"ನಾನು ಹುಡುಗನಾಗಿದ್ದಾಗ, ನಮ್ಮ ದ್ವೀಪವು ದೊಡ್ಡ ಹವಳದ ಮೇಲೆ ನಿಂತಿದೆಯೆಂದು ಎಂದು ನನಗೆ ಹೇಳಲಾಗಿತ್ತು. ಎಲ್ಲಾ ಹವಳವು ಕೆಳಗೆ ಇದೆ, ಅದನ್ನು ಎತ್ತಿ ಹಿಡಿದಿದೆ. ಮತ್ತು ನಮ್ಮ ಸುತ್ತಲೂ ಸಾಗರದಿಂದ ನಮ್ಮನ್ನು ರಕ್ಷಿಸುವ ಒಂದು ಆವೃತ ಪ್ರದೇಶವಿದೆ ಹೇಳುತ್ತಿದ್ದರು” ಎಂದು ಬಿತ್ರಾ ದ್ವೀಪದಲ್ಲಿ ವಾಸಿಸುವ 60 ವರ್ಷದ ಮೀನುಗಾರ ಬಿ. ಹೈದರ್ ಹೇಳುತ್ತಾರೆ.

"ನಾನು ಚಿಕ್ಕವನಿದ್ದಾಗ, ಉಬ್ಬರ ಕಡಿಮೆಯಿರುವ ಸಮಯದಲ್ಲಿ ನಾವು ಹವಳಗಳನ್ನು ನೋಡಬಹುದಿತ್ತು" ಎಂದು ಬಿತ್ರಾದ ಮತ್ತೊಬ್ಬ ಮೀನುಗಾರ 60 ವರ್ಷದ ಅಬ್ದುಲ್ ಖಾದರ್ ಹೇಳುತ್ತಾರೆ. "ಅದು ಸುಂದರವಾಗಿತ್ತು. ಈಗ ಅವುಗಳಲ್ಲಿ ಹೆಚ್ಚು ಉಳಿದಿಲ್ಲ. ಆದರೆ ದೊಡ್ಡ ಅಲೆಗಳನ್ನು ದೂರವಿರಿಸಲು ನಮಗೆ ಆ ಹವಳ ಬೇಕು.”

ಲಕ್ಷದ್ವೀಪ ದ್ವೀಪಸಮೂಹದ ದ್ವೀಪಗಳ ಕಥೆಗಳು, ಕಲ್ಪನೆಗಳು, ಜೀವನ, ಜೀವನೋಪಾಯ ಮತ್ತು ಪರಿಸರ ವ್ಯವಸ್ಥೆಗಳ ಕೇಂದ್ರವಾದ  ಆ ಹವಳ - ಇಲ್ಲಿನ ಮೀನುಗಾರರು ದಶಕಗಳಿಂದ ಗಮನಿಸುತ್ತಿರುವ ಇತರ ಹಲವು ಬದಲಾವಣೆಗಳ ಜೊತೆಗೆ ನಿಧಾನವಾಗಿ ದೂರವಾಗುತ್ತಿದೆ.

"ಇದನ್ನು ಅರ್ಥಮಾಡಿಕೊಳ್ಳುವುದು ಸುಲಭ. ಪ್ರಕೃತಿ ಬದಲಾಗಿದೆ” ಎಂದು ಅಗಟ್ಟಿ ದ್ವೀಪದ 61 ವರ್ಷದ ಮುನಿಯಾಮಿನ್ ಕೆ.ಕೆ. ಹೇಳುತ್ತಾರೆ, ಅವರು ತನ್ನ 22ನೇ ವಯಸ್ಸಿನಲ್ಲಿ ಮೀನುಗಾರಿಕೆ ಪ್ರಾರಂಭಿಸಿದರು. “ಆ ದಿನಗಳಲ್ಲಿ, ಮಾನ್ಸೂನ್ ಸರಿಯಾದ ಸಮಯದಲ್ಲಿ [ಜೂನ್‌ನಲ್ಲಿ] ಬರುತ್ತಿತ್ತು, ಆದರೆ ಇಂದು ಮಾನ್ಸೂನ್ ಯಾವಾಗ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಈ ದಿನಗಳಲ್ಲಿ, ಮೀನುಗಳು ಕಡಿಮೆಯಾಗಿವೆ. ಆ ದಿನಗಳಲ್ಲಿ ನಾವು ಮೀನು ಹಿಡಿಯಲು ಹೆಚ್ಚು ದೂರ ಹೋಗಬೇಕಾಗಿರಲಿಲ್ಲ, ಮೀನಿನ ಎಲ್ಲಾ ಹಿಂಡುಗಳು ಹತ್ತಿರದಲ್ಲೇ ವಾಸಿಸುತ್ತಿದ್ದವು. ಆದರೆ ಈಗ ಮೀನುಗಳನ್ನು ಹುಡುಕುವ ಜನರು ಹಲವಾರು ದಿನಗಳವರೆಗೆ, ಕೆಲವೊಮ್ಮೆ ವಾರಗಳವರೆಗೆ ಕಡಲಿನಲಿನಲ್ಲಿರುತ್ತಾರೆ"

ಕೇರಳದ ಕರಾವಳಿಯ ಅರೇಬಿಯನ್ ಸಮುದ್ರದಲ್ಲಿನ ಭಾರತದ ಅತ್ಯಂತ ಚಿಕ್ಕ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದಲ್ಲಿ ಅಗಟ್ಟಿ ಮತ್ತು ಬಿತ್ರಾ ನಡುವಿನ ಅಂತರವು ದೋಣಿಯಲ್ಲಿ ಸುಮಾರು ಏಳು ಗಂಟೆಗಳ ಪ್ರಯಾಣದಷ್ಟು, ಅಲ್ಲಿ ಹೆಚ್ಚು ನುರಿತ ಮೀನುಗಾರರು ವಾಸಿಸುತ್ತಾರೆ. ಮಲಯಾಳಂ ಮತ್ತು ಸಂಸ್ಕೃತ ಎರಡರಲ್ಲೂ 'ಲಕ್ಷದ್ವೀಪ' ಎಂದರೆ ಒಂದು ಲಕ್ಷ ದ್ವೀಪಗಳು. ಆದರೆ ನಮ್ಮ ಯುಗದ ವಾಸ್ತವವೆಂದರೆ, ಈಗ ಕೇವಲ 36 ದ್ವೀಪಗಳಿವೆ, ಅವು ಒಟ್ಟು 32 ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿವೆ. ಆದಾಗ್ಯೂ, ದ್ವೀಪಸಮೂಹದ ನೀರು 400,000 ಚದರ ಕಿಲೋಮೀಟರ್‌ಗಳಷ್ಟು ವ್ಯಾಪಿಸಿದೆ ಮತ್ತು ಸಮುದ್ರ ಜೀವಜಾಲ ಮತ್ತು ಸಂಪನ್ಮೂಲಗಳಿಂದ ಸಮೃದ್ಧವಾಗಿದೆ.

ಕೇವಲ ಒಂದು ಜಿಲ್ಲೆಯನ್ನು ಹೊಂದಿರುವ ಈ ಕೇಂದ್ರಾಡಳಿತ ಪ್ರದೇಶದಲ್ಲಿ, 64,500 ಜನಸಂಖ್ಯೆಯಲ್ಲಿ (ಜನಗಣತಿ 2011) ಪ್ರತಿ ಏಳನೇ ವ್ಯಕ್ತಿಯು ಮೀನುಗಾರನಾಗಿದ್ದಾನೆ, ಇದು 9,000ಕ್ಕೂ ಹೆಚ್ಚು ಜನರ ವೃತ್ತಿಯಾಗಿದೆ.

PHOTO • Sweta Daga

ಫೋಟೋ •ಬಿತ್ರಾ (ಮೇಲ್ಭಾಗ) ಮತ್ತು ಉಳಿದ ಲಕ್ಷದ್ವೀಪಗಳು ಭಾರತದ ಏಕೈಕ ಹವಳ ದ್ವೀಪಗಳನ್ನು ಒಳಗೊಂಡಿವೆ. 'ನಾನು ಚಿಕ್ಕವನಿದ್ದಾಗ, ಉಬ್ಬರ ಕಡಿಮೆಯಿರುವಾಗ ನಾವು ಹವಳಗಳನ್ನು [ಮುಂಭಾಗ, ಕೆಳಗಿನ ಬಲಭಾಗದಲ್ಲಿ] ನೋಡಬಹುದಾಗಿತ್ತು'ಎಂದು ಬಿತ್ರಾದ ಮೀನುಗಾರ ಅಬ್ದುಲ್ ಖಾದಾ (ಕೆಳಗಿನ ಎಡಭಾಗ) ಹೇಳುತ್ತಾರೆ. 'ಈಗ ಅವುಗಳಲ್ಲಿ ಹೆಚ್ಚು ಉಳಿದಿಲ್ಲ'

ದ್ವೀಪಗಳ ಹಿರಿಯರು ಮುಂಗಾರು ಬಂದಾಗ ತಮ್ಮ ಕ್ಯಾಲೆಂಡರ್‌ಗಳನ್ನು ಹೊಂದಿಸಬಹುದಿತ್ತು ಎಂದು ಹೇಳುತ್ತಾರೆ. ಆದರೆ "ಈಗ ಸಮುದ್ರದಲ್ಲಿ ಎಲ್ಲ ಸಮಯದಲ್ಲಿಯೂ ಒಂದು ಕೋಲಾಹಲವಿರುತ್ತದೆ - ಈ ಹಿಂದೆ ಅದು ಇರಲಿಲ್ಲ" ಎಂದು ನಾಲ್ಕು ದಶಕಗಳ ಮೀನುಗಾರಿಕೆ ಅನುಭವ ಹೊಂದಿರುವ 70 ವರ್ಷದ ಮೀನುಗಾರ ಯು.ಪಿ. ಕೋಯಾ ಹೇಳುತ್ತಾರೆ. “ನಾನು ಬಹುಶಃ 5 ನೇ ತರಗತಿಯಲ್ಲಿದ್ದೆ, ಮಿನಿಕೋಯ್ ದ್ವೀಪದ ಜನರು [ಸುಮಾರು 300 ಕಿಲೋಮೀಟರ್ ದೂರದಲ್ಲಿರುವ] ಬಂದು ನಮಗೆ ‘ಪೋಲ್ ಅಂಡ್ ಲೈನ್’ ವಿಧಾನವನ್ನು ಬಳಸಿ ಮೀನುಗಾರಿಕೆ ಮಾಡುವುದನ್ನು ಕಲಿಸಿದರು. ಅಂದಿನಿಂದ, ಲಕ್ಷದ್ವೀಪದಲ್ಲಿ ನಾವು ಹೆಚ್ಚಾಗಿ ಅದೊಂದೇ ವಿಧಾನದಿಂದ ಮೀನು ಹಿಡಿಯುತ್ತೇವೆ - ನಾವು ಬಲೆಗಳನ್ನು ಬಳಸುವುದಿಲ್ಲ ಏಕೆಂದರೆ ಅವು ಹವಳದ ಬಂಡೆಗಳಲ್ಲಿ ಸಿಲುಕಿಕೊಂಡು ಹರಿದುಹೋಗುತ್ತವೆ. ಪಕ್ಷಿಗಳು ಮತ್ತು ನಮ್ಮ ದಿಕ್ಸೂಚಿಗಳಿಂದ ನಾವು ಮೀನುಗಳನ್ನು ಹುಡುಕಲು ಸಾಧ್ಯವಾಗುತ್ತದೆ."

ಮೀನುಗಾರಿಕೆಯ 'ಪೋಲ್ ಅಂಡ್ ಲೈನ್' ವಿಧಾನದಲ್ಲಿ, ಮೀನುಗಾರರು ರೇಲಿಂಗ್‌ಗಳಲ್ಲಿ ಅಥವಾ ಅವರ ಹಡಗುಗಳಲ್ಲಿ ನಿರ್ಮಿಸಲಾದ ವಿಶೇಷ ವೇದಿಕೆಗಳಲ್ಲಿ ನಿಲ್ಲುತ್ತಾರೆ. ಉದ್ದನೇ ಕೋಲಿನ ತುದಿಯಲ್ಲಿ ಬಲವಾದ ಕೊಕ್ಕೆಗಳನ್ನು ಹಾಕಲಾಗಿರುತ್ತದೆ, ಇದನ್ನು ಹೆಚ್ಚಾಗಿ ಫೈಬರ್‌ ಗ್ಲಾಸ್‌ನಿಂದ ತಯಾರಿಸಲಾಗುತ್ತದೆ. ಇದು ಮೀನುಗಾರಿಕೆಯ ಹೆಚ್ಚು ಶಾಶ್ವತ ರೂಪವಾಗಿದೆ, ಮತ್ತು ಇಲ್ಲಿ ಇದನ್ನು ಹೆಚ್ಚಾಗಿ ನೀರಿನ ಮೇಲಿನ ಪದರಗಳಲ್ಲಿ ವಾಸಿಸುವ ಟ್ಯೂನ ಜಾತಿಯ ಮೀನುಗಳನ್ನು ಹಿಡಿಯಲು ಬಳಸಲಾಗುತ್ತದೆ. ಅಗಟ್ಟಿ ಮತ್ತು ಲಕ್ಷದ್ವೀಪದ ಇತರ ದ್ವೀಪಗಳಲ್ಲಿ ಜನರು ಮುಖ್ಯವಾಗಿ ತೆಂಗಿನಕಾಯಿ ಮತ್ತು ಮೀನುಗಳನ್ನು - ಹೆಚ್ಚಾಗಿ ಟ್ಯೂನ ಮೀನುಗಳನ್ನು ಆಹಾರದಲ್ಲಿ ಬಳಸುತ್ತಾರೆ.

ಇಲ್ಲಿನ ದ್ವೀಪಗಳಲ್ಲಿ ಬಿತ್ರಾ ಅತ್ಯಂತ ಚಿಕ್ಕದಾಗಿದೆ - 0.105 ಚದರ ಕಿಲೋಮೀಟರ್, ಅಥವಾ ಸುಮಾರು 10 ಹೆಕ್ಟೇರ್ - ಮತ್ತು ಇದು ದ್ವೀಪಸಮೂಹದ 12 ಜನವಸತಿ ದ್ವೀಪಗಳಲ್ಲಿ ದೂರದಲ್ಲಿದೆ. ಇದು ಮೃದುವಾದ, ಬಿಳಿ-ಮರಳಿನ ಕಡಲತೀರಗಳು, ತೆಂಗಿನ ಮರಗಳನ್ನು ಹೊಂದಿದೆ ಮತ್ತು ನೀಲಿ, ವೈಡೂರ್ಯ, ಅಕ್ವಾಮರೀನ್ ಮತ್ತು ಸಮುದ್ರ ಹಸಿರು ಎಂಬ ನಾಲ್ಕು ಬಣ್ಣಗಳಿಂದ ಆವೃತವಾಗಿದೆ. ಪ್ರವಾಸಿಗರಿಗೆ ಇಲ್ಲಿ ಅವಕಾಶವಿಲ್ಲ; ಇಲ್ಲಿಗೆ ತಲುಪಿದ ನಂತರ, ನಡೆಯುವುದು ಮಾತ್ರ ಇರುವ ಆಯ್ಕೆಯಾಗಿದೆ, ಕಾರುಗಳು ಅಥವಾ ಮೋಟಾರು ಬೈಕುಗಳಿಲ್ಲ, ಬೈಸಿಕಲ್ ಸಹ ಅಪರೂಪ. 2011ರ ಜನಗಣತಿಯ ಪ್ರಕಾರ ಬಿತ್ರಾದಲ್ಲಿ ಕೇವಲ 271 ಜನರು ವಾಸಿಸುತ್ತಿದ್ದಾರೆ.

ಆದಾಗ್ಯೂ, ಈ ಕೇಂದ್ರಾಡಳಿತ ಪ್ರದೇಶವು ಅತಿದೊಡ್ಡ ಆವೃತ ಪ್ರದೇಶವನ್ನು ಹೊಂದಿದೆ - ಸುಮಾರು 47 ಚದರ ಕಿಲೋಮೀಟರ್ ವಿಸ್ತೀರ್ಣದಷ್ಟು. ಹಾಗೂ ಬಿತ್ರಾ ಮತ್ತು ಉಳಿದ ಲಕ್ಷದ್ವೀಪಗಳು ಭಾರತದ ಏಕೈಕ ಹವಳ ದ್ವೀಪಗಳಾಗಿವೆ. ಅಂದರೆ, ಇಲ್ಲಿ ವಾಸಿಸುವ ಎಲ್ಲಾ ಭೂಮಿಯು ವಾಸ್ತವವಾಗಿ ಹವಳದ ದಿಬ್ಬಗಳು (coral atolls). ಇದರ ಮಣ್ಣು ಹೆಚ್ಚಾಗಿ ಹವಳಗಳಿಂದ ಬಂದಿದೆ.

ಹವಳಗಳು ಜೀವಂತ ಜೀವಿಗಳಾಗಿವೆ, ಅವು ದಿಬ್ಬಗಳನ್ನು ತಯಾರಿಸುತ್ತವೆ ಮತ್ತು ಸಮುದ್ರ ಜೀವಿಗಳಿಗೆ ಪರಿಸರ ವ್ಯವಸ್ಥೆಯನ್ನು ಒದಗಿಸುತ್ತವೆ, ವಿಶೇಷವಾಗಿ ಮೀನುಗಳು. ಹವಳದ ಬಂಡೆಗಳು ನೈಸರ್ಗಿಕ ತಡೆಗೋಡೆಯಾಗಿದ್ದು, ಈ ದ್ವೀಪಗಳು ಸಮುದ್ರದಲ್ಲಿ ಮುಳುಗದಂತೆ ರಕ್ಷಿಸುತ್ತದೆ ಮತ್ತು ಉಪ್ಪುನೀರನ್ನು ಸೀಮಿತ ಸಿಹಿನೀರಿನ ಮೂಲಗಳಿಂದ ದೂರವಿರಿಸುತ್ತದೆ.

ವಿವೇಚನೆಯಿಲ್ಲದ, ವಿಶೇಷವಾಗಿ ಯಾಂತ್ರಿಕೃತ ದೋಣಿಗಳಿಂದ ಆಳ ಸಮುದ್ರದ ಮೀನುಗಾರಿಕೆಯಿಂದ ಬೇಟ್ ಮೀನುಗಳು ಕಡಿಮೆಯಾಗುತ್ತಿವೆ, ಹವಳ ಬಂಡೆ ಮತ್ತು ಸಂಬಂಧಿತ ಜೀವವೈವಿಧ್ಯತೆ ನಾಶವಾಗುತ್ತಿದೆ

ವಿಡಿಯೋ ನೋಡಿ: ಬೇಟ್‌ಫಿಶ್ ಹಿಡಿಯಲು ದೋಣಿಯಲ್ಲಿ ಸಾಗುವ ಮೀನುಗಾರರು

ಹವಳದ ಬಂಡೆಗಳು ಸಣ್ಣ ಬೇಟ್ ಮೀನುಗಳನ್ನು ಸಹ ಒಳಗೊಂಡಿರುತ್ತವೆ, ಅವುಗಳು ಹಲವಾರು ಜಾತಿಯ ಟ್ಯೂನ ಮತ್ತು ಹವಳ ದಿಬ್ಬದ ಮೀನುಗಳನ್ನು ಹಿಡಿಯುವಾಗ ಎರೆಯಾಗಿ(ಬೇಟ್) ಬಳಸಲಾಗುತ್ತದೆ. ಹವಾಮಾನ ಬದಲಾವಣೆಯ ಯುಎನ್‌ಡಿಪಿ ಲಕ್ಷದ್ವೀಪ ಕ್ರಿಯಾ ಯೋಜನೆಯ 2012ರ ಪ್ರಕಾರ, ಭಾರತದಲ್ಲಿ ಸಿಗುವ ಒಟ್ಟು ಮೀನುಗಳಲ್ಲಿ 25 ಪ್ರತಿಶತದಷ್ಟನ್ನು ಈ ಶ್ರೀಮಂತ ನೀರು ಮತ್ತು ಹವಳದ ದಿಬ್ಬಗಳು ಒದಗಿಸುತ್ತವೆ. ಮತ್ತು ಈ ಬೇಟ್ ಮೀನುಗಳು ಟ್ಯೂನ ಪ್ರಭೇದಗಳನ್ನು ಹಿಡಿಯುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿವೆ.

"ನಾವು ಬೇಟ್ ಮೀನುಗಳನ್ನು ಅವು ಮೊಟ್ಟೆಗಳನ್ನು ಇಟ್ಟ ನಂತರವೇ ಹಿಡಿಯುತ್ತಿದ್ದೆವು, ಆದರೆ ಈಗ ಜನರು ಅವುಗಳನ್ನು ಯಾವಾಗ ಬೇಕಾದರೂ ಹಿಡಿಯುತ್ತಾರೆ" ಎಂದು ಬಿತ್ರಾದಿಂದ 122 ಕಿ.ಮೀ ದೂರದಲ್ಲಿರುವ ಜಿಲ್ಲಾ ಕೇಂದ್ರ ಕವರತಿಯಲ್ಲಿ ವಾಸಿಸುವ 53 ವರ್ಷದ ಮೀನುಗಾರ ಅಬ್ದುಲ್ ರಹಮಾನ್ ಹೇಳುತ್ತಾರೆ. ಇವರು 30 ವರ್ಷಗಳಿಂದ ಮೀನು ಹಿಡಿಯುತ್ತಿದ್ದಾರೆ. "ದೋಣಿಗಳ ಸಂಖ್ಯೆ ಹೆಚ್ಚಾಗಿದೆ, ಆದರೆ ಮೀನುಗಳು ಕಡಿಮೆಯಾಗಿವೆ." ವಿವೇಚನೆಯಿಲ್ಲದ ಮೀನುಗಾರಿಕೆ, ವಿಶೇಷವಾಗಿ  ಯಾಂತ್ರಿಕೃತ ಬಲೆ ದೋಣಿಗಳಿಂದ ಆಳ ಸಮುದ್ರದ ಮೀನುಗಾರಿಕೆ, ಬೇಟ್ ಮೀನುಗಳನ್ನು ಕಡಿಮೆ ಮಾಡುತ್ತಿವೆ ಮತ್ತು ಹವಳದ ಬಂಡೆಗಳು ಮತ್ತು ಸಂಬಂಧಿತ ಜೀವವೈವಿಧ್ಯತೆಯನ್ನು ಹಾನಿಗೊಳಿಸುತ್ತಿವೆ.

ಮತ್ತು ಅದು ಸಮಸ್ಯೆಯ ಒಂದು ಭಾಗ ಮಾತ್ರ.

ಎಲ್ ನಿನೊದಂತಹ ತೀವ್ರ ಹವಾಮಾನ ಮಾದರಿಗಳು ಸಮುದ್ರದ ಮೇಲ್ಮೈ ತಾಪಮಾನವನ್ನು ಹೆಚ್ಚಿಸುತ್ತವೆ ಮತ್ತು ಬೃಹತ್ ‘ಹವಳದ ಬ್ಲೀಚಿಂಗ್’ಗೆ ಕಾರಣವಾಗುತ್ತವೆ - ಇದು ಹವಳದ ಬಣ್ಣ ಮತ್ತು ಜೀವಂತಿಕೆಯನ್ನು ತೆಗೆದುಹಾಕುತ್ತದೆ ಮತ್ತು ದ್ವೀಪಗಳನ್ನು ರಕ್ಷಿಸುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. 1998, 2010 ಮತ್ತು 2016ರಲ್ಲಿ ಲಕ್ಷದ್ವೀಪ ಮೂರು ಸಾಮೂಹಿಕ ಹವಳದ ಬ್ಲೀಚಿಂಗ್‌ಗಳಿಗೆ ಸಾಕ್ಷಿಯಾಗಿದೆ. ಮೈಸೂರು ಮೂಲದ ಲಾಭರಹಿತ ವನ್ಯಜೀವಿ ಸಂರಕ್ಷಣೆ ಮತ್ತು ಸಂಶೋಧನಾ ಸಂಸ್ಥೆಯಾದ ನೇಚರ್ ಕನ್ಸರ್ವೇಶನ್ ಫೌಂಡೇಶನ್‌ನ (ಎನ್‌ಸಿಎಫ್) 2018ರ ಅಧ್ಯಯನವು ಇಲ್ಲಿನ ಬಂಡೆಗಳು ಅಪಾಯದಲ್ಲಿವೆ ಎಂದು ತೋರಿಸುತ್ತದೆ. ಲಕ್ಷದ್ವೀಪ ದ್ವೀಪಗಳಲ್ಲಿನ ಸಂಪೂರ್ಣ ಹವಳದ ಹೊದಿಕೆಯು 1998ರಲ್ಲಿದ್ದ 51.6ರಿಂದ 2017ರಲ್ಲಿ-ಕೇವಲ 20 ವರ್ಷಗಳಲ್ಲಿ 11ಶೇಕಡಕ್ಕೆ ಇಳಿದಿದೆ ಎಂದು ಅಧ್ಯಯನವು ಕಂಡುಹಿಡಿದಿದೆ.

37 ವರ್ಷದ ಬಿತ್ರಾ ಮೀನುಗಾರ ಅಬ್ದುಲ್ ಕೋಯಾ ಹೇಳುತ್ತಾರೆ: “ನಾವು 4 ಅಥವಾ 5 ವರ್ಷದವರಿದ್ದಾಗ ಹವಳವನ್ನು ಗುರುತಿಸುತ್ತಿದ್ದೆವು. ನಾವು ನೀರಿಗಿಳಿಯುವ ಮೊದಲೇ ಅದು ತೀರದಲ್ಲಿ ತೇಲುವುದನ್ನು ನಾವು ನೋಡಿದ್ದೇವೆ. ನಮ್ಮ ಮನೆಗಳನ್ನು ನಿರ್ಮಿಸಲು ನಾವು ಇದನ್ನು ಬಳಸುತ್ತೇವೆ.”

ಕವರತ್ತಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ವಿಜ್ಞಾನಿಯಾಗಿರುವ ಡಾ. ಕೆ. ಕೆ. ಇದ್ರೀಸ್ ಬಾಬು ಹವಳ ಏಕೆ ಕ್ಷೀಣಿಸುತ್ತಿದೆ ಎಂದು ವಿವರಿಸುತ್ತಾರೆ. “2016ರಲ್ಲಿ, ಸಮುದ್ರದ ಉಷ್ಣತೆಯು 31 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಿತ್ತು!” ಈ ಗೋಡೆಗಳ ಉಷ್ಣತೆಯು 2005ರವರೆಗೆ 28.92 ಡಿಗ್ರಿ ಸೆಲ್ಸಿಯಸ್ ಆಗಿತ್ತು ಎಂದು ಅಧ್ಯಯನಗಳು ತೋರಿಸುತ್ತವೆ. 1985ರಲ್ಲಿ ಅದು 28.5 ಡಿಗ್ರಿ ಇತ್ತು. ದ್ವೀಪಗಳು ಸಮುದ್ರ ಮಟ್ಟಕ್ಕಿಂತ ಕೇವಲ 1-2 ಮೀಟರ್ ಎತ್ತರದಲ್ಲಿರುವುದರಿಂದ ನೀರಿನ ತಾಪಮಾನ ಮತ್ತು ಸಮುದ್ರ ಮಟ್ಟದಲ್ಲಿನ ಏರಿಕೆ ದ್ವೀಪಗಳಿಗೆ ಕಳವಳಕಾರಿಯಾಗಿದೆ.

PHOTO • Rohan Arthur, Nature Conservation Foundation, Mysuru

ಮೇಲಿನ ಸಾಲು: ಎಲ್ ನಿನೊದಂತಹ ಕೆಲವು ವಾತಾವರಣದ ಅಂಶಗಳು ಸಮುದ್ರದ ತಾಪಮಾನವನ್ನು ಹೆಚ್ಚಿಸುತ್ತವೆ ಮತ್ತು ಹವಳಗಳ ಭಾರೀ ಅವನತಿಗೆ ಕಾರಣವಾಗುತ್ತವೆ - ಹವಳಗಳ ಬಣ್ಣವು ಮಸುಕಾಗುತ್ತದೆ ಮತ್ತು ಜೀವವು ಕಳೆದುಹೋಗುತ್ತದೆ, ಇದರಿಂದಾಗಿ ಅವು ದ್ವೀಪಗಳನ್ನು ರಕ್ಷಿಸಲು ಸಾಧ್ಯವಿಲ್ಲ. ಕೆಳಗಿನ ಸಾಲು: 2014ರ ಪಾವೊನಾ ಕ್ಲೋವಿಸ್ ಹವಳದ ದೊಡ್ಡ ಶಾಖೆ, "ಪೊಟ್ಯಾಟೊ ಪ್ಯಾಚ್" ಎಂದು ಕರೆಯಲ್ಪಡುವ ಪರಿಸರ ವ್ಯವಸ್ಥೆ, ಹವಳದ ಬಂಡೆಗಳ ಸ್ವರ್ಗ. ಆದರೆ 2016ರಲ್ಲಿ, ಎಲ್ ನಿನೋ ಸಮುದ್ರ ಮಟ್ಟ ಏರಲು ಕಾರಣವಾಯಿತು, ಮತ್ತು ಹವಳಗಳಲ್ಲಿನ ಪಾಲಿಪ್ಸ್ ಅವುಗಳ ಮೇಲೆ ವಾಸಿಸುತ್ತಿದ್ದ ಪರಾವಲಂಬಿ ಪಾಚಿಗಳನ್ನು ಒರೆಸಿಕೊಂಡು ಅವುಗಳನ್ನು ಬಿಳಿಯಾಗಿ ಪರಿವರ್ತಿಸಿತು

ಕವರತ್ತಿಯಲ್ಲಿ 53 ಅಡಿ ಉದ್ದದ ಅತಿದೊಡ್ಡ ದೋಣಿ ಹೊಂದಿರುವ 45 ವರ್ಷದ ನಿಜಾಮುದ್ದೀನ್ ಕೆ. ಅವರು ಈ ಬದಲಾವಣೆಗಳನ್ನು ಅನುಭವಿಸಲು ಪ್ರಾರಂಭಿಸಿದ್ದಾರೆ. ಸಾಂಪ್ರದಾಯಿಕ ಜ್ಞಾನದ ಕೊರತೆಯಿಂದ ಅವರ ಸಮಸ್ಯೆಗಳು ಹೆಚ್ಚಾಗುತ್ತಿವೆ. “ನನ್ನ ತಂದೆ ಮೀನುಗಾರ. ಮೀನು ಎಲ್ಲಿದೆ ಎಂದು ಅವರಿಗೆ ತಿಳಿದಿತ್ತು, [ಆ ಪೀಳಿಗೆಗೆ] ತಿಳಿದಿತ್ತು. ನಮಗೆ ಆ ಜ್ಞಾನವಿಲ್ಲ, ಆದ್ದರಿಂದ ಎಫ್‌ಎಡಿಗಳನ್ನು [ಮೀನು ಒಟ್ಟುಗೂಡಿಸುವ ಸಾಧನಗಳನ್ನು] ಅವಲಂಬಿಸಿದ್ದೇವೆ. ಟ್ಯೂನ ಸಿಗಲಿಲ್ಲವೆಂದರೆ ನಾವು ಸರೋವರದಲ್ಲಿ ಇತರ ಮೀನುಗಳನ್ನು ಹಿಡಿಯುತ್ತೇವೆ.” ಎಫ್‌ಎಡಿಗಳು, ಹೈಟೆಕ್ ಶಬ್ದದ ಸಂಕ್ಷಿಪ್ತ ರೂಪ ಹೊಂದಿದ್ದರೂ, ಅದು ಕೇವಲ ತೆಪ್ಪ ಅಥವಾ ತೇಲುವ ಮರದ ದಿಮ್ಮಿಯೂ ಆಗಿರಬಹುದು - ಅದು ಮೀನುಗಳನ್ನು ಆಕರ್ಷಿಸುತ್ತದೆ ಮತ್ತು ಅವುಗಳ ಸುತ್ತಲೂ ಅಥವಾ ಅವುಗಳ ಕೆಳಗೆ ಮೀನುಗಳು ಸಂಗ್ರಹಗೊಳ್ಳುತ್ತವೆ.

"ಪ್ರಸ್ತುತ," ಕಳೆದ 20 ವರ್ಷಗಳಿಂದ ಲಕ್ಷದ್ವೀಪದಲ್ಲಿ ಸಮುದ್ರ ಜೀವಶಾಸ್ತ್ರಜ್ಞ ಮತ್ತು ವಿಜ್ಞಾನಿಯಾಗಿ ಕೆಲಸ ಮಾಡುತ್ತಿರುವ ಡಾ. ರೋಹನ್ ಆರ್ಥರ್ ಹೇಳುತ್ತಾರೆ, "ಹವಳದ ಬಂಡೆಗಳ ಜೀವವೈವಿಧ್ಯತೆ ನನ್ನ ಮುಖ್ಯ ಕಾಳಜಿಯಲ್ಲ, ಅವುಗಳ ಉಪಯುಕ್ತತೆಯ ಬಗ್ಗೆ ನನಗೆ ಹೆಚ್ಚಿನ ಕಾಳಜಿಯಿದೆ. ಈ ವ್ಯವಸ್ಥೆಯನ್ನು ಹಲವು ಜೀವಿಗಳು ಅವಲಂಬಿಸಿವೆ. ಇಲ್ಲಿನ ಜನರು ಇದನ್ನು ಅವಲಂಬಿಸಿ ಬದುಕುತ್ತಿದ್ದಾರೆ ಬಂಡೆಯೆಂದರೆ ಕೇವಲ ಹವಳಗಳಷ್ಟೇ ಅಲ್ಲ, ಅದು ಇಡೀ ಪರಿಸರ ವ್ಯವಸ್ಥೆಯನ್ನು ರೂಪಿಸುತ್ತದೆ. ಇದನ್ನು ನೀರೊಳಗಿನ ಕಾಡು ಎಂದು ಕಲ್ಪಿಸಿಕೊಳ್ಳಿ - ಮತ್ತು ಕಾಡೆಂದರೆ ಕೇವಲ ಮರಗಳಷ್ಟೇ ಅಲ್ಲ.”

ಮೈಸೂರಿನ ಎನ್‌ಸಿಎಫ್‌ನಲ್ಲಿ ಸಮುದ್ರ ಮತ್ತು ಕರಾವಳಿ ಕಾರ್ಯಕ್ರಮದ ಮುಖ್ಯಸ್ಥರಾಗಿರುವ ಡಾ. ಆರ್ಥರ್ ನಮಗೆ ಹೇಳುತ್ತಿದ್ದರು, "ಲಕ್ಷದ್ವೀಪದ ಹವಳದ ಬಂಡೆಗಳು ಬದುಕುಳಿಯುವ ಸಾಮರ್ಥ್ಯವನ್ನು ಹೊಂದಿವೆ, ಆದರೆ ಹವಾಮಾನ ಬದಲಾವಣೆಯ ವೇಗವು ಅವುಗಳ ನಷ್ಟವನ್ನು ಸರಿದೂಗಿಸುವ ವೇಗಕ್ಕೆ ಸಮನಾಗಿಲ್ಲ. ಅತಿಯಾದ ಮೀನುಗಾರಿಕೆಯಂತಹ ಮಾನವ ಹಸ್ತಕ್ಷೇಪದ ಒತ್ತಡವನ್ನು ಗಣನೆಗೆ ತೆಗೆದುಕೊಳ್ಳದಿದ್ದರೂ ಇದು ಸ್ಪಷ್ಟವಾಗುತ್ತದೆ.”

ಹವಾಮಾನ ಘಟನೆಗಳು ಮತ್ತು ಪ್ರಕ್ರಿಯೆಗಳು ಬ್ಲೀಚಿಂಗ್ ಘಟನೆಗಳಲ್ಲದೆ ಇತರ ಪರಿಣಾಮಗಳನ್ನು ಸಹ ಹೊಂದಿವೆ. ಅವುಗಳಲ್ಲಿ ಚಂಡಮಾರುತಗಳು ಕೂಡ ಸೇರಿವೆ - 2015ರಲ್ಲಿ ಮೇಘ್ ಮತ್ತು 2017ರಲ್ಲಿ ಓಖಿ ಚಂಡಮಾರುತ ಸಹ ಲಕ್ಷದ್ವೀಪಕ್ಕೆ ಅಪ್ಪಳಿಸಿದೆ. ಮತ್ತು ಮೀನುಗಾರಿಕಾ ಇಲಾಖೆಯ ದತ್ತಾಂಶವು ಮೀನುಗಾರಿಕೆಯಲ್ಲಿನ ತೀವ್ರ ಏರಿಳಿತಗಳನ್ನು ಪ್ರತಿಬಿಂಬಿಸುತ್ತದೆ, 2016ರಲ್ಲಿ ಸುಮಾರು 24,000 ಟನ್‌ಗಳಷ್ಟು ಮೀನು ಹಿಡಿದಿದ್ದರೆ (ಎಲ್ಲಾ ಟ್ಯೂನ ಪ್ರಭೇದಗಳು) 2017ರಲ್ಲಿ ಕೇವಲ 14,000 ಟನ್‌ಗಳಿಗೆ ಇಳಿದಿದೆ - ಇದು ಶೇಕಡಾ 40ರಷ್ಟು ಕುಸಿತ. 2019ರಲ್ಲಿ ಇದು ಹಿಂದಿನ ವರ್ಷ ಹಿಡಿದ 24,000ಟನ್‌ಗಿಂತ ಕಡಿಮೆ ಎಂದರೆ 19,500 ಟನ್. ಬಹಳ ಒಳ್ಳೆಯ ವರ್ಷಗಳೂ ನಡುವೆ ಬಂದಿವೆ, ಆದರೆ ಮೀನುಗಾರರು ಹೇಳಿದಂತೆ, ಇಡೀ ಪ್ರಕ್ರಿಯೆಯು ಅನಿಯಮಿತ ಮತ್ತು ಅನಿರೀಕ್ಷಿತವಾದುದು.

ಕಳೆದ ಒಂದು ದಶಕದಲ್ಲಿ ಹವಳದ ದಿಬ್ಬಗಳ ಮೀನುಗಳಿಗೆ ಬೇಡಿಕೆ ವಿಶ್ವಾದ್ಯಂತ ಹೆಚ್ಚಾದಂತೆ, ಮೀನುಗಾರರು ಚಮ್ಮಮ್ ಎಂದೂ ಕರೆಯಲ್ಪಡುವ ಗ್ರೌಪರ್‌ ಅಥವಾ ದೊಡ್ಡ ಪರಭಕ್ಷಕ ಮೀನುಗಳನ್ನು ಹುಡುಕುತ್ತಿದ್ದಾರೆ.

PHOTO • Sweta Daga

ಎಡ: ‘ದೋಣಿಗಳ ಸಂಖ್ಯೆ ಹೆಚ್ಚಾಗಿದೆ ಆದರೆ ಮೀನುಗಳ ಸಂಖ್ಯೆ ಕಡಿಮೆಯಾಗಿದೆ’ ಎಂದು ಟ್ಯೂನ ಮೀನು ಹಿಡಿಯುವ ಕವರತ್ತಿ ದ್ವೀಪಗಳ ಮೀನುಗಾರರೊಬ್ಬರು ಹೇಳುತ್ತಾರೆ. ಬಲ: ಬಿತ್ರಾದಲ್ಲಿರುವ ಅಬ್ದುಲ್ ಕೋಯಾ ತನ್ನ ಮೀನುಗಳನ್ನು ಒಣಗಿಸುತ್ತಿದ್ದಾರೆ

ಅಗತ್ತಿ ದ್ವೀಪದ ಉಮ್ಮರ್ ಎಸ್., 39, - 15 ವರ್ಷಗಳ ಕಾಲದಿಂದ ಮೀನುಗಾರ ಮತ್ತು ದೋಣಿ ತಯಾರಕರಾಗಿರುವ ಅವರು ಗ್ರೌಪರ್‌ ಮೀನುಗಳನ್ನು ಏಕೆ ಹಿಡಿಯುತ್ತಾರೆಂಬುದನ್ನು ವಿವರಿಸುತ್ತಾರೆ. "ಬಹಳಷ್ಟು ಟ್ಯೂನ ಮೀನುಗಳು ದಿಬ್ಬದ ಬಳಿ ಇದ್ದವು, ಆದರೆ ಈಗ ನಾವು ಅವುಗಳನ್ನು ಹುಡುಕಿ 40-45 ಮೈಲುಗಳಷ್ಟು ದೂರ ಹೋಗಬೇಕಾಗಿದೆ. ಮತ್ತು ನಾವು ಇತರ ದ್ವೀಪಗಳಿಗೆ ಹೋಗಬೇಕಿದ್ದಲ್ಲಿ ಎರಡು ವಾರಗಳು ತೆಗೆದುಕೊಳ್ಳಬಹುದು. ಹಾಗಾಗಿ ಅದೇ ಸಮಯದಲ್ಲಿ ನಾನು ಚಮ್ಮಮ್‌ ಮೀನುಗಳನ್ನು ಹಿಡಿಯುತ್ತೇನೆ. ಅವುಗಳಿಗೆ ಮಾರುಕಟ್ಟೆಯಿದೆ, ಆದರೆ ಕೇವಲ ಒಂದು ಮೀನು ಹಿಡಿಯಲು ಗಂಟೆಗಟ್ಟಲೆ ಕಾಯಬೇಕಾಗುತ್ತದೆ ಅದೇ ದೊಡ್ಡ ತೊಂದರೆ”

ಈ ಕ್ಷೇತ್ರದ ಬೆಳವಣಿಗೆಗಳನ್ನು ಅಧ್ಯಯನ ಮಾಡುವ ವಿಜ್ಞಾನಿಯಾಗಿರುವ ರುಚಾ ಕರ್ಕರೆ ಬಿತ್ರಾದಲ್ಲಿ ನಮಗೆ ಹೀಗೆ ಹೇಳಿದರು: “ಹವಳದ ಕ್ಷೀಣಿಸುತ್ತಿರುವ ಆರೋಗ್ಯಕ್ಕೆ ಅನುಗುಣವಾಗಿ ಗ್ರೌಪರ್‌ಗಳ ಸಂಖ್ಯೆಯಲ್ಲೂ ವರ್ಷಗಳಲ್ಲಿ ಇಳಿಕೆ ಕಂಡುಬಂದಿದೆ. ಈ ಎಲ್ಲಾ ಅನಿಶ್ಚಿತತೆ ಮತ್ತು ಹವಾಮಾನ ಬದಲಾವಣೆಯನ್ನು ನಿಭಾಯಿಸಲು, ಮೀನುಗಾರರು ಹವಳದ ಬಂಡೆಗಳಲ್ಲಿ ಮೀನುಗಳನ್ನು ಹಿಡಿಯಲು ಹೋದಾಗ ಟ್ಯೂನ ಕಂಡುಬರುವುದಿಲ್ಲ. ಆಗ ಅವರು ಗ್ರೌಪರ್‌ಗಳನ್ನು ಹಿಡಿಯುತ್ತಾರೆ. ಪರಿಣಾಮವಾಗಿ, ಅವುಗಳ ಸಂಖ್ಯೆ ಕಡಿಮೆಯಾಗುತ್ತಲೇ ಇದೆ. ಮೊಟ್ಟೆಯಿಡುವ ಸಮಯದಲ್ಲಿನ ತಿಂಗಳ ಐದು ದಿನಗಳಲ್ಲಿ ಮೀನು ಹಿಡಿಯದಂತೆ ನಾವು ಅವರಿಗೆ ಸಲಹೆ ನೀಡಿದ್ದೇವೆ.”

ಬಿತ್ರಾದ ಮೀನುಗಾರರು ಆ ಸಮಯದಲ್ಲಿ ಮೀನುಗಾರಿಕೆಯನ್ನು ನಿಲ್ಲಿಸಲು ಪ್ರಯತ್ನಿಸಿದರು, ಆದರೆ ಉಳಿದವರು ಅದಕ್ಕೆ ಸಿದ್ಧರಿರುವಂತೆ ಕಾಣಲಿಲ್ಲ.

"ಕಿಲ್ತಾನ್ ದ್ವೀಪದ ಹುಡುಗರು ಇಲ್ಲಿ ಬಿತ್ರಾಗೆ ಬಂದು ರಾತ್ರಿಯಲ್ಲಿ ಮೀನು ಹಿಡಿಯುತ್ತಿದ್ದರು" ಎಂದು ಅಬ್ದುಲ್ ಕೋಯಾ ಹೇಳುತ್ತಾರೆ, ಒಣಗಿದ ಮೀನುಗಳನ್ನು ವಿಂಗಡಿಸುತ್ತಾ ನಮ್ಮೊಂದಿಗೆ ಮಾತನಾಡುತ್ತಾ ಅವರು ಹೇಳುತ್ತಾರೆ "ಇದಕ್ಕೆ ಅನುಮತಿಸಬಾರದು ... ಇದು ಆಗಾಗ್ಗೆ ಸಂಭವಿಸುತ್ತಿದೆ ಇದರಿಂದಾಗಿ ಬೇಟ್ ಫಿಶ್, ದಿಬ್ಬ ಸಾಲು ಮತ್ತು ಟ್ಯೂನ ಎಲ್ಲಾ ಕ್ಷೀಣಿಸುತ್ತದೆ."

"ದೊಡ್ಡ ದೋಣಿಗಳು ಭಾರತದಿಂದ ಹಾಗೂ ಇತರ ದೇಶಗಳಿಂದಲೂ, ದೊಡ್ಡ ಬಲೆಗಳೊಂದಿಗೆ ಬರುತ್ತವೆ" ಎಂದು ಬಿತ್ರಾ ಪಂಚಾಯತ್ ಅಧ್ಯಕ್ಷ ಬಿ. ಹೈದರ್ ಹೇಳುತ್ತಾರೆ. "ನಮ್ಮ ಪುಟ್ಟ ದೋಣಿಗಳೊಂದಿಗೆ ನಾವು ಅವರೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ."

ಏತನ್ಮಧ್ಯೆ, ಹವಾಮಾನ ಮತ್ತು ಹವಮಾನ ಘಟನೆಗಳು ಹೆಚ್ಚು ಅನಿಯಮಿತವಾಗಿ ಬೆಳೆಯುತ್ತಿವೆ. "ನಾನು 40 ವರ್ಷ ವಯಸ್ಸಿನವರೆಗೆ ಕೇವಲ ಎರಡು ಚಂಡಮಾರುತಗಳನ್ನು ನೋಡಿದ ನೆನಪಷ್ಟೇ ಇದೆ" ಎಂದು ಹೈದರ್ ಹೇಳುತ್ತಾರೆ. "ಆದರೆ ಕಳೆದ ಕೆಲವು ವರ್ಷಗಳಲ್ಲಿ ಅವು ಹೆಚ್ಚು ಹೆಚ್ಚು ಸಂಭವಿಸುತ್ತಿವೆ ಮತ್ತು ಅವು ಹವಳದ ಬಂಡೆಗಳನ್ನು ಒಡೆಯುತ್ತಿವೆ."

PHOTO • Sweta Daga

ಎಡ: ‘ನಾವು ಬೇಟ್ ಮೀನುಗಳನ್ನು ಅವು ಮೊಟ್ಟೆ ಇಟ್ಟ ‌ನಂತರ ಹಿಡಿಯುತ್ತಿದ್ದೆವು. ಆದರೆ ಈಗ ಜನರು ಯಾವಾಗಲೂ ಬೇಟೆಯಾಡುತ್ತಿದ್ದಾರೆ 'ಎಂದು ಕವರತ್ತಿ ದ್ವೀಪದ 53 ವರ್ಷದ ಮೀನುಗಾರ ಅಬ್ದುಲ್ ರೆಹಮಾನ್ ಹೇಳುತ್ತಾರೆ. ಬಲ: ಕವರತ್ತಿಯ ಅತಿದೊಡ್ಡ ದೋಣಿಯ ಮಾಲೀಕ ನಿಜಾಮುದ್ದೀನ್ ಕೆ. ಅವರು ಸಹ ಬದಲಾವಣೆಗಳನ್ನು ಅನುಭವಿಸುತ್ತಿದ್ದಾರೆ

ಕವರತ್ತಿಯ ಅಬ್ದುಲ್ ರೆಹಮಾನ್ ಸಹ ಕವರತ್ತಿಯಲ್ಲಿನ ಚಂಡಮಾರುತಗಳ ಪರಿಣಾಮಗಳ ಬಗ್ಗೆ ಮಾತನಾಡುತ್ತಾರೆ. "ಹಿಂದೆ, ನಾವು ಹವಳದ ಗೋಡೆಗಳ ಪಕ್ಕದಲ್ಲಿ ಸ್ಕಿಪ್‌ಜಾಕ್ ಟ್ಯೂನ ಮೀನುಗಳನ್ನು ನೋಡುತ್ತಿದ್ದೆವು, ಆದರೆ ಓಖಿಯ ನಂತರ, ಇಲ್ಲಿನ ಚಿತ್ರಣವು ತೀವ್ರವಾಗಿ ಬದಲಾಗಿದೆ. ತೊಂಬತ್ತರ ದಶಕದಲ್ಲಿ, ನಾವು ಸಾಗರದಲ್ಲಿ 3-4 ಗಂಟೆಗಳ ಕಾಲ ಕಳೆದರೂ ಸಾಕು. ನಮ್ಮಲ್ಲಿ ಯಂತ್ರಗಳಿರಲಿಲ್ಲ, ಆದರೂ ಬೇಗನೆ ಸಾಕಷ್ಟು ಮೀನು ಸಿಗುತ್ತಿತ್ತು. ಈಗ ನಾವು ಇಡೀ ದಿನ ಅಥವಾ ಕೆಲವೊಮ್ಮೆ ಇನ್ನೂ ಹೆಚ್ಚು ಸಮಯವನ್ನು ಕಡಲಿನಲ್ಲಿ ಕಳೆಯಬೇಕಾಗಿದೆ. ನಾವು ಹವಳ ದಿಬ್ಬದ ಮೀನುಗಳನ್ನು ಬೇಟೆಯಾಡಲು ಬಯಸುವುದಿಲ್ಲ. ಆದರೆ ಟ್ಯೂನ ಸಿಗದಿದ್ದರೆ, ನಾವು ಕೆಲವೊಮ್ಮೆ ಅಲ್ಲಿ ಮೀನು ಹಿಡಿಯಬೇಕಾಗುತ್ತದೆ.”

ರಹಮಾನ್ ಮತ್ತೊಂದು ವಿಷಯವನ್ನು ಹೇಳುತ್ತಾರೆ. "ದೋಣಿಗಳ ಸಂಖ್ಯೆ - ಮತ್ತು ದೋಣಿಗಳ ಗಾತ್ರ - ಹೆಚ್ಚಾಗಿದೆ. ಆದರೂ, ಮೀನು ಸಿಗುವುದು ಕಡಿಮೆಯಾಗಿದೆ, ಇದರಿಂದಾಗಿ ನಮ್ಮ ಮೀನುಗಾರಿಕೆ ವೆಚ್ಚವೂ ಹೆಚ್ಚಾಗಿದೆ."

ಪ್ರತಿ ತಿಂಗಳು ಹೆಚ್ಚು ಅಥವಾ ಕಡಿಮೆ ಇರುವುದರಿಂದ ಮೀನುಗಾರರ ಆದಾಯವನ್ನು ಲೆಕ್ಕಹಾಕುವುದು ಸುಲಭವಲ್ಲವೆಂದು ಆರ್ಥರ್ ಹೇಳುತ್ತಾರೆ. “ಅವರಲ್ಲಿ ಹಲವರು ಇತರ ಉದ್ಯೋಗಗಳನ್ನೂ ಮಾಡುತ್ತಾರೆ. ಆದ್ದರಿಂದ ಮೀನುಗಾರಿಕೆಯಿಂದ ಮಾತ್ರ ಎಷ್ಟು ಆದಾಯವನ್ನು ಗಳಿಸಲಾಗುತ್ತದೆ ಎಂದು ಹೇಳುವುದು ಕಷ್ಟ.” ಆದರೆ "ಕಳೆದ ಹತ್ತು ವರ್ಷಗಳಲ್ಲಿ ಆದಾಯವು ಸಾಕಷ್ಟು ಏರಿಳಿತ ಕಂಡಿದೆ" ಎಂಬುದು ಬಹಳ ಸ್ಪಷ್ಟವಾಗಿದೆ.

ಅವರ ಪ್ರಕಾರ, "ಒಂದೇ ಸಮಯದಲ್ಲಿ ಎರಡು ಪ್ರಮುಖ ಬದಲಾವಣೆಗಳು ಲಕ್ಷದ್ವೀಪದಲ್ಲಿ ನಡೆಯುತ್ತಿವೆ. ಹವಾಮಾನ ಬದಲಾವಣೆಯು ಹವಳದ ದಿಬ್ಬಗಳನ್ನು ಹಾನಿಗೊಳಿಸುತ್ತಿದೆ ಮತ್ತು ಮೀನುಗಳ ಮೇಲೆ ಪರಿಣಾಮ ಬೀರುತ್ತಿದೆ ಮತ್ತು ಮೀನುಗಾರರು ಮತ್ತು ಅವರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತಿದೆ." ಈಗಲೂ ಲಕ್ಷದ್ವೀಪಕ್ಕೆ "ಭರವಸೆಯ ಕಿರಣ" ಆಗುವ ಸಾಮರ್ಥ್ಯವಿದೆ. ಸಮುದ್ರ ಜೀವ ಪರಿಸರ ವ್ಯವಸ್ಥೆಯನ್ನು ರಕ್ಷಿಸುವ ಮೂಲಕ ಬಂಡೆಗಳ ಚೇತರಿಕೆಗೆ ಸಹಾಯ ಮಾಡಲು ನಮಗೆ ಸಾಧ್ಯವಾದರೆ, ಅವುಗಳನ್ನು ಹೆಚ್ಚು ಕಾಲ ಸಂರಕ್ಷಿಸುವ ಅವಕಾಶವಿದೆ.”

ಇತ್ತ ಕವರತ್ತಿಗೆ ಬಂದರೆ, ನಿಜಾಮುದ್ದೀನ್ ಕೆ. ಗೊಣಗುತ್ತಾ ಹೇಳುತ್ತಾರೆ. "ಇಪ್ಪತ್ತು ವರ್ಷಗಳ ಹಿಂದೆ ಹಲವಾರು ಮೀನುಗಳು ಇದ್ದವು, ನಾವು 4-5 ಗಂಟೆಗಳಲ್ಲಿ ನಮ್ಮ ಕೆಲಸವನ್ನು ಮುಗಿಸಬಹುದಾಗಿತ್ತು, ಆದರೆ ಈಗ ದೋಣಿ ತುಂಬಲು ಇಡೀ ದಿನ ಬೇಕಾಗುತ್ತದೆ. ಮಳೆಯ ಕಾರ್ಯವಿಧಾನ ಬದಲಾಗಿದೆ. ಯಾವಾಗ ಮಳೆ ಬೀಳುತ್ತದೆ ಎಂದು ಊಹಿಸಲು ಸಾಧ್ಯವಾಗುತ್ತಿಲ್ಲ. ಮೀನುಗಾರಿಕೆಯ ಸಮಯದಲ್ಲಿ ಸಹ ಸಮುದ್ರವು ಒರಟಾಗಿರುತ್ತದೆ. ನಾವು ಜೂನ್‌ನಲ್ಲಿ ನಮ್ಮ ದೋಣಿಗಳನ್ನು ದಡಕ್ಕೆ ತರುತ್ತಿದ್ದೆವು. ಆದರೆ ಈಗ ಇದು ಕಠಿಣ ಕೆಲಸ - ಏಕೆಂದರೆ ಆಗ ಮಳೆ ಬೀಳಲು ಪ್ರಾರಂಭವಾಗುತ್ತದೆ ಆದರೆ ಅದರ ನಂತರ, ಕೆಲವೊಮ್ಮೆ ಒಂದು ತಿಂಗಳ ಕಾಲ ಮಳೆ ಬರುವುದಿಲ್ಲ. ಆಗ ದೋಣಿಯನ್ನು ಮತ್ತೆ ಸ್ಥಳಾಂತರಿಸಬೇಕೆ ಅಥವಾ ಕಾಯಬೇಕೆ ಎಂದು ನಮಗೆ ತಿಳಿಯುವುದಿಲ್ಲ. ಹೀಗೆ ನಾವು ಕೂಡ ಇದರಲ್ಲಿ ಸಿಲುಕಿಕೊಂಡಿದ್ದೇವೆ."

ಹವಾಮಾನ ಬದಲಾವಣೆಯ ಕುರಿತು ಪರಿ (PARI)ಯ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಯುಎನ್‌ಡಿಪಿ ಬೆಂಬಲಿತ ಉಪಕ್ರಮದ ಒಂದು ಭಾಗವಾಗಿದ್ದು, ಆ ವಿದ್ಯಮಾನಗಳನ್ನು ಪರಿ ಸಾಮಾನ್ಯ ಜನರ ಜೀವಂತ ಅನುಭವ ಮತ್ತು ಧ್ವನಿಗಳ ಮೂಲಕ ಸೆರೆಹಿಡಿಯುತ್ತದೆ.

ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ವಿಳಾಸವನ್ನು ಸಂಪರ್ಕಿಸಿ: [email protected] ಒಂದು ಪ್ರತಿಯನ್ನು [email protected] . ಈ ವಿಳಾಸಕ್ಕೆ ಕಳಿಸಿ

ಅನುವಾದ: ಶಂಕರ ಎನ್. ಕೆಂಚನೂರು

Sweta Daga

Sweta Daga is a Bengaluru-based writer and photographer, and a 2015 PARI fellow. She works across multimedia platforms and writes on climate change, gender and social inequality.

Other stories by Sweta Daga
Translator : Shankar N Kenchanuru

Shankar N. Kenchanuru is a poet and freelance translator. He can be reached at [email protected]

Other stories by Shankar N Kenchanuru