ವಾರಣಾಸಿ ಕ್ಷೇತ್ರದ ಮತದಾರರಾದ ಸಲ್ಮಾ ಮತದಾನದ ದಿನದಂದು ಮತ ಚಲಾಯಿಸಲು ಹೋದ ಸಂದರ್ಭದಲ್ಲಿ ಅಲ್ಲಿ ಎರಡು ಸಾಲುಗಳಿರುವುದನ್ನು ಕಂಡರು - ಒಂದು ಪುರುಷರಿಗೆ ಮತ್ತು ಇನ್ನೊಂದು ಮಹಿಳೆಯರಿಗೆ. ಪ್ರಸಿದ್ಧ ವಿಶ್ವನಾಥ ದೇವಸ್ಥಾನಕ್ಕೆ ಹೋಗುವ ಕಿರಿದಾದ ಓಣಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಬಂಗಾಲಿ ಟೋಲಾದ ಮತಗಟ್ಟೆಯನ್ನು ಸ್ಥಾಪಿಸಲಾಗಿತ್ತು.

ಈ 25 ವರ್ಷದ ಟ್ರಾನ್ಸ್ ಮಹಿಳೆ ಮಹಿಳೆಯರ ಸಾಲಿನಲ್ಲಿ ನಿಂತಿದ್ದರು, ಆದರೆ ಅವರು ಹೇಳುತ್ತಾರೆ, "ಆಂಖೇ ಬಡಿ ಹೋ ಗಯೀ ಥಿ ಸಬ್ಕಿ [ಎಲ್ಲರೂ ದೊಡ್ಡ ಕಣ್ಣು ಬಿಟ್ಟು ನೋಡುತ್ತಿದ್ದರು]. ಗಂಡಸರು ನನ್ನನ್ನು ನೋಡಿಲ್ಲವೇನೊ ಎಂಬಂತೆ ನಟಿಸುತ್ತಿದ್ದರು. ನನ್ನ ಸಾಲಿನಲ್ಲಿದ್ದ ಮಹಿಳೆಯರು ನನ್ನನ್ನು ಕಂಡು ನಗುವುದು ಮತ್ತು ಗುಟ್ಟಾಗಿ ಮಾತಾಡಿಕೊಳ್ಳುವುದನ್ನು ಮಾಡುತ್ತಿದ್ದರು. ನಾನು ಮಹಿಳೆಯರ ಸಾಲಿನ ಕೊನೆಯಲ್ಲಿದ್ದೆ.”

ಆದರೆ ಸಲ್ಮಾ ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. “ನಾನು ಅದಕ್ಕೆ ತಲೆ ಕೆಡಿಸಿಕೊಳ್ಳದೆ. ಸಾಲಿನಲ್ಲಿ ಮುಂದೆ ಸಾಗಿದೆ, ನನಗೆ [ಮತ ಹಾಕುವ] ಹಕ್ಕಿದೆ. ನಾನು ಆ ಹಕ್ಕನ್ನು ಬದಲಾವಣೆ ತರುವ ಸಲುವಾಗಿ ಚಲಾಯಿಸಿದೆ” ಎಂದು ಅವರು ಹೇಳಿದರು.

ಭಾರತದ ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ 48,044 “ತೃತೀಯ ಲಿಂಗಿ ಮತದಾರರಿದ್ದಾರೆ.” ಗಣನೀಯ ಸಂಖ್ಯೆಯ ಹೊರತಾಗಿಯೂ, ಟ್ರಾನ್ಸ್ ವ್ಯಕ್ತಿಯಾಗಿ ಮತದಾರರ ಗುರುತಿನ ಚೀಟಿ ಪಡೆಯುವುದು ಅಷ್ಟು ಸುಲಭದ ಸಂಗತಿಯಲ್ಲ. ವಾರಣಾಸಿಯಲ್ಲಿ ಸುಮಾರು 300 ಟ್ರಾನ್ಸ್ ಜನರಿದ್ದಾರೆ ಮತ್ತು ಅವರಿಗೆ ಮತದಾರರ ಗುರುತಿನ ಚೀಟಿಗಳನ್ನು ಪಡೆಯುವುದು ಅವರಿಗೆ ಕಷ್ಟವಾಗಿದೆ ಎಂದು ಪ್ರಿಸ್ಮ್ಯಾಟಿಕ್ ಎನ್ನುವ ಸರ್ಕಾರೇತರ ಸಂಸ್ಥೆಯ ಸ್ಥಾಪಕ-ನಿರ್ದೇಶಕರಾದ ನೀತಿ ಹೇಳುತ್ತಾರೆ. "ನಾವು ಸುಮಾರು 50 ಟ್ರಾನ್ಸ್ ವ್ಯಕ್ತಿಗಳಿಗೆ ವೋಟರ್ ಐಡಿಗಳನ್ನು ಮಾಡಿಸಿದ್ದೇವೆ. ಆದರೆ ಚುನಾವಣಾ ಆಯೋಗ ವೆರಿಫಿಕೇಷನ್‌ ಸಲುವಾಗಿ ಮನೆ ಭೇಟಿಯನ್ನು ಕಡ್ಡಾಯ ಮಾಡಿದೆ. ಇದು ಸಮುದಾಯದ ಅನೇಕ ಸದಸ್ಯರ ಪಾಲಿಗೆ ಸಮಸ್ಯೆಯನ್ನು ತಂದಿಟ್ಟಿತು. ಈ ಸದಸ್ಯರಿಗೆ ಅಧಿಕಾರಿಗಳು ಮನೆಗೆ ಬಂದು ಲಿಂಗ ಪರಿಶೀಲನೆ ನಡೆಸುವುದು ಇಷ್ಟವಿರಲಿಲ್ಲ” ಎಂದು ಅವರು ಹೇಳುತ್ತಾರೆ.

ಆದರೆ ಸಲ್ಮಾ ತಾನು ಮತದಾರರ ಗುರುತಿನ ಚೀಟಿ ಮಾಡಿಸುವಾಗ ಯಾವುದೇ ಸಮಸ್ಯೆ ಎದುರಿಸಿಲ್ಲ ಎನ್ನುತ್ತಾರೆ. “ನಾನು ನನ್ನ ಕುಟುಂಬ ಅಥವಾ ನನ್ನ ಲಿಂಗ ಗುರುತು ಗೊತ್ತಿಲ್ಲದವರ ಜೊತೆ ಬದುಕುತ್ತಿಲ್ಲ” ಎಂದು ಅವರು ಹೇಳಿದರು.

PHOTO • Jigyasa Mishra

ವಾರಣಾಸಿ ಕ್ಷೇತ್ರದ ಮತದಾರರಾದ ಸಲ್ಮಾ ಮತದಾನದ ದಿನದಂದು ಮತ ಚಲಾಯಿಸಲು ಹೋದ ಸಂದರ್ಭದಲ್ಲಿ ಬಂಗಾಲಿ ಟೋಲಾದ ಬಳಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ ಪುರುಷ ಮತ್ತು ಮಹಿಳೆಯರಿಗೆ ಎರಡು ಸಾಲುಗಳಿರುವುದನ್ನು ಕಂಡರು. ಸಣ್ಣ ವ್ಯಾಪಾರ ನಡೆಸುವ ಟ್ರಾನ್ಸ್ ಮಹಿಳೆಯಾದ ಸಲ್ಮಾ ಒಳಗೆ ಮತ ಚಲಾಯಿಸಿದರು. (ಬಲ) ಜನರು ನನ್ನನ್ನು ದಿಟ್ಟಿಸಿ ನೋಡುತ್ತಿದ್ದರು. ಆದರೆ ನಾನು ಆ ಕುರಿತು ತಲೆ ಕೆಡಿಸಿಕೊಳ್ಳಲಿಲ್ಲ ಎಂದು ಅವರು ಹೇಳುತ್ತಾರೆ

5ನೇ ತರಗತಿಯವರೆಗೆ ಶಾಲೆಗೆ ಹೋಗಿರುವ ಸಲ್ಮಾ ನಂತರ ಸಹಪಾಠಿಗಳು ಅವರ ನಡಿಗೆ ಹಾಗೂ ಮಾತನಾಡುವ ರೀತಿಯನ್ನು ಗೇಲಿ ಮಾಡತೊಡಗಿದ ಕಾರಣ ಶಾಲೆಯನ್ನು ತೊರೆದರು. ಪ್ರಸ್ತುತ ತನ್ನ ಅಣ್ಣನೊಂದಿಗೆ ಬದುಕುತ್ತಿರುವ ಸಲ್ಮಾ ಹೊಟ್ಟೆಪಾಡಿಗಾಗಿ ಬನಾರಸಿ ಸೀರೆಗಳ ವ್ಯಾಪಾರವನ್ನು ನಡೆಸುತ್ತಾರೆ. ಈ ಮೂಲಕ ಅವರು ತಿಂಗಳಿಗೆ ಸುಮಾರು 10,000 ರೂ.ಗಳನ್ನು ಸಂಪಾದಿಸುತ್ತಾರೆ. ಸಲ್ಮಾ ಸ್ಥಳೀಯ ಅಂಗಡಿಗಳಿಂದ ಸೀರೆಗಳನ್ನು ಖರೀದಿಸಿ ಇತರ ನಗರಗಳಲ್ಲಿನ ಗ್ರಾಹಕರಿಗೆ ಕಳುಹಿಸುತ್ತಾರೆ.

ಶಮಾ ಎನ್ನುವ ಹೆಸರಿನ ಟ್ರಾನ್ಸ್‌ ಮಹಿಳೆ ಕಳೆದ ಆರು ವರ್ಷಗಳಿಂದ ವಾರಣಾಸಿಯಲ್ಲಿ ಲೈಂಗಿಕ ಕಾರ್ಯಕರ್ತೆಯಾಗಿ ಜೀವನ ಸಾಗಿಸುತ್ತಿದ್ದಾರೆ. “ನಾನು ಬಲ್ಲಿಯಾ ಎನ್ನುವ ಊರಿಗೆ ಸೇರಿದವಳು. ಆದರೆ ಅಲ್ಲಿ ಲಿಂಗದ ಕಾರಣಕ್ಕಾಗಿ ಹಲವು ಸಮಸ್ಯೆಗಳು ಎದುರಾದವು” ಎಂದು ಅವರು ಹೇಳುತ್ತಾರೆ. “ಅಕ್ಕಪಕ್ಕದವರು ನನ್ನ ಸಲುವಾಗಿ ನನ್ನ ತಂದೆ ತಾಯಿಗೆ ಕಿರಿಕಿರಿ ಮಾಡುತ್ತಿದ್ದರು. ಇದರಿಂದ ಸಿಟ್ಟಾಗಿ ನನ್ನ ತಂದೆ ನಾನು ಸಹಜವಿಲ್ಲ ಎನ್ನುವ ಕಾರಣಕ್ಕಾಗಿ ನನಗೂ ನನ್ನ ತಾಯಿಗೂ ಬಯ್ಯುತ್ತಿದ್ದರು. ಲಿಂಗವಿಲ್ಲದ ನನ್ನಂತಹವಳನ್ನು ಹುಟ್ಟಿಸಿದ್ದಕ್ಕಾಗಿ ಅಪ್ಪ ಅಮ್ಮನಿಗೆ ಬಯ್ಯುತ್ತಿದ್ದರು. ಕೊನೆಗೆ ನಮ್ಮ ಊರಿಗೆ ಹತ್ತಿರವಿದ್ದ ವಾರಣಾಸಿ ನಗರವನ್ನು ಸೇರಿಕೊಂಡೆ.” ಮತದಾನದ ದಿನ ಅವರು ಬೇಗನೆ ಬೂತ್‌ ತಲುಪಿದ್ದರು. “ಜನಸಂದಣಿ ಮತ್ತು ಜನರ ಕಣ್ಣುಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ನಾನು ಹಾಗೆ ಮಾಡಿದ್ದೆ” ಎಂದು ಶಮಾ ಪರಿಗೆ ತಿಳಿಸಿದರು.

ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ ( ಹಕ್ಕುಗಳ ರಕ್ಷಣೆ ) ಕಾಯ್ದೆಯು ಟ್ರಾನ್ಸ್‌ ವ್ಯಕ್ತಿಗಳ ರಕ್ಷಣೆ, ಭದ್ರತೆ ಮತ್ತು ಪುನರ್ವಸತಿಗಾಗಿ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ಅಂತಹ ವ್ಯಕ್ತಿಗಳ ಅಗತ್ಯಗಳನ್ನು ಪೂರೈಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸುತ್ತದೆ. ಆದರೆ ನಗರದಲ್ಲಿ ಟ್ರಾನ್ಸ್‌ ವ್ಯಕ್ತಿಗಳಿಗೆ ಯಾವುದೇ ರಕ್ಷಣೆ ಇಲ್ಲ. ತಾನು ಪ್ರತಿ ತಿಂಗಳು ಐದರಿಂದ ಏಳು ಕಿರುಕುಳ ಪ್ರಕರಣಗಳನ್ನು ನಿಭಾಯಿಸುವುದಾಗಿ ನೀತಿ ಹೇಳುತ್ತಾರೆ.

ಕಿರುಕುಳವನ್ನು ಎದುರಿಸಿದ ಸಲ್ಮಾ ಹಾಗೂ ತಾನು ಕೆಲಸ ಮಾಡುತ್ತಿದ್ದ ಬ್ಯೂಟಿ ಪಾರ್ಲರಿನಲ್ಲಿ ಉದ್ಯೋಗದಾತರಿಂದ ಲೈಂಗಿಕ ಕಿರುಕುಳಕ್ಕೊಳಗಾದ ಅರ್ಚನಾ ಅವರಂತಹ ಟ್ರಾನ್ಸ್ ಮಹಿಳೆಯರು ಪರಿಯೊಂದಿಗೆ ತಮ್ಮ ದೌರ್ಜನ್ಯದ ಅನುಭವಗಳನ್ನು ಹಂಚಿಕೊಂಡರು. ಅರ್ಚನಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೋದರು, ಅಲ್ಲಿ ಅಧಿಕಾರಿಗಳು ಅವರ ಮಾತನ್ನು ನಂಬಲಿಲ್ಲ. ಪೊಲೀಸರು ದೂರು ದಾಖಲಿಸಿಕೊಳ್ಳುವ ಬದಲು ಆಕೆಗೆ ಬೆದರಿಕೆ ಹಾಕಿ ಅವಮಾನಿಸಿದರು. ಆದರೆ ಅವರ ನಡವಳಿಕೆ ಅರ್ಚನಾ ಅವರಿಗೆ ಆಘಾತವನ್ನೇನೂ ನೀಡಲಿಲ್ಲ. 2024ರಲ್ಲಿ ಐಐಟಿ-ಬಿಎಚ್‌ಯು ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವನ್ನು ಉಲ್ಲೇಖಿಸಿದ ಅವರು, "ಮಹಿಳೆಗೇ ಸುರಕ್ಷತೆ ಇಲ್ಲದಿರುವಾಗ, ಟ್ರಾನ್ಸ್ ಮಹಿಳೆ ಹೇಗೆ ಸುರಕ್ಷಿತವಾಗಿರಲು ಸಾಧ್ಯ?" ಎಂದು ಕೇಳುತ್ತಾರೆ.

PHOTO • Jigyasa Mishra
PHOTO • Abhishek K. Sharma

ಎಡ: ಸರ್ಕಾರಿ ಉದ್ಯೋಗಗಳಲ್ಲಿ ಟ್ರಾನ್ಸ್ ವ್ಯಕ್ತಿಗಳಿಗೆ ಮೀಸಲಾತಿ ಇರಬೇಕು ಎಂದು ಸಲ್ಮಾ ಹೇಳುತ್ತಾರೆ. ಬಲ: ಟ್ರಾನ್ಸ್‌ ಜೆಂಡರ್‌ ಸಮುದಾಯವು ತಮ್ಮ ಬೇಡಿಕೆಗಳನ್ನು ಘೋಷಿಸಲು ಚುನಾವಣೆಗೆ ಮುಂಚಿತವಾಗಿ ವಾರಣಾಸಿಯಲ್ಲಿ ಸಾರ್ವಜನಿಕ ಮೆರವಣಿಗೆಯನ್ನು ನಡೆಸಿತು. ಸಲ್ಮಾ ಎಡಭಾಗದಲ್ಲಿದ್ದಾರೆ (ಕಂದು ಬಣ್ಣದ ಸಲ್ವಾರ್ ಕಮೀಜ್)

*****

ಪ್ರತಿಷ್ಟಿತ ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಅಜಯ್ ರಾಯ್ ವಿರುದ್ಧ 1.5 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

"ಪ್ರಧಾನಿ ನಮ್ಮ ನಗರದ ಸಂಸತ್ ಸದಸ್ಯರಾಗಿ ಅಧಿಕಾರ ವಹಿಸಿಕೊಂಡು ಹತ್ತು ವರ್ಷಗಳಾಗಿವೆ, ಆದರೆ ಅವರು ಎಂದಾದರೂ ನಮ್ಮ ಬಗ್ಗೆ ಯೋಚಿಸಿದ್ದಾರೆಯೇ? ಎಂದು ಸಲ್ಮಾ ಕೇಳುತ್ತಾರೆ. ಈಗ, ಅವರು ಮುಂದಿನ ದಿನಗಳ ಬಗ್ಗೆ ಚಿಂತಿತರಾಗಿದ್ದಾರೆ. "ಮುಂದೆ ನಿರಾಶೆ ಕಾದಿರುವಂತೆ ಕಾಣುತ್ತಿದೆ. ಆದರೆ ನಾವು ಈ ಸರ್ಕಾರದ ಮೇಲೆ ಕಣ್ಣಿಟ್ಟಿರುತ್ತೇವೆ" ಎಂದು ಅವರು ಹೇಳುತ್ತಾರೆ.

ಶಮಾ ಮತ್ತು ಅರ್ಚನಾ ಕೂಡಾ ಈ ಮಾತನ್ನು ಒಪ್ಪುತ್ತಾರೆ. ಈ ಇಬ್ಬರು ಟ್ರಾನ್ಸ್ ಮಹಿಳೆಯರು 2019ರಲ್ಲಿ ನರೇಂದ್ರ ಮೋದಿಗೆ ಮತ ಹಾಕಿದ್ದರು, ಆದರೆ 2024ರಲ್ಲಿ ತಮ್ಮ ಆಯ್ಕೆಯನ್ನು ಬದಲಾಯಿಸಿದರು. ಈ ಬಾರಿ, "ನಾನು ಬದಲಾವಣೆಗಾಗಿ ಮತ ಚಲಾಯಿಸಿದ್ದೇನೆ" ಎಂದು ಶಮಾ ಹೇಳುತ್ತಾರೆ.

ಲೈಂಗಿಕ ವೃತ್ತಿಯ ಮೂಲಕ ಬದುಕು ಸಾಗಿಸುತ್ತಿರುವ 25 ವರ್ಷದ ಪದವಿಪೂರ್ವ ವಿದ್ಯಾರ್ಥಿಯಾದ ಅರ್ಚನಾ, “ನಾನು ಮೋದಿಯವರ ಭಾಷಣಗಳಿಂದ ಪ್ರಭಾವಿತಳಾಗಿದ್ದೆ. ಆದರೆ ಅವರು ಟೆಲಿಪ್ರಾಂಪ್ಟರ್‌ ನೋಡಿಕೊಂಡು ಭಾಷಣ ಓದುತ್ತಿದ್ದರು ಎನ್ನುವುದು ನನಗೆ ನಂತರ ತಿಳಿಯಿತು.”

ಕಾನೂನು ಬದಲಾವಣೆಗಳು ಮತ್ತು ಕಾಗದದ ಮೇಲೆ ಖಾತರಿಪಡಿಸಲಾಗಿರುವ ಹಕ್ಕುಗಳ ವಿಷಯದಲ್ಲೂ ತಮಗೆ ನಿರಾಶೆಯೇ ಕಾದಿದೆ ಎನ್ನುವುದು ಅವರ ಅಭಿಪ್ರಾಯ.

PHOTO • Jigyasa Mishra

ಸಲ್ಮಾ ಮತ್ತು ಪರಿಯೊಂದಿಗೆ ಮಾತನಾಡಿದ ಇತರ ಟ್ರಾನ್ಸ್ ಮಹಿಳೆಯರು ಸರ್ಕಾರದಿಂದ ನಿರಾಶೆಗೊಂಡಿರುವುದಾಗಿಯೂ ಮತ್ತು ಭವಿಷ್ಯದ ಬಗ್ಗೆ ಚಿಂತಿತರಾಗಿರುವುದಾಗಿಯೂ ತಿಳಿಸಿದರು. “ಮುಂದೆ ಕತ್ತಲೆ ತುಂಬಿದೆ. ಆದರೆ ನಾವು ಈ ಸರ್ಕಾರದ ಮೇಲೆ ಕಣ್ಣಿಟ್ಟಿರುತ್ತೇವೆʼ ಎಂದು ಸಲ್ಮಾ ಹೇಳುತ್ತಾರೆ

“ಸರ್ಕಾರದ ಇತರ ಮಾರ್ಗಸೂಚಿಗಳಲ್ಲಿ ಟ್ರಾನ್ಸ್‌ ಜೆಂಡರ್‌ ವ್ಯಕ್ತಿಗಳನ್ನು ತೃತೀಯ ಲಿಂಗಿ ಎಂದು ಗುರುತಿಸಬೇಕು” ಎಂದ ಸುಪ್ರೀಂ ಕೋರ್ಟಿನ 2014ರ ತೀರ್ಪಿನ ಕುರಿತು ಉಲ್ಲೇಖಿಸುತ್ತಾ, “ಹತ್ತು ವರ್ಷಗಳ ಹಿಂದೆ ಅವರು ನಮ್ಮನ್ನು ಕೇವಲ ತೃತೀಯ ಲಿಂಗವೆಂದು ಕರೆದು ಅದನ್ನೇ ಐತಿಹಾಸಿಕ ತೀರ್ಪು ಎಂದು ಹೇಳಿಕೊಂಡರು. ಆದರೆ ಅದೆಲ್ಲವೂ ಬರೀ ಕಾಗದದ ಮೇಲೇ ಉಳಿದು ಹೋಗಿದೆ” ಎಂದು ಶಮಾ ಹೇಳುತ್ತಾರೆ.  ಈ ಇತರ ಮಾರ್ಗಸೂಚಿಗಳಲ್ಲಿ ಶಿಕ್ಷಣ ಸಂಸ್ಥೆಗಳು ಮತ್ತು ಸಾರ್ವಜನಿಕ ಉದ್ಯೋಗದಲ್ಲಿ ಮೀಸಲಾತಿ ಮತ್ತು ಸಮುದಾಯಕ್ಕೆ ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ರೂಪಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು ಸೇರಿವೆ.

2019ರಲ್ಲಿ, ಕೇಂದ್ರ ಸರ್ಕಾರವು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ ( ಹಕ್ಕುಗಳ ರಕ್ಷಣೆ V) ಕಾಯ್ದೆಯನ್ನು ಅಂಗೀಕರಿಸಿತು, ಇದು ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ತಾರತಮ್ಯವಿಲ್ಲದಿರುವಿಕೆ ಮತ್ತು ಬಾಧ್ಯತೆಯನ್ನು ಖಚಿತಪಡಿಸುತ್ತದೆ; ಆದರೆ ಇದು ಶಿಕ್ಷಣ ಸಂಸ್ಥೆಗಳು ಮತ್ತು ಸಾರ್ವಜನಿಕ ಉದ್ಯೋಗಗಳಿಗೆ ಸೇರಲು ಯಾವುದೇ ಮೀಸಲಾತಿಯನ್ನು ಒದಗಿಸಲಿಲ್ಲ.

"ಜವಾನರ ಕೆಲಸದಿಂದ ಹಿಡಿದು ಅಧಿಕಾರಿಯ ಹುದ್ದೆಯವರೆಗೆ ಪ್ರತಿಯೊಂದು ಕೆಲಸಕ್ಕೂ ಸರ್ಕಾರ ನಮಗೆ ಮೀಸಲಾತಿ ನೀಡಬೇಕೆನ್ನುವುದು ನಮ್ಮ ಬೇಡಿಕೆ" ಎಂದು ಸಲ್ಮಾ ಹೇಳುತ್ತಾರೆ.

(ನೀತಿ ಮತ್ತು ಸಲ್ಮಾ ಅವರ ಹೆಸರುಗಳನ್ನು ಹೊರತುಪಡಿಸಿ ಈ ವರದಿಯಲ್ಲಿನ ಎಲ್ಲಾ ಹೆಸರುಗಳನ್ನು ಅವರ ವಿನಂತಿಯ ಮೇರೆಗೆ ಬದಲಾಯಿಸಲಾಗಿದೆ)

ಅನುವಾದ: ಶಂಕರ. ಎನ್. ಕೆಂಚನೂರು

Jigyasa Mishra

جِگیاسا مشرا اترپردیش کے چترکوٹ میں مقیم ایک آزاد صحافی ہیں۔ وہ بنیادی طور سے دیہی امور، فن و ثقافت پر مبنی رپورٹنگ کرتی ہیں۔

کے ذریعہ دیگر اسٹوریز Jigyasa Mishra
Illustration : Jigyasa Mishra

جِگیاسا مشرا اترپردیش کے چترکوٹ میں مقیم ایک آزاد صحافی ہیں۔ وہ بنیادی طور سے دیہی امور، فن و ثقافت پر مبنی رپورٹنگ کرتی ہیں۔

کے ذریعہ دیگر اسٹوریز Jigyasa Mishra
Photographs : Abhishek K. Sharma

Abhishek K. Sharma is a Varanasi-based photo and video journalist. He has worked with several national and international media outlets as a freelancer, contributing stories on social and environmental issues.

کے ذریعہ دیگر اسٹوریز Abhishek K. Sharma
Editor : Sarbajaya Bhattacharya

سربجیہ بھٹاچاریہ، پاری کی سینئر اسسٹنٹ ایڈیٹر ہیں۔ وہ ایک تجربہ کار بنگالی مترجم ہیں۔ وہ کولکاتا میں رہتی ہیں اور شہر کی تاریخ اور سیاحتی ادب میں دلچسپی رکھتی ہیں۔

کے ذریعہ دیگر اسٹوریز Sarbajaya Bhattacharya
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru