ವಿಠಲ್ ಚವಾಣ್ ಕಳೆದೆರಡು ತಿಂಗಳುಗಳನ್ನು ‘ಕರೆ’ಯೊಂದರ ನಿರೀಕ್ಷೆಯಲ್ಲಿ ಕಳೆದಿದ್ದಾನೆ. ಆತ ಫೆಬ್ರವರಿ 28 ರಂದು ಒಸ್ಮಾನಾಬಾದಿನ ಕಲಾಂಬ ತಾಲೂಕಿನಲ್ಲಿರುವ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆಗಳ ಒಕ್ಕೂಟದ (National Agricultural Cooperative Marketing Federation of India, NAFED) ಕೇಂದ್ರಕ್ಕೆ ತನ್ನ 7 ಕ್ವಿಂಟಲ್ ತೊಗರಿಯನ್ನು ನೋಂದಾಯಿಸಲು ಹೋಗಿದ್ದ. ಈ ವ್ಯವಸ್ಥೆಯ ಪ್ರಕಾರ ನೋಂದಾವಣೆಯ ನಂತರ ಸರಕಾರವು ಅವನಿಂದ ಆ ಬೇಳೆಯನ್ನು ಕೊಳ್ಳುತ್ತೆ.  ಆದರೆ ಅಂದು ಅವನ ಹೆಸರು ಮತ್ತು ನಂಬರನ್ನು ಬರೆದುಕೊಂಡ ಅಲ್ಲಿಯ ಅಧಿಕಾರಿ, “ನಿನಗೆ ಆಮೇಲೆ ಕರೆ ಬರುತ್ತೆ” ಎಂದು ಹೇಳಿ ಕಳುಹಿಸಿದ್ದ.

ಮೇ ತಿಂಗಳ ಒಂದು ಬೆಳಗಿನ ಜಾವದಲ್ಲಿ ಕೇಂದ್ರದ ಅಧಿಕಾರಿಯ ಟೇಬಲ್ ಬಳಿ ಕುಳಿತು, “ದಿನ ಬಿಟ್ಟು ದಿನ ನಾನು ಇವರಿಗೆ ಫೋನ್ ಕರೆ ಮಾಡ್ತಾನೇ ಇದ್ದೆ. ಅಲ್ಲದೆ ಕೇಂದ್ರಕ್ಕೆ ಫೆಬ್ರವರಿ 28 ರ ನಂತರ 4-5 ಸಲ ಖುದ್ದು ಹೋಗಿ ಬಂದಿದ್ದೇನೆ”, ಎನ್ನುವ ವಿಠಲ್ ನಿಗೆ ಪಾನಗಾಂವ್ ನಲ್ಲಿ ಒಂಬತ್ತು ಎಕರೆ ಜಮೀನಿದೆ. ತನ್ನ ತೊಗರಿಯನ್ನು ಕೊಳ್ಳುತ್ತಾರೇನು ಎಂದು ವಿಚಾರಿಸುವ ಸಲುವಾಗಿ ಆತ ಮತ್ತೊಮ್ಮೆ 25 ಕಿಲೋಮೀಟರುಗಳ ದೂರವನ್ನು ಕ್ರಮಿಸಿ ಕಲಾಂಬದಲ್ಲಿರುವ NAFED ಕೇಂದ್ರಕ್ಕೆ ಬಂದಿದ್ದಾನೆ. ಹಾಗೆ ನೋಡಿದರೆ ಇದೇ ತರಹದ ಸಮಸ್ಯೆಯಿಂದ ಬಳಲುತ್ತಿರುವ ಸಾಕಷ್ಟು ರೈತರು ಈ ಪ್ರದೇಶದಲ್ಲಿದ್ದಾರೆ. “ಸಂಗ್ರಹಣೆ ತುಂಬಾ ಜಾಸ್ತಿಯಾಗಿದೆ, ಸಾಕಷ್ಟು ಗೋಣಿಚೀಲಗಳು ಇಲ್ಲ... ಹೀಗೆ ಒಂದಿಲ್ಲೊಂದು ಸಬೂಬುಗಳನ್ನು ಅವರು ಹೇಳ್ತಾನೇ ಇದ್ದಾರೆ. ಈಗ ಕೊನೆಯ ದಿನಾಂಕದ ಗಡುವು ಬೇರೆ ಮುಗಿದು ಹೋಗಿದೆ. ನಾನು ನಿಜಕ್ಕೂ ನೋಂದಾಯಿಸಿದ್ದೆ ಎಂಬುದನ್ನು ಪ್ರಮಾಣೀಕರಿಸಲು ನನ್ನ ಬಳಿ ಯಾವ ಪುರಾವೆಯೂ ಇಲ್ಲ”, ಎನ್ನುತ್ತಿದ್ದಾರೆ ವಿಠಲ್  ಚವಾಣ್.

ಕಳೆದ ವರ್ಷ ತೊಗರಿಯ ಬಂಪರ್ ಬೆಳೆ ಬಂದ ಕಾರಣ ಡಿಸೆಂಬರ್ 2016 ರ ಮಧ್ಯದಲ್ಲಿ ಮಹಾರಾಷ್ಟ್ರ ಸರಕಾರವು ವಿವಿಧ ಜಿಲ್ಲೆ ಮತ್ತು ತಾಲೂಕುಗಳಲ್ಲಿ NAFED ಕೇಂದ್ರಗಳನ್ನು ಶುರು ಮಾಡಿತು. ದಲ್ಲಾಳಿಗಳು ರೈತರಿಂದ ಅತೀ ಅಗ್ಗದ ಬೆಲೆಗೆ ತೊಗರಿ ಖರೀದಿಸಿ ರೈತರನ್ನು ಲೂಟಿ ಮಾಡಬಾರದು ಅನ್ನುವ ಸದುದ್ದೇಶದಿಂದ ಈ ಕೇಂದ್ರಗಳನ್ನು ಶುರು ಮಾಡಲಾಗಿತ್ತು.

PHOTO • Parth M.N.

ಸರಕಾರವು ರೈತರು ಬೆಳೆದಿರುವ ಒಂದೊಂದು ಬೇಳೆಕಾಳನ್ನೂ ಖರೀದಿಸುತ್ತದೆ ಅನ್ನುವ ನಿರೀಕ್ಷೆಯಲ್ಲಿ ಕಲಾಂಬದ NAFED ಕೇಂದ್ರದ ಹೊರಗಡೆ ಕಾಯುತ್ತಾ ನಿಂತಿರುವ ರೈತರು.

ಆದರೆ ಇವೆಲ್ಲದಕ್ಕೂ ಈ NAFED ಕೇಂದ್ರಗಳು ಸರಿಯಾಗಿ ಸಜ್ಜಾಗಿರಲೇ ಇಲ್ಲ. ಕಲಾಂಬ ಕೇಂದ್ರದಲ್ಲಿರುವ ಅಧಿಕಾರಿಯೊಬ್ಬರೂ ಕೂಡ ಇದನ್ನು ಒಪ್ಪಿಕೊಳ್ಳುತ್ತಾರೆ. ಕಲಾಂಬದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಯಾದ ಎಸ್. ಸಿ. ಚವಾಣ್ ಜೊತೆ ಈತ ಚರ್ಚೆಯಲ್ಲಿ ಭಾಗಿಯಾಗಿದ್ದ. “ಈ ಬಗ್ಗೆ ವರದಿಯೊಂದನ್ನು ನಾವು ಸಿದ್ಧಪಡಿಸುತ್ತಿದ್ದೇವೆ ಮತ್ತು ಶೀಘ್ರವೇ ಸರಕಾರಕ್ಕೆ ಅದನ್ನು ಕಳುಹಿಸುತ್ತೇವೆ”, ಎನ್ನುವ ಚವಾಣ್ “ಸಾಕಷ್ಟು ರೈತರು ತಾವು ಬೆಳೆದಿದ್ದ ತೊಗರಿಯನ್ನು ಅವಧಿಗೂ ಮುನ್ನವೇ ಇಲ್ಲಿ ತೆಗೆದುಕೊಂಡು ಬಂದಿದ್ದರು. ಆದರೆ ಕಾರಣಾಂತರಗಳಿಂದ ಅವುಗಳನ್ನು ಸ್ವೀಕರಿಸಲಾಗಲಿಲ್ಲ. ಈ ವರದಿಗೆ ಸರಕಾರವು ನೀಡುವ ಪ್ರತಿಕ್ರಿಯೆಯ ಆಧಾರದ ಮೇಲೆ ನಾವು ಮುಂದಿನ ಕ್ರಮವನ್ನು ಕೈಗೊಳ್ಳಲಿದ್ದೇವೆ”, ಎಂದು ಹೇಳುತ್ತಾರೆ.

ಅಂದಹಾಗೆ NAFED ಕೇಂದ್ರಗಳ ಗಡುವನ್ನು ಈಗಾಗಲೇ ಮೂರು ಬಾರಿ ವಿಸ್ತರಿಸಲಾಗಿದೆ- ಮಾರ್ಚ್ 15, ಮಾರ್ಚ್ 31 ಮತ್ತು ಏಪ್ರಿಲ್ 22 ರವರೆಗೆ, ಅದೂ ಕ್ಯಾಬಿನೆಟ್ ಮಂತ್ರಿ (ಸಹಕಾರ, ಜವಳಿ ಮತ್ತು ಮಾರಾಟ) ಯಾದ ಸುಭಾಷ್ ದೇಶಮುಖ್ ರೈತರು ಬೆಳೆದ ಪ್ರತಿಯೊಂದು ಬೇಳೆಕಾಳನ್ನೂ ಸರಕಾರವು ಖರೀದಿಸುತ್ತದೆ ಎಂದು ಹೇಳಿಕೆಯನ್ನು ಕೊಟ್ಟ ನಂತರ. ಮನೆಯಲ್ಲಿ ದಾಸ್ತಾನಿನ ರೂಪದಲ್ಲಿಟ್ಟಿದ್ದ ಮೂಟೆಗಟ್ಟಲೆ ಬೇಳೆಕಾಳುಗಳನ್ನು ನೋಂದಾಯಿಸಲಾಗದೆ ಹೆಣಗಾಡುತ್ತಿದ್ದ ರೈತರು ಇದರಿಂದ ಸ್ವಲ್ಪ ನಿರಾಳರಾದದ್ದಂತೂ ಹೌದು.

ಆದರೆ ಏಪ್ರಿಲ್ 22 ರ ನಂತರ ನಡೆದ ಹಟಾತ್ ಬೆಳವಣಿಗೆಯೊಂದರಲ್ಲಿ ಮಹಾರಾಷ್ಟ್ರ ಸರಕಾರವು ರೈತರಿಂದ ಬೆಳೆಯನ್ನು ಖರೀದಿಸಲು ನಿರಾಕರಿಸಿದ್ದಲ್ಲದೆ, ಗಡುವನ್ನು ವಿಸ್ತರಿಸಲಾಗುವುದಿಲ್ಲ ಎಂದೂ ಹೇಳಿಬಿಟ್ಟಿತು. ಅಂದರೆ ಏಪ್ರಿಲ್ 22 ಕ್ಕೂ ಮುಂಚೆ ಅಧಿಕೃತವಾಗಿ ರಿಜಿಸ್ಟರ್ ಮಾಡಿಸಿ NAFED ಕೇಂದ್ರದಲ್ಲಿ ತಂದು ಹಾಕಿದ್ದ ತೊಗರಿಯನ್ನು ಮಾತ್ರ ಸರಕಾರವು ಸ್ವೀಕರಿಸಲು ನಿರ್ಧರಿಸಿತ್ತು.

ವಿಪರ್ಯಾಸವೆಂದರೆ ಅವಧಿಗೆ ಮುನ್ನವೇ ಕೇಂದ್ರಕ್ಕೆ ತಂದಿದ್ದರೂ ಹೀಗೆ ಸ್ವೀಕೃತವಾದ ತೊಗರಿ ದಾಸ್ತಾನಿನ ಪಟ್ಟಿಯಲ್ಲಿ ವಿಠಲ್ ಚೌಹಾಣ್ ನ ದಾಸ್ತಾನು ಇರಲಿಲ್ಲ. ಅಲ್ಲದೆ ಅವನಂತೆಯೇ ಸಾಕಷ್ಟು ರೈತರ ತೊಗರಿಯೂ ಕೂಡ ಸ್ವೀಕೃತವಾಗದೆ ಉಳಿದಿತ್ತು. ತಾನು ಅವಧಿ ಮುಗಿಯುವ ಮುನ್ನವೇ ಬಂದಿದ್ದೆ ಎಂಬುದನ್ನು ಪ್ರಮಾಣೀಕರಿಸಲು ಅಧಿಕಾರಿಯ  ಅನಧಿಕೃತ ನೋಟ್ ಒಂದನ್ನು ಬಿಟ್ಟರೆ ಬೇರ್ಯಾವ ದಾಖಲೆಯೂ ವಿಠಲ್ ನ ಬಳಿಯಿಲ್ಲ. “ಇವರನ್ನು ನಂಬುವುದು ಹೇಗೆ ಸ್ವಾಮಿ? ನನ್ನ ಹೆಸರಿರುವ ಹಾಳೆಯನ್ನು ಅವರು ಹರಿದು ಹಾಕಿದ್ದರೆ? ಬೇಳೆ ಬೆಳೆದು ಸುಮಾರು ತಿಂಗಳುಗಳಾಗುತ್ತಾ ಬಂತು. ಮಾರುಕಟ್ಟೆಯಲ್ಲಿ ಇದಕ್ಕೆ 45,000 ರೂಪಾಯಿಗಳ ಮೌಲ್ಯವಿದೆ. ಆದರೆ ಇದು ಸದ್ಯ ನನ್ನ ಮನೆಯಲ್ಲಿ ಅನಾಥವಾಗಿ ಬಿದ್ದುಕೊಂಡಿದೆ. ಒಂದು ಪಕ್ಷ ಇವರು ಖರೀದಿಸದಿದ್ದರೆ ಅದನ್ನು ನಾನು ತೀರಾ ಕಡಿಮೆ ಬೆಲೆಗೆ ಮಾರಬೇಕು (ಅದು ಕ್ವಿಂಟಲ್ ಗೆ 1000 ರೂಪಾಯಿ ವರೆಗೂ ಆಗಿರಬಹುದು). ಇನ್ನು ಮಳೆಗಾಲ ಬಂತೆಂದರೆ ತೊಗರಿ ಕೊಳೆಯುವುದಕ್ಕೆ ಶುರುವಾಗುತ್ತೆ”, ಎಂದು ಆತಂಕದಿಂದ ಕೇಳುತ್ತಾನೆ ಆತ.

‘’ನೋಂದಾಯಿಸಿದ ರಿಜಿಸ್ಟರ್ ಅನ್ನು ಇವರು ಎಲ್ಲಾದರೂ ಕಳೆದುಹಾಕಿದ್ದರೆ ಅಥವಾ ಆ ಹಾಳೆಯನ್ನು ಹರಿದುಬಿಟ್ಟರೆ?’, NAFED ಕೇಂದ್ರದಲ್ಲಿ ತನ್ನ ಹೆಸರನ್ನು ನೋಂದಾಯಿಸಿದ ಹೊರತಾಗಿಯೂ ಚಿಂತೆಯಲ್ಲಿ ಮುಳುಗಿದ್ದಾನೆ ವಿಠಲ್ .

ಎಷ್ಟೋ ವರ್ಷಗಳ ನಂತರ ಕಳೆದ ವರ್ಷವಷ್ಟೇ, ಮರಾಠಾವಾಡದ ರೈತರು  ಯಥೇಚ್ಛವಾದ ನೀರಿನ ಅವಶ್ಯಕತೆಯಿರುವ ಕಬ್ಬನ್ನು ಬೆಳೆಯುವ ಬದಲು ತೊಗರಿಯನ್ನು  ಬೆಳೆದಿದ್ದರು. ಇದಕ್ಕೆ ಮುಖ್ಯ ಕಾರಣವೆಂದರೆ ಬೇರೆ ವರ್ಷಗಳಿಗೆ ಹೋಲಿಸಿದರೆ 2016 ರ ಬರಗಾಲವು ತುಂಬಾ ಭೀಕರವಾಗಿತ್ತು. ಸಚಿವರಾದ ಸುಭಾಷ್ ದೇಶ್ ಮುಖ್ ರವರು ಹೇಳುವಂತೆ ಹೀಗೆ ಬೆಳೆದ ತೊಗರಿ ಬೆಳೆಯು ರಾಜ್ಯಾದ್ಯಂತ ಕೊಟ್ಟಿದ್ದು ಇಪ್ಪತ್ತು ಲಕ್ಷ ಮೆಟ್ರಿಕ್ ಟನ್ನುಗಳ ಬಂಪರ್ ಬೆಳೆ. 2015 ರಲ್ಲಿ ರಾಜ್ಯಾದ್ಯಂತ ಉತ್ಪತ್ತಿಯಾದ 4.4 ಲಕ್ಷ ಮೆಟ್ರಿಕ್ ಟನ್ ತೊಗರಿಯೊಂದಿಗೆ ಇದನ್ನು ಹೋಲಿಸಿದರೆ ಇದು ನಿಜಕ್ಕೂ ಬಂಪರ್.

ದೊಡ್ಡ ಪ್ರಮಾಣದಲ್ಲಿ ನೀರನ್ನು ಬೇಡುವ ಕಬ್ಬನ್ನು ತೊರೆದು ತೊಗರಿಯಂತಹ ಸುಸ್ಥಿರ ಆಹಾರಬೆಳೆಯತ್ತ ಹೊರಳಿದ ರೈತರ ನಡೆಯು ಒಂದು ರೀತಿಯಲ್ಲಿ ನೀರಿನ ಉತ್ತಮ ಸಂಗ್ರಹಣೆಗೂ ನಾಂದಿಯಾಗುತ್ತಿತ್ತೋ ಏನೋ. ಆದರೆ ಸರಕಾರವು ತೊಗರಿಯ ಬೆಳೆಯನ್ನು ಸಂಭಾಳಿಸುತ್ತಿರುವ ಪರಿಯನ್ನು ನೋಡಿದರೆ ಕನಿಷ್ಠ ಒಂದು ವರ್ಷವಾದರೂ ತೊಗರಿಯು ರೈತರ ಬಳಗದಲ್ಲಿ ತನ್ನ ಆಕರ್ಷಣೆಯನ್ನು ಕಳೆದುಕೊಂಡರೆ ಅಚ್ಚರಿಯೇನಿಲ್ಲ.

ಮಹಾರಾಷ್ಟ್ರದಲ್ಲಿ 2014-15 ರಲ್ಲಿ ಕ್ವಿಂಟಲ್ ಗೆ 10,000 ರೂಪಾಯಿಗಳಷ್ಟಿದ್ದ ಬೆಲೆಯು ಭಾರೀ ಫಸಲು ಬರುತ್ತದೆ ಅನ್ನುವ ನಿರೀಕ್ಷೆಯಲ್ಲಿ ಕಮ್ಮಿಯಾಗಿತ್ತು. ಸರಕಾರವು ಕನಿಷ್ಠ ಬೆಂಬಲ ಬೆಲೆ (ರೈತರಿಗೆ ಅನುಕೂಲವಾಗಲು ರಾಜ್ಯ ಸರಕಾರ ನಿರ್ಧರಿಸುವ ಕನಿಷ್ಠ ಬೆಲೆ) ಯನ್ನು ಕ್ವಿಂಟಲ್ ಗೆ 5050 ರೂಪಾಯಿಯೆಂದು ನಿಗದಿ ಪಡಿಸದೇ ಹೋಗಿದ್ದರೆ, ಇಷ್ಟು ಬಂಪರ್ ಬೆಳೆ ಬಂದ ಹಿನ್ನೆಲೆಯಲ್ಲಿ ಇದರ ಬೆಲೆ ಕ್ವಿಂಟಲ್ ಗೆ 3000 ಕ್ಕೂ ಇಳಿಯುವ ಸಂಭವವಿತ್ತು.

ಸೋಜಿಗದ ಸಂಗತಿಯೆಂದರೆ ಇಷ್ಟು ಒಳ್ಳೆಯ ಬೆಳೆ ಬಂದರೂ, ಭಾರತ ಸರಕಾರವು (ಪ್ರತಿ ವರ್ಷದಂತೆ) 10,114 ರೂಪಾಯಿ ಪ್ರತಿ ಟನ್ ನಂತೆ 57 ಲಕ್ಷ ಟನ್ ತೊಗರಿಯನ್ನು ಈ ಬಾರಿಯೂ ಆಮದು ಮಾಡಿಕೊಂಡಿತ್ತು.

NAFED ಕೇಂದ್ರವು ವಿಧಿಸಿದ್ದ ಮಹಾರಾಷ್ಟ್ರದ ಒಟ್ಟು ಉತ್ಪನ್ನದ 25% ಮಿತಿಗಿಂತಲೂ ಹೆಚ್ಚು ತೊಗರಿಯನ್ನು ಖರೀದಿಸಿದ್ದಾಗಿ ರಾಜ್ಯ ಸರಕಾರವು ದಾಖಲೆಯೊಂದರಲ್ಲಿ ಹೇಳಿದೆ.  ದೇಶ್ ಮುಖ್ ರವರ ಪ್ರಕಾರ ಏಪ್ರಿಲ್ ವೇಳೆಗೆ ನಾಲ್ಕು ಲಕ್ಷ ಟನ್ ತೊಗರಿಯನ್ನು ಖರೀದಿಸಿದ್ದಲ್ಲದೆ, ಇನ್ನೊಂದು ಲಕ್ಷ ಟನ್ ತೊಗರಿ ಖರೀದಿಗಾಗಿ ನೋಂದಣೆಯಾಗಿದೆ. “ಸರಕಾರಿ ವಿಧಿ-ವಿಧಾನಗಳ ಪ್ರಕಾರ ರೈತರಿಗೆ ಬರಬೇಕಾದ ಬಾಕಿ ಮುಟ್ಟುವಂತೆ ನಾವು ನೋಡಿಕೊಂಡಿದ್ದೇವೆ”, ಎಂಬುದು ಇವರ ಅಭಿಪ್ರಾಯ.

ಆದರೆ ಅಧಿಕೃತ ಸರಕಾರಿ ದಾಖಲೆಗಳಲ್ಲಿ ಕಾಣಸಿಗುವ ಪ್ರಕಾರ ಒಟ್ಟು ಉತ್ಪನ್ನದ ಮೊತ್ತ 20 ಲಕ್ಷ ಟನ್ ಎಂದರೆ ಅದು ನಿಜಕ್ಕೂ ಕಮ್ಮಿಯೇ. ಆಂತರಿಕ ಬೆಳೆಯಾದ ತೊಗರಿಯನ್ನು ಸಾಮಾನ್ಯವಾಗಿ ಬೇರೆ ಬೆಳೆಯ ಮಧ್ಯದಲ್ಲಿ ಬೆಳೆಯುತ್ತಾರೆ - ಕಬ್ಬು ಅಥವಾ ಬೇರೆ ಬೆಳೆಯ ಎರಡು ಸಾಲುಗಳ ಮಧ್ಯೆ. ಇದಕ್ಕೆ ಹೆಚ್ಚು ನೀರಿನ ಅವಶ್ಯಕತೆಯಿಲ್ಲದಿರುವುದರಿಂದಾಗಿ ಮತ್ತು ನಾಲ್ಕು ತಿಂಗಳಿಗೊಮ್ಮೆ ಕಟಾವು ಮಾಡುವ ರೂಢಿಯಿಂದಾಗಿ ಇದನ್ನು ಬೋನಸ್ ಅಂತಾನೇ ಪರಿಗಣಿಸಲಾಗುತ್ತದೆ. ಹೀಗಾಗಿಯೇ ರೈತರು ತಮ್ಮ ಹೊಲದ ದಾಖಲೆಗಳಲ್ಲಿ ಮುಖ್ಯ ಬೆಳೆಯನ್ನು ಮಾತ್ರ ತೋರಿಸುತ್ತಾರೆ. ಇತ್ತ ರೈತರು ತಮ್ಮ ದಾಖಲೆಗಳಲ್ಲಿ ತೊಗರಿಯನ್ನು ತೋರಿಸಿದ್ದರೆ ಮಾತ್ರ ಸರಕಾರ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿದೆ. ಆದರೆ ನೋಂದಾಯಿಸಲಾದ ಸರಕಾರಿ ಲೆಕ್ಕಕ್ಕಿಂತ ಮೂರು ಪಟ್ಟು ಹೆಚ್ಚು ತೊಗರಿ ರೈತರ  ಬಳಿ ಬಿದ್ದಿದೆಯೆಂದು ವರದಿ ಹೇಳುತ್ತಿದೆ.

ಬಹುಷಃ ಸಿಕ್ಕ ಬೆಲೆಗೆ ನಾನಿನ್ನು ತೊಗರಿಯನ್ನು ಮಾರಬೇಕಾಗುತ್ತದೋ ಏನೋ ಎಂದು ನಿರಾಶೆಯಿಂದ ಹೇಳುತ್ತಿದ್ದಾನೆ ಮೇಘನಾಥ ಶೆಲ್ಕೆ

NAFED ಕೇಂದ್ರಕ್ಕೆ ಸಾಕಷ್ಟು ಸಲ ಹೋಗಿ ಬಂದರೂ ತನ್ನ 6 ಕ್ವಿಂಟಲ್ ತೊಗರಿಯನ್ನು ನೋಂದಾಯಿಸಲು ಮೇಘನಾಥ ಶೇಲ್ಕೆಯಿಂದ ಸಾಧ್ಯವಾಗಿಲ್ಲ. 58 ರ ಪ್ರಾಯದ ಒಸ್ಮಾನಾಬಾದಿನ ಧನೋರಾ ಗ್ರಾಮದ ಈತ ಹೇಳುತ್ತಾನೆ: “ಒಂದು ಸಲ ತೂಕದ ಮಷೀನ್ ಕೆಟ್ಟಿದೆ ಅಂತಾ ನನ್ನನ್ನು ವಾಪಸ್ ಕಳುಹಿಸಿದ್ದರು. ತಂದಿದ್ದ ತೊಗರಿಯನ್ನು ಇಲ್ಲೇ ಬಿಟ್ಟು ಹೋದರೆ ಅದು ಕಳುವಾಗಬಹುದು; ಹಾಗೇನಾದರೂ ಆದರೆ ಅದಕ್ಕೆ ನಾವು ಜವಾಬ್ದಾರರಲ್ಲ ಎಂದು ಬೇರೆ ಹೇಳಿದ್ದರು.”  ಜೊತೆಗೇ, “ಹೆಚ್ಚು ಕಡಿಮೆ ಒಂದು ತಿಂಗಳಿಂದ NAFED ಕೇಂದ್ರದ ಬಾಗಿಲು ಮುಚ್ಚಿದೆ. ಅದು ಯಾವಾಗ  ತೆರೆದಿರುತ್ತೆ, ಯಾವಾಗ ಮುಚ್ಚಿರುತ್ತೆ ಗೊತ್ತೇ ಆಗಲ್ಲ”, ತನ್ನ ಮನೆಯ ಮೂಲೆಯಲ್ಲಿಟ್ಟಿರುವ ಆರು ಮೂಟೆ ತೊಗರಿಯನ್ನು ತೋರಿಸುತ್ತಾ ಹೇಳುತ್ತಾನೆ ಮೇಘನಾಥ ಶೆಲ್ಕೆ.

ತನ್ನ ಎಂಟೆಕರೆ ಹೊಲದಲ್ಲಿ ಶೇಲ್ಕೆ, ತೊಗರಿಯಲ್ಲದೆ ಸೋಯಾಬೀನ್ ಮತ್ತು ಹತ್ತಿಯನ್ನು ಕೂಡ ಬೆಳೆಯುತ್ತಾನೆ. ಅವನನ್ನು ಕೇಂದ್ರದಿಂದ ವಾಪಸ್ ಕಳುಹಿಸಿದ ಪ್ರತಿಯೊಂದು ಬಾರಿಯೂ 6 ಕ್ವಿಂಟಲ್ ತೊಗರಿಯೊಂದಿಗೆ ಆತ 10 ಕಿಲೋಮೀಟರು ದೂರ ಕ್ರಮಿಸಿದ್ದಾನೆ. “ನಾನು ನೂರಾರು ರೂಪಾಯಿಗಳನ್ನು ಬರೀ ಹೋಗಿ ಬರುವುದಕ್ಕೆ (ಟೆಂಪೋಗಾಗಿ) ಖರ್ಚು ಮಾಡಿದ್ದೇನೆ. ನಾವು ಬೆಳೆದ ಪ್ರತಿ ಬೇಳೆಕಾಳನ್ನೂ ಕೊಳ್ಳುತ್ತೇವೆ ಎಂದು ಸರಕಾರ ಭರವಸೆ ನೀಡಿತ್ತು. ಸರಕಾರ ತನ್ನ ಮಾತನ್ನು ಉಳಿಸಿಕೊಳ್ಳದೆ ಹೋದರೆ ಮುಂದಿನ ಖಾರಿಫ್ ಋತುವಿನ ಬಿತ್ತನೆಯ ತಯಾರಿಗಾಗಿ ಮಾಡಬೇಕಾದ ಹೂಡಿಕೆಗಳಿಂದಾಗಿ ನಮಗೆ ದೊಡ್ಡ ಪ್ರಮಾಣದ ಹಿನ್ನಡೆಯಾಗಲಿದೆ”, ಎನ್ನುತ್ತಿದ್ದಾರೆ ಶೆಲ್ಕೆ.

PHOTO • Parth M.N.

NAFED ಕೇಂದ್ರದಿಂದ ಬರಲಿರುವ ಕರೆಗಾಗಿ ಇನ್ನೂ ಕಾತರದಿಂದ ಕಾಯುತ್ತಿದ್ದಾನೆ ಪಾನಗಾಂವ್ ಪ್ರಾಂತ್ಯದ ರೈತ ವಿಠಲ್ ಚೌಹಾಣ್.

ಕೊನೆಗೂ ಬೇಸತ್ತ ವಿಠಲ್ ಮಧ್ಯಾಹ್ನದ ಹೊತ್ತಿಗೆ ಪಾನಗಾಂವ್ ಗೆ ಮರಳುವ ನಿರ್ಧಾರ ಮಾಡುತ್ತಾನೆ. “ಬೆಳೆ ಬರದೇ ಹೋದರೆ ನಾವು ಸಾಯುತ್ತೇವೆ. ತುಂಬಾ ಒಳ್ಳೆಯ ಬೆಳೆ ಬಂದರೂ ನಾವು ಸಾಯುತ್ತೇವೆ”, ಎನ್ನುತ್ತಿದ್ದಾನೆ ಆತ. ಮೊದಲೇ ಸಾಲದಲ್ಲಿ ಮುಳುಗಿರುವ ಮಹಾರಾಷ್ಟ್ರದ ರೈತರಿಗೆ ತೊಗರಿಯ ಸಮಸ್ಯೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಸುಮಾರು ಅರ್ಧ ದಿನ NAFED ಕೇಂದ್ರದಲ್ಲಿ ಕಳೆದ ಮೇಲೂ ತನ್ನ ತೊಗರಿ ಸ್ವೀಕೃತವಾಗಿದೆಯೋ ಇಲ್ಲವೋ ಅನ್ನುವುದು ವಿಠಲ್ ನಿಗೆ ತಿಳಿದಿಲ್ಲ. ಅಲ್ಲಿಂದ ಹೋಗಬೇಕಾದರೆ ಮತ್ತೆ ಯಾವಾಗ ವಿಚಾರಿಸಲು ಬರಲಿ ಎಂದು ಆತ ಕೇಳುತ್ತಾನೆ. “ನಿನಗೆ ಆಮೇಲೆ ಕರೆ ಬರುತ್ತೆ”, ಎಂಬ ಎಂದಿನ ಉತ್ತರವೇ ಅವನಿಗೆ ಮತ್ತೆ ಎದುರಾಗುತ್ತದೆ.

ಕೊನೆಯ ಮಾತು : ಪ್ರಕಟಣೆಯ ಸಮಯದಲ್ಲಿ ಮಹಾರಾಷ್ಟ್ರ ಸರಕಾರವು ಗಡುವನ್ನು ಮೇ 31 ರ ವರೆಗೆ ವಿಸ್ತರಿಸಿದೆ. ಆದರೆ ಇದರಿಂದಾಗಿ ಬೇಸತ್ತ ರೈತರ ಕಳೆದುಹೋದ ನೆಮ್ಮದಿಯನ್ನು ಮರಳಿಸುವುದಾಗಲೀ, ಈ ಸಮಸ್ಯೆಗಳಿಗೆ ಒಂದೊಳ್ಳೆಯ ದೀರ್ಘಾವಧಿಯ ಪರಿಹಾರವನ್ನು ಕಂಡುಕೊಳ್ಳುವ ಯಾವುದೇ ಭರವಸೆಯಾಗಲೀ ಕಾಣುತ್ತಿಲ್ಲ.

ವಿಠಲ್ ಚವಾಣ್ ಹೇಳುವಂತೆ ಕಲಾಂಬ ತಾಲೂಕಿನಲ್ಲಿರುವ NAFED ಕೇಂದ್ರವು ಮುಚ್ಚಿದೆ ಮತ್ತು ಅವನ ಬೇಳೆಯ ದಾಸ್ತಾನನ್ನು ಮಾರಾಟಕ್ಕೆ ಮಾಡುವಲ್ಲಿ ಆತ ವಿಫಲನಾಗಿದ್ದಾನೆ. ಈ ನಿಟ್ಟಿನಲ್ಲಿ ಕೇಂದ್ರಕ್ಕೆ ಆತ ಮತ್ತೊಮ್ಮೆ ಕರೆ ಮಾಡಿದರೆ ಯಾವ ಸಮಾಧಾನಕರ ಉತ್ತರವೂ ಆತನಿಗೆ ಸಿಕ್ಕಿಲ್ಲ.

Translation: Santosh Tarmraparni

Parth M.N.

Parth M.N. is a 2017 PARI Fellow and an independent journalist reporting for various news websites. He loves cricket and travelling.

Other stories by Parth M.N.
Translator : Santosh Tamrapani