ಕಲ್ಲಿಯಸ್ಸೆರಿ ಬಳಿಯ ಪರಸ್ಸಿನಿ ಕಡವು ದೇವಾಲಯವು ಇತರ ದೇವಳಗಂತಲ್ಲ. ಇದು ಯಾವಾಗಲೂ ಎಲ್ಲಾ ಜಾತಿಗಳಿಗೂ ಮುಕ್ತವಾಗಿತ್ತು. ಇದರ ಪುರೋಹಿತರು ಹಿಂದುಳಿದ ಸಮುದಾಯದವರು. ಇದರ ದೇವರಾದ ಮುತಪ್ಪನನ್ನು 'ಬಡವರ ದೇವರು' ಎಂದು ಕರೆಯಲಾಗುತ್ತದೆ. ಸರ್ವಶಕ್ತನಿಗೆ ನೀಡುವ ಅರ್ಪಣೆಗಳಲ್ಲಿ ಕಳ್ಳು ಮತ್ತು ಮಾಂಸವೂ ಸೇರಿವೆ. ಅನೇಕ ದೇವಾಲಯಗಳು ತಮ್ಮ ವಿಗ್ರಹಗಳ ನಡುವೆ ನಾಯಿಗಳ ಕಂಚಿನ ವಿಗ್ರಹವಿರುವುದನ್ನು ಬಯಸುವುದಿಲ್ಲ. ಕೇರಳದ ಕಣ್ಣೂರು ಜಿಲ್ಲೆಯ ಈ ದೇವಸ್ಥಾನದಲ್ಲಿ ಅದಕ್ಕೂ ಅವಕಾಶವಿದೆ. ಅಷ್ಟಕ್ಕೂ ಮುತಪ್ಪನ್, ಬೇಟೆಗಾರರ ದೇವರು.

1930ರ ದಶಕದಲ್ಲಿ, ಮುತ್ತಪ್ಪನ್ ಬೇಟೆಗಳಿಗೂ ದೇವರಾಗಿದ್ದರು. ಅದರಲ್ಲೂ ಬ್ರಿಟಿಷರಿಂದ ತಲೆಮರೆಸಿಕೊಂಡಿದ್ದ ಎಡಪಂಥಕ್ಕೆ ಸೇರಿದ ರಾಷ್ಟ್ರೀಯವಾದಿಗಳು ಮತ್ತು ಕಮ್ಯುನಿಸ್ಟರ ಪಾಲಿಗೆ. "ಇಲ್ಲಿನ ಜನಮಿಗಳ (ಜಮೀನ್ದಾರರ) ವಿರುದ್ಧದ ಹೋರಾಟದಲ್ಲೂ ಈ ದೇವಾಲಯ ನಮ್ಮೊಂದಿಗೆ ಕೈಜೋಡಿಸಿದೆ" ಎಂದು ಕೆಪಿಆರ್ ರಾಯರಪ್ಪನ್ ಹೇಳುತ್ತಾರೆ. ಅವರು 1947ರಿಂದ ಈ ಇಡೀ ಪ್ರದೇಶದಲ್ಲಿ ನಡೆದ ಎಲ್ಲಾ ಹೋರಾಟಗಳಲ್ಲಿ ಸಕ್ರಿಯರಾಗಿದ್ದರು. "ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ, ಎಡರಂಗದ ಹೆಚ್ಚಿನ ದೊಡ್ಡ ನಾಯಕರು ಈ ದೇವಾಲಯವನ್ನು ಒಂದಲ್ಲ ಒಂದು ಹಂತದಲ್ಲಿ ತಮ್ಮ ಆಶ್ರಯವನ್ನಾಗಿ ಮಾಡಿಕೊಂಡಿದ್ದರು."

ನಾಸ್ತಿಕರು ಮತ್ತು ಧರ್ಮನಿಷ್ಠರ ನಡುವಿನ ಈ ವಿಚಿತ್ರ ಮೈತ್ರಿಕೂಟವು ತಾರ್ಕಿಕ ಆಧಾರವನ್ನು ಹೊಂದಿದೆ. ಇಬ್ಬರ ವರ್ಗ ನೆಲೆಯಲ್ಲಿ ಬಲವಾದ ಹೊಂದಾಣಿಕೆಯಿತ್ತು. ಇಬ್ಬರೂ ಮೇಲ್ಜಾತಿಯ ದಬ್ಬಾಳಿಕೆಯ ವಿರುದ್ಧವಿದ್ದರು. ಎಲ್ಲರೂ ಭೂಮಾಲೀಕರ ಹಗೆತನವನ್ನು ಎದುರಿಸಿದ್ದರು. ಮತ್ತು, ಈ ಅವಧಿಯ ಬಲವಾದ ರಾಷ್ಟ್ರೀಯತಾವಾದದ ಉತ್ತುಂಗದಲ್ಲಿ, ಎಲ್ಲರೂ ಬ್ರಿಟಿಷರ ವಿರುದ್ಧ ಇದ್ದರು.

"ಇಲ್ಲಿನ ದೊಡ್ಡ ಜನ್ಮಿ ಈ ದೇವಾಲಯವನ್ನು ವಶಕ್ಕೆ ಪಡೆಯಲು ಬಯಸಿದ್ದರು" ಎಂದು ರಾಯರಪ್ಪನ್ ಹೇಳುತ್ತಾರೆ. "ಅದಕ್ಕಿದ್ದ ದೊಡ್ಡ ಆದಾಯ ಅವರಲ್ಲಿ ಬಹಳ ಆಕರ್ಷಣೆಯನ್ನು ಮೂಡಿಸಿತ್ತು." ಅದನ್ನು ನಂಬುವುದು ಸುಲಭ. ಈಗಲೂ, ಮುತಪ್ಪನ್ ದೇವಸ್ಥಾನವು ಪ್ರತಿದಿನ 4,000 ಜನರಿಗೆ ಮತ್ತು ವಾರಾಂತ್ಯದಲ್ಲಿ 6,000 ಜನರಿಗೆ ಆಹಾರವನ್ನು ನೀಡುತ್ತದೆ. ಇದು ಪ್ರತಿದಿನ ತನ್ನ ಪ್ರದೇಶದ ಎಲ್ಲಾ ಶಾಲಾ ಮಕ್ಕಳಿಗೆ ಆಹಾರವನ್ನು ನೀಡುತ್ತದೆ.

30 ಮತ್ತು 40ರ ದಶಕಗಳಲ್ಲಿ ಅವರಿಗೆ ಆಶ್ರಯ ನೀಡುವ ಮೂಲಕ ದೇವಾಲಯವು ದೊಡ್ಡ ಅಪಾಯವನ್ನು ಎದುರುಹಾಕಿಕೊಂಡಿತ್ತು. ಆದಾಗ್ಯೂ, ಆದರೆ ಕಲ್ಲಿಯಶ್ಶೆರಿ ಮತ್ತು ಸುತ್ತಮುತ್ತಲಿನ ಹಳ್ಳಿಗಳ ಜನರು ಸಹ ಅಸಾಧಾರಣರು. ಅವರ ರಾಜಕೀಯ ಪ್ರಜ್ಞೆಗೆ ದೀರ್ಘ ಇತಿಹಾಸವಿದೆ. ನೀವು ಪಪ್ಪಿನೆಸೇರಿಯಲ್ಲಿನ ಜವಳಿ ಗಿರಣಿಯನ್ನು ತೆಗೆದುಕೊಂಡರೆ, ಅದು ಸುತ್ತಮುತ್ತಲಿನ ಹಳ್ಳಿಯ ಎಲ್ಲ ಕಾರ್ಮಿಕರನ್ನು ಸಂಘಟಿಸಿತ್ತು. 1946ರಲ್ಲಿ, ಬಾಂಬೆಯ ರಾಯಲ್ ಇಂಡಿಯನ್ ನೇವಿ ದಂಗೆಗೆ ಬೆಂಬಲವಾಗಿ ಜನರು ಕೇರಳದ ಈ ಸಣ್ಣ ಪಟ್ಟಣದಲ್ಲಿ 100 ದಿನಗಳ ಮುಷ್ಕರ ನಡೆಸಿದರು. ಇದು ಬ್ರಿಟಿಷರ ಆಡಳಿತವನ್ನು ಧಿಕ್ಕರಿಸಿ ನಡೆದ ಹೋರಾಟವಾಗಿತ್ತು.

"ಈ ಪ್ರದೇಶದಲ್ಲಿ ಸೆಕ್ಷನ್ 144 (ನಿಷೇಧಾಜ್ಞೆ) ಒಂದು ವರ್ಷದ ಅವಧಿಗೆ ವಿಧಿಸಲಾಗಿತ್ತು, ಆದರೆ ನಾವು ಆಗಲೂ ಸಕ್ರಿಯರಾಗಿದ್ದೆವು." ಎಂದು 81 ವರ್ಷದ ಪಯನಾದನ್ ಯಶೋದಾ ಹೇಳಿದರು. ಇವರು 30ರ ದಶಕದ ನಂತರ ಮಲಬಾರ್ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಿಕ್ಷಕರ ಚಳವಳಿಯ ನಾಯಕಿ.

ಇಲ್ಲಿ ನಡೆದ ಹೋರಾಟವು ಬೇರೆಡೆ ನಡೆದ ಹೋರಾಟಗಳಿಗಿಂತ ಹೇಗೆ ಭಿನ್ನ? "ನಾವು ಸಂಘಟಿತರಾಗಿದ್ದೇವೆ" ಎಂದು ಯಶೋದಾ ಹೇಳುತ್ತಾರೆ. "ನಾವು ರಾಜಕೀಯ ರೀತಿಯಲ್ಲಿ ಹೋರಾಡಿದೆವು. ನಮ್ಮ ಗುರಿ ಸ್ಪಷ್ಟವಾಗಿತ್ತು. ಜನರು ಸಂಪೂರ್ಣವಾಗಿ ತಿಳುವಳಿಕೆ ಹೊಂದಿದ್ದರು ಮತ್ತು ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ನಾವು ರಾಷ್ಟ್ರೀಯ ಚಳವಳಿಯಲ್ಲಿ ಭಾಗಿಯಾಗಿದ್ದೇವೆ. ನಾವು ಸಾಮಾಜಿಕ ಸುಧಾರಣೆಗಳು ಮತ್ತು ಜಾತಿ ವಿರೋಧಿ ಅಭಿಯಾನಗಳನ್ನು ನಡೆಸುತ್ತಿದ್ದೆವು. ಇದಲ್ಲದೆ ಭೂಮಿಯ ಕುರಿತಾದ ಹೋರಾಟವೂ ನಡೆದಿತ್ತು. ಎಲ್ಲವೂ ಪರಸ್ಪರ ಸಂಪರ್ಕ ಹೊಂದಿದ್ದವು.

ಕಲ್ಲಿಯಶ್ಶೆರಿ ಮತ್ತು ಅದರ ನೆರೆಹೊರೆಯವರು ತಮ್ಮ 50 ವರ್ಷಗಳ ಸ್ವಾತಂತ್ರ್ಯವನ್ನು ಬಳಸಿಕೊಂಡಿದ್ದಾರೆ. ಇಲ್ಲಿ ಶೇಕಡಾ ನೂರು ಸಾಕ್ಷರತೆ ಇದೆ ಮತ್ತು ಪ್ರತಿ ಮಗು ಶಾಲೆಗೆ ಹೋಗುತ್ತದೆ. ಅವರ ಇತರ ಕೆಲವು ಅಭಿವೃದ್ಧಿ ಸೂಚಕಗಳನ್ನು ಕೆಲವು ಪಾಶ್ಚಿಮಾತ್ಯ ಸಮಾಜಗಳೊಂದಿಗೆ ಹೋಲಿಸಬಹುದು. ಇದು ಸಂಘಟಿತ ಸಾಮೂಹಿಕ ರಾಜಕೀಯ ಕ್ರಿಯೆಯ ಲಾಭವೆಂದು ಯಶೋದಾ ನಂಬುತ್ತಾರೆ.

ಆದರೆ ಅದು ಸ್ವಲ್ಪ ಉತ್ಪ್ರೇಕ್ಷೆಯ ವಿಷಯವೆನಿಸುವುದಿಲ್ಲವೇ? ವಿಶೇಷವಾಗಿ ಸಂಘಟಿತ ರಾಜಕೀಯ ಚಳುವಳಿಗಳ ಪಾತ್ರದ ವಿಷಯದಲ್ಲಿ? ಅಷ್ಟಕ್ಕೂ, ಕೇರಳಕ್ಕೂ ಮುಂಚೆಯೇ ಹೆಚ್ಚಿನ ಸಾಕ್ಷರತಾ ಪ್ರಮಾಣವಿತ್ತು. ತನ್ನ ತಾಲ್ಲೂಕಿನ ಮೊದಲ ಮಹಿಳಾ ಶಿಕ್ಷಕಿಯಾಗಿದ್ದ ಯಶೋದಾ ಇದನ್ನು ತಳ್ಳಿ ಹಾಕುತ್ತಾರೆ. "1930ರ ದಶಕದ ಅಂತ್ಯದ ವೇಳೆಗೆ, ಮಲಬಾರಿನಲ್ಲಿ ಸಾಕ್ಷರತೆಯ ಪ್ರಮಾಣವು ಶೇಕಡಾ ಎಂಟರಷ್ಟಿತ್ತು. ತಿರುವಾಂಕೂರಿನಲ್ಲಿ ಅದು ಶೇಕಡಾ 40ರಷ್ಟಿತ್ತು. ನಮ್ಮ ಪ್ರಯತ್ನಗಳ ಮೂಲಕ ನಾವು ನಿಜವಾಗಿಯೂ ಈ ಯಶಸ್ಸನ್ನು ಸಾಧಿಸಿದ್ದೇವೆ."

ಈ ರೀತಿಯಾಗಿ ನೋಡಿದರೆ, ಮಲಬಾರ್ ಭಾರತದೊಳಗಿನ ಒಂದು ವಿಶಿಷ್ಟ ಪ್ರಕರಣವಾಗಿದೆ. ಪ್ರಾದೇಶಿಕ ಅಂತರವು ವಾಸ್ತವವಾಗಿ ಅಲ್ಪಾವಧಿಯಲ್ಲಿ ಕಿರಿದಾಗಿದೆ. ತಿರುವಾಂಕೂರು ಮತ್ತು ಕೊಚ್ಚಿನ್‌ಗಳಲ್ಲಿ, ಈ ವ್ಯತ್ಯಾಸವು ಮತ್ತೊಂದು ಅರ್ಥದಲ್ಲಿಯೂ ಉಳಿದಿದೆ. "ನಮ್ಮ ಸಂಘಟಿತ ರಾಜಕೀಯ ಚಟುವಟಿಕೆ ಈ ಬದಲಾವಣೆಯನ್ನು ತಂದಿತು" ಎಂದು ರಾಯರಪ್ಪನ್ ಹೇಳುತ್ತಾರೆ. 1950 ಮತ್ತು 60ರ ದಶಕಗಳಲ್ಲಿ ನಡೆದ ಭೂ ಸುಧಾರಣಾ ಆಂದೋಲನಗಳು ಜಾತಿ ಸೇರಿದಂತೆ ಅನೇಕ ರಚನೆಗಳನ್ನು ಉರುಳಿಸಿದವು. ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ವೇಗವಾಗಿ ಸುಧಾರಿಸಿದವು. 1928ರಲ್ಲಿ, ಕಲ್ಲಿಯಶ್ಶೆರಿಯಲ್ಲಿ ಕೇವಲ 24 ಕುಟುಂಬಗಳು ಕೇವಲ 43 ಶೇಕಡಾ ಭೂಮಿಯನ್ನು ಹೊಂದಿದ್ದವು. ಇಂದು, ಕೇವಲ 13 ಕುಟುಂಬಗಳು ಮಾತ್ರ ಐದು ಎಕರೆಗಿಂತ ಹೆಚ್ಚು ಭೂಮಿಯನ್ನು ಹೊಂದಿವೆ. ಇದಲ್ಲದೆ, ಒಟ್ಟಾರೆ ಭೂಮಿಯಲ್ಲಿ ಅವರ ಪಾಲು ಕೇವಲ ಆರು ಶೇಕಡಾ ಮಾತ್ರ.

ಕಲ್ಲಿಯಶ್ಶೆರಿಯ ನಿವಾಸಿಗಳು ತಮ್ಮ ಆಹಾರದ ವಿಷಯದಲ್ಲೂ ದೊಡ್ಡ ಸುಧಾರಣೆ ಕಂಡಿದ್ದಾರೆ. ಹಾಲು ಮತ್ತು ಮಾಂಸ ಸೇವನೆ ಹೆಚ್ಚಾಗಿದೆ. ಮತ್ತು ಪುರುಷರು ಮತ್ತು ಮಹಿಳೆಯರು ಇಲ್ಲಿ ಧರಿಸುವ ಬಟ್ಟೆಗಳನ್ನು ನೋಡಿ, ಅವರು ಕಾರ್ಮಿಕರು ಎಂದು ನೀವು ಹೇಳಲಾಗುವುದಿಲ್ಲ.

1980ರ ದಶಕದಲ್ಲಿ ರಾಜ್ಯದಲ್ಲಿ ನಡೆದ ಬೃಹತ್ ಸಾಕ್ಷರತಾ ಅಭಿಯಾನವು ಮತ್ತಷ್ಟು ಪ್ರಯೋಜನಗಳನ್ನು ತಂದಿತು. ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆಗಳ ಪ್ರಯತ್ನಗಳು ಹೊಸ ಬಾಗಿಲು ತೆರೆಯಿತು. ಈ ಎಲ್ಲದರ ಪರಸ್ಪರ ಸಂಬಂಧವು ಮೊದಲಿನಂತೆಯೇ ಈ ಪ್ರದೇಶದ ರಾಜಕೀಯ ಸಂಪ್ರದಾಯಗಳಿಗೆ ಭದ್ರ ಬುನಾದಿಯನ್ನು ಒದಗಿಸಿತು. ಕಲ್ಲಿಯಶ್ಶೆರಿ ಸೇರಿದಂತೆ ಮಲಬಾರ್ ಇಂದು ಇತರ ವಿಷಯಗಳಲ್ಲಿಯೂ ಆದರ್ಶವಾಗಿ ಮುಂದುವರೆಯುತ್ತಿದೆ.

"30 ಮತ್ತು 40ರ ದಶಕದ ಅಂತ್ಯದಲ್ಲಿ ಕಲ್ಲಿಯಸ್ಸೆರಿ ಸಾಕಷ್ಟು ಪ್ರಯೋಗಗಳನ್ನು ಮಾಡಿತ್ತು. ಇದು ಉತ್ಪಾದನೆ ಮತ್ತು ಗ್ರಾಹಕ ಸಹಕಾರ ಸಂಘಗಳನ್ನು ಆಗಲೇ ಪ್ರಾರಂಭಿಸಿತ್ತು" ಎಂದು ಕಣ್ಣೂರಿನ ಕೃಷ್ಣ ಮೆನನ್ ಕಾಲೇಜಿನ ಉಪನ್ಯಾಸಕ ಮೋಹನ್‌ದಾಸ್ ಹೇಳಿದರು. "ಅವುಗಳ ಸ್ಥಾಪನೆಯು ಕೈಗೆಟುಕುವ ಬೆಲೆಯಲ್ಲಿ ಸರಕುಗಳನ್ನು ನೀಡುವ ಮಳಿಗೆಗಳ ಸ್ಥಾಪನೆಗೆ ಪ್ರೇರಣೆ ನೀಡಿದೆ."

"ಇದೆಲ್ಲವನ್ನೂ ಕ್ಷಾಮ ಮತ್ತು ಹಸಿವಿನ ಸಮಯದಲ್ಲಿ ಸಾಧಿಸಲಾಗಿದೆ. ಆ ಸಮಯದಲ್ಲಿ ರೈತರ ಧಾನ್ಯದ ಮೇಲೆ ಜನ್ಮಿ ಜನರು ಹೆಚ್ಚು ಹಕ್ಕು ಸಾಧಿಸುತ್ತಿದ್ದರು. ಬಹುಶಃ ಜನ್ಮಿಗಳು ಸ್ವತಃ ಈ ವಿಷಯದಲ್ಲಿ ಬ್ರಿಟಿಷರಿಂದ ಒತ್ತಡವನ್ನು ಎದುರಿಸುತ್ತಿದ್ದರು. ಈ ಮೊದಲು ಬರಗಾಲದ ದಿನಗಳಲ್ಲಿ ರೈತರಿಂದ ಕಡಿಮೆ ಆಹಾರ ಧಾನ್ಯಗಳನ್ನು ಸಂಗ್ರಹಿಸಲಾಗುತ್ತಿತ್ತು. ಆದರೆ, 40ರ ದಶಕದಲ್ಲಿ ಈ ಸಂಪ್ರದಾಯವು ಕೊನೆಗೊಂಡಿತು.

1946ರ ಡಿಸೆಂಬರ್‌ನಲ್ಲಿ ಒಂದು ದೊಡ್ಡ ಬಿಕ್ಕಟ್ಟು ಉಂಟಾಯಿತು ಎಂದು ನಿವೃತ್ತ ಶಿಕ್ಷಕರಾದ ಅಗ್ನಿ ಶರ್ಮನ್ ನಂಬೂದಿರಿ ಹೇಳುತ್ತಾರೆ. "ಕರಿವೆಲ್ಲೂರ್ ಗ್ರಾಮದಲ್ಲಿ ಜನ್ಮಿಗಳು ಧಾನ್ಯವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದಾಗ, ಅಲ್ಲಿನ ಜನರು ಪ್ರತಿಭಟಿಸಲು ಪ್ರಾರಂಭಿಸಿದರು. ಈ ಸಮಯದಲ್ಲಿ ಗುಂಡಿನ ದಾಳಿ ನಡೆದಿದ್ದು, ಇದರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಮತ್ತು ಭಯೋತ್ಪಾದನೆಯೂ ಇತ್ತು. ಆದರೆ ಅದು ಆ ಜನರ ವಿರುದ್ಧದ ಕಿಡಿಯನ್ನು ಹೊತ್ತಿಸಿತು. ”ಈ ಕಾರಣದಿಂದಾಗಿ, ಭೂ-ಸುಧಾರಣಾ ಆಂದೋಲನವು ಇಲ್ಲಿ ಯಶಸ್ವಿಯಾಯಿತು.

ಇಂದು, ಕಲ್ಲಿಯಶ್ಶೆರಿ ಯಶಸ್ಸಿನ ಜೊತೆಗೆ, ಭೀಕರ ಸಮಸ್ಯೆಗಳನ್ನೂ ಎದುರಿಸುತ್ತಿದೆ. "ಕೃಷಿ ನಾಶವಾಗಿದೆ" ಎಂದು ರಾಯರಪ್ಪನ್ ಹೇಳುತ್ತಾರೆ. "ಉತ್ಪಾದನೆ ಕಡಿಮೆಯಾಗುತ್ತಿದೆ. ಕೃಷಿ ಕಾರ್ಮಿಕರಿಗೆ ಈಗ ಸಾಕಷ್ಟು ಕೆಲಸ ಸಿಗುತ್ತಿಲ್ಲ."

ಮೋಹನ್ ದಾಸ್ ಅವರ ಪ್ರಕಾರ, “ಭತ್ತದ ಗದ್ದೆಗಳನ್ನು ಮನೆಗಳು ಮತ್ತು ನಗದು ಬೆಳೆಗಳಾಗಿ ಪರಿವರ್ತಿಸುವುದರಿಂದ ದೊಡ್ಡ ವಿನಾಶ ಉಂಟಾಗಿದೆ. ಉದಾಹರಣೆಗೆ, ಜನ್ಮಿ ಒಡೆತನದ ದೊಡ್ಡ ಜಮೀನನ್ನು ತೆಗೆದುಕೊಳ್ಳಿ. ಕಲ್ಲಿಯಶ್ಶೆರಿಯ ಭತ್ತದ ಸುಮಾರು 50 ಪ್ರತಿಶತವನ್ನು ಈ ಹೊಲದಲ್ಲಿ ಬೆಳೆಯಲಾಗುತ್ತಿತ್ತು. ಈಗ ಅಲ್ಲಿ ಮನೆಗಳು ಮತ್ತು ನಗದು ಬೆಳೆಗಳಿವೆ. ಈ ವಿನಾಶದ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚುತ್ತಿದೆ. ಆದರೆ ಈಗಾಗಲೇ ಸಾಕಷ್ಟು ಹಾನಿ ಸಂಭವಿಸಿದೆ.

ನಿರುದ್ಯೋಗ ವ್ಯಾಪಕವಾಗಿ ಹರಡುತ್ತಿದೆ. ಮತ್ತು ಒಂದು ಅಧ್ಯಯನವು ತೋರಿಸಿದಂತೆ, ಕಾರ್ಮಿಕ ಬಲದಲ್ಲಿ ಸ್ತ್ರೀ ಭಾಗವಹಿಸುವಿಕೆಯ ಪ್ರಮಾಣವು ಪುರುಷರಿಗಿಂತ ಅರ್ಧಕ್ಕಿಂತ ಕಡಿಮೆಯಿದೆ. ಶೇಕಡಾ 50ರಷ್ಟು ಕಾರ್ಮಿಕ ವರ್ಗದ ಮಹಿಳೆಯರು ನಿರುದ್ಯೋಗಿಗಳಾಗಿದ್ದಾರೆ. ಮಹಿಳೆಯರು ಹೆಚ್ಚಾಗಿ ಕಡಿಮೆ ಕೌಶಲದ ಕೆಲಸ ಮಾಡುತ್ತಾರೆ. ಮತ್ತು ಇದರಲ್ಲಿ ಸಹ ಅವರು ಪುರುಷರಿಗಿಂತ ಕಡಿಮೆ ಗಳಿಸುತ್ತಾರೆ.

ಇದು ದೊಡ್ಡ ಸಮಸ್ಯೆ. ಆದರೆ ಯಾವುದೇ ನಿರಾಶೆಯ ಅಗತ್ಯವಿಲ್ಲ. ಕೇರಳದ ಪಂಚಾಯತಿ ರಾಜ್ ಪ್ರಯೋಗಗಳನ್ನು ನೋಡಿದರೆ, ಕಲ್ಲಿಯಶ್ಶೆರಿ ಮಾದರಿ ಪಂಚಾಯತ್ ಆಗಿ ಮುಂದುವರೆದಿದೆ. ರಾಜ್ಯದ 900ಕ್ಕೂ ಹೆಚ್ಚು ಪಂಚಾಯಿತಿಗಳಂತೆ, ಅದು ತನ್ನದೇ ಆದ ಅಭಿವೃದ್ಧಿ ಯೋಜನೆಯನ್ನು ಸಹ ಸಿದ್ಧಪಡಿಸಿದೆ. ಜನರು ಸ್ವತಃ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಇದನ್ನು ರಚಿಸಲಾಗಿದೆ. ಹೆಚ್ಚಿನ ಚಟುವಟಿಕೆಗಳು ಸ್ಥಳೀಯ ಮೂಲಗಳು ಮತ್ತು ಸ್ವಯಂಪ್ರೇರಿತ ಕಾರ್ಮಿಕರ ಮೇಲೆ ಅವಲಂಬಿತವಾಗಿವೆ. "ಇಲ್ಲಿನ ಜನರು ಈ ಇತರ ಹಲವು ವಿಷಯಗಳ ಜೊತೆಗೆ, ಪಂಚಾಯಿತಿ ವ್ಯಾಪ್ತಿಯಲ್ಲಿ 62 ಕಿ.ಮೀ ಉದ್ದದ ರಸ್ತೆಯನ್ನು ಸಹ ನಿರ್ಮಿಸಿದ್ದಾರೆ." ಎಂದು ರಾಯರಪ್ಪನ್ ಹೇಳುತ್ತಾರೆ.

ಇಲ್ಲಿನ ಗ್ರಾಮ ಸಭೆಯ ಸಭೆಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ ಮತ್ತು ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ. ಮತ್ತು, ಸುಮಾರು 1,200 ಸ್ವಯಂಸೇವಕರ ಸೈನ್ಯವು ಕಲ್ಲಿಯಶ್ಶೆರಿಗೆ ಮತ್ತೊಂದು ಹೊಸ ಬಲವನ್ನು ನೀಡಿದೆ: ಇದು ಪೀಪಲ್ಸ್ ರಿಸೋರ್ಸ್ ಮ್ಯಾಪಿಂಗ್ ಕಾರ್ಯಕ್ರಮವನ್ನು ಅಳವಡಿಸಿಕೊಂಡ ದೇಶದ ಮೊದಲ ಪಂಚಾಯತ್ ಆಗಿದೆ. ಹಳ್ಳಿಯ ನೈಸರ್ಗಿಕ ಮತ್ತು ಮಾನವ ಸಂಪನ್ಮೂಲ ಸ್ಥಿತಿಯ ನಿಜವಾದ ಚಿತ್ರವನ್ನು ಸ್ಥಳೀಯ ಜನರು ಹೊರಗಿನ ತಜ್ಞರ ಸಹಾಯದಿಂದ ತಿಳಿದುಕೊಂಡರು. ಗ್ರಾಮ ಯೋಜನೆಯು ಅದರ ಯೋಜನೆಗಳ ಪರಿಸರ ಪ್ರಭಾವವನ್ನೂ ಒಳಗೊಂಡಿದೆ.

ನಿವೃತ್ತರ 'ಸ್ವಯಂಸೇವಕ ತಾಂತ್ರಿಕ ತಂಡ' (ವಿಟಿಸಿ) - ಎಂಜಿನಿಯರ್‌ಗಳು, ಸರ್ಕಾರಿ ಅಧಿಕಾರಿಗಳು - ಈ ಯೋಜನೆಗಳನ್ನು ನೋಡಿಕೊಳ್ಳುತ್ತಾರೆ. ಪ್ರಸ್ತುತ, ಇಡೀ ರಾಜ್ಯದಲ್ಲಿ ವಿಟಿಸಿ ಸದಸ್ಯರ ಸಂಖ್ಯೆ 5,000ರಷ್ಟಿದೆ.

ಸವಾಲುಗಳು ದೊಡ್ಡದಿವೆ. ಮತ್ತು ಹಳ್ಳಿಯ ಹೆಚ್ಚಿನ ಸಮಸ್ಯೆಗಳ ಬೇರುಗಳು ಅದರ ಗಡಿಗಳನ್ನು ಮೀರಿವೆ. ಆದರೆ ಕಲ್ಲಿಯಶ್ಶೆರಿ ತನ್ನ ಮೇಲೆ ಸಂಪೂರ್ಣ ನಂಬಿಕೆಯನ್ನು ಹೊಂದಿದೆ. ರಾಯರಪ್ಪನ್ ಹೇಳುವಂತೆ: "ನಾವು ಎಂದಿಗೂ ಹೋರಾಟವನ್ನು ನಿಲ್ಲಿಸಿಲ್ಲ."

1947ರ ನಂತರವೂ

ಈ ಕಥೆ ಮೂಲತಃ ಆಗಸ್ಟ್ 29, 1997 ರಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾಗಿತ್ತು

ಫೋಟೊಗಳು: ಪಿ, ಸಾಯಿನಾಥ್


ಸರಣಿಯ ಇನ್ನಷ್ಟು ಬರಹಗಳು ಇಲ್ಲಿವೆ:

‘ಸಾಲಿಹಾನ್’ ಸರಕಾರದ ಮೇಲೆ ಎರಗಿದಾಗ

ಪಾನಿಮಾರದಲ್ಲಿನ ಸ್ವಾತಂತ್ರ್ಯ ಹೋರಾಟದ ಕಾಲಾಳುಗಳು - 1

ಪಾನಿಮಾರದಲ್ಲಿನ ಸ್ವಾತಂತ್ರ್ಯ ಹೋರಾಟದ ಕಾಲಾಳುಗಳು - 2

ಲಕ್ಷ್ಮಿ ಪಾಂಡಾರ ಕೊನೆಯ ಯುದ್ಧ

ಒಂಬತ್ತು ದಶಕಗಳ ಅಹಿಂಸೆ

ಶೇರ್‌ಪುರ: ದೊಡ್ಡ ತ್ಯಾಗ, ಸಣ್ಣ ಸ್ಮರಣೆ

ಗೋದಾವರಿ: ಮತ್ತು ಪೊಲೀಸರು ಈಗಲೂ ಆಕ್ರಮಣಕ್ಕಾಗಿ ಕಾಯುತ್ತಿದ್ದಾರೆ

ಸೋನಾಖಾನ್:‌ ವೀರ್‌ ನಾರಯಣ್‌ ಎರಡೆರಡು ಬಾರಿ ಮಡಿದಾಗ

ಕಲ್ಲಿಯಶ್ಶೆರಿ: ಸುಮುಕನ್ ಹುಡುಕಾಟದಲ್ಲಿ

30 ಮತ್ತು 40ರ ದಶಕದಲ್ಲಿ ಬ್ರಿಟಿಷರ ಹಿಡಿತದಿಂದ ಪಾರಾಗಲು ತಲೆಮರೆಸಿಕೊಂಡಿದ್ದ ರಾಷ್ಟ್ರೀಯವಾದಿಗಳಿಗೆ ಕಲ್ಲಿಯಶ್ಶೆರಿ ಬಳಿ ಇರುವ ಪರಸ್ಸಿನಿ ಕಡವು ದೇವಸ್ಥಾನ ಆಶ್ರಯ ನೀಡಿತ್ತು. ಇಲ್ಲಿ ಇರಿಸಲಾಗಿರುವ ವಿಗ್ರಹಗಳಲ್ಲಿ ಬೇಟೆಗಾರರ ​​ದೇವರು, ಮುತಪ್ಪನ್ ಮತ್ತು ಕಂಚಿನಿಂದ ಮಾಡಿದ ನಾಯಿಗಳು ಸೇರಿವೆ.

ಅನುವಾದ: ಶಂಕರ ಎನ್. ಕೆಂಚನೂರು

ਪੀ ਸਾਈਨਾਥ People’s Archive of Rural India ਦੇ ਮੋਢੀ-ਸੰਪਾਦਕ ਹਨ। ਉਹ ਕਈ ਦਹਾਕਿਆਂ ਤੋਂ ਦਿਹਾਤੀ ਭਾਰਤ ਨੂੰ ਪਾਠਕਾਂ ਦੇ ਰੂ-ਬ-ਰੂ ਕਰਵਾ ਰਹੇ ਹਨ। Everybody Loves a Good Drought ਉਨ੍ਹਾਂ ਦੀ ਪ੍ਰਸਿੱਧ ਕਿਤਾਬ ਹੈ। ਅਮਰਤਿਆ ਸੇਨ ਨੇ ਉਨ੍ਹਾਂ ਨੂੰ ਕਾਲ (famine) ਅਤੇ ਭੁੱਖਮਰੀ (hunger) ਬਾਰੇ ਸੰਸਾਰ ਦੇ ਮਹਾਂ ਮਾਹਿਰਾਂ ਵਿਚ ਸ਼ੁਮਾਰ ਕੀਤਾ ਹੈ।

Other stories by P. Sainath
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru