ʼಯಾರಿಗೆ ಗೊತ್ತಿತ್ತು, ತುರ್ತು ಪರಿಸ್ಥಿತಿ ಹೊಸ ವೇಷದಲ್ಲಿ ಮರಳುತ್ತದೆಯೆಂದು
ನಿರಂಕುಶ ಪ್ರಭುತ್ವಕ್ಕೆ ಪ್ರಜಾಪ್ರಭುತ್ವವೆನ್ನುವ ಹೆಸರಿಡಲಾಗುತ್ತದೆಯೆಂದುʼ

ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ಮತ್ತು ಭಿನ್ನಮತೀಯರನ್ನು ಸುಮ್ಮನಾಗಿಸುವ ಅಥವಾ ಬಂಧಿಸುವ ಅಥವಾ ಎರಡನ್ನೂ ಮಾಡಲಾಗುವ ಈ ಸಮಯದಲ್ಲಿ, ರೈತರು ಮತ್ತು ಕೃಷಿ ಕಾರ್ಮಿಕರು - ಕಿಸಾನ್ ಮತ್ತು ಮಜ್ದೂರ್ - ಕೆಂಪು ಮತ್ತು ಹಸಿರು ಮತ್ತು ಹಳದಿ ಧ್ವಜಗಳನ್ನು ಎತ್ತರಕ್ಕೆ ಹಾರಿಸುತ್ತಾ ರಾಮ್ ಲೀಲಾ ಮೈದಾನದತ್ತ ನಡೆಯುತ್ತಿರುವಾಗ ಪ್ರತಿಭಟನಾ ಹಾಡಿನ ಈ ಸಾಲುಗಳು ಮತ್ತೊಮ್ಮೆ ನಿಜವಾದವು.

ಎಐಕೆಎಸ್ (ಅಖಿಲ ಭಾರತ ಕಿಸಾನ್ ಸಭಾ), ಬಿಕೆಯು (ಭಾರತೀಯ ಕಿಸಾನ್ ಯೂನಿಯನ್), ಎಐಕೆಕೆಎಂಎಸ್ (ಅಖಿಲ ಭಾರತ ಕಿಸಾನ್ ಖೇತ್ ಮಜ್ದೂರ್ ಸಂಘಟನ್) ಮತ್ತು ಇತರ ಸಂಘಟನೆಗಳ ರೈತರು ಮಾರ್ಚ್ 14, 2024ರಂದು ಎಸ್‌ಕೆಎಂ (ಸಂಯುಕ್ತ ಕಿಸಾನ್ ಮೋರ್ಚಾ) ಏಕೀಕೃತ ವೇದಿಕೆಯ ಅಡಿಯಲ್ಲಿ ನಡೆದ ಕಿಸಾನ್ ಮಜ್ದೂರ್ ಮಹಾ ಪಂಚಾಯತ್ ಸಭೆಯಲ್ಲಿ ಭಾಗವಹಿಸಲು ಐತಿಹಾಸಿಕ ಮೈದಾನದಲ್ಲಿ ಸೇರಿದ್ದರು.

"ಈ ಹಿಂದೆ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಿದ ನಂತರ, ಸರ್ಕಾರವು ಕೆಲವು ಭರವಸೆಗಳನ್ನು ನೀಡಿತ್ತು, ಆದರೆ ಅವು ಇನ್ನೂ ಈಡೇರಿಲ್ಲ. ಈಗ ಅವರು ಆ ಭರವಸೆಗಳನ್ನು ಈಡೇರಿಸಬೇಕು. ವರ್ನಾ ಹಮ್ ಲಡೇಂಗೆ, ಔರ್ ಲಡ್ತೇ ರಹೇಂಗೆ [ಅವರು ಈಡೇರಿಸದಿದ್ದರೆ, ನಾವು ಹೋರಾಡುತ್ತೇವೆ ಮತ್ತು ಹೋರಾಟವನ್ನು ಮುಂದುವರಿಸುತ್ತೇವೆ]" ಎಂದು ಕಲಾನ್ ಗ್ರಾಮದ ರೈತ ಮಹಿಳೆ ಪ್ರೇಮಮತಿ ಪರಿಗೆ ತಿಳಿಸಿದರು. ರೈತರು (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ 2020 , ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಕಾಯ್ದೆ, 2020 ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020 ಈ ಮೂರು ಕಾನೂನುಗಳನ್ನು ಅವರು ಉಲ್ಲೇಖಿಸುತ್ತಿದ್ದರು.

"ನಾವು ಮೂರು ವರ್ಷಗಳ ಹಿಂದೆ ಪ್ರತಿಭಟನೆಗಾಗಿ ಇಲ್ಲಿಗೆ ಬಂದಿದ್ದೆವು" ಎಂದು ಅವರು ಹೇಳಿದರು. ಉತ್ತರ ಪ್ರದೇಶದ ಶಹಜಹಾನ್ಪುರ ಜಿಲ್ಲೆಯಿಂದ ಮಹಾಪಂಚಾಯತ್ ಸಭೆಗೆ ಆಗಮಿಸಿದ ಮೂವರು ಮಹಿಳೆಯರಲ್ಲಿ ಪ್ರೇಮಮತಿ ಕೂಡ ಒಬ್ಬರು. ಅವರು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಸಂಘಟನೆಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರು. "ಈ ಸರ್ಕಾರವು ಅಭಿವೃದ್ಧಿ ಹೊಂದುತ್ತಿದೆ, ಆದರೆ ಅವರು ರೈತರನ್ನು ನಾಶ ಮಾಡುತ್ತಿದ್ದಾರೆ" ಎಂದು ಅವರು ಆಕ್ರೋಶದಿಂದ ಹೇಳಿದರು.

ಪರಿ ಮಾತನಾಡಿಸಿದ ಎಲ್ಲಾ ಮಹಿಳೆಯರು 4-5 ಎಕರೆ ಭೂಮಿಯಲ್ಲಿ ಕೆಲಸ ಮಾಡುವ ಸಣ್ಣ ರೈತ ಮಹಿಳೆಯರು. ಮಹಿಳಾ ರೈತರು ಮತ್ತು ಕಾರ್ಮಿಕರು ಭಾರತದಲ್ಲಿ ಶೇಕಡಾ 65ಕ್ಕಿಂತ ಹೆಚ್ಚು ಕೃಷಿ ಕೆಲಸಗಳನ್ನು ಮಾಡುತ್ತಾರೆ, ಆದರೆ ಕೇವಲ 12 ಪ್ರತಿಶತದಷ್ಟು ಮಹಿಳಾ ರೈತರು ಮಾತ್ರವೇ ತಮ್ಮ ಹೆಸರಿನಲ್ಲಿ ಭೂಮಿಯನ್ನು ಹೊಂದಿದ್ದಾರೆ.

PHOTO • Ritayan Mukherjee
PHOTO • Ritayan Mukherjee

ಎಡದಿಂದ ಬಲಕ್ಕೆ, ಉತ್ತರ ಪ್ರದೇಶದ ಶಹಜಹಾನ್ಪುರ ಜಿಲ್ಲೆಯ ಬಿಕೆಯು ಸಂಘಟನೆಯ ಪ್ರೇಮಮತಿ, ಕಿರಣ್ ಮತ್ತು ಜಶೋದಾ. ಬಲ: ಮಾರ್ಚ್ 14, 2024ರಂದು ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ನೆರೆದಿರುವ ಪಂಜಾಬ್ ಮತ್ತು ಹರಿಯಾಣದ ರೈತರು

PHOTO • Ritayan Mukherjee
PHOTO • Ritayan Mukherjee

ಎಡ: ಪಂಜಾಬ್ನ ಮಹಿಳಾ ರೈತರು ಮತ್ತು ಕೃಷಿ ಕಾರ್ಮಿಕರು. ಬಲ: ಪಂಜಾಬಿನ ರೈತರು 'ಕಿಸಾನ್ ಮಜ್ದೂರ್ ಏಕ್ತಾ ಜಿಂದಾಬಾದ್!' ಎಂಬ ಘೋಷಣೆ ಕೂಗುತ್ತಿದ್ದಾರೆ

ನೇಷನ್ ಫಾರ್ ಫಾರ್ಮರ್ಸ್ ಮೂವ್ಮೆಂಟ್ ಉಪಕ್ರಮವಾದ ಕಿಸಾನ್ ಮಜ್ದೂರ್ ಕಮಿಷನ್ (ಕೆಎಂಸಿ) ಮಹಿಳೆಯರಿಗೆ ಆಗುತ್ತಿರುವ ಅನ್ಯಾಯಗಳನ್ನು ಗುರುತಿಸಿದೆ. ಮಾರ್ಚ್ 19, 2024ರಂದು ಹೊಸದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಅವರು ಕೆಎಂಸಿ ಅಜೆಂಡಾ 2024 ಎನ್ನುವ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು: "ಮಹಿಳೆಯರನ್ನು ರೈತರೆಂದು ಗುರುತಿಸಿ ಮತ್ತು ಅವರಿಗೆ ಭೂ ಹಕ್ಕುಗಳನ್ನು ನೀಡಿ, ಗುತ್ತಿಗೆ ಭೂಮಿಯ ಮೇಲೆ ಅವರ ಹಿಡುವಳಿ ಹಕ್ಕುಗಳನ್ನು ಭದ್ರಪಡಿಸಿಕೊಳ್ಳಿ. ಕೃಷಿ ಕೆಲಸದ ಸ್ಥಳಗಳಲ್ಲಿ ಮಕ್ಕಳ ಪಾಲನೆ ಮತ್ತು ಶಿಶುಪಾಲನಾ ಸೌಲಭ್ಯಗಳನ್ನು ಒದಗಿಸಿ" ಎಂದು ಅದು ಹೇಳಿದೆ.

ರೈತರಿಗೆ ವಾರ್ಷಿಕ 6,000 ರೂ.ಗಳ ಆದಾಯವನ್ನು ನೀಡುವ ಪಿಎಂ ಕಿಸಾನ್ ಸಮ್ಮಾನ್ ನಿಧಿಯಂತಹ ಸರ್ಕಾರಿ ಯೋಜನೆಗಳಲ್ಲಿಯೂ ರೈತ ಮಹಿಳೆಯರನ್ನು ನಿರ್ಲಕ್ಷಿಸಲಾಗಿದೆ, ಜೊತೆಗೆ ಈ ಯೋಜನೆಯನ್ನು ಕೃಷಿ ಭೂಮಿಯ ಮಾಲೀಕರಿಗೆ ಮಾತ್ರ ಮೀಸಲಿಡಲಾಗಿದೆ. ಇದರಿಂದಾಗಿ ಗೇಣಿದಾರ ರೈತರು ಸಹ ಈ ಯೋಜನೆಯಲ್ಲಿ ನಷ್ಟ ಅನುಭವಿಸುತ್ತಿದ್ದಾರೆ.

ಜನವರಿ 31, 2024ರಂದು ಬಜೆಟ್ ಅಧಿವೇಶನದ ಆರಂಭದಲ್ಲಿ ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಪಿಎಂ ಕಿಸಾನ್ ಯೋಜನೆಯಡಿ ಸರ್ಕಾರವು ಇಲ್ಲಿಯವರೆಗೆ 2.25 ಲಕ್ಷ ಕೋಟಿ ರೂ.ಗಳನ್ನು (2,250 ಬಿಲಿಯನ್ ರೂ.) ವರ್ಗಾಯಿಸಿದೆ, ಅದರಲ್ಲಿ 54,000 ಕೋಟಿ ರೂ.ಗಳು (540 ಬಿಲಿಯನ್ ರೂ.) ಮಹಿಳಾ ಫಲಾನುಭವಿಗಳಿಗೆ ತಲುಪಿದೆ ಎಂದು ಹೇಳಿದರು.

ಎಂದರೆ ಈ ಯೋಜನೆಯಡಿ ಪುರುಷರಿಗೆ ಮೂರು ರೂಪಾಯಿ ಸಿಕ್ಕರೆ ರೈತ ಮಹಿಳೆಯರಿಗೆ ಒಂದು ರೂಪಾಯಿ ಸಿಗುತ್ತಿದೆ. ಆದರೆ ಗ್ರಾಮೀಣ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಹೊಲಗಳಲ್ಲಿ ಕೆಲಸ ಮಾಡುತ್ತಾರೆ - ಶೇಕಡಾ 80ರಷ್ಟು ಜನರು ವೇತನವಿಲ್ಲದ ಕುಟುಂಬ ಕಾರ್ಮಿಕರಾಗಿ ಸ್ವಯಂ ಉದ್ಯೋಗಿಗಳಾಗಿದ್ದಾರೆ -ಲಿಂಗ ಸಂಬಂಧಿ ತಾರತಮ್ಯದ ಕುರಿತು ಮಾತನಾಡುವುದಾದರೆ ಅದು ಬೇರೆಯದೇ ಕತೆ.

ವೇದಿಕೆಯಿಂದ ಮಾತನಾಡಿದ ಏಕೈಕ ಮಹಿಳಾ ನಾಯಕಿ ಮೇಧಾ ಪಾಟ್ಕರ್, ಈ ಹಿಂದಿನ ಪ್ರತಿಭಟನೆಯ ಸಮಯದಲ್ಲಿ ಕೇಳಿಬಂದ ಘೋಷಣೆಯನ್ನು ಪುನರುಚ್ಚರಿಸಿದರು: "ನಾರಿ ಕೆ ಸಹಾಯ್ ಬಿನಾ ಹರ್ ಸಂಘರ್ಷ್ ಅಧೂರಾ ಹೈ [ಮಹಿಳೆಯರ ಭಾಗವಹಿಸುವಿಕೆಯಿಲ್ಲದ ಪ್ರತಿ ಹೋರಾಟವೂ ಅಪೂರ್ಣ]."

PHOTO • Ritayan Mukherjee
PHOTO • Ritayan Mukherjee

ಎಡ: ಪಂಜಾಬಿನ ಸಂಗ್ರೂರ್ ಜಿಲ್ಲೆಯ ಕಪಿಯಾಲ್ ಗ್ರಾಮದ ರೈತರಾದ ಚಿಂದರ್‌ಬಾಲಾ (ಮಧ್ಯದಲ್ಲಿ ಕುಳಿತಿದ್ದಾರೆ). ಬಲ: ʼನಾರಿ ಕೆ ಸಹಾಯ್ ಬಿನಾ ಹರ್ ಸಂಘರ್ಷ್ ಅಧೂರಾ ಹೈ [ಮಹಿಳೆಯರ ಭಾಗವಹಿಸುವಿಕೆಯಿಲ್ಲದ ಪ್ರತಿ ಹೋರಾಟವೂ ಅಪೂರ್ಣ]ʼ

ಮಹಿಳೆಯರು ಮತ್ತು ರೈತರಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವ ಅನೇಕ ಮಹಿಳಾ ಪ್ರತಿಭಟನಾಕಾರರು ಅವರ ಮಾತುಗಳನ್ನು ಸ್ವಾಗತಿಸಿದರು. ಮಹಿಳೆಯರು ಮಹಾಪಂಚಾಯತ್‌ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು, ಸಭೆಯ ಮೂರನೇ ಒಂದು ಭಾಗದಷ್ಟಿದ್ದರು. "ನಾವು ಮೋದಿ ಸರ್ಕಾರದೊಂದಿಗೆ ಹೋರಾಡುತ್ತಿದ್ದೇವೆ. ಅವರು ತಾನು ನೀಡಿದ ಭರವಸೆಗಳನ್ನು ಈಡೇರಿಸಿಲ್ಲ" ಎಂದು ಪಂಜಾಬಿನ ಸಂಗ್ರೂರ್ ಜಿಲ್ಲೆಯ ಕಪಿಯಾಲ್ ಗ್ರಾಮದ ರೈತ ಮಹಿಳೆ ಚಿಂದರ್‌ಬಾಲಾ ಹೇಳುತ್ತಾರೆ.

"ನಾವೆಲ್ಲರೂ ಮೂರು ಅಥವಾ ನಾಲ್ಕು ಕಿಲ್ಲಾ [ಎಕರೆ] ಅಳತೆಯ ಸಣ್ಣ ಹೊಲಗಳನ್ನು ಹೊಂದಿರುವವರು. ಈಗ ವಿದ್ಯುತ್ ದುಬಾರಿ. ಅವರು ಭರವಸೆ ನೀಡಿದಂತೆ [ವಿದ್ಯುತ್ ತಿದ್ದುಪಡಿ] ಮಸೂದೆಯನ್ನು ಹಿಂತೆಗೆದುಕೊಂಡಿಲ್ಲ" ಎಂದು ಅವರು ಹೇಳಿದರು. 2020-21ರಲ್ಲಿ ದೆಹಲಿಯ ಗಡಿಗಳಲ್ಲಿ ನಡೆದ ಪ್ರತಿಭಟನೆಯಲ್ಲಿ , ರೈತರು ಮತ್ತು ಕಾರ್ಮಿಕರಾಗಿ ತಮ್ಮ ಹಕ್ಕುಗಳು ಮತ್ತು ಘನತೆಯನ್ನು ಪ್ರತಿಪಾದಿಸಲು ಮಹಿಳೆಯರು ಪುರುಷರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದರು.

*****

ಬೆಳಗ್ಗೆ 11 ಗಂಟೆಗೆ ಮಹಾಪಂಚಾಯತ್ ಪ್ರಾರಂಭವಾಗುತ್ತಿದ್ದಂತೆ ಮೈದಾನವು ಅನೇಕ ರಾಜ್ಯಗಳ ರೈತರು ಮತ್ತು ಕಾರ್ಮಿಕರಿಂದ ತುಂಬತೊಡಗಿತು.

ಪಂಜಾಬಿನಿಂದ ಬಂದಿದ್ದ ಹಲವು ಪುರುಷ ರೈತರಲ್ಲಿ ಒಬ್ಬರಾದ ಭಟಿಂಡಾ ಜಿಲ್ಲೆಯ ಸರ್ದಾರ್ ಬಲ್ಜಿಂದರ್ ಸಿಂಗ್, “ನಾವು ರೈತರಾಗಿ ನಮ್ಮ ಹಕ್ಕುಗಳನ್ನು ಕೇಳುವ ಸಲುವಾಗಿ ಇಲ್ಲಿಗೆ ಬಂದಿದ್ದೇವೆ. ಇದು ಕೇವಲ ನಮಗಾಗಿ ನಡೆಸುತ್ತಿರುವ ಹೋರಾಟವಲ್ಲ. ಈ ಹೋರಾಟದಲ್ಲಿ ನಮ್ಮ ಮಕ್ಕಳು ಮತ್ತು ಮುಂದಿನ ಪೀಳಿಗೆಯ ಭವಿಷ್ಯವೂ ಅಡಗಿದೆ” ಎಂದು ಹೇಳಿದರು.

ವೇದಿಕೆಯಿಂದ ಮಾತನಾಡಿದ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್, "ರೈತರು, ಮೀನುಗಾರರು, ಪಶುಪಾಲಕರು, ಕಾಡುತ್ಪತ್ತಿ ಸಂಗ್ರಹಕಾರರು, ಕೃಷಿ ಕಾರ್ಮಿಕರು, ಆದಿವಾಸಿಗಳು ಮತ್ತು ದಲಿತರು – ಜೀವನೋಪಾಯಕ್ಕಾಗಿ ಪ್ರಕೃತಿಯನ್ನು ಅವಲಂಬಿಸಿರುವ ಎಲ್ಲರಿಗೂ ನಾನು ನಮಸ್ಕರಿಸುತ್ತೇನೆ. ನಾವೆಲ್ಲರೂ ನಮ್ಮ ಜಲ, ಜಂಗಲ್ ಮತ್ತು ಜಮೀನ್ [ನೀರು, ಕಾಡುಗಳು ಮತ್ತು ಭೂಮಿಯನ್ನು] ಉಳಿಸಬೇಕಾಗಿದೆ” ಎಂದು ತಿಳಿಸಿದರು.

ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಸಂಘಟನೆಯಡಿ ಒಂದಾಗಿರುವ ವಿವಿಧ ರೈತ ಸಂಘಟನೆಗಳ 25ಕ್ಕೂ ಹೆಚ್ಚು ನಾಯಕರು ವೇದಿಕೆಯ ಮೇಲೆ ಎರಡು ಸಾಲುಗಳ ಕುರ್ಚಿಗಳಲ್ಲಿ ಕುಳಿತಿದ್ದರು. ಈ ನಾಯಕರಲ್ಲಿ ಹೆಚ್ಚಿನವರು ಪುರುಷರು, ಮೊದಲ ಸಾಲಿನ ಮಧ್ಯದಲ್ಲಿ ಕೇವಲ ಮೂವರು ಮಹಿಳೆಯರು ಮಾತ್ರವೇ ಪ್ರಮುಖವಾಗಿ ಕುಳಿತಿದ್ದರು. ಅವರು ಪಂಜಾಬಿನ ಬಿಕೆಯು ಉಗ್ರಾಹಣ್‌ ಸಂಘಟನೆಯ ಹರಿಂದರ್ ಬಿಂದು; ಮಧ್ಯಪ್ರದೇಶದ ಕಿಸಾನ್ ಸಂಘರ್ಷ ಸಮಿತಿಯ (ಕೆಎಸ್ಎಸ್) ಆರಾಧನಾ ಭಾರ್ಗವ; ಮತ್ತು ಮಹಾರಾಷ್ಟ್ರದ, ನ್ಯಾಷನಲ್ ಅಲಯನ್ಸ್ ಆಫ್ ಪೀಪಲ್ಸ್ ಮೂವ್ಮೆಂಟ್ (ಎನ್ಎಪಿಎಂ) ಸಂಘಟನೆಯ ಮೇಧಾ ಪಾಟ್ಕರ್.

PHOTO • Ritayan Mukherjee
PHOTO • Ritayan Mukherjee

ಎಡ: ಕಿಸಾನ್ ಮಜ್ದೂರ್ ಮಹಾಪಂಚಾಯತ್ ಸಮಾವೇಶದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಛತ್ರಿಯಡಿ ಒಂದಾಗಿರುವ ರೈತ ಮತ್ತು ಕಾರ್ಮಿಕ ಸಂಘಟನೆಗಳ ಮುಖಂಡರು. ಬಲ: ವೇದಿಕೆಯ ಮೇಲೆ ಎಡದಿಂದ ಬಲಕ್ಕೆ ಕುಳಿತಿರುವ ಪಂಜಾಬಿನ ಬಿಕೆಯು ಉಗ್ರಾಹಣ್‌ ಸಂಘಟನೆಯ ಹರಿಂದರ್ ಬಿಂದು; ಮಧ್ಯಪ್ರದೇಶದ ಕಿಸಾನ್ ಸಂಘರ್ಷ ಸಮಿತಿಯ (ಕೆಎಸ್ಎಸ್) ಆರಾಧನಾ ಭಾರ್ಗವ; ಮತ್ತು ಮಹಾರಾಷ್ಟ್ರದ, ನ್ಯಾಷನಲ್ ಅಲಯನ್ಸ್ ಆಫ್ ಪೀಪಲ್ಸ್ ಮೂವ್ಮೆಂಟ್ (ಎನ್ಎಪಿಎಂ) ಸಂಘಟನೆಯ ಮೇಧಾ ಪಾಟ್ಕರ್

PHOTO • Ritayan Mukherjee
PHOTO • Ritayan Mukherjee

ಎಡ: ಪಂಜಾಬಿನ ರೈತನೊಬ್ಬ ನೆರೆದಿರುವ ಬೃಹತ್‌ ಜನ ಸಮೂಹವನ್ನು ತನ್ನ ಕೆಮೆರಾದಲ್ಲಿ ಸೆರೆ ಹಿಡಿಯುತ್ತಿರುವುದು. ಬಲ: ಭಾರತೀಯ ಕಿಸಾನ್ ಯೂನಿಯನ್ ಸಂಘಟನೆಗೆ ಸೇರಿದ ರೈತರು ಮತ್ತು ಕಾರ್ಮಿಕರು

ವೇದಿಕೆಯಲ್ಲಿದ್ದ ಭಾಷಣಕಾರರು ಎಸ್‌ಕೆಎಂನ ಪ್ರಮುಖ ಬೇಡಿಕೆಗಳನ್ನು ಪುನರುಚ್ಚರಿಸಿದರು, ಅವುಗಳಲ್ಲಿ ಪ್ರಮುಖವಾದುದು, ಖಾತರಿಪಡಿಸಿದ ಖರೀದಿಯೊಂದಿಗೆ ಎಲ್ಲಾ ಬೆಳೆಗಳಿಗೆ ಸಿ 2 + 50 ಪ್ರತಿಶತದಷ್ಟು ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಗೆ ಕಾನೂನುಬದ್ಧ ಖಾತರಿ. ಸಿ 2 ಬಳಸಿದ ಒಡೆತನದ ಭೂಮಿಯ ಬಾಡಿಗೆ ಮೌಲ್ಯ, ಭೂಮಿಯ ಗುತ್ತಿಗೆ ಬಾಡಿಗೆ ಮತ್ತು ಕುಟುಂಬ ಕಾರ್ಮಿಕರ ವೆಚ್ಚ ಸೇರಿದಂತೆ ಉತ್ಪಾದನಾ ವೆಚ್ಚವನ್ನು ಸೂಚಿಸುತ್ತದೆ.

ಪ್ರಸ್ತುತ, ಬಿತ್ತನೆ ಋತುಗಳಿಗೆ ಮುಂಚಿತವಾಗಿ 23 ಬೆಳೆಗಳಿಗೆ ಘೋಷಿಸಲಾದ ಕನಿಷ್ಠ ಬೆಂಬಲ ಬೆಲೆಯು ಭೂ ಬಾಡಿಗೆಯನ್ನು ಪರಿಗಣಿಸುವುದಿಲ್ಲ ಅಥವಾ ಹೆಚ್ಚುವರಿ 50 ಪ್ರತಿಶತವನ್ನು ಒಳಗೊಂಡಿಲ್ಲ ಎಂದು ರಾಷ್ಟ್ರೀಯ ರೈತ ಆಯೋಗದ ವರದಿಯಲ್ಲಿ ಪ್ರೊ.ಎಂ.ಎಸ್.ಸ್ವಾಮಿನಾಥನ್ ಹೇಳಿದ್ದಾರೆ: "ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ತೂಕದ ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ 50 ಪ್ರತಿಶತ ಹೆಚ್ಚಾಗಿರಬೇಕು. ರೈತರ "ನಿವ್ವಳ ಮನೆಗೆ ಕೊಂಡು ಹೋಗುವ ಆದಾಯ"ವನ್ನು ನಾಗರಿಕ ಸೇವಕರ ಆದಾಯಕ್ಕೆ ಹೋಲಿಸಬೇಕು ಎಂದೂ ಅದು ಶಿಫಾರಸು ಮಾಡಿದೆ.

ಬೀಜ ಉತ್ಪಾದನೆಯ ವಿಷಯದಲ್ಲಿ ಕಾರ್ಪೊರೇಟ್ ನಿಯಂತ್ರಣ, ಆಫ್ರಿಕನ್ ದೇಶಗಳಲ್ಲಿ ಕೃಷಿಯನ್ನು ದೊಡ್ಡ ಕಂಪನಿಗಳು ನಿಯಂತ್ರಿಸುವುದು ಮತ್ತು ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿಯೂ ಶ್ರೀಮಂತರ ಆದಾಯದಲ್ಲಿ ಅನೇಕ ಪಟ್ಟು ಹೆಚ್ಚಳದ ಬಗ್ಗೆಯೂ ಮೇಧಾ ಪಾಟ್ಕರ್ ಮಾತನಾಡಿದರು. ಇತ್ತ ಸರ್ಕಾರ ತರಕಾರಿಗಳು ಸೇರಿದಂತೆ ಎಲ್ಲಾ ಬೆಳೆಗಳಿಗೆ ನ್ಯಾಯಯುತ ಸಂಭಾವನೆಗಾಗಿ ರೈತರ ಬೇಡಿಕೆಯನ್ನು ಈಡೇರಿಸಿಲ್ಲ, ಇದು ಆರ್ಥಿಕ ಹೊರೆಯಾಗುತ್ತದೆ ಎಂದು ಅವರು ಹೇಳಿದರು. "ಅತಿ ಶ್ರೀಮಂತರ ಸಂಪತ್ತಿನ ಮೇಲೆ ಸಣ್ಣ ಮೊತ್ತದ ಎಂದರೆ ಶೇಕಡಾ 2ರಷ್ಟು ತೆರಿಗೆ ಹಾಕಿದರೂ ಎಲ್ಲಾ ಬೆಳೆಗಳಿಗೆ ಸುಲಭವಾಗಿ ಕನಿಷ್ಠ ಬೆಂಬಲ ಬೆಲೆ ನೀಡಬಹುದು" ಎಂದು ಅವರು ಹೇಳಿದರು.

ಎಲ್ಲಾ ರೈತರ ಸಮಗ್ರ ಸಾಲ ಮನ್ನಾ ದೀರ್ಘಕಾಲದ ಬೇಡಿಕೆಯಾಗಿದ್ದು, ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಿದ ನಂತರ 2021ರ ಡಿಸೆಂಬರ್ 9ರಂದು ಎಸ್‌ಕೆಎಮ್‌ ಜೊತೆ ಮಾಡಿಕೊಂಡ ಒಪ್ಪಂದದಲ್ಲಿ ಕೇಂದ್ರ ಸರ್ಕಾರವು ಈ ಕುರಿತು ಭರವಸೆ ನೀಡಿತ್ತು. ಆದರೆ ಅದು ಈಡೇರಿಲ್ಲ.

ಸಾಲವು ರೈತರನ್ನು ದುರ್ಬಲಗೊಳಿಸುತ್ತಿದ್ದು, ಇದಕ್ಕೆ ಸಾಕ್ಷಿಯಾಗಿ ಹೆಚ್ಚುತ್ತಿರುವ ರೈತರ ಆತ್ಮಹತ್ಯೆಯ ಅಂಕಿ-ಸಂಖ್ಯೆಗಳಿ ನಮ್ಮ ಕಣ್ಣ ಮುಂದಿವೆ. 2014 ಮತ್ತು 2022ರ ನಡುವೆ, 100,000ಕ್ಕೂ ಹೆಚ್ಚು ರೈತರು ಹೆಚ್ಚುತ್ತಿರುವ ಸಾಲದ ಹೊರೆಯಿಂದ ಜರ್ಜರಿತರಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಬ್ಸಿಡಿಗಳನ್ನು ಹಿಂತೆಗೆದುಕೊಳ್ಳುವುದು, ಲಾಭದಾಯಕ ಆದಾಯದ ನಿರಾಕರಣೆ ಮತ್ತು ಪಿಎಂಎಫ್‌ಬಿವೈ (ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ) ಅಡಿಯಲ್ಲಿ ತಪ್ಪಾಗಿ ಯೋಜಿಸಲಾದ ಮತ್ತು ಕೆಟ್ಟದಾಗಿ ಕಾರ್ಯಗತಗೊಳಿಸಲಾದ ಬೆಳೆ ವಿಮಾ ಪ್ರಕ್ರಿಯೆಗೆ ಕಾರಣವಾದ ಸರ್ಕಾರದ ನೀತಿಗಳಿಂದ ಅವರು ತಳ್ಳಲ್ಪಟ್ಟರು. ಸಾಲ ಮನ್ನಾ ಒಂದು ವರದಾನವಾಗಬಹುದಿತ್ತು ಆದರೆ ಇದೂ ಸಹ ಸರ್ಕಾರದಿಂದ ನೀಡಲಿಲ್ಲ.

ರಾಮಲೀಲಾ ಮೈದಾನದಲ್ಲಿ ಕವಿಯೊಬ್ಬರು ಹಾಡುತ್ತಿದ್ದಂತೆ ರೈತರು ಮತ್ತು ಕಾರ್ಮಿಕರು ಮೆರವಣಿಗೆ ಹೊರಟರು: 'ಯಾರಿಗೆ ಗೊತ್ತಿತ್ತು, ತುರ್ತು ಪರಿಸ್ಥಿತಿ ಹೊಸ ವೇಷದಲ್ಲಿ ಮರಳುತ್ತದೆಯೆಂದು ನಿರಂಕುಶ ಪ್ರಭುತ್ವಕ್ಕೆ ಪ್ರಜಾಪ್ರಭುತ್ವ ಎಂದು ಮರುನಾಮಕರಣ ಮಾಡಲಾಗುತ್ತದೆಯೆಂದುʼ

ವೀಡಿಯೊ ನೋಡಿ: ಕಿಸಾನ್ ಮಜ್ದೂರ್ ಮಹಾಪಂಚಾಯತ್‌ ಅಧಿವೇಶನದಲ್ಲಿ ಪ್ರತಿಭಟನಾ ಘೋಷಣೆಗಳು ಮತ್ತು ಹಾಡುಗಳು, ಮಾರ್ಚ್ 14, 2024, ಹೊಸದೆಹಲಿ

ಮಹಾಪಂಚಾಯತ್‌ ಸಭೆಯಲ್ಲಿ ಮಾತನಾಡಿದ ಎಐಕೆಎಸ್ (ಅಖಿಲ ಭಾರತ ಕಿಸಾನ್ ಸಭಾ) ಪ್ರಧಾನ ಕಾರ್ಯದರ್ಶಿ ವಿಜೂ ಕೃಷ್ಣನ್, "ಕಳೆದ ಹತ್ತು ವರ್ಷಗಳಲ್ಲಿ, 4.2 ಲಕ್ಷಕ್ಕೂ ಹೆಚ್ಚು ರೈತರು, ಕೃಷಿ ಕಾರ್ಮಿಕರು ಮತ್ತು ದಿನಗೂಲಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಇದು ದೇಶದಲ್ಲಿನ ತೀವ್ರ ಕೃಷಿ ಬಿಕ್ಕಟ್ಟನ್ನು ಸೂಚಿಸುತ್ತದೆ" ಎಂದು ಹೇಳಿದರು.

2022ರಲ್ಲಿ, ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋದ (ಎನ್ಸಿಆರ್ಬಿ) ಭಾರತದಲ್ಲಿ ಆಕಸ್ಮಿಕ ಸಾವುಗಳು ಮತ್ತು ಆತ್ಮಹತ್ಯೆಗಳ (ಎಡಿಎಸ್ಐ) ಕುರಿತ 2022 ವರದಿಯು ಒಟ್ಟು 1.7 ಲಕ್ಷಕ್ಕೂ ಹೆಚ್ಚು ಆತ್ಮಹತ್ಯೆಗಳನ್ನು ದಾಖಲಿಸಿದೆ - ಅದರಲ್ಲಿ ಶೇಕಡಾ 33ರಷ್ಟು (56,405) ಆತ್ಮಹತ್ಯೆಗಳು ದೈನಂದಿನ ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರು ಮತ್ತು ರೈತರದ್ದಾಗಿವೆ.

2016ರಿಂದ 2021ರವರೆಗೆ 24,350 ಕೋಟಿ ರೂ.ಗಳನ್ನು ಗಳಿಸಿದ ಖಾಸಗಿ ವಿಮಾ ಕಂಪನಿಗಳ ಸಮೃದ್ಧಿಯೊಂದಿಗೆ ಇದನ್ನು ಹೋಲಿಸಿ ನೋಡಿ. ಸರ್ಕಾರದಿಂದ ಬೆಳೆ ವಿಮೆ ವ್ಯವಹಾರವನ್ನು ಗುತ್ತಿಗೆ ಪಡೆದ 10 ಕಂಪನಿಗಳು (ಆಯ್ಕೆಯಾದ 13 ಕಂಪನಿಗಳು) ಸೇರಿವೆ. ಮತ್ತೊಂದು ಕೊಡುಗೆಯಾಗಿ, ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು 14.56 ಲಕ್ಷ ಕೋಟಿ ರೂ.ಗಳ (2015 ರಿಂದ 2023 ರವರೆಗೆ) ಸಾಲ ಮನ್ನಾ ಸೌಕರ್ಯವನ್ನು ಪಡೆದಿವೆ.

2024-25ನೇ ಸಾಲಿನ ಆಯವ್ಯಯದಲ್ಲಿ ಕೃಷಿಗೆ 1,17,528.79 ಕೋಟಿ ರೂ. ಮೀಸಲಿಡಲಾಗಿದೆ. ಈ ಮೊತ್ತದಲ್ಲಿ ಶೇ.83ರಷ್ಟನ್ನು ವೈಯಕ್ತಿಕ ಫಲಾನುಭವಿ ಆಧಾರಿತ ಆದಾಯ ಬೆಂಬಲ ಯೋಜನೆಗಳಿಗೆ ಮೀಸಲಿಡಲಾಗಿದೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಭೂಮಾಲೀಕ ರೈತ ಕುಟುಂಬಗಳಿಗೆ ವಾರ್ಷಿಕವಾಗಿ 6,000 ರೂ.ಗಳನ್ನು ನೀಡುತ್ತಿರುವುದು ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಒಟ್ಟು ರೈತರಲ್ಲಿ ಶೇಕಡಾ 40ರಷ್ಟಿರುವ ಗೇಣಿದಾರ ಕೃಷಿಕರಿಗೆ ಈ ಆದಾಯ ಬೆಂಬಲ ಸಿಗುವುದಿಲ್ಲ. ಭೂರಹಿತ ಕೃಷಿ ಕಾರ್ಮಿಕರು ಮತ್ತು ಹೊಲಗಳಲ್ಲಿ ಕೆಲಸ ಮಾಡುವ ಆದರೆ ತಮ್ಮ ಹೆಸರಿನಲ್ಲಿ ಭೂಮಿ ಇಲ್ಲದ ರೈತ ಮಹಿಳೆಯರು ಸಹ ಈ ಪ್ರಯೋಜನಗಳಿಂದ ವಂಚಿತರಾಗುತ್ತಾರೆ.

ಎಂಎನ್ಆರ್‌ಇಜಿಎ ಮೂಲಕ ಸಣ್ಣ ಮತ್ತು ಅತಿಸಣ್ಣ ರೈತರು ಮತ್ತು ಕೃಷಿ ಕಾರ್ಮಿಕರ ಗ್ರಾಮೀಣ ಕುಟುಂಬಗಳಿಗೆ ಲಭ್ಯವಿರುವ ಇತರ ನಿಧಿಗಳನ್ನು ಕಡಿತಗೊಳಿಸಲಾಗಿದೆ - 2023-24ರಲ್ಲಿ ಶೇಕಡಾ 1.92ರಷ್ಟಿದ್ದ ಅದಕ್ಕೆ ನಿಗದಿಪಡಿಸಿದ ಬಜೆಟ್ಟಿನ ಪಾಲನ್ನು  2024-25ರಲ್ಲಿ ಶೇಕಡಾ 1.8ಕ್ಕೆ ಇಳಿಸಲಾಗಿದೆ.

ಈ ಎಲ್ಲಾ ಸಮಸ್ಯೆಗಳು ಮತ್ತು ರೈತ ಸಂಘಗಳ ಬೇಡಿಕೆಗಳು ಮಾರ್ಚ್ 14, 2024ರಂದು ರಾಮ್ ಲೀಲಾ ಮೈದಾನದ ವೇದಿಕೆಯಿಂದ ಪ್ರತಿಧ್ವನಿಸಿದವು.

PHOTO • Ritayan Mukherjee
PHOTO • Ritayan Mukherjee

ಎಡ: ಅಪಸ್ಮಾರದಿಂದ ಬಳಲುತ್ತಿರುವ ರೈತನೊಬ್ಬ ರಾಮಲೀಲಾ ಮೈದಾನದಲ್ಲಿ ವೈದ್ಯಕೀಯ ತಂಡದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಗುಂಪು ಕರ್ನಾಲ್ ನಗರದಿಂದ ಹೊರಟಿತ್ತು. ಅವರ ಪ್ರಯಾಣ ಬಹಳ ಪ್ರಯಾಸದಾಯಕವಾಗಿತ್ತು ಬಲ: 'ದಬ್ಬಾಳಿಕೆಯೊಂದಿಗಿನ ಪ್ರತಿಯೊಂದು ಘರ್ಷಣೆಗೆ, ನಮ್ಮ ಘೋಷಣೆ ಹೋರಾಟದ ಕರೆ' ಎಂದು ಹೇಳುವ ಪ್ರಚೋದನಕಾರಿ ಧ್ವಜ

PHOTO • Ritayan Mukherjee
PHOTO • Ritayan Mukherjee

ಎಡ: ಹರಿಯಾಣದಿಂದ ಬಂದ ರೈತರು ಬಹಳ ದೂರ ಮೆರವಣಿಗೆ ನಡೆಸಿದ ನಂತರ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯುತ್ತಿರುವುದು: ಹೊಸದೆಹಲಿಯ ಎತ್ತರದ ಕಟ್ಟಡಗಳ ಹಿನ್ನೆಲೆಯಲ್ಲಿ ರಾಮ್ ಲೀಲಾ ಮೈದಾನದಲ್ಲಿ ಪಂಜಾಬಿನ ಮೂವರು ಹಿರಿಯ ನಾಗರಿಕ ರೈತರು ತಮ್ಮ ಬಲವಾದ ಪಾದಗಳಿಗೆ ವಿಶ್ರಾಂತಿ ನೀಡುತ್ತಿದ್ದಾರೆ

ಈ ಮೈದಾನವು ರಾಮಾಯಣ ಮಹಾಕಾವ್ಯದ ನಾಟಕ ಪ್ರದರ್ಶನಗಳ ವಾರ್ಷಿಕ ವೇದಿಕೆಯಾಗಿ ಗುರುತಿಸಿಕೊಂಡಿದೆ. ಪ್ರತಿ ವರ್ಷ, ಕಲಾವಿದರು ನವರಾತ್ರಿ ಹಬ್ಬದ ಸಮಯದಲ್ಲಿ ರಾಮಾಯಣದ ದೃಶ್ಯಗಳನ್ನು ಅಭಿನಯಿಸುತ್ತಾರೆ,  ಈ ನಾಟಕಗಳು ಕೆಡುಕಿನ ವಿರುದ್ಧ ಒಳಿತು ಮತ್ತು ಸುಳ್ಳಿನ ವಿರುದ್ಧ ಸತ್ಯದ ಗೆಲ್ಲುವುದರೊಂದಿಗೆ ಕೊನೆಗೊಳ್ಳುತ್ತವೆ. ಇದು ಒಂದು ಮೈದಾನವನ್ನು ಐತಿಹಾಸಿಕ ಎಂದು ಕರೆಯಲು ಸಾಕಷ್ಟು ಕಾರಣವಾಗುವುದಿಲ್ಲ. ಹಾಗಿದ್ದರೆ ಅದಕ್ಕಿರುವ ಕಾರಣವೇನು?

ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಭಾಷಣವನ್ನು ಸಾಮಾನ್ಯ ಭಾರತೀಯರು ಇಲ್ಲಿಂದಲೇ ಆಲಿಸಿದ್ದರು. 1965ರಲ್ಲಿ, ಭಾರತದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಈ ಮೈದಾನದಿಂದಲೇ ಜೈ ಜವಾನ್, ಜೈ ಕಿಸಾನ್ ಎಂಬ ಘೋಷಣೆಯನ್ನು ನೀಡಿದರು. 1975ರಲ್ಲಿ ಇಂದಿರಾ ಗಾಂಧಿಯವರ ಸರ್ವಾಧಿಕಾರಿ ಆಡಳಿತವನ್ನು ವಿರೋಧಿಸಿ ಜಯಪ್ರಕಾಶ್ ನಾರಾಯಣ್ ಅವರ ಬೃಹತ್ ಸಭೆ ಇಲ್ಲಿ ನಡೆಯಿತು. ನಂತರ 1977ರ ಸಾರ್ವತ್ರಿಕ ಚುನಾವಣೆಯಲ್ಲಿ ಸರ್ಕಾರವು ಪತನಗೊಂಡಿತು. 2011ರಲ್ಲಿ ಭ್ರಷ್ಟಾಚಾರದ ವಿರುದ್ಧ ಭಾರತ ಆಂದೋಲನದ ಪ್ರತಿಭಟನೆಗಳು ಈ ಮೈದಾನದಿಂದ ಪ್ರಾರಂಭವಾದವು. ದೆಹಲಿಯ ಈಗಿನ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಚಳವಳಿಯಿಂದ ರಾಜಕೀಯ ನಾಯಕರಾಗಿ ಹೊರಹೊಮ್ಮಿದರು. ಈ ವರದಿ ಪ್ರಕಟವಾದ ಸಮಯದಲ್ಲಿ, 2024ರ ಸಾರ್ವತ್ರಿಕ ಚುನಾವಣೆಗೆ ಕೆಲವೇ ವಾರಗಳ ಮೊದಲು ಭ್ರಷ್ಟಾಚಾರದ ಆರೋಪದ ಮೇಲೆ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.

ನವೆಂಬರ್ 30, 2018ರಂದು, ಇದೇ ರಾಮ್ ಲೀಲಾ ಮೈದಾನದಿಂದ ದೇಶಾದ್ಯಂತದ ರೈತರು ಮತ್ತು ಕಾರ್ಮಿಕರು ಕಿಸಾನ್ ಮುಕ್ತಿ ಮೋರ್ಚಾ ನಡೆಸಲು ದೆಹಲಿಗೆ ಬಂದು ಸಂಸತ್‌ ಬೀದಿಯತ್ತ ಮೆರವಣಿಗೆ ನಡೆಸಿದರು ಮತ್ತು 2014ರ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದ ಬೇಡಿಕೆಗಳನ್ನು ಈಡೇರಿಸುವಂತೆ ಬಿಜೆಪಿ ಸರ್ಕಾರವನ್ನು ಒತ್ತಾಯಿಸಿದರು. 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆಯನ್ನು ಸರ್ಕಾರ 2018ರಲ್ಲಿ ನೀಡಿತು. ಅದೂ ಕೂಡ ಈಡೇರದೆ ಉಳಿದಿದೆ.

ಈ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ, ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಅಡಿಯಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರ ಕಿಸಾನ್ ಮಜ್ದೂರ್ ಮಹಾಪಂಚಾಯತ್ ಮೂಲಕ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟವನ್ನು ಮುಂದುವರಿಸಲು ನಿರ್ಧರಿಸಿತು ಮತ್ತು 2021ರ ಡಿಸೆಂಬರ್ 9ರಂದು ಎಸ್‌ಕೆಎಂ ಸಂಘಟನೆಗೆ ನೀಡಿದ ಭರವಸೆಗಳನ್ನು ಈಡೇರಿಸಲು ಕೇಂದ್ರದಲ್ಲಿನ ಪ್ರಸ್ತುತ ಬಿಜೆಪಿ ಆಡಳಿತವು ಸ್ಪಷ್ಟವಾಗಿ ನಿರಾಕರಿಸಿದ್ದನ್ನು ಪ್ರತಿಭಟಿಸಲು ನಿರ್ಧರಿಸಿತು.

ಪ್ರೇಮಮತಿಯವರ ಮಾತುಗಳಲ್ಲಿ ಹೇಳುವುದಾದರೆ, "ನಾವು ನಮ್ಮ ಚೀಲಗಳು ಮತ್ತು ಹಾಸಿಗೆಯೊಂದಿಗೆ ಮತ್ತೆ ದೆಹಲಿಗೆ ಮರಳುತ್ತೇವೆ. ಧರ್ನಾ ಪೇ ಬೈಟ್ ಜಾಯೇಂಗೆ. ಹಮ್ ವಾಪಸ್ ನಹೀ ಜಾಯೆಂಗೆ ಜಬ್ ತಕ್ ಮಾಂಗೆ ಪೂರಿ ನಾ ಹೋ [ನಾವು ಪ್ರತಿಭಟನೆಗೆ ಕೂರುತ್ತೇವೆ. ನಮ್ಮ ಬೇಡಿಕೆಗಳು ಈಡೇರುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ.]”

ಅನುವಾದ: ಶಂಕರ. ಎನ್. ಕೆಂಚನೂರು

Ritayan Mukherjee

Ritayan Mukherjee is a Kolkata-based photographer and a PARI Senior Fellow. He is working on a long-term project that documents the lives of pastoral and nomadic communities in India.

Other stories by Ritayan Mukherjee

Namita Waikar is a writer, translator and Managing Editor at the People's Archive of Rural India. She is the author of the novel 'The Long March', published in 2018.

Other stories by Namita Waikar
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru