ಭರತ ರಾವುತ್ ಪ್ರತಿ ತಿಂಗಳು ಸುಮಾರು ೮೦೦ ರೂಪಾಯಿಗಳನ್ನು ಪೆಟ್ರೋಲ್ ಗಾಗಿ ಖರ್ಚು ಮಾಡುತ್ತಾನೆ- ತನಗೆ ಸೇರಿದ ನೀರನ್ನು ತರುವುದಕ್ಕೋಸ್ಕರ. ಮರಾಠಾವಾಡದ ಒಸ್ಮಾನಾಬಾದ ಜಿಲ್ಲೆಯ ಟಕ್ವಿಕಿ ಗ್ರಾಮದ ಸಾಕಷ್ಟು ಜನರೂ ಅವನಂತೆಯೇ ಮಾಡುತ್ತಾರೆ. ಟಕ್ವಿಕಿ ಗ್ರಾಮದ (ಮತ್ತು ಬೇರೆ ಗ್ರಾಮಗಳಲ್ಲೂ) ಹೆಚ್ಚು ಕಡಿಮೆ ಪ್ರತೀ ಮನೆಯಲ್ಲೂ ಒಬ್ಬ ಸದಸ್ಯನಿಗೆ ಪ್ರತಿದಿನ ತಪ್ಪದ ಕೆಲಸ: ನೀರು ತಂದು ಹಾಕುವುದು, ತಮಗೆ ಎಲ್ಲಿಂದ ಸಾಧ್ಯವೋ ಅಲ್ಲಿಂದ!  ಒಸ್ಮಾನಾಬಾದಿನಲ್ಲಿ ಕಾಣಸಿಗುವ ಪ್ರತಿಯೊಂದು ವಾಹನ ಒಂದಲ್ಲ ಒಂದು ಕಡೆ ನೀರು ಹೊತ್ತೊಯ್ಯುತ್ತಿರುತ್ತದೆ. ಇವುಗಳಲ್ಲಿ ಸೈಕಲ್, ಎತ್ತಿನ ಬಂಡಿ, ಮೋಟಾರ್ ಬೈಕ್, ಜೀಪ್, ಲಾರಿ, ವ್ಯಾನ್ ಮತ್ತು ಟ್ಯಾಂಕರ್ ಗಳು ಸೇರಿವೆ. ಮಹಿಳೆಯರು ತಮ್ಮ  ತಲೆ, ಪೃಷ್ಠ, ಹೆಗಲಿನ ಮೇಲೆ ನೀರು ತರುತ್ತಾರೆ. ಒಟ್ಟಿನಲ್ಲಿ ಬರಗಾಲದಿಂದಾಗಿ ಕೆಲವರು ಬದುಕಿ ಉಳಿಯಲು ಹೀಗೆ ಮಾಡಿದರೆ ಮತ್ತೆ ಕೆಲವರು ಭರ್ಜರಿ ಲಾಭಕ್ಕಾಗಿ ಹೀಗೆ ಮಾಡುತ್ತಿದ್ದಾರೆ.

PHOTO • P. Sainath

ಒಸ್ಮಾನಾಬಾದನ ರಸ್ತೆಯಲ್ಲಿ ಕಾಣಸಿಗುವ ಪ್ರತಿಯೊಂದೂ ವಾಹನ ಒಂದಲ್ಲ ಒಂದು ಕಡೆ ನೀರು ಹೊತ್ತೊಯ್ಯುತ್ತದೆ

“ಹೌದು, ಇಲ್ಲಿ ಪ್ರತಿ ಮನೆಯಲ್ಲೂ ಒಬ್ಬ ಸದಸ್ಯನಿಗೆ ನೀರು ತರುವುದೇ ಖಾಯಂ ಕೆಲಸ” ಅಂತ ಐದೂವರೆ ಎಕರೆ ಜಮೀನಿನ ಒಡೆಯನಾದ ಸಣ್ಣ ರೈತ ಭರತ ಹೇಳುತ್ತಾನೆ. ಅವನ ಮನೆಯಲ್ಲಿ ನೀರು ತರುವ ಕೆಲಸ ಅವನದೇ. “ನಮ್ಮ ಹೊಲದಲ್ಲಿರುವ ಬೋರ್ ವೆಲ್ ನಲ್ಲಿ ಸಣ್ಣ  ದಾರದಂತೆ ಬರುವ ನೀರನ್ನು ನಾನು ತರುತ್ತೇನೆ. ಆದರೆ, ಆ ಬೋರ್ ವೆಲ್ ಮೂರು ಕಿಲೋಮೀಟರ್ ಗಿಂತ ಸ್ವಲ್ಪ ದೂರದಲ್ಲಿದೆ.” ಅಂತೆನ್ನುತ್ತಾನೆ ಆತ. ಬೋರ್ ವೆಲ್ ನಲ್ಲಿ ನೀರು ತೀರ್ಥದಂತೆ ಬರುತ್ತದೆ. ಬೆಳೆಯಂತೂ ಮೊದಲೇ ಇಲ್ಲ. ಒಂದು ಟ್ರಿಪ್ ನಲ್ಲಿ ಸುಮಾರು 60 ಲೀಟರ್ ನೀರು ಮಾತ್ರ ಅವನಿಂದ ತರಲು ಸಾಧ್ಯ. ತನ್ನಲ್ಲಿರುವ ಹೀರೊ ಹೋಂಡಾದ ಮೇಲೆ ಪ್ಲಾಸ್ಟಿಕ್ ಕೊಡಗಳಲ್ಲಿ (ಘಡಾ)  ನೀರು ತರುತ್ತಾನೆ. ಇಂಥ ಸುಮಾರು 25 ಮೋಟಾರ್ ಬೈಕ್ ಗಳಿಗೆ ಯಾವಾಗಲೂ ಹೀಗೆ ನೀರು ಪೂರೈಸುವುದೇ ಕೆಲಸ.

PHOTO • P. Sainath

‘ ಘಡಾ ( ಪ್ಯಾಸ್ಟಿಕ್ ಕೊಡ ) ’ ಗಳ ಜೊತೆ ಭರತ ರಾವುತ. ಈ ಪ್ಲಾಸ್ಟಿಕ್ ಕೊಡಗಳನ್ನು ಆತ ಹೀರೊ ಹೋಂಡಾಗೆ ಕಟ್ಟಿ, ತನ್ನ ಕುಟುಂಬಕ್ಕೆ ನೀರು ತರುತ್ತಾನೆ ಟಕ್ವಿಕಿ ಗ್ರಾಮದಲ್ಲಿ

ಒಮ್ಮೆ ಹೋಗಿ ನೀರು ತರಬೇಕೆಂದರೆ 6 ಕಿಲೋಮೀಟರ್ ಆತ ಕ್ರಮಿಸಲೇಬೇಕು, ಹೆಚ್ಚು ಕಡಿಮೆ ದಿನಕ್ಕೆ 20 ಕಿಲೋಮೀಟರ್ ಅಂದರೆ ತಿಂಗಳಿಗೆ ಸುಮಾರು 600 ಕಿಲೋಮೀಟರ್ ತನಕ ಬೈಕ್ ಓಡುತ್ತದೆ. ಸುಮಾರು 11 ಲೀಟರ್ ಪೆಟ್ರೋಲ್ ಬೈಕ್ ಕುಡಿಯುತ್ತೆ. ಅಂದರೆ 800 ರೂಪಾಯಿ ತಿಂಗಳಿಗೆ ಭರತ ಕೇವಲ ನೀರಿನ ಮೇಲೆ ಸುರಿಯಬೇಕು. ಸರಕಾರಿ ಸ್ವಾಮ್ಯದಲ್ಲಿರುವ ನೀರಿನ ಸರಬರಾಜನ್ನು ನಂಬಿದ ಅಜಯ ನೀತುರೆನ ಸ್ಥಿತಿ ಇದಕ್ಕಿಂತ ತುಸು ಭಿನ್ನ. ಈ ವಾರ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ನೀರು ಬಂದರೆ ಇನ್ನೊಂದು ವಾರ ಮಧ್ಯರಾತ್ರಿಯಿಂದ ಬೆಳಗಿನ 10 ರ ವರೆಗೆ ನೀರು ಬರುತ್ತದೆ. ಸೈಕಲ್ ಮೇಲೆ ಎರಡು-ಮೂರು ಕಿಲೋಮೀಟರ್ ನ ಟ್ರಿಪ್ ಗಳು ಸಾಮಾನ್ಯ ಇವನಿಗೆ. ಹೆಗಲ ಮೇಲೆ ನೀರು ಹೊತ್ತಿದ್ದಕ್ಕೆ ಈಗಾಗಲೇ ಎರಡು ಸಲ ಆಸ್ಪತ್ರೆಗೆ ಭೇಟಿ ನೀಡಿದ್ದಾನೆ.

ಸ್ವಂತ ಭೂಮಿಯಿಲ್ಲದವರಿಗೆ ಮಾಲೀಕರಿಂದ ತೊಂದರೆಯಾಗುತ್ತೆ. “ನೀವು ಕೆಲವು ಸಲ ಬರುತ್ತೀರಾ, ಕೆಲವು ಸಲ ಕಾಣುವುದೇ ಇಲ್ಲ. ಇದರಿಂದ ಪ್ರಾಣಿಗಳಿಗೆ ನೀರು ಕುಡಿಸುವುದು ಸಾಧ್ಯ ಆಗಲ್ಲ. ಕಳೆದ ಐದು ತಿಂಗಳಿಂದ ಇದು ನಡೀತಾನೇ ಇದೆ” ಅಂತೆನ್ನುವ ಜಂಬರ ಯಾದವ ಈಗಾಗಲೇ ಆರು ಕೊಡಗಳ ಎರಡು ಟ್ರಿಪ್ ಮಾಡಿಯಾಗಿದೆ.

ಆದರೆ, ಎರಡರಿಂದ ಮೂರು ಕೊಡಗಳನ್ನು ಹೊತ್ತುಕೊಂಡು ಬರಿಗಾಲಿನಲ್ಲಿ ಟ್ರಿಪ್ ಹೊಡೆಯುವ ಟಕ್ವಿಕಿಯ ಗ್ರಾಮದ ಹೆಂಗಸರ ಮುಂದೆ ಇವರೆಲ್ಲರ ಕೆಲಸ ಮಂಕಾಗಿ ಹೋಗುತ್ತದೆ. ಗಂಡಸರು ಮೋಟಾರ್ ಬೈಕ್ ಮೇಲೆ ಕ್ರಮಿಸುವ ದೂರಕ್ಕಿಂತಲೂ ಜಾಸ್ತಿ ದೂರ ಇವರು ಕಾಲ್ನಡಿಗೆಯಲ್ಲಿ ಕ್ರಮಿಸುತ್ತಾರೆ. ಪ್ರತಿದಿನ 15-20 ಕಿಲೋಮೀಟರ್ ನಡೆಯುತ್ತಾರೆ. ಇದು ಪ್ರತಿದಿನ 8-10 ತಾಸಿನ ಕೆಲಸ ಅವರಿಗೆ. ಸಾಕಷ್ಟು ಹೆಂಗಸರ ಆರೋಗ್ಯ ಹದಗೆಡಲು ಅವರ ಮೇಲಿರುವ ಒತ್ತಡ ಕಾರಣವಾಗುತ್ತೆ. ನೀರು ತರಲು ಜಮೆಯಾದ ಸ್ಥಳವೊಂದರಲ್ಲಿ ಸಿಕ್ಕ ಅವರು,  ನೀರನ್ನು ಹೇಗೆ ಮರುಬಳಕೆ ಹೇಗೆ ಮಾಡುತ್ತಾರೆ ಅಂತ ವಿವರಿಸುತ್ತಾರೆ. ಮೊದಲು ನೀರಿನಿಂದ ಸ್ನಾನ ಮಾಡುತ್ತಾರೆ. ಸ್ನಾನ ಮಾಡಿದ ನೀರಿನಿಂದಲೇ ಬಟ್ಟೆ ಒಗೆಯುತ್ತಾರೆ. ಕೊನೆಗೆ ಅದೇ ನೀರನ್ನು ಪಾತ್ರೆ ತೊಳೆಯಲು ಉಪಯೋಗಿಸುತ್ತಾರಂತೆ.

PHOTO • P. Sainath

ಟಕ್ವಿಕಿ ಗ್ರಾಮದಲ್ಲಿ ನೀರಿನ ಮರುಬಳಕೆ ಬಗ್ಗೆ ಹೇಳುತ್ತಿರುವ ಹೆಂಗಸರು: “ ಮೊದಲು ನಾವಿದನ್ನಿ ಸ್ನಾನಕ್ಕೆ ಉಪಯೋಗಿಸುತ್ತೇವೆ. ಆಮೇಲೆ ಅದೇ ನೀರನ್ನು ಬಟ್ಟೆ ಒಗೆಯಲು ಬಳಸುತ್ತೇವೆ. ಕೊನೆಗೆ, ಪಾತ್ರ ತೊಳೆಯಲು ಉಪಯೋಗಿಸುತ್ತೇವೆ”

ಇನ್ನು ಫುಲವಂತಿಬಾಯಿ ಯಂಥವರ ಸ್ಥಿತಿ ಇನ್ನೂ ಶೋಚನೀಯ. ಸರಕಾರಿ ಸ್ವಾಮ್ಯದ ನೀರಿನ ವ್ಯವಸ್ಥೆಯೂ ಸೇರಿದಂತೆ ಎಲ್ಲ ನೀರಿನ ಮೂಲಗಳಿಂದ ಅವಳನ್ನು ದೂರ ಇಡಲಾಗುತ್ತದೆ. ಅದಕ್ಕೆ ಅವಳು ದಲಿತಳಾಗಿರುವುದು ಕಾರಣ. ಹೀಗಾಗಿ ನೀರಿಗಾಗಿ ನಿಲ್ಲುವ ಸಾಲಿನಲ್ಲಿ ಯಾವಾಗಲೂ ಅವಳೇ ಕೊನೆಯವಳು.

ನೀರಿನ ಅಭಾವದ ಬಿಸಿ ಪ್ರಾಣಿಗಳನ್ನೂ ತಟ್ಟಿದೆ. ತಿನ್ನಲು ಹುಲ್ಲು ಮತ್ತು ಕುಡಿಯಲು ನೀರು ಎರಡೂ ಕಮ್ಮಿಯಿರುವುದರಿಂದ ಸುರೇಶ ವೇದಪಾಠಕ ನಂಥವರ ಮತ್ತವನ ಆಕಳುಗಳ ಸ್ಥಿತಿಯೂ ಕೆಟ್ಟಿದೆ. ಮೊದಲೆಲ್ಲ ಹಾಲು ಮಾರಿದಾಗ ದಿನಕ್ಕೆ 300 ರೂಪಾಯಿ ಸಿಗುತ್ತಿತ್ತು. ಈಗ ಅದು 100 ಕ್ಕೆ ಇಳಿದಿದೆ.

ಒಸ್ಮಾನಾಬಾದನ ಸಮಸ್ಯೆಯ ಅತಿ ಚಿಕ್ಕ ಭಾಗ ಈ ಟಕ್ವಿಕಿ ಗ್ರಾಮ. ಸುಮಾರು 4,000 ಜನ ಇರುವ ಈ ಹಳ್ಳಿಯಲ್ಲಿ 1,500 ಬೋರ್ ವೆಲ್ ಗಳಿವೆ.“ಈಗ ನೀರಿಗಾಗಿ 550 ಅಡಿಗಿಂತ ಜಾಸ್ತಿ ಭೂಮಿ ಕೊರೆಯಬೇಕಾಗುತ್ತೆ” ಅಂತ ಅನ್ನುತ್ತಾನೆ ಭರತ. ಈ ಬರಪೀಡಿತ ಜಿಲ್ಲೆಯಲ್ಲಿನ ಮುಖ್ಯ ಬೆಳೆ ಕಬ್ಬು. ಒಸ್ಮಾನಾಬಾದ ಜಿಲ್ಲಾಧಿಕಾರಿ ಕೆ ಎಂ ನಾಗರಗೋಜೆಯ ಪ್ರಕಾರ ಸರಾಸರಿ 767 ಮಿಮಿ ಮಳೆಯಾಗಬೇಕಾಗಿದ್ದು ಕಳೆದ ಸೀಸನ್ ನಲ್ಲಿ 397 ಮಿಮಿ ಮಳೆಯಾಗಿದೆ. ಹಾಗೆ ನೋಡಿದರೆ 800 ಮಿಮಿ ಕೆಟ್ಟೇನಲ್ಲ. ಕೆಲವು ಜಿಲ್ಲೆಗಳಂತೂ 400 ಮಿಮಿ ಮಳೆಯಾದರೂ ಸಾಕಾದೀತು.

ಆದರೆ, ಕಬ್ಬಿನ ಇಳುವರಿ 2.6 ಟನ್ನು ಗಳಾದಲ್ಲಿ 800 ಮಿಮಿ ಮಳೆಯೂ ಸಾಕಾಗುವುದಿಲ್ಲ. ಒಂದು ಎಕರೆ ಕಬ್ಬು ಸುಮಾರು 18 ದಶಲಕ್ಷ ಲೀಟರ್ ನೀರು ಕೇಳುತ್ತೆ. ಇದು ಏಳುವರೆ ಒಲಿಂಪಿಕ್ ಸ್ವಿಮ್ಮಿಂಗ್ ಪೂಲ್ ನಲ್ಲಿರುವ ನೀರಿಗೆ ಸಮ. ಹನಿ ನೀರಾವರಿ ಪದ್ಧತಿ ಅಳವಡಿಸಿ, ನೀರಿನ ಉಳಿತಾಯ ಮಾಡುವಷ್ಟು ಸ್ಥಿತಿವಂತರಾಗಿರುವ ರೈತರ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟು ಮಾತ್ರ.

ಅಂತರ್ಜಲ ಇಲಾಖೆಯಲ್ಲಿ ಕೆಲಸ ಮಾಡಿದ ಅನುಭವ ಇರುವ ಜಿಲಾಧಿಕಾರಿ ನಾಗರಗೋಜೆಗೆ ಪರಿಸ್ಥಿತಿಯ ಗಂಭೀರತೆಯ ಬಗ್ಗೆ ಅರಿವಿದೆ. ಜಿಲ್ಲೆಯಲ್ಲಿನ ದೊಡ್ಡ ಮತ್ತು ಮಧ್ಯಮ ನೀರಿನ ಸಂಗ್ರಹಾಗಾರಗಳಲ್ಲಿ ಈಗಾಗಲೇ ನೀರಿನ ಮಟ್ಟ ತುಂಬಾ ಕೆಳಗಿದೆ. ಇಷ್ಟು ಕೆಳಮಟ್ಟದ ನೀರಿನಲ್ಲಿ ಮೀನುಗಳೇನೋ ಬದುಕುತ್ತವೆ ಆದರೆ ಇದಕ್ಕಿಂತ ಒಂಚೂರು ಕೆಳಗಿರುವ ನೀರನ್ನು ಪಂಪ್ ಮಾಡಲು ಸಾಧ್ಯವಿಲ್ಲ. ಇನ್ನು ಸಣ್ಣ ಸಂಗ್ರಹಾಗಾರಗಳಲ್ಲಿ ಸುಮಾರು 98 ದಶಲಕ್ಷ ಲೀಟರ್ ನೀರಿದೆ. ಆದರೆ, 1.7 ದಶಲಕ್ಷ ಜನಸಂಖ್ಯೆ ಇರುವ ಜಿಲ್ಲೆಯಲ್ಲಿ ಈ ನೀರು ತುಂಬಾ ದಿನಕ್ಕೆ ಸಾಕಾಗುವುದಿಲ್ಲ. ಈಗಾಗಲೇ 169 ಟ್ಯಾಂಕರ್ ಗಳು 78 ಹಳ್ಳಿಗಳಲ್ಲಿ ನೀರು ನೀಡುತ್ತಿವೆ. ಈ ಜಿಲ್ಲೆಯಲ್ಲಿ ಪ್ರೈವೆಟ್ ಬೋರ್ ವೆಲ್ ಗಳ ಸಂಖ್ಯೆಯೂ ತ್ವರಿತವಾಗಿ ಬೆಳೆಯುತ್ತಿದೆ.

ಜನೇವರಿಯಲ್ಲಿ ಅಂತರ್ಜಲದ ಮಟ್ಟ 10.75 ಮೀಟರ್ ನಷ್ಟಿತ್ತು. ಇಲ್ಲಿನ ಕಳೆದ ಐದು ವರ್ಷಗಳ ಸರಾಸರಿ ಮಟ್ಟಕ್ಕಿಂತ ಇದು 5 ಮೀಟರ್ ಕಮ್ಮಿ. ಕೆಲವು ಸ್ಥಳಗಳಲ್ಲಂತೂ ಇದು ಇನ್ನೂ ಕಮ್ಮಿ. ಈ ವರ್ಷ ಹೇಗೋ ನೀರಿನ ಸಮಸ್ಯೆಯನ್ನು ನಿಭಾಯಿಸಬಹುದು ಅನ್ನುವ ವಿಶ್ವಾಸ ಇಲ್ಲಿನ ಜಿಲ್ಲಾಧಿಕಾರಿಗೆ ಇದೆಯಾದರೂ ಇಲ್ಲಿನ ಬೆಳೆಯ ಮಾದರಿ ಮುಂದಿನ ವರ್ಷದ ಪರಿಹಾರ ಕಾರ್ಯಕ್ಕೆ ತಡೆಯೊಡ್ಡುತ್ತದೆ ಅಂತ ಅನ್ನಿಸುತ್ತದೆ.

ಇತ್ತ ಟಕ್ವಿಕಿಯಲ್ಲಿ ಗಳಿಕೆ ಕಡಿಮೆಯಾಗಿದೆ ಆದರೆ ಸಾಲದ ಮೊತ್ತ ಬೆಳೆಯುತ್ತಲಿದೆ.“ಇಲ್ಲಿನ ಈಗಿನ ಸಾಹುಕಾರಿ ದರ (ಲೇವಾದೇವಿ ಬಡ್ಡಿ ದರ) ಪ್ರತಿ ತಿಂಗಳಿಗೆ ನೂರಕ್ಕೆ 5-10 ರೂಪಾಯಿ ಇದೆ” ಅಂತೆನ್ನುತ್ತಾನೆ ಸಂತೋಷ ಯಾದವ. ಅಂದರೆ ಇದು ವರ್ಷಕ್ಕೆ 60-120 ಪ್ರತಿಶತ. ಯಾದವ ಕುಟುಂಬ ಈಗಾಗಲೇ ತನ್ನ ಹೊಲದಲ್ಲಿ ಪೈಪ್ ಲೈನ್ ಹಾಕಲು 10 ಲಕ್ಷ ಸಾಲ ಮಾಡಿದೆ. ಆದರೆ, ಪೈಪ್ ಲೈನ್ ಗಳೆಲ್ಲ ಒಂದು ಹನಿ ನೀರೂ ಕಾಣದೆ ಒಣಗಿ ಹೋಗಿವೆ.“ಹೀಗಾಗುವುದು ಅಂತ ಯಾರಿಗೆ ತಾನೇ ಗೊತ್ತಿತ್ತು?ನಾವು ನಿನ್ನೆಯದನ್ನು ಇವತ್ತು ಪಡೆಯಲು ಯತ್ನಿಸುತ್ತಿದ್ದೇವೆ. ಒಂದು ಬಾರಿಗೆ ಒಂದು ದಿನದ ಮೇಲೆ ಮಾತ್ರ ಗಮನ ಹರಿಸಲು ಸಾಧ್ಯ” ಅಂತಾ ಅಲವತ್ತುಗೊಳ್ಳುತ್ತಾನೆ ಆತ.

PHOTO • P. Sainath

ಒಸ್ಮಾನಾಬಾದನ ಪ್ರತೀ ಗಲ್ಲಿಯಲ್ಲಿ ಇಪ್ಪತ್ನಾಲ್ಕೂ ಗಂಟೆ ನೀರು ತರಲು ಜನ ಪರದಾಡುತ್ತಾರೆ

ಆದರೆ, ಬರಗಾಲದ ಕಾರಣ ಎಷ್ಟೋ ಜನ ಬದುಕಿರಲು ಪರದಾಡುತ್ತಿದ್ದರೆ, ಅಭಾವದ ಮೇಲೆ ಬೇಳೆ ಬೇಯಿಸಿಕೊಳ್ಳುವ ವ್ಯವಹಾರ ಮಾತ್ರ ಹುಲುಸಾಗಿ ಬೆಳೆಯುತ್ತಿದೆ. ಸಾಮಾಜಿಕ ಕಾರ್ಯಕರ್ತೆಯಾದ ಭಾರತಿ ತವಳೆಯಂಥವರು ಬೋರ್ ವೆಲ್ ಮಾಲೀಕರ ಅಥವಾ ನೀರಿನ ಆಕರ ಗೊತ್ತಿರುವ ಜನರಿಂದ ನೀರನ್ನು ಕೊಳ್ಳಲು ತಮ್ಮ ದಿನದ ಬಹುಪಾಲನ್ನು ಮೊಬೈಲ್ ನಲ್ಲಿಯೇ ಕಳೆದು ಹತಾಶರಾಗುತ್ತಾರೆ.“500 ಲೀಟರ್ ನೀರಿಗೆ 120 ರೂಪಾಯಿ ಅಂತಾ ಒಬ್ಬನ ಜೊತೆ ಒಪ್ಪಂದ ಆಗಿತ್ತು. ಆದರೆ ದಾರಿಯಲ್ಲಿ ಯಾರೋ 200 ರೂಪಾಯಿ ಕೊಟ್ಟರಂತ ಆತ ನೀರನ್ನೆಲ್ಲ ಅವರಿಗೇ ಕೊಟ್ಟುಬಿಟ್ಟ. ಎಷ್ಟೋ ಸಲ ಫೋನ್ ಮಾಡಿದಾಗ ಕೊನೆಗೆ ಆತ ಮರುದಿನ ರಾತ್ರಿ ಒಂಬತ್ತಕ್ಕೆ ನೀರು ತಂದುಕೊಟ್ಟ” ಅಂತಾ ಅವಳು ಹೇಳುತ್ತಾಳೆ. ಅದಾದ ನಂತರ ತನ್ನ ಪಕ್ಕದ ಮನೆಯವರಿಂದ ಆಕೆ ನೀರು ಕೊಳ್ಳುತ್ತಿದ್ದಾಳೆ.

ಜಿಲ್ಲೆಯಲ್ಲಿ ದಿನದ ಇಪ್ಪತ್ನಾಲ್ಕೂ ಗಂಟೆ ನೀರಿನ ಮಾರಾಟ ನಡೆಯುತ್ತದೆ. ನೀರಿನ ಕೊರತೆಯಿಂದ ಅದರ ಬೆಲೆ ಇನ್ನೂ ಹೆಚ್ಚಾಗುತ್ತಲೇ ಹೋಗುವ ಸಂಭವ ಇದೆ. ಸರಕಾರ 720 ಬೋರ್ ವೆಲ್ ಗಳ ನೀರನ್ನು ಸಾರ್ವಜನಿಕರಿಗೆ ಉಚಿತವಾಗಿ ಕೊಡುತ್ತಿದೆ. ಈ ಬೋರ್ ವೆಲ್ ಗಳ ಮಾಲೀಕರಿಗೆ ತಿಂಗಳಿಗೆ 12,000 ರೂಪಾಯಿ ಕೊಡುತ್ತಿದೆ. ಆದರೆ, ಇವುಗಳು ತುಂಬಾ ದೂರ ಇರುವುದು ಮತ್ತು ಇವುಗಳ ಸಮೀಪ ಹನುಮಂತನ ಬಾಲದಂತಿರುವ ಜನರ ಸಾಲುಗಳು ಸರಕಾರದ ಕೆಲಸಕ್ಕೆ ಬೆದರಿಕೆ ಒಡ್ಡುತ್ತಿವೆ. ಇದರಿಂದ ಖಾಸಗಿಯವರಿಗೆ ಅನುಕೂಲವಾಗಿದೆ. ಇವರ ಜೊತೆ ಲೀಟರ್ ಗೆ ಇಷ್ಟು ಅಂತ ಚೌಕಾಶಿ ಮಾಡಬಹುದು. ಪ್ರತಿ 500 ಲೀಟರ್ ನೀರಿನ ಬೆಲೆ 200 ರೂಪಾಯಿಗಿಂತ ಸ್ವಲ್ಪ ಮೇಲೆ. ಕಮ್ಮಿ ತೆಗೆದುಕೊಂಡರೆ ಜಾಸ್ತಿ ಬೆಲೆ. ಮುಂಬರುವ ದಿನಗಳಲ್ಲಿ ಇದು ಇನ್ನೂ ಹದಗೆಡಲಿದೆ. ಪ್ರತೀ ಓಣಿಯಲ್ಲಿ ಬೋರ್ ವೆಲ್ ಅಥವಾ ಇನ್ನಾವುದೇ ಆಕರದಿಂದ ನೀರನ್ನು ಪೂರೈಸಿ ಪರಿಸ್ಥಿತಿಯ ಲಾಭ ಮಾಡಿಕೊಳ್ಳುತ್ತಿರುವ ಒಬ್ಬನಾದರೂ ಕಾಣ ಸಿಗುತ್ತಾನೆ. ಇಲ್ಲಿ, ನೀರು ಹಣದಂತೆ ಹರಿಯುತ್ತೆ.

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath
Translator : Santosh Tamrapani