“ಇರಾನಿನ ಭಾರತೀಯ ರಾಯಭಾರ ಕಛೇರಿಯು ನಮ್ಮ ಕೋವಿಡ್-19 ತಪಾಸಣೆಯ ವರದಿಯ ಸಂದೇಶಗಳನ್ನು ವಾಟ್ಸ್ಆಪ್ ಮೂಲಕ ರವಾನಿಸಿತು. ಇದರಲ್ಲಿ ಕೇವಲ ಪಾಸ್ಪೋರ್ಟ್ ಸಂಖ್ಯೆ ಮತ್ತು ನಮ್ಮ ತಪಾಸಣೆಯು ಪಾಸಿಟಿವ್ ಅಥವಾ ನೆಗೆಟಿವ್ ಆಗಿದೆಯೇ ಎಂಬುದನ್ನಷ್ಟೇ ತಿಳಿಸಲಾಗಿತ್ತು. ಇದು, ನಾವು ತೇರ್ಗಡೆಯಾಗಿದ್ದೇವೆಯೇ ಇಲ್ಲವೇ ಎಂದು ತಿಳಿಯಲು, ಪರೀಕ್ಷಾ ಫಲಿತಾಂಶದ ಹಾಳೆಯಲ್ಲಿ ನಮ್ಮ ಕ್ರಮಸಂಖ್ಯೆಯನ್ನು ಹುಡುಕಿದಂತಿತ್ತು. ಇಲ್ಲಿಯವರೆಗೂ ನಮಗೆ ಯಾವುದೇ ನಿರ್ದಿಷ್ಟ ವರದಿಯನ್ನು ನೀಡಿರುವುದಿಲ್ಲ” ಎಂದರು, ಶಬ್ಬೀರ್ ಹುಸೇನ್ ಹಕಿಮಿ. ಕೇವಲ ಪಾಸಿಟಿವ್ ಅಥವಾ ನೆಗೆಟಿವ್ ಎಂಬುದನ್ನಷ್ಟೇ ಹೇಳಲಾಗಿದೆ. ಕಾರ್ಗಿಲ್, ಲಡಾಖ್‌ನ ನಿವಾಸಿಯಾದ 29ರ ವಯಸ್ಸಿನ ಈತ, ಇರಾನಿನ ಗೊಮ್ ನಗರದಿಂದ ನಮ್ಮೊಂದಿಗೆ ಮಾತನಾಡುತ್ತಿದ್ದರು. ಶಿಯಾ ಮುಸ್ಲಿಮರ ಪವಿತ್ರ ಪುಣ್ಯಕ್ಷೇತ್ರಗಳಿಗೆ ತಮ್ಮ ಹೆತ್ತವರೊಂದಿಗೆ ಈ ವರ್ಷದ ಜನವರಿಯಲ್ಲಿ ಇವರು ಯಾತ್ರೆ ಹೊರಟಿದ್ದರು.

ಇಮಾಮ್ ಅಲಿ, ಹುಸೇನ್ ಮತ್ತು ಪ್ರವಾದಿ ಮೊಹಮ್ಮದ್ ಅವರ ಕುಟುಂಬದ ಇತರರ ತೀರ್ಥಕ್ಷೇತ್ರಗಳಲ್ಲಿ ಪ್ರಾರ್ಥನೆಯನ್ನು ಸಲ್ಲಿಸಲು ಭಾರತದಿಂದ ಸಾವಿರಾರು ಶಿಯಾ ಮುಸ್ಲಿಮರು ಪ್ರತಿ ವರ್ಷವೂ ಇರಾನಿಗೆ ತೆರಳುತ್ತಾರೆ. ಮುಖ್ಯವಾಗಿ, ಜಮ್ಮು, ಕಾಶ್ಮೀರ, ಲಡಾಖ್ ಮತ್ತು ಮಹಾರಾಷ್ಟ್ರದ ಸುಮಾರು 1,100 ಜನರು, ಈ ವರ್ಷ ಇರಾನಿನ ಗೊಮ್ ನಗರದಲ್ಲಿ ಸಿಲುಕಿದ್ದಾರೆ. ಇರಾನಿನಲ್ಲಿ ಕೊರೊನಾ ವೈರಸ್ ಕಂಡುಬಂದ ನಂತರ ಸೋಂಕು ಹರಡುವ ಭಯವು ಹೆಚ್ಚಾದ ಕಾರಣ, ಭಾರತಕ್ಕೆ ಮರುಪ್ರಯಾಣವನ್ನು ಕೈಗೊಳ್ಳುವ ವಿಮಾನಗಳನ್ನು ರದ್ದುಪಡಿಸಲಾಗಿದೆ.

“ಈ ವರ್ಷದ ಮಾರ್ಚ್ 2ರಂದು ನಮ್ಮ ಮೂಗಿನ ಲೋಳೆಯ ಮಾದರಿಯ ಸಂಗ್ರಹಣೆಯು ಆರಂಭಗೊಂಡು, ಮಾರ್ಚ್ 10ರವರೆಗೂ ಮುಂದುವರಿಯಿತು. ಈ ಮಾದರಿಗಳನ್ನು ತಪಾಸಣೆಗಾಗಿ ಮೊದಲು ಪುಣೆಗೆ ಕಳುಹಿಸಿ, ನಂತರ ಇಲ್ಲಿ ಸಿಲುಕಿರುವ ಪ್ರತಿಯೊಬ್ಬರನ್ನೂ ವಿಮಾನದಲ್ಲಿ ಭಾರತಕ್ಕೆ ವಾಪಸ್ಸು ಕರೆದೊಯ್ಯಲಾಗುತ್ತದೆಯೆಂದು ನಮಗೆ ಆಶ್ವಾಸನೆ ನೀಡಲಾಗಿತ್ತು” ಎಂಬುದಾಗಿ ಶಬ್ಬೀರ್ ತಿಳಿಸಿದರು. 78 ಯಾತ್ರಾರ್ಥಿಗಳ ಮೊದಲ ತಪಾಸಣಾ ಫಲಿತಾಂಶವನ್ನು ನೆಗೆಟಿವ್ ಎಂದು ತಿಳಿಸಿ, ಮಾರ್ಚ್ 10ರಂದು IAF C-17 ವಿಮಾನದಲ್ಲಿ ಭಾರತಕ್ಕೆ ಕರೆದೊಯ್ಯಲು ಅವರೆಲ್ಲರನ್ನೂ ಟೆಹರಾನ್‌ಗೆ ಕರೆಯಲಾಯಿತು.

“ಅನಿರೀಕ್ಷಿತವಾಗಿ, ಯಾವುದೇ ಕಾರಣಗಳನ್ನು ನೀಡದೆ, ಅವರಲ್ಲಿನ 19 ಜನರುನ್ನು ಗೊಮ್ಗೆ ವಾಪಸ್ಸು ಕಳುಹಿಸಲ್ಪಟ್ಟರು. ಇದರ ನಂತರ, ಲಡಾಖ್ನ 254 ಯಾತ್ರಿಗಳ ತಪಾಸಣೆಯು ಪಾಸಿಟಿವ್ ಎಂಬುದಾಗಿ ತಿಳಿಸಲಾಯಿತು. ಭಾರತೀಯ ರಾಯಭಾರ ಕಛೇರಿಯು ಪಾಸಿಟಿವ್ ಎಂದು ತಿಳಿಸಿದ ಜನರಿಗೆ ಮಾಮೂಲಿ ಮಾಸ್ಕ್ಅನ್ನು ಸಹ ಒದಗಿಸಲಿಲ್ಲ. ಇನ್ನು ಪ್ರತ್ಯೇಕವಾಸವಂತೂ ದೂರವೇ ಉಳಿಯಿತು. ಇದರ ಬದಲಾಗಿ, ನಮ್ಮಲ್ಲಿನ ಕೆಲವರು ಸ್ವಯಂಸೇವಕರಾಗಿ ಮುಂದೆ ಬಂದು, ಅವರನ್ನು ತಂಡಗಳಲ್ಲಿ ತಪಾಸಣೆಗಾಗಿ ವಾಪಸ್ಸು ಆಸ್ಪತ್ರೆಗೆ ಕರೆದೊಯ್ದರು. ಅವರಲ್ಲಿನ ಕೆಲವರನ್ನಾದರೂ ಆಸ್ಪತ್ರೆಗೆ ದಾಖಲಿಸಿಕೊಳ್ಳುತ್ತಾರೆಂಬುದು ಅವರ ನಿರೀಕ್ಷೆಯಾಗಿತ್ತು.

ಈ ವರದಿಗಾರನು, ಮೂರು ದಿನಗಳ ಹಿಂದೆ, ಟೆಹರಾನಿನ ಭಾರತೀಯ ರಾಯಭಾರ ಕಛೇರಿಗೆ ಕಳುಹಿಸಿದ ಪ್ರಶ್ನಾವಳಿಗೆ ಉತ್ತರವನ್ನು ಇದುವರೆಗೂ ರವಾನಿಸಿರುವುದಿಲ್ಲ.

Left: A delegation of stranded Indian pilgrims meeting Indian Embassy officials in Qom, Iran. Right: Shabbir Hussain Hakimi
Left: A delegation of stranded Indian pilgrims meeting Indian Embassy officials in Qom, Iran. Right: Shabbir Hussain Hakimi

ಎಡಕ್ಕೆ: ಇಕ್ಕಟ್ಟಿಗೆ ಸಿಲುಕಿರುವ ಭಾರತೀಯ ಯಾತ್ರಿಕರು, ಇರಾನಿನ ಗೊಮ್ನಲ್ಲಿರುವ ಭಾರತೀಯ ರಾಯಭಾರ ಕಛೇರಿಯ ಸಿಬ್ಬಂದಿಗಳನ್ನು ಭೇಟಿಮಾಡುತ್ತಿರುವುದು. ಬಲಕ್ಕೆ: ಶಬ್ಬಿರ್ ಹುಸೇನ್ ಹಕಿಮಿ

ಬಹುತೇಕ ಯಾತ್ರಿಕರು 65 ವರ್ಷಕ್ಕೂ ಮೇಲ್ಪಟ್ಟವರು. ಕೆಲವರು 80 ವರ್ಷದ ಮಧ್ಯ ಭಾಗದಲ್ಲಿ ಅಥವಾ ಅಂಚಿನಲ್ಲಿದ್ದಾರೆ. ಹೀಗಾಗಿ ಅವರ ಯೋಗಕ್ಷೇಮವು ಯುವ ಪ್ರಯಾಣಿಕರು ಮತ್ತು ಅವರ ಜೊತೆಗಾರರ ಪ್ರಮುಖ ಕಾಳಜಿ ಹಾಗೂ ಆದ್ಯತೆಯಾಗಿತ್ತು. ಆದರೆ, ಪಾಸಿಟಿವ್ ಎಂಬುದಾಗಿ ತಿಳಿಸಲಾದ ರೋಗಿಗಳನ್ನು ತಪಾಸಣೆಮಾಡಿದ ಆಸ್ಪತ್ರೆಯ ವೈದ್ಯರು, ಅವರಲ್ಲಿ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲವೆಂಬುದನ್ನು ಕಂಡುಕೊಂಡರು. ಈಗ ಹಣದ ಅಭಾವವನ್ನು ಅನುಭವಿಸುತ್ತಿರುವ ಈ ಯಾತ್ರಿಕರು, ತಮಗೆ ಭರಿಸಬಲ್ಲ ಯಾವುದಾದರೂ ಚಿಕ್ಕ ಹಾಗೂ ಜನರಿಂದ ತುಂಬಿತುಳುಕುತ್ತಿರುವ ವಸತಿ ಕೋಣೆಗಳಿಗೆ ವಾಪಸ್ಸಾಬೇಕೆಂಬುದು ಇದರ ಅರ್ಥ. ನಂತರ, ಎರಡೂ ಸರ್ಕಾರಗಳು ಮಧ್ಯೆ ಪ್ರವೇಶಿಸಿದ ಕಾರಣ, ಅಲ್ಲಿ ಸಿಲುಕಿರುವ ಯಾತ್ರಾರ್ಥಿಗಳು ಹೋಟೆಲ್ ಅಥವಾ ವಸತಿ ಕೋಣೆಗಳಿಗೆ ಹಣವನ್ನು ಪಾವತಿಸುವಂತಿಲ್ಲ.

“ರಾಯಭಾರ ಕಛೇರಿ ಮತ್ತು ವಾಣಿಜ್ಯ ದೂತ ಕಾರ್ಯಾಲಯದ ಸಿಬ್ಬಂದಿಗಳು ಭಾರತದ ದೇಶವಾಸಿಗಳಿಗೆ (ಇರಾನಿನಲ್ಲಿರುವ) ಆಶ್ವಾಸನೆ ನೀಡುತ್ತಿದ್ದು, ಅವರ ಸ್ವಾಸ್ಥ್ಯ ಹಾಗೂ ಈ ಕುರಿತಂತೆ ಸೂಕ್ತ ವ್ಯವಸ್ಥೆಗಳು ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದಾರೆ. ಅಲ್ಲದೆ, ಪ್ರಪಂಚದಾದ್ಯಂತ ಹರಡಿರುವ ಜನರನ್ನೊಳಗೊಂಡ ಈ ದೇಶಕ್ಕೆ ಇದು, ಅತ್ಯಂತ ಕಾಳಜಿಯ ವಿಷಯವಾಗಿದೆ. ಇದೇ ಸಮಯದಲ್ಲಿ, ನಾವು ಜವಾಬ್ದಾರಿಯುತವಾಗಿ ಮತ್ತು ಸಂಯಮದಿಂದ ಪ್ರತಿಕ್ರಿಯಿಸುವುದು ಹೆಚ್ಚು ಅಗತ್ಯವೆನಿಸಿದೆ. ನಾವು ಏನು ಹೇಳುತ್ತೇವೆ ಹಾಗೂ ಮಾಡುತ್ತೇವೆಂಬುದು ಸಮಸ್ಯೆಯನ್ನು ಬಗೆಹರಿಸಬೇಕೇ ಹೊರತು, ಆತಂಕವನ್ನು ಹೆಚ್ಚಿಸಬಾರದು” ಎಂಬುದಾಗಿ ಭಾರತದ ವಿದೇಶಾಂಗ ಸಚಿವ, ಎಸ್. ಜಯಶಂಕರ್, ಮಾರ್ಚ್ 13ರಂದು ಲೋಕಸಭೆಗೆ ತಿಳಿಸಿದರು.

ಇಲ್ಲಿನ ವಿರೋಧಾಭಾಸವೆಂದರೆ, ಮಾಧ್ಯಮದ ತಲೆಬರಹಗಳು, 254 ಲಡಾಖಿ ಯಾತ್ರಿಕರನ್ನು ಇರಾನಿನಲ್ಲಿ ಕೊರೊನಾ ಪಾಸಿಟಿವ್ ಎಂದು ತಿಳಿಸಲಾಗಿದೆ ಎಂದು ಪ್ರಕಟಿಸಿದವು (ನಂತರದಲ್ಲಿ, ಇದನ್ನು ಇನ್ನೂ ಖಚಿತಪಡಿಸಿರುವುದಿಲ್ಲ ಎಂಬುದಾಗಿ ಸುದ್ದಿಯನ್ನು ಬದಲಿಸಲಾಯಿತು). ಇದರ ಪರಿಣಾಮವಾಗಿ, ಒತ್ತಡ, ಗೊಂದಲ ಮತ್ತು ತೀವ್ರ ಸ್ವರೂಪದ ಭೀತಿಯು ಕಾಣಿಸಿಕೊಂಡ ಕಾರಣ, ಲಡಾಖ್ ಪ್ರದೇಶದ ಲೇಹ್ನಲ್ಲಿನ ಛುಛೂತ್ ಗೊಂಗ್ಮ ಮತ್ತು ಕಾರ್ಗಿಲ್ನ ಸಂಕೂ ಎಂಬ ಎರಡು ಹಳ್ಳಿಗಳನ್ನು ಸಂಪೂರ್ಣವಾಗಿ ಸಂಪರ್ಕ ನಿಷೇಧಗೊಳಿಸಲಾಯಿತಲ್ಲದೆ, ಇದುವರೆಗೂ ಇವು ಸಂಪರ್ಕ ನಿಷೇಧಿತ ಸ್ಥಳಗಳಾಗಿಯೇ ಇವೆ. ವಾಟ್ಸ್ಆಪ್ನ ಧ್ವನಿ ಸಂದೇಶಗಳ ಸರಣಿಯೇ ಹೊರಬರಲಾರಂಭಿಸಿತು. ಅವುಗಳಲ್ಲಿನ ಕೆಲವು ಮತೀಯ ಹಾಗೂ ಜನಾಂಗೀಯ ಭೇದಭಾವವನ್ನು ಧ್ವನಿಸುತ್ತಿದ್ದವು. ಜಮ್ಮು ಹಾಘೂ ಇತರೆಡೆಗಳಲ್ಲಿ ವ್ಯಾಸಂಗಮಾಡುತ್ತಿದ್ದ ವಿದ್ಯಾರ್ಥಿಗಳು ಬೆದರಿಕೆ, ತಾರತಮ್ಯ ಮತ್ತು ಮತೀಯ ಭೇದಭಾವದ ತೆಗಳಿಕೆಗೊಳಗಾದರು.

73 ವರ್ಷದ ಮೊಹಮ್ಮದ್ ಅಲಿ, ಛುಛೂತ್ ಗ್ರಾಮದಲ್ಲಿ ನಿಧನರಾದಾಗ, ಅವರ ಕುಟುಂಬಕ್ಕೆ ಶವಸಂಸ್ಕಾರದಲ್ಲಿ ಸಹಾಯಮಾಡಲು ಯಾರೂ ಸಿದ್ಧರಿರಲಿಲ್ಲ. ಮೂತ್ರನಾಳದ ಸೋಂಕು ಮರಣಕ್ಕೆ ಕಾರಣವೇ ಹೊರತು, ಕೋವಿಡ್-19 ಅಲ್ಲವೆಂಬುದು ನಂತರದಲ್ಲಿ ತಿಳಿದುಬಂದಿತು. ತಮ್ಮ ಅನುಭವವನ್ನು ನೆನಪಿಸಿಕೊಂಡ ಅವರ ಮಗ ಮೊಹಮ್ಮದ್ ಇಸ್ಸ, “ನನ್ನ ಶತ್ರುವಿಗೂ ನಾನು ಈ ಅನುಭವವನ್ನು ಬಯಸುವುದಿಲ್ಲ” ಎಂದರು.

Left: An Iranian medical team examining Ladakhi pilgrims outside their hotel in Qom. Right: Rations being distributed in Kargil's Sankoo village
Left: An Iranian medical team examining Ladakhi pilgrims outside their hotel in Qom. Right: Rations being distributed in Kargil's Sankoo village

ಎಡಕ್ಕೆ: ಗೊಮ್ನಲ್ಲಿನ ಅವರ ಹೋಟೆಲಿನ ಹೊರಗೆ ಲಡಾಖಿ ಯಾತ್ರಿಕರನ್ನು ಪರೀಕ್ಷಿಸುತ್ತಿರುವ ಇರಾನಿಯನ್ ವೈದ್ಯಕೀಯ ತಂಡ. ಬಲಕ್ಕೆ: ಕಾರ್ಗಿಲ್ನ ಸಂಕೂ ಹಳ್ಳಿಯಲ್ಲಿ ವಿತರಿಸಲಾಗುತ್ತಿರುವ ಪಡಿತರ .

ಮಾರ್ಚ್ 21ರಂದು, ಮುಸ್ತಫ ಹಾಜಿ ಎಂಬ ಕಾರ್ಗಿಲ್ನ ವಕೀಲರು, ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಅದರಲ್ಲೂ ವಿಶೇಷವಾಗಿ, ಇರಾನಿನಲ್ಲಿರುವ ಯಾತ್ರಿಗಳನ್ನು ತಕ್ಷಣದಿಂದಲೇ ತೆರವುಗೊಳಿಸುವಂತೆ ಆದೇಶವನ್ನು/ಸೂಚನೆಯನ್ನು ಹೊರಡಿಸಲು ಭಾರತದ ಸುಪ್ರೀಂ ಕೋರ್ಟಿನಲ್ಲಿ ಮನವಿ ಸಲ್ಲಿಸಿದರು.

ಈ ವಿಷಯದ ಬಗ್ಗೆ ತ್ವರಿತ ಕ್ರಮದ ಅವಶ್ಯಕತೆಯನ್ನು ಗ್ರಹಿಸಿದ ಸುಪ್ರಿಂ ಕೋರ್ಟ್, “ಈ ನಾಗರಿಕರ ಯೋಗಕ್ಷೇಮದ ರಕ್ಷಣೆಯನ್ನು ಕುರಿತಂತೆ ಎಲ್ಲ ಅಗತ್ಯ ಕ್ರಮಗಳ ಬಗ್ಗೆ ಇರಾನಿನ ರಾಯಭಾರ ಕಛೇರಿಯನ್ನೂ ಒಳಗೊಂಡಂತೆ, ಸಂಬಂಧಿಸಿದ ಎಲ್ಲ ಅಧಿಕಾರಿಗಳೊಂದಿಗೆ ಚರ್ಚಿಸಿ, ಸೂಕ್ತ ಕ್ರಮಗಳನ್ನು ಕೈಗೊಂಡು, ಯೋಜನೆಯನ್ನು ರೂಪಿಸಲಾಗುವುದೆಂದು ನಂಬಲಾಗಿದೆ” ಎಂಬುದಾಗಿ ತಿಳಿಯಪಡಿಸಿತು.

ಮೂಗಿನ ಲೋಳೆಯನ್ನು ಸಂಗ್ರಹಿಸಿದ ಬಹುತೇಕ ಒಂದು ತಿಂಗಳ ನಂತರ, ಏಪ್ರಿಲ್ 1ರಂದು ಸರ್ಕಾರವು ಕೋರ್ಟಿಗೆ ತನ್ನ ವರದಿಯನ್ನು ಸಲ್ಲಿಸಿತು. “ಬಹುತೇಕ ಯಾತ್ರಿಗಳು ಸರ್ವವ್ಯಾಪಿ ವೈರಸ್ನಿಂದ ಪೀಡಿತರಾಗುವ ಸಾಧ್ಯತೆಯು ಅತ್ಯಂತ ಹೆಚ್ಚಾಗಿದೆಯೆಂಬ ಪರಿಸ್ಥಿತಿಯಲ್ಲೂ, ಈ ವಿಳಂಬ ಹಾಗೂ ಗೊಂದಲವೇಕೆ” ಎಂದು ಪ್ರಶ್ನಿಸುತ್ತಾರೆ ಮುಸ್ತಫ.

ಇದೇ ಸಮಯಕ್ಕೆ, ಮಹಾನ್ ಏರ್ಲೈನ್ ಎಂಬ ಇರಾನಿನ ಖಾಸಗಿ ಸಂಸ್ಥೆಯು, ನೆಗೆಟಿವ್ ಎಂಬುದಾಗಿ ತಿಳಿದುಬಂದ ಯಾತ್ರಿಕರನ್ನು ರವಾನಿಸಲು ಮುಂದೆ ಬಂದು, ಮಾರ್ಚ್ 24ರಂದು, 253 ಯಾತ್ರಿಕರನ್ನು ಹಾಗೂ ಮಾರ್ಚ್ 28ರಂದು 224 ಯಾತ್ರಿಕರನ್ನು ತೆರವುಗೊಳಿಸಿತು. ಇನ್ನೂ, 324 ಲಡಾಖಿ ಯಾತ್ರಿಕರು ಇರಾನಿನಲ್ಲಿ ಬಾಕಿಯುಳಿದಿದ್ದು, ಅವರಲ್ಲಿನ 254 ಜನರು ‘ಕೊರೊನಾ ಪಾಸಿಟಿವ್ʼ ಎಂದು ತಿಳಿದುಬಂದಿದೆ. ಇವರಲ್ಲಿ. ತಮ್ಮ ಹಿರಿಯರ ಕಾಳಜಿ ವಹಿಸಲೆಂದು ಇಲ್ಲಿಯೇ ಉಳಿದ ಶಬ್ಬೀರ್‌ರಂತಹ 70 ಜನ ಯುವ ಸ್ವಯಂಸೇವಕರೂ ಇದ್ದಾರೆ (ಅವರೆಲ್ಲರನ್ನೂ ನೆಗೆಟಿವ್ ಎಂದು ತಿಳಿಸಲಾಗಿದೆ).

Left: Some of the pilgrims airlifted from Iran, at a quarantine camp in Jodhpur. Right: File photo of pilgrim Haji Mohammad Ali with daughter Hakima Bano
Left: Some of the pilgrims airlifted from Iran, at a quarantine camp in Jodhpur. Right: File photo of pilgrim Haji Mohammad Ali with daughter Hakima Bano

ಎಡಕ್ಕೆ: ಇರಾನಿನಿಂದ ವಿಮಾನದಲ್ಲಿ ಸಾಗಿಸಲಾದ ಕೆಲವು ಯಾತ್ರಿಕರು ಜೋಧ್ಪುರ್ನ ಪ್ರತ್ಯೇಕವಾಸದ ಶಿಬಿರದಲ್ಲಿದ್ದಾರೆ. ತಮ್ಮ ಮಗಳು ಹಕೀಮ ಬಾನೊ ಅವರೊಂದಿಗಿರುವ ಹಾಜಿ ಮೊಹಮ್ಮದ್ ಅಲಿ ಅವರ ಕಡತದಲ್ಲಿನ ಛಾಯಾಚಿತ್ರ .

ನೆಗೆಟಿವ್ ಎಂಬುದಾಗಿ ತಿಳಿದುಬಂದಿದ್ದು, ಭಾರತಕ್ಕೆ ರವಾನಿಸಲ್ಪಟ್ಟ, ಕಾರ್ಗಿಲ್ ನಗರದ 79ರ ಹಾಜಿ ಮೊಹಮ್ಮದ್ ಅಲಿಯವರಂತೆಯೇ ಕೆಲವರು ಜೋಧ್ಪುರ್ ಮತ್ತು ರಾಜಾಸ್ಥಾನದ ಪ್ರತ್ಯೇಕ ಶಿಬಿರಗಳಲ್ಲಿದ್ದಾರೆ. “ನಮ್ಮ ತಂದೆಯವರೀಗ ಭಾರತದಲ್ಲಿನ ಜೋಧ್ಪುರ್ ಪ್ರತ್ಯೇಕವಾಸದ ಶಿಬಿರದಲ್ಲಿದ್ದಾರೆಂಬುದು ನನಗೆ ಸ್ವಲ್ಪ ಸಮಾಧಾನಕರ ವಿಷಯ. ಆದರೂ ಚಿಂತೆಯಿದ್ದೇ ಇದೆ. ಅವರು ವಾಪಸ್ಸು ಬಂದು, ಕುಟುಂಬದ ಜೊತೆ ಸೇರುವವರೆಗೂ ಕಾಯುತ್ತ ಕುಳಿತಿರುವುದು ನಮ್ಮಿಂದ ಸಾಧ್ಯವಾಗುತ್ತಿಲ್ಲ” ಎಂಬುದಾಗಿ ಅವರ ೨೫ರ ವಯಸ್ಸಿನ ಮಗಳು, ಹಕೀಮ ಬಾನೋ, ‘ಪರಿ’ಗೆ ತಿಳಿಸಿದರು.

ಶಬ್ಬೀರ್ ಅವರು ಇರಾನಿನಲ್ಲಿ ಸಿಲುಕಿ ಮಾರ್ಚ್ 28ಕ್ಕೆ ಒಂದು ತಿಂಗಳು ಕಳೆಯುತ್ತದೆ. “ವಾರಗಳ  ನಂತರ, ಕೊನೆಗೂ ನಮಗೆ ಹೋಟೆಲಿನ ಕೊಠಡಿಗಳನ್ನು ನೀಡಲಾಯಿತು. ಈಗ ಅವರು, ನಿಯಮಿತ ತಪಾಸಣೆಗೆಂದು, ಇರಾನಿಯನ್ ವೈದ್ಯರನ್ನು ಕಳುಹಿಸುತ್ತಿದ್ದಾರೆ. ಆದಾಗ್ಯೂ, ಕೊಠಡಿಗಳಲ್ಲಿ 8, 6 ಮತ್ತು 12 ಹಾಸಿಗೆಗಳಿರುವ ಕಾರಣ, ಇದು ಸೂಕ್ತ ಪ್ರತ್ಯೇಕ ವಾಸವಲ್ಲ. 254 ಲಡಾಖಿ ಯಾತ್ರಿಕರನ್ನು ಪಾಸಿಟಿವ್ ಎಂಬುದಾಗಿ ತಿಳಿಸಿ 14ಕ್ಕಿಂತಲೂ ಹೆಚ್ಚು ದಿನಗಳು ಸಂದಿವೆಯಾದರೂ, ಎರಡನೆಯ ತಪಾಸಣೆಗಾಗಿ ಅವರಿಂದ ಯಾರೂ ಮೂಗಿನ ಲೋಳೆಯನ್ನು ಸಂಗ್ರಹಿಸಿರುವುದಿಲ್ಲ” ಎನ್ನುತ್ತಾರೆ ಶಬ್ಬೀರ್.

“ನಮಗೆ ಮನೆಗೆ ಹೋದರೆ ಸಾಕೆನಿಸಿದೆ. ಎಲ್ಲ ಅಗತ್ಯ ಮುನ್ನಚ್ಚರಿಕೆಗಳನ್ನೂ ತೆಗೆದುಕೊಂಡು, (ಎರಡನೆಯ ತಪಾಸಣೆ, ಪ್ರತ್ಯೇಕ ವಾಸ) ನಮ್ಮನ್ನು ಮನೆಗೆ ಕಳುಹಿಸಿ. ಬಹುತೇಕ ಹಿರಿಯರು, ಕೊರೊನಾ ವೈರಸ್ನಿಂದಲ್ಲದಿದ್ದರೂ, ಖಿನ್ನತೆ, ಅಂತರ್ನಿಹಿತ (underlying) ಖಾಯಿಲೆಗಳು ಮತ್ತು ತಮ್ಮ ಪ್ರೀತಿಪಾತ್ರರಿಂದ ಪ್ರತ್ಯೇಕಿಸಲ್ಪಟ್ಟಿರುವ ಕಾರಣದಿಂದಾಗಿ ಸಾವಿಗೀಡಾಗುವ ಸಾಧ್ಯತೆಗಳಿವೆ” ಎನ್ನುತ್ತಾರೆ ಶಬ್ಬೀರ್.

“ನಮ್ಮ ಕುಟುಂಬಗಳು ಹತಾಶೆಗೊಳಗಾಗಿವೆ. ಲಡಾಖಿಗಳು ಮನೆಗಳಲ್ಲಿ ಆತಂಕಕ್ಕೀಡಾಗಿದ್ದಾರೆ. ಎಂಬುದು ಇವರಿಗೆ ಹೆಚ್ಚಿನ ನೋವನ್ನುಂಟುಮಾಡಿದೆ. 254 ಯಾತ್ರಿಕರನ್ನು ‘ಕೊರೊನಾ ಪಾಸಿಟಿವ್’ ಎಂದು ಕರೆಯುವುದನ್ನು ನಿಲ್ಲಿಸಿ. ಇದನ್ನು ಸಮರ್ಥಿಸುವ ಸೂಕ್ತ ವೈದ್ಯಕೀಯ ವರದಿಗಳಿಲ್ಲವಾಗಿ, ಅವರು ಕೊರೊನಾ ಶಂಕಿತರಷ್ಟೇ”

ಅನುವಾದ : ಶೈಲಜ ಜಿ . ಪಿ .

Stanzin Saldon

Stanzin Saldon is a 2017 PARI Fellow from Leh, Ladakh. She is the Quality Improvement Manager, State Educational Transformation Project of the Piramal Foundation for Education Leadership. She was a W.J. Clinton Fellow ( 2015-16) of the American India Foundation.

Other stories by Stanzin Saldon
Translator : Shailaja G. P.

Shailaja ([email protected]) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

Other stories by Shailaja G. P.