ಬಸಂತ್‌ ಬಿಂದ್‌ ಈಗ ಕೆಲವು ದಿನಗಳಿಂದ ಮನೆಯಲ್ಲಿದ್ದಾರೆ. ದಿನಗೂಲಿ ಕೃಷಿ ಕೂಲಿ ಕಾರ್ಮಿಕರಾದ ಅವರು ಕೆಲವು ದಿನಗಳಿಂದ ಪಾಟ್ನಾದಲ್ಲಿನ  ಹೊಲಗಳಲ್ಲಿ ಕೆಲಸ ಮಾಡುತ್ತಿದ್ದರು. ಇದು ಯೆಹಾನಾಬಾದ್ ಜಿಲ್ಲೆಯ ಸೇಲಂಪೂರ್ ಗ್ರಾಮದಿಂದ ಕೆಲವು ಗಂಟೆಗಳ ಪ್ರಯಾಣದ ದೂರದಲ್ಲಿದೆ.

ಮರುದಿನ, ಜನವರಿ 15 ರಂದು, ಸಂಕ್ರಾಂತಿ ಹಬ್ಬ ಮುಗಿದ ನಂತರ, ಅವರು ಕೆಲಸಕ್ಕೆ ಮರಳಲು ನಿರ್ಧರಿಸಿದ್ದರು ಮತ್ತು ತಮ್ಮೊಂದಿಗೆ ಕೆಲಸಕ್ಕೆ ಬರಲು ನೆರೆಯ ಚಂದಾರಿಯಾ ಗ್ರಾಮದಿಂದ ಕೆಲವು ಕಾರ್ಮಿಕರನ್ನು ಕರೆಯಲು ಹೋಗಿದ್ದರು. ಈ ಕೆಲಸಗಾರರೊಂದಿಗೆ, ಅವರು ಪಾಟ್ನಾಕ್ಕೆ ಹಿಂತಿರುಗಲು ಸಿದ್ಧರಾಗಿದ್ದರು.

ಅವರು ಅಲ್ಲಿ ಕೆಲವು ಜನರೊಂದಿಗೆ ಮಾತನಾಡುತ್ತಿದ್ದಾಗ, ಪೊಲೀಸ್ ಮತ್ತು ಅಬಕಾರಿ ಅಧಿಕಾರಿಗಳನ್ನು ಹೊತ್ತ ವಾಹನವೊಂದು ಘಟನಾ ಸ್ಥಳಕ್ಕೆ ಬಂದಿತು. ಬಿಹಾರ ನಿಷೇಧ ಮತ್ತು ಅಬಕಾರಿ (ತಿದ್ದುಪಡಿ) ಕಾಯ್ದೆ, 2016ರ ಅಡಿಯಲ್ಲಿ ರಚಿಸಲಾದ ಮದ್ಯ ವಿರೋಧಿ ದಳ ಇದಾಗಿತ್ತು. ಅವರ ಕೆಲಸವೆಂದರೆ, "ಬಿಹಾರ ರಾಜ್ಯದ ವ್ಯಾಪ್ತಿಯಲ್ಲಿ ಸಂಪೂರ್ಣ ಮದ್ಯ ಮತ್ತು ಮಾದಕವಸ್ತುಗಳ ನಿಷೇಧವನ್ನು ಜಾರಿಗೊಳಿಸುವುದು, ಕಾರ್ಯಗತಗೊಳಿಸುವುದು ಮತ್ತು ಉತ್ತೇಜಿಸುವುದು..."

ಪೊಲೀಸರನ್ನು ನೋಡುತ್ತಿದ್ದಂತೆ ಜನರು ಓಡತೊಡಗಿದರು. ಅವರೊಡನೆ ಬಸಂತ್‌ ಕೂಡಾ ಓಡತೊಡಗಿದರು. ಆದರೆ “ನನ್ನ ಕಾಲಿನಲ್ಲಿ ಸ್ಟೀಲ್‌ ರಾಡ್‌ ಇದ್ದ ಕಾರಣ ಎಲ್ಲರಂತೆ ವೇಗವಾಗಿ ಓಡುವುದು ನನ್ನಿಂದ ಸಾಧ್ಯವಿರಲಿಲ್ಲ. ಕೇವಲ ಒಂದೇ ನಿಮಿಷದಲ್ಲಿ ಅವರ ಗ್ರಹಚಾರ ಮೇಲುಗೈ ಸಾಧಿಸಿತ್ತು. “ಯಾರೋ ಅಂಗಿಯ ಕಾಲರ್‌ ಹಿಡಿದು ನನ್ನನ್ನು ವಾಹನೊದಳಗೆ ತಳ್ಳಿದರು.” ಎಂದು 27 ವರ್ಷ ಪ್ರಾಯದ ಅವರು ನೆನಪಿಸಿಕೊಳ್ಳುತ್ತಾರೆ.

ಅವರು ತಂಡದ ಬಳಿ ತನ್ನ ಬಳಿ ಹಾಗೂ ತನ್ನ ಮನೆಯಲ್ಲಿ ಮದ್ಯ ಇದೆಯೇ ಎಂದು ಪರೀಕ್ಷಿಸುವಂತೆ ಕೇಳಿಕೊಂಡರು. ಆದರೆ ಅವರು ಆ ಕುರಿತು ತಲೆ ಕಡೆಸಿಕೊಳ್ಳಲಿಲ್ಲ. “ಪೊಲೀಸರು ನನ್ನನ್ನು ಅಬಕಾರಿ ಇಲಾಖೆಗೆ ಹೋಗಲು ಬಿಡುವುದಾಗಿ ಹೇಳಿದಾಗ ನನಗೆ ಒಂದಷ್ಟು ಸಮಾಧಾನವಾಯಿತು.”

ಆದರೆ ಬಸಂತ್‌ ತಂಡದೊಡನೆ ಪೊಲೀಸ್‌ ಠಾಣೆಗೆ ಬಂದಾಗ ಅಲ್ಲಿ ಅವರಿಗೆ ಆಘಾತ ಕಾದಿತ್ತು. ಪೊಲೀಸರು ಬರೆದ ಟಿಪ್ಪಣಿಯಲ್ಲಿ ಬಸಂತ್‌ ಬಳಿ 500 ಎಮ್‌ಎಲ್‌ ಮದ್ಯ ದೊರಕಿತ್ತು ಎಂದು ಅಧಿಕೃತ ಟಿಪ್ಪಣಿಯಲ್ಲಿ ಬರೆದಿದ್ದರು. ಈ ಮೂಲಕ ಮದ್ಯಪಾನ ನಿಷೇಧ ಕಾಯ್ದೆಯಡಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಕಾಯ್ದೆಯಡಿ ಮೊದಲ ಬಾರಿಗೆ ಅಪರಾಧ ಎಸಗುವವರಿಗೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ.ಗಿಂತ ಕಡಿಮೆಯಿಲ್ಲದಂತೆ ದಂಡ ವಿಧಿಸಲಾಗುತ್ತದೆ.

PHOTO • Umesh Kumar Ray
PHOTO • Umesh Kumar Ray

ಬಸಂತ್ ಬಿಂದ್ ಪಾಟ್ನಾ ಸುತ್ತಮುತ್ತಲಿನ ಹೊಲಗಳಲ್ಲಿ ದಿನಗೂಲಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಸಂಕ್ರಾಂತಿ ಆಚರಿಸಿ ಕೆಲಸಕ್ಕೆ ಮರಳುತ್ತಿದ್ದಾಗ, ಬಿಹಾರದ ಚಂದಾರಿಯಾದಲ್ಲಿ ಮದ್ಯ ನಿಷೇಧ ದಳದಿಂದ ಅವರನ್ನು ಬಂಧಿಸಿತು

"ನಾನು ಎರಡು ಗಂಟೆಗಳಿಗೂ ಹೆಚ್ಚು ಕಾಲ ವಾದಿಸಿದೆ. ತನಿಖೆ ನಡೆಸುವಂತೆ ಅವರಿಗೆ ಹೇಳಿದೆ.” ಆದರೆ ಅವರ ಮನವಿಯನ್ನು ಪರಿಗಣಿಸಲಾಗಲಿಲ್ಲ ಮತ್ತು ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸಲಾಯಿತು. ಬಸಂತ್ ಅವರನ್ನು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, "ನನ್ನ ಇಡೀ ಕುಟುಂಬದಲ್ಲಿ ಯಾರೂ ಮದ್ಯ ಮಾರಾಟ ಮಾಡುವುದಿಲ್ಲ, ದಯವಿಟ್ಟು ನನ್ನನ್ನು ಬಿಡುಗಡೆ ಮಾಡಿ, ಎಂದು ನಾನು ಜಡ್ಜ್ ಸಾಹೇಬರನ್ನು ವಿನಂತಿಸಿಕೊಂಡೆ." ನ್ಯಾಯಾಲಯವು ತನಿಖಾಧಿಕಾರಿಯನ್ನು (ಐಒ) ಕರೆದಿತು, ಆದರೆ ಅಬಕಾರಿ ಅಧಿಕಾರಿಗಳು ಐಒ ಮತ್ತೊಂದು ದಾಳಿಯಲ್ಲಿ ನಿರತರಾಗಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು ಎಂದು ಬಸಂತ್ ಹೇಳುತ್ತಾರೆ, ನಂತರ ಅವರನ್ನು ಕಾಕೋ ಜೈಲಿಗೆ ಕಳುಹಿಸಲಾಯಿತು. ಅವರು ನಾಲ್ಕು ದಿನಗಳನ್ನು ಜೈಲಿನಲ್ಲಿ ಕಳೆದರು ಮತ್ತು ಅವರ ಸಂಬಂಧಿಕರು ನೀಡಿದ ಜಾಮೀನಿನ ಮೇಲೆ ಜನವರಿ 19, 2023ರಂದು ಅವರನ್ನು ಬಿಡುಗಡೆ ಮಾಡಲಾಯಿತು - ಅವರ ತಾಯಿ ತನ್ನ ಭೂಮಿಯನ್ನು ಮತ್ತು ಅವರ ಸೋದರಸಂಬಂಧಿ (ತಾಯಿಯ ಸಹೋದರ) ಅವರ ಮೋಟಾರುಸೈಕಲ್ಲನ್ನು ಇದಕ್ಕಾಗಿ ಅಡವಿಟ್ಟರು.

*****

ಜೆಹಾನಾಬಾದ್ ಜಿಲ್ಲೆಯಲ್ಲಿ ಆರು ಪೊಲೀಸ್ ಠಾಣೆಗಳಿವೆ ಮತ್ತು ಅವುಗಳಲ್ಲಿ ಹುಲಾಸ್‌ಗಂಜ್, ಪಾಲಿ ಮತ್ತು ಬಾರಾಬರ್ ಟೂರಿಸಮ್‌ ಠಾಣೆಗಳಲ್ಲಿ ದಾಖಲಾದ ದೂರುಗಳನ್ನು ನೋಡಿದರೆ, ದಾಖಲಾದ 501 ಎಫ್‌ಐಆರ್‌ಗಳಲ್ಲಿ 207 ಮುಸಹರ್ ಸಮುದಾಯಕ್ಕೆ ಸೇರಿದವು ಎಂದು ತಿಳಿದುಬಂದಿದೆ. ಇವರು ರಾಜ್ಯದ ಅತ್ಯಂತ ಬಡ ಮತ್ತು ಅಂಚಿನಲ್ಲಿರುವ ಸಮುದಾಯಗಳಲ್ಲಿ ಸ್ಥಾನ ಪಡೆದಿದ್ದಾರೆ. ಉಳಿದ ಎಫ್ಐಆರ್‌ಗಳಲ್ಲಿ, ಹೆಚ್ಚಿನ ಆರೋಪಿಗಳು ಬಿಂದ್ ಮತ್ತು ಯಾದವ್ ಸಮುದಾಯದವರದಾಗಿದ್ದು, ಎರಡೂ ಸಮುದಾಯ ರಾಜ್ಯದಲ್ಲಿ ಇತರ ಹಿಂದುಳಿದ ವರ್ಗ (ಒಬಿಸಿ) ಎಂದು ವರ್ಗೀಕರಿಸಲ್ಪಟ್ಟಿದೆ.

"ಬಂಧಿತರಲ್ಲಿ ಹೆಚ್ಚಿನವರು ದಲಿತರು ಅಥವಾ ಹಿಂದುಳಿದ ವರ್ಗಗಳಿಗೆ ಸೇರಿದವರು, ವಿಶೇಷವಾಗಿ ಮುಸಹರ್‌ ಸಮುದಾಯದವರು" ಎಂದು ಅಶಕ್ತ ಸಮುದಾಯಗಳಿಗೆ ಕಾನೂನು ನೆರವು ನೀಡುವ ಸರ್ಕಾರೇತರ ಸಂಸ್ಥೆಯಾದ ಲಾ ಫೌಂಡೇಶನ್‌ ಸಂಸ್ಥೆಯ ಸ್ಥಾಪಕ ಪ್ರವೀಣ್ ಕುಮಾರ್ ಹೇಳುತ್ತಾರೆ. "ಪೊಲೀಸರು ಬಸ್ತಿಗೆ ನುಗ್ಗಿ ಯಾವುದೇ ಪುರಾವೆಗಳಿಲ್ಲದೆ, ಪುರುಷರು, ಮಹಿಳೆಯರು ಮತ್ತು ಮಕ್ಕಳನ್ನು ಬಂಧಿಸಿ ಜೈಲಿಗೆ ಹಾಕುತ್ತಾರೆ. ಅವರಿಂದ ವಕೀಲರನ್ನು ಹೊಂದಲು ಸಾಧ್ಯವಿಲ್ಲದ ತಿಂಗಳುಗಟ್ಟಲೆ ಜೈಲಿನಲ್ಲಿ ಕಳೆಯುತ್ತಾರೆ" ಎಂದು ಅವರು ಹೇಳುತ್ತಾರೆ.

ಬಸಂತ್ ಅವರ ಊರಾದ ಸಲೇಮನ್‌ಪುರದಲ್ಲಿ 150 ಮನೆಗಳಿವೆ (ಜನಗಣತಿ 2011), ಅದರಲ್ಲಿ ಕೆಲವರು ಮಾತ್ರ ಭೂಮಿಯನ್ನು ಹೊಂದಿದ್ದಾರೆ ಮತ್ತು ಬಹುತೇಕರು ದಿನಗೂಲಿ ಕೆಲಸವನ್ನು ಅವಲಂಬಿಸಿದ್ದಾರೆ. ಇಲ್ಲಿನ 1242 ಜನರಲ್ಲಿ ಹೆಚ್ಚಿನವರು ಬಿಂದ್, ಮುಸಹರ್, ಯಾದವ್, ಪಾಸಿ ಮತ್ತು ಮುಸ್ಲಿಂ ಸಮುದಾಯಗಳಿಗೆ ಸೇರಿದವರು.

"ಇದು ನನ್ನ ಮನೆ. ನನ್ನನ್ನು ನೋಡಿ. ನಾನು ಮದ್ಯ ಮಾರಾಟ ಮಾಡುವ ವ್ಯಕ್ತಿಯಂತೆ ಕಾಣುತ್ತೇನೆಯೇ? ನನ್ನ ಇಡೀ ಕುಟುಂಬದಲ್ಲಿ ಯಾರೂ ಅದನ್ನು ಮಾಡುವುದಿಲ್ಲ" ಎಂದು ಬಸಂತ್ ತನ್ನ ವಿರುದ್ಧ ದಾಖಲಾದ ಪ್ರಕರಣದ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಾರೆ. ಬಸಂತ್ ಅವರ ಪತ್ನಿ ಕವಿತಾ ದೇವಿ ಪತಿ ಅರ್ಧ ಲೀಟರ್ ಮದ್ಯವನ್ನು ಸಾಗಿಸುತ್ತಿದ್ದರು ಎನ್ನುವ ಆರೋಪದ ಕುರಿತು ಕೇಳಿದಾಗ, ಹೆಚ್ಚು ಮಾತನಾಡದ ಹೇಳಿದರು, "ಅವರು ಅದನ್ನು ಏಕೆ ಮಾರಾಟ ಮಾಡುತ್ತಾರೆ? ಅವರಿಗೆ ಅದನ್ನು ಕುಡಿದು ಅಭ್ಯಾಸವೇ ಇಲ್ಲ."

PHOTO • Umesh Kumar Ray

ಬಸಂತ್ ಬಿಂದ್ ತನ್ನ ಪತ್ನಿ ಕವಿತಾ ದೇವಿ ಮತ್ತು ಅವರ ಎಂಟು ವರ್ಷದ ಮಗ ಮತ್ತು ಎರಡು ವರ್ಷದ ಮಗಳೊಂದಿಗೆ ಸಲೇಮಾನ್ಪುರದ ತಮ್ಮ ಮನೆಯಲ್ಲಿ

PHOTO • Umesh Kumar Ray
PHOTO • Umesh Kumar Ray

ಅವರ ಮನೆ (ಎಡ) 30 ಅಡಿ ಅಗಲದ ಕಾಲುವೆಯ (ಬಲ) ದಡದಲ್ಲಿದೆ. ನಿವಾಸಿಗಳು ಇನ್ನೊಂದು ಬದಿಗೆ ಹೋಗಲು ಅಡ್ಡಲಾಗಿ ಸಂಕದ ಹಾಗೆ ಇರಿಸಲಾದ ಎರಡು ವಿದ್ಯುತ್ ಕಂಬಗಳ ಮೇಲೆ ನಡೆಯಬೇಕು

ಕುಟುಂಬದ ಇಟ್ಟಿಗೆ ಮತ್ತು ಹುಲ್ಲಿನಿಂದ ನಿರ್ಮಿಸಲಾದ ಮನೆ 30 ಅಡಿ ಅಗಲದ ಕಾಲುವೆಯ ದಡದಲ್ಲಿದೆ. ಸಮತಲವಾಗಿ ಇರಿಸಲಾದ ಎರಡು ವಿದ್ಯುತ್ ಕಂಬಗಳು ಕಾಲುವೆಯನ್ನು ದಾಟಲು ಸೇತುವೆಯಾಗಿ ಕಾರ್ಯನಿರ್ವಹಿಸುತ್ತವೆ. ಮಳೆಗಾಲದಲ್ಲಿ, ಕಾಲುವೆಯು ನೀರಿನಿಂದ ಉಕ್ಕಿ ಹರಿಯುತ್ತದೆ ಮತ್ತು ಆ ಕಂಬಗಳನ್ನು ದಾಟುವುದು ಅಪಾಯಕಾರಿಯಾಗಿ ಪರಿಣಮಿಸಬಹುದು. ಅವರ ಎಂಟು ವರ್ಷದ ಮಗ ಸರ್ಕಾರಿ ಶಾಲೆಯಲ್ಲಿ 1ನೇ ತರಗತಿಯಲ್ಲಿ ಓದುತ್ತಿದ್ದಾನೆ; ಹಿರಿಯ ಮಗಳಿಗೆ ಐದು ವರ್ಷ ಮತ್ತು ಅವಳು ಅಂಗನವಾಡಿಗೆ ಹಾಜರಾಗುತ್ತಾಳೆ, ಮತ್ತು ಕಿರಿಯ ಮಗಳಿಗೆ ಈಗಷ್ಟೇ ಎರಡು ವರ್ಷ.

"ಈ ಮದ್ಯ ನಿಷೇಧವು ನಮಗೆ ಹೇಗೆ ಸಹಾಯ ಮಾಡಿದೆ ಎಂದು ನನಗೆ ಅರ್ಥವಾಗುತ್ತಿಲ್ಲ" ಎಂದು 25 ವರ್ಷದ ಕವಿತಾ ಹೇಳುತ್ತಾರೆ. "[ನಿಷೇಧದಿಂದಾಗಿ] ನಾವು ತೊಂದರೆ ಅನುಭವಿಸಿದ್ದೇವೆ."

ಈಗ ಕ್ರಿಮಿನಲ್ ಕಾನೂನಿನ ಅಡಿಯಲ್ಲಿ ಆರೋಪ ಹೊತ್ತಿರುವ ಬಸಂತ್ ಮುಂದೆ ದೀರ್ಘ, ಶ್ರಮದಾಯಕ ಮತ್ತು ದುಬಾರಿ ಕಾನೂನು ಹೋರಾಟವನ್ನು ಎದುರು ನೋಡುತ್ತಿದ್ದಾರೆ. "ಶ್ರೀಮಂತರು ಮದ್ಯವನ್ನು ಮನೆ ಬಾಗಿಲಿಗೆ ತರಿಸಿಕೊಳ್ಳುತ್ತಾರೆ. ಅವರಿಗೆ ಯಾರೂ ತೊಂದರೆ ಕೊಡುವುದಿಲ್ಲ" ಎಂದು ಅವರು ಕಟುವಾಗಿ ಹೇಳುತ್ತಾರೆ.

ಬಸಂತ್ ಈಗಾಗಲೇ ವಕೀಲರ ಶುಲ್ಕ ಮತ್ತು ಜಾಮೀನಿಗಾಗಿ 5,000 ರೂ.ಗಳನ್ನು ಖರ್ಚು ಮಾಡಿದ್ದಾರೆ. ಮತ್ತು ಮುಂದೆಯೂ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಕೆಲಸ ಮಾಡಲು ಸಾಧ್ಯವಾಗದ ಕಾರಣ ಅವರು ಕೂಲಿಯನ್ನೂ ಗಳಿಸಲಾಗುತ್ತಿಲ್ಲ: "ಹಮ್ ಕಮಾಯೇ ಕೀ ಕೋರ್ಟ್ ಕೇ ಚಕ್ಕರ್ ಲಗಾಯೇಂ [ನಾನು ಕೆಲಸಕ್ಕೆ ಹೋಗುವುದೋ ಅಥವಾ ಕೋರ್ಟಿಗೆ ಅಲೆಯುವುದೋ]?"

*****

“ನಮ್ಮ ಹೆಸರು ಬರೆಯಬೇಡಿ. ನೀವು ನಮ್ಮ ಹೆಸರನ್ನು ಬಹಿರಂಗಗೊಳಿಸಿದರೆ ಪೊಲೀಸರು ನಮಗೆ ತೊಂದರೆ ಕೊಡುತ್ತಾರೆ. ನಿಮಗೆ ಗೊತ್ತಲ್ಲ ನನಗೆ ಸಣ್ಣ ಮಕ್ಕಳಿವೆ, ಅವುಗಳನ್ನು ನೋಡಿಕೊಳ್ಳಬೇಕು” ಎಂದು ಸೀತಾದೇವಿ (ಹೆಸರು ಬದಲಾಯಿಸಲಾಗಿದೆ) ಹೆದರಿದ ದನಿಯಲ್ಲಿ ಹೇಳಿದರು.

ಈ ಕುಟುಂಬವು ಜೆಹಾನಾಬಾದ್ ರೈಲ್ವೆ ನಿಲ್ದಾಣದಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಮುಸಹರಿ ಎಂಬ ಕುಗ್ರಾಮದಲ್ಲಿ ವಾಸಿಸುತ್ತಿದೆ. ಅವರು ಮುಸಹರ್ ಸಮುದಾಯಕ್ಕೆ ಸೇರಿದವರು, ಅವರನ್ನು ರಾಜ್ಯದಲ್ಲಿ ಮಹಾದಲಿತ ಎಂದು ವರ್ಗೀಕರಿಸಲಾಗಿದೆ - ಇದು ಅತ್ಯಂತ ಬಡ ಸಮುದಾಯಗಳಲ್ಲಿ ಒಂದಾಗಿದೆ.

ಅವರ ಪತಿ ರಾಮ್‌ಭುವಲ್ ಮಾಂಜಿ (ಹೆಸರು ಬದಲಾಯಿಸಲಾಗಿದೆ) ನಿಷೇಧ ಕಾಯ್ದೆಯಡಿ ಎಲ್ಲಾ ಆರೋಪಗಳಿಂದ ಮುಕ್ತರಾಗಿ ಒಂದು ವರ್ಷವಾಗಿದೆ. ಆದರೆ ಸೀತಾದೇವಿ ಈಗಲೂ ಭಯದಲ್ಲಿದ್ದಾರೆ.

PHOTO • Umesh Kumar Ray
PHOTO • Umesh Kumar Ray

ಬಸಂತ್ ಈಗಾಗಲೇ ವಕೀಲರ ಶುಲ್ಕ ಮತ್ತು ಜಾಮೀನಿಗಾಗಿ 5000 ರೂ.ಗಳನ್ನು ಖರ್ಚು ಮಾಡಿದ್ದಾರೆ ಮತ್ತು ಇನ್ನಷ್ಟು ಹಣವನ್ನು ಮುಂದೆ ಖರ್ಚು ಮಾಡಬೇಕಾಗಿ ಬರುತ್ತದೆ. 'ಈ ಮದ್ಯ ನಿಷೇಧವು ನಮಗೆ ಹೇಗೆ ಸಹಾಯ ಮಾಡಿದೆ ಎಂದು ನನಗೆ ಅರ್ಥವಾಗುತ್ತಿಲ್ಲ' ಎಂದು ಅವರ ಪತ್ನಿ ಕವಿತಾ ಹೇಳುತ್ತಾರೆ

ಎರಡು ವರ್ಷಗಳ ಹಿಂದೆ ರಾಮ್‌ಭುವಾಲ್ ಮಾಂಜಿ ವಿರುದ್ಧ ಮದ್ಯಪಾನ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಸೀತಾದೇವಿ ಹೇಳುತ್ತಾರೆ, "ನಮ್ಮ ಮನೆಯಲ್ಲಿ ಮದ್ಯವಿರಲಿಲ್ಲ. ಆದರೆ ಪೊಲೀಸರು ಅವರನ್ನು ತಮ್ಮೊಂದಿಗೆ ಕರೆದೊಯ್ದರು. ನಾವು ಅದನ್ನು ತಯಾರಿಸುವುದಿಲ್ಲ ಅಥವಾ ಮಾರಾಟ ಮಾಡುವುದಿಲ್ಲ. ನನ್ನ ಪತಿಗೆ ಕುಡಿಯುವ ಅಭ್ಯಾಸವಿಲ್ಲ."

ಆದರೆ, "ನವೆಂಬರ್ 24, 2021ರಂದು ಬೆಳಿಗ್ಗೆ 8 ಗಂಟೆಗೆ ಪೊಲೀಸರು ಮಹುವಾ ಮತ್ತು ಗೂಡ್‌ ಬಳಸಿ ತಯಾರಿಸಿದ ಚುಲಾಯ್ ಎಂಬ 26 ಲೀಟರ್ ದೇಶೀಯ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ" ಎಂದು ಎಫ್ಐಆರ್‌ನಲ್ಲಿ ತಿಳಿಸಲಾಗಿದೆ. ದಾಳಿಯ ಸುಮಾರು ಒಂದು ತಿಂಗಳ ನಂತರ, 2021ರ ಡಿಸೆಂಬರ್ 24ರಂದು ರಾಮ್‌ಭುವಾಲ್ ಅವರನ್ನು ಅವರ ಮನೆಯಿಂದ ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಪತಿ ಸೆರೆಮನೆಯಲ್ಲಿದ್ದ ವರ್ಷ ಸೀತಾದೇವಿಯವರ ಬದುಕು ಬಹಳ ಕಷ್ಟದಲ್ಲಿತ್ತು. ಅವರು ತಮ್ಮ ಮಕ್ಕಳನ್ನು ನೋಡಿಕೊಳ್ಳಬೇಕಾಗಿತ್ತು - 18 ವರ್ಷದ ಮಗಳು ಮತ್ತು 10 ಮತ್ತು 8 ವರ್ಷದ ಇಬ್ಬರು ಗಂಡು ಮಕ್ಕಳು. ಜೈಲಿನಲ್ಲಿ ರಾಮ್‌ಭುವಲ್ ಅವರನ್ನು ಭೇಟಿಯಾದಾಗ ಇಬ್ಬರೂ ಅಳುತ್ತಿದ್ದರು. "ನಾವು ಹೇಗೆ ದಿನ ದೂಡುತ್ತಿದ್ದೇವೆ. ತಿನ್ನಲು-ಉಣ್ಣಲು ಏನು ಮಾಡುತ್ತಿದ್ದೇವೆ ಎಂದು ಕೇಳುತ್ತಿದ್ದರು ಅವರು ನಮ್ಮ ಮಕ್ಕಳ ಬಗ್ಗೆ ಚಿಂತಿತರಾಗಿದ್ದರು. ನಾನು ನಮ್ಮ ಕಷ್ಟಗಳನ್ನು ಹಂಚಿಕೊಂಡಾಗ ಅವರು ಕಣ್ಣೀರು ಹಾಕುತ್ತಿದ್ದರು. ನಾನೂ ಅಳುತ್ತಿದ್ದೆ" ಎಂದು ಕಣ್ಣೀರನ್ನು ಮರೆಮಾಚಲು ಪ್ರಯತ್ನಿಸುತ್ತಾ ಸೀತಾ ಹೇಳುತ್ತಾರೆ.

ತನ್ನನ್ನು ಮತ್ತು ಮಕ್ಕಳ ಹೊಟ್ಟೆಹೊರೆದುಕೊಳ್ಳಲು ಅವರು ಕೃಷಿ ಕಾರ್ಮಿಕರಾಗಿ ಕೆಲಸ ಮಾಡಿದರು ಮತ್ತು ತನ್ನ ನೆರೆಹೊರೆಯವರಿಂದ ಹಣವನ್ನು ಸಾಲ ಪಡೆದರು. "ನನ್ನ ಪೋಷಕರು ಬಟೈಯ್ಯ [ಗೇಣಿದಾರ] ರೈತರು. ಅವರು ನಮಗೆ ಅಕ್ಕಿ ಮತ್ತು ಬೇಳೆಕಾಳುಗಳನ್ನು ನೀಡಿದರು; ಇತರ ಕೆಲವು ಸಂಬಂಧಿಕರು ಸಹ ಸ್ವಲ್ಪ ಆಹಾರ ಧಾನ್ಯಗಳನ್ನು ಕಳುಹಿಸಿದ್ದರು" ಎಂದು ಅವರು ಹೇಳುತ್ತಾರೆ ಮತ್ತು ನಂತರ "ಈಗ ಒಂದು ಲಕ್ಷಕ್ಕೂ ಹೆಚ್ಚಿನ ಸಾಲವಿದೆ" ಎಂದು ಹೇಳುತ್ತಾ ಮೌನವಾದರು.

ಐವರು ಸಾಕ್ಷಿಗಳಲ್ಲಿ ಮಾಹಿತಿದಾರ, ಅಬಕಾರಿ ನಿರೀಕ್ಷಕ, ಇನ್ನೊಬ್ಬ ಇನ್ಸ್ಪೆಕ್ಟರ್ ಮತ್ತು ದಾಳಿ ನಡೆಸುತ್ತಿರುವ ತಂಡದ ಇಬ್ಬರು ಸದಸ್ಯರು ಸೇರಿರುವಾಗ ತಪ್ಪಾದ ಬಂಧನವನ್ನು ಸಾಬೀತುಪಡಿಸುವುದು ಕಷ್ಟವಾಗುತ್ತದೆ. ಆದರೆ ಅದೃಷ್ಟವಶಾತ್, ರಾಮ್‌ಭುವಾಲ್ ಅವರ ಪ್ರಕರಣ ವಿಚಾರಣೆಗೆ ಬಂದಾಗ, ಇಬ್ಬರು ಸಾಕ್ಷಿಗಳು ಅವರ ಮನೆಯಲ್ಲಿ ಯಾವುದೇ ಮದ್ಯ ಕಂಡುಬಂದಿಲ್ಲವೆಂದು ಹೇಳಿದರು ಮತ್ತು ನ್ಯಾಯಾಲಯವು ಅವರ ಹೇಳಿಕೆಗಳಲ್ಲಿನ ಗಂಭೀರ ವ್ಯತ್ಯಾಸಗಳನ್ನು ಪರಿಗಣಿಸಿತು.

ನವೆಂಬರ್ 16, 2022ರಂದು ಜೆಹಾನಾಬಾದ್ ಅಪ್ಪರ್ ಡಿಸ್ಟ್ರಿಕ್ಟ್ ಮತ್ತು ಸೆಷನ್ಸ್ ನ್ಯಾಯಾಲಯವು ರಾಮ್‌ಭುವಲ್ ಮಾಂಜಿಯವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿತು.

PHOTO • Umesh Kumar Ray

ಬಿಹಾರದ ನಿಷೇಧ ಮತ್ತು ಅಬಕಾರಿ ಕಾಯ್ದೆ, 2016ರ ಅಡಿಯಲ್ಲಿ ದಾಖಲಾದ ಪ್ರಕರಣದಲ್ಲಿ, ಬಸಂತ್ ಸುದೀರ್ಘ ಕಾನೂನು ಹೋರಾಟವನ್ನು ನಡೆಸಬೇಕಾಗಿದೆ, ಇದರಲ್ಲಿ ಅವರ ಸಾಕಷ್ಟು ಸಮಯ ಮತ್ತು ಹಣ ವ್ಯರ್ಥವಾಗುತ್ತದೆ

"ಸುಖಲ್ ಠಟ್ಠರ್ ನಿಕಲೆ ಥೇ ಜೈಲ್ ಸೇ [ಜೈಲಿನಿಂದ ಹೊರಬರುವಾಗ ತುಂಬಾ ತೆಳ್ಳಗಾಗಿದ್ದರು]” ಎಂದು ಸೀತಾ ದೇವಿ ಹೇಳುತ್ತಾರೆ.

ಜೈಲಿನಿಂದ ಹಿಂದಿರುಗಿದ ಹತ್ತು ದಿನಗಳ ನಂತರ, ರಾಮ್‌ಭುವಾಲ್ ಕೆಲಸ ಹುಡುಕಿಕೊಂಡು ಜೆಹಾನಾಬಾದ್ನಿಂದ ಹೊರಟರು. "ಅವರು ಎರಡು-ಮೂರು ತಿಂಗಳು ಮನೆಯಲ್ಲಿಯೇ ಇದ್ದಿದ್ದರೆ, ಉತ್ತಮ ಆಹಾರ ತಿಂದು ಮೂಲಕ ಅವಳು ತನ್ನ ದೇಹವನ್ನು ಸದೃಢಗೊಳಿಸಬಹದಿತ್ತು, ಆದರೆ ಪೊಲೀಸರು ಮತ್ತೆ ಬಂಧಿಸಬಹುದೆಂದು ಅವರು ಹೆದರಿದ್ದರು, ಹೀಗಾಗಿ ಅವರು ಚೆನ್ನೈಗೆ ಹೋದರು" ಎಂದು 36 ವರ್ಷದ ಸೀತಾ ಹೇಳುತ್ತಾರೆ.

ಆದರೆ ಅವರ ಕಥೆ ಇಲ್ಲಿಗೆ ಕೊನೆಗೊಳ್ಳುವುದಿಲ್ಲ.

ಈ ಪ್ರಕರಣದಲ್ಲಿ ರಾಮ್‌ಭುವಾಲ್ ಅವರನ್ನು ಖುಲಾಸೆಗೊಳಿಸಲಾಯಿತು, ಆದರೆ ನಿಷೇಧ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ 2020ರಲ್ಲಿ ರಾಮ್‌ಭುವಾಲ್ ಮಾಂಜಿ ವಿರುದ್ಧ ದಾಖಲಾದ ಇನ್ನೂ ಎರಡು ಪ್ರಕರಣಗಳು ಇನ್ನೂ ಪರಿಗಣನೆಯಲ್ಲಿವೆ. ನಿಷೇಧ ಮತ್ತು ಅಬಕಾರಿ ಇಲಾಖೆಯ ಅಂಕಿಅಂಶಗಳ ಪ್ರಕಾರ, ಏಪ್ರಿಲ್ 2016ರಿಂದ ಜನವರಿ 22, 2023ರವರೆಗೆ, ಈ ಕಾಯ್ದೆಯಡಿ 7,21,534 ಜನರನ್ನು ಬಂಧಿಸಲಾಗಿದೆ. ಈ ಪೈಕಿ 1,56,929 ಜನರಿಗೆ ಶಿಕ್ಷೆ ವಿಧಿಸಲಾಗಿದ್ದು, ಈ ಪೈಕಿ 245 ಮಂದಿ ಅಪ್ರಾಪ್ತ ವಯಸ್ಕರು.

ಈ ಪ್ರಕರಣಗಳ ಅಂತ್ಯವು ತನ್ನ ಪರವಾಗಿರುತ್ತದೆಯೇ ಅಥವಾ ಇಲ್ಲವೇ ಎಂಬುದು ಸೀತಾರಿಗೆ ತಿಳಿದಿಲ್ಲ. ನಿಷೇಧ ಕಾನೂನು ಯಾವುದೇ ಸಕಾರಾತ್ಮಕ ಪರಿಣಾಮ ಬೀರಿಲ್ಲವೇ ಎಂದು ಕೇಳಿದಾಗ, "ಕೊಂಚಿ ಕ್ಯಾ ಬುಜಾಯೇಗಾ ಹಮ್ಕೊ. ಹಮ್‌ ತೋ ಲಂಗ್ಟಾ ಹೋ ಗಯೇ [ಇದನ್ನು ನೀವು ನನಗೆ ಹೇಗೆ ವಿವರಿಸುತ್ತೀರಿ? ನಮ್ಮನ್ನು ಬೆತ್ತಲೆಗೊಳಿಸಿ ರಸ್ತೆಯಲ್ಲಿ ನಿಲ್ಲಿಸಲಾಗಿದೆ]. ನಮ್ಮ ಮಗಳು ಬೆಳೆಯುತ್ತಿದ್ದಾಳೆ ನಾವು ಅವಳ ಮದುವೆಯ ಕುರಿತು ಯೋಚಿಸಬೇಕಿದೆ. ಆದರೆ ಹೇಗೆ ಎನ್ನುವುದು ತಿಳಿಯುತ್ತಿಲ್ಲ. ರಸ್ತೆಯಲ್ಲಿ ನಿಂತು ಭಿಕ್ಷೆ ಬೇಡುವುದರ ಹೊರತಾಗಿ ಇನ್ನೇನೂ ಹೊಳೆಯುತ್ತಿಲ್ಲ ನನಗೆ.”

2021ರಲ್ಲಿ, ರಾಮ್‌ಭುವಾಲ್ ಅವರ ತಮ್ಮ ರೋಗನಿರ್ಣಯಗೊಳ್ಳದ ಅನಾರೋಗ್ಯದಿಂದ ನಿಧನರಾದರು ಮತ್ತು ಸ್ವಲ್ಪ ಸಮಯದ ನಂತರ, ನವೆಂಬರ್ 2022ರಲ್ಲಿ, ಆ ತಮ್ಮನ ಪತ್ನಿ ಕೂಡ ನಿಧನರಾದರು. ಇಂದು ಸೀತಾ ತನ್ನ ಮಕ್ಕಳ ಜೊತೆಗೆ ಆ ಇಬ್ಬರು ಮಕ್ಕಳನ್ನೂ ನೋಡಿಕೊಳ್ಳುತ್ತಿದ್ದಾರೆ.

“ದೇವರು ನಮಗೆ ಬೆಟ್ಟದಷ್ಟು ನೋವು ಕೊಟ್ಟಿದ್ದಾನೆ. ನಾವು ಅದನ್ನು ಇಷ್ಟಿಷ್ಟೇ ಅನುಭವಿಸುತ್ತಿದ್ದೇವೆ.”

ಈ ವರದಿಯು ರಾಜ್ಯದ ಅಂಚಿನಲ್ಲಿರುವ ಜನರ ಹೋರಾಟಗಳನ್ನು ಮುನ್ನಡೆಸಿದ ಬಿಹಾರದ ಟ್ರೇಡ್ ಯೂನಿಯನಿಸ್ಟ್ ಸ್ಮರಣಾರ್ಥ ಫೆಲೋಶಿಪ್ ಸಹಾಯವನ್ನು ಪಡೆದಿರುತ್ತದೆ.

ಅನುವಾದ: ಶಂಕರ. ಎನ್. ಕೆಂಚನೂರು

Umesh Kumar Ray

Umesh Kumar Ray is a PARI Fellow (2022). A freelance journalist, he is based in Bihar and covers marginalised communities.

Other stories by Umesh Kumar Ray
Editor : Devesh

Devesh is a poet, journalist, filmmaker and translator. He is the Translations Editor, Hindi, at the People’s Archive of Rural India.

Other stories by Devesh
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru