ನನ್ನ ಮನೆ ಇಂದಿರಾ ಕಾಲೋನಿ ಎಂಬ ಆದಿವಾಸಿ ಗ್ರಾಮದಲ್ಲಿದೆ. ವಿವಿಧ ಆದಿವಾಸಿ ಸಮುದಾಯಗಳ 25 ಕುಟುಂಬಗಳು ಇಲ್ಲಿ ವಾಸಿಸುತ್ತಿವೆ. ನಮ್ಮ ಗ್ರಾಮದಲ್ಲಿ ನೀರಿನ ಟ್ಯಾಂಕ್ ಮತ್ತು ಶೌಚಾಲಯವಿದೆ, ಮತ್ತು ಕುಡಿಯುವ ನೀರಿಗಾಗಿ ಒಂದು ಬಾವಿಯಿದೆ.
ಹಳ್ಳಿಯ ಕೆಲವು ಜನರು ಕೃಷಿಯೋಗ್ಯ ಭೂಮಿಯನ್ನು ಹೊಂದಿದ್ದಾರೆ, ಮತ್ತು ಅವರು ಅದರಲ್ಲಿ ಭತ್ತ, ಬದನೆಕಾಯಿ, ಮೆಕ್ಕೆಜೋಳ, ಜುಲಾನಾ, ಬೆಂಡೆಕಾಯಿ, ಹಾಗಲಕಾಯಿ, ಕುಂಬಳಕಾಯಿ ಮತ್ತು ವಿವಿಧ ದ್ವಿದಳ ಧಾನ್ಯಗಳಾದ ಕೋಲಾಥಾ [ಹುರುಳಿ], ಕಂದುಲಾ [ತೊಗರಿ ಬೇಳೆ], ಹೆಸರುಬೇಳೆ ಇತ್ಯಾದಿಗಳನ್ನು ಬೆಳೆಯುತ್ತಾರೆ. ಹೆಚ್ಚಿನವರು ಭತ್ತವನ್ನು ಬೆಳೆಯುತ್ತಾರೆ ಏಕೆಂದರೆ ಅದು ನಮ್ಮ ಮುಖ್ಯ ಆಹಾರ. ಭತ್ತದ ಬೇಸಾಯವು ಮಳೆಗಾಲದಲ್ಲಿ ನಡೆಯುತ್ತದೆ.
ಸುಗ್ಗಿಯ ಸಮಯದಲ್ಲಿ ನಮ್ಮ ಬಳಕೆಗಾಗಿ ನಾವು ಸ್ವಲ್ಪ ಭತ್ತವನ್ನು ಇಟ್ಟುಕೊಂಡು ಉಳಿದ ಪ್ರಮಾಣವನ್ನು ಮಾರಾಟ ಮಾಡುತ್ತೇವೆ. ಮಾರಾಟದ ನಂತರ ನಾವು ಗಳಿಸುವ ಹಣವು ರಸಗೊಬ್ಬರಗಳು ಮತ್ತು ಇತರ ಒಳಸುರಿಗಳ ವೆಚ್ಚವನ್ನು ಅವಲಂಬಿಸಿರುತ್ತದೆ.
ನಮ್ಮ ಹಳ್ಳಿಯ ಕೆಲವು ಮನೆಗಳು ಹುಲ್ಲಿನ ಮನೆಗಳು. ಈ ಮನೆಗಳು ಬಿಸಿಲು, ಮಳೆ ಮತ್ತು ಚಳಿಯಿಂದ ನಮ್ಮನ್ನು ರಕ್ಷಿಸುತ್ತವೆ. ಪ್ರತಿ ಒಂದು ಅಥವಾ ಎರಡು ವರ್ಷಗಳಿಗೊಮ್ಮೆ ಮಾಡಿನ ಹುಲ್ಲನ್ನು ಬದಲಾಯಿಸಬೇಕಾಗುತ್ತದೆ. ನಮ್ಮ ಮನೆಗಳನ್ನು ಮರುವಿನ್ಯಾಸಗೊಳಿಸಲು ನಾವು ಆಗುಲಿ ಹುಲ್ಲು, ಸಾಲುವಾ, ಬಿದಿರು, ಲಾಹಿ ಮತ್ತು ಕಾಡಿನ ಮರವನ್ನು ಬಳಸುತ್ತೇವೆ.
ಇದು ಬಾಗುಲಿ ಹುಲ್ಲು, ಇದನ್ನು ಛಾವಣಿಗೆ ಹೊದೆಸಲು ಬಳಸಲಾಗುತ್ತದೆ. ನಾವು ಈ ಹುಲ್ಲನ್ನು ಕಾಡಿನಿಂದ ಕತ್ತರಿಸಿ ಎರಡು ಅಥವಾ ಮೂರು ತಿಂಗಳ ಕಾಲ ಬಿಸಿಲಿನಲ್ಲಿ ಒಣಗಿಸುತ್ತೇವೆ. ನಂತರ ಅದನ್ನು ಇನ್ನೂ ಸ್ವಲ್ಪ ಸಮಯದವರೆಗೆ ಒಣಗಿಸಬೇಕು ಏಕೆಂದರೆ ಸಣ್ಣ ಮಳೆಗೂ ಈ ಹುಲ್ಲು ಹಾಳಾಗುತ್ತದೆ. ನಮ್ಮ ಗುಡಿಸಲು ಮನೆಗಳ ಛಾವಣಿಗಾಗಿ, ನಾವು ಹಳ್ಳಿಯಲ್ಲಿ ತಯಾರಿಸುವ ಜೇಡಿಮಣ್ಣಿನ ಹೆಂಚುಗಳನ್ನು ಬಳಸುತ್ತೇವೆ.
ಇದು ಎತ್ತಿನ ಗಾಡಿ ಮತ್ತು ಚಕ್ರಗಳನ್ನು ಹೊರತುಪಡಿಸಿ, ಈ ಗಾಡಿಯ ಇತರ ಎಲ್ಲಾ ಭಾಗಗಳನ್ನು ಮರ ಅಥವಾ ಬಿದಿರಿನಿಂದ ಮಾಡಲಾಗಿದೆ. ಹೊಲಗಳಿಂದ ಭತ್ತ ಮತ್ತು ಕಾಡಿನಿಂದ ಸೌದೆಯನ್ನು ತರಲು ನಾವು ಇದನ್ನು ಬಳಸುತ್ತೇವೆ. ಕೆಲವೊಮ್ಮೆ ಅದನ್ನು ಹೊಲಕ್ಕೆ ಸಗಣಿ ಗೊಬ್ಬರವನ್ನು ಸಾಗಿಸಲು ಸಹ ಬಳಸುತ್ತೇವೆ. ಇತ್ತೀಚಿನ ದಿನಗಳಲ್ಲಿ ಈ ರೀತಿಯ ಗಾಡಿ ನಿಧಾನವಾಗಿ ಬಳಕೆಯಿಂದ ಹೊರಗುಳಿಯುತ್ತಿದೆ.
ನನ್ನ ಹಳ್ಳಿಯ ಹೆಚ್ಚಿನ ಜನರು ಹಸುಗಳು, ಎತ್ತುಗಳು, ಆಡುಗಳು ಮತ್ತು ಕೋಳಿಗಳನ್ನು ಸಾಕುತ್ತಾರೆ. ನಾವು ಅವುಗಳಿಗೆ ಅನ್ನದ ಗಂಜಿ, ಅಕ್ಕಿ ಹೊಟ್ಟು ಮತ್ತು ಹೆಸರು ಕಾಳು ತಿನ್ನಿಸುತ್ತೇವೆ. ರಾತ್ರಿಯಲ್ಲಿ ನಮ್ಮ ಪ್ರಾಣಿಗಳು ಒಣ ಮೇವನ್ನು ಜಗಿಯುತ್ತವೆ. ಹಸುಗಳು ಮತ್ತು ಎತ್ತುಗಳನ್ನು ಮೇಯಿಸಲು ಕಾಡು ಅಥವಾ ಕೃಷಿ ಹೊಲಗಳಿಗೆ ಕರೆದೊಯ್ಯುತ್ತೇವೆ. ಮಳೆ ಬಂದಾಗ ಹಸಿರು ಹುಲ್ಲು ಇರುತ್ತದೆ ಆದರೆ ಬೇಸಿಗೆಯ ತಿಂಗಳುಗಳಲ್ಲಿ ಇದು ಒಣಗಿರುತ್ತದೆ ಮತ್ತು ಹಸುಗಳು ಮತ್ತು ಎತ್ತುಗಳಿಗೆ ಸಾಕಷ್ಟು ಮೇವು ಸಿಗುವುದಿಲ್ಲ.
ನಾವು ನಮ್ಮ ಹೊಲಗಳಿಗೆ ಜಾನುವಾರು ಗೊಬ್ಬರವನ್ನು ಬಳಸುತ್ತೇವೆ - ಕೃಷಿ ಪ್ರಾರಂಭವಾಗುವ ಮೊದಲು ಸಗಣಿಯನ್ನು ಹೊಲಗಳಲ್ಲಿ ಗೊಬ್ಬರವಾಗಿ ಹರಡಲಾಗುತ್ತದೆ. ಹಳ್ಳಿಯ ಜನರು ಹಸುಗಳು ಮತ್ತು ಎತ್ತುಗಳನ್ನು ಮಾರಾಟ ಮಾಡಿ ಹಣ ಸಂಪಾದಿಸುತ್ತಾರೆ. ಒಂದು ಹಸುವಿನ ಬೆಲೆ ಸುಮಾರು 10,000 ರೂಪಾಯಿಗಳು.
ನಮ್ಮ ಹಳ್ಳಿಯ ಕೆಲವು ತಾಯಂದಿರು ಈಗ ಹೆಚ್ಚುವರಿ ಆದಾಯವನ್ನು ಗಳಿಸಲು ಕೆಂಡು ಎಲೆಗಳು, ಸಲಪಾತ್ರ [ಸಾಲ್ ಎಲೆಗಳು] ಮತ್ತು ಮಹುವಾವನ್ನು ಕೀಳುತ್ತಾರೆ.
ಇದು ಒಣ ಮಹುವಾ ಹೂವು. ಹಳ್ಳಿಯ ತಾಯಂದಿರು ಬೆಳಿಗ್ಗೆ ಕಾಡಿಗೆ ಹೋಗಿ ಬೆಳಿಗ್ಗೆ 11 ಗಂಟೆಗೆ ಈ ಹೂಗಳೊಡನೆ ಮನೆಗೆ ಬರುತ್ತಾರೆ. ಹೂವುಗಳನ್ನು ಸಂಗ್ರಹಿಸಿ ಆರು ದಿನಗಳವರೆಗೆ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ನಂತರ ಅವುಗಳನ್ನು ಎರಡು ಅಥವಾ ಮೂರು ತಿಂಗಳವರೆಗೆ ಒಣಗಲು ಚೀಲಗಳಲ್ಲಿ ಇಡಲಾಗುತ್ತದೆ. ನಾವು 60 ರೂಪಾಯಿಗಳಿಗೆ ಮಹುವಾ ರಸವನ್ನು ಒಂದು ಮಗ್ ಮಾರಾಟ ಮಾಡುತ್ತೇವೆ ಮತ್ತು ಒಂದು ಪೂರ್ಣ ಮಗ್ ಮಹುವಾ ಹೂವುಗಳನ್ನು 50 ರೂಪಾಯಿಗಳಿಗೆ ಮಾರಾಟ ಮಾಡುತ್ತೇವೆ. ಈ ಮಹುವಾ ಹೂವುಗಳನ್ನು ಸಂಗ್ರಹಿಸುವುದು ತುಂಬಾ ಕಷ್ಟ.
ನಮ್ಮ ಸಮುದಾಯವು ನಮ್ಮ ಕುಟುಂಬದಂತೆ ಮತ್ತು ನಾವು ಪರಸ್ಪರ ಸಹಾಯ ಮಾಡುತ್ತೇವೆ.
ಈ ಲೇಖನಕ್ಕೆ ಸಹಾಯ ಮಾಡಿದ ಗ್ರಾಮ ವಿಕಾಸ್ ವಸತಿ ಶಾಲೆಗಳ ಇನ್ನೋವೇಶನ್ ಮತ್ತು ಸ್ಟ್ರಾಟಜಿ ವ್ಯವಸ್ಥಾಪಕ ಶರ್ಬಾನಿ ಚಟ್ಟೋರಾಜ್ ಮತ್ತು ಸಂತೋಷ್ ಗೌಡ ಅವರಿಗೆ ಪರಿ ಎಜುಕೇಷನ್ ತಂಡವು ಧನ್ಯವಾದಗಳನ್ನು ಅರ್ಪಿಸುತ್ತದೆ.
ಅನುವಾದ: ಶಂಕರ. ಎನ್. ಕೆಂಚನೂರು