"ಕೋಯಿ ಸರ್ಕಾರ್ ನಹೀಂ ಚಾಂಗಿ ಆಮ್ ಲೋಕನ್ ಲಾಯಿ [ಜನರಿಗೆ ಯಾವ ಸರ್ಕಾರವೂ ಒಳ್ಳೆಯದನ್ನು ಮಾಡಿಲ್ಲ]," ಎಂದು 70 ವರ್ಷ ಪ್ರಾಯದ ಗುರ್ಮೀತ್ ಕೌರ್ ಹೇಳುತ್ತಾರೆ. ಲುಧಿಯಾನದ ಬಾಸ್ಸಿಯನ್ ಎಂಬ ಹಳ್ಳಿಯಿಂದ ಜಾಗರಾನ್‌ನಲ್ಲಿ ನಡೆಯುತ್ತಿರುವ ಕಿಸಾನ್-ಮಜ್ದೂರ್ ಮಹಾಪಂಚಾಯತ್‌ಗೆ (ರೈತರು ಮತ್ತು ಕಾರ್ಮಿಕರ ಮಹಾ ಗ್ರಾಮ ಸಭೆ) ಬಂದಿರುವ ಮಹಿಳೆಯರ ಗುಂಪಿನೊಂದಿಗೆ ಶೆಡ್‌ನಲ್ಲಿ ಅವರು ಕುಳಿತಿದ್ದಾರೆ.

“[ಪ್ರಧಾನಿ] ಮೋದಿಯವರು ಉದ್ಯೋಗದ ಭರವಸೆಯನ್ನು ನೀಡಿದ್ದರು, ಆದರೆ ಅವರು ಯಾವುದೇ ಭರವಸೆಗಳನ್ನೂ ಈಡೇರಿಸಲಿಲ್ಲ. [ಆದ್ದರಿಂದ ಈಗ] ಎಹ್ನಾ ದ ಕೋಯಿ ಹಕ್ಕ್ ನಹಿಂ ಸಾಡೆ ಎಥೆ ಆ ಕೆ ವೋಟಾನ್ ಮಂಗನ್ ದ [ಅವರಿಗೆ ಇಲ್ಲಿಗೆ ಬಂದು ಮತ ಕೇಳುವ ಹಕ್ಕಿಲ್ಲ],” ಎಂದು ಅವರು ಹೇಳುತ್ತಾರೆ. ಗುರ್ಮೀತ್ ಕೌರ್ ಅವರು ದಕೌಂಡಾದ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು ಏಕ್ತಾ) ಜೊತೆಗೆ ಸಂಬಂಧವನ್ನು ಹೊಂದಿದ್ದಾರೆ ಮತ್ತು 2019 ರ ಲೋಕಸಭಾ ಚುನಾವಣೆಯಲ್ಲಿ ತಾವು ಮೋದಿಯವರಿಗೆ ಮತ ನೀಡಿದ್ದೇನೆ ಎಂದು ಪರಿಗೆ ಹೇಳುತ್ತಾರೆ.

ಮೇ 21ರಂದು ಜಾಗರಣ್‌ನ ಹೊಸ ಧಾನ್ಯ ಮಾರುಕಟ್ಟೆಯಲ್ಲಿ ನಡೆದ ಮಹಾಪಂಚಾಯತ್‌ಗೆ ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಅಂಗನವಾಡಿ ನೌಕರರ ಸಂಘಗಳು ಮತ್ತು ವೈದ್ಯಾಧಿಕಾರಿಗಳ ಸಂಘಟನೆಗಳ ಬ್ಯಾನರ್‌ಗಳ ಅಡಿಯಲ್ಲಿ ರಾಜ್ಯದ ಅನೇಕ ಕಡೆಗಳಿಂದ ಸುಮಾರು 50,000 ಜನರು ಜಮಾಯಿಸಿದ್ದರು. ಭಾರತೀಯ ಜನತಾ ಪಾರ್ಟಿ (ಬಿಜೆಪಿ) ವಿರುದ್ಧ ತಮ್ಮ ಪ್ರತಿಭಟನೆಯನ್ನು ಪ್ರದರ್ಶಿಸಿದರು. ‘ಬಿಜೆಪಿ ಹರಾವೋ, ಕಾರ್ಪೊರೇಟ್ ಭಜಾವೋ, ದೇಶ್ ಬಚಾವೋ [ಬಿಜೆಪಿಯನ್ನು ಸೋಲಿಸಿ. ಕಾರ್ಪೋರೇಟ್‌ಗಳನ್ನು ಓಡಿಸಿ. ದೇಶವನ್ನು ಉಳಿಸಿ],’ ಎಂದು ವೇದಿಕೆಯ ಮೇಲೆ ಬ್ಯಾನರ್ ಹಾಕಲಾಗಿತ್ತು.

"ನಾವು ಪಂಜಾಬ್‌ನಲ್ಲಿ ಮೋದಿಗೆ ಕಪ್ಪು ಬಾವುಟ ಪ್ರದರ್ಶಿಸುತ್ತೇವೆ," ಎಂದು ಮಹಾಪಂಚಾಯತ್‌ನಲ್ಲಿ ಉಪಸ್ಥಿತರಿರುವ ಬಿಕೆಯುನ ಲಖೋವಲ್ ಘಟಕದ ಅಧ್ಯಕ್ಷ ಹರಿಂದರ್ ಸಿಂಗ್ ಲಖೋವಾಲ್ ಹೇಳುತ್ತಾರೆ.

ಪಂಜಾಬ್‌ನಲ್ಲಿ ಜೂನ್ 1, 2024 ರಂದು ಚುನಾವಣೆ ನಡೆಯಲಿದೆ. ರೈತರು ಈ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದರು: ಸ್ವಾಮಿನಾಥನ್ ಆಯೋಗದ ಶಿಫಾರಸ್ಸುಗಳಂತೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತ್ರಿ, ಸಂಪೂರ್ಣ ಸಾಲ ಮನ್ನಾ, ಲಖೀಮ್‌ಪುರ್ ಖೇರಿ ಹತ್ಯಾಕಾಂಡದಲ್ಲಿ ಬಲಿಯಾದವರಿಗೆ ನ್ಯಾಯ, ರೈತರು ಹಾಗೂ ಕಾರ್ಮಿಕರಿಗೆ ಪಿಂಚಣಿ ಮತ್ತು 2020-2021ರ ಪ್ರತಿಭಟನೆಯಲ್ಲಿ ಹುತಾತ್ಮರಾದ ಕುಟುಂಬದವರಿಗೆ ಪರಿಹಾರ. ಒಂದು ಕಡೆ ರೈತರು ತಮ್ಮ ಬೇಡಿಕೆಗಳನ್ನು ನಿರ್ಲಕ್ಷ್ಯ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಪಂಜಾಬ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರೆ, ಇನ್ನೊಂದು ಕಡೆ ಅದೇ ರಾಜ್ಯದಲ್ಲಿ ನರೇಂದ್ರ ಮೋದಿಯವರು ತಮ್ಮ ಚುನಾವಣಾ ಪ್ರಚಾರವನ್ನು ಆರಂಭಿಸುತ್ತಿದ್ದಾರೆ. ಓದಿ: ರೈತ ಹೋರಾಟಗಳ ಬಗ್ಗೆ ಪರಿಯ ಸಂಪೂರ್ಣ ವರದಿ

PHOTO • Courtesy: Sanyukt Kisan Morcha Punjab
PHOTO • Arshdeep Arshi

ಎಡ: ಕಿಸಾನ್-ಮಜ್ದೂರ್ ಮಹಾಪಂಚಾಯತ್‌ನಲ್ಲಿರುವ ಸಂಯುಕ್ತ ಕಿಸಾನ್ ಮೋರ್ಚಾದ ಪೋಸ್ಟರ್‌ನಲ್ಲಿ ' ಬಿಜೆಪಿ ಹರಾವೋ, ಕಾರ್ಪೊರೇಟ್ ಭಜಾವೋ, ದೇಶ್ ಬಚಾವೋ, ' ಎಂದು ಬರೆಯಲಾಗಿದೆ. ಬಲ: ಲುಧಿಯಾನದದ ಸುಧಾರ್ ಬ್ಲಾಕ್‌ನ ಅಂಗನವಾಡಿ ನೌಕರರ ಸಂಘದ ಸದಸ್ಯರೂ ಜಾಗ ಣ್‌ ಡೆಯುವ ಈ ಸ್ಥಳಕ್ಕೆ ಬಂದಿದ್ದಾರೆ

PHOTO • Arshdeep Arshi
PHOTO • Arshdeep Arshi

ಎಡ: ಲುಧಿಯಾನದ ಬಾಸ್ಸಿಯನ್ ಎನ್ನುವ ಹಳ್ಳಿಯಿಂದ ಬಂದಿರುವ ಮಹಿಳೆಯರಲ್ಲಿ ಗುರ್ಮೀತ್ ಕೌರ್ ಕೂಡ ಒಬ್ಬರು. ತಾವು ನೀಡಿದ ಉದ್ಯೋಗದ ಭರವಸೆಯನ್ನು ಮೋದಿಯವರು ಈಡೇರಿಸಿಲ್ಲ, ಈಗ ಬಂದು ಮತ ಕೇಳುವ ಹಕ್ಕು ಅವರಿಗೆ ಇಲ್ಲ ಎಂದು ಅವರು ಹೇಳುತ್ತಾರೆ. ಬಲ:ಮೂರು ಕೃಷಿ ಕಾನೂನುಗಳ ವಿರುದ್ಧ 2020-21ರಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಾಣ ಕಳೆದುಕೊಂಡಿರುವ 750 ಮಂದಿ ರೈತರಿಗೆ ರೈತ ಮುಖಂಡರು ಶ್ರದ್ಧಾಂಜಲಿ ಸಲ್ಲಿಸಿದರು. 2024ರ ಫೆಬ್ರವರಿಯಲ್ಲಿ ರೈತರು ಮತ್ತು ಪೊಲೀಸರ ನಡುವೆ ನಡೆದ ಸಂಘರ್ಷದಲ್ಲಿ ತಲೆಗೆ ಪೆಟ್ಟುಬಿದ್ದು ಪ್ರಾಣ ಕಳೆದುಕೊಂಡ ಶುಭಕರಣ್ ಸಿಂಗ್ ಅವರಿಗೆ ಅವರು ಶ್ರದ್ಧಾಂಜಲಿ ಅರ್ಪಿಸಿದರು

ನೆರೆದ ಜನತೆಯನ್ನು ಉದ್ದೇಶಿಸಿ ಮಾತನಾಡುವ ಮೊದಲು ರೈತ ಮುಖಂಡರು, 2020-21ರ ಪ್ರತಿಭಟನೆಯಲ್ಲಿ ಪ್ರಾಣ ಕಳೆದುಕೊಂಡಿರುವ 750 ಮಂದಿ ರೈತರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಈ ವರ್ಷದ ಫೆಬ್ರವರಿಯಲ್ಲಿ ರೈತರು ದೆಹಲಿಯ ಕಡೆಗೆ ಶಾಂತಿಯುತ ಮೆರವಣಿಗೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಪಟಿಯಾಲಾದ ಧಾಬಿ ಗುಜ್ರಾನ್‌ನಲ್ಲಿ ರೈತರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆಯಿತು. ಇದರಲ್ಲಿ ತಲೆಗೆ ಹೊಡೆತ ಬಿದ್ದು 21 ವರ್ಷ ಪ್ರಾಯದ ರೈತ ಶುಭಕರಣ್ ಸಿಂಗ್ ಸಾವನ್ನಪ್ಪಿದರು. ಇವರನ್ನು ಭಾಷಣದಲ್ಲಿ ವಿಶೇಷವಾಗಿ ಸ್ಮರಿಸಲಾಯಿತು. ಇದನ್ನೂ ಓದಿ: ‘ನಮ್ಮ ರಾಜ್ಯದಲ್ಲೇ ನಮಗೆ ರಕ್ಷಣೆಯಿಲ್ಲದಿದ್ದರೆ, ನಾವು ಎಲ್ಲಿಗೆ ಹೋಗಬೇಕು?’

ಕೆಲವು ತಿಂಗಳುಗಳ ಹಿಂದೆ, 2024 ರ ಫೆಬ್ರವರಿಯಲ್ಲಿ, ಈಡೇರದ ತಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೆಹಲಿಗೆ ಕಡೆಗೆ ಸಾಗುತ್ತಿದ್ದ ರೈತರನ್ನು ನಿರ್ಬಂಧಿಸಲಾಯಿತು. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಬ್ಯಾರಿಕೇಡ್‌ಗಳು, ಜಲಫಿರಂಗಿಗಳು ಮತ್ತು ಅಶ್ರುವಾಯು ಶೆಲ್‌ಗಳನ್ನು ಬಳಸಿ ತಡೆಯಲಾಯಿತು.

ಈಗ ತಮ್ಮ ಹಳ್ಳಿಗಳಲ್ಲಿ ಬಿಜೆಪಿಯವರು ಚುನಾವಣಾ ಪ್ರಚಾರ ಮಾಡುವುದು ಇವರಿಗೆ ಇಷ್ಟವಿಲ್ಲ.

ಬಿಕೆಯು ಶಾದಿಪುರ ಘಟಕದ ಅಧ್ಯಕ್ಷ ಬೂಟಾ ಸಿಂಗ್ ಅವರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು. “ಈಗ ಏಕೆ ಮೋದಿಯವರು ಪಂಜಾಬ್‌ಗೆ ಬರುತ್ತಿದ್ದಾರೆ? ನಾವು ಅವರಿಗೆ ಇಲ್ಲಿ ಬಂದು ಪ್ರಚಾರ ಮಾಡಲು ಬಿಡುವುದಿಲ್ಲ,” ಎಂದು ಅವರು ಹೇಳುತ್ತಾರೆ.

ಸಂಯುಕ್ತ ಕಿಸಾನ್ ಮೋರ್ಚಾದ ಕರೆಗೆ ಓಗೊಟ್ಟು ಪಂಜಾಬ್‌ನಾದ್ಯಂತ ಜನರು ಬಿಜೆಪಿಯ ನಾಯಕರಿಗೆ ಮತ್ತು ಅಭ್ಯರ್ಥಿಗಳಿಗೆ ತಮ್ಮ ಗ್ರಾಮಗಳಿಗೆ ಬಂದು ಪ್ರಚಾರ ಮಾಡದಂತೆ ನಿರ್ಬಂಧ ಹೇರಿದ್ದಾರೆ.

PHOTO • Arshdeep Arshi
PHOTO • Arshdeep Arshi

ಎಡ:ಸಂಘಟನೆಯ ಸದಸ್ಯರೊಂದಿಗೆ ಇರುವ ಕ್ರಾಂತಿಕಾರಿ ಕಿಸಾನ್ ಒಕ್ಕೂಟದ ಅಧ್ಯಕ್ಷ ಡಾ.ದರ್ಶನ್ ಪಾಲ್. ಬಲ: ಮೇ 21, 2024 ರಂದು ನಡೆದ ಮಹಾಪಂಚಾಯತ್‌ನಲ್ಲಿ ಸುಮಾರು 50,000 ಜನರು ಪಾಲ್ಗೊಂಡಿದ್ದರು

ಜಾಗರಾನ್‌ನಲ್ಲಿ ರೈತ ಮುಖಂಡರ ಭಾಷಣದಲ್ಲಿ ಫರೀದ್‌ಕೋಟ್ ಮತ್ತು ಲುಧಿಯಾನದದ ಬಿಜೆಪಿ ಅಭ್ಯರ್ಥಿಗಳಾದ ಹನ್ಸ್ ರಾಜ್ ಹನ್ಸ್ ಮತ್ತು ರವನೀತ್ ಬಿಟ್ಟು ಅವರವರನ್ನು ಉಲ್ಲೇಖಿಸಲಾಯಿತು.

“ನಾಯಕರು ಕೈಮುಗಿದು ಮತ ಕೇಳುತ್ತಾರೆ. ನಂತರ ಇದೇ ಜನ ಆಮೇಲೆ ನಮ್ಮೊಂದಿಗೆ ಡೀಲ್‌ ಮಾಡುವುದಾಗಿ ಹೇಳುತ್ತಾರೆ. ನಮ್ಮೊಂದಿಗೆ ಡೀಲ್‌ ಮಾಡಲು ಇವರು ಯಾರು? ” ಎಂದು ಲಖೋವಾಲ್ ತಮ್ಮ ಭಾಷಣದಲ್ಲಿ ಕೇಳುತ್ತಾರೆ. ತಮ್ಮನ್ನು ವಿರೋಧಿಸುವವರ ವಿರುದ್ಧ‌ ಜೂನ್ 1 ರಂದು ನಡೆಯುವ ಮತದಾನದ ನಂತರ ಕ್ರಮಕೈಗೊಳ್ಳಲಾಗುವುದು ಎಂದು ಹೇಳುವ ಹನ್ಸ್ ಅವರ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಎಸ್‌ಕೆಎಂ ನೀಡಿದ ದೂರಿನ ಆಧಾರದ ಮೇಲೆ ಹನ್ಸ್‌ ಅವರಿಗೆ ಭಾರತೀಯ ಚುನಾವಣಾ ಆಯೋಗವು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ನೋಟಿಸ್ ನೀಡಿದೆ.

74 ವರ್ಷ ಪ್ರಾಯದ ಚೇತನ್ ಸಿಂಗ್ ಚೌಧರಿಯವರು ಲುಧಿಯಾನದ ಸಂಗತ್‌ಪುರ ಗ್ರಾಮದಿಂದ ಬಂದಿದ್ದರು. "ಹಿಂದೆ ನಮ್ಮ ತಂದೆ-ತಾಯಿ ಮತ್ತು ಅಜ್ಜಿ-ಅಜ್ಜಿಯರು ಯಾರಿಗೆ ಮೋಟು ಹಾಕುತ್ತಿದ್ದರೋ, ನಾವೂ ಅವರಿಗೆ ವೋಟ್ ಹಾಕುತ್ತಿದ್ದೆವು. ಈಗ ಕಾಲ ಬದಲಾಗಿದೆ. ಮೋದಿಯವರನ್ನು ಅಧಿಕಾರದಿಂದ ಕಿತ್ತೆಸೆಯುವುದೇ ನಮ್ಮ ಈಗಿನ ಉದ್ದೇಶ,” ಎಂದು ಅವರು ಹೇಳುತ್ತಾರೆ.

ಇವರು ಬಿಕೆಯು ರಾಜೇವಾಲ್‌ ಘಟಕದ ಸದಸ್ಯರು. ಇವರ ತಂದೆ ಬಾಬು ಸಿಂಗ್‌ರವರು ತಾವು ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಬಗ್ಗೆ ಪಂಜಾಬ್ ಸರ್ಕಾರ ನೀಡಿರುವ ಕಾರ್ಡನ್ನು ತೋರಿಸುತ್ತಾ ಪರಿಗೆ ಹೇಳುತ್ತಾರೆ. ಬಾಬು ಸಿಂಗ್ ಇಂಡಿಯನ್‌ ನ್ಯಾಷನಲ್‌ ಆರ್ಮಿಯಲ್ಲಿ (ಐಎನ್‌ಎ) ಸೈನಿಕರಾಗಿದ್ದರು. ಬಿಜೆಪಿ ರೈತರ ಒಳಿತಿನ ಬಗ್ಗೆ ಯೋಚಿಸುವುದಿಲ್ಲ ಎಂದು ಚೇತನ್ ಹೇಳುತ್ತಾರೆ.

PHOTO • Arshdeep Arshi
PHOTO • Arshdeep Arshi

ಎಡ: ಧಾನ್ಯ ಮಾರುಕಟ್ಟೆಯಲ್ಲಿ ನಡೆದ ಮಹಾಪಂಚಾಯತ್‌ಗೆ ಬಂದಿರುವ ಕೀರ್ತಿ ಕಿಸಾನ್ ಒಕ್ಕೂಟದ ಸದಸ್ಯರು. ಬಲ: ನಛತರ್ ಸಿಂಗ್ ಗ್ರೆವಾಲ್ (ಎಡ) ಮತ್ತು ಚೇತನ್ ಸಿಂಗ್ ಚೌಧರಿ (ಬಲ) ಲುಧಿಯಾನದ ರೈತರು. 'ಹಿಂದೆಲ್ಲಾ ನಮ್ಮ ತಂದೆ-ತಾಯಿ ಮತ್ತು ಅಜ್ಜಿ-ಅಜ್ಜಿಯರು ಯಾರಿಗೆ ಮೋಟು ಹಾಕುತ್ತಿದ್ದರೋ, ನಾವೂ ಅವರಿಗೆ ವೋಟ್ ಹಾಕುತ್ತಿದ್ದೆವು. ಈಗ ಕಾಲ ಬದಲಾಗಿದೆ. ಮೋದಿಯವರನ್ನು ಅಧಿಕಾರದಿಂದ ಕಿತ್ತೆಸೆಯುವುದೇ ನಮ್ಮ ಈಗಿನ ಉದ್ದೇಶ,ʼ ಎಂದು ಚೌಧರಿ ಹೇಳುತ್ತಾರೆ. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಇವರ ತಂದೆ, ಇಂಡಿಯನ್‌ ನ್ಯಾಷನಲ್‌ ಆರ್ಮಿಯಲ್ಲಿ (ಐಎನ್‌ಎ) ಸೇವೆ ಸಲ್ಲಿಸಿದ್ದರು

PHOTO • Arshdeep Arshi
PHOTO • Arshdeep Arshi

ಎಡ: 2020-21ರ ಪ್ರತಿಭಟನೆಯ ಭಾಗವಾಗಿದ್ದ ಮೆಡಿಕಲ್ ಪ್ರಾಕ್ಟೀಷನರ್ಸ್ ಯೂನಿಯನ್‌ ಇಲ್ಲಿಯೂ ಕೂಡ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿತು. ಬಲ: ಸ್ಥಳದಲ್ಲಿ ಸುಮಾರು ಒಂದು ಡಜನ್ ಪುಸ್ತಕ ಮಳಿಗೆಗಳನ್ನು ತೆರೆಯಲಾಗಿತ್ತು. 2024 ರ ಸಾರ್ವತ್ರಿಕ ಚುನಾವಣೆಗಳ ಕರಪತ್ರಗಳನ್ನು ಕಾರ್ಯಕ್ರಮದಲ್ಲಿ ಇದ್ದವರಿಗೆ ಹಂಚಲಾಯಿತು

ನಾಯಕರು ತಮ್ಮ ಭಾಷಣವನ್ನು ಮುಂದುವರಿಸುತ್ತಿದ್ದಂತೆ, ಧಾನ್ಯ ಮಾರುಕಟ್ಟೆಯ ತುಂಬಾ ಘೋಷಣೆಗಳು ಮೊಳಗಿದವು. "ಕಿಸಾನ್ ಮಸ್ದೂರ್ ಏಕತಾ ಜಿಂದಾಬಾದ್ [ರೈತ ಮತ್ತು ಕಾರ್ಮಿಕರ ಐಕ್ಯತೆ ಚಿರಾಯುವಾಗಲಿ!], ನರೇಂದ್ರ ಮೋದಿ ಗೋ ಬ್ಯಾಕ್,” ಎಂದು ಘೋಷಣೆಗಳನ್ನು ಕೂಗಿದರು.

ಕಿಸಾನ್-ಮಜ್ದೂರ್ ಮಹಾಪಂಚಾಯತ್ ನಡೆಯುತ್ತಿದ್ದ ಸ್ಥಳದ ಸುತ್ತಮುತ್ತ, ಸಮೀಪದ ಹಳ್ಳಿಗಳ ರೈತ ಸಂಘಗಳ ಘಟಕಗಳು ಲಂಗರ್‌ಗಳನ್ನು (ಊಟ ತಿಂಡಿಯ ಸ್ಟಾಲ್‌ಗಳು) ತೆರೆದಿದ್ದವು. 2020-21ರ ಪ್ರತಿಭಟನೆಯಲ್ಲಿ 13 ತಿಂಗಳ ಕಾಲ ಟಿಕ್ರಿ ಗಡಿಯಲ್ಲಿ ರೈತರ ಸೇವೆಯನ್ನು ಮಾಡಿದ್ದ ಮೆಡಿಕಲ್ ಪ್ರಾಕ್ಟೀಷನರ್ಸ್ ಯೂನಿಯನ್‌ ಇಲ್ಲಿಯೂ ವೈದ್ಯಕೀಯ ಶಿಬಿರಗಳನ್ನು ನಡೆಸಿತ್ತು. ಪಂಜಾಬ್‌ನ ಇಂಕ್ಲಾಬಿ ಕೆಂದಾರ್ ಮತ್ತು ಜಮ್ಹೂರಿ ಅಧಿಕಾರ್ ಸಭಾದ ಸದಸ್ಯರು ಚುನಾವಣೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಧರ್ಮ, ಜಾತಿ ಮತ್ತು ಲಿಂಗ ಮುಂತಾದ ವಿಚಾರಗಳಿಗೆ ಸಂಬಂಧಿಸಿದ ಕರಪತ್ರಗಳನ್ನು ಹಂಚುತ್ತಿದ್ದರು.

ಎಸ್‌ಕೆಎಂ ಬಿಜೆಪಿಯನ್ನು ಸೋಲಿಸುವಂತೆ ಜನರನ್ನು ಹೇಳುತ್ತಿದೆ, ಆದರೆ ಯಾವುದೇ ನಿರ್ದಿಷ್ಟ ಪಕ್ಷಕ್ಕೆ ಮತ ಹಾಕುವಂತೆ ಅದು ಕರೆ ಕೊಡುತ್ತಿಲ್ಲ. ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವ ವ್ಯಕ್ತಿಗೆ ಮತ ನೀಡುವಂತೆ ಕೀರ್ತಿ ಕಿಸಾನ್ ಒಕ್ಕೂಟದ ಮುಖಂಡ ರಾಜಿಂದರ್ ದೀಪ್‌ಸಿಂಗ್ವಾಲಾ ಹೇಳುತ್ತಾರೆ.

ಮಹಾಪಂಚಾಯತ್ ಮುಗಿಯುತ್ತಿದ್ದಂತೆ, ಕಾರ್ಯಕ್ರಮದ ಸಂದೇಶ ಸ್ಪಷ್ಟವಾಗಿತ್ತು: ಪ್ರಚಾರಕ್ಕೆ ಬರುವ ವೇಳೆ ಬಿಜೆಪಿಯವರನ್ನು ವಿರೋಧಿಸಿ, ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ. "ಯಾರೂ ಹಿಂಸಾಚಾರವನ್ನು ಬೆಂಬಲಿಸುವುದಿಲ್ಲ, ನಾವು ಶಾಂತಿಯುತವಾಗಿ ಪ್ರತಿಭಟಿಸುತ್ತೇವೆ," ಎಂಬ ನಿರ್ಧಾರವನ್ನು ಲಖೋವಾಲ್ ಘೋಷಿಸುತ್ತಾರೆ.

ಅನುವಾದ: ಚರಣ್‌ ಐವರ್ನಾಡು

Arshdeep Arshi

Arshdeep Arshi is an independent journalist and translator based in Chandigarh and has worked with News18 Punjab and Hindustan Times. She has an M Phil in English literature from Punjabi University, Patiala.

Other stories by Arshdeep Arshi
Editor : Sarbajaya Bhattacharya

Sarbajaya Bhattacharya is a Senior Assistant Editor at PARI. She is an experienced Bangla translator. Based in Kolkata, she is interested in the history of the city and travel literature.

Other stories by Sarbajaya Bhattacharya
Translator : Charan Aivarnad

Charan Aivarnad is a poet and a writer. He can be reached at: [email protected]

Other stories by Charan Aivarnad