ಆ ಊರಿನಲ್ಲಿ ಯಾವುದೇ ಕ್ಷಣದಲ್ಲಿ ಬೇಕಿದ್ದರೂ ದೇವತೆ ಧರೆಗಿಳಿಯಬಹುದು. ಉಡುಪು ಧರಿಸುವ ಅವಕಾಶ ಸಿಗಬೇಕಷ್ಟೇ, “ಈಗಾಗಲೇ ಏಳು ಗಂಟೆಯಾಗಿದೆ. ರಜತ್‌ ಜುಬಿಲಿ ಗ್ರಾಮದ ನಿವಾಸಿಗಳೇ, ದಯವಿಟ್ಟು ಬೆಡ್‌ ಕವರ್‌ಗಳು, ಸೀರೆ ಇತ್ಯಾದಿ ಬಟ್ಟೆಗಳನ್ನು ತನ್ನಿ. ನಮಗೆ ಚೌಕಿ ನಿರ್ಮಿಸಿಕೊಳ್ಳಬೇಕಿದೆ. ʼಪಾಲಾ ಗಾನ್‌ʼ - ಮಾನೊಷ ಎಲೋ ಮೊರ್ಟೆ [ಧರೆಗೆ ದೇವಿಯ ಆಗಮನ] ಇನ್ನೇನು ಆರಂಭಗೊಳ್ಳಲಿದೆ.” ಪ್ರದರ್ಶನಕ್ಕೂ ಮೊದಲು ಪ್ರದರ್ಶನ ಘೋಷಣೆ ಊರಿನ ಬೀದಿಗಳಲ್ಲಿ ಮೊಳಗುತ್ತಿತ್ತು. ಇದು ದಕ್ಷಿಣ 24 ಪರಗಣ ಜಿಲ್ಲೆಯ ಗೋಸಾಬಾ ಬ್ಲಾಕಿನಲ್ಲಿರುವ ಈ ಹಳ್ಳಿಯ ಗಲ್ಲಿಗಳಲ್ಲಿನ ಸಂಜೆಯನ್ನು ಜೀವಂತಗೊಳಿಸುತ್ತದೆ. ಅಂದಿನ ರಾತ್ರಿ ಜನರಿಗೆ ಮನರಂಜನೆಯ ಖಾತರಿ ನೀಡುತ್ತದೆ,

ಒಂದು ಗಂಟೆಯೊಳಗೆ, ತಾತ್ಕಾಲಿಕ ಚೌಕಿ(ಗ್ರೀನ್‌ ರೂಮ್) ತಯಾರಾಗಿದೆ ಮತ್ತು ಅದು ಮೇಕಪ್ ಅನ್ನು ಹಚ್ಚಿಕೊಳ್ಳುತ್ತಿರುವ ಪಳ-ಪಳ ಹೊಳೆಯುವ ಉಡುಪಿನಲ್ಲಿರುವ ಕಲಾವಿದರಿಂದ ಗಿಜಿಗುಡುತ್ತಿದೆ, ವೇಷ ಬರೆದಾದ ನಂತರ ಆಭರಣಗಳಿಂದ ತಮ್ಮನ್ನು ಅಲಂಕರಿಸಿಕೊಂಡು ಮೌಖಿಕ ಸ್ಕ್ರಿಪ್ಟ್‌ ಅನ್ನು ಬಾಯಿಪಾಠ ಮಾಡಿಕೊಳ್ಳುತ್ತಾರೆ. ತಂಡವನ್ನು ಮುನ್ನಡೆಸುವ ನಿತ್ಯಾನಂದ ಸರ್ಕಾರ್, ಹಿರಣ್ಮೊಯ್ ಮತ್ತು ಪ್ರಿಯಾಂಕಾ ಅವರ ಮದುವೆಯ ಸಮಯದಲ್ಲಿ ನಾನು ಮೊದಲು ಭೇಟಿಯಾದ ಉಲ್ಲಾಸ‌ ತುಂಬಿದ ನರ್ತಕಿಗಿಂತ ಭಿನ್ನವಾಗಿ ಉಗ್ರ ವೇಷ ಧರಿಸಿದ್ದರು. ಇಂದು ಅವರು ಹಾವಿನ ದೇವತೆಯಾದ ಮಾನೊಷ ಎನ್ನುವ ಪಾತ್ರವನ್ನು ನಟಿಸಲಿದ್ದಾರೆ. ಅವರು ನನ್ನನ್ನು ಈ ಸಂಜೆಯ ಪಾಲಾ ಗಾನದಲ್ಲಿ ಭಾಗವಹಿಸಲಿರುವ ಇತರ ಕಲಾವಿದರಿಗೆ ಪರಿಚಯಿಸಿದರು.

ಪಾಲಾ ಗಾನ್ ಎಂಬುದು ಮಂಗಲಕಾವ್ಯವನ್ನು ಆಧರಿಸಿದ ಸಂಗೀತ ನಾಟಕ, ಇದು ಜನಪ್ರಿಯ ದೇವತೆ ಅಥವಾ ದೇವರನ್ನು ಹೊಗಳಿ ಹಾಡುವ ಮಹಾಕಾವ್ಯದ ನಿರೂಪಣೆಯಾಗಿದೆ. ಈ ನಿರೂಪಣಾ ಕವಿತೆಗಳಲ್ಲಿ ಆಗಾಗ ಶಿವನಂತಹ ಭಾರತದೆಲ್ಲೆಡೆ ಕಂಡುಬರುವ ದೇವರುಗಳನ್ನು ಕುರಿತು ಹೊಗಳಲಾಗುತ್ತದೆ ಅಥವಾ ಹಾಡಲಾಗುತ್ತದೆ, ಆದರೆ ಹೆಚ್ಚಾಗಿ ಧರ್ಮ ಠಾಕೂರ್, ಮಾ ಮಾನೊಷ - ಹಾವಿನ ದೇವತೆ, ಶೀತಲಾ - ಸಿಡುಬಿನ ದೇವತೆ ಮತ್ತು ಬಾನ್ ಬೀಬಿ - ಕಾಡಿನ ದೇವತೆಗಳನ್ನು ಕುರಿತು ಹಾಡಲಾಗುತ್ತದೆ. ಪ್ರೇಕ್ಷಕರನ್ನು ಆಕರ್ಷಿಸುವ ಮೊದಲು ಈ ಸಂಗೀತ ನಾಟಕಗಳನ್ನು ಪ್ರದರ್ಶಿಸಲು ಕಲಾವಿದರ ತಂಡಗಳು ವರ್ಷವಿಡೀ ಸುಂದರ್ ಬನ್ ದ್ವೀಪಗಳಾದ್ಯಂತ ಚಲಿಸುತ್ತವೆ.

ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಬಿಹಾರದ ಕೆಲವು ಭಾಗಗಳಲ್ಲಿ ಪ್ರದರ್ಶಿಸಲಾಗುವ ಈ ಮಾನೊಷ ಪಾಲಾ ಗಾನ್, ಮಾನಸ ಮಂಗಲ ಕಾವ್ಯವನ್ನು ಆಧರಿಸಿದೆ, ಇದು ಒಂದು ಅಂದಾಜಿನ ಪ್ರಕಾರ, 13ನೇ ಶತಮಾನದಷ್ಟು ಹಿಂದಿನದು, ಮತ್ತು ಇದು ಪ್ರಾಚೀನ ಜಾನಪದ ಪುರಾಣಗಳನ್ನು ಆಧರಿಸಿದೆಯೆಂದು ಹೇಳಲಾಗುತ್ತದೆ. ಬಂಗಾಳದಲ್ಲಿ, ದಕ್ಷಿಣ 24 ಪರಗಣ ಮತ್ತು ಬಂಕುರಾ, ಬಿರ್ಭುಮ್ ಮತ್ತು ಪುರುಲಿಯಾ ಜಿಲ್ಲೆಗಳ ದಲಿತರ ನಡುವೆ ಮಾನೊಷ ಜನಪ್ರಿಯ ದೇವತೆಯಾಗಿದೆ. ಪ್ರತಿ ವರ್ಷ, ವಿಶ್ವಕರ್ಮ ಪೂಜೆಯ ದಿನದಂದು (ಈ ವರ್ಷದ ಸೆಪ್ಟೆಂಬರ್ 17) ಸುಂದರಬನದ ಭಾರತದ ಪ್ರದೇಶಗಳಲ್ಲಿನ ದೂರದ ಹಳ್ಳಿಗಳಲ್ಲಿನ ಅನೇಕ ಕುಟುಂಬಗಳು ಹಾವಿನ ದೇವತೆಯನ್ನು ಪೂಜಿಸುತ್ತವೆ ಮತ್ತು ಪಾಲಾ ಗಾನ್ ಪ್ರದರ್ಶನವನ್ನು ಏರ್ಪಡಿಸುತ್ತವೆ.

Left: Snake goddess Manasa is a popular among the Dalits of South 24 Paraganas as well as Bankura, Birbhum, and Purulia districts. On the day of Viswakarma Puja (September 17 this year) many households in remote villages in the Indian expanse of the Sundarbans worship the snake goddess and perform pala gaan.  Right: Older women in Rajat Jubilee village welcome others in the community to the Puja.
PHOTO • Ritayan Mukherjee
Left: Snake goddess Manasa is a popular among the Dalits of South 24 Paraganas as well as Bankura, Birbhum, and Purulia districts. On the day of Viswakarma Puja (September 17 this year) many households in remote villages in the Indian expanse of the Sundarbans worship the snake goddess and perform pala gaan.  Right: Older women in Rajat Jubilee village welcome others in the community to the Puja.
PHOTO • Ritayan Mukherjee

ಎಡಕ್ಕೆ: ದಕ್ಷಿಣ 24 ಪರಗಣ ಮತ್ತು ಬಂಕುರಾ, ಬಿರ್ಭುಮ್ ಮತ್ತು ಪುರುಲಿಯಾ ಜಿಲ್ಲೆಗಳ ದಲಿತ ಸಮುದಾಯದ ನಡುವೆ ಈ ಹಾವಿನ ದೇವತೆ ಮಾನೊಷ ಜನಪ್ರಿಯವಾಗಿದೆ. ವಿಶ್ವಕರ್ಮ ಪೂಜೆಯ ದಿನದಂದು (ಈ ವರ್ಷದ ಸೆಪ್ಟೆಂಬರ್ 17) ಸುಂದರಬನದ ಭಾರತೀಯ ವಿಸ್ತಾರದಲ್ಲಿರುವ ದೂರದ ಹಳ್ಳಿಗಳಲ್ಲಿನ ಅನೇಕ ಕುಟುಂಬಗಳು ಮಾನೊಷ ದೇವಿಯನ್ನು ಪೂಜಿಸುತ್ತವೆ ಮತ್ತು ಪಾಲಾ ಗಾನ್  ಏರ್ಪಡಿಸುತ್ತವೆ.  ಬಲ: ರಜತ್ ಜುಬಿಲಿ ಗ್ರಾಮದ ಹಿರಿಯ ಮಹಿಳೆಯರು ಸಮುದಾಯದ ಇತರರನ್ನು ಪೂಜೆಗೆ ಸ್ವಾಗತಿಸುತ್ತಿರುವುದು

ಮಾನೊಷ ದೇವತೆಯ ಸಾಹಸ ಕತೆಗಳನ್ನು ಹಾಡಿ ಹೊಗಳುವ ಈ ಸಂಗೀತ-ಆಚರಣೆಯ ಹಿಂದಿನ ಉದ್ದೇಶ ದೇವರಿಗೆ ಪ್ರಾರ್ಥನೆ ಸಲ್ಲಿಸುವುದಾಗಿದೆ. ಇಲ್ಲಿನ ಜನರು ಈ ಪ್ರಾರ್ಥನೆಯ ಮೂಲಕ ಸುಂದರಬನ ದ್ವೀಪದಲ್ಲಿರುವ ಹಾವುಗಳಿಂದ ತಮ್ಮನ್ನು ರಕ್ಷಿಸುವಂತೆ ಕೇಳಿಕೊಳ್ಳುತ್ತಾರೆ. ಈ ಪ್ರದೇಶದಲ್ಲಿ 30ಕ್ಕೂ ಹೆಚ್ಚು ಬಗೆಯ ಹಾವುಗಳಿವೆ, ಅವುಗಳಲ್ಲಿ ಕಾಳಿಂಗ ಸರ್ಪವೂ ಸೇರಿದಂತೆ ಹಲವು ಬಗೆಯ ಅತ್ಯಂತ ವಿಷಕಾರಿ ಹಾವುಗಳಿವೆ. ಮತ್ತು ಈ ಪ್ರದೇಶದಲ್ಲಿ ಹಾವಿನ ಕಡಿತದಿಂದ ಜನರು ಸತ್ತ ಕುರಿತಾದ ವರದಿಗಳು ಸರ್ವೇಸಾಮಾನ್ಯ.

ಈ ದಿನ ಇಲ್ಲಿ ಪ್ರದರ್ಶನವಾಗಲಿದ್ದ ಕತೆಯು ಶಿವ ಭಕ್ತನಾಗಿದ್ದ ಚಾಂದ್‌ ಸದಾಗರ್‌ ಎನ್ನುವ ಶ್ರೀಮಂತನ ಸುತ್ತ ಸುತ್ತುತ್ತದೆ. ಮಾನೊಷ ಅವನಿಂದ ಪೂಜೆ ಪಡೆಯಲು ಅವನನ್ನು ಬಗೆ ಬಗೆಯಾಗಿ ಶಿಕ್ಷಿಸುತ್ತಾಳೆ. ಆದರೂ ಅವನು ಹಟಮಾರಿಯಾಗಿ ಅವಳನ್ನು ಪೂಜಿಸುವುದನ್ನು ನಿರಾಕರಿಸಿದಾಗ ಅವಳು ಪ್ರತೀಕಾಕಾರವಾಗಿ ಹಡಗಿನಲ್ಲಿ ಬರುತ್ತಿದ್ದ ಸದಾಗರ್‌ನ ಸರಕುಗಳನ್ನು ಹಡಗಿನಲ್ಲೇ ನಾಶಪಡಿಸುತ್ತಾಳೆ. ಅವನ ಏಳು ಗಂಡು ಮಕ್ಕಳನ್ನು ಹಾವು ಕಚ್ಚಿಸಿ ಕೊಲ್ಲಿಸುತ್ತಾಳೆ. ಲಖೀಂದರ್‌ ಎನ್ನುವ ಇನ್ನೊಬ್ಬ ಮಗನನ್ನು ಅವನ ಮದುವೆಯ ರಾತ್ರಿಯಂದೇ ಕೊಲ್ಲುತ್ತಾಳೆ. ದುಃಖದಿಂದ ರೋದಿಸುತ್ತಾ ಲಖೀಂದರನ ಪತ್ನಿ ಬೆಹುಲಾ ತನ್ನ ಗಂಡನ ಹೆಣದೊಡನೆ ಸ್ವರ್ಗಕ್ಕೆ ಪ್ರಯಾಣಿಸುತ್ತಾಳೆ. ಅಲ್ಲಿ ಇಂದ್ರನು ಅವಳೊಡನೆ ಚಾಂದ್‌ ಸದಾಗರ್‌ನನ್ನು ಮಾನೊಷಾ ದೇವಿಯನ್ನು ಪೂಜಿಸುವಂತೆ ಮನವೊಲಿಸಲು ಹೇಳುತ್ತಾನೆ. ಆಗ ಚಾಂದ್‌ ಸದಾಗರ್‌ ಶುಭಸೂಚಕವಾದ ತನ್ನ ಬಲಗೈಯಲ್ಲಿ ಶಿವನನ್ನು ಮಾತ್ರವೇ ಪೂಜಿಸುವುದಾಗಿಯೂ, ಮಾನೊಷ ದೇವಿಗೆ ಎಡಗೈಯಿಂದಷ್ಟೇ ಹೂ ಅರ್ಪಿಸಿ ಪೂಜಿಸುವುದಾಗಿ ಹೇಳುತ್ತಾನೆ. ಇದಕ್ಕೆ ಮಾನೊಷ ದೇವಿ ಒಪ್ಪಿ ಅವನ ಪೂಜೆಯನ್ನು ಸ್ವೀಕರಿಸಿ ಅವನು ಕಳೆದುಕೊಂಡಿದ್ದ ಸಂಪತ್ತು, ಸಂತಾನ ಎಲ್ಲವನ್ನೂ ಮರಳಿಸುತ್ತಾಳೆ.

ಮಾನೊಷ ಪಾತ್ರದಲ್ಲಿ ನಟಿಸುವ ನಿತ್ಯಾನಂದ 53 ವರ್ಷದ ರೈತ ಮತ್ತು 25 ವರ್ಷಗಳಿಂದ ಈ ಕಲಾ ಪ್ರಕಾರವನ್ನು ಅಭ್ಯಾಸ ಮಾಡುತ್ತಿರುವ ಹಿರಿಯ ಪಾಲಾ ಗಾನ್ ಕಲಾವಿದ. ಅವರು ವಿಭಿನ್ನ ಪಾಲಾ ಗಾನ್‌ಗಳಿಗಾಗಿ ಒಂದಕ್ಕಿಂತ ಹೆಚ್ಚು ತಂಡದೊಂದಿಗೆ ಕೆಲಸ ಮಾಡುತ್ತಾರೆ. "2019ರಿಂದ ಪರಿಸ್ಥಿತಿ ಹದಗೆಡುತ್ತಿದೆ" ಎಂದು ಅವರು ಹೇಳುತ್ತಾರೆ. "ಈ ವರ್ಷವೂ ಸಾಂಕ್ರಾಮಿಕ ಪಿಡುಗಿನಿಂದಾಗಿ, ನಾವು ಕಡಿಮೆ ಬುಕಿಂಗ್ ಗಳನ್ನು ಪಡೆದಿದ್ದೇವೆ, ಬಹುಶಃ ಇದು ನಾವು ಇದುವರೆಗೆ ಪಡೆದ ಬುಕ್ಕಿಂಗ್‌ಗಳಲ್ಲೇ ಅತ್ಯಂತ ಕಡಿಮೆ. ನಾವು ತಿಂಗಳಿಗೆ 4 ಅಥವಾ 5 ಬುಕಿಂಗ್ ಗಳನ್ನು ಪಡೆಯುತ್ತಿದ್ದೆವು, ಆದರೆ ಈ ವರ್ಷ ಕೇವಲ ಎರಡು ಬುಕಿಂಗ್‌ಗಳನ್ನು ಪಡೆದಿದ್ದೇವೆ. ಕಡಿಮೆ ಪ್ರದರ್ಶನಗಳೆಂದರೆ ಕಡಿಮೆ ಆದಾಯವೆಂದರ್ಥ. "ಈ ಮೊದಲು, ನಾವು ಕಲಾವಿದರು ಪ್ರತಿ ಪ್ರದರ್ಶನದಿಂದ 800-900 ರೂಪಾಯಿಗಳನ್ನು ಸಂಪಾದಿಸುತ್ತಿದ್ದೆವು; ಈಗ ಅದೂ 400-500ಕ್ಕೆ ಇಳಿದಿದೆ.”

ನಿತ್ಯಾನಂದರ ಪಕ್ಕದಲ್ಲಿ ಕುಳಿತಿದ್ದ ತಂಡದ ಸದಸ್ಯ ಬನಮಾಲಿ ಬ್ಯಾಪಾರಿ, ಗ್ರೀನ್‌ ರೂಮ್‌ ಇಲ್ಲದ, ಸರಿಯಾದ ವೇದಿಕೆಯಿಲ್ಲದ, ಪರಿಣಾಮಕಾರಿ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯಿಲ್ಲದ ಮತ್ತು ಶೌಚಾಲಯಗಳಂತಹ ಸರಿಯಾದ ಸೌಕರ್ಯಗಳಿಲ್ಲದ ಗ್ರಾಮೀಣ ರಂಗಮಂದಿರಗಳ ಸಮಸ್ಯೆಯ ಕುರಿತು ಅವರು ಪ್ರಸ್ತಾಪಿಸಿದರು. "ಪ್ರದರ್ಶನಗಳು 4-5 ಗಂಟೆಗಳ ಕಾಲ ಸಾಗುತ್ತವೆ. ಇದು ತುಂಬಾ ಕಷ್ಟದ ಕೆಲಸ. ನಾವು ಅದನ್ನು ನಮ್ಮ ಆಸಕ್ತಿಗಾಗಿ ನಿರ್ವಹಿಸುತ್ತೇವೆ ಹೊರತು, ಆರ್ಥಿಕ ಲಾಭಕ್ಕಾಗಿ ಅಲ್ಲ" ಎಂದು ಅವರು ಹೇಳುತ್ತಾರೆ. ಅವರು ಈ ನಾಟಕದಲ್ಲಿ ಒಟ್ಟು ಎರಡು ಪಾತ್ರಗಳನ್ನು ಹೊಂದಿದ್ದಾರೆ: ಲಖೀಂದರ್‌ ಸಿಂಗ್‌ನನ್ನು ಕೊಲ್ಲುವ ಕಾಳನಾಗಿಣಿಯ ಪಾತ್ರ ಮತ್ತು ಈ ನಾಟಕದಲ್ಲಿನ ತೀವ್ರ ಸಂಕಟಗಳನ್ನು ಭರಿಸಲು ಅಗತ್ಯವಿರುವ ನಗೆಯನ್ನು ಹೊಮ್ಮಿಸುವ ಹಾಸ್ಯ ಪಾತ್ರವಾದ ಭರ್.

PHOTO • Ritayan Mukherjee

ಮಾನೊಷ ಪಾತ್ರದಲ್ಲಿ ನಟಿಸುವ ನಿತ್ಯಾನಂದ 53 ವರ್ಷದ ರೈತ ಮತ್ತು 25 ವರ್ಷಗಳಿಂದ ಈ ಕಲಾ ಪ್ರಕಾರವನ್ನು ಅಭ್ಯಾಸ ಮಾಡುತ್ತಿರುವ ಹಿರಿಯ ಪಾಲ ಗಾನ್ ಕಲಾವಿದ. ಅವರು ವಿಭಿನ್ನ ಪಾಲ ಗಾನ್‌ಗಳಿಗಾಗಿ ಒಂದಕ್ಕಿಂತ ಹೆಚ್ಚು ತಂಡದೊಂದಿಗೆ ಕೆಲಸ ಮಾಡುತ್ತಾರೆ. ಈ ಸಾಂಕ್ರಾಮಿಕ ಪಿಡುಗಿನಿಂದಾಗಿ, ಈಗ ಬುಕ್ಕಿಂಗ್‌ ಸಂಪೂರ್ಣ ಕಡಿಮೆಯಾಗಿದೆಯೆಂದು ಅವರು ಹೇಳುತ್ತಾರೆ. "ಈ ಮೊದಲು, ನಾವು ಕಲಾವಿದರು ಪ್ರತಿ ಪ್ರದರ್ಶನದಿಂದ 800-900 ರೂಪಾಯಿಗಳನ್ನು ಸಂಪಾದಿಸುತ್ತಿದ್ದೆವು; ಈಗ ಅದೂ 400-500ಕ್ಕೆ ಇಳಿದಿದೆ

ಕಾರ್ಯಕ್ರಮದ ಮೊದಲಿಗೆ ಸಂಗೀತಗಾರರು ವಾದ್ಯಗಳನ್ನು ನುಡಿಸಲು ಪ್ರಾರಂಭಿಸುತ್ತಾರೆ, ಇದು ಪ್ರದರ್ಶನದ ಪ್ರಾರಂಭವನ್ನು ಸೂಚಿಸುತ್ತದೆ. ನಿತ್ಯಾನಂದ ಮತ್ತು ಅವರ ತಂಡವು ತಮ್ಮ ವೇಷಭೂಷಣದೊಂದಿಗೆ ನೇರವಾಗಿ ವೇದಿಕೆಗೆ ಹೋಗುತ್ತಾರೆ. ಪ್ರದರ್ಶನವು ಮಾನೊಷ ದೇವಿ ಮತ್ತು ಹಳ್ಳಿಯ ಹಿರಿಯರ ಆಶೀರ್ವಾದವನ್ನು ಕೋರುವ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗುತ್ತದೆ. ಜನಸಮೂಹವು ಇದು ತಾವು ಈ ಹಿಂದೆ ನೋಡಿದ ನಾಟಕವಾದರೂ ಮೊದಲ ಸಲ ನೋಡುತ್ತಿರುವವರಂತೆ ತಲ್ಲೀನರಾಗಿ ನೋಡುತ್ತಿದ್ದರು. ದೇವರ ಕತೆಯಲ್ಲಿನ ಅವರ ತಲ್ಲೀನತೆ ಅದ್ಭುತವಾಗಿತ್ತು. ಇಲ್ಲಿ ಇನ್ನೊಂದು ವಿಷಯವನ್ನು ಹೇಳಲೇಬೇಕು. ಈ ಸಂಗೀತ ನಾಟಕದ ಪಾತ್ರಧಾರಿಗಳಲ್ಲಿ ಒಬ್ಬರೂ ವೃತ್ತಿಪರ ನಟರಲ್ಲ. ಇವರೆಲ್ಲರೂ ವೃತ್ತಿಯಿಂದ ರೈತರು, ಕೃಷಿ ಕಾರ್ಮಿಕರು ಮತ್ತು ಕೆಲಸದ ಹಂಗಾಮಿನಲ್ಲಿ ವಲಸೆ ಹೋಗುವವರು.

ನಿತ್ಯಾನಂದರ ಕುಟುಂಬದಲ್ಲಿ ಆರು ಸದಸ್ಯರಿದ್ದಾರೆ. ಇವರು ಅವರೆಲ್ಲರ ಜವಬ್ದಾರಿ ಹೊರಬೇಕು. “ಈ ವರ್ಷ ಯಾಸ್‌ ಚಂಡಮಾರುತದಿಂದಾಗಿ ಬೇಸಾಯ ಪೂರ್ತಿ ನಾಶವಾಗಿದೆ. ಕೈಗೆ ಒಂದು ರೂಪಾಯಿಯೂ ಸಿಕ್ಕಿಲ್ಲ. ನನ್ನ ಹೊಲ ಉಪ್ಪು ನೀರಿನಡಿ ಮುಳುಗಿತ್ತು. ಈಗ ನೋಡಿದರೆ ವಿಪರೀತ ಮಳೆಯಾಗುತ್ತಿದೆ. ನನ್ನ ಸಹಕಲಾವಿದರು ಕೂಡಾ ಈಗ ಸಂಕಷ್ಟ ಎದುರಿಸುತ್ತಿದ್ದಾರೆ. ರೈತರು ಮತ್ತು ಕೆಲವರು ಇತರ ಕೆಲಸಗಳನ್ನು ಮಾಡುತ್ತಾರೆ. ನೆಮ್ಮದಿಯ ವಿಷಯವೆಂದರೆ ನನಗೆ ತಿಂಗಳಿಗೆ 1,000 ರೂಪಾಯಿಗಳ ಪಿಂಚಣಿ ಸಿಗುತ್ತದೆ. [ಲೋಕಪ್ರಸಾರ ಯೋಜನೆಯಡಿ, ಪ್ರತಿಯೊಬ್ಬ ಹಿರಿಯ ಮತ್ತು ಯುವ ಜಾನಪದ ಕಲಾವಿದರಿಗೆ ಪ್ರೋತ್ಸಾಹ ಧನ ಅಥವಾ ಪಿಂಚಣಿಯನ್ನು ಪ್ರತಿ ತಿಂಗಳು ನೀಡಲಾಗುತ್ತದೆ]."

ಆದಾಗ್ಯೂ, ಹೊಸ ತಲೆಮಾರಿನ ಹುಡುಗರು ಈ ಜಾನಪದ ಕಲೆಯ ಕುರಿತು ಉತ್ಸಾಹ ಹೊಂದಿಲ್ಲ, ನಿತ್ಯಾನಂದರ ಸ್ವಂತ ಮಗ ಕೂಡ ಅವರಲ್ಲಿ ಒಬ್ಬ. ಲಾಹಿರಿಪುರ ಪಂಚಾಯತ್ ಗ್ರಾಮಸ್ಥರು ನಿರ್ಮಾಣ ಕೆಲಸ ಅಥವಾ ಕೃಷಿ ಕೆಲಸಕ್ಕಾಗಿ ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಾರೆ. "ಸಮಾಜ ಮತ್ತು ಸಂಸ್ಕೃತಿ ಎಲ್ಲವೂ ಬದಲಾಗುತ್ತಿದೆ, ಇನ್ನೊಂದು 3-5 ವರ್ಷಗಳ ನಂತರ, ಈ ಕಲಾಪ್ರಕಾರ ಅಳಿಸಿ ಹೋಗಬಹುದು" ಎಂದು ನಿತ್ಯಾನಂದ ನಿರಾಶೆಯಿಂದ ಹೇಳಿದರು.

"ಜೊತೆಗೆ ಪ್ರೇಕ್ಷಕರ ಆದ್ಯತೆಗಳು ಸಹ ಬದಲಾಗಿವೆ. ಮೊಬೈಲ್ ಮನರಂಜನೆಯು ಸಾಂಪ್ರದಾಯಿಕ ಪ್ರದರ್ಶನಗಳ ಸ್ಥಾನವನ್ನು ಕಸಿಯುತ್ತಿದೆ" ಎಂದು 40ರ ದಶಕದ ಮಧ್ಯದಲ್ಲಿರುವ ತಂಡದ ಇನ್ನೊಬ್ಬ ಪ್ರದರ್ಶಕ ಬಿಸ್ವಜಿತ್ ಮಂಡಲ್ ಹೇಳುತ್ತಾರೆ.

ಪ್ರದರ್ಶನವನ್ನು ನೋಡಿ ಕಲಾವಿದರೊಂದಿಗೆ ಮಾತನಾಡುತ್ತಾ ಅನೇಕ ಗಂಟೆಗಳ ಕಾಲ ಕಳೆದ ನಂತರ, ನಾನು ವಿದಾಯ ಹೇಳುವ ಸಮಯ ಬಂದಿತು. ನಾನು ಹೊರಡಲು ಸಿದ್ಧವಾಗುತ್ತಿದ್ದಂತೆ, ನಿತ್ಯಾನಂದ ಕರೆದು ಹೇಳಿದರು: "ದಯವಿಟ್ಟು ಚಳಿಗಾಲದಲ್ಲಿ ಮತ್ತೆ ಬನ್ನಿ. ನಾವು ಮಾ ಬಾನ್ ಬೀಬಿ ಪಾಲಾ ಗಾನ್ ಪ್ರದರ್ಶಿಸಲಿದ್ದೇವೆ. ಅದನ್ನು ನೀವು ಬಯಸಿದಲ್ಲಿ ದಾಖಲಿಸಬಹುದು. ಮುಂದಿನ ದಿನಗಳಲ್ಲಿ ಜನರು ಈ ಕಲೆಯ ಬಗ್ಗೆ ಇತಿಹಾಸದ ಪುಸ್ತಕಗಳಲ್ಲಿ ಮಾತ್ರ ಕಾಣಲು ಸಾಧ್ಯವೆನ್ನುವ ಆತಂಕ ನನ್ನನ್ನು ಕಾಡುತ್ತಿದೆ.”

PHOTO • Ritayan Mukherjee

ಮಾನೊಷ ಪಾಲಾ ಗಾನ್ ಪ್ರದರ್ಶಕರ ಈ ಪುರುಷರ ತಂಡದಲ್ಲಿ ಕಲಾವಿದರಾಗಿರುವ ಬಿಸ್ವಜಿತ್ ಮಂಡಲ್, ಪ್ರದರ್ಶನ ಪ್ರಾರಂಭವಾಗುವ ಮೊದಲು ತಾತ್ಕಾಲಿಕ ಗ್ರೀನ್‌ ರೂಮಿನಲ್ಲಿ ಅವರ ವೇಷಭೂಷಣಗಳನ್ನು ಪರಿಶೀಲಿಸುತ್ತಿರುವುದು


PHOTO • Ritayan Mukherjee

ಕಲಾವಿದನು ವೇದಿಕೆಗೆ ಹೋಗುವ ಸ್ವಲ್ಪ ಮೊದಲು ಕಾಲ್ಗೆಜ್ಜೆಗಳನ್ನು(ಘುಂಗ್ರು) ಕಟ್ಟಿಕೊಳ್ಳುತ್ತಿರುವುದು


PHOTO • Ritayan Mukherjee

ಬನಮಾಲಿ ಬ್ಯಾಪಾರಿ ಈ ನಾಟಕದಲ್ಲಿ ಕಾಳನಾಗಿಣಿ ಮತ್ತು ಭರ್‌ ಎನ್ನುವ ಎರಡು ಪಾತ್ರಗಳನ್ನು ನಿರ್ವಹಿಸಿದರು. ಪ್ರದರ್ಶನ 4-5 ಗಂಟೆಗಳ ಕಾಲ ನಡೆಯುತ್ತದೆ. “ಹಳ್ಳಿಗಳಲ್ಲಿ ಅವ್ಯವಸ್ಥೆಯ ಕಾರಣ ರಂಗಪ್ರದರ್ಶನ ಬಹಳ ಕಷ್ಟ, ಇದನ್ನು ನಾವು ನಮ್ಮ ಖುಷಿಗಾಗಿ ಮಾಡುತ್ತೇವೆಯೇ ಹೊರತು ಹಣಕಾಸಿನ ಲಾಭಕ್ಕಾಗಿ ಅಲ್ಲ” ಎನ್ನುತ್ತಾರವರು


PHOTO • Ritayan Mukherjee

ಸ್ವಪನ್‌ ಮಂಡಲ್‌ ತನ್ನ ಪಾತ್ರಕ್ಕಾಗಿ ಪೂರ್ವಾಭ್ಯಾಸ ಮಾಡುತ್ತಿರುವುದು. ಯಾವುದೇ ಲಿಖಿತ ಪಠ್ಯಗಳಿಲ್ಲದ ಕಾರಣ ಕಲಾವಿದರು ಅಭ್ಯಾಸಕ್ಕಾಗಿ ತಮ್ಮ ನೆನಪನ್ನೇ ಅವಲಂಬಿಸಿರಬೇಕಾಗುತ್ತದೆ


PHOTO • Ritayan Mukherjee

ಶ್ರೀಪಾದ ಮೃಧಾ ಅವರು ನಾಟಕದ ಕೇಂದ್ರ ಪಾತ್ರವಾದ‌ ಮಾನೊಷಿಯೆದುರು ಗೆಲ್ಲಲು ಪ್ರಯತ್ನಿಸುವ ಶಿವನ ಅಖಂಡ ಭಕ್ತ ಮತ್ತು ಶ್ರೀಮಂತ ಚಾಂದ್‌ ಸದಾಗರ್‌ನ ಪಾತ್ರವನ್ನು ನಿರ್ವಹಿಸುತ್ತಾರೆ


PHOTO • Ritayan Mukherjee

ಕಲಾವಿದನೊಬ್ಬ ಪ್ರದರ್ಶನಕ್ಕೂ ಮೊದಲು ತನ್ನ ನಾಲಿಗೆಯಿಂದ ಕೀಬೋರ್ಡ್‌ ನುಡಿಸುತ್ತಿರುವುದು


PHOTO • Ritayan Mukherjee

ಕಲಾವಿದರೊಬ್ಬರು ಕರ್ತಾಲ್ ಎನ್ನುವ ತಾಳವಾದ್ಯವನ್ನು ಬಾರಿಸುತ್ತಿರುವುದು


PHOTO • Ritayan Mukherjee

ನಿತ್ಯಾನಂದ ಮತ್ತು ಇತರ ಕಲಾವಿದರು ತಮ್ಮ ಪ್ರದರ್ಶನಕ್ಕೂ ಮೊದಲು ಚಪ್ಪರದಲ್ಲಿದ್ದ ದೇವರಿಗೆ ನಮಸ್ಕರಿಸುತ್ತಿರುವುದು


PHOTO • Ritayan Mukherjee

“ನಾವು ಕಲಾವಿದರು ವೇದಿಕೆಯನ್ನು ಗೌರವಿಸಬೇಕು. ಅದು ನಮಗೆ ದೇವಸ್ಥಾನವಿದ್ದಂತೆ.” ಎನ್ನುತ್ತಾರೆ ನಿತ್ಯಾನಂದ


PHOTO • Ritayan Mukherjee

ಎಡಗಡೆಯಿಂದ: ಸ್ವಪನ್ ಮಂಡಲ್ (ಚಾಂದ್ ಸದಾಗರ್ ಪತ್ನಿ ಸನಾಕಾ ಪಾತ್ರ), ನಿತ್ಯಾನಂದ ಸರ್ಕಾರ್ (ಮಾನೊಷ ದೇವತೆಯಾಗಿ), ಮತ್ತು ಬಿಸ್ವಜಿತ್ ಮಂಡಲ್ (ಚಾಂದ್ ಸದಾಗರ್ ಮಗಳಾಗಿ) ಗ್ರಾಮ ದೇವತೆಗಳು ಮತ್ತು ಪ್ರೇಕ್ಷಕರ ನಡುವೆ ಇರುವ ಹಿರಿಯರ ಆಶೀರ್ವಾದವನ್ನು ಪಡೆಯುವ ಮೂಲಕ ಪ್ರದರ್ಶನವನ್ನು ಪ್ರಾರಂಭಿಸುತ್ತಾರೆ


PHOTO • Ritayan Mukherjee

ಮಾನೊಷ ಪಾತ್ರದ ಮೂಲಕ ನಿತ್ಯಾನಂದ ತನ್ನ ಪ್ರೇಕ್ಷಕರನ್ನುಮೂಕವಿಸ್ಮಿತಗೊಳಿಸಿದರು


PHOTO • Ritayan Mukherjee

ಈ ಸಂಗೀತ-ನಾಟಕ ಪ್ರದರ್ಶನವು ಮಾನೊಷ ಮಂಗಲ ಕಾವ್ಯವನ್ನು ಆಧರಿಸಿದೆ, ಇದು ಒಂದು ಅಂದಾಜಿನ ಪ್ರಕಾರ, 13ನೇ ಶತಮಾನದಷ್ಟು ಹಿಂದಿನದು, ಮತ್ತು ಇದು ಹಳೆಯ ಜಾನಪದ ಪುರಾಣಗಳನ್ನು ಆಧರಿಸಿದೆ ಎಂದು ಹೇಳಲಾಗುತ್ತದೆ


PHOTO • Ritayan Mukherjee

ರಜತ್ ಜುಬಿಲಿಯ ಈ ಅಜ್ಜಿಯಂತೆ ಇಲ್ಲಿನ ಪ್ರೇಕ್ಷಕರು ಆಶ್ಚರ್ಯಚಕಿತರಾಗಿ ಪ್ರದರ್ಶನದಲ್ಲಿ ತಲ್ಲೀನರಾಗುತ್ತಾರೆ. ಅವರಿಗೆ ಈ ದೇವರ ಕತೆಗಳು ಚಿರಪರಿಚಿತವೇ ಆದರೂ ಪ್ರತಿ ಬಾರಿಯೂ ಮೊದಲ ಬಾರಿಯೆಂಬಂತೆ ವಿಸ್ಮಯದಿಂದ ನೋಡುತ್ತಾರೆ


PHOTO • Ritayan Mukherjee

ಮಾನೊಷ ದೇವತೆಯ ಆಣತಿಯಂತೆ ಚಂದ್ ಸದಾಗರ್‌ನ  ಮಗ ಲಖೀಂದರ್‌ನನ್ನು ಕೊಲ್ಲಲು ವಿಷಕಾರಿ ಕಾಳನಾಗಿನಿ ಹಾವಾಗಿ ಬನಮಾಲಿ ಬ್ಯಾಪಾರಿ ವೇದಿಕೆಯನ್ನು ಪ್ರವೇಶಿಸುತ್ತಿರುವುದು


PHOTO • Ritayan Mukherjee

ಗಂಭೀರ ದೃಶ್ಯವೊಂದರಲ್ಲಿ ಮಾನೊಷಿಯಾಗಿ ನಿತ್ಯಾನಂದ ಮತ್ತು ಕಾಳನಾಗಿನಿಯಾಗಿ ಬನಮಾಲಿ ಬ್ಯಾಪಾರಿ


PHOTO • Ritayan Mukherjee

ಸವಾಲಿನ ದೃಶ್ಯವನ್ನು ಪ್ರದರ್ಶಿಸಿದ ನಂತರ, ದಣಿದ ಬನಮಾಲಿ ವಿರಾಮ ತೆಗೆದುಕೊಳ್ಳಲು ತೆರೆಮರೆಗೆ ಹೋದಾಗ, ಅಲ್ಲಿ ನಿರ್ಜಲೀಕರಣದಿಂದಾಗಿ ಅವರು ಮೂರ್ಛೆ ಹೋದರು. ಇಲ್ಲಿನ ಯಾವುದೇ ನಟರು ಪೂರ್ಣಸಮಯದ ವೃತ್ತಿಪರ ನಟರಲ್ಲ - ಅವರೆಲ್ಲರೂ ರೈತರು, ಕೃಷಿ ಕಾರ್ಮಿಕರು ಅಥವಾ ಹಂಗಾಮಿ ವಲಸೆ ಕಾರ್ಮಿಕರು


PHOTO • Ritayan Mukherjee

ಶ್ರೀಪಾದ ಮೃಧಾ ನಿರ್ವಹಿಸಿದ ಚಾಂದ್ ಸದಾಗರ್ ‌ಪಾತ್ರದ ಪತ್ನಿ ಸನಾಕಾ ಪಾತ್ರದಲ್ಲಿ ಸ್ವಪನ್ ಮಂಡಲ್ (ಎಡಕ್ಕೆ)


PHOTO • Ritayan Mukherjee

ಚಾಂದ್ ಸದಾಗರ್ ಆಗಿ ಶ್ರೀಪಾದ ಮೃಧಾ ತನ್ನ ಹಡಗು ಬಿರುಗಾಳಿಗೆ ಸಿಲುಕಿ ಮುಳುಗಿ ನಾಶವಾದ ನಂತರ ಸಾಗರದಲ್ಲಿ ತೇಲಲು ಪ್ರಯತ್ನಿಸುತ್ತಿರುವುದು – ಇವೆಲ್ಲವೂ ಅವನು ಮಾನೊಷ ದೇವತೆಯನ್ನು ಮುಖ್ಯ ದೇವತೆಯಾಗಿ ಒಪ್ಪಿಕೊಳ್ಳದ ಕಾರಣಕ್ಕೆ ನಡೆಯುತ್ತಿರುತ್ತದೆ


PHOTO • Ritayan Mukherjee

ನಿತ್ಯಾನಂದ ತನ್ನ ಸಹನಟರ ಅಭಿನಯವನ್ನು ಎಚ್ಚರಿಕೆಯಿಂದ ಗಮನಿಸುತ್ತಿರುವುದು


PHOTO • Ritayan Mukherjee

ಮಧ್ಯರಾತ್ರಿ ಪ್ರದರ್ಶನದ ಕೊನೆಯಲ್ಲಿ ಧೂಪದ ಕಡ್ಡಿಯಿಂದ ಹೊಗೆ ತೇಲುತ್ತಿತ್ತು. ಪ್ರೇಕ್ಷಕರಲ್ಲಿ ಮಕ್ಕಳು ಆಗಲೇ ನಿದ್ರೆಗೆ ಜಾರಿದ್ದರು


ಅನುವಾದ: ಶಂಕರ. ಎನ್. ಕೆಂಚನೂರು

Ritayan Mukherjee

Ritayan Mukherjee is a Kolkata-based photographer and a PARI Senior Fellow. He is working on a long-term project that documents the lives of pastoral and nomadic communities in India.

Other stories by Ritayan Mukherjee
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru