ಅಂಧೇರಿ ನಿಲ್ದಾಣದಲ್ಲಿ ಹತ್ತಿಳಿಯುವ ಜನರ ಗದ್ದಲದ ನಡುವೆ ಹಳಿಗಳ ಮೇಲಿನ ರೈಲು ಸ್ತಬ್ಧವಾಗಿ ನಿಂತಿತ್ತು. ರೈಲಿನ ಒಳಗೆ ಬಂದ ಜನರು ಸೀಟಿನ ಹಿಡಿ, ಮೇಲಿನ ಕಂಬಿ ಹೀಗೆ ಕೈಗೆ ಸಿಕ್ಕಿದ್ದನ್ನು ಆಧಾರವಾಗಿ ಹಿಡಿದು ನಿಂತಿದ್ದರು. ಇನ್ನೂ ಕೆಲವರು ಸೀಟಿಗಾಗಿ ಚೌಕಾಶಿ ನಡೆಸುತ್ತಿದ್ದರೆ ಉಳಿದವರು ಖಾಲಿ ಸೀಟು ಹುಡುಕುತ್ತಾ ಈಗಾಗಲೇ ಕುಳಿತವರನ್ನು ಪಕ್ಕಕ್ಕೆ ಸರಿಸಿ ಸೀಟು ಮಾಡಿಕೊಳ್ಳುವುದರಲ್ಲಿ ನಿರತರಾಗಿದ್ದರು.

ಆ ಜಂಗುಳಿಯ ನಡುವೆ 31 ವರ್ಷದ ಕಿಶನ್ ಜೋಗಿ ಮತ್ತು ಸಮುದ್ರ ನೀಲಿ ಬಣ್ಣದ ರಾಜಸ್ಥಾನಿ ಲಂಗ ಮತ್ತು ರವಿಕೆ ತೊಟ್ಟಿದ್ದ ಅವರ ಹತ್ತು ವರ್ಷದ ಮಗಳು ಭಾರತಿ ಕೂಡಾ ಅದೇ ರೈಲಿನಲ್ಲಿ ಜಾಗ ಗಿಟ್ಟಿಸಿಕೊಂಡರು. ಆಗ ಸಂಜೆ ಏಳು ಗಂಟೆಯಾಗಿತ್ತು. ಮುಂಬಯಿ ವೆಸ್ಟರ್ನ್ ಸಬರ್ಬ್ ಲೈನ್ ರೈಲು ಏರಿದ್ದ ಅವರಿಗೆ ಇದು ಈ ದಿನದ ಐದನೇ ರೈಲಾಗಿತ್ತು.

ರೈಲು ವೇಗವನ್ನು ಪಡೆಯುತ್ತಿದ್ದಂತೆ ರೈಲಿನೊಳಗೆ ಜನರು ಒಂದು ಹಂತಕ್ಕೆ ಶಾಂತರಾಗುತ್ತಿರುವಂತೆ ಕಂಡುಬಂದಾಗ ಕಿಶನ್ ಅವರ ಸಾರಂಗಿಯ ಮಾಧುರ್ಯ ರೈಲಿನ ಬೋಗಿಗಳನ್ನು ತುಂಬತೊಡಗಿತು.

“ತೇರಿ ಆಂಖೇ ಭೂಲ್ ಭುಲಯ್ಯಾ… ಬಾತೇಂ ಹೈ ಭೂಲ್ ಭುಲಯ್ಯಾ…”

ಅವರ ಕೈಯಲ್ಲಿದ್ದ ಕಮಾನಿನಂತಹ ಉಪಕರಣವನ್ನು ಅವರು ಚಕಚಕನೆ ಸಾರಂಗಿಯ ತಂತಿಗಳ ಮೇಲಾಡಿಸುತ್ತಿದ್ದರು. ಅದು ಮಧುರ ಸ್ವರವನ್ನು ಏರಿಳಿತಗಳನ್ನು ಅನುಸರಿಸಿ ಹೊರಡಿಸುತ್ತಿತ್ತು. ಸಾರಂಗಿಯ ಇನ್ನೊಂದು ತುದಿ ಅವರ ಎದೆ ಮತ್ತು ಎಡ ಹೆಗಲಿನ ಬಳಿ ವಿರಮಿಸಿತ್ತು. ಅವರು ಸಾರಂಗಿಯಿಂದ ಹೊರಡುತ್ತಿದ್ದ 2022ರ ಭೂಲ್ ಭುಲಯ್ಯಾ ಸಿನೆಮಾ ಹಾಡು ಇನ್ನಷ್ಟು ತೀಕ್ಷ್ಣವಾಗಿ ಜನರನ್ನು ಬೇಟೆಯಾಡುವಂತಿತ್ತು.

ರೈಲಿನಲ್ಲಿದ್ದ ಕೆಲವು ಪ್ರಯಾಣಿಕರು ಅಲ್ಲಿನ ಗದ್ದಲದಿಂದ ಹೊರಬಂದು ಕೆಲವು ಕ್ಷಣ ಮಧುರ ಸಂಗೀತದಲ್ಲಿ ಮನಸ್ಸನ್ನು ತಲ್ಲೀನಗೊಳಿಸಿದರು. ಇನ್ನೂ ಕೆಲವರು ತಮ್ಮ ಫೋನ್ ಹೊರತೆಗೆದು ರೆಕಾರ್ಡ್ ಮಾಡತೊಡಗಿದರು. ಇನ್ನೂ ಕೆಲವರು ಸುಮ್ಮನೆ ನಗುತ್ತಿದ್ದರು. ಸ್ವಲ್ಪ ಹೊತ್ತಿನಲ್ಲೇ ಪುಟ್ಟ ಜ್ಯೋತಿ ಹಣ ಬೇಡಲು ಕಂಪಾರ್ಟ್‌ಮೆಂಟ್ ಒಳಗೆ ಓಡಾಡೊಡಗಿದಂತೆ ಜನರು ತಮ್ಮ ಇಯರ್ ಫೋನನ್ನು ಕಿವಿಗೆ ಸಿಕ್ಕಿಸಿಕೊಂಡು ಇನ್ನೆಲ್ಲೋ ನೋಡತೊಡಗಿದರು.

'ನನ್ನಪ್ಪ ಈ ಸಾರಂಗಿಯನ್ನು ಕೈಯಲ್ಲಿಟ್ಟು ಹೋದರು. ನಾನೂ ಶಾಲೆಗೆ ಹೋಗುವ ಕುರಿತು ಯೋಚಿಸದೆ ಸಾರಂಗಿ ನುಡಿಸುತ್ತಾ ಉಳಿದುಬಿಟ್ಟೆʼ

“ಮೊದಲೆಲ್ಲ ಜನರು ನನ್ನತ್ತ ನೋಡುತ್ತಿದ್ದರು, ಸಾರಂಗಿ ನುಡಿಸಲು ಸ್ಥಳ ನೀಡುತ್ತಿದ್ದರು” ಎಂದು ನೋವಿನಿಂದ ನುಡಿಯುತ್ತಾರೆ ಕಿಶನ್.‌ ಸುಮಾರು ಹತ್ತು ಹದಿನೈದು ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ ಎನ್ನುತ್ತಾರೆ ಅವರು. “ಮೊದಲು ನನ್ನ ಕಲೆಗೊಂದು ಮೌಲ್ಯವಿತ್ತು. ಆದರೆ ಈಗ ಜನರು ತಮ್ಮ ಫೋನ್‌ ನೋಡುತ್ತಾ ಕುಳಿತುಬಿಡುತ್ತಾರೆ. ಇಯರ್‌ ಫೋನ್‌ ಹಾಕಿಕೊಂಡು ಹಾಡು ಕೇಳುವುದೇ ಈಗ ಅವರಿಗೆ ಮನರಂಜನೆ, ಅವರಿಗೀಗ ನನ್ನ ಸಂಗೀತದಲ್ಲಿ ಯಾವ ಆಸಕ್ತಿಯೂ ಉಳಿದಿಲ್ಲ” ಎನ್ನುತ್ತಾ ಇನ್ನೊಂದು ಹಾಡನ್ನು ನುಡಿಸುವ ಮೊದಲು ಸಣ್ಣದೊಂದು ವಿರಾಮ ಪಡೆದರು.

“ಜಾನಪದ ಸಂಗೀತ, ಭಜನೆ, ರಾಜಸ್ಥಾನಿ, ಗುಜರಾತಿ, ಹಿಂದಿ ಭಾಷೆಯ ಹಾಡುಗಳು ಹೀಗೆ ನೀವು ಏನು ಕೇಳಿದರೂ ನುಡಿಸಬಲ್ಲೆ. ಒಂದು ಹಾಡನ್ನು ಸಾರಂಗಿಯಲ್ಲಿ ನುಡಿಸುವ ಮೊದಲು ಅದು ನನ್ನ ತಲೆಯಲ್ಲಿ ಉಳಿಯಬೇಕು. ಅದಕ್ಕಾಗಿ ನಾನು ನಾಲ್ಕೈದು ದಿನಗಳ ಕಾಲ ಹಾಡು ಕೇಳುತ್ತೇನೆ. ಪ್ರತಿಯೊಂದು ನೋಟ್‌ ಕೂಡಾ ಸರಿಯಾಗಿ ನುಡಿಸಲು ಹಲವು ದಿನಗಳ ಕಾಲ ಪ್ರಾಕ್ಟೀಸ್ ಕೂಡಾ ಮಾಡುತ್ತೇನೆ” ಎಂದು ಸಾರಂಗಿಯ ದನಿ ಸರಿಪಡಿಸುತ್ತಾ ಹೇಳಿದರು.

ಇನ್ನೊಂದೆಡೆ ಕೆಲವು ಗಂಡಸರು ಮತ್ತು ಹೆಂಗಸರು ಭಾರತಿ ಹತ್ತಿರ ಬರುತ್ತಿದ್ದಂತೆ ಕಡಿಮೆ ಬೆಲೆಯ ನಾಣ್ಯ ಮತ್ತು ದೊಡ್ಡ ನೋಟುಗಳಿಗಾಗಿ ತಮ್ಮ ಜೇಬು, ಪರ್ಸುಗಳನ್ನು ತಡಕಾಡತೊಡಗಿದರು. ಅವಳು ರೈಲಿನಲ್ಲಿರುವ ಒಬ್ಬ ಪ್ರಯಾಣಿಕರನ್ನೂ ತಪ್ಪಿಸದೆ ಮುಂದಿನ ನಿಲ್ದಾಣದಲ್ಲಿ ಅವರು ಇಳಿಯುವ ಮೊದಲೇ ಹಣ ಸಂಗ್ರಹ ಮಾಡಲು ರೈಲಿನ ಚಕ್ರದಂತೆ ಡಬ್ಬಿಯೊಳಗೆ ಚುರುಕಾಗಿ ಓಡಾಡುತ್ತಿದ್ದಳು.

ಕಿಶನ್‌ ಅವರ ಸಂಪಾದನೆಯ ಸೂಚ್ಯಂಕ ದಿನದಿಂದ ದಿನಕ್ಕೆ ಬದಲಾಗುತ್ತದೆ. ಒಂದು ದಿನ 400 ರೂ ಸಂಪಾದನೆಯಾದರೆ ಇನ್ನೊಂದು ದಿನ 1,000 ರೂಪಾಯಿಗಳ ತನಕವೂ ಆಗುತ್ತದೆ.ಇದಕ್ಕಾಗಿ ಅವರು ದಿನದ ಆರು ಗಂಟೆಗಳ ಕಾಲ ಹಲವು ರೈಲುಗಳನ್ನು ಹತ್ತಿಳಿಯಬೇಕಾಗುತ್ತದೆ. ಅವರು ಪ್ರತಿದಿನ ಸಂಜೆ ಆರು ಗಂಟೆಗೆ ತಮ್ಮ ಮನೆಯ ಬಳಿ ಮುಂಬಯಿ ವೆಸ್ಟರ್ನ್‌ ಲೈನಿನ ನಲಸೋಪಾರ ಲೋಕಲ್‌ ರೈಲು ಹತ್ತುವುದರೊಂದಿಗೆ ಕೆಲಸ ಆರಂಭಿಸುತ್ತಾರೆ. ಅವರು ಯಾವುದೇ ನಿಗದಿತ ಮಾರ್ಗದಲ್ಲಿ ಪ್ರಯಾಣಿಸುವುದಿಲ್ಲ, ಸಾಮಾನ್ಯವಾಗಿ ಚರ್ಚ್‌ ಗೇಟ್‌ ಮತ್ತು ವಿರಾರ್‌ ನಡುವೆ ಜನಸಂದಣಿ ಮತ್ತು ತನಗೆ ಸಾರಂಗಿ ನುಡಿಸಲು ಸಿಗಬಹುದಾದ ಸ್ಥಳವನ್ನು ಅವಲಂಬಿಸಿ ರೈಲುಗಳನ್ನು ಹತ್ತುತ್ತಾರೆ.

“ಬೆಳಗಿನ ಹೊತ್ತು ಜನರು ಕೆಲಸಕ್ಕೆ ಹೋಗುವ ಗಡಿಬಿಡಿಯಲ್ಲಿರುತ್ತಾರೆ. ಅದರ ನಡುವೆ ನನ್ನ ಹಾಡನ್ನು ಕೇಳಲು ಯಾರಿಗೆ ಪುರುಸೊತ್ತಿರುತ್ತದೆ?” ಅವರು ತಾನು ಸಂಜೆಯನ್ನೇ ಏಕೆ ಅಯ್ಕೆ ಮಾಡಿಕೊಂಡೆ ಎನ್ನುವುದನ್ನು ಹೀಗೆ ವಿವರಿಸುತ್ತಾರೆ. “ಸಂಜೆ ಮನೆಗೆ ಹೊರಡುವ ಸಮಯದಲ್ಲಿ ಜನರು ಒಂದಷ್ಟು ನಿರಾಳವಾಗಿರುತ್ತಾರೆ. ಕೆಲವರು ನನ್ನನ್ನು ತಳ್ಳುತ್ತಾರೆ. ನಾನು ಅಂತಹ ಜನರನ್ನು ನಿರ್ಲಕ್ಷ್ಯ ಮಾಡುತ್ತೇನೆ. ಬೇರೆ ಆಯ್ಕೆಯಾದರೂ ಏನಿದೆ ನನಗೆ?” ಅವರಿಗೆ ತಿಳಿದಿರುವ ಏಕೈಕ ಕೌಶಲವೆಂದರೆ ಈ ಪಾರಂಪರಿಕ ಕಲೆ.

Kishan Jogi with his daughter Bharti as he plays the sarangi on the 7 o’clock Mumbai local train that runs through the western suburb line
PHOTO • Aakanksha

ವೆಸ್ಟರ್ನ್‌ ಸಬರ್ಬ್‌ ಲೇನಿನಲ್ಲಿ ಓಡುವ ಮುಂಬಯಿ ಲೋಕಲ್‌ ಟ್ರೈನಿನಲ್ಲಿ ಸಂಜೆ 7 ಗಂಟೆ ಸುಮಾರಿಗೆ ತನ್ನ ಮಗಳು ಭಾರತಿಯೊಡನೆ ಸೇರಿ ಸಾರಂಗಿ ನುಡಿಸುತ್ತಿರುವ ಕಿಶನ್‌ ಜೋಗಿ

ಅವರ ತಂದೆ ಮಿತಾಜಿ ಜೋಗಿ ಮೊದಲಿಗೆ ಇಲ್ಲಿನ ಲೋಕಲ್‌ ರೈಲುಗಳು ಮತ್ತು ಸಾರ್ವಜನಿಕ ಸ್ಥಳಗಲ್ಲಿ ಸಾರಂಗಿ ನುಡಿಸುತ್ತಿದ್ದರು. ಆಗ ಅವರು ರಾಜಸ್ಥಾನದ ಲುನಿಯಾಪುರವೆನ್ನುವ ಊರಿನಿಂದ ಇಲ್ಲಿಗೆ ಬಂದಿದ್ದರು. “ನನ್ನ ಅಪ್ಪ ಅಮ್ಮ ಮುಂಬಯಿಗೆ ಬಂದಾಗ ನನಗೆ ಕೇವಲ ಎರಡು [ವರ್ಷ]. ಆಗ ನನ್ನ ತಮ್ಮ ವಿಜಯನೂ ನಮ್ಮ ಜೊತೆಯಲ್ಲಿದ್ದ.” ಎಂದು ನೆನಪಿಸಿಕೊಳ್ಳುತ್ತಾರೆ. ಕಿಶನ್‌ ತನ್ನ ತಂದೆಯೊಡನೆ ಓಡಾಡಲು ಶುರು ಮಾಡಿದ ಸಮಯದಲ್ಲಿ ಭಾರತಿಗಿಂತಲೂ ಸಣ್ಣವರಾಗಿದ್ದರು.

ಜೋಗಿ ಸಮುದಾಯಕ್ಕೆ ಸೇರಿದ ಮಿತಾಜಿ (ರಾಜಸ್ಥಾನದಲ್ಲಿ ಇತರ ಹಿಂದುಳಿದ ವರ್ಗದಡಿ ಪಟ್ಟಿ ಮಾಡಲಾಗಿದೆ) ಸಂಗೀತಗಾರರಾಗಿ ಗುರುತಿಸಿಕೊಂಡಿದ್ದರು. ಅವರು ಊರಿನಲ್ಲಿ ರಾವಣಹಟ್ಟ ಎಂದು ಕರೆಯಲ್ಪಡುವ ಪುರಾತನ ಕಾಲದ ತಂತಿ ವಾದ್ಯವೊಂದನ್ನು ನುಡಿಸುತ್ತಿದ್ದರು. ಅದರ ಮೂಲಕ ಅವರ ಜೀವನ ನಡೆಯಬೇಕಿತ್ತು. ಆಲಿಸಿ: ಉದಯಪುರದ ರಾವಣಹಟ್ಟ ಎನ್ನುವ ವಾದ್ಯ

“ಸಾಂಸ್ಕೃತಿಕ ಕಾರ್ಯಕ್ರಮಗಳು, ಅಥವಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ವಾದ್ಯ ನುಡಿಸಲು ನನ್ನ ಬಾಪ್ [ಅಪ್ಪ]‌ ಮತ್ತು ಇತರರನ್ನು ಕರೆಸುತ್ತಿದ್ದರು” ಎನ್ನುತ್ತಾರೆ ಕಿಶನ್. ಆದರೆ ಅಂತಹ ಅವಕಾಶಗಳು ಬಹಳ ಅಪರೂಪವಾಗಿದ್ದವು ಮತ್ತು ಬಂದ ಹಣವನ್ನು ಎಲ್ಲರಿಗೂ ಹಂಚಲಾಗುತ್ತಿತ್ತು.

ಈ ಅತ್ಯಲ್ಪ ಸಂಪಾದನೆಯು ಮಿತಾಜಿ ಮತ್ತು ಅವರ ಪತ್ನಿ ಜಮ್ನಾ ದೇವಿಯವರನ್ನು ಕಡಿಮೆ ಸಂಬಳಕ್ಕೆ ಕೃಷಿ ಕೂಲಿಯಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆಗೆ ದೂಡಿತ್ತು. “ಊರಿನಲ್ಲಿನ ಗರೀಬಿ [ಬಡತನ] ನಮ್ಮನ್ನು ಮುಂಬಯಿಗೆ ಎಳೆದು ತಂದಿತು. ಅಲ್ಲಿ ಬೇರೆ ಯಾವುದೇ ಧಂದಾ ಮಜ್ದೂರಿ [ಇತರೆ ವ್ಯವಹಾರ, ಕೂಲಿ ಕೆಲಸ] ಸಿಗುತ್ತಿರಲಿಲ್ಲ” ಎಂದು ಅವರು ಮುಂದುವರೆದು ಹೇಳುತ್ತಾರೆ.

ಮುಂಬಯಿಯಲ್ಲಿ ಮಿತಾಜಿ ಮೊದಲಿಗೆ ಸಾರ್ವಜನಿಕ ಸ್ಥಳಗಳಲ್ಲಿ ತಿರುಗುತ್ತಾ ರಾವಣಹಟ್ಟವನ್ನು ನುಡಿಸುತ್ತಿದ್ದರು. ನಂತರ ಸಾರಂಗಿ ನುಡಿಸತೊಡಗಿದರು. “ರಾವಣ ಹಟ್ಟ ಹೆಚ್ಚು ತಂತಿಗಳನ್ನು ಮತ್ತು ಕಡಿಮೆ ಸುರ್‌ ಹೊಂದಿತ್ತು” ಎಂದು ಈ ಅನುಭವಿ ಕಲಾವಿದ ಹೇಳುತ್ತಾರೆ. “ಆದರೆ ಸಾರಂಗಿಯಲ್ಲಿ ತಂತಿಗಳು ಕಡಿಮೆ. ಮತ್ತು ಇದರ ಸ್ವರವೂ ತೀಕ್ಷ್ಣವಾಗಿವೆ. ಸಾರಂಗಿ ಸಂಗೀತದಲ್ಲಿ ಹೆಚ್ಚು ವೈವಿಧ್ಯತೆಯನ್ನು ನೀಡುತ್ತಿದ್ದ ಕಾರಣ ಜನರಿಗೂ ಇದು ಇಷ್ಟವಾಯಿತು. ಹೀಗಾಗಿ ನನ್ನ ತಂದೆ ಸಾರಂಗಿ ನುಡಿಸತೊಡಗಿದರು.”

A photograph of Kishan's father Mitaji Jogi hangs on the wall of his home, along with the sarangi he learnt to play from his father.
PHOTO • Aakanksha
Right: Kishan moves between stations and trains in search of a reasonably good crowd and some space for him to play
PHOTO • Aakanksha

ಎಡ: ಗೋಡೆಯ ಮೇಲೆ ತೂಗುತ್ತಿರುವ ಮಿತಾಜಿಯವರ ಫೋಟೊ ಹಾಗೂ ಕಿಶನ್‌ ಅವರು ತಂದೆಯವರಿಂದ ನುಡಿಸಲು ಕಲಿತ ಸಾರಂಗಿ. ಎಡ: ಸಾಕಷ್ಟು ಜನ ಸಂದಣಿ ಮತ್ತು ತನಗೆ ನುಡಿಸಲು ಬೇಕಾಗುವಷ್ಟು ಸ್ಥಳದ ಹುಡುಕಾಟದಲ್ಲಿ ಕಿಶನ್‌ ನಿಲ್ದಾಣದಿಂದ ನಿಲ್ದಾಣಕ್ಕೆ ಪ್ರಯಾಣಿಸುತ್ತಾರೆ

ಕಿಶನ್‌ ಅವರ ಅಮ್ಮ ಜಮ್ನಾ ದೇವಿ ತಮ್ಮ ಎರಡು ಮಕ್ಕಳೊಡನೆ ಗಂಡನನ್ನು ಹಿಂಬಾಲಿಸುತ್ತಿದ್ದರು. “ಇಲ್ಲಿಗೆ ಬಂದ ಮೊದಲಿಗೆ ಕಾಲುದಾರಿಯೇ ನಮ್ಮ ಮನೆಯಾಗಿತ್ತು” ಎಂದು ಅವರು ನೆನಪಿಸಿಕೊಳ್ಳುತ್ತಾರೆ, “ಆಗ ಜಾಗ ಸಿಕ್ಕಲ್ಲೆಲ್ಲ ಮಲಗುತ್ತಿದ್ದೆವು.” ದಿನಗಳು ಕಳೆದು ಅವರು ಎಂಟು ವರ್ಷದವರಾಗುವ ಹೊತ್ತಿಗೆ ಅವರಿಗೆ ಸೂರಜ್‌, ಗೋಪಿ ಎನ್ನುವ ಇನ್ನಿಬ್ಬರು ತಮ್ಮಂದಿರಿದ್ದರು. “ಆ ದಿನಗಳನ್ನು ಈಗ ನೆನೆಯಲೂ ಇಷ್ಟವಿಲ್ಲ” ಎಂದ ಅವರ ದನಿಯಲ್ಲಿ ನೋವು ತುಂಬಿತ್ತು.

ಅವರು ನೆನಪಿಟ್ಟುಕೊಳ್ಳಲು ಬಯಸುವುದೆಂದರೆ ಅವರ ತಂದೆ ಸಂಗೀತ ಕಲಿಸುತ್ತಿದ್ದ ಕ್ಷಣಗಳನ್ನು ಮಾತ್ರ. ಅವರು ಕಿಶನ್‌ ಮತ್ತು ಅವರ ತಮ್ಮಂದಿರಿಗೆ ತಾವೇ ತಯಾರಿಸಿದ ಮರದ ಸಾರಂಗಿಯಲ್ಲಿ ಅದನ್ನು ನುಡಿಸುವುದನ್ನು ಹೇಳಿಕೊಟ್ಟಿದ್ದರು. “ಬೀದಿ ಮತ್ತು ರೈಲುಗಳೇ ಅವರ ವೇದಿಕೆಯಾಗಿದ್ದವು. ಅವರು ಎಲ್ಲೆಡೆಯೂ ನುಡಿಸುತ್ತಿದ್ದರು ಮತ್ತು ಅವರನ್ನು ಯಾರೂ ತಡೆಯುತ್ತಿರಲಿಲ್ಲ. ತಾನು ಪ್ರದರ್ಶನ ನೀಡಿದಲ್ಲೆಲ್ಲ ದೊಡ್ಡ ಸಂಖ್ಯೆಯ ಜನರನ್ನು ಆಕರ್ಷಿಸುತ್ತಿದ್ದರು” ಕಿಶನ್‌ ಎಂದು ಉತ್ಸಾಹದಿಂದ ಎರಡೂ ಕೈ ಚಾಚಿ ಬರುತ್ತಿದ್ದ ಜನರ ಸಂಖ್ಯೆಯನ್ನು ವಿವರಿಸುತ್ತಾರೆ.

ಆದರೆ ಇದೇ ಬೀದಿಗಳು ಅಪ್ಪನಿಗೆ ತೋರಿಸಿದಷ್ಟು ಕರುಣೆಯನ್ನು ಮಗನಿಗೆ ತೋರಿಸಲಿಲ್ಲ. ಒಮ್ಮೆ ಜುಹೂ-ಚೌಪಾಟಿ ಬೀಚಿನಲ್ಲಿ ಪ್ರವಾಸಿಗರೆದುರು ಪ್ರದರ್ಶನ ನೀಡುತ್ತಿದ್ದಾಗ ಪೊಲೀಸರು ಅವರನ್ನು ಎಳೆದುಕೊಂಡು ಹೋಗಿ 1,000 ರೂಗಳ ದಂಡ ವಿಧಿಸಿದ್ದರು. ಅವರಿಗೆ ದಂಡ ಕಟ್ಟಲು ಸಾಧ್ಯವಾಗದಿದ್ದಾಗ ಅವರನ್ನು ಒಂದೆರಡು ಗಂಟೆ ಲಾಕಪ್ಪಿನಲ್ಲಿಟ್ಟಿದ್ದರು. “ನಾನು ಮಾಡಿದ ತಪ್ಪಾದರೂ ಏನು ಎನ್ನುವುದು ಕೂಡಾ ನನಗೆ ತಿಳಿದಿರಲಿಲ್ಲ” ಎನ್ನುತ್ತಾರೆ ಕಿಶನ್.‌ ಅಂದಿನಿಂದ ಅವರು ರೈಲುಗಳಲ್ಲಿ ಮಾತ್ರವೇ ಸಾರಂಗಿ ನುಡಿಸಲಾರಂಭಿಸಿದರು. ತನ್ನ ತಂದೆಗೆ ಸಮನಾಗಿ ತಾನು ಎಂದಿಗೂ ಸಾರಂಗಿ ನುಡಿಸಲು ಸಾಧ್ಯವಿಲ್ಲ ಎನ್ನುವುದು ಅವರ ಅಭಿಪ್ರಾಯ.

“ಬಾಪ್‌ ನಾನು ನುಡಿಸುವುದಕ್ಕಿಂತಲೂ ಎಷ್ಟೋ ಅದ್ಭುತವಾಗಿ ನುಡಿಸುತ್ತಿದ್ದರು” ಎನ್ನುತ್ತಾರೆ ಕಿಶನ್.‌ ಮಿತಾಜಿ ಸಾರಂಗಿ ನುಡಿಸುವುದರೊಂದಿಗೆ ಹಾಡುವುದನ್ನೂ ಮಾಡುತ್ತಿದ್ದರು. ಆದರೆ ಕಿಶನ್‌ ಹಾಡಿನಿಂದ ದೂರವುಳಿದಿದ್ದಾರೆ. “ನಾನು ಮತ್ತು ನನ್ನ ತಮ್ಮ ಬದುಕು ನಡೆಸುವುದಕ್ಕಾಗಿ ನುಡಿಸುತ್ತೇವೆ.” ಅವರ ತಂದೆ ಬಹುಶಃ ಟಿಬಿ ಕಾಯಿಲೆಯಿಂದ ಮರಣ ಹೊಂದಿದರು. ಅವರ ತಂದೆ ತೀರಿಕೊಂಡಾಗ ಅವರಿಗೆ 10 ವರ್ಷ. “ಆಗ ಆಸ್ಪತ್ರೆಗೆ ಹೋಗುವುದಿರಲಿ. ತಿನ್ನೋದಕ್ಕೆ ಇದ್ದರೆ ಅದೇ ದೊಡ್ಡ ವಿಷಯವಾಗಿತ್ತು.”

ಕಿಶನ್‌ ಸಣ್ಣ ವಯಸ್ಸಿನಲ್ಲೇ ಸಂಪಾದನೆಯಲ್ಲಿ ತೊಡಗಬೇಕಿತ್ತು. “ಬೇರೆ ವಿಚಾರಗಳಿಗೆ ಸಮಯವಾದರೂ ಎಲ್ಲಿತ್ತು? ಬಾಪ್‌ನೇ ಸಾರಂಗಿ ಥಮಾ ದೀ, ಕಭೀ ಸ್ಕೂಲ್‌ ಕಾ ಭೀ ನಹೀ ಸೋಚಾ ಬಜಾತೇ ಗಯಾ [ಅಪ್ಪ ಸಾರಂಗಿ ಕೈಯಲ್ಲಿಟ್ಟು ಹೋದರು. ನಾನು ಅದನ್ನೇ ನುಡಿಸತೊಡಗಿದೆ. ಶಾಲೆಗೆ ಹೋಗುವ ಕುರಿತು ಯೋಚಿಸಲೂ ಇಲ್ಲ” ಎನ್ನುತ್ತಾರವರು.

Left: Kishan with one of his younger brothers, Suraj.
PHOTO • Aakanksha
Right: Kishan with his wife Rekha and two children, Yuvraj and Bharati
PHOTO • Aakanksha

ಎಡ: ತಮ್ಮ ತಮ್ಮಂದಿರಲ್ಲಿ ಒಬ್ಬರಾದ ಸೂರಜ್ ಅವರೊಂದಿಗೆ ಕಿಶನ್. ಬಲ: ಕಿಶನ್ ತನ್ನ ಪತ್ನಿ ರೇಖಾ ಮತ್ತು ಇಬ್ಬರು ಮಕ್ಕಳಾದ ಯುವರಾಜ್ ಮತ್ತು ಭಾರತಿಯೊಂದಿಗೆ

ತಂದೆಯ ಮರಣದ ನಂತರ ಇಬ್ಬರು ತಮ್ಮಂದಿರಾದ ವಿಜಯ್‌ ಮತ್ತು ಗೋಪಿ ಅಮ್ಮನೊಡನೆ ಊರಿಗೆ ಹೋದರು. ಮತ್ತು ಸೂರಜ್‌ ನಾಶಿಕ್‌ ತೆರಳಿದರು. “ಅವರಿಗೆ ಮುಂಬಯಿಯ ಗಡಿಬಿಡಿ ಇಷ್ಟವಾಗುವುದಿಲ್ಲ, ಜೊತಗೆ ಸಾರಂಗಿ ನುಡಿಸುವುದು ಕೂಡಾ ಅವರಿಗೆ ಇಷ್ಟವಿಲ್ಲ” ಎನ್ನುತ್ತಾರೆ ಕಿಶನ್.‌ “ಸೂರಜ್‌ ನುಡಿಸುತ್ತಿದ್ದ ಮತ್ತು ಈಗಲೂ ನುಡಿಸುತ್ತಾನೆ. ಉಳಿದಿಬ್ಬರು ಬದುಕುವ ಸಲುವಾಗಿ ಸಿಕ್ಕ ಕೆಲಸಗಳನ್ನು ಮಾಡುತ್ತಿದ್ದಾರೆ.”

“ಮುಂಬಯಿಯಲ್ಲಿ ಯಾಕೆ ಉಳಿದುಕೊಂಡೆ ಎನ್ನುವುದು ನನಗೆ ಗೊತ್ತಿಲ್ಲ. ಆದರೆ ನಾನಿಲ್ಲಿ ನನ್ನದೇ ಆದ ಪುಟ್ಟ ಜಗತ್ತೊಂದನ್ನು ಕಟ್ಟಿಕೊಂಡಿದ್ದೇನೆ” ಎನ್ನುತ್ತಾರೆ ಕಿಶನ್.‌ ಮುಂಬೈನ ಉತ್ತರ ಉಪನಗರವಾದ ನಲಸೋಪಾರಾ ಪಶ್ಚಿಮದಲ್ಲಿ ಅವರು ಬಾಡಿಗೆಗೆ ಪಡೆದ ಮಣ್ಣಿನ ನೆಲವನ್ನು ಹೊಂದಿರುವ ಸಣ್ಣ ಮನೆಯೂ ಅವರ ಈ ಜಗತ್ತಿನ ಭಾಗವಾಗಿದೆ. 10X10 ಅಳತೆಯ ಈ ಮನೆ ಸಿಮೆಂಟ್‌ ಶೀಟಿನ ಗೋಡೆಗಳನ್ನು ಮತ್ತು ಟಿನ್‌ ಶೀಟಿನ ಛಾವಣಿಯನ್ನು ಹೊಂದಿದೆ.

ಅವರ ಮೊದಲ ಪ್ರೇಮಿ ಮತ್ತು ಈಗ ಹದಿನೈದು ವರ್ಷಗಳಿಂದ ಪತ್ನಿಯಾಗಿರುವ ರೇಖಾ ಮತ್ತು ಅವರ ಇಬ್ಬರು ಮಕ್ಕಳಾದ ಭಾರತಿ ಮತ್ತು ಯುವರಾಜ (3) ನಮ್ಮನ್ನು ಮನೆಯೊಳಗೆ ಸ್ವಾಗತಿಸಿದರು. ಆ ಸಣ್ಣ ಕೋಣೆಯು ನಾಲ್ಕು ಜನರಿಗೆ ಮನೆಯಾಗಿ, ಅಡುಗೆ ಮನೆ, ಟಿವಿ, ಮತ್ತು ಅವರ ಬಟ್ಟೆಗಳನ್ನು ತನ್ನೊಳಗೆ ಹೊತ್ತುಕೊಂಡಿದೆ. ಕಿಶನ್ ʼಅಮೂಲ್ಯʼವೆಂದು ಕರೆಯುವ ಅವರ ಸಾರಂಗಿ ಅಲ್ಲೇ ಇದ್ದ ಗೋಡೆಯ ಹತ್ತಿರದ ಕಾಂಕ್ರೀಟ್‌ ಕಂಬದಲ್ಲಿ ನೇತಾಡುತ್ತಿತ್ತು.

ರೇಖಾ ಅವರ ನೆಚ್ಚಿನ ಹಾಡಿನ ಬಗ್ಗೆ ಕೇಳಿದಾಗ, ಕಿಶನ್ ಬೇಗನೆ "ಹರ್ ಧುನ್ ಉಸ್ಕೆ ನಾಮ್ [ಪ್ರತಿ ರಾಗವನ್ನೂ ಅವಳಿಗಾಗಿಯೇ ನುಡಿಸುವುದು] ಎಂದು ಹೇಳುತ್ತಾರೆ.

“ಅವರು ವಾದ್ಯ ನುಡಿಸುವುದು ನನಗೆ ಬಹಳ ಇಷ್ಟ. ಆದರೆ ಮುಂದೆ ಅದನ್ನೇ ಅವಲಂಬಿಸಿ ಬದುಕುವುದು ಕಷ್ಟವಿದೆ” ಎನ್ನುತ್ತಾರೆ ರೇಖಾ. “ಅವರು ಒಂದು ನಿಯಮಿತ ಆದಾಯದ ಕೆಲಸವನ್ನು ಹುಡುಕಿಕೊಳ್ಳಬೇಕೆನ್ನುವುದು ನನ್ನ ಬಯಕೆ. ಮೊದಲಾದರೆ ನಾವಿಬ್ಬರೇ ಇದ್ದೆವು ಆದರೆ ಈಗ ಇವರಿಬ್ಬರು ಮಕ್ಕಳೂ ಇದ್ದಾರೆ.”

'I can play even in my sleep. This is all that I know. But there are no earnings from sarangi, ' says Kishan
PHOTO • Aakanksha

ʼನಿದ್ದೆಯಲ್ಲಿ ಬೇಕಿದ್ದರೂ ನಾನು ಇದನ್ನು ನುಡಿಬಲ್ಲೆ. ನನಗೆ ತಿಳಿದಿರುವುದು ಇದೊಂದೇ. ಆದರೆ ಈಗೀಗ ಸಾರಂಗಿಯಿಂದ ಆದಾಯ ಸಿಗುತ್ತಿಲ್ಲʼ ಎನ್ನುತ್ತಾರೆ ಕಿಶನ್‌

ಕಿಶನ್ ಅವರೊಂದಿಗೆ ಪ್ರಯಾಣಿಸುವ ಭಾರತಿ ಜಿಲ್ಲಾ ಪರಿಷತ್ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಓದುತ್ತಿದ್ದಾಳೆ. ನೆಲ್ಲಿಮೋರಿನಲ್ಲಿರುವ ಅವರ ಮನೆಯಿಂದ ಸ್ವಲ್ಪ ದೂರದಲ್ಲಿ ಶಾಲೆಯಿದೆ. ಶಾಲೆಯ ನಂತರ ಅವಳು ತನ್ನ ತಂದೆಯೊಂದಿಗೆ ಹೊರಡುತ್ತಾಳೆ. “ಅಪ್ಪ ಏನು ನುಡಿಸಿದರೂ ನನಗೆ ತುಂಬಾ ಇಷ್ಟ. ಆದರೆ ಪ್ರತಿದಿನ ಅವರೊಂದಿಗೆ ಹೋಗುವುದು ನನಗೆ ಇಷ್ಟವಿಲ್ಲ. ನನಗೆ ನನ್ನ ಸ್ನೇಹಿತರೊಡನೆ ಕುಣಿಯುವುದು ಮತ್ತು ಆಡುವುದೆಂದರೆ ಇಷ್ಟ” ಎಂದು ಅವಳು ಹೇಳುತ್ತಾಳೆ.

"ಅವಳು ಐದು ವರ್ಷದವಳಿದ್ದಾಗ ಅವಳನ್ನು ನನ್ನೊಂದಿಗೆ ಕರೆದುಕೊಂಡು ಹೋಗಲು ಪ್ರಾರಂಭಿಸಿದೆ" ಎಂದು ಕಿಶನ್ ಹೇಳುತ್ತಾರೆ. "ನನಗೂ ಅವಳನ್ನು ಕರೆದುಕೊಂಡು ತಿರುಗುವುದು ಇಷ್ಟವಿಲ್ಲ. ಆದರೆ ಬೇರೆ ದಾರಿಯಾದರೂ ಎಲ್ಲಿದೆ? ನಾನು ನುಡಿಸುತ್ತಿರುವಾಗ ಯಾರಾದರೂ ಹಣ ಸಂಗ್ರಹಿಸಲೇಬೇಕು. ಇಲ್ಲದಿದ್ದರೆ ನಾವು ಸಂಪಾದಿಸುವುದು ಹೇಗೆ?"

ಕಿಶನ್ ಈಗ ಈ ಮಹಾನಗರದಲ್ಲಿ ಬೇರೆ ಕೆಲಸ ಹುಡುಕುತ್ತಿದ್ದಾರೆ. ಆದರೆ ವಿದ್ಯಾಭ್ಯಾಸ ಇಲ್ಲದೇ ಇರುವುದರಿಂದ ಅವರ ಹಣೆಬರಹದಲ್ಲಿ ಉದ್ಯೋಗವೂ ಇಲ್ಲದಂತಾಗಿದೆ. ರೈಲಿನಲ್ಲಿ ಜನರು ತನ್ನ ನಂಬರ್‌ ಕೇಳಿದಾಗ ಅವರು ತನ್ನನ್ನು ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಲು ಕರೆಯಬಹುದೆನ್ನುವ ನಿರೀಕ್ಷೆಯನ್ನು ಹೊಂದುತ್ತಾರೆ. ಕಿಶನ್‌ ಕೆಲವು ಜಾಹೀರಾತುಗಳಿಗಾಗಿ ಹಿನ್ನೆಲೆ ಸಂಗೀತವನ್ನು ನೀಡಿದ್ದಾರೆ. ಈ ಸಲುವಾಗಿ ಅವರು ಮುಂಬೈ, ಫಿಲ್ಮ್ ಸಿಟಿ ಮತ್ತು ವಾರ್ಸಾದಲ್ಲಿನ ಸ್ಟುಡಿಯೋಗಳಿಗೆ ಭೇಟಿ ನೀಡಿದ್ದಾರೆ. ಆದರೆ ಇಂತಹ ಅಪರೂಪದ ಅವಕಾಶಗಳು ಒಮ್ಮೆ ಸಿಕ್ಕರೆ ಮತ್ತೆ ಸಿಗುವುದಿಲ್ಲ. ಅವಕಾಶ ದೊರೆತಾಗ 2,000ದಿಂದ 4,000 ರೂಪಾಯಿ ಸಿಗುತ್ತಿತ್ತು. ಬೇಸರದ ಸಂಗತಿಯೆಂದರೆ ಇಂತಹ ಅವಕಾಶಗಳು ಸಿಗುವುದೇ ಅಪರೂಪ.

ಈಗ ಅಂತಹದ್ದೊಂದು ಅದೃಷ್ಟ ಒಲಿದು ನಾಲ್ಕು ವರ್ಷಗಳು ಕಳೆದಿವೆ.

Left: A sarangi hanging inside Kishan's house. He considers this his father's legacy.
PHOTO • Aakanksha
Right: Kishan sitting at home with Bharti and Yuvraj
PHOTO • Aakanksha

ಎಡ: ಕಿಶನ್‌ ಅವರ ಮನೆಯಲ್ಲಿ ನೇತುನ ಹಾಕಲಾಗಿರುವ ಸಾರಂಗಿ. ಇದನ್ನು ಅವರು ತನ್ನ ಪರಂಪರೆಯಾಗಿ ಪರಿಗಣಿಸುತ್ತಾರೆ. ಬಲ: ಕಿಶನ್‌ ತಮ್ಮ ಮಕ್ಕಳಾದ ಭಾರತಿ ಮತ್ತು ಯುವರಾಜನೊಡನೆ ಕುಳಿತಿರುವುದು

ಒಂದು ದಶಕದ ಹಿಂದೆ 300ರಿಂದ 400 ರೂಪಾಯಿಗಳಲ್ಲಿ ದಿನ ದೂಡಬಹುದಿತ್ತು. ಆದರೆ ಇಂದು ಅದು ಅಸಾಧ್ಯ. ಅವರ ಮನೆಯ ತಿಂಗಳ ಬಾಡಿಗೆ 4,000 ರೂಪಾಯಿಗಳಾದರೆ, ದಿನಸಿ, ನೀರು, ವಿದ್ಯುತ್‌ ಇತ್ಯಾದಿಗಳ ಖರ್ಚಿಗೆ 10,000 ರೂಪಾಯಿ ಬೇಕಾಗುತ್ತದೆ. ಇದರ ಜೊತೆಗೆ ಮಗಳ ಶಾಲೆಗೆ ಆರು ತಿಂಗಳಿಗೊಮ್ಮೆ 400 ರೂಪಾಯಿಗಳನ್ನು ಕಟ್ಟಬೇಕಾಗುತ್ತದೆ.

ಹಗಲಿನಲ್ಲಿ ಗಂಡ ಹೆಂಡತಿಯಿಬ್ಬರೂ ಹಳೆಯ ಬಟ್ಟೆಗಳನ್ನು ಜನರಿಂದ ಪಡೆದು ಮೂರನೇ ವ್ಯಕ್ತಿಗಳಿಗೆ ಮಾರುವ ಚಿಂದಿವಾಲೆಗಳಾಗಿ ಕೆಲಸ ಮಾಡುತ್ತಾರೆ. ಆದರೆ ಈ ಕೆಲಸ ಮತ್ತು ಅದರಿಂದ ಬರುವ ಆದಾಯ ಎರಡರದ್ದೂ ಯಾವುದೇ ಖಾತರಿಯಿಲ್ಲ. ಕೆಲಸ ಸಿಕ್ಕ ದಿನಗಳಲ್ಲಿ ಅವರ ಆದಾಯ 100 ರೂಪಾಯಿಗಳಿಂದ 400 ರೂಪಾಯಿಗಳ ತನಕ ಇರುತ್ತದೆ.

“ನಿದ್ದೆಯಲ್ಲಿ ಬೇಕಿದ್ದರೂ ನಾನು ಇದನ್ನು ನುಡಿಸಬಲ್ಲೆ. ನನಗೆ ತಿಳಿದಿರುವುದು ಇದೊಂದೇ. ಆದರೆ ಈಗೀಗ ಸಾರಂಗಿಯಿಂದ ಆದಾಯ ಸಿಗುತ್ತಿಲ್ಲ” ಎನ್ನುತ್ತಾರೆ ಕಿಶನ್‌.

"ಯೇ ಮೇರೆ ಬಾಪ್ ಸೆ ಮಿಲಿ ನಿಶಾನಿ ಹೈ ಔರ್ ಮುಜೆ ಭೀ ಲಗತಾ ಹೈ ಮೇಂ ಕಲಾಕಾರ್ ಹೂಂ... ಪರ್ ಕಲಾಕಾರಿ ಸೇ ಪೇಟ್ ನಹೀ ಭರ್ತಾ ನಾ [ಇದು ನನಗೆ ನನ್ನ ತಂದೆಯಿಂದ ಬಂದ ಬಳುವಳಿ. ನನಗೂ ನಾನು ಕಲಾವಿದನೆಂದು ಎನ್ನಿಸುತ್ತದೆ. ಆದರೆ ಕಲೆಯಿಂದ ಹೊಟ್ಟೆ ತುಂಬುತ್ತದೆಯೇ?”

ಅನುವಾದ: ಶಂಕರ. ಎನ್. ಕೆಂಚನೂರು

Aakanksha

آکانکشا (وہ صرف اپنے پہلے نام کا استعمال کرتی ہیں) پاری کی رپورٹر اور کنٹینٹ ایڈیٹر ہیں۔

کے ذریعہ دیگر اسٹوریز Aakanksha
Editor : Pratishtha Pandya

پرتشٹھا پانڈیہ، پاری میں بطور سینئر ایڈیٹر کام کرتی ہیں، اور پاری کے تخلیقی تحریر والے شعبہ کی سربراہ ہیں۔ وہ پاری بھاشا ٹیم کی رکن ہیں اور گجراتی میں اسٹوریز کا ترجمہ اور ایڈیٹنگ کرتی ہیں۔ پرتشٹھا گجراتی اور انگریزی زبان کی شاعرہ بھی ہیں۔

کے ذریعہ دیگر اسٹوریز Pratishtha Pandya
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru