"ಹಸಿವು ಸೇರಿದಂತೆ ಹಲವು ವಿಷಯಗಳನ್ನು ಮದ್ಯದಿಂದ ಮರೆಯುವುದು ಸುಲಭ" ಎಂದು ಸಿಂಗ್ದುಯಿ ಗ್ರಾಮದ ನಿವಾಸಿ ರಬೀಂದ್ರ ಭುಯಿಯಾ ಹೇಳುತ್ತಾರೆ.
ಐವತ್ತರ ಹರೆಯದಲ್ಲಿರುವ ಭುಯಿಯಾ ಸಬರ್ (ಶಬೊರ್) ಆದಿವಾಸಿ (ಪಶ್ಚಿಮ ಬಂಗಾಳದಲ್ಲಿ ಸಾವರ್ ಎಂದು ಪಟ್ಟಿ ಮಾಡಲಾಗಿದೆ). ಮುಂಡಾ ಬುಡಕಟ್ಟು ಸಮುದಾಯಕ್ಕೆ ಸೇರಿದ, ಸಬರ್ ಸಮುದಾಯದ ಜನರು ಭಾರತದ ಪೂರ್ವ ಭಾಗಗಳಲ್ಲಿ ವಾಸಿಸುತ್ತಾರೆ ಮತ್ತು ಸಾವೋರಾ, ಸೋರಾ, ಶಬರ್ ಮತ್ತು ಸೂರಿಸ್ ಎಂಬ ಹೆಸರುಗಳಿಂದಲೂ ಗುರುತಿಸಲ್ಪಡುತ್ತಾರೆ. ಲೋಧಾ ಸಾವರ್ ಎನ್ನುವ ಹೆಸರು (ಅವಿಭಜಿತ) ಪಶ್ಚಿಮ ಮೇದಿನಿಪುರದಲ್ಲಿ ಪ್ರಧಾನವಾಗಿದೆ, ಮತ್ತು ಖಾರಿಯಾ ಸಾವರ್ ಸಮುದಾಯದವರು ಹೆಚ್ಚಾಗಿ ಪುರುಲಿಯಾ, ಬಂಕುರಾ ಮತ್ತು ಪಶ್ಚಿಮ ಮೇದಿನಿಪುರದಲ್ಲಿ (ಅವಿಭಜಿತ) ವಾಸಿಸುತ್ತಿದ್ದಾರೆ.
ಮಹಾಶ್ವೇತಾ ದೇವಿಯವರ ದಿ ಬುಕ್ ಆಫ್ ದಿ ಹಂಟರ್ (ಮೊದಲು ಬಂಗಾಳಿ ಭಾಷೆಯಲ್ಲಿ ಬ್ಯಾಡ್ಖಂಡಾ ಎನ್ನುವ ಹೆಸರಿನಲ್ಲಿ 1994ರಲ್ಲಿ ಪ್ರಕಟವಾಯಿತು), ಈ ಸಮುದಾಯ ತೀವ್ರ ಬಡತನದಲ್ಲಿರುವುದನ್ನು ಮತ್ತು ಸಮಾಜದ ಅಂಚಿನಲ್ಲಿರುವುದನ್ನು ಚಿತ್ರಿಸುತ್ತದೆ. ಈಗ ದಶಕಗಳ ನಂತರವೂ, ಹೆಚ್ಚಿನ ಬದಲಾವಣೆಯಾಗಿಲ್ಲ ಮತ್ತು ಪಶ್ಚಿಮ ಬಂಗಾಳದ ಆದಿವಾಸಿಗಳ ಕುರಿತಾದ ಲಿವಿಂಗ್ ವರ್ಲ್ಡ್ ಎಂಬ 2020ರ ವರದಿಯು ಹೇಳುವಂತೆ, "ಸಮೀಕ್ಷೆ ನಡೆಸಲಾದ 67 ಪ್ರತಿಶತದಷ್ಟು ಹಳ್ಳಿಗಳು ಹಸಿವಿನಿಂದ ಬಳಲುತ್ತಿವೆ."
ಬ್ರಿಟಿಷ್ ಸರ್ಕಾರವು ಈ ಸಮುದಾಯವನ್ನು18ನೇ ಶತಮಾನದ ಉತ್ತರಾರ್ಧದಿಂದ 1952ರವರೆಗೆ 'ಕ್ರಿಮಿನಲ್ ಬುಡಕಟ್ಟುʼ ಎನ್ನುವ ಹಣೆಪಟ್ಟಿಯಡಿ ಇರಿಸಿತ್ತು. ಸಾಂಪ್ರದಾಯಿಕವಾಗಿ ಬೇಟೆಗಾರರಾಗಿರುವ ಇವರು ಹಣ್ಣುಗಳು, ಎಲೆಗಳು ಮತ್ತು ಬೇರುಗಳನ್ನು ಸಂಗ್ರಹಿಸುವಲ್ಲಿ ಮತ್ತು ಕಾಡಿನಲ್ಲಿ ಪ್ರಾಣಿಗಳನ್ನು ಬೇಟೆಯಾಡುವಲ್ಲಿ ನಿಪುಣರಾಗಿದ್ದಾರೆ. ಸ್ವಾತಂತ್ರ್ಯದ ನಂತರ, ಕೆಲವರಿಗೆ ಕೃಷಿ ಮಾಡಲು ಭೂಮಿಯನ್ನು ನೀಡಲಾಯಿತು. ಆದರೆ ಅದರಲ್ಲಿ ಹೆಚ್ಚಿನವು ಕಲ್ಲಿನಿಂದ ಕೂಡಿದ್ದ ಬಂಜರು ಭೂಮಿಯಾಗಿದ್ದವು. ಹೀಗಾಗಿ ಅವರು ವಲಸೆ ಕಾರ್ಮಿಕರಾಗಿ ಕೆಲಸದಲ್ಲಿ ತೊಡಗಿಸಿಕೊಂಡರು. ಸಮುದಾಯವನ್ನು ಡಿನೋಟಿಫೈ ಮಾಡಲಾಗಿದೆಯಾದರೂ ಅವರ ಮೇಲಿನ ಹಳೆಯ ಕಳಂಕ ತೊಲಗಿಲ್ಲ. ಮತ್ತು ಅವರು ಸ್ಥಳೀಯ ಪೊಲೀಸರು ಮತ್ತು ಅರಣ್ಯ ಇಲಾಖೆಯ ಕರುಣೆಯಲ್ಲಿ ಬದುಕುತ್ತಿದ್ದಾರೆ, ಅವರು ಈ ಜನರ ಚಲನವಲನದ ಮೇಲೆ ನಿರ್ಬಂಧಗಳನ್ನು ಹೇರುತ್ತಾರೆ.
ಕಡಿಮೆ ಗಳಿಕೆಯ ಅವಕಾಶಗಳೊಂದಿಗೆ, ಪಶ್ಚಿಮ ಮೇದಿನಿಪುರ ಮತ್ತು ಜಾರ್ಗ್ರಾಮ್ ಜಿಲ್ಲೆಗಳ ಸಬರ್ ಸಮುದಾಯದಲ್ಲಿ ಹಸಿವು ಸ್ಪಷ್ಟವಾಗಿ ಗೋಚರಿಸುತ್ತದೆ. ಭುಯಿಯಾ ಅವರಂತಹ ಅನೇಕರು ತಮ್ಮ ಹಸಿವನ್ನು ಮದ್ಯದಿಂದ ನೀಗಿಸುತ್ತಾರೆ ಅಥವಾ “ದಿನಕ್ಕೆ ಮೂರು ಬಾರಿ ಪಾಂತಾ ಭಾತ್ (ನೀರಿನಲ್ಲಿ ನೆನೆಸಿದ ಅನ್ನ) ತಿನ್ನುತ್ತೇವೆ” ಎನ್ನುತ್ತಾರೆ ಬಂಕಿಮ್ ಮಲ್ಲಿಕ್. ತಪೋಬನ್ ಗ್ರಾಮದ 55 ವರ್ಷದ ನಿವಾಸಿಯಾದ ಮಲ್ಲಿಕ್, ಮನೆಯ ಪ್ರತಿಯೊಬ್ಬ ಸದಸ್ಯರಿಗೆ ತಿಂಗಳಿಗೆ ಐದು ಕಿಲೋಗ್ರಾಂಗಳಷ್ಟು ಅಕ್ಕಿಯನ್ನು ಒದಗಿಸುವ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು (ಪಿಡಿಎಸ್) ಉಲ್ಲೇಖಿಸುತ್ತಿದ್ದಾರೆ. ಅವರು ತನ್ನ ಮುರುಕಲು ಮನೆಯ ಮುಂದೆ ಕುಳಿತು ಪಾಂತಾ ಭಾತ್ ತಿನ್ನುತ್ತಿದ್ದರು.


ರವೀಂದ್ರ ಭುಯಿಯಾ (ಎಡ) ಜಾರ್ಗ್ರಾಮ್ ಜಿಲ್ಲೆಯ ಸಿಂಗ್ಧುಯಿ ಗ್ರಾಮದ ನಿವಾಸಿಯಾಗಿದ್ದು, ಅಲ್ಲಿ ಅನೇಕ ಸಬರ್ ಆದಿವಾಸಿ ಕುಟುಂಬಗಳು ವಾಸಿಸುತ್ತಿವೆ


ತಪೋಬನ್ ಗ್ರಾಮದ ನಿವಾಸಿ ಬಂಕಿಮ್ ಮಲ್ಲಿಕ್ (ಎಡ) ಆಹಾರವನ್ನು ಖರೀದಿಸಲು ಸಾಧ್ಯವಾಗದ ಅನೇಕ ಕುಟುಂಬಗಳಿಗೆ ಪ್ರಧಾನ ಆಹಾರವಾಗಿರುವ ಪಾಂತಾ ಭಾತ್ (ನೀರಿನಲ್ಲಿ ನೆನೆಸಿದ ಅನ್ನ) ತಿನ್ನುತ್ತಿದ್ದಾರೆ. ಕಾಡು ಪ್ರಾಣಿಗಳ ಭಯವು ಕಾಡಿನಲ್ಲಿ ಆಹಾರವನ್ನು ಹುಡುಕಲು ಹೋಗುವ ಕುರಿತು ಎರಡೆರಡು ಬಾರಿ ಯೋಚಿಸುವಂತೆ ಮಾಡಿದೆ. ಅಪೌಷ್ಟಿಕತೆಯ ಲಕ್ಷಣಗಳನ್ನು ಪ್ರದರ್ಶಿಸುತ್ತಿರುವ ಮಗು (ಬಲ)
ತಮ್ಮ ಪಡಿತರ ಕೊರತೆಯನ್ನು ನೀಗಿಸಲು ಸಬರ್ ಜನರು ವರ್ಷವಿಡೀ ಕಾಡಿನ ಮೇಲೆ ಅವಲಂಬಿತರಾಗಿರುತ್ತಾರೆ. ಬೇಸಿಗೆ ತಿಂಗಳುಗಳಾದ ಬೈಸಾಖ್, ಜೇಷ್ಠ್ಯ ಹಾಗೂ ಮುಂಗಾರಿ ತಿಂಗಳುಗಳಾದ ಆಷಾಢದಲ್ಲಿ ಸಮುದಾಯವು ಕಾಡಿನ ಹಣ್ಣುಗಳು ಮತ್ತು ಬೇರುಗಳನ್ನು ಸಂಗ್ರಹಿಸುತ್ತದೆ ಮತ್ತು ಮರಿ ಹಕ್ಕಿಗಳು, ಹಾವುಗಳು, ಗೋಸಾಪ್ಗಳು (ಉಡ/Bengal Monitor lizard), ಕಪ್ಪೆಗಳು ಮತ್ತು ಬಸವನಹುಳುಗಳನ್ನು ಬೇಟೆಯಾಡುತ್ತದೆ. ಹಾಗೆಯೇ ಹೊಲದ ಕಪ್ಪೆಗಳು, ದೊಡ್ಡ ಬಸವನಹುಳುಗಳು, ಸಣ್ಣ ಮೀನು ಮತ್ತು ಏಡಿಗಳನ್ನು ಹಿಡಿಯುತ್ತಾರೆ.
ನಂತರ ಶ್ರಾವಣ, ಭಾದ್ರಾ ಮತ್ತು ಅಶ್ವಿನ್ ತಿಂಗಳಿನಲ್ಲಿ , ನದಿಪಾತ್ರಗಳಿಂದ ಬರುವ ಮೀನುಗಳು; ಕಾರ್ತಿಕ, ಅಗ್ರಹಾರಣ ಮತ್ತು ಪೌಶ್ - ನಂತರದ ತಿಂಗಳುಗಳಲ್ಲಿ, ಸಮುದಾಯವು ಹೊಲದಲ್ಲಿ ಇಲಿಗಳನ್ನು ಹಿಡಿದು, ನಂತರ ಅವುಗಳು ತಮ್ಮ ಬಿಲಗಳಲ್ಲಿ ಸಂಗ್ರಹಿಸಿದ ಭತ್ತವನ್ನು ಹೊರತೆಗೆಯುತ್ತದೆ. ಚಳಿಗಾಲದ ತಿಂಗಳುಗಳಾದ ಮಾಘ ಮತ್ತು ನಂತರದ ವಸಂತಕಾಲದಲ್ಲಿ - ಫಾಲ್ಗುನ್ ಮತ್ತು ಚೈತ್ರದಲ್ಲಿ , ಅವರು ಸಣ್ಣ ಪ್ರಾಣಿಗಳನ್ನು ಬೇಟೆಯಾಡುತ್ತಾರೆ ಮತ್ತು ಕಾಡು ಹಣ್ಣುಗಳು ಮತ್ತು ಚಕ್ (ಜೇನುಗೂಡುಗಳು) ಕಿತ್ತು ಆಹಾರ ಸಂಗ್ರಹಿಸುತ್ತಾರೆ.
ಇತರ ಆದಿವಾಸಿಗಳಂತೆ ಇವರಿಗೂ ಈಗೀಗ ಕಾಡಿಗೆ ಹೋಗುವುದು ಕಷ್ಟವಾಗುತ್ತಿದೆ. ಕಾಡುಪ್ರಾಣಿಗಳು ಮೇವಿನ ವಿಷಯದಲ್ಲಿ ಆಕ್ರಮಣಕಾರಿಯಾಗಿವೆ ಮತ್ತು ಒಮ್ಮೊಮ್ಮೆ ಇದರಿಂದ ಅವರ ಜೀವಕ್ಕೂ ಅಪಾಯವಾಗುವ ಸಾಧ್ಯತೆ ಅವರಲ್ಲಿ ಭಯವನ್ನು ಹುಟ್ಟಿಸುತ್ತಿದೆ.
“ಸಂಜೆಯ ನಂತರ ಯಾರಿಗಾದರೂ ತೀವ್ರ ಅನಾರೋಗ್ಯ ಕಾಡಿದರೂ ನಾವು ಊರಿನಿಂದ ಹೊರಗೆ ಹೋಗುವುದಿಲ್ಲ. ಕೆಲವು ಆನೆಗಳ ಹಿಂಡು ಇಲ್ಲಿಯೇ ಬಿಡಾರ ಹೂಡಿ ಬಿಟ್ಟಿವೆ. ಅವುಗಳೂ ಇಲ್ಲಿ ಆಧಾರ್ ಕಾರ್ಡ್ ಮಾಡಿಸಿಕೊಂಡು ನೆಲೆಯೂರಿರಬೇಕು” ಎಂದು 52 ವರ್ಷದ ಜೋಗ ಮಲ್ಲಿಕ್ ತಮಾಷೆಯಾಗಿ ಹೇಳುತ್ತಾರೆ.
ಸುಕ್ರ ನಾಯಕ್ ತಪೋಬನ್ ಗ್ರಾಮದವರು ಮತ್ತು ಸಬರ್ ಸಮುದಾಯಕ್ಕೆ ಸೇರಿದ ಅವರಿಗೆ ಈಗ 60 ವರ್ಷ. ಅವರು ಹೇಳುವಂತೆ “ಇಲ್ಲಿನ ಪರಿಸ್ಥಿತಿ ಭಯಭೀತಿಯಿಂದ ಕೂಡಿದೆ. ಆನೆಗಳು ಎಲ್ಲೆಡೆ ಇವೆ ಮತ್ತು ಅವು ತುಂಬಾ ಆಕ್ರಮಣಕಾರಿಯಾಗುತ್ತವೆ. ಅವು ಜನರ ಮೇಲೆ ದಾಳಿ ಮಾಡುವುದಲ್ಲದೆ, ಭತ್ತದ ಗದ್ದೆಗಳು, ಬಾಳೆ ಗಿಡಗಳು ಮತ್ತು ನಮ್ಮ ಮನೆಗಳನ್ನು ಸಹ ನಾಶಪಡಿಸುತ್ತಿವೆ.”
ಅವರ ನೆರೆ ಮನೆಯವರಾದ ಬೆನಶುಲಿ ಗ್ರಾಮದ ನಿವಾಸಿ ಜತಿನ್ ಭಕ್ತ, “ಆದರೆ ನಾವು ಕಾಡಿಗೆ ಹೋಗದೆ ಬದುಕುವುದು ಹೇಗೆ? ಒಂದೊಂದು ಕೇವಲ ಒಂದು ಹೊತ್ತು ಪಾಂತಾ ಭಾತ್ ತಿಂದು ದಿನ ದೂಡುವುದೂ ಇರುತ್ತದೆ” ಎನ್ನುತ್ತಾರೆ.


ತಪೋಬನ್ ಗ್ರಾಮದ ಸಬರ್ ಆದಿವಾಸಿ ಜೋಗ ಮಲ್ಲಿಕ್ (ಎಡ) ಮಧುಮೇಹ ಸೇರಿದಂತೆ ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಹೊಂದಿದ್ದಾರೆ̤. ʼಕಾಡಿಗೆ ಹೋಗದಿದ್ದರೆ ಹೊಟ್ಟೆ ತುಂಬಿಸಿಕೊಳ್ಳುವುದು ಹೇಗೆ?' ಎಂದು ಬೆನಶುಲಿಯ ಜತಿನ್ ಭಕ್ತ (ಬಲ) ಕೇಳುತ್ತಾರೆ


ಬೆನಶುಲಿಯ ಸುಕ್ರ ನಾಯಕ್ (ಎಡ) ಹೇಳುತ್ತಾರೆ, 'ಆನೆಗಳು ಹಾದುಹೋಗುವುದರಿಂದ ನನಗೆ ರಾತ್ರಿಯಲ್ಲಿ ಮಲಗಲು ಸಾಧ್ಯವಾಗುತ್ತಿಲ್ಲ. ನನ್ನ ಮನೆ ಹಳ್ಳಿಯ ಕೊನೆಯಲ್ಲಿದೆ. ಇದು ಬಹಳ ಅಪಾಯಕಾರಿ.' ಆನೆಗಳು ಆಗಾಗ್ಗೆ ಆಹಾರವನ್ನು ಹುಡುಕಿಕೊಂಡು ಹಳ್ಳಿಗಳಿಗೆ ಬರುತ್ತವೆ. ಆನೆಗಳಿಂದ ನಾಶವಾದ ಬಾಳೆ ತೋಟ (ಬಲ)
ಸಬರ್ ಸಮುದಾಯವು ಆಹಾರ ಕೊರತೆಯಿಂದಾಗಿ ಕ್ಷಯ ರೋಗಕ್ಕೂ ತುತ್ತಾಗುತ್ತಿದೆ. ಸಾರಥಿ ಮಲ್ಲಿಕ್ ಟಿಬಿ ರೋಗಿಯಾಗಿದ್ದು, ವೈದ್ಯಕೀಯ ಶಿಬಿರಗಳಿಗೆ ಹೋಗಿದ್ದಾರೆ. ಆದರೆ ಇನ್ನು ಅಲ್ಲಿಗೆ ಹೋಗಲು ನನಗೆ ಇಷ್ಟವಿಲ್ಲ ಎನ್ನುತ್ತಾರವರು. ಬೆನಶುಲಿ ಗ್ರಾಮದ 30 ವರ್ಷದ ನಿವಾಸಿ ಅದಕ್ಕೆ ಕಾರಣವನ್ನು ಹೀಗೆ ವಿವರಿಸುತ್ತಾರೆ: “ನಮ್ಮ ಮನೆಯಲ್ಲಿ ಹೆಂಗಸು ಅಂತ ಇರುವುದು ನಾನೊಬ್ಬಳೇ, ನಾನೂ ಹೋಗಿ ಆಸ್ಪತ್ರೆಯಲ್ಲಿ ಮಲಗಿದರೆ ಮನೆಯ ಕೆಲಸಗಳನ್ನು ಯಾರು ಮಾಡುತ್ತಾರೆ? ನನ್ನ ಗಂಡನೊಂದಿಗೆ ಎಲೆಗಳನ್ನು ಸಂಗ್ರಹಿಸಲು ಕಾಡಿಗೆ ಯಾರು ಹೋಗುತ್ತಾರೆ?" ಅಲ್ಲದೆ ತಪಾಸಣೆಗಾಗಿ ಆಸ್ಪತ್ರೆಗೆ ಹೋಗಲು ಪ್ರಯಾಣಕ್ಕೂ ಸಾಕಷ್ಟು ಹಣ ಖರ್ಚಾಗುತ್ತದೆ. “ಒಂದು ಕಡೆಯ ಪ್ರಯಾಣಕ್ಕೆ 50ರಿಂದ 80 ರೂಪಾಯಿಗಳು ವೆಚ್ಚವಾಗುತ್ತವೆ. ನಾವು ಅದನ್ನು ಭರಿಸಲು ಸಾಧ್ಯವಿಲ್ಲ."
ಸಬರ್ ಕುಟುಂಬಗಳ ಪ್ರಮುಖ ಆದಾಯವು ಸಾಲ್ (ಶೋರಿಯಾ ರೋಬಸ್ಟಾ) ಮರದ ಎಲೆಗಳನ್ನು ಸಂಗ್ರಹಿಸಿ ಅವುಗಳನ್ನು ಮಾರಾಟ ಮಾಡುವುದರಿಂದ ಬರುತ್ತದೆ, ಇದು ಪ್ರಯಾಸದಾಯಕ ಕೆಲಸವಾಗಿದೆ. ಸಾಲ್ ಭಾರತ ಮೂಲದ ಗಟ್ಟಿ ಜಾತಿಯ ಮರ. ನಿಯಮಿತವಾಗಿ ಮಾರುಕಟ್ಟೆಗೆ ಭೇಟಿ ನೀಡುವ ಒಡಿಶಾದ ಸಾಲ್ ಎಲೆಗಳ ಖರೀದಿದಾರ ದಿಲೀಪ್ ಮೊಹಂತಿ ಹೇಳುತ್ತಾರೆ, “ಈ ವರ್ಷ ಎಲೆಗಳ ಪೂರೈಕೆ ತೀವ್ರವಾಗಿ ಕುಸಿದಿದೆ. ಆನೆಗಳಿಂದಾಗಿ ಈಗ ಸಬರ್ ಸಮುದಾಯದವರು ಕಾಡಿಗೆ ಹೋಗಲು ಹೆದರುತ್ತಿದ್ದಾರೆ."
ಈ ವಿಷಯವನ್ನು ಜತಿನ್ ಅವರ ನೆರೆಯವರಾದ ಕೊಂಡ ಭಕ್ತ ಒಪ್ಪುತ್ತಾರೆ. ಈ ಕೆಲಸದಲ್ಲಿ ಬಹಳ ಅಪಾಯವಿದೆ ಎನ್ನುತ್ತಾರೆ. “ನಾವು ಸಾಮಾನ್ಯವಾಗಿ ಗುಂಪಿನಲ್ಲಿ ಹೋಗುತ್ತೇವೆ. ಇದು ಬಹಳ ಅಪಾಯಕಾರಿ ಕೆಲಸ. ಆನೆಗಳು ಮತ್ತು ಹಾವುಗಳ ಕಾಟವಿರುತ್ತದೆ. ನಾವು ಬೆಳಿಗ್ಗೆ 6 ಗಂಟೆಗೆ ಹೋಗಿ ಮಧ್ಯಾಹ್ನದ ವೇಳೆಗೆ ಹಿಂತಿರುಗುತ್ತೇವೆ."
ಎಲೆಗಳನ್ನು ಸಂಗ್ರಹಿಸಿ ಒಣಗಿಸಲಾಗುತ್ತದೆ ಮತ್ತು ನಂತರ, “ಅವುಗಳನ್ನು ಸೈಕಲ್ಲಿನಲ್ಲಿ ಹೇರಿಕೊಂಡು ಪ್ರತಿ ಶನಿವಾರ ನಡೆಯುವ ಹಾಟ್ (ಸಂತೆ) ಗೆ ಕೊಂಡೊಯ್ಯುತ್ತೇವೆ. ಒಡಿಶಾದಿಂದ ಖರೀದಿದಾರರು ಅಲ್ಲಿಗೆ ಬರುತ್ತಾರೆ. ಅವರು 1,000 ಎಲೆಗಳ ಕಟ್ಟಿಗೆ ನಮಗೆ 60 ರೂ.ಗಳನ್ನು ಕೊಡುತ್ತಾರೆ. ವಾರದಲ್ಲಿ ನಾಲ್ಕು ಕಟ್ಟುಗಳನ್ನು ಮಾರಾಟ ಮಾಡಿದರೆ, ನಾನು 240 ರೂ.ಗಳನ್ನು ಗಳಿಸಬಹುದು" ಎಂದು ಜತಿನ್ ಭೊಕ್ತ ಹೇಳುತ್ತಾರೆ. "ಇದು ಇಲ್ಲಿನ ಹೆಚ್ಚಿನ ಕುಟುಂಬಗಳ ಸರಾಸರಿ ಗಳಿಕೆಯಾಗಿದೆ."


ಎಡ: ಬೆನಶುಲಿಯ ಸಾರಥಿ ಮಲ್ಲಿಕ್ ಅವರಿಗೆ ನವೆಂಬರ್ 2022ರಲ್ಲಿ ಕ್ಷಯರೋಗ ಇರುವುದು ಪತ್ತೆಯಾಯಿತು. ಅವರು ಔಷಧಿ ಸೇವಿಸುತ್ತಿರುವುದರಿಂದಾಗಿ ಹೆಚ್ಚು ಹೊತ್ತು ಕೆಲಸ ಮಾಡಲು ಸಾಧ್ಯವಿಲ್ಲ. ಬಲ: ಸಬರ್ ಮಲ್ಲಿಕ್ ಸಿಂಗ್ಧುಯಿ ನಿವಾಸಿ ಮತ್ತು ಕುಷ್ಠರೋಗದ ಮುಂದುವರಿದ ಹಂತದಲ್ಲಿದ್ದಾರೆ. ಸರ್ಕಾರವು ಅದಕ್ಕೆ ಯಾವುದೇ ಚಿಕಿತ್ಸೆಯನ್ನು ನೀಡಲಿಲ್ಲ ಎಂದು ಅವರು ಹೇಳುತ್ತಾರೆ


ಎಡ: ಬೆನಶುಲಿಯ ಚಂಪಾ ಮಲ್ಲಿಕ್ ಅವರು ತಮ್ಮ ಮನೆಯಲ್ಲಿ ಸಂಗ್ರಹಿಸಿದ ಸಾಲ್ ಎಲೆಗಳೊಂದಿಗೆ, ಇದನ್ನು ಸ್ಥಳೀಯ ವಾರದ ಸಂತೆಯಲ್ಲಿ ಮಾರಲಾಗುತ್ತದೆ. ಬಲ: ಅದೇ ಗ್ರಾಮದ ಸುಬೆನ್ ಭಕ್ತ ಸಾಲ್ ಎಲೆಗಳನ್ನು ಮಾರುಕಟ್ಟೆಗೆ ತರುತ್ತಾ ರೆ
ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಯೋಜನೆಯಡಿ ಸರ್ಕಾರವು ಸಮುದಾಯಕ್ಕೆ ವಸತಿಯನ್ನು ಪ್ರಾರಂಭಿಸಿದೆ . ಆದರೆ 40 ವರ್ಷದ ಸಾಬಿತ್ರಿ ಮಲ್ಲಿಕ್, "ನಾವು ಅಲ್ಲಿ ವಾಸಿಸಲು ಸಾಧ್ಯವಿಲ್ಲ" ಎಂದು ಹೇಳುತ್ತಾರೆ. ಇಲ್ಲಿನ ವಾಡಿಕೆಯ ಬೇಸಿಗೆಯ ತಾಪಮಾನ 43 ಡಿಗ್ರಿ ಸೆಲ್ಸಿಯಸ್. ಆ ಸಮಯದಲ್ಲಿ ಕಲ್ನಾರಿನ ಛಾವಣಿಯನ್ನು ಹೊಂದಿರುವ ಕಾಂಕ್ರೀಟ್ ಮನೆಗಳು ಅಸಹನೀಯವಾಗಿರುತ್ತವೆ. "ಮಾರ್ಚ್-ಜೂನ್ ತಿಂಗಳ ಬಿಸಿಲಿನಲ್ಲಿ, ನಾವು ಇಲ್ಲಿ ಹೇಗೆ ವಾಸಿಸಬೇಕು?"
ಬೆನಶುಲಿ ಮತ್ತು ತಪೋಬನದಂತಹ ಹಳ್ಳಿಗಳಲ್ಲಿ ಸಮುದಾಯದ ಜೀವನ ಮಟ್ಟವನ್ನು ಸುಧಾರಿಸಲು ಕೆಲಸ ಮಾಡುತ್ತಿರುವ ಕಜ್ಲಾ ಜನಕಲ್ಯಾಣ ಸಮಿತಿ (ಕೆಜೆಕೆಎಸ್) ಎಂಬ ಎನ್‌ಜಿಒ ಸ್ಥಾಪಿಸಿದ ಕೆಲವು ಖಾಸಗಿ ಪ್ರಾಥಮಿಕ ಶಾಲೆಗಳಿವೆ. ಸಾಕ್ಷರತೆಯು ಶೇಕಡಾ 40ರಷ್ಟಿದೆ, ಇದು ರಾಜ್ಯ ಮತ್ತು ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಾಗಿದೆ; ಈ ಪ್ರದೇಶದ ಸುಮಾರು ಮೂರನೇ ಒಂದು ಭಾಗದಷ್ಟು ಯುವ ಆದಿವಾಸಿಗಳು [ಮಧ್ಯಮ ಮತ್ತು ಹೈಯರ್ ಸೆಕೆಂಡರಿ] ಶಾಲೆಗಳಲ್ಲಿ ದಾಖಲಾಗಿಲ್ಲ ಎಂದು ಈ 2020ರ ವರದಿ ಹೇಳುತ್ತದೆ . ಜಾತಿ ಆಧಾರಿತ ಹಲ್ಲೆಗಳು, ಶಾಲೆಯಿಂದ ದೂರವಿರುವುದು, ಶೈಕ್ಷಣಿಕ ವೆಚ್ಚಗಳನ್ನು ಭರಿಸಲು ಅಸಮರ್ಥತೆ ಮತ್ತು ಉದ್ಯೋಗ ಪಡೆಯುವ ಬಾಧ್ಯತೆಗಳಂತಹ ಅಂಶಗಳಿಂದಾಗಿ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯುತ್ತಾರೆ ಎಂದು ಅದು ಸೂಚಿಸುತ್ತದೆ.
"ಸಮುದಾಯಕ್ಕೆ ಸರಿಯಾದ ಸಂಪಾದನೆ ಇಲ್ಲದಿದ್ದಾಗ, ಮಕ್ಕಳನ್ನು ಶಾಲೆಗೆ ಕಳುಹಿಸುವುದು ದುಬಾರಿಯಾಗುತ್ತದೆ" ಎಂದು ಕೆಜೆಎಸ್ ಮುಖ್ಯಸ್ಥ ಸ್ವಪನ್ ಜನಾ ಹೇಳುತ್ತಾರೆ.
ಆರೋಗ್ಯ ರಕ್ಷಣೆಯ ವಿಷಯದಲ್ಲೂ ಪರಿಸ್ಥಿತಿ ಹೀಗೇ ಇದೆ ಎನ್ನುವ ಪಲ್ಲವಿ ಸೇನ್ ಗುಪ್ತಾ, "ಹತ್ತಿರದಲ್ಲಿ ಯಾವುದೇ ಪ್ರಾಥಮಿಕ ಆರೋಗ್ಯ ಶಿಬಿರಗಳಿಲ್ಲದ ಕಾರಣ ಅವರಿಗೆ ಎಕ್ಸ್-ರೇ ತೆಗೆಸಿಕೊಳ್ಳುವುದು ಕಷ್ಟ. ಇದರಿಂದಾಗಿ ಅವರು ಸಾಂಪ್ರದಾಯಿಕ ವೈದ್ಯರನ್ನು ಅವಲಂಬಿಸಿದ್ದಾರೆ" ಎಂದು ಈ ಪ್ರದೇಶದ ಆದಿವಾಸಿಗಳಿಗೆ ವೈದ್ಯಕೀಯ ಸೇವೆಗಳನ್ನು ನೀಡುವ ದತ್ತಿ ಸಂಸ್ಥೆಯಾದ ಜರ್ಮನ್ ಡಾಕ್ಟರ್ಸ್ ಸಂಸ್ಥೆಯೊಡನೆ ಕೆಲಸ ಮಾಡುವ ಸೇನ್ ಗುಪ್ತಾ ಹೇಳುತ್ತಾರೆ. ಈ ಪ್ರದೇಶದಲ್ಲಿ ಹಾವು ಕಡಿತವೂ ಸಾಮಾನ್ಯವಾಗಿದೆ. ಈ ವಿಷಯದಲ್ಲೂ ಸಮರ್ಪಕ ವೈದ್ಯಕೀಯ ಸೌಲಭ್ಯ ಲಭ್ಯವಿಲ್ಲದ ಕಾರಣ ಜನರು ಸ್ಥಳೀಯ ವೈದ್ಯ ಪದ್ಧತಿಯನ್ನೇ ಅವಲಂಬಿಸುತ್ತಾರೆ


ತಪೋಬನ್ ಗ್ರಾಮದಲ್ಲಿ ಜನಕಲ್ಯಾಣ ಸಮಿತಿಯು ಸಬರ್ ಮಕ್ಕಳಿಗಾಗಿ ಶಾಲೆಯನ್ನು ಪ್ರಾರಂಭಿಸಿತು. ಬಲ: ಬೆಹುಲಾ ನಾಯಕ್ ಅಯೋಡಿನ್ ಕೊರತೆಯನ್ನು ಹೊಂದಿದ್ದಾರೆ ಮತ್ತು ಅವರಲ್ಲಿ ಗೊಯಿಟರ್ ಲಕ್ಷಣಗಳು ಕಂಡುಬಂದಿವೆ, ಇದು ಬೆನಶುಲಿಯ ಸಬರ್ ಮಹಿಳೆಯರಲ್ಲಿ ಸಾಮಾನ್ಯವಾಗಿದೆ


ಕನಕ್ ಕೋಟಾಲ್ ಅವರ ಕೈ ( ಎಡ ) ಮುರಿದಾಗ ಸರಿಯಾದ ವೈದ್ಯಕೀಯ ಸಹಾಯ ಸಿಗದೆ ಶಾಶ್ವತವಾಗಿ ವಿರೂಪಗೊಂಡಿದೆ . ಆಕೆಯ ಗ್ರಾಮವಾದ ಸಿಂಗ್ಧುಯಿ, ವೈದ್ಯರು ಮತ್ತು ಆರೋಗ್ಯ ಸೇವಾ ಸೌಲಭ್ಯದ ಕೊರತೆಯನ್ನು ಎದುರಿಸುತ್ತಿದೆ . ಕುನೀ ಭಕ್ತ ( ಬಲ ) ಅವರ ವಿಷಯದಲ್ಲೂ ಹೀಗೇ ಆಗಿದೆ . ಅವರ ಕಾಲು ಮುರಿದಿದ್ದು ಅವರ ಮತ್ತೆ ನಡೆಯುವಂತಾಗುವುದು ಯಾವಾಗೆನ್ನುವುದರ ಚಿಂತೆಯಲ್ಲಿದ್ದಾರೆ . ಅವರ ಗಂಡ ಪತ್ನಿಯ ಚಿಕಿತ್ಸೆಗಾಗಿ 8,000 ರೂ . ಖರ್ಚು ಮಾಡಿರುವುದಾಗಿ ಹೇಳುತ್ತಾರೆ
ಪಶ್ಚಿಮ ಬಂಗಾಳದಲ್ಲಿ ಇವರ ಜನಸಂಖೆಯ 40,000 ಆಸುಪಾಸಿನಲ್ಲಿ ಇದದರೂ (ಭಾರತದಲ್ಲಿ ಪರಿಶಿಷ್ಟ ಪಂಗಡಗಳ ಅಂಕಿಅಂಶಗಳ ಪ್ರೊಫೈಲ್ , 2013) ಹಸಿವಿಗೆ ಸಂಬಂಧಿಸಿದಂತೆ ಸಂಕಷ್ಟದಲ್ಲಿದ್ದಾರೆ.
2004 ರಲ್ಲಿ, ಈಗಿನ ಜಾರ್‌ಗ್ರಾಮ್ ಜಿಲ್ಲೆಯ (ಈ ಮೊದಲು ಮೇದಿನಿಪುರ ಜಿಲ್ಲೆ) ಸಬರ್ ಗ್ರಾಮದಲ್ಲಿ ಐದು ಜನರು ಹಲವಾರು ತಿಂಗಳುಗಳ ಹಸಿವಿನಿಂದ ಸಾವನ್ನಪ್ಪಿದರು, ಇದು ರಾಷ್ಟ್ರೀಯ ಮಾಧ್ಯಮಗಳಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಇಪ್ಪತ್ತು ವರ್ಷಗಳ ನಂತರವೂ ಪರಿಸ್ಥಿತಿ ಹೆಚ್ಚು ಬದಲಾಗಿಲ್ಲ: ಅತಿಯಾದ ಆಹಾರ ಮತ್ತು ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯ ಲಭ್ಯತೆಯ ಕೊರತೆಯಿದೆ. ಕುಗ್ರಾಮಗಳು ದಟ್ಟವಾದ ಕಾಡುಗಳಲ್ಲಿ ನೆಲೆಗೊಂಡಿರುವುದರಿಂದ ಮಾನವ-ಪ್ರಾಣಿ ಸಂಘರ್ಷಗಳು ಆಗಾಗ್ಗೆ ಸಂಭವಿಸುತ್ತವೆ.
ಇಂತಹ ಪರಿಸ್ಥಿತಿಯಲ್ಲಿ ಅವರು ಆಹಾರದ ಬದಲಿಗೆ ಮದ್ಯ ಕುಡಿಯುತ್ತೇವೆ ಎಂದಾಗ ಅದನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. “ನಾನು ಮಾತನಾಡುವಾಗ ಬಾಯಿಯಿಂದ ಮದ್ಯದ ವಾಸನೆ ಬಂದರೆ ನೀವು ನನಗೆ ಬಯ್ಯುತ್ತೀರಾ?” ಎಂದು ರಬೀಂದ್ರ ಭುಯಿಯಾ ಮುಗ್ಧತೆಯಿಂದ ಈ ವರದಿಗಾರನನ್ನು ಕೇಳಿದರು.

ಸಿಂಗ್ಧುಯಿಯ ಪರಮೇಶ್ವರ್ ಬೆಸ್ರಾ ಮತ್ತು ಮಹೇಶ್ವರ್ ಬೇಶ್ರಾ ಗಾಲಿ ಕುರ್ಚಿಯಲ್ಲಿದ್ದಾರೆ . ಹುಟ್ಟುವಾಗ ಆರೋಗ್ಯವಾಗಿದ್ದ ಇವರು ದಿನ ಕಳೆದಂತೆ ನಡೆಯುವ ಶಕ್ತಿಯನ್ನು ಕಳೆದುಕೊಂಡರು . ಆರೋಗ್ಯ ಸೌಲಭ್ಯಗಳು ದೂರದಲ್ಲಿದ್ದ ಕಾರಣ ಅಗತ್ಯ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗಲಿಲ್ಲ ಮತ್ತು ಕುಟುಂಬದ ಅನಿಶ್ಚಿತ ಆರ್ಥಿಕ ಸ್ಥಿತಿಯು ಅದಕ್ಕೆ ಅವಕಾಶ ನೀಡಲಿಲ್ಲ

ತಪೋಬನ್ ಗ್ರಾಮದ ಮದನ್ ಭಕ್ತ ಅಪರೂಪದ ಕಣ್ಣಿನ ಕಾಯಿಲೆಯಿಂದ ಬಳಲುತ್ತಿದ್ದು, ಸ್ಥಳೀಯ ವೈದ್ಯರು ಅವರಿಗೆ ಕಣ್ಣಿನ ಮೆಲನೋಮಾ / ಕಣ್ಣಿನ ಕ್ಯಾನ್ಸರ್ ಕಾಣಿಸಿಕೊಂಡಿದೆ ಎಂದು ಶಂಕಿಸಿದ್ದಾರೆ. ಭಕ್ತ ತನ್ನ ದೃಷ್ಟಿಯನ್ನು ಕಳೆದುಕೊಂ ಡಿದ್ದು ಮುಂದೆ ಎಲ್ಲಿಗೆ ಹೋಗಬೇಕೆಂದು ಅವರಿಗೆ ತಿಳಿದಿಲ್ಲ

ತಪೋಬನ್ ಗ್ರಾಮದ ಕೊಂಡ ಭಕ್ತ ತ ನಗೆ ಆಗಿರುವ ಗೆಡ್ಡೆಯನ್ನು ತೋರಿಸು ತ್ತಿದ್ದಾರೆ. 'ಮೊದಲು ಅದು ಸಣ್ಣ ಗೆಡ್ಡೆಯಾಗಿತ್ತು. ನಾನು ಅದನ್ನು ನಿರ್ಲಕ್ಷಿಸಿದೆ. ನಂತರ ಅದು ದೊಡ್ಡದಾಯಿತು. ಆಸ್ಪತ್ರೆಗೆ ಹೋಗಲು ಬಯಸಿದ್ದೆ ಆದರೆ ಅವು ದೂರದ ಜಾ ರ್‌ಗ್ರಾಮ್ ಪಟ್ಟಣದಲ್ಲಿದಲ್ಲಿರುವುದರಿಂದ ಸಾಧ್ಯವಾಗಲಿಲ್ಲ. ನನ್ನ ಬಳಿ ಅಷ್ಟು ಹಣವಿಲ್ಲ, ಹೀಗಾಗಿ ನನಗೆ ಸರಿಯಾದ ಚಿಕಿತ್ಸೆ ಸಿಗಲಿಲ್ಲ

ಬೆನಶುಲಿಯ ಕರ್ಮು ನಾಯಕ್ ತನಗೆ ಕಾಡಿಗೆ ಹೋಗಿ ಎಲೆ ಸಂಗ್ರಹಿಸಿ ಅದನ್ನು ಮಾರಿ ಆಹಾರ ತರುವಷ್ಟು ಶಕ್ತಿ ಉಳಿದಿಲ್ಲ ಎನ್ನುತ್ತಾರೆ

ಬಹುತೇಕ ಸಬರ್ ಆದಿವಾಸಿ ಗ್ರಾಮಗಳು ಜಾರ್‌ಗ್ರಾಮ್, ಪಶ್ಚಿಮ ಮೇದಿನಿಪುರ, ಪುರುಲಿಯಾ ಮತ್ತು ಬಂಕುರಾದ ಕಾಡುಗಳ ನಡು ಭಾಗದಲ್ಲಿವೆ
ಅನುವಾದ: ಶಂಕರ. ಎನ್. ಕೆಂಚನೂರು