ಕಂಪನಗಳು ಮುಖ್ಯ ಹಂತವನ್ನು ತಲುಪುವ ಹೊತ್ತಿಗೆ ಆಗಲೇ ತಡವಾಗಿತ್ತು. ಭದ್ರ ಕೋಟೆಯ ಗೋಡೆಗಳೆಲ್ಲ ಸಡಿಲಗೊಂಡಿದ್ದವು. ಒಡೆದು ಹೋಗಿದ್ದ ಒಡ್ಡುಗಳ ಪಾತ್ರವನ್ನು ರಿಪೇರಿ ಮಾಡುವುದು ಬಹಳ ಕಷ್ಟವಿತ್ತು. ರಾಜನಿಗೆ ತನ್ನ ಪ್ರಬಲ ಸತ್ರಪರು ಮತ್ತು ಫಲಕಧಾರಿಗಳನ್ನೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಆಳವಾದ ಕಂದರಗಳು ಸಾಮ್ರಾಜ್ರದ ಸುತ್ತಲೂ ಹೆಮ್ಮೆಯಿಂದ ಸೃಷ್ಟಿಗೊಂಡವು. ನಮ್ಮ ಚಕ್ರವರ್ತಿಯು ತನ್ನ ದೇಶದ ಹಸಿದ ಜನರ ಕುರಿತ ದ್ವೇಷಕ್ಕಿಂತಲೂ ಆಳವಿದ್ದ, ಅವನ ಎದೆಯ ಸುತ್ತಳೆತೆಗಿಂತಲೂ ಅಗಲವಿದ್ದ ಈ ಕಂದಕಗಳಿಗೆ ಆಗಷ್ಟೇ ಕತ್ತರಿಸಿದ ಗೋಧಿ ಪೈರಿನ ಕಾಂಡದ ವಾಸನೆಯಿತ್ತು. ಈ ಕಂದಕಗಳು ಅರಮನೆ,  ಅವನ ಪವಿತ್ರ ಗೋಶಾಲೆಗಳ ಗೋಡೆಗಳಿಗೆ ದಾರಿ ಮಾಡಿಕೊಡುವ ಬೀದಿಗಳಲ್ಲೆಲ್ಲಾ ಮೂಡತೊಡಗಿದವು. ಆದರೆ ಆಗಲೇ ಇದನ್ನು ಸರಿಪಡಿಸಲು ಸಾಧ್ಯವಿಲ್ಲದಷ್ಟು ತಡವಾಗಿತ್ತು.

ರಾಜನ ಬಳಿ ತನ್ನ ಸಾಕು ಕಾಗೆಗಳನ್ನು ಬಿಟ್ಟು ಜನರ ಬಳಿ ಈ ಕಂದಕಗಳು ಸುಳ್ಳು, ಅಂತಹದ್ದೇನೂ ನಡೆದಿಲ್ಲ ಎಂದು ನಂಬಿಸಲು ಸಾಧ್ಯವಾಗುವಷ್ಟು ಸಮಯವೂ ಇರಲಿಲ್ಲ. ಈ ಕಂಪನ ಸುಳ್ಳೆಂದು ಇನ್ನು ಜನರೆದುರು ಹೇಳುವುದು ಕಷ್ಟವಿತ್ತು. ಹಾಗಿದ್ದರೆ ಆ ಬಿರುಕು ಪಾದಗಳ ಜನರು ರಾಜನ ಮಸ್ನಾಡ್‌ ಅನ್ನು ಹೇಗೆ ಅಲುಗಾಡುವಂತೆ ಮಾಡಿದರು? ಈಗ ರಾಜ ತನ್ನ ಸಾಮ್ರಾಜ್ಯ ಸಾವಿರಾರು ವರ್ಷ ಉಳಿಯಬಲ್ಲದು ಎಂದು ಜನರನ್ನು ನಂಬಿಸಲು ಕೂಡಾ ಸಾಧ್ಯವಿಲ್ಲ. ಈ ಸಣ್ಣ ಧೂಳಿನ ಕಣಗಳು ಬೀಜವೊಂದನ್ನು ದೊಡ್ಡ ಜೋಳದ ತೆನೆಯನ್ನಾಗಿ ಬೆಳೆದು ಆಕಾಶದೆತ್ತರಕ್ಕೆ ಬೆಳೆಸಿ ನಿಲ್ಲಿಸಿವೆ.

ಹಾಗಿದ್ದರೆ ಅದು ಯಾರ ದೈತ್ಯ ಮುಷ್ಟಿಯಾಗಿತ್ತು? ಅವರಲ್ಲಿ ಅರ್ಧದಷ್ಟು ಮಹಿಳೆಯರು, ಮೂರನೇ ಒಂದು ಭಾಗದಷ್ಟು ಜನರು ಗುಲಾಮಗಿರಿಯ ಕತ್ತುಪಟ್ಟಿಗಳನ್ನು ಹೊಂದಿದ್ದರು, ಅವರು ಇತರರಿಗಿಂತ ನಾಲ್ಕನೇ ಒಂದು ಭಾಗದಷ್ಟು ಪ್ರಾಚೀನರು. ಕೆಲವರು ಅದ್ಭುತವಾದ ಮಳೆಬಿಲ್ಲುಗಳಿಂದ ಅಲಂಕರಿಸಲ್ಪಟ್ಟಿದ್ದರು, ಕೆಲವರು ಕಡುಗೆಂಪು ಅಥವಾ ಹಳದಿ ಬಣ್ಣವನ್ನು ತಮ್ಮೊಡನೆ ಒಯ್ಯುತ್ತಿದ್ದರು, ಉಳಿದವರು ಚಿಂದಿ ಬಟ್ಟೆಯಲ್ಲಿದ್ದರು. ಚಕ್ರವರ್ತಿಯ ಮಿಲಿಯನ್-ಡಾಲರ್ ನಿಲುವಂಗಿಗಳಿಗಿಂತ ಹೆಚ್ಚು ರಾಜತ್ವವನ್ನು ಎದ್ದು ಕಾಣಿಸುವ ಚಿಂದಿ ಉಡುಗೆಗಳು. ಅವರು ಮೆರವಣಿಗೆ ಮಾಡುತ್ತಾ, ಹಾಡುತ್ತಾ, ನಗುತ್ತಾ, ಸಾವಿನ ವ್ಯಾಪಾರವನ್ನು ಪ್ರತಿರೋಧಿಸುವವರಾಗಿದ್ದರು. ಇವರು ನೇಗಿಲು ಹಿಡಿಯುವ ಹಳ್ಳಿ ಜನರು, ಇವರನ್ನು ಪವಿತ್ರ ಟ್ರೆಬುಚೆಟ್‌ಗಳು ಮತ್ತು ಪವಿತ್ರ ಶಾಟ್‌ಗನ್‌ಗಳು ಸಹ ಕೊಲ್ಲಲು ವಿಫಲವಾಗಿವೆ.

ಹೃದಯವಿರಬೇಕಾದ ಜಾಗದಲ್ಲಿ ಕುಳಿಯನ್ನು ಹೊಂದಿದ್ದ ಸಾಮ್ರಾಜ್ಯವನ್ನು ಈ ಕಂಪನ ತಲುಪುವ ಹೊತ್ತಿಗೆ ಸಾಮ್ರಾಜ್ಯಕ್ಕೆ ಎಚ್ಚೆತ್ತುಕೊಳ್ಳುವಷ್ಟು ಸಮಯ ಉಳಿದಿರಲಿಲ್ಲ. ಈಗಾಗಲೇ ತಡವಾಗಿತ್ತು.

ಪ್ರತಿಷ್ಠಾ ಪಾಂಡ್ಯ ಅವರ ದನಿಯಲ್ಲಿ ಕವಿತೆಯ ಇಂಗ್ಲಿಷ್ ಅವತರಣಿಕೆಯನ್ನು ಆಲಿಸಿ

ರೈತರಿಗೆ

1)

ಚಿಂದಿಯುಟ್ಟ ರೈತ ಗೊಂಬೆಯೇ,
ನೀನೇಕೆ ನಗುತ್ತಿರುವೆ?
"ನನ್ನ ಕಣ್ಣಲ್ಲಿನ ಗುರಿ ಮುಟ್ಟಿದ ಸಂಭ್ರಮದಲ್ಲಿದೆ ಉತ್ತರ"
ಬಹುಜನ ರೈತರೇ ನೀವೇಕೆ ರಕ್ತಸಿಕ್ತರಾಗಿದ್ದೀರಿ?
"ನನ್ನ ಚರ್ಮವೊಂದು ಪಾಪ,
ನನ್ನ ಹಸಿವು ರಶೀದ್‌."

2)

ರಕ್ಷಾ ವಚದೊಳಗಿನ ಮಹಿಳೆಯರೇ
ಹೇಗೆ ನಡೆಯುವಿರಿ ಈ ಮೆರವಣಿಗೆಯಲ್ಲಿ?
"ಕುಡುಗೋಲು ಮತ್ತು ನಕ್ಷತ್ರದೊಡನೆ
ಲಕ್ಷಾಂತರ ಜನರ ಕಣ್ಣೆದುರು."

ಬಿಡಿಗಾಸಿಲ್ಲದ ರೈತರೇ,  ನೀವು ನಿಡುಸುಯ್ಯುವುದು ಹೇಗೆ?
"ಒಂದು ಹಿಡಿ ಗೋಧಿಯಂತೆ,
ಬೈಸಾಖಿಯ ಸಣ್ಣ ಗೋಧಿಯಂತೆ."

3)

ಕೆಂಪು, ಕೆಂಪು ರೈತರೇ ನೀವೆಲ್ಲಿ ನೆಲೆಸಿರುವಿರಿ?
“ಚಂಡಮಾರುತದ ಎದೆಯಲ್ಲಿ,
ಲೋಹ್ರಿಯ ಆಳದಲ್ಲಿ.”
ಮಣ್ಣು ಮಿದಿಯುವ ರೈತರೇ, ನೀವೆಲ್ಲಿಗೆ ಓಡುತ್ತಿರುವಿರಿ?
“ಉರಿವ ಸೂರ್ಯನೆದರು,
ಮಂತ್ರ ಘೋಷಕ್ಕೆ, ಸುತ್ತಿಗೆಯಿಂದ ಬಡಿಯಲಿಕ್ಕೆ.”

4)

ಭೂರಹಿತ ರೈತರೇ, ನೀವು ಕನಸು ಕಾಣುವುದೆಂದು?
"ಮಳೆ ಹನಿಯೊಂದು
ನಿಮ್ಮ ಘೋರ ಆಡಳಿತವನ್ನು ಬೆಂಕಿಯಾಗಿ ಸುಟ್ಟಂದು."
ಮನೆಯ ನೆನಪಿನಲಿ ತುಡಿವ ಸೈನಿಕರೇ ನೀವೆಂದು ಬಿತ್ತನೆ ನಡೆಸುವುದು?
"ನೇಗಿಲಿನ ಅಂಚು
ಅರಚುವ ಕಾಗೆಗಳ ಮೇಲೆ ಬಿದ್ದಂದು."

5)

ಆದಿವಾಸಿ ರೈತರೇ ನೀವು ಹಾಡುವುದೇನು?
"ಕಣ್ಣಿಗೊಂದು ಕಣ್ಣು,
ರಾಜನ ಅಹಂ ಆಗಲಿ ಮಣ್ಣು."
ಓ, ತಡರಾತ್ರಿಯ ರೈತರೇ ನೀವು ಹೊಂದಬಯಸುವುದೇನು?
"ರಾಜ್ಯಗಳು ಪತನವಾದಾಗ,
ನಮ್ಮ ಅನಾಥ ಹೊಲಗಳನ್ನು"


ಪಾರಿಭಾಷಿಕ ಪದಕೋಶ

ಬಹುಜನರು: ದಲಿತರು, ಶೂದ್ರರು, ಮತ್ತು ಆದಿವಾಸಿಗಳು

ಲೋಹ್ರಿ: ಚಳಿಗಾಲ ಮುಗಿದ ಸಂಭ್ರಮವನ್ನು ಆಚರಿಸುವ ಹಬ್ಬ (ಮಕರ ಸಂಕ್ರಾಂತಿ)

ಮಸ್ನಾಡ್:‌ ಕಿರೀಟ

ರಶೀದ್:‌ ವಿಧೇಯ, ನೀತಿವಂತ

ಸತ್ರಪ್: ಚಕ್ರವರ್ತಿಗೆ ಅಧೀನನಾದ ಊಳಿಗಮಾನ್ಯ ಆಡಳಿತಗಾರ

ಟ್ರೆಬುಚೆಟ್: ದೊಡ್ಡ ಮುತ್ತಿಗೆ-ಆಯುಧ (ಒಂದು ರೀತಿಯ ಕವಣೆ)

ವೈಶಾಖಿ: (ಬೈಸಾಖಿ ) : ಮುಖ್ಯವಾಗಿ ಪಂಜಾಬಿನಲ್ಲಿ, ಆದರೆ ಉತ್ತರ ಭಾರತದ ಇತರ ಭಾಗಗಳಲ್ಲಿಯೂ ಆಚರಿಸಲಾಗುವ ವಸಂತ-ಸುಗ್ಗಿಯ ಹಬ್ಬ

ಸಾಂಘಿಕ ಪ್ರಯತ್ನಕ್ಕೆ ಗಮನಾರ್ಹ ಕೊಡುಗೆ ನೀಡಿದ ಸ್ಮಿತಾ ಖಟೋರ್ ಅವರಿಗೆ ನಾವು ಧನ್ಯವಾದ ಅರ್ಪಿಸುತ್ತೇವೆ.

ಅನುವಾದ: ಶಂಕರ. ಎನ್. ಕೆಂಚನೂರು

Poems and Text : Joshua Bodhinetra

جوشوا بودھی نیتر نے جادوپور یونیورسٹی، کولکاتا سے تقابلی ادب میں ایم فل کیا ہے۔ وہ ایک شاعر، ناقد اور مصنف، سماجی کارکن ہیں اور پاری کے لیے بطور مترجم کام کرتے ہیں۔

کے ذریعہ دیگر اسٹوریز Joshua Bodhinetra
Illustrations : Labani Jangi

لابنی جنگی مغربی بنگال کے ندیا ضلع سے ہیں اور سال ۲۰۲۰ سے پاری کی فیلو ہیں۔ وہ ایک ماہر پینٹر بھی ہیں، اور انہوں نے اس کی کوئی باقاعدہ تربیت نہیں حاصل کی ہے۔ وہ ’سنٹر فار اسٹڈیز اِن سوشل سائنسز‘، کولکاتا سے مزدوروں کی ہجرت کے ایشو پر پی ایچ ڈی لکھ رہی ہیں۔

کے ذریعہ دیگر اسٹوریز Labani Jangi
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru