“ನಾವು ಡೇರೆಯಲ್ಲಿ ಕುಳಿತಿದ್ದೆವು, ಅವರು ಬಂದು ಡೇರೆ ಹರಿದು ಹಾಕಿದರು. ನಾವು ಒಂದಿಷ್ಟೂ ಚಲಿಸಲಿಲ್ಲ” ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ನಮಗೆ ಹೇಳುತ್ತಿದ್ದರು. “ನಂತರ ಅವರು ಕುಳಿತಿದ್ದ ನೆಲದ ಮೇಲೆ ಮತ್ತು ನಮ್ಮ ಮೇಲೆ ನೀರು ಎರಚಲು ಪ್ರಾರಂಭಿಸಿದರು. ಇದರಿಂದ ನೆಲ ಒದ್ದೆಯಾಗುತ್ತದೆ ಮತ್ತು ನಮಗೆ ಅಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುವುದು ಅವರ ನಂಬಿಕೆಯಾಗಿತ್ತು. ಆದರೆ ನಾವು ಅಲ್ಲಿಯೇ ಕುಳಿತೆವು. ನಂತರ ನಾನು ನೀರು ಕುಡಿಯಲು ಎದ್ದು ಕೆಳಗೆ ಬಾಗಿದಾಗ ಅವರು ನನ್ನ ತಲೆಗೆ ತೀವ್ರವಾಗಿ ಹೊಡೆದರು. ನನಗೆ ತಲೆಗೆ ಪೆಟ್ಟಾಗಿ ಆಸ್ಪತ್ರೆಗೆ ಸಾಗಿಸಲಾಯಿತು.”

ಬಾಜಿ ಮೊಹಮ್ಮದ್ ಭಾರತದ ಕೊನೆಯ ಜೀವಂತ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು - ಒಡಿಶಾದ ಕೊರಪುಟ್ ಪ್ರದೇಶದಲ್ಲಿ ಇನ್ನೂ ಜೀವಂತವಾಗಿರುವ ನಾಲ್ಕು ಅಥವಾ ಐದು ರಾಷ್ಟ್ರೀಯ ಮಾನ್ಯತೆ ಪಡೆದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು. ಅವರು ನಮ್ಮೊಡನೆ 1942ರ ಬ್ರಿಟಿಷ್ ದೌರ್ಜನ್ಯದ ಬಗ್ಗೆ ಮಾತನಾಡುತ್ತಿರಲಿಲ್ಲ. (ಈ ಬಗ್ಗೆ ಅವರು ಇನ್ನೂ ಹೆಚ್ಚಿನದನ್ನು ಹೇಳುವುದಿದೆ.) ಬದಲಿಗೆ, ಅವರು ಅದರ ಅರ್ಧ ಶತಮಾನದ ನಂತರ, 1992ರಲ್ಲಿ ಬಾಬರಿ ಮಸೀದಿ ನೆಲಸಮಗೊಳಿಸಿದ ಸಂದರ್ಭದಲ್ಲಿ ತಮ್ಮ ಮೇಲೆ ನಡೆದ ದಾಳಿಯ ಬಗ್ಗೆ ಮಾತನಾಡುತ್ತಿದ್ದರು. "100 ಸದಸ್ಯರ ಸೌಹಾರ್ದ ತಂಡದ ಭಾಗವಾಗಿ ನಾನು ಅಲ್ಲಿ ಹಾಜರಿದ್ದೆ." ಆದರೆ ಈ ತಂಡವನ್ನೂ ಬಿಡಲಿಲ್ಲ. ತಮ್ಮ ಜೀವನದ 75 ವರ್ಷಗಳನ್ನು ಪೂರೈಸಿದ ಅನುಭವಿ ಗಾಂಧಿ ಹೋರಾಟಗಾರ ತಲೆಗೆ ಪೆಟ್ಟಾಗಿ ವಾರಣಾಸಿಯ ಆಶ್ರಮದಲ್ಲಿ 10 ದಿನ ಮತ್ತು ಒಂದು ತಿಂಗಳು ಆಸ್ಪತ್ರೆಗೆ ದಾಖಲಾಗಿದ್ದರು.

ಅವರು ತನ್ನ ಕಥೆಯನ್ನು ನಿರೂಪಿಸುವಾಗ, ಅವರ ಮುಖದ ಮೇಲೆ ಕೋಪದ ಕುರುಹೂ ಇರಲಿಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘ ಅಥವಾ ಅವರ ಮೇಲೆ ಹಲ್ಲೆ ಮಾಡಿದ ಭಜರಂಗದಳದ ವಿರುದ್ಧವೂ ಅವರಿಗೆ ದ್ವೇಷವಿಲ್ಲ. ಅವರು ಯಾವಾಗಲೂ ಮುಗುಳ್ನಗುತ್ತಿರುವ ಸಂಭಾವಿತ ಹಿರಿಯರು. ಅವರು ಗಾಂಧಿಯವರ ಅಪ್ರತಿಮ ಭಕ್ತ. ಅವರು ಮುಸ್ಲಿಂ ಆಗಿದ್ದು, ನಬರಂಗ್‌ಪುರದಲ್ಲಿ ಗೋ ಹತ್ಯಾ ವಿರೋಧಿ ಲೀಗ್ ಮುನ್ನಡೆಸುತ್ತಿದ್ದಾರೆ. "ದಾಳಿಯ ನಂತರ, ಬಿಜು ಪಟ್ನಾಯಕ್ ನನ್ನ ಮನೆಗೆ ಬಂದು ನನ್ನನ್ನು ಗದರಿಸಿದರು. ಈ ವಯಸ್ಸಿನಲ್ಲಿಯೂ ನಾನು ಶಾಂತಿಯುತ ಪ್ರದರ್ಶನಗಳಲ್ಲಿ ಸಕ್ರಿಯನಾಗಿದ್ದೇನೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಇದಕ್ಕೂ ಮೊದಲು, ಸ್ವಾತಂತ್ರ್ಯ ಹೋರಾಟಗಾರರಿಗೆ 12 ವರ್ಷಗಳಿಂದ ನೀಡಲಾದ ಪಿಂಚಣಿಯನ್ನು ನಾನು ಸ್ವೀಕರಿಸದಿದ್ದಾಗ, ಅವರು ನನ್ನನ್ನು ಗದರಿಸಿದ್ದರು.

ಬಾಜಿ ಮೊಹಮ್ಮದ್ ಕಣ್ಮರೆಯಾಗುತ್ತಿರುವ ಸಂಕುಲವೊಂದರ ವರ್ಣರಂಜಿತ ಅವಶೇಷ. ಅಸಂಖ್ಯಾತ ಗ್ರಾಮೀಣ ಭಾರತೀಯರು ಭಾರತದ ಸ್ವಾತಂತ್ರ್ಯಕ್ಕಾಗಿ ಬಹು ದೊಡ್ಡ ತ್ಯಾಗವನ್ನು ಮಾಡಿದ್ದಾರೆ. ಅವರಲ್ಲಿ ಹೆಚ್ಚಿನವರು 80 ಅಥವಾ 90 ವರ್ಷ ದಾಟಿದ್ದಾರೆ. ಬಾಜಿಯವರಿಗೀಗ ಸುಮಾರು 90ರ ವಯಸ್ಸು.

"ನಾನು 1930ರ ದಶಕದಲ್ಲಿ ಶಾಲೆಯಲ್ಲಿದ್ದೆ, ಆದರೆ ಮೆಟ್ರಿಕ್ಯುಲೇಷನ್ ನಂತರ ಓದಲು ಸಾಧ್ಯವಾಗಲಿಲ್ಲ. ನನ್ನ ಗುರು ಸದಾ ಶಿವ ತ್ರಿಪಾಠಿ, ನಂತರ ಅವರು ಒಡಿಶಾದ ಮುಖ್ಯಮಂತ್ರಿಯಾದರು. ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡು ಅದರ ನಬರಂಗ್‌ಪುರ ಘಟಕದ ಅಧ್ಯಕ್ಷನಾಗಿದ್ದೆ (ಅದು ಆಗಲೂ ಕೊರಪುಟ್ ಜಿಲ್ಲೆಯ ಒಂದು ಭಾಗವಾಗಿತ್ತು). ನಾನು ಇಲ್ಲಿ ಕಾಂಗ್ರೆಸ್ಸಿಗೆ 20,000 ಸದಸ್ಯರನ್ನು ಸೇರಿಸಿದೆ. ಈ ಪ್ರದೇಶದಲ್ಲಿನ ಹೋರಾಟದ ಕಿಚ್ಚು ಬಲವಾಗಿತ್ತು. ಮತ್ತು ಇದು ಸತ್ಯಾಗ್ರಹದ ಸಮಯದಲ್ಲಿ ಅತ್ಯುತ್ತಮವಾಗಿ ಸಾಬೀತಾಯಿತು.

ಆದರೆ, ಸಾವಿರಾರು ಜನರು ಕೊರಪುಟ್ ಕಡೆ ಸಾಗುತ್ತಿರುವಾಗ, ಬಾಜಿ ಮೊಹಮ್ಮದ್ ಬೇರೆಡೆಗೆ ಹೊರಟರು. "ನಾನು ಗಾಂಧೀಜಿ ಬಳಿ ಹೋದೆ. ನಾನು ಅವರನ್ನು ನೋಡಬೇಕಾಗಿತ್ತು." ಅದಕ್ಕಾಗಿಯೇ ಅವರು "ಒಂದು ಬೈಸಿಕಲ್ ತೆಗೆದುಕೊಂಡು, ಸ್ನೇಹಿತ ಲಕ್ಷ್ಮಣ್ ಸಾಹುನನ್ನು ತನ್ನೊಂದಿಗೆ ಕರೆದೊಯ್ದರು, ಜೇಬಿನಲ್ಲಿ ಹಣವಿರಲಿಲ್ಲ, ಇಲ್ಲಿಂದ ರಾಯ್ಪುರಕ್ಕೆ ಹೋದೆವು." 350 ಕಿ.ಮೀ ದೂರ, ಅದೂ ತುಂಬಾ ಕಷ್ಟಕರವಾದ ಪರ್ವತದ ರಸ್ತೆಗಳ ಮೂಲಕ. "ಅಲ್ಲಿಂದ ನಾವು ವಾರ್ಧಾಕ್ಕೆ ರೈಲು ಹಿಡಿದು ಸೇವಾಗ್ರಾಮ್ ತಲುಪಿದೆವು. ಅವರ ಆಶ್ರಮದಲ್ಲಿ ಅನೇಕ ಮಹಾನ್ ವ್ಯಕ್ತಿಗಳು ಇದ್ದರು. ನಮಗೂ ಆಶ್ಚರ್ಯ ಮತ್ತು ಚಿಂತೆ. ಅವರನ್ನು ಭೇಟಿಯಾಗಲು ನಮಗೆ ಎಂದಾದರೂ ಅವಕಾಶ ಸಿಗುತ್ತದೆಯೇ? ಅವರ ಕಾರ್ಯದರ್ಶಿ ಮಹಾದೇವ್ ದೇಸಾಯಿ ಅವರನ್ನು ಕೇಳುವಂತೆ ಜನರು ನಮಗೆ ತಿಳಿಸಿದರು.

"ದೇಸಾಯಿ ಅವರು ಸಂಜೆ 5 ಗಂಟೆಗೆ ವಾಕ್ ಮಾಡಲು ಹೊರಟಾಗ ಅವರೊಂದಿಗೆ ಮಾತನಾಡಲು ಹೇಳಿದರು. ಅದು ನನಗೂ ಸರಿಯಾದ ಸಮಯವೆನ್ನಿಸಿತು. ಆರಾಮವಾಗಿ ಭೇಟಿ ಮಾಡಬಹುದೆಂಬುದು ನನ್ನ ಯೋಚನೆಯಾಗಿತ್ತು. ಆದರೆ ಅವರು ಬಹಳ ವೇಗವಾಗಿ ನಡೆಯುತ್ತಿದ್ದರು. ಅವರ ನಡಿಗೆ ನನ್ನ ಓಟಕ್ಕೆ ಸಮನಾಗಿತ್ತು. ಅಂತಿಮವಾಗಿ, ನಾನು ಅವರನ್ನು ಸರಿಗಟ್ಟಲು ವಿಫಲವಾದಾಗ, ನಾನು ಅವರನ್ನು ವಿನಂತಿಸಿದೆ: ದಯವಿಟ್ಟು ನಿಲ್ಲಿಸಿ: ನಾನು ನಿಮ್ಮನ್ನು ನೋಡಲೆಂದೇ ಒಡಿಶಾದಿಂದ ಇಲ್ಲಿಗೆ ಬಂದಿದ್ದೇನೆ.

'ಅವರು  ವಿನೋದದಿಂದ ಹೇಳಿದರು:' ನೀವು ಏನು ನೋಡಲು ಬಯಸುತ್ತೀರಿ? ನಾನು ಕೂಡ ಮನುಷ್ಯ, ಎರಡು ಕೈ, ಎರಡು ಕಾಲು, ಎರಡು ಕಣ್ಣು ಅಷ್ಟೇ ಇರುವುದು. ನೀವು ಒಡಿಶಾದಲ್ಲಿ ಸತ್ಯಾಗ್ರಹಿಯಾಗಿದ್ದೀರಾ? ' ನಾನು ಸತ್ಯಾಗ್ರಹಿಯಾಗಿ ಪ್ರತಿಜ್ಞೆ ಮಾಡಿದ್ದೇನೆ ಎಂದು ಉತ್ತರಿಸಿದೆ.

“'ಹೋಗಿ', ಗಾಂಧಿ ಹೇಳಿದರು. ‘ಜಾವೊ, ಲಾಠಿ ಖಾವೊ [ಹೋಗಿ ಬ್ರಿಟಿಷ್ ಲಾಠಿಗಳಿಂದ ಪೆಟ್ಟು ತಿನ್ನಿರಿ]. ರಾಷ್ಟ್ರಕ್ಕಾಗಿ ತ್ಯಾಗ ಮಾಡಿ. ’ಏಳು ದಿನಗಳ ನಂತರ, ಅವರು ನಮಗೆ ಆದೇಶಿಸಿದಂತೆ ಮಾಡಲು ನಾವು ಇಲ್ಲಿಗೆ ಮರಳಿದೆವು.” ನಬರಂಗಪುರ ಮಸೀದಿಯ ಹೊರಗೆ ಯುದ್ಧ ವಿರೋಧಿ ಪ್ರತಿಭಟನೆಯಲ್ಲಿ ಬಾಜಿ ಮೊಹಮ್ಮದ್ ಸತ್ಯಾಗ್ರಹವನ್ನು ನಡೆಸಿದರು. ಇದು “ಆರು ತಿಂಗಳ ಜೈಲು ಶಿಕ್ಷೆ ಮತ್ತು ರೂ. 50 ದಂಡಕ್ಕೆ ಕಾರಣವಾಯಿತು. ಆ ದಿನಗಳಲ್ಲಿ ಇದು ಅಲ್ಪ ಮೊತ್ತವಾಗಿರಲಿಲ್ಲ. ”

ಇದರ ನಂತರ ಇನ್ನೂ ಅನೇಕ ಘಟನೆಗಳು ನಡೆದವು. "ಒಮ್ಮೆ, ಜೈಲಿನಲ್ಲಿ, ಜನರು ಪೊಲೀಸರ ಮೇಲೆ ದಾಳಿ ಮಾಡಲು ಒಟ್ಟುಗೂಡಿದರು. ನಾನು ಅಡ್ಡಿಪಡಿಸಿದೆ ಮತ್ತು ಅದನ್ನು ನಿಲ್ಲಿಸಿದೆ. ʼಮರೇಂಗೆ ಲೇಕಿನ್‌ ಮಾರೇಗಾ ನಹೀʼ ['ಸಾಯುತ್ತೇನೆ ಆದರೆ ಹೊಡೆಯುವುದಿಲ್ಲ'], ಎಂದು ನಾನು ಹೇಳಿದೆ.

PHOTO • P. Sainath

ಜೈಲಿನಿಂದ ಹೊರಬಂದ ನಂತರ ನಾನು ಗಾಂಧಿಗೆ ಪತ್ರ ಬರೆದೆ: 'ಮುಂದೇನು?' ಮತ್ತು ಅವರ ಉತ್ತರ ಬಂದಿತು: 'ಮತ್ತೆ ಜೈಲಿಗೆ ಹೋಗಿ'. ನಾನು ಅದೇ ರೀತಿ ಮಾಡಿದೆ. ಈ ಬಾರಿ ನಾಲ್ಕು ತಿಂಗಳು. ಆದರೆ ಮೂರನೇ ಬಾರಿಗೆ ಅವರು ನಮ್ಮನ್ನು ಬಂಧಿಸಲಿಲ್ಲ. ಹಾಗಾಗಿ, ನಾನು ಮತ್ತೆ ಗಾಂಧಿಯನ್ನು ಕೇಳಿದೆ: 'ಈಗ ಏನು?' ಮತ್ತೆ ಅವರು ಹೇಳಿದರು: 'ಈ ಘೋಷಣೆಯೊಂದಿಗೆ ಜನರ ನಡುವೆ ಹೋಗಿ'. ಅಂದಿನಿಂದ ಪ್ರತಿ ಬಾರಿಯೂ ನಾವು ಹಳ್ಳಿಯಿಂದ ಹಳ್ಳಿಗೆ 20-30 ಜನರೊಂದಿಗೆ 60 ಕಿ.ಮೀ ತನಕ ಜಾಥಾ ನಡೆಸುತ್ತಿದ್ದೆವು. ನಂತರ ಕ್ವಿಟ್ ಇಂಡಿಯಾ ಚಳವಳಿಯ ಸಮಯ ಬಂದಿತು, ಮತ್ತು ವಿಷಯಗಳು ಬದಲಾದವು.

"ಆಗಸ್ಟ್ 25, 1942ರಂದು, ನಮ್ಮನ್ನು ಬಂಧಿಸಿ ಜೈಲಿಗೆ ಹಾಕಲಾಯಿತು. ನಬರಂಗ್‌ಪುರದ ಪಾಪರಾಂಡಿಯಲ್ಲಿ ಪೊಲೀಸ್ ಗುಂಡಿನ ದಾಳಿ ನಡೆದು, ಈ ಕಾರಣದಿಂದಾಗಿ 19 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ನಂತರ ಅನೇಕ ಜನರು ಗಾಯಗಳಿಂದ ಸಾವನ್ನಪ್ಪಿದರು. 300ಕ್ಕೂ ಹೆಚ್ಚು ಜನರು ಅಂದು ಗಾಯಗೊಂಡಿದ್ದರು. ಕೊರಪುಟ್ ಜಿಲ್ಲೆಯಲ್ಲಿ, ಒಂದು ಸಾವಿರಕ್ಕೂ ಹೆಚ್ಚು ಜನರು ಜೈಲಿಗೆ ಹೋಗಬೇಕಾಯಿತು. ಅನೇಕ ಜನರನ್ನು ಗುಂಡಿಕ್ಕಿ ಗಲ್ಲಿಗೇರಿಸಲಾಯಿತು. ಕೊರಪುಟ್‌ನಲ್ಲಿ 100ಕ್ಕೂ ಹೆಚ್ಚು ಜನರು ಹುತಾತ್ಮರಾದರು. ವೀರ್ ಲಖನ್ ನಾಯಕ್ (ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಸಿದ್ಧ ಬುಡಕಟ್ಟು ನಾಯಕ) ಅವರನ್ನು ಗಲ್ಲಿಗೇರಿಸಲಾಯಿತು.

ಪ್ರತಿಭಟನಾಕಾರರ ಮೇಲೆ ನಡೆದ ದೌರ್ಜನ್ಯದಲ್ಲಿ ಬಾಜಿಯವರ ಭುಜ ಬಿರುಕುಬಿಟ್ಟತ್ತು. "ನಂತರ ನಾನು ಐದು ವರ್ಷಗಳ ಕಾಲ ಕೊರಪುಟ್ ಜೈಲಿನಲ್ಲಿ ಕಳೆದೆ. ಅಲ್ಲಿ ನಾನು ಲಖನ್ ನಾಯಕ್ ಅವರನ್ನು ನೋಡಿದೆ, ಅಲ್ಲಿಂದ ಅವರನ್ನು ನಂತರ ಬ್ರಹ್ಮಪುರ ಜೈಲಿಗೆ ಸ್ಥಳಾಂತರಿಸಲಾಯಿತು. ಅವರು ನನ್ನ ಎದುರಿನ ಶೆಲ್ಲಿನಲ್ಲಿದ್ದರು, ಮತ್ತು ಅವರ ಮರಣದಂಡನೆಗೆ ಆದೇಶ ಬಂದಾಗ ನಾನು ಅವರೊಂದಿಗೆ ಇದ್ದೆ. ನಿಮ್ಮ ಕುಟುಂಬಕ್ಕೆ ನಾನು ಏನು ಹೇಳಬೇಕೆಂದು ಅವರನ್ನು ಕೇಳಿದೆ. 'ನನಗೆ ಯಾವುದೇ ಚಿಂತೆಯಿಲ್ಲವೆಂದು ಅವರಿಗೆ ಹೇಳಿ' ಎಂದು ಅವರು ಉತ್ತರಿಸಿದರು. 'ನಾವು ಯಾವ ಸ್ವರಾಜ್‌ ಪಡೆಯಲು ಹೋರಾಡಿದೆವೋ ಅದನ್ನು ನೋಡಲು ನಾನು ಬದುಕಿರುವುದಿಲ್ಲ ಎಂಬುದು ಬೇಸರದ ಸಂಗತಿ'.

ಆದರೆ ಬಾಜಿ ಖಂಡಿತವಾಗಿಯೂ ಅದನ್ನು ನೋಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಸ್ವಲ್ಪ ಮೊದಲು ಅವರನ್ನು ಬಿಡುಗಡೆ ಮಾಡಲಾಯಿತು - "ಹೊಸ ಸ್ವತಂತ್ರ ದೇಶವನ್ನು ನಡೆಸಲು." ಭವಿಷ್ಯದ ಮುಖ್ಯಮಂತ್ರಿ ಸದಾ ಶಿವ ತ್ರಿಪಾಠಿ ಸೇರಿದಂತೆ ಅವರ ಅನೇಕ ಸಹಚರರು, 1952ರ ಚುನಾವಣೆಯಲ್ಲಿ ಸ್ಪರ್ಧಿಸಿದರು, ಅದು ಸ್ವತಂತ್ರ ಭಾರತದ ಮೊದಲನೆಯ ಚುನಾವಣೆಯಾಗಿತ್ತು." ಎಲ್ಲರೂ ಶಾಸಕರಾದರು. ”ಆದರೆ ಬಾಜಿ ಎಂದಿಗೂ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. ಮತ್ತು ಅವಿವಾಹಿತರಾಗಿಯೇ ಉಳಿದರು.

"ನಾನು ಅಧಿಕಾರ ಅಥವಾ ಸ್ಥಾನಕ್ಕಾಗಿ ಆಸೆ ಪಡಲಿಲ್ಲ" ಎಂದು ಅವರು ಹೇಳುತ್ತಾರೆ. "ನಾನು ಬೇರೆ ರೀತಿಯಲ್ಲಿ ಸೇವೆ ಸಲ್ಲಿಸಬಹುದೆಂದು ನನಗೆ ತಿಳಿದಿತ್ತು. ಅದು ಗಾಂಧಿಯವರು ಬಯಸಿದಂತೆ." ಅವರು ದಶಕಗಳ ಕಾಲ ಕಟ್ಟಾ ಕಾಂಗ್ರೆಸ್ಸಿಗರಾಗಿದ್ದರು. "ಆದರೆ ಈಗ ನಾನು ಯಾವುದೇ ಪಕ್ಷದಲ್ಲಿ ಇಲ್ಲ" ಎಂದು ಅವರು ಹೇಳುತ್ತಾರೆ. "ಈಗ ನಾನು ಯಾವ ಪಕ್ಷಕ್ಕೂ ಸೇರದವನು."

ಅವರ ಈ ತೀರ್ಮಾನ ಅವರನ್ನು ಸಾಮಾನ್ಯ ಜನರಿಗೆ ಸೇರಿದೆಯೆಂದು ಅವರಿಗೆನ್ನಿಸುವ ಯಾವುದೇ ಕೆಲಸವನ್ನು ಮಾಡದಂತೆ ತಡೆಯಲಿಲ್ಲ. ಮೊದಲಿನಿಂದಲೂ, "ನಾನು 1956ರಲ್ಲಿ ವಿನೋಬಾ ಭಾವೆ ಅವರ ಭೂದಾನ್ ಚಳವಳಿಗೆ ಸೇರಿಕೊಂಡೆ." ಅವರು ಜಯಪ್ರಕಾಶ್ ನಾರಾಯಣ್ ಅವರ ಕೆಲವು ಚಳುವಳಿಗಳ ಬೆಂಬಲಿಗರೂ ಆಗಿದ್ದರು. "ಅವರು 1950ರ ದಶಕದಲ್ಲಿ ಎರಡು ಬಾರಿ ಇಲ್ಲಿಯೇ ಇದ್ದರು." ಕಾಂಗ್ರೆಸ್ ಅವರನ್ನು ಒಂದಕ್ಕಿಂತ ಹೆಚ್ಚು ಬಾರಿ ಸ್ಪರ್ಧಿಸಲು ಕೇಳಿದೆ. "ಆದರೆ ನನ್ನ ಪಾಲಿಗೆ ಆಡಳಿತ ದಳಕ್ಕಿಂತ ಸೇವಾ ದಳ ದೊಡ್ಡದು."

ಅವರ ಹೋರಾಟಕ್ಕೆ ದೊರಕಿದ ದೊಡ್ಡ ಪ್ರತಿಫಲ". "ಇದಕ್ಕಿಂತ ಹೆಚ್ಚಿನದು ಏನು ಬೇಕು?" ಮಹಾತ್ಮ ಗಾಂಧಿಯವರ ಪ್ರಸಿದ್ಧ ಪ್ರತಿಭಟನಾ ಮೆರವಣಿಗೆಯಲ್ಲಿ ಅವರ ಫೋಟೋವನ್ನು ನಮಗೆ ತೋರಿಸುತ್ತಿದ್ದಂತೆ ಅವರ ಕಣ್ಣುಗಳು ತುಂಬಿ ಬಂದವು. ಈ ನೆನಪುಗಳೇ ಅವರ ಸಂಪತ್ತು, ಭೂದಾನ್ ಚಳವಳಿಯ ಸಮಯದಲ್ಲಿ ಅವರು ತಮ್ಮ 14 ಎಕರೆ ಭೂಮಿಯನ್ನು ಬಿಟ್ಟುಕೊಟ್ಟಿದ್ದರು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಅವರ ನೆಚ್ಚಿನ ಕ್ಷಣ? ''ಪ್ರತಿಯೊಂದೂ. ಆದರೆ ನಿಸ್ಸಂಶಯವಾಗಿ, ಅತ್ಯಂತ ಸುಂದರವಾದ ಕ್ಷಣವೆಂದರೆ ಮಹಾತ್ಮರನ್ನು ಭೇಟಿಯಾಗಿದ್ದು, ಅವರ ಧ್ವನಿಯನ್ನು ಕೇಳಿದ್ದು. ಅದು ನನ್ನ ಬದುಕಿನ ದೊಡ್ಡ ಕ್ಷಣ. ಒಂದೇ ಒಂದು ವಿಷಾದವಿದೆ, ನಾವು ರಾಷ್ಟ್ರವಾಗಿ ಹೇಗೆ ಇರಬೇಕೆಂಬುದರ ಬಗ್ಗೆ ಅವರು ಕಂಡಿದ್ದ ಕನಸು ಇನ್ನೂ ಈಡೇರಿಲ್ಲ."

ಅವರು ನಿಜಕ್ಕೂ ಸುಂದರ ಮುಗುಳುನಗೆಯ ಸುಸಂಸ್ಕೃತ ಹಿರಿಯರು. ಮತ್ತು ಅವರ ವಯಸ್ಸಾದ ಭುಜಗಳ ಮೇಲೆ ಅವರ ತ್ಯಾಗದ ವಜ್ಜೆಯು ಹಗುರವಾಗಿ ಮಿನುಗುತ್ತಿತ್ತು.

ಫೋಟೊಗಳು: ಪಿ. ಸಾಯಿನಾಥ್

ಈ ಲೇಖನವನ್ನು ಮೊದಲಿಗೆ ಆಗಸ್ಟ್ 23, 2007ರಂದು ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು.

ಸರಣಿಯ ಇನ್ನಷ್ಟು ಬರಹಗಳು ಇಲ್ಲಿವೆ:

‘ಸಾಲಿಹಾನ್’ ಸರಕಾರದ ಮೇಲೆ ಎರಗಿದಾಗ

ಪಾನಿಮಾರದಲ್ಲಿನ ಸ್ವಾತಂತ್ರ್ಯ ಹೋರಾಟದ ಕಾಲಾಳುಗಳು - 1

ಪಾನಿಮಾರದಲ್ಲಿನ ಸ್ವಾತಂತ್ರ್ಯ ಹೋರಾಟದ ಕಾಲಾಳುಗಳು - 2

ಲಕ್ಷ್ಮಿ ಪಾಂಡಾರ ಕೊನೆಯ ಯುದ್ಧ

ಕಲ್ಲಿಯಶ್ಶೆರಿ: 50 ವರ್ಷಗಳ ನಂತರವೂ ಮುಂದುವರೆದಿರುವ ಹೋರಾಟ

ಶೇರ್‌ಪುರ: ದೊಡ್ಡ ತ್ಯಾಗ, ಸಣ್ಣ ಸ್ಮರಣೆ

ಗೋದಾವರಿ: ಮತ್ತು ಪೊಲೀಸರು ಈಗಲೂ ಆಕ್ರಮಣಕ್ಕಾಗಿ ಕಾಯುತ್ತಿದ್ದಾರೆ

ಸೋನಾಖಾನ್:‌ ವೀರ್‌ ನಾರಯಣ್‌ ಎರಡೆರಡು ಬಾರಿ ಮಡಿದಾಗ

ಕಲ್ಲಿಯಶ್ಶೆರಿ: ಸುಮುಕನ್ ಹುಡುಕಾಟದಲ್ಲಿ

ಅನುವಾದ: ಶಂಕರ ಎನ್. ಕೆಂಚನೂರು

பி. சாய்நாத், பாரியின் நிறுவனர் ஆவார். பல்லாண்டுகளாக கிராமப்புற செய்தியாளராக இருக்கும் அவர், ’Everybody Loves a Good Drought' மற்றும் 'The Last Heroes: Foot Soldiers of Indian Freedom' ஆகிய புத்தகங்களை எழுதியிருக்கிறார்.

Other stories by P. Sainath
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru