ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಈತ ಸ್ಟ್ರಾಬೆರಿ ಬೆಳೆಯುತ್ತಾನೆ. ತನ್ನ ಮೂರೆಕೆರೆ ಹೊಲದಲ್ಲಿ ಕೊರೆದ ಬಾವಿಯಲ್ಲಿ ಈಗ ಒಂದು ಹನಿ ನೀರು ನೋಡಲೂ ಸಹ ಸಿಗುತ್ತಿಲ್ಲ. ಆದರೆ, ಬೋರ್ ನಲ್ಲಿ ಇನ್ನೂ ಸ್ವಲ್ಪ ನೀರಿರುವುದರಿಂದ ಈತ ಮತ್ತಿವನ ಹೆಂಡತಿ ಸೇರಿಕೊಂಡು ಹೇಗೋ ಬೆಳೆ ತೆಗೆಯುತ್ತಿದ್ದಾರೆ. ತನ್ನ ಬೋರಿನಲ್ಲಿ ಸಿಗುವ ನೀರನ್ನು ಆತ ಪಕ್ಕದಲ್ಲಿರುವ ಗುಡಿಗೂ ಕೊಡುತ್ತಾನೆ, ಅದೂ ಉಚಿತವಾಗಿ! ಭೀಕರವಾದ ಬರ ಇವನ ಬಾವಿಯಲ್ಲಿನ ನೀರನ್ನು ಇಂಗಿಸಿದೆಯೇ ಹೊರತು ಇವನ ಉದಾರತೆಯನ್ನಲ್ಲ. ಇವನ ಹೆಸರು- ಯೂನಸ್ ಇಸ್ಮೈಲ್ ನಲಾಬಂದ ಮತ್ತು ಇವನಿಂದ ನೀರು ಪಡೆಯುತ್ತಿರುವ ಗುಡಿ- ಕೃಷ್ಣಾಮಾಯಿ (ಇದು ಕೃಷ್ಣಾ ನದಿಯ ಮೂಲದ ಸಂಕೇತ ಅನ್ನುವುದು ವಿಪರ್ಯಾಸ).


“ಈ ನೀರು ನಿಜವಾಗಿಯೂ ನನ್ನದಾ? ಅದು ಮೇಲಿರುವವನ ಸ್ವತ್ತು” ಅಂತನ್ನುವ ಈತನ ಮಾತಿಗೆ ಇವನ ಹೆಂಡತಿ ಹೌದೆಂಬಂತೆ ತಲೆಯಾಡಿಸುತ್ತಾಳೆ. ಎಪ್ಪತ್ತರ ಆಸುಪಾಸಿನಲ್ಲಿರುವ ಇಬ್ಬರೂ ಡಬ್ಬಿಯಲ್ಲಿ ಸ್ಟ್ರಾಬೆರಿ ಗಳನ್ನು ಪ್ಯಾಕ್ ಮಾಡುತ್ತಲೇ ಮಾತನಾಡುತ್ತಾರೆ. “ಈ ಸಲ ವ್ಯಾಪಾರಿಗಳು ಇದಕ್ಕೆ ಹೆಚ್ಚು ಬೆಲೆ ಕೊಡಲು ತಯಾರಿದ್ದಾರೆ ಆದರೆ, ನೀರಿನ ಕೊರತೆಯಿಂದ ಇದರ ಇಳುವರಿ ಮತ್ತು ಗುಣಮಟ್ಟ ಎರಡೂ ಕಡಿಮೆ” ಅಂತಾ ವಿಷಾದದಿಂದ ಹೇಳುತ್ತಾನೆ. ಅವನ ಹೆಂಡತಿ ಕೆಲಸದಲ್ಲಿ ಬ್ರೇಕ್ ತೆಗೆದುಕೊಂಡು ನಮಗೆ ನೀರು ಕೊಡುತ್ತಾಳೆ.02-PS-Source the rivers, scams of the rulers.jpg


03-SAI_1122-PS-Source the rivers, scams of the rulers.jpg

ಯೂನಸ್ ನಲಾಬಂದ ಮತ್ತವನ ಹೆಂಡತಿ ರೋಷನ್: ತಮ್ಮ ಮೂರೆಕರೆ ಜಮೀನಿನಲ್ಲಿ ಸ್ಟ್ರಾಬೆರಿ ಬೆಳೆಯುವ ಸಣ್ಣ ರೈತರು. ಇನ್ನೊಂದು ಚಿತ್ರ: ಸಂಪೂರ್ಣವಾಗಿ ಬತ್ತಿದ ನಲಾಬಂದರ ಬಾವಿನಲಾಬಂದರ ಬೋರಿನ ನೀರಿಲ್ಲದಿದ್ದರೆ, ಕೃಷ್ಣಾಮಾಯಿಯ ಹೊಂಡ ಪೂರ್ತಿ ಖಾಲಿ ಖಾಲಿ. ಈ ಸಲ ಅದು ಬತ್ತಿ ಹೋಗಿದೆ. ಹೀಗಾಗಿದ್ದು ಬಹುಶಃ ಇತಿಹಾಸದಲ್ಲೇ ಮೊದಲಿರಬೇಕು. ಈ ಗುಡಿಯಿಂದ ಕೆಲವೇ ನಿಮಿಷದ ಕಾಲ್ನಡಿಗೆಯ ದೂರದಲ್ಲಿ ಜನಪ್ರಿಯವಾದ ಪಂಚಗಂಗಾ ದೇವಸ್ಥಾನವಿದೆ, ಇದೂ ಸಹ ನಾಲ್ಕು ನದಿ (ಕೊಯ್ನಾ, ವೆನ್ನಾ, ಸಾವಿತ್ರಿ, ಗಾಯತ್ರಿ) ಮೂಲಗಳ ಸಂಕೇತ. ಇಲ್ಲಿಂದ ನೀರಿನ ಮೂಲ ಅಷ್ಟೇನೂ ದೂರವಿಲ್ಲ. ಆದರೆ, ಬಹುಶಃ ಕೃಷ್ಣಾಮಾಯಿಯೇ ಇಲ್ಲಿನ ಅತೀ ಹಳೆಯ ಮತ್ತು ಸ್ಥಳಿಯರಿಂದ ಹೆಚ್ಚು ಪೂಜಿಸಲ್ಪಡುವ ಜಲದೇವತೆ.03-SAI_1099-PS-Source the rivers, scams of the rulers.jpg

ಹಳೆ ಮಹಾಬಲೇಶ್ವರದಲ್ಲಿನ ಕೃಷ್ಣಾಮಾಯಿ ಮಂದಿರ: ಮುಂದಿರುವ ಚಿಕ್ಕ ಹೊಂಡ ಬತ್ತಿರುವುದು ಬಹುಶಃ  ಇತಿಹಾಸದಲ್ಲೇ ಮೊದಲುಮೇ ತಿಂಗಳಲ್ಲಿ ಪ್ರತೀ ಜಿಲ್ಲೆಯ ಒಬ್ಬ ಪತ್ರಕರ್ತನ ಜೊತೆಗೂಡಿ ನಾವು ಮೂರು ಜನ (ನನ್ನ ಗೆಳೆಯ, ನನ್ನ ಸಹೋದ್ಯೋಗಿಯಾದ ಜೈದೀಪ್ ಹರ್ಡಿಕರ್ ಮತ್ತು ನಾನು) ಮಹಾರಾಷ್ಟ್ರದ ನದಿ ಮೂಲಗಳಿಗೆ (ಸಾಂಕೇತಿಕ ಮತ್ತು ನಿಜವಾದ) ಭೇಟಿ ನೀಡಿದೆವು. ಇದರ ಉದ್ದೇಶ ನದಿಗುಂಟ ಇರುವ ರೈತರ, ಕೆಲಸಮಾಡುವವರ ಮತ್ತು ಇತರ ಜನರನ್ನು ಭೇಟಿ ಮಾಡುವುದಾಗಿತ್ತು. ಹವಾಮಾನದಿಂದುಂಟಾದ ಬರಕ್ಕಿಂತಲೂ ದೊಡ್ಡದಾದ ನೀರಿನ ಅಭಾವ ಹೇಗೆ ಅವರ ಜೀವನದ ಮೇಲೆ ಪ್ರಭಾವ ಬೀರುತ್ತಿದೆ ಅನ್ನುವುದನ್ನು ತಿಳಿಯುವುದಾಗಿತ್ತು.


ಬೇಸಿಗೆಯಲ್ಲಿ ನದಿಯ ಕೆಲವು ಭಾಗಗಳು ಬತ್ತುವುದು ಸಾಮಾನ್ಯ. ಆದರೆ, ಈಗ ನದೀ ಮೂಲಗಳೇ ಬತ್ತಿ ಹೋಗುತ್ತಿವೆ. ಮೊದಲೆಂದೂ ಹೀಗಾಗಿದ್ದಿಲ್ಲ. ಪ್ರೊಫೆಸರ್ ಗಾಡ್ಗೀಳರ ಪ್ರಕಾರ ಮಹಾರಾಷ್ಟ್ರದ ಚಿರಂಜೀವಿ ನದಿಗಳು ಈಗ ಋತುಮಾನದ ನದಿಗಳಾಗಿ ಬದಲಾಗಿವೆ. ಬಹುಚರ್ಚಿತವಾದ ಪಶ್ಚಿಮ ಘಟ್ಟ ಪರಿಸರ ಸಮಿತಿಯ ನೇತೃತ್ವ ವಹಿಸಿದ್ದವರು ಇದೇ ಪ್ರೊಫೆಸರ್. ಪರಿಸರ ತಜ್ಞ ಮತ್ತು ಲೇಖಕರೂ ಆಗಿರುವ ಇವರು “ಇದಕ್ಕೆ ಕಾರಣ ದೊಡ್ಡ ದೊಡ್ಡ ಪ್ರಮಾಣದಲ್ಲಿ ಆಣೆಕಟ್ಟು ಕಟ್ಟುವುದು ಮತ್ತು ಜಲಾನಯನ ಪ್ರದೇಶಗಳಲ್ಲಿ ನಡೆಯುವ ಇತರ ಚಟುವಟಿಕೆಗಳೇ ಕಾರಣ” ಅಂತಾ ಹೇಳುತ್ತಾರೆ.


ಇನ್ನು ನಿವೃತ್ತ ಗೈಡ್ ಹಾಗೂ ವಲಸೆ ಕಾರ್ಮಿಕರಾದ ನಾರಾಯಣ ಜಾಡೆ ಯವರ ಪ್ರಕಾರ, ಕಳೆದ ಅರವತ್ತು ವರ್ಷಗಳಲ್ಲಿ ಅವರೆಂದೂ ಕೃಷ್ಣಾಮಾಯಿ ಹೊಂಡ ಬತ್ತಿದ್ದನ್ನು ನೋಡಿಯೇ ಇಲ್ಲವಂತೆ. ವರ್ಷಕ್ಕೆ ಸರಾಸರಿ 2000 ಮಿಮೀ ಮಳೆ ಬೀಳುವ ಈ ಪ್ರದೇಶದಲ್ಲಿ ಅವರು ಬಹುತೇಕ ದಿನಗಳನ್ನು ಈ ಗುಡಿ ಅಕ್ಕ ಪಕ್ಕದಲ್ಲಿಯೇ ಕಳೆದಿದ್ದಾರೆ. ಬರ ಕೇವಲ ಮಳೆ ಪ್ರಮಾಣಕ್ಕೆ ಸಂಬಂಧಿಸಿದ್ದಲ್ಲ ಅನ್ನೋ ವಿಚಾರದಲ್ಲಿ ಅವರಿಗೆ ಸ್ಪಷ್ಟತೆಯಿದೆ. ಅವರ ಪ್ರಕಾರ, ಟೂರಿಸ್ಟ್ ಮತ್ತು “ನೀವು” ಗಳೇ ಇದಕ್ಕೆ ಉತ್ತರ ಕೊಡಬೇಕಂತೆ.


“ನೀರು ಬಟ್ಟಲು ಕಾಡನ್ನು ನಾಶ ಮಾಡಿದ್ದು ಪ್ರಮುಖ ಕಾರಣಗಳಲ್ಲಿ ಒಂದಾದರೂ ಅದಕ್ಕೆ ಸ್ಥಳೀಯರು ಕಾರಣರಲ್ಲ. ನಮ್ಮಲ್ಲಿ ಯಾರಾದರೂ ಮರದ ಒಂದು ರೆಂಬೆಯನ್ನು ಕತ್ತರಿಸಿದರೂ ಜೈಲಿಗೆ ಹೋಗುತ್ತಾರೆ. ಆದರೆ, ಹೊರಗಿನವರು ರಾಜಾರೋಷವಾಗಿ ಮರಗಳನ್ನು ಕತ್ತರಿಸಿ ಟ್ರಕ್ ಗಳಲ್ಲಿ ತುಂಬಿಕೊಂಡು ಹೋಗುತ್ತಾರೆ. ಅವರಿಗೆ ಏನೂ ಆಗಲ್ಲ” ಅಂತೆನ್ನುತ್ತಾರೆ. ಟೂರಿಸ್ಟ್ ಗೈಡ್ ಆಗಿ ಕೆಲಸ ಮಾಡಿದ ಅನುಭವದ ಆಧಾರದ ಮೇಲೆ ಅವರು, ಅನಿಯಂತ್ರಿತವಾದ ಪ್ರವಾಸೋದ್ಯಮವೂ ಸಾಕಷ್ಟು ಹಾನಿ ಉಂಟು ಮಾಡಿದೆ ಅಂತಾ ಹೇಳುತ್ತಾರೆ. ಇತ್ತೀಚೆಗೆ ತಲೆಯೆತ್ತಿರುವ ರೆಸಾರ್ಟ್ ಮತ್ತಿತರ ಮಳಿಗೆಗಳು ಹಸಿರು ಹೊದಿಕೆಯನ್ನು ಕಿತ್ತೊಗೆದಿವೆ ಅಂತಾನೂ ಅನ್ನುತ್ತಾರೆ.04-Narayan-Zade-at-Krishnamai-temple-May-2016-PS-Source the rivers, scams of the rulers.jpg

ಕೃಷ್ಣಾಮಾಯಿ ಮಂದಿರದಲ್ಲಿ ನಾರಾಯಣ ಜಾಡೆ. ಇವರ ಪ್ರಕಾರ, ಕಾಡಿನ ನಾಶಕ್ಕೆ ಮತ್ತು ನೀರಿನ ಅಭಾವಕ್ಕೆ ಹೊರಗಿನವರಾದ 'ನೀವು' ಮತ್ತು ಇತರೆ ಚಟುವಟಿಕೆಗಳು ಕಾರಣವಂತೆಇವರಿಗೆ ಪಂಚಗಂಗಾ ದೇವಸ್ಥಾನಕ್ಕಿಂತಲೂ ಕೃಷ್ಣಾಮಾಯಿಯೇ ಹೆಚ್ಚು ಇಷ್ಟವಂತೆ. ಇದರ ಮುಂಭಾಗಕ್ಕೆ ಎದುರಾಗಿ ಧೋಮ್ ಬಾಲ್ಕಾವಾಡಿ ಡ್ಯಾಮ್ ಇದೆ. ಇದರಲ್ಲಿ ಸ್ವಲ್ಪ ನೀರಿದೆಯಾದರೂ ಎಷ್ಟಿರಬೇಕಾಗಿತ್ತೋ ಅಷ್ಟಿಲ್ಲ.  ಡ್ಯಾಮ್ ಕಟ್ಟಲು ವರ್ಷಾನುಗಟ್ಟಲೆ  ತೆಗೆದುಕೊಂಡ ಸಮಯ, ನದಿ ನೀರಿನ ದಿಕ್ಕನ್ನು ಬದಲು ಮಾಡಿದ್ದು ಮತ್ತು ಎಂದೂ ಪೂರ್ತಿಯಾಗದ ಏತ ನೀರಾವರಿ ಯೋಜನೆಗಳು ಇದಕ್ಕೆ ಕಾರಣವಂತೆ. ರಾಜ್ಯದ ನೀರಾವರಿ ಹಗರಣಗಳ ಮೂಲ ಇರುವುದು ಇವುಗಳಲ್ಲೇ.


ಹಣದ ಹುಚ್ಚು ಹೊಳೆಯನ್ನೇ ಹರಿಸುವ ಈ ದುಬಾರಿ ಯೋಜನೆಗಳಿಂದ ಸತಾರಾದ ಖಟಾವ್ ಮತ್ತು ಮಾನ್ ತಾಲ್ಲೂಕುಗಳ ಎಷ್ಟೋ ಹಳ್ಳಿಗಳಿಗೆ ಪ್ರಯೋಜನವಾಗಬೇಕಾಗಿತ್ತು ಆದರೆ, ಹಾಗಾಗಿಲ್ಲ. ಕೃಷ್ಣಾಮಾಯಿಯಿಂದ ಎಂಭತ್ತು ಕಿಲೋಮೀಟರ್ ದೂರದಲ್ಲಿರುವ ನೇರ್ ಆಣೆಕಟ್ಟು ಮತ್ತು ನದಿ ಬಹಳಷ್ಟು ಹಳ್ಳಿಗಳಿಗೆ ಕುಡಿಯಲು ಮತ್ತು ಹೊಲಗಳಿಗೆ ನೀರು ಪೂರೈಸಬೇಕಾಗಿತ್ತು. ಆದರೆ, ಕೇವಲ 19  ಹಳ್ಳಿಗಳಲ್ಲಿ ಕಬ್ಬು ಬೆಳೆಯಲು ಬೇಕಾಗುವಷ್ಟು ನೀರು ಕೊಡುವುದಕ್ಕಷ್ಟೇ ಅವುಗಳು ಸೀಮಿತವಾಗಿವೆ.05-SAI_1147-EV-PS-Source the rivers, scams of the rulers.jpg

ಸತಾರಾ ಜಿಲ್ಲೆಯಲ್ಲಿರುವ ನೇರ್ ನದಿ ಮತ್ತು ಆಣೆಕಟ್ಟು : ಕುಡಿಯುವುದಕ್ಕಾಗಿ ಇರುವ ಈ ನೀರನ್ನೂ ಆಸುಪಾಸಿನ ೧೯ ಗ್ರಾಮಗಳ ಕಬ್ಬು ಬೆಳೆಗಾರರು ಅದನ್ನು ತಮ್ಮ ಸ್ವಾದೀನಕ್ಕೆ ತೆಗೆದುಕೊಂಡಿದ್ದಾರೆಮಾನ್ ಮತ್ತು ಖಟಾವ್ ತಾಲ್ಲೂಕುಗಳನ್ನು ಹೊರತುಪಡಿಸಿ, ಸತಾರಾ, ಸಾಂಗ್ಲಿ ಮತ್ತು ಸೋಲಾಪುರ ಜಿಲ್ಲೆಗಳ ಇನ್ನೂ 11 ತಾಲ್ಲೂಕುಗಳು ಒಣಗಿಹೋಗಿವೆ. ಇಲ್ಲಿನ ಜನರು ಈ ತಾಲ್ಲೂಕುಗಳಿಗೆ ‘ದುಷ್ಟಕಾಲ ಪರಿಷತ್ತ’ನ್ನು ದಯಪಾಲಿಸುತ್ತಾರೆ. ಇಲ್ಲಿನ ನಿವೃತ್ತ ಜಿಲ್ಲಾ ವೈದ್ಯಾಧಿಕಾರಿ ಡಾ. ಮಾರುತಿ ರಾಮಕೃಷ್ಣ ಕಾಟ್ಕರ್ ರ ಪ್ರಕಾರ ಈ ಹದಿಮೂರು ತಾಲ್ಲೂಕುಗಳನ್ನು ಸೇರಿಸಿ ‘ಮಾನ್ ದೇಶ್’ ಅಂತ ‘ಬರಪೀಡಿತ ಜಿಲ್ಲೆ’ ಯನ್ನಾಗಿ ಘೋಷಿಸಬೇಕೆನ್ನುವುದು ಇವರ ಎಷ್ಟೋ ಬೇಡಿಕೆಗಳಲ್ಲಿ ಒಂದು.


ಈಗಿರುವ ಜಿಲ್ಲೆಗಳಲ್ಲಿ  ಅವರ ಮಾತು ನಡೆಯುವುದು ಕಮ್ಮಿ, ಅದಕ್ಕೆ ಹೊಸ ಜಿಲ್ಲೆ ಬೇಕು. ಇವರ ಅನುಪಸ್ಥಿತಿ ಹಳೆಯ ಜಿಲ್ಲೆಗಳ ಜನರಿಗೂ ಖುಶಿ ಕೊಡುತ್ತೆ ಅನ್ನೋದು ನಿಜ. ಈ ‘ ಬರಪೀಡಿತ ಜಿಲ್ಲೆ’ ಚಳುವಳಿಯ ಮುಖಂಡರಲ್ಲಿ ಒಬ್ಬನಾದ ಪ್ರೊ. ಇಂಗೊಳೆ ಯ ಪ್ರಕಾರ ‘ಸಾರ್ವಜನಿಕ ಹಿತಾಸಕ್ತಿ’ ಅವರನ್ನು ಒಗ್ಗಟ್ಟಿನಿಂದ ಇರುವುದಕ್ಕೆ ಸಹಾಯ ಮಾಡುವುದಲ್ಲದೆ, ಚೌಕಾಶಿ ಮಾಡುವ ಸಾಮರ್ಥ್ಯವನ್ನು ಸಹ ಹೆಚ್ಚಿಸುತ್ತದೆಯಂತೆ.


“ಸಮುದ್ರದ ಮಟ್ಟದಿಂದ ಸುಮಾರು 1,000 ಅಡಿ ಮೇಲಿರುವ ಈ ತಾಲ್ಲೂಕುಗಳಲ್ಲಿ ವರ್ಷಕ್ಕೆ ಮೂವತ್ತು ದಿನಗಳಿಗಿಂತ ಕಡಿಮೆ ಮಳೆಯಾಗುತ್ತೆ. ಇಲ್ಲಿನ ಜನ ವಲಸೆ ಹೋಗಿದ್ದಾರೆ. ಹಾಗೆ ವಲಸೆ ಹೋದವರಲ್ಲಿರುವ ಪತ್ತಾರರು ತಮ್ಮ ಆದಾಯದಲ್ಲಿ ಸ್ವಲ್ಪ ಹಣವನ್ನು ಇಲ್ಲಿಗೆ ಕಲಿಸುವುದು ಇಲ್ಲಿನ ಆರ್ಥಿಕ ಸ್ಥಿತಿ ಗತಿಗೆ ಕಾರಣ” ಅಂತೆನ್ನುತ್ತಾರೆ ಕಾಟ್ಕರ್.


ಇಲ್ಲಿನ ನೀರಿನ ಕೊರತೆ ಇವತ್ತು ಅಥವಾ ನಿನ್ನೆಯದಲ್ಲ. ಇದು ತುಂಬಾ ದಶಕಗಳಿಂದಲೂ ಇದೆ. ‘ಆದರೆ ಇದಕ್ಕೆ ಶಾಶ್ವತ ಪರಿಹಾರವನ್ನು ಏಕೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ?’ ಅಂತ ಪ್ರಶ್ನಿಸುವ ಶರದ್ ಮಂಡೆ ಅದಕ್ಕೆ ಉತ್ತರ ಕೂಡ ತಾವೇ ಕೊಡುತ್ತಾರೆ. “ಆಣೆಕಟ್ಟಿನ ಆಯಸ್ಸು 80-90 ವರ್ಷ, ಪೈಪ್ ಲೈನ್ ಗಳ ಆಯಸ್ಸು 35-40 ವರ್ಷ,ನೀರು ಸಂಸ್ಕರಣಾ ಘಟಕಗಳ  ಆಯಸ್ಸು 25-30 ವರ್ಷ, ಪಂಪ್ ಗಳ ಆಯಸ್ಸು 15 ವರ್ಷ ಆದರೆ ಮುಖ್ಯಮಂತ್ರಿಯ ಆಯಸ್ಸು ಬರೀ 5 ವರ್ಷ” ಅಂತೆನ್ನುವ ಅವರು, “ದೀರ್ಘಕಾಲದಲ್ಲಿ ಫಲ ಕೊಡುವ ಕೆಲಸ ಯಾರಿಗೆ ಬೇಕು ಸ್ವಾಮೀ, ಏನಿದ್ದರೂ ತಕ್ಷಣ ಫಲ ಕೊಡುವ ಕೆಲಸದಲ್ಲಿ ಎಲ್ಲರಿಗೂ ಆಸಕ್ತಿ” ಅಂತಾ ಹೇಳುತ್ತಾರೆ.


ಅಧಿಕೃತ ಹಾಗೂ ಮಾಹಿತಿ ಹಕ್ಕು ಕಾನೂನಡಿಯಲ್ಲಿ ದೊರೆತ ಅಂಕಿ ಅಂಶಗಳ ಪ್ರಕಾರ, ಮಹಾರಾಷ್ಟ್ರದಲ್ಲಿ ಕೆಲಸ ಮಂಜೂರಾಗಿ ಒಂದೇ ತಿಂಗಳಲ್ಲಿ ಆಣೆಕಟ್ಟಿನ ಖರ್ಚು 500 ಪ್ರತಿಶತ ಹೆಚ್ಚಳವಾಗುತ್ತೆ. ಅಥವಾ ಆರು ತಿಂಗಳಲ್ಲಿ ಅದು 1000 ಪ್ರತಿಶತ ಜಾಸ್ತಿಯಾಗುತ್ತೆ. 77 ಆಣೆಕಟ್ಟುಗಳನ್ನು ನಿರ್ಮಾಣ ಮಾಡುವ ಕೆಲಸ ಕಳೆದ ಮೂವತ್ತು ವರ್ಷಗಳಿಂದ ಇನ್ನೂ ನಡೀತಾನೇ ಇದೆ. ಖರ್ಚು ವೆಚ್ಚಗಳಲ್ಲಿ ಆದ ಹೆಚ್ಚಳದ ಪ್ರಮಾಣ ದೇಶದ ಕೆಲವು ಚಿಕ್ಕ ರಾಜ್ಯಗಳ ವಾರ್ಷಿಕ ಬಜೆಟ್ ಗಿಂತಲೂ ಹೆಚ್ಚು.


ಇನ್ನು ಇಲ್ಲಿನ ಅಂತರ್ಜಲ ಮಟ್ಟವಂತೂ ಪಾತಾಳ ಕಂಡಿದೆ. ಮಹಾರಾಷ್ಟ್ರದ ಒಟ್ಟು ನೀರಾವರಿಯ 65 ಪ್ರತಿಶತ ಇದರ ಮೇಲೆಯೇ ಅವಲಂಬಿತ. 200 ಅಡಿಗಳಿಗಿಂತ ಕೆಳಗೆ ಕೊಳವೆ ಬಾವಿ ಗಳನ್ನು ಕೊರೆಯಬಾರದೆಂಬ ನಿಯಮವನ್ನು ರಾಜ್ಯ ಸರಕಾರ ಏಪ್ರಿಲ್ 2016  ರಲ್ಲಿ ಜಾರಿಗೆ ತಂದಿತಾದರೂ, ಅದು ಮೂವತ್ತು ವರ್ಷಗಳ ಹಿಂದೆಯೇ ಜಾರಿಯಾಗಬೇಕಾಗಿತ್ತು ಅಂತನ್ನಿಸುವುದು ಸಹಜ.


ಕೃಷ್ಣಾ ನದಿಗುಂಟದ ಪ್ರದೇಶಗಳಲ್ಲಿರುವ ಕುಡಿಯುವ ನೀರಿನ ಸಮಸ್ಯೆ, ನ್ಯಾಯವಾಗಿ ಇರಬೇಕಾಗಿರುವುದಕ್ಕಿಂತಲೂ ತುಂಬಾನೇ ಹೆಚ್ಚಿದೆ. ನೀರಿನ ಬಹುಪಾಲು ಕಟ್ಟಡ ನಿರ್ಮಾಣಕ್ಕೆ ಹೊರಟುಹೋಗುತ್ತದೆ. ಹಳ್ಳಿಯಿಂದ ನಗರಕ್ಕೆ, ಕೃಷಿಯಿಂದ ಕಾರ್ಖಾನೆಗಳಿಗೆ ನೀರನ್ನು ವರ್ಗಾಯಿಸಲಾಗುತ್ತೆ. ಕೃಷಿಗಾಗಿ ಇರುವ ನೀರಲ್ಲೂ ಸಿಂಹಪಾಲು ಕಬ್ಬಿಗೆ ಮೀಸಲು. ನೇರ್ ನದಿಯ ಕುಡಿಯುವ ನೀರೂ ಸಹ ಈ ಬೆಳೆಗೆ ಉಪಯೋಗಿಸಲ್ಪಡುತ್ತೆ. ಮಹಾರಾಷ್ಟ್ರದಲ್ಲಿ ಬೆಳೆಯುವ ಮೂರರಲ್ಲಿ ಎರಡು ಭಾಗದಷ್ಟು ಕಬ್ಬು ಈ ಬರಪೀಡಿತ  ಪ್ರದೇಶಗಳಲ್ಲೇ ಬೆಳೆಯುತ್ತೆ. ಅಸಮಾಧಾನಗೊಂಡ ಮಂಡೆ, ಸಕ್ಕರೆ ಕಾರ್ಖಾನೆಗಳನ್ನು ‘MLA ಸಕ್ಕರೆ ಕಾರ್ಖಾನೆ’ ಅಂತಾ ಕರೆಯುತ್ತಾರೆ.


ಪ್ರತಿ ಎಕರೆ ಕಬ್ಬಿನ ಹೊಲ ವರ್ಷಕ್ಕೆ ಸುಮಾರು 185 ಲಕ್ಷ ಲೀಟರ್ ನಷ್ಟು ನೀರನ್ನು ಕುಡಿಯುತ್ತೆ (ಮಳೆಯ ಹೊರತಾಗಿ). ಹೈಬ್ರಿಡ್ ಜೋಳ ಎಕರೆಗೆ ಇದರ 10 ಪ್ರತಿಶತ ನೀರನ್ನು ಮಾತ್ರ ಕೇಳುತ್ತೆ. ಮಹಾರಾಷ್ಟ್ರದ ಒಟ್ಟು ನೆಲದ ಕೇವಲ 4 ಪ್ರತಿಶತ ಜಾಗದಲ್ಲಿ ಬೆಳೆಯುವ ಕಬ್ಬು ಒಟ್ಟು ನೀರಿನ 70 ಪ್ರತಿಶತ ನೀರನ್ನು ಉಪಯೋಗಿಸುತ್ತೆ.


ಅತ್ತ ಮಹಾಬಲೇಶ್ವರದಲ್ಲಿ ನಲಾಬಂದ, ‘ಕಳೆದ ಆರು ದಶಕಗಳಲ್ಲಿ ಒಮ್ಮೆಯೂ ನಮ್ಮ ಬಾವಿ ಬತ್ತಿರಲಿಲ್ಲ’ ಅಂತೆನ್ನುತ್ತಾ ತನ್ನ ಹೆಂಡತಿ ರೋಶನ್ ಳ ಜೊತೆ ಸ್ಟ್ರಾಬೆರಿಗಳನ್ನು ಡಬ್ಬಿಯಲ್ಲಿ ಪ್ಯಾಕ್ ಮಾಡುತ್ತಾನೆ. ಭಾರತದ ಒಟ್ಟು ಉತ್ಪಾದನೆಯ ಸುಮಾರು 80 ಪ್ರತಿಶತ ಸ್ಟ್ರಾಬೆರಿಗಳ ಉತ್ಪಾದನೆಯಾಗುವುದು ಮಹಾಬಲೇಶ್ವರದಲ್ಲಿಯೇ. ಅವರಿಬ್ಬರೂ ನಮಗೆ ಸ್ವಲ್ಪ ಸ್ಟ್ರಾಬೆರಿ ಮತ್ತು ಮಲ್ಬೆರಿ (ಉಪ್ಪು ನೇರಳೆ)ಗಳನ್ನು ಕೊಟ್ಟು ಬೀಳ್ಕೊಡುತ್ತಾರೆ.


ನಮ್ಮ ಮುಂದೆ ಕೃಷ್ಣಾಮಾಯಿ ಇದೆ, ಹಿಂದೆ ಇವರ ಸ್ಟ್ರಾಬೆರಿಯ ಮೂರೆಕರೆ ತೋಟ ಇದೆ. ಆದರೆ, ಯಾಕೋ ಅದನ್ನು ಬೀಟಲ್ ನ ಹಾಡಿನಂತೆ ‘ಶಾಶ್ವತ ಸ್ಟ್ರಾಬೆರಿಯ ಹೊಲ’ ಅಂತ ಮಾತ್ರ ಹೇಳಲು ಆಗುತ್ತಿಲ್ಲ.06-SAI_1109-PS-Source the rivers, scams of the rulers.jpg

ಬರಗಾಲದಲ್ಲಿ ಬೆಳೆ ತೆಗೆಯಲು ಹರಸಾಹಸ ಪಟ್ಟರೂ, ತಮ್ಮ ಬೋರ್ ವೆಲ್ಲಿನ ನೀರನ್ನು ಕೃಷ್ಣಾಮಾಯಿ  ಮಂದಿರಕ್ಕೆ ಕೊಡುವುದನ್ನು ಮಾತ್ರ ತಪ್ಪಿಸದ ನಲಾಬಂದ ದಂಪತಿಅನುವಾದ : 'ಕ್ರೇಜಿ ಫ್ರಾಗ್ ಮೀಡಿಯಾ ಫೀಚರ್ಸ್' ಈ ಅನುವಾದದ ರೂವಾರಿ. ಮೂಲತಃ  ಧಾರವಾಡದ ಸಂತೋಷ್ ತಾಮ್ರಪರ್ಣಿ ವೃತ್ತಿಯಿಂದ ಎಂಜಿನಿಯರ್. ಆದರೂ ಒಲವು ಬರಹಗಳತ್ತ. 'ಅವಧಿ' ಅಂತರ್ಜಾಲ ಪತ್ರಿಕೆಯಲ್ಲಿ ಬರೆದಿರುವ ಹಾಸ್ಯ ಲೇಖನಗಳು ಜನಪ್ರಿಯ.


ಮೂಲ ಲೇಖಕರು : ಪಿ.ಸಾಯಿನಾಥ್ ``ಪೀಪಲ್ಸ್ ಆರ್ಕೇವ್ ಆಫ್ ರೂರಲ್ ಇಂಡಿಯಾ''ದ ಸ್ಥಾಪಕ-ಸಂಪಾದಕರು. ಹಲವು ದಶಕಗಳಿಂದ ಗ್ರಾಮೀಣ ಭಾರತದ ವರದಿಗಾರಿಕೆಯನ್ನು ಮಾಡುತ್ತಾ ಬಂದಿರುವ ಹಿರಿಯ ಪತ್ರಕರ್ತರಾಗಿರುವ ಇವರು ಬಲುಚರ್ಚಿತ ‘ಎವೆರಿಬಡಿ ಲವ್ಸ್ ಗುಡ್ ಡ್ರಾಟ್' (ಕನ್ನಡಕ್ಕೆ ಜಿ ಎನ್ ಮೋಹನ್ ಅನುವಾದಿಸಿದ `ಬರ ಅಂದ್ರೆ ಎಲ್ಲರಿಗೂ ಇಷ್ಟ') ಪುಸ್ತಕದ ಲೇಖಕರೂ ಹೌದು.


(Translation:  Santosh Tamraparni)

Santosh Tamraparni is an engineer and a freelance writer from Dharawar, Karnataka. He works in Mysore for Crazy Frog Media Features
P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath