ದಿಲಾವರ್ ಶಿಕಲ್‌ಗಾರ್ ಅವರು 1960ರ ದಶಕದ ಮಧ್ಯದಲ್ಲಿ ನಡೆದ ಘಟನೆಯೊಂದನ್ನು ನೆನಪಿಸಿಕೊಳ್ಳುತ್ತಾರೆ. ಅವರ ಕಮ್ಮಾರ ಸಾಲೆಯಲ್ಲಿ, ಕೆಲಸಗಾರರೊಬ್ಬರು ಕಬ್ಬಿಣವನ್ನು ಬಡಿಯುತ್ತಿದ್ದಾಗ ಅದರಿಂದ ಹಾರಿದ ತುಣುಕೊಂದು ಅವರ ತೋರುಬೆರಳನ್ನು ಗಾಯಗೊಳಿಸಿತ್ತು. ಆ ಗಾಯ ಒಣಗಿದೆಯಾದರೂ ಅದರ ಗುರುತು ಈಗಲೂ ಕಾಣಬಹುದು. "ನನ್ನ ಕೈಗಳನ್ನು ನೋಡಿ ಕಬ್ಬಿಣ ಬಡಿದು ಬಡಿದು ಅವೂ ಕಬ್ಬಿಣದಂತಾಗಿವೆ" ಅವರು ನಗುತ್ತಾ ಹೇಳುತ್ತಾರೆ.

50 ವರ್ಷಗಳಿಗಿಂತ ಹೆಚ್ಚು ಕಾಲ, 68 ವರ್ಷದ ದಿಲವಾರ್ ಅವರು ಕಾದಿರುವ ಕಬ್ಬಿಣ ಮತ್ತು ಕಾರ್ಬನ್‌ ಸ್ಟೀಲ್ ಹದಗೊಳಿಸಲು ದಿನಕ್ಕೆ ಕನಿಷ್ಠ 500 ಬಾರಿ ಸುತ್ತಿಗೆಯಿಂದ ಹೊಡೆದಿದ್ದಾರೆ. ಕಳೆದ 55 ವರ್ಷಗಳಲ್ಲಿ, ಅವರು ತಮ್ಮ ಸಾಂಪ್ರದಾಯಿಕ ಐದು ಕಿಲೋಗ್ರಾಂಗಳಷ್ಟು ಭಾರದ ಘನದಿಂದ (ಲೋಹದ ಸುತ್ತಿಗೆ) ಈ ಲೋಹಗಳ ಮೇಲೆ ಕನಿಷ್ಠ 80 ಲಕ್ಷ ಸಲ ಹೊಡೆದಿದ್ದಾರೆ.

ಸಾಂಗ್ಲಿ ಜಿಲ್ಲೆಯ ವಾಲ್ವಾ ತಾಲೂಕಿನ ಬಗಾನಿ ಗ್ರಾಮದಲ್ಲಿ ವಾಸಿಸುವ ಶಿಕಲ್‌ಗಾರ್ ಕುಟುಂಬದ ಕಮ್ಮಾರರು ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಈ ಕೆಲಸವನ್ನು ಮಾಡುತ್ತಿದ್ದಾರೆ -‌ ಇವರು ವಿವಿಧ ರೀತಿಯ ಸಾಧನಗಳನ್ನು ಕೈಯಿಂದಲೇ ತಯಾರಿಸುತ್ತಾರೆ, ಇವುಗಳನ್ನು ಮನೆ ಮತ್ತು ಹೊಲಗಳಲ್ಲಿ ಬಳಸಲಾಗುತ್ತದೆ. ಎಲ್ಲಕ್ಕಿಂತ ಅವರು ಅತ್ಯುತ್ತಮವಾದ ಅಡಕತ್ತರಿಗಳನ್ನು ಅಥವಾ ಅಡ್ಕಿಟ್ಟಾಗಳನ್ನು (ಮರಾಠಿಯಲ್ಲಿ) ಕೈಯಿಂದ ತಯಾರಿಸುವುದರಲ್ಲಿ ಹೆಚ್ಚು ಹೆಸರುವಾಸಿ- ಅವುಗಳು ವಿನ್ಯಾಸ, ಬಾಳಿಕೆ ಮತ್ತು ತಮ್ಮ ಹರಿತವಾದ ತುದಿಗಳಿಂದ ವಿಶಿಷ್ಟವೆನ್ನಿಸಿಕೊಂಡಿವೆ.

ಈ ಅಡಕತ್ತರಿಗಳು ನಾಲ್ಕು ಇಂಚುಗಳಿಂದ ಎರಡು ಅಡಿಗಳ ತನಕ ವಿವಿಧ ಅಳತೆಗಳಲ್ಲಿ ಸಿಗುತ್ತವೆ. ಸಣ್ಣ ಅಡಕತ್ತರಿಗಳನ್ನು ಅಡಿಕೆ, ಕಾಚು(ಕತ್ತ) ಒಣಕೊಬ್ಬರಿ ಮತ್ತು ಸುತ್ತಲಿ ದಾರ ಕತ್ತರಿಸಲು ಬಳಸಲಾಗುತ್ತದೆ. ದೊಡ್ಡ ಅಡಕತ್ತರಿಗಳನ್ನು ಚಿನ್ನಾಭರಣ ಮತ್ತು ಬೆಳ್ಳಿಯ ತಯಾರಕರು ಚಿನ್ನ-ಬೆಳ್ಳಿ ಕತ್ತರಿಸಲು ಬಳಸುತ್ತಾರೆ. ಮತ್ತು ದೊಡ್ಡ ಅಡಿಕೆಯನ್ನು ಸಣ್ಣ ಚೂರುಗುಳಾಗಿ ಕತ್ತರಿಸಿ ಮಾರುವವರು ಸಹ ಬಳಸುತ್ತಾರೆ.

ಶಿಕಲ್‌ಗಾರ್ ಕುಟುಂಬವು ತಯಾರಿಸುವ ಅಡಕತ್ತರಿಗಳು ಬಹಳ ಹಿಂದಿನಿಂದಲೂ ಹೆಸರುವಾಸಿಯಾಗಿದ್ದು, ಅವುಗಳನ್ನು ಖರೀದಿಸಲು ಸ್ಥಳೀಯ ಮತ್ತು ದೂರದ ಊರುಗಳ ಜನರು ಬಗಾನಿಗೆ ಹುಡುಕಿ ಬರುತ್ತಾರೆ. ಜನರು ಮಹಾರಾಷ್ಟ್ರದ ಅಕ್ಲುಜ್, ಕೊಲ್ಹಾಪುರ, ಉಸ್ಮಾನಾಬಾದ್, ಸಾಂಗೋಲ್, ಸಾಂಗ್ಲಿ ಮತ್ತು ಕರ್ನಾಟಕದ ಅಥಣಿ, ಬಿಜಾಪುರ, ರಾಯಭಾಗ್ ಮತ್ತು ಇತರ ಸ್ಥಳಗಳಿಂದ ಇಲ್ಲಿಗೆ ಬರುತ್ತಾರೆ.

Dilawar Shikalgar – here with and his son Salim – uses a hammer to shape an iron block into a nut cutter or adkitta of distinctive design and durability
PHOTO • Sanket Jain
Dilawar Shikalgar – here with and his son Salim – uses a hammer to shape an iron block into a nut cutter or adkitta of distinctive design and durability
PHOTO • Sanket Jain

ದಿಲಾವರ್ ಶಿಕಲ್ಗಾರ್ - ‌ಇಲ್ಲಿ ಅವರ ಮಗನೊಂದಿಗೆ ಸೇರಿ ಕುಲುಮೆಯಿಂದ ತೆಗೆದ ಕಬ್ಬಿಣದ ತುಂಡನ್ನು ಸುತ್ತಿಗೆಯಿಂದ ಬಡಿದು ಹದಗೊಳಿಸಿ ವಿಶಿಷ್ಟ ವಿನ್ಯಾಸ ಮತ್ತು ಬಾಳಿಕೆ ಬರುವ ಅಡ್ಕಿಟ್ಟಾ ಅಥವಾ ಅಡಕತ್ತರಿಯನ್ನು ತಯಾರಿಸುತ್ತಾರೆ.

"ನಾನು ತಯಾರಿಸಿದ ಅಡಕತ್ತರಿಗಳ ಸಂಖ್ಯೆ ಲೆಕ್ಕವಿಲ್ಲ" ಎಂದು ದಿಲಾವರ್‌ ಹೇಳುತ್ತಾರೆ. ಅಡಕತ್ತರಿಯಲ್ಲದೆ ಅವರು ಖುರ್ಪಿ (ಸಣ್ಣ ಕುಡಗೋಲು), ವಿಲಾ (ಕುಡಗೋಲು), ವಿಲಾಟಿ (ತರಕಾರಿ ಕತ್ತರಿಸುವ ಉಪಕರಣ), ಕಡ್ಬಾ ಕಪಾಯ್ಚಿ ವಿಲಾಟಿ (ಮೇವು ಕತ್ತರಿಸುವ ಬ್ಲೇಡ್)‌, ಧಂಗರಿ ಕುರ್ಹಾದ್ , ತೋಟಗಾರಿಕೆ ಕತ್ತರಿ, ದ್ರಾಕ್ಷಿ ಬಳ್ಳಿ ಕತ್ತರಿಸುವ ಕತ್ತರಿ, ಪತ್ರ ಕಪಾಯ್ಚಿ (ಛಾವಣಿಯ ಶೀಟ್‌ಗಳನ್ನು ಕತ್ತರಿಸುವ ಕತ್ತರಿ), ಮತ್ತು ಬಾರ್ಚಾ (ಮೀನುಗಳನ್ನು ಕೊಲ್ಲುವ ಸಾಧನ) ಇವೆಲ್ಲವನ್ನೂ ತಯಾರಿಸುತ್ತಾರೆ.

ದಿಲಾವರ್, ಅವರ 41 ವರ್ಷದ ಮಗ ಸಲೀಮ್ ಸೇರಿದಂತೆ, ಪ್ರಸ್ತುತ ಬಗಾನಿಯಲ್ಲಿ ವೃತ್ತಿಯಲ್ಲಿ ಉಳಿದಿರುವ ಕೇವಲ ನಾಲ್ಕು ಕಮ್ಮಾರರಲ್ಲಿ ಹಿರಿಯರು. (ಇತರ ಇಬ್ಬರು ಸಲೀಂ ಅವರ ಸೋದರಸಂಬಂಧಿಗಳಾದ ಹರುಣ್ ಮತ್ತು ಸಮೀರ್ ಶಿಕಲ್‌ಗಾರ್.) 1950 ಮತ್ತು 60ರ ದಶಕಗಳಲ್ಲಿ ತಮ್ಮ ಗ್ರಾಮದಲ್ಲಿ ಈ ಕೆಲಸ ಮಾಡುವ 10–15 ಜನರಿದ್ದರು ಎಂದು ದಿಲಾವರ್ ಹೇಳುತ್ತಾರೆ. ಅವರಲ್ಲಿ ಕೆಲವರು ಸಾವನ್ನಪ್ಪಿದ್ದಾರೆ, ಉಳಿದವರು ಕೃಷಿ ಉಪಕರಣಗಳನ್ನು ತಯಾರಿಸಲು ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದಾರೆ ಏಕೆಂದರೆ ಅಡಕತ್ತರಿಗಳಿಗೆ ಬೇಡಿಕೆ ಕಡಿಮೆಯಾಗಿದೆ, ಮತ್ತು ಅದನ್ನು ತಯಾರಿಸಲು ಅವರಿಗೆ ಹೆಚ್ಚು ಸಮಯ ಮತ್ತು ತಾಳ್ಮೆ ಬೇಕಾಗುತ್ತದೆ, ಆದರೆ ಉತ್ತಮ ಉತ್ತಮ ಬೆಲೆ ಸಿಕ್ಕುವುದಿಲ್ಲ. ದಿಲಾವರ್ ಹೇಳುತ್ತಾರೆ "ಇದು ಸಾಕಷ್ಟು ಕೌಶಲ್ಯ ಮತ್ತು ಕಠಿಣ ಪರಿಶ್ರಮದ ಅಗತ್ಯವಿರುವ ಕೆಲಸ."

ಶಿಕಲ್‌ಗಾರ್‌ ಕುಟುಂಬದ ಆರನೇ ತಲೆಮಾರು ತಮ್ಮ ಲೋಹದ ಕಲೆಯನ್ನು ಜೀವಂತವಾಗಿರಿಸಿಕೊಳ್ಳುತ್ತಿದೆ. ದಿಲವರ್‌ ಅವರ ಮಗ ಸಲೀಮ್ ಕುಟುಂಬ ಉದ್ಯೋಗವನ್ನು ಮುಂದುವರೆಸುತ್ತಿರುವುದು ಅವರಿಗೆ ಸಮಾಧಾನ ನೀಡಿದೆ. "ಈಗ ಉದ್ಯೋಗಗಳು ಎಲ್ಲಿವೆ? ಕೆಲಸ ಸಿಗದೆ ಹೋದರೆ ಏನು ಮಾಡುತ್ತೀರಿ? ಕೌಶಲಗಳು ಎಂದಿಗೂ ವ್ಯರ್ಥವಾಗುವುದಿಲ್ಲ ಅವು ಬದುಕಲು ದಾರಿ ತೋರಿಸುತ್ತವೆ" ಎನ್ನುತ್ತಾರೆ ದಿಲಾವರ್.

ದಿಲಾವರ್‌ ತನ್ನ 13ನೇ ವಯಸ್ಸಿನಲ್ಲಿ ತಂದೆ ಮಕ್ಬೂಲ್‌ ಅವರೊಂದಿಗೆ ಅಡಕತ್ತರಿಗಳನ್ನು ತಯಾರಿಸುವ ಕೆಲಸದಲ್ಲಿ ತೊಡಗಿಸಿಕೊಂಡರು. ತನ್ನ ತಂದೆಗೆ ಕೆಲಸದಲ್ಲಿ ಸಹಾಯಕರು ಸಿಗುತ್ತಿರಲಿಲ್ಲವಾದ ದಿಲಾವರ್‌ ಎಂಟನೇ ತರಗತಿಗೆ ಶಾಲೆಯನ್ನು ಬಿಟ್ಟು ತನ್ನ ಕುಟುಂಬ ವೃತ್ತಿಯನ್ನು ಸೇರಬೇಕಾಯಿತು. ಆ ಸಮಯದಲ್ಲಿ ಒಂದು ಅಡಕತ್ತರಿಯನ್ನು 4 ರೂಪಾಯಿಗೆ ಮಾರಲಾಗುತ್ತಿತ್ತು. "ಆಗೆಲ್ಲ ಎರಡು ರೂಪಾಯಿ ಇದ್ದರೆ ಇಲ್ಲಿಂದ ಸಾಂಗ್ಲಿ ನಗರಕ್ಕೆ ಹೋಗಿ ಸಿನೆಮಾ ನೋಡಿ ಬರಬಹುದಿತ್ತು" ಎಂದು ಆ ದಿನಗಳನ್ನು ನೆಪಿಸಿಕೊಳ್ಳುತ್ತಾರೆ ದಿಲಾವರ್.

ದಿಲಾವರ್‌ ಅವರು ತಮ್ಮ ದಿವಂಗತ ತಂದೆ ಹೇಳಿದ ಕತೆಯೊಂದನ್ನು ನೆನಪಿಸಿಕೊಳ್ಳುತ್ತಾರೆ. ಶಿಕಲ್‌ಗಾರ್‌ಗಳ ಅಡಕತ್ತರಿ ತಯಾರಿಸುವ ಕುಶಲತೆಯನ್ನು ಕಂಡು ಚಕಿತರಾಗಿದ್ದ ಬ್ರಿಟಿಷ್‌ ಅಧಿಕಾರಿಗಳು ಮಿರಾಜ್‌ನಲ್ಲಿ (ಬಗಾನಿಯಿಂದ 40 ಕಿಲೊಮೀಟರ್ ದೂರ) ಸಾಂಗ್ಲಿ ಸಂಸ್ಥಾನದ ಜನರ ಕರಕುಶಲ ಕಲೆ ಪ್ರದರ್ಶನ ಏರ್ಪಡಿಸಿದ್ದರು. "ಅವರು ನನ್ನ ಮುತ್ತಜ್ಜ ಇಮಾಮ್‌ ಶಿಕಲ್‌ಗಾರ್‌ ಅವರನ್ನು ಸಹ ಆಹ್ವಾನಿಸಿದ್ದರು. ಅವರು ತಯಾರಿಸಿದ ಅಡಕತ್ತರಿಯನ್ನು ನೋಡಿದ ಅಧಿಕಾರಿಗಳು ʼಇದನ್ನು ಯಂತ್ರಗಳನ್ನು ಬಳಸಿ ತಯಾರಿಸಿದ್ದೀರಾʼ ಎಂದು ಕೇಳಿದ್ದರು ಆಗ ನಮ್ಮ ತಾತ ʼಇಲ್ಲʼ ಎಂದಿದ್ದರು." ಸ್ವಲ್ಪ ದಿನ ಕಳೆದ ನಂತರ ಅವರು ಮತ್ತೆ ತಾತನನ್ನು ಕರೆಸಿಕೊಂಡರು ಯಾಕೆಂದರೆ ಆ ಉತ್ತಮ ಅಡಕತ್ತರಿಗಳನ್ನು ಪುನಃ ನೋಡಲು ಬಯಸಿದ್ದರು. "ಆಗ ಆ ಅಧಿಕಾರಿಗಳು ನಮ್ಮ ತಾತನನ್ನು ʼಅಗತ್ಯ ವಸ್ತುಗಳನ್ನೆಲ್ಲ ನೀಡಿದರೆ ಈ ಅಡಕತ್ತರಿಯನ್ನು ನಮ್ಮೆದುರೇ ತಯಾರಿಸಲು ಸಾಧ್ಯವೇ?ʼ ಎಂದು ಕೇಳಿದ್ದರು. ಆಗ ನಮ್ಮ ತಾತ ʼತಯಾರಿಸಬಹುದುʼ ಎಂದು ಒಪ್ಪಿಕೊಂಡಿದ್ದರು.

Dilawar (left) meticulously files off swarfs once the nut cutter’s basic structure is ready; Salim hammers an iron rod to make the lower handle of an adkitta
PHOTO • Sanket Jain
Dilawar (left) meticulously files off swarfs once the nut cutter’s basic structure is ready; Salim hammers an iron rod to make the lower handle of an adkitta
PHOTO • Sanket Jain

ಅಡಕತ್ತರಿಯ ಮೂಲ ರಚನೆ ಸಿದ್ಧವಾದ ನಂತರ ದಿಲವಾರ್ (ಎಡ) ಅದರಲ್ಲಿನ ಸಿಬಿರುಗಳನ್ನು ತೆಗೆದು ಹಾಕುತ್ತಿರುವುದು. ಅಡಕತ್ತರಿಯ ಹಿಡಿಕೆಗಾಗಿ ಸಲೀಮ್‌ ಕಬ್ಬಿಣದ ರಾಡ್‌ ಅನ್ನು ಹದಗೊಳಿಸುತ್ತಿರುವುದು.

"ಇದೇ ಪ್ರದರ್ಶನಕ್ಕೆ ತನ್ನ ಇಕ್ಕಳಗಳೊಂದಿಗೆ ಬಂದಿದ್ದ ಇನ್ನೊಬ್ಬ ಕುಶಲ ಕರ್ಮಿ ಬ್ರಿಟಿಷರು ಇದೇ ಪ್ರಶ್ನೆಗಳನ್ನು ಕೇಳಿದಾಗ ʼಅವು ಯಂತ್ರಗಳಿಂದ ತಯಾರಿಸಿದ್ದೆಂದುʼ ತಪ್ಪೊಪ್ಪಿಕೊಂಡು ಓಡಿ ಹೋಗಿದ್ದನು. ಬ್ರಿಟಿಷರು ತುಂಬಾ ಬುದ್ಧಿವಂತರು" ಎಂದು ದಿಲಾವರ್‌ ನಗುತ್ತಾ ಹೇಳುತ್ತಾರೆ. "ಬ್ರಿಟಿಷರಿಗೆ ಈ ಕಲೆ ಎಷ್ಟು ಮುಖ್ಯವಾದುದು ಎನ್ನುವುದು ತಿಳಿದಿತ್ತು".  ಕೆಲವು ಇಂಗ್ಲಿಷ್‌ ಜನರು ದಿಲಾವರ್‌ ಕುಟುಂಬ ತಯಾರಿಸಿದ ಅಡಕತ್ತರಿಗಳನ್ನು ಬ್ರಿಟನ್‌ಗೆ ಕೊಂಡೊಯ್ದಿದ್ದಾರೆ. ಮತ್ತೆ ಇದೇ ಶಿಕಲ್‌ಗಾರ್‌ ಕುಟುಂಬ ಮಾಡಿದ ಅಡಕತ್ತರಿಗಳು ಅಮೇರಿಕಾಕ್ಕೂ ಪ್ರಯಾಣಿಸಿವೆ.

1972ರಲ್ಲಿ ಇಲ್ಲಿನ ಹಳ್ಳಿಗಳಲ್ಲಿ ಬರಗಾಲ ಅಧ್ಯಯನ ಮಾಡಲು ಅಮೇರಿಕಾದಿಂದ ಕೆಲವು ಸಂಶೋಧಕರು ಬಂದಿದ್ದರು. ಅವರೊಂದಿಗೆ ಭಾಷಾಂತರಕಾರರೂ ಇದ್ದರು. ದಿಲಾವರ್‌ ಹೇಳುವಂತೆ "ಈ ವಿದ್ವಾಂಸರು ಇಲ್ಲಿಗೆ ಹತ್ತಿರದ ಹಳ್ಳಿಯಾದ ನಾಗಾಂವ್‌ನ ರೈತನೊಬ್ಬನ ಮನೆಗೆ ಭೇಟಿ ನೀಡಿದ್ದಾಗ ಆ ರೈತನು ಅವರಿಗೆ ಚಹಾ ನೀಡಿ ಅಡಿಕೆ ಕತ್ತರಿಸಲು ಕುಳಿತುಕೊಂಡನು. ಆಗ ಅವನ ಕೈಯಲ್ಲಿದ್ದ ಅಡಕತ್ತರಿಯನ್ನು ನೋಡಿದ ಆ ವಿದ್ವಾಂಸರು ಅದರ ಕುರಿತು ವಿಚಾರಿಸಿದಾಗ ಅದು ಶಿಕಲ್‌ಗಾರ್‌ ಕಮ್ಮಾರ ಸಾಲೆಯಲ್ಲಿ ತಯಾರಿಸಿದ್ದೆಂದು ಅವರಿಗೆ ತಿಳಿಯಿತು. ನಂತರ ಅವರು ನನ್ನ ಬಳಿ ಬಂದರು. ಅವರು 10 ಅಡಕತ್ತರಿ ತಯಾರಿಸಕೊಡಲು ಹೇಳಿದರು. ನಾನು ಒಂದು ತಿಂಗಳಲ್ಲಿ ತಯಾರಿಸಿಕೊಟ್ಟೆ. ಒಟ್ಟು ಹತ್ತು ಅಡಕ್ತತರಿಗಳಿಗೆ 150 ರೂಪಾಯಿ ಹೇಳಿದ್ದೆ. ಆದರೆ ಅವರು ಸೌಜನ್ಯದ ನಡೆಯಾಗಿ 150ರ ಜೊತೆಗೆ ಇನ್ನೂ 100 ರೂಪಾಯಿ ಹೆಚ್ಚಿಗೆ ನೀಡಿದರು." ಇದನ್ನು ಹೇಳುವಾಗ ಅವರ ಮುಖದಲ್ಲಿ ಸಂತೋಷ ಎದ್ದು ಕಾಣುತ್ತಿತ್ತು.

ಇಂದಿಗೂ ಶಿಕಲ್‌ಗಾರ್‌ ಕುಟುಂಬವು 12 ವಿವಿಧ ಬಗೆಯ ಅಡಕತ್ತರಿಗಳನ್ನು ತಯಾರಿಸುತ್ತದೆ. "ನಾವು ಗ್ರಾಹಕರು ಬಯಸಿದಂತೆ ಮಾರ್ಪಾಡುಗಳನ್ನು ಕೂಡ ಮಾಡಿಕೊಡುತ್ತೇವೆ" ಎನ್ನುತ್ತಾರೆ ಸಲೀಮ್.‌ ಇವರು ನಗರದ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ)ಯಿಂದ ಮೆಷಿನ್ ಟೂಲ್ಸ್ ಗ್ರೈಂಡಿಂಗ್ ಕೋರ್ಸ್ ತೆಗೆದುಕೊಂಡು 2003ರಿಂದ ತನ್ನ ತಂದೆಗೆ ಸಹಾಯ ಮಾಡಲು ಪ್ರಾರಂಭಿಸಿದ್ದಾರೆ. ಅವರ ಕಿರಿಯ ಸಹೋದರ ಜಾವೇದ್, 38, ಕುಟುಂಬದ ವ್ಯಾಪಾರದಲ್ಲಿ ಸಾಕಷ್ಟು ಆಸಕ್ತಿ ಹೊಂದಿಲ್ಲ, ಅವರು ಲಾತೂರ್ ನಗರ ನೀರಾವರಿ ವಿಭಾಗದಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಾರೆ.

ಪಶ್ಚಿಮ ಮಹಾರಾಷ್ಟ್ರದ ಕಡೆ ಪುರುಷ ಮತ್ತು ಮಹಿಳೆಯರಿಬ್ಬರೂ ಕಮ್ಮಾರರಾಗಿ ಕೆಲಸ ಮಾಡುತ್ತಾರಾದರೂ, ಬಗಾನಿ ಗ್ರಾಮದಲ್ಲಿ ಹಾಗಿಲ್ಲ, ದಿಲವಾರ್ ಹೇಳುವಂತೆ, “ಮೊದಲಿನಿಂದಲೂ ಇಲ್ಲಿ ಪುರುಷರು ಮಾತ್ರ ಅಡ್ಕಿಟ್ಟಾಗಳನ್ನು ತಯಾರಿಸುತ್ತಿದ್ದಾರೆ.” ದಿಲಾವರ್ ಅವರ ಪತ್ನಿ 61 ವರ್ಷದ ಜೈತುನ್ಬಿ ಮತ್ತು ಸಲೀಂ ಅವರ ಪತ್ನಿ ಅಫ್ಸಾನಾ (35) ಇಬ್ಬರೂ ಗೃಹಿಣಿಯರು.

ತಮ್ಮ ಅಡಕತ್ತರಿ ತಯಾರಿಸುವ ಕೆಲಸದಲ್ಲಿ ತೊಡಗುತ್ತಾ ಸಲೀಮ್‌ ಹೇಳುತ್ತಾರೆ. "ನೀವು ಇಲ್ಲಿ ಯಾವುದೇ ವರ್ನಿಯರ್ ಕಾಲಿಪರ್‌ಗಳು ಅಥವಾ ಸ್ಕೇಲ್‌ಗಳನ್ನು ಕಾಣಲು ಸಾಧ್ಯವಿಲ್ಲ ಎನ್ನುತ್ತಾರೆ. "ಆಮ್ಚ್ಯಾ ನಜ್ರೆತ್ ಬಸ್ಲಾ ಆಹೆ [ನಮ್ಮ ಕಣ್ಣುಗಳೇ ಅದೆಲ್ಲ ಕೆಲಸವನ್ನು ಮಾಡಲು ಸಾಕು]" ಎನ್ನುತ್ತಾರೆ ದಿಲಾವರ್.‌ ಅಡಕತ್ತರಿಯ ಮೇಲಿನ ಹ್ಯಾಂಡಲ್‌ ಅನ್ನು ಸಾಧಾರಣ ಪಟ್ಟಿ (ಕಾರ್ಬನ್‌ ಸ್ಟೀಲ್‌ನಿಂದ ಮಾಡಲಾದ ಲೀಫ್‌ ಸ್ಪ್ರಿಂಗ್)‌ ಬಳಸಿ ಮಾಡಲಾಗುತ್ತದೆ. ಕೆಳಗಿನ ಹ್ಯಾಂಡಲ್‌ಗೆ ಲೋಖಂಡ್ ಸಾಲಿ (ಕಬ್ಬಿಣದ ರಾಡ್) ಬಳಸಲಾಗುತ್ತದೆ. ಬಗಾನಿಯಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಕೊಲ್ಹಾಪುರ ಅಥವಾ ಸಾಂಗ್ಲಿ ನಗರದಲ್ಲಿ ಸಲೀಮ್‌ ಕಿಲೋಗೆ ಸರಿಸುಮಾರು 80 ರೂಪಾಯಿ ಕೊಟ್ಟು ಒಂದು ಕಿಲೋ ಲೀಫ್‌ ಸ್ಪ್ರಿಂಗ್‌ ಖರೀದಿಸಿ ತರುತ್ತಾರೆ. ಇದೇ ಕಬ್ಬಿಣವನ್ನು ದಿಲವಾರ್‌ ಅವರು 1960ರ ದಶಕದಲ್ಲಿ ಕೇವಲ 50 ಪೈಸೆಗಳಿಗೆ ಖರೀದಿಸುತ್ತಿದ್ದರು.

After removing it from the forge, the red-hot carbon steel (top left) is hammered by a machine for a while (top-right). Then it is manually hammered using a ghan or hammer (bottom left) to shape it into a nut cutter (bottom right)
PHOTO • Sanket Jain

ಕುಲುಮೆಯಿಂದ ತೆಗೆದ ನಂತರ, ಕುಲುಮೆಯಲ್ಲಿ ಕಾದ ಕಾರ್ಬನ್‌ ಸ್ಟೀಲ್‌ ಅನ್ನು (ಮೇಲಿನ ಎಡ ಚಿತ್ರ) ಸ್ವಲ್ಪ ಸಮಯದವರೆಗೆ ಯಂತ್ರದಿಂದ ಬಡಿದು ಹದಮಾಡಲಾಗುತ್ತದೆ (ಮೇಲಿನ ಬಲ ಚಿತ್ರ). ನಂತರ ಒಂದು ಘನ್ ಅಥವಾ ಸುತ್ತಿಗೆ ಬಳಸಿ (ಕೆಳಗಿನ ಎಡ‌ ಚಿತ್ರ) ಕೈಯಿಂದ ಹೊಡೆದು ಅದನ್ನು ಬೇಕಾದ (ಕೆಳಗಿನ ಬಲ ಚಿತ್ರ) ಆಕಾರಕ್ಕೆ ತರಲಾಗುತ್ತದೆ.

ತಂದೆ ಮತ್ತು ಮಗನ ಕೆಲಸ ಸಾಮಾನ್ಯವಾಗಿ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ಕನಿಷ್ಠ 10 ಗಂಟೆಗಳ ಕಾಲ ದಿನದ ಕೆಲಸ ನಡೆಯುತ್ತದೆ. ಕುಲುಮೆಯಲ್ಲಿ ಕಾರ್ಬನ್ ಸ್ಟೀಲ್ ಕಾಯಿಸುವುದರ ಮೂಲಕ ಸಲೀಮ್ ಪಾಲಿನ ಕೆಲಸ ಶುರುವಾಗುತ್ತದೆ ಮತ್ತು ನಂತರ ಬ್ಲೋವರ್ ಕಡೆಗೆ ಹೋಗುತ್ತಾರೆ. ಕೆಲವು ನಿಮಿಷಗಳ ನಂತರ, ಅವರು ಕಾದಿರುವ ಕಾರ್ಬನ್‌ ಸ್ಟೀಲ್‌ ಅನ್ನು ಚಪ್ಪಟೆ ಇಕ್ಕಳದಿಂದ ಎತ್ತಿಕೊಂಡು ಯಂತ್ರದ ಸುತ್ತಿಗೆಯ ಕೆಳಗೆ ಇಡುತ್ತಾರೆ. ಈ ಯಂತ್ರವನ್ನು ಕೊಲ್ಹಾಪುರದಿಂದ 2012ರಲ್ಲಿ 1.5 ಲಕ್ಷ ರೂ ಕೊಟ್ಟು ತರಲಾಗಿದೆ, ಇದಕ್ಕೂ ಮೊದಲು ಶಿಕಲ್‌ಗಾರ್‌ ಕುಟುಂಬ ಭಾರಿ ತೂಕದ ಸುತ್ತಿಗೆಯನ್ನು ಎತ್ತಿ ಕಬ್ಬಿಣವನ್ನು ಬಡಿಯುವುದರ ಮೂಲಕ ತಮ್ಮ ದೇಹ ಮತ್ತು  ಮೂಳೆಗಳನ್ನು ಅಪಾಯಕ್ಕೆ ಈಡು ಮಾಡಿಕೊಳ್ಳುತ್ತಿದ್ದರು.

ಯಂತ್ರವು ಕಾರ್ಬನ್‌ ಸ್ಟೀಲನ್ನು ಸ್ವಲ್ಪ ಸಮಯ ಬಡಿದು ಚಪ್ಪಟೆಗೊಳಿಸಿದ ನಂತರ, ಸಲೀಮ್‌ ಅದನ್ನು 50 ಕೆಜಿ ಕಬ್ಬಿಣದ ತುಂಡಿನ ಮೇಲಿಡುತ್ತಾರೆ. ದಿಲಾವರ್‌ ಅದನ್ನು ಸುತ್ತಿಗೆ ಬಳಸಿ ಕೈಯಿಂದ ಬಡಿದು ಅದನ್ನು ಬೇಕಾದ ಆಕಾರಕ್ಕೆ ತರುತ್ತಾರೆ. ಸಲೀಮ್‌ ಅವರ ಪ್ರಕಾರ "ಮಷೀನ್‌ ಬಳಸಿ ಕಬ್ಬಿಣವನ್ನು ಸರಿಯಾದ ಆಕಾರಕ್ಕೆ ತರುವುದು ಸಾಧ್ಯವಿಲ್ಲ". ಕುಲುಮೆಯಲ್ಲಿ ಕಾಯಿಸಿ ಸುತ್ತಿಗೆಯಿಂದ ಬಡಿದು ಸರಿಯಾದ ಆಕಾರಕ್ಕೆ ತರುವ ಈ ಪ್ರಕ್ರಿಯೆ ಸುಮಾರು 90 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ಅಡಕತ್ತರಿಯ ಮೂಲ ಆಕಾರ ಸಿದ್ಧವಾದ ನಂತರ, ಕಾರ್ಬನ್‌ ಸ್ಟೀಲನ್ನು ಹಿಡಿದಿಡಲು ವೈಸ್‌(ಉಪಕರಣ) ಬಳಸುತ್ತಾರೆ. ನಂತರ, ಅವರು ಕೊಲ್ಹಾಪುರ ನಗರದ ಹಾರ್ಡ್‌ವೇರ್ ಅಂಗಡಿಯಲ್ಲಿ ಖರೀದಿಸಿದ ವಿವಿಧ ರೀತಿಯ ಕಾನಾಗಳನ್ನು (ಕಬ್ಬಿಣ ಉಜ್ಜಲು ಬಳಸುವ ಪರಿಕರಗಳು) ಬಳಸಿ ಅದರಲ್ಲಿರುವ ಸಿಬಿರುಗಳನ್ನು ತೆಗೆಯುತ್ತಾರೆ.

ಆಡ್ಕಿಟ್ಟಾದ ಆಕಾರವನ್ನು ಹಲವು ಬಾರಿ ಪರಿಶೀಲಿಸಿದ ನಂತರ, ಅವರು ಅದರ ಬ್ಲೇಡ್ ಅನ್ನು ಹರಿತಗೊಳಿಸಲು ಪ್ರಾರಂಭಿಸುತ್ತಾರೆ. ಅವರು ಹೇಳುವಂತೆ ಅವರ ಅಡಕತ್ತರಿಯು ಎಷ್ಟು ಹರಿತವಾಗಿರುತ್ತದೆಂದರೆ ಮುಂದಿನ ಹತ್ತು ವರ್ಷಗಳ ಕಾಲ ನೀವು ಅದ್ಕಕೆ ಸಾಣೆ ಹಿಡಿಸಬೇಕಿಲ್ಲ.

ಒಂದು ಅಡ್ಕಿಟ್ಟಾ ತಯಾರಿಸಲು ಶಿಕಲ್‌ಗಾರ್‌ಗಳಿಗೆ ಈಗ ಐದು ಗಂಟೆ ಬೇಕಾಗುತ್ತದೆ. ಮೊದಲು ಎಲ್ಲವನ್ನು ಕೈಯಿಂದಲೇ ಮಾಡುತ್ತಿದ್ದ ಕಾಲದಲ್ಲಿ ಇದರ ಎರಡರಷ್ಟು ಸಮಯ ಹಿಡಿಸುತ್ತಿತ್ತು. "ಈಗ ನಾವು ಕೆಲಸವನ್ನು ವಿಂಗಡಿಸಿಕೊಂಡಿದ್ದೇವೆ" ಎಂದು ಸಲೀಮ್‌ ಹೇಳುತ್ತಾರೆ. ಈಗ ಸಲೀಮ್‌ ಅವರು ಕಬ್ಬಿಣವನ್ನು ಕುಲುಮೆಯಲ್ಲಿ ಕಾಯಿಸಿ ಅದನ್ನು ಬಡಿದು ಅದರ ಆಕಾರವನ್ನು ರೂಪಿಸಿದರೆ ಅವರ ತಂದೆ ಅದನ್ನು ಫೈಲ್‌ ಮಾಡಿ ಹರಿತ ಮಾಡುವುದರತ್ತ ಗಮನಹರಿಸುತ್ತಾರೆ.

Dilawar also makes and sharpens tools other than adkittas. 'This side business helps us feed our family', he says
PHOTO • Sanket Jain
Dilawar also makes and sharpens tools other than adkittas. 'This side business helps us feed our family', he says
PHOTO • Sanket Jain

ದಿಲಾವರ್ ಅಡ್ಕಿಟ್ಟಾಗಳಲ್ಲದೆ ಇತರ ಸಾಧನಗಳನ್ನೂ ತಯಾರಿಸುತ್ತಾರೆ ಮತ್ತು ಹರಿತಗೊಳಿಸುತ್ತಾರೆ. 'ಈ ಉಪ ವ್ಯವಹಾರವು ನಮ್ಮ ಕುಟುಂಬವನ್ನು ಪೋಷಿಸಲು ಸಹಾಯ ಮಾಡುತ್ತದೆ' ಎಂದು ಅವರು ಹೇಳುತ್ತಾರೆ

ಸಿದ್ಧಪಡಿಸಿದ ಅಡಕತ್ತರಿಯನ್ನು ಅದರ ವಿನ್ಯಾಸ ಮತ್ತು ಗಾತ್ರಕ್ಕೆ ಅನುಗುಣವಾಗಿ 500 ರಿಂದ 1,500 ರೂ.ಗೆ ಮಾರಾಟ ಮಾಡಲಾಗುತ್ತದೆ. ಎರಡು ಅಡಿ ಉದ್ದದ ಅಡ್ಕಿಟ್ಟಾ 4,000ದಿಂದ 5,000 ರೂಪಾಯಿ ವೆಚ್ಚವಾಗಬಹುದು. ಇದು ಎಷ್ಟು ಕಾಲ ಬಾಳಿಕೆ ಬರುತ್ತದೆಂದು ಕೇಳಿದರೆ ದಿಲಾವರ್ "ತುಮ್ಹಿ ಆಹೆ ತೋಹ್ ಪರ್ಯಂತ್ ಚಲ್ತೆ [ನೀವು ಇರುವ ತನಕವೂ ಇರುತ್ತದೆ] ಎಂದು ನಗುತ್ತಾ ಉತ್ತರಿಸುತ್ತಾರೆ.

ಆದರೆ ಈಗ ಈ ಗಟ್ಟಿಮುಟ್ಟಾದ ಶಿಕಲ್‌ಗಾರ್‌ ಅಡಕತ್ತರಿಗಳನ್ನು ಮೊದಲಿನಂತೆ ಜನರು ಹುಡುಕಿ ಬರುವುದಿಲ್ಲ. ಮೊದಲೆಲ್ಲ ತಿಂಗಳಿಗೆ 30ರ ತನಕ ಖಾಲಿಯಾಗುತ್ತಿದ್ದ ಅಡಕತ್ತರಿಗಳು ಈಗ 5ರಿಂದ 7 ಮಾರಾಟವಾಗುತ್ತವೆ. "ಮೊದಲು ಜನರು ಹೆಚ್ಚಾಗಿ ಎಲೆಯಡಿಕೆ ತಿನ್ನುತ್ತಿದ್ದರು. ಅವರು ಅಡಿಕೆ ಕತ್ತರಿಸುವ ಸಲುವಾಗಿ ಈ ಅಡಕತ್ತರಿಗಳನ್ನು ಕೊಳ್ಳುತ್ತಿದ್ದರು" ಎನ್ನುತ್ತಾರೆ ದಿಲಾವರ್.‌ "ಹಳ್ಳಿಗಳಲ್ಲಿ ಈಗಿನ ಯುವಕರು ಅಷ್ಟಾಗಿ ಎಲೆಯಡಿಕೆ ತಿನ್ನುವುದಿಲ್ಲ ಬದಲಿಗೆ ಅವರುಗಳು ಪಾನ್‌ಮಸಲಾ ಮತ್ತು ಗುಟ್ಖಾ ತಿನ್ನುತ್ತಾರೆ" ಎನ್ನುತ್ತಾರೆ ಸಲೀಮ್.

ಕೇವಲ ಅಡ್ಕಿಟ್ಟಾಗಳನ್ನು ತಯಾರಿಸುವ ಮೂಲಕ ಸಾಕಷ್ಟು ಸಂಪಾದಿಸುವುದು ಕಷ್ಟವಾದ್ದರಿಂದ, ಕುಟುಂಬವು ಕುಡಗೋಲು ಮತ್ತು ತರಕಾರಿ ಕತ್ತರಿಸುವ ಸಾಧನವನ್ನೂ ಸಹ ತಯಾರಿಸುತ್ತದೆ -  ಇವುಗಳನ್ನು ತಿಂಗಳಿಗೆ ಸುಮಾರು 40ರಷ್ಟು ತಯಾರಿಸುತ್ತಾರೆ. ದಿಲವಾರ್ ಕುಡಗೋಲು ಮತ್ತು ಕತ್ತರಿಗಳನ್ನು ಸಾಣೆಹಿಡಿದು ಕೊಡುತ್ತಾರೆ ಮತ್ತು ಇದರಿಂದ ತಲಾ ರೂ. 30 ಮತ್ತು ರೂ. 50 ರೂ ಸಂಪಾದಿಸುತ್ತಾರೆ. "ಈ ಉಪ ವ್ಯವಹಾರವು ನಮ್ಮ ಕುಟುಂಬವನ್ನು ಪೋಷಿಸಲು ಸಹಾಯ ಮಾಡುತ್ತದೆ" ಎಂದು ಅವರು ಹೇಳುತ್ತಾರೆ. ಕುಟುಂಬದ ಅರ್ಧ ಎಕರೆ ಭೂಮಿಯನ್ನು ಕಬ್ಬು ಬೆಳೆಯುವ ರೈತನಿಗೆ ಗುತ್ತಿಗೆ ನೀಡುವುದರಿಂದ ಅದರಿಂದಲೂ ಒಂದಿಷ್ಟು ಗಳಿಸುತ್ತಾರೆ.

ಆದರೆ ಶಿಕಲ್‌ಗಾರ್ ತಯಾರಿಸುವ ಕುಡಗೋಲುಗಳು ಸ್ಥಳೀಯ ಕಮ್ಮಾರರು ತಯಾರಿಸಿದ ಕಡಿಮೆ ಬೆಲೆಯ ಅಗ್ಗದ ಕಡಿಮೆ-ಗುಣಮಟ್ಟದ ವಸ್ತುಗಳಂದ ಮಾಡಲ್ಪಟ್ಟ ಕುಡುಗೋಲುಗಳೊಂದಿಗೆ ಸ್ಪರ್ಧಿಸಬೇಕಾಗಿದೆ ಎಂದು ಸಲೀಮ್ ಹೇಳುತ್ತಾರೆ. ಇವು ಸುಮಾರು 60 ರೂ.ಗಳಿಗೆ ಲಭ್ಯವಿದ್ದರೆ, ಶಿಕಲ್‌ಗಾರ್ ತಯಾರಿಸಿದ ಕುಡಗೋಲು ಬೆಲೆ 180-200 ರೂ ಬೆಲೆ ಬಾಳುತ್ತವೆ.  "ಜನರು ಈಗ ವಸ್ತುಗಳನ್ನು ಯೂಸ್‌ ಎಂಡ್‌ ಥ್ರೋ ಎಂದು ಪರಿಗಣಿಸುತ್ತಾರೆ, ಮತ್ತು ಅದಕ್ಕಾಗಿಯೇ ಅವುಗಳನ್ನು ಅಗ್ಗದ ಬೆಲೆಗೆ ಬಯಸುತ್ತಾರೆ" ಎಂದು ಅವರು ವಿವರಿಸುತ್ತಾರೆ.

"ಮತ್ತು ಎಲ್ಲಾ ಕಮ್ಮಾರರೂ ಅಡ್ಕಿಟ್ಟಾ ತಯಾರಿಸಲು ಸಾಧ್ಯವಿಲ್ಲ" ಎಂದು ಅವರು ಹೇಳುತ್ತಾರೆ. "ಜಮ್ಲಾ ಪಾಹಿಜೆ" - ಅದಕ್ಕೆ ನೀವು ವಿಶೇಷ ಪರಿಣಿತಿ ಹೊಂದಿರಬೇಕು.

The Shikalgars make tools like sickles (top left), grapevine-cutting scissors (top right) and barchas (a serrated tool to kill fish; bottom right). They use different kinds of kanas (filing tools) to shape the adkitta
PHOTO • Sanket Jain and courtesy: Salim Shikalgar

ಶಿಕಲ್‌ಗಾರ್‌ಗಳು ಕುಡಗೋಲುಗಳು (ಮೇಲಿನ ಎಡ), ದ್ರಾಕ್ಷಿಬಳ್ಳಿ-ಕತ್ತರಿಸುವ ಕತ್ತರಿ (ಮೇಲಿನ ಬಲ) ಮತ್ತು ಬಾರ್ಚ (ಮೀನುಗಳನ್ನು ಕೊಲ್ಲುವ ಹಲ್ಲುಗಳಿರುವ ಸಾಧನ; ಕೆಳಗಿನ ಬಲ). ಅಡ್ಕಿಟ್ಟಾವನ್ನು ರೂಪಿಸಲು ಬಳಸುವ ವಿವಿಧ ರೀತಿಯ ಕಾನಾಗಳು (ಫೈಲಿಂಗ್ ಪರಿಕರಗಳು)

ಇವರ ಕೆಲಸದಲ್ಲಿ ದೈನಂದಿನ ಸವಾಲುಗಳೂ ಇವೆ. ಅವುಗಳಲ್ಲಿ ಒಂದು ಗಾಯಗೊಳ್ಳುವುದು ಅಥವಾ ಅನಾರೋಗ್ಯದ ಸಾಧ್ಯತೆ. ಶಿಕಲ್‌ಗಾರ್‌ಗಳಿಗೆ ಅವರ ಕುಟುಂಬ ವೈದ್ಯರು ಯಾವುದೇ ಕ್ಯಾನ್ಸರ್ ಜನಕಗಳು ಉಸಿರನ್ನು ಸೇರದಂತೆ ಮೆಟಲ್‌ ಫೇಸ್‌ ಮಾಸ್ಕ್‌ ಬಳಸುವಂತೆ ಸೂಚಿಸಿದ್ದಾರೆ. ಆದರೆ ಅವರು ಪದರಗಳಿರುವ ಹತ್ತಿಯ ಮಾಸ್ಕ್‌ ಮಾತ್ರ ಬಳಸುತ್ತಾರೆ ಮತ್ತು ಕೆಲವೊಮ್ಮೆ ಕೈಗವಸುಗಳನ್ನು ಧರಿಸುತ್ತಾರೆ. ಅದೃಷ್ಟವಶಾತ್, ಕುಟುಂಬದಲ್ಲಿ ಯಾರೂ ಇದುವರೆಗೆ ಕೆಲಸದ ಕಾರಣದಿಂದ ಅನಾರೋಗ್ಯವನ್ನು ಅನುಭವಿಸಿಲ್ಲ ಎಂದು ಅವರು ಹೇಳುತ್ತಾರೆ. ಆದರೂ ದಿಲವಾರ್ ಅವರ ಗಾಯಗೊಂಡ ಕೈಬೆರಳು ಸಾಂದರ್ಭಿಕ ಅಪಘಾತದ ಸಾಧ್ಯತೆಗಳನ್ನು ಎತ್ತಿ ತೋರಿಸುತ್ತದೆ.

ಪ್ರತಿ ತಿಂಗಳು, ಅವರು ತಮ್ಮ ಕಮ್ಮಾರಸಾಲೆಗೆ ಕನಿಷ್ಠ 1,000 ರೂ.ಗಳ ವಿದ್ಯುತ್ ಬಿಲ್ ಪಾವತಿಸುತ್ತಾರೆ, ಆದರೆ ಪ್ರತಿದಿನ 4 ರಿಂದ 5 ಗಂಟೆಗಳ ಕಾಲ ವಿದ್ಯುತ್ ಇರುವುದಿಲ್ಲ. ವಿದ್ಯುತ್‌ ಇಲ್ಲದಿರುವ ಸಮಯದಲ್ಲಿ, ಸುತ್ತಿಗೆಯ ಯಂತ್ರ ಮತ್ತು ಗ್ರೈಂಡ್‌ ಮಾಡುವ ಯಂತ್ರ ಕೆಲಸ ಮಾಡಲು ಸಾಧ್ಯವಿಲ್ಲ. ಇದರಿಂದಾಗಿ ಅವರು ಹಲವು ಗಂಟೆಗಳ ಕೆಲಸ ಮತ್ತು ಆದಾಯವನ್ನು ಕಳೆದುಕೊಳ್ಳುತ್ತಾರೆ. "ಇಲ್ಲಿ ವಿದ್ಯುತ್‌ ಕಡಿತಕ್ಕೆ ನಿರ್ದಿಷ್ಟ ಸಮಯವಿಲ್ಲ, ವಿದ್ಯುತ್‌ ಇಲ್ಲದೆ ಯಾವ ಕೆಲಸವೂ ಸಾಗುವುದಿಲ್ಲ" ಎಂದು ಸಲೀಮ್ ಹೇಳುತ್ತಾರೆ.

ಎಲ್ಲ ಅಡೆತಡೆಗಳ ನಡುವೆಯೂ ಶಿಕಲ್‌ಗಾರ್ ಕುಟುಂಬ ಯಾವ ವಸ್ತು ತಯಾರಿಸಿದರೂ ಅದರಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವುದರ ವಿಷಯದಲ್ಲಿ ರಾಜಿಯಾಗುವುದಿಲ್ಲ. ಅವರ ಅಡಕತ್ತರಿಯಂತೆ ಗುಣಮಟ್ಟವೂ ತನ್ನ ಬೆಲೆಯನ್ನು ಕಾಯ್ದುಕೊಂಡಿದೆ. "ಬಗಾನಿ ಅಡ್ಕಿಟ್ಟಾಗಳ ತಯಾರಿಕೆಯ ಪರಂಪರೆಯನ್ನು ಹೊಂದಿದೆ" ಎಂದು ಸಲೀಮ್‌ ಹೇಳುತ್ತಾರೆ. ಪ್ರಸ್ತುತ 4ನೇ ತರಗತಿ ಓದುತ್ತಿರುವ ನನ್ನ ಮಗ ಜುನೈದ್‌ ನಮ್ಮ ಪರಂಪರೆಯನ್ನು ಮುಂದುವರೆಸುತ್ತಾನೆಂದು ಅವರು ಭರವಸೆಯಿಂದ ಹೇಳುತ್ತಾರೆ. "ಜನರು ನಮ್ಮ ಉತ್ಪನ್ನಗಳಿಗಾಗಿ ದೂರದ ಊರುಗಳಿಂದ ಹುಡುಕಿ ಬರುತ್ತಾರೆ. ಅಗ್ಗದ ಕಳಪೆ ಅಡಕತ್ತರಿಗಳನ್ನು ಮಾರುವ ಮೂಲಕ ಅವರಲ್ಲಿ ನಿರಾಶೆ ಮೂಡಿಸಲು ಬಯಸುವುದಿಲ್ಲ. ನಮ್ಮಲ್ಲಿ ಕೊಂಡ ವಸ್ತುಗಳ ಕುರಿತು ನಮ್ಮ ಗ್ರಾಹಕರು ದೂರಿನೊಂದಿಗೆ ಬರಬಾರದೆನ್ನುವುದು ನಮ್ಮ ಗುರಿ"

ದಿಲಾವರ್‌ ಕೂಡ ಬೇಡಿಕೆ ಕುಸಿತದ ಹೊರತಾಗಿಯೂ, ತಮ್ಮ ಕುಟುಂಬದ ತಲೆಮಾರುಗಳ ಹಳೆಯ ಕರಕುಶಲತೆ ಕುರಿತು ಹೆಮ್ಮೆಯಿಂದ ಮಾತನಾಡುತ್ತಾರೆ. "ನೀವು ಇವುಗಳನ್ನು ಪರ್ವತಗಳ ಮೇಲೆ ಹೋಗಿ ಕುಳಿತು ತಯಾರಿಸಿದರೂ ಜನರು ಹುಡುಕಿಕೊಂಡು ಬಂದು ಕೊಳ್ಳುತ್ತಾರೆ. ಅಂತಹ ಕೌಶಲದ ಕೆಲಸವಿದು" ಎಂದು ಹೆಮ್ಮೆಯಿಂದ ಹೇಳುತ್ತಾರೆ. ಇಂದು ನಮ್ಮ ಬಳಿ ಏನೇ ಇದ್ದರೂ ಅದಕ್ಕೆಲ್ಲ ಈ ಅಡಕತ್ತರಿಗಳೇ ಕಾರಣ"

ಅನುವಾದ: ಶಂಕರ ಎನ್. ಕೆಂಚನೂರು

Sanket Jain

Sanket Jain is a journalist based in Kolhapur, Maharashtra. He is a 2022 PARI Senior Fellow and a 2019 PARI Fellow.

Other stories by Sanket Jain
Translator : Shankar N Kenchanuru

Shankar N Kenchanuru is a poet and freelance translator. He can be reached at [email protected]

Other stories by Shankar N Kenchanuru