ತರುಣನೊಬ್ಬ ತೆರೆಯ ಹಿಂದೆ ದೀಪ ಆರಿಹೋಗದಂತೆ ಜಾಗ್ರತೆಯಿಂದ ಕೈಯನ್ನು ಕುಣಿಸುತ್ತಿದ್ದಾನೆ. ಸುಮಾರು ಒಂದು ಗಂಟೆಯ ಪ್ರದರ್ಶನದಲ್ಲಿ ಅನೇಕ ಬಾರಿ ಕೈಗಳನ್ನು ಕುಣಿಸುವಾಗ ಸಾಧನಕ್ಕೆ ಯಾವುದೇ ಹಾನಿಯಾಗದಂತೆ, ತನ್ನ ಜೊತೆಗಾರರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸುತ್ತಾನೆ.

ಇವೆರೆಲ್ಲರೂ ಪ್ರೇಕ್ಷಕರ ಕಣ್ಣಿಗೆ ಬೀಳದೆ ಅಗೋಚರವಾಗಿರುವ ತೋಲ್ಪಾವಕೂತ್‌ ಗೊಂಬೆಯಾಡಿಸುವ ಕಲಾವಿದರು.

ಬಿಳಿಬಣ್ಣದ ಹತ್ತಿ ಬಟ್ಟೆಯ ಪರದೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಈ ತೊಗಲುಬೊಂಬೆಗಳನ್ನು ಕೈಯಲ್ಲಿ ಹಿಡಿದುಕೊಂಡು ಬೊಂಬೆಯಾಡಿಸುವವರು ಚಲಿಸುತ್ತಾರೆ. ಅವರ ಪಾದಗಳ ಬಳಿ 50-60 ಬೊಂಬೆಗಳು ತಮ್ಮ ಸರದಿಗಾಗಿ ಸಾಲಾಗಿ ಕಾಯುತ್ತಿರುತ್ತವೆ. ಕಥೆಯನ್ನು ಸ್ಪೀಕರ್‌ಗಳ ಮೂಲಕ ಹೇಳುತ್ತಾ ನೆರಳಿನ ಮೂಲಕ ಪ್ರದರ್ಶಿಸಲಾಗುತ್ತದೆ.

ಈ ಕಲೆಯ ವೈಶಿಷ್ಟ್ಯವೆಂದರೆ ನಿಜವಾಗಿ ಪ್ರದರ್ಶನ ಮಾಡುವ ಕಲಾವಿದರು ಅಗೋಚರವಾಗಿರುವುದು. ಬೊಂಬೆಯಾಟದ ಕಲಾವಿದ ರಾಮಚಂದ್ರ ಪುಲವರ್‌ ಅವರಿಗೆ 2021ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ಸಿಕ್ಕಿದಾಗ, ಅದೊಂದು ಸಂಭ್ರಮವಾಗಿತ್ತು ಮತ್ತು ಕಲೆಗೆ ಹೆಚ್ಚಿನ ಪ್ರಚಾರ ಸಿಕ್ಕಿತು. ತೋಲ್ಪಾವಕೂತ್‌ ಕಲಾವಿದ ರಾಮಚಂದ್ರ ಅವರು ತಮ್ಮ ಭಾಷಣದಲ್ಲಿ, "ಈ ಮನ್ನಣೆ ... ಇದು ಬೊಂಬೆಯಾಟದ ರಂಗಭೂಮಿಯನ್ನು ಉಳಿಸಲು ಇಡೀ ತಂಡ ಅನೇಕ ವರ್ಷಗಳಿಂದ ಮಾಡಿರುವ ಸಾಮೂಹಿಕ ಪ್ರಯತ್ನಕ್ಕೆ ಸಿಕ್ಕಿದ ಮನ್ನಣೆ," ಎಂದು ಹೇಳಿದರು.

ಪುಲವರ್ ಮತ್ತು ಅವರ ತಂಡದ ಪರಿಶ್ರಮಕ್ಕೆ ಬೆಲೆ ಸಿಕ್ಕಿದೆ. ಆದರೆ ವಿಮರ್ಶಕರು ಹಾಗೂ ಭಕ್ತರು ಕಲೆಯನ್ನು ಇವರು ವ್ಯಾಪಾರಕ್ಕಾಗಿ ಬಳಸುತ್ತಿದ್ದಾರೆ ಎಂದು ಟೀಕಿಸುತ್ತಾರೆ. ಆದರೆ ರಾಮಚಂದ್ರ ಆವರು ಈ ಟೀಕೆಗಳಿಗೆ ತಲೆಕೆಡಿಸಿಕೊಂಡಿಲ್ಲ. “ಹೊಟ್ಟೆ ತುಂಬಿಸಿಕೊಳ್ಳಲು ಮತ್ತು ಬದುಕಲು ಇದೊಂದು ವ್ಯಾಪಾರವೇ ಆಗಿದೆ,” ಎಂದು ಅವರು ಹೇಳುತ್ತಾರೆ. “ನಟರಿಗೆ ಹಾಗೂ ನರ್ತಕರಿಗೆ ನಾವು ಹಣ ಕೊಡುತ್ತೇವೆ ಎಂದಾದರೆ, ಗೊಂಬೆಯಾಡಿಸುವ ಕಲಾವಿದರಿಗೆ ಯಾಕೆ ಕೊಡಬಾರದು?” ಎಂದು ಅವರು ಪ್ರಶ್ನಿಸುತ್ತಾರೆ.

PHOTO • Courtesy: Rahul Pulavar
PHOTO • Sangeeth Sankar

ಎಡ: ಭಾರತೀಯ ಬಾಹ್ಯಾಕಾಶ ಮಿಷನ್‌ ಕುರಿತಾದ ತೋಲ್ಪಾವಕೂತ್‌ ಪ್ರದರ್ಶನ. ಇದನ್ನು ರಾಮಚಂದ್ರ ಅವರ ತಂಡ ಶಾಲೆಯೊಂದರ ವಾರ್ಷಿಕೋತ್ಸವದಲ್ಲಿ ಮಾಡಿದರು. ಬಲ: ನೆರಳಿನ ಬೊಂಬೆಯಾಟದಲ್ಲಿ ಗಾಂಧಿಯ ಕಥೆ

ಸಾಂಪ್ರದಾಯಿಕ ತೋಲ್ಪಾವಕೂತ್‌ ಪ್ರದರ್ಶನವನ್ನು ಕೇರಳದ ದೇವಾಲಯಗಳ ಆವರಣದಲ್ಲಿ ಸುಗ್ಗಿ ತಿಂಗಳಲ್ಲಿ ಮಾಡುತ್ತಿದ್ದರು. ಕಳೆದ ಇಪ್ಪತ್ತು ವರ್ಷಗಳಿಂದ ಪಾಲಕ್ಕಾಡು ಜಿಲ್ಲೆಯ 63 ವರ್ಷ ಪ್ರಾಯದ ರಾಮಚಂದ್ರ ಅವರ ಕವಲಪ್ಪಾರ ಬೊಂಬೆಯಾಟದ ಮೇಳ ಆಧುನಿಕ ಕಾಲಘಟ್ಟದಲ್ಲಿ ತೋಲ್ಪಾವಕೂತ್‌ ಪ್ರದರ್ಶನವನ್ನು ಮುಂದುವರಿಸಲು ಎಲ್ಲಾ ಶ್ರಮವನ್ನು ಹಾಕುತ್ತಿದೆ. ಪ್ರಸ್ತುತ ನೆರಳು ಬೊಂಬೆಯಾಟದ ಈ ಕಲಾಪ್ರಕಾರದ ಸ್ವರೂಪದಲ್ಲಿ ಅನೇಕ ಬದಲಾವಣೆಗಳು ಹಾಗೂ ವಿನೂತನ ಪ್ರಯೋಗಗಳು ನಡೆದಿವೆ. ಉತ್ಸವಗಳ ಸಂದರ್ಭದಲ್ಲಿ ಬಹುತೇಕ ಸಾಂಪ್ರದಾಯಿಕ ತೋಲ್ಪಾವಕೂತ್‌ ಪ್ರದರ್ಶನಗಳನ್ನು ಸಾರ್ವಜನಿಕರ ವೀಕ್ಷಣೆಗಾಗಿ ನಡೆಸಲಾಗುತ್ತದೆ.

ರಾಮಚಂದ್ರ ಅವರ ತಂದೆ ಕೃಷ್ಣನ್‌ಕುಟ್ಟಿ ಪುಲವರ್ ಅವರು ತೋಲ್ಪಾವಕೂತನ್ನು  ಹೊರಜಗತ್ತಿಗೆ ಪರಿಚಯಿಸುವ ನಿರ್ಧಾರವನ್ನು ತೆಗೆದುಕೊಂಡರು. ರಾಮಾಯಣದಂತಹ ಹಿಂದೂ ಮಹಾಕಾವ್ಯಗಳ ಅಚೆಗೂ ಇರುವ ಕಥನಗಳನ್ನು ಇದರಲ್ಲಿ ಪ್ರರ್ಶಿಸಲಾಗುತ್ತದೆ. ಕೇರಳದ ಸಾಂಪ್ರದಾಯಿಕ ಬೊಂಬೆಯಾಟ ಶೈಲಿಯಲ್ಲಿ ಮಹಾತ್ಮ ಗಾಂಧಿಯವರ ಕಥೆಯನ್ನು ಮೊದಲ ಬಾರಿಗೆ ಎಡಪ್ಪಲ್‌ನಲ್ಲಿ ಅಕ್ಟೋಬರ್ 2004 ರಂದು ಪ್ರದರ್ಶಿಸಲಾಯಿತು. ಅಂದಿನಿಂದ ಇದು 220 ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ.

ಈ ಕಥಾ ಪ್ರಸಂಗವನ್ನು ಜನರು ಅಮೋಘ ರೀತಿಯಲ್ಲಿ ಮೆಚ್ಚಿಕೊಂಡಾಗ, ಕವಲಪ್ಪಾರ ತಂಡಕ್ಕೆ ಹೊಸ ದಾರಿಗಳು ಸಿಕ್ಕವು. ಅವರು ಚಿತ್ರಕಥೆಗಳನ್ನು ಅಭಿವೃದ್ಧಿಪಡಿಸಲು, ಬೊಂಬೆಗಳನ್ನು ತಯಾರಿಸಲು ಅವುಗಳ ರೇಖಾಚಿತ್ರಗಳನ್ನು ವಿನ್ಯಾಸಗೊಳಿಸಲು, ಪ್ರದರ್ಶನ ತಂತ್ರಗಳನ್ನು ಕರಗತ ಮಾಡಿಕೊಳ್ಳಲು, ಕಥಾ ನಿರೂಪಣೆ, ಸ್ಟುಡಿಯೋದಲ್ಲಿ ಹಾಡುಗಳನ್ನು ಸಂಯೋಜಿಸಿ ರೆಕಾರ್ಡಿಂಗ್ ಮಾಡಲು ಪ್ರಾರಂಭಿಸಿದರು. ಏಸುಕ್ರಿಸ್ತನ ಜನ್ಮವೃತ್ತಾಂತ, ಮಹಾಬಲಿಯ ಕಥೆ, ಪಂಚತಂತ್ರ, ಹೀಗೆ ಬೇರೆ ಬೇರೆ ಕಥನಗಳನ್ನು ತೋಲ್ಪಾವಕೂತ್‌ನಲ್ಲಿ ತಂಡ ಅಳವಡಿಸಿಕೊಂಡಿದೆ.

ಬುದ್ಧನ ಆಧ್ಯಾತ್ಮಿಕ ಪ್ರಭಾವವನ್ನು ತೋರಿಸುವ ಕುಮಾರನ್‌ಆಶನ್‌ ಅವರ ‘ಚಂಡಾಲಭಿಕ್ಷುಕಿ’ಯಂತಹ ಕಾವ್ಯದ ಕಥನಗಳನ್ನು ಪ್ರದರ್ಶನದಲ್ಲಿ ಅಳವಡಿಸುವ ಮೂಲಕ ಕವಲಪ್ಪಾರ ಗೊಂಬೆಯಾಟಗಾರರು ಸಾಮಾಜಿಕ ಜಾಗೃತಿಯನ್ನುಮೂಡಿಸಿದರು. 2000 ರ ದಶಕದಿಂದ ಏಡ್ಸ್ ಬಗ್ಗೆ ಅರಿವು ಮೂಡಿಸುವುದು, ಅರಣ್ಯ ಸಂರಕ್ಷಣೆಯಂತ ಇದು ಪ್ರಮುಖ ವಿಚಾರಗಳ ಬಗ್ಗೆ ಜಾಗೃತಿಯನ್ನು ಮೂಡಿಸಲು  ತೋಲ್ಪಾವಕೂತ್‌ ಒಂದು ವೇದಿಕೆಯಾಗಿದೆ. ಚುನಾವಣಾ ಪ್ರಚಾರಗಳಲ್ಲೂ ಇದು ಬಳಕೆಯಾಗುತ್ತಿದೆ. ಗೊಂಬೆಯಾಟಗಾರರು ಇತರ ಕಲಾ ಪ್ರಕಾರಗಳು ಮತ್ತು ಕಲಾವಿದರ ಜೊತೆಗೂಡಿ ಫ್ಯೂಷನ್‌ ಪ್ರದರ್ಶನಗಳನ್ನೂ ಮಾಡುತ್ತಾರೆ.

ತೋಲ್ಪಾವಕೂತಿನ ಹೊಸತನ, ನಿರಂತರ ಪರಿಶ್ರಮ ಮತ್ತು ಚೈತನ್ಯದ ಕುರಿತು ಒಂದು ಸಾಕ್ಷ್ಯಚಿತ್ರ.

ವೀಕ್ಷಿಸಿ: ಕಾಲಚಕ್ರದಲ್ಲಿ ಬೆಳೆದು ಬಂದ ತೋಲ್ಪಾವಕೂತ್‌ ಬೊಂಬೆಯಾಟ

ಈ ವರದಿಯನ್ನು ಮೃಣಾಲಿನಿ ಮುಖರ್ಜಿ ಫೌಂಡೇಶನ್ (ಎಂಎಂಫ್)  ಫೆಲೋಶಿಪ್‌ನ ಅಡಿಯಲ್ಲಿ ತಯಾರಿಸಲಾಗಿದೆ.

ಅನುವಾದ: ಚರಣ್‌ ಐವರ್ನಾಡು

Sangeeth Sankar

سنگیت شنکر، آئی ڈی سی اسکول آف ڈیزائن کے ریسرچ اسکالر ہیں۔ نسل نگاری سے متعلق اپنی تحقیق کے تحت وہ کیرالہ میں سایہ کٹھ پتلی کی تبدیل ہوتی روایت کی چھان بین کر رہے ہیں۔ سنگیت کو ۲۰۲۲ میں ایم ایم ایف-پاری فیلوشپ ملی تھی۔

کے ذریعہ دیگر اسٹوریز Sangeeth Sankar
Text Editor : Archana Shukla

ارچنا شکلا، پیپلز آرکائیو آف رورل انڈیا کی کانٹینٹ ایڈیٹر ہیں۔ وہ پبلشنگ ٹیم کے ساتھ کام کرتی ہیں۔

کے ذریعہ دیگر اسٹوریز Archana Shukla
Translator : Charan Aivarnad

Charan Aivarnad is a poet and a writer. He can be reached at: [email protected]

کے ذریعہ دیگر اسٹوریز Charan Aivarnad