ಅಂಜನ್ ಗ್ರಾಮದ ಬಳಿ ಇರುವ ಪವಿತ್ರ ಗುಡ್ಡವು ಕೇಸರಿ ಮತ್ತು ಬಿಳಿ ಧ್ವಜಗಳಿಂದ ಆವೃತವಾಗಿದೆ. ಇದರಲ್ಲಿ ಬಿಳಿ ಧ್ವಜಗಳು ಸರ್ನಾ - ಪ್ರಕೃತಿಯನ್ನು ಆರಾಧಿಸುವ ಬುಡಕಟ್ಟು ಸಮುದಾಯಗಳಿಗೆ ಸೇರಿವೆ. ಇವು ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಉರಾಂವ್ ಆದಿವಾಸಿಗಳ ಧ್ವಜಗಳಾಗಿವೆ. ಕೇಸರಿ ಧ್ವಜಗಳು 1985ರಲ್ಲಿ ಬೆಟ್ಟದ ತುದಿಯಲ್ಲಿ ಹನುಮಾನ್ ದೇವಾಲಯವನ್ನು ನಿರ್ಮಿಸಿದ ಹಿಂದೂಗಳಿಗೆ ಸೇರಿದ್ದು. ಇದನ್ನು ಅವರು ಹನುಮಂತ ದೇವರ ಜನ್ಮಸ್ಥಳವೆಂದು ಹೇಳುತ್ತಾರೆ.

ಇಲ್ಲಿನ ಬಿದಿರಿನಿಂದ ಮಾಡಿದ ಸ್ವಾಗತ ಗೋಪುರದ ಮೇಲಿನ ಎರಡು ಬ್ಯಾನರ್‌ಗಳು ಭಕ್ತಾದಿಗಳನ್ನು ಸ್ವಾಗತಿಸುತ್ತವೆ. ಅದರಲ್ಲಿ ಒಂದು ಅರಣ್ಯ ಇಲಾಖೆ ಮತ್ತು ಅಂಜನ್ ಗ್ರಾಮದ ಜನರು ಜಂಟಿಯಾಗಿ ನಡೆಸುತ್ತಿರುವ ಗುಮ್ಲಾ ವನ ಪ್ರಬಂಧನ್ ಮಂಡಲ್ (ಸಂಯುಕ್ತ ಗ್ರಾಮ ವನ ಪ್ರಬಂಧನ್ ಸಮಿತಿ ಎಂದು ಏಕೀಕೃತವಾಗಿದೆ) ಎನ್ನುವ ಸಂಸ್ಥೆಯದ್ದು. ಇದು 2016ರಿಂದ ಯಾತ್ರಾ ಸ್ಥಳದ ನಿರ್ವಹಣೆಯನ್ನು ನಿರ್ವಹಿಸುತ್ತಿದೆ. ಇನ್ನೊಂದು 2019ರಲ್ಲಿ ಸ್ಥಾಪನೆಯಾದ ಹಿಂದೂಗಳ ಅಂಜನ್ ಧಾಮ್ ಮಂದಿರ ವಿಕಾಸ್ ಸಮಿತಿಯದ್ದು. ಅದು ಇಲ್ಲಿನ ದೇವಾಲಯವನ್ನು ನೋಡಿಕೊಳ್ಳುತ್ತದೆ.

ಸ್ವಾಗತ ದ್ವಾರದ ಒಳಗೆ ಹೋದರೆ ಅಲ್ಲಿ ಎರಡು ಮೆಟ್ಟಿಲುಗಳು ಸ್ವಾಗತಿಸುತ್ತವೆ. ಎರಡೂ ಒಂದೊಂದು ಪೂಜಾಸ್ಥಳದತ್ತ ನಮ್ಮನ್ನು ಕರೆದೊಯ್ಯುತ್ತವೆ. ಒಂದು ನೇರ ಬೆಟ್ಟದ ತುದಿಯಲ್ಲಿರುವ ಹನುಮಾನ್‌ ದೇವಸ್ಥಾನ್ಕಕೆ ಕರೆದೊಯ್ದರೆ, ಇನ್ನೊಂದು ಮೆಟ್ಟಿಲು ಎರಡು ಗುಹೆಗಳ ಬಳಿ ಕರೆದೊಯ್ಯುತ್ತದೆ. ಈ ಗುಹೆಗಳ ಬಳಿ ಹಿಂದೂ ದೇವಸ್ಥಾನ ಅಸ್ತಿತ್ವಕ್ಕೆ ಬರುವ ಮೊದಲೇ ಶತಮಾನಗಳ ಕಾಲದಿಂದ ಆದಿವಾಸಿಗಳು ಪಾಹಣ್‌ ಎನ್ನುವ ಪೂಜೆಗಳನ್ನು ನಡೆಸಿಕೊಂಡು ಬಂದಿದ್ದರು.

ಬೆಟ್ಟದ ಮೇಲೆ ಒಟ್ಟು ನಾಲ್ಕು ಕಾಣಿಕೆ ಡಬ್ಬಿಗಳಿವೆ. ಒಂದು ಗುಹೆಯ ಬಳಿಯಿದ್ದರೆ, ಇನ್ನೊಂದು ದೇವಾಲಯದ ಒಳಗಿದೆ. ಮೂರನೆಯದು ಬಜರಂಗ ದಳಕ್ಕೆ ಸೇರಿದ್ದು ಇದು ಅಂಗಳದಲ್ಲಿದೆ. ಈ ಪೆಟ್ಟಿಗೆಯಲ್ಲಿ ಸಂಗ್ರಹವಾದ ಹಣವನ್ನು ಸಂತರ ಆಚರಣೆಯಾದ ಮಂಗಳವಾರದ ಭಂಡಾರಕ್ಕೆ ಬಳಸಲಾಗುತ್ತದೆ. ಇದರೊಂದಿಗೆ ನಾಲ್ಕನೆಯದಾಗಿ ಹಳ್ಳಿಗೆ ಸಮೀಪದಲ್ಲಿ ಬೆಟ್ಟದ ತಪ್ಪಲಿನಲ್ಲಿ ಇನ್ನೊಂದು ಡಬ್ಬಿಯಿದೆ. ಈ ಡಬ್ಬಿಯಲ್ಲಿನ ಹಣವನ್ನು ಆದಿವಾಸಿಗಳು ಪೂಜೆಗೆ ಬೇಕಾಗುವ ಪೂಜಾ ಸಾಹಿತ್ಯಗಳನ್ನು ಖರೀದಿಸಲು ಬಳಸುತ್ತಾರೆ.

“ಇದು ಪೂರ್ತಿಯಾಗಿ ಆದಿವಾಸಿ ಕ್ಷೇತ್ರ. ಈ ಮೊದಲು ಅಂಜನ್‌ನಲ್ಲಿ ಯಾವುದೇ ಪಂಡಿತರು (ಬ್ರಾಹ್ಮಣ) ಇದ್ದಿರಲಿಲ್ಲ” ಎಂದು 42 ವರ್ಷದ ರಂಜಯ್ ಉರಾಂವ್‌ ಹೇಳುತ್ತಾರೆ. ಇವರು ರೈತರಾಗಿದ್ದು, ಗ್ರಾಮದ ಮುಖ್ಯಸ್ಥರೂ ಹೌದು. ಅವರು ಈ ಧಾರ್ಮಿಕ ಸ್ಥಳದಲ್ಲಿನ ವಿಚಿತ್ರ ವ್ಯವಸ್ಥೆಗಳ ಕುರಿತಾದ ನನ್ನ ಕುತೂಹಲಗಳಿಗೆ ಅವರು ಉತ್ತರಿಸುತ್ತಿದ್ದರು. “ಇತ್ತೀಚೆಗೆ ಬನಾರಸ್‌ನಿಂದ ಪಂಡಿತರು ಇಲ್ಲಿಗೆ ಬಂದಿದ್ದಾರೆ. ಇದಕ್ಕೂ ಮೊದಲು ಇಲ್ಲಿನ ಉರಾಂವ್‌ ಆದಿವಾಸಿಗಳು ಪ್ರಕೃತಿ ದೇವತೆಯಾದ ಅಂಜನಿಯನ್ನು ಪೂಜಿಸುತ್ತಿದ್ದರು. ಆದರೆ ಈ ಅಂಜನಿ ಹನುಮಂತನಿಗೆ ಸಂಬಂಧಿ ಎನ್ನುವುದು ನಮಗೆ ತಿಳಿದಿರಲಿಲ್ಲ” ಎಂದು ಅವರು ಹೇಳುತ್ತಾರೆ.

ರಂಜಯ್ ಅವರ ಪ್ರಕಾರ, "ಪಂಡಿತರು ಬಂದು ಅಂಜನಿಯು ಹನುಮಂತನ ತಾಯಿಯೆನ್ನುವ ಕಥೆಯನ್ನು ಹರಡಿದರು. ಅಂಜನ್‌ ಬೆಟ್ಟವನ್ನು ಹನುಮಂತನ ಪವಿತ್ರ ಜನ್ಮಸ್ಥಳವೆಂದು ಘೋಷಿಸಲಾಯಿತು ಮತ್ತು ಇದೆಲ್ಲ ಏನೆಂದು ಅರ್ಥವಾಗುವ ಮೊದಲೇ ಬೆಟ್ಟದ ಮೇಲೆ ಹನುಮಾನ್‌ ದೇವಸ್ಥಾನವನ್ನು ನಿರ್ಮಿಸಲಾಯಿತು. ಮತ್ತು ಆ ಸ್ಥಳವನ್ನು ಅಂಜನ್ ಧಾಮ್ ಎಂದು ಘೋಷಿಸಲಾಯಿತು.”

Left: The main entrance of Anjan Dham from where two staircases, one on the right and the other on the left, lead one to two different worship places up the mountain.
PHOTO • Jacinta Kerketta
Right: White flags on the mountain belong to the nature worshipping Sarna tribals. The saffron flag represents the Hindus, who also have a temple on the top of the hill
PHOTO • Jacinta Kerketta

ಎಡ: ಅಂಜನ್ ಧಾಮ್‌ ಮುಖ್ಯ ದ್ವಾರ, ಅಲ್ಲಿಂದ ಎರಡು ಮೆಟ್ಟಿಲುಗಳು (ಒಂದು ಬಲಭಾಗದಲ್ಲಿ ಮತ್ತು ಇನ್ನೊಂದು ಎಡಭಾಗದಲ್ಲಿ) ಪರ್ವತದ ಮೇಲಿನ ವಿವಿಧ ಪೂಜಾ ಸ್ಥಳಗಳಿಗೆ ದಾರಿ ಮಾಡಿಕೊಡುತ್ತವೆ. ಬಲ: ಪರ್ವತದ ಮೇಲಿನ ಬಿಳಿ ಧ್ವಜಗಳು ಸರ್ನಾ -  ಪ್ರಕೃತಿಯನ್ನು ಆರಾಧಿಸುವ ಆದಿವಾಸಿಗಳಿಗೆ ಸೇರಿವೆ. ಕೇಸರಿ ಧ್ವಜವು ಹಿಂದೂಗಳನ್ನು ಪ್ರತಿನಿಧಿಸುತ್ತದೆ, ಅವರ ದೇವಾಲಯವನ್ನು ಸಹ ಬೆಟ್ಟದ ಮೇಲೆ ನಿರ್ಮಿಸಲಾಗಿದೆ

ಇಲ್ಲಿ ದೇವಸ್ಥಾನ ಬೇಕೆಂದು ಆದಿವಾಸಿಗಳು ಕೇಳಿರಲಿಲ್ಲ. ಇದು ಅಧಿಕಾರ ಮತ್ತು ಆಡಳಿತಾಧಿಕಾರಿಯ ಉಪಕ್ರಮದಿಂದ ನಡೆಯಿತು. ಆಗ ಜಾರ್ಖಂಡ್ ಬಿಹಾರದ ಭಾಗವಾಗಿತ್ತು ಎಂದು ಅವರು ಹೇಳಿದರು.

ಅಂಜನ್‌ನ ಹನುಮಾನ್ ದೇವಾಲಯದ ಪೂಜಾರಿ ಕೇದಾರನಾಥ ಪಾಂಡೆ ದೇವಾಲಯದ ನಿರ್ಮಾಣಕ್ಕೆ ಸಂಬಂಧಿಸಿದಂತೆ ಒಂದು ಆಸಕ್ತಿದಾಯಕ ಕಥೆಯನ್ನು ಹೊಂದಿದ್ದಾರೆ. ದೇವಸ್ಥಾನವನ್ನು ನೋಡಿಕೊಳ್ಳುವ ಎರಡು ಪಂಡಿತ್ ಕುಟುಂಬಗಳಲ್ಲಿ ಒಂದಕ್ಕೆ ಸೇರಿದ 46 ವರ್ಷದ ಕೇದಾರನಾಥ ಹೇಳುತ್ತಾರೆ, "ನನ್ನ ಅಜ್ಜ ಮಣಿಕ್‌ನಾಥ್ ಪಾಂಡೆಯವರಿಗೆ ಈ ಬೆಟ್ಟದ ಗುಹೆಯಲ್ಲಿ ಹನುಮಂತ ಜನಿಸಿದ ಕನಸು ಬಿದ್ದಿತ್ತು."

ಆ ಕನಸಿನ ನಂತರ, ಅವರ ಅಜ್ಜ ಬೆಟ್ಟದ ಮೇಲೆ ಹೋಗಿ ಪ್ರಾರ್ಥಿಸಲು ಪ್ರಾರಂಭಿಸಿದರು, ರಾಮಾಯಣವನ್ನು ಓದಲು ಪ್ರಾರಂಭಿಸಿದರು ಎಂದು ಅವರು ಹೇಳುತ್ತಾರೆ. "ಅಂಜನಾ ದೇವಿ ಗೌತಮ ಮುನಿ ಮತ್ತು ಅಹಲ್ಯಾ ದೇವಿಯ ಮಗಳು" ಎಂದು ಅವರು ತಮ್ಮ ಅಜ್ಜನಿಂದ ಕೇಳಿದ ಕಥೆಯನ್ನು ನಮಗೆ ಹೇಳಿದರು. "ಅವಳು ಶಾಪಗ್ರಸ್ತಳಾಗಿ ಈ ಅಪರಿಚಿತ ಪರ್ವತಕ್ಕೆ ಬಂದಳು. ಅವಳಿಂದಾಗಿ ಈ ಸ್ಥಳಕ್ಕೆ ಅಂಜನಾ ಪಹಾರಿ ಎನ್ನುವ ಹೆಸರು ಬಂತು. ಅವಳು ಶಿವನ ಭಕ್ತೆಯಾಗಿದ್ದಳು. ಒಂದು ದಿನ ಶಿವನು ಸನ್ಯಾಸಿಯ ರೂಪದಲ್ಲಿ ಆಕೆಯ ಮುಂದೆ ಕಾಣಿಸಿಕೊಂಡು ಅವಳನ್ನು ಶಾಪದಿಂದ ಮುಕ್ತಗೊಳಿಸಲು ಆಕೆಯ ಕಿವಿಯಲ್ಲಿ ಮಂತ್ರವನ್ನು ಊದಿದನು. ಈ ಮಂತ್ರದ ಶಕ್ತಿಯಿಂದ ಹನುಮಂತ ಹುಟ್ಟಿದನು. ಮಂತ್ರದ ಶಕ್ತಿಯಿಂದಾಗಿ ಹನುಮಂತ ಗರ್ಭದಲ್ಲಿ ಜನಿಸುವ ಬದಲು ತೊಡೆಯಿಂದ ಜನಿಸಿದನು.

“ಆ ದಿನಗಳಲ್ಲಿ ನನ್ನ ತಂದೆಯ ಆಫ್ತ ಸ್ನೇಹಿತರಾಗಿದ್ದ ರಘುನಾಥ್‌ ಗುಮ್ಲಾದ ಎಸ್‌ಡಿಒ ಆಗಿದ್ದರು. ಅವರಿಬ್ಬರೂ ಸೇರಿ ಬೆಟ್ಟದ ಮೇಲೆ ದೇವಸ್ಥಾನ ನಿರ್ಮಿಸಲು ನಿರ್ಧರಿಸಿದರು. ಮೊದಲಿಗೆ ಆದಿವಾಸಿಗಳು ಈ ಪ್ರಸ್ತಾಪವನ್ನು ಪ್ರತಿಭಟಿಸಿ, ಮೇಕೆ ಬಲಿಯನ್ನು ನೀಡಿದರು. ಆದರೆ ನಂತರ ದೇವಸ್ಥಾನವನ್ನು ನಿರ್ಮಿಸಿ, ಈ ಸ್ಥಳಕ್ಕೆ ಅಂಜನ್‌ ಧಾಮ್‌ ಎಂದು ಹೆಸರಿಡಲಾಯಿತು” ಎಂದು ಅವರು ನಿರ್ಲಕ್ಷ್ಯದಿಂದ ಹೇಳುತ್ತಾರೆ.

ಅಂಜನ್‌ ಗ್ರಾಮಕ್ಕೆ ಈ ಹೆಸರು ಅಂಜನಿ ಮಾ ಎನ್ನುವ ಆದಿವಾಸಿ ದೇವತೆಯ ಹೆಸರಿನಿಂದ ಬಂದಿದೆ. ಈ ದೇವತೆ ಸುತ್ತಮುತ್ತಲಿನ ಬೆಟ್ಟಗಳಲ್ಲಿ ವಾಸಿಸುತ್ತಾಳೆ ಎಂದು ಇಲ್ಲಿನ ಜನರು ನಂಬುತ್ತಾರೆ. ನೂರಾರು ವರ್ಷಗಳಿಂದ, ಅವರು ಗುಹೆಗಳಲ್ಲಿ ದೇವಿಗೆ ಔಪಚಾರಿಕ ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದಾರೆ.

"ಅನೇಕ ವರ್ಷಗಳಿಂದ, ಜನರು ಪರ್ವತದ ಮೇಲಿನ ಕಲ್ಲುಗಳನ್ನು ಪೂಜಿಸುತ್ತಿದ್ದರು" ಎಂದು ಗ್ರಾಮಸ್ಥರಾದ 50 ವರ್ಷದ ಮಹೇಶ್ವರ್ ಉರಾಂವ್ ಹೇಳುತ್ತಾರೆ. “ಹನುಮಂತ ಈ ಪರ್ವತದಲ್ಲಿ ಜನಿಸಿದನೆನ್ನುವ ಕಥೆಯನ್ನು ಬಹಳ ಸಮಯದ ನಂತರ ಪ್ರಚಾರ ಮಾಡಲಾಯಿತು.”

The cave on the mountain where pahans, traditional priests of the Adivasis, from Anjan village perform puja
PHOTO • Jacinta Kerketta

ಅಂಜನ್ ಗ್ರಾಮದ ಆದಿವಾಸಿಗಳ ಸಾಂಪ್ರದಾಯಿಕ ಪುರೋಹಿತರಾದ ಪಾಹನ್ ಗಳು ಪೂಜೆ ಮಾಡುವ ಪರ್ವತದ ಮೇಲಿನ ಗುಹೆ

The Hanuman temple on the mountain that is now called Anjan Dham
PHOTO • Jacinta Kerketta

ಈಗ ಅಂಜನ್ ಧಾಮ್ ಎಂದು ಕರೆಯಲ್ಪಡುವ ಪರ್ವತದ ಮೇಲಿನ ಹನುಮಾನ್ ದೇವಾಲಯ

ಗ್ರಾಮದ ಮುಖ್ಯಸ್ಥರಾದ ಬಿರ್ಸಾ ಉರಾಂವ್ (60) ತನ್ನ ಜೀವಿತಾವಧಿಯಲ್ಲಿ ಅಂಜನ್ ನಲ್ಲಿ ಹನುಮಾನ್ ದೇವಾಲಯದ ನಿರ್ಮಾಣವಾಗುವುದನ್ನು ನೋಡಿದ್ದಾರೆ. ಬುಡಕಟ್ಟು ಜನಾಂಗದವರು ಪ್ರಕೃತಿ ಆರಾಧಕರು ಎಂದು ಅವರು ಸ್ಪಷ್ಟವಾಗಿ ಹೇಳುತ್ತಾರೆ, "ಬುಡಕಟ್ಟು ಜನಾಂಗದವರು ಹಿಂದೂಗಳಲ್ಲ. ಅಂಜನ್ ಗ್ರಾಮವು ಬುಡಕಟ್ಟು ಪ್ರಾಬಲ್ಯದ ಗ್ರಾಮವಾಗಿದೆ ಮತ್ತ ಉರಾಂವ್ ಬುಡಕಟ್ಟು ಜನಾಂಗದವರು ಸರ್ನಾ ಧರ್ಮವನ್ನು ಅನುಸರಿಸುತ್ತಾರೆ. ಸರ್ನಾ ಧರ್ಮದಲ್ಲಿ, ಪ್ರಕೃತಿಯನ್ನು ಪೂಜಿಸಲಾಗುತ್ತದೆ - ಮರಗಳು, ಪರ್ವತಗಳು, ನದಿಗಳು, ಜಲಪಾತಗಳು, ಎಲ್ಲವೂ ಇಲ್ಲಿ ದೇವರು.

ಅದೇ ಗ್ರಾಮದ 32 ವರ್ಷದ ಮಹಿಳೆ ರಮಣಿ ಉರಾಂವ್‌ ಕೂಡಾ ಇದೇ ಮಾತನ್ನು ಹೇಳುತ್ತಾರೆ. ಅವರು ಹೇಳುವಂತೆ, ಊರಿನ ಜನರು ಸರ್ನಾ ಧರ್ಮ ಪಾಲಿಸುತ್ತಾರೆ. ಇದು ಪೂರ್ತಿಯಾಗಿ ಪ್ರಕೃತಿ ಪೂಜೆಯನ್ನು ಅವಲಂಬಿಸಿದೆ. "ನಮ್ಮ ಜನರು ಇಂದಿಗೂ ಸರಹುಲ್ [ವಸಂತ ಹಬ್ಬ], ಕರಮ್ [ಸುಗ್ಗಿಯ ಹಬ್ಬ] ನಂತಹ ಪ್ರಕೃತಿಗೆ ಸಂಬಂಧಿಸಿದ ಹಬ್ಬಗಳನ್ನು ಆಡಂಬರದಿಂದ ಆಚರಿಸುತ್ತಾರೆ. ಇಲ್ಲಿ ದೇವಸ್ಥಾನ ನಿರ್ಮಾಣಗೊಳ್ಳುವ ಮೊದಲು ನಮಗೆ ಹನುಮಾನ್‌ ಕುರಿತು ತಿಳಿದಿರಲಿಲ್ಲ. ನಾವು ಬೆಟ್ಟವನ್ನು ಪೂಜಿಸುತ್ತಿದ್ದೆವು ಮತ್ತು ಬೆಟ್ಟದ ಮಲೆ ಗುಹೆಯಿದ್ದು ಅದರೊಳಗೆ ಕೆಲವು ಕಲ್ಲುಗಳಿದ್ದವು. ನಾವು ಆ ಕಲ್ಲುಗಳನ್ನೂ ಪೂಜಿಸುತ್ತಿದ್ದೆವು. ನಂತರದ ದಿನಗಳಲ್ಲಿ ಹನುಮಂತ ಜನಪ್ರಿಯನಾದ, ಈ ದೇವಸ್ಥಾನ ಕಟ್ಟಲಾಯಿತು. ಎಲ್ಲೆಡೆಯಿಂದ ಜನರು ಪೂಜೆಗೆಂದು ಬರತೊಡಗಿದರು. ಆಗ ಕೆಲವು ಆದಿವಾಸಿಗಳೂ ಹನುಮಂತನನ್ನು ಪೂಜಿಸಲು ಪ್ರಾರಂಭಿಸಿದರು" ಎಂದು ಅವರು ಹೇಳುತ್ತಾರೆ.

ಅಂಜನ್‌ ಗ್ರಾಮದಲ್ಲಿ ನಡೆದಿರುವ ಈ ಬೆಳವಣಿಗೆ ಆಶ್ಚರ್ಯಕರವೂ ಅಲ್ಲ ಅಥವಾ ಹೊಸದೂ ಅಲ್ಲ ಎನ್ನುತ್ತಾರೆ ಜಾರ್ಖಂಡ್‌ನ ಪ್ರಸಿದ್ಧ ಕಾದಂಬರಿಕಾರ ಮತ್ತು ಕತೆಗಾರರಾಗಿರುವ ರಣೇಂದ್ರ ಕುಮಾರ್ (63). “ಅನೇಕ ಆದಿವಾಸಿ ಹೆಣ್ಣು ದೇವತೆಗಳನ್ನು ಹಿಂದೆಯೂ ವೈದಿಕ ಸಮಾಜದ ಭಾಗವನ್ನಾಗಿ ಮಾಡಲಾಗಿದೆ" ಎಂದು ಹೇಳುತ್ತಾರೆ.

“ಮೊದಲು ಬೌದ್ಧರು ಆದಿವಾಸಿ ಹೆಣ್ಣು ದೇವತೆಗಳನ್ನು ಸ್ವಾಧೀನಪಡಿಸಿಕೊಂಡರು ನಂತರ ಅವೆಲ್ಲವೂ ಹಿಂದೂ ಧರ್ಮದ ಭಾಗವಾದವು. ಛತ್ತೀಸ್ಗಢದ ತಾರಾ, ವಜ್ರ ಡಾಕಿನಿ, ದಂತೇಶ್ವರಿ ಮುಂತಾದ ದೇವತೆಗಳು ಆದಿವಾಸಿ ದೇವತೆಗಳಾಗಿದ್ದರು" ಎಂದು ಅವರು ವಾದಿಸುತ್ತಾರೆ. "ಸುಳ್ಳು ಹೋಲಿಕೆಗಳ ಪ್ರಚಾರದ ಮೂಲಕವೇ ಆದಿವಾಸಿಗಳನ್ನು ಈಗ ಹಿಂದೂ ಧರ್ಮದ ಮಡಿಲಿಗೆ ಸೇರಿಸಿಕೊಳ್ಳಲಾಗುತ್ತಿದೆ."

ಜಾರ್ಖಂಡ್‌ ರಾಜ್ಯದ ಕುರುಖ್‌ ಭಾಷೆಯ ಪ್ರಾಧ್ಯಾಪಕರಾದ ನಾರಾಯಣ್‌ ಉರಾಂವ್‌, ಬಲವಂತದ ಒಳಗೊಳ್ಳುವಿಕೆ ಅಥವಾ ಸಾಂಸ್ಕೃತಿಕ ಸ್ವಾಧೀನ ಪ್ರಕ್ರಿಯೆಯು ಪ್ರಸ್ತುತ ಹೇಗೆ ಮುಂದುವರೆದಿದೆಯೆನ್ನುವುದನ್ನು ಹೀಗೆ ವಿವರಿಸುತ್ತಾರೆ, “ಸಣ್ಣ ಮಣ್ಣಿನ ಮೂರ್ತಿಗಳು ಮತ್ತು ಮರೈಗಳನ್ನು ಇರಿಸಿದ್ದ, ಧಾರ್ಮಿಕ ಆಚರಣೆಗಳು ನಡೆಯುತ್ತಿದ್ದ ಮೈದಾನಗಳನ್ನು ದೇವಿ ಮಂಟಪ ಅಥವಾ ಹಿಂದೂಗಳ ದೇವಾಲಯವನ್ನಾಗಿ ಪರಿವರ್ತಿಸಲಾಗಿದೆ.” ಅಲ್ಲಿ ಒಮ್ಮೆ ಭಕ್ತರು ಆಗಮಿಸಲು ಆರಂಭಿಸುತ್ತಿದ್ದಂತೆ ಅಲ್ಲಿ ಆದಿವಾಸಿಗಳಿಗೆ ತಮ್ಮ ಆಚರಣೆಗಳನ್ನ ಆಚರಿಸಲಾಗದ ಸ್ಥಿತಿ ಹುಟ್ಟಿಕೊಳ್ಳುತ್ತದೆ.

"ರಾಂಚಿ ಪಹಾಡಿ ಮಂದಿರ, ಹರ್ಮು ಮಂದಿರ, ಅರ್ಗೋಡಾ ಮಂದಿರ, ಕಂಕೆ ಮಂದಿರ, ಮೊರಾಬಾದಿ ಮಂದಿರ ಇದಕ್ಕೆ ಉದಾಹರಣೆಗಳಾಗಿವೆ" ಎಂದು ಅವರು ಹೇಳುತ್ತಾರೆ. "ಇಂದಿಗೂ ಆದಿವಾಸಿ ಆರಾಧನೆಯ ಅವಶೇಷಗಳನ್ನು ಈ ದೇವಾಲಯಗಳ ಪಕ್ಕದಲ್ಲಿ ಕಾಣಬಹುದು. ಆದಿವಾಸಿಗಳು ಸಮುದಾಯ ಆಚರಣೆ ಮತ್ತು ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದ ಮೈದಾನವನ್ನು ಈಗ ದುರ್ಗಾ ಪೂಜೆ ಅಥವಾ ವಾಣಿಜ್ಯ ಮಾರುಕಟ್ಟೆಗಳಿಗೆ ಬಳಸಲಾಗುತ್ತದೆ. ಉದಾಹರಣೆಗೆ, ರಾಂಚಿಯ ಅರ್ಗೋಡಾ ಬಳಿಯ ಮೈದಾನದಲ್ಲಿ ಹಿಂದೆ ಉರಾಂವ್-ಮುಂಡಾ ಜನರು ತಮ್ಮ ಪೂಜೆಗಳು ಮತ್ತು ಹಬ್ಬಗಳನ್ನು ಆಚರಿಸುತ್ತಿದ್ದರು.

ಗುಂಜಲ್ ಇಕಿರ್ ಮುಂಡಾ ಅವರು ರಾಂಚಿ ಬಳಿಯ ಬುಂಡುವಿನಲ್ಲಿ ದೇವ್ಡಿ ದೇವಾಲಯದ ಬಗ್ಗೆಯೂ ಇದೇ ಕತೆ ಹೇಳುತ್ತಾರೆ, ಅಲ್ಲಿ ಮೊದಲು ಯಾವುದೇ ದೇವಾಲಯವಿರಲಿಲ್ಲ. ಆಗೆಲ್ಲ ಅವರ ಸಂಬಂಧಿಕರು ಬುಡಕಟ್ಟು ಜನಾಂಗದವರಿಗಾಗಿ ಪಾಹನ್ ರೂಪದಲ್ಲಿ ದೀರ್ಘಕಾಲ ಪೂಜಾರಿಯಾಗಿ ಕೆಲಸ ಮಾಡುತ್ತಿದ್ದರು. "ಅಲ್ಲಿ ಕೇವಲ ಒಂದು ಕಲ್ಲು ಇತ್ತು ಮತ್ತು ತಲೆಮಾರುಗಳಿಂದ ಮುಂಡಾ ಬುಡಕಟ್ಟು ಜನಾಂಗದವರು ಅಲ್ಲಿ ಪೂಜೆ ಮಾಡುತ್ತಿದ್ದರು. ದೇವಾಲಯ ನಿರ್ಮಾಣದ ನಂತರ, ಹೆಚ್ಚಿನ ಸಂಖ್ಯೆಯ ಹಿಂದೂಗಳು ಪೂಜೆ ಮಾಡಿಸಲು ಬರಲು ಪ್ರಾರಂಭಿಸಿದರು ಮತ್ತು ಈ ಸ್ಥಳದ ಮೇಲೆ ಹಕ್ಕು ಸಾಧಿಸಲು ಪ್ರಾರಂಭಿಸಿದರು. ಇದರ ನಂತರ, ಈ ವಿಷಯವು ನ್ಯಾಯಾಲಯಕ್ಕೆ ಹೋಯಿತು ಮತ್ತು ಈಗ ನ್ಯಾಯಾಲಯದ ಆದೇಶದಂತೆ ಎರಡೂ ನಂಬಿಕೆಗಳನ್ನು ಒಂದೇ ಸ್ಥಳದಲ್ಲಿ ಅನುಸರಿಸಲಾಗುತ್ತಿದೆ. ವಾರದ ಕೆಲವು ದಿನಗಳಲ್ಲಿ, ಅವರು ಬುಡಕಟ್ಟು ಜನರಿಗಾಗಿ ಪಾಹನ್ ಪೂಜೆಯನ್ನು ನಡೆಸುತ್ತಾರೆ ಮತ್ತು ಇತರ ದಿನಗಳಲ್ಲಿ ಪಂಡಿತರು ಹಿಂದೂಗಳಿಗಾಗಿ ಪೂಜೆ ಮಾಡುತ್ತಾರೆ.

PHOTO • Manita Kumari Oraon


ಬೆಟ್ಟದ ಮೇಲೆ ಎರಡು ಬೇರೆ ಬೇರೆ ಪೂಜಾ ಸ್ಥಳಗಳಿವೆ. ಇಲ್ಲಿನ ಎರಡು ಗುಹೆಗಳಲ್ಲಿ ಬುಡಕಟ್ಟು ಪಾಹನರು ಪೂಜೆ ಸಲ್ಲಿಸುತ್ತಾರೆ ಮತ್ತು ಹಿಂದೂ ಪಂಡಿತರು ಬೆಟ್ಟದ ತುದಿಯಲ್ಲಿರುವ ಹನುಮಾನ್ ದೇವಸ್ಥಾನದಲ್ಲಿ ಪೂಜೆ ಮಾಡುತ್ತಾರೆ

ಮತ್ತು ಇಲ್ಲಿ ನಮ್ಮ ಕಣ್ಣಿಗೆ ಕಾಣುವುದಕ್ಕಿಂತಲೂ ಹೆಚ್ಚಿನ ವಿಷಯಗಳಿವೆ.

ಇತಿಹಾಸದ ಆಳಕ್ಕೆ ಹೋದರೆ, ಬುಡಕಟ್ಟು ಜನರನ್ನು ಮುಖ್ಯ ಹಿಂದೂ ಗುಂಪಿಗೆ ತರುವ ಈ ಪ್ರಕ್ರಿಯೆಯು ಬಹಳ ರಹಸ್ಯವಾಗಿ ಮುಂದುವರಿಯುತ್ತದೆ. ದೇವಿ ಪ್ರಸಾದ್ ಚಟ್ಟೋಪಾಧ್ಯಾಯ ಅವರು ತಮ್ಮ ಪುಸ್ತಕ ಲೋಕಾಯತದಲ್ಲಿ ಈ ಕುರಿತು ಬಹಳ ಮುಖ್ಯವಾದ ಪ್ರಶ್ನೆಯನ್ನು ಕೇಳುತ್ತಾರೆ - 1874ರಲ್ಲಿ ವೈದಿಕ ಧರ್ಮದ ಅನುಯಾಯಿಗಳ ಜನಸಂಖ್ಯೆಯು ಒಟ್ಟು ಜನಸಂಖ್ಯೆಯ ಕೇವಲ 10% ಆಗಿತ್ತು, ಹಾಗಿದ್ದರೆ ಈ ದೇಶದಲ್ಲಿ ಹಿಂದೂಗಳು ಬಹುಸಂಖ್ಯಾತ ಸ್ಥಾನಮಾನವನ್ನು ಹೇಗೆ ಪಡೆದರು? ಇದಕ್ಕೆ ಉತ್ತರ ಜನಗಣತಿಯಲ್ಲಿ ಅಡಗಿದೆ.

1871 ಮತ್ತು 1941ರ ನಡುವಿನ ಭಾರತದ ಜನಸಂಖ್ಯಾ ಗಣತಿಯು ಬುಡಕಟ್ಟು ಜನಾಂಗದ ಧರ್ಮವನ್ನು ವಿವಿಧ ಶೀರ್ಷಿಕೆಗಳ ಅಡಿಯಲ್ಲಿ ಗುರುತಿಸಿತು. ಉದಾಹರಣೆಗೆ, ಬುಡಕಟ್ಟು, ಸ್ಥಳೀಯ, ಅನಿಮಿಸ್ಟ್. ಆದರೆ 1951ರಲ್ಲಿ ಸ್ವತಂತ್ರ ಭಾರತದ ಮೊದಲ ಜನಗಣತಿ ಎಲ್ಲಾ ವೈವಿಧ್ಯಮಯ ಸಂಪ್ರದಾಯಗಳನ್ನು ಬುಡಕಟ್ಟು ಧರ್ಮ ಎಂಬ ಹೊಸ ವರ್ಗದ ಅಡಿಯಲ್ಲಿ ಸೇರಿಸಿತು. 1961ರಲ್ಲಿ, ಇದನ್ನು ತೆಗೆದುಹಾಕಲಾಯಿತು ಮತ್ತು ಹಿಂದೂ, ಕ್ರಿಶ್ಚಿಯನ್, ಜೈನ, ಸಿಖ್, ಮುಸ್ಲಿಂ ಮತ್ತು ಬೌದ್ಧ ಜೊತೆಗೆ 'ಇತರ' ಕಾಲಂ ಅನ್ನು ಸೇರಿಸಲಾಯಿತು.

ಇದರ ಪರಿಣಾಮವಾಗಿ, 2011 ರ ಜನಗಣತಿಯ ಪ್ರಕಾರ, 0.7% ಭಾರತೀಯರು ತಮ್ಮನ್ನು "ಇತರ ಧರ್ಮಗಳು ಮತ್ತು ನಂಬಿಕೆಗಳ" ಅಡಿಯಲ್ಲಿ ಘೋಷಿಸಿಕೊಂಡಿದ್ದಾರೆ, ಇದು ದೇಶದಲ್ಲಿ ಅಧಿಕೃತವಾಗಿ ವರ್ಗೀಕರಿಸಲಾಗಿರುವ ಪರಿಶಿಷ್ಟ ಪಂಗಡಗಳ (8.6%) ಜನಸಂಖ್ಯೆಯ ಅನುಪಾತಕ್ಕಿಂತ ಬಹಳ ಕಡಿಮೆ.

1931ರಲ್ಲೇ ಭಾರತದ ಜನಗಣತಿಯ ಆಯುಕ್ತರಾಗಿದ್ದ ಜೆ.ಎಚ್.ಹಟ್ಟನ್ ಅವರು ಜನಗಣತಿ ವರದಿಯಲ್ಲಿ , ಬುಡಕಟ್ಟು ಧರ್ಮಗಳ ಅಡಿಯಲ್ಲಿನ ಅಂಕಿಅಂಶಗಳ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ. "ಒಬ್ಬ ವ್ಯಕ್ತಿಯು ಯಾವುದೇ ಮಾನ್ಯತೆ ಪಡೆದ ಧರ್ಮದ ಭಾಗವಾಗಿರುವುದನ್ನು ನಿರಾಕರಿಸಿದಾಗ ಗಣತಿಕಾರರು ಹಿಂದೆ ಮುಂದೆ ಯೋಚಿಸದೆ ಅವನ ಧರ್ಮವನ್ನು ʼಹಿಂದೂʼ ಎಂದು ದಾಖಲಿಸುವ ಪ್ರವೃತ್ತಿ ಕಂಡುಬರುತ್ತಿದೆ" ಎಂದು ಅವರು ಬರೆಯುತ್ತಾರೆ. "ಇದರ ಹಿಂದಿನ ಆಲೋಚನಾ ಪ್ರಕ್ರಿಯೆಯು ಈ ಕೆಳಗಿನಂತಿದೆ: ಈ ಭೂಮಿಯನ್ನು ಹಿಂದೂಸ್ತಾನ್ ಎಂದು ಕರೆಯಲಾಗುತ್ತದೆ ಮತ್ತು ಇದು ಹಿಂದೂಗಳ ದೇಶವಾಗಿದೆ, ಮತ್ತು ಒಂದು ಮಾನ್ಯತೆ ಪಡೆದ ಧರ್ಮದೊಡನೆ ಗುರುತಿಸಿಕೊಳ್ಳದ ಎಲ್ಲರೂ ಹಿಂದೂಗಳು."

*****

One of the caves called ' Chand gufa'. In the caves sacred stones are being worshipped by the Adivasis for centuries before the temple came into existence
PHOTO • Jacinta Kerketta

ಎರಡು ಗುಹೆಗಳಲ್ಲಿ ಒಂದನ್ನು 'ಚಾಂದ್ ಗುಹೆ' ಎಂದು ಕರೆಯಲಾಗುತ್ತದೆ. ಇಲ್ಲಿನ ದೇವಾಲಯವು ಅಸ್ತಿತ್ವಕ್ಕೆ ಬರುವ ಮೊದಲೇ, ಬುಡಕಟ್ಟು ಜನರು ಶತಮಾನಗಳಿಂದ ಗುಹೆಗಳಲ್ಲಿನ ಪವಿತ್ರ ಕಲ್ಲುಗಳನ್ನು ಪೂಜಿಸುತ್ತಿದ್ದಾರೆ

“ಆದಿವಾಸಿಗಳಾದ ನಮಗೆ ನಮ್ಮ ಧರ್ಮವನ್ನು ನಮೂದಿಸಲು ಜನಗಣತಿಯಲ್ಲಿ ಅವಕಾಶವೆಲ್ಲಿದೆ?”

ಇದು ಅಂಜನ್ ಗ್ರಾಮದ 40 ವರ್ಷದ ಪ್ರಮೋದ್ ಉರಾಂವ್ ಅವರ ಪ್ರಶ್ನೆ. ಅವರು ಹೇಳುತ್ತಾರೆ, “ನಮ್ಮಲ್ಲಿ ಸಾಕಷ್ಟು ಜನರು ತಿಳಿಯದೆ ತಮ್ಮನ್ನು ಹಿಂದೂ ಧರ್ಮದ ಅಡಿಯಲ್ಲಿ ಗುರುತಿಸಿಕೊಳ್ಳುತ್ತಾರೆ. ಆದರೆ ನಾವು ಹಿಂದೂಗಳಲ್ಲ. ಜಾತಿ ವ್ಯವಸ್ಥೆಯು ಹಿಂದೂ ಧರ್ಮದ ಹೃದಯಭಾಗ, ನಾವು ಅದಕ್ಕೆ ಹೊಂದಿಕೊಳ್ಳುವುದಿಲ್ಲ.”

"ನಾವು ಪ್ರಕೃತಿ ಆರಾಧಕರು. ನಮ್ಮ ಲೋಕದೃಷ್ಟಿ ಹೆಚ್ಚು ಮುಕ್ತ ಮತ್ತು ಸ್ವೀಕಾರಾರ್ಹವಾದದ್ದು. ಇದರಲ್ಲಿ ಧರ್ಮಾಂಧತೆಗೆ ಅವಕಾಶವಿಲ್ಲ. ಅದಕ್ಕಾಗಿಯೇ, ನಮ್ಮಲ್ಲಿ ಕೆಲವರು ಹಿಂದೂ ಅಥವಾ ಇಸ್ಲಾಂ ಅಥವಾ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರೂ, ನಾವು ಧರ್ಮದ ಹೆಸರಿನಲ್ಲಿ ಎಂದಿಗೂ ಕೊಲೆ ಮಾಡುವುದಿಲ್ಲ. ನಮ್ಮ ಜನರು ಬೆಟ್ಟದ ಮೇಲೆ ಹೋಗಿ ಹನುಮಂತನನ್ನು ಪೂಜಿಸಿದರೆ, ಅವನನ್ನು ಹಿಂದೂ ಎಂದು ಕರೆಯುವುದಿಲ್ಲ.” ಎಂದು ಹೇಳುತ್ತಾರವರು.

ಅಂಜನ್ ಗ್ರಾಮದ ಬಿರ್ಸಾ ಉರಾಂವ್ ಹೇಳುತ್ತಾರೆ, "ಬುಡಕಟ್ಟು ಜನರು ತುಂಬಾ ಹೊಂದಿಕೊಳ್ಳುವ ಸ್ವಭಾವದವರು ಮತ್ತು ಮುಕ್ತ ಮನಸ್ಸಿನವರು. ಯಾರಾದರೂ ಅವರ ತತ್ವಗಳು ಮತ್ತು ನಂಬಿಕೆಗಳನ್ನು ಹೈಜಾಕ್‌ ಮಾಡಿದರೆ ಅವರು ಸುಮ್ಮನಿರುತ್ತಾರೆ. ಹಾಗೆ ಮಾಡಿದವರ ಕುರಿತು ಅವರು ಯಾವುದೇ ಆಕ್ಷೇಪವನ್ನು ಹೊಂದಿರುವುದಿಲ್ಲ. ಜನರು ಅವರನ್ನು ಗೌರವಿಸುತ್ತಾರೆ. ಈಗ ಅನೇಕ ಹಿಂದೂಗಳು ಅಂಜನ್ ಧಾಮ್ ದೇವಸ್ಥಾನಕ್ಕೆ ಹನುಮಂತನ ಪೂಜೆಗೆಂದು ಬರುತ್ತಾರರೆ, ಮುಸ್ಲಿಮರು ಸಹ ಧಾಮ್‌ಗೆ ಭೇಟಿ ನೀಡಲು ಬರುತ್ತಾರೆ, ಇಲ್ಲಿ ಎಲ್ಲರಿಗೂ ಬಾಗಿಲು ತೆರೆದಿದೆ. ಅನೇಕ ಆದಿವಾಸಿ ಜನರು ದೇವಸ್ಥಾನ ಮತ್ತು ಗುಹೆ ಎರಡಕ್ಕೂ ಕೈ ಮುಗಿಯುತ್ತಾರೆ. ಆದರೆ ಅವರು ಆಗಲೂ ತಮ್ಮನ್ನು ಆದಿವಾಸಿಯೆಂದೇ ಗುರುತಿಸಿಕೊಳ್ಳುತ್ತಾರೆಯೇ ಹೊರತು ಹಿಂದೂ ಎಂದಲ್ಲ.

ಹನುಮಂತನ ಪೂಜೆಯ ಪ್ರಶ್ನೆ ಬಹಳ ಜಟಿಲವಾದದ್ದು.

ಈ ಊರಿನ ಮಹೇಶ್ವರ್ ಉರಾಂವ್ ಹೇಳುತ್ತಾರೆ, "ಬುಡಕಟ್ಟು ಜನರು ಇಲ್ಲಿ ರಾಮ ಮತ್ತು ಲಕ್ಷ್ಮಣನನ್ನು ಪೂಜಿಸುವುದಿಲ್ಲ, ಆದರೆ ಹನುಮಾನ್ ಮೇಲ್ಜಾತಿ ಸಮುದಾಯಕ್ಕೆ ಸೇರಿದವನಲ್ಲ ಎನ್ನುವುದು ಅವರ ನಂಬಿಕೆ. ಅವರ ಪ್ರಕಾರ ಅವನು ಬುಡಕಟ್ಟು ಸಮುದಾಯಕ್ಕೆ ಸೇರಿದವನು. ಹನುಮಂತನಿಗೆ ಮಾನವೀಯ ಗುಣವನ್ನು ಆರೋಪಿಸುತ್ತಲೇ, ಅವನನ್ನು ಪ್ರಾಣಿಯನ್ನಾಗಿ ತೋರಿಸಲಾಗಿದೆ. ಸವರ್ಣೀಯರು ಆದಿವಾಸಿಗಳನ್ನು ಗೇಲಿ ಮಾಡಿದಂತೆ ಹನುಮಂತನನ್ನೂ ಗೇಲಿ ಮಾಡಿದ್ದಾರೆ.”

Left: Hills near Anjan village where people believe Anjani Ma, an Adivasi goddess, resides.
PHOTO • Jacinta Kerketta
Right: After the Hanuman temple came up the place was declared Anjan Dham
PHOTO • Jacinta Kerketta

ಎಡ: ಅಂಜನ್ ಗ್ರಾಮದ ಬಳಿಯ ಬೆಟ್ಟಗಳು. ಬುಡಕಟ್ಟು ದೇವತೆಯಾದ ಅಂಜನಿ ಮಾ ಈ ಬೆಟ್ಟಗಳಲ್ಲಿ ವಾಸಿಸುತ್ತಾಳೆ ಎಂದು ಜನರು ನಂಬುತ್ತಾರೆ. ಬಲ: ಹನುಮಾನ್ ದೇವಾಲಯವನ್ನು ನಿರ್ಮಿಸಿದ ನಂತರ, ಈ ಸ್ಥಳವನ್ನು ಅಂಜನ್ ಧಾಮ್ ಎಂದು ಘೋಷಿಸಲಾಯಿತು

ರಂಜಯ್ ಉರಾಂವ್ ಅವರ ಪ್ರಕಾರ, ಹನುಮಂತ ಬುಡಕಟ್ಟು ಜನಾಂಗದ ಸವರ್ಣ ಸಮುದಾಯಕ್ಕೆ ಸೇರಿದವನಲ್ಲದ ಕಾರಣ ಜನರು ಪಂಡಿತರ ಮಾತುಗಳನ್ನು ಒಪ್ಪಿಕೊಂಡರು. "ಅವನು ಅವರಲ್ಲಿ ಒಬ್ಬನಾಗಿದ್ದಿದ್ದರೆ, ಅವನಿಗೆ ಬಾಲ ಇರುತ್ತಿರಲಿಲ್ಲ. ಅವನು ಬುಡಕಟ್ಟು ಜನಾಂಗದವನಾಗಿರುವುದರಿಂದ ಅವನನ್ನು ಪ್ರಾಣಿಯಂತೆ ಚಿತ್ರಿಸಲಾಗಿದೆ. ಈ ಕಾರಣಕ್ಕಾಗಿಯೇ ಅಂಜನಿ ಮಾ ಹನುಮಂತನ ಸಂಬಂಧಿ ಎಂದು ಅವರು ಹೇಳಿದಾಗ, ಈ ಪ್ರದೇಶದ ಜನರು ಅದನ್ನು ಒಪ್ಪಿಕೊಂಡರು.”

ಗ್ರಾಮದ ಮುಖಿಯಾ ಆಗಿರುವ 38 ವರ್ಷದ ಕರ್ಮಿ ಉರಾಂವ್, ಇಡೀ ಗ್ರಾಮವು ವರ್ಷಕ್ಕೊಮ್ಮೆ ಪರ್ವತ ಪೂಜೆಗೆ ಹೋಗುತ್ತಿದ್ದ ಸಮಯವನ್ನು ನೆನಪಿಸಿಕೊಳ್ಳುತ್ತಾರೆ. "ಆ ಸಮಯದಲ್ಲಿ ಕೇವಲ ಒಂದು ಗುಹೆ ಇತ್ತು. ಜನರು ಅಲ್ಲಿಗೆ ಹೋಗಿ ಮಳೆಗಾಗಿ ಪ್ರಾರ್ಥಿಸುತ್ತಿದ್ದರು. ಇಂದಿಗೂ ನಾವು ಅದೇ ಸಂಪ್ರದಾಯವನ್ನು ಅನುಸರಿಸುತ್ತೇವೆ. ಮತ್ತು ಯಾವಾಗಲೂ ನಾವು ಸಮುದಾಯ ಪೂಜೆಗಳನ್ನು ಮಾಡಿದ ನಂತರ ಈ ಪ್ರದೇಶದಲ್ಲಿ ಮಳೆಯಾಗುವುದನ್ನು ನೀವು ನೋಡಬಹುದು."

"ಪವಿತ್ರ ಬೆಟ್ಟದ ಮೇಲಿದೆಯೆನ್ನುವ ಕಾರಣಕ್ಕಾಗಿ ಇತ್ತೀಚಿನ ದಿನಗಳಲ್ಲಿ ಜನರು ದೇವಾಲಯಕ್ಕೆ ಪರಿಕ್ರಮ (ಪ್ರದಕ್ಷಿಣೆ) ಹಾಕುತ್ತಾರೆ. ಕೆಲವು ಬುಡಕಟ್ಟು ಜನಾಂಗದವರು ದೇವಾಲಯದ ಒಳಗೆ ಹೋಗಿ ಪೂಜೆಯನ್ನೂ ಸಲ್ಲಿಸುತ್ತಾರೆ. ತಮಗೆ ಶಾಂತಿ ಎಲ್ಲಿ ಸಿಗುತ್ತದೆಯೋ ಅಲ್ಲಿಗೆ ಹೋಗಲು ಪ್ರತಿಯೊಬ್ಬರಿಗೂ ಹಕ್ಕಿದೆ" ಎಂದು ಅವರು ಹೇಳುತ್ತಾರೆ.

ಹಳ್ಳಿಯ ಇತರ ಮಹಿಳೆಯರು ಸಹ ತಮ್ಮನ್ನು ತಾವು ಹಿಂದೂಗಳಾಗಿ ನೋಡುವುದಿಲ್ಲ ಎಂದು ಹೇಳುತ್ತಾರೆ. ಆದರೆ ಅವರಲ್ಲಿ ಕೆಲವರು ದೇವಸ್ಥಾನಕ್ಕೆ ಹೋಗುತ್ತಾರೆ. "ದೇವಸ್ಥಾನವೊಂದು ಬೆಟ್ಟದ ಮೇಲಿರುವಾಗ, ಅದು ಆ ಪರ್ವತದ ಒಂದು ಭಾಗವಾಗುತ್ತದೆ. ಪರ್ವತವನ್ನು ಪೂಜಿಸುವ ಜನರು ಹನುಮಂತನನ್ನು ಹೇಗೆ ನಿರ್ಲಕ್ಷಿಸಲು ಸಾಧ್ಯ? ಎರಡೂ ದೇವರು ಒಟ್ಟಿಗೆ ಸೇರಿ ನಮ್ಮ ಪಾಲಿಗೆ ಒಳ್ಳೆಯ ಮಳೆ ತಂದರೆ ನಮಗೆ ಅದರಿಂದ ಆಗುವ ಹಾನಿಯಾದರೂ ಏನು?"

ಅನುವಾದ: ಶಂಕರ. ಎನ್. ಕೆಂಚನೂರು

Jacinta Kerketta

Jacinta Kerketta of the Oraon Adivasi community is an independent writer and reporter from rural Jharkhand. She is also a poet narrating the struggles of Adivasi communities and drawing attention to the injustices they face.

Other stories by Jacinta Kerketta
Illustration : Manita Kumari Oraon

Manita Kumari Oraon is a Jharkhand based artist, working with sculptures and paintings on issues of social and cultural importance to Adivasi communities.

Other stories by Manita Kumari Oraon
Editor : Pratishtha Pandya

Pratishtha Pandya is a Senior Editor at PARI where she leads PARI's creative writing section. She is also a member of the PARIBhasha team and translates and edits stories in Gujarati. Pratishtha is a published poet working in Gujarati and English.

Other stories by Pratishtha Pandya
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru