ಪಾಣಿಮಾರಾದ ಸ್ವಾತಂತ್ರ್ಯ ಹೋರಾಟಗಾರರು ಇತರ ರಂಗಗಳಲ್ಲಿಯೂ ಹೋರಾಡಬೇಕಾಯಿತು. ಅವರಲ್ಲಿ ಕೆಲವರಂತೂ ತಮ್ಮ ಮನೆಯಲ್ಲಿಯೂ ಹೋರಾಡಬೇಕಾಯಿತು.

ಅಸ್ಪೃಶ್ಯತೆಯ ವಿರುದ್ಧ ಗಾಂಧೀಜಿಯವರ ಕರೆಗೆ ಓಗೊಟ್ಟ ಅವರು ಆ ನಿಟ್ಟಿನಲ್ಲಿ ಸಕ್ರಿಯರಾದರು.

"ಒಂದು ದಿನ, ನಾವು 400 ದಲಿತರೊಂದಿಗೆ ಈ ಗ್ರಾಮದ ಜಗನ್ನಾಥ ದೇವಸ್ಥಾನವನ್ನು ಪ್ರವೇಶಿಸಿದ್ದೆವು" ಎಂದು ಚಾಮರೂ ಹೇಳುತ್ತಾರೆ. ಬ್ರಾಹ್ಮಣರಿಗೆ ಇದು ಇಷ್ಟವಾಗಲಿಲ್ಲ. ಆದರೆ, ಅವರಲ್ಲಿ ಕೆಲವರು ನಮಗೆ ಬೆಂಬಲ ನೀಡಿದ್ದರು. ಬಹುಶಃ ಅದನ್ನು ಕೂಡ ಬಲವಂತದಿಂದಾಗಿ ಮಾಡಿರಬಹುದು. ಆ ಸಮಯದಲ್ಲಿ ಅಂತಹ ವಾತಾವರಣವಿತ್ತು. ಗೌಂಟಿಯಾ (ಗ್ರಾಮದ ಮುಖ್ಯಸ್ಥ) ದೇವಾಲಯದ ವ್ಯವಸ್ಥಾಪಕ ಟ್ರಸ್ಟಿಯಾಗಿದ್ದರು. ಬಹಳ ಸಿಟ್ಟಾಗಿದ್ದ  ಅವರು ಪ್ರತಿಭಟನೆ ಸಮಯದಲ್ಲಿ ಗ್ರಾಮವನ್ನು ತೊರೆದರು. ಆದರೆ, ಅವರ ಮಗ ಸ್ವತಃ ನಮ್ಮೊಂದಿಗೆ ಸೇರಿಕೊಂಡನು, ಅವನು ನಮ್ಮನ್ನು ಬೆಂಬಲಿಸಿದ್ದು ಮಾತ್ರವಲ್ಲದೆ ತಂದೆಯ ನಡೆಯನ್ನು ಕೂಡ ಖಂಡಿಸಿದನು.

ಆಗ ಇಂಗ್ಲಿಷ್ ಸರಕುಗಳ ವಿರುದ್ಧದ ಅಭಿಯಾನವು ಗಂಭೀರವಾಗಿತ್ತು. ನಾವು ಖಾದಿಯನ್ನು ಮಾತ್ರ ಧರಿಸುತ್ತಿದ್ದೆವು.ಇದನ್ನು ನಾವೇ ನೇಯ್ದುಕೊಳ್ಳುತ್ತಿದ್ದೆವು. ವಿಚಾರಧಾರೆ ಅದರ ಒಂದು ಭಾಗವಾಗಿತ್ತಾದರೂ ನಾವು ನಿಜವಾಗಿಯೂ ಬಡವರಾಗಿದ್ದೆವು ಇದರಿಂದ ನಮಗೆ ಒಳಿತೂ ಆಯಿತು.

ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರೂ ನಂತರದ ದಶಕಗಳವರೆಗೆ ಎಂದರೆ ತಮ್ಮಿಂದ ನೂಲುವುದು ಮತ್ತು ನೇಯ್ಗೆ ಸಾಧ್ಯವಿರುವವರೆಗೂ ಈ ಅಭ್ಯಾಸವನ್ನು ಮುಂದುವರೆಸಿದರು,  "ಕಳೆದ ವರ್ಷ, ನನ್ನ 90ನೇ ವಯಸ್ಸಿನಲ್ಲಿ, ಈ ಅಭ್ಯಾಸ ಇನ್ನು ಸಾಧ್ಯವಿಲ್ಲವೆನ್ನಿಸಿ ನಿಲ್ಲಿಸಿದೆ" ಎಂದು ಚಾಮರೂ ಹೇಳುತ್ತಾರೆ.

ಇದು 1930ರಲ್ಲಿ ಸಂಬಲ್ಪುರದಲ್ಲಿ ನಡೆದ ಕಾಂಗ್ರೆಸ್-ಪ್ರೇರಿತ "ತರಬೇತಿ" ಶಿಬಿರದೊಂದಿಗೆ ಆರಂಭಗೊಂಡಿತು. "ಈ ತರಬೇತಿಯನ್ನು` ಸೇವಾ 'ಎಂದು ಕರೆಯಲಾಗುತ್ತಿತ್ತು ಆದರೆ ಅಲ್ಲಿ ನಮಗೆ ಜೈಲಿನಲ್ಲಿನ ಜೀವನದ ಬಗ್ಗೆ ಕಲಿಸಲಾಗುತ್ತಿತ್ತು. ಅಲ್ಲಿ ಶೌಚಾಲಯಗಳನ್ನು ಶುಚಿಗೊಳಿಸುವ ಬಗ್ಗೆ, ನೀಡಲಾಗುವ ಕಳಪೆ ಆಹಾರದ ಬಗ್ಗೆ. ತರಬೇತಿ ನಿಜವಾಗಿಯೂ ಏನೆಂದು ನಮಗೆಲ್ಲರಿಗೂ ತಿಳಿದಿತ್ತು. ನಾವು ಒಂಬತ್ತು ಮಂದಿ ಹಳ್ಳಿಯಿಂದ ಈ ಶಿಬಿರಕ್ಕೆ ಶಿಬಿರ.

"ಇಡೀ ಹಳ್ಳಿಯು ನಮ್ಮನ್ನು ಹಾರಗಳು ಮತ್ತು ಸಿಂಧೂರ ಮತ್ತು ಹಣ್ಣುಗಳೊಂದಿಗೆ ಸ್ವಾಗತಿಸಿತು. ಆಗ ಆ ಮಟ್ಟದ ಉತ್ಸಾಹ ಮತ್ತು ಮಹತ್ವಪೂರ್ಣತೆ ಇಂತಹ ವಿಷಯಗಳ ಕುರಿತು ಇತ್ತು.

ಇದರ ಹಿನ್ನೆಲೆಯಲ್ಲಿ ಮಹಾತ್ಮರ ಮಾಯಾಜಾಲವೂ ಇತ್ತು. "ಸತ್ಯಾಗ್ರಹಕ್ಕೆ ಸೇರುವಂತೆ ಜನರಿಗೆ ಕರೆ ನೀಡಿದ್ದ ಅವರ ಪತ್ರವು ನಮ್ಮಲ್ಲಿ ವಿದ್ಯುತ್ ಸಂಚಾರ ಮಾಡಿತು. ಇಲ್ಲಿ ನಾವು ಬಡವರು, ಅನಕ್ಷರಸ್ಥರು, ನಮ್ಮ ಜಗತ್ತನ್ನು ಬದಲಾಯಿಸಲು ಅಧಿಕಾರವನ್ನು ವಿರೋಧಿಸಿ ನಡೆದುಕೊಳ್ಳಬಹುದು ಎಂದು ಹೇಳಲಾಯಿತು. ಆದರೆ ನಾವು ಅಹಿಂಸೆ, ನೀತಿ ಸಂಹಿತೆಯನ್ನು ಪಾಲಿಸುತ್ತೇವೆಂದು ಪ್ರತಿಜ್ಞೆ ಮಾಡಿದೆವು." ಪಾಣಿಮಾರದ ಬಹುತೇಕ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಜೀವನದುದ್ದಕ್ಕೂ ಅವರ ಬದುಕಿನ ಸಂಹಿತೆಯಾಗಿಸಿಕೊಂಡರು.

ಆಗ ಅವರು ಗಾಂಧೀಜಿಯನ್ನು ನೋಡಿರಲಿಲ್ಲ. ಆದರೆ ಲಕ್ಷಾಂತರ ಇತರ ಜನರಂತೆ, ಅವರ ಕರೆಗೆ ಇವರೂ ಸ್ಪಂದಿಸಿದ್ದರು. "ಕಾಂಗ್ರೆಸ್ ನಾಯಕರಾದ ಮನಮೋಹನ್ ಚೌಧರಿ ಮತ್ತು ದಯಾನಂದ್ ಸತ್ಪತಿಯವರು ನಮಗೆ ಇಲ್ಲಿ ಸ್ಫೂರ್ತಿ ನೀಡಿದರು." ಪಾಣಿಮಾರ ಹೋರಾಟಗಾರರು ಆಗಸ್ಟ್ 1942ಕ್ಕಿಂತ ಮುಂಚೆಯೇ ಜೈಲಿಗೆ ತಮ್ಮ ಮೊದಲ ಪ್ರವೇಶವನ್ನು ಮಾಡಿದ್ದರು. “ಯುದ್ಧಕ್ಕೆ [ಎರಡನೆಯ ಮಹಾಯುದ್ಧ] ಹಣದ ರೂಪದಲ್ಲಿ ಅಥವಾ ವೈಯಕ್ತಿಕವಾಗಿ ಯಾವುದೇ ರೀತಿಯ ಸಹಕಾರವನ್ನು ನೀಡುವುದು ದ್ರೋಹವೆಂದು ನಾವು ಪ್ರಮಾಣ ಮಾಡಿದ್ದೆವು. ಅದೊಂದು ಪಾಪ. ಯುದ್ಧವನ್ನು ಎಲ್ಲಾ ಅಹಿಂಸಾತ್ಮಕ ವಿಧಾನಗಳಿಂದ ಪ್ರತಿಭಟಿಸಬೇಕಾಗಿತ್ತು. ಈ ಗ್ರಾಮದ ಎಲ್ಲರೂ ಇದನ್ನು ಬೆಂಬಲಿಸಿದರು.

"ನಾವು ಆರು ವಾರಗಳ ಕಾಲ ಕಟಕ್ ಜೈಲಿಗೆ ಹೋದೆವು. ಬ್ರಿಟಿಷರು ಜನರನ್ನು ಹೆಚ್ಚು ಕಾಲ ಸೆರೆಯಲ್ಲಿಡುತ್ತಿರಲಿಲ್ಲ. ಮುಖ್ಯವಾಗಿ ಆಗ ಸಾವಿರಾರು ಜನರು ಅವರ ಜೈಲುಗಳಲ್ಲಿ ಕಿಕ್ಕಿರಿದು ತುಂಬಿದ್ದರು. ಜೈಲಿಗೆ ಹೋಗಲು ತುಂಬಾ ಜನರು ಸಿದ್ಧರಿದ್ದರು."

Jitendra Pradhan, 81, and others singing one of Gandhi's favourite bhajans
PHOTO • P. Sainath

81 ವರ್ಷದ ಜಿತೇಂದ್ರ ಪ್ರಧಾನ್ ಮತ್ತು ಇತರರು ಗಾಂಧಿಯ ನೆಚ್ಚಿನ ಭಜನೆಗಳಲ್ಲಿ ಒಂದನ್ನು ಹಾಡುತ್ತಿರುವುದು

ಅಸ್ಪೃಶ್ಯತೆಯ ವಿರುದ್ಧದ ಅಭಿಯಾನವು ಮೊದಲ ಆಂತರಿಕ ಒತ್ತಡವನ್ನು ಸೃಷ್ಟಿಸಿತು. ಆದರೆ ನಾವು ಅದನ್ನು ಜಯಿಸಿದೆವು." ಎಂದು ದಯಾನಿಧಿ ಹೇಳುತ್ತಾರೆ, "ಇಂದಿಗೂ ನಾವು ನಮ್ಮ ಹೆಚ್ಚಿನ ಆಚರಣೆಗಳಲ್ಲಿ ಬ್ರಾಹ್ಮಣರನ್ನು ಬಳಸುವುದಿಲ್ಲ. ಈ 'ದೇವಾಲಯದ ಪ್ರವೇಶ' ಅವರಲ್ಲಿನ ಕೆಲವರಿಗೆ ಕೋಪ ತಂದಿತ್ತು. ಆದರೆ, ಖಂಡಿತ, ಅವರಲ್ಲಿ ಹೆಚ್ಚಿನವರು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ನಮ್ಮೊಂದಿಗೆ ಸೇರಬೇಕಾದ ಒತ್ತಡಕ್ಕೊಳಗಾದರು."

ಜಾತಿ ಕೂಡ ಅನೇಕ ಸಮಸ್ಯೆಗಳನ್ನು ಸೃಷ್ಟಿಸಿದೆ. "ನಾವು ಜೈಲಿನಿಂದ ಹೊರಬಂದಾಗಲೆಲ್ಲಾ, ಹತ್ತಿರದ ಹಳ್ಳಿಗಳ ಸಂಬಂಧಿಗಳು ಪ್ರತಿ ಬಾರಿ ನಮ್ಮ 'ಶುದ್ಧೀಕರಣ' ಮಾಡಲು ಬಯಸುತ್ತಾರೆ" ಎಂದು ಮದನ್ ಭೋಯಿ ಹೇಳುತ್ತಾರೆ. ನಾವು ಜೈಲಿನಲ್ಲಿ ಅಸ್ಪೃಶ್ಯರೊಂದಿಗೆ ಸಮಯ ಕಳೆದಿದ್ದೇವೆ ಎನ್ನುವುದು ಇದಕ್ಕೆ ಕಾರಣವಾಗಿತ್ತು. (ವಿ.ಸೂ:ಗ್ರಾಮೀಣ ಒರಿಸ್ಸಾದಲ್ಲಿ ಜೈಲಿನಲ್ಲಿ ಇದ್ದು ಬರುವ ಮೇಲ್ಜಾತಿಯವರ ಶುದ್ಧೀಕರಣ ಸಂಪ್ರದಾಯ ಇಂದಿಗೂ ಮುಂದುವರೆದಿದೆ)

ಭೋಯಿ ಮತ್ತಷ್ಟು ವಿವರಿಸುತ್ತಾರೆ, "ನಾನು ಜೈಲಿನಿಂದ ಹೊರಬಂದಾಗ, ನನ್ನ ಅಜ್ಜಿಯ 11ನೇ ದಿನವನ್ನು ಆಚರಿಸಲಾಯಿತು. ನಾನು ಜೈಲಿನಲ್ಲಿದ್ದಾಗ ಅವರು ತೀರಿಕೊಂಡರು. ಅಮ್ಮ ನನ್ನನ್ನು ಕೇಳಿದರು, 'ಮದನ್, ನೀನು ಶುದ್ಧಿಯಾಗಿದ್ದೀಯಾ?' ನಾನು ಇಲ್ಲ ಎಂದು ಹೇಳಿದೆ, ನಾವು ಸತ್ಯಾಗ್ರಹಿಗಳಾಗಿ ನಮ್ಮ ಕಾರ್ಯಗಳಿಂದ ಇತರ ಜನರನ್ನು ಶುದ್ಧೀಕರಿಸುತ್ತೇವೆ. ನಂತರ ಮನೆಯ ಜನರಿಂದ ಸಂಪೂರ್ಣವಾಗಿ ಬೇರೆಯಾಗಿ ಮೂಲೆಯಲ್ಲಿ ಕುಳಿತುಕೊಳ್ಳುವಂತೆ ಹೇಳಿದರು. ನನ್ನನ್ನು ಬೇರ್ಪಡಿಸಲಾಯಿತು, ಆಹಾರವನ್ನು ಕೂಡ ಪ್ರತ್ಯೇಕವಾಗಿ ಕುಳಿತು ತಿನ್ನುವಂತೆ ಮಾಡಿದರು.

"ನಾನು ಜೈಲಿಗೆ ಹೋಗುವ ಮೊದಲೇ ನನ್ನ ಮದುವೆ ನಿಶ್ಚಯವಾಗಿತ್ತು. ನಾನು ಹೊರಗೆ ಬಂದಾಗ ಮದುವೆ ಮುರಿದು ಬಿತ್ತು. ಹುಡುಗಿಯ ತಂದೆ ಜೈಲಿನಲ್ಲಿರುವ ಹುಡುಗನನ್ನು ತನ್ನ ಅಳಿಯನನ್ನಾಗಿ ಮಾಡಿಕೊಳ್ಳಲು ಬಯಸಲಿಲ್ಲ. ಇದೆಲ್ಲದರ ನಂತರ ನಾನು ಸಾರಂದಪಲ್ಲಿ ಗ್ರಾಮದಲ್ಲಿ ಇನ್ನೊಂದು ಹುಡುಗಿಯನ್ನು ನೋಡಿ ಮದುವೆಯಾದೆ; ಈ ಗ್ರಾಮದಲ್ಲಿ ಕಾಂಗ್ರೆಸ್ ಸಾಕಷ್ಟು ಪ್ರಭಾವ ಬೀರಿತ್ತು.

* * *

ಚಾಮರೂ, ಜಿತೇಂದ್ರ ಮತ್ತು ಪೂರ್ಣಚಂದ್ರ ಅವರು ಆಗಸ್ಟ್ 1942ರಲ್ಲಿ ಜೈಲಿನಲ್ಲಿದ್ದಾಗ ಯಾವುದೇ ಶುದ್ಧೀಕರಣದ ಅಗತ್ಯವನ್ನು ಎದುರಿಸಲಿಲ್ಲ.

ಜಿತೇಂದ್ರ ಹೇಳುತ್ತಾರೆ, "ಅವರು ನಮ್ಮನ್ನು ಅಪರಾಧಿಗಳ ಸೆರೆಮನೆಗೆ ಕಳುಹಿಸಿದರು. ನಾವು ಹೆಚ್ಚಿನ ಸಮಯವನ್ನು ಅಲ್ಲಿ ಕಳೆದಿದ್ದೆವು. ಆ ದಿನಗಳಲ್ಲಿ ಬ್ರಿಟಿಷರು ಸೈನಿಕರನ್ನು ನೇಮಿಸಿಕೊಳ್ಳುತ್ತಿದ್ದರು ಮತ್ತು ಈ ಸೈನಿಕರು ಜರ್ಮನಿಯ ವಿರುದ್ಧದ ಹೋರಾಟದಲ್ಲಿ ಭಾಗವಹಿಸುವ ಮೂಲಕ ಅವರಿಗಾಗಿ ಸಾಯಬೇಕೆಂದು ಬಯಸಿದ್ದರು. ಅದಕ್ಕಾಗಿಯೇ, ಅವರು ಅಪರಾಧಿಗಳಾಗಿ ದೀರ್ಘ ಶಿಕ್ಷೆ ಅನುಭವಿಸುತ್ತಿರುವ ಜನರಿಗೆ ಭರವಸೆ ನೀಡಲು ಪ್ರಾರಂಭಿಸಿದರು. ಯುದ್ಧದಲ್ಲಿ ಹೋರಾಡಲು ಒಪ್ಪಿದವರಿಗೆ 100 ರೂಪಾಯಿಗಳನ್ನು ನೀಡಲಾಯಿತು. ಅಲ್ಲದೆ ಪ್ರತಿಯೊಂದು ಕುಟುಂಬಕ್ಕೂ 500 ರೂ. ನೀಡಲಾಗುತ್ತಿತ್ತು ಮತ್ತು ಯುದ್ಧ ಮುಗಿದ ನಂತರ ಅವರನ್ನು ಬಿಡುಗಡೆ ಮಾಡಲಾಗುವ ಭರವಸೆ ನೀಡಲಾಗಿತ್ತು.

"ಶಿಕ್ಷೆಗೊಳಗಾದ ಕೈದಿಗಳ ನಡುವೆ ನಾವು ಅಭಿಯಾನವನ್ನು ಆರಂಭಿಸಿ 500 ರೂಪಾಯಿಗೆ ಸಾಯುವುದು ಮತ್ತು ಅವರ ಹೋರಾಟದಲ್ಲಿ ಸೇರುವುದು ಸರಿಯೇ? ಸಾಯುವವರಲ್ಲಿ ನೀವು ಮೊದಲಿಗರಾಗುತ್ತೀರಿ. ನೀವು ಅವರಿಗೆ ಮುಖ್ಯವಲ್ಲ. ನೀವು ಅವರ ಫಿರಂಗಿಯ ಗನ್ ಪೌಡರ್ ಆಗಲು ಏಕೆ ಬಯಸುತ್ತೀರಿ?" ಎಂದು ಕೇಳಿದೆವು

Showing a visitor the full list of Panimara's fighters
PHOTO • P. Sainath

ಪಾಣಿಮಾರಾದ ಹೋರಾಟಗಾರರ ಸಂಪೂರ್ಣ ಪಟ್ಟಿಯನ್ನು ಅತಿಥಿಗೆ ತೋರಿಸುತ್ತಿರುವುದು

"ಕೆಲವು ದಿನಗಳ ನಂತರ, ಅವರು ನಮ್ಮ ಮಾತುಗಳನ್ನು ನಂಬಲು ಆರಂಭಿಸಿದರು. (ಅವರು ನಮ್ಮನ್ನು ಗಾಂಧಿ ಅಥವಾ ಸರಳವಾಗಿ ಕಾಂಗ್ರೆಸ್ ಎಂದು ಕರೆಯುತ್ತಿದ್ದರು). ಅವರಲ್ಲಿ ಹಲವರು ಬ್ರಿಟಿಷರ ಈ ಯೋಜನೆಯಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡರು. ಅವರು ದಂಗೆಯೆದ್ದರು ಮತ್ತು ಯುದ್ಧಕ್ಕೆ ಹೋಗಲು ನಿರಾಕರಿಸಿದರು. ಜೈಲಿನ ವಾರ್ಡನ್ ತುಂಬಾ ಕೋಪಗೊಂಡರು. ಅವರು ಕೇಳಿದರು, 'ನೀವು ಅವರನ್ನು ಏಕೆ ಬದಲಾಯಿಸಿದಿರಿ? ಮೊದಲಿಗೆ ಅವರು ಹೋಗಲು ಸಿದ್ಧರಾಗಿದ್ದಋು. ನಾವು, ನೀವು ನಮ್ಮನ್ನು ಅಪರಾಧಿಗಳ ನಡುವೆ ಇರಿಸಿದ್ದು ಒಳ್ಳೆಯದಾಯಿತು ಇದರಿಂದಾಗಿ ನಾವು ಅವರಿಗೆ ವಸ್ತುಸ್ಥಿತಿಯನ್ನು ವಿವರಿಸಲು ಸಾಧ್ಯವಾಯಿತು ಎಂದು ಹೇಳಿದೆವು.

ಮರುದಿನ ನಮ್ಮನ್ನು ರಾಜಕೀಯ ಕೈದಿಗಳೊಂದಿಗೆ ಜೈಲಿಗೆ ಕಳುಹಿಸಲಾಯಿತು. ನಮ್ಮ ಶಿಕ್ಷೆಯನ್ನು ಸರಳ ಜೈಲುವಾಸವಾಗಿ ಆರು ತಿಂಗಳುಗಳಿಗೆ ಬದಲಾಯಿಸಲಾಯಿತು.

* * *

ಬ್ರಿಟಿಷ್ ರಾಜ್ ಅವರಿಗೆ ಯಾವ ರೀತಿಯ ದೌರ್ಜನ್ಯಗಳನ್ನು ಮಾಡಿದ್ದರು, ಯಾವ ಕಾರಣದಿಂದಾಗಿ ಅವರು ಅಂತಹ ಶಕ್ತಿಯುತ ಸರ್ಕಾರದೊಂದಿಗೆ ಘರ್ಷಣೆಗೆ ಸಿದ್ಧರಾಗಿದ್ದರು?

"ಬ್ರಿಟಿಷ್ ರಾಜ್ಯದಲ್ಲಿ ನ್ಯಾಯವೆಲ್ಲಿತ್ತು ಎಂದು ನನ್ನನ್ನು ಕೇಳಿ" ಎಂದು ಚಾಮರೂ ಸೌಮ್ಯವಾಗಿ ಗದರಿದರು. ಅದು ಅವರಿಗೆ ಜಾಣತನದ ಪ್ರಶ್ನೆಯಾಗಿರಲಿಲ್ಲ. "ಅಲ್ಲಿ ಎಲ್ಲವೂ ಅನ್ಯಾಯವೇ ಆಗಿತ್ತು."

ನಾವು ಬ್ರಿಟಿಷರ ಗುಲಾಮರಾಗಿದ್ದೆವು. ಅವರು ನಮ್ಮ ಆರ್ಥಿಕತೆಯನ್ನು ನಾಶಪಡಿಸಿದರು. ನಮ್ಮ ಜನರಿಗೆ ಯಾವುದೇ ಹಕ್ಕುಗಳಿರಲಿಲ್ಲ. ನಮ್ಮ ಕೃಷಿ ನಾಶವಾಗಿತ್ತು. ಜನರು ತೀವ್ರ ಬಡತನಕ್ಕೆ ತಳ್ಳಲ್ಪಟ್ಟರು. ಜುಲೈ ಮತ್ತು ಸೆಪ್ಟೆಂಬರ್ 1942ರ ನಡುವೆ, 400 ಕುಟುಂಬಗಳಲ್ಲಿ, ಕೇವಲ ಐದು ಅಥವಾ ಏಳು ಕುಟುಂಬಗಳ ಬಳಿ ಆಹಾರ ಪದಾರ್ಥಗಳು ಮಾತ್ರ ಉಳಿದಿತ್ತು. ಉಳಿದವರು ಹಸಿವು ಮತ್ತು ಅವಮಾನವನ್ನು ಎದುರಿಸಬೇಕಾಯಿತು.”

"ಈಗಿನ ಆಡಳಿತ ಕೂಡ ಸಂಪೂರ್ಣವಾಗಿ ನಾಚಿಕೆ ಬಿಟ್ಟಿದೆ. ಅವರು ಬಡವರನ್ನೂ ದೋಚುತ್ತಾರೆ. ಕ್ಷಮಿಸಿ, ನಾನು ಯಾರನ್ನೂ ಬ್ರಿಟಿಷ್ ರಾಜ್‌ಗೆ ಹೋಲಿಸುತ್ತಿಲ್ಲ, ಆದರೆ ಇಂದು ನಮ್ಮ ಆಡಳಿತಗಾರರು ಕೂಡ ಹಾಗೆ ಇದ್ದಾರೆ.”

* * *

ಪಾಣಿಮಾರದ ಸ್ವಾತಂತ್ರ್ಯ ಹೋರಾಟಗಾರರು ಇಂದಿಗೂ ಬೆಳಿಗ್ಗೆ ಜಗನ್ನಾಥ ದೇವಸ್ಥಾನಕ್ಕೆ ಹೋಗುತ್ತಾರೆ. ಅಲ್ಲಿ ಅವರು 1942ರಿಂದ ಮಾಡುತ್ತಿರುವಂತೆ 'ನಿಸ್ಸಾನ್' (ಡೊಳ್ಳು) ನುಡಿಸುತ್ತಾರೆ. ಅವರು ಹೇಳುವಂತೆ ಮುಂಜಾನೆ ಡ್ರಮ್‌ಗಳ ಶಬ್ದವು ಹಲವು ಕಿಲೋಮೀಟರ್‌ಗಳವರೆಗೆ ಕೇಳಿಸುತ್ತದೆ.

ಜೊತೆಗೆ, ಪ್ರತಿ ಶುಕ್ರವಾರ, ಈ ಸ್ವಾತಂತ್ರ್ಯ ಹೋರಾಟಗಾರರು ಸಂಜೆ 5.17ಕ್ಕೆ ಅಲ್ಲಿ ಸೇರಲು ಪ್ರಯತ್ನಿಸುತ್ತಾರೆ, ಏಕೆಂದರೆ "ಮಹಾತ್ಮನ ಹತ್ಯೆಯಾಗಿದ್ದು ಶುಕ್ರವಾರ". ಹಳ್ಳಿಗರು ಈ ಸಂಪ್ರದಾಯವನ್ನು ಕಳೆದ 54 ವರ್ಷಗಳಿಂದ ನಿರ್ವಹಿಸುತ್ತಿದ್ದಾರೆ.

ಇಂದು ಕೂಡ ಶುಕ್ರವಾರ, ಮತ್ತು ನಾವೂ ಅವರೊಂದಿಗೆ ದೇವಸ್ಥಾನಕ್ಕೆ ಹೋದೆವು. ಏಳು ಜೀವಂತ ಸ್ವಾತಂತ್ರ್ಯ ಹೋರಾಟಗಾರರು ನಮ್ಮೊಂದಿಗೆ ಇದ್ದರು. ಚಾಮರೂ, ದಯಾನಿಧಿ, ಮದನ್ ಮತ್ತು ಜಿತೇಂದ್ರ. ಉಳಿದ ಮೂವರು - ಚೈತನ್ಯ, ಚಂದ್ರಶೇಖರ್ ಸಾಹು ಮತ್ತು ಚಂದ್ರಶೇಖರ್ ಪರಿದಾ - ಪ್ರಸ್ತುತ ಹಳ್ಳಿಯಿಂದ ಹೊರಗಿದ್ದಾರೆ.

The last living fighters in Panimara at their daily prayers
PHOTO • P. Sainath

ಪಾಣಿಮಾರದ ಕೊನೆಯ ಜೀವಂತ ಸ್ವಾತಂತ್ರ್ಯ ಹೋರಾಟಗಾರರು ಪ್ರಾರ್ಥನೆ ಸಲ್ಲಿಸುತ್ತಿರುವುದು

ದೇವಾಲಯದ ಪ್ರಾಂಗಣವು ಜನರಿಂದ ತುಂಬಿತ್ತು, ಈ ಜನರು ಗಾಂಧೀಜಿಯ ಸುಂದರ ಸ್ತುತಿಯನ್ನು ಹಾಡುತ್ತಿದ್ದಾರೆ. "1948ರಲ್ಲಿ, ಮಹಾತ್ಮರ ಹತ್ಯೆಯ ಸುದ್ದಿ ತಿಳಿದಾಗ ಈ ಹಳ್ಳಿಯ ಅನೇಕ ಜನರು ತಮ್ಮ ಕೂದಲನ್ನು ಬೋಳಿಸಿಕೊಂಡರು" ಎಂದು ಚಾಮರೂ ಹೇಳುತ್ತಾರೆ. ಅವರಿಗೆ ತನ್ನ ತಂದೆಯನ್ನು ಕಳೆದುಕೊಂಡಂತೆಯೇ ಭಾಸವಾಯಿತು. ಮತ್ತು ಇಂದಿಗೂ ಸಹ, ಅನೇಕ ಜನರು ಶುಕ್ರವಾರ ಉಪವಾಸ ಮಾಡುತ್ತಾರೆ.

ಕೆಲವು ಮಕ್ಕಳು ಕುತೂಹಲಕ್ಕೆಂದು ದೇವಸ್ಥಾನದ ಬಳಿ ಬಂದಿರಬಹುದು. ಆದರೆ ಇದು ಇತಿಹಾಸದ ಪ್ರಜ್ಞೆಯನ್ನು ಹೊಂದಿರುವ ಗ್ರಾಮ. ತನ್ನದೇ ಆದ ಶೌರ್ಯದ ಪ್ರಜ್ಞೆಯನ್ನು ಹೊಂದಿರುವ ಈ ಊರು ಸ್ವಾತಂತ್ರ್ಯದ ಜ್ವಾಲೆಯನ್ನು ಜೀವಂತವಾಗಿಡುವುದು ತನ್ನ ಕರ್ತವ್ಯವೆಂದು ಇಂದಿಗೂ ಭಾವಿಸುತ್ತದೆ.

ಪಾಣಿಮಾರ ಸಣ್ಣ ಕೃಷಿಕರಿಂದ ಕೂಡಿರುವ ಹಳ್ಳಿ. "ಸುಮಾರು 100 ಕುಲ್ತಾ (ಕೃಷಿಕ ಜಾತಿ) ಕುಟುಂಬಗಳು ಇದ್ದವು. ಸುಮಾರು 80 ಒರಿಯಾ (ಕೃಷಿಕರೂ ಹೌದು). ಸುಮಾರು 50 ಸೌರ ಆದಿವಾಸಿ ಕುಟುಂಬಗಳು, 10 ಅಕ್ಕಸಾಲಿಗ ಜಾತಿ ಕುಟುಂಬಗಳು. ಕೆಲವು ಗೌಡ್ (ಯಾದವ್) ಕುಟುಂಬಗಳು ಮತ್ತು ಇತ್ಯಾದಿ ಜನರಿದ್ದಾರೆ" ಎಂದು ದಯಾನಿಧಿ ಹೇಳುತ್ತಾರೆ.

ಅದು ವಿಶಾಲವಾಗಿ, ಹಳ್ಳಿಯಾಗಿಯೇ ಉಳಿದಿದೆ. ಸ್ವಾತಂತ್ರ್ಯ ಹೋರಾಟಗಾರರಲ್ಲಿ ಹೆಚ್ಚಿನವರು ಕೃಷಿಕ ಜಾತಿಗಳ ಸದಸ್ಯರಾಗಿದ್ದರು. "ನಿಜ, ನಾವು ಹೆಚ್ಚು ಅಂತರ್ಜಾತೀಯ ವಿವಾಹಗಳನ್ನು ಮಾಡಿಲ್ಲ. ಆದರೆ ಸ್ವಾತಂತ್ರ್ಯ ಹೋರಾಟದ ದಿನಗಳಿಂದ ಗುಂಪುಗಳ ನಡುವಿನ ಸಂಬಂಧಗಳು ಯಾವಾಗಲೂ ಉತ್ತಮವಾಗಿವೆ. ಈಗಲೂ ಎಲ್ಲರಿಗೂ ಈ ದೇವಾಲಯದ ಬಾಗಿಲು ತೆರೆದಿದೆ. ಎಲ್ಲರ ಹಕ್ಕುಗಳನ್ನು ಗೌರವಿಸಲಾಗುತ್ತದೆ.”

ತಮ್ಮ ಕೆಲವು ಹಕ್ಕುಗಳನ್ನು ಗುರುತಿಸಲಾಗಿಲ್ಲ ಎಂದು ಭಾವಿಸುವ ಕೆಲವರು ಇದ್ದಾರೆ. ಅಂತಹವರಲ್ಲಿ ದಿಬಿತ್ಯ ಭೋಯಿಯೂ ಒಬ್ಬರು. "ಆಗ ನಾನು ಬಹಳ ಸಣ್ಣ ಪ್ರಾಯದವನಾಗಿದ್ದೆ ಮತ್ತು ಬ್ರಿಟಿಷರು ನನಗೆ ಕೆಟ್ಟದಾಗಿ ಥಳಿಸಿದ್ದರು" ಎಂದು ಅವರು ಹೇಳುತ್ತಾರೆ. ಆಗ ಭೋಯಿ ಅವರಿಗೆ 13ರ ಹರೆಯವಾಗಿತ್ತು. ಆದರೆ ಅವರನ್ನು ಜೈಲಿಗೆ ಕಳುಹಿಸದ ಕಾರಣ, ಅವರ ಹೆಸರು ಸ್ವಾತಂತ್ರ್ಯ ಹೋರಾಟಗಾರರ ಅಧಿಕೃತ ಪಟ್ಟಿಯಲ್ಲಿ ಬರಲಿಲ್ಲ. ಇನ್ನೂ ಕೆಲವರನ್ನು ಬ್ರಿಟಿಷರು ಕೆಟ್ಟದಾಗಿ ಥಳಿಸಿದ್ದರು ಆದರೆ ಅವರು ಜೈಲಿಗೆ ಹೋಗದ ಕಾರಣ ಅಧಿಕೃತ ದಾಖಲೆಯಲ್ಲಿ ನಿರ್ಲಕ್ಷಿಸಲ್ಪಟ್ಟರು

ಸ್ತಂಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳಲ್ಲಿ ಇದು ಕಾಣುತ್ತದೆ. 1942ರಲ್ಲಿ ಜೈಲಿಗೆ ಹೋದ ಆ ಜನರ ಹೆಸರನ್ನು ಮಾತ್ರ ಅದರಲ್ಲಿ ದಾಖಲಿಸಲಾಗಿದೆ. ಆದರೆ ಅವರ ಹೆಸರುಗಳ ಬಗ್ಗೆ ಯಾರಿಗೂ ಆಕ್ಷೇಪವಿಲ್ಲ. "ಸ್ವಾತಂತ್ರ್ಯ ಹೋರಾಟಗಾರರ" ಅಧಿಕೃತ ಪಟ್ಟಿಯನ್ನು ಮಾಡಿದ ರೀತಿ, ಅದರಲ್ಲಿ ಇರಬೇಕಾದ ಕೆಲವು ಜನರ ಹೆಸರುಗಳನ್ನು ಬಿಟ್ಟುಬಿಟ್ಟಿರುವುದು ವಿಷಾದಕರ.

ಆಗಸ್ಟ್ 2002ರಲ್ಲಿ, ಅಂದರೆ 60 ವರ್ಷಗಳ ನಂತರ, ಮತ್ತೊಮ್ಮೆ ಪಾಣಿಮಾರಾದ ಸ್ವಾತಂತ್ರ್ಯ ಹೋರಾಟಗಾರರು ಅದೇ ಕೆಲಸವನ್ನು ಮಾಡಬೇಕಾಯಿತು.

ಈ ಬಾರಿ ಮದನ್ ಭೋಯಿ - ಏಳು ಜನರಲ್ಲಿ ಬಡವರು, ಅವರು ಕೇವಲ ಅರ್ಧ ಎಕರೆ ಭೂಮಿಯನ್ನು ಹೊಂದಿದ್ದಾರೆ - ಮತ್ತು ಅವರ ಸ್ನೇಹಿತರು ಧರಣಿಯಲ್ಲಿ ಕುಳಿತರು. ಈ ಧರಣಿ ಸೊಹೇಲಾ ದೂರವಾಣಿ ಕಚೇರಿಯ ಹೊರಭಾಗದಲ್ಲಿ ನಡೆಯಿತು. "ಕಲ್ಪಿಸಿಕೊಳ್ಳಿ," ಭೋಯಿ ಹೇಳುತ್ತಾರೆ, "ಇಷ್ಟೆಲ್ಲ ವರ್ಷಗಳು ಕಳೆದ ನಂತರವೂ, ನಮ್ಮ ಈ ಹಳ್ಳಿಯಲ್ಲಿ ದೂರವಾಣಿ ಸೌಲಭ್ಯವಿಲ್ಲ."

ಈ ಬೇಡಿಕೆಯನ್ನು ಈಡೇರಿಸಬೇಕೆಂದು, “ನಾವು ಧರಣಿ ಕುಳಿತೆವು. ಎಸ್‌ಡಿಒ [ಉಪವಿಭಾಗಾಧಿಕಾರಿ] ಅವರು ನಮ್ಮ ಹಳ್ಳಿಯ ಬಗ್ಗೆ ಕೇಳಿಲ್ಲ ಎಂದು ಹೇಳಿದರು," ಅವರು ನಗುತ್ತಾರೆ. "ನೀವು ಬಾರ್ಗಢ್‌ನಲ್ಲಿ ವಾಸಿಸುತ್ತಿದ್ದರೆ ಇದು ಅಪರಾಧ. ಈ ಸಮಯದಲ್ಲಿ, ತಮಾಷೆಯೆಂಬಂತೆ, ಪೊಲೀಸರು ಮಧ್ಯಪ್ರವೇಶಿಸಿದರು.

ಈ ಜೀವಂತ ವೀರರ ಬಗ್ಗೆ ತಿಳಿದಿದ್ದ ಪೊಲೀಸರು ಎಸ್‌ಡಿಒ ನಿರ್ಲಕ್ಷ್ಯದಿಂದ ಆಶ್ಚರ್ಯಚಕಿತರಾದರು. 80 ವರ್ಷದ ವೃದ್ಧರ ಆರೋಗ್ಯದ ಬಗ್ಗೆ ಪೊಲೀಸರು ತುಂಬಾ ಕಾಳಜಿ ವಹಿಸಿದ್ದರು. "ಹಲವಾರು ಗಂಟೆಗಳ ಕಾಲ ಧರಣಿಯಲ್ಲಿ ಕುಳಿತ ನಂತರ, ಪೊಲೀಸರು, ವೈದ್ಯರು, ವೈದ್ಯಕೀಯ ಸಿಬ್ಬಂದಿ ಮತ್ತು ಇತರ ಅಧಿಕಾರಿಗಳು ಮಧ್ಯಪ್ರವೇಶಿಸಿದರು. ಇದರ ನಂತರ ಟೆಲಿಫೋನ್ ಇಲಾಖೆಯವರು ನಮಗೆ ಸೆಪ್ಟೆಂಬರ್ 15ರೊಳಗೆ ದೂರವಾಣಿ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ನೋಡೋಣ.''

ಪಾಣಿಮಾರದ ಹೋರಾಟಗಾರರು ಮತ್ತೊಮ್ಮೆ ಇತರರಿಗಾಗಿ ಹೋರಾಡುತ್ತಿದ್ದಾರೆ.ಅವರಿಗಾಗಿ ಅಲ್ಲ. ಈ ಹೋರಾಟದಿಂದ ಅವರಿಗೆ ಎಂದಾದರೂ ವೈಯಕ್ತಿಕ ಲಾಭ ಸಿಕ್ಕಿದೆಯೇ?

ಅದು “ಸ್ವಾತಂತ್ರ್ಯ” ಎನ್ನುತ್ತಾರೆ ಚಾಮರೂ.

ನನಗೂ ಸಿಕ್ಕಿದೆ,ನಿಮಗೂ ಸಿಕ್ಕಿದೆ.

ಈ ಲೇಖನ (ಎರಡು ಭಾಗಗಳಲ್ಲಿ ಎರಡನೆಯದು) ಮೂಲತಃ ಅಕ್ಟೋಬರ್ 27, 2002ರಂದು ಹಿಂದೂ ಸಂಡೇ ಮ್ಯಾಗಜೀನ್ ಪತ್ರಿಕೆಯಲ್ಲಿ ಪ್ರಕಟವಾಯಿತು. ಮೊದಲ ಭಾಗವು ಅಕ್ಟೋಬರ್ 20, 2002ರಂದು ಕಾಣಿಸಿಕೊಂಡಿತು.

ಫೋಟೊಗಳು: ಪಿ. ಸಾಯಿನಾಥ್

ಸರಣಿಯ ಇನ್ನಷ್ಟು ಬರಹಗಳು ಇಲ್ಲಿವೆ:

‘ಸಾಲಿಹಾನ್’ ಸರಕಾರದ ಮೇಲೆ ಎರಗಿದಾಗ

ಪಾನಿಮಾರದಲ್ಲಿನ ಸ್ವಾತಂತ್ರ್ಯ ಹೋರಾಟದ ಕಾಲಾಳುಗಳು - 1

ಲಕ್ಷ್ಮಿ ಪಾಂಡಾರ ಕೊನೆಯ ಯುದ್ಧ

ಕಲ್ಲಿಯಶ್ಶೆರಿ: 50 ವರ್ಷಗಳ ನಂತರವೂ ಮುಂದುವರೆದಿರುವ ಹೋರಾಟ

ಅಹಿಂಸೆಯ ಒಂಬತ್ತು ದಶಕಗಳು

ಶೇರ್‌ಪುರ: ದೊಡ್ಡ ತ್ಯಾಗ, ಸಣ್ಣ ಸ್ಮರಣೆ

ಗೋದಾವರಿ: ಮತ್ತು ಪೊಲೀಸರು ಈಗಲೂ ಆಕ್ರಮಣಕ್ಕಾಗಿ ಕಾಯುತ್ತಿದ್ದಾರೆ

ಸೋನಾಖಾನ್:‌ ವೀರ್‌ ನಾರಯಣ್‌ ಎರಡೆರಡು ಬಾರಿ ಮಡಿದಾಗ

ಕಲ್ಲಿಯಶ್ಶೆರಿ: ಸುಮುಕನ್ ಹುಡುಕಾಟದಲ್ಲಿ

ಅನುವಾದ: ಶಂಕರ ಎನ್. ಕೆಂಚನೂರು

پی سائی ناتھ ’پیپلز آرکائیو آف رورل انڈیا‘ کے بانی ایڈیٹر ہیں۔ وہ کئی دہائیوں تک دیہی ہندوستان کے رپورٹر رہے اور Everybody Loves a Good Drought اور The Last Heroes: Foot Soldiers of Indian Freedom کے مصنف ہیں۔

کے ذریعہ دیگر اسٹوریز پی۔ سائی ناتھ
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru