ಜಮ್ಲೋಳಿಗೆ 12 ವರ್ಷ ವಯಸ್ಸಾಗಿತ್ತು. ಫೆಬ್ರವರಿಯಲ್ಲಿ, ಅವಳು ತೆಲಂಗಾಣದ ಮೆಣಸಿನಕಾಯಿ ಹೊಲಗಳಲ್ಲಿ ಕೆಲಸಕ್ಕೆ ಹೋಗಿದ್ದಳು. ಏಪ್ರಿಲ್ 18ರಂದು, ಲಾಕ್‌ಡೌನ್ ಸಮಯದಲ್ಲಿ ಮನೆಗೆ ಮರಳಲು ಪ್ರಯತ್ನಿಸುತ್ತಿದ್ದ ಇತರ ಕಾರ್ಮಿಕರೊಂದಿಗೆ ನಿರಂತರವಾಗಿ ಮೂರು ದಿನಗಳ ಕಾಲ ನಡೆದ ನಂತರ, ಜಮ್ಲೋ ಕೊನೆಯುಸಿರೆಳೆದಳು.
“ಆಕೆ ನಮಗ ಏನೂ ತಿಳಿಸಲ್ದ ತನ್ನ ಸ್ನೇಹಿತರು ಮತ್ತು ಗ್ರಾಮಸ್ಥರ ಜೊತೆ ಊರ ಬಿಟ್ಟಾಳ್ರ್ರಿ.ನಮಗ ಮರುದಿನ ಗೊತ್ತಾಗಿದ್ದು” ಎಂದು ಆಕೆಯ ತಾಯಿ ಸುಕ್ಮತಿ ಮದ್ಕಮ್ ಹೇಳುತ್ತಿದ್ದರು.ಈ ಕುಟುಂಬವು ಆದಿವಾಸಿಗಳ ಮುರಿಯಾ ಸಮುದಾಯಕ್ಕೆ ಸೇರಿದೆ.
12 ವರ್ಷದ ಬಾಲಕಿ ಛತ್ತೀಸ್ ಗಡ್ ನಲ್ಲಿನ ಬಸ್ತಾರ್ ಪ್ರದೇಶದ ಬಿಜಾಪುರ ಜಿಲ್ಲೆಯ ಆದೇಡ ಗ್ರಾಮಕ್ಕೆ ವಾಪಸ್ಸಾಗುತ್ತಿದ್ದಳು.ಆಕೆಯ ಜೊತೆಗೆ ಇತರ 11 ಕಾರ್ಮಿಕರ ತಂಡವಿತ್ತು, ಅವರಲ್ಲಿ ಕೆಲವು ಮಕ್ಕಳು ತೆಲಂಗಾಣದ ಮುಲುಗು ಜಿಲ್ಲೆಯ ಕನ್ನೈಗುಡೆಮ್ ಹಳ್ಳಿಯ ಬಳಿಯ ಹೊಲಗಳಿಗೆ ಕೆಲಸಕ್ಕೆ ಹೋಗಿದ್ದರು. (ಮೇಲಿನ ಮುಖ ಚಿತ್ರವೂ ಮೇ 7 ರಂದು ರಸ್ತೆಯಲ್ಲಿ ಸಾಗುತ್ತಿದ್ದ ಅಂತಹ ತಂಡದ ಒಂದು ಫೋಟೋ) ಅಲ್ಲಿ, ಅವರು ಮೆಣಸಿನಕಾಯಿಗಳನ್ನು ಕೀಳುವುದರಿಂದ ಅವರಿಗೆ ಒಂದು ದಿನಕ್ಕೆ 200 ರೂಗಳಂತೆ, ಇಲ್ಲವೇ ಮೆಣಸಿಕಾಯಿ ಚೀಲಗಳಿಗೆ ನಿಗದಿಪಡಿಸಿದ ಪಾವತಿಯಂತೆ ದೊರೆಯುತ್ತಿತ್ತು .( ನೋಡಿ Children of the chilli fields )
ಜಮ್ಲೋ ತನ್ನ ಫ್ರೆಂಡ್ಸ್ ಮತ್ತ ಊರಿನವರ ಜೊತಿಗೆ ಕೆಲಸಕ್ಕ ಹೋಗಿದ್ಲು, ಕೆಲಸ ನಿಂತಿದ್ದರಿಂದ, ಅವರೆಲ್ಲಾ ಹೊಳ್ಳಿ ಊರಿಗೆ ಬರಾಕ್ ಹತ್ತಿದ್ರು. ಅವ್ರು (ಮುಳುಗು ಜಿಲ್ಲೆಯ) ಪೆರೂರ್ ಬಿಟ್ಟಾಗ ನನಗ ಆಕೆಯಿಂದ ಪೋನ್ ಬಂದಿತ್ತು, ಅದು ಬಿಟ್ರ ನನಗ ಒಮ್ಮಿಗೆ ಕೊನೆಯದಾಗಿ ಪೋನ್ ಕರೆ ಬಂದಿದ್ದು, ಇತರ ಗ್ರಾಮಸ್ಥರಿಂದ, ಅದೂ ನನ್ನ ಮಗುವಿನ ಸಾವಿನ ಸುದ್ದಿಯಾಗಿತ್ತು " ಎಂದು ತಂದೆ ಜಮ್ಲೋ ದುಃಖತಪ್ತರಾಗಿ ಹೇಳುತ್ತಿದ್ದರು. ಅವರು ಮತ್ತು ಸುಕ್ಮತಿ, ಆದೇಡ ಗ್ರಾಮದ ಬಹುತೇಕ ಎಲ್ಲ ಆದಿವಾಸಿ ನಿವಾಸಿಗಳಂತೆ ಅವರು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವುದು, ಭತ್ತ, ಹುರಳಿ ಕಾಳು ಮತ್ತು ಇತರ ಬೆಳೆಗಳನ್ನು ಸಣ್ಣ ಭೂಮಿಯಲ್ಲಿ ಬೆಳೆಯುವುದು ಮತ್ತು ಕೃಷಿ ಕಾರ್ಮಿಕರಾಗಿ ಅಥವಾ ಮನರೇಗಾ ಕಾರ್ಯ ಕ್ಷೇತ್ರದಲ್ಲಿ ದುಡಿಯುತ್ತಾ ಜೀವನ ಸಾಗಿಸುತ್ತಾರೆ.
"ಸುಮಾರು ಎರಡು ತಿಂಗಳ ಹಿಂದೆ, ಜಮ್ಲೋ ತೆಲಂಗಾಣಕ್ಕೆ ಕಾರ್ಮಿಕಳಾಗಿ ಹೋಗಿದ್ದಳು.ಆದರೆ ಲಾಕ್‌ಡೌನ್ ಜಾರಿಯಾದ ನಂತರ ಕೆಲಸ ಸ್ಥಗಿತಗೊಂಡಿತು. ಇಂತಹ ಸಂದರ್ಭದಲ್ಲಿ ಕಾರ್ಮಿಕರು ತಮ್ಮ ಗ್ರಾಮಕ್ಕೆ ಮರಳಲು ಹತಾಶರಾಗಿದ್ದರು.ಈಗಾಗಲೇ ಅವರು ಇದುವರೆಗೆ ಉಳಿತಾಯ ಮಾಡಿದ್ದ ಹಣವೆಲ್ಲಾ ಖಾಲಿಯಾಗಿತ್ತು, ಹಾಗಾಗಿ ಅವರ ಗುತ್ತಿಗೆದಾರರು ಅವರಿಗೆ ತಮ್ಮ ಊರಿಗೆ ಹಿಂದಿರುಗಲು ಸೂಚಿಸಿದರು” ಎಂದು ಗೊಂಡ ಆದಿವಾಸಿ ಸಮುದಾಯದ ಮತ್ತು ಜಗದಲ್ಪುರದ ಪತ್ರಿಕೆಯಲ್ಲಿ ವರದಿಗಾರ್ತಿಯಾಗಿರುವ ಬಿಜಾಪುರದ ಪತ್ರಕರ್ತೆ ಪುಷ್ಪಾ ಉಸೆಂಡಿ-ರೋಕಾಡೆ ಹೇಳುತ್ತಾರೆ.
ಲಾಕ್‌ಡೌನ್ ಸಮಯದಲ್ಲಿ ಯಾವುದೇ ಸಾರಿಗೆ ಇಲ್ಲದೆ, ಕಾರ್ಮಿಕರು ಮನೆಗೆ ಮರಳಲು ಪ್ರಾರಂಭಿಸಿದರು - ಕನ್ನೈಗುಡೇಮಿನಿಂದ ಆದೇಡ ಗ್ರಾಮಕ್ಕೆ ಸುಮಾರು 170-200 ಕಿಲೋಮೀಟರ್ ದೂರ (ಇದು ಮಾರ್ಗವನ್ನು ಅವಲಂಬಿಸಿ ಬದಲಾಗುತ್ತದೆ). ಮುಖ್ಯ ರಸ್ತೆಯನ್ನು ಮುಚ್ಚಿದ್ದರಿಂದ ಅವರು ಅರಣ್ಯ ಮಾರ್ಗದಲ್ಲಿ ಏಪ್ರಿಲ್ 16 ರಂದು ಆರಂಭಿಸಿದರು. ಅವರು ರಾತ್ರಿ ವೇಳೆಯ ದಾರಿಯಲ್ಲಿ ಹಳ್ಳಿಗಳಲ್ಲಿ ಮತ್ತು ಕಾಡುಗಳಲ್ಲಿ ಮಲಗುತ್ತಿದ್ದರು. ಇದು ಒಂದು ರೀತಿ ಪ್ರಯಾಸಕರ ಪ್ರಯಾಣವಾಗಿತ್ತು, ಆದರೆ ಅವರು ಮೂರು ದಿನಗಳಲ್ಲಿ 100 ಕಿಲೋಮೀಟರ್‌ಗಳಿಗಿಂತಲೂ ಹೆಚ್ಚು ದೂರ ಕ್ರಮಿಸಿದ್ದರು.
ಏಪ್ರಿಲ್ 18 ರಂದು, ಬೆಳಿಗ್ಗೆ 9 ಗಂಟೆ ಸುಮಾರಿಗೆ, ದಣಿದಿದ್ದ ಕಾರ್ಮಿಕರು ತಮ್ಮ ಮನೆಗೆ ಹೋಗುವಾಗ, ಇನ್ನೇನೂ ಮನೆಯಿಂದ 60 ಕಿಲೋ ಮೀಟರ್ ದೂರವಿದೆ ಎನ್ನುವಷ್ಟರಲ್ಲಿ ಜಮ್ಲೋ ಸಾವನ್ನಪ್ಪಿದಳು. ಹೊಟ್ಟೆ ನೋವು ಮತ್ತು ತಲೆನೋವಿನ ಬಗ್ಗೆ ಆಕೆ ದೂರು ನೀಡಿದ ಬಗ್ಗೆ ಹಲವಾರು ವರದಿಗಳು ಬಂದಿವೆ, ಇದರಿಂದ ಆಕೆ ಸೋತು ಬಿದ್ದು ಮೂಳೆ ಮುರಿದುಕೊಂಡಳು.ಇನ್ನೂ ಅಧಿಕೃತ ವೈದ್ಯಕೀಯ ವರದಿ ನಮಗೆ ದೊರೆತಿಲ್ಲ.
“ಅವಳು ಚಿಕ್ಕ ಹುಡುಗಿ ಮತ್ತು ಮೂರು ದಿನಗಳವರೆಗೆ [ಸುಮಾರು 140 ಕಿಲೋಮೀಟರ್] ನಡೆದಳು ಮನೆಗೆ ತಲುಪಲು ಇನ್ನೇನೂ 55-60 ಕಿಲೋಮೀಟರ್ ಇದ್ದಾಗ ಆಕೆ ಕುಸಿದು ಬಿದ್ದಳು" ಎಂದು ಬಿಜಾಪುರದ ಮುಖ್ಯ ಆರೋಗ್ಯ ಮತ್ತು ವೈದ್ಯಕೀಯ ಅಧಿಕಾರಿ ಡಾ.ಬಿ.ಆರ್ ಪುಜಾರಿ ನಮಗೆ ಫೋನಿನಲ್ಲಿ ಹೇಳಿದರು. "ಆಯಾಸ ಮತ್ತು ಸ್ನಾಯುವಿನ ಅಶಕ್ತತೆಯಿಂದಾಗಿ ಅವಳು ಕುಸಿದಿರಬಹುದು, ಅದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಕಾಣಿಸದೇ ಇರಬಹುದು." ಎಂದರು. ಆಕೆ ಹಿಂದಿನ ದಿನ ಕೆಳಗೆ ಬಿದ್ದು ಗಾಯ ಮಾಡಿಕೊಂಡಿದ್ದಳು ಎಂದು ಉಳಿದ ಕಾರ್ಮಿಕರು ಹೇಳುತ್ತಿದ್ದರು.
ಡಾ.ಪೂಜಾರಿ ಅವರಿಗೆ ಆಕೆಯ ಸಾವಿನ ಸುದ್ದಿಯು ಬೆಳಿಗ್ಗೆ 11 ಗಂಟೆ ಸುಮಾರಿಗೆ ತಲುಪಿತು "ನಾನು ಆಂಬ್ಯುಲೆನ್ಸ್ ಕಳುಹಿಸಿದಾಗ ಅವರು ಆಗಲೇ ಮೃತ ದೇಹದೊಂದಿಗೆ ಸುಮಾರು 5-6 ಕಿಲೋಮೀಟರ್ ನಡೆದಿದ್ದರು" ಎಂದು ಅವರು ಹೇಳಿದರು. ಜಮ್ಲೋಳ ಮೃತದೇಹವನ್ನು ಬಿಜಾಪುರದ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯಲು ಆಂಬ್ಯುಲೆನ್ಸ್ ಅನ್ನು ಹತ್ತಿರದ ಸಮುದಾಯ ಆಸ್ಪತ್ರೆಯಿಂದ ಕಳುಹಿಸಲಾಗಿತ್ತು [ಉಸೂರಿನಲ್ಲಿ]. "ತಂಡದ ಇತರ 11 ಸದಸ್ಯರನ್ನು ಕೋವಿಡ್ -19 ಮಾರ್ಗಸೂಚಿಗಳ ಪ್ರಕಾರ ಕ್ವಾರಂಟೈನ್‌ಗೆ ಕಳುಹಿಸಲಾಗಿದೆ" ಎಂದು ಡಾ.ಪೂಜಾರಿ ಘಟನೆಯ ನಂತರ ಮಾಧ್ಯಮಗಳಿಗೆ ತಿಳಿಸಿದರು.
ಭಾರತದ ದೂರದ ಬುಡಕಟ್ಟು ಪ್ರದೇಶಗಳಲ್ಲಿ ಉಂಟಾಗಿರುವ ಲಾಕ್‌ಡೌನ್‌ನ ಪ್ರಭಾವವನ್ನು ಅಷ್ಟಾಗಿ ದಾಖಲಿಸಲಾಗಿಲ್ಲ, ಆದರೆ ಜಮ್ಲೋ ಮದ್ಕಮ್ ಅವರ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಯಿತು.
ವಲಸೆ ಕಾರ್ಮಿಕಳಾಗಿದ್ದ ಜಮ್ಲೋ ದಾರಿ ಮಧ್ಯದಲ್ಲಿ ಮೃತಪಟ್ಟಿದ್ದರಿಂದ, ಆರೋಗ್ಯ ಅಧಿಕಾರಿಗಳು ಕೊರೊನಾವೈರಸ್ ಪರೀಕ್ಷೆಗೆ ಒಳಪಡಿಸಿದರು. ಆಕೆಯ ಮಾದರಿಯನ್ನು ಶನಿವಾರ (ಏಪ್ರಿಲ್ 18) ಬೆಳಿಗ್ಗೆ ಜಗದಲ್ಪುರಕ್ಕೆ ಕಳುಹಿಸಲಾಗಿದೆ ಮತ್ತು ಭಾನುವಾರ ಸಂಜೆ ನೆಗೆಟಿವ್ ಎಂದು ವರದಿಯಾಗಿದೆ ಎಂದು ಡಾ.ಪೂಜಾರಿ ಮಾಧ್ಯಮಗಳಿಗೆ ತಿಳಿಸಿದರು. ಸೋಮವಾರ, ಆಕೆಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
“ನಾನು ಎಂಟು ಮಕ್ಕಳಿಗೆ ಜನ್ಮ ನೀಡಿದೆ, ಮತ್ತು ಅವರಲ್ಲಿ ನಾಲ್ವರು ಇನ್ನೂ ಅಂಬೆಗಾಲಿಡುವಾಗಲೇ ಸಾವನ್ನಪ್ಪಿದರು. ಮತ್ತು ಈಗ ಜಮ್ಲೋ ಕೂಡ ಮೃತಪಟ್ಟಿದ್ದಾಳೆ " ಎಂದು ಆಕೆಯ ತಾಯಿ ಸುಕ್ಮತಿ ಎಲ್ಲವನ್ನು ಕಥೆ ಮಾಡಿ ಈ ವರದಿಯ ಸಹ ಪತ್ರಕರ್ತ ಕಮಲೇಶ್ ಪೈಂಕ್ರಾ ಅವರಿಗೆ ವಿವರಿಸುತ್ತಿದ್ದರು (ಅವರು ಬಿಜಾಪುರ ಮೂಲದ ಪತ್ರಕರ್ತರಾಗಿದ್ದು ಅವರು ಉತ್ತರ ಛತ್ತೀಸ್ ಗಡ್ ದ ಕನ್ವರ್ ಆದಿವಾಸಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ).
ಸುಕ್ಮತಿ ಮತ್ತು ಅಂದೊರಮ್ ಇತರ ಮೂರು ಮಕ್ಕಳನ್ನು ಹೊಂದಿದ್ದಾರೆ. 14 ವರ್ಷದ ಬುಧ್ರಾಮ್ ಕೆಲವು ಸಮಯದ ಹಿಂದೆ ಶಾಲೆಗೆ ಹೋಗುವುದನ್ನು ಬಿಟ್ಟಿದ್ದಾನೆ; ನಾವು (ಪೈಂಕ್ರಾ) ಜಮ್ಲೋಳ ಮನೆಗೆ ಭೇಟಿ ನೀಡಿದಾಗ ಅವನು ತೆಂಡು ಎಲೆಗಳನ್ನು ಕಟ್ಟಲಿಕ್ಕೆ ಹಗ್ಗವನ್ನು ತಯಾರಿಸಲು ಮರದ ತೊಗಟೆಗಳನ್ನು ಸಂಗ್ರಹಿಸಲು ಹೋಗಿದ್ದನು. ಗ್ರಾಮದಲ್ಲಿರುವ ಸರ್ಕಾರಿ ಶಾಲೆಯಲ್ಲಿ 1ನೇ ತರಗತಿಯಲ್ಲಿ ಓದುತ್ತಿರುವ ಆಕೆಯ ಆರು ವರ್ಷದ ತಂಗಿ ಸರಿತಾ ಸಾರ್ವಜನಿಕ ಬೋರ್‌ವೆಲ್‌ನಲ್ಲಿ ಸ್ನಾನ ಮಾಡುತ್ತಿದ್ದಳು. ಮತ್ತು ಎರಡು ವರ್ಷದ ಸಹೋದರ ತಮ್ಮ ತಾಯಿಯೊಂದಿಗೆ ಮನೆಯಲ್ಲಿದ್ದರು.
ಮದ್ಕಮ್ ಕುಟುಂಬವು ಸುಮಾರು 10-12 ವರ್ಷಗಳ ಕಾಲ ಪಡಿತರ ಚೀಟಿಯನ್ನು ಹೊಂದಿರಲಿಲ್ಲ-ಅದಕ್ಕೂ ಮೊದಲು ಅವರು ಹೊಂದಿದ್ದ ಕಾರ್ಡ್ ಅನ್ನು ತಾಂತ್ರಿಕ ಕಾರಣಗಳಿಂದ ರದ್ದುಪಡಿಸಲಾಯಿತು. ಅವರ ಸಾಧಾರಣ ಗಳಿಕೆಯೊಂದಿಗೆ, ಅವರು ಅಕ್ಕಿ ಮತ್ತು ಇತರ ಅಗತ್ಯ ವಸ್ತುಗಳನ್ನು ಮುಕ್ತ ಮಾರುಕಟ್ಟೆಯಿಂದ ಹೆಚ್ಚಿನ ದರಕ್ಕೆ ಖರೀದಿಸುತ್ತಾರೆ. ಜಮ್ಲೋ ಸತ್ತ ನಂತರ ಅವರಿಗೆ ಹೊಸ ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವ) ಕಾರ್ಡ್ ದೊರೆತಿದೆ. ಆದರೆ ಇದು ಕೂಡ ದೋಷಗಳಿಂದ ತುಂಬಿದೆ - ಐದು ಮದ್ಕಮ್ ಕುಟುಂಬದ ಸದಸ್ಯರಿದ್ದರೂ ಇದರಲ್ಲಿ ಕೇವಲ ನಾಲ್ಕು ಸದಸ್ಯರನ್ನು ಮಾತ್ರ ಉಲ್ಲೇಖಿಸಲಾಗಿದೆ. ಬುಧರಾಮ್ ಮತ್ತು ಸರಿತಾ ಅವರ ವಯಸ್ಸನ್ನು ತಪ್ಪಾಗಿ ಪಟ್ಟಿ ಮಾಡಲಾಗಿದೆ. (ಜಮ್ಲೋಳ ಆಧಾರ್ ಕಾರ್ಡ್‌ನಲ್ಲಿ ಕೂಡ ಆಕೆಯ ಹೆಸರನ್ನು ಇಂಗ್ಲಿಷ್‌ನಲ್ಲಿ ತಪ್ಪಾಗಿ ಜೀತಾ ಮದ್ಕಮಿ ಎಂದು ನಮೂದಿಸಲಾಗಿದೆ.)
ಜಮ್ಲೋ 3 ನೇ ತರಗತಿಯವರೆಗೆ ಹಳ್ಳಿಯ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಳು, ಆದರೆ ಕುಟುಂಬದ ನಾಲ್ಕು ಎತ್ತುಗಳನ್ನು ಸಾಕಬೇಕಾಗಿರುವುದರಿಂದಾಗಿ ಆಕೆ ಬಿಡಬೇಕಾಗಿ ಬಂತು (ಅವುಗಳಲ್ಲಿ ಒಂದು ಇತ್ತೀಚೆಗೆ ಸತ್ತುಹೋಯಿತು).ಅವರ ಕುಟುಂಬವು ಕೆಲವು ಕೋಳಿಗಳನ್ನು ಕೂಡ ಸಾಕುತ್ತದೆ.
ಆಕೆಯ ಆದೇಡ ಗ್ರಾಮವು ಛತ್ತೀಸ್ ಗಡ್ ದ ರಾಜಧಾನಿಯಾದ ರಾಯ್‌ಪುರದಿಂದ ಸುಮಾರು 400 ಕಿಲೋಮೀಟರ್‌ಗಳಷ್ಟು ದೂರದ ಪ್ರದೇಶದಲ್ಲಿದೆ. ನೀವು ಆದೇಡ ತಲುಪಲು, ಪಕ್ಕಾ ರಸ್ತೆಯ ಮೂಲಕ ಬಿಜಾಪುರದಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ತೋಯ್ನಾರ್ ಗ್ರಾಮಕ್ಕೆ ಹೋಗಬೇಕು. ಅಲ್ಲಿಂದ ಧೂಳಿನ ರಸ್ತೆ, ಮತ್ತು ಎರಡು ಹೊಳೆಗಳನ್ನು ದಾಟಿ ಸಾಗಬೇಕು.
ಮೊರ್ಮೇಡ್ ಗ್ರಾಮ ಪಂಚಾಯತ್ ಅಡಿಯಲ್ಲಿ ಬರುವ ಆದೇಡ ಗ್ರಾಮದಲ್ಲಿ 42 ಕುಟುಂಬಗಳಿವೆ ಎಂದು ಮಡಿಯಾ ಬುಡಕಟ್ಟು ಸಮುದಾಯದಿಂದ ಬಂದಿರುವ ಗ್ರಾಮದ ವಾರ್ಡ್ ಸದಸ್ಯ ಬುಧ್ರಾಮ್ ಕೊವಸಿ ಹೇಳುತ್ತಾರೆ. ಗ್ರಾಮಸ್ಥರು ಮುಖ್ಯವಾಗಿ ಮುರಿಯಾ ಮತ್ತು ಮದಿಯಾ ಬುಡಕಟ್ಟುಗಳು, ಮತ್ತು ಒಬಿಸಿ ಸಮುದಾಯಗಳಾದ ಕಲಾರ್ ಮತ್ತು ರಾವುತ್ ಸೇರಿದಂತೆ ನಾಲ್ಕು ಸಮುದಾಯಗಳಿಗೆ ಸೇರಿದವರಾಗಿದ್ದಾರೆ.
“ಜಮ್ಲೋಳಿಗೆ ಕೇವಲ 12 ವರ್ಷ ವಯಸ್ಸಾಗಿತ್ತು ಮತ್ತು ಅವಳು ಮೊದಲ ಬಾರಿಗೆ ಮೆಣಸಿನಕಾಯಿ ಕೀಳಲು ಆಂಧ್ರಕ್ಕೆ ಹೋದಳು. [ಈ ಗ್ರಾಮಗಳ ಗುಂಪಿನಿಂದ] ಜನರು ಸಾಮಾನ್ಯವಾಗಿ ಕೆಲಸ ಹುಡುಕಿಕೊಂಡು ಬೇರೆ ರಾಜ್ಯಗಳಿಗೆ ಹೋಗುವುದಿಲ್ಲ - ಆದರೂ ಅವರು ತೋಯ್ನಾರ್ ಅಥವಾ ಬಿಜಾಪುರಕ್ಕೆ ಹೋಗುತ್ತಾರೆ," ಎಂದು ಬುಧ್ರಾಮ್ ಹೇಳುತ್ತಿದ್ದರು.
ಛತ್ತೀಸ್ ಗಡ್ ದ ಮುಖ್ಯಮಂತ್ರಿ ಭೂಪೇಶ್ ಬಾಘೇಲ್, ಜಮ್ಲೋಳ ಸಾವಿನ ಬಗ್ಗೆ ಗಮನಹರಿಸಿ,ಏಪ್ರಿಲ್ 21 ರಂದು ಟ್ವೀಟ್ ಮಾಡಿದರು, “ಬಿಜಾಪುರದ 12 ವರ್ಷದ ಬಾಲಕಿ ಜಮ್ಲೋ ಮದ್ಕಮ್ ಅವರ ದುರಂತ ಸಾವು ನಿಜಕ್ಕೂ ಹೃದಯ ವಿದ್ರಾವಕವಾಗಿದೆ. ಈ ಕಷ್ಟದ ಸಮಯದಲ್ಲಿ ತಕ್ಷಣದ ಸಹಾಯವಾಗಿ, ನಾನು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 1 ಲಕ್ಷ ರೂ. ಮತ್ತು ಸ್ವಯಂಪ್ರೇರಿತ ಅನುದಾನದಿಂದ 4 ಲಕ್ಷ ರೂ. ನೀಡುತ್ತೇನೆ.ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಬಿಜಾಪುರ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ" ಎಂದು ಸಿಎಂ ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದರು.
ಕಾರ್ಮಿಕ ಇಲಾಖೆ ಕೂಡ ಈ ಬಗ್ಗೆ ತನಿಖೆ ನಡೆಸುತ್ತಿದೆ ಮತ್ತು ಗುತ್ತಿಗೆದಾರರಾಗಿ ನೋಂದಾಯಿಸಿಕೊಳ್ಳದೆ ಅಪ್ರಾಪ್ತ ವಯಸ್ಕರು ಸೇರಿದಂತೆ ಕಾರ್ಮಿಕರನ್ನು ರಾಜ್ಯದ ಗಡಿಯುದ್ದಕ್ಕೂ ಸ್ಥಳಾಂತರಿಸಿದ ಜಮ್ಲೋ ಗ್ರಾಮದಲ್ಲಿನ ಮಹಿಳೆ ಮತ್ತು ತೆಲಂಗಾಣದ ಕನ್ನೈಗುಡೆಮ್ ಗ್ರಾಮದಲ್ಲಿನ ಕಾರ್ಮಿಕ ಗುತ್ತಿಗೆದಾರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಛತ್ತೀಸ್ ಗಡ್ ದಲ್ಲಿನ ಬಿಜಾಪುರ, ಸುಕ್ಮಾ ಮತ್ತು ದಾಂತೇವಾಡದ ಗಡಿ ಗ್ರಾಮಗಳಿಂದ ಕೆಲಸ ಹುಡುಕಿಕೊಂಡು ಅನೇಕರು ವಲಸೆ ಹೋಗುತ್ತಾರೆ-ಅವರಲ್ಲಿ ಕೆಲವರು ನಕ್ಸಲೀಯ ಚಳುವಳಿಯಿಂದ ಪ್ರಭಾವಿತರಾಗಿದ್ದಾರೆ, ಅವರೆಲ್ಲರೂ ಜೀವನೋಪಾಯಕ್ಕಾಗಿ ಹುಡುಕಾಟ ನಡೆಸಿದವರಾಗಿದ್ದಾರೆ. ಅವರು ಸಾಮಾನ್ಯವಾಗಿ ತೆಲಂಗಾಣ ಮತ್ತು ಆಂಧ್ರಪ್ರದೇಶದ ವಿಶಾಲವಾಗಿರುವ ಮೆಣಸಿನಕಾಯಿ ಗದ್ದೆಗಳಿಗೆ ಹೋಗುತ್ತಾರೆ. ಮೆಣಸಿನಕಾಯಿ ಅವರ ಊಟದಲ್ಲಿ ಪ್ರಮುಖ ಪದಾರ್ಥವಾಗಿರುವುದರಿಂದಾಗಿ, ಅನೇಕರು ಇದನ್ನು ವೇತನವಾಗಿ ಮನೆಗೆ ತರುತ್ತಾರೆ.
ಜಮ್ಲೋ ಕೂಡ ತನ್ನ ಕುಟುಂಬಕ್ಕೆ ಏನನ್ನಾದರೂ ಮರಳಿ ತರುವ ಭರವಸೆಯಿಂದಾಗಿಯೇ ಹೋಗಿದ್ದಿರಬೇಕು. ಆದರೆ ಆಕೆಯ ಮನೆಗೆ ಹೋಗುವ ದಾರಿಯಲ್ಲಿನ ಕಠಿಣ ರಸ್ತೆ 12 ವರ್ಷದ ಮಗುವಿಗೆ ಬಹಳ ಸುದೀರ್ಘ ಎನ್ನುವುದು ಸ್ಪಷ್ಟವಾಯಿತು.
ಅನುವಾದ - ಎನ್ . ಮಂಜುನಾಥ್