ಲಿ ಮಲಗುತ್ತಿದ್ದೆ. ನಿದ್ರೆಯಲ್ಲಿಯೂ ನಾನು ಧೂಳನ್ನು ಉಸಿರಾಡಿದ್ದೆ" ಎಂದು ಸುಮಾರು 15 ತಿಂಗಳು ಅಲ್ಲಿ ಕೆಲಸ ಮಾಡಿದ ಹರ ಹೇಳುತ್ತಾರೆ. ರಕ್ಷಣಾತ್ಮಕ ಸಾಧನಗಳು ಸಹ ಲಭ್ಯವಿಲ್ಲದ ಕಾರಣ ಸಿಲಿಕೋಸಿಸ್‌ ಬೇಗನೆ ಬರುತ್ತದೆ.

PHOTO • Ritayan Mukherjee
PHOTO • Ritayan Mukherjee

ಎಡ: 2001-2002ರ ಅವಧಿಯಲ್ಲಿ, ಹವಾಮಾನ ಬದಲಾವಣೆ ಮತ್ತು ಫಸಲುಗಳ ಬೆಲೆಗಳ ಕುಸಿತದಿಂದಾಗಿ ಉತ್ತರ 24 ಪರಗಣ ಜಿಲ್ಲೆಯ ಅನೇಕ ರೈತರು ವಲಸೆ ಹೋದರು. 2009ರಲ್ಲಿ ಬೀಸಿದ ಐಲಾ ಚಂಡಮಾರುತದ ನಂತರ, ಇನ್ನೂ ಹೆಚ್ಚಿನ ಜನರು ಊರು ಬಿಟ್ಟರು. ಅನೇಕ ವಲಸಿಗರು ಕ್ವಾರ್ಟ್ಜೈಟ್ ಪುಡಿಮಾಡುವ ಮತ್ತು ಮಿಲ್ಲಿಂಗ್ ಕೆಲಸವನ್ನು ಕೈಗೊಂಡರು, ಇದು ಅಪಾಯಕಾರಿ ಮತ್ತು ವಿಷಕಾರಿ ಉದ್ಯೋಗ. ಬಲ: ಸಿಲಿಕೋಸಿಸ್ ಒಂದು ಗುಣಪಡಿಸಲಾಗದ ಶ್ವಾಸಕೋಶದ ಕಾಯಿಲೆ. ಕುಟುಂಬದ ಮುಖ್ಯ ಪುರುಷ ಸದಸ್ಯ ಅನಾರೋಗ್ಯಕ್ಕೆ ಒಳಗಾದರೆ ಅಥವಾ ನಿಧನರಾದರೆ, ಕುಟುಂಬದ ಜವಾಬ್ದಾರಿಯು ಈಗಾಗಲೇ ಆಘಾತ ಮತ್ತು ದುಃಖದಿಂದ ಬಳಲುತ್ತಿರುವ ಮಹಿಳೆಯರ ಮೇಲೆ ಬೀಳುತ್ತದೆ

2009-10ರಿಂದೀಚೆಗೆ, ಮಿನಾಖಾನ್-ಸಂದೇಶ್‌ಖಾಲಿ ಬ್ಲಾಕಿನ ವಿವಿಧ ಹಳ್ಳಿಗಳ 34 ಕಾರ್ಮಿಕರು ಈ ಉದ್ಯಮದಲ್ಲಿ ಒಂಬತ್ತು ತಿಂಗಳಿನಿಂದ ಮೂರು ವರ್ಷಗಳವರೆಗೆ ಕೆಲಸ ಮಾಡಿದ ನಂತರ ಸಿಲಿಕೋಸಿಸ್‌ ಕಾಯಿಲೆಯಿಂದ ಅಕಾಲಿಕ ಮರಣಕ್ಕೆ ಈಡಾಗಿದ್ದಾರೆ.

ಕಾರ್ಮಿಕರು ಉಸಿರಾಡುವಾಗ, ಸಿಲಿಕಾ ಧೂಳು ಶ್ವಾಸಕೋಶದ ಅಲ್ವಿಯೋಲಾರ್ ಚೀಲಗಳಲ್ಲಿ ಸಂಗ್ರಹವಾಗುತ್ತದೆ, ಕ್ರಮೇಣ ಅದು ಅಂಗವನ್ನು ಗಟ್ಟಿಗೊಳಿಸುತ್ತದೆ. ಸಿಲಿಕೋಸಿಸ್ ಕಾಯಿಲೆಯ ಮೊದಲ ಲಕ್ಷಣಗಳೆಂದರೆ ಕೆಮ್ಮು ಮತ್ತು ಉಸಿರಾಟದ ತೊಂದರೆ, ನಂತರ ತೂಕ ನಷ್ಟ ಮತ್ತು ಚರ್ಮ ಕಪ್ಪಾಗುವುದು. ಕ್ರಮೇಣ, ಎದೆ ನೋವು ಮತ್ತು ದೈಹಿಕ ದೌರ್ಬಲ್ಯವು ಪ್ರಾರಂಭವಾಗುತ್ತದೆ. ನಂತರದ ಹಂತಗಳಲ್ಲಿ, ರೋಗಿಗಳಿಗೆ ನಿರಂತರ ಆಮ್ಲಜನಕ ಬೆಂಬಲದ ಅಗತ್ಯವಿರುತ್ತದೆ. ಸಿಲಿಕೋಸಿಸ್ ರೋಗಿಗಳಲ್ಲಿ ಸಾವಿಗೆ ಕಾರಣ ಸಾಮಾನ್ಯವಾಗಿ ಆಮ್ಲಜನಕದ ಕೊರತೆಯಿಂದಾಗಿ ಉಂಟಾಗುವ ಹೃದಯ ಸ್ತಂಭನವಾಗಿರುತ್ತದೆ.

ಸಿಲಿಕೋಸಿಸ್‌ ಒಂದು ಗುಣಪಡಿಸಲಾಗದ ಮತ್ತು ಬೆಳೆಯುತ್ತಲೇ ಹೋಗುವ ವೃತ್ತಿಸಂಬಂಧಿ ಕಾಯಿಲೆ. ಇದು ನ್ಯುಮೋಕೊನಿಯೋಸಿಸ್ ಎನ್ನುವ ನಿರ್ದಿಷ್ಟ ರೂಪವನ್ನು ಪ್ರತಿನಿಧಿಸುತ್ತದೆ. ವೃತ್ತಿಸಂಬಂಧಿ ರೋಗ ತಜ್ಞ ಡಾ. ಕುನಾಲ್ ಕುಮಾರ್ ದತ್ತಾ, "ಸಿಲಿಕೋಸಿಸ್ ರೋಗಿಗಳು ಕ್ಷಯರೋಗಕ್ಕೆ ತುತ್ತಾಗುವ ಸಾಧ್ಯತೆ 15 ಪಟ್ಟು ಹೆಚ್ಚು" ಎಂದು ಹೇಳುತ್ತಾರೆ. ಇದನ್ನು ಸಿಲಿಕೋ-ಕ್ಷಯ ಅಥವಾ ಸಿಲಿಕೋಟಿಕ್ ಟಿಬಿ ಎಂದು ಕರೆಯಲಾಗುತ್ತದೆ.

ಆದರೆ ಇಲ್ಲಿ ಕೆಲಸದ ಅಗತ್ಯ ಎಷ್ಟಿದೆಯೆಂದರೆ ಕಳೆದ ಎರಡು ದಶಕಗಳಲ್ಲಿ ಅಲ್ಲಿಗೆ ಕೆಲಸ ಹುಡುಕಿಕೊಂಡು ಹೋಗುವವರ ದೊಡ್ಡ ದಂಡೇ ತಯಾರಾಗಿದೆ. 2000ನೇ ಇಸವಿಯಲ್ಲಿ, ಗೋಲ್ದಹಾ ಗ್ರಾಮದ 30-35 ಕಾರ್ಮಿಕರು ಸುಮಾರು 300 ಕಿಲೋಮೀಟರ್ ದೂರದಲ್ಲಿರುವ ಕುಲ್ಟಿ ಮೂಲದ ಉತ್ಪಾದನಾ ಘಟಕವೊಂದರಲ್ಲಿ ಕೆಲಸ ಮಾಡಲೆಂದು ಹೋದರು. ಒಂದೆರಡು ವರ್ಷಗಳ ನಂತರ, ಮಿನಾಖಾನ್ ಬ್ಲಾಕಿನ ಗೋಲ್ದಹಾ, ದೆಬಿಟಾಲಾ, ಖರಿಬಿಯಾರಿಯಾ ಮತ್ತು ಜಯಗ್ರಾಮದಂತಹ ಹಳ್ಳಿಗಳಲ್ಲಿ ಬಡತನ ರೇಖೆಗಿಂತ ಕೆಳಗಿರುವ ರೈತರು ಬಾರಾಸತ್ ದತ್ತಪುಕುರ್‌ ಎನ್ನುವಲ್ಲಿರುವ ಘಟಕದಲ್ಲಿ ಕೆಲಸ ಮಾಡಲು ಹೋದರು. 2005-2006ರಲ್ಲಿ ಸಂದೇಶ್‌ಖಾಲಿ ಬ್ಲಾಕ್ 1 ಮತ್ತು 2ರ ಸುಂದರಿಖಾಲಿ, ಸರ್ಬರಿಯಾ, ಬಟಿಡಾಹಾ, ಅಗರ್ಹತಿ, ಜೆಲಿಯಾಖಾಲಿ, ರಾಜ್ಬರಿ ಮತ್ತು ಜುಪ್ಖಾಲಿ ಗ್ರಾಮಗಳ ರೈತರು ವಲಸೆ ಹೋದರು. ಈ ಬ್ಲಾಕ್‌ಗಳ ಕಾರ್ಮಿಕರು ಜಮುರಿಯಾದಲ್ಲಿನ ಮಾಸ್‌ ಉತ್ಪಾದನಾ ಘಟಕಕ್ಕೆ ಹೋದರು.

"ನಾವು ಬಾಲ್ ಮಿಲ್ [ಒಂದು ರೀತಿಯ ಗ್ರೈಂಡರ್] ಬಳಸಿ ಕ್ವಾರ್ಟ್ಜೈಟ್ ಕಲ್ಲಿನಿಂದ ನುಣುಪಾದ ಪುಡಿಯನ್ನು ಮತ್ತು ಕ್ರಷರ್ ಯಂತ್ರವನ್ನು ಬಳಸಿಕೊಂಡು ರವೆ ಮತ್ತು ಸಕ್ಕರೆಯಂತಹ ಕಾಳುಗಳನ್ನು ತಯಾರಿಸುತ್ತಿದ್ದೆವು" ಎಂದು ಜುಪ್ಖಾಲಿಯ ಮತ್ತೊಬ್ಬ ನಿವಾಸಿ ಅಮೋಯ್ ಸರ್ದಾರ್ ಹೇಳುತ್ತಾರೆ. "ತುಂಬಾ ಧೂಳು ಇರುತ್ತಿತ್ತು, ಒಂದು ಮಾರು ದೂರದಲ್ಲಿರುವುದು ಕಾಣುತ್ತಿರಲಿಲ್ಲ. ಮೈಮೇಲೂ ಧೂಳು ಬೀಳುತ್ತಿತ್ತು" ಎಂದು ಅವರು ಹೇಳುತ್ತಾರೆ. ಸುಮಾರು ಎರಡು ವರ್ಷಗಳ ಕಾಲ ಕೆಲಸ ಮಾಡಿದ ನಂತರ 2022ರ ನವೆಂಬರ್ ತಿಂಗಳಿನಲ್ಲಿ ಅಮೋಯ್ ಅವರಿಗೆ ಸಿಲಿಕೋಸಿಸ್ ಇರುವುದು ಪತ್ತೆಯಾಯಿತು. ಈಗ ಅವರಿಂದ ಭಾರ ಎತ್ತುವಂತಹ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಿಲ್ಲ. "ನನ್ನ ಕುಟುಂಬದಪೋಷಣೆಗಾಗಿ ಕೆಲಸಕ್ಕೆ ಹೋದೆ, ಆದರೆ ಈ ರೋಗ ಗಂಟುಬಿತ್ತು" ಎಂದು ಅವರು ಹೇಳುತ್ತಾರೆ.

2009ರ ಐಲಾ ಚಂಡಮಾರುತಕ್ಕೆ ಸುಂದರಬನದಲ್ಲಿನ ಕೃಷಿ ಭೂಮಿ ನಾಶವಾದ ನಂತರ ಇಲ್ಲಿ ವಲಸೆ ಇನ್ನಷ್ಟು ಹೆಚ್ಚತೊಡಗಿತು. ವಿಶೇಷವಾಗಿ ಯುವಕರು ಕೆಲಸ ಹುಡುಕಿಕೊಂಡು ಹೋಗತೊಡಗಿದರು. ಹಾಗೂ ರಾಜ್ಯ ಮತ್ತು ದೇಶದ ವಿವಿಧೆಡೆ ನೆಲೆ ನಿಲ್ಲಲೂ ಆರಂಭಿಸಿದರು.

PHOTO • Ritayan Mukherjee
PHOTO • Ritayan Mukherjee

ಎಡ: ಎರಡು ವರ್ಷಗಳ ಕಾಲ ಕೆಲಸ ಮಾಡಿದ ನಂತರ, ಅಮೋಯ್ ಸರ್ದಾರ್ ಅವರಿಗೆ ಸಿಲಿಕೋಸಿಸ್ ಇರುವುದು ಪತ್ತೆಯಾಯಿತು. 'ನನ್ನ ಕುಟುಂಬವನ್ನು ಪೋಷಣೆಗಾಗಿ ಕೆಲಸಕ್ಕೆ ಹೋದೆ, ಆದರೆ ಈ ರೋಗ ಗಂಟುಬಿತ್ತು' ಎಂದು ಅವರು ಹೇಳುತ್ತಾರೆ. ಬಲ: ಮಹತ್ವಾಕಾಂಕ್ಷಿ ಕೀರ್ತನ್ ಗಾಯಕ ಮಹಾನಂದಾ ಸರ್ದಾರ್ ಅವರು ಸಿಲಿಕೋಸಿಸ್ ರೋಗಪೀಡಿತರಾದ ಕಾರಣ ಇನ್ನು ಮುಂದೆ ಹಾಡಲು ಸಾಧ್ಯವಿಲ್ಲ

PHOTO • Ritayan Mukherjee
PHOTO • Ritayan Mukherjee

ಎಡ: ಸಂದೇ ಶ್‌ಖಾ ಲಿ ಮತ್ತು ಮಿನಾಖಾನ್ ಬ್ಲಾ ಕ್‌ನ ಅನೇಕ ಸಿಲಿಕೋಸಿಸ್ ರೋಗಿಗಳಿಗೆ ನಿರಂತರ ಆಮ್ಲಜನಕ ಬೆಂಬಲದ ಅಗತ್ಯವಿದೆ. ಬಲ: ತಂತ್ರಜ್ಞನು ಎಕ್ಸ್-ರೇ ಚಿತ್ರಗಳನ್ನು ಪರಿಶೀಲಿಸು ತ್ತಿರುವುದು . ಸಿಲಿಕೋಸಿಸ್ ಒಂದು ಬೆಳೆಯುತ್ತಲೇ ಸಾಗುವ ಕಾಯಿಲೆಯಾಗಿದ್ದು , ಆಗಾಗ ಎಕ್ಸ್‌ ರೇ ತೆಗೆಸುವ ಮೂಲಕ ಅದನ್ನು ನಿರ್ವಹಿಸಬಹುದು

ಮಹಾನಂದಾ ಸರ್ದಾರ್ ಅವರು ಗಾಯಕರಾಗಲು ಬಯಸಿದ್ದರು, ಆದರೆ ಐಲಾ ಚಂಡಮಾರುತದ ನಂತರ, ಅವರು ಜಮುರಿಯಾದಲ್ಲಿ ಕಾರ್ಖಾನೆ ಕೆಲಸಕ್ಕೆ ಹೋದರು, ಅಲ್ಲಿ ಅವರು ಸಿಲಿಕೋಸಿಸ್‌ ರೋಗಕ್ಕೆ ತುತ್ತಾದರು. "ನಾನು ಈಗಲೂ ಕೀರ್ತನೆಗಳನ್ನು ಹಾಡುತ್ತೇನೆ, ಆದರೆ ಉಸಿರಾಟದ ಸಮಸ್ಯೆಯಿರುವುದರಿಂದ ನಿರಂತರವಾಗಿ ಪ್ರದರ್ಶನ ನೀಡಲು ಸಾಧ್ಯವಿಲ್ಲ" ಎಂದು ಈ ಜುಪ್ಖಾಲಿ ನಿವಾಸಿ ಹೇಳುತ್ತಾರೆ. ಸಿಲಿಕೋಸಿಸ್ ರೋಗನಿರ್ಣಯವಾದ ನಂತರ, ಮಹಾನಂದಾ ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡಲೆಂದು ಚೆನ್ನೈಗೆ ಹೋದರು. ಆದರೆ ಅಲ್ಲಿ ಅವರು ಅಪಘಾತದಲ್ಲಿ ಸಿಲುಕಿದ ಕಾರಣ ಮೇ 2023ರಲ್ಲಿ ಊರಿಗೆ ಮರಳಬೇಕಾಯಿತು.

ಸಂದೇಶ್‌ಖಾಲಿ ಮತ್ತು ಮೀನಾಖಾನ್‌ ಬ್ಲಾಕಿನ ಅನೇಕ ರೋಗಿಗಳು ಅನಾರೋಗ್ಯದಿಂದ ಬಳಲುತ್ತಿದ್ದರೂ ರಾಜ್ಯ ಮತ್ತು ರಾಜ್ಯದ ಹೊರಗೆ ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.

*****

ಆರಂಭಿಕ ಪತ್ತೆ ಈ ರೋಗದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. "ರೋಗವನ್ನು ಯಶಸ್ವಿಯಾಗಿ ನಿರ್ವಹಿಸಲು ಮತ್ತು ತಡೆಗಟ್ಟಲು, ಅದನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡುವ ಅವಶ್ಯಕತೆಯಿದೆ" ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಆಕ್ಯುಪೇಷನಲ್ ಹೆಲ್ತ್‌ ವಿಭಾಗದ ನಿರ್ದೇಶಕ ಡಾ ಕಮಲೇಶ್ ಸರ್ಕಾರ್ ಹೇಳುತ್ತಾರೆ. ನಮ್ಮ ಬೆರಳ ತುದಿಯಿಂದ ಸಂಗ್ರಹಿಸಿದ ರಕ್ತದ ಹನಿಯಿಂದ ಪತ್ತೆ ಮಾಡಬಹುದಾದ ಕ್ಲಾರಾ ಸೆಲ್ ಪ್ರೊಟೀನ್ 16 [CC16], ಸಿಲಿಕೋಸಿಸ್ ಸೇರಿದಂತೆ ವಿವಿಧ ಶ್ವಾಸಕೋಶದ ಕಾಯಿಲೆಗಳಿಗೆ ಜೈವಿಕ ಗುರುತಾಗಿ ಕೆಲಸ ಮಾಡುತ್ತದೆ. ಆರೋಗ್ಯಕರ ಮಾನವ ದೇಹದಲ್ಲಿ, CC16 ಮೌಲ್ಯವು ಪ್ರತಿ ಮಿಲಿಲೀಟರ್‌ಗೆ 16 ನ್ಯಾನೊಗ್ರಾಮ್‌ಗಳು (ng/mL),  ಆದರೆ ಸಿಲಿಕೋಸಿಸ್ ರೋಗಿಗಳಲ್ಲಿ, ರೋಗವು ತೀವ್ರಗೊಂಡಂತೆ ಮೌಲ್ಯವು ಕಡಿಮೆಯಾಗುತ್ತದೆ, ಅಂತಿಮವಾಗಿ ಶೂನ್ಯವನ್ನು ತಲುಪುತ್ತದೆ.

"ನಿರಂತರವಾಗಿ ಅಥವಾ ಮಧ್ಯಂತರ ಮಟ್ಟದಲ್ಲಿ ಸಿಲಿಕಾ-ಧೂಳಿಗೆ ಒಡ್ಡಿಕೊಳ್ಳುವ ಅಪಾಯಕಾರಿ ಕೈಗಾರಿಕೆಗಳ ಕಾರ್ಮಿಕರಿಗೆ CC 16 ಪರೀಕ್ಷೆಯೊಂದಿಗೆ ನಿಯತಕಾಲಿಕ ತಪಾಸಣೆಯನ್ನು ಕಡ್ಡಾಯಗೊಳಿಸುವ ಸೂಕ್ತ ಶಾಸನವನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕು. ಇದು ಸಿಲಿಕೋಸಿಸ್ ಕಾಯಿಲೆಯನ್ನು ಮುಂಚಿತವಾಗಿ ಪತ್ತೆಹಚ್ಚಲು ಸಹಾಯ ಮಾಡುತ್ತದೆ" ಎಂದು ಡಾ. ಸರ್ಕಾರ್‌ ಹೇಳುತ್ತಾರೆ.

“ಇಲ್ಲಿ ಹತ್ತಿರದಲ್ಲಿ ಯಾವುದೇ ಆಸ್ಪತ್ರೆಗಳಿಲ್ಲ ಎಂದು 2019ರಿಂದ ಸಿಲಿಕೋಸಿಸ್‌ ಕಾಯಿಲೆಯಿಂದ ಬಳಲುತ್ತಿರುವ ರವೀಂದ್ರ ಹಲ್ದಾರ್ ಹೇಳುತ್ತಾರೆ. ಇಲ್ಲಿನ ಹತ್ತಿರದ ಆಸ್ಪತ್ರೆಯೆಂದರೆ ಖುಲ್ನಾ ಎನ್ನುವಲ್ಲಿರುವ ಬ್ಲಾಕ್‌ ಆಸ್ಪತ್ರೆ. ಅಲ್ಲಿಗೆ ತಲುಪಲು, ಜುಪ್ಖಾಲಿ ನಿವಾಸಿ ರವೀಂದ್ರ ಎರಡು ದೋಣಿಗಳನ್ನು ಏರಬೇಕು. "ಸರ್ಬರಿಯಾದಲ್ಲಿ ಶ್ರಮಜೀಬಿ ಆಸ್ಪತ್ರೆಯಿದೆ, ಆದರೆ ಅದರಲ್ಲಿ ಸಾಕಷ್ಟು ಸೌಲಭ್ಯಗಳಿಲ್ಲ" ಎಂದು ಅವರು ಹೇಳುತ್ತಾರೆ ಮತ್ತು "ಯಾವುದೇ ಗಂಭೀರ ಸಮಸ್ಯೆಯಿದ್ದಲ್ಲಿ ನಾವು ಕೋಲ್ಕತ್ತಾಗೆ ಹೋಗಬೇಕು. ಇದಕ್ಕೆ ಆಂಬ್ಯುಲೆನ್ಸ್ ಬಾಡಿಗೆಯಾಗಿ 1,500-2,000 ರೂಪಾಯಿಗಳವರೆಗೆ ಶುಲ್ಕ ವಿಧಿಸಲಾಗುತ್ತದೆ."

PHOTO • Ritayan Mukherjee
PHOTO • Ritayan Mukherjee

ಎಡಕ್ಕೆ: ಜುಪ್ಖಾಲಿಯ ಇನ್ನೊಬ್ಬ ನಿವಾಸಿ ರವೀಂದ್ರ ಹಲ್ದಾರ್, ಹತ್ತಿರದ ಬ್ಲಾಕ್ ಆಸ್ಪತ್ರೆಗೆ ಹೋಗಲು ಎರಡು ದೋಣಿ ಸವಾರಿ ಮಾಡಬೇಕು ಎನ್ನುತ್ತಾರೆ. ಬಲ: ಗೋಲ್ದಾಹಾ ಗ್ರಾಮದ ನಿವಾಸಿ ಸಫಿಕ್ ಮೊಲ್ಲಾ ಅವರಿಗೆ ನಿರಂತರ ಆಮ್ಲಜನಕ ಬೆಂಬಲದ ಅಗತ್ಯವಿದೆ

ಗೋಲ್ದಹಾದಲ್ಲಿರುವ ತಮ್ಮ ಮನೆಯಲ್ಲಿ, 50 ವರ್ಷದ ಮೊಹಮ್ಮದ್ ಸಫಿಕ್ ಮೊಲ್ಲಾ ಅವರು ತೀವ್ರ ಉಸಿರಾಟದ ತೊಂದರೆಯಿಂದ ಸುಮಾರು ಎರಡು ವರ್ಷಗಳಿಂದ ಹಾಸಿಗೆಯಲ್ಲಿ ಬಂಧಿಯಾಗಿದ್ದಾರೆ. "20 ಕೆಜಿ ತೂಕ ಕಳೆದುಕೊಂಡಿದ್ದೇನೆ, ನಿರಂತರ ಆಮ್ಲಜನಕದ ಬೆಂಬಲ ಬೇಕು. ರೋಜಾ ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ" ಎಂದು ಅವರು ಹೇಳುತ್ತಾರೆ. "ನಾನು ನನ್ನ ಕುಟುಂಬದ ಬಗ್ಗೆ ಚಿಂತಿತನಾಗಿದ್ದೇನೆ. ನಾನು ಹೊರಟುಹೋದರೆ ಅವರ ಗತಿಯೇನು?"

ಫೆಬ್ರವರಿ 2021ರಲ್ಲಿ, ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 2 ಲಕ್ಷ ರೂ.ಗಳ ಪರಿಹಾರ ಸಿಕ್ಕಿತು. "ಶ್ರೀ ಸಮಿತ್ ಕುಮಾರ್ ಕಾರ್ ನಮ್ಮ ಪರವಾಗಿ ಪ್ರಕರಣ ದಾಖಲಿಸಿದ್ದರು" ಎಂದು ಸಫಿಕ್ ಅವರ ಪತ್ನಿ ತಸ್ಲಿಮಾ ಬೀಬಿ ಹೇಳುತ್ತಾರೆ. ಆದರೆ ಆ ಹಣ ಬೇಗನೆ ಖಾಲಿಯಾಯಿತು. "ಈ ಮನೆ ನಿರ್ವಹಿಸಲು ಮತ್ತು ನಮ್ಮ ಹಿರಿಯ ಮಗಳ ಮದುವೆ ಮಾಡಿಸಲು ಅದನ್ನು ಖರ್ಚು ಮಾಡಿದೆವು" ಎಂದು ತಸ್ಲಿಮಾ ವಿವರಿಸುತ್ತಾರೆ.

ಜಾರ್ಖಂಡ್ ರಾಜ್ಯದ ಆಕ್ಯುಪೇಷನಲ್ ಸೇಫ್ಟಿ ಅಂಡ್ ಹೆಲ್ತ್ ಅಸೋಸಿಯೇಷನ್ (ಒಎಸ್ಎಜೆಎಚ್ ಇಂಡಿಯಾ) ನ ಸಮಿತ್ ಕುಮಾರ್ ಕಾರ್, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ಸಿಲಿಕೋಸಿಸ್ ಪೀಡಿತ ಕಾರ್ಮಿಕರ ಹಕ್ಕುಗಳಿಗಾಗಿ ಎರಡು ದಶಕಗಳಿಂದ ಹೋರಾಡುತ್ತಿದ್ದಾರೆ, ಸಾಮಾಜಿಕ ಭದ್ರತೆ ಮತ್ತು ವಿತ್ತೀಯ ಪರಿಹಾರಕ್ಕಾಗಿ ಅವರ ಪರವಾಗಿ ದೂರುಗಳನ್ನು ಸಲ್ಲಿಸುತ್ತಿದ್ದಾರೆ.

2019-2023ರ ನಡುವೆ ಪಶ್ಚಿಮ ಬಂಗಾಳದಲ್ಲಿ ಸಿಲಿಕೋಸಿಸ್ ಕಾಯಿಲೆಯಿಂದ ಸಾವನ್ನಪ್ಪಿದ 23 ಕಾರ್ಮಿಕರ ಕುಟುಂಬಗಳಿಗೆ ತಲಾ 4 ಲಕ್ಷ ರೂ.ಗಳ ಪರಿಹಾರವನ್ನು ಮತ್ತು 30 ಸಿಲಿಕೋಸಿಸ್ ಪೀಡಿತ ಕಾರ್ಮಿಕರಿಗೆ ತಲಾ 2 ಲಕ್ಷ ರೂ.ಗಳ ಪರಿಹಾರವನ್ನು ಕೊಡಿಸುವಲ್ಲಿ ಒಎಸ್ಎಜೆಎಚ್ ಇಂಡಿಯಾ ಸಹಾಯ ಮಾಡಿದೆ. ಇದಲ್ಲದೆ, ಪಿಂಚಣಿ ಮತ್ತು ಕಲ್ಯಾಣ ಯೋಜನೆಗಳಿಗಾಗಿ ರಾಜ್ಯ ಸರ್ಕಾರವು 10 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ.

1948ರ ಕಾರ್ಖಾನೆ ಕಾಯ್ದೆ, ಪ್ರಕಾರ, 10ಕ್ಕಿಂತ ಹೆಚ್ಚು ಕಾರ್ಮಿಕರು ವಿದ್ಯುತ್‌ ಬಳಕೆಯೊಂದಿಗೆ ಕೆಲಸ ಮಾಡುತ್ತಿರುವುದರಿಂದ ದ್ರವ್ಯರಾಶಿ (ಮಾಸ್) ಮತ್ತು ಸಿಲಿಕಾ ಪುಡಿಯನ್ನು ಉತ್ಪಾದಿಸುವ ಕಾರ್ಖಾನೆಗಳನ್ನು ಸಂಘಟಿತ ಉದ್ಯಮ ಎಂದು ವರ್ಗೀಕರಿಸಲಾಗಿದೆ. ಆದ್ದರಿಂದ, ಕಾರ್ಖಾನೆಗೆ ಸಂಬಂಧಿಸಿದ ಎಲ್ಲಾ ಕಾರ್ಮಿಕ ನಿಯಮಗಳು ಮತ್ತು ನಿಬಂಧನೆಗಳು ಅನ್ವಯಿಸುತ್ತವೆ" ಎಂದು ಸಮಿತ್ ಹೇಳುತ್ತಾರೆ. ಕಾರ್ಖಾನೆಗಳು ನೌಕರರ ರಾಜ್ಯ ವಿಮಾ ಕಾಯ್ದೆ 1948 ಮತ್ತು ಕಾರ್ಮಿಕರ (ನೌಕರರು) ಪರಿಹಾರ ಕಾಯ್ದೆ 1923ರ ಅಡಿಯಲ್ಲಿ ಬರುತ್ತವೆ. ಕಾರ್ಖಾನೆಗಳ ಕಾಯ್ದೆಯಲ್ಲಿ ಉಲ್ಲೇಖಿಸಲಾದ ಅಧಿಸೂಚಿತ ರೋಗವಾಗಿರುವುದರಿಂದ ವೈದ್ಯರು ಸಿಲಿಕೋಸಿಸ್ ರೋಗ ಪತ್ತೆಯಾದರೆ, ಅವರು ಕಾರ್ಖಾನೆಗಳ ಮುಖ್ಯ ಇನ್ಸ್ಪೆಕ್ಟರ್ ಅವರಿಗೆ ವಿಷಯವನ್ನು ತಿಳಿಸಬೇಕು.

PHOTO • Ritayan Mukherjee
PHOTO • Ritayan Mukherjee

ಅನಿತಾ ಮಂಡಲ್ (ಎಡ) ಮತ್ತು ಭಾರತಿ ಹಲ್ದಾರ್ (ಬಲ) ಇಬ್ಬರೂ ಸಿಲಿಕೋಸಿಸ್‌ ಕಾಯಿಲೆಗೆ ತಮ್ಮ ಗಂಡಂದಿರನ್ನು ಕಳೆದುಕೊಂಡರು. ಇವುಗಳಲ್ಲಿ ಅನೇಕ ಘಟಕಗಳು ಕಾನೂನುಬಾಹಿರ ಅಥವಾ ಅರೆ-ಕಾನೂನುಬದ್ಧವಾಗಿವೆ ಮತ್ತು ಇಲ್ಲಿನ ಕಾರ್ಮಿಕರನ್ನು ನೋಂದಾಯಿಸಲಾಗಿಲ್ಲ

ಮಾರ್ಚ್ 31, 2024ರಂದು ಕೋಲ್ಕತ್ತಾದಲ್ಲಿ ಒಎಸ್ಎಚ್ಎಜೆ ಇಂಡಿಯಾ ಆಯೋಜಿಸಿದ್ದ ಕಾರ್ಯಾಗಾರದಲ್ಲಿ, ತಜ್ಞರ ಸಮಿತಿಯು ದೀರ್ಘಕಾಲದವರೆಗೆ ಸಿಲಿಕಾ ಕಣಗಳಿಗೆ ಒಡ್ಡಿಕೊಳ್ಳುವ ಮೂಲಕ ಮಾತ್ರವೇ ಸಿಲಿಕೋಸಿಸ್ ಕಾಯಿಲೆ ಬರುತ್ತದೆ ಎನ್ನುವುದನ್ನು ಅಲ್ಲಗಳೆದರು. ಅಲ್ಪಾವಧಿಯ ಉಸಿರಾಟವು ಸಹ ರೋಗಕ್ಕೆ ಕಾರಣವಾಗಬಹುದು ಎಂದು ಸಮಿತಿಯು ನಿರ್ಣಾಯಕವಾಗಿ ಗುರುತಿಸಿದೆ. ಉತ್ತರ 24 ಪರಗಣ ಜಿಲ್ಲೆಯ ಸಿಲಿಕೋಸಿಸ್ ರೋಗಿಗಳಲ್ಲಿ ಇದು ಸ್ಪಷ್ಟವಾಗಿದೆ, ಅವರು ಈ ಮಾಸ್‌ ಘಟಕಗಳಲ್ಲಿ ಕೆಲಸ ಮಾಡಿದ್ದರು. ಯಾವುದೇ ಸಮಯದವರೆಗೆ ಸಿಲಿಕಾ ಕಣಗಳಿಗೆ ಒಡ್ಡಿಕೊಳ್ಳುವುದರಿಂದ ಧೂಳಿನ ಕಣಗಳ ಸುತ್ತಲೂ ಫೈಬ್ರಾಯ್ಡ್‌ಗಳು ರೂಪುಗೊಳ್ಳಬಹುದು. ಇದರಿಂದ ಆಮ್ಲಜನಕ ಮತ್ತು ಇಂಗಾಲದ ಡೈಆಕ್ಸೈಡ್‌ನ ವಿನಿಮಯಕ್ಕೆ ಕಷ್ಟವಾಗುತ್ತದೆ ಮತ್ತು ಉಸಿರಾಟದ ತೊಂದರೆ ಉಂಟಾಗುತ್ತದೆ ಎಂದು ಸಮಿತಿ ಹೇಳಿದೆ.

ಸಿಲಿಕೋಸಿಸ್ ಕೂಡ ಒಂದು ಔದ್ಯೋಗಿಕ ಕಾಯಿಲೆ. ಇದಕ್ಕಾಗಿ ಕಾರ್ಮಿಕರು ಪರಿಹಾರಕ್ಕೆ ಅರ್ಹರು ಎಂದು ಕಾರ್ ವಿವರಿಸುತ್ತಾರೆ. ಆದರೆ ಹೆಚ್ಚಿನ ಕಾರ್ಮಿಕರು ನೋಂದಾಯಿಸಿಕೊಂಡಿಲ್ಲ. ಸಿಲಿಕೋಸಿಸ್ ಕಾಯಿಲೆಯಿಂದ ಬಳಲುತ್ತಿರುವ ಕಾರ್ಮಿಕರು ಇರುವ ಕಾರ್ಖಾನೆಗಳನ್ನು ಗುರುತಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಪಶ್ಚಿಮ ಬಂಗಾಳ ಸರ್ಕಾರವು ತನ್ನ ಪರಿಹಾರ ಮತ್ತು ಪುನರ್ವಸತಿ ನೀತಿಯಲ್ಲಿ (ಷರತ್ತು 11.4), ಕಾರ್ಮಿಕರು ಶಾಸನವನ್ನು ಲೆಕ್ಕಿಸದೆ ಉದ್ಯೋಗದಾತರಿಂದ ಪರಿಹಾರವನ್ನು ಪಡೆಯಬಹುದು ಎಂದು ಹೇಳಿದೆ.

ಆದರೆ ವಾಸ್ತವ ಹಾಗಿಲ್ಲ ಎಂದು ಕಾರ್‌ ಹೇಳುತ್ತಾರೆ. “ಮರಣ ಪ್ರಮಾಣ ಪತ್ರದಲ್ಲಿ ಮರಣಕ್ಕೆ ಕಾರಣವಾಗಿ ಸಿಲಿಕೋಸಿಸ್ ಕಾಯಿಲೆಯನ್ನು ನಮೂದಿಸಲು ಆಡಳಿತವು ನಿರಾಕರಿಸುವುದನ್ನು ನಾನು ಅನೇಕ ಸಂದರ್ಭಗಳಲ್ಲಿ ಗಮನಿಸಿದ್ದೇನೆ" ಎಂದು ಅವರು ಹೇಳುತ್ತಾರೆ. ಮತ್ತು ಅದಕ್ಕೂ ಮೊದಲು, ಕಾರ್ಖಾನೆಗಳು ಕಾರ್ಮಿಕರು ಅನಾರೋಗ್ಯಕ್ಕೆ ಒಳಗಾದಾಗ ಅವರನ್ನು ಕೆಲಸದಿಂದ ತೆಗೆದುಹಾಕುತ್ತವೆ.

ಅನಿತಾ ಮೊಂಡಲ್ ಅವರ ಪತಿ ಸುವರ್ಣ ಅವರು ಮೇ 2017ರಲ್ಲಿ ಸಿಲಿಕೋಸಿಸ್‌ ಕಾಯಿಲೆಯಿಂದ ತೀರಿಕೊಂಡರು. ಆಗ ಕೋಲ್ಕತ್ತಾದ ನೀಲ್ ರತನ್ ಸರ್ಕಾರ್ ಆಸ್ಪತ್ರೆ ನೀಡಿದ ಮರಣ ಪ್ರಮಾಣಪತ್ರದಲ್ಲಿ ಸಾವಿಗೆ ಕಾರಣವನ್ನು "ಲಿವರ್ ಸಿರೋಸಿಸ್ ಮತ್ತು ಇನ್‌ಫೆಕ್ಷಿಯಸ್ ಪೆರಿಟೋನಿಟಿಸ್" ಎಂದು ಬರೆಯಲಾಗಿತ್ತು. ಸುಬರ್ನಾ ಜಮುರಿಯಾದಲ್ಲಿನ ರಾಮ್ಮಿಂಗ್ ಮಾಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು.

"ನನ್ನ ಪತಿಗೆ ಪಿತ್ತಜನಕಾಂಗದ ಕಾಯಿಲೆಯೇ ಇರಲಿಲ್ಲ" ಎಂದು ಅನಿತಾ ಹೇಳುತ್ತಾರೆ, "ಅವರಿಗೆ ಸಿಲಿಕೋಸಿಸ್ ಇರುವುದು ಪತ್ತೆಯಾಗಿತ್ತು." ಝುಪ್ಖಾಲಿ ನಿವಾಸಿಯಾದ ಅನಿತಾ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ ಮತ್ತು ಅವರ ಮಗ ವಲಸೆ ಕಾರ್ಮಿಕ, ಹೆಚ್ಚಾಗಿ ಕೋಲ್ಕತ್ತಾ ಮತ್ತು ಡೈಮಂಡ್ ಹಾರ್ಬರ್ ಬಳಿಯ ನಿರ್ಮಾಣ ಸ್ಥಳಗಳಲ್ಲಿ ಕೆಲಸ ಮಾಡುತ್ತಾರೆ. "ಮರಣ ಪ್ರಮಾಣಪತ್ರದಲ್ಲಿ ಅವರು ಏನು ಬರೆದಿದ್ದಾರೆಂದು ನನಗೆ ತಿಳಿದಿರಲಿಲ್ಲ. ಆ ಸಮಯದಲ್ಲಿ ನಾನು ಬಹಳ ನೋವಿನಲ್ಲಿದೆ. ಅಲ್ಲದೆ ಕಾನೂನು ನಿಯಮಗಳು ನನಗೆ ಹೇಗೆ ಅರ್ಥವಾಗುತ್ತದೆ? ನಾನೋರ್ವ ಹಳ್ಳಿಯ ಸರಳ ಗೃಹಿಣಿ" ಎಂದು ಅನಿತಾ ಹೇಳುತ್ತಾರೆ.

ತಮ್ಮ ಸಂಯೋಜಿತ ಆದಾಯದಿಂದ , ಅನಿತಾ ಮತ್ತು ಅವರ ಮಗ ಮಗಳ ಉನ್ನತ ಶಿಕ್ಷಣಕ್ಕೆ ಸಹಾಯ ಮಾಡುತ್ತಿದ್ದಾರೆ. ಅವರಿಗೂ ಚುನಾವಣೆಯ ಬಗ್ಗೆ ನಿರಾಸಕ್ತಿ ಇದೆ. ಕಳೆದ ಏಳು ವರ್ಷಗಳಲ್ಲಿ ಎರಡು ಚುನಾವಣೆಗಳು ನಡೆದಿವೆ. ಆದರೆ ನಾನು ಈಗಲೂ ದುಃಖದಲ್ಲಿ ಬದುಕುತ್ತಿದ್ದೇನೆ. ಹೇಳಿ , ನಾನು ಏಕೆ ಅದರಲ್ಲಿ ಆಸಕ್ತಿ ವಹಿಸಬೇಕು?" ಎಂದು ಅವರು ಕೇಳುತ್ತಾರೆ.

ಅನುವಾದ: ಶಂಕರ. ಎನ್. ಕೆಂಚನೂರು

Ritayan Mukherjee

Ritayan Mukherjee is a Kolkata-based photographer and a PARI Senior Fellow. He is working on a long-term project that documents the lives of pastoral and nomadic communities in India.

Other stories by Ritayan Mukherjee
Editor : Sarbajaya Bhattacharya

Sarbajaya Bhattacharya is a Senior Assistant Editor at PARI. She is an experienced Bangla translator. Based in Kolkata, she is interested in the history of the city and travel literature.

Other stories by Sarbajaya Bhattacharya
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru