"ನೀವು ಬೆಳಕಿನಲ್ಲಿ ಹುಟ್ಟಿದ್ದೀರಿ, ನಾವು ಕತ್ತಲೆಯಲ್ಲಿ ಹುಟ್ಟಿದ್ದೇವೆ," ಎಂದು ನಂದ್‌ರಾಮ್ ಜಮುಂಕರ್ ತಮ್ಮ ಮಣ್ಣಿನ ಮನೆಯ ಹೊರಗಡೆ ಕುಳಿತುಕೊಂಡು ಹೇಳುತ್ತಾರೆ. ನಾವು ಏಪ್ರಿಲ್ 26, 2024 ರಂದು ಸಾರ್ವತ್ರಿಕ ಚುನಾವಣೆಯ ಮತದಾನ ನಡೆಯಲಿರುವ ಅಮರಾವತಿ ಜಿಲ್ಲೆಯ ಖಡಿಮಲ್ ಹಳ್ಳಿಯಲ್ಲಿದ್ದೇವೆ. ನಂದ್‌ರಾಮ್ ಮಾತನಾಡುತ್ತಿರುವುದು ಅಕ್ಷರಶಃ ಕಗ್ಗತ್ತಲ ಬಗ್ಗೆ; ಮಹಾರಾಷ್ಟ್ರದ ಬುಡಕಟ್ಟು ಈ ಹಳ್ಳಿಗೆ ಇದುವರೆಗೆ ವಿದ್ಯುತ್ತೇ ಸಿಕ್ಕಿಲ್ಲ.

“ಪ್ರತಿ ಐದು ವರ್ಷಕ್ಕೊಮ್ಮೆ ಯಾರಾದರೂ ಬಂದು ವಿದ್ಯುತ್ ಕೊಡುವುದಾಗಿ ಭರವಸೆ ನೀಡುತ್ತಾರೆ. ವಿದ್ಯುತ್ ಬಿಡಿ, ಅವರೇ ಆಮೇಲೆ ಈ ಕಡೆ ಬರುವುದಿಲ್ಲ,” ಎಂದು 48 ವರ್ಷ ವಯಸ್ಸಿನ ಇವರು ಹೇಳುತ್ತಾರೆ. 2019ರಲ್ಲಿ ಶಿವಸೇನಾ ಅಭ್ಯರ್ಥಿ ಹಾಗೂ ಮಾಜಿ ಕೇಂದ್ರ ಸಚಿವ ಆನಂದರಾವ್ ಅಡ್ಸುಲ್ ಅವರನ್ನು ಸ್ವತಂತ್ರ ಅಭ್ಯರ್ಥಿಯಾಗಿ ಸೋಲಿಸಿ ಹಾಲಿ ಸಂಸದೆ ನವನೀತ್ ಕೌರ್ ರಾಣಾ ಅಧಿಕಾರಕ್ಕೆ ಬಂದಿದ್ದರು. ಈ ಬಾರಿ ಅವರು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

198 ಕುಟುಂಬಗಳಿರುವ (ಜನಗಣತಿ 2011) ಚಿಖಲ್ದಾರ ತಾಲೂಕಿನ ಈ ಗ್ರಾಮದ ಜನ  ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ)ಯನ್ನು ಅವಲಂಬಿಸಿದ್ದಾರೆ ಮತ್ತು ಕೆಲವರಿಗೆ ಜಮೀನಿದೆ. ಜಮೀನು ಇರುವವರು ಮಳೆಯಾಶ್ರಿತ ಕೃಷಿಯನ್ನು ಮಾಡುತ್ತಾರೆ, ಹೆಚ್ಚಾಗಿ ಜೋಳವನ್ನು ಬೆಳೆಯುತ್ತಾರೆ. ಖಡಿಮಲ್‌ನಲ್ಲಿ  ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಪಂಗಡಗಳು (ಎಸ್‌ಟಿ) ಇವೆ, ಅವರು ಯಾವಾಗಲೂ ನೀರು ಮತ್ತು ವಿದ್ಯುತ್ ಇಲ್ಲದೆ ಬದುಕುತ್ತಿದ್ದಾರೆ. ನಂದ್‌ರಾಮ್‌ ಅವರು 2019 ರಲ್ಲಿ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಅಳಿವಿನಂಚಿನಲ್ಲಿರುವ ಭಾಷೆ ಎಂದು ಗುರುತಿಸಿರುವ ಕೊರ್ಕು ಮಾತನಾಡುವ ಕೊರ್ಕು ಬುಡಕಟ್ಟು ಜನಾಂಗಕ್ಕೆ ಸೇರಿದ್ದಾರೆ.

'ನಾವು ಯಾವುದೇ ರಾಜಕಾರಣಿಯನ್ನು ನಮ್ಮ ಗ್ರಾಮದೊಳಗೆ ಬಿಡುವುದಿಲ್ಲ. ವರ್ಷಗಳಿಂದ ಅವರು ನಮಗೆ ಮೋಸ ಮಾಡಿದ್ದಾರೆ, ಆದರೆ ಇನ್ನು ಮುಂದೆ ಅದು ಸಾಧ್ಯವಿಲ್ಲ'

"ನಾವು ಬದಲಾವಣೆಯನ್ನು ಬಯಸಿ 50 ವರ್ಷಗಳಿಂದ ಮತದಾನ ಮಾಡುತ್ತಿದ್ದೇವೆ, ಆದರೆ ನಮ್ಮನ್ನು ಮೂರ್ಖರನ್ನಾಗಿ ಮಾಡಲಾಗಿದೆ," ಎಂದು ನಂದ್‌ರಾಮ್‌ ಅವರನ್ನು ಪಕ್ಕದಲ್ಲಿಯೇ ಕುಳಿತು ಸಮಾಧಾನಪಡಿಸುತ್ತಾ ದಿನೇಶ್ ಬೆಲ್ಕರ್ ಹೇಳುತ್ತಾರೆ. ಅವರು ತಮ್ಮ ಎಂಟು ವರ್ಷದ ಮಗನನ್ನು 100 ಕಿಲೋಮೀಟರ್ ದೂರದಲ್ಲಿರುವ ಬೋರ್ಡಿಂಗ್ ಶಾಲೆಗೆ ಸೇರಿಸಬೇಕಾಗಿತ್ತು. ಗ್ರಾಮದಲ್ಲಿ ಪ್ರಾಥಮಿಕ ಶಾಲೆ ಇದೆ, ಆದರೆ ಸರಿಯಾದ ರಸ್ತೆಗಳಿಲ್ಲದೆ ಮತ್ತು ಸಾರಿಗೆ ವ್ಯವಸ್ಥೆ ಇಲ್ಲದೆ, ಸರಿಯಾದ ಶಿಕ್ಷಕರೂ ಇಲ್ಲದೇ ಕಷ್ಟವಾಗಿದೆ. "ಅವರು ವಾರಕ್ಕೆ ಎರಡು ಬಾರಿ ಮಾತ್ರ ಇಲ್ಲಿಗೆ ಬರುತ್ತಾರೆ," ಎಂದು 35 ವರ್ಷದ ದಿನೇಶ್ ಹೇಳುತ್ತಾರೆ.

"ರಾಜ್ಯ ಸಾರಿಗೆ ಬಸ್‌ಗಳನ್ನು ಕೊಡುವುದಾಗಿ ಬರವಸೆ ನೀಡಲು ಅನೇಕರು [ನಾಯಕರು] ಇಲ್ಲಿಗೆ ಬರುತ್ತಾರೆ, ಆದರೆ ಚುನಾವಣೆಯ ನಂತರ ಅವರು ನಾಪತ್ತೆಯಾಗುತ್ತಾರೆ," ಎಂದು ರಾಹುಲ್ ಮಾತು ಮುಂದುವರಿಸುತ್ತಾರೆ. 24 ವರ್ಷದ ಈ ಮನರೇಗಾ ಕಾರ್ಯಕರ್ತ, ಸಾರಿಗೆ ಕೊರತೆಯಿಂದಾಗಿ ಸಮಯಕ್ಕೆ ಸರಿಯಾಗಿ ದಾಖಲೆಗಳನ್ನು ಸಲ್ಲಿಸಲು ಸಾಧ್ಯವಾಗದೆ ಕಾಲೇಜು ಬಿಡಬೇಕಾಯಿತು. "ನಾವು ಶಿಕ್ಷಣವನ್ನು ಸಂಪೂರ್ಣವಾಗಿ ಬಿಟ್ಟುಬಿಟ್ಟಿದ್ದೇವೆ," ಎಂದು ಅವರು ಹೇಳುತ್ತಾರೆ.

"ಶಿಕ್ಷಣ ಆಮೇಲೆ, ಮೊದಲು ನಮಗೆ ನೀರು ಬೇಕು," ಎಂದು ನಂದ್‌ರಾಮ್ ಜೋರಾಗಿ ಭಾವೋದ್ವೇಗದಿಂದ ಹೇಳುತ್ತಾರೆ. ಮೇಲ್ಘಾಟ್ ಪ್ರದೇಶವು ದೀರ್ಘಕಾಲದವರೆಗೆ ನೀರಿನ ತೀವ್ರ ಕೊರತೆಯಿಂದ ಬಳಲಿದೆ.

PHOTO • Swara Garge ,  Prakhar Dobhal
PHOTO • Swara Garge ,  Prakhar Dobhal

ಎಡ: ನಂದ್‌ರಾಮ್ ಜಮುಂಕರ್ (ಹಳದಿ) ಮತ್ತು ದಿನೇಶ್ ಬೆಲ್ಕರ್ (ಕಿತ್ತಳೆ‌ ಬಣ್ಣದ ಸ್ಕಾರ್ಫ್) ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಖಡಿಮಲ್ ಗ್ರಾಮದ ನಿವಾಸಿಗಳು. ಈ ಗ್ರಾಮಕ್ಕೆ ಇದುವರೆಗೂ ನೀರು, ವಿದ್ಯುತ್‌ ಸಿಕ್ಕಿಲ್ಲ. ಬಲ: ಗ್ರಾಮದಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಹೊಳೆ ಬಹುತೇಕ ಬತ್ತಿ ಹೋಗಿದೆ. ಮಳೆಗಾಲದಲ್ಲಿ ಈ ಪ್ರದೇಶದಲ್ಲಿನ ಜಲಮೂಲಗಳು ತುಂಬಿ ಹರಿಯುತ್ತವೆ, ರಸ್ತೆಗಳು ಮತ್ತು ಸೇತುವೆಗಳು ಹಾನಿಗೊಳಗಾಗುತ್ತವೆ, ಅಪರೂಪದಲ್ಲಿ ದುರಸ್ತಿ ಮಾಡಲಾಗುತ್ತದೆ

ಗ್ರಾಮಸ್ಥರು ಪ್ರತಿದಿನ 10-15 ಕಿಲೋಮೀಟರ್ ದೂರ ಹೋಗಿ ನೀರು ತರಬೇಕು. ಈ ಕೆಲಸವನ್ನು ಮಹಿಳೆಯರೇ ಹೆಚ್ಚಾಗಿ ಮಾಡುತ್ತಾರೆ. ಗ್ರಾಮದ ಯಾವ ಮನೆಗೂ ನಲ್ಲಿ ನೀರಿಲ್ಲ. ಮೂರು ಕಿಲೋಮೀಟರ್ ದೂರದ ನವಲಗಾಂವ್‌ನಿಂದ ನೀರು ಸರಬರಾಜು ಮಾಡಲು ರಾಜ್ಯ ಸರ್ಕಾರ ಈ ಪ್ರದೇಶದಲ್ಲಿ ಪೈಪ್‌ ಲೈನ್ ಹಾಕಿತ್ತು. ಆದರೆ ಪೈಪ್‌ಗಳು ಬೇಸಿಗೆಯ ತಿಂಗಳುಗಳಲ್ಲಿ ಒಣಗುತ್ತವೆ. ಅವರಿಗೆ ಸಿಗುವ ಬಾವಿಗಳ ನೀರು ಕುಡಿಯಲು ಯೋಗ್ಯವಾಗಿಲ್ಲ. "ಹೆಚ್ಚಾಗಿ, ನಾವು ಬೂದು ಬಣ್ಣದ ನೀರನ್ನು ಕುಡಿಯುತ್ತೇವೆ," ಎಂದು ದಿನೇಶ್ ಹೇಳುತ್ತಾರೆ. ಇದು ಈ ಹಿಂದೆ ಅತಿಸಾರ ಮತ್ತು ಟೈಫಾಯಿಡ್‌ನಂತಹ ರೋಗಗಳಿಗೆ, ವಿಶೇಷವಾಗಿ ಗರ್ಭಿಣಿಯರು ಮತ್ತು ಮಕ್ಕಳಲ್ಲಿ ರೋಗ ಬರಲು ಕಾರಣವಾಗಿತ್ತು.

ಖಡಿಮಲ್‌ನ ಮಹಿಳೆಯರಿಗೆ ದಿನಾ ಬೆಳಗ್ಗೆ ಮೂರ್ನಾಲ್ಕು ಗಂಟೆಯ ವರೆಗೆ ನಡೆದುಕೊಂಡು ಹೋಗಿ ನೀರು ತರಲು ಶುರುಮಾಡುತ್ತಾರೆ. "ನಾವು ತಲುಪಿದಂತೆ ಮೂರರಿಂದ ನಾಲ್ಕು ಗಂಟೆಗಳ ಕಾಲ ಸಾಲಿನಲ್ಲಿ ನಿಲ್ಲಬೇಕು," ಎಂದು 34 ವರ್ಷದ ನಮ್ಯಾ ರಾಮ ಧಿಕರ್ ಹೇಳುತ್ತಾರೆ. ಹತ್ತಿರದ ಕೈ ಪಂಪ್ ಆರು ಕಿಲೋ ಮೀಟರ್ ದೂರದಲ್ಲಿದೆ. ನದಿಗಳು ಬತ್ತಿ ಹೋಗಿ, ಅಲ್ಲೆಲ್ಲಾ ಕರಡಿಗಳಂತಹ ಬಾಯಾರಿದ ಕಾಡು ಪ್ರಾಣಿಗಳು ಅಡ್ಡಾಡುತ್ತವೆ, ಕೆಲವೊಮ್ಮೆ ಮೇಲಿನ ಮೆಲ್ಘಾಟ್‌ನಲ್ಲಿರುವ ಸೆಮಡೋಹ್ ಟೈಗರ್ ರಿಸರ್ವ್‌ನಿಂದ ಹುಲಿಗಳೂ ಇಲ್ಲಿಗೆ ಬರುತ್ತವೆ.

ನೀರು ತರುವುದು ದಿನದ ಮೊದಲ ಕೆಲಸ. ನಮ್ಯರಂತಹ ಮಹಿಳೆಯರು ಸುಮಾರು 8 ಗಂಟೆಗೆ ಮನರೇಗಾ ಸೈಟ್‌ಗೆ ಕೆಲಸಕ್ಕೆ ಹೊರಡುವ ಮೊದಲು ಮನೆಯ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸುತ್ತಾರೆ. ದಿನ ಪೂರ್ತಿ ಉಳುಮೆಯ ಕೆಲಸ ಮಾಡಿ, ಭಾರವಾದ ನಿರ್ಮಾಣ ಸಾಮಗ್ರಿಗಳನ್ನು ಕೈಯಾರೆ ಸಾಗಿಸಿದ ಮೇಲೂ, ಸಂಜೆ ಅವರು ಮತ್ತೆ 7 ಗಂಟೆಗೆ ನೀರು ತರಲು ಹೋಗಬೇಕು. "ನಮಗೆ ವಿಶ್ರಾಂತಿಯೇ ಇಲ್ಲ. ನಾವು ಅನಾರೋಗ್ಯದಿಂದ ಬಳಲುತ್ತಿದ್ದರೂ, ಗರ್ಭಿಣಿಯಾಗಿದ್ದರೂ ನೀರು ತರುತ್ತೇವೆ. ಹೆರಿಗೆಯ ನಂತರವೂ ನಮಗೆ ಎರಡು ಅಥವಾ ಮೂರು ದಿನ ಮಾತ್ರ ವಿಶ್ರಾಂತಿ ಸಿಗುತ್ತದೆ,” ಎಂದು ನಮ್ಯಾ ಹೇಳುತ್ತಾರೆ.

PHOTO • Swara Garge ,  Prakhar Dobhal
PHOTO • Prakhar Dobhal

ಎಡ: ಮೇಲ್ಘಾಟ್‌ನ ಈ ಪ್ರದೇಶವು ಹಲವು ವರ್ಷಗಳಿಂದ ತೀವ್ರವಾದ ನೀರಿನ ಕೊರತೆಯನ್ನು ಅನುಭವಿಸುತ್ತಿದೆ ಮತ್ತು ಮಹಿಳೆಯರು ದಿನಕ್ಕೆ ಎರಡು ಬಾರಿ ನೀರಿನ ಹೊರೆಯನ್ನು ಹೊರುತ್ತಾರೆ. 'ನಾವು ತಲುಪಿದಂತೆ ಮೂರರಿಂದ ನಾಲ್ಕು ಗಂಟೆಗಳ ಕಾಲ ಸಾಲಿನಲ್ಲಿ ನಿಲ್ಲಬೇಕು,' ಎನ್ನುತ್ತಾರೆ ನಮ್ಯಾ ರಾಮ ಧಿಕಾರ್. ಬಲ: ಸಮೀಪದ ಕೈಪಂಪ್ ಗ್ರಾಮದಿಂದ ಆರು ಕಿಲೋಮೀಟರ್ ದೂರದಲ್ಲಿದೆ

PHOTO • Prakhar Dobhal
PHOTO • Swara Garge ,  Prakhar Dobhal

ಎಡ: ಇಲ್ಲಿನ ಬಹುತೇಕ ಗ್ರಾಮಸ್ಥರು ಮನರೇಗಾ ಸೈಟ್‌ಗಳಿಗೆ ಕೆಲಸಕ್ಕೆ ಹೋಗುತ್ತಾರೆ. ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವೂ ಇಲ್ಲ. ಪ್ರಾಥಮಿಕ ಶಾಲೆಯಲ್ಲಿ ತರಗತಿಗಳೂ ನಿರಂತರವಾಗಿ ನಡೆಯುವುದಿಲ್ಲ. ಬಲ: ನಮ್ಯ ರಾಮ ಧಿಕರ್ (ಗುಲಾಬಿ ಬಣ್ಣದ ಸೀರೆಯಲ್ಲಿ) ಹೆರಿಗೆಯಾದ ನಂತರವೂ ಮಹಿಳೆಯರು ವಿಶ್ರಾಂತಿ ತೆಗೆದುಕೊಳ್ಳದೆ ಕೆಲಸ ಮಾಡುತ್ತಾರೆ ಎಂದು ಹೇಳುತ್ತಾರೆ

ಈ ವರ್ಷ ಚುನಾವಣೆ ಹತ್ತಿರವಾಗುತ್ತಿದ್ದಂತೆ ನಮ್ಯಾ ಸ್ಪಷ್ಟ ನಿಲುವೊಂದನ್ನು ತಳೆದಿದ್ದಾರೆ. "ಗ್ರಾಮಕ್ಕೆ ನಲ್ಲಿ ಬರುವವರೆಗೆ ನಾನು ಮತ ಹಾಕುವುದಿಲ್ಲ," ಎಂದು ನಿರ್ಧರಿಸಿದ್ದಾರೆ.

ಅವರ ನಿಲುವನ್ನು ಗ್ರಾಮದ ಇತರರೂ ಬೆಂಬಲಿಸಿದ್ದಾರೆ.

ನಮಗೆ ರಸ್ತೆ, ವಿದ್ಯುತ್ ಮತ್ತು ನೀರು ಸಿಗುವವರೆಗೆ ನಾವು ಮತ ಹಾಕುವುದಿಲ್ಲ ಎಂದು ಖಡಿಮಲ್‌ನ ಮಾಜಿ ಸರಪಂಚರಾದ 70 ವರ್ಷದ ಬಬ್ನು ಜಮುಂಕರ್ ಹೇಳುತ್ತಾರೆ. “ನಾವು ನಮ್ಮ ಹಳ್ಳಿಯ ಒಳಗೆ ಯಾವುದೇ ರಾಜಕಾರಣಿಯನ್ನು ಬರಲು ಬಿಡುವುದಿಲ್ಲ. ವರ್ಷಗಳಿಂದ ಅವರು ನಮಗೆ ಮೋಸ ಮಾಡಿದ್ದಾರೆ, ಆದರೆ ಇನ್ನು ಮುಂದೆ ಅದು ಸಾಧ್ಯವಿಲ್ಲ,” ಎಂದು ಅವರು ಹೇಳುತ್ತಾರೆ.

ಅನುವಾದ: ಚರಣ್‌ ಐವರ್ನಾಡು

Student Reporter : Swara Garge

سورا گرگے سال ۲۰۲۳ میں پاری کے ساتھ انٹرن شپ کر چکی ہیں اور ایس آئی ایم سی (پونے) میں ماسٹرز کی آخری سال کی طالبہ ہیں۔ وہ وژوئل اسٹوری ٹیلر ہیں اور دیہی امور، ثقافت اور معاشیات میں دلچسپی رکھتی ہیں۔

کے ذریعہ دیگر اسٹوریز Swara Garge
Student Reporter : Prakhar Dobhal

پرکھر ڈوبھال سال ۲۰۲۳ میں پاری کے ساتھ انٹرن شپ کر چکے ہیں اور ایس آئی ایم سی (پونے) سے ماسٹرز کی پڑھائی کر رہے ہیں۔ پرکھر ایک پرجوش فلم میکر ہیں، جن کی دلچسپی دیہی امور، سیاست و ثقافت کو کور کرنے میں ہے۔

کے ذریعہ دیگر اسٹوریز Prakhar Dobhal
Editor : Sarbajaya Bhattacharya

سربجیہ بھٹاچاریہ، پاری کی سینئر اسسٹنٹ ایڈیٹر ہیں۔ وہ ایک تجربہ کار بنگالی مترجم ہیں۔ وہ کولکاتا میں رہتی ہیں اور شہر کی تاریخ اور سیاحتی ادب میں دلچسپی رکھتی ہیں۔

کے ذریعہ دیگر اسٹوریز Sarbajaya Bhattacharya
Translator : Charan Aivarnad

Charan Aivarnad is a poet and a writer. He can be reached at: [email protected]

کے ذریعہ دیگر اسٹوریز Charan Aivarnad