ಮಜುಲಿ ದ್ವೀಪದ ಗರಮೂರ್ ಮಾರುಕಟ್ಟೆ ನವೆಂಬರ್ ತಿಂಗಳಿನಲ್ಲಿ ಮೂರು ದಿನಗಳ ಕಾಲ ಬಣ್ಣದ ದೀಪಗಳು ಮತ್ತು ಮಣ್ಣಿನ ದೀಪಗಳಿಂದ ಬೆಳಗತೊಡಗುತ್ತದೆ. ಚಳಿಗಾಲದ ಆರಂಭದ ಸಂಜೆ ಪ್ರಾರಂಭವಾಗುತ್ತಿದ್ದಂತೆ, ಖೋಲ್ ಡೋಲುಗಳ ಬಡಿತ ಮತ್ತು ತಾಳಗಳ ಸದ್ದು ಸುತ್ತಲೂ ಹರಡಿರುವ ಧ್ವನಿವರ್ಧಕಗಳ ಮೂಲಕ ಮೊಳಗುತ್ತದೆ.

ಹೀಗೆ ರಾಸ್ ಮಹೋತ್ಸವ ಆರಂಭವಾಗುತ್ತದೆ.

ಈ ಉತ್ಸವವನ್ನು ಅಸ್ಸಾಮಿ ತಿಂಗಳಾದ ಕಟಿ-ಅಘುನ್ ನ ಪೂರ್ಣಿಮಾ ಅಥವಾ ಹುಣ್ಣಿಮೆಯ ದಿನದಂದು ನಡೆಸಲಾಗುತ್ತದೆ - ಇದು ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಬರುತ್ತದೆ - ಪ್ರತಿವರ್ಷ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರನ್ನು ಈ ದ್ವೀಪಕ್ಕೆ ಆಕರ್ಷಿಸುತ್ತದೆ. ಇದು ಎರಡು ದಿನಗಳವರೆಗೂ ಮುಂದುವರಿಯುತ್ತದೆ.

"ಈ ಹಬ್ಬ ಇಲ್ಲದಿದ್ದರೆ, ನಮಗೆ ಏನನ್ನೋ ಕಳೆದುಕೊಂಡಂತೆ ಭಾಸವಾಗುತ್ತಿತ್ತು. ಇದು [ರಾಸ್ ಮಹೋತ್ಸವ] ನಮ್ಮ ಸಂಸ್ಕೃತಿ" ಎಂದು ಬೋರುನ್ ಚಿಟಾದಾರ್ ಚುಕ್ ಗ್ರಾಮದಲ್ಲಿ ಉತ್ಸವವನ್ನು ಆಯೋಜಿಸುವ ಸಮಿತಿಯ ಕಾರ್ಯದರ್ಶಿ ರಾಜಾ ಪಾಯೆಂಗ್ ಹೇಳುತ್ತಾರೆ. "ಜನರು ವರ್ಷವಿಡೀ ಇದಕ್ಕಾಗಿ ಕುತೂಹಲದಿಂದ ಕಾಯುತ್ತಾರೆ" ಎಂದು ಅವರು ಹೇಳುತ್ತಾರೆ.

ಅಸ್ಸಾಂನ ಹಲವಾರು ವೈಷ್ಣವ ಮಠಗಳಲ್ಲಿ ಒಂದಾದ ಗರಮೂರ್ ಸಾರು ಸತ್ರದ ಬಳಿ ನೂರಾರು ನಿವಾಸಿಗಳು ತಮ್ಮಲ್ಲಿರುವ ಒಳ್ಳೆಯ ಬಟ್ಟೆಯನ್ನು ಧರಿಸಿ ನೆರೆದಿದ್ದಾರೆ.

PHOTO • Prakash Bhuyan

2022ರಲ್ಲಿ ಮಹೋತ್ಸವ ನಡೆದ ಅಸ್ಸಾಂನ ಮಜುಲಿಯ 60ಕ್ಕೂ ಹೆಚ್ಚು ಸ್ಥಳಗಳಲ್ಲಿ ಗರಮೂರ್ ಸರು ಸತ್ರವೂ ಒಂದಾಗಿದೆ. ಕೃಷ್ಣ ದತ್ತಾ, (ನಿಂತಿರುವವರು) ವೇದಿಕೆಯ ಅಲಂಕಾರದ ಕೆಲಸ ಮಾಡುತ್ತಾರೆ

PHOTO • Prakash Bhuyan

ಕಲಿಯೋ ನಾಗ್‌ ಎಂದು ಕರೆಯಲ್ಪಡುವ ಐದು ಹೆಡೆಗಳ ಪೌರಾಣಿಕ ಹಾವು ಸರು ಸತ್ರದ ಗೋಡೆಯ ಮೇಲೆ ವಿರಮಿಸುತ್ತಿದೆ. ಈ ರೀತಿಯ ಕೈಯಿಂದ ಮಾಡಿದ ರಂಗಪರಿಕರಗಳು ಹಬ್ಬದ ಪ್ರದರ್ಶನಗಳ ದೊಡ್ಡ ಭಾಗವಾಗಿದೆ

ರಾಸ್ ಮಹೋತ್ಸವ (ಕೃಷ್ಣನ ನೃತ್ಯದ ಹಬ್ಬ) ನೃತ್ಯ, ನಾಟಕ ಮತ್ತು ಸಂಗೀತ ಪ್ರದರ್ಶನಗಳ ಮೂಲಕ ಶ್ರೀಕೃಷ್ಣನ ಜೀವನವನ್ನು ಆಚರಿಸುತ್ತದೆ. ಉತ್ಸವದ ಒಂದೇ ದಿನದಲ್ಲಿ 100ಕ್ಕೂ ಹೆಚ್ಚು ಪಾತ್ರಗಳನ್ನು ವೇದಿಕೆಯಲ್ಲಿ ಕಾಣಬಹುದು.

ಪ್ರದರ್ಶನಗಳು ಕೃಷ್ಣನ ಬದುಕಿನ ವಿವಿಧ ಹಂತಗಳನ್ನು ಚಿತ್ರಿಸುತ್ತವೆ - ವೃಂದಾವನದಲ್ಲಿ ಬೆಳೆಯುತ್ತಿರುವ ಮಗುವಾಗಿದ್ದಾಗಿನಿಂದ ಹಿಡಿದು ರಾಸ ಲೀಲೆಯ ತನಕ ಅವನು ಗೋಪಿಕೆಯರೊಂದಿಗೆ ನೃತ್ಯ ಮಾಡಿದ್ದಾನೆಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಅಭಿನಯಿಸಲಾಗುವ ಕೆಲವು ನಾಟಕಗಳೆಂದರೆ ಶಂಕರದೇವ ಬರೆದ 'ಕೇಲಿ ಗೋಪಾಲ್' ಮತ್ತು ಅವರ ಶಿಷ್ಯ ಮಾಧವದೇವನಿಗೆ ಸಂಬಂಧಿಸಿದ 'ರಾಸ್ ಜುಮುರಾ' ದ ರೂಪಾಂತರಗಳಾಗಿವೆ.

ಗರಮೂರ್ ಮಹೋತ್ಸವದಲ್ಲಿ ವಿಷ್ಣುವಿನ ಪಾತ್ರವನ್ನು ನಿರ್ವಹಿಸಿದ ಮುಕ್ತಾ ದತ್ತಾ ಒಮ್ಮೆ ಪಾತ್ರವನ್ನು ವಹಿಸಿಕೊಂಡ ನಂತರ, ಅವರು ಕೆಲವು ಸಂಪ್ರದಾಯಗಳನ್ನು ಅನುಸರಿಸಬೇಕಾಗುತ್ತದೆ ಎಂದು ಹೇಳುತ್ತಾರೆ: "ಪಾತ್ರವನ್ನು ನೀಡಿದ ದಿನದಿಂದ, ಕೃಷ್ಣ, ನಾರಾಯಣ ಅಥವಾ ವಿಷ್ಣುವಿನ ಪಾತ್ರಗಳನ್ನು ನಿರ್ವಹಿಸುವ ನಾವು ಸಾಮಾನ್ಯವಾಗಿ ಸಸ್ಯಾಹಾರಿ ಸಾತ್ವಿಕ ಆಹಾರವನ್ನು ಮಾತ್ರ ತಿನ್ನುವ ಆಚರಣೆಯನ್ನು ಆಚರಿಸುತ್ತೇವೆ. ರಾಸ್‌ನ ಮೊದಲ ದಿನದಂದು, ನಾವು ವ್ರತವನ್ನು ಆಚರಿಸುತ್ತೇವೆ. ಮೊದಲ ದಿನದ ಪ್ರದರ್ಶನ ಮುಗಿದ ನಂತರವೇ ನಾವು ಈ ವೃತವನ್ನು ಮುರಿಯುತ್ತೇವೆ.

ಮಜುಲಿ ಬ್ರಹ್ಮಪುತ್ರಾ ನದಿಯ ಒಂದು ದೊಡ್ಡ ದ್ವೀಪವಾಗಿದ್ದು, ಇದು ಅಸ್ಸಾಂ ಮೂಲಕ ಸುಮಾರು 640 ಕಿಲೋಮೀಟರ್ ಹರಿಯುತ್ತದೆ. ದ್ವೀಪದ ಸತ್ರಗಳು (ಮಠಗಳು) ವೈಷ್ಣವ ಧರ್ಮ ಮತ್ತು ಕಲೆ ಮತ್ತು ಸಂಸ್ಕೃತಿಯ ಕೇಂದ್ರಗಳಾಗಿವೆ. 15ನೇ ಶತಮಾನದಲ್ಲಿ ಸಮಾಜ ಸುಧಾರಕ ಮತ್ತು ಸಂತ ಶ್ರೀಮಂತ ಶಂಕರದೇವ ಸ್ಥಾಪಿಸಿದ ಸತ್ರಗಳು ಅಸ್ಸಾಂನಲ್ಲಿ ನವ-ವೈಷ್ಣವ ಭಕ್ತಿ ಚಳುವಳಿಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಮಜುಲಿಯಲ್ಲಿ ಒಂದು ಕಾಲದಲ್ಲಿ ಸ್ಥಾಪಿಸಲ್ಪಟ್ಟ 65 ಅಥವಾ ಅದಕ್ಕಿಂತ ಹೆಚ್ಚು ಸತ್ರಗಳಲ್ಲಿ, ಸುಮಾರು 22 ಮಾತ್ರ ಇಂದು ಕಾರ್ಯನಿರ್ವಹಿಸುತ್ತಿವೆ. ವಿಶ್ವದ ಅತಿದೊಡ್ಡ ನದಿ ವ್ಯವಸ್ಥೆಗಳಲ್ಲಿ ಒಂದಾದ ಬ್ರಹ್ಮಪುತ್ರಾ ನದಿಯ ಪುನರಾವರ್ತಿತ ಪ್ರವಾಹದಿಂದಾಗಿ ಉಳಿದವು ಸವೆತವನ್ನು ಎದುರಿಸಿವೆ. ಹಿಮಾಲಯದ ಹಿಮನದಿಯ ಹಿಮವು ಬೇಸಿಗೆ-ಮಾನ್ಸೂನ್ ತಿಂಗಳುಗಳಲ್ಲಿ ಕರಗುತ್ತದೆ, ಇದು ನದಿ ಜಲಾನಯನ ಪ್ರದೇಶದಲ್ಲಿ ಖಾಲಿಯಾಗುವ ನದಿಗಳಿಗೆ ನೀರನ್ನು ಒದಗಿಸುತ್ತದೆ. ಇದು, ಮಜುಲಿ ಮತ್ತು ಸುತ್ತಮುತ್ತಲಿನ ಮಳೆಯೊಂದಿಗೆ, ಸವೆತಕ್ಕೆ ಮುಖ್ಯ ಕಾರಣವಾಗಿದೆ.

PHOTO • Prakash Bhuyan

ವಿಷ್ಣುವಿನ ಪಾತ್ರದಲ್ಲಿ ನಟಿಸಲಿರುವ ಮುಕ್ತಾ ದತ್ತಾ ಮೇಕಪ್ ಮಾಡಿಕೊಳ್ಳುತ್ತಿದ್ದಾರೆ

PHOTO • Prakash Bhuyan

ಉತ್ತರ ಕಮಲಾಬರಿ ಸತ್ರದ ಸನ್ಯಾಸಿಗಳು ರಾಸ್ ಮಹೋತ್ಸವದಲ್ಲಿ ತಮ್ಮ 2016ರ ಪ್ರದರ್ಶನಕ್ಕೆ ಸಜ್ಜಾಗುತ್ತಿದ್ದಾರೆ

ಸತ್ರಗಳು ರಾಸ್ ಮಹೋತ್ಸವದ ಆಚರಣೆಯ ಸ್ಥಳಗಳಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ದ್ವೀಪದಾದ್ಯಂತದ ವಿವಿಧ ಸಮುದಾಯಗಳು ಸಮುದಾಯ ಭವನಗಳಲ್ಲಿ, ತೆರೆದ ಮೈದಾನದಲ್ಲಿ ತಾತ್ಕಾಲಿಕ ವೇದಿಕೆಗಳಲ್ಲಿ ಮತ್ತು ಶಾಲಾ ಮೈದಾನಗಳಲ್ಲಿ ಆಚರಣೆಗಳು ಮತ್ತು ಪ್ರದರ್ಶನಗಳನ್ನು ಆಯೋಜಿಸುತ್ತವೆ.

ಗರಮೂರ್ ಸರು ಸತ್ರದಂತೆ ಉತ್ತರ ಕಮಲಾಬರಿ ಸತ್ರದ ಪ್ರದರ್ಶನಗಳು ಸಾಮಾನ್ಯವಾಗಿ ಮಹಿಳೆಯರನ್ನು ಒಳಗೊಂಡಿರುವುದಿಲ್ಲ. ಇಲ್ಲಿ, ಧಾರ್ಮಿಕ ಮತ್ತು ಸಾಂಸ್ಕೃತಿಕ ಶಿಕ್ಷಣವನ್ನು ಪಡೆದ ಭಕತ್ಗಳು ಎಂದು ಕರೆಯಲ್ಪಡುವ ಸತ್ರದ ಬ್ರಹ್ಮಚಾರಿ ಸನ್ಯಾಸಿಗಳು ಉಚಿತ ಮತ್ತು ಎಲ್ಲರಿಗೂ ಮುಕ್ತವಾದ ನಾಟಕಗಳಲ್ಲಿ ಪ್ರದರ್ಶನ ನೀಡುತ್ತಾರೆ.

82 ವರ್ಷದ ಇಂದ್ರನೀಲ್ ದತ್ತಾ ಅವರು ಗರಮೂರ್ ಸರು ಸತ್ರದಲ್ಲಿ ನಡೆಯುವ ರಾಸ್ ಮಹೋತ್ಸವದ ಸ್ಥಾಪಕರಲ್ಲಿ ಒಬ್ಬರು. 1950ರಲ್ಲಿ, ಸತ್ರಾಧಿಕಾರಿ (ಸತ್ರದ ಮುಖ್ಯಸ್ಥ) ಪಿತಾಂಬರ ದೇವ್ ಗೋಸ್ವಾಮಿ, ಪುರುಷ ನಟರನ್ನು ಮಾತ್ರ ಹೊಂದುವ ಸಂಪ್ರದಾಯವನ್ನು ಹೇಗೆ ನಿಲ್ಲಿಸಿದರು ಮತ್ತು ಪ್ರದರ್ಶನಗಳಲ್ಲಿ ಮಹಿಳಾ ನಟರನ್ನು ಸ್ವಾಗತಿಸಿದರು ಎಂದು ಅವರು ನೆನಪಿಸಿಕೊಳ್ಳುತ್ತಾರೆ.

"ಪಿತಾಂಬರ ದೇವ್ ಅವರು ನಾಮ್ಘರ್ [ಪ್ರಾರ್ಥನಾ ಸ್ಥಳ] ದ [ಸಾಂಪ್ರದಾಯಿಕ ಸ್ಥಳ] ಹೊರಗೆ ವೇದಿಕೆಯನ್ನು ನಿರ್ಮಿಸಿದರು. ನಾಮ್ಘರ್ ಪೂಜಾ ಸ್ಥಳವಾಗಿರುವುದರಿಂದ, ನಾವು ವೇದಿಕೆಯನ್ನು ಹೊರಗೆ ಮಾಡಿದ್ದೆವು" ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಈ ಸಂಪ್ರದಾಯ ಇಂದಿಗೂ ಮುಂದುವರೆದಿದೆ. ಮಹೋತ್ಸವವನ್ನು ಆಯೋಜಿಸುವ 60ಕ್ಕೂ ಹೆಚ್ಚು ಸ್ಥಳಗಳಲ್ಲಿ ಗರಮೂರ್ ಕೂಡ ಒಂದು. ಪ್ರದರ್ಶನಗಳನ್ನು ಟಿಕೆಟ್ ನೀಡಲಾಗುತ್ತದೆ ಮತ್ತು ಸುಮಾರು 1,000 ಜನರಿಗೆ ಆಸನ ವ್ಯವಸ್ಥೆಯೊಂದಿಗೆ ಸಭಾಂಗಣದಲ್ಲಿ ನಡೆಯುತ್ತದೆ.

PHOTO • Prakash Bhuyan
PHOTO • Prakash Bhuyan

ಎಡ: ಗರಮೂರ್ ಸತ್ರದಲ್ಲಿ ಪೂರ್ವಾಭ್ಯಾಸವು ಮಹೋತ್ಸವಕ್ಕೆ ಎರಡು ವಾರಗಳ ಮೊದಲು ಪ್ರಾರಂಭವಾಗುತ್ತದೆ. ಬಲ: ಮಕ್ಕಳು ತಮ್ಮ ಪಾತ್ರಗಳಿಗಾಗಿ ಗೋಪ ಬಾಲಕ [ದನಗಾಹಿ ಬಾಲಕರು] ಆಗಿ ಪೂರ್ವಾಭ್ಯಾಸ ಮಾಡುತ್ತಾರೆ. ಒಬ್ಬ ತಾಯಿ ತನ್ನ ಮಗುವಿಗೆ ಧೋತಿಯನ್ನು ಉಡಿಸುತ್ತಿದ್ದಾರೆ

ಇಲ್ಲಿ ಪ್ರದರ್ಶಿಸಲಾದ ನಾಟಕಗಳು ವೈಷ್ಣವ ಸಂಪ್ರದಾಯದಲ್ಲಿ ಶಂಕರದೇವ ಮತ್ತು ಇತರರು ಬರೆದ ನಾಟಕಗಳ ರೂಪಾಂತರಗಳಾಗಿವೆ, ಇದನ್ನು ಅನುಭವಿ ಕಲಾವಿದರು ಹೊಸದಾಗಿ ಅಳವಡಿಸಿಕೊಂಡಿದ್ದಾರೆ. "ನಾನು ನಾಟಕವನ್ನು ಬರೆಯುವಾಗ, ಲೋಕ ಸಂಸ್ಕೃತಿಯ ಅಂಶಗಳನ್ನು ಅದರಲ್ಲಿ ಪರಿಚಯಿಸುತ್ತೇನೆ. ನಾವು ನಮ್ಮ ಜಾತಿ [ಸಮುದಾಯ] ಮತ್ತು ನಮ್ಮ ಸಂಸ್ಕೃತಿಯನ್ನು ಜೀವಂತವಾಗಿಡಬೇಕು" ಎಂದು ಇಂದ್ರನೀಲ್ ದತ್ತಾ ಹೇಳುತ್ತಾರೆ.

"ಮುಖ್ಯ ಪೂರ್ವಾಭ್ಯಾಸವು ದೀಪಾವಳಿಯ ಮರುದಿನವೇ ಪ್ರಾರಂಭವಾಗುತ್ತದೆ" ಎಂದು ಮುಕ್ತಾ ದತ್ತಾ ಹೇಳುತ್ತಾರೆ. ಇದು ಪ್ರದರ್ಶಕರಿಗೆ ಸಿದ್ಧರಾಗಲು ಎರಡು ವಾರಗಳಿಗಿಂತ ಕಡಿಮೆ ಸಮಯವನ್ನು ನೀಡುತ್ತದೆ. "ಈ ಹಿಂದೆ ನಟಿಸಿದ ಜನರು ಬೇರೆ ಸ್ಥಳಗಳಲ್ಲಿ ವಾಸಿಸುತ್ತಿದ್ದಾರೆ. ಅವರನ್ನು ಮರಳಿ ಕರೆತರುವುದು ಅನನುಕೂಲಕರವಾಗಿದೆ" ಎಂದು ದತ್ತಾ ಹೇಳುತ್ತಾರೆ, ಅವರು ನಟನಾಗಿರುವುದರ ಜೊತೆಗೆ ಗರಮೂರ್ ಸಂಸ್ಕೃತ ಶಾಲೆಯಲ್ಲಿ (ಶಾಲೆ) ಇಂಗ್ಲಿಷ್ ಕಲಿಸುತ್ತಾರೆ.

ಕಾಲೇಜು ಮತ್ತು ವಿಶ್ವವಿದ್ಯಾಲಯದ ಪರೀಕ್ಷೆಗಳು ಸಾಮಾನ್ಯವಾಗಿ ಮಹೋತ್ಸವದೊಂದಿಗೆ ಹೊಂದಿಕೆಯಾಗುತ್ತವೆ. "[ವಿದ್ಯಾರ್ಥಿಗಳು] ಈಗಲೂ ಬರುತ್ತಾರೆ, ಒಂದು ದಿನವಾದರೂ. ಅವರು ರಾಸ್‌ ಪ್ರದರ್ಶನದಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸುತ್ತಾರೆ ಮತ್ತು ಮರುದಿನ ತಮ್ಮ ಪರೀಕ್ಷೆಗಳಿಗೆ ಹೊರಡುತ್ತಾರೆ" ಎಂದು ಮುಕ್ತಾ ಹೇಳುತ್ತಾರೆ.

ಉತ್ಸವವನ್ನು ಆಯೋಜಿಸುವ ವೆಚ್ಚವು ಪ್ರತಿವರ್ಷ ಹೆಚ್ಚಾಗುತ್ತದೆ. ಗರಮೂರಿನಲ್ಲಿ, 2022ರಲ್ಲಿ ಸುಮಾರು 4 ಲಕ್ಷ ರೂ. ಖರ್ಚಾಗಿತ್ತು ಮುಕ್ತಾ ಹೇಳುತ್ತಾರೆ, "ನಾವು ತಂತ್ರಜ್ಞರಿಗೆ ಪಾವತಿಸುತ್ತೇವೆ. ನಟರು ಸ್ವಯಿಚ್ಛೆಯಿಂದ ಮಾಡುತ್ತಾರೆ. ಸುಮಾರು 100ರಿಂದ 150 ಜನರು ಸ್ವಯಂಪ್ರೇರಿತರಾಗಿ ಕೆಲಸ ಮಾಡುತ್ತಾರೆ.

ಬೋರುನ್ ಚಿಟಾದಾರ್ ಚುಕ್ನಲ್ಲಿನ ರಾಸ್ ಮಹೋತ್ಸವವನ್ನು ಶಾಲೆಯಲ್ಲಿ ನಡೆಸಲಾಗುತ್ತದೆ ಮತ್ತು ಅಸ್ಸಾಂನ ಪರಿಶಿಷ್ಟ ಪಂಗಡವಾದ ಮಿಸಿಂಗ್ (ಅಥವಾ ಮಿಶಿಂಗ್) ಸಮುದಾಯದ ಸದಸ್ಯರು ಇದನ್ನು ಆಯೋಜಿಸುತ್ತಾರೆ. ಕಳೆದ ಕೆಲವು ವರ್ಷಗಳಲ್ಲಿ, ಯುವ ಪೀಳಿಗೆಯ ಆಸಕ್ತಿಯ ಕೊರತೆ ಮತ್ತು ಈ ಪ್ರದೇಶದಿಂದ ಹೆಚ್ಚಿನ ಮಟ್ಟದ ವಲಸೆಯು ಪ್ರದರ್ಶಕರ ಸಂಖ್ಯೆಯನ್ನು ಕಡಿಮೆ ಮಾಡಿದೆ. ಆದರೂ ಅವರು ಪಟ್ಟುಹಿಡಿದಿದ್ದಾರೆ, "ನಾವು ಅದನ್ನು ಆಯೋಜಿಸದಿದ್ದರೆ, ಹಳ್ಳಿಯಲ್ಲಿ ಏನೋ ಅಶುಭವಾಗಿ ಸಂಭವಿಸಬಹುದು" ಎಂದು ರಾಜಾ ಪಾಯೆಂಗ್ ಹೇಳುತ್ತಾರೆ. "ಇದು ಹಳ್ಳಿಯ ಜನಪ್ರಿಯ ನಂಬಿಕೆಯಾಗಿದೆ."

PHOTO • Prakash Bhuyan

ರಾಸ್ ಉತ್ಸವವು ಪ್ರತಿವರ್ಷ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರನ್ನು ಮಜುಲಿಗೆ ಸೆಳೆಯುತ್ತದೆ. ಬ್ರಹ್ಮಪುತ್ರಾ ನದಿಯಲ್ಲಿರುವ ಕಮಲಾಬರಿ ಘಾಟ್ ಒಂದು ಪ್ರಮುಖ ದೋಣಿ ನಿಲ್ದಾಣವಾಗಿದೆ ಮತ್ತು ಹಬ್ಬದ ಸಮಯದಲ್ಲಿ ಇನ್ನೂ ಹೆಚ್ಚು ಜನನಿಬಿಡವಾಗಿರುತ್ತದೆ

PHOTO • Prakash Bhuyan

ಕಳೆದ 11 ವರ್ಷಗಳಿಂದ ಬಸ್ತವ್ ಸೈಕಿಯಾ ಅವರು ಉತ್ಸವದ ವೇದಿಕೆಗಳಲ್ಲಿ ಕೆಲಸ ಮಾಡಲು ನಾಗಾಂವ್ ಜಿಲ್ಲೆಯಿಂದ ಮಜುಲಿಗೆ ಪ್ರಯಾಣಿಸುತ್ತಿದ್ದಾರೆ. ಇಲ್ಲಿ, ಅವರು ಗರಮೂರ್ ಪ್ರದರ್ಶನದಲ್ಲಿ ಬಳಸ ಲಾಗುವ ಕಂಸನ ಸಿಂಹಾಸನದ ಹಿನ್ನೆಲೆಯನ್ನು ಚಿತ್ರಿಸುತ್ತಿದ್ದಾರೆ

PHOTO • Prakash Bhuyan

ಸ್ಥಳೀಯ ಪ್ರಾಥಮಿಕ ಶಾಲೆಯ ಶಿಕ್ಷಕ ಅನಿಲ್ ಸರ್ಕಾರ್ ( ನಡುವೆ ) ಅವರೊಡನೆ ತಮ್ಮ ಮಕ್ಕ ಳಿಗೆ ಮೇಕಪ್ ಮಾಡಲು ಪೋಷಕರು ಸೇರಿರುವುದು

PHOTO • Prakash Bhuyan

ವೇದಿಕೆಯ ಹಿಂದೆ, ಗೋಪ ಬಾಲಕ ರಾಗಿ ವೇಷ ಧರಿಸಿದ ಮಕ್ಕಳು ತಮ್ಮ ದೃಶ್ಯಗಳಿಗೆ ತಯಾರಾಗು ತ್ತಿದ್ದಾರೆ

PHOTO • Prakash Bhuyan

ಗರಮೂರ್ ಸರು ಸತ್ರದ ಉತ್ಸವದಲ್ಲಿ ಕಂಸನ ಪಾತ್ರವನ್ನು ನಿರ್ವಹಿಸುವ ಮೃದುಪವಾನ್ ಭುಯಾನ್ ಅವರನ್ನು ಸಂದರ್ಶನ ಮಾಡು ತ್ತಿರು ವ ವರದಿಗಾರರು

PHOTO • Prakash Bhuyan

ನಿದ್ರೆಗೆ ಜಾರುತ್ತಿರುವ ಮಗುವನ್ನು ಸಂತೈಸುತ್ತಿರುವ ಮುಕ್ತಾ ದತ್ತಾ

PHOTO • Prakash Bhuyan

ಮಹಿಳೆಯರು ಕಲಿಯೋ ನಾಗ್ ನ ಆಕೃತಿಯ ಸುತ್ತಲೂ ದೀಪಗಳು ಮತ್ತು ಧೂಪದ ಕಡ್ಡಿಗಳನ್ನು ಬೆಳಗಿಸು ತ್ತಿರುವುದು . ಈ ಆಚರಣೆಯು ಹಬ್ಬ ಪ್ರಾರಂಭವಾಗುವ ಮೊದಲು ನಡೆಸಲಾಗುವ ಪ್ರಾರ್ಥನೆಗಳ ಒಂದು ಭಾಗವಾಗಿದೆ

PHOTO • Prakash Bhuyan

ಗರಮೂರ್ ಸರು ಸತ್ರದ ದ್ವಾರಗಳ ಬಳಿ ಜನರು ಫೋಟೊ ತೆಗೆಸಿಕೊಳ್ಳುತ್ತಿರುವುದು

PHOTO • Prakash Bhuyan

ನಾಟಕದ ಮೊದಲ ದೃಶ್ಯವಾದ ಪ್ರಸ್ತವನದಲ್ಲಿ ಬ್ರಹ್ಮ (ಬಲ), ಮಹೇಶ್ವರ (ಮಧ್ಯ), ವಿಷ್ಣು ಮತ್ತು ಲಕ್ಷ್ಮಿ (ಎಡ) ಭೂಮಿ ಮೇಲಿನ ಪರಿಸ್ಥಿತಿಯನ್ನು ಚರ್ಚಿಸು ತ್ತಿರುವುದು

PHOTO • Prakash Bhuyan

ಯುವತಿಯಾಗಿ (ಮೋಹಿನಿ ಪುಟೋನಾ) ತನ್ನ ರೂಪದಲ್ಲಿ ರಾಕ್ಷಸಿ ಪುತೋನಾ ( ಪೂತನಿ) (ಮಧ್ಯ) ಕಂಸನಿಗೆ (ಎಡಕ್ಕೆ) ಮಗು ಕೃಷ್ಣನನ್ನು ಕೊಲ್ಲಬಹುದೆಂದು ಭರವಸೆ ನೀಡು ತ್ತಿದ್ದಾಳೆ

PHOTO • Prakash Bhuyan

ವೃಂದಾವನದ ಜನರು ಕೃಷ್ಣನ ಜನನವನ್ನು ಆಚರಿಸುವ ನಂದೋತ್ಸವದ ದೃಶ್ಯಕ್ಕಾಗಿ ಗೋಪಿ ಕೆಯರ ವೇಷ ಧರಿಸಿದ ಯುವತಿಯರು ವೇದಿಕೆಯ ಹಿಂದೆ ಸಿದ್ಧರಾಗುತ್ತಿರುವುದು

PHOTO • Prakash Bhuyan

ರಾಸ್ ಮಹೋತ್ಸವವು ನೃತ್ಯ, ನಾಟಕ ಮತ್ತು ಸಂಗೀತ ಪ್ರದರ್ಶನಗಳ ಮೂಲಕ ಶ್ರೀಕೃಷ್ಣನ ಜೀವನವನ್ನು ಆಚರಿಸುತ್ತದೆ. ಉತ್ಸವದ ಒಂದೇ ದಿನದಲ್ಲಿ 100ಕ್ಕೂ ಹೆಚ್ಚು ಪಾತ್ರಗಳನ್ನು ವೇದಿಕೆಯಲ್ಲಿ ನೋಡ ಬಹುದು

PHOTO • Prakash Bhuyan

ಪು ತೊನಾ ಶಿಶು ಕೃಷ್ಣನಿಗೆ ಹಾಲುಣಿಸುವ ಮೂಲಕ ವಿಷ ವೂಡಲು ಪ್ರಯತ್ನಿಸುತ್ತಾಳೆ . ಆದರೆ , ಅವ ಳೇ ಕೊಲ್ಲಲ್ಪಡುತ್ತಾಳೆ. ಯಶೋದಾ (ಎಡ) ಘಟನಾ ಸ್ಥಳಕ್ಕೆ ಬರುತ್ತಾಳೆ

PHOTO • Prakash Bhuyan

ಪುಟ್ಟ ಕೃಷ್ಣನು ವೃಂದಾವನದಲ್ಲಿ ಗೋಪಿಯರೊಂದಿಗೆ ನೃತ್ಯ ಮಾಡು ತ್ತಿರುವುದು

PHOTO • Prakash Bhuyan

ಗರಮೂರ್ ಸರು ಸತ್ರದಲ್ಲಿ, ಕೊಕ್ಕರೆ ರೂಪವನ್ನು ಹೊಂದು ವ ರಾಕ್ಷಸ ಬೊ ( ಬ) ಕಾಸುರನನ್ನು ಪುಟ್ಟ ಕೃಷ್ಣನು ಸೋಲಿಸಿ ಕೊಲ್ಲುವ ದೃಶ್ಯವನ್ನು ಮಕ್ಕಳು ಅಭಿನಯಿಸುತ್ತಾರೆ

PHOTO • Prakash Bhuyan

ಕೃಷ್ಣ ಮತ್ತು ಅವನ ಸಹೋದರ ಬಲರಾಮನ ಪಾತ್ರವನ್ನು ನಿರ್ವಹಿಸುವ ಯುವ ನಟರು ಧೇನುಕಾಸುರ ಬ ಧ್ ಎನ್ನುವ ನಾಟಕದ ರಾಕ್ಷಸ ಧೇನುಕನ ಸಾವಿನ ದೃಶ್ಯವನ್ನು ನಿರ್ವಹಿಸುತ್ತಾರೆ

PHOTO • Prakash Bhuyan

ಅಸ್ಸಾಂನ ಮಜುಲಿಯಲ್ಲಿ ನಡೆಯುವ ಗರಮೂರ್ ಸರು ಸತ್ರ ರಾಸ್ ಮಹೋತ್ಸವದಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯ ನಟರಾಗಿದ್ದಾರೆ

PHOTO • Prakash Bhuyan

ಕಲಿಯೋ ದಮನ್ ದೃಶ್ಯವು ಕೃಷ್ಣನು ಯಮುನಾ ನದಿಯಲ್ಲಿ ವಾಸಿಸುವ ಕಲಿಯೋ ನಾಗನನ್ನು ಸೋಲಿಸಿ ಅವನ ತಲೆಯ ಮೇಲೆ ನೃತ್ಯ ಮಾಡುವುದನ್ನು ತೋರಿಸುತ್ತದೆ

PHOTO • Prakash Bhuyan

ನಟರು ಮತ್ತು ಪ್ರೇಕ್ಷಕರ ಸದಸ್ಯರು ರೆಪ್ರದರ್ಶನಗಳನ್ನು ಆನಂದಿಸು ತ್ತಿರುವುದು

PHOTO • Prakash Bhuyan

2016ರಲ್ಲಿ ಉತ್ತರ ಕಮಲಾಬರಿ ಸತ್ರದಲ್ಲಿ, ಸನ್ಯಾಸಿಗಳು ಮಹೋತ್ಸವದಲ್ಲಿ ಪ್ರದರ್ಶಿಸಲಿರುವ ಕೇಲಿ ಗೋಪಾಲ್ ನಾಟಕದ ಪೂರ್ವಾಭ್ಯಾಸಕ್ಕಾಗಿ ತಯಾರಿ ನಡೆಸು ತ್ತಿದ್ದಾರೆ . 1955ರಲ್ಲಿ ಈ ಸಭಾಂಗಣವನ್ನು ನಿರ್ಮಿಸುವ ಮೊದಲು, ಪ್ರದರ್ಶನಗಳು ನಾಮ್ಘರ್ (ಪ್ರಾರ್ಥನಾ ಮಂದಿರ) ದಲ್ಲಿ ನಡೆಯುತ್ತಿದ್ದವು

PHOTO • Prakash Bhuyan

ರಾಸ್ ಮಹೋತ್ಸವಕ್ಕಾಗಿ ಉತ್ತರ ಕಮಲಾಬರಿ ಸತ್ರದಲ್ಲಿ ಪೂರ್ವಾಭ್ಯಾಸದ ಕೊನೆಯ ದಿನ

PHOTO • Prakash Bhuyan

ಉತ್ತರ ಕಮಲಾಬರಿ ಸತ್ರದ ಸನ್ಯಾಸಿಗಳಾದ ನಿರಂಜನ್ ಸೈಕಿಯಾ (ಎಡ) ಮತ್ತು ಕೃಷ್ಣ ಜೋಡುಮೋನಿ ಸೈಕಾ (ಬಲ) ತಮ್ಮ ಬೋಹಾದಲ್ಲಿ (ಕ್ವಾರ್ಟರ್ಸ್) ಇದ್ದಾರೆ. ವೇಷಭೂಷಣಗಳ ನ್ನು ಧರಿಸು ವುದು ಒಂದು ವಿಸ್ತಾರವಾದ ಪ್ರಕ್ರಿಯೆಯಾಗಿದೆ

PHOTO • Prakash Bhuyan

ಪ್ರದರ್ಶನಗಳಲ್ಲಿ ಬಳಸುವ ಮುಖವಾಡಗಳು ಮತ್ತು ಅವುಗಳನ್ನು ತಯಾರಿಸುವ ಪ್ರಕ್ರಿಯೆಯು ರಾಸ್ ಮಹೋತ್ಸವದ ಅವಿಭಾಜ್ಯ ಅಂಗವಾಗಿದೆ. ಇಲ್ಲಿ, ನಟರು ಅಸುರರು ಮತ್ತು ದಾನ ಬ್‌ ಗಳ ಪಾತ್ರಗಳಿಗಾಗಿ ತಯಾರಿಸಿದ ಮುಖವಾಡಗಳನ್ನು ಧರಿಸಿ ವೇದಿಕೆಯ ಮೇಲೆ ಹೆಜ್ಜೆ ಹಾಕುತ್ತಾರೆ

PHOTO • Prakash Bhuyan

ಉತ್ಸವಕ್ಕಾಗಿ ಬೋರುನ್ ಚಿಟಾದಾರ್ ಚುಕ್ ಗ್ರಾಮದ ಸ್ಥಳದಲ್ಲಿ ಕಲಿಯೋ ನಾಗ್ ಮುಖವಾಡವನ್ನು ಚಿತ್ರಿಸಲಾಗಿದೆ

PHOTO • Prakash Bhuyan

ಬೊರುನ್ ಚಿಟಾದಾರ್ ಚುಕ್ನಲ್ಲಿ ಹಬ್ಬದ ಪ್ರಾರಂಭವನ್ನು ಸೂಚಿಸುವ ಪ್ರಾರ್ಥನೆಯಲ್ಲಿ ಮುನೀಮ್ ಕಮಾನ್ (ಮಧ್ಯ) ದೊಮೊದರ್ ಮಿಲಿ ಅವರ ಛಾಯಾಚಿತ್ರದ ಮುಂದೆ ದೀಪವನ್ನು ಬೆಳಗಿಸುತ್ತಾರೆ. ಒಂದು ದಶಕದ ಹಿಂದೆ ನಿಧನರಾದ ಮಿಲಿ, ಹಳ್ಳಿಯ ಜನರಿಗೆ ರಾಸ್ ಆಯೋಜಿಸಲು ಕಲಿಸಿದರು

PHOTO • Prakash Bhuyan

ಮಜುಲಿಯ ಬೋರುನ್ ಚಿಟಾದಾರ್ ಚುಕ್ ನಲ್ಲಿ ವೇದಿಕೆ

PHOTO • Prakash Bhuyan

ಅಪುರ್ಬೊ ಕಮಾನ್ (ಮಧ್ಯ) ಅವರ ಪ್ರದರ್ಶನಕ್ಕೆ ಸಿದ್ಧರಾಗುತ್ತಿದ್ದಾರೆ . ಅವರು ಈಗ ಹಲವಾರು ವರ್ಷಗಳಿಂದ ಬೋರುನ್ ಚಿತ್ತದಾರ್ ಚುಕ್ ಉತ್ಸವದಲ್ಲಿ ಕಂಸನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ

PHOTO • Prakash Bhuyan

ಒಬ್ಬ ಚಿಕ್ಕ ಹುಡುಗ ಪ್ರದರ್ಶನದಲ್ಲಿ ಬಳಸಬೇಕಾದ ಮುಖವಾಡಗಳಲ್ಲಿ ಒಂದನ್ನು ಪ್ರಯತ್ನಿಸುತ್ತಾನೆ

PHOTO • Prakash Bhuyan

ಮಿಸಿಂಗ್ ಸಮುದಾಯವು ತಯಾರಿಸುವ ಹುರಿದ ಹಂದಿಮಾಂಸ ಮತ್ತು ಸಾಂಪ್ರದಾಯಿಕ ಅಕ್ಕಿ ಬಿಯರ್ ಅಪೊಂಗ್ ಬೋರುನ್ ಚಿಟಾದಾರ್ ಚುಕ್ ಮಹೋತ್ಸವದಲ್ಲಿ ಜನಪ್ರಿಯವಾಗಿವೆ


ಈ ಕಥೆಯನ್ನು ಮೃಣಾಲಿನಿ ಮುಖರ್ಜಿ ಫೌಂಡೇಶನ್ (ಎಂಎಂಎಫ್) ನ ಫೆಲೋಶಿಪ್ ಬೆಂಬ ದೊಂದಿಗೆ ಮಾಡಲಾಗಿದೆ .

ಅನುವಾದ : ಶಂಕರ . ಎನ್ . ಕೆಂಚನೂರು

Prakash Bhuyan

Prakash Bhuyan is a poet and photographer from Assam, India. He is a 2022-23 MMF-PARI Fellow covering the art and craft traditions in Majuli, Assam.

Other stories by Prakash Bhuyan
Editor : Swadesha Sharma

Swadesha Sharma is a researcher and Content Editor at the People's Archive of Rural India. She also works with volunteers to curate resources for the PARI Library.

Other stories by Swadesha Sharma
Photo Editor : Binaifer Bharucha

Binaifer Bharucha is a freelance photographer based in Mumbai, and Photo Editor at the People's Archive of Rural India.

Other stories by Binaifer Bharucha
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected]

Other stories by Shankar N. Kenchanuru