ತನ್ನ ಮನೆಯ ಹೊರಗೆ ಒಂದು ಮಂಚದ ಮೇಲೆ ತನ್ನ ತಾಯಿಯ ಬರುವಿಕೆಯನ್ನು ಕಾಯುತ್ತಾ ಕುಳಿತಿದ್ದ ಮಲನ್ ಅವರ ನೆಚ್ಚಿನ ಹೂವಿನ ರವಿಕೆ ಮತ್ತು ಪಾದದವರೆಗಿನ ಸ್ಕರ್ಟ್ ತೊಟ್ಟಿದ್ದರು. ನಾನು ಅಲ್ಲಿ ಹೋದಾಗ ಹಿಂದಿನ ಭೇಟಿಯ ನೆನಪಿನಿಂದ ನನ್ನನ್ನು ಗುರುತಿಸಿದ ಮಲನ್ ಮುಖ ಬೆಳಗಿತು. ನಾನು ಅವರ ಕುಟುಂಬವಿರುವ ಎರಡು ಕೋಣೆಗಳ ಇಟ್ಟಿಗೆ, ಕಲ್ಲು ಮತ್ತು ಮಣ್ಣಿನ ಮನೆಯ ಎದುರು ಕುಳಿತಾಗ “ಆಯಿ ನಹಿ ಘರಿ [ತಾಯಿ ಮನೆಯಲ್ಲಿಲ್ಲ],” ಎಂದು ಹೇಳಿದರು.
ಮಲನ್ ಮೋರೆ 63 ವರ್ಷದ ತನ್ನ ತಾಯಿ ರಾಹಿಬಾಯಿ, ಮತ್ತು 83 ವರ್ಷದ ತಂದೆ ನಾನಾ ಅವರೊಂದಿಗೆ ವಾಡಿ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ (ಅವರ ಹೆಸರುಗಳು ಮತ್ತು ಹಳ್ಳಿಯ ಹೆಸರನ್ನು ಬದಲಾಯಿಸಲಾಗಿದೆ). ಈ ಗ್ರಾಮವು ಪುಣೆ ಜಿಲ್ಲೆಯ ಮುಲ್ಶಿ ತಾಲ್ಲೂಕಿನಲ್ಲಿದೆ, ಅಲ್ಲಿ ಈ ಕುಟುಂಬವು ಸುಮಾರು ಮೂರು ಎಕರೆ ಭೂಮಿಯಲ್ಲಿ ಭತ್ತ, ಗೋಧಿ ಮತ್ತು ತರಕಾರಿಗಳನ್ನು ಬೆಳೆಯುತ್ತದೆ.
ಮಲನ್ 18ರ ಪ್ರಾಯದ ಆಸುಪಾಸಿನಲ್ಲಿದ್ದಾಗ, ಪುಣೆಯ ಸಾಸೂನ್ ಜನರಲ್ ಆಸ್ಪತ್ರೆಯಲ್ಲಿ ಆಕೆಗೆ ‘ಬಾರ್ಡರ್ಲೈನ್ ಮೆಂಟಲ್ ರಿಟಾರ್ಡೇಷನ್’ ಇರುವುದನ್ನು ಪತ್ತೆ ಮಾಡಲಾಯಿತು.
ಅದಕ್ಕೂ 12 ವರ್ಷಗಳ ಮೊದಲು ಅವರು ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು. "ಅವಳ ಎಲ್ಲಾ ಸಹಪಾಠಿಗಳು 4ನೇ ತರಗತಿಯನ್ನು ಮುಗಿಸಿ ಮುಂದೆ ಹೋದರು, ಆದರೆ ಇವಳು ನೆಲದ ಮೇಲೆ ಗೀಚುವುದನ್ನು ಮೀರಿ ಇನ್ನೇನೂ ಮಾಡಲು ಸಾಧ್ಯವಾಗಲಿಲ್ಲ" ಎಂದು ರಾಹಿಬಾಯಿ ಹೇಳುತ್ತಾರೆ. "ಕೊನೆಗೆ, ತರಗತಿಯ ಶಿಕ್ಷಕರು ಅವಳನ್ನು ಶಾಲೆಯಿಂದ ಹೊರಗೆ ಕರೆದೊಯ್ಯಲು ಕೇಳಿಕೊಂಡರು." ಆಗ ಮಲನ್ಗೆ ಸುಮಾರು 15 ವರ್ಷ.
ಅಂದಿನಿಂದ, ಮಲನ್ ತನ್ನ ತಾಯಿಯೊಂದಿಗೆ ಮನೆಯಲ್ಲಿ ಸಣ್ಣ ಕೆಲಸಗಳನ್ನು ಮಾಡುತ್ತಾ ತನ್ನ ದಿನಗಳನ್ನು ಕಳೆಯುತ್ತಿದ್ದಾರೆ, ಆದೂ ಕೂಡ ಮಕ್ಕಳಾಟದಂತೆ ಮಾತ್ರ. ಅವರು ಅಪರೂಪಕ್ಕೊಮ್ಮೆ ಮಾತನಾಡುತ್ತಾರೆ ಅದೂ ಕೂಡ ರಾಹಿಬಾಯಿ ಮತ್ತು ಇತರ ಕೆಲವರೊಂದಿಗೆ ಮಾತ್ರ. ಆದರೆ ಅವರು ಮಾತನಾಡಬಲ್ಲರು ಮತ್ತು ಗ್ರಹಿಸಬಲ್ಲರು. ನಾನು ಅವರೊಂದಿಗೆ ಮಾತನಾಡುವಾಗ, ಅವರು ತಲೆಯಾಡಿಸಿ, ಮುಗುಳ್ನಗುತ್ತಿದ್ದರು ಮತ್ತು ಕ್ಷಣಿಕವಾಗಿ ಮಾತನಾಡುತ್ತಿದ್ದರು.ಮಲನ್ ಋತುಮತಿಯಾದಾಗ ಅವರಿಗೆ ಹನ್ನೆರಡು ವರ್ಷ ವಯಸ್ಸಾಗಿತ್ತು. ಅಮ್ಮನ ಬಳಿ "ರಕ್ತ ಬರ್ತಿದೆ" ಎಂದು ವಿವರಿಸಿದ್ದರು ಆಗ. ರಾಹಿಬಾಯಿ ಮಗಳಿಗೆ ಬಟ್ಟೆಯ ಪ್ಯಾಡ್ಗಳನ್ನು ಹೇಗೆ ಬಳಸಬೇಕೆಂದು ಹೇಳಿಕೊಟ್ಟಿದ್ದರು. "ನನ್ನ ಮಗನ ಮದುವೆಯ ಸಮಯದಲ್ಲಿ ಮನೆಯಲ್ಲಿ ಮದುವೆಯ ಆಚರಣೆಗಳು ನಡೆಯುತ್ತಿದ್ದವು, ಆಗ ಅವಳೂ ನನ್ನಂತೆಯೇ ಮುಟ್ಟಿನ ಸಮಯದಲ್ಲಿ ಹೊರಗೆ ಕುಳಿತುಕೊಳ್ಳಲು ಪ್ರಾರಂಭಿಸಿದಳು" ಎಂದು ರಾಹಿಬಾಯಿ ಹೇಳುತ್ತಾರೆ. ಆ ಸಮಯದಲ್ಲಿ ಅಡುಗೆ ಮನೆಗೆ ಬರದಿರುವುದು, ಮನೆಯ ಒಂದು ಮೂಲೆಯಲ್ಲಿ ಕುಳಿತಿರುವುದು ಮುಂತಾದ ನಿರ್ಬಂಧಗಳನ್ನೂ ಪಾಲಿಸುತ್ತಾರೆ ಎಂದು ಕೂಡ ಹೇಳಿದರು. ಮುಟ್ಟಿನ ಕುರಿತು ಮಲನ್ ಅವರಿಗೆ ಇದ್ದ ಏಕೈಕ ಮಾಹಿತಿ ಮೂಲವೆಂದರೆ ಅವರ ಅಮ್ಮ. ಆದ್ದರಿಂದಲೇ ಅವರು ಸುಮ್ಮನೆ ರಾಹೀಬಾಯಿಯ ಉದಾಹರಣೆಯನ್ನು ಅನುಸರಿಸಿದರು.
ಸಮಯ ಕಳೆದಂತೆ ರಾಹಿಬಾಯಿಯ ಬಳಿ ಮಗಳಿಗೆ ಹಿಸ್ಟರೆಕ್ಟಮಿ(ಗರ್ಭಕೋಶ ತೆಗೆಸುವ ಶಸ್ತ್ರಚಿಕಿತ್ಸೆ) ಮಾಡಿಸುವಂತೆ ಸಲಹೆ ನೀಡಲಾಯಿತು. “ಕೆಲವೊಮ್ಮೆ ಮಲನ್ ಐದಾರು ತಿಂಗಳಾದರೂ ಮುಟ್ಟಾಗುತ್ತಿರಲಿಲ್ಲ, ಆ ಸಮಯದಲ್ಲಿ ನನಗೆ ಬಹಳ ಆತಂಕವಾಗುತ್ತಿತ್ತು. (ಬಸುರಿಯಾಗಿರಬಹುದೆಂಬ ಭಯ) ಅವಳು ಹೆಚ್ಚು ಮಾತನಾಡುವುದಿಲ್ಲ. ಅವಳಿಗೆ ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ ನಾನು ಹೇಗೆ ತಿಳಿಯುವುದು?” ಎಂದು ರಾಹಿಬಾಯಿ ಕಳವಳನ್ನು ಹೇಳಿಕೊಳ್ಳುತ್ತಾರೆ. ಎರಡು ಸಲ ಅವಳನ್ನು ಪುಣೆಯಲ್ಲಿರುವ (ವಾಡಿಯಿಂದ 50 ಕಿಲೋಮೀಟರ್ ದೂರದಲ್ಲಿ) ಕುಟುಂಬ ಯೋಜನೆ ಕ್ಲಿನಿಕ್ಕಿಗೆ (ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ) ಅವಳನ್ನು ಕರೆದುಕೊಂಡು ಹೋಗಿದ್ದೆ. ಅಲ್ಲಿ ಅವಳಿಗೆ ಗರ್ಭಧಾರಣೆಯ ಪರೀಕ್ಷೆ ಮಾಡಿಸಲಾಗಿತ್ತು. ಕೊನೆಯದಾಗಿ 2018ರಲ್ಲಿ ಅವಳಿಗೆ ಪರೀಕ್ಷೆ ಮಾಡಿಸಿದ್ದೆ.” ಗರ್ಭಧಾರಣೆ ಪರೀಕ್ಷೆ ಮಾಡಿಸುವ ಕಿಟ್ ಹತ್ತಿರದ ಮೆಡಿಕಲ್ ಶಾಪ್ನಲ್ಲಿ ಸಿಗುತ್ತದೆಯಾದರೂ ಅದನ್ನು ಮಲನ್ಗಾಗಿ ಬಳಸುವುದು ಕಷ್ಟ.
ಅಂಗವಿಕಲ ಹೆಣ್ಣು ಮಕ್ಕಳ ಋತುಚಕ್ರವನ್ನು ಒಂದು ಸಮಸ್ಯೆಯೆಂದು ಪರಿಗಣಿಸುವ ಸಮಾಜವು ಇದಕ್ಕೆ ಪರಿಹಾರವಾಗಿ ಕಂಡುಕೊಂಡಿರುವುದು ಹಿಸ್ಟೆರೆಕ್ಟಮಿ ಅಥವಾ ಸಂತಾನೋತ್ಪತ್ತಿ ಅಂಗವನ್ನು ತೆಗೆದು ಹಾಕುವ ಶಸ್ತ್ರಚಿಕಿತ್ಸೆಯನ್ನು. ಇದರ ಜೊತೆ ಅಂಗವಿಕಲ ಹೆಣ್ಣು ಮಕ್ಕಳಿಗೆ ಮತ್ತು ಮಹಿಳೆಯರಿಗೆ ಲೈಂಗಿಕತೆ ಕುರಿತ ತರಬೇತಿಯ ಕೊರತೆ ಮತ್ತು ಸಾಂಸ್ಥಿಕ ಬೆಂಬಲದ ಕೊರತೆಯೂ ಸೇರಿಕೊಂಡಿದೆ.
ಇಂತಹ ಆಚರಣೆಯು ಮೊದಲಿಗೆ 1994ರಲ್ಲಿ ಪುಣೆಯ ಸಾಸೂನ್ ಜನರಲ್ ಆಸ್ಪತ್ರೆಯಲ್ಲಿ 18 ರಿಂದ 35 ವರ್ಷ ವಯಸ್ಸಿನ ಮಾನಸಿಕವಾಗಿ ಅಶಕ್ತರಾದ ಮಹಿಳೆಯರ ಮೇಲೆ
ಹಿಸ್ಟೆರೆಕ್ಟಮಿಯನ್ನು
ನಡೆಸಿದಾಗ ದೊಡ್ಡ ಮಟ್ಟದಲ್ಲಿ ಸುದ್ದಿಯಾಯಿತು. ಈ ಮಹಿಳೆಯರನ್ನು ಪುಣೆ ಜಿಲ್ಲೆಯ ಶಿರೂರ್ ತಾಲ್ಲೂಕಿನ ಒಂದು ಸರಕಾರಿ ಪ್ರಮಾಣಿತ ಮಾನಸಿಕ ಅಶಕ್ತ ಹುಡುಗಿಯರ ಶಾಲೆ ಮತ್ತು ವಸತಿ ನಿಲಯದಿಂದ ಇವರನ್ನೆಲ್ಲ ಕರೆದು ತರಲಾಗಿತ್ತು. ಇದು ಮುಟ್ಟನ್ನು ನಿರ್ವಹಿಸಲು ಇರುವ ಮಾರ್ಗವಾಗಿದೆ ಹಾಗೂ ಈ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯದ ಪರಿಣಾಮವಾಗದಂತೆ ತಡೆಯಲು ಹೀಗೆ ಮಾಡಲಾಗಿದೆಯೆಂದು ಅಲ್ಲಿನ ಅಧಿಕಾರಿಗಳು ವಾದಿಸಿದ್ದರು.
'ಪುಣೆಯ ವೈದ್ಯರು [ಮಲನ್ಗೆ] ಹಿಸ್ಟೆರಕ್ಟಮಿಗೆ ಸಲಹೆ ನೀಡಿದ್ದರು, ಆದರೆ ಗರ್ಭಕೋಶ ತೆಗೆಯುವ ಬದಲು ನಸ್ಬಂಧಿ [ಟ್ಯೂಬೆಕ್ಟಮಿ] ಮಾಡಬಹುದೇ ಎಂದು ವಿಚಾರಿಸಿದ್ದೆ'
ಈ ನಡುವೆ ಇಂತಹ ಶಸ್ತ್ರಚಿಕಿತ್ಸೆಗಳ ವಿರುದ್ಧ ಪುಣೆ ಮೂಲದ ಸಾರ್ವಜನಿಕ ಆರೋಗ್ಯ ಕಾರ್ಯಕರ್ತ ಡಾ.ಅನಂತ್ ಫಡ್ಕೆ ಮತ್ತು ಇತರರು ಬಾಂಬೆ ಹೈಕೋರ್ಟ್ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದರು, ಶಸ್ತ್ರಚಿಕಿತ್ಸೆಗಳನ್ನು ಒಪ್ಪಿಗೆಯಿಲ್ಲದೆ ಮಾಡಲಾಗುತ್ತಿದೆ ಮತ್ತು 10 ವರ್ಷ ವಯಸ್ಸಿನ ಬಾಲಕಿಯರ ಮೇಲೂ ನಡೆಸಲಾಗಿದೆ ಎಂದು ವಾದಿಸಿದರು. ಹಲವಾರು ಸ್ಥಳಗಳಲ್ಲಿ ಅಂಗವಿಕಲ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ಕಿರುಕುಳ, ನಿರ್ಲಕ್ಷ್ಯ, ಅರ್ಜಿದಾರರು ಬಲವಂತದ ಗರ್ಭಧಾರಣೆ ಮತ್ತು ಗರ್ಭಪಾತವನ್ನು ಎತ್ತಿ ತೋರಿಸಿದರು. ಸಾರ್ವಜನಿಕರ ಆಕ್ರೋಶ ಮತ್ತು ಅರ್ಜಿಯ ಒತ್ತಡಗಳಿಂದ ಶಸ್ತ್ರಚಿಕಿತ್ಸೆಯನ್ನು ಸ್ಥಗಿತಗೊಳಿಸಲಾಯಿತು - ಆದರೆ ಆ ಹೊತ್ತಿಗೆ ಕನಿಷ್ಠ 11 ಮಂದಿಗೆ ಈಗಾಗಲೇ ಮಾಡಲಾಗಿತ್ತು ಎಂದು ವರದಿಗಳು ತಿಳಿಸಿವೆ. ಕಳೆದ ವರ್ಷ, ಎಂದರೆ ಅರ್ಜಿಯನ್ನು ಸಲ್ಲಿಸಿದ 25 ವರ್ಷಗಳ ನಂತರ, 2019ರ ಅಕ್ಟೋಬರ್ 17ರಂದು ಬಾಂಬೆ ಹೈಕೋರ್ಟ್ ಆದೇಶವನ್ನು ನೀಡಿರು, ಅದು ವಾದಗಳನ್ನು ಆಲಿಸಿದೆ ಮತ್ತು ತೀರ್ಪು ಬಾಕಿ ಇದೆ ಎಂದು ಹೇಳಿತು.
"ಪುಣೆ ಚಿಕಿತ್ಸಾಲಯದ ವೈದ್ಯರು [ಮಲನ್ಗೆ] ಗರ್ಭ ತೆಗೆಯುವ ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದ್ದರು ಆದರೆ ಇಡೀ ಗರ್ಭವನ್ನು ತೆಗೆದುಹಾಕುವ ಬದಲು ನಸ್ಬಂಧಿ [ಟ್ಯೂಬೆಕ್ಟಮಿ] ಮಾಡಬಹುದೇ ಎಂದು ನಾನು ಅವರನ್ನು ಕೇಳಿದೆ." ಎಂದು ರಾಹಿಬಾಯಿ ಹೇಳುತ್ತಾರೆ.
ಮಾನಸಿಕವಾಗಿ ಅಶಕ್ತರಾದ ಮಹಿಳೆಯರಿಗಾಗಿ ಗರ್ಭನಿರೋಧಕಗಳು ಮತ್ತು ಜನನ ನಿಯಂತ್ರಣದ ಶಾಶ್ವತ ವಿಧಾನಗಳ ಕುರಿತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಚರ್ಚೆ ನಡೆಯುತ್ತಿದ್ದ ಹೊತ್ತಿನಲ್ಲಿ ದೂರದ ವಾಡಿ ಗ್ರಾಮದಲ್ಲಿ ರಾಹಿಬಾಯ್ ತನ್ನ ಮಗಳ ಅಗತ್ಯತೆಗಳ ಬಗ್ಗೆ ಸಹಜವಾದ ಗ್ರಹಿಕೆಯನ್ನು ಹೊಂದಿದ್ದರು. ಮಲನ್ ಅವರ ತಂಗಿ (ಮದುವೆಯಾಗಿ ಪುಣೆಯಲ್ಲಿ ವಾಸಿಸುತ್ತಿದ್ದಾರೆ) ಮತ್ತು ಇತರ ಸ್ತ್ರೀ ಸೋದರಸಂಬಂಧಿಗಳು ಸಹ ಬೆಂಬಲ ನೀಡಿದರು ಆಕೆಗೆ. "ಆಕೆಯ ಯೌವನದ ದಿನಗಳಲ್ಲೇ ಏನೂ ಆಗಿರಲಿಲ್ಲ ಈಗ ಸುಮ್ಮನೆ ಯಾಕೆ ಆಕೆಗೆ ನೋವುಂಟು ಮಾಡುವುದು? ಇರಲಿ ಬಿಡಿ" ಎಂದು ಅವರೆಲ್ಲರೂ ಹೇಳಿದರು. ಹೀಗೆ ಮಲನ್ ಸ್ಟೈರಿಲೈಸೇಷನ್ ಅಥವಾ ಗರ್ಭಕೋಶ ತೆಗೆಸುವ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಾಗಿ ಬರಲಿಲ್ಲ.
ಆದಾಗ್ಯೂ, ಅನೇಕ ಪೋಷಕರು ತಮ್ಮ ಅಂಗವಿಕಲ ಹೆಣ್ಣುಮಕ್ಕಳಿಗೆ ಈ ಶಸ್ತ್ರಚಿಕಿತ್ಸೆಯನ್ನು ಆರಿಸಿಕೊಳ್ಳುತ್ತಾರೆ, ಮತ್ತು ಭಾರತದಲ್ಲಿ ಮಾನಸಿಕ ಅಶಕ್ತ ಮಹಿಳೆಯರಿಗಾಗಿ ಇರುವ ಅನೇಕ ವಸತಿ ಸಂಸ್ಥೆಗಳು ಇಂತಹ ಮಹಿಳೆಯರು ಎಂದಿಗೂ ಮದುವೆಯಾಗುವುದಿಲ್ಲ ಮತ್ತು ಮಕ್ಕಳನ್ನು ಹೊಂದುವುದಿಲ್ಲ ಹೀಗಾಗಿ ಅವರಿಗೆ ಗರ್ಭಕೋಶದ ಅವಶ್ಯಕತೆಯಿರುವುದಿಲ್ಲ ಎನ್ನುವ ಹಿನ್ನೆಲೆಯಲ್ಲಿ ಹಿಸ್ಟೆರೆಕ್ಟಮಿಯನ್ನು ತಮ್ಮ ಸಂಸ್ಥೆಗೆ ಸೇರಲು ಪೂರ್ವ ಕರಾರನ್ನಾಗಿ ವಿಧಿಸುತ್ತವೆ. ಈ ಕಾರ್ಯವಿಧಾನವು ಹುಡುಗಿಯರಿಗೆ ಅವರ ಮುಟ್ಟಿನ ದಿನಗಳನ್ನು ನಿರ್ವಹಿಸಲು ಸಹಾಯ ಮಾಡಬೇಕಾದ ಸಮಸ್ಯೆಯನ್ನು ಪರಿಹರಿಸುತ್ತದೆ. ಸಾಮಾನ್ಯವಾಗಿ ಲೈಂಗಿಕ ಕಿರುಕುಳ ಮತ್ತು ಅದರ ಪರಿಣಾಮವಾಗಿ ಗರ್ಭಧಾರಣೆಯಾಗುವ ಭಯದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ.
ಈ ಕಳವಳಗಳು ಪೂರ್ತಿಯಾಗಿ ನಿಜವಲ್ಲ. "ಬಾರ್ಡರ್ ಲೈನ್ ಡಿಸ್ಎಬಿಲಿಟಿ ಹೊಂದಿರುವ ಹೆಚ್ಚಿನ ಹುಡುಗಿಯರು ತಮ್ಮ ಪ್ರೌಢಾವಸ್ಥೆಯ ಸಮಯದಲ್ಲಿ ತಮ್ಮೊಳಗೆ ಏನಾಗುತ್ತಿದೆ ಎನ್ನುವದನ್ನು ಅರಿಯಬಲ್ಲರು. ಮತ್ತು ತರಬೇತಿ ನೀಡಿದಲ್ಲಿ ಸ್ವಯಂ ಆರೈಕೆಯನ್ನು ಮಾಡಿಕೊಳ್ಳಬಲ್ಲರು" ಎಂದು ಪುಣೆ ಮೂಲದ ತಥಾಪಿ ಟ್ರಸ್ಟ್ನ ಮಾಜಿ ಸಂಯೋಜಕರಾದ ಅಚ್ಯುತ್ ಬೋರ್ಗಾವ್ಕರ್ ಹೇಳುತ್ತಾರೆ. ಈ ಸಂಸ್ಥೆಯು ಅಂಗವೈಕಲ್ಯ ಮತ್ತು ಲೈಂಗಿಕತೆಯ ಬಗ್ಗೆ ಜಾಗೃತಿ ಮತ್ತು ತರಬೇತಿ ಶಿಬಿರಗಳನ್ನು ಪೋಷಕರು, ಶಿಕ್ಷಕರು, ಸಲಹೆಗಾರರು ಮತ್ತು ಪಾಲಕರಿಗಾಗಿ ನಡೆಸುತ್ತದೆ. "ಆದರೆ ನಮ್ಮ ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ [ಅಂಗವಿಕಲರಿಗೆ ಜೀವನ ಕೌಶಲ್ಯ ಮತ್ತು ಲೈಂಗಿಕತೆಯ ಶಿಕ್ಷಣದ ಬಗ್ಗೆ] ಯಾವುದೇ ಕಾರ್ಯಕ್ರಮವಿಲ್ಲ."
ಸುದೃಢವಾದ ಸಾರ್ವಜನಿಕ ಆರೋಗ್ಯ ಮತ್ತು ಕಲ್ಯಾಣ ವ್ಯವಸ್ಥೆಯ ಅನುಪಸ್ಥಿತಿಯಲ್ಲಿ, ಮತ್ತು ಕುಟುಂಬ ಮತ್ತು ಸಮುದಾಯದ ನಿರಂತರ ಬೆಂಬಲವಿಲ್ಲದೆ, ಅಂಗವಿಕಲರ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಮತ್ತು ಹಕ್ಕುಗಳನ್ನು ರಕ್ಷಿಸುವುದು ತುಂಬಾ ಕಷ್ಟ ಎಂದು ಮೇಧಾ ತೆಂಗ್ಶೆ ಹೇಳುತ್ತಾರೆ.
ಈ ವಿಷಯದಲ್ಲಿ "ನಾವು ಸಹ ಅಸಹಾಯಕರಾಗಿದ್ದೇವೆ" ಎಂದು ಬೌದ್ಧಿಕ ಅಂಗವಿಕಲ ವಯಸ್ಕರ ವಸತಿ ಸೌಲಭ್ಯವಾದ ಸಾಧನಾ ಗ್ರಾಮದ ಸ್ಥಾಪಕ ಸದಸ್ಯರಾದ ಟೆಂಗ್ಶೆ ಹೇಳುತ್ತಾರೆ, ಈ ಸಂಸ್ಥೆಯನ್ನು 1994ರಲ್ಲಿ (ನೋಂದಾಯಿತ ಸೊಸೈಟಿಯಾಗಿ) ವಾಡಿಯಿಂದ 10 ಕಿಲೋಮೀಟರ್ ದೂರದಲ್ಲಿರುವ ಕೊಲ್ವಾನ್ ಕಣಿವೆಯಲ್ಲಿ ಸ್ಥಾಪಿಸಲಾಯಿತು. (ರಾಹಿಬಾಯಿ ಸಾಧನಾ ವಿಲೇಜ್ನೊಂದಿಗೆ ಕಳೆದ 20 ವರ್ಷಗಳಿಂದ ಸಮುದಾಯ ಕಾರ್ಯಕರ್ತರಾಗಿದ್ದು, ಸಣ್ಣ ಗೌರವಧನವನ್ನು ಗಳಿಸುತ್ತಿದ್ದಾರೆ). "ಸುಮಾರು 15 ವರ್ಷಗಳ ಹಿಂದೆ, ನಮ್ಮ ಮಹಿಳಾ ನಿವಾಸಿಗಳನ್ನು ಅವರ ಮುಟ್ಟಿನ ಸಮಯದಲ್ಲಿ ನೋಡಿಕೊಳ್ಳುವ ಮತ್ತು ಅವರಿಗೆ ಬೆಂಬಲ ನೀಡಲು ಮೀಸಲಾದ ಮಹಿಳಾ ಆರೈಕೆದಾರರನ್ನು ಪಡೆಯಲು ನಮಗೆ ಸಾಧ್ಯವಾಯಿತು. ಈಗ ಚಿತ್ರಣ ಬದಲಾಗಿದೆ. ಮೂಲಭೂತ ಸ್ವ-ಆರೈಕೆಯನ್ನು ಇಲ್ಲಿ ವಾಸಿಸುವ ಮಹಿಳೆಯರಿಗೆ ಕಲಿಸಲು ನಾವು ಪ್ರಯತ್ನಿಸುತ್ತೇವೆ ಮತ್ತು ಆ ಕುರಿತು ತರಬೇತಿ ನೀಡುತ್ತೇವೆ, ಆದರೆ ಕೆಲವೊಮ್ಮೆ ನಾವು ಸಹ ನಿರ್ವಹಿಸಲು ಸಾಧ್ಯವಿರುವುದಿಲ್ಲ. ಅಂತಹ ಸಂದರ್ಭದಲ್ಲಿ ನಾವು ಶಸ್ತ್ರಚಿಕಿತ್ಸೆಯನ್ನು ಸೂಚಿಸಬೇಕಾಗುತ್ತದೆ."
ಹತ್ತಿರದ ಕೊಲ್ವಾನ್ ಗ್ರಾಮದಲ್ಲಿ, ವಾಡಿಗೆ ಸಮೀಪವಿರುವ ಆರೋಗ್ಯ ಉಪ ಕೇಂದ್ರದಲ್ಲಿ, ಸುದೃಢವಾದ ಸಾರ್ವಜನಿಕ ಆರೋಗ್ಯ ಬೆಂಬಲ ವ್ಯವಸ್ಥೆಯ ಅನುಪಸ್ಥಿತಿಯು ಸ್ಪಷ್ಟವಾಗಿ ಕಾಣುತ್ತದೆ. ಬೌದ್ಧಿಕವಾಗಿ ಅಶಕ್ತರಾದ ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯ ಅಗತ್ಯಗಳ ಬಗ್ಗೆ ಕೇಳಿದಾಗ ಅಲ್ಲಿನ ಇಬ್ಬರು ಪುರುಷ ಆರೋಗ್ಯ ಕಾರ್ಯಕರ್ತರು, ಪುರುಷ ವೈದ್ಯಕೀಯ ಅಧಿಕಾರಿ ಮತ್ತು ಇಬ್ಬರು ಮಹಿಳಾ ಆರೋಗ್ಯ ಕಾರ್ಯಕರ್ತರು ಎಲ್ಲೋ ನೋಡುತ್ತಾರೆ. "ನಾವು ಹದಿಹರೆಯದ ಹುಡುಗಿಯರು ಮತ್ತು ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ಗಳನ್ನು ವಿತರಿಸುತ್ತೇವೆ" ಎಂದು ಸಹಾಯಕ ನರ್ಸ್ ಮಿಡ್ವೈಫ್ ಹೇಳುತ್ತಾರೆ. ನೀವು ಇನ್ನೇನು ಮಾಡುತ್ತೀರಿ ಎಂದು ಕೇಳಿದರೆ ಪರಸ್ಪರ ಮುಖ ನೋಡಿಕೊಂಡು ಮೌನವಾಗುತ್ತಾರೆ.
ವಾಡಿಗೆ ಸಮೀಪವಿರುವ ಕುಲೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೂ (ಸುಮಾರು 11 ಕಿಲೋಮೀಟರ್ ದೂರದಲ್ಲಿ), ಪರಿಸ್ಥಿತಿ ಬೇರೆಯೇನಿಲ್ಲ. ಆಶಾ (ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆ) ಸುವರ್ಣ ಸೋನಾರ್, ಕುಲೆಯಲ್ಲಿ ಇಬ್ಬರು ಮತ್ತು ಕೊಲ್ವಾನ್ನಲ್ಲಿ ನಾಲ್ಕು ಅಥವಾ ಐದು ‘ನಿಧಾನವಾಗಿ ಕಲಿಯುವ’ ಬಾಲಕಿಯರಿದ್ದಾರೆ ಎಂದು ಹೇಳುತ್ತಾರೆ. ಆದರೆ ಅವರಿಗೆಂದು ಯಾವುದೇ ವಿಶೇಷ ಆರೋಗ್ಯ ಸೇವೆಗಳಿಲ್ಲ. “ಪ್ರೌಢಾವಸ್ಥೆಯನ್ನು ತಲುಪಿದಾಗ ಅವರ ನಡವಳಿಕೆ ಬದಲಾಗುತ್ತದೆ. ಅವರಿಗೆ ಹೇಗೆ ಮತ್ತು ಏನು ಹೇಳಬೇಕೆನ್ನುವುದು ನಮಗೆ ತಿಳಿದಿಲ್ಲ.”
ಮೇ 3, 2008ರಿಂದ ಜಾರಿಗೆ ಬಂದ ಯುಎನ್ ಕನ್ವೆನ್ಷನ್ನ ರೈಟ್ಸ್ ಆಫ್ ಪರ್ಸನ್ಸ್ ವಿಥ್ ಡಿಸ್ಎಬಿಲಿಟೀಸ್ ರೈಟ್ಸ್ ವಿಧಿ 25 (ಎ), 'ಸರಕಾರಗಳು ವಿಕಲಚೇತನರಿಗೆ ಒಂದೇ ಶ್ರೇಣಿ, ಗುಣಮಟ್ಟ ಎಂದರೆ ಸಾಮಾನ್ಯರಿಗೆ ಒದಗಿಸುವಂತೆ ಇವರಿಗೂ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಮತ್ತು ಜನಸಂಖ್ಯೆ ಆಧಾರಿತ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳು ಸೇರಿದಂತೆ ಆರೈಕೆ ಮತ್ತು ಕಾರ್ಯಕ್ರಮಗಳನ್ನು ಒದಗಿಸಬೇಕು ಮತ್ತು ಉಚಿತ ಅಥವಾ ಕೈಗೆಟುಕುವ ರೀತಿಯಲ್ಲಿ ಗುಣಮಟ್ಟದ ಆರೋಗ್ಯಸೇವೆ ಒದಗಿಸಬೇಕು ಎಂದು ಆದೇಶಿಸುತ್ತದೆ.
ಭಾರತವು ಕನ್ವೆನ್ಷನ್ ಅನ್ನು ಅಂಗೀಕರಿಸಿದೆ, ಆದರೆ 2016ರಲ್ಲಿ ವಿಕಲಚೇತನರ ಹಕ್ಕುಗಳ ಕಾಯ್ದೆಯು ಭಾರತದಲ್ಲಿ ಅಂಗವಿಕಲರ ಒಮ್ಮತದ ಸ್ಟೈರಿಲೇಷನ್ ನಿಷೇಧಿಸಿ ಸುಮ್ಮನಾಯಿತು. 'ವಿಶೇಷವಾಗಿ ಅಂಗವಿಕಲ ಮಹಿಳೆಯರಿಗೆ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ರಕ್ಷಣೆ' ಮತ್ತು 'ವಿಕಲಾಂಗ ವ್ಯಕ್ತಿಗಳು ಸಂತಾನೋತ್ಪತ್ತಿ ಆರೋಗ್ಯ ಮತ್ತು ಕುಟುಂಬ ಯೋಜನೆಗೆ ಸಂಬಂಧಿಸಿದ ಸೂಕ್ತ ಮಾಹಿತಿಯನ್ನು ಪಡೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು' ಎಂದು ಈ ಕಾಯಿದೆಯು ಆದೇಶಿಸುತ್ತದೆ.
ಆದಾಗ್ಯೂ, ಈ ಕಾಯಿದೆಯಲ್ಲಿ ಬೌದ್ಧಿಕ ಅಶಕ್ತ ಮಹಿಳೆಯರ ಲೈಂಗಿಕ ಮತ್ತು ಸಂತಾನೋತ್ಪತ್ತಿ ಹಕ್ಕುಗಳಿಗಾಗಿ ಯಾವುದೇ ನಿರ್ದಿಷ್ಟ ನಿಬಂಧನೆಗಳಿಲ್ಲ.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ದ ಪ್ರಕಾರ ಭಾರತದಲ್ಲಿ 6 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ 'ಕುಂಠಿತ ಮಾನಸಿಕ ಬೆಳವಣಿಗೆ' ಹೊಂದಿರುವವರು ಇದ್ದಾರೆ. ಇವರಲ್ಲಿ 4 ಲಕ್ಷಕ್ಕೂ ಹೆಚ್ಚು ಜನರು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಇಷ್ಟು ಜನ ಮಾನಸಿಕ ಅಶಕ್ತರು ತಮ್ಮ ಆರೋಗ್ಯದ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ.
ಹೆಚ್ಚಿನ ನಿದರ್ಶನಗಳಲ್ಲಿ, ಮಾನಸಿಕ ಅಶಕ್ತರನ್ನು ಅಲೈಂಗಿಕ ಅಥವಾ ಹೈಪರ್ ಸೆಕ್ಸುವಲ್ ಎಂದು ನೋಡಲಾಗುತ್ತದೆ. ಅವರ ಸಂತಾನೋತ್ಪತ್ತಿ ಆರೋಗ್ಯ ಅಗತ್ಯಗಳನ್ನು 'ನಿರ್ವಹಿಸುವ' ಅನ್ವೇಷಣೆಯಲ್ಲಿ, ಅವರ ಪ್ರೀತಿ, ಒಡನಾಟ, ಲೈಂಗಿಕತೆ ಮತ್ತು ಅನ್ಯೋನ್ಯತೆಯ ಅಗತ್ಯವನ್ನು ಕಡೆಗಣಿಸಲಾಗುತ್ತದೆ, ಜೊತೆಗೆ ಅವರ ಮಾತೃತ್ವದ ಹಕ್ಕನ್ನು ಕಡೆಗಣಿಸಲಾಗುತ್ತದೆ ಎಂದು ಅಂಗವೈಕಲ್ಯ ಮತ್ತು ಲೈಂಗಿಕತೆಯ ಕುರಿತ
2017ರ ಪ್ರಬಂಧ
ವೊಂದರಲ್ಲಿ ಉಲ್ಲೇಖಿಸಲಾಗಿದೆ.
ನೀವು ಎಂದಾದರೂ ಮಲನ್ ಅವರ ಮದುವೆಯ ಕುರಿತು ಯೋಚಿಸಿದ್ದೀರಾ ಎಂದು ರಾಹಿಬಾಯಿಯನ್ನು ಕೇಳಿದೆ. "ಕೆಲವರು ಈ ಬಗ್ಗೆ ಮಾತನಾಡಿದ್ದಾರೆ ಮತ್ತು ಪ್ರಸ್ತಾಪಗಳನ್ನು ಸಹ ತಂದರು, ಆದರೆ ನಾವು ಅವಳಿಗೆ ಮದುವೆ ಮಾಡಿಸದಿರಲು ನಿರ್ಧರಿಸಿದ್ದೇವೆ" ಎಂದು ಅವರು ಹೇಳುತ್ತಾರೆ. “ಅವಳೆಗೆ ಸೀರೆ ಉಡಲು ಸಹ ಸಾಧ್ಯವಿಲ್ಲ, ಇನ್ನು ಅವಳು ತನ್ನ ಸ್ವಂತ ಕುಟುಂಬವನ್ನು ಹೇಗೆ ನಿರ್ವಹಿಸುತ್ತಾಳೆ? ಅವಳ [ಇಬ್ಬರು] ಸಹೋದರರು ಸಹ, ‘ಅವಳು ಇಲ್ಲಿ ತನ್ನ ಸ್ವಂತ ಮನೆಯಲ್ಲಿ ಸಾಯಲಿ’ ಎಂದು ಹೇಳಿದರು. ಮಲನ್ನಂತಹ ಅನೇಕ ಮಹಿಳೆಯರಿಗೆ ತಮ್ಮ ಗಂಡನ ಮನೆಯಲ್ಲಿ ತಮ್ಮ ಹೊಸ ಜೀವನಕ್ಕೆ ಹೊಂದಿಕೊಳ್ಳಲು ಸಾಧ್ಯವಾಗುವುದಿಲ್ಲ ಮತ್ತು ಅಂತಿಮವಾಗಿ ತಮ್ಮ ಹೆತ್ತವರ ಮನೆಗೆ ಮರಳುತ್ತಾರೆ ಎಂದು ರಾಹಿಬಾಯಿಗೆ ತಿಳಿದಿತ್ತು.
ಆದಾಗ್ಯೂ, ಪುಣೆ ಮೂಲದ ಶಿಕ್ಷಣ ತಜ್ಞೆ, ಸಲಹೆಗಾರ್ತಿ ಮತ್ತು ವಿಶೇಷ ಕಾಲಜಿ ಅಗತ್ಯವಿರುವ ವ್ಯಕ್ತಿಯ ತಾಯಿ ಡಾ.ಸುನೀತಾ ಕುಲಕರ್ಣಿ ಹೇಳುತ್ತಾರೆ, ವಿಶೇಷ ಕಾಳಜಿ ಅಗತ್ಯ ಹೊಂದಿರುವ ವಯಸ್ಕ ಮಹಿಳೆಯರು ಮತ್ತು ಪುರುಷರು ಸಹ ಲೈಂಗಿಕ ಹಕ್ಕುಗಳನ್ನು ಹೊಂದಿದ್ದಾರೆ ಎಂಬುದನ್ನು ಗುರುತಿಸುವುದು ಬಹಳ ಮುಖ್ಯ. "ಮತ್ತು ಲೈಂಗಿಕತೆಯೆಂದರೆ ಕೇವಲ ಸಂಭೋಗ ಎಂದು ಅರ್ಥವಲ್ಲ" ಎಂದು ಅವರು ಹೇಳುತ್ತಾರೆ. “ಲೈಂಗಿಕತೆಯಲ್ಲಿ ಹಲವು ಅಂಶಗಳಿವೆ. ಸ್ನೇಹ, ಅನ್ಯೋನ್ಯತೆ, ಒಂದಿಷ್ಟು ಫ್ಲರ್ಟಿಂಗ್ ಅಥವಾ ಒಂದು ಕಪ್ ಕಾಫಿ ಹಂಚಿಕೊಳ್ಳುವುದು ಸಹ ಇದೆ. ಆದರೆ ಅಂತಹ ಸೌಲಭ್ಯಗಳನ್ನೂ ಸಹ ಇವರಿಗೆ ನಿರಾಕರಿಸಲಾಗಿದೆ.”
ಬದಲಾಗಿ, ಮಾನಸಿಕವಾಗಿ ಅಶಕ್ತರಾದ ಹದಿಹರೆಯದ ಹುಡುಗಿಯರು ಮತ್ತು ಹುಡುಗರು ತಮ್ಮ ಲೈಂಗಿಕ ಭಾವನೆಗಳನ್ನು ವ್ಯಕ್ತಪಡಿಸಿದಾಗ, ಹೆಚ್ಚಿನ ಕುಟುಂಬಗಳು ಮತ್ತು ಪಾಲನೆ ಮಾಡುವವರು ಅವರನ್ನು ವಿರೋಧಿಸುತ್ತಾರೆ, ಅನೇಕರು ಲೈಂಗಿಕ ಹಾರ್ಮೋನುಗಳನ್ನು ನಿಯಂತ್ರಿಸಲು ಔಷಧಿಗಳನ್ನು ಬಳಸುತ್ತಾರೆ ಮತ್ತು ಕೆಲವರು ಯಾವುದೇ ರೀತಿಯ ಲೈಂಗಿಕ ನಡವಳಿಕೆಯನ್ನು ಕಂಡಲ್ಲಿ ಕಠಿಣವಾಗಿ ಶಿಕ್ಷಿಸುತ್ತಾರೆ. "ಈ ಭಾವನೆಗಳನ್ನು ನಿರಾಕರಿಸುವ ಮೂಲಕ ನಾವು ಏನು ಗಳಿಸುತ್ತೇವೆ?" ಎಂದು ಮುಲ್ಶಿ ತಾಲ್ಲೂಕಿನ ಪೌಡ್ ಗ್ರಾಮದಲ್ಲಿ 15 ವರ್ಷಗಳಿಂದ ವಿಶೇಷ ಕಾಳಜಿ ಅಗತ್ಯವಿರುವ ವಯಸ್ಕರೊಂದಿಗೆ ಕೆಲಸ ಮಾಡುತ್ತಿರುವ ಡಾ. ಸಚಿನ್ ನಗರ್ಕರ್ ಅವರು ಕೇಳುತ್ತಾರೆ. “ಲೈಂಗಿಕ ಪ್ರಚೋದನೆಯು ನೈಸರ್ಗಿಕ ಮತ್ತು ಆರೋಗ್ಯಕರ ಅಭಿವ್ಯಕ್ತಿಯಾಗಿದೆ. ನೀವು ಅದನ್ನು ನಿಲ್ಲಿಸಲು, ನಿಗ್ರಹಿಸಲು ಅಥವಾ ನಿರಾಕರಿಸಲು ಸಾಧ್ಯವಿಲ್ಲ.”
ಅವರ ಲೈಂಗಿಕಾಸಕ್ತಿಗಳನ್ನು ಕಡೆಗಣಿಸಲಾಗಿದ್ದರೂ, ಮಲನ್ ಮತ್ತು ಅವರ ಸೋದರಸಂಬಂಧಿ ರೂಪಾಲಿಯಂತಹ ಹೆಣ್ಣು ಮಕ್ಕಳು ಊರಿನ ಹುಡುಗರಿಂದ ಲೈಂಗಿಕ ಕಿರುಕುಳ ಮತ್ತು ನಿಂದನೆ ಎದುರಿಸಬೇಕಾಗುತ್ತದೆ
ಅವರದೇ ಆದ ಲೈಂಗಿಕ ಪ್ರಚೋದನೆಗಳನ್ನು ನಿರ್ಲಕ್ಷಿಸಲಾಗಿದ್ದರೂ, ಅಂಗವಿಕಲ ಮಹಿಳೆಯರು ಮತ್ತು ಹುಡುಗಿಯರು ಹೆಚ್ಚಾಗಿ ಲೈಂಗಿಕ ಕಿರುಕುಳ ಮತ್ತು ಹಲ್ಲೆಗೆ ಗುರಿಯಾಗುತ್ತಾರೆ. ಮಾನಸಿಕವಾಗಿ ಅಶಕ್ತರಾಗಿರುವ ಮಲನ್ ಮತ್ತು ಅವರ 38 ವರ್ಷದ ಸೋದರಸಂಬಂಧಿ ರೂಪಾಲಿ (ಹೆಸರು ಬದಲಾಗಿದೆ) ಇಬ್ಬರೂ ತಮ್ಮ ಹಳ್ಳಿಯ ಹುಡುಗರಿಂದ ತಮ್ಮ ಯೌವನದಲ್ಲಿ ಕಿರುಕುಳ ಮತ್ತು ನಿಂದನೆಯನ್ನು ಎದುರಿಸಿದ್ದಾರೆ. "ಕೆಲವು ಹುಡುಗರು ರೇಗಿಸುತ್ತಾರೆ, ಪ್ರಯತ್ನಿಸುತ್ತಾರೆ ಮತ್ತು ಸ್ಪರ್ಶಿಸುತ್ತಾರೆ ಅಥವಾ ಯಾರೂ ಇಲ್ಲದಿದ್ದಾಗ ಮನೆಗೆ ಬರುತ್ತಾರೆ" ಎಂದು ರಾಹಿಬಾಯಿ ಹೇಳುತ್ತಾರೆ. ಅವರು ಅಂತಹ ದುರುಪಯೋಗ ಮತ್ತು ಅದರ ಪರಿಣಾಮಗಳ ಭಯವನ್ನು ನಿರಂತರವಾಗಿ ಎದುರಿಸುತ್ತಾ ಬದುಕುತ್ತಿದ್ದಾರೆ.
ಆದರೆ ರಾಹಿಬಾಯಿ ತನ್ನ ಚಿಂತೆಗಳನ್ನು ತಾನೇ ಇಟ್ಟುಕೊಂಡು ಪರದಾಡಲಿಲ್ಲ. ವಾಡಿಯ ಜನಸಂಖ್ಯೆಯ ಸರಿಸುಮಾರು 940 ಜನರಲ್ಲಿ, ಆರು ಜನರು ಕೆಲವು ರೀತಿಯ ಬೌದ್ಧಿಕ ಅಂಗವೈಕಲ್ಯವನ್ನು ಹೊಂದಿದ್ದಾರೆ. ಅವರಲ್ಲಿ ಮಲನ್ ಸೇರಿದಂತೆ ಇಬ್ಬರು ಮಹಿಳೆಯರು ಮತ್ತು ನಾಲ್ಕು ಪುರುಷರು ಇದ್ದಾರೆ. ರಾಹಿಬಾಯಿ ಸದಸ್ಯರಾಗಿರುವ ಸ್ವಸಹಾಯ ಗುಂಪಿನ ಮಹಿಳೆಯರು ಒಟ್ಟಾಗಿ 2019ರ ನವೆಂಬರ್ನಲ್ಲಿ ಗ್ರಾಮದ ಅಂಗನವಾಡಿ ಕೋಣೆಯಲ್ಲಿ ವಿಶೇಷ ಸ್ನೇಹಿತರಿಗಾಗಿ ದೇವ್ರಾಯ್ ಕೇಂದ್ರವನ್ನು ಉದ್ಘಾಟಿಸಿದ್ದಾರೆ. ಇಲ್ಲಿ, ವಾರಕ್ಕೆ ಎರಡು ಬಾರಿ ಸ್ವಯಂಸೇವಕರಾದ ಮಯೂರಿ ಗಾಯಕ್ವಾಡ್ ಮತ್ತು ವಾಡಿಯ ಸಂಗೀತಾ ಕಾಳಿಕರ್ ಮತ್ತು ಸಾಧನಾ ವಿಲೇಜ್ನಿಂದ ಸಾಧನಾ ಕಾಂಬ್ಳೆ, ಈ ಆರು 'ವಿಶೇಷ ಸ್ನೇಹಿತರಿಗೆ' ಮನರಂಜನಾ ಚಟುವಟಿಕೆಗಳು ಮತ್ತು ತರಬೇತಿಗಳನ್ನು (ಸ್ವಯಂ-ಆರೈಕೆ ಸೇರಿದಂತೆ) ನಡೆಸುತ್ತಾರೆ. “ಕೆಲವು ಗ್ರಾಮಸ್ಥರು ಈ ‘ಹುಚ್ಚು’ ಮಕ್ಕಳಿಗೆ ಕಲಿಸುವುದು ನಿಷ್ಪ್ರಯೋಜಕ ಎಂದು ಭಾವಿಸಿ ನಮ್ಮನ್ನು ನೋಡಿ ನಗುತ್ತಾರೆ. ಆದರೆ ನಾವು ನಮ್ಮ ಕೆಲಸವನ್ನು”ಎಂದು ಮಯೂರಿ ಹೇಳುತ್ತಾರೆ.
"ಮೀ ಕೇಲಿ [ಇದನ್ನು ನಾನು ಮಾಡಿದ್ದು],”ಎಂದು ಹೇಳುತ್ತಾ ಮಲನ್, ಈ ಚಟುವಟಿಕೆಗಳ ಭಾಗವಾಗಿ ತಾನು ಮಾಡಿದ ಹಸಿರು-ಬಿಳುಪು ಮಣಿ ಹಾರವನ್ನು ಹೆಮ್ಮೆಯಿಂದ ತೋರಿಸುತ್ತಾರೆ.
ಇತರ ದಿನಗಳಲ್ಲಿ, ಮನೆಗೆ ಹಿಂತಿರುಗಿ, ತನ್ನ ಬೆಳಿಗ್ಗೆ ಮನೆಯ ಕೆಲಸಗಳ ಭಾಗವಾಗಿ, ಮಲನ್ ಕುಟುಂಬಕ್ಕೆ ಬಳಸಲು ನಲ್ಲಿಯ ನೀರನ್ನು ನೀರನ್ನು ಡ್ರಮ್ಮಿನಲ್ಲಿ ತುಂಬುತ್ತಾರೆ ಮತ್ತು ಸ್ನಾನ ಮಾಡುತ್ತಾರೆ. ನಂತರ, ಎಂದಿನಂತೆ, ಅವರು ಮಣ್ಣಿನ ಒಲೆಯ ಮೇಲೆ ಸ್ವಲ್ಪ ಚಹಾವನ್ನು ಚೆಲ್ಲುತ್ತಾರೆ ಮತ್ತು ತಾಯಿಯಿಂದ ಬಯ್ಗುಳವನ್ನು ಪಡೆಯುತ್ತಾರೆ.
ನಂತರ, ಅವರ ವರ್ಣರಂಜಿತ ಕುಪ್ಪಸ ಮತ್ತು ನೆಚ್ಚಿನ ಪಾದದವರೆಗಿನ ಉದ್ದದ ಸ್ಕರ್ಟಿನಲ್ಲಿ, ಅವರನ್ನು ಸುತ್ತುವರೆದು ಬೆಂಬಲಿಸುವ ಕುಟುಂಬದೊಂದಿಗೆ ಮಲನ್ ದಿನವನ್ನು ಕಳೆಯಲು ಪ್ರಾರಂಭಿಸುತ್ತಾರೆ.
ಈ ಬರೆಹದ ಲೇಖಕಿ ತಥಾಪಿ ಟ್ರಸ್ಟ್ನಲ್ಲಿ ಟ್ರಸ್ಟಿಯಾಗಿದ್ದು, ಅಲ್ಲಿ ಅವರು 18 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ.
ಸಾಧನಾ ವಿಲೇಜ್ನ ಮೇಧಾ ತೆಂಗ್ಶೆ ಮತ್ತು ವಿಜಯ ಕುಲಕರ್ಣಿ ಮತ್ತು ಪುಣೆಯ ತಥಾಪಿ ಟ್ರಸ್ಟ್ನ ಅಚ್ಯುತ್ ಬೋರ್ಗಾಂವ್ಕರ್ ಅವರಿಗೆ ವಿಶೇಷ ಧನ್ಯವಾದ.
ಕವರ್ ಇಲ್ಲಸ್ಟ್ರೇಷನ್: ಪ್ರಿಯಾಂಕಾ ಬೋರಾರ್ ಹೊಸ ಮಾಧ್ಯಮ ಕಲಾವಿದೆ. ಹೊಸ ಪ್ರಕಾರದ ಅರ್ಥ ಮತ್ತು ಅಭಿವ್ಯಕ್ತಿಯನ್ನು ಕಂಡುಹಿಡಿಯಲು ತಂತ್ರಜ್ಞಾನವನ್ನು ಪ್ರಯೋಗಿಸುತ್ತಿದ್ದಾರೆ. ಅವರು ಕಲಿಕೆ ಮತ್ತು ಆಟಕ್ಕೆ ಎಕ್ಸ್ಪಿರಿಯೆನ್ಸ್ ವಿನ್ಯಾಸ ಮಾಡುತ್ತಾರೆ. ಸಂವಾದಾತ್ಮಕ ಮಾಧ್ಯಮ ಇವರ ಮೆಚ್ಚಿನ ಕ್ಷೇತ್ರ. ಸಾಂಪ್ರದಾಯಿಕ ಪೆನ್ ಮತ್ತು ಕಾಗದ ಇವರಿಗೆ ಹೆಚ್ಚು ಆಪ್ತವಾದ ಕಲಾ ಮಾಧ್ಯಮ.
ಗ್ರಾಮೀಣ ಭಾರತದ ಹದಿಹರೆಯದ ಬಾಲಕಿಯರು ಮತ್ತು ಯುವತಿಯರ ಬಗ್ಗೆ PARI ಮತ್ತು ಕೌಂಟರ್ ಮೀಡಿಯಾ ಟ್ರಸ್ಟ್ನ ಬೆಂಬಲಿತ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಮಹತ್ವದ ಆದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು, ಸಾಮಾನ್ಯ ಜನರ ಮಾತುಗಳು ಮತ್ತು ಜೀವಂತ ಅನುಭವಗಳ ಮೂಲಕ ತಿಳಿಯುವ ಉದ್ದೇಶವನ್ನು ಹೊಂದಿದೆ. ಇದು ಪಾಪ್ಯುಲೇಷನ್ ಆಫ್ ಇಂಡಿಯಾದ ಬೆಂಬಲವನ್ನು ಹೊಂದಿದೆ.
ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ವಿಳಾಸವನ್ನು ಸಂಪರ್ಕಿಸಿ: [email protected] ಒಂದು ಪ್ರತಿಯನ್ನು [email protected] . ಈ ವಿಳಾಸಕ್ಕೆ ಕಳಿಸಿ
ಅನುವಾದ: ಶಂಕರ ಎನ್. ಕೆಂಚನೂರು