ಅರತ್ತೊಂಡಿ ಗ್ರಾಮದ ಕಿರಿದಾದ ಗಲ್ಲಿಗಳ ತುಂಬಾ ಸಿಹಿಯಾದ ಕಾಯಿ ಅಮಲೇರಿಸುವ ಘಮಲು ಹರಡಿದೆ.

ಪ್ರತಿ ಮನೆಯ ಮುಂದಿನ ಅಂಗಳದಲ್ಲಿ ಹಳದಿ, ಹಸಿರು ಮತ್ತು ಕಂದು ಬಣ್ಣದ ಮಹುವಾ ಹೂವುಗಳು ಬಿದಿರಿನ ಚಾಪೆಗಳು, ಮೆತ್ತನೆಯ ರಗ್ಗುಗಳು ಮತ್ತು ಮಣ್ಣಿನ ನೆಲದ ಮೇಲೆ ಒಣಗುತ್ತಿವೆ. ಇತ್ತೀಚಿಗಷ್ಟೇ ಕಿತ್ತು ತಂದಿರುವ ಹಳದಿ ಮತ್ತು ಹಸಿರು ಬಣ್ಣದ ಹೂವುಗಳು ಬಿಸಿಲಿಗೆ ಒಣಗಿ ಗಟ್ಟಿಯಾದ ಕಂದು ಬಣ್ಣದ ಹೂವುಗಳಾಗಿ ಬದಲಾಗಿವೆ.

ಚುನಾವಣೆ ಒಂದು ಕಡೆಯಲ್ಲಿದ್ದರೆ, ಮಹಾರಾಷ್ಟ್ರದ ಗೊಂಡಿಯಾದಲ್ಲಿ ಮಹುವಾ ಸೀಸನ್‌ ಶುರುವಾಗಿದೆ.

"ಏಪ್ರಿಲ್‌ನಲ್ಲಿ ಮಹುವಾ, ಮೇ ತಿಂಗಳಿನಲ್ಲಿ ಟೆಂಡು ಎಲೆಗಳು ನಮ್ಮಲ್ಲಿರುತ್ತವೆ," ಎಂದು ಸಾರ್ಥಿಕಾ ಕೈಲಾಶ್ ಆಡೆ ನಗುತ್ತಾ ಹೇಳುತ್ತಾರೆ. 35 ವರ್ಷ ವಯಸ್ಸಿನ ಇವರು ಪ್ರತಿದಿನ ಬೆಳಿಗ್ಗೆ, ಮನ ಮತ್ತು ಗೊಂಡ ಬುಡಕಟ್ಟು ಜನಾಂಗದ ಇತರ ಜನರೊಂದಿಗೆ ಸುತ್ತಮುತ್ತಲಿನ ಕಾಡುಗಳಿಗೆ ಹೋಗಿ 4-5 ಗಂಟೆಗಳ ಕಾಲ ಎತ್ತರದ ಮಹುವಾ ಮರಗಳಿಂದ ಉದುರುವ ಮೃದುವಾದ ಹೂವುಗಳನ್ನು ಸಂಗ್ರಹಿಸುತ್ತಾರೆ. ಅವುಗಳ ಎಲೆಗಳು ಈಗ ಕೆಂಪು ಬಣ್ಣದಲ್ಲಿವೆ. ಮಧ್ಯಾಹ್ನದ ತಾಪಮಾನ 41 ಡಿಗ್ರಿ ಸೆಲ್ಸಿಯಸ್‌ ಇದೆ, ಬಿಸಿಲಿನ ಉರಿ ಹೆಚ್ಚಾಗುತ್ತಿದೆ.

ಪ್ರತಿ ಮಹುವಾ ಮರ ಸರಾಸರಿ 4-6 ಕಿಲೋಗ್ರಾಂಗಳಷ್ಟು ಹೂವುಗಳನ್ನು ಕೊಡುತ್ತದೆ. ಅರತ್ತೊಂಡಿ ಗ್ರಾಮದ ಜನರು (ಸ್ಥಳೀಯರ ಬಾಯಲ್ಲಿ ಅರಕ್ತೊಂಡಿ) ಬಿದಿರಿನ ಡಬ್ಬಿಗಳಲ್ಲಿ ಅಥವಾ ಪ್ಲಾಸ್ಟಿಕ್ ಚೀಲಗಳಲ್ಲಿ ಇವುಗಳನ್ನು ಸಂಗ್ರಹಿಸಿ ಬಿಸಿಲಿನಲ್ಲಿ ಒಣಗಿಸಲು ಮನೆಗೆ ತರುತ್ತಾರೆ. ಒಂದು ಕಿಲೋ ಒಣಗಿದ ಮಹುವಾಗೆ 35-40 ರುಪಾಯಿ ಸಿಗುತ್ತದೆ. ಒಬ್ಬ ವ್ಯಕ್ತಿ ಪ್ರತಿದಿನ ಸರಾಸರಿ 5-7 ಕಿಲೋ ಮಹುವಾಗಳನ್ನು ಸಂಗ್ರಹಿಸಬಹುದು.

PHOTO • Jaideep Hardikar

ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಪೂರ್ವ ವಿದರ್ಭದ ಗೊಂಡಿಯಾ, ಭಂಡಾರಾ, ಗಡ್ಚಿರೋಲಿ ಮತ್ತು ಚಂದ್ರಾಪುರ ಜಿಲ್ಲೆಗಳಲ್ಲಿ ಏಪ್ರಿಲ್ 19 ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ಈ ಪ್ರದೇಶದಾದ್ಯಂತ ಪುರುಷರು, ಮಹಿಳೆಯರು ಮತ್ತು ಮಕ್ಕಳು ಮುಂಜಾನೆ ಮಹುವಾ ಹೂವುಗಳನ್ನು ಹೆಕ್ಕಲು ಹೋಗುತ್ತಾರೆ

PHOTO • Jaideep Hardikar
PHOTO • Jaideep Hardikar

ಮಹುವಾ ಹೂವುಗಳನ್ನು ಸಂಗ್ರಹಿಸುವ ಕೆಲಸಕ್ಕೆ ದಿನದಲ್ಲಿ ಐದು ಗಂಟೆಗಳು ಬೇಕು. ಹೂವುಗಳನ್ನು ಸಂಗ್ರಹಿಸಿದ ನಂತರ ಬಿದಿರಿನ ಚಾಪೆಗಳು, ರಗ್ಗುಗಳು ಮತ್ತು ಶೀಟುಗಳ ಮೇಲೆ ಏಪ್ರಿಲ್ ತಿಂಗಳ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಇದುವೇ ಮಧ್ಯ ಭಾರತದ ಜನರ ವರ್ಷದ ಜೀವನಾಧಾರ

ಮಧ್ಯ ಮತ್ತು ಪೂರ್ವ ಭಾರತದಾದ್ಯಂತ ಇರುವ ಬುಡಕಟ್ಟು ಸಮುದಾಯಗಳ ಜೀವನದಲ್ಲಿ ಮಹುವಾ (ಮಧುಕಾ ಲಾಂಗಿಫೋಲಿಯಾ) ಮರಗಳು ಸಾಂಸ್ಕೃತಿಕವಾಗಿ, ನಂಬಿಕೆಯ ಭಾಗವಾಗಿ ಮತ್ತು ಆರ್ಥಿಕವಾಗಿ ಮಹತ್ವವನ್ನು ಹೊಂದಿವೆ.  ಗಡ್ಚಿರೋಲಿ ಜಿಲ್ಲೆ ಸೇರಿದಂತೆ, ಪೂರ್ವ ವಿದರ್ಭದ ಗೊಂಡಿಯಾ ಜಿಲ್ಲೆಯ ಆದಿವಾಸಿ ಒಳನಾಡಿನಲ್ಲಿ ಮಹುವಾ ಆದಾಯದ ಪ್ರಮುಖ ಮೂಲವಾಗಿದೆ. 2011 ರ ಜನಗಣತಿಯ ಪ್ರಕಾರ, ಇಲ್ಲಿ ಶೇಕಡಾ 13.3 ರಷ್ಟು ಪರಿಶಿಷ್ಟ ಜಾತಿಗಳ ಮತ್ತು ಶೇಕಡಾ 16.2 ರಷ್ಟು ಪರಿಶಿಷ್ಟ ಪಂಗಡಗಳ ಜನರಿದ್ದಾರೆ. ಈ ಜನರ ಬದುಕಿನಲ್ಲಿ ಸಂಪಾದನೆಗಾಗಿ ಇರುವ ಇನ್ನೊಂದು ಆಯ್ಕೆಯೆಂದರೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮನರೇಗಾ) ಕಾರ್ಯಕ್ರಮ.

ಒಣ ಭೂಮಿಯಾಗಿರುವ, ಸಣ್ಣ-ಪ್ರಮಾಣದ ಕೃಷಿಯನ್ನು ಮಾಡುವ ಈ ಹಳ್ಳಿಗಳಲ್ಲಿ, ಕೃಷಿ ಕೆಲಸ ಅವಸಾನವಾಗುತ್ತಿರುವುದರಿಂದ ಹೊಲದ ಆಚೆಗೆ ಬೇರೆ ಕೆಲಸ ಹುಡುಕುವುದು ಕಷ್ಟವಾಗಿದೆ. ಹಾಗಾಗಿ, ಏಪ್ರಿಲ್‌ನಲ್ಲಿ ಲಕ್ಷಾಂತರ ಜನರು ತಮ್ಮ ಸ್ವಂತ ಜಮೀನುಗಳಲ್ಲಿ, ಇಲ್ಲವೇ ಅರ್ಜುನಿ - ಮೋರ್ಗಾಂವ್ ತಹಸಿಲ್‌ನ ಸುತ್ತಮುತ್ತಲಿನ ಕಾಡುಗಳಲ್ಲಿ ಈ ಹೂವುಗಳನ್ನು ಸಂಗ್ರಹಿಸಲು ದಿನನಿತ್ಯ ಗಂಟೆಗಟ್ಟಲೆ ಕಳೆಯುತ್ತಾರೆ. 2022 ರ ಜಿಲ್ಲಾ ಸಾಮಾಜಿಕ ಮತ್ತು ಆರ್ಥಿಕ ವಿಮರ್ಶೆಯ ಪ್ರಕಾರ , ಗೊಂಡಿಯಾದಲ್ಲಿ ಶೇಕಡಾ 51 ರಷ್ಟು ಭೂಮಿಯಲ್ಲಿ ಅರಣ್ಯಗಳಿವೆ, ಅದರಲ್ಲಿ ಅರ್ಧದಷ್ಟು ಸಂರಕ್ಷಿತ ಅರಣ್ಯ ಪ್ರದೇಶವಾಗಿದೆ.

ಮುಂಬೈ ಸ್ಕೂಲ್ ಆಫ್ ಎಕನಾಮಿಕ್ಸ್ ಅಂಡ್ ಪಬ್ಲಿಕ್ ಪಾಲಿಸಿ (ಎಂಎಸ್‌ಇ&ಪಿಪಿ) ಆರಂಭಿಸಿದ ಮಹುವಾದ ಉತ್ಪಾದನೆ ಮತ್ತು ಬುಡಕಟ್ಟು ಜನರ ಜೀವನೋಪಾಯದ ಸ್ಥಿತಿಗತಿಯ ಕುರಿತಾದ 2019 ರ ಅಧ್ಯಯನವು ಪೂರ್ವ ವಿದರ್ಭ ಪ್ರದೇಶದಲ್ಲಿ ಸರಿಸುಮಾರು 1.15 ಲಕ್ಷ ಮೆಟ್ರಿಕ್ ಟನ್ (ಎಂಟಿ) ಮಹುವಾವನ್ನು ಸಂಗ್ರಹಿಸಲಾಗುತ್ತದೆ ಎಂದು ತಿಳಿಸಿದೆ. ಇದರಲ್ಲಿ ಗೊಂಡಿಯಾ ಜಿಲ್ಲೆಯ ಪಾಲು 4,000 ಎಂಟಿಗಿಂತ ಸ್ವಲ್ಪ ಹೆಚ್ಚಿದೆ ಮತ್ತು ಗಡ್ಚಿರೋಲಿಯು ರಾಜ್ಯದ ಒಟ್ಟು ಉತ್ಪಾದನೆಯ ಶೇಕಡಾ 95 ಭಾಗವನ್ನು ಹೊಂದಿದೆ ಎಂದು ಪ್ರಸಿದ್ಧ ಅರ್ಥಶಾಸ್ತ್ರಜ್ಞ ಮತ್ತು ಎಂಎಸ್‌ಇ&ಪಿಪಿಯ ಮಾಜಿ ನಿರ್ದೇಶಕ ಡಾ. ನೀರಜ್ ಹಟೇಕರ್ ಹೇಳುತ್ತಾರೆ.

ಒಂದು ಕಿಲೋ ಮಹುವಾ ಎಂದರೆ ಒಬ್ಬ ಮನುಷ್ಯನ ಒಂದು ಗಂಟೆಯ ಶ್ರಮ ಎಂದು ಈ ಅಧ್ಯಯನವು ಕಂಡುಹಿಡಿದಿದೆ. ಏಪ್ರಿಲ್‌ ತಿಂಗಳಿನಲ್ಲಿ ಸಾವಿರಾರು ಕುಟುಂಬಗಳು ದಿನಕ್ಕೆ 5-6 ಗಂಟೆಗಳ ಕಾಲ ಮಹುವಾ ಹೂವುಗಳನ್ನು ಸಂಗ್ರಹಿಸುವ ಕೆಲಸ ಮಾಡುತ್ತವೆ.

PHOTO • Jaideep Hardikar
PHOTO • Jaideep Hardikar

ಸಂಗ್ರಹಿಸಿದ ಮಹುವಾ ಹೂವುಗಳನ್ನು ಛತ್ತೀಸ್‌ಗಢದ ವ್ಯಾಪಾರಿಗಳು ಗ್ರಾಮ ಮಟ್ಟದಲ್ಲಿ (ಎಡ) ಒಟ್ಟುಮಾಡಿ ರಾಯ್‌ಪುರಕ್ಕೆ ಸಾಗಿಸುತ್ತಾರೆ. ಅರಕ್ತೊಂಡಿ ಗ್ರಾಮದ ಮನೆಗಳು ಅರಣ್ಯ ಆಧಾರಿತ ಜೀವನೋಪಾಯಗಳಾದ ಏಪ್ರಿಲ್‌ ತಿಂಗಳ ಮಹುವಾ ಸಂಗ್ರಹಣೆ ಮತ್ತು ಮೇ ತಿಂಗಳ ಟೆಂಡು ಎಲೆಗಳ ಸಂಗ್ರಹಣೆಯನ್ನು ನಂಬಿ ಬದುಕುತ್ತಿವೆ

ನೆರೆಯ ರಾಜ್ಯವಾದ ಛತ್ತೀಸ್‌ಗಢವು ಮಹುವಾ ಹೂವುಗಳ ದೊಡ್ಡ ಸಂಗ್ರಹ ಕೇಂದ್ರವಾಗಿದೆ. ಇವನ್ನು ಮುಖ್ಯವಾಗಿ ಮದ್ಯ ತಯಾರಿಕೆ, ಆಹಾರ ಉತ್ಪನ್ನಗಳು ಮತ್ತು ಜಾನುವಾರುಗಳಿಗೆ ಮೇವಾಗಿ ಬಳಸಲಾಗುತ್ತದೆ.

"ಸಂಗ್ರಹವಾದ ಹೂವುಗಳ ಪ್ರಮಾಣ ನಿಜವಾದ ಉತ್ಪಾದನೆಗಿಂತ ತುಂಬಾ ಕಡಿಮೆ," ಎಂದು ಡಾ. ಹಟೇಕರ್ ಹೇಳುತ್ತಾರೆ. " ಇದಕ್ಕೆ ಇರುವ ಕಾರಣಗಳು ಅನೇಕ, ಮುಖ್ಯವಾಗಿ ಈ ಕೆಲಸ ತ್ರಾಸದಾಯಕ ಮತ್ತು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ," ಎಂದು ಅವರು ಹೇಳುತ್ತಾರೆ. ಹೂವುಗಳಿಂದ ಅಕ್ರಮ ಮದ್ಯ ತಯಾರಿಸುವುದು ಕಾನೂನು ಬಾಹಿರವಾಗಿರುವುದರಿಂದ ಮಹಾರಾಷ್ಟ್ರದಲ್ಲಿ ಮಹುವಾ ನೀತಿಯಲ್ಲಿ ಆಮೂಲಾಗ್ರ ಸುಧಾರಣೆಗಳನ್ನು ತರಲು ಅವರು ಸೂಚಿಸುತ್ತಾರೆ. ಬೆಲೆಯನ್ನು ಸ್ಥಿರಗೊಳಿಸಿದರೆ, ಮೌಲ್ಯ ಸರಪಳಿಯನ್ನು ವ್ಯವಸ್ಥಿತಗೊಳಿಸಿದರೆ, ಸಂಘಟಿತ ಮಾರುಕಟ್ಟೆಗಳನ್ನು ರೂಪಿಸಿದರೆ, ಅದನ್ನೇ ಅವಲಂಬಿಸಿರುವ ಬಹುಪಾಲು ಗೊಂಡ ಬುಡಕಟ್ಟು ಜನತೆಗೆ ಪ್ರಯೋಜನವಾಗುತ್ತದೆ ಎಂದು ಅವರು ಹೇಳುತ್ತಾರೆ.

*****

ಅರವಿಂದ್ ಪನಗಾರಿಯಾರವರ ' ಅಸಮಾನತೆಯ ಕಾರಣಕ್ಕೆ ನಿದ್ರೆ ಕಳೆದುಕೊಳ್ಳಬೇಡಿ ' ಎಂಬ ಲೇಖನವನ್ನು ಸಾರ್ಥಿಕಾ ಓದಿರಲು ಸಾಧ್ಯತೆಯಿಲ್ಲ. ಈ ಲೇಖನ ಏಪ್ರಿಲ್ 2, 2024 ರಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾಗಿತ್ತು. ಪನಗಾರಿಯಾ ಅವರು ಸಾರ್ಥಿಕಾರನ್ನು ಭೇಟಿಯಾಗಿರಲೂ ಸಾಧ್ಯವಿಲ್ಲ.

ಅವರ ಪ್ರಪಂಚಗಳು ಎಂದಿಗೂ ಸಂಧಿಸಿಯೇ ಇರಲಿಲ್ಲ.

ಪನಗಾರಿಯಾ ಅವರು ಭಾರತದ ಶೇಕಡಾ ಒಂದುರಷ್ಟು ಇರುವ ಸಿರಿವಂತರಲ್ಲಿ ಒಬ್ಬರು. ಪ್ರತಿಷ್ಠಿತ ಡಾಲರ್ ಬಿಲಿಯನೇರ್ ಗುಂಪಿನಲ್ಲಿ ಅವರು ಇಲ್ಲದೇ ಇದ್ದರೂ, ಪ್ರಭಾವಿ ನೀತಿ ವಿನ್ಯಾಸಕರ ಲೀಗ್‌ನಲ್ಲಂತೂ ಇದ್ದಾರೆ.

ಸಾರ್ಥಿಕಾ ಮತ್ತು ಅವರ ಹಳ್ಳಿಯ ಜನರು ದೇಶದ ಅತ್ಯಂತ ಬಡ ಸಮುದಾಯ ಮತ್ತು ಯಾರೂ ಪ್ರಭಾವಿಗಳಲ್ಲ. ಇವರು ಸಾಮಾಜಿಕ ಶ್ರೇಣಿಯಲ್ಲಿ ಕೆಳಗಿರುವ ಶೇಕಡಾ 10ರಷ್ಟು ಜನರೊಂದಿಗೆ ಬದುಕುತ್ತಾರೆ. ಅವರ ಕುಟುಂಬಗಳಿಗೆ ಯಾವುದೇ ಸೌಕರ್ಯಗಳಿಲ್ಲ, ಎಲ್ಲಾ ಮೂಲಗಳಿಂದಲೂ ಅವರ ಕುಟುಂಬದ ತಿಂಗಳ ಆದಾಯ 10,000 ರುಪಾಯಿಯನ್ನೂ ಮೀರುವುದಿಲ್ಲ.

ಎರಡು ಮಕ್ಕಳ ಈ ತಾಯಿ - ಅವರ ಸುತ್ತಲಿರುವ ಇತರ ಮನಸಿನಲ್ಲಿರುವ ಮಾತಿನಂತೆ - ಅವರ ಬದುಕು ದಿನದಿಂದ ದಿನಕ್ಕೆ ಕಷ್ಟಕರವಾಗುತ್ತಿದೆ ಎಂದು ಹೇಳುತ್ತಾರೆ. ಹಣದುಬ್ಬರದಿಂದಾಗಿ ಮತ್ತು ಆದಾಯವನ್ನು ಗಳಿಸುವ ದಾರಿಗಳು ಸಮರ್ಪಕವಾಗಿರದೇ ಇರುವುದರಿಂದ ಇವರು ಸರಿಯಾಗಿ ನಿದ್ರೆಯನ್ನೇ ಮಾಡುತ್ತಿಲ್ಲ.

PHOTO • Jaideep Hardikar
PHOTO • Jaideep Hardikar

ಸಾರ್ಥಿಕಾ ಆಡೆ (ನೀಲಿ ಬಂದನ) ಯವರು ಮಹುವಾ ಹೂಗಳು ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಅವಲಂಬಿಸಿ ಬದುಕುತ್ತಿರುವ ಸಣ್ಣ ರೈತ ಮಹಿಳೆ. ಕಳೆದ 10 ವರ್ಷಗಳಲ್ಲಿ, ಮನರೇಗಾದಲ್ಲಿ ಕೇವಲ ಈ ಯೋಜನೆಯಡಿ ಆರು-ಏಳು ಗಂಟೆಗಳ ಕಾಲ ಕೆಲಸ ಮಾಡಬಲ್ಲ ಮಹಿಳೆಯರಿಗೆ ಮಾತ್ರ ಬೇಡಿಕೆ ಹೆಚ್ಚಾಗಿದೆ ಮತ್ತು ಇದರಲ್ಲಿ ವಿದ್ಯಾವಂತ ಪುರುಷರು ಮತ್ತು ಮಹಿಳೆಯರು ಕೂಡ ಸೇರಿದ್ದಾರೆ. ಗ್ರಾಮದ ಇತರ ಮಹಿಳೆಯರೊಂದಿಗೆ ಇರುವ ಸಾರ್ಥಿಕಾ (ಬಲ)

"ಎಲ್ಲವೂ ದುಬಾರಿಯಾಗುತ್ತಿದೆ," ಎಂದು ಅರತ್ತೋಂಡಿಯ ಮಹಿಳೆಯರು ಹೇಳುತ್ತಾರೆ. "ಅಡುಗೆ ಎಣ್ಣೆ, ಸಕ್ಕರೆ, ತರಕಾರಿ, ಇಂಧನ, ವಿದ್ಯುತ್, ಪ್ರಯಾಣ, ಸ್ಯಾನಿಟರಿ, ಉಡುಪುಗಳು," ಎಲ್ಲವೂ ದುಬಾರಿಯಾಗಿವೆ ಎನ್ನುತ್ತಾ ಈ ಪಟ್ಟಿಯನ್ನು ಮುಂದುವರಿಸುತ್ತಾರೆ.

ಸಾರ್ಥಿಕಾ ಅವರ ಕುಟುಂಬಕ್ಕೆ ಭತ್ತದ ಕೃಷಿ ಮಾಡುವ ಒಂದು ಎಕರೆಗಿಂತ ಕಡಿಮೆ ಇರುವ ಮಳೆ ಆಧಾರಿತ ಹೊಲವಿದೆ. ಇದರಿಂದಾಗಿ ಅವರಿಗೆ ಸುಮಾರು 10 ಕ್ವಿಂಟಾಲ್‌ಗಳಷ್ಟು ಅಕ್ಕಿ ಸಿಗುತ್ತದೆ. ವರ್ಷಪೂರ್ತಿ ಆದಾಯ ತರಬಲ್ಲಂತವು ಏನೂ ಇವರಲ್ಲಿ ಇಲ್ಲ.

ಆ ಸಂದರ್ಭದಲ್ಲಿ ಸಾರ್ಥಿಕರಂತಹ ಆದಿವಾಸಿಗಳು ಏನು ಮಾಡುತ್ತಾರೆ?

“ಮಾರ್ಚ್‌ನಿಂದ ಮೇ ತಿಂಗಳವರೆಗೆ ನಮ್ಮ ಜೀವನೋಪಾಯಕ್ಕೆ ಮೂರು ಉತ್ಪನ್ನಗಳ ಮೇಲೆ ಅವಂಬಿಸಿ ಬದುಕುತ್ತೇವೆ,” ಎಂದು ಈ ಹಳ್ಳಿಯ ರಾಜ್ಯದ ಗ್ರಾಮೀಣ ಜೀವನೋಪಾಯ ಮಿಷನ್‌ - ಉಮೇದ್‌ನ ಸಮುದಾಯ ಸಂಪನ್ಮೂಲ ವ್ಯಕ್ತಿ ಅಲ್ಕಾ ಮಡಾವಿ ಹೇಳುತ್ತಾರೆ.

ಸಣ್ಣಪುಟ್ಟ ಕಾಡುತ್ಪನ್ನಗಳು - ಏಪ್ರಿಲ್‌ನಲ್ಲಿ ಮಹುವಾ, ಮೇನಲ್ಲಿ ಟೆಂಡು ಎಲೆಗಳು; ಮನರೇಗಾದ ಕೆಲಸ ಮತ್ತು ರಾಜ್ಯ ಸರ್ಕಾರ ನೀಡುವ ಅಗ್ಗದ ಆಹಾರ ಧಾನ್ಯಗಳು- ಹೀಗೆ ಇವರು ಪಟ್ಟಿಮಾಡುತ್ತಾರೆ. "ನೀವು ಇವುಗಳಲ್ಲಿ ಮೂರನ್ನು ತೆಗೆದುಹಾಕಿದರೂ, ನಾವು ಶಾಶ್ವತವಾಗಿ ನಗರಗಳಿಗೆ ಕೆಲಸ ಹುಡುಕಿಕೊಂಡು ವಲಸೆ ಹೋಗುತ್ತೇವೆ, ಇಲ್ಲವೇ ಇಲ್ಲಿಯೇ ಇದ್ದು ಹಸಿವಿನಿಂದ ಸಾಯುತ್ತೇವೆ," ಎಂದು ಇಲ್ಲಿನ ಸ್ವಸಹಾಯ ಗುಂಪುಗಳನ್ನು ಮುನ್ನಡೆಸುವ ಮಡಾವಿ ಹೇಳುತ್ತಾರೆ.

ಸಾರ್ಥಿಕಾ ಮತ್ತು ಅವರ ಗೊಂಡ ಸಮುದಾಯದವರು ಬೆಳಗ್ಗೆಯಿಂದ ಐದು ಗಂಟೆಗಳ ಕಾಲ ಸುತ್ತಮುತ್ತಲಿನ ಕಾಡುಗಳಿಂದ ಮಹುವಾ ಹೂಗಳನ್ನು ಸಂಗ್ರಹಿಸುತ್ತಾರೆ, ಐದರಿಂದ ಆರು ಗಂಟೆಗಳ ಕಾಲ ಮನರೇಗಾದ ಅಡಿಯಲ್ಲಿ ರಸ್ತೆ ನಿರ್ಮಾಣದ ಕೆಲಸ ಮಾಡುತ್ತಾರೆ. ಇದಾದ ಮೇಲೆ ಸಂಜೆ ತಮ್ಮ ತಮ್ಮ ಮನೆಗಳಲ್ಲಿ ಅಡುಗೆ ಮಾಡುವುದು, ಪಾತ್ರೆ ತೊಳೆಯುವುದು, ಜಾನುವಾರುಗಳನ್ನು ನೋಡಿಕೊಳ್ಳುವುದು, ಮಕ್ಕಳನ್ನು ನೋಡಿಕೊಳ್ಳುವುದು ಮತ್ತು ಮನೆ ಸ್ವಚ್ಛಗೊಳಿಸುವುದು- ಮೊದಲಾದ ಕೆಲಸಗಳನ್ನು ಮಾಡುತ್ತಾರೆ. ಕೆಲಸದ ಸ್ಥಳದಲ್ಲಿ, ಸಾರ್ಥಿಕಾ ಗಟ್ಟಿಯಾದ ಮಣ್ಣಿನ ಮುದ್ದೆಯನ್ನು ಪ್ಲಾಸ್ಟಿಕ್ ಬುಟ್ಟಿಗೆ ತುಂಬಿಸಿ, ತಮ್ಮ ಸ್ನೇಹಿತೆಯರ ತಲೆಯ ಮೇಲೆ ಹೊರಿಸುತ್ತಾರೆ. ಅವರು ಅವುಗಳನ್ನು ರಸ್ತೆಗಳ ಮೇಲೆ ಸುರಿಯುತ್ತಾರೆ. ಪುರುಷರು ಆ ಮಣ್ಣನ್ನು ಸಮತಟ್ಟು ಮಾಡುತ್ತಾರೆ. ಪ್ರತಿಯೊಬ್ಬರೂ ಅನೇಕ ಬಾರಿ ಹೀಗೆ ಹೊಲದಿಂದ ಮಣ್ಣನ್ನು ಹೊತ್ತು ತಂದು ರಸ್ತೆಗೆ ಸುರಿಯುತ್ತಾರೆ.

ರೇಟ್‌ ಕಾರ್ಡ್‌ ಪ್ರಕಾರ ಇವರ ಒಂದು ದಿನದ ಕೆಲಸಕ್ಕೆ ಸಿಗುವ ಪಗಾರ 150 ರುಪಾಯಿ. ಸೀಸನ್‌ನಲ್ಲಿ ಮಹುವಾ ಸಂಗ್ರಹದಿಂದ ಗಳಿಸುವುದರ ಜೊತೆಗೆ ಇವರು ದಿನವಿಡೀ ಕೆಲಸ ಮಾಡಿ  250-300 ರುಪಾಯಿ ಸಂಪಾದಿಸುತ್ತಾರೆ. ಮೇ ತಿಂಗಳಿನಲ್ಲಿ ಅವರು ಟೆಂಡು ಎಲೆಗಳನ್ನು ಸಂಗ್ರಹಿಸಲು ಕಾಡುಗಳಿಗೆ ಹೋಗುತ್ತಾರೆ.

PHOTO • Jaideep Hardikar
PHOTO • Jaideep Hardikar

ಅಲ್ಕಾ ಮಡಾವಿ (ಎಡ) ಅವರು ಗ್ರಾಮದಲ್ಲಿ ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್ - ಉಮೇದ್‌ನ ಸಮುದಾಯ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡುತ್ತಾರೆ. ಕಾಡಿನಲ್ಲಿ ಮಹುವಾ ಸಂಗ್ರಹಿಸುವಾಗ ವಿರಾಮ ತೆಗೆದುಕೊಳ್ಳುತ್ತಿರುವ ಸಾರ್ಥಿಕಾ (ಬಲ)

ವಿಪರ್ಯಾಸವೆಂದರೆ, ಪ್ರಧಾನಿ ನರೇಂದ್ರ ಮೋದಿಯವರು ಮನರೇಗಾವನ್ನು ಕಾಂಗ್ರೆಸ್ ಪಕ್ಷದ 'ವೈಫಲ್ಯದ ಜೀವಂತ ಸ್ಮಾರಕ' ಎಂದು ಪದೇ ಪದೇ ಅಪಹಾಸ್ಯ ಮಾಡುತ್ತಿದ್ದರೂ, ಈ ಯೋಜನೆ ದೇಶದ ಹೆಚ್ಚಿನ ಭಾಗಗಳ ಬಡವರ ಏಕೈಕ ಜೀವನಾಧಾರವಾಗಿದೆ. ಮೋದಿಯವರ ಹತ್ತು ವರ್ಷಗಳ ಆಡಳಿತದಲ್ಲಿ, 2024 ರಲ್ಲಿ ಮಾತ್ರ ಮನರೇಗಾದಲ್ಲಿ ದಿನದ ಆರು-ಏಳು ಗಂಟೆಗಳ ಕಾಲ ಕೆಲಸ ಮಾಡುವ ಮಹಿಳೆಯರಿಗೆ ಬೇಡಿಕೆ ಹೆಚ್ಚಾಗಿದೆ, ಮತ್ತು ಇದರಲ್ಲಿ ವಿದ್ಯಾವಂತ ಪುರುಷರು ಮತ್ತು ಮಹಿಳೆಯರೂ ಸೇರಿದ್ದಾರೆ.

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿಯ ಒಂದು ದಿನದ ಆದಾಯಕ್ಕೆ ಸರಿಸಮಾನವಾಗಿ ಸಂಪಾದಿಸಲು ಸಾರ್ಥಿಕಾ ಮತ್ತು ಇತರ ಮಹಿಳೆಯರಿಗೆ ನೂರಾರು ವರ್ಷಗಳು ಬೇಕು.ಅಸಮಾನ ಆದಾಯದಿಂದಾಗಿ ನಾವು ನಿದ್ರೆ ಮಾಡದಂತಾಗಿದೆ ಎಂದು ಅರ್ಥಶಾಸ್ತ್ರಜ್ಞ ಪನಗಾರಿಯಾ ಬರೆಯುತ್ತಾರೆ.

"ನನಗೆ ಹೊಲವೂ ಇಲ್ಲ, ಮಾಡಲು ಬೇರೆ ಯಾವುದೇ ಕೆಲಸವೂ ಇಲ್ಲ," ಎಂದು 45 ವರ್ಷದ ಸಮಿತಾ ಆಡೆ ಹೇಳುತ್ತಾರೆ. ಇವರು ಮನರೇಗಾ ಕೆಲಸದ ಸ್ಥಳದಲ್ಲಿ ಬೆವರು ಸುರಿಸಿ ಕೆಲಸ ಮಾಡುತ್ತಾರೆ. "ರೋಝ್ಗಾರ್ ಹಮಿ [ಮನರೇಗಾ] ಸ್ವಲ್ಪವಾದರೂ ಆದಾಯವನ್ನು ಗಳಿಸಲು ನಮಗೆ ಸಿಗುವ ಏಕೈಕ ಕೆಲಸ," ಎಂದು ಅವರು ಹೇಳುತ್ತಾರೆ. ಸಾರ್ಥಿಕಾ ಮತ್ತು ಇತರರು ತಮಗೆ "ಉತ್ತಮ ವೇತನ ಮತ್ತು ವರ್ಷವಿಡೀ ಕೆಲಸ," ಬೇಕು ಎಂದು ಒತ್ತಾಯಿಸುತ್ತಾರೆ.

ಕಳೆದ ಕೆಲವು ವರ್ಷಗಳಿಂದ ಅರಣ್ಯ ಉತ್ಪನ್ನಗಳ ಸಂಗ್ರಹಣೆಯಲ್ಲೂ ಸ್ಪರ್ಧೆ ಹೆಚ್ಚಾಗಿದೆ. ವರ್ಷವಿಡೀ ಕೆಲಸ ಇಲ್ಲದೇ ಇದ್ದಾಗ ಹೆಚ್ಚು ಹೆಚ್ಚು ಜನರು ಅರಣ್ಯ ಆಧಾರಿತ ಜೀವನೋಪಾಯಕ್ಕೆ ಮರಳುತ್ತಿದ್ದಾರೆ ಎಂದು ಸಮಿತಾ ಹೇಳುತ್ತಾರೆ. ಅರತ್ತೊಂಡಿಯು ನವೆಗಾಂವ್ ರಾಷ್ಟ್ರೀಯ ಉದ್ಯಾನವನದ ದಕ್ಷಿಣಕ್ಕಿರುವ ಅರಣ್ಯಕ್ಕೆ ಸಮೀಪದಲ್ಲಿದೆ ಮತ್ತು ಅರಣ್ಯ ಹಕ್ಕುಗಳ ಕಾಯ್ದೆ ಯಡಿಯಲ್ಲಿ ಸಮುದಾಯ ಅರಣ್ಯ ಹಕ್ಕುಗಳನ್ನು ಇನ್ನೂ ಪಡೆದಿಲ್ಲ.

"ಆದರೆ, ಇಲ್ಲಿ [ಜೀವನೋಪಾಯಕ್ಕಾಗಿ] ನಾಲ್ಕನೇ ಕಾಲೋಚಿತ ವಲಸೆ ಶುರುವಾಗಿದೆ," ಎಂದು ಸಾರ್ಥಿಕಾ ಹೇಳುತ್ತಾರೆ.

PHOTO • Jaideep Hardikar
PHOTO • Jaideep Hardikar

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿಯ ಒಂದು ದಿನದ ಆದಾಯಕ್ಕೆ ಸರಿಸಮಾನವಾಗಿ ಸಂಪಾದಿಸಲು ಸಾರ್ಥಿಕಾ ಮತ್ತು ಇತರ ಮಹಿಳೆಯರಿಗೆ ನೂರಾರು ವರ್ಷಗಳು ಬೇಕು.ಅಸಮಾನ ಆದಾಯದಿಂದಾಗಿ ನಾವು ನಿದ್ರೆ ಮಾಡದಂತಾಗಿದೆ ಎಂದು ಅರ್ಥಶಾಸ್ತ್ರಜ್ಞ ಪನಗಾರಿಯಾ ಬರೆಯುತ್ತಾರೆ. ಸಾರ್ಥಿಕಾ (ಬಲ) ಮತ್ತು ಇತರರು ಉತ್ತಮ ವೇತನ ಮತ್ತು ವರ್ಷವಿಡೀ ಕೆಲಸ ಬೇಕೆಂದು ಒತ್ತಾಯಿಸುತ್ತಿದ್ದಾರೆ

ಪ್ರತಿ ವರ್ಷ, ಅಕ್ಟೋಬರ್‌ನಿಂದ ಫೆಬ್ರುವರಿವರೆಗೆ, ಹಳ್ಳಿಗಳ ಸುಮಾರು ಅರ್ಧದಷ್ಟು ಜನರು ಇತರರ ಹೊಲಗಳು, ಉದ್ಯಮಗಳು ಅಥವಾ ವರ್ಕ್‌ ಸೈಟ್‌ಗಳಿಗೆ ಕೆಲಸ ಹುಡುಕಿಕೊಂಡು ದೂರದೂರದ ಸ್ಥಳಗಳಿಗೆ ತಮ್ಮ ಮನೆಗಳನ್ನು ಬಿಟ್ಟು ಹೋಗುತ್ತಾರೆ.

"ನನ್ನ ಪತಿ ಮತ್ತು ನಾನು ಈ ವರ್ಷ ಭತ್ತದ ಗದ್ದೆಗಳಲ್ಲಿ ಕೆಲಸ ಮಾಡಲು ಕರ್ನಾಟಕದ ಯಾದಗಿರಿಗೆ ಹೋಗಿದ್ದೆವು," ಎಂದು ಸಾರ್ಥಿಕಾ ಹೇಳುತ್ತಾರೆ. "ನಮ್ಮ ಗುಂಪಿನಲ್ಲಿ 13 ಪುರುಷರು ಮತ್ತು ಮಹಿಳೆಯರ ಇದ್ದೆವು, ಎಲ್ಲರೂ ಒಂದೇ ಹಳ್ಳಿಯಲ್ಲಿ ಎಲ್ಲಾ ಕೃಷಿ ಕೆಲಸಗಳನ್ನು ಮಾಡಿದೆವು ಮತ್ತು ಫೆಬ್ರವರಿ ತಿಂಗಳ ಕೊನೆಯಲ್ಲಿ ಮರಳಿ ಬಂದೆವು," ಎಂದು ಅವರು ಹೇಳುತ್ತಾರೆ. ಅವರಿಗೆ ಆ ವಾರ್ಷಿಕ ಆದಾಯವೇ ಬದುಕಿನಲ್ಲಿ ಪ್ರಮುಖ ಬೆಂಬಲವಾಗಿದೆ.

*****

ಭತ್ತ ಬೆಳೆಯುವ ಮತ್ತು ಸಮೃದ್ಧ ಅರಣ್ಯವನ್ನು ಹೊಂದಿರುವ  ಪೂರ್ವ ವಿದರ್ಭದ - ಭಂಡಾರ, ಗೊಂಡಿಯಾ, ಗಡ್ಚಿರೋಲಿ, ಚಂದ್ರಾಪುರ ಮತ್ತು ನಾಗ್ಪುರ್- ಈ ಜಿಲ್ಲೆಗಳಲ್ಲಿ ಒಟ್ಟು ಐದು ಸಂಸದೀಯ ಕ್ಷೇತ್ರಗಳಿವೆ. ಈ ಕ್ಷೇತ್ರಗಳಲ್ಲಿ ಏಪ್ರಿಲ್ 19 ರಂದು 2024 ರ ಸಾರ್ವತ್ರಿಕ ಚುನಾವಣೆಯ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ.

ಜನರ ಬಗ್ಗೆ ಸಂಪೂರ್ಣ ನಿರಾಸಕ್ತಿ ಹೊಂದಿರುವ ರಾಜಕೀಯ ಪಕ್ಷಗಳು ಮತ್ತು ಅಧಿಕಾರಶಾಹಿಯ ಬಗ್ಗೆ ಅರಕ್ತೋಂಡಿ ಗ್ರಾಮಸ್ಥರು ಸಂಪೂರ್ಣ ಭ್ರಮನಿರಸರಾಗಿದ್ದಾರೆ. ತಮ್ಮ ಜೀವನವನ್ನು ಸಂಕಷ್ಟಕ್ಕೆ ತಳ್ಳಿದ ಮೋದಿ ಸರ್ಕಾರದ 10 ವರ್ಷಗಳ ಆಡಳಿತದ ಮೇಲೆ ಬಡವರಲ್ಲಿ ಆಕ್ರೋಶವಿದೆ.

"ನಮಗಾಗಿ ಏನೂ ಬದಲಾವಣೆಯಾಗಿಲ್ಲ‌. ನಮಗೆ ಅಡುಗೆ ಮಾಡಲು ಗ್ಯಾಸ್ ಸಿಕ್ಕಿತು, ಆದರೆ ಅದೂ ತುಂಬಾ ದುಬಾರಿಯಾಗಿದೆ; ಪಗಾರದಲ್ಲೂ ಏನೂ ಹೆಚ್ಚಾಗಿಲ್ಲ; ವರ್ಷವಿಡೀ ಯಾವುದೇ ಸ್ಥಿರವಾದ ಕೆಲಸವೂ ಇಲ್ಲ,” ಎಂದು ಸಾರ್ಥಿಕಾ ಹೇಳುತ್ತಾರೆ.

PHOTO • Jaideep Hardikar

ಅರಕ್ತೊಂಡಿ ಗ್ರಾಮದ ಮನರೇಗಾ ಸೈಟ್. ಜನರ ಬಗ್ಗೆ ಸಂಪೂರ್ಣ ನಿರಾಸಕ್ತಿ ಹೊಂದಿರುವ ರಾಜಕೀಯ ಪಕ್ಷಗಳು ಮತ್ತು ಅಧಿಕಾರಶಾಹಿಯ ಬಗ್ಗೆ ಅರಕ್ತೋಂಡಿ ಗ್ರಾಮಸ್ಥರು ಸಂಪೂರ್ಣ ಭ್ರಮನಿರಸರಾಗಿದ್ದಾರೆ. ತಮ್ಮ ಜೀವನವನ್ನು ಸಂಕಷ್ಟಕ್ಕೆ ತಳ್ಳಿದ ಮೋದಿ ಸರ್ಕಾರದ 10 ವರ್ಷಗಳ ಆಡಳಿತದ ಮೇಲೆ ಬಡವರಲ್ಲಿ ಆಕ್ರೋಶವಿದೆ

PHOTO • Jaideep Hardikar
PHOTO • Jaideep Hardikar

ಭತ್ತ ಬೆಳೆಯುವ ಮತ್ತು ಸಮೃದ್ಧ ಅರಣ್ಯವನ್ನು ಹೊಂದಿರುವ  ಪೂರ್ವ ವಿದರ್ಭದ - ಭಂಡಾರ, ಗೊಂಡಿಯಾ, ಗಡ್ಚಿರೋಲಿ, ಚಂದ್ರಾಪುರ ಮತ್ತು ನಾಗ್ಪುರ್- ಈ ಜಿಲ್ಲೆಗಳಲ್ಲಿ ಒಟ್ಟು ಐದು ಸಂಸದೀಯ ಕ್ಷೇತ್ರಗಳಿವೆ. ಈ ಕ್ಷೇತ್ರಗಳಲ್ಲಿ ಏಪ್ರಿಲ್ 19 ರಂದು 2024 ರ ಸಾರ್ವತ್ರಿಕ ಚುನಾವಣೆಯ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ

ಭಂಡಾರಾ-ಗೊಂಡಿಯಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದಿಂದ (ಬಿಜೆಪಿ) ಮತ್ತೊಮ್ಮೆ ಕಣಕ್ಕಿಳಿದಿರುವ ಸಂಸದ ಸುನಿಲ್ ಮೆಂಧೆ ವಿರುದ್ಧ ಜನರಲ್ಲಿ ಹೆಚ್ಚಿನ ಅಸಮಾಧಾನವಿದೆ. "ಅವರು ಯಾವತ್ತೂ ನಮ್ಮ ಹಳ್ಳಿಗೆ ಬಂದಿಲ್ಲ," ಎಂಬುದು ಈ ದೊಡ್ಡ ಕ್ಷೇತ್ರದಲ್ಲಿರುವ ಗ್ರಾಮಗಳ ಜನತೆಯ ಹೇಳುವ ಸಾಮಾನ್ಯ ಮಾತಾಗಿದೆ.

ಮೆಂಧೆಯವರ ವಿರುದ್ಧ ಕಾಂಗ್ರೆಸ್‌ನಿಂದ ಡಾ. ಪ್ರಶಾಂತ್ ಪಡೋಲೆಯವರು  ಸ್ಪರ್ಧೆ ಮಾಡಲಿದ್ದಾರೆ.

2021 ರ ಬೇಸಿಗೆಯ ಕೋವಿಡ್ -19ನ ಮೊದಲ ಲಾಕ್‌ಡೌನ್ ಸಂದರ್ಭದಲ್ಲಿ ತಮಗೆ ಮಾಡಿದ ವಿಶ್ವಾಸಘಾತುಕತನವನ್ನು ಮತ್ತು ಮನೆಯ ಕಡೆಗಿನ ತಮ್ಮ ನೋವು ತುಂಬಿದ ನಡಿಗೆಯನ್ನು ಅರತ್ತೊಂಡಿ ಗ್ರಾಮಸ್ಥರು ಇನ್ನೂ ಮರೆತಿಲ್ಲ.

ಏಪ್ರಿಲ್ 19 ರಂದು ಅವರು ಮತ ಚಲಾಯಿಸಲು ಹೋಗುತ್ತಾರೆ. ಬಹುಶಃ ಬೆಳಿಗ್ಗಿನ ಐದು ಗಂಟೆಗಳ ಕಾಲ ಮಹುವಾ ಸಂಗ್ರಹಿಸುವ ಕೆಲಸ ಮುಗಿದ ನಂತರ ಹೋಗಬಹುದು. ಮನರೇಗಾದ ಕೆಲಸವನ್ನು ನಿಲ್ಲಿಸಿರುವುದರಿಂದ ಖಂಡಿತವಾಗಿಯೂ ಅವರು ಆ ಒಂದು ದಿನದ ಕೂಲಿಯನ್ನು ಕಳೆದುಕೊಳ್ಳುತ್ತಾರೆ ಎಂದು ಅವರು ಹೇಳುತ್ತಾರೆ.

ಅವರು ಯಾರಿಗೆ ಮತ ಹಾಕುತ್ತಾರೆ?

ಅವರು ಆಯ್ಕೆಯನ್ನು ಸ್ಪಷ್ಟವಾಗಿ ಹೇಳುವುದಿಲ್ಲ, ಆದರೆ "ಕಳೆದು ಹೋದ ದಿನಗಳೇ ಚೆನ್ನಾಗಿದ್ದವು," ಎಂದು ಹೇಳುತ್ತಾರೆ.

ಅನುವಾದ: ಚರಣ್‌ ಐವರ್ನಾಡು

Jaideep Hardikar

Jaideep Hardikar is a Nagpur-based journalist and writer, and a PARI core team member.

Other stories by Jaideep Hardikar
Editor : Priti David

Priti David is the Executive Editor of PARI. She writes on forests, Adivasis and livelihoods. Priti also leads the Education section of PARI and works with schools and colleges to bring rural issues into the classroom and curriculum.

Other stories by Priti David
Translator : Charan Aivarnad

Charan Aivarnad is a poet and a writer. He can be reached at: [email protected]

Other stories by Charan Aivarnad