ಹುಡುಗಿಯರು ತರಕಾರಿಯನ್ನು ಬೆಳೆದರೆ, ಹುಡುಗರಾದ ನಾವು ಅದನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತೇವೆ ಎನ್ನುತ್ತಾನೆ, ಲಕ್ಷ್ಮಿಕಾಂತ ರೆಡ್ಡಿ.

ಆತ್ಮವಿಶ್ವಾಸವನ್ನುಳ್ಳ ಆತ, ವ್ಯವಹಾರ ಕುಶಲಿಯಷ್ಟೇ ಅಲ್ಲದೆ, ವಾಕ್ಪಟುವೂ ಹೌದು. ಪ್ರಧಾನ ಮಂತ್ರಿ, ಪ್ರತಿಪಕ್ಷದ ನಾಯಕ ಹಾಗೂ ಪ್ರಸ್ತುತದಲ್ಲಿ ಆರೋಗ್ಯ ಸಚಿವನ ಸ್ಥಾನಗಳನ್ನು ನಿರ್ವಹಿಸಿದ್ದರಿಂದಾಗಿ ಆತನಿಗೆ ಈ ವಿಶೇಷ ಗುಣಗಳು ಸಿದ್ಧಿಸಿವೆ.

ಲಕ್ಷ್ಮಿಕಾಂತನ ಹೆಸರು ಮನೆಯವರಿಟ್ಟ ಹೆಸರಲ್ಲವೆಂಬುದು ಆಶ್ಚರ್ಯಕರವೇನಲ್ಲ. ಆತನ ವಯಸ್ಸು 17.

ಆತ ಹಾಗೂ ಆತನ ಸಂಗಡಿಗರಾದ ಇತರೆ ಸಚಿವರು, ಸಂಸತ್ತಿನ ಯಶಸ್ಸನ್ನು ಅವಲೋಕಿಸಲು ಅಲ್ಲಿ ನೆರೆದಿರುವ ಶ್ರೋತೃಗಳನ್ನು ಸಂಬೋಧಿಸಿ ಮಾತನಾಡುತ್ತಿದ್ದಾರೆ.

ಅನೇಕ ಪ್ರಮುಖ ಶಾಲೆಗಳಲ್ಲಿನ ಮಾದರಿ ವಿಶ್ವಸಂಸ್ಥೆಯ ಅಣಕು ಪ್ರದರ್ಶನಕ್ಕೆ ವ್ಯತಿರಿಕ್ತವಾಗಿ, ಇಲ್ಲಿನ ಸಂಸತ್ ಸದಸ್ಯರು ಒಂದು ವರ್ಷದಲ್ಲಿ ಕೇವಲ ಒಂದು ಬಾರಿಗಷ್ಟೇ ಸೀಮಿತಗೊಳ್ಳದೆ, ಅನೇಕ ಬಾರಿ ಒಟ್ಟಾಗಿ ಸೇರಬೇಕೆಂದು ನಿರೀಕ್ಷಿಸಲಾಗುತ್ತದೆ. ಇಲ್ಲಿ ಅವರು ವಿಧ್ಯುಕ್ತ ಪೋಷಾಕನ್ನು ಧರಿಸಿ ವಿದೇಶಾಂಗ ನೀತಿಯ ಚರ್ಚೆಯನ್ನೇನು ನಡೆಸುವುದಿಲ್ಲ. ಅಂತೆಯೇ, ಜಾಗತಿಕ ಜ್ವಲಂತ ಸಮಸ್ಯೆಗಳಿಗೆ ಪ್ರತಿಷ್ಠಿತ ಸಲಹೆಯನ್ನೂ ನೀಡುವುದಿಲ್ಲ. ಇದಕ್ಕೆ ಬದಲಾಗಿ, ಶಿಕ್ಷಣ, ಆರೋಗ್ಯ ಮುಂತಾದ ಅನೇಕ ಶಾಖೆಗಳ ಮುಖ್ಯಸ್ಥರಾಗಿ ತಮ್ಮ ದಿನನಿತ್ಯದ ಆಗುಹೋಗುಗಳನ್ನು ಕುರಿತಂತೆ ಅವರು ಕೆಲವು ನಿರ್ಣಯಗಳನ್ನು ಕೈಗೊಳ್ಳುತ್ತಾರೆ. ವಯಸ್ಕರ ಹಸ್ತಕ್ಷೇಪವು ಕನಿಷ್ಠ ಪ್ರಮಾಣದಲ್ಲಿರಬೇಕೆಂಬ ಪ್ರಮುಖವಾದೊಂದು ಪರಿಚ್ಛೇದದಡಿಯಲ್ಲಿ ಇವೆಲ್ಲವನ್ನೂ ನಿರ್ವಹಿಸಲಾಗುತ್ತದೆ.

ಈ ಮಂತ್ರಿವರ್ಯರು ನವದೆಹಲಿಯ ಉನ್ನತ ದರ್ಜೆಯ ಮನೆಗಳಲ್ಲಿ ವಾಸಿಸುವುದಿಲ್ಲ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ವೆಪ್ಪನಪಲ್ಲಿ ತಾಲ್ಲೂಕಿನ ಬೆಟ್ಟಗಳ ನಡುವಿನ ನಚಿಕುಪ್ಪಂ ಹಳ್ಳಿಯೇ ಇವರ ವಾಸಸ್ಥಾನ. ಅಲ್ಲದೆ, ತಮ್ಮ ಸರ್ಕಾರಿ ಸಮಸ್ಥಾನಿಕರಂತೆ (ಕೌಂಟರ್‍ಪಾರ್ಟ್) ಇವರೆಂದಿಗೂ ಸುದ್ದಿಗಳನ್ನು ಸೃಷ್ಟಿಸುವುದಿಲ್ಲ.

Girls sitting and discussing
PHOTO • Vishaka George
Boys sitting and discussing
PHOTO • Vishaka George

ನಚಿಕುಪ್ಪಂ ಹಳ್ಳಿಯ ಈ ಸಂಸತ್ತಿನ ಹುಡುಗ, ಹುಡುಗಿಯರು ಹೆಚ್‍ಐವಿ ಪಾಸಿಟಿವ್ ಆಗಿದ್ದಾಗ್ಯೂ, ಅದು ಅವರ ಉತ್ಸಾಹವನ್ನು ಕಿಂಚಿತ್ತೂ ಭಂಗಗೊಳಿಸಿಲ್ಲ – ತಮ್ಮ ದಿನನಿತ್ಯದ ಆಗುಹೋಗುಗಳನ್ನು ಕುರಿತಂತೆ ಇವರೇ ನಿರ್ಣಯಗಳನ್ನು ಕೈಗೊಳ್ಳುತ್ತಾರೆ.

ದೇಶದ ಈ ಭಾಗದಲ್ಲಿ ಮಕ್ಕಳ ಸಂಸತ್ ಸರ್ವೇಸಾಮಾನ್ಯವೆಂದು ಹೇಳಬಹುದು. ಇವನ್ನು ಕುರಿತ ವರದಿಗಳನ್ನು ಆಕರ್ಷಕಗೊಳಿಸದೆ, ವರದಿಗಾರರು ಎಚ್ಚರಿಕೆಯಿಂದ ನೈಜತೆಗೆ ಹೆಚ್ಚಿನ ಮಹತ್ವವನ್ನು ನೀಡತಕ್ಕದ್ದು. ಇಲ್ಲಿನ ಸದಸ್ಯರೆಲ್ಲರೂ ಹೆಚ್‍ಐವಿ ಪಾಸಿಟೀವ್ ಎಂಬ ಸಂಗತಿಯು ಅತ್ಯಂತ ವಿಶಿಷ್ಟವೂ ಹೌದು. ಸ್ನೇಹಗ್ರಾಮದಲ್ಲಿನ ಸ್ವ ನಿಯಂತ್ರಿತ ಔದ್ಯೋಗಿಕ ತರಬೇತಿ ಮತ್ತು ಪುನರ್ವಸತಿ ಕೇಂದ್ರದಲ್ಲಿ ಮಕ್ಕಳ ಈ ಸಂಸತ್ ನೆಲೆಗೊಂಡಿದ್ದು, ಇದು ಅವರ ಮನೆಯೂ ಹೌದು.

UNAIDS ನ 2017 ರ ವರದಿಯಂತೆ 2016 ರಲ್ಲಿ ಭಾರತದಲ್ಲಿನ ಹೆಚ್‍ಐವಿ ಪೀಡಿತರ ಸಂಖ್ಯೆ 80,000. 2005 ರಲ್ಲಿ 1.5 ಲಕ್ಷದಷ್ಟಿದ್ದ ಹೆಚ್‍ಐವಿ ಪೀಡಿತರ ಸಂಖ್ಯೆಗಿಂತಲೂ ಇದು ಕಡಿಮೆಯೆಂದು ಹೇಳಬಹುದು. 2004 ರಲ್ಲಿ ಪ್ರಾರಂಭಗೊಂಡ ರಾಷ್ಟ್ರೀಯ ಹೆಚ್‍ಐವಿ ವಿರೋಧಿ ಅಭಿಯಾನದ ಮೂಲಕ ನೀಡಲ್ಪಟ್ಟ ಉಚಿತ ಚಿಕಿತ್ಸೆಗೆ ಇದರ ಶ್ರೇಯಸ್ಸು ಸಲ್ಲುತ್ತದೆ.

ಕಳೆದ ದಶಕದಲ್ಲಿ ಹೊಸದಾಗಿ ಹೆಚ್‍ಐವಿ ಸೋಂಕಿನಿಂದ ಪೀಡಿತರಾದವರ ಸಂಖ್ಯೆ ಕಡಿಮೆ ಎಂಬುದಾಗಿ ಬೆಂಗಳೂರಿನ ಸೇಂಟ್ ಜಾನ್ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಆಫ್ ಮೆಡಿಸಿನ್, ಡಾ. ಜಿ. ಡಿ. ರವೀಂದ್ರನ್ ತಿಳಿಸುತ್ತಾರೆ. ಆ್ಯಂಟಿರೆಟ್ರೊವೈರಲ್ (ART) ಥೆರಪಿ ಹಾಗೂ ದೇಶಾದ್ಯಂತದ ಹೆಚ್‍ಐವಿಯನ್ನು ಕುರಿತ ಜಾಗೃತಿಯನ್ನು ಮೂಡಿಸುವ ಕಾರ್ಯಕ್ರಮದ ಮೂಲಕ ಇದು ಸಾಧ್ಯವಾಯಿತೆಂದು ಹೇಳಬಹುದು. ಡಾ. ರವೀಂದ್ರನ್ ಅವರು 1989ರಿಂ ದಲೂ ಹೆಚ್‍ಐವಿ ರೋಗಿಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಏಡ್ಸ್ ಸೊಸೈಟಿ ಆಫ್ ಇಂಡಿಯಾದ ಸ್ಥಾಪಕ ಸದಸ್ಯರೂ ಆಗಿದ್ದಾರೆ. ಅಧ್ಯಯನದ ಪ್ರಕಾರ, ಮೇಲ್ಕಂಡ ಥೆರಪಿಯು ತಾಯಿಯಿಂದ ಮಗುವಿಗೆ ರೋಗವು ಪ್ರಸರಿಸುವುದನ್ನು ತಡೆಯುತ್ತದೆಯಾಗಿ, ರೋಗಿಗಳ ಸಂಖ್ಯೆಯು ಕಡಿಮೆಯಾಯಿತೆಂಬುದಾಗಿ ಇವರು ತಿಳಿಸುತ್ತಾರೆ.

ಸ್ನೇಹಗ್ರಾಮದ ನಿರ್ದೇಶಕರು ಹಾಗೂ ತರಬೇತಿ ಪಡೆದ ಆಪ್ತ ಸಲಹೆಗಾರರಾದ ಫಾದರ್ ಮ್ಯಾಥ್ಯೂ ಪೆರುಂಪಿಲ್ ಅವರು ಹೇಳುವಂತೆ, ಈ ಚಿಕಿತ್ಸೆಯು ಹೆಚ್‍ಐವಿ ಪಾಸಿಟಿವ್ ಮಕ್ಕಳ ಮೇಲೆ ಗಮನಾರ್ಹ ಪರಿಣಾಮವನ್ನು ಬೀರುತ್ತದೆ. "ಈ ಮಕ್ಕಳು ಕಿಶೋರಾವಸ್ಥೆಗೂ ತಲುಪಲಾರರು, ಇನ್ನು ವಯಸ್ಕರಾಗುವುದಂತೂ ದೂರವೇ ಉಳಿಯಿತು ಎಂದು ನಾವು ಭಾವಿಸಿದ್ದೆವು. ART ನ್ನು ಪರಿಚಯಿಸಿದ್ದರಿಂದಾಗಿ, ರೋಗಿಗಳು ಬದುಕುಳಿದು, ಅವರ ಏಳಿಗೆಯೂ ಸಾಧ್ಯವೆನಿಸಿತು", ಎಂಬುದಾಗಿ ಅವರು ತಿಳಿಸುತ್ತಾರೆ.

ಆದರೆ, ಇದನ್ನು ಕುರಿತ ಸಾಮಾಜಿಕ ಕಳಂಕವನ್ನು ನಿಭಾಯಿಸುವುದಾದರೂ ಹೇಗೆ?

ಹೆಚ್‍ಐವಿ ಪೀಡಿತ ಮಕ್ಕಳು ಸಾವಿಗೆ ತುತ್ತಾಗುವವರೆಗೂ ಅವರಿಗೆ ಸಹ್ಯ ಜೀವನವನ್ನು ಒದಗಿಸುವ ಆಶಯದೊಂದಿಗೆ 2002ರಲ್ಲಿ ಸ್ನೇಹಗ್ರಾಮವು ಪ್ರಾರಂಭಗೊಂಡಿತು. ART ನ ಯಶಸ್ಸಿನಿಂದಾಗಿ; ಸಂಸ್ಥೆಯ ಸ್ಥಾಪಕರು, ತಮ್ಮ ಪೋಷಣೆಯಲ್ಲಿರುವವರಿಗೆ ವೃತ್ತಿಜೀವನದ ಕೌಶಲ್ಯವನ್ನು ಒದಗಿಸುವತ್ತ ಗಮನಹರಿಸಿದರು. ವೈದ್ಯಕೀಯ ಚಿಕಿತ್ಸೆಯ ಯಶಸ್ಸಿನಿಂದಾಗಿ, ಸದರಿ ಸಂಸ್ಥೆಯನ್ನು ಔದ್ಯೋಗಿಕ ಸಂಸ್ಥೆಯಾಗಿಯೂ ಮಾರ್ಪಡಿಸಲಾಯಿತು.
Two girls hugging in front of a school
PHOTO • Vishaka George
A girl laughing with one hand raised
PHOTO • Vishaka George

ಮೀನ ನಾಗರಾಜ್ (ಎಡ ತುದಿ), ಶೃತಿ ಸಂಜುಕುಮಾರ್ (ಎಡಕ್ಕೆ) ಮತ್ತು ಅಂಬಿಕ ರಮೇಶ್ (ಬಲಕ್ಕೆ) ಇವರೆಲ್ಲರೂ ತಮಿಳು ನಾಡು, ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಗ್ರಾಮೀಣ ಬಡ ಕುಟುಂಬಗಳ ಅನಾಥರು. ಸಂಸತ್ತಿನಲ್ಲಿ ಭಾಗವಹಿಸುವ ಮೂಲಕ ಇವರು ತಮ್ಮ ಇಂಗ್ಲಿಷ್ ಭಾಷೆಯಲ್ಲಿ ಪರಿಣತಿ ಪಡೆಯುತ್ತಿದ್ದಾರೆ.

ಇಲ್ಲಿನ ಕಿಶೋರ, ಕಿಶೋರಿಯರು ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ಮೂಲಕ ತಮ್ಮ ಮಾಧ್ಯಮಿಕ ಮತ್ತು ಉನ್ನತ ಮಾಧ್ಯಮಿಕ ಶಿಕ್ಷಣವನ್ನು ಪೂರೈಸುತ್ತಿದ್ದು, 12 ನೇ ತರಗತಿಯ ತರುವಾಯ ಇವರೇ ಮೊಟ್ಟ ಮೊದಲ ಪದವೀಧರ ತಂಡವೆನಿಸಿಕೊಳ್ಳುತ್ತಾರೆ. ಸಂಸ್ಥೆಯು ನಂತರ ಇವರು ಕೆಲಸವನ್ನು ದೊರಕಿಸಕೊಳ್ಳಬಹುದೆಂಬ ನಿರೀಕ್ಷೆಯಲ್ಲಿದೆ.

ತರಗತಿಯ ಹೊರಗೆ ಇತರೆ ಕೌಶಲ್ಯಗಳ ಜೊತೆಗೆ ಈ ಮಕ್ಕಳಿಗೆ ಸಾವಯವ ಕೃಷಿ, ಡೈರಿ ಫಾರ್ಮಿಂಗ್, ಜಲ ಸಂವರ್ಧನೆ ಹಾಗೂ ಅಡಿಗೆ ಮಾಡುವುದನ್ನು ಸಹ ಕಲಿಸಲಾಗುತ್ತದೆ. ಓದು-ಬರಹ, ಅಧ್ಯಾಪನಗಳು ಮಕ್ಕಳ ಕಲಿಯುವಿಕೆಯ ಒಂದು ಮಾರ್ಗವಷ್ಟೇ. ತಮ್ಮ ಸ್ವಂತ ನಿರ್ಧಾರಗಳನ್ನು ತಾವೇ ರೂಪಿಸಿ, ತಮ್ಮ ಅಧಿಕಾರಗಳ ಬಗ್ಗೆ ಅರಿಯುವ ವ್ಯವಸ್ಥೆಯನ್ನು ಇಲ್ಲಿ ಕಾಣಬಹುದಾಗಿದೆ. ಸ್ವಾವಲಂಬನೆಯನ್ನು ಪೋಷಿಸುವುದು ಸ್ನೇಹಗ್ರಾಮದ ಮಿನಿ ಸಂಸತ್‍ ನ ಕಾರ್ಯವೂ ಹೌದು.

ತಮಿಳುನಾಡು, ಕರ್ನಾಟಕ ಮತ್ತು ಆಂಧ್ರಪ್ರದೇಶದ ಬಡ ಕುಟುಂಬದ ಅನಾಥ ಮಕ್ಕಳು ಇಲ್ಲಿ ನೆಲೆಸಿದ್ದಾರೆ. ಸಂಸತ್ ವ್ಯವಸ್ಥೆಯ ಒಡನಾಟದಿಂದಾಗಿ ಇವರ ಇಂಗ್ಲಿಷ್ ಭಾಷೆಯು ಸಹ ಸುಧಾರಿಸುತ್ತಿದೆ.

ಉತ್ತಮ ಕೆಲಸವನ್ನು ದೊರಕಿಸಿಕೊಳ್ಳಲು ನಾವು ಇಂಗ್ಲಿಷ್ ಭಾಷೆಯನ್ನು ತಿಳಿದಿರುವುದು ಅಗತ್ಯವಲ್ಲವೆ? ಎನ್ನುವ 17 ವರ್ಷದ ಮೀನ ನಾಗರಾಜ್, ನಮ್ಮ ವಿದ್ಯಾಮಂತ್ರಿಯು ನಾವು ಸಂಸತ್ತಿನಲ್ಲಿ ವ್ಯವಹರಿಸುವಾಗ ನಮ್ಮ ಸ್ಥಳೀಯ ಭಾಷೆಯಲ್ಲಷ್ಟೇ ಅಲ್ಲದೆ, ಇಂಗ್ಲಿಷ್‍ನಲ್ಲಿಯೂ ಮಾತನಾಡಬೇಕೆನ್ನುತ್ತಾರೆ ಎಂಬುದಾಗಿ ತಿಳಿಸುತ್ತಾಳೆ.

ತಮ್ಮ ಇಡೀ ದಿನವನ್ನು ಸ್ಕೂಲಿನಲ್ಲಿ ಕಳೆಯುವುದಕ್ಕೆ ಪೂರ್ವಭಾವಿಯಾಗಿ, ವ್ಯಾಯಾಮದಲ್ಲಿ ನಿರತರಾಗಲು ಅನುವಾಗುವಂತೆ ಎಲ್ಲ ಮಕ್ಕಳನ್ನೂ ಮುಂಜಾನೆ ಬೇಗನೆ ಏಳಿಸುವ ಜವಾಬ್ದಾರಿ ಮೀನಾಳದ್ದು. ವ್ಯಾಯಾಮವು ಓಟದೊಂದಿಗೆ ಆರಂಭಗೊಳ್ಳುತ್ತದೆ. ನಂತರ ಅವರು ತಮ್ಮ ಇಷ್ಟದ ಆಟಗಳಲ್ಲಿ ತೊಡಗುತ್ತಾರೆ. ರೋಗನಿರೋಧಕ ಶಕ್ತಿಯನ್ನು ನೀಡುವ ವ್ಯವಸ್ಥಿತ ವ್ಯಾಯಾಮ ಪದ್ಧತಿಯು ಇವರ ಆರೋಗ್ಯಕ್ಕೆ ಅತ್ಯವಶ್ಯಕ.

ಪ್ರಮುಖವಾದ ವಿಷಯವೆಂದರೆ; ವೈರಸ್‍ನ ನಿಯಂತ್ರಣಕ್ಕೆ ಪ್ರತಿ ರಾತ್ರಿ ಆ್ಯಂಟಿರೆಟ್ರೋವೈರಲ್‍ನ ಒಂದು ಡೋಸ್ ಮಾತ್ರೆಯ ಸೇವನೆಯು ಅತ್ಯಾವಶ್ಯಕ. ಇದು ಅವರ ಇಂದಿನ ಬಹುಮುಖ್ಯ ಅವಶ್ಯಕತೆಯೂ ಹೌದು. ಈ ಒಂದು ಮಾತ್ರೆಯು ಜಗತ್ತಿನ ಅತ್ಯಂತ ಭಯಾನಕ ವೈರಸ್‍ಅನ್ನು ನಿಯಂತ್ರಿಸಬಲ್ಲದು. ಆರೋಗ್ಯ ಸಚಿವರಾದ 16 ವರ್ಷದ ಅಂಬಿಕ ರಮೇಶ್ ಮತ್ತು ಲಕ್ಷ್ಮಿಕಾಂತ್, ಎಲ್ಲ 65 ವಿದ್ಯಾರ್ಥಿಗಳೂ ಪ್ರತಿ ರಾತ್ರಿ ಈ ಔಷಧಿಯನ್ನು ಸೇವಿಸುವಂತೆ ನಿಗಾವಹಿಸುತ್ತಾರೆ. "ಈ ಚಿಕ್ಕ ಗುಳಿಗೆಯು ಅಪಾಯಕರ ಎಂಬುದನ್ನು ಇವರು ಮರೆಯುವರೇ ಹೊರತು, ಅದನ್ನು ತಪ್ಪಿಸುವುದಿಲ್ಲ". ಎಂಬುದಾಗಿ ಮ್ಯಾಥ್ಯೂ ತಿಳಿಸುತ್ತಾರೆ.

A boy
PHOTO • Vishaka George
A boy smiling and standing in a garden
PHOTO • Vishaka George
A portrait of a girl smiling
PHOTO • Vishaka George

ಕೇಂದ್ರ ಸಂಸತ್ತನ್ನು ಮಾದರಿಯಾಗುಳ್ಳ ಸ್ನೇಹಗ್ರಾಮದ ಸಂಸತ್ತಿನಿಂದ ಪ್ರಭಾವಿತರಾದ 9 ಇತರೆ ಶಾಲೆಗಳು ಸಹ ಅದನ್ನು ಅನುಕರಿಸುತ್ತಿವೆ. ಆರೋಗ್ಯ ಸಚಿವ ಲಕ್ಷ್ಮಿಕಾಂತ್ ರೆಡ್ಡಿ (ಎಡಕ್ಕೆ), ಪ್ರಧಾನ ಮಂತ್ರಿ, ಮನಿಕ್ ಪ್ರಭು (ಮಧ್ಯದಲ್ಲಿ) ಹಾಗೂ ಕಾನೂನು ಮತ್ತು ಗೃಹ ಸಚಿವೆ ಪೂಜ ಅಣ್ಣಾರಾವ್ (ಬಲಕ್ಕೆ) ಅವರುಗಳನ್ನು ಚಿತ್ರದಲ್ಲಿ ಕಾಣಬಹುದು.

ಇದು ಅತ್ಯಂತ ಉತ್ತಮವಾದ ವ್ಯವಸ್ಥೆ. "ನಮ್ಮಲ್ಲಿ ಪ್ರಬಲ ಪ್ರತಿಪಕ್ಷವಿದ್ದು, ನಮ್ಮ ಚಟುವಟಿಕೆಗಳನ್ನು ಅವರು ಸದಾ ಗಮನಿಸುತ್ತಾರೆ. ಹದಿನೈದು ದಿನಕ್ಕೊಮ್ಮೆ ಸಂಸತ್ತಿನ ಸಭೆ ಸೇರಿ ಕಾರ್ಯಕಲಾಪಗಳ ಬಗ್ಗೆ ಚರ್ಚಿಸಲಾಗುತ್ತದೆ. ನಾವು ವಾಗ್ದಾನಗಳಿಗೆ ತಕ್ಕಂತೆ ನಡೆದುಕೊಳ್ಳುತ್ತಿದ್ದೇವೆಯೇ ಎಂಬುದನ್ನು ಪ್ರತಿಪಕ್ಷವು ಖಾತರಿಪಡಿಸಿಕೊಳ್ಳುತ್ತದೆ. ಕೆಲವೊಮ್ಮೆ ನಮಗೆ ಪ್ರಶಂಸೆಯೂ ದೊರೆಯುವುದುಂಟು" ಎಂಬುದಾಗಿ ಕಾನೂನು ಮತ್ತು ಗೃಹ ಸಚಿವ 17 ವರ್ಷದ ಕಾಲೇಶ್ವರ್ ತಿಳಿಸುತ್ತಾನೆ.

ಇತರೆ 9 ಶಾಲೆಗಳು ಈ ಸಂಸತ್‍ನಿಂದ ಪ್ರಭಾವಿತರಾಗಿ ಅದನ್ನು ಅನುಕರಿಸುತ್ತಿರುವುದು ಈ ಮಕ್ಕಳಿಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ.

ಇದರ ಸ್ವರೂಪವು ಭಾರತದ ಸಂಸತ್ತಿನ ಪ್ರತಿರೂಪದಂತಿದ್ದು, ಶ್ರದ್ಧೆಯಿಂದ ಅದನ್ನು ಪಾಲಿಸಲಾಗುತ್ತಿದೆ. ಸಾವಯವ ಕೃಷಿಯ ಮೂಲಕ ಇಲ್ಲಿನ 17 ಎಕರೆ ಆವರಣದಲ್ಲಿನ ಎಲ್ಲ ಉತ್ಪನ್ನಗಳನ್ನು ಬೆಳೆಯಲಾಗುತ್ತದೆಂಬುದನ್ನು ಪರಿಸರ ಸಚಿವನು ಖಾತರಿಪಡಿಸಿಕೊಳ್ಳುತ್ತಾನೆ. ಇಲ್ಲಿನ ಹುಡುಗರು ಉತ್ಪನ್ನಗಳನ್ನು ಮಾರುಕಟ್ಟೆಗೆ ಕೊಂಡೊಯ್ಯುತ್ತಾರೆ. ಸುಮಾರು 400 ಗ್ರಾಹಕರಿಗೆ ತರಕಾರಿಗಳನ್ನು ಸರಬರಾಜು ಮಾಡಿ, ಈ ಮಾರಾಟದಿಂದ ದೊರೆತ ಹಣವನ್ನು ಉಳಿತಾಯ ಮಾಡುತ್ತಾರೆ.

ವಾರಕ್ಕೊಮ್ಮೆ ಮಕ್ಕಳು ತಯಾರಿಸುವ ಅಡಿಗೆಯಲ್ಲೂ ಈ ತರಕಾರಿಗಳನ್ನು ಬಳಸಲಾಗುತ್ತದೆ. ಈ ವಾರದ ಅಡಿಗೆಯನ್ನು ಹುಡುಗರು ತಯಾರಿಸಿದರೆ, ಮುಂದಿನ ವಾರದ ಸರದಿ ಹುಡುಗಿಯರದ್ದು. ಹುಡುಗರಿಗಿಂತ ನಾವೇ ರುಚಿಕಟ್ಟಾಗಿ ಅಡಿಗೆ ತಯಾರಿಸುತ್ತೇವೆಂಬ ಹುಡುಗಿಯರ ಮಾತಿಗೆ ಪ್ರತಿಯಾಗಿ ಹುಡುಗರು, ಇಲ್ಲ, ಇಲ್ಲ... ನಮ್ಮ ಅಡಿಗೆಯೇ ಅವರಿಗಿಂತಲೂ ಚೆನ್ನ ಎನ್ನುತ್ತಾರೆ.

"ಈ ಭಾನುವಾರ ನಮ್ಮದೇ ಅಡಿಗೆ. ನೀವು ಬಂದು ನಮ್ಮ ಅಡಿಗೆಯ ರುಚಿ ನೋಡಬಾರದೇಕೆ?" ಎನ್ನುತ್ತಾಳೆ ಉಪ ಮುಖ್ಯಮಂತ್ರಿ, 17 ವರ್ಷದ ವನಿತ.

"ಹಾಗಾದರೆ, ನೀವು ಈ ಭಾನುವಾರ ಇಲ್ಲಿಗೆ ಬರದೇ ತಪ್ಪಿಸಿಕೊಳ್ಳುವುದೇ ಒಳ್ಳೆಯದು" ಎಂದು ಛೇಡಿಸುತ್ತಾನೆ ಲಕ್ಷ್ಮಿಕಾಂತ.

ಹೆಚ್‍ಐವಿ ಕುರಿತ ಪರಿಹಾಸ್ಯ, ವೈರಸ್‍ನ ಬಗ್ಗೆ ಇರುವ ಮೌಢ್ಯಗಳು ರೂಢಿಗತವಾಗಿರುವ ಈ ವಿಶಾಲ ಸಮಾಜದಲ್ಲಿ, ಇಂತಹ ಲಘು ಹಾಸ್ಯಗಳು ಹೃದಯವನ್ನು ಹಗುರಾಗಿಸುತ್ತವೆ.

ಮಕ್ಕಳನ್ನು ನೋಡಲು ಬರುವ ಅನೇಕ ಜನ ಇಲ್ಲಿ ಏನೂ ತಿನ್ನುವುದಿಲ್ಲ. ವಿದ್ಯಾವಂತರೂ ಸಹ "ಇಂದು ನಾವು ಉಪವಾಸದಲ್ಲಿದ್ದೇವೆ" ಎಂದು ಜಾರಿಕೊಳ್ಳುತ್ತಾರೆ ಎಂಬ ಟೀಕೆ ಮ್ಯಾಥ್ಯೂ ಅವರದ್ದು.

ಇಂತಹ ಪರಿಸರದಲ್ಲಿ ವಾಸಿಸುತ್ತಿರುವ ಮಕ್ಕಳಿಗೆ ಈ ಅಪಮಾನದ ಬಗ್ಗೆ ಅರಿವಿದೆಯೇ?

"ಹೌದು. ಮಕ್ಕಳಿಗೆ ಈ ಬಗ್ಗೆ ಅರಿವಿದೆ. ಇವರ ಕೆಲವು ಹತ್ತಿರದ ಸಂಬಂಧಿಕರಿಗೆ ಇವರ ಪರಿಸ್ಥಿತಿಯ ಬಗ್ಗೆ ಅರಿವಿದ್ದು, ಬೇರೆಯವರೊಂದಿಗೆ ಈ ಬಗ್ಗೆ ಹರಟುವುದಿಲ್ಲ." ಈ ಬಗ್ಗೆ ಅವರಿಗೆ ತಿಳಿದಿದ್ದೇ ಆದರೆ, "ಮನೆಯಲ್ಲಿ ಅದೇ ತಟ್ಟೆಯಲ್ಲಿ ಮಕ್ಕಳಿಗೆ ತಿನ್ನಲು ಕೊಡುವುದಿಲ್ಲ. ಇದು ಪೂರ್ವಗ್ರಹವೂ ಹೌದು. ಜಾತಿಯನ್ನು ಕುರಿತ ತಾರತಮ್ಯದಂತೆಯೇ ಇದೂ ಸಹ ಕೆಲವೊಮ್ಮೆ ಮಾರ್ಮಿಕವಾಗಿಯೂ ಕೆಲವೊಮ್ಮೆ ಸ್ಪಷ್ಟವಾಗಿಯೂ ಗೋಚರಿಸುತ್ತದೆ.
A girl standing on some rocks looking at a garden with lotus flowers
PHOTO • Vishaka George

ಈ ವಿದ್ಯಾರ್ಥಿಗಳ ಸಂಸತ್ತಿನ ವನಿತ ಮತ್ತು ಇತರರು ಈಗಲೂ ಮನೆಗಳಲ್ಲಿ ತಾರತಮ್ಯವನ್ನು ಅನುಭವಿಸುತ್ತಿದ್ದಾರೆ.

ಇಡೀ ದಿನ ಪ್ರಧಾನ ಮಂತ್ರಿ ಮನಿಕ್ ಪ್ರಭುವಿನ ಮುಖದಲ್ಲಿ ಮುಗುಳ್ನಗೆಯು ಮಾಯವಾದದ್ದನ್ನು ಕಂಡಿದ್ದು ಅಪರೂಪ. ಈ ಉಲ್ಲಾಸಕರ ಪ್ರವೃತ್ತಿಯಿಂದಾಗಿಯೇ ಆತನು ಈ ಉನ್ನತ ಹುದ್ದೆಗೆ ಮತಗಳನ್ನು ಗಳಿಸಲು ಸಹಾಯವಾಯಿತೆನಿಸುತ್ತದೆ.

ಆತ ಕ್ರೀಡಾಪಟುವೂ ಹೌದು. ಈ ಪ್ರತಿಭೆಯು ಆತನನ್ನು ಸುಪ್ರಸಿದ್ಧ ಬಾಸ್ಟನ್, ನೆದರ್‍ಲೆಂಡ್, ಕೊಲಂಬೊ, ಶ್ರೀಲಂಕಾಗಳ ಹಾಗೂ ಇಲ್ಲಿನ ಮ್ಯಾರಥಾನ್‍ವರೆಗೂ ಕರೆದೊಯ್ದಿದೆ.  

"ಹೆಚ್‍ಐವಿ ಪೂರ್ಣ ವಿರಾಮವಲ್ಲ. ಈ ಖಾಯಿಲೆಯಿಂದ ಬಳಲುತ್ತಿರುವವರಿಗೆ ನಾನು ಆಶಾಕಿರಣವಾಗಬೇಕೆಂದು ಬಯಸುತ್ತೇನೆ" ಎನ್ನುತ್ತಾನೆ ಆತ.

ಇಂದಿನ ನನ್ನ ಕಲಿಕೆ: ಹೌದು, ಮನಿಕ್ ಹಾಗೂ ಆತನ ಗೆಳೆಯರಿಗೆ ಹೆಚ್‍ಐವಿ ಇದೆ. ಆದರೆ ಹೆಚ್‍ಐವಿಗೆ ಅವರಿಲ್ಲ.

ಕನ್ನಡ ಭಾಷೆ, ಸಾಹಿತ್ಯ ಹಾಗೂ ಅನುವಾದಗಳಲ್ಲಿ ಆಸಕ್ತರಾಗಿರುವ ಶೈಲಜ, ಖಾಲೆದ್ ಹೊಸೇನಿ ಅವರ ‘ದ ಕೈಟ್ ರನ್ನರ್’ಹಾಗೂ ಫ್ರಾನ್ಸಿಸ್ ಬುಖನನ್ ಅವರ ‘ಎ ಜರ್ನಿ ಫ್ರಂ ಮದ್ರಾಸ್ ಥ್ರೂ ದ ಕಂಟ್ರೀಸ್ ಆಫ್ ಮೈಸೂರ್ ಕೆನರ ಅಂಡ್ ಮಲಬಾರ್’ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಲಿಂಗ ಸಮಾನತೆ, ಸ್ತ್ರೀ ಸಬಲೀಕರಣ ಮುಂತಾದ ಸಾಮಾಜಿಕ ಸಮಸ್ಯೆಗಳನ್ನು ಕುರಿತ ಇವರ ಕೆಲವು ಲೇಖನಗಳು ಪ್ರಕಟಗೊಂಡಿವೆ. ವೈಚಾರಿಕ ಸಂಸ್ಥೆಗಳಾದ ಫೆಮ್ ಹ್ಯಾಕ್, ಪಾಯಿಂಟ್ ಆಫ್ ವ್ಯೂ ಹಾಗೂ ಹೆಲ್ಪೇಜ್ ಇಂಡಿಯ, ನ್ಯಾಷನಲ್ ಫೆಡರೇಷನ್ ಆಫ್ ದ ಬ್ಲೈಂಡ್ ಎಂಬ ಸ್ವಯಂ ಸೇವಾ ಸಂಸ್ಥೆಗಳಲ್ಲಿನ ಕನ್ನಡಾನುವಾದಗಳನ್ನು ಸಹ ಇವರು ನಿರ್ವಹಿಸುತ್ತಿದ್ದಾರೆ. ಇವರನ್ನು [email protected] ಇ-ಮೈಲ್ ಮೂಲಕ ಸಂಪರ್ಕಿಸಬಹುದು.

Vishaka George

ರ್ಯೂಟರ್ಸ್ ನಲ್ಲಿ ಬ್ಯುಸಿನೆಸ್ ಕರೆಸ್ಪಾಂಡೆಂಟ್ ಆಗಿ ಸೇವೆ ಸಲ್ಲಿಸಿರುವ ವಿಶಾಕಾ ಜಾರ್ಜ್ ಬೆಂಗಳೂರು ಮೂಲದ ಪತ್ರಕರ್ತೆ. ಏಷ್ಯನ್ ಸ್ಕೂಲ್ ಆಫ್ ಜರ್ನಲಿಸಂನಿಂದ ಪದವಿಯನ್ನು ಪಡೆದಿರುವ ವಿಶಾಕಾರವರು ಮಹಿಳೆಯರ ಮತ್ತು ಮಕ್ಕಳ ವಿಷಯಕ್ಕೆ ಹೆಚ್ಚಿನ ಒತ್ತನ್ನು ಕೊಟ್ಟು ಗ್ರಾಮೀಣ ಭಾರತದ ವರದಿಗಾರಿಕೆಯನ್ನು ಮಾಡುವುದರಲ್ಲಿ ಆಸಕ್ತಿಯುಳ್ಳವರಾಗಿದ್ದಾರೆ.

Other stories by Vishaka George