ಕಾರಭಾರಿ ರಾಮರಾವ್ ಜಾಧವ್ ನಿಗೆ ಬಾವಿ ಕೊರೆಯಲು ಮೂರು ವರ್ಷದ ಹಿಂದೆಯೇ ಮಂಜೂರಾತಿ ಸಿಕ್ಕಿತ್ತು. ಅದಕ್ಕಾಗಿ ಆತನಿಗೆ ಜಿಲ್ಲಾಡಳಿತದಿಂದ 2.99 ಲಕ್ಷ ರೂಪಾಯಿ ಸಬ್ಸಿಡಿ ಬರಬೇಕಿತ್ತು. ಆದರೆ ಆದದ್ದೇ ಬೇರೆ. ಆತ ಹೇಳುತ್ತಾನೆ, “ಆ ದುಡ್ಡನ್ನಂತೂ  ನಾನು ನೋಡಿಯೇ ಇಲ್ಲ. ನಾನೇ ಸ್ವತಃ ಬಾವಿ ಕೊರೆಸಲು ಹೋಗಿ 1.5 ಲಕ್ಷ ರೂಪಾಯಿ ಸಾಲವನ್ನು ಮೈಮೇಲೆ ಹಾಕಿಕೊಂಡೆ.”

ಜಾಧವ್, 48, ಔರಂಗಾಬಾದಿನ ಫುಲಾಂಬರಿ ತಾಲೂಕಿನ ಗನೋರಿ ಗ್ರಾಮಕ್ಕೆ ಸೇರಿದವನು. ತನ್ನ ನಾಲ್ಕೆಕರೆ ಜಮೀನಿನಲ್ಲಿ ಹತ್ತಿ ಮತ್ತು ಸಜ್ಜೆಯನ್ನು ಈತ ಬೆಳೆಯುತ್ತಾನೆ. ಇದಕ್ಕಾಗಿ ಹತ್ತಿರದ ಗುಡ್ಡಗಳಲ್ಲಿ ಹರಿಯುವ ಝರಿಯ ನೀರನ್ನು ಬಳಸುತ್ತಾನೆ. ಆದರೆ  ಬರವೆಂಬುದು ಮರಾಠವಾಡದ ಪ್ರದೇಶದಲ್ಲಿ ಸಾಮಾನ್ಯ. ಅದಕ್ಕಾಗಿ ತನ್ನದೊಂದು ಸ್ವಂತ ಬಾವಿ ಅಂತಾದರೆ ಈ ನೀರಿನ ಸಮಸ್ಯೆ ಬಗೆಹರಿಯುತ್ತದೆ, ತನ್ನ ಜಮೀನಿಗೂ ಜಾನುವಾರುಗಳ ಪಾಲನೆಗೂ ಈ ನೀರಿನ ಮೂಲವು ಸಹಕಾರಿಯಾಗಬಹುದು  ಅನ್ನುವುದು ಈತನ ಯೋಚನೆ.

ಹೀಗಾಗಿ 2013 ರಲ್ಲಿ ಬಾವಿಗಾಗಿ ಒಂದು ಅರ್ಜಿ ಸಲ್ಲಿಸಿಯೇ ಬಿಟ್ಟ ಜಾಧವ್. ಅದಕ್ಕೆ ಒಪ್ಪಿಗೆ ಸಿಗಬೇಕಾದರೆ ಅವನ ಹೊಲಕ್ಕೆ ಸಂಬಂಧಿಸಿದ ಸುಮಾರು ದಾಖಲೆ ಪಾತ್ರಗಳು ಬೇಕಿದ್ದವು. ಅವುಗಳನ್ನು ಪಡೆಯಲು ಆತ ತಲಾಠಿ (ಗ್ರಾಮ ಲೆಕ್ಕಾಧಿಕಾರಿ), ಗ್ರಾಮ ಪಂಚಾಯತ್ ಮತ್ತು ಪಂಚಾಯತ್ ಸಮಿತಿಗಳಂತಹ (ಜಿಲ್ಲಾ ಪರಿಷತ್ತು ಮತ್ತು ಗ್ರಾಮ ಪಂಚಾಯತಿಗಳ ನಡುವೆ ಕೊಂಡಿಯಂತೆ ಕೆಲಸ ಮಾಡುತ್ತಿರುವ ಸಮಿತಿ) ಹತ್ತಾರು ಸರಕಾರಿ ಕಛೇರಿಗಳಿಗೆ ಅಲೆದಾಡಬೇಕಾಯಿತು. ಅಂತೂ ಜಿಲ್ಲಾ ಪರಿಷತ್ತಿನಿಂದ ಒಪ್ಪಿಗೆ ಸಿಗಬೇಕಾದರೆ, ಎಲ್ಲಾ ಕಡೆ ಅಧಿಕಾರಿಗಳ ಕೈ ಬೆಚ್ಚಗೆ ಮಾಡಬೇಕಾಯಿತು. “ಬಡಪಾಯಿ ರೈತನೊಬ್ಬ ಸರಕಾರವನ್ನು ಎದುರು ಹಾಕಿಕೊಳ್ಳಲು ಆಗುತ್ತದೆಯೇ ಸ್ವಾಮೀ?”, ಎಂದು ನಿಡುಸುಯ್ಯುತ್ತಾನೆ ಆತ.

PHOTO • Parth M.N.

ಕಾರಭಾರಿ ರಾಮರಾವ್ ಜಾಧವ್: “ಬಡಪಾಯಿ ರೈತನೊಬ್ಬ ಸರಕಾರವನ್ನು ಎದುರು ಹಾಕಿಕೊಳ್ಳಲು ಆಗುತ್ತದೆಯೇ?”

ಸ್ವಂತ ಬಾವಿ ಕೊರೆಸಲು ರೈತರು ನೀಡಿದ ಅರ್ಜಿ ಮಂಜೂರಾದರೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (MNREGA) ಯ ಅಡಿಯಲ್ಲಿ ರಾಜ್ಯ ಸರಕಾರ 2.99 ಲಕ್ಷದ ಮೊತ್ತವನ್ನು ರೈತರಿಗೆ ಸಬ್ಸಿಡಿ ರೂಪದಲ್ಲಿ ನೀಡುತ್ತದೆ. ಈ ದುಡ್ಡಿನಲ್ಲಿ ರೈತರು ಬಾವಿ ಕೊರೆಯುವ ಆಳುಗಳಿಗೆ ಕೂಲಿ ಕೊಡಬಹುದು ಮತ್ತು ಪೈಪ್ ನಂತಹ ಸಾಮಾನುಗಳನ್ನು ಖರೀದಿ ಮಾಡಬಹುದು. ನಂತರ ಇವುಗಳಿಗೆ ತಗುಲಿದ ಖರ್ಚನ್ನು ಕಂತುಗಳ ರೂಪದಲ್ಲಿ ಗ್ರಾಮ ಪಂಚಾಯಿತಿಯಿಂದ ಪಡೆದುಕೊಳ್ಳಬಹುದು.

ಆದರೆ ಕೆಲಸ ಶುರು ಮಾಡಲು, ತನ್ನದೇ ಹೊಲದ ದಾಖಲೆಗಳನ್ನು ಪಡೆಯಲೂ ಕೂಡ ಜಾಧವ್ ನಿಗೆ ಹಣದ ಅವಶ್ಯಕತೆಯಿತ್ತು. ಅಲ್ಲಿನ ಒಬ್ಬ ಖಾಸಗಿಯವರನ್ನು ಸಾಲಕ್ಕಾಗಿ ಸಂಪರ್ಕಿಸಿದ ಜಾಧವ್ ಆತನಿಂದ 40,000 ಮೊತ್ತವನ್ನು ಸಾಲವಾಗಿ ಪಡೆದ. ಅದೂ ಮಾಸಿಕ 5 % ಬಡ್ಡಿದರದಂತೆ; ಅಂದರೆ ವರ್ಷಕ್ಕೆ ಬರೋಬ್ಬರಿ 60 %. ಹಿಂದೆ ಬರಗಾಲದಲ್ಲಿ ಜಾಧವ್ ಬ್ಯಾಂಕಿನಿಂದ ಸಾಲ ಪಡೆದಿದ್ದುಂಟು. ಆದರೆ ಆತ ಖಾಸಗಿಯವರಿಂದ ಸಾಲ  ಪಡೆಯುತ್ತಿರುವುದು ಇದೇ ಮೊದಲು. “ಅದರಲ್ಲಿ 30,000 ರೂಪಾಯಿ ಲಂಚಗಳಿಗಾಯಿತು. ಉಳಿದ 10,000 ರೂಪಾಯಿಗಳನ್ನು ಬಾವಿ ಕೊರೆಸಲು ಶುರು ಮಾಡಿದರಾಯಿತು ಅಂತ ಇಟ್ಟುಕೊಂಡೆ. ನಾನು ಯಾರ್ಯಾರನ್ನು ಭೇಟಿಯಾಗಿದ್ದೆನೋ ಅವರೆಲ್ಲ ಬೇಗ ಕೆಲಸ ಮಾಡಿಸಿಕೊಡುತ್ತೇವೆ ಅಂತ ಹೇಳಿದ್ದರು. ಹೀಗಾಗಿ ನಾನೂ ಬೇಗನೆ ಸಾಲ ತೀರಿಸಿಬಿಡುತ್ತೇನೆ ಅಂತ ಅಂದುಕೊಂಡಿದ್ದೆ”, ಎಂದು ಹೇಳುತ್ತಾನೆ ಆತ.

ಫೆಬ್ರುವರಿ 2015 ರಲ್ಲಿ ಆತನಿಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿತ್ತು. ವರ್ಕ್ ಆರ್ಡರ್ (ಕೆಲಸ ಶುರು ಮಾಡಲು ಬೇಕಾಗಿದ್ದ ಆದೇಶ) ಅದಾದ ಸ್ವಲ್ಪ ದಿನಗಳಲ್ಲೇ ಬಂದುಬಿಟ್ಟಿತು. ಕ್ರಮೇಣ ಇನ್ನೇನು MNREGA ದುಡ್ಡು ಬರುತ್ತೆ, ಅದರಿಂದ ಸಾಲ ತೀರಿಸಿದರಾಯಿತು ಅನ್ನುವ ವಿಶ್ವಾಸ ಇನ್ನಷ್ಟು ಬಲವಾಯಿತು. ತಾನೇ ಆಳುಗಳನ್ನು ಗೊತ್ತು ಮಾಡಿ ಬಾವಿ ಕೊರೆಸುವ ಕೆಲಸವನ್ನು ಹುಮ್ಮಸ್ಸಿನಿಂದ ಶುರು ಮಾಡಿಯೇಬಿಟ್ಟಿದ್ದ ಜಾಧವ್.

ಆದರೆ ವರ್ಕ್ ಆರ್ಡರ್ ಸಿಕ್ಕಿದ್ದರೂ ಜಾಧವ್ ನಿಗೆ ಪಂಚಾಯತ್ ಸಮಿತಿಯಿಂದ ದುಡ್ಡು ಬರಲಿಲ್ಲ. ಇದಕ್ಕಾಗಿ ಆತ ತನ್ನ ಹಳ್ಳಿಯಿಂದ 15 ಕಿಲೋಮೀಟರು ದೂರದ ಫುಲಾಂಬರಿಯಲ್ಲಿರುವ ಪಂಚಾಯತ್ ಸಮಿತಿಗೆ ನಡೆದುಕೊಂಡೋ ಅಥವಾ ಶೇರ್ಡ್ ರಿಕ್ಷಾದಲ್ಲಿ ಸಾಕಷ್ಟು ಸಲ ಹೋಗಿ ಬರಬೇಕಾಯಿತು. ಅಲ್ಲಿ ಇವನನ್ನು ಯಾರೂ ಕ್ಯಾರೇ ಅನ್ನುವವರಿರಲಿಲ್ಲ. “ಕಾಸಿಗಾಗಿನ ಈ ಅಲೆದಾಟವು ನನ್ನ ಆರ್ಥಿಕ ಸ್ಥಿತಿಯ ಮೇಲೆ ಮಾತ್ರ ಪೆಟ್ಟು ಕೊಡಲಿಲ್ಲ, ಇದು ನನ್ನ ಕೆಲಸದ ಸಮಯವನ್ನೂ ಕೂಡ ತಿಂದು ಹಾಕುತ್ತಿತ್ತು'', ಎಂದು ಹತಾಶೆಯಿಂದ ನುಡಿಯುತ್ತಾನೆ ಆತ.

ಇತ್ತ ಇವೆಲ್ಲವುಗಳ ಮಧ್ಯೆ, ಬಾವಿಯು 20 ಅಡಿಯವರೆಗಿನ ಆಳಕ್ಕಿಳಿದಿತ್ತು. ಇನ್ನೇನು ಕೆಲವು ವಾರಗಳ ಕಾಯುವಿಕೆಯಷ್ಟೇ, ಆಮೇಲೆ ನೀರು ಚಿಮ್ಮಲಿದೆ ಎಂದು ಜಾಧವ್ ಕನಸು ಕಾಣಲು ಶುರು ಮಾಡಿದ್ದ. ಆದರೆ ಕೊನೆಗೂ ಬರಬೇಕಾಗಿದ್ದ ದುಡ್ಡು ಬರಲೇ ಇಲ್ಲ. ಹೀಗಾಗಿ ಜಾಧವ್ ನ ಬಹುನಿರೀಕ್ಷಿತ ಪ್ರಾಜೆಕ್ಟ್ ನಿಂತು ಹೋಯಿತು. “ಆಳುಗಳು ಕೆಲಸ ಮಾಡುವುದನ್ನು ನಿಲ್ಲಿಸಿಬಿಟ್ಟರು. ಅದರಲ್ಲಿ ಅವರದ್ದೇನೂ ತಪ್ಪಿಲ್ಲ  ಬಿಡಿ. ಅವರಿಗೆ ದುಡ್ಡು ಕೊಡಲು ನನ್ನಿಂದ ಆಗಲಿಲ್ಲ. ಮತ್ಯಾಕೆ ಅವರು ಕೆಲಸ ಮುಂದುವರೆಸುತ್ತಾರೆ?”, ಎನ್ನುವ ಆತನಿಗೆ ಕಾರ್ಮಿಕರ ಬಗ್ಗೆ ಕಾಳಜಿಯಿದೆ,

ಕೊರೆಯುವ ಕೆಲಸವು ಅರ್ಧಕ್ಕೆ ನಿಂತು, ಕಸ ಕಡ್ಡಿಗಳಿಂದ ತುಂಬಿ ಹೋದ ಬಾವಿಯು ಕಾರಭಾರಿ ಜಾಧವ್ ನಿಗೆ ನಿತ್ಯವೂ ಅವನ ನಷ್ಟ, ಸಾಲ, ಅಡವಿಟ್ಟ ಭೂಮಿ, ಏರುತ್ತಿರುವ ಬಡ್ಡಿಯ ದರ, ಆಳಿನ ಸಂಬಳ ಮತ್ತು ವ್ಯರ್ಥವಾಗಿ ಹೋದ ಪರಿಶ್ರಮಗಳನ್ನು ನೆನಪಿಸುತ್ತದೆ. ನೀರಿನ ಸೆಲೆಯಾಗಬೇಕಿದ್ದ ಬಾವಿಯು ಈಗ ವ್ಯರ್ಥಪ್ರಯತ್ನದ ಕುರುಹಾಗಿ ಆಳವಾದ ಗುಂಡಿಯಷ್ಟೇ ಎಂಬಂತೆ ಕಾಣುತ್ತಿದೆ.

ಅರ್ಧಕ್ಕೆ ನಿಂತುಹೋದ ತನ್ನ ಬಾವಿಯ ಬಗ್ಗೆ ಹೇಳುತ್ತಿರುವ ಜಾಧವ್

ಗನೋರಿಯಲ್ಲಿ ಈ ಥರದ ಕತೆಗಳು ತುಂಬಾ ಸಾಮಾನ್ಯ. ವ್ಯವಸಾಯಕ್ಕೆ ಯೋಗ್ಯವಾಗಿರುವ ಎಕರೆಗಟ್ಟಲೆ ಭೂಮಿಯನ್ನು ಹೊಂದಿರುವ ಈ ಹಳ್ಳಿ ಔರಂಗಾಬಾದಿನಿಂದ 35 ಕಿಲೋಮೀಟರುಗಳ ದೂರದಲ್ಲಿದೆ. ಬೆಟ್ಟ-ಗುಡ್ಡಗಳಿಂದ ಸುತ್ತುವರೆದಿರುವ ಈ ಹಳ್ಳಿಗೆ ಅವುಗಳಲ್ಲಿನ ನೀರಿನ ಮೂಲಗಳೇ ಆಸರೆ. ಗುಡ್ಡಗಳಲ್ಲಿನ ಝರಿಗಳಲ್ಲಿ ಹರಿಯುವ ನೀರೇ ಇಲ್ಲಿನ ಸಾಕಷ್ಟು ಜನರನ್ನು ಬಾವಿ ಕೊರೆಯುವಂತೆ ಪ್ರೇರೇಪಿಸಿದ್ದು.  ಆದರೆ ವರ್ಷಗಳ ನಂತರವೂ 17 ಜನ ಜಾಧವ್ ನಂತೆ ಇನ್ನೂ ಹಣಕ್ಕಾಗಿ ಕಾಯುತ್ತಿದ್ದಾರೆ.

ಕೇವಲ ಲಂಚಕ್ಕಾಗಿ ದುಡ್ಡಿನ ವ್ಯವಸ್ಥೆಯನ್ನು ಮಾಡಲು ನಾಲ್ಕೆಕರೆ ಹೊಲದ ಮಾಲೀಕನಾದ ಮೂಸಾ ನೂರ್ ಶಾ ತನ್ನಲ್ಲಿರುವ 10 ಕೋಳಿ ಮತ್ತು 6 ಕುರಿಗಳನ್ನು 50,000 ರುಪಾಯಿಗೆ ರೈತನೊಬ್ಬನಿಗೆ ಮಾರಬೇಕಾಯಿತು. “ನಾನು 20,000 ರೂಪಾಯಿಗಳನ್ನು (ಬೇರೆ ಬೇರೆ ಜನರಿಗೆ) ಲಂಚವಾಗಿ ಕೊಟ್ಟ ನಂತರವೇ ನನಗೆ ವರ್ಕ್ ಆರ್ಡರ್ ಸಿಕ್ಕಿದ್ದು. ಆದರೆ, ನಾನು ಬಾವಿ ಕೊರೆಯಲು ಶುರು ಮಾಡಿದ ನಂತರ ದಾಖಲೆಗಳು ಪೂರ್ತಿಯಾಗಿಲ್ಲವೆಂದು ಅವರು ಮತ್ತಷ್ಟು ಹಣ ಕೇಳಲು ಶುರು ಮಾಡಿದರು.” ಎನ್ನುತ್ತಾರೆ ನೂರ್ ಶಾ.

ಬಾವಿ ಕೊರೆಸುವ ಯೋಚನೆಯು ಬರುವ ಮೊದಲು 45 ವರ್ಷದ, ಅನಕ್ಷರಸ್ಥ ಮೂಸಾನ ಹೆಸರಿನಲ್ಲಿ ಒಂದು ಬ್ಯಾಂಕ್ ಖಾತೆ ಸಹ ಇರಲಿಲ್ಲ. “ಬಾವಿಗಾಗಿ ಬರುವ ದುಡ್ಡನ್ನು ನೇರವಾಗಿ ವೈಯಕ್ತಿಕ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು ಎಂದಿದ್ದ ಅವರು ಬ್ಯಾಂಕ್ ಖಾತೆಯೊಂದನ್ನು ತೆರೆಯಲು ಹೇಳಿದ್ದರು. ರಾಜ್ಯದ ಯೋಜನೆಗಳನ್ನು ನಂಬಿದ್ದಕ್ಕೆ ನಾನೀಗ ಬೆಲೆ ತೆರುತ್ತಾ ಇದ್ದೇನೆ. ಇವೆಲ್ಲದರಿಂದಾಗಿ ಇವತ್ತು ನನ್ನ ಹತ್ತಿರ ಉಳಿದಿರುವುದು  ಬಹಳಷ್ಟು ಸಾಲ ಮತ್ತು ಕೆಲವೇ ಕೆಲವು ಪ್ರಾಣಿಗಳು ಮಾತ್ರ. ನನ್ನ ಎಲ್ಲಾ ಆರ್ಥಿಕ ಯೋಜನೆಗಳನ್ನು ಇದು  ತಲೆಕೆಳಗಾಗಿಸಿತು. ಒಂದು ವರ್ಷದಿಂದ ನನ್ನ ಮಗಳ ಮದುವೆ ಆಗದೆ ಹಾಗೆ ಉಳಿದಿದೆ”, ಎನ್ನುತ್ತಾರೆ ಮೂಸಾ.

PHOTO • Parth M.N.

ಮೂಸಾ ನೂರ್ ಶಾ: “ಇವತ್ತು ನನ್ನ ಹತ್ತಿರ ಉಳಿದಿರುವುದು ಬಹಳಷ್ಟು ಸಾಲ ಮತ್ತು ಕೆಲವೇ ಕೆಲವು ಪ್ರಾಣಿಗಳು ಮಾತ್ರ”

ಈ ಅನ್ಯಾಯದಿಂದ ಬೇಸತ್ತು ಸುನೀಲ್ ರೋಥೆ ಎಂಬಾತ ಮಾರ್ಚ್ ನಲ್ಲಿ ಹಳ್ಳಿಯಲ್ಲಿರುವ ಗ್ರಾಮ ಸೇವಕರ ಆಫೀಸಿಗೆ ನುಗ್ಗಿದ್ದ (ಬಾವಿಗಾಗಿ ಅರ್ಜಿ ಹಾಕಿದ ರೈತರಲ್ಲಿ ಈತನ ತಂದೆ ಸಹ ಒಬ್ಬ). ಅಲ್ಲಿ ಅವನಿಗೆ ಬಾವಿಗಾಗಿ ಲಂಚ ಕೊಟ್ಟವರಲ್ಲಿ ಗೊನೊರಿ ಗ್ರಾಮದವರಷ್ಟೇ ಇಲ್ಲ, ಇನ್ನೂ ಸಾವಿರಾರು ರೈತರು ಇದ್ದಾರೆ ಅಂತ ಹೇಳಲಾಯ್ತು. ಅದೇ ಮಾತನ್ನು ಆತ ಸ್ಮಾರ್ಟ್ ಫೋನ್ ನಲ್ಲಿ ರೆಕಾರ್ಡ್ ಮಾಡಿಕೊಂಡು ವಾಟ್ಸಾಪ್ ನಲ್ಲಿ ಹಾಕಿದ್ದ. ಮುಂದೆ ಅಲ್ಲಿನ ಸ್ಥಳೀಯ ಮಾಧ್ಯಮಗಳು ಈ ಪ್ರಕರಣವನ್ನು ಎತ್ತಿಕೊಂಡ ನಂತರ ಏಪ್ರಿಲ್ ನ ಎರಡನೆಯ ವಾರದಲ್ಲಿ ಇದರ ಬಗ್ಗೆ ತನಿಖೆ ನಡೆಸುವಂತೆ ವಿಭಾಗೀಯ ಆಯುಕ್ತರಾದ ಪುರುಷೋತ್ತಮ ಭಾಪ್ಕರ್ ಅವರಿಂದ ಆದೇಶವು ಹೊರಬಿದ್ದಿತು. ತಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ನಿರ್ವಹಿಸುವೆವೆಂಬ ಆಶ್ವಾಸನೆಯು ಆಡಳಿತ ಮಂಡಳಿಗಳಿಂದಲೂ ಬಂದಾಯಿತು. ಆದರೆ ಅಧಿಕಾರಿಗಳು ತಮ್ಮ ಮೇಲೆ ಸೇಡು ತೀರಿಸಿಕೊಂಡಾರೆಂಬ ಭಯದಿಂದ ಲಂಚ ಕೊಟ್ಟಿದ್ದೇವೆಂದು ಹೇಳಿಕೆ ಕೊಡಲು ಯಾವೊಬ್ಬ ರೈತನೂ ಕೂಡ ತಯಾರಿಲ್ಲ.

ತನಿಖೆಯಿಂದ ಆಗಬಹುದಾದರೂ ಏನು? ಅಬ್ಬಬ್ಬಾ ಅಂದರೆ ಕೆಲ ಅಧಿಕಾರಿಗಳ ವರ್ಗಾವಣೆ ಅಥವಾ ಅಮಾನತು. ಅದರಿಂದ ಪರಿಸ್ಥಿತಿಯಲ್ಲೇನೂ ಬದಲಾವಣೆ ಆಗುವುದಿಲ್ಲವಲ್ಲ! ಸುನೀಲ್ ರೋಥೆ ಆ ರೀತಿ ಮಾಡಿದ ಅನ್ನೋ ಒಂದೇ ಕಾರಣದಿಂದ ಗನೋರಿ ಗ್ರಾಮಸ್ಥರ ಸಂಕಷ್ಟಗಳು ಮಾಧ್ಯಮಗಳಲ್ಲಿ ವರದಿಯಾಯಿತು. ಲಂಚ ಕೊಟ್ಟ ಮೇಲೂ ಅವರಿಗೆ ಬರಬೇಕಾಗಿದ್ದ ಹಣ ಬಿಡುಗಡೆ ಆಗಲಿಲ್ಲ ಅನ್ನುವುದು ಇದರ ಎರಡನೇ ಕಾರಣ. ಇಲ್ಲದಿದ್ದರೆ ‘ವ್ಯವಹಾರ’ ಮೊದಲಿನಂತೆಯೇ ಆರಾಮಾಗಿ ನಡೆದುಕೊಂಡು ಹೋಗುತ್ತಿತ್ತು. ಇವೆಲ್ಲಾ ಕಾರಣಗಳಿಂದಾಗಿ ರೈತರ ಉದ್ಧಾರಕ್ಕೆಂದೇ ರಚಿಸಲಾಗಿದ್ದ ಹಲವಾರು ಯೋಜನೆಗಳು ಅಕ್ಷರಶಃ ರೈತರ ಜೀವನವನ್ನು ಸಂಕಷ್ಟದಲ್ಲಿ ದೂಡಿವೆ.

ಕಡತಗಳ ಪ್ರಕಾರ ಮರಾಠಾವಾಡದ ಸಾಗುವಳಿ ಪ್ರದೇಶಗಳಲ್ಲಿ ಮಂಜೂರಾದ ಬಾವಿಗಳೆಷ್ಟು ಮತ್ತು ಅವುಗಳಲ್ಲಿ ಎಷ್ಟು ಬಾವಿಗಳ ಕೆಲಸ ಮುಗಿದಿದೆ ಅನ್ನುವುದನ್ನು ನೋಡಿದರೆ ಸತ್ಯಾಸತ್ಯತೆಗಳ ಅರಿವಾಗುತ್ತದೆ. ಅಂದಹಾಗೆ ಮರಾಠಾವಾಡದಲ್ಲಿ MNREGA ಶುರುವಾಗಿದ್ದು 2008 ರಲ್ಲಿ. ವಿಭಾಗೀಯ ಆಯುಕ್ತರ ಕಚೇರಿಯ ದಾಖಲೆಗಳ ಪ್ರಕಾರ 2008 ರಿಂದ ಇಲ್ಲಿಯವರೆಗೆ 89,460 ಬಾವಿಗಳಿಗೆ ಅನುಮೋದನೆ ನೀಡಲಾಗಿದೆ, ಆದರೆ ಕೇವಲ 46,539 ಬಾವಿಗಳ ಕೆಲಸಗಳು ಪೂರ್ತಿಗೊಂಡಿವೆ. ಔರಂಗಾಬಾದಿನಲ್ಲಿ 6616 ಬಾವಿಗಳಿಗೆ ಮಂಜೂರಾತಿ ಸಿಕ್ಕಿದೆ. ಅವುಗಳಲ್ಲಿ 2496 ಬಾವಿಗಳ ಕೆಲಸಗಳು ಪೂರ್ಣಗೊಂಡಿದ್ದರೆ, 562 ಪ್ರಕರಣಗಳಲ್ಲಿ ಕೆಲಸಗಳು ಆರಂಭವೂ ಆಗಿಲ್ಲ.

ಈ ನಿರಾಶಾದಾಯಕ ಪ್ರಮಾಣವನ್ನು ತಗ್ಗಿಸಲು ರಾಜ್ಯ ಸರಕಾರ ಮತ್ತು ಔರಂಗಾಬಾದ ಜಿಲ್ಲಾಡಳಿತವು 2016-17 ರಲ್ಲಿ 2500 ಬಾವಿಗಳನ್ನು ಮುಗಿಸುವ ಗುರಿಯನ್ನು ನಿಗದಿಪಡಿಸಿತ್ತು. ಕೊನೆಗೂ ಮಾರ್ಚ್ 31 ರಂದು ಕೆಲಸಗಳು ಪೂರ್ತಿಯಾಗಿ ಮುಗಿದ ಬಾವಿಗಳ ಸಂಖ್ಯೆ 338. ಅದೇ ರೀತಿ 39,600 ಖಾಸಗಿ ಹೊಂಡಗಳ ನಿರ್ಮಾಣಕ್ಕೆಂದು  ಪರವಾನಿಗೆಯನ್ನು ನೀಡಲಾಗಿತ್ತು. ಆದರೆ ಇವುಗಳಲ್ಲೂ ಪೂರ್ಣಗೊಂಡ ಹೊಂಡಗಳ ಸಂಖ್ಯೆ 5825 ಮಾತ್ರ.

PHOTO • Parth M.N.

ಉಳಿದಿರುವ ಎರಡು ಹಸುಗಳ ಜೊತೆ ತಮ್ಮ ಗುಡಿಸಲಿನ ಬಳಿ ನಿಂತಿರುವ ಜಾಧವ್ ಮತ್ತವನ ಸೊಸೆ.

ಇತ್ತ ಗೊನೊರಿಯಲ್ಲಿ 60,000 ರೂಪಾಯಿಯವರೆಗೆ ತಲುಪಿದ ಆಳಿನ ಸಂಬಳವನ್ನು ತೀರಿಸಲು ಜಾಧವ್, ಏಪ್ರಿಲ್ 2016 ರಲ್ಲಿ  ತನ್ನ ಅರ್ಧ ಎಕರೆ ಹೊಲವನ್ನು ಅಡವಿಟ್ಟು  ಖಾಸಗಿಯವರಿಂದ 40,000 ರೂಪಾಯಿ ಮೊತ್ತದ ಸಾಲವನ್ನು ಪಡೆದ.  ಮುಂದೆ ಆಳಿನ ಬಾಕಿಯನ್ನೇನೋ ತೀರಿಸಿದನಾದರೂ ಹೊಲವನ್ನು ಮರಳಿ ಪಡೆಯಲಾಗಲಿಲ್ಲ. ಕಳೆದ ವರ್ಷ ವ್ಯವಸಾಯಕ್ಕೆ ಹಣ ಹೊಂದಿಸಲು ತನ್ನಲ್ಲಿರುವ ನಾಲ್ಕು ಹಸುಗಳಲ್ಲಿ ಎರಡನ್ನು 30,000 ರುಪಾಯಿಗೆ ಆತ ಮಾರಿದ್ದ. ಇನ್ನು ಈ ವರ್ಷದ ವ್ಯವಸಾಯಕ್ಕೂ ಹಣದ ಅವಶ್ಯಕತೆಯಿರುವುದರಿಂದಾಗಿ ಸದ್ಯ ಒದ್ದಾಡುತ್ತಿದ್ದಾನೆ.

ಜಾಧವ್ ಹೇಳುತ್ತಾನೆ, “ಸ್ವಂತ ಬಾವಿಯ ಕನಸು ಕಾಣುವ ಮುಂಚೆ ನನ್ನ ತಲೆಯ ಮೇಲೆ ಒಂದೂ ಸಾಲ ಇರಲಿಲ್ಲ. ಈ ಬಾವಿ ನನ್ನೆಲ್ಲ ಯೋಜನೆಗಳನ್ನು ಮಣ್ಣುಮುಕ್ಕಿಸಿತು. ಬಡ್ಡಿದರಗಳು ಬೆಳೆಯುತ್ತಲೇ ಇವೆ, ಮುಂಬರುವ ಖಾರಿಫ್ ಸೀಸನ್ ಗಿಂತ ಮೊದಲು ತಯಾರಿ ಮಾಡಿಕೊಳ್ಳಲು ಹಣದ ವ್ಯವಸ್ಥೆ ಮಾಡಬೇಕು. ಇನ್ಯಾರು ನನಗೆ ದುಡ್ಡು ಕೊಡುತ್ತಾರೋ ಕಾದು ನೋಡಬೇಕು...”

Translation : Santosh Tamraparni

Parth M.N.

Parth M.N. is a 2017 PARI Fellow and an independent journalist reporting for various news websites. He loves cricket and travelling.

Other stories by Parth M.N.
Translator : Santosh Tamrapani