ಜುಲೈ 2021ರಲ್ಲಿ ಪ್ರವಾಹದ ನೀರು ನುಗ್ಗಿದ ಸಂದರ್ಭದಲ್ಲಿ ಶುಭಾಂಗಿ ಕಾಂಬ್ಳೆಯವರು ಮನೆಯಲ್ಲಿದ್ದ ವಸ್ತುಗಳನ್ನೆಲ್ಲ ಅಲ್ಲೇ ಬಿಟ್ಟು ಹೊರಗೆ ಓಡಿದರು, ಆದರೆ ಹಾಗೆ ಆತುರದಲ್ಲಿ ಜೀವ ಉಳಿಸಿಕೊಳ್ಳಲು ಓಡುವ ಸಂದರ್ಭದಲ್ಲೂ ಅವರು ಆ ಎರಡು ನೋಟ್‌ ಪುಸ್ತಗಳನ್ನು ಎತ್ತಿಕೊಳ್ಳಲು ಮರೆಯಲಿಲ್ಲ.

ತಲಾ 172 ಪುಟಗಳ ಈ ಎರಡು ಪುಸ್ತಕಗಳು, ಮುಂದಿನ ವಾರಗಳು ಮತ್ತು ತಿಂಗಳುಗಳಲ್ಲಿ ಅವರಿಗೆ ಅನೇಕ ಜೀವಗಳನ್ನು ಉಳಿಸಲು ಸಹಾಯ ಮಾಡುತ್ತವೆ.

ಏಕೆಂದರೆ ಅದು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿರುವ ಅವರ ಗ್ರಾಮ ಅರ್ಜುನವಾಡ್ ಈಗಾಗಲೇ ಮತ್ತೊಂದು ವಿಪತ್ತನ್ನು ಎದುರಿಸುತ್ತಿದ್ದ ಸಮಯವಾಗಿತ್ತು - ಕೋವಿಡ್ -19 ಪ್ರಕರಣಗಳಲ್ಲಿ ತ್ವರಿತ ಏರಿಕೆ ಆ ಸಮಯದಲ್ಲಿ ಕಂಡುಬಂದಿತ್ತು. ಶುಭಾಂಗಿಯವರ ಬಳಿಯಿದ್ದ ಪುಸ್ತಕಗಳ ಪುಟಗಳಲ್ಲಿ ಸಂಪರ್ಕ ಸಂಖ್ಯೆಗಳು, ವಿಳಾಸ, ಕುಟುಂಬದ ಇತರ ಸದಸ್ಯರ ವಿವರಗಳು, ಅವರ ವೈದ್ಯಕೀಯ ಇತಿಹಾಸ, ಆರೋಗ್ಯ ದಾಖಲೆಗಳು ಮತ್ತು ಇತ್ಯಾದಿಗಳನ್ನು ಒಳಗೊಂಡಂತೆ ಗ್ರಾಮದಲ್ಲಿನ ಕೊರೋನಾ ವೈರಸ್ ಪ್ರಕರಣಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಅಚ್ಚುಕಟ್ಟಾಗಿ ಬರೆಯಲಾಗಿತ್ತು.

"ಕೋವಿಡ್ ವರದಿಗಳು [ಗ್ರಾಮದಲ್ಲಿ ನಡೆಸಲಾದ ಆರ್ಟಿ-ಪಿಸಿಆರ್ ಪರೀಕ್ಷೆಗಳ] ಮೊದಲು ನನಗೆ ಬರುತ್ತವೆ," ಎಂದು 2005ರ ಭಾರತದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ಅಡಿಯಲ್ಲಿ ನೇಮಕಗೊಂಡ ಒಂದು ಮಿಲಿಯನ್ ಮಹಿಳಾ ಸಮುದಾಯ ಆರೋಗ್ಯ ಕಾರ್ಯಕರ್ತರಲ್ಲಿ ಒಬ್ಬರಾದ 33 ವರ್ಷದ ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆ (ಆಶಾ) ಹೇಳುತ್ತಾರೆ. ಅವರ ನೋಟ್‌ ಪುಸ್ತಕಗಳು ಶಿರೋಲ್ ತಾಲ್ಲೂಕಿನ ಪ್ರವಾಹ ಪರಿಹಾರ ಶಿಬಿರಕ್ಕೆ ಸ್ಥಳಾಂತರಿಸಲಾದ ಕೋವಿಡ್-ಪಾಸಿಟಿವ್ ಆಗಿದ್ದ ಗ್ರಾಮಸ್ಥರೋರ್ವರನ್ನು ಪತ್ತೆಹಚ್ಚಲು ಸಹಾಯ ಮಾಡಿದವು. ಆ ವ್ಯಕ್ತಿ ಕನಿಷ್ಠ 5,000 ಇತರ ಜನರನ್ನು ವೈರಸ್‌ ಸೋಂಕಿಗೆ ಈಡು ಮಾಡುವ ಸಾಧ್ಯತೆಯಿತ್ತು.

“ಪ್ರವಾಹದಿಂದಾಗಿ ಅನೇಕ ಜನರ ಫೋನುಗಳು ಸ್ವಿಚ್‌ ಆಫ್‌ ಆಗಿವೆ ಅಥವಾ ನೆಟ್‌ವರ್ಕ್‌ ಕ್ಷೇತ್ರದಿಂದ ಹೊರಗಿವೆ,” ಎಂದು ಅವರು ಹೇಳುತ್ತಾರೆ. 15 ಕಿಲೋಮೀಟರ್ ದೂರದ ತೇರ್ವಾಡ್ ಎನ್ನುವಲ್ಲಿರುವ ತನ್ನ ತಾಯಿಯ ಮನೆಗೆ ಸ್ಥಳಾಂತರಗೊಂಡ ಶುಭಾಂಗಿ, ತಕ್ಷಣವೇ ತನ್ನ ಕೈಬರಹದ ದಾಖಲೆಗಳನ್ನು ಹುಡುಕಿ ಶಿಬಿರದಲ್ಲಿದ್ದ ಇತರ ಕೆಲವರ ಫೋನ್ ಸಂಖ್ಯೆಗಳನ್ನು ಕಂಡುಕೊಂಡರು. "ನಾನು ಹೇಗೋ ಆ ರೋಗಿಯನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾದೆ."

A house in Arjunwad village that was destroyed by the floods in 2019
PHOTO • Sanket Jain

2019 ರಲ್ಲಿ ಪ್ರವಾಹದಿಂದ ನಾಶವಾದ ಅರ್ಜುನವಾಡ್ ಗ್ರಾಮದ ಮನೆ

An ASHA worker examining the damage in the public health sub-centre in Kolhapur's Bhendavade village, which was ravaged by the floods in 2021
PHOTO • Sanket Jain
Medical supplies destroyed in the deluge
PHOTO • Sanket Jain

ಎಡ: 2021ರಲ್ಲಿ ಪ್ರವಾಹದಿಂದ ಹಾನಿಗೀಡಾದ ಕೊಲ್ಹಾಪುರದ ಭೆಂಡವಾಡೆ ಗ್ರಾಮದ ಸಾರ್ವಜನಿಕ ಆರೋಗ್ಯ ಉಪ ಕೇಂದ್ರದಲ್ಲಿನ ಹಾನಿಯನ್ನು ಆಶಾ ಕಾರ್ಯಕರ್ತೆಯೊಬ್ಬರು ಪರಿಶೀಲಿಸುತ್ತಿದ್ದಾರೆ. ಬಲ: ಜಲಪ್ರಳಯದಲ್ಲಿ ವೈದ್ಯಕೀಯ ಸಾಮಗ್ರಿಗಳು ನಾಶವಾಗಿವೆ

ಅವರು ಹತ್ತಿರದ ಆಗರ್ ಗ್ರಾಮದಲ್ಲಿ ಸ್ಥಾಪಿಸಲಾದ ಕೋವಿಡ್ ಕೇಂದ್ರದಲ್ಲಿ ಹಾಸಿಗೆಯನ್ನು ವ್ಯವಸ್ಥೆ ಮಾಡಿದರು ಮತ್ತು ರೋಗಿಯನ್ನು ತ್ವರಿತವಾಗಿ ಅಲ್ಲಿಗೆ ಸ್ಥಳಾಂತರಿಸಲಾಯಿತು. "ನಾನು ನೋಟ್ಬುಕ್ ತೆಗೆದುಕೊಳ್ಳದೆ ಹೋಗಿದ್ದರೆ, ಸಾವಿರಾರು ಜನರು ಸೋಂಕಿಗೆ ಒಳಗಾಗುತ್ತಿದ್ದರು," ಎಂದು ಅವರು ಹೇಳುತ್ತಾರೆ.

ಶುಭಾಂಗಿ ತನ್ನ ಹಳ್ಳಿಗೆ ಎರಗಬಹುದಾಗಿದ್ದ ದೊಡ್ಡ ಬಿಕ್ಕಟ್ಟನ್ನು ತಪ್ಪಿಸಿದ್ದು ಅಥವಾ ತನ್ನ ಕರ್ತವ್ಯಕ್ಕೆ ಜೀವಕ್ಕಿಂತಲೂ ಹೆಚ್ಚು ಬೆಲೆ ನೀಡಿದ್ದು ಇದೇ ಮೊದಲಲ್ಲ. 2019ರ ಪ್ರವಾಹದ ನಂತರ (ಆಗಸ್ಟ್), ಅವರು ತನ್ನ ಹಾನಿಗೀಡಾದ ಮಣ್ಣಿನ ಮನೆಯನ್ನು ನೋಡುವುದಕ್ಕೂ ಮೊದಲೇ ಅವರು ಕರ್ತವ್ಯಕ್ಕೆ ಹಾಜರಾಗಿದ್ದರು. "ಗ್ರಾಮ ಪಂಚಾಯತ್ ಆದೇಶದಂತೆ ಇಡೀ ಗ್ರಾಮದ ಹಾನಿಯನ್ನು ಸಮೀಕ್ಷೆ ಮಾಡುವಲ್ಲಿ ನಾನು ನಿರತಳಾಗಿದ್ದೆ," ಎಂದು ಅವರು ಹೇಳುತ್ತಾರೆ.

ಅದರ ನಂತರ ಮೂರು ತಿಂಗಳಿಗೂ ಹೆಚ್ಚು ಕಾಲ, ಅವರು ಪ್ರವಾಹದಿಂದ ಪಾರಾದವರೊಂದಿಗೆ ಮಾತನಾಡುತ್ತಾ ಹಳ್ಳಿಯ ಎಲ್ಲೆಡೆ ತಿರುಗಾಡಿದರು ಮತ್ತು ಎಲ್ಲೆಡೆ ವಿನಾಶವನ್ನು ನೋಡಿದರು. ಹಳ್ಳಿಯಲ್ಲಿ ನೋಡಿದ ಮತ್ತು ಕೇಳಿದ ಸಂಗತಿಗಳು ಅವರನ್ನು ಅಪಾರವಾಗಿ ಕಾಡಿದವು; ಸಮೀಕ್ಷೆ ನಡೆಸಿದ 1,100 ಕ್ಕೂ ಹೆಚ್ಚು ಕುಟುಂಬಗಳು ಅನುಭವಿಸಿದ ನಷ್ಟವನ್ನು ಗಮನಿಸುವಾಗ ಅವರು ಆತಂಕ ಮತ್ತು ಒತ್ತಡವನ್ನು ಅನುಭವಿಸಲು ಪ್ರಾರಂಭಿಸಿದರು.

"ನಾನು ನನ್ನ ಮಾನಸಿಕ ಆರೋಗ್ಯವನ್ನು ನಿರ್ಲಕ್ಷಿಸುತ್ತಿದ್ದೆ" ಎಂದು ಅವರು ಹೇಳುತ್ತಾರೆ. "ಆದರೆ ನನಗೆ ಬೇರೆ ಯಾವ ಆಯ್ಕೆ ಇತ್ತು?"

ಆ ವರ್ಷ ಪ್ರವಾಹದಿಂದ ಉಂಟಾದ ಆಘಾತದಿಂದ ಅವರು ಚೇತರಿಸಿಕೊಳ್ಳುವ ಮೊದಲೇ, ಅವರು 2020ರಲ್ಲಿ ಕೋವಿಡ್ ಪರಿಹಾರದಲ್ಲಿ ಮುಂಚೂಣಿಯಲ್ಲಿದ್ದರು. ಮತ್ತು ಸಾಂಕ್ರಾಮಿಕ ಪಿಡುಗು ಉಲ್ಬಣಗೊಳ್ಳುತ್ತಿದ್ದರೂ, ಅವರು ಜುಲೈ 2021ರಲ್ಲಿ ಪ್ರವಾಹ ಪೀಡಿತರಿಗೆ ಸಹಾಯ ಮಾಡಲು ಮರಳಿದರು. "ಪ್ರವಾಹಗಳು ಮತ್ತು ಕೋವಿಡ್ ಒಟ್ಟಿಗೆ ನಾವು ಊಹಿಸಿದ್ದಕ್ಕಿಂತ ದೊಡ್ಡ ದುರಂತವನ್ನು ತಂದೊಡ್ಡಿದವು," ಎಂದು ಶುಭಾಂಗಿ ಹೇಳುತ್ತಾರೆ.

ಅವರ ಸ್ವಂತ ಮಾನಸಿಕ ಆರೋಗ್ಯದ ನಿರಂತರ ನಿರ್ಲಕ್ಷ್ಯವು ಅಂತಿಮವಾಗಿ ವಿವಿಧ ರೀತಿಯಲ್ಲಿ ಪ್ರಕಟಗೊಳ್ಳಲು ಪ್ರಾರಂಭಿಸಿತು.

ಏಪ್ರಿಲ್ 2022ರಲ್ಲಿ, ಅವರು ನ್ಯುಮೋನಿಯಾ ಮತ್ತು ಮಧ್ಯಮ ಪ್ರಮಾಣದ ರಕ್ತಹೀನತೆಯಿಂದ ಬಳಲುತ್ತಿದ್ದರು. "ನಾನು ಎಂಟು ದಿನಗಳಿಂದ ಜ್ವರದಿಂದ ಬಳಲುತ್ತಿದ್ದೆ, ಆದರೆ, ಕೆಲಸದ ಕಾರಣದಿಂದಾಗಿ, ರೋಗಲಕ್ಷಣಗಳನ್ನು ನಿರ್ಲಕ್ಷಿಸುತ್ತಲೇ ಇದ್ದೆ," ಎಂದು ಅವರು ಹೇಳುತ್ತಾರೆ. ಅವರ ಹಿಮೋಗ್ಲೋಬಿನ್ ಮಟ್ಟ 7.9 ಕ್ಕೆ ಇಳಿಯಿತು, ಇದು ಮಹಿಳೆಯರಿಗೆ (ಪ್ರತಿ ಡೆಸಿಲಿಟರ್ ರಕ್ತಕ್ಕೆ 12-16 ಗ್ರಾಂ) ಇರಬೇಕಾದ ಸಾಮಾನ್ಯ ಮಟ್ಟಕ್ಕಿಂತ ತುಂಬಾ ಕಡಿಮೆಯಾಗಿದೆ, ಮತ್ತು ಅವರನ್ನು ಇದಕ್ಕಾಗಿ ಆಸ್ಪತ್ರೆಗೆ ದಾಖಲಿಸಬೇಕಾಯಿತು.

ASHA worker Shubhangi Kamble’s X-ray report. In April 2022, she was diagnosed with pneumonia and also moderate anaemia
PHOTO • Sanket Jain
Shubhangi walking to a remote part of Arjunwad village to conduct health care surveys. ASHAs like her deal with rains, heat waves and floods without any aids
PHOTO • Sanket Jain

ಎಡ: ಆಶಾ ಕಾರ್ಯಕರ್ತೆ ಶುಭಾಂಗಿ ಕಾಂಬಳೆ ಅವರ ಎಕ್ಸ್-ರೇ ವರದಿ. ಏಪ್ರಿಲ್ 2022ರಲ್ಲಿ, ಅವರು ನ್ಯುಮೋನಿಯಾ ಮತ್ತು ಮಧ್ಯಮ ಮಟ್ಟದ ರಕ್ತಹೀನತೆಯಿಂದ ಬಳಲುತ್ತಿದ್ದರು. ಬಲ: ಆರೋಗ್ಯ ಆರೈಕೆ ಸಮೀಕ್ಷೆಗಳನ್ನು ನಡೆಸಲು ಶುಭಾಂಗಿ ಅರ್ಜುನವಾಡ ಗ್ರಾಮದ ದೂರದ ಭಾಗಕ್ಕೆ ನಡೆದುಕೊಂಡು ಹೋಗುವುದು. ಅವರಂತಹ ಆಶಾ ಕಾರ್ಯಕರ್ತೆಯರು ಮಳೆ, ಬಿಸಿ ಗಾಳಿ ಮತ್ತು ಪ್ರವಾಹಗಳನ್ನು ಯಾವುದೇ ಸಹಾಯವಿಲ್ಲದೆ ನಿಭಾಯಿಸುತ್ತಾರೆ

ಎರಡು ತಿಂಗಳ ನಂತರ, ಅವರು ಚೇತರಿಸಿಕೊಳ್ಳುತ್ತಿದ್ದಂತೆ, ಅವರ ಗ್ರಾಮವು ಭಾರಿ ಮಳೆಗೆ ಸಾಕ್ಷಿಯಾಯಿತು - ಮತ್ತು ಶುಭಾಂಗಿ ಮತ್ತೊಮ್ಮೆ ನೀರಿನ ಮಟ್ಟದಲ್ಲಿ ತ್ವರಿತ ಏರಿಕೆಯನ್ನು ನೋಡಿ ಒತ್ತಡವನ್ನು ಅನುಭವಿಸಲು ಪ್ರಾರಂಭಿಸಿದರು. "ಒಮ್ಮೆ, ನಾವು ಮಳೆಗಾಗಿ ಕಾತುರದಿಂದ ಕಾಯುತ್ತಿದ್ದೆವು, ಆದರೆ ಈಗ ಪ್ರತಿ ಮಳೆಯೊಂದಿಗೂ ನಾವು ಮತ್ತೊಂದು ಪ್ರವಾಹದ ಭೀತಿಯನ್ನು ಎದುರಿಸುತ್ತೇವೆ," ಎಂದು ಅವರು ಹೇಳುತ್ತಾರೆ. "ಈ ವರ್ಷ ಆಗಸ್ಟ್ ತಿಂಗಳಿನಲ್ಲಿ, ನೀರು ಎಷ್ಟು ವೇಗವಾಗಿ ಏರುತ್ತಿತ್ತೆಂದರೆ, ನನಗೆ ಹಲವಾರು ದಿನಗಳವರೆಗೆ ನಿದ್ರೆ ಮಾಡಲು ಸಾಧ್ಯವಾಗಲಿಲ್ಲ." [ಇದನ್ನೂ ಓದಿ: ಆತಂಕದ ಮಡುವಿನಲ್ಲಿ ಕೊಲ್ಲಾಪುರದ ಕ್ರೀಡಾಪಟುಗಳು ]

ನಿರಂತರ ಚಿಕಿತ್ಸೆಯ ಹೊರತಾಗಿಯೂ, ಶುಭಾಂಗಿಯವೆ ಹಿಮೋಗ್ಲೋಬಿನ್ ಮಟ್ಟವು ಕಡಿಮೆಯಿದೆ; ತಲೆತಿರುಗುವಿಕೆ ಮತ್ತು ಆಯಾಸವೂ ಇರುವುದಾಗಿ ಹೇಳುತ್ತಾರೆ. ಆದರೆ ಸದ್ಯಕ್ಕಂತೂ ಅವರಿಗೆ ವಿಶ್ರಾಂತಿಯಾಗಿ ಆರಾಮವಾಗಲಿ ಕಾಣುತ್ತಿಲ್ಲ. "ಆಶಾ ಕಾರ್ಯಕರ್ತೆಯರಾಗಿ, ನಾವು ಸ್ವತಃ ಸೋತು ಸುಣ್ಣವಾದಗಲೂ ಬೆಂಬಲ ವ್ಯವಸ್ಥೆಯಾಗಿ ನಿಲ್ಲಬೇಕಿರುತ್ತದೆ," ಎಂದು ಅವರು ಹೇಳುತ್ತಾರೆ.

*****

ಶಿರೋಲ್‌ ಎನ್ನುವ ಊರಿನ ಗಣೇಶವಾಡಿ ಗ್ರಾಮದ ಆಶಾ ಕಾರ್ಯಕರ್ತೆ ಛಾಯಾ ಕಾಂಬ್ಳೆ (38) 2021ರ ಪ್ರವಾಹವನ್ನು ಬಹಳ ವಿವರವಾಗಿ ನೆನಪಿಸಿಕೊಳ್ಳುತ್ತಾರೆ. "ನಮ್ಮ ಪಾರು ಮಾಡಲೆಂದು ಬಂದ ದೋಣಿ ನಮ್ಮ ಮನೆಯ ಮೇಲೆ ಚಲಿಸುತ್ತಿತ್ತು," ಎಂದು ಅವರು ಹೇಳುತ್ತಾರೆ.

ಶುಭಾಂಗಿಯವರಂತೆಯೇ, ಛಾಯಾ ಕೂಡ ನೀರು ಕಡಿಮೆಯಾಗಲು ಪ್ರಾರಂಭಿಸಿದ ಕೂಡಲೇ ಕೆಲಸಕ್ಕೆ ಮರಳಿದರು; ಅವರ ಮನೆಯ ದುರಾವಸ್ಥೆ ಹಾಗೆಯೇ ಇತ್ತು. "ನಾವೆಲ್ಲರೂ [ಗಣೇಶವಾಡಿಯ ಆರು ಆಶಾ ಕಾರ್ಯಕರ್ತರು] ಮೊದಲು ಉಪ-ಕೇಂದ್ರಕ್ಕೆ ಹೋದೆವು," ಎಂದು ಅವರು ಹೇಳುತ್ತಾರೆ. ಪ್ರವಾಹವು ಕಟ್ಟಡವನ್ನು ಹಾನಿಗೊಳಿಸಿದ್ದರಿಂದ, ಅವರು ನಿವಾಸಿಯೊಬ್ಬರ ಮನೆಯಲ್ಲಿ ತಾತ್ಕಾಲಿಕ ಉಪ-ಕೇಂದ್ರವನ್ನು ರಚಿಸಿದ್ದರು.

"ಪ್ರತಿದಿನ, ನ್ಯುಮೋನಿಯಾ, ಕಾಲರಾ, ಟೈಫಾಯಿಡ್, ಚರ್ಮದ ಕಾಯಿಲೆಗಳು, ಜ್ವರ ಮತ್ತು ಹೆಚ್ಚಿನವುಗಳಿಂದ ಬಾಧಿತರಾದ ಹಲವಾರು ಜನರು [ಉಪ-ಕೇಂದ್ರಕ್ಕೆ] ಬರುತ್ತಿದ್ದರು." ಈ ಕರ್ತವ್ಯವು ಒಂದು ದಿನವೂ ರಜೆಯಿಲ್ಲದೆ ಇಡೀ ತಿಂಗಳು ಮುಂದುವರಿಯಿತು.

Chhaya Kamble (right) conducting a health survey in Ganeshwadi village
PHOTO • Sanket Jain

ಛಾಯಾ ಕಾಂಬ್ಳೆ (ಬಲಗಡೆ) ಗಣೇಶವಾಡಿ ಗ್ರಾಮದಲ್ಲಿ ಆರೋಗ್ಯ ಸಮೀಕ್ಷೆ ನಡೆಸುತ್ತಿದ್ದಾರೆ

Chhaya says the changes in climate and the recurring floods have affected her mental health
PHOTO • Sanket Jain
PHOTO • Sanket Jain

ಎಡ: ಹವಾಮಾನದಲ್ಲಿನ ಬದಲಾವಣೆಗಳು ಮತ್ತು ಪುನರಾವರ್ತಿತ ಪ್ರವಾಹಗಳು ತನ್ನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿವೆ ಎಂದು ಛಾಯಾ ಹೇಳುತ್ತಾರೆ. ಬಲ: ಇಲ್ಲಿ ಅವರು ಸಮೀಕ್ಷೆ ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ

"ಎಲ್ಲರೂ ಕಣ್ಣೀರು ಹಾಕುವುದನ್ನು ನೋಡುವುದು ನಿಮ್ಮ ಮೇಲೆ ಪರಿಣಾಮ ಬೀರುತ್ತದೆ," ಎಂದು ಛಾಯಾ ಹೇಳುತ್ತಾರೆ. "ದುರದೃಷ್ಟವಶಾತ್, ನಮಗೆ ಯಾವುದೇ ಮಾನಸಿಕ ಆರೋಗ್ಯ ರಕ್ಷಣಾ ಸೌಲಭ್ಯ ಲಭ್ಯವಿಲ್ಲ. ಹೀಗಿರುವಾಗ, ನಾವು ಹೇಗೆ ಗುಣಮುಖರಾಗುತ್ತೇವೆ?" ಅವರೂ ಗುಣಮುಖರಾಗಲಿಲ್ಲ.

ಒತ್ತಡದ ಮಟ್ಟವು ಏರುತ್ತಲೇ ಹೋಯಿತು ಮತ್ತು ಅವರು ಕೆಲವೇ ದಿನಗಳಲ್ಲಿ ಉಸಿರಾಟದ ತೊಂದರೆಯನ್ನು ಅನುಭವಿಸಲು ಪ್ರಾರಂಭಿಸಿದರು. "ಕೆಲಸದ ಹೊರೆಯೇ ಇದಕ್ಕೆ ಕಾರಣವಿರಬಹುದು ಎಂದು ಭಾವಿಸಿ ನಾನು ಅದನ್ನು ನಿರ್ಲಕ್ಷಿಸುತ್ತಲೇ ಇದ್ದೆ." ಕೆಲವೇ ತಿಂಗಳುಗಳಲ್ಲಿ ಛಾಯಾಗೆ ಅಸ್ತಮಾ ಇರುವುದು ಪತ್ತೆಯಾಯಿತು. "ವೈದ್ಯರು ಇದು ಪ್ರಚಂಡ ಒತ್ತಡದಿಂದಾಗಿ ಎಂದು ಹೇಳಿದರು," ಎಂದು ಅವರು ಹೇಳುತ್ತಾರೆ; ಒತ್ತಡ ಮತ್ತು ಅಸ್ತಮಾದ ನಡುವಿನ ಸಂಬಂಧವನ್ನು ನಿಜವೆನ್ನುವ ಸಾಕಷ್ಟು ಅಧ್ಯಯನಗಳಿವೆ .

ಔಷಧಿಗಳು ಛಾಯಾ ಅವರ ಸಹಾಯಕ್ಕೆ ಒದಗಿವೆಯಾದರೂ, ಹವಾಮಾನದಲ್ಲಿನ ತ್ವರಿತ ಬದಲಾವಣೆಗಳ ಬಗ್ಗೆ ಅವರು ಚಿಂತೆ ಮಾಡುವುದನ್ನು ನಿಲ್ಲಿಸಲು ಅವುಗಳಿಂದ ಸಾಧ್ಯವಿಲ್ಲ. ಈ ವರ್ಷದ ಮಾರ್ಚ್-ಏಪ್ರಿಲ್ ತಿಂಗಳ ಬಿಸಿಗಾಳಿಯ ಸಮಯದಲ್ಲಿ, ಅವರು ತಲೆತಿರುಗುವಿಕೆ ಮತ್ತು ಉಸಿರಾಟದ ತೊಂದರೆಯನ್ನು ಎದುರಿಸಲು ಪ್ರಾರಂಭಿಸಿದರು.

" ಅದು ಕರ್ತವ್ಯಕ್ಕೆ ಹಾಜರಾಗಲು ಅತ್ಯಂತ ಕಠಿಣ ಸಮಯವಾಗಿತ್ತು. ನನ್ನ ಚರ್ಮವು ಉರಿಯುತ್ತಿರುವಂತೆ ಭಾಸವಾಗುತ್ತಿತ್ತು," ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಹೆಚ್ಚಿನ ತಾಪಮಾನವು ಅರಿವಿನ ಕಾರ್ಯ ನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧನೆಯು ಕಂಡುಕೊಂಡಿದೆ, ಇದು ಆತ್ಮಹತ್ಯೆಯ ಪ್ರಮಾಣ , ಹಿಂಸಾಚಾರ ಮತ್ತು ಆಕ್ರಮಣಶೀಲತೆಯ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಇತರ ಅನೇಕ ಆಶಾ ಕಾರ್ಯಕರ್ತರು ಛಾಯಾ ಅವರು ಎದುರಿಸಿದ ರೋಗಲಕ್ಷಣಗಳನ್ನು ಎದುರಿಸಿರುವುದು ವರದಿಯಾಗಿದೆ. "ಇದು ವಿಚಿತ್ರವೇನಲ್ಲ. ಇವು ಋತುಮಾನ ಪರಿಣಾಮದ ಅಸ್ವಸ್ಥತೆಯ [ಎಸ್ಎಡಿ/seasonal affective disorder] ಲಕ್ಷಣಗಳಾಗಿವೆ" ಎಂದು ಕೊಲ್ಹಾಪುರ ಮೂಲದ ಕ್ಲಿನಿಕಲ್ ಸೈಕಾಲಜಿಸ್ಟ್ ಶಾಲ್ಮಲಿ ರಾನ್ಮಲೆ-ಕಾಕಡೆ ಹೇಳುತ್ತಾರೆ.

ಎಸ್ಎಡಿ ಎನ್ನುವುದು ಋತುವಿನಲ್ಲಿನ ಬದಲಾವಣೆಯಿಂದ ಪ್ರಚೋದಿಸಲ್ಪಟ್ಟ ಖಿನ್ನತೆಯ ಒಂದು ರೂಪವಾಗಿದೆ. ಹೆಚ್ಚಿನ ಅಕ್ಷಾಂಶದ ದೇಶಗಳಲ್ಲಿ ರೋಗಲಕ್ಷಣಗಳು ಸಾಮಾನ್ಯವಾಗಿ ಚಳಿಗಾಲಕ್ಕೆ ಸಂಬಂಧಿಸಿದೆಯಾದರೂ, ಭಾರತದಂತಹ ಉಷ್ಣವಲಯದ ದೇಶಗಳಲ್ಲಿಯೂ ಜನರನ್ನು ಬಾಧಿಸುವ ಅಸ್ವಸ್ಥತೆಯ ಕುರಿತು ಹೆಚ್ಚಿನ ಜಾಗೃತಿಯಿದೆ.

Shubhangi Kamble weighing a 22-day-old newborn in Kolhapur’s Arjunwad village
PHOTO • Sanket Jain

ಕೊಲ್ಹಾಪುರದ ಅರ್ಜುನವಾಡ್ ಗ್ರಾಮದಲ್ಲಿ 22 ದಿನಗಳ ನವಜಾತ ಶಿಶುವಿನ ತೂಕ ಮಾಡುತ್ತಿರುವ ಶುಭಾಂಗಿ ಕಾಂಬ್ಳೆ

Stranded villagers being taken to safety after the floods
PHOTO • Sanket Jain
Floodwater in Shirol taluka in July 2021
PHOTO • Sanket Jain

ಎಡ: ಪ್ರವಾಹದ ನಂತರ ಸಿಕ್ಕಿಹಾಕಿಕೊಂಡ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗುತ್ತಿದೆ. ಬಲ: ಜುಲೈ 2021ರಲ್ಲಿ ಶಿರೋಲ್ ತಾಲೂಕಿನಲ್ಲಿ ಪ್ರವಾಹದ ನೀರು

"ಹವಾಮಾನವು ಬದಲಾದಂತೆ, ನಾನು ಆತಂಕಕ್ಕೊಳಗಾಗಲು ಪ್ರಾರಂಭಿಸುತ್ತೇನೆ; ನನಗೆ ತಲೆತಿರುಗುತ್ತದೆ. ಆತಾ ಮಾಲಾ ಆಜಿಬತ್ ಸಹನ್ ಹೊಯ್ನಾ ಝಾಲೆ [ಇನ್ನು ತಡೆಯೋದಕ್ಕೆ ಸಾಧ್ಯವೇ ಇಲ್ಲ ಎನ್ನುವಷ್ಟು]" ಎಂದು ಶುಭಾಂಗಿ ಹೇಳುತ್ತಾರೆ. "ಬಹುತೇಕ ಪ್ರತಿಯೊಬ್ಬ ಪ್ರವಾಹ ಪೀಡಿತ ಆಶಾ ಕಾರ್ಯಕರ್ತೆಯೂ ಒಂದು ರೀತಿಯ ಒತ್ತಡವನ್ನು ಅನುಭವಿಸುತ್ತಿದ್ದಾರೆ, ಇದು ಈಗ ದೀರ್ಘಕಾಲದ ಕಾಯಿಲೆಗಳಿಗೆ ಕಾರಣವಾಗುತ್ತಿದೆ. ಆದರೂ, ಇಷ್ಟು ಜನರನ್ನು ಉಳಿಸಿದರೂ ಸರ್ಕಾರ ನಮಗೆ ಸಹಾಯ ಮಾಡುವುದಿಲ್ಲ," ಎಂದು ಹೇಳಿದರು.

ಆರೋಗ್ಯ ಅಧಿಕಾರಿಗಳು ಸಮಸ್ಯೆಯನ್ನು ಒಪ್ಪಿಕೊಳ್ಳುವುದಿಲ್ಲ ಎಂದಲ್ಲ. ಅವರ ಪ್ರತಿಕ್ರಿಯೆ ಸಮರ್ಪಕವಾಗಿದೆಯೇ ಅಥವಾ ಸರಿಯಾಗಿದೆಯೇ ಎಂಬುದು ಪ್ರಶ್ನೆಯಾಗಿದೆ.

ನೆರೆಯ ಪ್ರವಾಹ ಪೀಡಿತ ಹಟ್ಕನಂಗ್ಲೆ ತಾಲ್ಲೂಕಿನ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಪ್ರಸಾದ್ ದಾತಾರ್, ಪ್ರವಾಹ ಮತ್ತು ಕೋವಿಡ್ನಿಂದಾಗಿ ಈ ಪ್ರದೇಶದ ಆರೋಗ್ಯ ಕಾರ್ಯಕರ್ತರು "ಹೆಚ್ಚು ಕೆಲಸ ಮಾಡುತ್ತಿದ್ದಾರೆ ಮತ್ತು ಒತ್ತಡದಲ್ಲಿದ್ದಾರೆ" ಎಂದು ಹೇಳುತ್ತಾರೆ. "ಈ ಕಳವಳಗಳನ್ನು ಪರಿಹರಿಸಲು ಸಹಾಯ ಮಾಡಲು, ನಾವು ವಾರ್ಷಿಕವಾಗಿ ಆಶಾ ಕಾರ್ಯಕರ್ತರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ" ಎಂದು ಅವರು ಹೇಳುತ್ತಾರೆ.

ಆದರೆ, ಈ ಕಾರ್ಯಕ್ರಮಗಳಿಂದ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಕೊಲ್ಲಾಪುರದ ಶಿರೋಳ ತಾಲೂಕಿನ ಆಶಾ ಒಕ್ಕೂಟದ ಮುಖಂಡ ನೇತ್ರಾದೀಪ ಪಾಟೀಲ್. "ನಾನು ನಮ್ಮ ಅಧಿಕಾರಿಗಳ ಬಳಿ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಪ್ರಸ್ತಾಪಿಸಿದಾಗ, ಅವರು ಅದನ್ನು ಬಹುಮಟ್ಟಿಗೆ ತಳ್ಳಿಹಾಕಿದರು ಮತ್ತು ಅಂತಹ ಸಂದರ್ಭಗಳನ್ನು ಹೇಗೆ ಎದುರಿಸಬೇಕೆಂದು ನಾನು ಕಲಿಯಬೇಕಾಗಿದೆ ಎಂದು ನನಗೆ ಹೇಳಿದರು," ಎಂದು ಅವರು ಹೇಳುತ್ತಾರೆ.

ಆಶಾ ಕಾರ್ಯಕರ್ತೆಯರಿಗೆ ಥೆರಪಿ ಮತ್ತು ಕೌನ್ಸೆಲಿಂಗ್ ಅಗತ್ಯವಿದೆ ಎನ್ನುತ್ತಾರೆ ರಣಮಲೆ-ಕಾಕಡೆ. ನಿರಂತರ ಒತ್ತಡವನ್ನು ನಿಭಾಯಿಸಲು ಇದು ಅವಶ್ಯಕವಾಗಿದೆ. "ಸಹಾಯ ಮಾಡಲು ಓಡುವವರಿಗೆ ಸಹ ಕೆಲವೊಮ್ಮೆ ಸಹಾಯ ಬೇಕಾಗುತ್ತದೆ," ಎಂದು ಅವರು ಹೇಳುತ್ತಾರೆ. ಆದರೆ ನಮ್ಮ ಸಮಾಜದಲ್ಲಿ ಹಾಗಾಗುವುದಿಲ್ಲ. ಅನೇಕ ಮುಂಚೂಣಿಯ ಆರೋಗ್ಯ ಕಾರ್ಯಕರ್ತರು ನಿರಂತರವಾಗಿ ಸಹಾಯ ಮಾಡಲು ಧಾವಿಸುತ್ತಾರೆ ಎಂದು ಅವರು ಹೇಳುತ್ತಾರೆ. ಆದರೆ ಹಾಗೆ ಮಾಡುವಾಗ, ಅವರು ತಮ್ಮದೇ ಆದ ಒತ್ತಡ, ಆತಂಕ ಮತ್ತು ಭಾವನಾತ್ಮಕ ಒತ್ತಡವನ್ನು ನಿರ್ಲಕ್ಷಿಸುತ್ತಾರೆ.

ಒತ್ತಡದ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಈ ಪ್ರದೇಶದಲ್ಲಿ ಹವಾಮಾನವು ವೇಗವಾಗಿ ಬದಲಾಗುತ್ತಿರುವುದರಿಂದ. ಮತ್ತು ಈ ವಿಷಯದಲ್ಲಿ ಹೆಚ್ಚು ಗಂಭೀರವಾಗಿ ಮತ್ತು ತ್ವರಿತವಾಗಿ ಮಧ್ಯಪ್ರವೇಶಿಸುವ ಅವಶ್ಯಕತೆಯಿದೆ ಎಂದು ಅವರು ಹೇಳುತ್ತಾರೆ.

*****

ಕೊಲ್ಲಾಪುರದ ಆಶಾ ಕಾರ್ಯಕರ್ತೆಯರ ಮಾನಸಿಕ ಆರೋಗ್ಯ ಹದಗೆಡುತ್ತಿರುವುದಕ್ಕೆ ಹಲವು ಕಾರಣಗಳಿವೆ, ಬದಲಾಗುತ್ತಿರುವ ವಾತಾವರಣವೇ ಇದಕ್ಕೆ ಮುಖ್ಯ ಕಾರಣ.

ASHA worker Netradipa Patil administering oral vaccine to a child at the Rural Hospital, Shirol
PHOTO • Sanket Jain
Netradipa hugs a woman battling suicidal thoughts
PHOTO • Sanket Jain

ಎಡ: ಶಿರೋಳ ಗ್ರಾಮಾಂತರ ಆಸ್ಪತ್ರೆಯಲ್ಲಿ ಆಶಾ ನೇತ್ರದೀಪ ಪಾಟೀಲ್ ಮಗುವಿಗೆ ಪೋಲಿಯೋ ಹನಿ ಹಾಕುತ್ತಿರುವುದು. ಬಲ: ನೇತ್ರದೀಪ ಆತ್ಮಹತ್ಯೆಯ ಆಲೋಚನೆಗಳೊಂದಿಗೆ ಹೋರಾಡುತ್ತಿರುವ ಮಹಿಳೆಯನ್ನು ತಬ್ಬಿಕೊಂಡು ಸಂತೈಸುತ್ತಿರುವುದು

Rani Kohli (left) was out to work in Bhendavade even after floods destroyed her house in 2021
PHOTO • Sanket Jain
An ASHA checking temperature at the height of Covid-19
PHOTO • Sanket Jain

ಎಡ: ರಾಣಿ ಕೊಹ್ಲಿ (ಎಡ) 2021 ರಲ್ಲಿ ತನ್ನ ಮನೆ ಪ್ರವಾಹದಲ್ಲಿ ಕುಸಿದ ನಂತರವೂ ಭೆಂಡವಾಡಿಯಲ್ಲಿ ಕೆಲಸ ಮಾಡುವುದನ್ನು ಮುಂದುವರೆಸಿದ್ದಾರೆ. ಬಲ: ಕೋವಿಡ್ -19 ಸಾಂಕ್ರಾಮಿಕ ರೋಗವು ಉತ್ತುಂಗದಲ್ಲಿದ್ದಾಗ ಆಶಾ ಕಾರ್ಯಕರ್ತೆ ತಾಪಮಾನ ಪರೀಕ್ಷೆ ಮಾಡುತ್ತಿದ್ದಾರೆ

ಹೆಚ್ಚಿನ ಕೆಲಸದ ಹೊರೆಯ ಹೊರತಾಗಿಯೂ, ಪ್ರತಿ ಆಶಾ ಕಾರ್ಯಕರ್ತೆಯು ಗ್ರಾಮದ 1,000 ಜನಸಂಖ್ಯೆಗೆ 70 ರೀತಿಯ ಆರೋಗ್ಯ ಸೇವೆಗಳನ್ನು ನಿರ್ವಹಿಸುತ್ತಾರೆ. ಇದು ಸುರಕ್ಷಿತ ಹೆರಿಗೆ ಮತ್ತು ಸಾರ್ವತ್ರಿಕ ಪ್ರತಿರಕ್ಷಣೆಯನ್ನೂ ಒಳಗೊಂಡಿದೆ. ಇದರ ಹೊರತಾಗಿಯೂ, ಈ ಆರೋಗ್ಯ ಕಾರ್ಯಕರ್ತರಿಗೆ ಅತ್ಯಲ್ಪ ಸಂಬಳ ನೀಡಲಾಗುತ್ತದೆ ಮತ್ತು ಒಂದು ರೀತಿಯಲ್ಲಿ ಶೋಷಣೆಗೆ ಒಳಗಾಗುತ್ತಾರೆ.

ಮಹಾರಾಷ್ಟ್ರದಲ್ಲಿ ಆಶಾ ಕಾರ್ಯಕರ್ತರಿಗೆ ತಿಂಗಳಿಗೆ 3,500ರಿಂದ 5,000 ರೂ.ವರೆಗೆ ವೇತನ ನೀಡಲಾಗುತ್ತದೆ ಎಂದು ನೇತ್ರದೀಪ ಹೇಳುತ್ತಾರೆ. ಆಗಾಗ ಮೂರು ತಿಂಗಳ ವಿಳಂಬವೂ ಆಗುತ್ತದೆ. "ಇಂದಿಗೂ ನಮ್ಮನ್ನು ಸ್ವಯಂ ಸೇವಕ ಕಾರ್ಯಕರ್ತರು ಎಂದು ಪರಿಗಣಿಸಲಾಗಿದೆ. ಆದ್ದರಿಂದ ನಮಗೆ ಕನಿಷ್ಠ ವೇತನ ಮತ್ತು ಇತರ ಸೌಲಭ್ಯಗಳನ್ನು ನಿರಾಕರಿಸಲಾಗಿದೆ,” ಎಂದು ಅವರು ವಿವರಿಸುತ್ತಾರೆ. ಆಶಾ ಕಾರ್ಯಕರ್ತೆಯರಿಗೆ ಸರ್ಕಾರಿ ಭಾಷೆಯಲ್ಲಿ 'ಕೆಲಸ ಆಧಾರಿತ ಭತ್ಯೆ' ನೀಡಲಾಗುತ್ತದೆ. ಅಂದರೆ, ತಮ್ಮ ವ್ಯಾಪ್ತಿಯಲ್ಲಿರುವ ಜನಸಂಖ್ಯೆಗೆ ಕೆಲವು ಕಾರ್ಯಗಳನ್ನು ಪೂರ್ಣಗೊಳಿಸಿದ ನಂತರ , ಅವರು ಅದಕ್ಕೆ ಭತ್ಯೆಯನ್ನು ಪಡೆಯುತ್ತಾರೆ. ಯಾವುದೇ ನಿಗದಿತ ಸಂಬಳವಿಲ್ಲ ಮತ್ತು ವೇತನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ.

ಗ್ರಾಮದಲ್ಲಿ ಆರೋಗ್ಯ ಸೇವೆ ನೀಡಿ ಜೀವನ ಸಾಗಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಅನೇಕ ಆಶಾ ಕಾರ್ಯಕರ್ತೆಯರದ್ದು. ಶುಭಾಂಗಿಯವರ ಉದಾಹರಣೆಯನ್ನೇ ತೆಗೆದುಕೊಂಡರೆ ಆಕೆಯೂ ಗದ್ದೆ ಕೆಲಸಕ್ಕೆ ಹೋಗುತ್ತಾರೆ.

"2019 ಮತ್ತು 2021ರ ಪ್ರವಾಹದ ನಂತರ, ಹೊಲಗಳು ತೀವ್ರ ಹಾನಿಗೊಳಗಾದ ಕಾರಣ ನಾನು ಮೂರು ತಿಂಗಳವರೆಗೆ ಯಾವುದೇ ಕೆಲಸವನ್ನು ಪಡೆಯಲಿಲ್ಲ," ಎಂದು ಅವರು ಹೇಳುತ್ತಾರೆ. "ಹವಾಮಾನ ಬದಲಾಗುತ್ತಿದೆ, ಆದ್ದರಿಂದ ಮಳೆ ಅನಿರೀಕ್ಷಿತವಾಗಿದೆ. ಅಲ್ಪಾವಧಿಗೆ ಮಳೆಯಾಗುತ್ತದೆ ಆದರೆ ಎಲ್ಲವನ್ನೂ ನಾಶಪಡಿಸುತ್ತದೆ. ಹೊಲದಲ್ಲಿ ಕೆಲಸ ಸಿಗುತ್ತದೆ ಎಂಬ ನಮ್ಮ ನಿರೀಕ್ಷೆಯೂ ಹುಸಿಯಾಗಿದೆ. 2021ರಲ್ಲಿ, ಜುಲೈ ತಿಂಗಳಲ್ಲಿ ಭಾರಿ ಮಳೆ ಸಂಭವಿಸಿದೆ, ಇದರಲ್ಲಿ ಮಹಾರಾಷ್ಟ್ರದ 24 ಜಿಲ್ಲೆಗಳಲ್ಲಿ ಒಟ್ಟು 4.43 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಅದರಲ್ಲಿ ಕೊಲ್ಲಾಪುರವೂ ಸೇರಿತ್ತು.

2019 ರಿಂದ, ನಿರಂತರ ಪ್ರವಾಹಗಳು, ಆರ್ಥಿಕ ನಷ್ಟಗಳು ಮತ್ತು ಕೃಷಿ ಕೂಲಿಗಳು ಕಡಿಮೆಯಾಗುತ್ತಿವೆ. ಹಾಗಾಗಿ, ಮನೆಯ ಖರ್ಚುಗಳನ್ನು ಪೂರೈಸಲು, ಶುಭಾಂಗಿ ವಿವಿಧ ಲೇವಾದೇವಿದಾರರಿಂದ ಸಣ್ಣ ಮೊತ್ತದ ಆದರೆ ಹೆಚ್ಚಿನ ಬಡ್ಡಿಯ ಸಾಲವನ್ನು ತೆಗೆದುಕೊಂಡಿದ್ದಾರೆ. ಅದಕ್ಕಾಗಿ ಆಕೆ ತನ್ನ ಚಿನ್ನವನ್ನು ಅಡಮಾನ ಇಡಬೇಕಾಯಿತು. ಹೊಸ ಮನೆ ಕಟ್ಟಲು ಸಾಧ್ಯವಾಗದ ಕಾರಣ ಈಗ 10x15 ಕೊಠಡಿಯಲ್ಲಿ ವಾಸವಾಗಿದ್ದಾರೆ.

"2019 ಮತ್ತು 2021ರಲ್ಲಿ, ಮೂವತ್ತು ಗಂಟೆಗಳಲ್ಲಿ ಮನೆ ನೀರಿನಿಂದ ತುಂಬಿತ್ತು. ಏನನ್ನೂ ಉಳಿಸಲು ಸಾಧ್ಯವಾಗಲಿಲ್ಲ," ಎಂದು ಶುಭಾಂಗಿ ಅವರ ಪತಿ 37 ವರ್ಷದ ಸಂಜಯ್ ಹೇಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಹೊಲದಲ್ಲಿ ಕೂಲಿ ಸಿಗದ ಕಾರಣ ಈಗ ಗಾರೆ ಕೆಲಸ ಮಾಡುತ್ತಿದ್ದಾರೆ.

After the floodwater had receded, Shubhangi Kamble was tasked with disinfecting water (left) and making a list (right) of the losses incurred by villagers
PHOTO • Sanket Jain
After the floodwater had receded, Shubhangi Kamble was tasked with disinfecting water (left) and making a list (right) of the losses incurred by villagers
PHOTO • Sanket Jain

ಪ್ರವಾಹದ ನೀರು ಕಡಿಮೆಯಾದ ನಂತರ, ಶುಭಾಂಗಿ ಕಾಂಬಳೆ ನೀರನ್ನು ಶುದ್ಧೀಕರಿಸುವ ಕಾರ್ಯವನ್ನು ಮಾಡುತ್ತಿರುವುದು (ಎಡ) ಮತ್ತು ಗ್ರಾಮಸ್ಥರಿಗೆ ಉಂಟಾದ (ಬಲ) ಹಾನಿಯ ಲೆಕ್ಕಾಚಾರವನ್ನು ನೋಡುವುದನ್ನು ಅವರಿಗೆ ವಹಿಸಲಾಯಿತು

ಬಹಳಷ್ಟು ಕಷ್ಟನಷ್ಟಗಳನ್ನು ಅನುಭವಿಸಿದರೂ ಆಶಾ ಕಾರ್ಯಕರ್ತೆಯಾಗಿ ಮಾಡಬೇಕಾಗಿದ್ದ ಕೊನೆಯಿಲ್ಲದ ಕೆಲಸಗಳನ್ನು ಮಾಡುವುದರಲ್ಲಿಯೇ ಶುಭಾಂಗಿಯವರ ಸಮಯ ಕಳೆದುಹೋಗಿತ್ತು.

ಪ್ರವಾಹದ ಹಾನಿಯ ಸಮೀಕ್ಷೆಯ ಜೊತೆಗೆ, ಆಶಾ ಅವರು ಕುಡಿಯುವ ನೀರಿನ ಮೂಲಗಳನ್ನು ಪತ್ತೆಹಚ್ಚುವ ಮತ್ತು ನೀರಿನಿಂದ ಹರಡುವ ರೋಗಗಳನ್ನು ತಡೆಗಟ್ಟಲು ಅವುಗಳನ್ನು ಸೋಂಕುರಹಿತಗೊಳಿಸುವ ಕಾರ್ಯವನ್ನು ನಿರ್ವಹಿಸಿದರು. ಇಂತಹ ಹಲವು ಕೆಲಸಗಳಿಗೆ ಅವರಿಗೆ ಸಂಭಾವನೆ ಕೂಡ ನೀಡಿಲ್ಲ ಎನ್ನುತ್ತಾರೆ ನೇತ್ರದೀಪ. “ಪ್ರವಾಹದ ನಂತರ ಈ ಎಲ್ಲಾ ಕೆಲಸಗಳಿಂದ ನಮಗೆ ಸಾಕಷ್ಟು ಒತ್ತಡವಾಗಿದೆ. ಆದರೆ ಇದಕ್ಕಾಗಿ ಒಂದು ರೂಪಾಯಿ ಸಂಭಾವನೆ ಪಡೆದಿಲ್ಲ. ಎಲ್ಲವೂ ಪುಕ್ಕಟೆ ಕೆಲಸ.”

"ಪ್ರತಿ ಮನೆಗೆ ಭೇಟಿ ನೀಡಿದಾಗ, ಯಾರಿಗಾದರೂ ನೀರಿನಿಂದ ಹರಡುವ ಅಥವಾ ಕೀಟದಿಂದ ಹರಡುವ ರೋಗಗಳ ಲಕ್ಷಣಗಳು ಕಂಡುಬಂದಿದೆಯೇ ಎಂಬ ದಾಖಲೆಯನ್ನು ಇಡಬೇಕು," ಎಂದು ಶುಭಾಂಗಿ ಹೇಳುತ್ತಾರೆ. “ಸಮಯೋಚಿತ ಚಿಕಿತ್ಸೆಗೆ ಗಮನ ಕೊಡುವ ಮೂಲಕ ನಾವು ಅನೇಕ ಜೀವಗಳನ್ನು ಉಳಿಸಿದ್ದೇವೆ.”

ಆದರೆ ಈ ವರ್ಷದ ಏಪ್ರಿಲ್‌ನಲ್ಲಿ ಆಕೆ ಅನಾರೋಗ್ಯಕ್ಕೆ ಒಳಗಾದಾಗ, ಈ ವ್ಯವಸ್ಥೆಯಿಂದ ಆಕೆಗೆ ಯಾವುದೇ ಬೆಂಬಲ ಸಿಗಲಿಲ್ಲ. “ನಾನು ಸಾರ್ವಜನಿಕ ಆರೋಗ್ಯ ಇಲಾಖೆಯ ಉದ್ಯೋಗಿಯಾಗಿದ್ದರೂ, ನಾನು ಖಾಸಗಿ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆಯಬೇಕಾಗಿತ್ತು ಮತ್ತು 22,000 ರೂ. ಖರ್ಚು ಮಾಡಬೇಕಾಯಿತು. ಸರ್ಕಾರಿ ಆಸ್ಪತ್ರೆಯವರು ಮಾತ್ರೆಗಳನ್ನಷ್ಟೇ  ನೀಡುತ್ತಿದ್ದರು. ಆದರೆ ನನ್ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಬೇಕಾಗಿತ್ತು,” ಎಂದು ಅವರು ಹೇಳುತ್ತಾರೆ. ಸರಕಾರಿ ಉಪಕೇಂದ್ರದಿಂದ ಉಚಿತವಾಗಿ ಐರನ್ ಮತ್ತು ಫೋಲಿಕ್ ಆಸಿಡ್ ಮಾತ್ರೆಗಳನ್ನು ಕೊಡಲಾಗುತ್ತಿದ್ದರೂ ಪ್ರತಿ ತಿಂಗಳು ಅವರು 500 ರೂ. ಖರ್ಚು ಮಾಡಬೇಕಿದೆ.

ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡುವ ಛಾಯಾ ತಿಂಗಳಿಗೆ 4,000 ರೂ. ಗಳಿಸುತ್ತಾರೆ. ಅದರಲ್ಲಿ 800 ರೂಪಾಯಿ ಮಾತ್ರೆಗಳಿಗೆ ಖರ್ಚಾಗಿದ್ದು ಈ ಮೊತ್ತ ಅವರಿಗೆ ಕಡಿಮೆಯೇನಲ್ಲ. "ಅಂತಿಮವಾಗಿ, ನಾವು ಈಗ ಸ್ವಯಂ ಸೇವಕ ಕಾರ್ಯಕರ್ತರು ಎಂದು ಒಪ್ಪಿಕೊಂಡಿದ್ದೇವೆ. ಮತ್ತು ಅದಕ್ಕಾಗಿಯೇ ನಾವು ತುಂಬಾ ಬಳಲುತ್ತಿದ್ದೇವೆ,” ಎಂದು ಅವರು ಹೇಳುತ್ತಾರೆ.

2022ರಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯು ಆಶಾ ಕಾರ್ಯಕರ್ತೆಯರಿಗೆ ಗ್ಲೋಬಲ್ ಹೆಲ್ತ್ ಲೀಡರ್ಸ್ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಸರ್ಕಾರಿ ಆರೋಗ್ಯ ಸೇವೆಗಳೊಂದಿಗೆ ಸಂಪರ್ಕ ಸಾಧಿಸುವ ಮೂಲಕ ದೂರದ ಪ್ರದೇಶಗಳಲ್ಲಿನ ಸಾಮಾನ್ಯ ಜನರಿಗೆ ಆರೋಗ್ಯ ಸೇವೆಗಳನ್ನು ತಲುಪಿಸುವಲ್ಲಿ ಅವರು ನೀಡಿದ ಅಮೂಲ್ಯ ಕೊಡುಗೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. "ನಾವೆಲ್ಲರೂ ಅದರ ಬಗ್ಗೆ ತುಂಬಾ ಹೆಮ್ಮೆಪಡುತ್ತೇವೆ," ಎಂದು ಛಾಯಾ ಹೇಳುತ್ತಾರೆ. “ಆದರೆ ನಾವು ನಮ್ಮ ತಡವಾದ ಅಥವಾ ಅತ್ಯಲ್ಪ ಸಂಭಾವನೆಯ ಬಗ್ಗೆ ನಮ್ಮ ಮೇಲಧಿಕಾರಿಗಳೊಂದಿಗೆ ವಿಷಯವನ್ನು ಎತ್ತಿದಾಗ, 'ಪಾವತಿ ಚಾಂಗ್ಲಾ ನಹಿ ಮಿಲಾತ್, ಪನ್ ತುಮ್ಹಾಲಾ ಪುಣ್ಯ ಮಿಲ್ತೆ [ನಿಮಗೆ ಉತ್ತಮ ಸಂಬಳ ಸಿಗದಿರಬಹುದು, ಆದರೆ ಜನರ ಆಶೀರ್ವಾದವನ್ನು ಗಳಿಸಬಹುದು]' ಎಂದು ಅವರು ನಮಗೆ ಹೇಳುತ್ತಾರೆ."

‘For recording 70 health parameters of everyone in the village, we are paid merely 1,500 rupees,’ says Shubhangi
PHOTO • Sanket Jain

"ಗ್ರಾಮದ ಪ್ರತಿಯೊಬ್ಬರಿಗೂ ಆರೋಗ್ಯಕ್ಕೆ ಸಂಬಂಧಿಸಿದ 70 ವಿಷಯಗಳ ದಾಖಲೆಗಳನ್ನು ಇರಿಸಿಕೊಳ್ಳಲು ನಾವು ತಿಂಗಳಿಗೆ ಕೇವಲ 1,500 ರೂಪಾಯಿಗಳನ್ನು ಪಡೆಯುತ್ತೇವೆ," ಎಂದು ಶುಭಾಂಗಿ ಹೇಳುತ್ತಾರೆ

An ASHA dressed as Durga (left) during a protest outside the Collector’s office (right) in Kolhapur. Across India, ASHA workers have been demanding better working conditions, employee status, monthly salary and timely pay among other things
PHOTO • Sanket Jain
An ASHA dressed as Durga (left) during a protest outside the Collector’s office (right) in Kolhapur. Across India, ASHA workers have been demanding better working conditions, employee status, monthly salary and timely pay among other things
PHOTO • Sanket Jain

ಕೊಲ್ಹಾಪುರ ಕಲೆಕ್ಟರೇಟ್ ಎದುರು ಆಶಾ ಕಾರ್ಯಕರ್ತೆ ದುರ್ಗಾ ಅವತಾರದಲ್ಲಿ (ಎಡ) ಭಾರತದಾದ್ಯಂತ, ಆಶಾ ಕಾರ್ಯಕರ್ತೆಯರು ಉತ್ತಮ ಕೆಲಸದ ಸ್ಥಳ ಸೌಕರ್ಯಗಳು, ಉದ್ಯೋಗಿ ಸ್ಥಾನಮಾನ, ಮಾಸಿಕ ಮತ್ತು ಸಕಾಲಿಕ ವೇತನ ಸೇರಿದಂತೆ ಹಲವಾರು ಬೇಡಿಕೆಗಳಿಗಾಗಿ ಆಂದೋಲನ ನಡೆಸುತ್ತಿದ್ದಾರೆ

ಆದಾಗ್ಯೂ, ಡಬ್ಲ್ಯುಎಚ್ಒ ನೀತಿಯು ಈ ಮುಂಚೂಣಿ ಕಾರ್ಯಕರ್ತರ ಮಾನಸಿಕ ಆರೋಗ್ಯದ ಮೇಲೆ ಹವಾಮಾನ ಬದಲಾವಣೆಯ ಪ್ರಭಾವದ ಪ್ರಮುಖ ವಿಷಯದ ಬಗ್ಗೆ ಗಮನ ಸೆಳೆಯುತ್ತದೆ: "ಖಿನ್ನತೆ, ಆತಂಕ ಮತ್ತು ಒತ್ತಡ-ಸಂಬಂಧಿತ ಪರಿಸ್ಥಿತಿಗಳು ಸೇರಿದಂತೆ ಮಾನಸಿಕ ಆರೋಗ್ಯ ಪರಿಸ್ಥಿತಿಗಳ ಬೆಳವಣಿಗೆಯು ಹವಾಮಾನ ವೈಪರೀತ್ಯದ ಘಟನೆಗಳ ನಂತರ ವರದಿಯಾಗಿದೆ."

ಕೆಲಸದ ಸ್ಥಳದಲ್ಲಿ ಸೌಲಭ್ಯಗಳ ಕೊರತೆ, ಅವರ ಪರಿಸ್ಥಿತಿಯ ಬಗ್ಗೆ ನಿರಾಸಕ್ತಿ ಮತ್ತು ಏರಿಳಿತದ ವಾತಾವರಣವು ಆಶಾ ಕಾರ್ಯಕರ್ತೆಯರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ನೇತ್ರದೀಪ ಹೇಳುತ್ತಾರೆ. ''ಈ ವರ್ಷ ಬಿಸಿಲಿನ ತಾಪದ ಸಂದರ್ಭದಲ್ಲಿ ಮನೆ-ಮನೆ ಸಮೀಕ್ಷೆ ನಡೆಸಲಾಗಿದೆ. ನಂತರ ನಮ್ಮಲ್ಲಿ ಅನೇಕರು ಚರ್ಮದ ತುರಿಕೆ, ಸುಡುವ ಅನುಭವ ಮತ್ತು ಆಯಾಸದಿಂದ ಬಳಲುತ್ತಿದ್ದರು,” ಎಂದು ಅವರು ಹೇಳುತ್ತಾರೆ. "ನಮಗೆ ಯಾವುದೇ ರಕ್ಷಣಾತ್ಮಕ ವಸ್ತುಗಳನ್ನು ನೀಡಲಾಗಿಲ್ಲ."

ಪುಣೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯೋರಾಲಜಿ (IITM)ಯ ಹವಾಮಾನ ವಿಜ್ಞಾನಿ ಮತ್ತು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕುರಿತ ಅಂತರ್ ಸರ್ಕಾರಿ ಸಮಿತಿಯ ವರದಿಯ ಕೊಡುಗೆದಾರ ರಾಕ್ಸಿ ಕೋಲ್, 'ಹವಾಮಾನ ಕ್ರಿಯಾ ಯೋಜನೆ'ಯ ಅಗತ್ಯವನ್ನು ಒತ್ತಿಹೇಳುತ್ತಾರೆ, ಇದು ಬಿಸಿಗಾಳಿ ಮತ್ತು ತೀವ್ರ ಘಟನೆಗಳು ಹೆಚ್ಚು ಪ್ರಬಲವಾಗಿರುವ ದಿನದ ಅವಧಿಗಳನ್ನು ಸ್ಪಷ್ಟವಾಗಿ ಉಲ್ಲೇಖಿಸುತ್ತದೆ. "ನಾವು ಮುಂದಿನ ಹಲವಾರು ವರ್ಷಗಳಿಂದ ದಶಕಗಳಿಂದ ಹವಾಮಾನದ ಮುನ್ಸೂಚನೆಗಳನ್ನು ಹೊಂದಿದ್ದೇವೆ. ಆದ್ದರಿಂದ, ಕಾರ್ಮಿಕರು ಬಿಸಿಲಿನಲ್ಲಿ ಹೊರಗೆ ಇರಬಾರದು ಎಂದು ಆ ಪ್ರದೇಶಗಳು ಮತ್ತು ದಿನದ ಸಮಯಗಳನ್ನು ಗುರುತಿಸಲು ಸಾಧ್ಯವಿದೆ" ಎಂದು ಅವರು ಹೇಳುತ್ತಾರೆ. "ಇದು ದೊಡ್ಡ ಕೆಲಸವಲ್ಲ. ಈಗಾಗಲೇ ಮಾಹಿತಿ ಲಭ್ಯವಾಗಿದೆ' ಎಂದರು.

ಈ ದಿಶೆಯಲ್ಲಿ ಯಾವುದೇ ಅಧಿಕೃತ ನೀತಿ ಅಥವಾ ಪ್ರಯತ್ನದ ಅನುಪಸ್ಥಿತಿಯಲ್ಲಿ, ಪರಿಸ್ಥಿತಿಯನ್ನು ನಿಭಾಯಿಸಲು ಆಶಾ ಕಾರ್ಯಕರ್ತರು ತಮ್ಮದೇ ಆದ ಮಾರ್ಗಗಳನ್ನು ರೂಪಿಸಲು ಬಿಡುತ್ತಾರೆ. ಹೀಗಾಗಿ ಶುಭಾಂಗಿ ಹವಾಮಾನ ಮುನ್ಸೂಚನೆಯನ್ನು ಪರಿಶೀಲಿಸುವ ಮೂಲಕ ತನ್ನ ದಿನವನ್ನು ಪ್ರಾರಂಭಿಸುತ್ತಾಳೆ. "ನಾನು ನನ್ನ ಕರ್ತವ್ಯವನ್ನು ತ್ಯಜಿಸಲಾರೆ. ದಿನದ ಹವಾಮಾನವನ್ನು ಎದುರಿಸಲು ಕನಿಷ್ಠ ನನ್ನನ್ನು ನಾನು ಸಿದ್ಧಪಡಿಸಿಕೊಳ್ಳಲು ಪ್ರಯತ್ನಿಸಬಹುದು," ಎಂದು ಅವರು ಹೇಳುತ್ತಾರೆ.

ಈ ವರದಿಯು ಇಂಟರ್‌ನ್ಯೂಸ್ ಅರ್ಥ್ ಜರ್ನಲಿಸಂ ನೆಟ್‌ವರ್ಕ್ ವರದಿಗಾರರಿಗರ ಒದಗಿಸಿರುವ ಸ್ವತಂತ್ರ ಪತ್ರಿಕೊದ್ಯಮ ಅನುದಾನದ ಮೂಲಕ ಸಿದ್ಧಪಡಿಸಲಾದ  ಸರಣಿಯೊಂದರ ಭಾಗವಾಗಿದೆ.

ಅನುವಾದ: ಶಂಕರ. ಎನ್. ಕೆಂಚನೂರು

Sanket Jain

Sanket Jain is a journalist based in Kolhapur, Maharashtra. He is a 2022 PARI Senior Fellow and a 2019 PARI Fellow.

Other stories by Sanket Jain
Editor : Sangeeta Menon

Sangeeta Menon is a Mumbai-based writer, editor and communications consultant.

Other stories by Sangeeta Menon
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru