ಈ ವರದಿಯು ಪರಿಸರ ವರದಿಯ ವಿಭಾಗದಲ್ಲಿ 2019ರ ವರ್ಷದ ರಾಮನಾಥ್ಗೋ ಯೆಂಕಾ ಪ್ರಶಸ್ತಿಯನ್ನು ಗೆದ್ದ ಪರಿಯ ಹವಾಮಾನ ಬದಲಾವಣೆ ಕುರಿತ ಸರಣಿಯ ಭಾಗವಾಗಿದೆ.

''ನಾನು ಹೀಗೆ ಹೇಳಿದಲ್ಲಿ ಜನ ನನ್ನನ್ನು ಹುಚ್ಚನೆನ್ನುತ್ತಾರೆ. ಆದರೆ 30-40 ವರ್ಷಗಳ ಹಿಂದೆ, ಮಳೆಯಲ್ಲಿ ಮೀನುಗಳು ನಮ್ಮ ಹೊಲದತ್ತ ಕೊಚ್ಚಿಕೊಂಡು ಬರುತ್ತಿದ್ದವು (ಹತ್ತಿರದಲ್ಲಿನ ನೀರಿನ ತೊರೆಯಿಂದ). ನಾನು ನನ್ನ ಸ್ವಂತ ಕೈಗಳಲ್ಲಿ ಅವನ್ನು ಹಿಡಿಯುತ್ತಿದ್ದೆ'', ಎನ್ನುತ್ತಾನೆ ಮಧ್ಯಾಹ್ನದಲ್ಲೊಮ್ಮೆ ತನ್ನ ಇಟ್ಟಿಗೆಯ ಮನೆಯ ಮಣ್ಣಿನ ನೆಲದಲ್ಲಿ ಕುಳಿತ 53 ರ ದನ್ಯನು ಖಾರಟ್.

ಜೂನ್ ತಿಂಗಳ ಮಧ್ಯಭಾಗದಲ್ಲಿ ನಾವು ಆತನ ಮನೆಯನ್ನು ತಲುಪುವ ಸ್ವಲ್ಪ ಮೊದಲು 5,000 ಲೀಟರ್ ನೀರಿನ ಟ್ಯಾಂಕರ್, ಖಾರಟ್ ವಸ್ತಿಯ ಹಟ್ಟಿಯೆಡೆಗೆ ಸಾಗಿತು. ಖಾರಟ್, ಆತನ ಪತ್ನಿ ಫುಲಬಾಯಿ ಮತ್ತು ಆತನ ಅವಿಭಕ್ತ ಕುಟುಂಬದ 12 ಮಂದಿ ಇತರೆ ಸದಸ್ಯರು ಎಲ್ಲ ಪಾತ್ರೆ, ಮಡಕೆ ಮತ್ತು ಡ್ರಂಗಳಲ್ಲೂ ನೀರನ್ನು ತುಂಬಿಸುವುದರಲ್ಲಿ ಮಗ್ನರಾಗಿದ್ದರು. ಒಂದು ವಾರದ ನಂತರ ಟ್ಯಾಂಕರ್‍ನ ಆಗಮನವಾಗಿದ್ದು, ನೀರಿನ ಕೊರತೆ ತೀವ್ರವಾಗಿತ್ತು.

''50-60 ವರ್ಷಗಳ ಹಿಂದೆ, ಮಳೆಯು ಎಷ್ಟು ತೀವ್ರವಾಗಿರುತ್ತಿತ್ತೆಂದರೆ, ಕಣ್ಣು ತೆರೆದಿಡಲೂ ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರೆ ನೀವು ನಂಬುವುದಿಲ್ಲ'', ಎನ್ನುತ್ತಾರೆ ಸಂಗೊಲ್ ತಾಲ್ಲೂಕಿನ ಖಾರಟ್ ವಸ್ತಿಯಿಂದ ಸುಮಾರು 5 ಕಿ. ಮೀ. ದೂರದಲ್ಲಿ ಸುಮಾರು 3,200 ಜನರು ವಾಸವಿರುವ ಗೌಡ್‍ವಡಿ ಹಳ್ಳಿಯಲ್ಲಿನ ತಮ್ಮ ಮನೆಯ ಹತ್ತಿರದ ಬೇವಿನ ಮರದ ನೆರಳಿನಲ್ಲಿ ಕುಳಿತ 75 ರ ಗಂಗೂಬಾಯಿ ಗುಲಿಗ್. ''ದಾರಿಯಲ್ಲಿನ ಮರಗಳನ್ನು ನೋಡಿದಿರಾ? ಈ ಇಡೀ ಭೂಮಿಯಲ್ಲಿ ಉತ್ಕøಷ್ಟವಾದ ಮಟ್ಕಿ (ಮೊಳಕೆ ಕಾಳು) ಬೆಳೆಯುತ್ತಿತ್ತು. ಮುರುಮ್ (ಕಂದುಬಣ್ಣದ ಅಗ್ನಿಶಿಲೆ) ಮಳೆ ನೀರನ್ನು ಹಿಡಿದಿಡುತ್ತಿದ್ದು, ನೀರಿನ ಒರತೆಯು ನಮ್ಮ ಹೊಲದಿಂದ ಪ್ರಾರಂಭವಾಗುತ್ತಿತ್ತು. ಒಂದು ಎಕರೆಯಲ್ಲಿನ ಕೇವಲ ನಾಲ್ಕು ಸಾಲಿನಿಂದ 4-5 ಮೂಟೆಗಳ ಭಾಜ್ರಾ ಧಾನ್ಯವು (2-3 ಕ್ವಿಂಟಲ್‍ಗಳು) ದೊರೆಯುತ್ತಿದ್ದು, ಭೂಮಿಯು ಉತ್ಕøಷ್ಟವಾಗಿತ್ತು.''

ಗೌಡ್‍ವಡಿಯಿಂದ ಹೆಚ್ಚು ದೂರವಿಲ್ಲದ ಅಲ್ದರ್ ವಸ್ತಿಯ ಕೊಪ್ಪಲಿನ 80 ರ ಹೌಸಬಾಯಿ ಅಲ್ದರ್, ತಮ್ಮ ಹೊಲದಲ್ಲಿದ್ದ ಎರಡು ಬಾವಿಗಳನ್ನು ನೆನೆಸಿಕೊಳ್ಳುತ್ತಾರೆ. ''ಎರಡೂ ಬಾವಿಗಳು ಮಳೆಗಾಲದಲ್ಲಿ ನೀರಿನಿಂದ ತುಂಬುತ್ತಿದ್ದವು. (ಸುಮಾರು 60 ವರ್ಷಗಳ ಹಿಂದೆ) ಈ ಪ್ರತಿಯೊಂದಕ್ಕೂ ಎರಡು ಮೊಟೆಗಳಿದ್ದು, (ಎತ್ತುಗಳಿಂದ ರಾಟೆಯನ್ನೆಳೆಯುವ ವ್ಯವಸ್ಥೆ) ಎಲ್ಲ ನಾಲ್ಕು ಮೊಟೆಗಳೂ ಏಕಕಾಲಕ್ಕೆ ಪ್ರಾರಂಭವಾಗುತ್ತಿದ್ದವು. ದಿನದ ಅಥವ ರಾತ್ರಿಯ ಯಾವುದೇ ಸಮಯದಲ್ಲಿ ನನ್ನ ಮಾವ, ನೀರನ್ನು ಸೇದಿ ಅವಶ್ಯಕತೆಯಿದ್ದವರಿಗೆ ನೀಡುತ್ತಿದ್ದರು. ಈಗ ಯಾರಾದರೂ ಮಡಕೆ ತುಂಬುವಷ್ಟು ನೀರನ್ನು ಸಹ ಕೇಳುವುದು ಸಾಧ್ಯವಿಲ್ಲ. ಎಲ್ಲವೂ ಈಗ ಬುಡಮೇಲಾಗಿದೆ.''

PHOTO • Sanket Jain

ದನ್ಯನು (ಬಲ ತುದಿ) ಮತ್ತು ಫುಲಬಾಯಿ (ಬಾಗಿಲಿನ ಎಡಕ್ಕೆ) ಖಾರಟ್ ಅವಿಭಕ್ತ ಕುಟುಂಬದೊಂದಿಗೆ: ಜಮೀನುಗಳಲ್ಲಿ ಮೀನುಗಳು ತೇಲಾಡುತ್ತಿದ್ದ ಕಾಲವನ್ನು ಅವರು ನೆನೆಸಿಕೊಳ್ಳುತ್ತಾರೆ.

ಮಹಾರಾಷ್ಟ್ರದ ಸೋಲಾಪುರ್ ಜಿಲ್ಲೆಯ ಸಂಗೊಲ್ ತಾಲ್ಲೂಕು, ಮಳೆ ನೆರಳಿನ (ಪರ್ವತ ಶ್ರೇಣಿಯಿಂದ ರಕ್ಷಿಸಲ್ಪಟ್ಟ ಮಳೆ ಮಾರುತಗಳಿಂದ ಸಂರಕ್ಷಿತವಾದ) ಮಾಂದೇಶ್‍ನಲ್ಲಿದ್ದಾಗ್ಯೂ ಇಂತಹ ಸುದ್ದಿಗಳಿಂದ ತುಂಬಿಹೋಗಿದೆ. ಈ ಪ್ರದೇಶವು ಸೋಲಾಪುರ್ ಜಿಲ್ಲೆಯ ಸಂಗೊಲ್ ಮತ್ತು ಮಲ್‍ಶಿರಸ್, ಸಾಂಗ್ಲಿ ಜಿಲ್ಲೆಯ ಜಟ್, ಅಟ್ಪಡಿ ಮತ್ತು ಕವಥೆಮಹನ್‍ಕಲ್ ಹಾಗೂ ಸತಾರಾ ಜಿಲ್ಲೆಯ ಮನ್ ಮತ್ತು ಖಟವ್ ತಾಲ್ಲೂಕುಗಳನ್ನೊಳಗೊಂಡಿದೆ.

ಉತ್ತಮ ಮಳೆ ಮತ್ತು ಅನಾವೃಷ್ಟಿ ಬಹಳ ಕಾಲದಿಂದಲೂ ಇಲ್ಲಿ ಆವರ್ತನೀಯವಾಗಿದ್ದು, ಸಮೃದ್ಧತೆಯ ನೆನಪುಗಳಂತೆ ಅಭಾವದ ನೆನಪುಗಳೂ ಜನರ ಮನಸ್ಸಿನಲ್ಲಿ ಉಳಿದಿವೆ. ಈಗ ಈ ಗ್ರಾಮಗಳಲ್ಲಿ ''ಎಲ್ಲವೂ ಬುಡಮೇಲಾದದ್ದಾದರೂ ಹೇಗೆ?'', ಈ ಹಿಂದೆ ಇದ್ದ ಸಮೃದ್ಧಿ ಹಾಗೂ ಆವರ್ತನೀಯ ಹವಾಗುಣವು ಮುರಿದು ಬಿದ್ದ ರೀತಿಯನ್ನು ಕುರಿತ ಸುದ್ದಿಗಳು ಅವ್ಯಾಹತವಾಗಿವೆ. ''ನಮಗೀಗ ಕನಸಿನಲ್ಲೂ ಮಳೆಯು ಕಾಣುತ್ತಿಲ್ಲ'', ಎನ್ನುತ್ತಾರೆ ಗೌಡ್‍ವಡಿಯ ನಿವೃತ್ತಿ ಶೆಂಡ್ಗೆ.

''ಈಗ ಶಿಬಿರವು ಸ್ಥಾಪನೆಗೊಂಡಿರುವ ಭೂಮಿಯು ಬಾಜ್ರಾ ಬೆಳೆಗೆ ಪ್ರಸಿದ್ಧವಾಗಿತ್ತು. ನಾನು ಈ ಹಿಂದೆ ಇದನ್ನು ಬೆಳೆದಿದ್ದೇನೆ'', ಎನ್ನುತ್ತಾರೆ ಬಿಸಿಲಿನಿಂದ ಕೂಡಿದ ಮೇ ತಿಂಗಳ ಮಧ್ಯಾಹ್ನವೊಂದರಲ್ಲಿ ಜಾನುವಾರುಗಳ ಶಿಬಿರವೊಂದರಲ್ಲಿ ತನಗೆಂದು ಎಲೆಅಡಿಕೆಯನ್ನು ಸಜ್ಜುಗೊಳಿಸಿಕೊಳ್ಳುತ್ತಿದ್ದ ತಾತ್ಯಾ ಎಂದು ಪ್ರೀತಿಯಿಂದ ಕರೆಯಲ್ಪಡುವ 83 ರ ಹಿರಿಯ ವಿಠೋಬ ಸೊಮ ಗುಲಿಗ್. ''ಎಲ್ಲವೂ ಈಗ ಬದಲಾಗಿಹೋಗಿದೆ” ಎಂದು ಆತಂಕದಿಂದ ನುಡಿಯುವ ಅವರು, “ಮಳೆಯು ನಮ್ಮ ಹಳ್ಳಿಯಿಂದ ಮಾಯವಾಗಿಬಿಟ್ಟಿದೆ'', ಎಂದು ಅಲವತ್ತುಕೊಳ್ಳುತ್ತಾರೆ.

ತನ್ನ ಹಿಂದಿನ 5-6 ತಲೆಮಾರಿನಂತೆ, ದಲಿತರ ಹೊಲರ್ ಸಮುದಾಯದ ತಾತ್ಯಾ ಸಹ ತನ್ನ ಜೀವಮಾನವೆಲ್ಲವನ್ನೂ ಗೌಡ್‍ವಡಿಯಲ್ಲೇ ಕಳೆದಿದ್ದಾರೆ. ಬದುಕು ಬಹಳ ಕಷ್ಟಕರವಾಗಿತ್ತು. ಸುಮಾರು 60 ವರ್ಷಗಳ ಕಾಲ, ಆತ ಮತ್ತು ಆತನ ಪತ್ನಿ ಗಂಗೂಬಾಯಿ, ಕಬ್ಬನ್ನು ಕತ್ತರಿಸಲು ಸಾಂಗ್ಲಿ ಮತ್ತು ಕೊಲ್ಲಾಪುರಕ್ಕೆ ವಲಸೆ ಹೋಗಿದ್ದರಲ್ಲದೆ, ಜನರ ಹೊಲ-ಗದ್ದೆಗಳಲ್ಲಿಯೂ ಕೆಲಸವನ್ನು ನಿರ್ವಹಿಸಿದ್ದರು. ಹಳ್ಳಿಯ ಸುತ್ತಮುತ್ತ ಸರ್ಕಾರಿ ಒಡೆತನದ ಜಾಗಗಳಲ್ಲೂ ಇವರು ಕೆಲಸವನ್ನು ನಿರ್ವಹಿದ್ದಾರೆ. ''ಕೇವಲ 10-12 ವರ್ಷಗಳ ಹಿಂದೆ ನಮ್ಮ ನಾಲ್ಕು ಎಕರೆ ಭೂಮಿಯನ್ನು ಕೊಂಡೆವು. ಅಲ್ಲಿಯವರೆಗೂ ನಮ್ಮದು ಕಷ್ಟಕರ ದುಡಿಮೆಯಾಗಿತ್ತು.'', ಎನ್ನುತ್ತಾರವರು.

PHOTO • Sanket Jain

'ನಮ್ಮ ಹಳ್ಳಿಯಿಂದ ಮಳೆ ಮಾಯವಾಗಿಬಿಟ್ಟಿದೆ', ಎನ್ನುತ್ತಾರೆ, ಗೊಡ್ವಡಿ ಹಳ್ಳಿಯ ಹತ್ತಿರದ ಜಾನುವಾರುಗಳ ಶಿಬಿರದಲ್ಲಿನ ಗುಲಿಗ್ ಅಥವ ತಾತ್ಯಾ.

ಈಗ, ಮಾಂದೇಶ್‍ನಲ್ಲಿನ ಸತತ ಬರಗಾಲದಿಂದ ತಾತ್ಯಾ ಚಿಂತೆಗೀಡಾಗಿದ್ದಾರೆ. 1972 ರ ತರುವಾಯ ಒಣ ಹವೆಯ ನಂತರದಲ್ಲಿ ಉತ್ತಮ ಮಳೆಯ ಸ್ವಾಭಾವಿಕ ಚಕ್ರವು ಮರಳಲೇ ಇಲ್ಲ ಎನ್ನುತ್ತಾರವರು. ''ಪ್ರತಿ ವರ್ಷವೂ ಇದು ಕ್ಷೀಣಿಸುತ್ತಲೇ ಇದೆ. ನಾವು ವಲಿವ್ ಮಳೆಯನ್ನಾಗಲಿ, (ಮಾನ್ಸೂನ್ ಪೂರ್ವದ) ಹಿಂದಿರುಗುವ ಮಾನ್ಸೂನ್ ಮಳೆಯನ್ನಾಗಲಿ ಕಾಣಲಿಲ್ಲ. ದಿನ ದಿನಕ್ಕೆ ತಾಪಮಾನದಲ್ಲಿ ಏರಿಕೆಯಾಗುತ್ತಿದೆ. ಹಿಂದಿನ ವರ್ಷ (2018) ಉತ್ತಮ ವಲಿವ್ ಮಳೆಯಾದರೂ, ಈ ವರ್ಷ ಇಲ್ಲಿಯವರೆಗೆ ಯಾವುದೇ ಮಳೆಯಿಲ್ಲ. ಭೂಮಿಯು ತಂಪಾಗುವುದಾದರೂ ಹೇಗೆ?''

ಗೌಡ್‍ವಡಿಯ ಅನೇಕ ಹಿರಿಯರು 1972 ರ ಅನಾವೃಷ್ಟಿಯನ್ನು ಅವರ ಹಳ್ಳಿಯ ಮಳೆ ಹಾಗೂ ಅನಾವೃಷ್ಟಿಯ ಚಕ್ರೀಯ ಲಯದ ಸಂಕ್ರಮಣ ಕಾಲವೆನ್ನುತ್ತಾರೆ. ಆ ವರ್ಷ, ಸೋಲಾಪುರ್ ಜಿಲ್ಲೆಯಲ್ಲಿ ಕೇವಲ 321 ಮಿ.ಮೀ.ನಷ್ಟು ಮಳೆಯಾಗಿದ್ದು, (ಭಾರತದ ಪವನಶಾಸ್ತ್ರ ಇಲಾಖೆಯ ದತ್ತಾಂಶವನ್ನು ಬಳಸಿದ ಇಂಡಿಯಾ ವಾಟರ್ ಪೋರ್ಟಲ್‍ನ ಪ್ರಕಾರ) 1901 ರಿಂದ ಸುರಿದ ಮಳೆಯ ಪ್ರಮಾಣಕ್ಕೆ ಹೋಲಿಸಿದಾಗ, ಇದು ಕನಿಷ್ಟ ಪ್ರಮಾಣದ್ದಾಗಿದೆ.

1972 ರ ಅನಾವೃಷ್ಟಿಯಲ್ಲಿ, ತನ್ನ ಎಂದಿನ ಕಷ್ಟಕರ ದುಡಿಮೆ ಹಾಗೂ ಹಸಿವಿಗಿಂತಲೂ ಹೆಚ್ಚಿನ ಸಂಕಷ್ಟವನ್ನು ಅನುಭವಿಸಿದ ಪರಿಯನ್ನು ಗಂಗೂಬಾಯಿ ನೆನೆಸಿಕೊಳ್ಳುತ್ತಾರೆ. ''ನಾವು ರಸ್ತೆ, ಬಾವಿಗಳನ್ನು ನಿರ್ಮಿಸಿ, ಕಲ್ಲುಗಳನ್ನು ಒಡೆಯುವ ಕೆಲಸವನ್ನು (ಅನಾವೃಷ್ಟಿಯಲ್ಲಿ, ಕೂಲಿಗಾಗಿ) ನಿರ್ವಹಿಸಿದೆವು. ಶರೀರದಲ್ಲಿ ಕಸುವಿತ್ತು, ಹೊಟ್ಟೆಯಲ್ಲಿ ಹಸಿವಿತ್ತು. 12 ಆಣೆಗೆ (75 ಪೈಸೆ) ನಾನು 100 ಕ್ವಿಂಟಲ್ ಗೋಧಿಯನ್ನು ಹಿಟ್ಟುಮಾಡಿದ್ದೇನೆ. ಆ ನಂತರದಲ್ಲಿ ಪರಿಸ್ಥಿತಿಯು ಮತ್ತಷ್ಟು ಬಿಗಡಾಯಿಸಿತು'', ಎನ್ನುತ್ತಾರೆ ಆಕೆ.

PHOTO • Sanket Jain
PHOTO • Medha Kale

2018 ರಲ್ಲಿ ಸಂಗೊಲ್‍ನಲ್ಲಿ, 20 ವರ್ಷಗಳಲ್ಲೇ ಕನಿಷ್ಠತಮ ಮಳೆಯಾಗಿದ್ದು, ತಾಲ್ಲೂಕಿನ ಹಳ್ಳಿಗಳಲ್ಲಿನ ಬಾವಿಗಳಲ್ಲಿನ ಅಂತರ್ಜಲ ಮಟ್ಟ ಒಂದು ಮೀಟರ್‍ಗೂ ಹೆಚ್ಚು ಕ್ಷೀಣಿಸಿದೆ.

''ಅನಾವೃಷ್ಟಿಯು ಅತ್ಯಂತ ತೀವ್ರವಾಗಿದ್ದು, ನಾನು 12 ಎತ್ತುಗಳೊಂದಿಗೆ ಒಬ್ಬನೇ 10 ದಿನಗಳ ಕಾಲ ಕಾಲ್ನಡಿಗೆಯಲ್ಲಿ ಹೊರಟು ಕೊಲ್ಲಾಪುರವನ್ನು ತಲುಪಿದೆ'', ಎನ್ನುತ್ತಾರೆ ಶಿಬಿರದ ಚಹದಂಗಡಿಯಲ್ಲಿದ್ದ 85 ರ ಹಿರಿಯ ದಾದಾ ಗದಡೆ. ''ಮಿರಜ್ ರಸ್ತೆಯಲ್ಲಿನ ಬೇವಿನ ಮರಗಳೆಲ್ಲವೂ ಒಣಗಿದ್ದವು. ಎಲೆ ಹಾಗೂ ಕೊಂಬೆಗಳೆಲ್ಲವನ್ನೂ ದನಕರುಗಳು ಹಾಗೂ ಕುರಿಗಳಿಗೆ ತಿನ್ನಿಸಲಾಗಿದೆ. ಅವು ನನ್ನ ಜೀವನದಲ್ಲಿನ ಅತ್ಯಂತ ಕೆಟ್ಟ ದಿನಗಳು. ಆ ನಂತರದಲ್ಲಿ ಯಾವುದೂ ಮತ್ತೆ ಪೂರ್ವಸ್ಥಿತಿಗೆ ಮರಳಲೇ ಇಲ್ಲ.''

ದೀರ್ಘಕಾಲೀನ ಬರಗಾಲದಿಂದಾಗಿ; 2005 ರಲ್ಲಿ ಸೋಲಾಪುರ್, ಸಾಂಗ್ಲಿ ಮತ್ತು ಸತಾರಾ ಜಿಲ್ಲೆಗಳ ಎಲ್ಲ ಬರಗಾಲಪೀಡಿತ ಪ್ರದೇಶಗಳನ್ನೊಳಗೊಂಡ ಮಾಂದೇಶ್‍ನ ಪ್ರತ್ಯೇಕ ಜಿಲ್ಲೆಯನ್ನು ರಚಿಸಬೇಕೆಂಬ ಬೇಡಿಕೆಯೆದ್ದಿತು. (ಕೆಲವು ಮುಖ್ಯಸ್ಥರು ಸದರಿ ಪ್ರದೇಶಗಳ ನೀರಾವರಿ ಯೊಜನೆಗಳೆಡೆಗೆ ತಮ್ಮ ಗಮನವನ್ನು ಹರಿಸಲಾಗಿ ಈ ಆಂದೋಲನವು ತನ್ನ ಕಾವನ್ನು ಕಳೆದುಕೊಂಡಿತು).

1972 ರ ಬರಗಾಲವನ್ನು ಗುಡ್ವಡಿಯ ಅನೇಕರು ಮೈಲಿಗಲ್ಲು ಎಂಬುದಾಗಿ ನೆನಪಿಸಿಕೊಂಡಾಗ್ಯೂ, ಸೋಲಾಪುರ್ ಸರ್ಕಾರದ ವೆಬ್‍ಸೈಟ್‍ನ ದತ್ತಾಂಶಗಳ ಪ್ರಕಾರ, ಜಿಲ್ಲೆಯಲ್ಲಿ 2003 ರಲ್ಲಿ 278.7 ಮಿ.ಮೀ. ಹಾಗೂ 2015 ರಲ್ಲಿ 251.18 ಮಿ.ಮೀ.ನಷ್ಟು ಕಡಿಮೆ ಪ್ರಮಾಣದ ಮಳೆಯಾಗಿದೆ.

ಮಹಾರಾಷ್ಟ್ರದ ಕೃಷಿ ಇಲಾಖೆಯಲ್ಲಿನ ಮಳೆಯ ದಾಖಲಾತಿ ಹಾಗೂ ವಿಶ್ಲೇಷಣೆಯ (Rainfall Recording and Analysis) ಪೋರ್ಟಲ್‍ನ ಪ್ರಕಾರ, 2018 ರಲ್ಲಿ ಸಂಗೊಲ್‍ನಲ್ಲಿ ಕೇವಲ 241.6 ಮಿ.ಮೀ.ನಷ್ಟು ಮಳೆಯಾಗಿದೆ. ಈ ಕ್ಷೇತ್ರದಲ್ಲಿ ಸಾಮಾನ್ಯವಾಗಿ ಸುಮಾರು 537 ಮಿ.ಮೀ.ನಷ್ಟು ಮಳೆಯಾಗುತ್ತದೆಂದು ಇಲಾಖೆಯು ತಿಳಿಸುತ್ತದೆ.

ತಾಪಮಾನದಲ್ಲಿ ಏರಿಕೆಯಾಗುತ್ತಿದ್ದು, ತಿಂಗಳುಗಟ್ಟಲೆ ನೀರಿನ ಅಭಾವವು ತಲೆದೋರುತ್ತಿದೆ. ಹೀಗಾಗಿ, ನೀರಿನ ಸಮೃದ್ಧಿಯ ಕಾಲವು ಮರೆಯಾಗಿಹೋಗಿದೆ.

PHOTO • Medha Kale

ರಕ್ಷಕಸಸ್ಯಗಳ ನಾಶ ಮತ್ತು ತಾಪಮಾನದಲ್ಲಿನ ಏರಿಕೆಯಿಂದಾಗಿ ಮಣ್ಣು ಒಣಗಿಹೋಗುತ್ತಿದೆ.

ಈ ವರ್ಷದ ಮೇ ತಿಂಗಳಲ್ಲಿ, ಗಡ್ವಡಿಯ ಜಾನುವಾರುಗಳ ಶಿಬಿರದ ತಾಪಮಾನವು 46 ಡಿಗ್ರಿಗಳನ್ನು ತಲುಪಿತ್ತು. ತೀವ್ರ ತಾಪಮಾನದಿಂದಾಗಿ ಒಣ ಹವೆಯ ವಾತಾವರಣವುಂಟಾಯಿತಲ್ಲದೆ ಮಣ್ಣು ಸಹ ಒಣಗತೊಡಗಿತು. ನ್ಯೂಯಾರ್ಕ್ ಟೈಮ್ಸ್‍ನ ಹವಾಮಾನ ಮತ್ತು ಜಾಗತಿಕ ತಾಪಮಾನವನ್ನು ಕುರಿತ ಸಂವಾದಾತ್ಮಕ (interactive) ಪೋರ್ಟಲ್‍ನ ಪ್ರಕಾರ, ತಾತ್ಯಾ 24 ವರ್ಷದವನಿದ್ದಾಗಿನ 1960 ರಲ್ಲಿ, ಸಂಗೊಲ್‍ನಲ್ಲಿ 144 ದಿನಗಳ ತಾಪಮಾನವು 32 ಡಿಗ್ರಿ ಸೆಲ್ಸಿಯಸ್‍ಗಳನ್ನು ತಲುಪಿತ್ತು. ಇಂದು ಈ ಸಂಖ್ಯೆಯು 177 ಕ್ಕೆ ವೃದ್ಧಿಯಾಗಿದೆ. ಅವರು 100 ವರ್ಷಗಳವರೆಗೂ ಬದುಕಿದ್ದಲ್ಲಿ, 2036 ರಲ್ಲಿ ಇದು, 193 ದಿನಗಳಿಗೆ ತಲುಪುತ್ತದೆ.

''ಈ ಹಿಂದೆ ಎಲ್ಲವೂ ಸಮಯಕ್ಕೆ ಸರಿಯಾಗಿ ಘಟಿಸುತ್ತಿದ್ದವು. ಯಾವಾಗಲೂ ಜೂನ್ 7 ರಂದು ಪ್ರಾರಂಭಗೊಳ್ಳುವ ಮಿರಿಗ್ (ಮೃಗ್ ಅಥವ ಮಹಾವ್ಯಾಧ ನಕ್ಷತ್ರ ಪುಂಜದ ಆಗಮನದೊಂದಿಗೆ) ಮಳೆಯು ಸಮೃದ್ಧವಾಗಿದ್ದು, ಭಿವ್‍ಘಾಟ್‍ (ನೀರಿನ ಒರತೆ) ನೀರು ಪೌಶ್‍ವರೆಗೂ (ಜನವರಿ) ಸಾಲುತ್ತಿತ್ತು. ''ರೋಹಿಣಿ (ಮೇ ಅಂತಿಮ ಭಾಗದ ನಕ್ಷತ್ರ ಪುಂಜ) ಮತ್ತು ಮಿರಿಗ್ ಮಳೆಯಲ್ಲಿ ಬಿತ್ತನೆ ನಡೆಸಿದಲ್ಲಿ, ಸದರಿ ಬೆಳೆಯು ಆಗಸದಿಂದ ರಕ್ಷಿಸಲ್ಪಡುತ್ತಿತ್ತು. ಧಾನ್ಯವು ಪುಷ್ಠಿದಾಯಕವಾಗಿದ್ದು, ಅದನ್ನು ಬಳಸಿದವರ ಆರೋಗ್ಯವೂ ಸುಸ್ಥಿತಿಯಲ್ಲಿರುತ್ತಿತ್ತು. ಆದರೀಗ ಋತುಗಳು ಹಿಂದೆ ಇದ್ದಂತಿಲ್ಲ”, ಎಂದು ಜಾನುವಾರುಗಳ ಶಿಬಿರದಲ್ಲಿ ಕುಳಿತ ತಾತ್ಯಾ ತಮ್ಮ ನೆನಪನ್ನು ಕೆದಕುತ್ತಾರೆ.''

ಆತನೊಟ್ಟಿಗೆ ಜಾನುವಾರುಗಳ ಶಿಬಿರದಲ್ಲಿ ಕುಳಿತ ಇತರೆ ರೈತರೂ ಇದನ್ನು ಒಪ್ಪುತ್ತಾರೆ. ಎಲ್ಲರಿಗೂ ಮಳೆಯ ಅನಿಶ್ಚಿತತೆಯ ಬಗ್ಗೆ ಚಿಂತೆಯಾಗಿದೆ. ''ಕಳೆದ ವರ್ಷ, ಪಂಚಾಂಗದಲ್ಲಿ (ಚಾಂದ್ರಮಾನ ಕ್ಯಾಲೆಂಡರ್ ಆಧಾರಿತ ಹಿಂದೂ ಪಂಚಾಂಗ) ‘ಘವೀಲ್‍ನಿಂದ ಪವೀಲ್‍ವರೆಗೆ’ ಎಂದು ಹೇಳಲಾಗಿತ್ತು - ‘ಸೂಕ್ತ ಸಮಯದಲ್ಲಿ ಬಿತ್ತನೆ ಮಾಡಿದವರು ಉತ್ತಮ ಫಸಲನ್ನು ಪಡೆಯುತ್ತಾರೆ’ ಎಂಬುದು ಇದರ ಅರ್ಥ. ಆದರೆ, ಈಗ ಚದುರಿದಂತೆ ಮಳೆಯಾಗುತ್ತಿದ್ದು, ಎಲ್ಲ ಜಮೀನುಗಳನ್ನೂ ಅದು ಆವರಿಸುತ್ತಿಲ್ಲ” ಎಂದು ತಾತ್ಯ ವಿವರಣೆ ನೀಡುತ್ತಾರೆ.

ರಸ್ತೆಯ ಬದಿಯ ಶಿಬಿರದ ತನ್ನ ಡೇರೆಯಲ್ಲಿ ಕುಳಿತ ಧನ್ಗರ್ ಸಮುದಾಯಕ್ಕೆ ಸೇರಿದ 50 ರ ಖರಟ್ ವಸ್ತಿಯ ಫುಲಬಾಯಿ ಖರಟ್ (ಅಲೆಮಾರಿ ಜನಾಂಗವೆಂದು ದಾಖಲಿಸಲಾಗಿದೆ), ತನ್ನೊಂದಿಗೆ, 3 ಎಮ್ಮೆಗಳನ್ನು ಹಾಗೂ ಎಲ್ಲ ''ನಕ್ಷತ್ರಪುಂಜದಲ್ಲೂ ಸೂಕ್ತ ಸಮಯಕ್ಕೆ ಸುರಿಯುತ್ತಿದ್ದ ಮಳೆಯ'' ನೆನಪುಗಳನ್ನು ತಂದಿದ್ದಾಳೆ. ''ಧೊಂಡ್ಯಾಚ ಮಹಿನದ (ಪ್ರತಿ ಮೂರು ವರ್ಷಗಳಿಗೊಮ್ಮೆ ಹಿಂದೂ ಚಾಂದ್ರಮಾನ ಕ್ಯಾಲೆಂಡರಿನ ಒಂದು ಹೆಚ್ಚುವರಿ ತಿಂಗಳು) ಪ್ರಾರಂಭದಲ್ಲಿ ಮಾತ್ರ ಮಳೆಯು ನಿಶ್ಚಲವಾಗುತ್ತಿತ್ತು. ನಂತರದ ಎರಡು ವರ್ಷಗಳಲ್ಲಿ ನಮಗೆ ಉತ್ತಮ ಮಳೆಯಾಗುತ್ತಿತ್ತು. ಆದರೆ ಕಳೆದ ಹಲವಾರು ವರ್ಷಗಳಿಂದ, ಮಳೆಯು ಮೌನವಾಗಿಬಿಟ್ಟಿದೆ'', ಎನ್ನುತ್ತಾರೆ ಆಕೆ.

ಈ ಬದಲಾವಣೆಗಳಿಗೆ ಹೊಂದಿಸಿಕೊಳ್ಳುವ ಸಲುವಾಗಿ, ಅನೇಕ ರೈತರು ತಮ್ಮ ಕೃಷಿಯ ನಿಗದಿತ ಅವಧಿಯನ್ನು ಬದಲಿಸಿದ್ದಾರೆ. ಖಾರಿಫ್ ಋತುವಿನಲ್ಲಿ ಸಂಗೊಲ್ ರೈತರು, ಮಟ್ಕಿ (ಮೊಳಕೆ ಕಾಳು), ಹಲ್ಗೆ (ಹುರುಳಿ ಕಾಳು), ಬಾಜ್ರಾ ಮತ್ತು ತೊಗರಿಯ ಹಾಗೂ ರಾಬಿ ಋತುವಿನಲ್ಲಿ ಗೋಧಿ, ಕಡಲೆ ಮತ್ತು ಜೋಳದ ಕೃಷಿ ನಡೆಸುತ್ತಾರೆ. ಬೇಸಿಗೆಯಲ್ಲಿನ ಮೆಕ್ಕೆಜೋಳ ಮತ್ತು ಜೋಳವನ್ನು ವಿಶೇಷವಾಗಿ ಮೇವಿಗಾಗಿ ಬೆಳೆಯುತ್ತಾರೆ.

''ಕಳೆದ 20 ವರ್ಷಗಳಿಂದಲೂ, ಈ ಹಳ್ಳಿಯಲ್ಲಿ ಸ್ಥಳೀಯ ಮೊಳಕೆ ಕಾಳನ್ನು ಬಿತ್ತಿದ ಯಾರನ್ನೂ ನಾನು ನೋಡಿಲ್ಲ. ಬಾಜ್ರಾ ಹಾಗೂ ತೊಗರಿಯದ್ದೂ ಇದೇ ಸ್ಥಿತಿಯಿದೆ. ಗೋಧಿಯ ಖಪ್ಲಿ ಪ್ರಕಾರವನ್ನಾಗಲಿ, ಹುರುಳಿ ಕಾಳು, ಎಳ್ಳನ್ನಾಗಲಿ ಈಗ ಬಿತ್ತುವುದೇ ಇಲ್ಲ'', ಎನ್ನುತ್ತಾರೆ ಅಲ್ದರ್ ವಸ್ತಿ ಪಾಳ್ಯದ ಹೌಸಬಾಯಿ.

PHOTO • Sanket Jain
PHOTO • Sanket Jain

ಎಡಕ್ಕೆ: ‘ಆದರೆ, ಅನೇಕ ವರ್ಷಗಳಿಂದಲೂ ಮಳೆ ನಿಶ್ಶಬ್ದವಾಗಿಬಿಟ್ಟಿದೆ...’, ಎನ್ನುತ್ತಾರೆ ಫುಲಬಾಯಿ ಖರಟ್. ಬಲಕ್ಕೆ: ‘1972 ರ ನಂತರ ಪರಿಸ್ಥಿತಿಯು ಬಿಗಡಾಯಿಸಿದೆ’, ಎನ್ನುತ್ತಾರೆ ಗಂಗೂಬಾಯಿ ಗುಲಿಗ್.

ಜೂನ್ ಅಂತಿಮ ಭಾಗ ಅಥವ ಜುಲೈ ಮಾಸದಲ್ಲಿ ಪ್ರಾರಂಭಗೊಂಡು, ಸೆಪ್ಟೆಂಬರ್ ಪ್ರಾರಂಭದಲ್ಲಿ ನಿಂತುಹೋಗುವ ಮಾನ್ಸೂನ್‍ನ ನಿಧಾನಗತಿಯಿಂದಾಗಿ ಮಳೆಯು ಕ್ಷೀಣಿಸಿದ್ದು, ರೈತರು ಅಲ್ಪಾವಧಿಯ ಹೈಬ್ರಿಡ್ ಬೆಳೆಗಳತ್ತ ಹೊರಳಿದ್ದಾರೆ. ಇವಕ್ಕೆ ಬಿತ್ತನೆಯಿಂದ ಕಟಾವಿನವರೆಗೆ 2.5 ತಿಂಗಳು ಅವಶ್ಯ. ''ಮಣ್ಣಿನಲ್ಲಿ ಸಾಕಷ್ಟು ತೇವಾಂಶವಿಲ್ಲದ ಕಾರಣ, 5 ತಿಂಗಳ (ದೀರ್ಘಾವಧಿಯ) ಸ್ಥಳೀಯ ಬಾಜ್ರಾ, ಮಟ್ಕಿ, ಜೋಳ ಮತ್ತು ತೊಗರಿಯು ನಿರ್ನಾಮವಾಗತೊಡಗಿವೆ'', ಎನ್ನುತ್ತಾರೆ ನವಂತ್ ಮಲಿ. ಉಚಿತವಾಗಿ ಎಸ್‍ಎಂಎಸ್ ಮೂಲಕ ಹವಾಮಾನದ ಮುನ್ಸೂಚನೆ ನೀಡುವ ಕೊಲ್ಲಾಪುರದ ಅಮಿಕಸ್ ಅಗ್ರೊ ಗ್ರೂಪ್‍ನ 20 ಗುಡ್ವಡಿಯ ಸದಸ್ಯರಲ್ಲಿ ಇವರೂ ಒಬ್ಬರು.

ಇತರೆ ಬೆಳೆಗಳಲ್ಲಿನ ತಮ್ಮ ಅದೃಷ್ಟವನ್ನು ಪರೀಕ್ಷಿಸಲು 20 ವರ್ಷಗಳ ಹಿಂದೆ, ಕೆಲವು ರೈತರು ದಾಳಿಂಬೆಯ ಕೃಷಿಗೆ ತೊಡಗಿದರು. ಸರ್ಕಾರದ ಸಬ್ಸಿಡಿಯೂ ನೆರವಾಯಿತು. ಸಮಯ ಕಳೆದಂತೆ, ದೇಸೀ ಪ್ರಕಾರಗಳಿಂದ ರೈತರು ಸ್ಥಳೀಯವಲ್ಲದ ಹೈಬ್ರಿಡ್ ಪ್ರಕಾರಗಳಿಗೆ ಹೊರಳಿದರು. ''ಮೊದಲಿಗೆ (ಸುಮಾರು 12 ವರ್ಷಗಳ ಹಿಂದೆ) ನಾವು ಎಕರೆಗೆ ಸುಮಾರು 2-3 ಲಕ್ಷ ಸಂಪಾದಿಸಿದೆವು. ಆದರೆ ಕಳೆದ 8-10 ವರ್ಷಗಳಿಂದ, ಹಣ್ಣಿನ ತೋಟಗಳು ತೆಲ್ಯದಿಂದ (ಬ್ಯಾಕ್ಟೀರಿಯಾದಿಂದಾಗಿ ಕಳೆಗುಂದುವಿಕೆ) ಪೀಡಿತವಾಗಿವೆ. ಕಳೆದ ವರ್ಷ, ನಮ್ಮ ಹಣ್ಣುಗಳನ್ನು ಒಂದು ಕೆ. ಜಿ. ಗೆ 25-30 ರಂತೆ ಮಾರಬೇಕಾಯಿತು. ಪ್ರಕೃತಿಯ ಮರ್ಜಿಗೆ ನಾವೇನು ತಾನೇ ಮಾಡಲು ಸಾಧ್ಯ?'', ಎನ್ನುತ್ತಾರೆ ಮಲಿ.

ಮಾನ್ಸೂನ್ ಪೂರ್ವ ಹಾಗೂ ನಂತರದ ಮಳೆಯು ಕೃಷಿ ವಿಧಾನಗಳ ಮೇಲೆ ಮಹತ್ತರ ಪರಿಣಾಮವನ್ನು ಬೀರಿದೆ. ಅಕ್ಟೋಬರ್‍ನಿಂದ ಡಿಸೆಂಬರ್ ವರೆಗಿನ ಸಂಗೊಲ್‍ನಲ್ಲಿನ ಮಾನ್ಸೂನ್ ನಂತರದ ಮಳೆಯು ಕಡಿಮೆಯಾಗಿರುವುದು ಸುಸ್ಪಷ್ಟ. 1998 ರಿಂದ 2018 ರ ಎರಡು ದಶಕದ ಅವಧಿಯ 93.11 ಮಿ.ಮೀ. ನಷ್ಟು ಸರಾಸರಿ ಮಳೆಗೆ ಪ್ರತಿಯಾಗಿ, 2018 ರಲ್ಲಿ, ಈ ಕ್ಷೇತ್ರವು ಮಾನ್ಸೂನ್ ನಂತರದ 37.5 ಮಿ.ಮೀ ಮಳೆಯನ್ನು ಮಾತ್ರವೇ ಪಡೆದಿದೆಯೆಂದು ಕೃಷಿ ಇಲಾಖೆಯ ದತ್ತಾಂಶಗಳು ತಿಳಿಸುತ್ತವೆ.

''ಇಡೀ ಮಾಂದೇಶ್ ಪ್ರದೇಶದಲ್ಲಿ ಮಾನ್ಸೂನ್ ಪೂರ್ವ ಹಾಗೂ ನಂತರದ ಮಳೆಯು ಕಾಣೆಯಾಗುತ್ತಿರುವುದು ಅತ್ಯಂತ ಚಿಂತಾಜನಕ'', ಎನ್ನುತ್ತಾರೆ ಚೇತನ ಸಿನ್ಹ. ಇವರು ಮನ್ನ್ ದೇಸಿ ಫೌಂಡೇಶನ್‍ನ ಸ್ಥಾಪಕರು. ಸದರಿ ಸಂಸ್ಥೆಯು ಕೃಷಿ, ಉದ್ದರಿ, ಉದ್ಯಮಶೀಲತೆಗಳನ್ನೊಳಗೊಂಡಂತೆ ಗ್ರಾಮೀಣ ಮಹಿಳೆಯರೊಂದಿಗೆ ಕೆಲಸವನ್ನು ನಿರ್ವಹಿಸುತ್ತದೆ. (ಸತಾರಾ ಜಿಲ್ಲೆಯ ಮಹಸ್‍ವಡ್ ನ ಮನ್ ಕ್ಷೇತ್ರದಲ್ಲಿ ಈ ವರ್ಷದ ಜನವರಿ ಒಂದರಂದು ಸದರಿ ಸಂಸ್ಥೆಯು ಮೊದಲ ಜಾನುವಾರುಗಳ ಶಿಬಿರವನ್ನು ಪ್ರಾರಂಭಿಸಿತು. ಇಲ್ಲಿ 8,000 ಕ್ಕಿಂತಲೂ ಹೆಚ್ಚಿನ ಜಾನುವಾರುಗಳಿವೆ.) ''ಆಹಾರ ಧಾನ್ಯ ಹಾಗೂ ಪ್ರಾಣಿಗಳ ಮೇವಿಗಾಗಿ ರಾಬಿ ಬೆಳೆಯನ್ನೇ ನಾವು ಅವಲಂಬಿಸಿರುವ ಕಾರಣ, ಹಿಂದಿರುಗುವ ಮಾನ್ಸೂನ್, ಇವರ ಜೀವನರೇಖೆಯೇ (ಲೈಫ್‍ಲೈನ್) ಹೌದು. ಹತ್ತಾರು ವರ್ಷಗಳಿಂದ ಇದರ ಅನುಪಸ್ಥಿತಿಯಿಂದಾಗಿ, ಮಾಂದೇಶ್‍ನ ಗ್ರಾಮೀಣ ಹಾಗೂ ಇತರೆ ಸಮುದಾಯಗಳು ವ್ಯಾಪಕ ಪರಿಣಾಮಗಳಿಗೆ ಪಕ್ಕಾಗಿವೆ.''

PHOTO • Sanket Jain
PHOTO • Sanket Jain

ಮೇವಿನ ಅಭಾವದಿಂದಾಗಿ ಸಂಗೋಲ್‍ನಲ್ಲಿ ಒಣ ಹವಾಮಾನವಿರುವ ತಿಂಗಳುಗಳಲ್ಲಿ ಜಾನುವಾರು ಶಿಬಿರಗಳು ಪ್ರಾರಂಭಗೊಂಡಿವೆ.

ಕಬ್ಬಿನ ಪ್ರಸಾರವು; ಇಲ್ಲಿನ ಕೃಷಿಯ ಪದ್ಧತಿಯ ಬಹು ದೊಡ್ಡ ಬದಲಾವಣೆಯೆನ್ನಬಹುದು. ಮಹಾರಾಷ್ಟ್ರ ಸರ್ಕಾರದ ಹಣಕಾಸು ಹಾಗೂ ಅಂಕಿಅಂಶಗಳ ನಿರ್ದೇಶನಾಲಯವು; 2016-17 ರಲ್ಲಿ, ಸೋಲಾಪುರ್ ಜಿಲ್ಲೆಯಲ್ಲಿ 100,505 ಹೆಕ್ಟೇರ್ ಭೂಮಿಯಲ್ಲಿ 633,000 ಟನ್ ಕಬ್ಬು ಬೆಳೆಯಲಾಗಿದೆ ಎಂಬುದಾಗಿ ತಿಳಿಸುತ್ತದೆ. ಜನವರಿಯ ಕೆಲವು ವರದಿಗಳ ಪ್ರಕಾರ, ಜಿಲ್ಲೆಯಲ್ಲ್ಲಿ ಅತ್ಯಂತ ಹೆಚ್ಚಿನ ಕಬ್ಬಿನ ಫಸಲು ದೊರೆತಿದ್ದು, ಅಕ್ಟೋಬರ್ ಋತುವಿನಲ್ಲಿ 33 ನೋಂದಾಯಿತ ಸಕ್ಕರೆ ಮಿಲ್‍ಗಳಲ್ಲಿ (ಸಕ್ಕರೆ ಕಮಿಶನರೇಟ್ ದತ್ತಾಂಶದ ಪ್ರಕಾರ) 10 ಮಿಲಿಯನ್ ಟನ್‍ಗಿಂತಲೂ ಹೆಚ್ಚಿನ ಕಬ್ಬನ್ನು ಅರೆಯಲಾಯಿತು.

ಸೋಲಾಪುರದ ಪತ್ರಕರ್ತರೂ, ನೀರು ಸಂರಕ್ಷಣೆಯ ಸಕ್ರಿಯ ಕಾರ್ಯಕರ್ತರೂ ಆದ ರಜನೀಶ್ ಜೋಶಿ, ಕೇವಲ ಒಂದು ಟನ್ ಕಬ್ಬನ್ನು ಅರೆಯಲು 1,500 ಲೀಟರ್ ನೀರು ಅವಶ್ಯವೆಂದು ತಿಳಿಸುತ್ತಾರೆ. ಅಂದರೆ ಕಬ್ಬನ್ನು ಅರೆಯುವ ಪ್ರಕ್ರಿಯೆಗಾಗಿ ಕಳೆದ ಋತುವಿನಲ್ಲಿ (ಅಕ್ಟೋಬರ್ 2018 ರಿಂದ ಜನವರಿ 2019 ರವರೆಗೆ) 15 ಮಿಲಿಯನ್ ಕ್ಯುಬಿಕ್ ಮೀಟರ್ ನೀರನ್ನು ಸೋಲಾಪುರ್ ಜಿಲ್ಲೆಯೊಂದರಲ್ಲೇ ಬಳಸಲಾಗಿದೆ.

ಒಂದೇ ಬೆಳೆಗೆ ಇಷ್ಟು ಭಾರೀ ಪ್ರಮಾಣದ ನೀರನ್ನು ಬಳಸುವುದರಿಂದ ಈಗಾಗಲೇ ಮಳೆಯ ಹಾಗೂ ನೀರಾವರಿ ಸೌಲಭ್ಯದ ಅಭಾವದಿಂದ ಸಂಕಷ್ಟಕ್ಕೀಡಾಗಿರುವ ಪ್ರದೇಶಗಳಲ್ಲಿ ಇತರೆ ಬೆಳೆಗಳಿಗೆ ದೊರೆಯುವ ನೀರಿನ ಪ್ರಮಾಣವು ಗಮನಾರ್ಹವಾಗಿ ಕಡಿಮೆಯಾಗುತ್ತದೆ. 1,361 ಹೆಕ್ಟೇರ್ ಭೂಮಿಯ ಗೌಡ್‍ವಡಿಯ (2011 ರ ಜನಗಣತಿಯಂತೆ) ಬಹುತೇಕ ಜಮೀನಿನಲ್ಲಿ ಕೃಷಿಯನ್ನು ಕೈಗೊಳ್ಳಲಾಗಿದ್ದು, ಕೇವಲ 300 ಹೆಕ್ಟೇರ್ ಮಾತ್ರವೇ ನೀರಾವರಿಗೊಳಪಟ್ಟಿದೆ. ಇನ್ನುಳಿದ ಪ್ರದೇಶವು ಮಳೆಯನ್ನಾಧರಿಸಿದೆಯೆಂದು ನವ್‍ನಾಥ್ ಮಲಿ ತಿಳಿಸುತ್ತಾರೆ. ಸೋಲಾಪುರ್ ಜಿಲ್ಲೆಯ ಸರ್ಕಾರಿ ಅಂಕಿಅಂಶದಂತೆ, 2015 ರಲ್ಲಿ ನೀರಾವರಿಗೆ ಅರ್ಹವಿರುವ 774,315 ಹೆಕ್ಟೇರ್ ‍ನಲ್ಲಿ ಕೇವಲ ಶೇ. 39.49 ರಷ್ಟು ಭೂ ಪ್ರದೇಶ ಮಾತ್ರವೇ ನೀರಾವರಿಗೊಳಪಟ್ಟಿದೆ.

ರಕ್ಷಕಬೆಳೆಗಳ ನಾಶ (ಕಡಿಮೆ ಪ್ರಮಾಣದ ಮಳೆಯಿಂದಾಗಿ ಅಲ್ಪಾವಧಿಯ ಬೆಳೆಯ ಕೃಷಿಯನ್ನು ಕೈಗೊಂಡ ಕಾರಣ) ಹಾಗೂ ಏರುಗತಿಯಲ್ಲಿರುವ ತಾಪಮಾನದಿಂದಾಗಿ, ಮಣ್ಣಿನ ಶುಷ್ಕತೆಯ ಪ್ರಮಾಣ ಹೆಚ್ಚಾಗುತ್ತಿದೆ. ಹೌಸಾಬಾಯಿಯ ಪ್ರಕಾರ, ಮಣ್ಣಿನ ತೇವಾಂಶ ''ಆರು ಇಂಚುಗಳಷ್ಟೂ ಇಲ್ಲ''.

PHOTO • Medha Kale

ನವ್‍ನಾಥ್ ಮಲಿ ಅವರ ಪ್ರಕಾರ, ಗೌಡ್‍ವಡಿಯಲ್ಲಿ; 150 ಖಾಸಗಿ ಕೊಳವೆಬಾವಿಗಳಿದ್ದು, ಅವುಗಳಲ್ಲಿ ಕನಿಷ್ಟ 130 ಕೊಳವೆಬಾವಿಗಳು ಒಣಗಿಹೋಗಿವೆ.

ಅಂತರ್ಜಲದ ಮಟ್ಟವೂ ಇಳಿಕೆಯಾಗುತ್ತಿದೆ. ಅಂತರ್ಜಲ ಸಮೀಕ್ಷೆ ಮತ್ತು ಅಭಿವೃದ್ಧಿ ಏಜೆನ್ಸಿಯ ಸಂಭಾವ್ಯ ನೀರಿನ ಕೊರತೆಯ ವರದಿಯ ಪ್ರಕಾರ 2018 ರಲ್ಲಿ ಸಂಗೊಲ್‍ನ ಎಲ್ಲ ಹಳ್ಳಿಗಳಲ್ಲೂ, ಅಂತರ್ಜಲವು ಒಂದು ಮೀಟರ್‍ಗೂ ಹೆಚ್ಚಿನ ಕುಸಿತವನ್ನು ಕಂಡಿತು. ಗೌಡ್‍ವಡಿಯಲ್ಲಿ ಕೇಶವಿನ್ಯಾಸದ ಸಲೂನ್ ಹೊಂದಿದ್ದು, ಸುಮಾರು 4 ಎಕರೆ ಭೂಮಿಯನ್ನು ಹೊಂದಿರುವ ಜ್ಯೋತಿರಾಂ ಖಂಡಗಲೆ, ''ನಾನು ಕೊಳವೆಬಾವಿ (ಬೋರ್‍ವೆಲ್) ಅಗೆಸುವ ಪ್ರಯತ್ನ ನಡೆಸಿದೆ. ಆದರೆ 750 ಅಡಿ ಆಳದಲ್ಲೂ ನೀರು ದೊರೆಯಲಿಲ್ಲ'' ಎನ್ನುತ್ತಾರೆ. ''ಕಳೆದ ಕೆಲವು ವರ್ಷಗಳಿಂದ ಖಾರಿಫ್ ಮತ್ತು ರಾಬಿ ಋತುವಿನಲ್ಲಿ ಉತ್ತಮ ಫಸಲಿನ ಯಾವುದೇ ಖಾತರಿಯಿಲ್ಲ'' ಎಂಬುದಾಗಿಯೂ ಅವರು ಅಲವತ್ತುಕೊಳ್ಳುತ್ತಾರೆ. ಗೌಡ್‍ವಡಿಯಲ್ಲಿ 150 ಖಾಸಗಿ ಕೊಳವೆಬಾವಿಗಳಿದ್ದು, ಇವುಗಳಲ್ಲಿ ಕನಿಷ್ಟ 130 ಕೊಳವೆಬಾವಿಗಳು ಒಣಗಿದ್ದು, ಜನರು 1,000 ಅಡಿ ಆಳದವರೆಗೂ ಭೂಮಿಯನ್ನು ಕೊರೆಯುತ್ತಿದ್ದಾರೆಂಬುದಾಗಿ ಅಲಿ ಮಾಹಿತಿ ನೀಡುತ್ತಾರೆ.

ಬೃಹತ್ ಪ್ರಮಾಣದ ಕಬ್ಬಿನ ಕೃಷಿಗೆ ಪಕ್ಕಾದ ರೈತರು ಆಹಾರದ ಬೆಳೆಗಳಿಂದ ದೂರವುಳಿದಿದ್ದಾರೆ. 2018-19 ರ ರಾಬಿ ಋತುವಿನಲ್ಲಿ, ಸೋಲಾಪುರ್ ಜಿಲ್ಲೆಯಲ್ಲಿ ಕೇವಲ ಶೇ. 41 ರಷ್ಟು ಜೋಳ ಮತ್ತು ಶೇ. 46 ರಷ್ಟು ಮೆಕ್ಕೆಜೋಳದ ಸಾಗುವಳಿ ನಡೆಸಲಾಯಿತೆಂದು ಕೃಷಿ ಇಲಾಖೆಯು ತಿಳಿಸುತ್ತದೆ. ಮಹಾರಾಷ್ಟ್ರದಾದ್ಯಂತ ಜೋಳದ ಕೃಷಿಯ ಪ್ರದೇಶವು ಶೇ. 57 ರಷ್ಟು ಹಾಗೂ ಮೆಕ್ಕೆಜೋಳದ ಕೃಷಿಯ ಪ್ರದೇಶವು ಶೇ. 65 ರಷ್ಟು ಕಡಿಮೆಯಾಗಿದೆಯೆಂದು ರಾಜ್ಯದ 2018-19 ರ ಆರ್ಥಿಕ ಸಮೀಕ್ಷೆಯಿಂದ ತಿಳಿದುಬರುತ್ತದೆ. ಈ ಎರಡೂ ಬೆಳೆಗಳ ಫಸಲಿನ ಪ್ರಮಾಣ ಸುಮಾರು ಶೇ. 70 ರಷ್ಟು ಕ್ಷೀಣಿಸಿದೆ.

ಈ ಎರಡೂ ಬೆಳೆಗಳು ಪ್ರಮುಖ ಆಹಾರ ಧಾನ್ಯಗಳಾಗಿದ್ದು, ಜಾನುವಾರುಗಳಿಗೆ ಮೇವನ್ನು ಒದಗಿಸುತ್ತವೆ. ಹಾಲು ಸಹಕಾರ ಸಮಿತಿಯ ನಿರ್ದೇಶಕರೂ, ಗೌಡ್‍ವಡಿಯ ಜಾನುವಾರುಗಳ ಶಿಬಿರದ ಸ್ಥಾಪಕರೂ ಆದ ಪೊಪಟ್ ಗಡಡೆ ಅವರ ಪ್ರಕಾರ, ಮೇವಿನ ಅಭಾವದಿಂದಾಗಿ ಶುಷ್ಕ ಋತುವಿನಲ್ಲಿ ಸರ್ಕಾರ ಹಾಗೂ ಮತ್ತಿತರರು ಸಂಗೊಲ್‍ನಲ್ಲಿ ಜಾನುವಾರುಗಳ ಶಿಬಿರಗಳನ್ನು ತೆರೆಯುವುದು ಅನಿವಾರ್ಯವಾಯಿತು. 2019 ರಲ್ಲಿ, 105 ಶಿಬಿರಗಳಲ್ಲಿ ಸುಮಾರು 50,000 ಜಾನುವಾರುಗಳು ಆಶ್ರಯಪಡೆದಿವೆ. ಈ ಜಾನುವಾರುಗಳು ಶಿಬಿರದಲ್ಲಿ ಏನನ್ನು ತಿನ್ನುತ್ತವೆ? ಅಂದಾಜು ಮಾಡಲಾದಂತೆ; ಒಂದು ಹೆಕ್ಟೇರ್‍ಗೆ 29.7 ಮಿಲಿಯನ್ ಲೀಟರ್‍ಗಳನ್ನು ನುಂಗುವ ಕಬ್ಬನ್ನೇ ಇವೂ ತಿನ್ನುತ್ತವೆ.

ಸಂಗೊಲ್‍ ನಲ್ಲಿ ಪರಸ್ಪರ ಹಾಸುಹೊಕ್ಕಾಗಿರುವ ಅನೇಕ ನೈಸರ್ಗಿಕ ಬದಲಾವಣೆಗಳು ಘಟಿಸುತ್ತಿದ್ದು; ಇವುಗಳಿಗೆ ಮಾನವನೇ ಮೂಲ ಕಾರಣನಾಗಿದ್ದಾನೆ. ಅವುಗಳೆಂದರೆ; ಮಳೆಯ ಪ್ರಮಾಣ ಹಾಗೂ ಮಳೆ ಸುರಿಯುವ ದಿನಗಳು ಕಡಿಮೆಯಾಗುತ್ತಿರುವುದು, ತಾಪಮಾನದ ಏರಿಕೆ, ತೀವ್ರ ತಾಪಮಾನದ ದಿನಗಳ ಸಂಖ್ಯೆಯಲ್ಲಿನ ಹೆಚ್ಚಳ, ಮಾನ್ಸೂನ್ ಪೂರ್ವ ಹಾಗೂ ಮಾನ್ಸೂನ್ ನಂತರದ ಮಳೆಯು ಕಾಣೆಯಾಗಿರುವುದು ಹಾಗೂ ಮಣ್ಣಿನ ತೇವಾಂಶದ ಕೊರತೆ. ಕೃಷಿಯ ಪ್ರಕಾರಗಳಲ್ಲಿನ ಬದಲಾವಣೆಗಳನ್ನು– ಅಂದರೆ ಅಲ್ಪಾವಧಿಯ ಬೆಳೆಗಳ ಸಾಗುವಳಿ, ದೇಸೀ ಬೆಳೆಗಳು ಕುಂಠಿತಗೊಂಡಿರುವುದು, ಜೋಳ ಮುಂತಾದ ಆಹಾರದ ಬೆಳೆಗಳು ಕಡಿಮೆಯಾಗಿರುವುದು, ವಾಣಿಜ್ಯ ಬೆಳೆಗಳಲ್ಲಿನ ಹೆಚ್ಚಳ, ನೀರಾವರಿಯ ಸೌಲಭ್ಯವಿಲ್ಲದಿರುವುದು ಹಾಗೂ ಅಂತರ್ಜಲ ಬರಿದಾಗುತ್ತಿರುವುದನ್ನು ಸಹ ಇಲ್ಲಿ ಹೆಸರಿಸಬಹುದು.

ಈ ಎಲ್ಲ ಬದಲಾವಣೆಗಳ ಕಾರಣವೇನೆಂದು ಕೇಳಿದಾಗ, ತಾತ್ಯಾನ ವಿಷಾದಪೂರಿತ ಮುಗುಳ್ನಗುವಿನ ಮಾತುಗಳು ಹೀಗಿವೆ: ''ಮಳೆರಾಯನ ಮನಸ್ಸನ್ನು ನಾವು ಓದುವಂತಿದ್ದರೆ! ಮನುಷ್ಯ ದುರಾಸೆಗೀಡಾಗಿದ್ದಾನೆ; ಮಳೆ ಸುರಿದೀತಾದರೂ ಹೇಗೆ? ಮಾನವರು ತಮ್ಮ ವರ್ತನೆಗಳನ್ನು ಬದಲಿಸಿದಲ್ಲಿ, ಪ್ರಕೃತಿಯು ತನ್ನ ಎಂದಿನ ಗತಿಯಲ್ಲಿ ಸಾಗುವುದಾದರೂ ಹೇಗೆ?''

PHOTO • Sanket Jain

ಸಂಗೊಲ್ ನಗರದ ಹೊರ ವಲಯದಲ್ಲಿ ಮನ್ ನದಿಯ ಮೇಲೆ ಒಣಗಿ ನಿಂತ ಹಳೆಯ ಅಣೆಕಟ್ಟು

ತಮ್ಮ ಅಮೂಲ್ಯ ಸಮಯವನ್ನು ವಿನಿಯೋಗಿಸಿ ಮಹತ್ವದ ಮಾಹಿತಿಗಳನ್ನಿತ್ತ ಶಹಾಜಿ ಗಡಹಿರೆ ಮತ್ತು ದತ್ತ ಗುಲಿಗ್ ಅವರಿಗೆ ಲೇಖಕರು ಧನ್ಯವಾದಗಳನ್ನು ಸಲ್ಲಿಸಲು ಬಯಸುತ್ತಾರೆ.

ಮುಖಪುಟ ಚಿತ್ರ: ಸಂಕೇತ್ ಜೈನ್/ಪರಿ

ದೇಶದಾದ್ಯಂತ ಹವಾಮಾನ ವೈಪರೀತ್ಯಗಳ ಬಗೆಗಿನ ಪರಿಯ ವರದಿಗಾರಿಕೆಯು ಪ್ರಾಜೆಕ್ಟ್ ಯು.ಎನ್.ಡಿ.ಪಿ ಯ ಸಹಕಾರದಿಂದ ನಡೆಯಲ್ಪಡುತ್ತಿದ್ದು ಹವಾಮಾನ ವೈಪರೀತ್ಯದ ಗಂಭೀರ ಪರಿಣಾಮಗಳನ್ನು ಜನಸಾಮಾನ್ಯರ ಅನುಭವದ ಮಾತುಗಳಲ್ಲಿ ದಾಖಲಿಸುವ ಗುರಿಯನ್ನಿಟ್ಟುಕೊಂಡಿದೆ.

ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ಗಳನ್ನು ಸಂಪರ್ಕಿಸಿ: [email protected] with a cc to [email protected] .

ಅನುವಾದ: ಶೈಲಜ ಜಿ. ಪಿ.

Reporter : Medha Kale

Medha Kale is based in Pune and has worked in the field of women and health. She is the Translations Editor, Marathi, at the People’s Archive of Rural India.

Other stories by Medha Kale
Editor : Sharmila Joshi

Sharmila Joshi is former Executive Editor, People's Archive of Rural India, and a writer and occasional teacher.

Other stories by Sharmila Joshi

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath
Series Editors : Sharmila Joshi

Sharmila Joshi is former Executive Editor, People's Archive of Rural India, and a writer and occasional teacher.

Other stories by Sharmila Joshi
Translator : Shailaja G. P.

Shailaja ([email protected]) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

Other stories by Shailaja G. P.