ಶಾಂತಿ ದೇವಿ ಅವರು ಕೋವಿಡ್ -19 ನಿಂದ ಸಾವನ್ನಪ್ಪಿದ್ದಾರೆ ಎಂದು ಸಾಬೀತುಪಡಿಸಲು ಮರಣ ಪ್ರಮಾಣಪತ್ರ ಅಥವಾ ಬೇರೆ ಯಾವುದೇ ಮಾರ್ಗಗಳಿಲ್ಲ. ಇನ್ನು ಆಕೆಯ ಸಾವಿನ ಸುತ್ತಲಿನ ಸನ್ನಿವೇಶಗಳನ್ನು ಗಮನಿಸಿದರೆ ಮೇಲೆ, ಬೇರೆ ತೀರ್ಮಾನಕ್ಕೂ ಬರಲಾಗುವುದಿಲ್ಲ.

2021ರ ಏಪ್ರಿಲ್ ತಿಂಗಳಿನಲ್ಲಿ, ಕೋವಿಡ್ -19ರ ಎರಡನೇ ಅಲೆಯು ದೇಶದಾದ್ಯಂತ ಉಲ್ಬಣಗೊಂಡಾಗ 40ರ ಮಧ್ಯ ವಯಸ್ಸಿನದಲ್ಲಿದ್ದ ಶಾಂತಿದೇವಿ ಅನಾರೋಗ್ಯಕ್ಕೆ ಒಳಗಾಗಿದ್ದರು. ರೋಗಲಕ್ಷಣಗಳು ಒಂದರ ನಂತರ ಒಂದರಂತೆ ಕಾಣಿಸಿಕೊಂಡವು: ಮೊದಲು ಕೆಮ್ಮು ಮತ್ತು ಶೀತ ಮತ್ತು ನಂತರ ಮರುದಿನ ಜ್ವರ. “ಗ್ರಾಮದ ಬಹುತೇಕ ಎಲ್ಲರೂ ಏಕಕಾಲಕ್ಕೆ ಅಸ್ವಸ್ಥರಾಗಿದ್ದರು" ಎಂದು ಅವರ 65 ವರ್ಷದ ಅತ್ತೆ ಕಲಾವತಿ ದೇವಿ ಅವರು ಹೇಳುತ್ತಾರೆ."ನಾವು ಅವಳನ್ನು ಮೊದಲು ಜೋಲಾ ಚಾಪ್ ವೈದ್ಯರ ಬಳಿಗೆ ಕರೆದುಕೊಂಡು ಹೋದೆವು.” ಎನ್ನುತ್ತಾರೆ.

ಜೋಲಾ ಚಾಪ್ ಅಥವಾ ವೈದ್ಯಕೀಯ ಸೇವೆಗಳನ್ನು ನೀಡುವ ಗ್ರಾಮೀಣ ವೈದ್ಯರು ಉತ್ತರ ಪ್ರದೇಶದ ಪ್ರತಿಯೊಂದು ಹಳ್ಳಿಯಲ್ಲಿ ಕಂಡುಬರುತ್ತಾರೆ. ಅವರು ಸುಲಭವಾಗಿ ಲಭ್ಯವಿರುವುದರಿಂದ ಮತ್ತು ಸಾರ್ವಜನಿಕ ಆರೋಗ್ಯ ಮೂಲಸೌಕರ್ಯವು ಕಳಪೆಯಾಗಿರುವುದರಿಂದ ಗ್ರಾಮೀಣ ಪ್ರದೇಶದ ಬಹುತೇಕ ಜನರು ಸಾಂಕ್ರಾಮಿಕ ರೋಗದ ನಿವಾರಣೆಗಾಗಿ ಇಂತಹ ವೈದ್ಯರ ಬಳಿ ಹೋಗುತ್ತಾರೆ, "ನಾವೆಲ್ಲರೂ ಹೆದರಿದ್ದರಿಂದ ಯಾರೂ ಆಸ್ಪತ್ರೆಗೆ ಹೋಗಲಿಲ್ಲ. “ನಮ್ಮನ್ನು ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗುತ್ತದೆ ಎಂದು ನಾವು ಹೆದರುತ್ತಿದ್ದೆವು. ಅಲ್ಲದೇ ಸರಕಾರಿ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿದ್ದವು. ಯಾವುದೇ ಹಾಸಿಗೆಗಳು ಲಭ್ಯವಿರಲಿಲ್ಲ. ಆದ್ದರಿಂದ ನಾವು ಜೋಲಾ ಚಾಪ್ ವೈದ್ಯರ ಬಳಿಗೆ ಮಾತ್ರವೇ ಹೋಗಲು ಸಾಧ್ಯ” ಎಂದು ವಾರಣಾಸಿ ಜಿಲ್ಲೆಯ ದಲ್ಲಿಪುರ ಗ್ರಾಮದಲ್ಲಿ ವಾಸಿಸುವ ಕಲಾವತಿ ಹೇಳುತ್ತಾರೆ.

ಆದರೆ ಈ ‘ವೈದ್ಯರು’ ತರಬೇತಿ ಪಡೆಯದವರು, ಅನರ್ಹರು ಮತ್ತು ಗಂಭೀರವಾಗಿ ಅಸ್ವಸ್ಥರಾಗಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಅಸಮರ್ಥರಾಗಿದ್ದಾರೆ.

ಜೋಲಾ ಚಾಪ್ ವೈದ್ಯರನ್ನು ಭೇಟಿ ಮಾಡಿದ ಮೂರು ದಿನಗಳ ನಂತರ, ಶಾಂತಿಗೆ ಉಸಿರಾಟದ ತೊಂದರೆ ಪ್ರಾರಂಭವಾಯಿತು. ಈ ವೇಳೆ ಕಲಾವತಿ, ಶಾಂತಿ ಅವರ ಪತಿ ಮುನೀರ್ ಮತ್ತು ಇತರ ಕುಟುಂಬಸ್ಥರು ಭಯ ಭೀತಿಗೊಂಡರು. ವಾರಣಾಸಿಯ ಪಿಂಡ್ರಾ ಬ್ಲಾಕ್‌ನಲ್ಲಿರುವ ತಮ್ಮ ಗ್ರಾಮದಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಖಾಸಗಿ ಆಸ್ಪತ್ರೆಗೆ ಅವರನ್ನು ಕರೆದುಕೊಂಡು ಹೋದರು. "ಆದರೆ ಆಸ್ಪತ್ರೆಯ ಸಿಬ್ಬಂದಿ ಅವರ ಸ್ಥಿತಿಯನ್ನು ನೋಡಿ ಯಾವುದೇ ಭರವಸೆ ಇಡುವಂತಿಲ್ಲ ಎಂದು ಹೇಳಿದರು. ಹೀಗಾಗಿ ನಂತರ ನಾವು ಮನೆಗೆ ಬಂದು ದೆವ್ವ ಬಿಡಿಸಲು ಮುಂದಾದೆವು ” ಎಂದು ಕಲಾವತಿ ಹೇಳುತ್ತಾರೆ, ಇದು ಸಾಮಾನ್ಯವಾಗಿ ಪೊರಕೆಯಿಂದ ರೋಗವನ್ನು ಓಡಿಸುವ ಪುರಾತನ, ಅವೈಜ್ಞಾನಿಕ ಪದ್ಧತಿಯಾಗಿದೆ.

ಆದರೆ ಇದರಿಂದ ಏನೂ ಪ್ರಯೋಜನವಾಗಲಿಲ್ಲ; ಹಾಗಾಗಿ ಅದೇ ರಾತ್ರಿ ಶಾಂತಿ ಅವರು ಸಾವನ್ನಪ್ಪಿದರು.

Kalavati with her great-grandchildren at home in Dallipur. Her daughter-in-law Shanti died of Covid-like symptoms in April 2021
PHOTO • Parth M.N.

ಕಲಾವತಿ ತನ್ನ ಮೊಮ್ಮಕ್ಕಳೊಂದಿಗೆ ದಳ್ಳಿಪುರದ ಮನೆಯಲ್ಲಿ. ಅವರ ಸೊಸೆ ಶಾಂತಿ ಕೋವಿಡ್ ತರಹದ ರೋಗಲಕ್ಷಣಗಳಿಂದ ಏಪ್ರಿಲ್ 2021ರಲ್ಲಿ ನಿಧನರಾದರು

ಅಕ್ಟೋಬರ್ 2021ರಲ್ಲಿ ಉತ್ತರ ಪ್ರದೇಶದ ಸರ್ಕಾರವು ಕೋವಿಡ್ -19ರಿಂದ  ಸಾವನ್ನಪ್ಪಿದ ವ್ಯಕ್ತಿಗಳ ಕುಟುಂಬಗಳಿಗೆ ಪರಿಹಾರವನ್ನು ಘೋಷಿಸಿತು. ಅಂತಹ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವಂತೆ ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿದ ನಾಲ್ಕು ತಿಂಗಳ ನಂತರ ಈ ಕ್ರಮಬಂದಿತು. ರಾಜ್ಯ ಸರ್ಕಾರವು ಈ  50,000 ರೂ.ಗಳ ಪರಿಹಾರ ಮೊತ್ತವನ್ನು ಪಡೆಯಲು ನಿರ್ದಿಷ್ಟ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತು. ಆದರೆ ಕಲಾವತಿ ದೇವಿ ಈ ಪರಿಹಾರವನ್ನು ಪಡೆಯಲಿಕ್ಕೆ ಯಾವುದೇ ಪ್ರಯತ್ನ ಮಾಡಲಿಲ್ಲ, ಮತ್ತು ಅದಕ್ಕಾಗಿ ಅವರು ಯಾವುದೇ ಪ್ಲಾನ್ ಕೂಡ ಮಾಡಿರಲಿಲ್ಲ.

ಆ ಪರಿಹಾರವನ್ನು ಪಡೆಯಲು, ಶಾಂತಿಯವರ ಕುಟುಂಬವು ಅವರ ಸಾವಿಗೆ ಕೋವಿಡ್ -19 ಕಾರಣ ಎಂದು ಸಾಬೀತುಪಡಿಸುವ ಮರಣ ಪ್ರಮಾಣಪತ್ರವನ್ನು ಒದಗಿಸುವ ಅಗತ್ಯವಿದೆ. ಜೊತೆಗೆ ಕೊರೊನಾ ಧೃಡಪಟ್ಟ 30 ದಿನಗಳಲ್ಲಿ ಸಾವು ಸಂಭವಿಸಿರಬೇಕು ಎಂದು ನಿಯಮಗಳು ಹೇಳುತ್ತವೆ. 30 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದಿರುವ ಆದರೆ ಡಿಸ್ಚಾರ್ಜ್ ಆದ ನಂತರ ಸಾವನ್ನಪ್ಪಿದ ರೋಗಿಗಳನ್ನು ಸೇರಿಸಲು ರಾಜ್ಯ ಸರ್ಕಾರವು 'ಕೋವಿಡ್ ಸಾವಿನ' ವ್ಯಾಪ್ತಿಯನ್ನು ವಿಸ್ತರಿಸಿತು . ಮತ್ತು ಮರಣ ಪ್ರಮಾಣಪತ್ರವು ಕೋವಿಡ್ ಅನ್ನು ಕಾರಣವೆಂದು ನಮೂದಿಸದಿದ್ದರೆ, ಆರ್‌ಟಿ-ಪಿಸಿಆರ್ ಅಥವಾ ಕ್ಷಿಪ್ರ ಪ್ರತಿಜನಕ ಪರೀಕ್ಷೆ ಅಥವಾ ಸೋಂಕನ್ನು ಸಾಬೀತುಪಡಿಸುವ ಪರೀಕ್ಷೆಗಳು ಸಾಕಾಗುತ್ತದೆ. ಆದರೆ ಇದ್ಯಾವುದೂ ಕೂಡ  ಶಾಂತಿಯವರ ಕುಟುಂಬಕ್ಕೆ ನೆರವಾಗುತ್ತಿಲ್ಲ.

ಮರಣ ಪ್ರಮಾಣಪತ್ರ, ಅಥವಾ ಪಾಸಿಟಿವ್ ಪರೀಕ್ಷೆಯ ಫಲಿತಾಂಶ, ಅಥವಾ ಆಸ್ಪತ್ರೆಯ ದಾಖಲಾತಿಯ ಪುರಾವೆ ಇಲ್ಲದೆ, ಶಾಂತಿಯವರ ಪ್ರಕರಣವನ್ನು ಪರಿಗಣಿಸಲಾಗುವುದಿಲ್ಲ.

ಏಪ್ರಿಲ್‌ನಲ್ಲಿ, ಅವರ ಶವವನ್ನು ದಲ್ಲಿಪುರದ ನದಿಯ ಬಳಿಯ ಘಾಟ್‌ನಲ್ಲಿ ಸುಡಲಾಯಿತು."ಶವವನ್ನು ಸುಡಲು ಸಾಕಷ್ಟು ಕಟ್ಟಿಗೆಗಳು ಇರಲಿಲ್ಲ" ಎಂದು ಶಾಂತಿಯ ಮಾವ 70 ವರ್ಷದ ಲುಲ್ಲೂರ್ ಹೇಳುತ್ತಾರೆ.“ಸುಡಲು ಶವಗಳ ಉದ್ದನೆಯ ಸಾಲು ಇತ್ತು. ನಾವು ಶಾಂತಿಯ ಅಂತ್ಯಸಂಸ್ಕಾರಕ್ಕಾಗಿ ಸರದಿಯಲ್ಲಿ ಕಾದು ಹಿಂತಿರುಗಿದೆವು”

Lullur, Shanti's father-in-law, pumping water at the hand pump outside their home
PHOTO • Parth M.N.

ಶಾಂತಿಯವರ ಮಾವ ಲುಲ್ಲೂರು, ತಮ್ಮ ಮನೆಯ ಹೊರಗಿನ ಕೈಪಂಪ್‌ನ ಮೂಲಕ ನೀರನ್ನು ಸೇದುತ್ತಿರುವುದು

ಕೋವಿಡ್-19ರ ಎರಡನೇ ಅಲೆ (ಏಪ್ರಿಲ್ ನಿಂದ ಜುಲೈ 2021) ಮಾರ್ಚ್ 2020ರ ಅಂತ್ಯದಲ್ಲಿ ಪ್ರಾರಂಭವಾದಾಗಿನಿಂದ ಅತಿ ಹೆಚ್ಚು ಸಾವುಗಳನ್ನು ಕಂಡಿದೆ. ಒಂದು ಅಂದಾಜಿನ ಪ್ರಕಾರ, ಜೂನ್ 2020 ಮತ್ತು ಜುಲೈ 2021ರ ನಡುವಿನ 3.2 ಮಿಲಿಯನ್ ಕೋವಿಡ್ ಸಾವುಗಳಲ್ಲಿ, ಏಪ್ರಿಲ್-ಜುಲೈ 2021ರಲ್ಲಿ 2.7 ಮಿಲಿಯನ್ ಸಾವುಗಳು ಸಂಭವಿಸಿದೆ. ಸೈನ್ಸ್ ನಲ್ಲಿ (ಜನವರಿ 2022) ಪ್ರಕಟವಾದ ಅಧ್ಯಯನ ವನ್ನು ಭಾರತ, ಕೆನಡಾ ಮತ್ತು ಅಮೆರಿಕಾದ ಸಂಶೋಧಕರ ತಂಡವು ನಡೆಸಿತು. ಸೆಪ್ಟೆಂಬರ್ 2021ರ ವೇಳೆಗೆ, ಭಾರತದ ಸಂಚಿತ ಕೋವಿಡ್ ಸಾವುಗಳು ಅಧಿಕೃತವಾಗಿ ವರದಿ ಮಾಡಿದ್ದಕ್ಕಿಂತ 6-7 ಪಟ್ಟು ಹೆಚ್ಚಾಗಿದೆ ಎಂದು ವಿಶ್ಲೇಷಣೆಗಳು ತೋರಿಸಿವೆ.

ಭಾರತದ ಅಧಿಕೃತ ಸಾವುಗಳ ಸಂಖ್ಯೆಯ ವರದಿ ಗಣನೀಯವಾಗಿ ಕಡಿಮೆ ಪ್ರಮಾಣದಲ್ಲಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಆದರೆ ಭಾರತ ಸರ್ಕಾರ ಅದನ್ನು ನಿರಾಕರಿಸುತ್ತದೆ .

ಫೆಬ್ರವರಿ 7, 2022ರಂತೆ, ಭಾರತದ ಅಧಿಕೃತ ಕೋವಿಡ್ ಸಾವಿನ ಸಂಖ್ಯೆ 504,062 (ಅಥವಾ 0.5 ಮಿಲಿಯನ್). ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಕಡಿಮೆ ಪ್ರಮಾಣದಲ್ಲಿ ವರದಿಯಾಗಿದೆ, ಆದರೆ ಯುಪಿಯಲ್ಲಿ ಇದು ಅಧಿಕ ಪ್ರಮಾಣದಲ್ಲಿದೆ.

ಆರ್ಟಿಕಲ್ -14 ಡಾಟ್ . ಕಾಂ ( Article-14.com ) ನಲ್ಲಿ ಪ್ರಕಟವಾದ ವರದಿ ಯ ಪ್ರಕಾರ, ಯುಪಿಯ 75 ಜಿಲ್ಲೆಗಳಲ್ಲಿ 24ರಲ್ಲಿನ ಸಾವಿನ ಸಂಖ್ಯೆ, ಒಟ್ಟಾರೆಯಾಗಿ, ಅಧಿಕೃತ ಕೋವಿಡ್ -19 ಸಾವಿನ ಸಂಖ್ಯೆಗಿಂತ 43 ಪಟ್ಟು ಅಧಿಕ ಎಂದು ತಿಳಿದುಬಂದಿದೆ. ವರದಿಯು ಜುಲೈ 1, 2020 ಮತ್ತು ಮಾರ್ಚ್ 31, 2021 ರ ನಡುವೆ ದಾಖಲಾದ ಸಾವುಗಳನ್ನು ಆಧರಿಸಿದೆ. ಬಹುತೇಕ ಎಲ್ಲಾ ಸಾವುಗಳು ಕೋವಿಡ್ -19 ಗೆ ಸಂಬಂಧಿಸದಿದ್ದರೂ, ವರದಿ ಹೇಳುವಂತೆ, “ಸರಾಸರಿಯಾಗಿ ಸಾಮಾನ್ಯ ಸಾವುಗಳು ಮತ್ತು ಒಂದೇ ಪ್ರದೇಶದಲ್ಲಿ ಸಂಭವಿಸುವ ಹೆಚ್ಚಿನ ಸಾವುಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಸಾಂಕ್ರಾಮಿಕ ರೋಗವು ಮಾರ್ಚ್ 2021ರ ಅಂತ್ಯದ ವೇಳೆಗೆ ಉತ್ತರ ಪ್ರದೇಶದ ಅಧಿಕೃತ 4,537 ಕೋವಿಡ್ -19 ಸಾವಿನ ಸಂಖ್ಯೆಯನ್ನು ಪ್ರಶ್ನಿಸುತ್ತದೆ. ಮೇ ತಿಂಗಳಲ್ಲಿ, ಸಾಮೂಹಿಕ ಸಮಾಧಿಗಳ ಚಿತ್ರಣಗಳು ಮತ್ತು ಗಂಗಾ ನದಿಯಲ್ಲಿ ತೇಲುತ್ತಿರುವ ಶವಗಳ ವರದಿಗಳು ಲೆಕ್ಕವಿಲ್ಲದಷ್ಟು ಸಂಭವಿಸಿರುವ ಸಾವುಗಳನ್ನು ಸೂಚಿಸುತ್ತವೆ.

ಆದಾಗ್ಯೂ, ಉತ್ತರ ಪ್ರದೇಶದ ಸರ್ಕಾರವು ಪರಿಹಾರಕ್ಕಾಗಿ ಮಾರ್ಗಸೂಚಿಗಳನ್ನು ಪ್ರಕಟಿಸಿದಾಗ, ಯುಪಿಯಲ್ಲಿನ ಕೋವಿಡ್ ಸಾವುಗಳ ಸಂಖ್ಯೆ 22,898 ಎಂದು ಹೇಳಿಕೊಂಡಿದೆ. ಆದರೆ ಈಗ ತಮ್ಮ ಕುಟುಂಬಕ್ಕೆ ಪರಿಹಾರದ ಅಗತ್ಯವಿರುವ ಶಾಂತಿಯಂತವರು ಇಂತಹ ವ್ಯವಸ್ಥೆಯಲ್ಲಿ ಸಿಲುಕಿಕೊಂಡಿದ್ದಾರೆ.

Shailesh Chaube (left) and his mother Asha. His father Shivpratap died of Covid-19 last April, and the cause of death was determined from his CT scans
PHOTO • Parth M.N.
Shailesh Chaube (left) and his mother Asha. His father Shivpratap died of Covid-19 last April, and the cause of death was determined from his CT scans
PHOTO • Parth M.N.

ಶೈಲೇಶ್ ಚೌಬೆ (ಎಡ) ಮತ್ತು ಅವರ ತಾಯಿ ಆಶಾ. ಅವರ ತಂದೆ ಶಿವ ಪ್ರತಾಪ್ ಕಳೆದ ಏಪ್ರಿಲ್‌ನಲ್ಲಿ ಕೋವಿಡ್ -19 ನಿಂದ ನಿಧನರಾದರು ಮತ್ತು ಅವರ ಸಾವಿನ ಕಾರಣವನ್ನು ಸಿಟಿ ಸ್ಕ್ಯಾನ್‌ ಮೂಲಕ ನಿರ್ಧರಿಸಲಾಯಿತು

ಉತ್ತರಪ್ರದೇಶದ ಮಾಹಿತಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನವನೀತ್ ಸೆಹಗಲ್, ಅಗತ್ಯ ದಾಖಲೆಗಳಿಲ್ಲದೆ ಯಾವುದೇ ಕುಟುಂಬವು ಪರಿಹಾರವನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಪರಿ (PARI) ಗೆ ಹೇಳುತ್ತಾರೆ. "ಸಾಮಾನ್ಯವಾಗಿ ಜನರು ಸಾಯುತ್ತಾರೆ,". ಆದ್ದರಿಂದ ಕುಟುಂಬಗಳು "ಅದು ಕೋವಿಡ್ ಹೌದೋ ಅಥವಾ ಅಲ್ಲವೋ ಎನ್ನುವ ಯಾವುದೇ ಸ್ಪಷ್ಟತೆ ಇಲ್ಲದೆ" ಪರಿಹಾರವನ್ನು ಪಡೆಯಲು ಸಾಧ್ಯವಿಲ್ಲ."ಗ್ರಾಮೀಣ ಪ್ರದೇಶಗಳಲ್ಲಿಯೂ ಪರೀಕ್ಷೆ ನಡೆಯುತ್ತಿದೆ" ಎಂದು ಅವರು ಹೇಳಿದರು.

ಆದರೆ ಇದೆಲ್ಲಾ ಸಂಪೂರ್ಣ ನಿಜವಲ್ಲ, ಏಕೆಂದರೆ ಎರಡನೇ ಕೋವಿಡ್ ಅಲೆಯ ಸಮಯದಲ್ಲಿ ಯುಪಿಯ ಗ್ರಾಮೀಣ ಒಳನಾಡಿನಲ್ಲಿ ಪರೀಕ್ಷಾ ವಿಳಂಬದ ವರದಿಗಳಾಗಿವೆ. ಮೇ 2021ರಲ್ಲಿ, ಅಲಹಾಬಾದ್ ಹೈಕೋರ್ಟ್ ಪರೀಕ್ಷೆಯಲ್ಲಿನ ಕ್ರಮೇಣ ಕಡಿತದ ಬಗ್ಗೆ ಅತೃಪ್ತಿ ಹೊಂದಿತ್ತು ಮತ್ತು ಎರಡನೇ ಅಲೆಯನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸದ ಕಾರಣಕ್ಕಾಗಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಮುಖ್ಯವಾಗಿ ಕಡಿಮೆ ಸಂಖ್ಯೆಯಲ್ಲಿ ಪರೀಕ್ಷೆಗಳನ್ನು ಮಾಡಲು ಟೆಸ್ಟಿಂಗ್ ಕೊರತೆಯೇ ಕಾರಣ ಎನ್ನಲಾಗುತ್ತದೆ, ಪರೀಕ್ಷೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಆಡಳಿತದಿಂದ ರೋಗಶಾಸ್ತ್ರದ ಪ್ರಯೋಗಾಲಯಗಳು ಸ್ವೀಕರಿಸಿರುವ ಆದೇಶಗಳು ಇದರ ಸುಳಿವನ್ನು ನೀಡುತ್ತವೆ.

ನಗರ ಪ್ರದೇಶಗಳಲ್ಲಿಯೂ ಜನರು ಪರೀಕ್ಷಾ ಸೌಲಭ್ಯಗಳನ್ನು ಪಡೆಯಲು ಪರದಾಡುತ್ತಾರೆ. ಏಪ್ರಿಲ್ 15, 2021ರಂದು, ವಾರಣಾಸಿ ನಗರದ 63 ವರ್ಷದ ನಿವಾಸಿ ಶಿವಪ್ರತಾಪ್ ಚೌಬೆ ಅವರು ರೋಗಲಕ್ಷಣಗಳನ್ನು ಹೊಂದಿದ್ದರಿಂದ ಅವರಿಗೆ ಕೋವಿಡ್ -19 ಇರುವುದು ಧೃಡಪಟ್ಟಿತು. ಆದರೆ 11 ದಿನಗಳ ನಂತರ ಲ್ಯಾಬ್ ಅವರ ಮಾದರಿಯನ್ನು ಮತ್ತೊಮ್ಮೆ ಸಂಗ್ರಹಿಸಬೇಕಾಗಿದೆ ಎಂದು ಹೇಳಿತು.

ಆದರೆ ಸಮಸ್ಯೆ ಏನೆಂದರೆ: ಶಿವಪ್ರತಾಪ್ ಮೃತಪಟ್ಟಿದ್ದರು. ಅವರು ಏಪ್ರಿಲ್ 19ರಂದು ನಿಧನರಾದರು.

ಅವರು ಅನಾರೋಗ್ಯದಿಂದ ಬಳಲುತ್ತಿದ್ದಾಗ, ಶಿವಪ್ರತಾಪ್ ಅವರನ್ನು ಮೊದಲು ಒಂದು ಕಿಲೋಮೀಟರ್ ದೂರದಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲಾಯಿತು."ಅಲ್ಲಿ ಹಾಸಿಗೆ ಲಭ್ಯವಿರಲಿಲ್ಲ" ಎಂದು ಅವರ 32 ವರ್ಷದ ಮಗ ಶೈಲೇಶ್ ಚೌಬೆ ಹೇಳುತ್ತಾರೆ."ನಾವು ಒಂದನ್ನು ಪಡೆಯಲು ಒಂಬತ್ತು ಗಂಟೆಗಳ ಕಾಲ ಕಾಯಬೇಕಾಗಿತ್ತು. ಆದರೆ ನಮಗೆ ತಕ್ಷಣವೇ ಆಕ್ಸಿಜನ್ ಬೆಡ್ ಬೇಕಿತ್ತು.”

ಕೊನೆಯಲ್ಲಿ, ಕೆಲವು ಕರೆಗಳನ್ನು ಮಾಡಿದ ನಂತರ, ಶೈಲೇಶ್ ವಾರಣಾಸಿಯಿಂದ ಸುಮಾರು 24 ಕಿಲೋಮೀಟರ್ ದೂರದಲ್ಲಿರುವ ಬಬತ್‌ಪುರ ಗ್ರಾಮದ (ಪಿಂಡ್ರಾ ಬ್ಲಾಕ್) ಖಾಸಗಿ ಆಸ್ಪತ್ರೆಯಲ್ಲಿ ಹಾಸಿಗೆ ಸಿಕ್ಕಿತು."ಆದರೆ ಶಿವಪ್ರತಾಪ್ ಅವರು ಎರಡು ದಿನಗಳ ನಂತರ ಅಲ್ಲಿ ನಿಧನರಾದರು," ಎಂದು ಶೈಲೇಶ್ ಹೇಳುತ್ತಾರೆ.

ಶಿವಪ್ರತಾಪ್ ಅವರ ಸಿಟಿ ಸ್ಕ್ಯಾನ್‌ ಪರೀಕ್ಷೆಗಳ ಆಧಾರದ ಮೇಲೆ ಅವರ ಸಾವಿಗೆ ಕೋವಿಡ್ -19 ಕಾರಣ ಎನ್ನುವುದನ್ನು ಆಸ್ಪತ್ರೆಯ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಲಾಗಿದೆ.ಇದರಿಂದಾಗಿ ಈಗ ಅವರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಸಿಗುತ್ತದೆ.ಶೈಲೇಶ್ ಅವರು ಡಿಸೆಂಬರ್ 2021 ರ ಕೊನೆಯ ವಾರದಲ್ಲಿ ಅರ್ಜಿಯನ್ನು ಸಲ್ಲಿಸಿದರು. ಈ ಮೊತ್ತವು ಅವರು ತಮ್ಮ ತಂದೆಯ ಚಿಕಿತ್ಸೆಗಾಗಿ ಪಾವತಿಸಲು ಎರವಲು ಪಡೆದ ಹಣವನ್ನು ಮರುಪಾವತಿಸಲು ಸಹಾಯವಾಗುತ್ತದೆ. "ನಾವು 25,000 ರೂಪಾಯಿಗಳಿಗೆ ಕಾಳಸಂತೆಯಲ್ಲಿ ರೆಮ್‌ಡೆಸಿವಿರ್ ಇಂಜೆಕ್ಷನ್ ಅನ್ನು ಖರೀದಿಸಬೇಕಾಗಿತ್ತು, ಇದಲ್ಲದೆ, ಪರೀಕ್ಷೆಗಳು, ಆಸ್ಪತ್ರೆಯ ಹಾಸಿಗೆ ಮತ್ತು ಔಷಧಿಗಳ ಬೆಲೆ ಸೇರಿ ಸುಮಾರು 70,000 ರೂಪಾಯಿಗಳಾಗಿತ್ತು. ನಾವು ಕೆಳ ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದೇವೆ ಮತ್ತು ಆದ್ದರಿಂದ ನಮಗೆ ಈ 50,000 ರೂ. ದೊಡ್ಡ ಮೊತ್ತವಾಗಿದೆ.”ಎಂದು ಬ್ಯಾಂಕ್‌ನಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕೆಲಸ ಮಾಡುವ ಶೈಲೇಶ್ ಹೇಳುತ್ತಾರೆ.

Left: Lullur says his son gets  work only once a week these days.
PHOTO • Parth M.N.
Right: It would cost them to get Shanti's death certificate, explains Kalavati
PHOTO • Parth M.N.

ಎಡ: ಲುಲ್ಲೂರ್ ತನ್ನ ಮಗನಿಗೆ ಈ ದಿನಗಳಲ್ಲಿ ವಾರಕ್ಕೊಮ್ಮೆ ಮಾತ್ರ ಕೆಲಸ ಸಿಗುತ್ತದೆ ಎಂದು ಹೇಳುತ್ತಾರೆ. ಬಲ: ಶಾಂತಿಯ ಮರಣ ಪ್ರಮಾಣಪತ್ರವನ್ನು ಪಡೆಯಲು ಅವರು ಹಣವನ್ನು ವ್ಯಯಿಸಬೇಕಾಗುತ್ತದೆ ಎಂದು ಕಲಾವತಿ ಹೇಳುತ್ತಾರೆ

ಮುಸಾಹರ್ ಸಮುದಾಯಕ್ಕೆ ಸೇರಿದ ಶಾಂತಿ ಅವರ ಕುಟುಂಬಕ್ಕೆ, ಈ ಮೊತ್ತವು ಗಣನೀಯಕ್ಕಿಂತಲೂ ಅಧಿಕ ಎಂದು ಹೇಳಬಹುದು. ಬಡ ಮತ್ತು ಹಿಂದುಳಿದಿರುವ ಮುಸಾಹರ್‌ಗಳು ಉತ್ತರ ಪ್ರದೇಶದಲ್ಲಿ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ್ದಾರೆ.ಅವರಿಗೆ ಯಾವುದೇ ಭೂಮಿ ಇಲ್ಲ, ಹಾಗಾಗಿ ಅವರು  ಆದಾಯ ಗಳಿಕೆಗಾಗಿ ಕೂಲಿ ಕೆಲಸವನ್ನು ಅವಲಂಬಿಸಿದ್ದಾರೆ.

ಶಾಂತಿ ಅವರ ಪತಿ, 50 ವರ್ಷದ ಮುನೀರ್, ಕೂಲಿ ಕಾರ್ಮಿಕನಾಗಿದ್ದು, ದಿನಕ್ಕೆ 300 ರೂ.ದಂತೆ ಕಟ್ಟಡ ನಿರ್ಮಾಣದ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಈ 50,000, ರೂ ಸಂಪಾದಿಸಬೇಕೆಂದರೆ 166 ದಿನಗಳವರೆಗೆ (ಅಥವಾ 23 ವಾರಗಳು) ಹೋರಾಡಬೇಕಾಗುತ್ತದೆ. ಸಾಂಕ್ರಾಮಿಕ ರೋಗದಲ್ಲಿ ಮುನೀರ್‌ಗೆ ವಾರಕ್ಕೊಮ್ಮೆ ಮಾತ್ರ ಕೆಲಸ ಸಿಗುತ್ತಿದೆ ಎಂದು ಅವರ ತಂದೆ ಲುಲ್ಲೂರ್ ಹೇಳುತ್ತಾರೆ. ಈ ದರದಲ್ಲಿ, ಆ ಮೊತ್ತವನ್ನು ಗಳಿಸಲು ಅವರಿಗೆ ಮೂರು ವರ್ಷಗಳಿಗೂ ಅಧಿಕ ಸಮಯ ಹಿಡಿಯುತ್ತದೆ.

ಮುನೀರ್‌ರಂತಹ  ಕಾರ್ಮಿಕರಿಗೆ, ಆರ್ಥಿಕ ವರ್ಷದಲ್ಲಿ 100 ದಿನಗಳ ಕೆಲಸ ನೀಡುವ ಭರವಸೆ ನೀಡುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (MGNREGA) ಅಡಿಯಲ್ಲಿ ಸಾಕಷ್ಟು ಕೆಲಸ ಲಭ್ಯವಿಲ್ಲ. ಫೆಬ್ರವರಿ 9 ರ ಹೊತ್ತಿಗೆ, ಯುಪಿಯಲ್ಲಿ ಸುಮಾರು 87.5 ಲಕ್ಷ ಕುಟುಂಬಗಳು ಪ್ರಸಕ್ತ ಹಣಕಾಸು ವರ್ಷದಲ್ಲಿ (2021-22) ಯೋಜನೆಯಡಿಯಲ್ಲಿ ಕೆಲಸ ಮಾಡಲು ಬಯಸಿವೆ. ಆದರೆ ಇದುವರೆಗೆ 75.4 ಲಕ್ಷ ಕುಟುಂಬಗಳಿಗೆ ಮಾತ್ರ ಉದ್ಯೋಗ ಒದಗಿಸಲು ಸಾಧ್ಯವಾಗಿದೆ, ಆದರೆ ಅದರಲ್ಲಿ ಕೇವಲ 384,153 ಕುಟುಂಬಗಳು - ಅಂದರೆ ಶೇ 5ರಷ್ಟು ಕುಟುಂಬಗಳು ಮಾತ್ರ 100 ದಿನಗಳ ಕೆಲಸವನ್ನು ಪೂರ್ಣಗೊಳಿಸಿವೆ.

ಕೆಲಸವು ನಿಯಮಿತವಾಗಿ ಅಥವಾ ಸ್ಥಿರವಾಗಿ ಲಭ್ಯವಿಲ್ಲ ಎಂದು ವಾರಣಾಸಿ ಮೂಲದ ಪೀಪಲ್ಸ್ ವಿಜಿಲೆನ್ಸ್ ಕಮಿಟಿ ಆನ್ ಹ್ಯುಮನ್ ರೈಟ್ಸ್ (People’s Vigilance Committee on Human Rights) ಸಂಸ್ಥೆಯ ಜೊತೆಗೆ ಗುರುತಿಸಿಕೊಂಡಿರುವ 42 ವರ್ಷದ ಕಾರ್ಯಕರ್ತೆ ಮಂಗಳಾ ರಾಜ್‌ಭರ್ ಹೇಳುತ್ತಾರೆ. "ಕೆಲಸವು ವಿರಳ ಮತ್ತು ತಾತ್ಕಾಲಿಕವಾಗಿರುತ್ತದೆ, ಮತ್ತು ಕಾರ್ಮಿಕರಿಗೆ ಅದನ್ನು ಹಂತ ಹಂತಗಳಲ್ಲಿ ಮಾಡಲು ಒತ್ತಾಯಿಸಲಾಗುತ್ತದೆ." ಯೋಜನೆಯಡಿಯಲ್ಲಿ ನಿರಂತರ ಕೆಲಸವನ್ನು ಒದಗಿಸಲು ರಾಜ್ಯದಿಂದ ಯಾವುದೇ ಯೋಜನೆ ಇಲ್ಲ ಎಂದು ರಾಜ್‌ಭರ್ ಹೇಳುತ್ತಾರೆ.

ಪ್ರತಿದಿನ ಬೆಳಿಗ್ಗೆ, ಶಾಂತಿ ಮತ್ತು ಮುನೀರ್ ಅವರ ನಾಲ್ವರು ಪುತ್ರರು, ಅವರೆಲ್ಲರೂ 20 ರ ಹರೆಯದವರಾಗಿದ್ದು, ಕೆಲಸ ಹುಡುಕಲು ಹೋಗುತ್ತಾರೆ. ಆದರೆ ಆಗಾಗ ಬರಿಗೈಯಲ್ಲಿ ಹಿಂದಿರುಗುತ್ತಾರೆ ಎಂದು ಕಲಾವತಿ ಹೇಳುತ್ತಾರೆ."ಯಾರೂ ಯಾವುದೇ ಕೆಲಸವನ್ನು ಪಡೆಯಲು ಸಾಧ್ಯವಿಲ್ಲ" ಎಂದು ಅವರು ಹೇಳುತ್ತಾರೆ. ಕೋವಿಡ್ -19 ಆರಂಭವಾದಾಗಿನಿಂದ, ಮನೆಯವರು ಕೆಲವು ಬಾರಿ ಹಸಿವಿನಿಂದ ಇರಬೇಕಾಯಿತು. ಇಂತಹ ಸಂದರ್ಭದಲ್ಲಿ ಸರಕಾರದಿಂದ ಸಿಗುವ ಉಚಿತ ರೇಶನ್ ನಿಂದಾಗಿ ಬದುಕಿದ್ದೇವೆ. ಆದರೆ ಇದು ಇಡೀ ತಿಂಗಳು ಉಳಿಯುವುದಿಲ್ಲ."ಎಂದು ಕಲಾವತಿ ಹೇಳುತ್ತಾರೆ.

“ಶಾಂತಿಯವರ ಮರಣ ಪ್ರಮಾಣ ಪತ್ರವನ್ನು ಪಡೆಯಲು ನಮಗೆ 200 ಅಥವಾ 300 ರೂಪಾಯಿ ವೆಚ್ಚವಾಗುತ್ತಿತ್ತು.ನಮ್ಮ ಪರಿಸ್ಥಿತಿಯನ್ನು ವಿವರಿಸಲು ನಾವು ಹಲವಾರು ಜನರನ್ನು ಭೇಟಿ ಮಾಡಬೇಕಾಗಿತ್ತು. ಆದರೆ ಜನರು ನಮ್ಮೊಂದಿಗೆ ಸರಿಯಾಗಿ ಮಾತನಾಡುತ್ತಿರಲಿಲ್ಲ” ಎಂದು ಕಲಾವತಿ ತಮ್ಮ ಸಂಕಷ್ಟವನ್ನು ವಿವರಿಸುತ್ತಿದ್ದರು.“ಆದರೆ ಪರಿಹಾರ ದೊರಕಿದ್ದರೆ ನಿಜಕ್ಕೂ ಉಪಯೋಗಕ್ಕೆ ಬರುತ್ತಿತ್ತು” ಎಂದು ಅವರು ಹೇಳುತ್ತಾರೆ.

ಪಾರ್ಥ್ ಎಂ . ಎನ್ . ಅವರು ಠಾಕೂರ್ ಕುಟುಂಬದ ಪ್ರತಿಷ್ಠಾನದಿಂದ ಸ್ವತಂತ್ರ ಪತ್ರಿಕೋದ್ಯಮಕ್ಕಾಗಿ ನೀಡುವ ಅನುದಾನದ ಮೂಲಕ ಸಾರ್ವಜನಿಕ ಆರೋಗ್ಯ ಮತ್ತು ನಾಗರಿಕ ಸ್ವಾತಂತ್ರ್ಯಗಳ ವಿಷಯಗಳ ಕುರಿತಾಗಿ ವರದಿ ಮಾಡುತ್ತಾರೆ . ಠಾಕೂರ್ ಕುಟುಂಬದ ಪ್ರತಿಷ್ಠಾನವು ವರದಿಯ ವಿಷಯಗಳ ಮೇಲೆ ಯಾವುದೇ ಸಂಪಾದಕೀಯ ನಿಯಂತ್ರಣವನ್ನು ಹೊಂದಿಲ್ಲ .

ಅನುವಾದ: ಎನ್ . ಮಂಜುನಾಥ್

Parth M.N.

Parth M.N. is a 2017 PARI Fellow and an independent journalist reporting for various news websites. He loves cricket and travelling.

Other stories by Parth M.N.
Translator : N. Manjunath