ಮಜಲಗಾಂವ್‌ನ ತಾಯಿ-ಮಗಳ ಜೋಡಿಯು ಭೀಮರಾವ್ ಅಂಬೇಡ್ಕರ್ ಮತ್ತು ರಮಾಬಾಯಿ ದಂಪತಿಗಳ ಯೌವನದ ಬದುಕಿನ ಪ್ರೀತಿ ಮತ್ತು ವಾತ್ಸಲ್ಯಗಳ ಕುರಿತು ಹಾಡಿದ್ದಾರೆ ಮತ್ತು ಈ ತಾಯಿ ಮಗಳಿಬ್ಬರೂ ದಂಪತಿಗಳನ್ನು ತಮ್ಮ ಕುಟುಂಬದ ಒಂದು ಭಾಗವಾಗಿ ನೋಡುತ್ತಾರೆ

ಹಣೆಗೆ ದುಂಡಗಿನ ಅಂಟಿನ ನಡುವೆ ಕುಂಕುಮ ಹಚ್ಚುತ್ತಿದ್ದಾಳೆ ರಮಾಬಾಯಿ
ಮೇಲೆ ವಿಮಾನದಲ್ಲಿ ಕುಳಿತು ಕರೆಯುತ್ತಿದ್ದಾನೆ ಭೀಮ, ಬಾ ರಮಾ ನನ್ನ ಸೇರಿಕೋ ಎಂದು

ಈ ಓವಿಯ ಮೂಲಕ ಪಾರ್ವತಿ ಭಾಡರಗೆ ನಮಗೆ ರಮಾಬಾಯಿ ಮತ್ತು ಭೀಮರಾವ್‌ ದಂಪತಿಗಳ ಯೌವನದ ದಿನದ ದಾಂಪತ್ಯದ ಒಂದು ಸಣ್ಣ ಚಿತ್ರವನ್ನು ಕಟ್ಟಿಕೊಡುತ್ತಾರೆ. ಈ ಹಾಡಿಗೆ ಎರಡು ಅರ್ಥಗಳಿವೆ: ಒಂದು ನೇರ ಅರ್ಥ, ಯುವ ದಂಪತಿಗಳ ಶಾಶ್ವತ ಪ್ರೇಮದ ಕುರಿತಾದುದು. ಎರಡನೆಯದು, ಭೀಮರಾವ್‌ ವಿದೇಶದಲ್ಲಿ ಓದುತ್ತಿದ್ದ ಹೊತ್ತಿನಲ್ಲಿ ರಮಾಬಾಯಿ ಇಲ್ಲಿದ್ದುಕೊಂಡು ಕುಟುಂಬವನ್ನು ನಿಭಾಯಿಸಬೇಕಿತ್ತು. ಇದರಿಂದಾಗಿ ಹಲವು ವರ್ಷಗಳ ಕಾಲ ದಂಪತಿಗಳು ದೂರವಿದ್ದು ಅನುಭವಿಸಿದ ಅಗಲಿಕೆಯ ವೇದನೆಯನ್ನು ಸೂಚಿಸುತ್ತದೆ.

ಕೆಲವು ಓವಿಗಳಲ್ಲಿ, ಗಾಯಕರು ಭೀಮರಾವ್ ಅವರ ತಂದೆ ರಾಮ್ಜಿ ಅಂಬೇಡ್ಕರ್ ಅವರ ಶ್ರೀಮಂತಿಕೆಯನ್ನು ಚಿತ್ರಿಸಿದ್ದಾರೆ. ಅವರು ಅವರ ಅನೇಕ ಕುದುರೆಗಳನ್ನು ಲೆಕ್ಕ ಹಾಕುತ್ತಾರೆ ಮತ್ತು ಜಾನುವಾರುಗಳ ಸಿಹಿನೀರಿನ ತೊಟ್ಟಿಯ ಕುರಿತು ಹಾಡುತ್ತಾರೆ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ರಮಾಬಾಯಿ ಅವರ ಬಗೆಗಿನ ಹೆಮ್ಮೆಯಿಂದ ಕೂಡಿದ ವಾತ್ಸಲ್ಯವು ಕೆಲವೊಮ್ಮೆ ಅವರ ಕಲ್ಪನೆಗೆ ರೆಕ್ಕೆಗಳನ್ನು ನೀಡುತ್ತದೆ, ಈ ಕಲ್ಪನೆ ವಾಸ್ತವದಿಂದ ಒಂದಷ್ಟು ದೂರವಿರಬಹುದು. ಭೀಮರಾವ್ ಮತ್ತು ರಮಾಬಾಯಿ ಮದುವೆಯಾದದ್ದು ಹೇಗೆ? ಆ ಸಂದರ್ಭ ನಿಜವಾಗಿಯೂ ಹೇಗಿತ್ತು?

ಭೀಮರಾವ್‌ 1906ರಲ್ಲಿ ಮದುವೆಯಾದಾಗ, ತುಂಬಾ ಚಿಕ್ಕವರಾಗಿದ್ದರು. ಆ ಕಾಲದ ಸಂಪ್ರದಾಯವೂ ಇದೇ ಆಗಿತ್ತು. ಮದುವೆಯ ಸಮಯದಲ್ಲಿ ಭೀಮರಾವ್ ಅವರಿಗೆ 14 ವರ್ಷ ವಯಸ್ಸಾಗಿತ್ತು ಮತ್ತು ಆಗ ಅವರು ಮೆಟ್ರಿಕ್ಯುಲೇಷನ್ ಮುಗಿಸಿದ್ದರು ಮತ್ತು ಅವರ ಪತ್ನಿ ರಾಮಿ ವಲಂಕರ್ ಅವರಿಗೆ ಕೇವಲ 9 ವರ್ಷ. ಅಂಬೇಡ್ಕರ್ ಅವರ ತಂದೆ ರಾಮ್‌ಜಿ ಸಕ್ಪಾಲ್ ತಮ್ಮ ಮಗನಿಗೆ ವಧುವನ್ನು ಆಯ್ಕೆ ಮಾಡಿದ್ದರು. ರಾಮಿ ಕೊಂಕಣ ಪ್ರದೇಶದ ವಾನಂದಗಾಂವ್‌ನ ಬಡ ಕುಟುಂಬಕ್ಕೆ ಸೇರಿದವರು, ಅವರ ತಂದೆ ಹಮಾಲಿಯಾಗಿ ಕೆಲಸ ಮಾಡುತ್ತಿದ್ದರು. ಅವರ ಹೆತ್ತವರ ಮರಣದ ನಂತರ ಸ್ವಲ್ಪ ಸಮಯದೊಳಗೆ, ರಾಮಿ ಮತ್ತು ಅವರ ಕಿರಿಯ ಸಹೋದರರು ತಮ್ಮ ಚಿಕ್ಕಪ್ಪನೊಂದಿಗೆ ಮುಂಬೈನ ಬೈಕುಲ್ಲಾ ತರಕಾರಿ ಮಾರುಕಟ್ಟೆಯಲ್ಲಿರುವ ಚಾಳ್‌ ಒಂದರಲ್ಲಿ ವಾಸಿಸುತ್ತಿದ್ದರು. ಕೊಳ್ಳುವವರಿಲ್ಲದೆ, ಮಾರುವವರಿಲ್ಲದೆ ಇಡೀ ಮಾರುಕಟ್ಟೆಯೇ ಖಾಲಿಯಾಗಿದ್ದ ರಾತ್ರಿ ಅಲ್ಲಿಯೇ ಭೀಮರಾವ್ ಮತ್ತು ರಾಮಿಯವರ ಮದುವೆ ನಡೆಯಿತು.

ಮದುವೆಯ ನಂತರ ರಾಮಿಯವರ ಹೆಸರನ್ನು ರಮಾಬಾಯಿ ಎಂದು ಬದಲಾಯಿಸಲಾಯಿತು. ಭೀಮರಾಯರು ಅವರನ್ನು ಪ್ರೀತಿಯಿಂದ ‘ರಾಮು’ ಎಂದು ಕರೆಯುತ್ತಿದ್ದರು. ಭೀಮರಾವ್ ಯಾವಾಗಲೂ 'ರಾಮು'ವಿನ ಪಾಲಿಗೆ 'ಸಾಹೇಬ್' ಆಗಿದ್ದರು, ಇದು ಪತ್ನಿಯ ವಾತ್ಸಲ್ಯ, ಗೌರವ ಮತ್ತು ಪತಿಗೆ ನೀಡುವ ಗೌರವವನ್ನು ಪ್ರತಿಬಿಂಬಿಸುತ್ತದೆ. ಭೀಮರಾಯರು ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋದಾಗ ಮತ್ತು ಆ ದಿನಗಳಲ್ಲಿ ರಮಾಬಾಯಿ ಅವರು ಅನುಭವಿಸಿದ ಕಷ್ಟದ ಸಮಯಗಳು ಅವರನ್ನು ಮತ್ತೆ ಹೋರಾಟಗಳ ನಡುವೆ ಬೆಳೆಯುವಂತೆ ಮಾಡಿತು. ಅವರಿಗೆ ಐದು ಮಕ್ಕಳಿದ್ದರು, ಅವರಲ್ಲಿ ನಾಲ್ವರು ಶೈಶವಾವಸ್ಥೆಯಲ್ಲಿ ನಿಧನರಾದರು. ಭೀಮರಾಯರ ಅನುಪಸ್ಥಿತಿಯಲ್ಲಿ, ರಮಾಬಾಯಿ ತನ್ನ ಮಕ್ಕಳನ್ನು ಒಳಗೊಂಡಂತೆ ಅನೇಕ ಪ್ರೀತಿಪಾತ್ರರ ಮರಣದ ನೋವನ್ನು ಏಕಾಂಗಿಯಾಗಿ ಅನುಭವಿಸಿದರು.

ಬೀಡ್ ಜಿಲ್ಲೆಯ ಮಜಲಗಾಂವ್ ತಾಲೂಕಿನ ಭೀಮನಗರ ಬಸ್ತಿಯ ಪಾರ್ವತಿ ಭಾಡರಗೆಯವರು ತಮ್ಮ ಮಗಳು ರಂಗು ಪೋತಭಾರೆ ಅವರೊಂದಿಗೆ ಹಾಡಿದ್ದಾರೆ, ಈ 22 ಓವಿಗಳು ಈ ಸುಂದರವಾದ ಆಲೋಚನೆಯೊಂದಿಗೆ ಪ್ರಾರಂಭವಾಗುತ್ತವೆ: "ನನ್ನ ದನಿಗೆ ನಿನ್ನ ದನಿಯು ಬೆರೆಯಲಿ, ಕಲಕಲನೆ ಹರಿವ ಗಂಗೆಯಂತೆ" . ಭೀಮರಾವ್ ಮತ್ತು ರಮಾಬಾಯಿ ಅಂಬೇಡ್ಕರ್ ಅವರ ಮನೆಗೆ ಬರುತ್ತಿದ್ದಾರೆ ಎಂದು ಗಾಯಕಿ ತನ್ನ ನೆರೆಹೊರೆಯವರಿಗೆ ಹೇಳುತ್ತಾರೆ ಮತ್ತು  ಅವರಿಗೆಂದು ಭರ್ವಾ ಪುರಂಪೋಲಿ ಸಿಹಿತಿಂಡಿಗಳನ್ನು ತಯಾರಿಸುತ್ತಾರೆ.

Dr. Babasaheb Ambedkar with Ramabai Ambedkar in 1934
PHOTO • Courtesy: Wikipedia
At their Rajagriha bungalow, Bombay in February 1934. From left:  son Yashwant, Dr. Ambedkar, Ramabai, Babasaheb's brother's wife Laxmibai, nephew Mukundrao, and their dog Tobby
PHOTO • Courtesy: Wikipedia

ಎಡ: 1934ರಲ್ಲಿ ರಮಾಬಾಯಿ ಅಂಬೇಡ್ಕರ್ ಅವರೊಂದಿಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್. ಬಲ ಚಿತ್ರ: 1934ರ ಫೆಬ್ರವರಿಯಲ್ಲಿ ಬಾಂಬೆಯ ರಾಜಗೃಹ ಬಂಗಲೆಯಲ್ಲಿ. ಎಡಗಡೆಯಿಂದ: ಮಗ ಯಶವಂತ್, ಡಾ. ಅಂಬೇಡ್ಕರ್, ರಮಾಬಾಯಿ, ಬಾಬಾಸಾಹೇಬ್ ಅವರ ಸಹೋದರನ ಹೆಂಡತಿ ಲಕ್ಷ್ಮಿಬಾಯಿ, ಸೋದರಳಿಯ ಮುಕುಂದರಾವ್ ಮತ್ತು ಅವರ ನಾಯಿ ಟೋಬಿ

ರಾಮ್‌ಜಿ ಸಕ್ಪಾಲ್‌ ಅವರ ಕುದುರೆಗಳ ಬಗ್ಗೆ ಮಹಿಳೆಯರು ಹೆಮ್ಮೆಯಿಂದ ಹಾಡುತ್ತಾರೆ; ವಿಶೇಷವಾಗಿ ಯುವಕ ಭೀಮನು ಸವಾರಿ ಮಾಡುವ ಅವನ ಸುಂದರವಾದ ಕುದುರೆ ಮೇರ್ ಕುರಿತು. ಆ ಮೇರಿನ ಬೆಲೆ ಸಾವಿರ ರೂಪಾಯಿ ಮತ್ತು ಅದರ ಬೆನ್ನ ಮೇಲೆ ಕುಳಿತುಕೊಳ್ಳಲು ಮುನ್ನೂರು ರೂಪಾಯಿಯ ಜೀನನ್ನು ಹಾಕಲಾಗಿದೆ. ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ಚಿತ್ರಿಸುವ ಗಾಯಕರು, ದಾರಿಯಲ್ಲಿ ಹಲವಾರು ಬಾರಿ ನಿಂತ ನಂತರ ಲಕ್ಷ್ಮಿ ಭೀಮರಾಯನ ಮನೆಗೆ ಬರುತ್ತಾಳೆ ಎಂದು ಹೇಳುತ್ತಾರೆ. ವಾಸ್ತವವಾಗಿ, ಅವರ ಕುಟುಂಬವು ಸಮೃದ್ಧವಾಗಿರಲಿಲ್ಲ. ರಾಮ್‌ಜಿ ಸಕ್ಪಾಲ್ ಅವರು ನಿವೃತ್ತ ಸುಬೇದಾರ್ ಆಗಿದ್ದರು ಮತ್ತು ಕುಟುಂಬವು ಮುಂಬೈನ ಲೋವರ್ ಪರೇಲ್‌ನಲ್ಲಿರುವ ದಬಕ್ ಚಾಳ್‌ನಲ್ಲಿ ವಾಸಿಸುತ್ತಿದ್ದರು. ಭೀಮರಾವ್ ಗಾಯಕರ ದೃಷ್ಟಿಯಲ್ಲಿ ಗುಲಾಬಿ ಹೂವಿನಂತೆ. ಭೀಮಾ ಮತ್ತು ರಮಾಬಾಯಿ ರಾಮ್ಜಿಯವರ ಮನೆಯಲ್ಲಿ ತಮ್ಮ ವಿವಾಹ ಸಮಾರಂಭದಲ್ಲಿ ಸಾಂಪ್ರದಾಯಿಕ ಬಾಸಿಂಗವನ್ನು ಧರಿಸಿದ್ದರು ಎಂದು ಅವರು ಊಹಿಸುತ್ತಾರೆ.

ಮತ್ತೊಂದು ಓವಿಯಲ್ಲಿ, ಗಾಯಕಿ ತನ್ನ ಯೌವನದ 12 ವರ್ಷಗಳನ್ನು ಬೀಸುಕಲ್ಲಿನಲ್ಲಿ ಹಿಟ್ಟು ಬೀಸುವುದಕ್ಕಾಗಿ ಕಳೆದುದಾಗಿ ಉಲ್ಲೇಖಿಸಿದ್ದಾರೆ. ಆ ಕೆಲಸದ ಸಮಯದಲ್ಲಿ ಬೆವರಿನಿಂದ ತೊಯ್ದು ಹೋಗುತ್ತಿದ್ದರು. ಅವರ ಪ್ರಕಾರ, ರಮಾಬಾಯಿ ಅಥವಾ ರಾಮಿ ಬಾಲ್ಯದಲ್ಲಿ ಹೊಗೆಸೊಪ್ಪಿನೊಡನೆ ಅಡಿಕೆಯನ್ನು ನೀಡಿ ಅವರ ತೋಳುಗಳನ್ನು ಬಲಪಡಿಸಿದರು ಮತ್ತು ಈ ಕಠಿಣ ಶ್ರಮದ ಕೆಲಸವನ್ನು ಮಾಡಲು ಅವರಿಗೆ ಶಕ್ತಿಯನ್ನು ನೀಡಿದರು.

ಭೀಮರಾವ್ ವಿದೇಶದಲ್ಲಿದ್ದ ಆ ವರ್ಷಗಳಲ್ಲಿ, ರಮಾಬಾಯಿ ತನ್ನ ತ್ಯಾಗ ಮತ್ತು ಸ್ವಾಭಿಮಾನದಿಂದ ತನ್ನ ಹೆಸರನ್ನು ರಾಮಿ ಅಥವಾ 'ತಾಯಿ ರಮಾಬಾಯಿ' ಎಂದು ಗಳಿಸಿದರು. ಅವರು ಹಣಕಾಸಿನ ತೊಂದರೆಗಳನ್ನು ಎದುರಿಸುತ್ತಿದ್ದರೂ, ಅವರು ಸ್ನೇಹಿತರು ಮತ್ತು ಹಿತೈಷಿಗಳಿಂದ ಹಣಕಾಸಿನ ಸಹಾಯವನ್ನು ನಿರಾಕರಿಸಿದರು. ಒಮ್ಮೆ ರಮಾಬಾಯಿ ವಸತಿ ಶಾಲೆ ನಡೆಸುತ್ತಿದ್ದ ಸ್ನೇಹಿತೆಯೊಂದಿಗೆ ಇರಲು ಹೋದಾಗ, ಸರ್ಕಾರಿ ಪಡಿತರ ಪಡೆಯಲು ವಿಳಂಬವಾದ ಕಾರಣ ಅಲ್ಲಿದ್ದ ಮಕ್ಕಳು ಕೆಲವು ದಿನಗಳಿಂದ ಹಸಿದು ಮಲಗಿದ್ದರು. ಮಕ್ಕಳ ಈ ಸ್ಥಿತಿ ನೋಡಲಾಗದೆ ಅವರು ತಮ್ಮ ಚಿನ್ನಾಭರಣಗಳನ್ನು ಮಾರಾಟ ಮಾಡಲು ಅಥವಾ ಅಡಮಾನವಿಡಲು ನೀಡಿದರು, ಇದರಿಂದ ಬಂದ ಹಣದಿಂದ ಮಕ್ಕಳಿಗೆ ಆಹಾರವನ್ನು ಖರೀದಿಸಿದರು. ಆ ಮಕ್ಕಳು ಅವರಿಗೆ ರಮಾ ಆಯಿ ಅಥವಾ ರಾಮಾಯಿ ಎಂದು ಕೃತಜ್ಞತೆ ಮತ್ತು ಪ್ರೀತಿಯಿಂದ ಹೆಸರಿಸಿದರು. ಆ ಮುದ್ದಾದ ಹೆಸರು ಇಂದಿಗೂ ಬಳಕೆಯಲ್ಲಿದೆ.

ಓವಿಯಲ್ಲಿ, ಗಾಯಕಿ ಪುಟ್ಟ ಭೀಮನನ್ನು ಕಲ್ಪಿಸಿಕೊಳ್ಳುತ್ತಾರೆ ಮತ್ತು ತನ್ನ ಹೆತ್ತವರ ಮನೆಗೆ ಹೋಗಿ ಅವನ ತೊಟ್ಟಿಲನ್ನು ತೂಗಿದಾಗ ಆದ ಸಂತೋಷವನ್ನು ವರ್ಣಿಸುತ್ತಾರೆ. ಇನ್ನೊಂದು ಓವಿಯಲ್ಲಿ, ಭೀಮರಾವ್ ಆಕೆಗೆ ಸಹೋದರ, ಮತ್ತು ರಮಾಬಾಯಿ ಪ್ರೀತಿಯ ಅತ್ತಿಗೆ, ಅವರ ಉಪಸ್ಥಿತಿಯು ಗಾಯಕಿಗೆ ತವರಿನಲ್ಲಿ ಸಾಂತ್ವನ ನೀಡುತ್ತದೆ.

ಈ ಓವಿಗಳ ಗೊಂಚಲಿನ ಕೊನೆಯಲ್ಲಿ, ನಿರೂಪಕರು ಅತಿಥಿಗಳು ಬಂದು ಮನೆಯೆಲ್ಲ ಸಂತೋಷ ತುಂಬಿತೆಂದು ಹಾಡುತ್ತಾರೆ ಮತ್ತು ತಮ್ಮ ಮನೆಗೆ ಬಂದ ಅತಿಥಿಗಳನ್ನು ʼಜೈ ಭೀಮ್‌ʼ ಎಂದು ಸ್ವಾಗತಿಸುತ್ತಾರರೆ.

An old photo of Parvati Bhadarge
PHOTO • Vinay Potbhare
Rangu Potbhare in Majalgaon's Bhim Nagar on Ambedkar Jayanti in 2021
PHOTO • Vinay Potbhare

ಎಡಕ್ಕೆ: ಪಾರ್ವತಿ ಭಾಡರಗೆಯವರ ಹಳೆಯ ಫೋಟೋ. ಬಲಗಡೆ: 2021ರಲ್ಲಿ ಅಂಬೇಡ್ಕರ್ ಜಯಂತಿಯಲ್ಲಿ ಭಾಗವಹಿಸಿದ ಮಜಲ್‌ಗಾಂವ್‌ನ ಭೀಮ್ ನಗರದ ರಂಗು ಪೋತ್ಭಾರೆ

ಪಾರ್ವತಿ ಭಾಡರಗೆ ಮತ್ತು ರಂಗು ಪೋತ್ಭಾರೆ ಅವರ ದನಿಯಲ್ಲಿ ಓವಿಗಳನ್ನು ಕೇಳಿ

ನಿನ್ನ ದನಿ, ನನ್ನ ದನಿ ಒಂದಾಗಿ ಸೇರಲಿ
ಹರಿವ ಗಂಗೆಯಂತೆ ನಾದ ನದಿಯು ಹರಿಯಲಿ

ನೆಂಟರು ಬಂದಿದ್ದಾರೆ ಮನೆಗೆ, ನೆರೆ ಮನೆಯವರು ಕೇಳುತ್ತಿದ್ದಾರೆ
ʼಎಲ್ಲಿಂದ ಬಂದಿದ್ದಾರವರು?ʼ
ನನ್ನ ಅಂಬೇಡ್ಕರ ಬಾಬಾನ ಗಾಡಿಗಳು ಬೀದಿಯಲ್ಲಿವೆ

ನನಗೆ ಪೂರಣ ಪೋಳಿ ತಯಾರಿಸುವ ಗಡಿಬಿಡಿ
ಅಂಬೇಡ್ಕರ ಬಂದಿದ್ದಾರೆ ಮನೆಗೆ ರಮಾದೇವಿಯೊಡನೆ

ಅಂಟು ಹಚ್ಚಿದ ಹಣೆಗೆ ಕುಂಕುಮ ಹಚ್ಚುತ್ತಿದ್ದಾಳೆ ರಮಾದೇವಿ
ಭೀಮ ಕರೆಯುತ್ತಿದ್ದಾನೆ ವಿಮಾನದಿಂದ, ʼಓ ನನ್ನ ರಮಾ, ನೀನೂ ಬಾ ನನ್ನೊಡನೆʼ

ಓ ಹೆಣ್ಣೇ, ಎಷ್ಟು ಜನರಿದ್ದಾರೆ ಜನರು ಕುದುರೆಯ ಮೇಲೆ, ಎಷ್ಟು ಜನರು ಹೊರಟಿದ್ದಾರೆ ನಡಿಗೆಯಲ್ಲಿ
ಈ ರಾತ್ರಿ, ರಾಮ್ಜೀ ಹೊರಟಿದ್ದಾರೆ ತನ್ನ ಸೊಸೆಯ ಕಾಣಲೆಂದು

ಓ ಅಕ್ಕಾ, ಆರು ಜನರು ಕುದುರೆ ಮೇಲೆ, ಎಣಿಸು ನಡೆಯುತ್ತಿರುವವರೆಷ್ಟೆಂದು
ರಾಮ್ಜೀ, ನನ್ನ ತಂದೆ ಹೋಗಿದ್ದಾರೆ ತನ್ನ ಸೊಸೆಯ ಕಾಣಲೆಂದು

ಯಾರದು ಸಂಭಾವಿತ ವ್ಯಕ್ತಿ, ಕುದುರೆ ಮೇಲೆ ಕುಳಿತಿರುವುದು, ರಾಮ್-ರಾಮ್ ಘೋಷ ಕೂಗುತ್ತಿರುವುದು
ಅವರು ಅಂಬೇಡ್ಕರ್ ಬಾಬಾ, ನನ್ನ ಪ್ರೀತಿಯ ರಮಾಳ ವರ.

ವಾದ್ಯ ಘೋಷ ಮೊಳಗುತ್ತಿದೆ, ಮದುಮಗನ ತಲೆಯ ಮೇಲೆ ಬಾಸಿಂಗ
ನಿನಗೆ ಗೊತ್ತೇ? ಇಂದು ರಾಮಜೀ ಮನೆಯಲ್ಲಿ ಭೀಮನಿಗೆ ಮದುವೆ.

ಲಕ್ಷ್ಮಿ ಬಂದಿದ್ದಾಳೆ ಮನೆಗೆ, ದಾರಿಯಲ್ಲಿ ಮತ್ತೆ ಮತ್ತ ನಿಲ್ಲುತ್ತಾಳೆ
ದಾರಿಯಲ್ಲಿ ನಿಂತು ಕೇಳುತ್ತಾಳೆ ಭೀಮನ ಮನೆಯ ದಾರಿಯನ್ನು

ಓ ಹೆ‍ಣ್ಣೇ, ಮನೆಯ ಮೆಟ್ಟಿಲಿಗೆ ಕುಂಕುಮ ಹಚ್ಚು
ರಮಾಬಾಯಿ, ಮರ್ಯಾದಸ್ಥ ಹೆಣ್ಣು, ಮನೆಯಲ್ಲಿಲ್ಲ

ಹೆಂಗಳೆಯರನ್ನು ಕರೆಯಿರಿ, ದೂರದಿಂದ ಅತಿಥಿ ಬಂದಿದ್ದಾನೆ ಅಲ್ಲವೇ?
ಲಾಟೀನು ತಂದು ಭೀಮನ ರಾಣಿಯನ್ನು ಹುಡುಕಿ

ಓ ಹೆಣ್ಣೇ, ಮಾರುಕಟ್ಟೆಯಲ್ಲಿಂದು ಜನವೋ ಜನ
ನನ್ನ ಅಂಬೇಡ್ಕರನ ಗುರುತೇ ಸಿಗಲಿಲ್ಲ, ಹೊಸ ವಸ್ತ್ರ ಹೊದ್ದುಕೊಂಡಿದ್ದಾನೆ ಬಾಬಾ ಇಂದು

ಮಸಿ ಕುಡಿಕೆ ಮತ್ತು ಶಾಯಿ ಹಾಸಿಗೆಯ ಪಕ್ಕದಲ್ಲಿದೆ
ಮೀರಾ ಕೇಳುತ್ತಿದ್ದಾಳೆ ಅಳಿಯನನ್ನು ʼಎಷ್ಟು ಪ್ರಾಂತ್ಯಗಳು ಕೈವಶವಾದವು?ʼ

ಓ ಹೆಣ್ಣೇ, ನಾನು ಹಿಟ್ಟು ಬೀಸುತ್ತಾ ಪಾತ್ರೆಗೆ ತುಂಬಿಸುತ್ತಿದ್ದೇನೆ
ಈಗ ದೆಹಲಿಯಲ್ಲಿರುವ ಪ್ರೀತಿಯ ಪುಟ್ಟ ಭೀಮನಿಗೆಂದು

ಓ ಹೆಣ್ಣೇ, ಸಾವಿರ ರೂಪಾಯಿಯ ಕುದುರೆ ಹೊಳೆಯ ನೀರು ಕುಡಿಯುವುದಿಲ್ಲ
ತಂದೆ ರಾಮಜೀ ಅವುಗಳಿಗೆಂದೆ ಕಟ್ಟಿಸಿದ್ದಾರೆ ಸಿಹಿನೀರಿನ ತೊಟ್ಟಿಗಳು

ಓ ಹೆಣ್ಣೇ, ಸಾವಿರ ರೂಪಾಯಿಯ ಕುದುರೆಗೆ ಮುನ್ನೂರು ರೂಪಾಯಿಯ ಜೀನು
ನನ್ನ ಬಾಬಾ ಅಂಬೇಡ್ಕರ್‌ ಕುಳಿತಿದ್ದಾರೆ ಅದರ ಮೇಲೆ, ಗುಲಾಬಿ ಹೂವು ಕುಳಿತಂತೆ

ಬೀಸುಕಲ್ಲು ತಿರುಗಿಸಲು ಬಲ ಬೇಕು ನನ್ನ ಮಣಿಕಟ್ಟಿಗೆ
ರಮಾ, ನನ್ನ ತಾಯಿ, ಎಲೆಯಡಿಕೆಯಲ್ಲಿ ಅಫೀಮು ತಿನ್ನಿಸಿದ್ದಾಳೆ

ದಣಿವಾಗುತ್ತದೆ ಬೀಸುಕಲ್ಲಿನ ಎದುರು ಕುಳಿತು
ನನ್ನ ಹನ್ನೆರಡು ವರ್ಷಗಳ ಯೌವನ ಸವೆದು ಹೋಯಿತು ಇದರ ಎದುರಿಗೆ ಕುಳಿತು

ಓ ಗೆಳತಿ, ನಾನು ತವರಿಗೆ ಹೋಗುತ್ತಿದ್ದೇನೆ, ಎಂತಹ ಸಂಭ್ರಮ ಅದು!
ನನ್ನ ಗೆಳೆಯ ಭೀಮ, ನನ್ನಿಷ್ಟದ ಭೀಮರಾಜ ನನ್ನೊಂದಿಗಿದ್ದಾನೆ,
ಚಿಕ್ಕಮ್ಮ, ನೀವು ಕುಳಿತುಕೊಳ್ಳಿ

ಓ ಗೆಳತಿ, ನನ್ನ ತವರಿಗೆ ಹೋದರೆ, ಹೇಗೆ ಕುಳಿತು ವಿರಮಿಸಲಿ?
ನನ್ನ ಪುಟ್ಟ ಭೀಮನ ತೊಟ್ಟಿಲು ಕಣ್ಣೆದುರಿಗಿದೆ, ನಾನದನು ತೂಗುವೆ ಪ್ರೇಮದಿಂದ

ಓ ಗೆಳತಿ, ನಾನು ತವರಿಗೆ ಹೋಗುವೆ, ನನ್ನ ತಾಯಿ ಇರುವಳು ಅಲ್ಲಿ
ನನ್ನ ಇಷ್ಟದ ರಮಾಬಾಯಿ ಅತ್ತಿಗೆಯಂತೆ ಇರುವಳು ಅಲ್ಲಿ

ಮನೆಯಲ್ಲಿ ಅತಿಥಿಗಳು ತುಂಬಿರುವರು ಎಲ್ಲೆಡೆ
ನಾನು ಸ್ವಾಗತಿಸುತ್ತನೆ ಅಂಬೇಡ್ಕರರನ್ನು ʼಜೈಭೀಮ್‌!ʼ ಎಂದು


ಪ್ರದರ್ಶಕರು/ಗಾಯಕರು : ಪಾರ್ವತಿ ಭಾರಡಗೆ (ತಾಯಿ), ರಂಗು ಪೋತ್ಭಾರೆ (ಮಗಳು)

ಗ್ರಾಮ : ಮಜಲ್ ಗಾಂವ್

ಊರು : ಭೀಮ್ ನಗರ

ತಾಲ್ಲೂಕು : ಮಜಲ್ ಗಾಂವ್

ಜಿಲ್ಲೆ : ಬೀಡ್

ಜಾತಿ : ನವ ಬೌದ್ಧ (ನವ ಬೌದ್ಧ)

ಉದ್ಯೋಗಗಳು : ಪಾರ್ವತಿ ‌ಭಾಡರಗೆ ಒಬ್ಬ ರೈತ ಮತ್ತು ಕೃಷಿ ಕಾರ್ಮಿಕರಾಗಿದ್ದರು. ರಂಗು ಪೋತಭರೆ ತನ್ನ ಕುಟುಂಬದ ಜಮೀನಿನಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದರು.

ಪೋಸ್ಟರ್: ಊರ್ಜಾ

ಮಜಲ್ ಗಾಂವ್‌ನ ರಾಜರತ್ನ ಸಾಳ್ವೆ ಮತ್ತು ವಿನಯ್ ಪೋತಭರೆ ಅವರ ಸಹಾಯಕ್ಕಾಗಿ ಅವರಿಗೆ ವಿಶೇಷ ಧನ್ಯವಾದಗಳು.

ಹೇಮಾ ರಾಯಿರ್ಕರ್ ಮತ್ತು ಗೈ ಪೊಯಿಟೆವಿನ್ ಸ್ಥಾಪಿಸಿದ ಮೂಲ ಗ್ರಿಂಡ್ ಮಿಲ್ ಸಾಂಗ್ಸ್ ಪ್ರಾಜೆಕ್ಟ್ ಬಗ್ಗೆ ಇಲ್ಲಿ ಓದಿ.

ಅನುವಾದ: ಶಂಕರ ಎನ್‌. ಕೆಂಚನೂರು

Namita Waikar is a writer, translator and Managing Editor at the People's Archive of Rural India. She is the author of the novel 'The Long March', published in 2018.

Other stories by Namita Waikar
PARI GSP Team

PARI Grindmill Songs Project Team: Asha Ogale (translation); Bernard Bel (digitisation, database design, development and maintenance); Jitendra Maid (transcription, translation assistance); Namita Waikar (project lead and curation); Rajani Khaladkar (data entry).

Other stories by PARI GSP Team
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru