2020 ರ ಡಿಸೆಂಬರ್‌ನಲ್ಲಿ, ಉತ್ತರಪ್ರದೇಶ ಮತ್ತು ದೆಹಲಿಯ ಗಡಿಯಲ್ಲಿರುವ ಘಾಜಿಪುರದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಅಡುಗೆ ಮಾಡಲು ಸುರೇಂದ್ರ ಕುಮಾರ್ ವಾರದ ಒಂದು ದಿನದಲ್ಲಿ ತಮ್ಮ ನಾಲ್ಕು ಗಂಟೆಗಳ ಸಮಯವನ್ನು ನಿಗದಿಪಡಿಸುತ್ತಿದ್ದರು.ಇದು ಕಾಲಾಂತರದಲ್ಲಿ ಎಂಟು ಗಂಟೆಗೆ ಏರಿತು, ಈಗ ಸುರೇಂದ್ರ ಅವರು ಒಂದು ವಾರದಲ್ಲಿ ಸುಮಾರು 12 ಗಂಟೆಗಳ ಸಮಯವನ್ನು ಪ್ರತಿಭಟನಾಕಾರರಿಗೆ ಅಡುಗೆ ಮಾಡುವುದಕ್ಕಾಗಿ ವ್ಯಯಿಸುತ್ತಾರೆ.
ಘಾಜಿಪುರದಲ್ಲಿ ನಡೆಯತ್ತಿರುವ ಚಳವಳಿಗೆ ಪಶ್ಚಿಮ ಉತ್ತರ ಪ್ರದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸೇರುತ್ತಿರುವ ಬೆನ್ನಲ್ಲೇ " ನಾನು "ನಾನು ಪ್ರತಿದಿನ ಇದೇ ರೀತಿಯಾಗಿ ಅಡುಗೆ ಮಾಡಬೇಕಾಗಬಹುದು" ಎಂದು 58 ವರ್ಷದ ಸುರೇಂದ್ರ ಹೇಳುತ್ತಾರೆ.
ಸುರೇಂದ್ರ ಅವರು ಹಲ್ವಾಯ್ (ಸಿಹಿಯಂಗಡಿ ನಡೆಸುವವರು) ವ್ಯಾಪಾರವನ್ನು ನಡೆಸುತ್ತಿದ್ದು, ಉತ್ತರ ಪ್ರದೇಶದ ಮುಜಾಫರ್ ನಗರ್ ಜಿಲ್ಲೆಯ ಶಾರೋನ್ ಗ್ರಾಮದಲ್ಲಿ (ಅಥವಾ ಸೊರಮ್) ಸ್ವಂತ ಅಂಗಡಿಯನ್ನು ಹೊಂದಿದ್ದಾರೆ. "ನಾವು ನಮ್ಮ ಗ್ರಾಮದಲ್ಲಿ ಆಹಾರವನ್ನು ಸಿದ್ಧಪಡಿಸಿ ಅದನ್ನು ಅದನ್ನು ಟ್ರಾಕ್ಟರುಗಳು ಮತ್ತು ಕಾರುಗಳ ಮೂಲಕ ಗಡಿಗೆ ಕಳುಹಿಸುತ್ತೇವೆ" ಎಂದು ಅವರು ಹೇಳುತ್ತಾರೆ. ಆ ಗ್ರಾಮದ ನಿವಾಸಿಗಳು ಪ್ರತಿವಾರಕ್ಕೊಮ್ಮೆ ಘಾಜಿಪುರಕ್ಕೆ ಆಹಾರವನ್ನು ಸಾಗಿಸುತ್ತಾರೆ.
ಆರಂಭದಲ್ಲಿ ಪಶ್ಚಿಮ ಉತ್ತರ ಪ್ರದೇಶದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಿರಲಿಲ್ಲ, ಆದ್ದರಿಂದ ನಾನು ನನ್ನ ಅಂಗಡಿಯನ್ನು ನಿರ್ವಹಿಸಬಲ್ಲೆ ಮತ್ತು ಪ್ರತಿ ವಾರದಲ್ಲಿ ಕೆಲವು ಸಮಯವನ್ನು ಅಡುಗೆ ಮಾಡಲು ಕಳೆಯಬಹುದು ಎಂದು ಭಾವಿಸಿದ್ದೆ. ಆದರೆ ದಿನ ಕಳೆದಂತೆ ಕೆಲಸದ ಹೊರೆ ಅಧಿಕಗೊಂಡಿದೆ ಮತ್ತು ಅದು ಇನ್ನೂ ಬೆಳೆಯುತ್ತಿದೆ ಎಂದು ಸುರೇಂದ್ರ ಹೇಳುತ್ತಾರೆ.
ಘಾಜಿಪುರ್, ಸುಮಾರು ಶಾರೋನ್ ನಿಂದ 95 ಕಿಲೋ ಮೀಟರ್ ದೂರದಲ್ಲಿದೆ. ಇದು 2020ರ ನವೆಂಬರ್ 26 ರಂದು ದೆಹಲಿಯ ಗಡಿಯಲ್ಲಿ ನೂತನ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಯ ಮೂರು ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ.ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಸಂಘಟನೆಯ ಮುಖಂಡ ರಾಕೇಶ್ ಟಿಕಾಯತ್ ಅವರ ಭಾವನಾತ್ಮಕ ಕರೆಗೆ ಓಗೊಟ್ಟು ಜನವರಿ ಅಂತ್ಯದಿಂದ ಪಶ್ಚಿಮ ಉತ್ತರ ಪ್ರದೇಶದ ಭಾಗದ ರೈತರು ಬೃಹತ್ ಸಂಖ್ಯೆಯಲ್ಲಿ ಚಳವಳಿ ಸ್ಥಳಕ್ಕೆ ಆಗಮಿಸುತ್ತಿದ್ದಾರೆ.
ರಾಜ್ಯ ಸರ್ಕಾರವು ಪ್ರತಿಭಟನಾ ಸ್ಥಳವನ್ನು ಮುಕ್ತಗೊಳಿಸಬೇಕೆಂದು ಆದೇಶ ಹೊರಡಿಸಿದ ನಂತರ, ಜನವರಿ 28ರಂದು ಪೋಲಿಸರು ರೈತರನ್ನು ಪ್ರತಿಭಟನಾ ಸ್ಥಳದಿಂದ ಖಾಲಿ ಮಾಡಿಸಲು ಘಾಜಿಪುರಕ್ಕೆ ಆಗಮಿಸಿದ್ದರು.ಆಗ ಹಿಂಸಾತ್ಮಕ ಪೋಲೀಸರ ದೌರ್ಜ್ಯನ್ಯದ ಸಾಧ್ಯತೆಯನ್ನು ನಿರೀಕ್ಷಿಸಿದ್ದ ಬಿಕೆಯು ನಾಯಕ ರಾಕೇಶ್ ಟಿಕಾಯತ್ ಕಣ್ನೀರಿಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿತ್ತು, ಆಗ ಈ ಪ್ರತಿಭಟನೆಯನ್ನು ಬೆಂಬಲಿಸಲು ರೈತರು ಘಾಜಿಪುರಕ್ಕೆ ಆಗಮಿಸಬೇಕೆಂದು ಕರೆ ನೀಡಿದ್ದರು. ಜನವರಿ 26ರಂದು ದೆಹಲಿಯಲ್ಲಿ ರೈತರ ಟ್ರಾಕ್ಟರ್ ರ‍್ಯಾಲಿಯ ಸಂದರ್ಭದಲ್ಲಿ ನಡೆದ ಹಿಂಸಾತ್ಮಕ ಘಟನೆಗಳಿಗೆ ಸಂಬಂಧಿಸಿದಂತೆ ಎಫ್‌ಐಆರ್ ನಲ್ಲಿ ಹೆಸರಿಸಲಾದ ಪ್ರಮುಖ ರೈತ ನಾಯಕರಲ್ಲಿ ರಾಕೇಶ್ ಟಿಕಾಯತ್ ಕೂಡ ಒಬ್ಬರಾಗಿದ್ದಾರೆ.
ಟಿಕಾಯತ್ ಅವರ ಈ ಮನವಿಯು ಚಳವಳಿಗೆ ಮತ್ತಷ್ಟು ಶಕ್ತಿಯನ್ನು ತಂದಿತು. ಇದು ಹೆಚ್ಚಿನ ಸಂಖ್ಯೆಯಲ್ಲಿ ರೈತರನ್ನು ಘಾಜಿಪುರಕ್ಕೆ ಆಗಮಿಸುವಂತೆ ಮಾಡಿತು. ಪಶ್ಚಿಮ ಉತ್ತರ ಪ್ರದೇಶದ ಭಾಗದಲ್ಲಿ ಟಿಕಾಯತ್ ಅವರು ಪ್ರಭಾವಿ ನಾಯಕರಾಗಿರುವುದರಿಂದಾಗಿ ಆ ಪ್ರದೇಶದ ವಿವಿಧ ಭಾಗಗಳಲ್ಲಿ ಈಗ ಧರಣಿ ಸತ್ಯಾಗ್ರಹಗಳನ್ನು ನಡೆಸಲಾಗುತ್ತಿದೆ.
ಶಹಪುರ್ ಬ್ಲಾಕ್‌ನಲ್ಲಿರುವ ಶಾರೋನ್ ಗ್ರಾಮವು ಬಲಿಯಾನ್ ಖಾಪ್‌ನ ಒಂದು ಭಾಗ.ಇದು ಮಧ್ಯಕಾಲೀನ ಕಾಲದಲ್ಲಿ ಜಾಟ್ ಸಮುದಾಯದ ಕಶ್ಯಪ್ ಕುಲದವರು ನಿಯಂತ್ರಿಸುತ್ತಿದ್ದ 84 ಗ್ರಾಮಗಳ ಸಮೂಹವಾಗಿದೆ. ಇಂದಿಗೂ ಕೂಡ ಟಿಕಾಯತ್ ಅವರ ಕುಟುಂಬದ ನೇತೃತ್ವದ ಬಲಿಯಾನ್ ಕುಲ ಮಂಡಳಿಯು ಈ ಹಳ್ಳಿಗಳಲ್ಲಿ ಸಾಕಷ್ಟು ಪ್ರಭಾವವನ್ನು ಹೊಂದಿದೆ, ಅದು ಈಗ ಉತ್ತರ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನದಂತಹ ರಾಜ್ಯಗಳಿಗೂ ಕೂಡ ವ್ಯಾಪಿಸಿದೆ. ಬಲಿಯಾನ್ ಖಾಪ್‌ನ ಅನೇಕ ಹಳ್ಳಿಗಳಲ್ಲಿ ಶಾರೋನ್ ಕೂಡ ಒಂದಾಗಿದ್ದು, ಅದು ಈಗ ಚಳವಳಿಯನ್ನು ಮುಂದುವರೆಸಲು ಸಹಾಯಕವಾಗಿದೆ.
ನಾವು 7 ರಿಂದ 8 ಜನರಿದ್ದೇವೆ, ಪ್ರತಿ ವಾರ 1,000 ಕ್ಕೂ ಹೆಚ್ಚು ಜನರಿಗೆ ಆಹಾರವನ್ನು ಸಿದ್ಧಪಡಿಸುತ್ತೇವೆ" ಎಂದು ಸುರೇಂದ್ರ ಹೇಳುತ್ತಾರೆ."ನಾವು ಹಲ್ವಾ, ಖೀರ್, ಆಲೂ-ಪುರಿ, ಖಿಚಡಿ, ಪಕೋಡಾ ಮತ್ತು ಇತರ ಭಕ್ಷ್ಯಗಳನ್ನು ತಯಾರಿಸುತ್ತೇವೆ. ಆಹಾರದ ಜೊತೆಗೆ ನಾವು ರೇಷನ್ ಮತ್ತು ಹಣ್ಣುಗಳನ್ನು ಸಹ ಕಳುಹಿಸುತ್ತೇವೆ" ಎಂದು ಹೇಳುತ್ತಾರೆ. ಸುಮಾರು 15,700 ಜನಸಂಖ್ಯೆ (ಜನಗಣತಿ 2011) ಯನ್ನು ಹೊಂದಿರುವ ಗ್ರಾಮದ 150 ಜನರು ಗಾಜಿಪುರದಲ್ಲಿದ್ದಾರೆ ಎಂದು ಅವರು ಅಂದಾಜಿಸುತ್ತಾರೆ.
ಪ್ರತಿಭಟನಾಕಾರರ ಎಲ್ಲಾ ಅಡುಗೆ ಕಾರ್ಯಗಳನ್ನು ಶಾರೋನ್ ನಲ್ಲಿರುವ ವ್ಯಕ್ತಿಗಳು ನಿರ್ವಹಿಸುತ್ತಾರೆ. ಲಾಜಿಸ್ಟಿಕ್ಸ್ ಗೆ ಸಂಬಂಧಿಸಿದ ಎಲ್ಲಾ ಕಾರ್ಯಗಳನ್ನು ವಿವರಿಸಲು ಅವರು ಅಷ್ಟೇ ಉತ್ಸುಕರಾಗಿದ್ದಾರೆ. ಆದರೆ ಇನ್ನೊಂದೆಡೆಗೆ ಐದು ಎಕರೆ ಪ್ರದೇಶದಲ್ಲಿ ಕಬ್ಬು ಕೃಷಿ ಮಾಡುವ ಚಂಚಲ್ ಬಲಿಯನ್ ಅವರು ಅಷ್ಟಾಗಿ ಪ್ರಭಾವಿತರಾಗಿಲ್ಲ. "ಮಹಿಳೆಯರು ಯಾವಾಗಲೂ ಅಡುಗೆ ಮಾಡುತ್ತೇವೆ, ಅದರಲ್ಲಿ ಅಂತಹ ದೊಡ್ಡ ಸಂಗತಿ ಏನಿದೆ ? ಎಂದು 45 ವರ್ಷದ ರೈತ ಮಹಿಳೆ ಮಂದ ನಗೆ ಬಿರುತ್ತಾರೆ.
ಪ್ರಮುಖವಾಗಿ ಕಬ್ಬನ್ನು ಬೆಳೆಯುವ ಊರಿನ ರೈತರು ಸಂಪನ್ಮೂಲಗಳನ್ನು ಸಂಗ್ರಹಿಸುತ್ತಿದ್ದಾರೆ."ರೈತರು ಆಹಾರ ಪದಾರ್ಥಗಳಿಗಾಗಿ ಹಣವನ್ನು ನೀಡಿದ್ದಾರೆ. ನಾವು ನಮ್ಮ ಹೊಲಗಳಲ್ಲಿ ಬೆಳೆಯುವ ಗೋಧಿ, ಬೇಳೆಕಾಳುಗಳು ಮತ್ತು ಸಿರಿಧಾನ್ಯಗಳನ್ನು ಸಹ ದಾನ ಮಾಡುತ್ತೇವೆ "ಎಂದು ಚಂಚಲ್ ಹೇಳುತ್ತಾರೆ. "ಕೆಲವು ರೈತರು ಗಡಿಯಲ್ಲಿದ್ದು ಪ್ರತಿಭಟಿಸುತ್ತಿರಬಹುದು. ಆದರೆ ಇಡೀ ಗ್ರಾಮ ಅವರ ಹಿಂದೆ ಬೆಂಬಲವಾಗಿ ನಿಂತಿದೆ. ನಾವೆಲ್ಲರೂ ಒಟ್ಟಿಗೆ ಇದ್ದೇವೆ” ಎಂದು ಹೇಳುತ್ತಾರೆ.
ಚಳುವಳಿಗಾಗಿ ತಮ್ಮ ಉತ್ಪನ್ನಗಳನ್ನು ಮತ್ತು ಹಣವನ್ನು ಉದಾರವಾಗಿ ನೀಡುತ್ತಿರುವ ಅನೇಕ ರೈತರು ಸಾಲದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಅಥವಾ ತಮ್ಮ ಕಬ್ಬು ಬೆಳೆಗೆ ಸಕ್ಕರೆ ಉದ್ಯಮದಿಂದ ಹಣದ ಪಾವತಿಯನ್ನು ನಿರೀಕ್ಷಿಸುತ್ತಿದ್ದಾರೆ. ಶಾರೊನ್‌ನಲ್ಲಿ ಎರಡು ಎಕರೆ ಕೃಷಿಭೂಮಿಯನ್ನು ಹೊಂದಿರುವ ರಾಮ್ ಸಿಂಗ್ (57) 2019-20 ರ ಋತುವಿನಲ್ಲಿ ಮಾರಾಟ ಮಾಡಿದ ಕಬ್ಬಿನ ಬೆಳೆಯ 18,000 ರೂ ಗಳನ್ನು ಇನ್ನೂ ಸ್ವೀಕರಿಸಬೇಕಾಗಿದೆ. ಅವರು "ನಾನು ಇನ್ನೂ ಕೆಲವು ಆಹಾರ ಧಾನ್ಯಗಳನ್ನು ಕೊಡುಗೆಯಾಗಿ ನೀಡುತ್ತೇನೆ" ಎಂದು ಹೇಳುತ್ತಾರೆ.
ನಿರಂತರವಾಗಿ ರೇಷನ್ ದಾನ ಮಾಡುವ 4 ಎಕರೆ ಕೃಷಿ ಭೂಮಿಯನ್ನು ಹೊಂದಿರುವ 80 ವರ್ಷದ ರೈತ ವಿಜಯ್ ಪಾಲ್ “2019-20 ರ ಋತುವಿನಲ್ಲಿ ನನ್ನ ಕಬ್ಬಿನ ಬೆಳೆಗೆ ಸಂದಾಯವಾಗಬೇಕಿದ್ದ 1 ಲಕ್ಷ ರೂಪಾಯಿಗಳು ಇನ್ನೂ ಬಂದಿಲ್ಲ” ಎಂದು ಹೇಳುತ್ತಾರೆ.ಅವರು ತಮ್ಮ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸುಮಾರು ಅದೇ ಮೊತ್ತವನ್ನು ಎರವಲು ಪಡೆಯಬೇಕಾಗಿತ್ತು."ಈಗ ನಾವೇನು ಮಾಡಬೇಕು? ಸಾಯಲಿಕ್ಕಂತೂ ಸಾಧ್ಯವಿಲ್ಲ" ಎಂದು ಪಾಲ್ ಹೇಳುತ್ತಾರೆ.
ವಿಜಯ್ ಪಾಲ್ ಅವರು ಫೆಬ್ರುವರಿ ತಿಂಗಳದಲ್ಲಿನ ಎರಡನೇ ವಾರದಲ್ಲಿ ಘಾಜಿಪುರಕ್ಕೆ ಆಹಾರವನ್ನು ತೆಗೆದುಕೊಂಡು ಹೋಗಿದ್ದಲ್ಲದೇ ಪ್ರತಿಭಟನಾ ಸ್ಥಳದಲ್ಲಿ ಕೆಲವು ದಿನಗಳ ಕಾಲ ಕ್ಯಾಂಪ್ ಮಾಡಿದ್ದರು. 'ನನ್ನ ಈ ಇಳಿ ವಯಸ್ಸಿನಲ್ಲಿ, ಹೆಚ್ಚು ಸಮಯ ಇರಲಿಕ್ಕೆ ಸಾಧ್ಯವಿಲ್ಲ" ಎಂದು ಅವರು ಹೇಳುತ್ತಾರೆ.ಈಗ ಕೃಷಿ ಕಾನೂನುಗಳಿಂದ ಉಂಟಾಗಿರುವ ಹಿನ್ನಡೆಯು ಪಶ್ಚಿಮ ಉತ್ತರಪ್ರದೇಶ ಭಾಗದ ರೈತರನ್ನು ಸರ್ಕಾರದ ನೀತಿಗಳ ವಿಚಾರವಾಗಿ ಎಚ್ಚೆತ್ತುಕೊಳ್ಳುವಂತೆ ಮಾಡಿದೆ ಎನ್ನುತ್ತಾರೆ.
2016 ರ ಫೆಬ್ರವರಿಯಲ್ಲಿ 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಘೋಷಣೆ ಹೊರಡಿಸಿದ್ದ ಕೇಂದ್ರ ಸರ್ಕಾರದ ಯೋಜನೆಯನ್ನು ಉಲ್ಲೇಖಿಸಿದ ವಿಜಯ್ ಪಾಲ್ ‘ಈಗ ಅದಕ್ಕೆ ಕೇವಲ ಒಂದು ವರ್ಷದ ಕಾಲಾವಧಿ ಮಿತಿ ಇದೆ, ಹಾಗಾದರೆ ಈಗ ಅದಕ್ಕೆ ಏನಾಯಿತು? ಈ ಕಾನೂನುಗಳು ನಮ್ಮ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ" ಎನ್ನುತ್ತಾರೆ.
ರೈತರು ವಿರೋಧಿಸುತ್ತಿರುವ ಆ ಮೂರು ಕಾನೂನುಗಳೆಂದರೆ: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020 ; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020.
ರೈತರು ಈ ಮಮೂರು ಕಾನೂನುಗಳನ್ನು ದೊಡ್ಡ ಕಾರ್ಪೊರೇಟ್‌ಗಳು ತಮ್ಮ ಗರಿಷ್ಠ ಶಕ್ತಿಯನ್ನು ರೈತರು ಮತ್ತು ಕೃಷಿಯ ಕಡೆಗೆ ಬಳಸಿಕೊಳ್ಳುವ ವೇದಿಕೆಯಾಗಿ ನೋಡುತ್ತಾರೆ. ಈ ಕಾನೂನುಗಳು ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ), ಕೃಷಿ ಉತ್ಪಾದನೆ (ಇಳುವರಿ) ಮಾರುಕಟ್ಟೆ ಸಮಿತಿಗಳು (ಎಪಿಎಂಸಿ), ಮತ್ತು ಸರ್ಕಾರಿ ಖರೀದಿ ಸೇರಿದಂತೆ ರೈತರಿಗೆ ನೀಡುವ ಪ್ರಮುಖ ಬೆಂಬಲ ರೂಪಗಳನ್ನು ಹಾಳುಗೆಡವುತ್ತವೆ. ಈ ಕಾನೂನುಗಳು ಪ್ರತಿ ಭಾರತೀಯರ ಮೇಲೆ ಪರಿಣಾಮ ಬೀರಲಿರುವುದರಿಂದಲೂ ಅವುಗಳನ್ನು ಟೀಕಿಸಲಾಗುತ್ತಿದೆ. ದೇಶದ ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ಈ ಕಾನೂನುಗಳು ಕಸಿದುಕೊಳ್ಳುತ್ತವೆ, ಇದು ಭಾರತದ ಸಂವಿಧಾನದ 32ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ.
2006 ರಲ್ಲಿ ಬಿಹಾರ ರಾಜ್ಯವು ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಗಳನ್ನು ರದ್ದುಗೊಳಿಸಿದ ನಂತರ ಅಲ್ಲಿನ ರೈತರ ಅನುಭವವು ಈಗ ಎಲ್ಲಾ ರೈತರ ಮುಂದೆ ಉಳಿದಿರುವುದೇನು ಎಂಬುದನ್ನು ಸೂಚಿಸುತ್ತದೆ ಎಂದು 36 ವರ್ಷದ ಅಜಿಂದರ್ ಬಲಿಯಾನ್ ಹೇಳುತ್ತಾರೆ."ಬಿಹಾರದ ರೈತರು ಅಂದಿನಿಂದಲೂ ಕಷ್ಟಪಡುತ್ತಿದ್ದಾರೆ. ಈಗ ಇತರ ರಾಜ್ಯಗಳ ರೈತರ ಪರಿಸ್ಥಿತಿ ಅದೇ ರೀತಿಯಾಗಲಿದೆ 'ಎಂದು ಅವರು ಹೇಳುತ್ತಾರೆ, ಈ ಹಿಂದೆ ಆಡಳಿತ ಸರ್ಕಾರವನ್ನು ಬೆಂಬಲಿಸಿದ್ದಕ್ಕಾಗಿ ಅವರು ವಿಷಾದ ವ್ಯಕ್ತಪಡಿಸುತ್ತಾರೆ. ನಮಗೆ ಹಿರಿಯರು ಎಚ್ಚರಿಕೆ ನೀಡಿದ್ದರು, ಆದರೆ ನಾವು ಆಗ ಪ್ರೊಪಗೆಂಡಾದ ಪ್ರಭಾವಕ್ಕೆ ಒಳಗಾಗಿದ್ದೆವು” ಎಂದು ಹೇಳುತ್ತಾರೆ.
ಸದ್ಯ ರೈತರ ಸಂಕಲ್ಪದ ಮೇರೆಗೆ ಶಾರೋನ್‌ನಿಂದ ಗಾಜಿಪುರಕ್ಕೆ ಆಹಾರ ವಿತರಣೆಯನ್ನು ಮುಂದುವರಿಸಲಾಗುತ್ತಿದೆ. ಆದರೆ ಇದು ಆರ್ಥಿಕವಾಗಿ ಲಾಭದಾಯಕವಲ್ಲ."ನಮಗೆ ಈಗ ಯಾವುದೇ ಕೆಲಸವಿಲ್ಲ. ಮಕ್ಕಳ ಶಾಲಾ ಶುಲ್ಕವನ್ನು ಪಾವತಿಸುವುದು ಅಥವಾ ಮೋಟಾರ್ ಸೈಕಲ್ ನ್ನು ನಿರ್ವಹಿಸುವುದು ಸಹ ಕಷ್ಟವಾಗುತ್ತಿದೆ.ಈ ಸಂದರ್ಭದಲ್ಲಿ ರೈತರು ಪ್ರತಿಭಟನಾ ಸ್ಥಳಗಳಲ್ಲಿ ಕ್ಯಾಂಪ್ ಮಾಡಬೇಕಾಗಿರುವುದು ದುರಂತದ ಸಂಗತಿ" ಎಂದು ಶಾರೊನ್‌ನ ಮಾಜಿ ಪ್ರಧಾನ್ 60 ವರ್ಷದ ಸುಧೀರ್ ಚೌಧರಿ ಹೇಳುತ್ತಾರೆ.
ಕೆಲವು ರೈತರು ಜೀವನೋಪಾಯಕ್ಕಾಗಿ ತಮ್ಮ ಜಾನುವಾರುಗಳ ಹಾಲನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಚೌಧರಿ ಹೇಳುತ್ತಾರೆ."ನಾವು ಈ ಮೊದಲು ಹಾಲನ್ನು ಮಾರಾಟ ಮಾಡಿಲ್ಲ. ಈಗ ನಾವು ಹೆಚ್ಚುವರಿ ಹಣವನ್ನು ಸಂಪಾದಿಸಲು ಹಾಲಿನ ಬಕೆಟ್ ನೊಂದಿಗೆ ಮನೆ ಮನೆಗೆ ಹೋಗುತ್ತೇವೆ. ಆದರೂ ಹೋರಾಡುತ್ತಿದ್ದೇವೆ, ಏಕೆಂದರೆ ಇದು ನಮ್ಮ ಜೀವನೋಪಾಯದ ಹೋರಾಟವಾಗಿದೆ"ಎನ್ನುತ್ತಾರೆ.
ಇಂತಹ ಕಷ್ಟದ ಪರಿಸ್ಥಿತಿಯ ನಡುವೆಯೂ ಶಾರೊನ್‌ನಲ್ಲಿ ಆರು ಎಕರೆ ಭೂಮಿಯನ್ನು ಹೊಂದಿರುವ 66 ವರ್ಷದ ಸಯಾಂದ್ರಿ ಬಲಿಯಾನ್ ಸಂಕಲ್ಪ ಮಾತ್ರ ಅಚಲವಾಗಿದೆ. ಸರ್ಕಾರವು ಈ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕು, "ಅಲ್ಲಿಯವರೆಗೆ ನಾವು ಆಹಾರ ಮತ್ತು ಪಡಿತರವನ್ನು ಗಡಿಗೆ ಕಳುಹಿಸುವುದನ್ನು ಮುಂದುವರಿಸುತ್ತೇವೆ' ಎಂದು ಹೇಳುತ್ತಾರೆ.
ಅನುವಾದ - ಎನ್.ಮಂಜುನಾಥ್