ತೀರಾ ಮತ್ತು ಅನಿತಾ ಭುಯಿಯಾ ತಮ್ಮ ಖಾರಿಫ್‌ ಹಂಗಾಮಿನ ಬೆಳೆಯ ಉತ್ತಮ ಇಳುವರಿಗಾಗಿ ಕಾತರದಿಂದ ದಿನಗಳನ್ನು ಎಣಿಸುತ್ತಿದ್ದಾರೆ. ಅವರು ತಮ್ಮ ಗದ್ದೆಯಲ್ಲಿ ಭತ್ತ ಮತ್ತು ಒಂದಿಷ್ಟು ಜೋಳವನ್ನು ಬೆಳೆದಿದ್ದಾರೆ. ಕೊಯ್ಲಿನ ಸಮಯ ಇನ್ನೇನು ಬರುತ್ತಿದೆ.

ಈ ಬಾರಿ ಅವರಿಗೆ ಉತ್ತಮ ಇಳುವರಿ ಬಹಳ ಮುಖ್ಯ. ಅವರ ಇಟ್ಟಿಗೆ ಭಟ್ಟಿಯಲ್ಲಿನ ಆರು ತಿಂಗಳ ಕೆಲಸ ಮಾರ್ಚ್‌ನಲ್ಲಿ ಪ್ರಾರಂಭವಾದ ಲಾಕ್‌ಡೌನ್‌ ಕಾರಣದಿಂದಾಗಿ ಅರ್ಧಕ್ಕೆ ನಿಂತು ಹೋಗಿದೆ.

“ಕಳೆದ ವರ್ಷವೂ ನಾನು ಬೇಸಾಯವನ್ನು ಮಾಡಿದ್ದೆ  ಆದರೆ ಮಳೆಯ ಕೊರತೆ ಮತ್ತು ಕೀಟಗಳ ತೊಂದರೆಯಿಂದಾಗಿ ಬೆಳೆ ನಷ್ಟವಾಯಿತು.” ಎನ್ನುತ್ತಾರೆ ತೀರಾ. “ನಾವು ವರ್ಷದ ಆರು ತಿಂಗಳು ಬೇಸಾಯ ಮಾಡುತ್ತೇವ ಆದರೆ ಈ ಬೇಸಾಯದಿಂದ ನಮಗೆ ಯಾವುದೇ ಆದಾಯ ಸಿಗುವುದಿಲ್ಲ.” ಎನ್ನುತ್ತಾ ಅನಿತಾ ತಮ್ಮ ಮಾತುಗಳನ್ನು ಸಂಭಾಷಣೆಯಲ್ಲಿ ಸೇರಿಸುತ್ತಾರೆ.

45 ವರ್ಷದ ತೀರಾ, ಮತ್ತು 40 ವರ್ಷದ ಅನಿತಾ ಭುಯಿಯಾ ತಢಿಯಲ್ಲಿ ವಾಸಿಸುತ್ತಾರೆ. ಇದೊಂದು ಮಹುಗವಾನ್‌ನ ದಕ್ಷಿಣಭಾಗದಲ್ಲಿನ ಭುಯಿಯಾ ಸಮುದಾಯಕ್ಕೆ ಸೇರಿದ ಮನೆಗಳ ಗುಂಪಾಗಿದ್ದು. ಇವರು ಪರಿಶಿಷ್ಟ ಜಾತಿಗೆ ಸೇರಿದವರು.

ಜಾರ್ಖಂಡ್‌ನ ಪಲಾಮೂ ಜಿಲ್ಲೆಯ ಚೈನ್‌ಪುರ್‌ ಬ್ಲಾಕ್‌ನ ಈ ಹಳ್ಳಿಯಲ್ಲಿ 2018ರಿಂದ ಈ ಕುಟುಂಬವು ಪ್ರತಿ ಖಾರಿಫ್‌ ಹಂಗಾಮಿನಲ್ಲಿ ಸ್ಥಳೀಯ ಗುತ್ತಿಗೆ ವಿಧಾನವಾಗಿರುವ ಬಟಿಯಾ ಬೇಸಾಯವನ್ನು ಮಾಡುತ್ತಿದೆ. ಈ ಮೌಖಿಕ ಒಪ್ಪಂದದಡಿಯಲ್ಲಿ ಭೂಮಾಲಿಕ ಮತ್ತು ಗುತ್ತಿಗೆದಾರ ಕೃಷಿ ಖರ್ಚನ್ನು ಸಮಾನಾಗಿ ಹಂಚಿಕೊಳ್ಳುತ್ತಾರೆ ಮತ್ತು ಇಳುವರಿಯನ್ನೂ ಸಮಾನಾಗಿ ಹಂಚಿಕೊಳ್ಳುತ್ತಾರೆ. ಗುತ್ತಿಗೆ ಪಡೆದ ಕೃಷಿ ಕುಟುಂಬಗಳು ಸಾಮಾನ್ಯವಾಗಿ ಬೆಳೆದ ಬೆಳೆಯ ಹೆಚ್ಚಿನ ಭಾಗವನ್ನು ತಮ್ಮ ಕುಟುಂಬದ ಆಹಾರಕ್ಕಾಗಿ ಬಳಸಿಕೊಳ್ಳುತ್ತವೆ. ಮತ್ತು ಉಳಿದಿದ್ದನ್ನು ಮಾರುಕಟ್ಟೆಯಲ್ಲಿ ಮಾರಲು ಪ್ರಯತ್ನಿಸುತ್ತಾರೆ.

'We farm for nearly six months, but it does not give us any money in hand', says Anita Bhuiya (foreground, in purple)
PHOTO • Ashwini Kumar Shukla

“ನಾವು ವರ್ಷದ ಆರು ತಿಂಗಳು ಬೇಸಾಯ ಮಾಡುತ್ತೇವೆ, ಆದರೆ ಇದರಿಂದ ಯಾವುದೇ ಹಣ ನಮಗೆ ಸಿಗುವುದಿಲ್ಲ” ಎನ್ನುತ್ತಾರೆ ಅನಿತಾ ಭುಯಿಯಾ (ಮುಂಭಾಗದಲ್ಲಿ ನೇರಳೆ ಬಣ್ಣದ ಉಡುಪಿನಲ್ಲಿರುವವರು)

ಸುಮಾರು ಐದು ವರ್ಷದ ಹಿಂದಿನವರೆಗೂ ಈ ಕುಟುಂಬವು ಕೃಷಿ ಕೂಲಿಗಳಾಗಿ ಇತರರ ಹೊಲದಲ್ಲಿ ದಿನಕ್ಕೆ 250-300 ರೂಪಾಯಿಗಳ  ಕೂಲಿಗೆ ದುಡಿಯುತ್ತಿದ್ದರು. ಎರಡು ಕೃಷಿ ಹಂಗಾಮಿನಿಂದ ಒಟ್ಟು ಅಂದಾಜು 60 ದಿನಗಳ ಕೆಲಸ ಸಿಗುತ್ತಿತ್ತು. ಉಳಿದ ದಿನಗಳಲ್ಲಿ ದಂಪತಿಗಳು ಊರಿನ ತರಕಾರಿ  ಬೆಳೆಯುವ ಹೊಲಗಳಲ್ಲಿ  ಕೆಲಸ ಹುಡುಕುತ್ತಿದ್ದರು. ಅಥವಾ ದಿನಗೂಲಿಗಳಾಗಿ ಹತ್ತಿರದ ಊರುಗಳಲ್ಲಿ ಮತ್ತು ಮಹುಗವಾನ್‌ನಿಂದ 10 ಕಿಲಮೀಟರ್‌ ದೂರದ ದಲ್ತೋಗಂಜ್‌ನಲ್ಲಿ ಕೆಲಸ ಮಾಡುತ್ತಿದ್ದರು.

ಗದ್ದೆ ಕೆಲಸಗಳ ಲಭ್ಯತೆ ದಿನದಿಂದ ಕಡಿಮೆಯಾಗುತ್ತಾ ಹೋಗಿದ್ದರಿಂದಾಗಿ ದಂಪತಿಗಳು 2018ರಲ್ಲಿ ಬೇಸಾಯದಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸುವ ತೀರ್ಮಾನಕ್ಕೆ ಬಂದರು. ಅದರ ಫಲವಾಗಿ ಅವರು ಭೂಮಾಲಿಕರೊಬ್ಬರೊಂದಿಗೆ ಬಟಿಯಾ ಕೃಷಿ ಪ್ರಾರಂಭಿಸಿದರು. “ಇದಕ್ಕೂ ಮೊದಲು ಭೂಮಾಲಿಕರಿಗೆ ಉಳುಮೆ ಮಾಡಿಕೊಡುತ್ತಿದ್ದೆ” ಎಂದು ತೀರಾ ಹೇಳುತ್ತಾರೆ. ಮೊದಲು ಎತ್ತುಗಳನ್ನು ಬಳಸಿ ಉಳುಮೆ ಮಾಡುತ್ತಿದ್ದರು ಆಗ ತೀರಾ ಅವರಿಗೂ ಕೆಲಸ ಸಿಗುತ್ತಿತ್ತು. ಆದರೆ ಈಗ ಉಳುಮೆ, ನಾಟಿ, ಕೊಯ್ಲು ಎಲ್ಲದಕ್ಕೂ ಟ್ರ್ಯಾಕ್ಟರ್‌  ಬಳಸಲಾಗುತ್ತದೆ. ಇದರಿಂದಾಗಿ ತೀರಾ ಮತ್ತು ಎತ್ತುಗಳು ಹಳ್ಳಿಯಲ್ಲೇ ಉಳಿದು ಹೋದರು. ಗದ್ದೆ ಅವರ ಪಾಲಿಗೆ ದೂರವಾಯಿತು.

2018ರಲ್ಲಿ ತಮ್ಮ ಬಟಿಯಾ ಕೃಷಿಗೆ ಪೂರಕವಾಗಿ ತೀರಾ ಮತ್ತು ಅನಿತಾ ಇಟ್ಟಿಗೆ ಭಟ್ಟಿಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅವರ ಊರಿನ ಇತರ ಜನರೂ ನವೆಂಬರ್‌ ಡಿಸೆಂಬರ್‌ ತಿಂಗಳ ನಡುವಿನಿಂದ ಜೂನ್‌ ತಿಂಗಳ ಮೊದಲ ವಾರದ ತನಕ ಇಟ್ಟಿಗೆ ಭಟ್ಟಿಗಳಲ್ಲಿ ಕೆಲಸ ಮಾಡುತ್ತಿದ್ದರು. “ನಾವು ಕಳೆದ ವರ್ಷ ನಮ್ಮ ಮಗಳ ಮದುವೆ ಮಾಡಿದೆವು” ಎಂದು ಅನಿತಾ ಹೇಳಿದರು. ಅವರಿಗೆ ಇಬ್ಬರು ಹೆಣ್ಣುಮಕ್ಕಳು; ಚಿಕ್ಕ ಮಗಳಿಗೆ ಇನ್ನೂ ಮದುವೆಯಾಗಿಲ್ಲ ಅವಳು ಅವರೊಂದಿಗೆ ವಾಸಿಸುತ್ತಿದ್ದಾಳೆ. ಮದುವೆ ಮುಗಿದ ಮೂರು ದಿನಗಳ ನಂತರ ಡಿಸೆಂಬರ್‌ 5, 2019ರಂದು ಅವರ ಕುಟುಂಬವು ಇಟ್ಟಿಗೆ ಭಟ್ಟಿಯ ಕೆಲಸಕ್ಕೆ ತೆರಳಿತು. “ಮದುವೆ ಖರ್ಚಿಗಾಗಿ ಮಾಡಿದ ಸಾಲವೆಲ್ಲ ತೀರಿದ ಕೂಡಲೇ ನಾವು ಮತ್ತೆ ವರ್ಷ ಪೂರ್ತಿ ಹೊಲದಲ್ಲೇ ದುಡಿಯುತ್ತೇವೆ” ಎಂದು ಅನಿತಾ ಹೇಳುತ್ತಾರೆ.

ಮಾರ್ಚ್‌ ಕೊನೆಯಲ್ಲಿ ಲಾಕ್‌ಡೌನ್‌ ಪ್ರಾರಂಭಗೊಳ್ಳುವ ಮೊದಲು ತೀರಾ ಮತ್ತು ಅನಿತಾ ತಮ್ಮ ಮಕ್ಕಳಾದ ಸಿತೇಂದರ್‌,24 ಮತ್ತು ಉಪೇಂದರ್‌, 22, ಮತ್ತು ಭುಯಿಯಾ ತಢಿಯ ಇತರರೊಂದಿಗೆ ಟ್ರಾಕ್ಟರ್‌ ಏರಿ ಎಂಟು ಕಿಲೋಮೀಟರ್‌ ದೂರದಲ್ಲಿರುವ ಬುರ್ಹಿಬಿಹಿರ್‌ ಗ್ರಾಮಕ್ಕೆ ಕೆಲಸಕ್ಕೆ ತೆರಳುತ್ತಿದ್ದರು. ಅಲ್ಲಿ ಅವರು ಚಳಿಯ ದಿನಗಳಲ್ಲಿ ಫೆಬ್ರವರಿ ತನಕ ಬೆಳಿಗ್ಗೆ 10ರಿಂದ ಸಂಜೆ 5ರ ತನಕ ದುಡಿಯುತ್ತಾರೆ. ಮಾರ್ಚ್ ನಂತರ ಬೇಸಿಗೆಯಲ್ಲಿ ಬೆಳಿಗ್ಗೆ 3 ಗಂಟೆಯಿಂದ ಮಧ್ಯಾಹ್ನ ಹನ್ನೊಂದು ಗಂಟೆಯ ತನಕ ದುಡಿಯುತ್ತಾರೆ.‌ “ಅಲ್ಲಿ [ಇಟ್ಟಿಗೆ ಭಟ್ಟಿಯಲ್ಲಿ] ಕೆಲಸ ಮಾಡುವುದರ ಒಂದು ಒಳ್ಳೆಯ ಪ್ರಯೋಜನವೆಂದರೆ ಕುಟುಂಬದ ಎಲ್ಲರೂ ಅಲ್ಲಿ ಒಟ್ಟಿಗೇ ಇರಬಹುದು”

With daily wage farm labour decreasing every year, in 2018, Anita and Teera Bhuiya leased land on a batiya arrangement
PHOTO • Ashwini Kumar Shukla
With daily wage farm labour decreasing every year, in 2018, Anita and Teera Bhuiya leased land on a batiya arrangement
PHOTO • Ashwini Kumar Shukla

ಕೃಷಿ ಕೂಲಿ ಕೆಲಸ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಹೋಗಿದ್ದರಿಂದಾಗಿ, 2018ರಲ್ಲಿ ಅನಿತಾ ಮತ್ತು ತೀರಾ ಭುಯಿಯಾ ಬಟಿಯಾ ಒಪ್ಪಂದದಡಿ ಭೂಮಿಯನ್ನು ಗುತ್ತಿಗೆಗೆ ಪಡೆದುಕೊಂಡರು.

ಇಟ್ಟಿಗೆ ಭಟ್ಟಿಯಲ್ಲಿ ಅವರಿಗೆ 1,000 ಇಟ್ಟಿಗೆ ತಯಾರಿಸಿದರೆ 500 ರೂಪಾಯಿ ನೀಡಲಾಗುತ್ತದೆ. ಈ ಬಾರಿಯ ಇಟ್ಟಿಗೆ ತಯಾರಿಕೆ ಹಂಗಾಮಿನಲ್ಲಿ ಅವರು ಅವರ ಊರಿನ ಗುತ್ತಿಗೆದಾರನಿಂದ 2019ರ ಅಕ್ಟೋಬರ್‌ ಸುಮಾರಿನಲ್ಲಿ ಪಡೆದ 30,000 ಸಾವಿರ ಮುಂಗಡ ಹಣಕ್ಕಾಗಿ ದುಡಿಯಬೇಕು. ಅದೇ ಗುತ್ತಿಗೆದಾರನಿಂದ 75,000 ಸಾವಿರ ಮುಂಗಡವಾಗಿ ಮಗಳ ಮದುವೆಗೆಂದು ಪಡೆದಿದ್ದಾರೆ. ಅವರು 2020ರ ನವೆಂಬರ್‌ನಲ್ಲಿ ಅದನ್ನು ತೀರಿಸಲು ದುಡಿಯಬೇಕಿದೆ.

ಇಟ್ಟಿಗೆ ಭಟ್ಟಿಯಲ್ಲಿ ಅನಿತಾ, ತೀರಾ ಮತ್ತು ಅವರ ಮಕ್ಕಳು ವಾರಕ್ಕೆ 1,000 ರೂಪಾಯಿಗಳ ಭತ್ಯೆಯನ್ನು ಪಡೆಯುತ್ತಾರೆ. “ಅದರಿಂದಲೇ ನಾವು ಅಕ್ಕಿ, ಬೇಳೆ, ಎಣ್ಣೆ, ಉಪ್ಪು ಇತ್ಯಾದಿ ಕೊಳ್ಳುತ್ತೇವೆ” ಎನ್ನುತ್ತಾರೆ ತೀರಾ. “ಒಂದು ವೇಳೆ ಹೆಚ್ಚು ಹಣ ಬೇಕಿದ್ದಲ್ಲಿ ಗುತ್ತಿಗೆದಾರರನ್ನು ಕೇಳುತ್ತೇವೆ. ಅವರು ಕೊಡುತ್ತಾರೆ.” ಈ ವಾರದ ಭತ್ಯೆ, ಸಣ್ಣ ಮುಂಗಡಗಳು, ದೊಡ್ಡ ಸಾಲ ಎಲ್ಲವನ್ನೂ ಇಟ್ಟಿಗೆ ಭಟ್ಟಿಯ ಸಂಬಳದ ನಿಯಮದಂತೆ ಮುರಿದುಕೊಳ್ಳಲಾಗುತ್ತದೆ. ತಿಂಗಳ ಕೊನೆಯಲ್ಲಿ ಅವರು ತಯಾರಿಸಿದ ಇಟ್ಟಿಗೆಗಳನ್ನು ಲೆಕ್ಕ ಹಾಕಿ ಅವರ ಸಂಪಾದನೆ ಲೆಕ್ಕ ಮಡಲಾಗುತ್ತದೆ.

ಕಳೆದ ವರ್ಷ 2019ರ ಜೂನ್‌ ತಿಂಗಳು ಇಟ್ಟಿಗೆ ಭಟ್ಟಿಯಿಂದ ಮರಳುವಾಗ ಅವರ ಕೈಯಲ್ಲಿ 50,000 ಸಾವಿರ ರೂಪಾಯಿಗಳಿದ್ದವು. ಅದರಿಂದ ಅವರ ಕೆಲವು ತಿಂಗಳ ಜೀವನ ಸುಸೂತ್ರವಾಗಿ ನಡೆಯಿತು. ಆದರೆ ಈ ಬಾರಿ ಭುಯಿಯಾ ಕುಟುಂಬ ಲಾಕ್‌ಡೌನ್‌ ಕಾರಣದಿಂದ ತನ್ನ ದುಡಿಮೆಯನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು. ಮಾರ್ಚ್‌ ತಿಂಗಳ ಕೊನೆಯಲ್ಲಿ ಅವರು ಗುತ್ತಿಗೆದಾರನಿಂದ ಪಡದಿದ್ದು ಕೇವಲ 2,000 ರೂಪಾಯಿಗಳು.

ಅಂದಿನಿಂದ ಭುಯಿಯಾ ಕುಟುಂಬವು ಅವರ ಸಮುದಾಯದ ಇತರರಂತೆ ಆದಾಯ ಮೂಲಕ್ಕಾಗಿ ಎದುರು ನೋಡುತ್ತಿದೆ. ಒಂದಷ್ಟು ಸಹಾಯ 5 ಕಿಲೋ ಅಕ್ಕಿ ಮತ್ತು ಒಂದು ಕಿಲೋ ಬೇಳೆ ರೂಪದಲ್ಲಿ ಕುಟುಂಬದ ಪ್ರತಿ ವಯಸ್ಕರಿಗೆ ಪ್ರಧಾನ್‌ ಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆಯಡಿ ಎಪ್ರಿಲ್‌, ಮೇ ಮತ್ತು ಜೂನ್‌ ತಿಂಗಳಿನಲ್ಲಿ ದೊರಕಿತು. ಮತ್ತು ಅಂತ್ಯೋದಯ ಅನ್ನ ಯೋಜನಾ ಪಡಿತರ ಚೀಟಿಯಡಿ (ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಬಡವರಲ್ಲಿ ಬಡವರು ಎಂದು ಗುರುತಿಸಲ್ಪಟ್ಟವರು) 35 ಕಿಲೋ ಅಕ್ಕಿ ಸಬ್ಸಿಡಿ ದರದಲ್ಲಿ ಪ್ರತಿ ತಿಂಗಳು ಕುಟುಂಬಕ್ಕೆ ದೊರೆಯುತ್ತದೆ. “ಆದರೆ ಇದು ನನ್ನ ಕುಟುಂಬಕ್ಕೆ ಹತ್ತು ದಿನಕ್ಕೂ ಸಾಲುವುದಿಲ್ಲ” ಎನ್ನುತ್ತಾರೆ ತೀರಾ. ಅವರೊಂದಿಗೆ ಪತ್ನಿ ಅನಿತಾ, ಅವಿವಾಹಿತ ಮಗಳು, ಇಬ್ಬರು ಸೊಸೆಯಂದಿರು ಮತ್ತು ಮೂವರು ಮೊಮ್ಮಕ್ಕಳಿದ್ದಾರೆ.

ಅವರ ಮನೆಯಲ್ಲಿ ದಿನಸಿ ಖಾಲಿಯಾಗುತ್ತಿರುವುದರಿಂದಾಗಿ ಅವರು ಮಹಗವಾನ್‌ ಮತ್ತು ಸುತ್ತಮುತ್ತಲಿನ ಊರುಗಳಲ್ಲಿ ಸಿಕ್ಕ ಕೆಲಸಗಳನ್ನು ಮಾಡುತ್ತಾ, ಸಾಲ ಪಡೆಯುತ್ತಾ ದಿನ ಕಳೆಯುತ್ತಿದ್ದಾರೆ.

Teera has borrowed money to cultivate rice and some maize on two acres
PHOTO • Ashwini Kumar Shukla

ತೀರಾ ಎರಡು ಎಕರೆ ಭೂಮಮಿಯಲ್ಲಿ ಭತ್ತ ಮತ್ತು ಜೋಳವನ್ನು ಬೆಳೆಯುವುದಕ್ಕಾಗಿ ಸಾಲವನ್ನು ಮಾಡಿಕೊಂಡಿದ್ದಾರೆ.

ಈ ಬಾರಿ ಎರಡು ಎಕರೆ ಕೃಷಿ ಭೂಮಿಯಲ್ಲಿ ಜೋಳ ಮತ್ತು ಭತ್ತದ ಖಾರಿಫ್‌ ಬಿತ್ತನೆಗಾಗಿ ದಂಪತಿಗಳು ಅಂದಾಜು 5,000 ಸಾವಿರ ರೂಪಾಯಿಗಳನ್ನು ಬೀಜಗಳು, ಗೊಬ್ಬರ ಮತ್ತು ಕೀಟನಾಶಕಗಳಿಗಾಗಿ ಖರ್ಚು ಮಾಡಿದ್ದಾರೆ. “ನನ್ನ ಬಳಿ ಸ್ವಲ್ಪವೂ ಹಣವಿದ್ದಿರಲಿಲ್ಲ. ಸಂಬಂಧಿಕರೊಬ್ಬರಿಂದ ಸಾಲ ಪಡೆದಿದ್ದೇನೆ, ಈಗಾಗಲೇ ನನ್ನ ತಲೆಯ ಮೇಲೆ ಸಾಕಷ್ಟು ಸಾಲವಿದೆ.” ಎನ್ನುತ್ತಾರೆ ತೀರಾ

ಅವರು ಬೇಸಾಯ ಮಾಡುತ್ತಿರುವ ಭೂಮಿಯು ಅಶೋಕ್‌ ಶುಕ್ಲಾ ಅವರಿಗೆ ಸೇರಿದ್ದು. ಅವರ ಅವರ ಬಳಿ ಒಟ್ಟು 10 ಎಕರೆ ಭೂಮಿಯಿದೆ. ಮತ್ತು ಅವರು ಸಹ ಕಳೆದ ಐದು ವರ್ಷಗಳಿಂದ ನಷ್ಟವನ್ನು ಅನುಭವಿಸುತ್ತಾ ಬಂದಿದ್ದಾರೆ. ಈ ನಷ್ಟಕ್ಕೆ ಬಹುತೇಕ ಮಳೆಯ ಕೊರತೆಯೇ ಕಾರಣ. “ನಾವು ಮೊದಲು 18ರಿಂದ 24 ತಿಂಗಳುಗಳಿಗಾಗುವಷ್ಟು ಧಾನ್ಯಗಳನ್ನು ಬೆಳೆಯುತ್ತಿದ್ದೆವು.” ಎಂದು ಅಶೋಕ್‌ ನೆನಪಿಸಿಕೊಳ್ಳುತ್ತಾರೆ. “ಆದರೆ ಈಗೀಗ ನಮ್ಮ ಕೋಠಿ (ಸಂಗ್ರಹ ಕೊಠಡಿ) ಆರು ತಿಂಗಳೊಳಗೆ ಖಾಲಿಯಾಗಿ ಬಿಡುತ್ತದೆ. ನಾನು ಸುಮಾರು ಐವತ್ತು ವರ್ಷಗಳಿಂದ ಬೇಸಾಯ ಮಾಡುತ್ತಿದ್ದೇನೆ. ಆದರೆ ಕಳೆದ ಐದಾರು ವರ್ಷಗಳಿಂದ ಆಗುತ್ತಿರುವ ನಷ್ಟದಿಂದಾಗಿ ಬೇಸಾಯಕ್ಕೆ ಭವಿಷ್ಯವಿಲ್ಲವೆನ್ನಿಸುತ್ತಿದೆ. ಬರೀ ನಷ್ಟವೇ ಎದುರಾಗುತ್ತಿದೆ.”

ಶುಕ್ಲಾ ಹೇಳುವಂತೆ ಹಳ್ಳಿಯಲ್ಲಿನ ಮೇಲ್ಜಾತಿಗೆ ಸೇರಿದ ಭೂಮಾಲಿಕರೂ ಕೂಡ ದೊಡ್ಡ ಸಂಖ್ಯೆಯಲ್ಲಿ ಇತರ ಕೆಲಸಗಳನ್ನು ಹುಡುಕಿಕೊಂಡು ಪಟ್ಟಣ, ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಇಳುವರಿ ಕುಸಿತದಿಂದಾಗಿ ಅವರು ದಿನಕ್ಕೆ 300 ರೂಪಾಯಿ ಕೂಲಿ ನೀಡಿ ಜನರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಬದಲು ಭೂಮಿಯನ್ನು ಗುತ್ತಿಗೆ ನೀಡುತ್ತಿದ್ದಾರೆ. “ಇತ್ತೀಚಿನ ದಿನಗಳಲ್ಲಿ ಈಗ ಇಡೀ ಊರಿನಲ್ಲಿ ಅವರೇ ಕೃಷಿ ಮಾಡುವುದನ್ನು [ಮೇಲ್ಜಾತಿ ಭೂಮಾಲಿಕರು] ಅಪರೂಪವಾಗಿ ಕಾಣಬಹುದು” ಎನ್ನುತ್ತಾರೆ ಶುಕ್ಲಾ. “ಅವರೆಲ್ಲರೂ ತಮ್ಮ ನೆಲವನ್ನು ಭುಯಿಯಾ ಮತ್ತು ಇತರ ದಲಿತರಿಗೆ ಗುತ್ತಿಗೆ ಕೊಟ್ಟಿದ್ದಾರೆ.” (2011ರ ಜನಗಣತಿಯ ಪ್ರಕಾರ ಮಹುವಾಗವಾನ್‌ನಲ್ಲಿ 21ರಿಂದ 30 ಶೇಕಡಾ ಊರಿನ ಜನರು ಎಂದರೆ 2,698 ಜನರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ.)

ಈ ವರ್ಷ ಒಳ್ಳೆಯ ಮಳೆಯಾಗಿರುವುದರಿಂದ ತೀರಾ ತಮ್ಮ ಬಟಿಯಾ ಬೇಸಾಯದಿಂದ ಉತ್ತಮ ಇಳುವರಿಯ ನಿರೀಕ್ಷಯಲ್ಲಿದ್ದಾರೆ. ಉತ್ತಮ ಇಳುವರಿಯೆಂದರೆ ಎರಡು ಎಕರೆಯಲ್ಲಿ ಇಪ್ಪತ್ತು ಕ್ವಿಂಟಾಲ್‌ ಭತ್ತ. ಭತ್ತವನ್ನು ಅಕ್ಕಿ ಮಾಡಿ ಶುಕ್ಲಾ ಅವರ ಪಾಲಿನದನ್ನು ಕೊಟ್ಟ ನಂತರ ಅವರ ಪಾಲಿಗೆ 800 ಕಿಲೋ ಅಕ್ಕಿ ಉಳಿಯಲಿದೆ. ಇದು ತೀರಾ ಅವರ 10 ಜನರ ಸಂಸಾರದ ಆಹಾರದ ಮುಖ್ಯ ಮೂಲ. ಅವರಿಗೆ ಮತ್ತೆ ಬೇರೆ ಧಾನ್ಯಗಳ ಲಭ್ಯತೆಯಿಲ್ಲ. “ಇದನ್ನೆಲ್ಲ ಮಾರುಕಟ್ಟೆಯಲ್ಲಿ ಮಾರುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎನ್ನಿಸುತ್ತದೆ ಆದರೆ ನಮ್ಮ ಕುಟುಂಬಕ್ಕೆ ಈ ಧಾನ್‌ (ಧಾನ್ಯ) ಆರು ತಿಂಗಳಿಗೂ ಸಾಲುವುದಿಲ್ಲ” ಎಂದು ಬೇಸರದಿಂದ ಹೇಳುತ್ತಾರೆ ತೀರಾ.

ತೀರಾ ತನಗೆ ಎಲ್ಲ ಕೆಲಸಗಳಿಗಿಂತ ಹೆಚ್ಚು ಕೃಷಿಯ ಕುರಿತು ಗೊತ್ತು. ಭೂಮಾಲಿಕರು ಹೆಚ್ಚು ಭೂಮಿ ನೀಡಲು ಒಪ್ಪುತ್ತಿದ್ದ ಹಾಗೆ ತಾನು ವಿಸ್ತಾರವಾದ ಭೂಮಿಯಲ್ಲಿ ಬಗೆಬಗೆಯ ಬೆಳೆ ಬೆಳೆಯಬೇಕು ಎನ್ನುವ ಕನಸು ಕಾಣುತ್ತಿದ್ದಾರೆ.

ಸದ್ಯಕ್ಕೆ ಅನಿತಾ ಮತ್ತು ತೀರಾ ಇನ್ನು ಕೆಲವೇ ವಾರಗಳಲ್ಲಿ ಕೈಗೆ ಬರಲಿರುವ ಉತ್ತಮ ಫಸಲಿಗಾಗಿ ಕಾತರದಿಂದ ಕಾಯುತ್ತಿದ್ದಾರೆ.

ಅನುವಾದ: ಶಂಕರ ಎನ್. ಕೆಂಚನೂರು

Ashwini Kumar Shukla

Ashwini Kumar Shukla is a freelance journalist based in Jharkhand and a graduate of the Indian Institute of Mass Communication (2018-2019), New Delhi. He is a PARI-MMF fellow for 2023.

Other stories by Ashwini Kumar Shukla
Ujwala P.

Ujwala P. is a freelance journalist based in Bengaluru, and a graduate of the Indian Institute of Mass Communication (2018-2019), New Delhi.

Other stories by Ujwala P.
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru