ಹದಿಹರೆಯದ ವಯಸ್ಸಿನಲ್ಲಿ ಮಕ್ಕಳನ್ನು ಪಡೆಯದಂತೆ ನುಸ್ರತ್ ಬಾನೊ ಮಹಿಳೆಯರನ್ನು ಮನವೊಲಿಸುತ್ತಾರೆ; ಗರ್ಭನಿರೋಧಕವನ್ನು ಬಳಸುವಂತೆ ಮಾಡಲು ಆ ಮಹಿಳೆಯರ ಗಂಡನ ಮನೆಯವರೊಂದಿಗೆ ಹೋರಾಡಿದ್ದಾರೆ; ಮತ್ತು ಅವರು ಈ ಮಹಿಳೆಯರನ್ನು ಹೆರಿಗೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಬಿಹಾರದ ಅರೇರಿಯಾ ಜಿಲ್ಲೆಯ ರಾಂಪುರ್ ಗ್ರಾಮದ 35 ವರ್ಷದ ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರಾದ (ಆಶಾ) ನುಸ್ರತ್, ಅವರ ಕೆಲಸದ ಕಠಿಣ ಭಾಗವೆಂದರೆ ಪುರುಷರನ್ನು ವ್ಯಾಸೆಕ್ಟಮಿಗೆ ಒಳಗಾಗುವಂತೆ ಮನವೊಲಿಸುವುದು.

ಸುಮಾರು 3,400 ಜನಸಂಖ್ಯೆಯನ್ನು ಹೊಂದಿರುವ ಫರ್ಬಿಸ್‌ಗಂಜ್ ಬ್ಲಾಕ್‌ನ ಈ ಗ್ರಾಮದಲ್ಲಿ "ಕಳೆದ ವರ್ಷ [2018], ಒಬ್ಬ ವ್ಯಕ್ತಿ ಮಾತ್ರ ಒಪ್ಪಿಕೊಂಡರು" ಎಂದು ಅವರು ನಮಗೆ ತಿಳಿಸಿದರು. "ಕೊನೆಗೆ ವ್ಯಾಸೆಕ್ಟಮಿ ಮುಗಿದಾಗ, ಅವನ ಹೆಂಡತಿ ನನ್ನನ್ನು ಚಪ್ಪಲಿಯಿಂದ ಹೊಡೆಯಲು ಬಂದಳು" ಎಂದು ನಾಲ್ಕು ಮಕ್ಕಳ ತಾಯಿ ನಗುತ್ತಾ ಹೇಳಿದರು.

ರಾಂಪುರದಲ್ಲಿರುವ ಈ ಹಿಂಜರಿಕೆ ಬಿಹಾರದ ಇತರ ಹಳ್ಳಿಗಳಲ್ಲಿಯೂ ಕಂಡುಬರುತ್ತದೆ. "ಅವರ ದೊಡ್ಡ ಭಯವೆಂದರೆ ಅವರನ್ನು ಜನರು ಗೇಲಿ ಮಾಡುವುದು ಮತ್ತು ಇತರ ಪುರುಷರು ಅವರನ್ನು ನೋಡಿ ನಗುವುದು" ಎಂದು ವಿನಯ್ ಕುಮಾರ್ ಕಳೆದ ವರ್ಷ ಹೇಳಿದ್ದರು, ಆಗ ಅವರು ಪ್ರತಿವರ್ಷ ನವೆಂಬರ್‌ನಲ್ಲಿ ಬಿಹಾರ ಸರ್ಕಾರವು ರಾಜ್ಯದಾದ್ಯಂತ ಪುರುಷರ ಸಂತಾನಹರಣ ಉತ್ತೇಜಿಸಲು ನಡೆಸುವ ಸಪ್ತಾಹದ ಎರಡನೇ ಹಂತದ ತಯಾರಿಯಲ್ಲಿದ್ದರು. ಪುರುಷರಿಗಿರುವ ಇನ್ನೊಂದು ಭಯವೆಂದರೆ "ಅವರು ದುರ್ಬಲರಾಗುತ್ತಾರೆ ಮತ್ತು ಮತ್ತೆ ಸಂಭೋಗ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಅವರು ಭಾವಿಸುತ್ತಾರೆ, ಆದರೆ ಇದೊಂದು ಕಲ್ಪಿತ ನಂಬಿಕೆಯಾಗಿದೆ."

ವಿನಯ್ ಅವರ ತವರು ರಾಜ್ಯದ ಜೆಹನ್ನಾಬಾದ್ ಜಿಲ್ಲೆಯ ಮಖ್ದಂಪುರ್ ಜಿಲ್ಲೆಯಲ್ಲಿ 3,400 ಜನಸಂಖ್ಯೆಯನ್ನು ಹೊಂದಿರುವ ಬಿರ್ರಾ ಗ್ರಾಮ. 38 ವರ್ಷದ ಇವರು ಕಳೆದ ವರ್ಷವನ್ನು ಸರ್ಕಾರದ ವಿಕಾಸ್ ಮಿತ್ರ ಉದ್ಯೋಗಿಯಾಗಿ ಕಳೆದಿದ್ದರು. ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿಯನ್ನು ಪ್ರಸಾರ ಮಾಡುವುದು ಮತ್ತು ಅವುಗಳ ಅನುಷ್ಠಾನಕ್ಕೆ ಸಹಕರಿಸುವುದು ಅವರ ಕರ್ತವ್ಯಗಳ ಪಟ್ಟಿಯಲ್ಲಿ ಸೇರಿದೆ. ಅವರ ಕರ್ತವ್ಯಗಳಲ್ಲಿ ಪುರುಷರನ್ನು ವ್ಯಾಸೆಕ್ಟಮಿಗಾಗಿ ಒಲಿಸುವ ತಲೆನೋವಿನ ಕೆಲಸವೂ ಸೇರಿದೆ. - ವ್ಯಾಸೆಕ್ಟಮಿಯೆನ್ನುವುದು ಒಂದು ಸಣ್ಣ ಶಸ್ತ್ರಚಿಕಿತ್ಸಾ ವಿಧಾನ, ಈ ಸಮಯದಲ್ಲಿ ಪುರುಷರ ವೀರ್ಯವನ್ನು ಸಾಗಿಸುವ ಸಣ್ಣ ನಾಳವನ್ನು ಮುಚ್ಚಲಾಗುತ್ತದೆ ಅಥವಾ ಸೀಲ್‌ ಮಾಡಲಾಗುತ್ತದೆ.

ಸಂತಾನಹರಣ ಶಸ್ತ್ರಚಿಕಿತ್ಸೆಯ ಮಟ್ಟವು ಮೂಲದಲ್ಲಿ ಕಡಿಮೆ ಇರುವ ಈ ರಾಜ್ಯದಲ್ಲಿ, ಮೂರನೇ (2005-06) ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ ಕೇವಲ 0.6 ಶೇಕಡಾ ಇದ್ದ ಪುರುಷ ಸಂತಾನಹರಣ ಚಿಕಿತ್ಸೆಯ ಪ್ರಮಾಣವು ನಾಲ್ಕನೇ (2015-16) ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ ನಗಣ್ಯವೆನ್ನಬಹುದಾದ ಶೇಕಡಾ 0ಗೆ ಇಳಿದಿದೆ. ಅದೇ ಅವಧಿಯಲ್ಲಿ, ಮಹಿಳೆಯರ ಸಂತಾನಹರಣ ಚಿಕಿತ್ಸೆಯ ಪ್ರಮಾಣವೂ ಕಡಿಮೆಯಾಗಿತ್ತು. 15ರಿಂದ 49 ವರ್ಷ ವಯಸ್ಸಿನ ವಿವಾಹಿತ ಮಹಿಳೆಯರಲ್ಲಿ ಇದು ಶೇಕಡಾ 23.8ರಿಂದ 20.7ಕ್ಕೆ ಇಳಿದಿದೆ. ಆದರೆ ಇದು ಪುರುಷ ಸಂತಾನಹರಣ ಚಿಕಿತ್ಸೆಗೆ ಹೋಲಿಸಿದರೆ ಹೆಚ್ಚು.

ಬಿಹಾರದ ಅಂಕಿ-ಸಂಖ್ಯೆಗಳು ರಾಷ್ಟ್ರವ್ಯಾಪಿ ದತ್ತಾಂಶ ಪ್ರವೃತ್ತಿಗಳನ್ನು ಪ್ರತಿಬಿಂಬಿಸುತ್ತವೆ: ಎನ್‌ಎಫ್‌ಎಚ್‌ಎಸ್ -4 ಪ್ರಕಾರ ಭಾರತದಾದ್ಯಂತ, ಪ್ರಸ್ತುತ ವಿವಾಹಿತ ಮಹಿಳೆಯರಲ್ಲಿ ಶೇಕಡಾ 36ರಷ್ಟು (15-49 ವಯೋಮಾನದವರಲ್ಲಿ) ಸಂತಾನ ಹರಣ ಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ದಾಖಲೆಯಾಗಿದ್ದರೆ, ಈ ಮಹಿಳೆಯರಲ್ಲಿ ಕೇವಲ 0.3ರಷ್ಟು ಮಾತ್ರ ಪುರುಷ ಸಂತಾನ ಹರಣ ಚಿಕಿತ್ಸೆಯನ್ನು ವರದಿ ಮಾಡಿದ್ದಾರೆ.

ದೇಶದಲ್ಲಿ ಕಾಂಡೋಮ್ ಬಳಕೆಯ ಪ್ರಮಾಣ ತೀರಾ ಕಡಿಮೆ - ಪ್ರಸ್ತುತ 15ರಿಂದ 49 ವರ್ಷ ವಯಸ್ಸಿನ ವಿವಾಹಿತ ಮಹಿಳೆಯರಲ್ಲಿ ಕೇವಲ 5.6ರಷ್ಟು ಜನರು ಮಾತ್ರ ಗರ್ಭನಿರೋಧಕ ಕ್ರಮವಾಗಿ ಕಾಂಡೋಮ್‌ಗಳನ್ನು ಬಳಸುತ್ತಾರೆ.
'As women, we can’t be seen talking to men about sterilisation' say ASHA workers in Rampur village of Bihar's Araria district: Nusrat Banno (left), Nikhat Naaz (middle) and Zubeida Begum (right)
PHOTO • Amruta Byatnal

'ಮಹಿಳೆಯರೊಂದಿಗೆ ಮಾತನಾಡಿದಂತೆ, ನಾವು ಸಂತಾನ ಹರಣ ಚಿಕಿತ್ಸೆ ಕುರಿತು ಪುರುಷರೊಂದಿಗೆ ಮಾತನಾಡುವುದನ್ನು ನೋಡಲಾಗುವುದಿಲ್ಲ' ಎಂದು ಬಿಹಾರದ ಅರೇರಿಯಾ ಜಿಲ್ಲೆಯ ರಾಂಪುರ್ ಗ್ರಾಮದ ಆಶಾ ಕಾರ್ಮಿಕರಾದ ನುಸ್ರತ್ ಬಾನೊ (ಎಡ), ನಿಖಾತ್ ನಾಜ್ (ಮಧ್ಯ) ಮತ್ತು ಜುಬೇದಾ ಬೇಗಂ (ಬಲ) ಹೇಳುತ್ತಾರೆ

ಈ ಅಸಮತೋಲನವನ್ನು ಪರಿಹರಿಸಲು, ವಿಕಾಸ್ ಮಿತ್ರಾ ಯೋಜನೆ ('ಪ್ರಗತಿ ಸಹವರ್ತಿಗಳು' ಅಥವಾ 'ಅಭಿವೃದ್ಧಿ ಸ್ನೇಹಿತರು', ಅವರಿಗಿರಬೇಕಾದ ಕನಿಷ್ಠ ಅರ್ಹತೆ 12ನೇ ತರಗತಿಯವರೆಗಿನ ಶಿಕ್ಷಣ) 2018ರಿಂದ ಬಿಹಾರದಲ್ಲಿ ಸೇರ್ಪಡೆಗೊಂಡಿದೆ - ಅವರಲ್ಲಿ ರಾಜ್ಯದಾದ್ಯಂತ 9,149, ಜೆಹಾನಾಬಾದ್ ಜಿಲ್ಲೆಯಲ್ಲಿ 123 ಮತ್ತು ಅರೇರಿಯಾ ಜಿಲ್ಲೆಯಲ್ಲಿ 227 ಮಂದಿ ಸಂತಾನಹರಣದ ಸಂಖ್ಯೆಯನ್ನು ಮತ್ತು ಗರ್ಭನಿರೋಧಕದಲ್ಲಿ ಪುರುಷರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಕೆಲಸ ಮಾಡುತ್ತಿದ್ದಾರೆಂದು ಪಾಪ್ಯುಲೇಶನ್ ಫೌಂಡೇಶನ್ ಆಫ್ ಇಂಡಿಯಾದಲ್ಲಿ ಲಭ್ಯವಿರುವ ಡೇಟಾ ಹೇಳುತ್ತದೆ.

ವಿಕಾಸ್ ಮಿತ್ರಾ ಆಗಿ ಕೆಲಸ ಮಾಡುತ್ತಿರುವ ವಿನಯ್ ಕುಮಾರ್ ಅವರ ಪ್ರಕಾರ, ಪಟ್ಟಣದಲ್ಲಿ ಕುಡಿಯುವ ನೀರನ್ನು ಸರಿಯಾಗಿ ಒದಗಿಸುವುದು, ಶೌಚಾಲಯಗಳನ್ನು ನಿರ್ಮಾಣದ ಪರಿಶೀಲನೆ ಮತ್ತು ಸಾಲಗಳ ನೀಡಿಕೆ ಮತ್ತು ಪರಿಶೀಲನೆ ಅವರ ಇತರ ಕರ್ತವ್ಯಗಳಾಗಿವೆ. ಆಗಾಗ್ಗೆ ಪ್ರವಾಹ ಮತ್ತು ಅನಾವೃಷ್ಟಿಯನ್ನು ಎದುರಿಸುವ ಈ ರಾಜ್ಯದಲ್ಲಿ, ಬರ ಪರಿಹಾರವು ಸರಿಯಾಗಿ ತಲುಪಿದೆಯೇ ಮತ್ತು ಪ್ರವಾಹ ಪರಿಹಾರಕ್ಕೆ ಯಾರು ಅರ್ಹರು ಎಂದು ಅವರು ಖಚಿತಪಡಿಸಿಕೊಳ್ಳಬೇಕು.

ವಿಕಾಸ್ ಮಿತ್ರ ಕಾರ್ಯಕರ್ತರಿಗೆ ಬಿಹಾರ ಮಹಾದಲಿತ್ ವಿಕಾಸ್ ಮಿಷನ್ ತಿಂಗಳಿಗೆ 10,000 ರೂ. ಸಂಬಳವನ್ನು ನೀಡುತ್ತದೆ, ಮತ್ತು ಮಹಾದಲಿತ್ ಎಂದು ಪಟ್ಟಿ ಮಾಡಲಾಗಿರುವ ಅಥವಾ ರಾಜ್ಯದಲ್ಲಿ ಹೆಚ್ಚು ಹಿಂದುಳಿದ 21 ಪರಿಶಿಷ್ಟ ಜಾತಿ ಸಮುದಾಯಗಳ ಮೇಲೆ ಇವರ ಚಟುವಟಿಕೆಗಳು ಕೇಂದ್ರೀಕೃತಗೊಳ್ಳಬೇಕೆಂದು ನಿರೀಕ್ಷಿಸಲಾಗಿದೆ. ಅವರು ಜಿಲ್ಲಾಡಳಿತದ ವ್ಯಾಪ್ತಿಗೆ ಒಳಪಡುತ್ತಾರೆ ಮತ್ತು ಬ್ಲಾಕ್ ಕಲ್ಯಾಣ ಅಧಿಕಾರಿಗೆ ವರದಿ ಮಾಡುತ್ತಾರೆ. ಸಂತಾನಹರಣಕ್ಕೆ ಒಳಗಾಗುವಂತೆ ಪುರುಷರನ್ನು ಮನವೊಲಿಸಲು, ವಿಕಾಸ್ ಮಿತ್ರರಿಗೆ ಹೆಚ್ಚುವರಿ ಪ್ರತಿ ವ್ಯಕ್ತಿಗೆ 400 ರೂ ಪ್ರೋತ್ಸಾಹ ಧನವಾಗಿ ನೀಡಲಾಗುತ್ತದೆ.

ನಾನು ವಿನಯ್‌ಕುಮಾರ್ ಅವರನ್ನು ಭೇಟಿಯಾಗುವ ಹೊತ್ತಿಗೆ ಅವರು ಬಿಹಾರದ ವಾರ್ಷಿಕ ಪುರುಷ ಗರ್ಭನಿರೋಧಕ ಸಪ್ತಾಹ ಅಭಿಯಾನದಲ್ಲಿ ನಿರತರಾಗಿದ್ದರು. ಸಂತಾನ ಹರಣ ಚಿಕಿತ್ಸೆಯಲ್ಲಿ "ಪುರುಷರ ಭಾಗವಹಿಸುವಿಕೆ" ಹೆಚ್ಚಿಸುವುದು ಈ ಸಪ್ತಾಹದ ಉದ್ದೇಶವಾಗಿದೆ. ಈ ಪದವು ಈಗ ಕುಟುಂಬ ಯೋಜನೆಯಲ್ಲಿ ಜನಜನಿತ ಪದವಾಗಿದೆ. ಭಾರತದಲ್ಲಿ ಕುಟುಂಬ ಯೋಜನೆಗಾಗಿ ಹೆಚ್ಚು ಗಮನಹರಿಸುವ ರಾಜ್ಯಗಳಲ್ಲಿ ಬಿಹಾರವೂ ಒಂದಾಗಿದೆ. ಇಲ್ಲಿ 15-49ರ ವಯೋಮಾನದವರಲ್ಲಿ ಒಟ್ಟು ಫಲವತ್ತತೆ ದರ (ಟಿಎಫ್‌ಆರ್) 3.41 ಇದೆ. ಇದು ಭಾರತದಲ್ಲಿಯೇ ಅತಿ ಹೆಚ್ಚು (ಮತ್ತು ಅರೇರಿಯಾ ಜಿಲ್ಲೆಯಲ್ಲಿ ಹಾಗೂ ರಾಜ್ಯದ ಇತರ ಕೆಲವು ಜಿಲ್ಲೆಗಳಲ್ಲಿ ಒಟ್ಟು ಫಲವತ್ತತೆ ದರ ಇನ್ನೂ ಹೆಚ್ಚು, ಎಂದರೆ 3.93 ರಷ್ಟಿದೆ) ರಾಷ್ಟ್ರೀಯ ಸರಾಸರಿ ಟಿಎಫ್‌ಆರ್ 2.18 (ಎನ್‌ಎಫ್‌ಹೆಚ್ಎಸ್ -4) ಆಗಿದೆ.

ವಿಕಾಸ್ ಮಿತ್ರಾ ನೇಮಕಕ್ಕೆ ಕೆಲವು ದಶಕಗಳ ಮೊದಲು (ಇತರ ಸಾರ್ವಜನಿಕ ಆರೋಗ್ಯ ಕ್ಷೇತ್ರದ ಕಾರ್ಯಕರ್ತರ ಮೂಲಕ) 1981ರಿಂದಲೂ 'ಪುರುಷರ ಕುಟುಂಬ ಯೋಜನೆಗೆ' ಪ್ರಯತ್ನವನ್ನು ಮಾಡಲಾಗಿದೆ. ಗರ್ಭನಿರೋಧಕ ಚಿಕಿತ್ಸೆಗೆ ಒಳಪಡುವ ಪ್ರತಿಯೊಬ್ಬ ವ್ಯಕ್ತಿಗೆ ಕೇಂದ್ರ ಸರ್ಕಾರದ ಮೂಲಕ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿತ್ತು. ಪ್ರಸ್ತುತ ಸಂತಾನ ಹರಣ ಚಿಕಿತ್ಸೆಗೆ ಒಳಗಾಗುವ ಪುರುಷರಿಗೆ 3,000 ರೂ ನೀಡಲಾಗುತ್ತಿದೆ.
Vasectomy week pamphlets in Araria district: Bihar's annual week-long focus on male sterilisation is one of several attempts at 'male engagement'
PHOTO • Amruta Byatnal
Vasectomy week pamphlets in Araria district: Bihar's annual week-long focus on male sterilisation is one of several attempts at 'male engagement'
PHOTO • Amruta Byatnal

ಅರೇರಿಯಾ ಜಿಲ್ಲೆಯಲ್ಲಿ ವ್ಯಾಸೆಕ್ಟಮಿ ಅಭಿಯಾನ ವಾರದ ಕರಪತ್ರಗಳು: ಪುರುಷರಿಗಾಗಿ ಕುಟುಂಬ ಯೋಜನೆಯನ್ನು ರೂಪಿಸುವ ಪ್ರಯತ್ನಗಳಲ್ಲಿ ಒಂದಾಗಿ ಬಿಹಾರದಲ್ಲಿ ಗರ್ಭನಿರೋಧಕಕ್ಕಾಗಿ ವಾರ್ಷಿಕ ಪ್ರಚಾರ ವಾರ

ಅದೇನೇ ಇದ್ದರೂ, ಲಿಂಗಾಧಾರಿತ ಸಮಾನ ಗರ್ಭನಿರೋಧಕ ಬಳಕೆಗೆ ತೊಡಗಿಸುವ ಪ್ರಯತ್ನದ ವೇಗವು ಬಹಳ ನಿಧಾನವಾಗಿದೆ. ಭಾರತದಾದ್ಯಂತ ಮಹಿಳೆಯರೇ ಈ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಿದ್ದಾರೆ ಮತ್ತು ಮಕ್ಕಳ ನಡುವಿನ ಅಂತರವನ್ನು ಖಚಿತಪಡಿಸಿಕೊಳ್ಳಲು ಮತ್ತು ಅನಗತ್ಯ ಗರ್ಭಧಾರಣೆಯನ್ನು ತಪ್ಪಿಸುವ ಪ್ರಯತ್ನವನ್ನು ಮುಂದುವರಿಸುತ್ತಿದ್ದಾರೆ. ಗರ್ಭನಿರೋಧಕ್ಕೆ ಪ್ರತಿಯಾಗಿ, ಪ್ರಸ್ತುತ 48 ಪ್ರತಿಶತ ವಿವಾಹಿತ ಮಹಿಳೆಯರು (15 ರಿಂದ 49 ವರ್ಷ ವಯಸ್ಸಿನವರು) ಗರ್ಭಾಶಯದ ಸಾಧನಗಳು (ಐಯುಡಿಗಳು), ಮಾತ್ರೆಗಳು ಮತ್ತು ಚುಚ್ಚುಮದ್ದಿನ ವಿಧಾನಗಳನ್ನು ಬಳಸುತ್ತಾರೆ (ಎನ್‌ಎಫ್‌ಹೆಚ್‌ಎಸ್ -4ರಲ್ಲಿ 'ಆಧುನಿಕ ಗರ್ಭನಿರೋಧಕ ವಿಧಾನಗಳ ಅಡಿಯಲ್ಲಿ ವರ್ಗೀಕರಿಸಲಾಗಿದೆ).

ಫಲವತ್ತತೆ-ಹಿಂತಿರುಗಿಸಬಹುದಾದ ವಿಧಾನಗಳಾದ ಮಾತ್ರೆಗಳು, ಕಾಂಡೋಮ್‌ಗಳು, ಐಯುಡಿಗಳ ಬದಲು ಪುರುಷ ಅಥವಾ ಮಹಿಳಾ ಶಾಶ್ವತ ಸಂತಾನ ಹರಣ ಚಿಕಿತ್ಸೆಯ ವಿಧಾನದ ಮೇಲೆ ಭಾರತದ ಹೆಚ್ಚಿನ ಗಮನವನ್ನು ವ್ಯಾಪಕವಾಗಿ ಟೀಕಿಸಲಾಗಿದೆ. "ಸ್ತ್ರೀ ಸಂತಾನ ಹರಣ ಚಿಕಿತ್ಸೆ ಭಾರತದಲ್ಲಿ ಪ್ರಮುಖವಾಗಿದೆ. ಇಲ್ಲಿ ಕುಟುಂಬ ಯೋಜನೆಗೆ ಅವರನ್ನು ಗುರಿಯಾಗಿಸುವುದು ಬಹಳ ಸುಲಭ. ಯಾಕೆಂದರೆ ಭಾರತದಲ್ಲಿ ಅವರಿಗೆ ಸ್ವಯಂ ನಿರ್ಧಾರದ ಹಕ್ಕಾಗಲೀ ಸ್ವಾಯತ್ತತೆಯಾಗಲಿ ಇಲ್ಲ" ಎಂದು ಅಬ್ಸರ್ವರ್ ಸಂಶೋಧನಾ ಸಂಸ್ಥೆಯ ಹಿರಿಯ ಸದಸ್ಯ ಮತ್ತು ಅದರ ಕಲ್ಯಾಣ ಉಪಕ್ರಮಗಳ ಮುಖ್ಯಸ್ಥ ಓಮನ್ ಸಿ. ಕುರಿಯನ್ ಹೇಳುತ್ತಾರೆ.

ರಾಜ್ಯದ ಕುಟುಂಬ ಯೋಜನಾ ವ್ಯವಸ್ಥೆಯು ಮಹಿಳೆಯರಿಗೆ ಅವರ ಜನನ ನಿಯಂತ್ರಣ ಹಕ್ಕುಗಳು, ಗರ್ಭಪಾತಕ್ಕೆ ಕಾನೂನು ನೆರವು ಮತ್ತು ಸಂತಾನೋತ್ಪತ್ತಿ ಆರೋಗ್ಯ ಸೇವೆಗಳ ಪ್ರವೇಶ ಸೇರಿದಂತೆ ಅವರ ಸಂತಾನೋತ್ಪತ್ತಿ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಮತ್ತು ಬಳಸಲು ಅನುವು ಮಾಡಿಕೊಡುತ್ತದೆ. ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ಸಲಹೆ ನೀಡುವ ಮೊದಲ ಸಾಲಿನ ಸಮುದಾಯ ಆರೋಗ್ಯ ಕಾರ್ಯಕರ್ತರಾದ ನುಸ್ರತ್ ಬಾನೊ ಅವರಂತಹ ಆಶಾ ಕಾರ್ಯಕರ್ತರ ಮೂಲಕ ಈ ಅನೇಕ ಪ್ರಯತ್ನಗಳನ್ನು ನಡೆಸಲಾಗುತ್ತದೆ ಮತ್ತು ನಂತರ ಆ ಕುರಿತು ಫಾಲೋ ಅಪ್‌ ಕೂಡ ಮಾಡಲಾಗುತ್ತದೆ. ಮಹಿಳೆಯರಿಗೆ ಗರ್ಭನಿರೋಧಕ ಶಸ್ತ್ರಚಿಕಿತ್ಸೆಗೆ ಒಳಗಾಗಲು ಸರಕಾರ 3,000 ರೂಪಾಯಿಗಳನ್ನು ಪ್ರೋತ್ಸಾಹ ಧನವಾಗಿ ನೀಡುತ್ತದೆ ಮತ್ತು  ಆಶಾ ಕಾರ್ಯಕರ್ತೆಯರಿಗೆ ಒಂದು ಶಸ್ತ್ರ ಚಿಕಿತ್ಸೆಗೆ 500 ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತದೆ.

ಆದಾಗ್ಯೂ, ಸಂತಾನ ಶಕ್ತಿ ಹರಣ ಚಿಕಿತ್ಸೆಯ ಪ್ರಕ್ರಿಯೆಯಿಂದ ಚೇತರಿಸಿಕೊಳ್ಳಲು ಪುರುಷರು ಒಂದು ವಾರ ತೆಗೆದುಕೊಳ್ಳುವ ಸಾಧ್ಯತೆಯಿದ್ದರೆ, ಮಹಿಳೆಯರು ಕೆಲವೊಮ್ಮೆ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಎರಡು ಮೂರು ತಿಂಗಳುಗಳನ್ನು ತೆಗೆದುಕೊಳ್ಳುತ್ತಾರೆ. ಚಿಕಿತ್ಸೆಯ ನಂತರ, ಪುರುಷರನ್ನು ತಕ್ಷಣ ಬಿಡುಗಡೆ ಮಾಡಲಾಗುತ್ತದೆ, ಆದರೆ ಮಹಿಳೆಯರು ಆರೋಗ್ಯ ಕೇಂದ್ರದಲ್ಲಿ ಕನಿಷ್ಠ ಒಂದು ರಾತ್ರಿ ಇರಬೇಕಾಗುತ್ತದೆ.

ಇದರ ಹೊರತಾಗಿ, ಮಹಿಳೆಯರಿಗೆ ಕುಟುಂಬ ಯೋಜನೆಗೆ ಒಳಗಾಗದಿದ್ದರೆ ಮತ್ತೆ ಮತ್ತೆ ಗರ್ಭಿಣಿಯಾಗುವ ಭಯ ಕಾಡುತ್ತಿರುತ್ತದೆ. ಅನೇಕ ಸ್ಥಳಗಳಲ್ಲಿ ಮಹಿಳೆಯರು ತಮ್ಮ ಗಂಡ ಅಥವಾ ಅತ್ತೆಗೆ ಅರಿವಿಲ್ಲದಂತೆ ಸಂತಾನ ಹರಣ ಚಿಕಿತ್ಸೆ ಮಾಡಿಸಿಕೊಳ್ಳುತ್ತಾರೆ; ವಿನಯ್‌ಕುಮಾರ್ ಅವರ ಜೀವನ ಸಂಗಾತಿಯಂತೆ.
Vikas Mitras Vinay Kumar and Ajit Kumar Manjhi work in Jehanabad district: for convincing men to undergo vasectomies, they earn Rs. 400 per person enlisted
PHOTO • Amruta Byatnal
Vikas Mitras Vinay Kumar and Ajit Kumar Manjhi work in Jehanabad district: for convincing men to undergo vasectomies, they earn Rs. 400 per person enlisted
PHOTO • Amruta Byatnal

ವಿಕಾಸ್ ಮಿತ್ರ ವಿನಯ್ ಕುಮಾರ್ ಮತ್ತು ಅಜಿತ್ ಕುಮಾರ್ ಮಾಂಝಿ ಜೆಹಾನಾಬಾದ್ ಜಿಲ್ಲೆಯಲ್ಲಿ ಕೆಲಸ ಮಾಡುತ್ತಾರೆ: ವ್ಯಾಸೆಕ್ಟಮಿಗಾಗಿ ಪುರುಷರನ್ನು ಮನವೊಲಿಸಿ ಆ ವ್ಯಕ್ತಿ   ವ್ಯಾಸೆಕ್ಟಮಿ ಮಾಡಿಸಿಕೊಂಡಲ್ಲಿ ಅವರು ಪ್ರತಿ ವ್ಯಕ್ತಿಗೆ 400 ರೂ ಪ್ರೋತ್ಸಾಹ ಧನ ಪಡೆಯುತ್ತಾರೆ

ವ್ಯಾಸೆಕ್ಟಮಿ ಮಾಡಿಸುವಂತೆ ಕುಮಾರ್‌ ಮನವೊಲಿಸಲು ಹೋಗುವ ಗಂಡಸರಂತೆಯೇ ಸ್ವತಃ ತಾನೂ ವ್ಯಾಸೆಕ್ಟಮಿಗೆ ಹೆದರುತ್ತಾರೆ. ಮತ್ತು ಅದಕ್ಕೆ ಸಂಬಂಧಿಸಿದಂತೆ ಇರುವ ಕಟ್ಟುಕತೆಗಳನ್ನೂ ನಂಬುತ್ತಾರೆ. ಮತ್ತು ಆ ಪ್ರಕ್ರಿಯೆಯ ನಂತರ ತಾನು ದುರ್ಬಲನಾಗಬಹುದೆಂದು ಹೆದರುತ್ತಾರೆ ಕೂಡ. "ಯಾರೊಂದಿಗೆ ಮಾತನಾಡಬೇಕೆಂದು ನನಗೆ ತಿಳಿದಿರಲಿಲ್ಲ" ಎಂದು ಅವರು ಹೇಳುತ್ತಾರೆ. ಅವರ ಇಬ್ಬರು ಮಕ್ಕಳ ಜನನದ ನಂತರ, ಅವರ ಹೆಂಡತಿ ಸ್ವತಃ ಸಂತಾನ ಹರಣ ಚಿಕಿತ್ಸೆಗೆ ಒಳಗಾಗಲು ನಿರ್ಧರಿಸಿದ್ದರು, ಆ ಕುರಿತು ಅವಳು ತನ್ನ ಗಂಡನೊಂದಿಗೆ ಚರ್ಚಿಸಿಲ್ಲ ಅಥವಾ ಅವರಿಗೆ ತಿಳಿಸಿಲ್ಲ.

ಕುಮಾರ್ ಮತ್ತು ಇತರ ವಿಕಾಸ್ ಮಿತ್ರರು ಸಾಮಾನ್ಯವಾಗಿ ತಮ್ಮದೇ ಆದ ದಲಿತರು ಮತ್ತು ಮಹಾದಲಿತ್ ಸಮುದಾಯಗಳಲ್ಲಿ ಕೆಲಸ ಮಾಡುತ್ತಿರುವವಂತೆಯೇ, ಅವರು ಕೆಲವೊಮ್ಮೆ  ಕಾರ್ಯದ ವಿಸ್ತರಣೆಯಾಗಿ ಮೇಲ್ಜಾತಿಯ ಪುರುಷರನ್ನು ಸಂತಾನಹರಣ ಚಿಕಿತ್ಸೆಗಾಗಿ ಸಂಪರ್ಕಿಸುತ್ತಾರೆ. ಅದು ತನ್ನದೇ ಆದ ಸವಾಲುಗಳನ್ನು ಹೊಂದಿದೆ.

"ಪ್ರಬಲ ಜಾತಿಗಳು ಚಿಕಿತ್ಸಾ ಪದ್ಧತಿಗಳ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತವೆ. ನಾವು ಅವರಿಗೆ ಉತ್ತರಿಸಲು ಸಾಧ್ಯವಾಗದಿದ್ದಾಗ ನಾವು ಭಯಭೀತರಾಗುತ್ತೇವೆ. ಆದ್ದರಿಂದ ನಾವು ನಮ್ಮ ಜಾತಿ ವ್ಯವಸ್ಥೆಯೊಳಗಿನ ಜನರನ್ನು ಹುಡುಕುತ್ತೇವೆ." ಎನ್ನುವ 42 ವರ್ಷದ ಅಜಿತ್ ಕುಮಾರ್ ಮಾಂಝಿ ಜಗನ್ನಾಥ ಜಿಲ್ಲೆಯ ಮಖ್ದಂಪುರ್ ಪ್ರದೇಶದ ಕಲನೇರ್ ಗ್ರಾಮದವರಾಗಿದ್ದು, ಇವರು ಮೂವರು ಗಂಡು ಮತ್ತು ಒಬ್ಬ ಹೆಣ್ಣು ಮಗಳ ತಂದೆ.

ಕೆಲವು ಸಂದರ್ಭಗಳಲ್ಲಿ, ಅವರ ಸಣ್ಣ ಶ್ರಮಕ್ಕೆ ಫಲ ಸಿಕ್ಕಿಬಿಡುತ್ತದೆ. 2018ರಲ್ಲಿ ಮಾಂಝಿ ಇಬ್ಬರು ಪುರುಷರನ್ನು ಹಿಡಿದಿದ್ದರು. “ನಾನು ಒಬ್ಬ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದೆ, ಆತ ಎಲ್ಲರೂ ನನ್ನನ್ನು ನೋಡಿ ನಗುತ್ತಾರೆ ನಾನು ಒಬ್ಬಂಟಿಯಾಗಿ ಹೋಗುವುದಿಲ್ಲ ಎಂದು ಹೇಳಿದ. ಕೊನೆಗೆ ಅವನ ನೆರೆ ಮನೆಯ ವ್ಯಕಿಗೂ ವ್ಯಾಸೆಕ್ಟಮಿ ಕುರಿತು ಮನವರಿಕೆ ಮಾಡಿಸಿ ಒಪ್ಪಿಸಿದೆ. ಹೀಗೆ ಅವರು ಪರಸ್ಪರ ಧೈರ್ಯಗೊಂಡು ವ್ಯಾಸೆಕ್ಟಮಿಗೆ ಒಪ್ಪಿಕೊಂಡರು"

ಆದರೆ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾದ 13 ತಿಂಗಳ ನಂತರವೂ ಅವರಿಬ್ಬರಿಗೆ ಬರಬೇಕಿದ್ದ ತಲಾ 3,000 ರೂಪಾಯಿಗಳ ಪ್ರೋತ್ಸಾಹ ಧನ ಬಂದಿಲ್ಲ. ಈ ರೀತಿ ಆಗಾಗ ನಡೆಯುತ್ತಿರುತ್ತದೆ. ಹೀಗಾದಾಗ ಜನರ ಮನವೊಲಿಸುವುದು ಬಹಳ ಕಷ್ಟವಾಗುತ್ತದೆಯೆಂದು ಮಾಂಝಿ ಹೇಳುತ್ತಾರೆ. ಸಾಮಾನ್ಯವಾಗಿ ಹಣವನ್ನು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ, ಆದರೆ ಹಳ್ಳಿಗಳಲ್ಲಿನ ಎಲ್ಲ ಪುರುಷರ ಬಳಿ ಖಾತೆಗಳಿಲ್ಲ. ಇದು ವಿಕಾಸ್ ಮಿತ್ರರ ಸುದೀರ್ಘ ಕರ್ತವ್ಯಗಳ ಪಟ್ಟಿಗೆ ಇನ್ನೊಂದನ್ನು ಸೇರಿಸುತ್ತದೆ. "ಯಾರಾದರೂ ಬ್ಯಾಂಕ್‌ ಖಾತೆಯನ್ನು ಹೊಂದಿಲ್ಲದಿದ್ದರೆ ಅವರಿಗೇ ನಾನೇ ಖಾತೆ ತೆರೆದುಕೊಡುತ್ತೇನೆ" ಎಂದು ವಿನಯ್ ಕುಮಾರ್ ಹೇಳುತ್ತಾರೆ. ನಾನು ಮಾತನಾಡಿಸಿದ ಅಷ್ಟೂ ವಿಕಾಸ್‌ ಮಿತ್ರರ ಪೈಕಿ ಒಬ್ಬರಿಗೂ 2019ರಲ್ಲಿ ಮೂರು ಅಥವಾ ನಾಲ್ಕಕ್ಕಿಂತ ಹೆಚ್ಚು ಪುರುಷರನ್ನು ವ್ಯಾಸೆಕ್ಟಮಿಗೆ ಮನವೊಲಿಸಲು ಸಾಧ್ಯವಾಗಿಲ್ಲ.
Vikas Mitra Malati Kumar and Nandkishore Manjhi: 'We work as a team. I talk to the women, he talks to their husbands', she says
PHOTO • Amruta Byatnal

ವಿಕಾಸ್ ಮಿತ್ರ ಮಾಲತಿ ಕುಮಾರ್ ಮತ್ತು ನಂದಕಿಶೋರ್ ಮಾಂಝಿ: 'ನಾವು ಒಂದು ತಂಡವಾಗಿ ಕೆಲಸ ಮಾಡುತ್ತೇವೆ. ನಾನು ಮಹಿಳೆಯರೊಂದಿಗೆ ಮಾತನಾಡುತ್ತೇನೆ, ಅವರು ಅವರ ಗಂಡಂದಿರೊಡನೆ ಮಾತನಾಡುತ್ತಾರೆ' ಎಂದು ಅವರು ಹೇಳುತ್ತಾರೆ

ವ್ಯಾಸೆಕ್ಟಮಿಗೆ ಮಾಡಿಸಿಕೊಳ್ಳಲು ಪುರುಷನನ್ನು ಮನವೊಲಿಸಲು ಅವನ ಪತ್ನಿಯೊಂದಿಗೂ ಸಮಾಲೋಚಿಸಬೇಕಾದ ಅವಶ್ಯಕತೆಯಿರುತ್ತದೆ. ಮಾಲತಿ ಕುಮಾರ್ ಅವರು ಮಖ್ದಂಪುರ್ ಬ್ಲಾಕ್‌ನ ಕೊಹರಾ ಗ್ರಾಮದ ವಿಕಾಸ್ ಮಿತ್ರ, ಆದರೆ ಅವರು ಪುರುಷರೊಂದಿಗೆ ಮಾತನಾಡಲು ಪತಿ ನಂದಕಿಶೋರ್ ಮಾಂಝಿಯನ್ನು ಅವಲಂಬಿಸುತ್ತಾರೆ. “ನಾವು ಒಂದು ತಂಡವಾಗಿ ಕೆಲಸ ಮಾಡುತ್ತೇವೆ. ನಾನು ಹೆಂಗಸರೊಂದಿಗೆ ಮಾತನಾಡುತ್ತೇನೆ, ಅವರ ಅವರ ಗಂಡಂದಿರೊಂದಿಗೆ ಮಾತನಾಡುತ್ತಾರೆ,” ಎಂದು ಅವರು ಹೇಳುತ್ತಾರೆ.

"ನೀವು ಇನ್ನಷ್ಟು ಮಕ್ಕಳನ್ನು ಹೊಂದಿದರೆ ಈಗಾಗಲೇ ಇರುವ ಮಕ್ಕಳನ್ನು ಹೇಗೆ ಸಾಕುತ್ತೀರಿ?" ಎಂದು ಕೇಳುತ್ತೇನೆಂದು ನಂದಕಿಶೋರ್ ಮಾಂಝಿ ಹೇಳುತ್ತಾರೆ. ಹೆಚ್ಚಿನ ಸಮಯ ಅವರ ಸಲಹೆಯನ್ನು ಜನರು ನಿರ್ಲಕ್ಷಿಸುತ್ತಾರೆ.

ಆಶಾ ಫೆಸಿಲಿಟೇಟರುಗಳು ಸಹ ತಮ್ಮ ಸಹಾಯಕ್ಕಾಗಿ ಗಂಡಂದಿರ ಮೊರೆ ಹೋಗುತ್ತಾರೆ. "ಮಹಿಳೆಯರಾಗಿ ನಾವು ಪುರುಷರ ಬಳಿ ಸಂತಾನ ಹರಣ ಚಿಕಿತ್ಸೆಯ ಕುರಿತು ಮಾತನಾಡುವುದು ಕಷ್ಟವಾಗುತ್ತದೆ. ಅವರೊಂದಿಗೆ ಮಾತನಾಡಲು ಪ್ರಯತ್ನಿಸಿದರೂ ಅವರು ʼಇದನ್ನೆಲ್ಲ ನನ್ನ ಬಳಿ ಏಕೆ ಹೇಳುತ್ತಿದ್ದೀರಿ? ನನ್ನ ಹೆಂಡತಿಯ ಬಳಿ ಮಾತನಾಡಿʼ ಎನ್ನುತ್ತಾರೆ. ಹಾಗಾಗಿ ಗಂಡಸರಿಗೆ ಮನವರಿಕೆ ಮಾಡಲು ನಾನು ನನ್ನ ಗಂಡನಿಗೆ ಹೇಳುತ್ತೇನೆ,” ಎಂದು ನುಸ್ರತ್‌ ಬಾನೊ ಹೇಳುತ್ತಾರೆ.

ಮಹಿಳೆಯರ ದೃಷ್ಟಿಯಿಂದ ನೋಡುವುದಾದರೆ, ಕುಟುಂಬ ಯೋಜನೆಯಲ್ಲಿ ಪುರುಷರ ತೊಡಗಿಸಿಕೊಳ್ಳುವಿಕೆಯೆಂದರೆ ಕೇವಲ ಸಂತಾನ ಶಕ್ತಿ ಹರಣ ಮಾತ್ರವಲ್ಲ. ಇದೊಂದು ಮಾತುಕತೆಯ ಆರಂಭವನ್ನೂ ಒಳಗೊಂಡಿರುತ್ತದೆ. ಈ ಮಾತುಕತೆಯು ಅವರು ಎಷ್ಟು ಮಕ್ಕಳನ್ನು ಪಡೆಯಬೇಕು, ಯಾವ ಬಗೆಯ ಗರ್ಭನಿರೋಧಕವನ್ನು ಆರಿಸಬೇಕು ಎನ್ನುವ ನಿರ್ಧಾರವನ್ನು ಕೈಗೊಳ್ಳಲು ಪುರುಷರಿಗಿರುವಷ್ಟೇ ಹಕ್ಕು  ಮಹಿಳೆಯರಿಗೂ ಇದೆ ಎಂದು ಮನವರಿಕೆ ಮಾಡಿಸುವುದೂ ಸೇರಿರುತ್ತದೆ. "ಇದಕ್ಕೆ ಸಮಯ ಬೇಕಾಗುತ್ತದೆ, ಮತ್ತು ಎರಡೂ ವಿಧಾನಗಳ ಸಾಧಕ-ಬಾಧಕಗಳ ಬಗ್ಗೆ ಇಬ್ಬರಿಗೂ ಮನವರಿಕೆಯಾಗಬೇಕು" ಎಂದು ಅರಾರಿಯಾ ಜಿಲ್ಲೆಯ ರಾಂಪುರ್ ಗ್ರಾಮದಲ್ಲಿ 41 ವರ್ಷದ ಆಶಾ ಕಾರ್ಯಕರ್ತೆ ಮತ್ತು ಮೂವರು ಮಕ್ಕಳ ತಾಯಿಯಾದ ನಿಖಾತ್ ನಾಜ್ ಹೇಳುತ್ತಾರೆ.

ವ್ಯಾಸೆಕ್ಟಮಿ ತಮ್ಮ ದಾಂಪತ್ಯದ ಮೇಲೆ ಬೀರಬಹುದಾದ ಸಾಮಾಜಿಕ ಪರಿಣಾಮಗಳ ಕುರಿತಾಗಿಯೂ ಮಹಿಳೆಯರು ಭಯಪಡುತ್ತಾರೆ. ವ್ಯಾಸೆಕ್ಟಮಿಗೆ ಸಂಬಂಧಿಸಿದಂತೆ ಮಾತನಾಡಲು ಹೋದಾಗ ಒಬ್ಬ ವ್ಯಕ್ತಿಯ ಹೆಂಡತಿ ತನಗೆ ಚಪ್ಪಲಿಯಲ್ಲಿ ಹೊಡೆಯಲು ಬಂದಿದ್ದನ್ನು ನುಸ್ರತ್ ನೆನಪಿಸಿಕೊಳ್ಳುತ್ತಾರೆ. "ವ್ಯಾಸೆಕ್ಟಮಿ ವಿಧಾನದಿಂದ ತನ್ನ ಗಂಡ ದುರ್ಬಲನಾಗುತ್ತಾನೆ ಮತ್ತು ಹಳ್ಳಿಯಲ್ಲಿ ಅಪಹಾಸ್ಯಕ್ಕೆ ಗುರಿಯಾಗುತ್ತಾನೆಂಬ ಭಯ ಆ ಮಹಿಳೆಗಿತ್ತು ಜೊತೆಗೆ ತನ್ನೊಂದಿಗೆ ಹಿಂಸಾತ್ಮಕವಾಗಿ ನಡೆದುಕೊಳ್ಳಬಹುದೆಂಬ ಭಯವೂ ಆಕೆಯನ್ನು ಕಾಡುತ್ತಿತ್ತು"‌

ನಂತರ ಅವರು, "ಮಹಿಳೆಯರು ತಮ್ಮ ಜೀವಕ್ಕೆ ಏನಾದರೂ ಆಗಬಹುದೆಂದು ಭಯಪಡುತ್ತಾರೆ, ಆದರೆ ಈ ಗಂಡಸರು ಜನರು ನಗುತ್ತಾರೆನ್ನುವ ಕಾರಣಕ್ಕಾಗಿ ಭಯಪಡುತ್ತಾರೆಯೇ?" ಎಂದು ಕೇಳುತ್ತಾರೆ.

ಕವರ್ ಇಲ್ಲಸ್ಟ್ರೇಷನ್: ಪ್ರಿಯಾಂಕಾ ಬೋರಾರ್ ಹೊಸ ಮಾಧ್ಯಮ ಕಲಾವಿದೆ. ಹೊಸ ಪ್ರಕಾರದ ಅರ್ಥ ಮತ್ತು ಅಭಿವ್ಯಕ್ತಿಯನ್ನು ಕಂಡುಹಿಡಿಯಲು ತಂತ್ರಜ್ಞಾನವನ್ನು ಪ್ರಯೋಗಿಸುತ್ತಿದ್ದಾರೆ. ಅವರು ಕಲಿಕೆ ಮತ್ತು ಆಟಕ್ಕೆ ಎಕ್ಸ್‌ಪಿರಿಯೆನ್ಸ್ ವಿನ್ಯಾಸ‌ ಮಾಡುತ್ತಾರೆ. ಸಂವಾದಾತ್ಮಕ ಮಾಧ್ಯಮ ಇವರ ಮೆಚ್ಚಿನ ಕ್ಷೇತ್ರ. ಸಾಂಪ್ರದಾಯಿಕ ಪೆನ್ ಮತ್ತು ಕಾಗದ ಇವರಿಗೆ ಹೆಚ್ಚು ಆಪ್ತವಾದ ಕಲಾ ಮಾಧ್ಯಮ.

ಗ್ರಾಮೀಣ ಭಾರತದ ಹದಿಹರೆಯದ ಬಾಲಕಿಯರು ಮತ್ತು ಯುವತಿಯರ ಬಗ್ಗೆ PARI ಮತ್ತು ಕೌಂಟರ್‌ ಮೀಡಿಯಾ ಟ್ರಸ್ಟ್‌ನ ಬೆಂಬಲಿತ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಮಹತ್ವದ ಆದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು, ಸಾಮಾನ್ಯ ಜನರ ಮಾತುಗಳು ಮತ್ತು ಜೀವಂತ ಅನುಭವಗಳ ಮೂಲಕ ತಿಳಿಯುವ ಉದ್ದೇಶವನ್ನು ಹೊಂದಿದೆ. ಇದು ಪಾಪ್ಯುಲೇಷನ್‌ ಆಫ್‌ ಇಂಡಿಯಾದ ಬೆಂಬಲವನ್ನು ಹೊಂದಿದೆ.

ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ವಿಳಾಸವನ್ನು ಸಂಪರ್ಕಿಸಿ: [email protected] ಒಂದು ಪ್ರತಿಯನ್ನು [email protected] . ಈ ವಿಳಾಸಕ್ಕೆ ಕಳಿಸಿ

ಅನುವಾದ: ಶಂಕರ ಎನ್. ಕೆಂಚನೂರು
Amruta Byatnal

Amruta Byatnal is an independent journalist based in New Delhi. Her work focuses on health, gender and citizenship.

Other stories by Amruta Byatnal
Illustration : Priyanka Borar

Priyanka Borar is a new media artist experimenting with technology to discover new forms of meaning and expression. She likes to design experiences for learning and play. As much as she enjoys juggling with interactive media she feels at home with the traditional pen and paper.

Other stories by Priyanka Borar
Editor : Hutokshi Doctor
Series Editor : Sharmila Joshi

Sharmila Joshi is former Executive Editor, People's Archive of Rural India, and a writer and occasional teacher.

Other stories by Sharmila Joshi
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru