ಯುವಕ ತಲಾಬ್‌ ಹುಸೇನ್‌ ಸಾಬೂನು ಬೆರೆಸಿದ ಬಿಸಿನೀರಿನಲ್ಲಿ ಅದ್ದಿರುವ ಕಂಬಳಿಯನ್ನು ತುಳಿಯುತ್ತಿದ್ದಾನೆ. ದೂರದಿಂದ ನೋಡುವವರಿಗೆ ಅವನು ಕುಣಿಯುತ್ತಿರುವ ಹಾಗೆ ಕಾಣುತ್ತಿತ್ತು. ಅವನ ಮುಖದಲ್ಲಿ ನಗು ಲಾಸ್ಯವಾಡುತ್ತಿತ್ತು. "ನೆನೆಸಿದ ಕಂಬಳಿಯ ಮೇಲೆ ಸಮತೋಲನ ಕಾಪಾಡಿಕೊಂಡು ನಿಲ್ಲಬೇಕು" ಎಂದು ಅವನು ಹೇಳುತ್ತಾನೆ. ಇನ್ನೊಬ್ಬ ವ್ಯಕ್ತಿ ಬಂದು ಅದಕ್ಕೆ ಮತ್ತೆ ಸೋಪು ಬೆರೆಸಿದ ನೀರನ್ನು ಸುರಿಯುವಾಗ ತಲಾಬ್‌ ಆಧಾರಕ್ಕೆ ತನ್ನ ಮುಂದೆ ಇರುವ ಮರವನ್ನು ಹಿಡಿದುಕೊಳ್ಳುತ್ತಾನೆ.

ಅದು ಜಮ್ಮುವಿನ ಸಾಂಬಾ ಜಿಲ್ಲೆಯ ಸಣ್ಣ ಬಕರ್ವಾಲ್ ನೆಲೆಯಾಗಿತ್ತು. ಅಲ್ಲಿ ಚಳಿಗಾಲದ ಒಂದು ರಾತ್ರಿ ಹೊಸದಾಗಿ ತಯಾರಿಸಿದ ಉಣ್ಣೆ ಕಂಬಳಿಗಳನ್ನು ತೊಳೆಯುವ ಸಲುವಾಗಿ ನೀರು ಕಾಯಿಸಲು ಒಲೆಯನ್ನು ಉರಿಸಲಾಗುತ್ತಿತ್ತು. ಅಲ್ಲಿದ್ದ ಬೆಳೆಕೆಂದರೆ ಅದೊಂದೇ.

ಉಣ್ಣೆಯ ಕಂಬಳಿಗಳನ್ನು ಪರಿಶಿಷ್ಟ ಪಂಗಡದ ಸಮುದಾಯಗಳ ಸದಸ್ಯರಿಂದ ತಯಾರಿಸಲಾಗುತ್ತದೆ - ಮೇಘ್ ಮತ್ತು ಮೀಂಗ್ ಸಮುದಾಯಗಳು ಉಣ್ಣೆಯ ಕುಶಲತೆಗೆ ಹೆಸರುವಾಸಿಯಾಗಿವೆ. ಕಂಬಳಿಗಳನ್ನು ಮಾಡಿದ ನಂತರ, ಅವುಗಳನ್ನು ಬಕರ್ವಾಲ್ ಗಂಡಸರು ತೊಳೆದು ಒಣಗಿಸುತ್ತಾರೆ. ಕಂಬಳಿಗಳಿಗೆ ದಾರ ಮತ್ತು ನೂಲನ್ನು ಸಾಮಾನ್ಯವಾಗಿ ಬಕರ್ವಾಲ್ ಮಹಿಳೆಯರು ತಯಾರಿಸುತ್ತಾರೆ ಮತ್ತು ನೂಲಿಗೆ ಬಕರ್ವಾಲ್ ಕುಟುಂಬಗಳು ಮನೆಯಲ್ಲಿ ಬಣ್ಣ ಹಾಕುತ್ತವೆ.

PHOTO • Ritayan Mukherjee
PHOTO • Ritayan Mukherjee

ಬಕರ್ವಾಲ್ ಪುರುಷರು (ಬಲ) ಕಂಬಳಿಗಳನ್ನು ತಯಾರಿಸಿದ ನಂತರ ಅವುಗಳನ್ನು ತೊಳೆದು ಒಣಗಿಸುತ್ತಾರೆ. ಜಮ್ಮುವಿನ ಸಾಂಬಾ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಉಣ್ಣೆ ಕಂಬಳಿಯನ್ನು ತುಳಿಯುತ್ತಿರುವ ತಲಾಬ್ ಹುಸೇನ್ (ಎಡ)

ಖಲೀಲ್ ಖಾನ್ ಜಮ್ಮು ಜಿಲ್ಲೆಯ ಪರ್ಗಲ್ಟಾ ಗ್ರಾಮದ ಬಳಿಯ ನೆಲಯ ಮೂಲದವರು. ಬಕರ್ವಾಲ್ ಸಮುದಾಯದ ಈ ಯುವಕ ಕಂಬಲ್ (ಕಂಬಳಿ) ತಯಾರಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು‌ ಇದು ಕಠಿಣ ಕೆಲಸ ಎಂದು ಅವರು ಹೇಳುತ್ತಾರೆ, ಆದರೆ ಇದು ದೀರ್ಘಾವಧಿಯಲ್ಲಿ ಹೆಚ್ಚು ಅಗ್ಗ, ಏಕೆಂದರೆ ಇದು ಹೆಚ್ಚು ಕಾಲ ಉಳಿಯುತ್ತದೆ. ಮೊಹಮ್ಮದ್ ಕಾಲೂ ಅವರು ಖನ್ನಾ ಚಾರ್ಗಲ್‌ನಿಂದ ಬಂದಿದ್ದಾರೆ, ಇದು ಪರ್ಗಲ್ಟಾದಿಂದ ನದಿಯ ಕೆಳಭಾಗದಲ್ಲಿರುವ ಸಣ್ಣ ನೆಲೆ. ಅವರ ಪುಟ್ಟ ಮಗ ಮಲಗಿರುವ ಹಳೆಯ ಉಣ್ಣೆಯ ಹೊದಿಕೆಯ ಕಡೆಗೆ ತೋರಿಸುತ್ತಾ, "ಇದು ಕಾಣಿಸ್ತಿದೆಯಾ? [ಕಂಬಳಿ] ಇದು ಮನುಷ್ಯನಷ್ಟೇ ಅಥವಾ ಅವನಿಗಿಂತಲೂ ಹೆಚ್ಚು ಕಾಲ ಬದುಕುತ್ತದೆ. ಆದರೆ ಮಾರುಕಟ್ಟೆಯಲ್ಲಿ ಖರೀದಿಸಿದ ಅಕ್ರಿಲಿಕ್ ಉಣ್ಣೆಯ ಹೊದಿಕೆಗಳು ಕೆಲವು ವರ್ಷಗಳ ಕಾಲ ಬರುವುದಿಲ್ಲ. ಪಚಿಮ್‌ನಿಂದ ಮಾಡಿದ ಕಂಬಳಿಗಳು (ಅಕ್ರಿಲಿಕ್ ಉಣ್ಣೆಯ ಸ್ಥಳೀಯ ಪದ) ಒದ್ದೆಯಾದರೆ ಒಣಗಲು ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು ಅವರು ಮುಂದುವರೆದು ಹೇಳುತ್ತಾರೆ, ಶುದ್ಧ ಉಣ್ಣೆಯ ಕಂಬಳಿಗಳಿಗಿಂತಲ್ಲದೆ. "ಚಳಿಗಾಲದಲ್ಲಿ ಅಕ್ರಿಲಿಕ್ ಹೊದಿಕೆಗಳನ್ನು ಬಳಸಿದ ನಂತರ ನಮ್ಮ ಪಾದಗಳು ಸುಟ್ಟುಹೋಗುತ್ತವೆ ಮತ್ತು ಮೈಕೈ ನೋವು ತರಿಸುತ್ತವೆ" ಎಂದು ಕುರಿಗಾಹಿಗಳಾದ ಖಲೀಲ್ ಮತ್ತು ಕಾಲೂ ಹೇಳುತ್ತಾರೆ.

*****

ಉಣ್ಣೆಯಿಂದ ಕಂಬಳಿಯಷ್ಟೇ ಅಲ್ಲದೆ ನಮ್ದಾ ಎನ್ನುವ  ವರ್ಣರಂಜಿತ ಹೂವಿನ ಕಸೂತಿಯಿರುವ ಫೆಲ್ಟಿಂಗ್ ತಂತ್ರವನ್ನು ಬಳಸಿ ಒರಟಾದ ಉಣ್ಣೆಯ ರಗ್ಗುಗಳನ್ನು ಸಹ ತಯಾರಿಸಲಾಗುತ್ತದೆ. ಅವರು ತಾರು ಎನ್ನುವ ಸಣ್ಣ ಕಂಬಳಿಯನ್ನು ಕೂಡಾ ತಯಾರಿಸುತ್ತಾರೆ. ಇದನ್ನು ಗಾದಿಗಳಾಗಿ ಬಳಸಲಾಗುತ್ತದೆ ಮತ್ತು ಉಡುಗೊರೆಯಾಗಿಯೂ ನೀಡಲಾಗುತ್ತದೆ ಇವುಗಳನ್ನು ಸಹ ಮಹಿಳೆಯರು ಕಸೂತಿ ಮಾಡುತ್ತಾರೆ ಮತ್ತು ಪ್ರತಿಯೊಂದು ಕುಟುಂಬ ಮತ್ತು ಕುಲವು ತನ್ನದೇ ಆದ ವಿಶಿಷ್ಟ ವಿನ್ಯಾಸಗಳನ್ನು ಹೊಂದಿದೆ.

"ಗಾದಿಯನ್ನು ನೋಡಿಯೇ ನಾನು ಅದನ್ನು ಯಾವ ಕುಟುಂಬ ನೇಯ್ದಿದೆ ಎಂದು ಹೇಳಬಲ್ಲೆ" ಎಂದು ತಾಲಾಬ್ ಹುಸೇನ್ ಅವರ ನೆಲೆಯಲ್ಲಿ ವಾಸಿಸುವ ಹಿರಿಯ ಮಹಿಳೆ ಜರೀನಾ ಬೇಗಂ ಹೇಳುತ್ತಾರೆ. ಅವರ ಪ್ರಕಾರ, ಒಂದು ಕಂಬಳಿ ಮಾಡಲು ಸುಮಾರು 15 ದಿನಗಳು ಬೇಕಾಗುತ್ತದೆ.

“ಮೂಲೆಯಲ್ಲಿರುವ ಆ ಕಂಬಳಿಗಳನ್ನು ನೋಡಿ, ಕುಟುಂಬದ ವಿವಾಹಕ್ಕಾಗಿ ಅವುಗಳನ್ನು ವಿಶೇಷವಾಗಿ ತಯಾರಿಸಲಾಗಿದೆ. ಅವರ ಆದಾಯದ ಆಧಾರದ ಮೇಲೆ, ವರನ ಕುಟುಂಬವು 12-30 ಅಥವಾ 50 ಕಂಬಳಿಗಳನ್ನು ನೀಡುತ್ತದೆ” ಎಂದು ಸಮುದಾಯದಲ್ಲಿ ನೆಚ್ಚಿನ ಅಜ್ಜಿಯಾಗಿರುವ ಜರೀನಾ ಹೇಳುತ್ತಾರೆ. ಇಂದು ಜನರು ಹೆಚ್ಚು ನೀಡುವುದಿಲ್ಲ ಆದರೆ ಸಾಂಪ್ರದಾಯಿಕ ವಿವಾಹದ ಉಡುಗೊರೆಯಾಗಿ ಪ್ರತಿ ಸಮಾರಂಭದಲ್ಲಿ ಇದು ಅತ್ಯಗತ್ಯವಾಗಿದೆ ಎಂದು ಅವರು ಹೇಳುತ್ತಾರೆ.

ಕಂಬಳಿಗಳು ಮದುವೆಯ ಉಡುಗೊರೆಗಳಾಗಿ ಹೆಚ್ಚು ಮೌಲ್ಯಯುತವಾಗಿದ್ದರೂ, ಅವುಗಳ ಸ್ಥಾನವನ್ನು ನಿಧಾನವಾಗಿ ವಿದ್ಯುತ್ ಉಪಕರಣಗಳು ಮತ್ತು ಪೀಠೋಪಕರಣಗಳು ಆಕ್ರಮಿಸುತ್ತಿವೆ.

PHOTO • Ritayan Mukherjee
PHOTO • Ritayan Mukherjee

ಜರೀನಾ ಬೇಗಂ ಹಿರಿಯ ನೇಕಾರರಾಗಿದ್ದು, ಸಾಂಬಾ ಜಿಲ್ಲೆಯ ಬಕರ್ವಾಲ್ ನೆಲೆಯ್ಲಲಿ ವಾಸಿಸುತ್ತಿದ್ದಾರೆ

PHOTO • Ritayan Mukherjee
PHOTO • Ritayan Mukherjee

ಮುನ ಬ್ಬ ರ್ ಅಲಿ (ಎಡ) ಮತ್ತು ಮಾರುಫ್ ಅಲಿ (ಬಲ) ಬಕರ್ವಾಲ್ ಉಣ್ಣೆಯಿಂದ ತಯಾರಿಸಿದ ಕರಕುಶಲ ವಸ್ತುಗಳನ್ನು ತೋರಿಸುತ್ತಿದ್ದಾರೆ

ಮುನಬ್ಬರ್ ಮತ್ತು ಅವರ ಪತ್ನಿ ಮಾರುಫ್ ಕೆಳ ಇಳಿಜಾರಿನಲ್ಲಿರುವ ಬಸೋಹ್ಲಿ ತಹಸಿಲ್‌ನ ನೆಲೆಯ ಅಂಚಿನಲ್ಲಿ ವಾಸಿಸುತ್ತಿದ್ದಾರೆ. ಮುನಬ್ಬರ್ ಅವರು ಸವೆದ ಟೆಂಟ್ ಅಡಿಯಲ್ಲಿ ತಮ್ಮ ಕೆಲಸವನ್ನು ಪ್ರದರ್ಶಿಸುತ್ತಾ, “ಈ ಸುಂದರವಾದ ಕಸೂತಿಯನ್ನು ನೋಡಿ; ಪ್ರಸ್ತುತ ನಮಗೆ ಯಾವುದೇ ಆದಾಯವಿಲ್ಲ."

ತಮ್ಮ 40ರಿಂದ 50 ಕುರಿ ಮತ್ತು ಮೇಕೆಗಳೊಂದಿಗೆ ಕಾಶ್ಮೀರಕ್ಕೆ ವಲಸೆ ಹೋದ ಅವರ ಡೇರೆಯೊಳಗೆ ಕರಕುಶಲ ವಸ್ತುಗಳು ಎಲ್ಲೆಡೆ ಇದ್ದವು. ತಾರು (ಗಾದಿ), ಕುದುರೆಯ ಪಟ್ಟಿಗಳಾದ ತಾಲಿಯಾರೋ, ಗಲ್ಟಾನಿ ಕುದುರೆಯ ಕುತ್ತಿಗೆಗೆ ಕಟ್ಟುವ ಗಂಟೆಯ ಪಟ್ಟಿಗಳು ಹಾಗೂ ಲಗಾಮುಗಳಿದ್ದವು. “ಈ ಕಸೂತಿ, ಜಾನುವಾರುಇದೆಲ್ಲ ಕಷ್ಟದ ಕೆಲಸ. [ಆದರೆ] ನಮಗೆ ಒಂದು ಗುರುತಿಲ್ಲ. ಯಾರಿಗೂ [ನಮ್ಮ ಕೆಲಸ] ಗೊತ್ತಿಲ್ಲ” ಎಂದು ಮುನ್ನಬ್ಬರ್ ಬೇಸರದಿಂದ ಹೇಳುತ್ತಾರೆ.

*****

"ಈಗ ಗಿರಣಿ ಹೊಂದಿರುವವರನ್ನು ಹುಡುಕುವುದು ಕೂಡಾ ಕಷ್ಟ" ಎಂದು ಮಾಜ್ ಖಾನ್ ಹೇಳುತ್ತಾರೆ. ಅರವತ್ತರ ಪ್ರಾಯದವರಾದ ಖಾನ್ ಈಗಲೂ ಉಣ್ಣೆಯನ್ನು ಸಂಸ್ಕರಿಸುತ್ತಿರುವ ಕುಟುಂಬದಿಂದ ಬಂದವರು. ಸಮುದಾಯದ ಅನೇಕರು ಚರಕ ಬಳಸುವುದನ್ನು ಮತ್ತು ನೂಲುವಿಕೆಯನ್ನು ತ್ಯಜಿಸಿದ್ದಾರೆ ಎಂದು ಹೇಳುತ್ತಾರೆ.

ಇದರಿಂದಾಗಿ ಕುರುಬರು ಉಣ್ಣೆ ಮಾರಾಟಕ್ಕೂ ಪರದಾಡುವಂತಾಗಿದೆ. "ನಾವು ಈ ಹಿಂದೆ ಒಂದು ಕಿಲೋಗ್ರಾಂಗೆ ಕನಿಷ್ಠ 120-220 ರೂಪಾಯಿಗಳನ್ನು ಪಡೆಯುತ್ತಿದ್ದೆವು ಆದರೆ ಈಗ ನಮಗೆ ಏನೂ ಸಿಗುವುದಿಲ್ಲ. ಒಂದು ದಶಕದ ಹಿಂದೆ ಮೇಕೆ ಕೂದಲಿಗೆ ಮಾರುಕಟ್ಟೆಯಲ್ಲಿ ಬೆಲೆಯಿತ್ತು; ಈಗ ಕುರಿ ಉಣ್ಣೆಯನ್ನು ಸಹ ಖರೀದಿಸುವವರಿಲ್ಲ ಎಂದು ಕಥುವಾ ಜಿಲ್ಲೆಯ ತಹಸಿಲ್ ಬಸೋಹ್ಲಿಯ ಬಕರ್ವಾಲ್ ಮೊಹಮ್ಮದ್ ತಾಲಿಬ್ ಹೇಳುತ್ತಾರೆ. ಬಳಕೆಯಾಗದ ಉಣ್ಣೆಯು ಅವರ ಸ್ಟೋರ್ ರೂಂಗಳಲ್ಲಿ ಇರುತ್ತದೆ ಅಥವಾ ಅದನ್ನು ಕತ್ತರಿದ ಸ್ಥಳದಲ್ಲಿಯೇ ಎಸೆಯಲಾಗುತ್ತದೆ. ಈಗೀಗ ಉಣ್ಣೆಯ ಕೆಲಸ ಮಾಡುವ ಕುಶಲಕರ್ಮಿಗಳ ಸಂಖ್ಯೆಯೂ ಕಡಿಮೆಯಾಗಿದೆ.

"ಬಕರ್ವಾಲರು ಇತ್ತೀಚಿನ ದಿನಗಳಲ್ಲಿ ಯಾವುದೇ ಉತ್ಪನ್ನಗಳನ್ನು ತಯಾರಿಸುತ್ತಿಲ್ಲ. ಇದು ಚೋಟಾ ಕಾಮ್ [ಸಣ್ಣ, ಕೀಳು ಕೆಲಸ] ಆಗಿಬಿಟ್ಟಿದೆ. ಉಣ್ಣೆಯ ಪರ್ಯಾಯವಾದ ಸಿಂಥೆಟಿಕ್ ಉಣ್ಣೆ ಹೆಚ್ಚು ಅಗ್ಗವಾಗಿ ಸಿಗುತ್ತಿದೆ” ಎಂದು ಗುಜ್ಜರ್-ಬಕರ್ವಾಲ್ ಸಮುದಾಯದೊಂದಿಗೆ ಹಲವು ವರ್ಷಗಳಿಂದ ಕೆಲಸ ಮಾಡಿದ ಕಾರ್ಯಕರ್ತ ಮತ್ತು ಸಂಶೋಧಕ ಡಾ.ಜಾವೈದ್ ರಾಹಿ ಹೇಳುತ್ತಾರೆ.

ಎಡ: ಕಂಬಳಿ ಗಳಿಗೆ ಬಣ್ಣಗಳನ್ನು ಬಕರ್ವಾಲ್ ಜನರು ಆಯ್ಕೆ ಮಾಡುತ್ತಾರೆ ಆದರೆ ನೇಯ್ಗೆ ಮತ್ತು ಹೊಲಿಗೆಯನ್ನು ಕಂಬಳಿ ತಯಾರಕರು ಮಾಡುತ್ತಾರೆ. ಬಲ: ಮಾಜ್ ಖಾನ್ ಅವರ ಮೊಮ್ಮಗ ಖಲೀಲ್ ಕುಟುಂಬವು ತಯಾರಿಸಿದ ಕಂಬಳಿಯನ್ನು ತೋರಿಸು ತ್ತಿದ್ದಾನೆ

ಎಡ: ಉಣ್ಣೆಯ ವಸ್ತುಗಳ ಜೊತೆಗೆ ಮೇಕೆ ಕೂದಲಿನ ಹಗ್ಗವನ್ನು ಸಹ ತಯಾರಿಸಲಾಗುತ್ತದೆ. ಡೇರೆಗಳ ನ್ನು ಬಿಗಿದು ಕಟ್ಟಲು ಮತ್ತು ಕುದುರೆಗಳು ಮತ್ತು ಇತರ ಜಾನುವಾರುಗಳನ್ನು ಕಟ್ಟಲು ಇದು ಉಪಯುಕ್ತವಾಗಿದೆ. ಬಲ: ಸ್ವಲ್ಪ ಸಮಯದ ಹಿಂದೆ ತಯಾರಿಸಲಾದ ತಾರು ಎನ್ನುವ ಮದುವೆ ಉಡುಗೊರೆಯಾಗಿ ಬಳಕೆಯಾಗುವ ಕಂಬಳಿ

ಜಮ್ಮು ಮತ್ತು ಸುತ್ತಮುತ್ತ ಮೇವುಮಾಳಗಳು ವಿರಳವಾಗಿರುವುದರಿಂದ ಉಣ್ಣೆ ಪಡೆಯುವ ಸಲುವಾಗಿ ಕುರಿ ಸಾಕುವುದು ಈಗ ಅಷ್ಟು ಸುಲಭವಲ್ಲ. ಜಾನುವಾರುಗಳನ್ನು ಮೇಯಿಸಲು ಅವರು ಭೂಮಿಯ ಬಾಡಿಗೆ ನೀಡಬೇಕಾಗುತ್ತದೆ

ಇತ್ತೀಚೆಗೆ ಸಾಂಬಾ ಜಿಲ್ಲೆಯ ಹಳ್ಳಿಗಳ ಸುತ್ತಲಿನ ಬಹಳಷ್ಟು ಪ್ರದೇಶಗಳನ್ನು ಲಂಟಾನಾ ಕ್ಯಾಮಾರಾ ಎಂಬ ಆಕ್ರಮಣಕಾರಿ ಪ್ರಭೇದಗಳು ಆಕ್ರಮಿಸಿಕೊಂಡಿವೆ.  "ನಾವು ಇಲ್ಲಿ ಕುರಿ ಮೇಯಿಸಲು ಸಾಧ್ಯವಿಲ್ಲ. ಎಲ್ಲೆಡೆ ಕಳೆ ಗಿಡಗಳಿವೆ" ಎಂದು ಬಸೋಹ್ಲಿ ತಹಸಿಲ್ನ ಸಣ್ಣ ಹಳ್ಳಿಯ ನಿವಾಸಿ ಮುನಬ್ಬರ್ ಅಲಿ ಹೇಳುತ್ತಾರೆ.

ಅನೇಕ ಹಳೆಯ ತಳಿಯ ಪ್ರಾಣಿಗಳನ್ನು ಸರಕಾರ ಬದಲಾಯಿಸಿದೆ ಮತ್ತು ಪ್ರಸ್ತುತ ಮಿಶ್ರತಳಿ ಕುರಿಗಳು ಬಯಲು ಸೀಮೆಯ ಶಾಖವನ್ನು ಹೆಚ್ಚು ಕಾಲ ತಡೆದುಕೊಳ್ಳುವುದಿಲ್ಲ ಮತ್ತು ಪರ್ವತ ಮಾರ್ಗಗಳಲ್ಲಿ ಸಂಚರಿಸಲು ಸಾಧ್ಯವಿಲ್ಲ ಎಂದು ಬಕರ್ವಾಲ್ ಹೇಳುತ್ತಾರೆ, “ನಾವು ಕಾಶ್ಮೀರಕ್ಕೆ ವಲಸೆ ಹೋದಾಗ, ಅವು ಒಂದು ಸಣ್ಣ ಕಟ್ಟು ಕಂಡರೂ ನಿಂತುಬಿಡುತ್ತವೆ. ಅವುಗಳಿಂದ ಸಣ್ಣ ಹಳ್ಳ ದಾಟಲೂ ಸಾಧ್ಯವಿಲ್ಲ. ಹಳೆಯ ತಳಿಯ ಕುರಿಗಳು ಚೆನ್ನಾಗಿ ನಡೆಯುತ್ತಿದ್ದವು” ಎಂದು ಕುರಿಗಾಹಿ ತಾಹಿರ್ ರಜಾ ಹೇಳುತ್ತಾರೆ.

ಪರಿಹಾರ ಅರಣ್ಯೀಕರಣ ಯೋಜನೆಗಳು ಅಥವಾ ಸಂರಕ್ಷಣಾ ಚಟುವಟಿಕೆಗಳಿಗಾಗಿ ಸಶಸ್ತ್ರ ಪಡೆಗಳು ಅಥವಾ ಅರಣ್ಯ ಇಲಾಖೆಗೆ ಸರ್ಕಾರ ಮಂಜೂರು ಮಾಡಿದ ಬೇಲಿಯು ಹುಲ್ಲುಗಾವಲು ಭೂಮಿಗೆ ಪ್ರವೇಶವನ್ನು ನಿರ್ಬಂಧಿಸುತ್ತಿದೆ. ಇದನ್ನೂ ಓದಿ: ಬೇಲಿಯೊಳಗೆ ಸಿಲುಕಿಕೊಂಡಿರುವ ಬಕರ್ವಾಲರ ಬದುಕು

ಬೇಲಿ ಕುರಿತು ಸರ್ಕಾರದ ಭಾಷೆಯನ್ನು ಬಳಸಿ ಸಂಕ್ಷಿಪ್ತವಾಗಿ ಹೇಳುವ ಕುರಿಗಾಹಿಗಳು ಹೇಳುತ್ತಾರೆ, "ಎಲ್ಲೆಡೆ [ನಮಗೆ ಮತ್ತು ನಮ್ಮ ಜಾನುವಾರುಗಳಿಗೆ] ತಡೆ ಹಾಕಲಾಗಿದೆ."

ಪಶುಪಾಲನಾ ಕೇಂದ್ರ ಸ್ವತಂತ್ರ ಪ್ರಯಾಣ ಅನುದಾನದ ಮೂಲಕ ಗ್ರಾಮೀಣ ಮತ್ತು ಅಲೆಮಾರಿ ಸಮುದಾಯಗಳ ಬಗ್ಗೆ ರಿ ತಾ ಯನ್ ಮುಖರ್ಜಿ ವರದಿ ಮಾಡುತ್ತಾರೆ. ಈ ವರದಿಯ ವಿಷಯಗಳ ಮೇಲೆ ಕೇಂದ್ರವು ಯಾವುದೇ ಸಂಪಾದಕೀಯ ನಿಯಂತ್ರಣವನ್ನು ಚಲಾಯಿಸಿಲ್ಲ.

ಅನುವಾದ: ಶಂಕರ. ಎನ್. ಕೆಂಚನೂರು

Ritayan Mukherjee

Ritayan Mukherjee is a Kolkata-based photographer and a PARI Senior Fellow. He is working on a long-term project that documents the lives of pastoral and nomadic communities in India.

Other stories by Ritayan Mukherjee
Ovee Thorat

Ovee Thorat is an independent researcher with an interest in pastoralism and political ecology.

Other stories by Ovee Thorat
Editor : Punam Thakur

Punam Thakur is a Delhi-based freelance journalist with experience in reporting and editing.

Other stories by Punam Thakur
Photo Editor : Binaifer Bharucha

Binaifer Bharucha is a freelance photographer based in Mumbai, and Photo Editor at the People's Archive of Rural India.

Other stories by Binaifer Bharucha
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected]

Other stories by Shankar N. Kenchanuru