ಮುರಳೀಧರ ಜವಾಹಿರೆ ಕೆಲಸಕ್ಕೆ ಕುಳಿತರೆಂದರೆ ಮುಗಿಯಿತು, ಅಲ್ಲಿ ತಪ್ಪುಗಳಿಗೆ ಜಾಗವಿಲ್ಲ, ಏಕಾಗ್ರತೆಗೆ ಭಂಗವಿಲ್ಲ. ಸದ್ದು ಮಾಡದೆ ಲಗುಬಗೆಯಿಂದ ಓಡಾಡುವ ಅವರ ಕೈಗಳು ತೋರಣದ ತುದಿಗಳನ್ನು ಜೋಡಿಸಿ, ಅವುಗಳನ್ನು ಸೇರಿಸಿ ಶಿವದಾರದಿಂದ ಕಟ್ಟುತ್ತವೆ. ಪ್ರತಿದಿನವೂ ತಾನು ಮಾಡುವ ಬಿದಿರಿನ ಚೌಕಟ್ಟಿನ ತೋರಣಕ್ಕೆ 70ರ ಇಳಿವಯಸ್ಸಿನ ಈ ಬಡಕಲು ದೇಹವು ಇಷ್ಟು ಏಕಾಗ್ರತೆಯನ್ನು ತೋರಿಸುತ್ತದೆಂದರೆ ನೀವು ನಂಬುವುದಿಲ್ಲ.

ಮಹಾರಾಷ್ಟ್ರದ ಈಚಲಕಾರಂಜಿಯಲ್ಲಿ ಮಣ್ಣು ಮತ್ತು ಇಟ್ಟಿಗೆಯಿಂದ ಕಟ್ಟಿದ ಅವರ ನೀಲಿ ಬಣ್ಣದ ಮನೆಯ ಹೊರಗಿನ ತೋರಣ ಕಟ್ಟುವ ಜಾಗದಲ್ಲಿ ಕೆಲಸದ ಸಾಮಗ್ರಿಗಳು- ಬಿದಿರಿನ ಕಡ್ಡಿ, ಬಣ್ಣದ ಕಾಗದ, ಬ್ಯಾಗಡೆ ಕಾಗದ, ಹಳೆ ದಿನಪತ್ರಿಕೆ ಇತ್ಯಾದಿಗಳು ಹರಡಿಕೊಂಡಿರುತ್ತವೆ. ಇನ್ನು ಕೆಲವೇ ಸಮಯದಲ್ಲಿ ಇವೆಲ್ಲ ಮನೆಗೆಳ, ದೇವಸ್ಥಾನಗಳ ಬಾಗಿಲ ನೆಲುವನ್ನು ಸಿಂಗರಿಸುವ ಹಾರದಂತೆ ಸುಂದರ ತೋರಣಗಳಾಗಿ ಬದಲಾಗುತ್ತವೆ.

ಮುರಳೀಧರರ ಸುಕ್ಕುಗಟ್ಟಿದ ಕೈಗಳು ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಬಿದಿರಿನ ಕಡ್ಡಿಯೊಂದನ್ನು 30 ಸಮಾನ ಅಳತೆಯ ತುಂಡುಗಳಾಗಿ ಸೀಳುತ್ತವೆ. ತನ್ನ ಸಹಜಸಿದ್ದ ಅಳತೆಯ ಅರಿಮೆಯಿಂದ ಅವುಗಳನ್ನು ಒಂಬತ್ತು ಸಮಕೋನೀಯ ತ್ರಿಭುಜಗಳಾಗಿಸುತ್ತಾರೆ. ಈ ತ್ರಿಭುಜಗಳನ್ನು 3 ಅಥವಾ 10 ಅಡಿ ಉದ್ದದ ಬಿದಿರಿನ ಕಡ್ಡಿಗೆ ಬಿಗಿಯುತ್ತಾರೆ.

ಮುರಳೀಧರರು ಆಗಾಗ್ಗೆ ತಮ್ಮ ಬೆರಳುಗಳನ್ನು ಅಲ್ಲಲ್ಲಿ ತಗ್ಗಿಹೋದ ಅಲ್ಯುಮಿನಂ ಬಟ್ಟಲಿನಲ್ಲಿದ್ದ, ಹುಣಸೆ ಬೀಜಗಳನ್ನು ಕುಟ್ಟಿ ಮಾಡಿದ ಒಂದು ರೀತಿಯ ಅಂಟು, ‘ಖಾಲ್’ನಲ್ಲಿ ಅದ್ದಿಕೊಳ್ಳುತ್ತಾರೆ. 60 ದಾಟಿರುವ ಅವರ ಹೆಂಡತಿ ಶೋಭಾ ಆ ದಿನ ಬೆಳಿಗ್ಗೆ ಅದನ್ನು ಮಾಡಿಟ್ಟಿದ್ದರು.

“ಕೆಲಸ ಮಾಡುವಾಗ ಅವರು ಒಂದೇ ಒಂದು ಮಾತು ಆಡುವುದಿಲ್ಲ, ಮತ್ತು ಅವರನ್ನು ಯಾರೂ ಅರ್ಧದಲ್ಲಿ ಮಾತನಾಡಿಸಲು ಆಗುವುದೂ ಇಲ್ಲ” ಎನ್ನುತ್ತಾರೆ ಅವರು.

ಮುರಳೀಧರರು ಅತ್ತ ಬಿದಿರಿನ ಚೌಕಟ್ಟುಗಳನ್ನು ಮಾಡಿಕೊಳ್ಳುತ್ತಿರುವಾಗ, ಇತ್ತ ಶೋಭಾ ತಾನು ಮುಂದಿನ ಅಲಂಕಾರಿಕ ಕೆಲಸಗಳಿಗೆ ಸಿದ್ದ ಮಾಡುತ್ತಾರೆ – ಅವರು ವೃತ್ತಾಕಾರದ ಬಣ್ಣದ ಬ್ಯಾಗಡೆ ಕಾಗದಗಳಿಂದ ಕುಚ್ಚುಗಳನ್ನು ಮಾಡಿಕೊಳ್ಳುತ್ತಾರೆ, “ಮನೆಯ ಸಣ್ಣಪುಟ್ಟ ಕೆಲಸಗಳು ಮುಗಿದ ಮೇಲೆ, ಈ ಕೆಲಸವನ್ನು ಮಾಡುತ್ತೇನೆ. ಆದರೆ ಈ ಕೆಲಸ ಮಾಡುವಾಗ ಕಣ್ಣಿಗೆ ಆಯಾಸವಾಗುತ್ತದೆ” ಎನ್ನುತ್ತಾರೆ.

PHOTO • Sanket Jain

18 ಅಡಿ ಉದ್ದದ ಬಿದಿರಿನ ಕಡ್ಡಿಯನ್ನು ಸೀಳುವುದರೊಂದಿಗೆ ಮುರಳೀಧರರ ಚೌಕಟ್ಟು ಮಾಡುವ ಕೆಲಸ ಪ್ರಾರಂಭವಾಗುತ್ತದೆ

ಅವರು ಅಂಟು ತಯಾರಿಸಲು ಬಳಸುವ ಹುಣಸೆಬೀಜಕ್ಕೆ ಒಂದು ಪಾಯಲಿಗೆ (5 ಕಿಗ್ರಾಂ) ರೂ. 40, ಮತ್ತು ಒಂದು ವರ್ಷಕ್ಕೆ 2-3 ಪಾಯಲಿ ಉಪಯೋಗಿಸುತ್ತಾರೆ. ತೋರಣಗಳನ್ನು ಸಿಂಗರಿಸಲು ಹಳೆಯ ದಿನಪತ್ರಿಕೆಗಳಿಂದ ಮಾಡಿದ ನೂರಕ್ಕೂ ಹೆಚ್ಚು ಕೊಡೆಗಳು, ಕಾಯಿಗಳು ಮತ್ತು ರಾಘುಗಳ (ಗಿಳಿ) ದಾಸ್ತಾನು ಇಟ್ಟುಕೊಂಡಿದ್ದಾರೆ. “ನಾವು ಇವುಗಳನ್ನು ಮನೆಯಲ್ಲೇ ಮಾಡುತ್ತಿದ್ದೆವು, ಆದರೆ ಈಗ ವಯಸ್ಸಾದ ಮೇಲೆ ಅವುಗಳನ್ನು ಮಾರ್ಕೆಟಿನಿಂದ ಕೊಳ್ಳುತ್ತೇವೆ,” ಎಂದು ವಿವರಿಸಿದರು ಶೋಭಾ. “90 ಕಾಯಿಗಳು ಮತ್ತು ರಾಘುಗಳಿಗೆ ಒಟ್ಟು 100 ರೂಪಾಯಿ ಆಗುತ್ತದೆ.” ಒಮ್ಮೆ ತೋರಣದ ಚೌಕಟ್ಟು ಸಿದ್ದವಾಯಿತೆಂದರೆ, ಮುರಳೀಧರರು ಅದಕ್ಕೆ ಬೇರೆಬೇರೆ ಅಲಂಕಾರಿಕಗಳನ್ನು ಜೋಡಿಸಲು ಶುರುಮಾಡುತ್ತಾರೆ.

ನೂರಾರು ವರ್ಷಗಳಿಂದ ಜವಾಹಿರೆಯವರ ಕುಟುಂಬವು ಅನೇಕ ತಲೆಮಾರುಗಳಿಂದ ಈ ತೋರಣಗಳನ್ನು ಮಾಡುತ್ತಿದ್ದಾರೆ. “ನಮ್ಮ ಈ ಕಲೆ ಕನಿಷ್ಟ 150 ವರ್ಷ ಹಳೆಯದು ಎಂದು ನಮ್ಮ ತಂದೆ ಹೇಳುತ್ತಿದ್ದರು” ಎಂದು ಮುರಳೀಧರರು ನಿಚ್ಚಳ ಹೆಮ್ಮೆಯಿಂದ ಹೇಳುತ್ತಾರೆ. ಅವರ ಕುಟುಂಬವು ತಾಂಬಟ ಸಮುದಾಯಕ್ಕೆ (ಮಹಾರಾಷ್ಟ್ರದಲ್ಲಿ ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿದೆ) ಸೇರಿದೆ ಮತ್ತು ತೋರಣ ಮಾಡುವುದು, ನಲ್ಲಿ ರಿಪೇರಿ ಮತ್ತು ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳಿಗೆ ಕಲಾಯಿ ಹಾಕುವುದು ಇವರ ಕುಲಕಸುಬು.

ಅವರ ತಂದೆ ನಲ್ಲಿಗಳನ್ನು (ತಾಮ್ರದ ಅಥವಾ ಹಿತ್ತಾಳೆ ಪಾತ್ರೆಗಳಿಗೆ) ಹಾಕುತ್ತಿದ್ದರು, ಬಂಬುಗಳ (ಸಾಂಪ್ರದಾಯಿಕ ಬಿಸಿನೀರಿನ ಹಂಡೆ) ರಿಪೇರಿ, ಪಾತ್ರೆಗಳಿಗೆ ಕಲಾಯಿ ಹಾಕುವುದು (ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳಿಗೆ ಸತುವನ್ನು ಕಾಯಿಸಿ ಬಳಿಯುವುದು) ಮಾಡುತ್ತಿದ್ದರು. ಕಲಾಯಿ ಹಾಕುವ ನಿಪುಣತೆ ಹೋಗಿ ಇಪ್ಪತ್ತು ವರ್ಷಗಳಾಯಿತು ಎನ್ನುತ್ತಾರೆ. “ಈಗ ಯಾರು ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳನ್ನು ಬಳಸುತ್ತಾರೆ? ಈಗ ಬರೀ ಸ್ಟೀಲು, ಪ್ಲಾಸ್ಟಿಕ್ಕು. ಅವುಗಳಿಗೆ ಕಲಾಯಿ ಬೇಕಿಲ್ಲ”

ಕೊಲ್ಲಾಪುರ ಜಿಲ್ಲೆಯ ಇಚಲಕರಂಜಿ ಪಟ್ಟಣದಲ್ಲಿ ಸಾಂಪ್ರದಾಯಿಕವಾಗಿ ಕೈಯಿಂದ ತೋರಣಗಳನ್ನು ಮಾಡುತ್ತಿರುವ ಏಕೈಕ ಕುಟುಂಬ ಇವರದು ಎನ್ನುತ್ತಾರೆ ಮುರಳೀಧರರು: “ಈಗ ಇವುಗಳನ್ನು ಮಾಡುತ್ತಿರುವುದು ನಾವು ಮಾತ್ರ., ಈ ಕಲಾಪ್ರಕಾರದ ಬಗ್ಗೆ ಕೇಳಲೂ ಯಾರೂ ಬರುವುದಿಲ್ಲ ಎಂದ ಮೇಲೆ, ಇನ್ನು ಇದನ್ನು ಹೊಸದಾಗಿ ಕಲಿಯ ಬಯಸುವವರು ದೂರದ ಮಾತು” ಕೆಲವು ದಶಕಗಳ ಕೆಳಗೆ ಕಡಿಮೆ ಎಂದರೂ ಹತ್ತು ಕುಟುಂಬಗಳು ಈ ಕೆಲಸ ಮಾಡುತ್ತಿದ್ದವು.

ಆದರೂ ಗುಣಮಟ್ಟ ಅಂದಿನಂತೆಯೇ ಇದೆ ಎಂಬುದನ್ನು ಖಂಡಿತವಾಗಿ ಹೇಳುತ್ತಾರೆ. “ಕಹೀಚ್ ಬದಲ್ ನಹಿ. ತೀಚ್ ಕ್ವಾಲಿಟಿ, ತೋಚ್ ನಮೂನ,” ಎನ್ನುತ್ತಾರೆ- ಒಂದು ಚೂರೂ ಬದಲಾಗಿಲ್ಲ. ಅದೇ ಮಟ್ಟ, ಅದೇ ರೂಪ”

ಅಪ್ಪ ತೋರಣ ಮಾಡುವುದನ್ನು ನೋಡುತ್ತಾ ಕಲಿತ ಮುರಳೀಧರರು ತೋರಣ ಮಾಡಲು ಆರಂಭಿಸಿದಾಗ ಅವರಿಗೆ 10 ವರ್ಷ. “ಜಾಮಿತಿಯ ಸಲಕರಣೆಗಳನ್ನು ಬಳಸದೆ ಹೀಗೆ ತೋರಣ ಮಾಡುವುದಕ್ಕೆ ಹತ್ತಾರು ವರ್ಷ ಅಭ್ಯಾಸವಾಗಬೇಕು” ಎನ್ನುತ್ತಾರೆ. “ನಿಜವಾದ ಕಲೆಗಾರನಿಗೆ ಅಳತೆಪಟ್ಟಿಯ ಅಗತ್ಯ ಬೀಳುವುದಿಲ್ಲ. ನಾವ್ಯಾರೂ ಅಳತೆ ಸಲಕರಣೆಗಳನ್ನು ಬಳಸಿಲ್ಲ. ನಮಗೆ ಅಳತೆ ಮಾಡುವ ಅಗತ್ಯವೂ ಇಲ್ಲ. ಅದಕ್ಕೆ ತಲೆ ಉಪಯೋಗಿಸಬೇಕು” ಎಂದು ಸೇರಿಸಿದರು.

PHOTO • Sanket Jain

ಸೀಳಿಕೊಳ್ಳುವ ಮೊದಲು ಮುರಳೀಧರರು ಆಕಾರಕ್ಕೆ ತಕ್ಕಂತೆ ಜೋಡಿಸುವ ಜಾಗಗಳಲ್ಲಿ ಬಿದಿರಿನ ಕಡ್ಡಿಯನ್ನು ಬಗ್ಗಿಸುತ್ತಾರೆ

ರೂಪವಿನ್ಯಾಸದ ಯಾವ ಪುಸ್ತಕಗಳೂ ಇಲ್ಲ. “ಕಶಾಲ ಪಹಿಜೆ?” ರೂಪವಿನ್ಯಾಸ ಯಾಕೆ ಬೇಕು? “ಇದಕ್ಕೆ ಬೇಕಿರುವುದು ನಿಖರತೆ ಮತ್ತು ನೈಪುಣ್ಯತೆ” ಎನ್ನುತ್ತಾರೆ. ಮೊದಮೊದಲು ಅವರು ಮಾಡುವಾಗಲೂ ತಪ್ಪಾಗುತ್ತಿತ್ತು, ಆದರೆ ಈಗ ಕೇವಲ 20 ನಿಮಿಷದಲ್ಲಿ ಒಂದು ಬಿದಿರಿನ ಕಟ್ಟು ಕಲೆಯಾಗಿ ಅರಳುತ್ತದೆ.

ಆ ದಿನ ಮಾಡುತ್ತಿದ್ದ ತೋರಣದ ಚೌಕಟ್ಟಿಗೆ ಮೊದಲು ಒಂದು ಕೊಡೆಯನ್ನು ಕಟ್ಟಿದರು, ಮತ್ತೆ ಅದಕ್ಕೆ ಎರಡು ಹಳದಿ ನವಿಲುಗಳನ್ನು ಸೇರಿಸಿ ಬಿಗಿದರು. ಅವುಗಳನ್ನು 28 ಕಿಮೀ ದೂರದ ಕೊಲ್ಹಾಪುರದಿಂದ ತಂದಿದ್ದರು. ಮುರಳೀಧರ ಮತ್ತು ಶೋಭಾ ಇಬ್ಬರೂ ಸೇರಿ ಹಿಂದೂ ದೇವರು ಮತ್ತು ದೇವತೆಗಳ ಫೋಟೋಗಳನ್ನು ಒಂದು ಬಿಟ್ಟು ಒಂದು ತ್ರಿಕೋನಗಳಲ್ಲಿ ಜೋಡಿಸಿದರು. ಇವುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಕರ್ನಾಟಕದ ನಿಪ್ಪಾಣಿಯಿಂದಲೋ ಇಲ್ಲ ಕೊಲ್ಹಾಪುರದಿಂದಲೋ ತಂದಿದ್ದರು. “ಮಾರುಕಟ್ಟೆಯಲ್ಲಿ ನಮಗೆ ಫೋಟೋಗಳು ಸಿಗದಿದ್ದರೆ ಕ್ಯಾಲೆಂಡರುಗಳಲ್ಲಿ, ಲಗ್ನಪತ್ರಿಕೆಗಳಲ್ಲಿ ಮತ್ತು ದಿನಪತ್ರಿಕೆಗಳಲ್ಲಿ ಸಿಗುತ್ತವೆ- ಅವನ್ನೇ ಕತ್ತರಿಸಿ ಅಂಟಿಸುತ್ತೇವೆ.” ಎಂದರು ಮುರಳೀಧರ. ಇಷ್ಟೇ ಫೋಟೋಗಳನ್ನು ಅಂಟಿಸಬೇಕೆಂದಿಲ್ಲ. “ಅದು ಕಲಾವಿದನಿಗೆ ಬಿಟ್ಟ ವಿಷಯ” ಎಂದೂ ಹೇಳಿದರು. ಮತ್ತೆ ಈ ಫೋಟೋಗಳ ಮೇಲೆ ಅರೆಪಾರದರ್ಶಕ ಬ್ಯಾಗಡೆ ಕಾಗದ ಹಾಕಿ ಅಂಟಿಸಿದರು.

ತೋರಣದ ಕಟ್ಟಿನ ಉಳಿಕೆ ಬಾಗವನ್ನು ಪ್ರಿಂಟೆಡ್ ಬಣ್ಣದ ಕಾಗದಗಳಿಂದ ಅಲಂಕರಿಸಿದರು. ಸುಮಾರು 33×46 ಇಂಚಿನ ಒಂದು ಶೀಟಿಗೆ 3 ರೂಪಾಯಿ. ಒಳ್ಳೆಯ ಗುಣಮಟ್ಟದ ತೋರಣ ಕೇಳುವವರಿಗೆ ವೆಲ್ವೆಟ್ ಕಾಗದ ಬಳಸುತ್ತಾರೆ. ಎರಡು ಕಾಗದದ ಗಿಳಿಗಳನ್ನು ಕಟ್ಟಿನ ಕೆಳ ಅಂಚಿಗೆ ಕಟ್ಟಿದರು, ಮತ್ತೆ ಎಲ್ಲಾ ತ್ರಿಕೋನಗಳ ಕೆಳಗೆ ಬಂಗಾರದ ಬಣ್ಣದ ಹಾಳೆಯಲ್ಲಿ ಸುತ್ತಿದ ಕಾಗದದ ಕಾಯಿಯನ್ನು ಬ್ಯಾಗಡೆಯ ಕುಚ್ಚುಗಳೊಂದಿಗೆ ತೂಗುಬಿಟ್ಟರು.

“10 ಅಡಿ ಉದ್ದದ ಒಂದು ತೋರಣ ಮಾಡಲು 5 ಗಂಟೆ ಬೇಕು” ಎನ್ನುತ್ತಾರೆ ಮುರಳೀಧರ. ಆದರೆ ಅವರು ಕೆಲಸ ಮಾಡಲು ನಿಗದಿತ ವೇಳಾಪಟ್ಟಿಯೇನೂ ಇಲ್ಲ. “ಆವೋ ಜಾವೋ, ಘರ್ ತುಮಾರಾ (ಯಾವಾಗ ಬೇಕಾದ್ರೂ ಬಾ, ಯಾವಾಗ ಬೇಕಾದ್ರೂ ಹೋಗು, ನಿಮ್ದೇ ಮನೆ),” ಹಿಂದಿಯ ಗಾದೆ ಮಾತಿನಲ್ಲಿ ಇಷ್ಟ ಬಂದಾಗ ಇಷ್ಟ ಬಂದಷ್ಟು ಕೆಲಸ ಮಾಡುತ್ತೇನೆ ಎಂಬುದನ್ನು ಹೇಳಿದರು.

ಕೆಲಸದ ಸಮಯ ಯಾವುದೇ ಆಗಿರಲಿ, ಕೆಲಸದ ಅಚ್ಚುಕಟ್ಟುತನದಲ್ಲಿ ಬದಲಾವಣೆ ಆಗುವುದಿಲ್ಲ. ಗಂಟೆಗಟ್ಟಲೆ ಬೆವರುಹರಿಸಿದರೂ, ಕಲೆಯಲ್ಲಿ ಕಸವಿಲ್ಲ, ಕಸುವೇ ಎಲ್ಲಾ ಎಂದು ಹೆಮ್ಮೆಪಟ್ಟುಕೊಳ್ಳುತ್ತಾರೆ. “ನೀವು ಪ್ಲಾಸ್ಟಿಕ್ಕು ಮತ್ತು ಇತರೆ ವಿಷಕಾರಿ ವಸ್ತುಗಳಿಂದ ಮಾಡಿದ ಈಗಿನ ತೋರಣಗಳನ್ನು ನೋಡಿ. ಅವು ಪರ್ಯಾವರಣಕ್ಕೆ (ಪರಿಸರ) ಒಳ್ಳೆಯವಲ್ಲ.”

ತೋರಣಗಳೆಲ್ಲ ಸಾಮಾನ್ಯವಾಗಿ ಮೂರರಿಂದ 10 ಅಡಿ ಇರುತ್ತವೆ – ಚಿಕ್ಕ ತೋರಣಗಳಿಗೆ ಬೇಡಿಕೆ ಜಾಸ್ತಿ. ಇವುಗಳನ್ನು ರೂ. 130 ರಿಂದ ರೂ. 1200 ರವರೆಗೂ ಮಾರುತ್ತೇವೆ. 1990ರ ದಶಕದಲ್ಲಿ ಒಂದು ತೋರಣಕ್ಕೆ ರೂ. 30ರಿಂದ ರೂ. 300 ರವರೆಗೂ ಇತ್ತು.

PHOTO • Sanket Jain

ತಾನು ಸಿದ್ದಿಸಿಕೊಂಡ ಅಳತೆಯ ಅರಿಮೆಯಿಂದಲೇ ಮುರಳೀಧರರು ಬಿದಿರುಕಡ್ಡಿಗಳನ್ನು 30 ಸಮಾನ ತುಂಡುಗಳನ್ನಾಗಿ ಕತ್ತರಿಸಿಕೊಂಡು ಅವುಗಳಿಂದ ಒಂಬತ್ತು ಸಮಭಾಹು ತ್ರಿಭುಜಗಳನ್ನು ಮಾಡಿಕೊಳ್ಳುತ್ತಾರೆ

ಮದುವೆಗಳಲ್ಲಿ ಮಧುಮಗ ಮತ್ತು ಮದುವಣಗಿತ್ತಿಯರ ಹಣೆಯನ್ನು ಸಿಂಗರಿಸುವ ಕಿರೀಟದಂತಹ ಆಭರಣ - ದೊಡ್ಡ ಬಾಸಿಂಗವನ್ನೂ ಮುರಳೀಧರರು ತಯಾರಿಸುತ್ತಾರೆ. ಹಳ್ಳಿಯ ಜಾತ್ರೆಗಳಲ್ಲಿ ದೇವರಿಗೆ ಹರಕೆಯಾಗಿಯೂ ಅದನ್ನು ಒಪ್ಪಿಸುತ್ತಾರೆ. ಒಂದು ಜೊತೆ ಕಾಗದದ ಬಾಸಿಂಗ ತಯಾರಿಸಲು 90 ನಿಮಿಷ ಬೇಕು, ಅದು ರೂ. 150 ಕ್ಕೆ ಮಾರಾಟವಾಗುತ್ತದೆ. ಎಷ್ಟು ಬಾಸಿಂಗಗಳನ್ನು ಮಾರುತ್ತಾರೆ ಎನ್ನುವುದು ಸಿಗುವ ಕೆಲಸ ಮತ್ತು ಹಬ್ಬದ ಸಾಲಿನ ಕಾಲವನ್ನು ಅವಲಂಬಿಸಿದೆ.

“ಬಾಸಿಂಗಗಳು ಸಂಪ್ರದಾಯದ ಭಾಗವಾಗಿರುವುದರಿಂದ ಅದರ ಬೇಡಿಕೆ ಕುಸಿದಿಲ್ಲ, ಆದರೆ ಜನರು ದೀಪಾವಳಿ, ಮದುವೆ, ವಾಸ್ತು ಮುಂತಾದ ಹಬ್ಬ ಆಚರಣೆಗಳ ಕಾಲದಲ್ಲಿ ಮಾತ್ರ ತೋರಣಗಳನ್ನು ಕೊಳ್ಳುತ್ತಾರೆ.” ಎಂದರು ಮುರಳೀಧರ.

ಮುರಳೀಧರರು ತಮ್ಮ ಕಲೆಗಾರಿಕೆಯ ವಸ್ತುಗಳನ್ನು ಯಾವುದೇ ವ್ಯಾಪಾರಿಗೆ (ಅಂಗಡಿಗೆ) ಮಾರುವುದಿಲ್ಲ, ಅವರು ಅದನ್ನು ಕಾಸಿಗೆ ಕಡೆಯಾದ ಬೆಲೆಗೆ ಕೇಳುತ್ತಾರೆ. “ಮೂರು ಅಡಿಯ ಒಂದು ತೋರಣಕ್ಕೆ ಜಾಸ್ತಿ ಅಂದರೆ ರೂ. 60ರಿಂದ ರೂ. 70 ಕೊಟ್ಟಾರು. ಅದರಲ್ಲಿ ನಮಗೆ ಲಾಭವೂ ಇಲ್ಲ ಮತ್ತೆ ಹಣವನ್ನೂ ಸರಿಯಾಗಿ ಕೊಡುವುದಿಲ್ಲ,” ಎನ್ನುತ್ತಾರೆ. ಕೊಳ್ಳಲು ಮನೆಗೆ ಬರುವ ಗಿರಾಕಿಗಳಿಗೆ ಮಾರುವುದೇ ಅವರಿಗೆ ಇಷ್ಟ.

ಆದರೆ ಇಂದು ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಪ್ಲಾಸ್ಟಿಕ್ ವಸ್ತುಗಳು ಅವರ ಕಲೆಗಾರಿಕೆಯ ಕುತ್ತಿಗೆಯ ಮೇಲೆ ಕಾಲಿಟ್ಟು ಉಸಿರುಗಟ್ಟಿಸುತ್ತಿವೆ. ಅವನ್ನು ಮಾಡಲು ಸುಲಭ, ದರವೂ ಅಗ್ಗ. ಮುರಳೀಧರರ ತಿಂಗಳ ಆದಾಯ ಇರುವುದೇ ರೂ. 5000- 6000. ಅದರಲ್ಲಿ ಈ ಕೋವಿಡ್-19 ಮತ್ತು ಲಾಕ್ಡೌನ್ ಬೇರೆ ಸೇರಿಕೊಂಡು ಅವರನ್ನು ಹೈರಾಣಾಗಿಸಿವೆ. “ಎಷ್ಟೋ ತಿಂಗಳು ಒಂದೇ ಒಂದು ಕೆಲಸದ ಆರ್ಡರ್ ಸಿಕ್ಕಿರಲಿಲ್ಲ. ಕಳೆದ ವರ್ಷದ ಲಾಕ್ಡೌನಿನಲ್ಲಿ ಐದು ತಿಂಗಳವರೆಗೆ ತೋರಣ ಕೊಂಡುಕೊಳ್ಳಲು ಒಬ್ಬರೇ ಒಬ್ಬರು ಬರಲಿಲ್ಲ” ಎಂದರು ಮುರಳೀಧರರು.

ಮುರಳೀಧರರು 1994ರ ಪ್ಲೇಗಿನ ಸಂಕಷ್ಟವನ್ನು ನೆನಪಿಸಿಕೊಳ್ಳುತ್ತಾರೆ, ಆಗ ಅವರ ಇಡೀ ಕುಟುಂಬ ಮನೆಯನ್ನು ತೊರೆದಿತ್ತು. “ಆ ಮಹಾಮಾರಿಯ ಕಾರಣದಿಂದ ಮನೆಬಿಟ್ಟು ಬಯಲಿನಲ್ಲಿ ವಾಸವಿದ್ದೆವು, ಈಗ ಕರೋನಾದಿಂದ ಎಲ್ಲರೂ ಮನೆಯೊಳಗೇ ಇರಬೇಕೆಂದು ಹೇಳುತ್ತಿದ್ದಾರೆ. ಕಾಲ ಹೇಗೆ ಬದಲಾಯಿತು ನೋಡಿ” ಎಂದರು.

ಕಾಲವೂ ಬದಲಾಗಿದೆ. ಮುರಳೀಧರರು ತಮ್ಮ ತಂದೆಯಿಂದ ಕಲೆಯನ್ನು ಕಲಿತಂತೆ ಅವರ ಮಕ್ಕಳು ತೋರಣ ಮಾಡುವುದನ್ನು ಕಲಿಯುವ ಗೋಜಿಗೇ ಹೋಗಿಲ್ಲ. “ಅವರು ಖಾಲ್ (ಹುಣಸೆ ಅಂಟು) ಮುಟ್ಟಲೂ ಹೋಗಿಲ್ಲ, ಇನ್ನು ಕಲೆಯನ್ನು ಹೇಗೆ ಅರ್ಥ ಮಾಡಿಕೊಂಡಾರು” ಎನ್ನುತ್ತಾರೆ. ಅವರ ಇಬ್ಬರು ಗಂಡುಮಕ್ಕಳು ಯೋಗೇಶ್, 36 ಮತ್ತು ಮಹೇಶ್, 34 ಲೇತ್ ಮಶಿನ್ನಿನಲ್ಲಿ ಕೂಲಿ ಕೆಲಸ ಮಾಡುತ್ತಾರೆ. ಮಗಳು ಯೋಗಿತಾ, 32 ಮನೆಯಲ್ಲಿ ಕೆಲಸ ಮಾಡುತ್ತಾರೆ.

ಸಾವಿರಾರು ಮನೆಬಾಗಿಲುಗಳನ್ನು ಸಿಂಗರಿಸಿದ ತೋರಣಗಳನ್ನು ಮಾಡುತ್ತಾ, ನೂರಾರು ಮದುಮಕ್ಕಳ ಹಣೆಯನ್ನು ಸಿಂಗರಿಸಿದ ಬಾಸಿಂಗಗಳನ್ನು ತಯಾರಿಸುತ್ತಾ, ಸುಮಾರು ಆರು ದಶಕಗಳ ನಂತರ ಈಗ ಈ ಪರಂಪರೆಯನ್ನು ಮುಂದುವರೆಸುವವರು ಯಾರೂ ಇಲ್ಲ. “ನಾವೀಗ ಯಾವದಕ್ಕೂ ಬೇಡದವರಾಗಿದ್ದೇವೆ” ಎಂದು ವಿಷಾದದ ನಗೆಯೊಂದಿಗೆ ಹೇಳಿದರು.

PHOTO • Sanket Jain

ನಂತರ ಕತ್ತರಿಯಿಂದ ಅವುಗಳನ್ನು ತುಂಡುಗಳಾಗಿ ಕತ್ತರಿಸಲು ಶುರು ಮಾಡಿದರು : ‘ ನಾವು ಯಾರೂ ಅಳತೆ ಮಾಡುವ ಉಪಕರಣಗಳನ್ನು ಬಳಸುವುದಿಲ್ಲ . ನಾವು ಅಳತೆ ಮಾಡುವ ಅಗತ್ಯವಿಲ್ಲ . ಅದನ್ನು ಬುದ್ದಿವಂತಿಕೆಯಿಂದಲೇ ಮಾಡಿಕೊಳ್ಳಬೇಕು


PHOTO • Sanket Jain

ತ್ರಿಕೋನಾಕಾರದ ಕಟ್ಟುಗಳು ಆಚೀಚೆ ಸರಿಯದಂತೆ , ಒಂದರ ಮೇಲೊಂದು ಹಾದುಹೋಗಿರುವ ಜಾಗದಲ್ಲಿ ಅವುಗಳನ್ನು ಉರುಟಾದ ಶಿವದಾರದಿಂದ ಬಿಗಿಯುತ್ತಾರೆ


PHOTO • Sanket Jain

ಮುರಳೀಧರರು ಆಗಾಗ್ಗೆ ಅಲ್ಯುಮಿನಂ ಬಟ್ಟಲಿನಲ್ಲಿರುವ ಖಾಲ್ ( ಅಂಟು ) ನಲ್ಲಿ ತಮ್ಮ ಬೆರಳುಗಳನ್ನು ಅದ್ದಿಕೊಳ್ಳುತ್ತಿರುತ್ತಾರೆ

PHOTO • Sanket Jain

ಬಿದಿರಿನ ಚೌಕಟ್ಟು ರೂಪ ಕಳೆದುಕೊಳ್ಳದಂತೆ ಮುರಳೀಧರರು ಹುಣಸೆ ಬೀಜದ ಪುಡಿಯಿಂದ ಮಾಡಿದ ಅಂಟು - ಖಾಲನ್ನು ಹಚ್ಚುತ್ತಾರೆ


PHOTO • Sanket Jain

ಒಂದು ಬಿದಿರಿನ ಪಟ್ಟಿಗಳ ಚೌಕಟ್ಟನ್ನು ಮಾಡಲು ಅವರು 20 ನಿಮಿಷ ತೆಗೆದುಕೊಳ್ಳುತ್ತಾರೆ , ಅದನ್ನು ಸ್ವಲ್ಪ ದಪ್ಪನಾದ ಬಿದಿರಿನ ಕಡ್ಡಿಗೆ ಮೊಳೆ ಹೊಡೆದು ನಿಲ್ಲಿಸುತ್ತಾರೆ


PHOTO • Sanket Jain

ಮುರಳೀಧರರೊಂದಿಗೆ ಮದುವೆಯಾದ ನಂತರ ಶೋಭಾರವರೂ ಕೈಯಿಂದ ಮಾಡುವ ತೋರಣಗಳ ಕೆಲಸಗಳನ್ನು ಮಾಡುತ್ತಿದ್ದಾರೆ - ಇದು ಅವರ ಕುಟುಂಬದ ಉದ್ಯಮ


PHOTO • Sanket Jain

ಮನೆಗೆಲಸವೆಲ್ಲ ಮುಗಿದ ಮೇಲೆ , ಶೋಭಾರು ಬ್ಯಾಗಡೆ ಕಾಗದಗಳಿಂದ ಕಾಗದದ ಕುಚ್ಚುಗಳನ್ನು ಮಾಡಲು ಶುರುಮಾಡುತ್ತಾರೆ


PHOTO • Sanket Jain

ತೋರಣದ ಅಲಂಕಾರಕ್ಕೆ ಬೇಕಾಗುವ ನೂರು ಕೊಡೆಗಳನ್ನು ಮುರಳೀಧರ್ ಮತ್ತು ಶೋಭಾ ತಮ್ಮಲ್ಲಿಟ್ಟುಕೊಂಡಿದ್ದಾರೆ


PHOTO • Sanket Jain

ಜನರು ಕೊಳ್ಳುವ ನಿರೀಕ್ಷೆಯಲ್ಲಿ ಮುರಳೀಧರರು ತಮ್ಮ ಮನೆಯ ಆವರಣದಲ್ಲಿ ತೋರಣಗಳನ್ನು ಕಾಣುವಂತೆ ನೇತುಹಾಕಿದ್ದಾರೆ


PHOTO • Sanket Jain

ಮುರಳೀಧರರು ತಮ್ಮ ತಂದೆಯಿಂದ ಕಲಿತಂತೆ , ಅವರ ಮಕ್ಕಳಿಗೆ ಕೈಯಲ್ಲಿ ತೋರಣ ಮಾಡುವ ಗೋಜಲಿನ ಬಗ್ಗೆ ಆಸಕ್ತಿಯೇ ಇಲ್ಲ


PHOTO • Sanket Jain

ಮದುವೆ ಸಮಾರಂಭಗಳಲ್ಲಿ ಮದುಮಗ ಮತ್ತು ಮದುವಣಗಿತ್ತಿ ಹಣೆಯ ಮೇಲೆ ಧರಿಸುವ ಕಿರೀಟದಂತಹ ಆಭರಣ , ಬಾಸಿಂಗವನ್ನೂ ಜವಾಹಿರರು ಮಾಡುತ್ತಾರೆ


PHOTO • Sanket Jain

ಒಂದು ಜೊತೆ ಕಾಗದದ ಬಾಸಿಂಗ ಮಾಡಲು 90 ನಿಮಿಷ ಬೇಕು , ಅದು ರೂ . 150 ಕ್ಕೆ ಮಾರಾಟವಾಗುತ್ತದೆ . ಎಷ್ಟು ಮಾರಾಟವಾಗುತ್ತದೆ ಎಂಬುದು ಮದುವೆ ಸುಗ್ಗಿ ಮತ್ತು ಆರ್ಡರುಗಳ ಮೇಲೆ ಅವಲಂಬಿಸಿದೆ


PHOTO • Sanket Jain

ಜಾತ್ರೆಗಳ ಸಮಯದಲ್ಲಿ ಬಾಸಿಂಗಗಳನ್ನು ಅಲ್ಲಿನ ದೇವರುಗಳಿಗೆ ಹರಕೆಯಾಗಿ ಸಲ್ಲಿಸಲಾಗುತ್ತದೆ . ಕಷ್ಟಪಟ್ಟು ಜಟಿಲವಾದ ವಸ್ತುಗಳನ್ನು ಮಾಡಿಕೊಂಡು ಬಂದ ಆರು ದಶಕಗಳ ನಂತರ , ಅದನ್ನು ಮುಂದಿನ ಪೀಳಿಗೆಗೆ ದಾಟಿಸಲು ಮುರಳೀಧರರಿಗೆ ಯಾರೂ ಸಿಗುತ್ತಿಲ್ಲ


ಅನುವಾದ : ಬಿ . ಎಸ್ . ಮಂಜಪ್ಪ

Sanket Jain

Sanket Jain is a journalist based in Kolhapur, Maharashtra. He is a 2022 PARI Senior Fellow and a 2019 PARI Fellow.

Other stories by Sanket Jain
Translator : B.S. Manjappa

Manjappa B. S. is an emerging writer and translator in Kannada.

Other stories by B.S. Manjappa