“ಪಶ್ಚಿಮ ಬಂಗಾಳದ ಜನರಿಗೆ ಡುಲಿ ಮಾಡಲು ಬರುವುದಿಲ್ಲ”

ಬಬನ್‌ ಮಹತೋ ಮಾತಿನಲ್ಲಿ ಸತ್ಯವಿತ್ತು. ಅವರು "ಧಾನ್ ಧೋರಾರ್ ಡುಲಿ" ಕುರಿತು ಮಾತನಾಡುತ್ತಿದ್ದರು. ಇದೊಂದು ಭತ್ತವನ್ನು ಸಂಗ್ರಹಿಸಲು ಬಳಸುವ ಬುಟ್ಟಿಯಾಗಿದ್ದು ಸುಮಾರು ಆರು ಅಡಿ ಎತ್ತರ ಮತ್ತು ನಾಲ್ಕು ಅಡಿ ಅಗಲವಿರುತ್ತದೆ.

ನಮಗೆ ಅದು ಮೊದಲ ಸಲ ಅರ್ಥವಾಗದಿದ್ದಾಗ, ನೆರೆಯ ಬಿಹಾರದ ಈ ಕುಶಲಕರ್ಮಿ “ಡುಲಿ ತಯಾರಿಸುವುದು ಅಷ್ಟು ಸುಲಭವಲ್ಲ” ಎಂದು ಮತ್ತೊಮ್ಮೆ ವಿವರಿಸಿದರು.  ಇದನ್ನು ತಯಾರಿಸಲು ಹಲವು ಹಂತಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. “ಕಾಂದಾ ಸಾಧ್ನಾ, ಕಾಮ್‌ ಸಾಧ್ನಾ, ತಲ್ಲಿ ಬಿಠಾನ, ಖಡಾ ಕರ್ನಾ, ಬುನಾಯಿ ಕರ್ನಾ, ತೇರಿ ಚಡಾನಾ [ಬಿದಿರಿನಿಂದ ಬುಟ್ಟಿಯ ಎತ್ತರದ ಪಟ್ಟಿಗಳನ್ನು ತಯಾರಿಸುವುದು, ವೃತ್ತಾಕಾರದ ಚೌಕಟ್ಟು ನಿರ್ಮಿಸುವುದು, ಬುಟ್ಟಿ ನಿಲ್ಲುವಂತೆ ಮಾಡುವುದು, ಅಂತಿಮವಾಗಿ ಎಲ್ಲವನ್ನೂ ಜೋಡಿಸಿ ಅಂತಿಮ ರೂಪ ಕೊಡುವುದು ಸೇರಿ ಬಹಳ ಕೆಲಸವಿರುತ್ತದೆ].”

PHOTO • Shreya Kanoi
PHOTO • Shreya Kanoi

ಬಬನ್ ಮಹತೋ ಬಿದಿರಿನ ಬುಟ್ಟಿಗಳನ್ನು ತಯಾರಿಸಲು ಬಿಹಾರದಿಂದ ಪಶ್ಚಿಮ ಬಂಗಾಳದ ಅಲಿಪುರ್‌ ದ್ವಾರ್ ಜಿಲ್ಲೆಗೆ ವಲಸೆ ಹೋಗುತ್ತಾರೆ. ಅವರು ನೇಯ್ಗೆಗೆ ಸಿದ್ಧಪಡಿಸಲು ಬಿದಿರನ್ನು ಕತ್ತರಿಸಿದ ನಂತರ (ಬಲಕ್ಕೆ) ಬಿಸಿಲಿನಲ್ಲಿ (ಎಡಕ್ಕೆ) ಒಣಗಿಸುತ್ತಾರೆ

PHOTO • Shreya Kanoi
PHOTO • Shreya Kanoi

ಬುಟ್ಟಿಗಳನ್ನು ನೇಯುವಾಗ (ಎಡಕ್ಕೆ) ಬಬನ್ ಅವರ ಬೆರಳುಗಳು ಚಾಣಾಕ್ಷತೆಯಿಂದ ಚಲಿಸುತ್ತವೆ. ಅವರು ಬುಟ್ಟಿಯ ತಳವನ್ನು ಪೂರ್ಣಗೊಳಿಸಿದ ನಂತರ, ಬುಟ್ಟಿಯನ್ನು ನಿಲ್ಲುವಂತೆ ಮಾಡಲು (ಬಲಕ್ಕೆ) ತಿರುಗಿಸಲು ಆರಂಭಿಸುತ್ತಾರೆ

52 ವರ್ಷದ ಬಬನ್ ಕಳೆದ ನಾಲ್ಕು ದಶಕಗಳಿಂದ ಈ ಕೆಲಸವನ್ನು ಮಾಡುತ್ತಿದ್ದಾರೆ. "ಬಾಲ್ಯದಿಂದಲೂ ನನ್ನ ಪೋಷಕರು ನನಗೆ ಕಲಿಸಿದ್ದು ಈ ಕೆಲಸವನ್ನು ಮಾತ್ರ. ಅವರು ಸಹ ಈ ಕೆಲಸವನ್ನಷ್ಟೇ ಮಾಡುತ್ತಿದ್ದರು. ಬಿಂಡ್ ಸಮುದಾಯದ ಎಲ್ಲಾ ಜನರು ಡುಲಿ ತಯಾರಿಸುತ್ತಾರೆ. ಅವರು ಟೋಕ್ರಿ [ಸಣ್ಣ ಬುಟ್ಟಿಗಳನ್ನು] ತಯಾರಿಸುವುದು, ಮೀನುಗಳನ್ನು ಹಿಡಿಯುವುದು ಮತ್ತು ದೋಣಿ ನಡೆಸುವುದನ್ನು ಮಾಡುತ್ತಾರೆ."

ಬಬನ್ ಬಿಹಾರದ ಬಿಂಡ್ ಸಮುದಾಯಕ್ಕೆ ಸೇರಿದವರಾಗಿದ್ದು, ಈ ಸಮುದಾಯವನ್ನು ರಾಜ್ಯದ ಅತ್ಯಂತ ಹಿಂದುಳಿದ ವರ್ಗಗಳ (ಇಬಿಸಿ) ಅಡಿಯಲ್ಲಿ ಪಟ್ಟಿ ಮಾಡಲಾಗಿದೆ (ಜಾತಿ ಜನಗಣತಿ 2022-23). ಹೆಚ್ಚಿನ ಡುಲಿ ಕುಶಲಕರ್ಮಿಗಳು ಬಿಂಡ್ ಸಮುದಾಯಕ್ಕೆ ಸೇರಿದವರು, ಆದರೆ ಇದನ್ನು ಕಾನು ಮತ್ತು ಹಲ್ವಾಯಿ ಸಮುದಾಯಗಳ (ಇವರೂ ಇಬಿಸಿ ವರ್ಗಕ್ಕೆ ಸೇರಿದವರು) ಜನರು ಸಹ ಮಾಡುತ್ತಾರೆ, ಅವರು ದಶಕಗಳಿಂದ ಬಿಂಡ್ ಜನರೊಂದಿಗೆ ಅಕ್ಕಪಕ್ಕದಲ್ಲಿ ಬದುಕುತ್ತಾ ಈ ಕೌಶಲವನ್ನು ಕಲಿತುಕೊಂಡಿದ್ದಾರೆ.

"ನಾನು ನನ್ನ ಕೈ ಅಂದಾಜು ಬಳಸಿ ಕೆಲಸ ಮಾಡುತ್ತೇನೆ. ನನ್ನ ಕಣ್ಣುಗಳು ಮುಚ್ಚಿದ್ದರೂ, ಅಥವಾ ಹೊರಗೆ ಕತ್ತಲಿದ್ದರೂ, ನನ್ನ ಕೈಗಳ ಬುದ್ಧಿವಂತಿಕೆ ನನಗೆ ಮಾರ್ಗದರ್ಶನ ನೀಡಬಲ್ಲದು" ಎಂದು ಅವರು ಹೇಳುತ್ತಾರೆ.

ಮೊದಲಿಗೆ ಅವರು ಬಿದಿರನ್ನು ಉದ್ದಕ್ಕೆ ಕತ್ತರಿಸಿ ಅದನ್ನು 104 ಪಟ್ಟಿಗಳನ್ನಾಗಿ ಕತ್ತರಿಸಿಕೊಳ್ಳುತ್ತಾರೆ.  ಈ ಕೆಲಸ ಹೆಚ್ಚಿನ ಕೌಶಲವನ್ನು ಬೇಡುತ್ತದೆ. ನಂತರ ನಿಖರವಾದ ಲೆಕ್ಕಾಚಾರಗಳನ್ನು ಬಳಸಿಕೊಂಡು, ಅಪೇಕ್ಷಿತ ಪರಿಮಾಣವನ್ನು ಅವಲಂಬಿಸಿ "ಚೇಯ್‌  ಯಾ ಸಾತ್ ಹಾತ್ (ಸರಿಸುಮಾರು 9ರಿಂದ 10 ಅಡಿ) ವ್ಯಾಸವನ್ನು ಅಳತೆಯ ವೃತ್ತಾಕಾರದ ಬಿದಿರಿನ ಚೌಕಟ್ಟನ್ನು ರೂಪಿಸಲಾಗುತ್ತದೆ. 'ಹಾತ್' (ಮೊಳ) ಎಂಬುದು ಮಧ್ಯದ ಬೆರಳಿನ ತುದಿಯಿಂದ ಮೊಣಕೈಯವರೆಗಿನ ಕೈಯ ಅಳತೆಯಾಗಿದೆ, ಇದನ್ನು ಭಾರತದಾದ್ಯಂತ ಕುಶಲಕರ್ಮಿ ಗುಂಪುಗಳು ಮಾಪನದ ಘಟಕವಾಗಿ ವ್ಯಾಪಕವಾಗಿ ಬಳಸುತ್ತವೆ; ಇದು ಸರಿಸುಮಾರು 18 ಇಂಚುಗಳಿಗೆ ಸಮನಾಗಿರುತ್ತದೆ.

PHOTO • Gagan Narhe
PHOTO • Gagan Narhe

ಬಬನ್ ದಟ್ಟ ಬಿದಿರಿನ ಕಾಡಿನಲ್ಲಿ ಸೂಕ್ತವಾದ ಬಿದಿರನ್ನು (ಎಡ) ಗುರುತಿಸಿ, ಸೂಕ್ತವೆನ್ನಿಸಿದ್ದನ್ನು ತನ್ನ ಕೆಲಸದ ಸ್ಥಳಕ್ಕೆ ತರುತ್ತಾರೆ (ಬಲ)

PHOTO • Gagan Narhe

ಬಬನ್ ಡುಲಿ ಬುಟ್ಟಿಯ ವೃತ್ತಾಕಾರದ ತಳವನ್ನು ಮೂರು ಅಡಿ ಅಗಲಕ್ಕೆ ಬಿದಿರನ್ನು ಕತ್ತರಿಸುವ ಮೂಲಕ ಸಿದ್ಧಪಡಿಸುತ್ತಾರೆ

ಪರಿ ಅಲಿಪುರ್‌ ದ್ವಾರ್ ಜಿಲ್ಲೆಯ (ಈ ಹಿಂದಿನ ಜಲ್‌ಪಾಯ್‌ಗುರಿ) ಬಾಬನ್ ಜೊತೆ ಮಾತನಾಡುತ್ತಿದೆ. ಇದು ಬಿಹಾರದ ಭಗ್ವಾನಿ ಛಾಪ್ರಾದಲ್ಲಿರುವ ಅವರ ಮನೆಯಿಂದ 600 ಕಿಲೋಮೀಟರ್ ದೂರದಲ್ಲಿದೆ, ಅಲ್ಲಿಂದ ಅವರು ವಾರ್ಷಿಕವಾಗಿ ಕೆಲಸ ಹುಡುಕಿಕೊಂಡು ಪಶ್ಚಿಮ ಬಂಗಾಳದ ಉತ್ತರ ಬಯಲು ಪ್ರದೇಶಗಳಿಗೆ ಪ್ರಯಾಣಿಸುತ್ತಾರೆ, ಖಾರಿಫ್ ಭತ್ತದ ಬೆಳೆ ಕೊಯ್ಲಿಗೆ ಸಿದ್ಧವಾಗುವ ಕಾರ್ತಿಕ ತಿಂಗಳಲ್ಲಿ (ಅಕ್ಟೋಬರ್-ನವೆಂಬರ್) ಆಗಮಿಸುತ್ತಾರೆ. ಅವರು ಮುಂದಿನ ಎರಡು ತಿಂಗಳ ಕಾಲ ಅಲ್ಲಿಯೇ ಇದ್ದು ಡುಲಿ ತಯಾರಿಸಿ ಮಾರಾಟ ಮಾಡುತ್ತಾರೆ.

ಹೀಗೆ ಬರುವವರು ಅವರೊಬ್ಬರೇ ಅಲ್ಲ. “ಬಂಗಾಳದ ಅಲಿಪುರ್ದುವಾರ್ ಮತ್ತು ಕೂಚ್ ಬೆಹಾರ್ ಜಿಲ್ಲೆಗಳ ಪ್ರತಿಯೊಂದು ಹಾಟ್ [ವಾರದ ಸಂತೆ] ಯಲ್ಲೂ ನಮ್ಮ ಭಗ್ವಾನಿ ಛಾಪ್ರಾ ಗ್ರಾಮದ ಡುಲಿ ತಯಾರಕರನ್ನು ನೋಡಬಹುದು" ಎಂದು ಪುರಾನ್ ಸಹಾ ಹೇಳುತ್ತಾರೆ. ಅವರು ಕೂಡ ಡುಲಿ ತಯಾರಕರಾಗಿದ್ದು, ವಾರ್ಷಿಕವಾಗಿ ಬಿಹಾರದಿಂದ ಕೂಚ್ ಬೆಹಾರ್ ಜಿಲ್ಲೆಯ ಖಗ್ರಾಬರಿ ಪಟ್ಟಣದ ದೋಡಿಯರ್ ಹಾಟ್‌ಗೆ ವಲಸೆ ಹೋಗುತ್ತಾರೆ. ಈ ಕೆಲಸಕ್ಕಾಗಿ ಬರುವ ಹೆಚ್ಚಿನ ವಲಸಿಗರು ಐದರಿಂದ ಹತ್ತು ಜನರ ಗುಂಪುಗಳಲ್ಲಿ ಸೇರುತ್ತಾರೆ. ಅವರು ಒಂದು ಹಾಟ್ ಆಯ್ಕೆ ಮಾಡಿಕೊಂಡು ಅಲ್ಲಿ ನೆಲೆಯನ್ನು ಸ್ಥಾಪಿಸಿ ತಾತ್ಕಾಲಿಕ ಡೇರೆಗಳಲ್ಲಿ ವಾಸಿಸುತ್ತಾರೆ.

ಮೊದಲ ಬಾರಿಗೆ ಪಶ್ಚಿಮ ಬಂಗಾಳಕ್ಕೆ ಬಂದಾಗ ಬಬನ್ ಅವರಿಗೆ 13 ವರ್ಷ. ಅವರು ತಮ್ಮ ಗುರು ರಾಮ್ ಪರ್ಬೇಶ್ ಮಹತೋ ಅವರೊಂದಿಗೆ ಬಂದರು. "ನಾನು ನನ್ನ ಗುರುಗಳೊಂದಿಗೆ 15 ವರ್ಷ ಪ್ರಯಾಣಿಸಿದ್ದೆ. ಅಷ್ಟು ವರ್ಷಗಳ ನಂತರವೇ (ಡುಲಿ ತಯಾರಿಸುವುದನ್ನು) ಸಂಪೂರ್ಣವಾಗಿ ತಿಳಿದುಕೊಳ್ಳಲು ಸಾಧ್ಯವಾಯಿತು" ಎಂದು ಡುಲಿ ಕುಶಲಕರ್ಮಿಗಳ ಕುಟುಂಬದಿಂದ ಬಂದ ಬಬನ್ ಹೇಳುತ್ತಾರೆ.

PHOTO • Gagan Narhe

ಅಲಿಪುರ್ದುವಾರ್‌ ಜಿಲ್ಲೆಯ ಮಥುರಾದ ವಾರದ ಸಂತೆಯಲ್ಲಿ ಬುಟ್ಟಿ ನೇಕಾರರ ಗುಂಪು ತಮ್ಮ ತಾತ್ಕಾಲಿಕ ಡೇರೆಗಳ ಮುಂದೆ ಡುಲಿಗಳನ್ನು ತಯಾರಿಸಿ ಮಾರಾಟ ಮಾಡುತ್ತದೆ

*****

ಬಬನ್‌ ತನ್ನ ಡೇರೆಯೆದುರು ಚಳಿ ಕಾಯಿಸಲು ಬೆಂಕಿ ಹಚ್ಚುವ ಮೂಲಕ ದಿನವನ್ನು ಆರಂಭಿಸುತ್ತಾರೆ. ಡೇರೆಯ ಒಳಗೆ ಚಳಿಯಿರುವ ಕಾರಣ ಅವರು ರಸ್ತೆ ಬದಿಯಲ್ಲಿ ಬೆಂಕಿ ಹಚ್ಚಿಕೊಂಡು ಚಳಿ ಕಾಯಿಸುತ್ತಾರೆ. “ದಿನಾಲೂ ಮುಂಜಾವಿನ 3 ಗಂಟೆಗೆ ಏಳುತ್ತೇನೆ. ಇಲ್ಲಿ ಬಹಳ ಚಳಿಯೆನ್ನಿಸುತ್ತದೆ. ಹೀಗಾಗಿ ನಾನು ಹಾಸಿಗೆಯಿಂದ ಎದ್ದು ಹೊರಬಂದು ಇಲ್ಲಿ ಕೂರುತ್ತೇನೆ” ಎನ್ನುವ ಅವರು ಅದಾಗಿ ಒಂದು ಗಂಟೆಯ ನಂತರ ಕೆಲಸ ಆರಂಭಿಸುತ್ತಾರೆ. ಹೊರಗೆ ಕತ್ತಲೆಯಿರುತ್ತದೆಯಾದರೂ ಪಕ್ಕದಲ್ಲಿನ ಬೀದಿ ದೀಪ ಅವರ ಕೆಲಸಕ್ಕೆ ಸಾಕಾಗುತ್ತದೆ.

ಡುಲಿ ಬುಟ್ಟಿಯ ತಯಾರಿ ಪ್ರಕ್ರಿಯೆಯ ಅವಿಭಾಜ್ಯ ಅಂಗವೆಂದರೆ ಸರಿಯಾದ ರೀತಿಯ ಬಿದಿರಿನ ಆಯ್ಕೆ ಎಂದು ಅವರು ಹೇಳುತ್ತಾರೆ. "ಮೂರು ವರ್ಷದ ಬಿದಿರು ಈ ಉದ್ದೇಶಕ್ಕಾಗಿ ಅತ್ಯುತ್ತಮವಾದುದು ಏಕೆಂದರೆ ಅದನ್ನು ಸುಲಭವಾಗಿ ಸಿಗಿಯಬಹುದು ಮತ್ತು ಅದು ನಮಗೆ ಬೇಕಿರುವಷ್ಟೇ ದಪ್ಪವಾಗಿರುತ್ತದೆ" ಎಂದು ಬಬನ್ ಹೇಳುತ್ತಾರೆ.

ಸರಿಯಾದ ಲೆಕ್ಕಾಚಾರಗಳನ್ನು ಬಳಸಿಕೊಂಡು ವೃತ್ತಾಕಾರದ ಬಿದಿರಿನ ಚೌಕಟ್ಟನ್ನು ನಿರ್ಮಿಸುವುದು ಕಷ್ಟ, ಮತ್ತು ಅವರು 'ದಾವೋ' (ಕುಡಗೋಲು) ಎಂಬ ಸಾಧನವನ್ನು ಈ ಕೆಲಸದಲ್ಲಿ ಬಳಸುತ್ತಾರೆ. ಮುಂದಿನ 15 ಗಂಟೆಗಳ ಕಾಲ ಅವರು ಊಟ ಮಾಡಲು ಮತ್ತು ಬೀಡಿ ಸೇದಲು ಮಾತ್ರವೇ ಬಿಡುವು ತೆಗೆದುಕೊಳ್ಳುತ್ತಾರೆ.

ಒಂದು ಸಾಮಾನ್ಯ ಡುಲಿ 5 ಅಡಿ ಎತ್ತರ ಮತ್ತು 4 ಅಡಿ ವ್ಯಾಸವನ್ನು ಹೊಂದಿರುತ್ತದೆ. ಬಬನ್ ತನ್ನ ಮಗನ ಸಹಾಯದಿಂದ ದಿನಕ್ಕೆ ಎರಡು ಡುಲಿ ಬುಟ್ಟಿಗಳನ್ನು ನೇಯಬಲ್ಲರು. ಹಾಗೆ ನೇಯ್ದ ಬುಟ್ಟಿಗಳನ್ನು ಅಲಿಪುರ್ದುವಾರ್ ಜಿಲ್ಲೆಯ ಮಥುರಾ ಹಾಟ್‌ ಎನ್ನುವಲ್ಲಿ ನಡೆಯುವ ಸೋಮವಾರದ ಸಂತೆಯಲ್ಲಿ ಮಾರುತ್ತಾರೆ. "ಹಾಟ್‌ಗೆ ಹೋಗುವಾಗ, ವಿವಿಧ ಗಾತ್ರಗಳ ಡುಲಿಯನ್ನು ಒಯ್ಯುತ್ತೇನೆ: 10 ಮನ್, 15 ಮನ್, 20 ಮನ್, 25 ಮನ್ ಭತ್ತವನ್ನು ಹಿಡಿಯುವಂತಹವು." ಒಂದು 'ಮನ್' 40 ಕಿಲೋಗ್ರಾಂಗಳಿಗೆ ಸಮ, 10 ಮನ್ ಗಾತ್ರದ ಡುಲಿ 400 ಕಿಲೋ ಭತ್ತವನ್ನು ಹಿಡಿದಿಡಬಲ್ಲದು. ಬಬನ್ ತನ್ನ ಗ್ರಾಹಕರು ಬಯಸುವ ಗಾತ್ರದ ಡುಲಿಯನ್ನು ತಯಾರಿಸಿ ಕೊಡುತ್ತಾರೆ. ಪರಿಮಾಣದ ಆಧಾರದ ಮೇಲೆ ಡುಲಿ ಗಾತ್ರಗಳು 5ರಿಂದ 8 ಅಡಿ ಎತ್ತರದವರೆಗೆ ಇರುತ್ತವೆ.

ವೀಡಿಯೊ ನೋಡಿ: ಬಬನ್ ಮಹತೋ ಕೈಚಳಕದ ದೈತ್ಯ ಬಿದಿರಿನ ಬುಟ್ಟಿಗಳು

ನನ್ನ ಪೋಷಕರು ನನಗೆ ಬಾಲ್ಯದದಲ್ಲಿ ಬುಟ್ಟಿ ತಯಾರಿಸುವುದನ್ನು ಹೇಳಿಕೊಟ್ಟರು. ಅವರೂ ಇದೇ ಕೆಲಸ ಮಾಡುತ್ತಿದ್ದರು

"ಕೊಯ್ಲಿನ ಸಮಯದಲ್ಲಿ ಒಂದು ಡುಲಿಗೆ 600ರಿಂದ 800 ರೂಪಾಯಿ ಪಡೆಯುತ್ತೇವೆ. ಕೊಯ್ಲು ಮುಗಿಯುತ್ತಾ ಬಂದಂತೆ ಬೇಡಿಕೆ ಕಡಿಮೆಯಾಗುತ್ತದೆ. ಆಗ ಅದೇ ಬುಟ್ಟಿಯನ್ನು ಅಗ್ಗದ ಬೆಲೆಗೆ ಮಾರಾಟ ಮಾಡುತ್ತೇನೆ. ಹೆಚ್ಚುವರಿಯಾಗಿ 50 ರೂಪಾಯಿಗಳ ಗಳಿಕೆಗಾಗಿ, ನಾನು ಬುಟ್ಟಿಯನ್ನು ತಲುಪಿಸುವ ಕೆಲಸವನ್ನು ಸಹ ಮಾಡುತ್ತೇನೆ" ಎಂದು ಅವರು ಹೇಳುತ್ತಾರೆ.

ಒಂದು ಡುಲಿ ಎಂಟು ಕೇಜಿಯಷ್ಟು ತೂಕವಿರುತ್ತದೆ ಮತ್ತು ಬಬನ್‌ ಅಂತಹ ಮೂರು ಡುಲಿಗಳನ್ನು (ಸುಮಾರು 25 ಕೇಜಿ) ತಮ್ಮ ತಲೆಯ ಮೇಲೆ ಹೊತ್ತು ಸಾಗಿಸಬಲ್ಲರು. “ಒಂದು ಸ್ವಲ್ಪ ಹೊತ್ತಿನ ಮಟ್ಟಿಗೆ 25 ಕೇಜಿ ಭಾರ ಹೊರಲು ಸಾಧ್ಯವಿಲ್ಲವೇ? ಅದೇನು ದೊಡ್ಡ ವಿಷಯವಲ್ಲ” ಎಂದು ಅವರು ಹೇಳುತ್ತಾರೆ.

ಸಂತೆಯ ದಾರಿಯುದ್ದಕ್ಕೂ ನಡೆಯುತ್ತಾ ಬಬನ್‌ ತಮ್ಮ ಊರಿನ ಜನರತ್ತ ನಮಸ್ಕರಿಸುತ್ತಾ ಸಾಗುತ್ತಿದ್ದರು. ಜೊತೆಗೆ ತಮ್ಮ ಸಮುದಾಯಕ್ಕೆ ಸೇರಿದ ಜನರ ಅಂಗಡಿಗಳನ್ನು ಮತ್ತು ಅವರಿಗೆ ಕೆಲಸದಲ್ಲಿ ಸಹಾಯ ಮಾಡುವ ಬಂಗಾಳಿ ಜನರನ್ನೂ ನಮಗೆ ತೋರಿಸಿದರು. “ಸಬ್‌ ಜಾನ್‌ ಪೆಹಚಾನ್‌ ಕೇ ಹೈ [ಎಲ್ಲರೂ ಪರಿಚಿತರೇ]” ಎಂದು ಅವರು ಹೇಳುತ್ತಾರೆ. “ನನ್ನ ಬಳಿ ಒಂದು ಪೈಸೆ ಇಲ್ಲದಿರುವಾಗಲೂ ಅನ್ನ, ದಾಲ್‌ ಮತ್ತು ರೋಟಿ ಕೇಳಿದರೆ ಹಣದ ಕುರಿತು ಯೋಚಿಸದೆ ಎಲ್ಲವನ್ನೂ ಕೊಡುತ್ತಾರೆ” ಎಂದು ಅವರು ಹೇಳಿದರು.

PHOTO • Gagan Narhe
PHOTO • Gagan Narhe

ತನ್ನ ಹಿಂದೆ ಸೈಕಲ್ಲಿನ ಬರುತ್ತಿರುವ ಗ್ರಾಹಕನಿಗೆ ಡ) ಡುಲಿ ತಲುಪಿಸಲು ಹೋಗುತ್ತಿರುವ ಬಬನ್ (ಬಲ)

ಅವರ ಅಲೆಮಾರಿ ಜೀವನವು ಅವರ ಸ್ಥಳೀಯ ಭೋಜ್ಪುರಿಯನ್ನು ಮೀರಿ ಭಾಷಾ ನಿರರ್ಗಳತೆಯನ್ನು ನೀಡಿದೆ. ಅವರು ಹಿಂದಿ, ಬಂಗಾಳಿ ಮತ್ತು ಅಸ್ಸಾಮಿ ಭಾಷೆಗಳನ್ನು ಮಾತನಾಡುತ್ತಾರೆ ಮತ್ತು ಅಲಿಪುರ್ದುವಾರ್ ಜಿಲ್ಲೆಯ (ಈ ಹಿಂದಿನ ಜಲ್‌ಪಾಯ್‌ಗುರಿ ಜಿಲ್ಲೆ) ದಕ್ಷಿಣ ಚಕೋಖೇಟಿಯಲ್ಲಿ ವಾಸಿಸುವ ಮೆಕ್ ಸಮುದಾಯ ಮಾತನಾಡುವ ಮೆಚಿಯಾ ಭಾಷೆ ಸಹ ಅರ್ಥವಾಗುತ್ತದೆ.

ಅವರು ದಿನಕ್ಕೆ 10 ರೂಪಾಯಿ ಕೊಟ್ಟು ಒಂದಷ್ಟು ಮದ್ಯವನ್ನು ಸೇವಿಸುವುದಾಗಿ ಹೇಳುವ ಅವರು “ದಿನವಿಡೀ ದುಡಿದು ಮೈಕೈ ನೋಯುತ್ತದೆ. ಮದ್ಯ ನೋವನ್ನು ಮರಗಟ್ಟಿಸಿ ಕಡಿಮೆ ಮಾಡುತ್ತದೆ” ಎನ್ನುತ್ತಾರೆ.

ಅವರ ಊರಿನ ಬಿಹಾರಿಗಳೆಲ್ಲ ಒಟ್ಟಿಗೆ ಬದುಕುತ್ತಿದ್ದಾರೆ. ಆದರೆ ಬಬನ್‌ ಒಬ್ಬರೇ ಇರುತ್ತಾರೆ. “ಜೊತೆಯಲ್ಲಿ ಇದ್ದಾಗ ನಾನು 50 ರೂಪಾಯಿ ಊಟಕ್ಕೆ ಖರ್ಚು ಮಾಡಿದರೆ ಜೊತೆಗಿರುವವರು ಅದರಲ್ಲಿ ʼನನಗೂ ಪಾಲು ಬೇಕುʼ ಎನ್ನುತ್ತಾರೆ! ಅದಕ್ಕಾಗಿಯೇ ನಾನು ಒಬ್ಬನೇ ಉಣ್ಣುತ್ತೇನೆ, ಒಬ್ಬನೇ ಇರುತ್ತೇನೆ. ಹೀಗಾಗಿ ನಾನು ಇಲ್ಲಿ ಏನು ತಿಂದರೂ ನನ್ನದೇ, ಏನು ದುಡಿದರೂ ನನ್ನದೇ ಆಗಿರುತ್ತದೆ.”

ಬಿಂಡ್‌ ಸಮುದಾಯ ಜನರ ಪಾಲಿಗೆ ಬಿಹಾರದಲ್ಲಿ ಕೆಲವೇ ಜೀವನೋಪಾಯಗಳು ಲಭ್ಯವಿವೆ. ಹೀಗಾಗಿ ಅಲ್ಲಿನ ಜನರು ತಲೆಮಾರುಗಳಿಂದ ವಲಸೆ ಹೋಗುತ್ತಿದ್ದಾರೆ ಎಂದು ಬಬನ್‌ ಹೇಳುತ್ತಾರೆ. ಬಬನ್‌ ಅವರ 30 ವರ್ಷದ ಮಗ ಅರ್ಜುನ್‌ ಮಹತೋ ಕೂಡಾ ತಂದೆಯೊಂದಿಗೆ ಚಿಕ್ಕವರಿದ್ದಾಗ ಇಲ್ಲಿಗೆ ಬರುತ್ತಿದ್ದರು. ಪ್ರಸ್ತುತ ಅವರು ಮುಂಬಯಿಯಲ್ಲಿ ಪೇಂಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. “ನಮ್ಮ ಬಿಹಾರದಲ್ಲಿ ಬದುಕಲು ಸಾಕಾಗುವಷ್ಟು ದುಡಿಮೆ ಲಭ್ಯವಿಲ್ಲ. ಇಲ್ಲಿರುವ ಏಕೈಕ ಉದ್ಯಮವೆಂದರೆ ಮರಳುಗಾರಿಕೆ… ಆದರೆ ಬಿಹಾರದ ಎಲ್ಲರೂ ಅದರ ಮೇಲೆ ಅವಲಂಬಿತರಾಗಿ ಬದುಕು ನಡೆಸಲು ಸಾಧ್ಯವಿಲ್ಲ.”

PHOTO • Shreya Kanoi

ಪ್ರತಿ ವರ್ಷ ಅಕ್ಟೋಬರ್ ಮತ್ತು ಡಿಸೆಂಬರ್ ನಡುವೆ, ಬಾಬನ್ ಪಶ್ಚಿಮ ಬಂಗಾಳದ ಅಲಿಪುರ್ದುವಾರ್ ಹೆದ್ದಾರಿಯಲ್ಲಿ ನೆಲೆಯೂರಿ ಕೆಲಸ ಮಾಡುತ್ತಾರೆ

PHOTO • Shreya Kanoi

ಎಡ: ತಾತ್ಕಾಲಿಕ ಟಾರ್ಪಾಲಿನ್ ಟೆಂಟ್ ಬಬನ್ ಅವರ ತಾತ್ಕಾಲಿಕ ಮನೆಯಾಗಿದ್ದು, ಅಲ್ಲಿ ಅವರು ಡುಲಿಗಳನ್ನು ಸಹ ತಯಾರಿಸುತ್ತಾರೆ. ಬಲ: ಬಬನ್ ಬುಟ್ಟಿಯ ನಿರ್ಣಾಯಕ ಹಂತಗಳನ್ನು ಪೂರ್ಣಗೊಳಿಸಿದ ನಂತರ ಅವರ ಮಗ ಚಂದನ್ ಅದನ್ನು ಪೂರ್ಣಗೊಳಿಸುತ್ತಾರೆ

ಬಬನ್ ಅವರ ಎಂಟು ಮಕ್ಕಳಲ್ಲಿ ಕಿರಿಯವರಾದ ಚಂದನ್ ಈ ವರ್ಷ (2023) ಅವರೊಂದಿಗೆ ಬಂದಿದ್ದಾರೆ. ಪಶ್ಚಿಮ ಬಂಗಾಳದಿಂದ ಅಸ್ಸಾಂಗೆ ಹೋಗುವ ರಾಷ್ಟ್ರೀಯ ಹೆದ್ದಾರಿ -17ರ ಬಳಿ ಅವರು ಚಹಾ ತೋಟಗಳ ಕಡೆ ಸಾಗುವಲ್ಲಿ ತಾತ್ಕಾಲಿಕ ಮನೆಯನ್ನು ಸ್ಥಾಪಿಸಿದ್ದಾರೆ. ಅವರ ಮನೆಯೆಂದರೆ ಮೂರು ಬದಿಗಳಲ್ಲಿ ಸಡಿಲವಾಗಿ ಹೊದಿಸಲಾದ ಟಾರ್ಪಾಲಿನ್, ಮತ್ತು ತಗಡಿನ ಛಾವಣಿ, ಮಣ್ಣಿನ ಚುಲ್ಹಾ (ಒಲೆ), ಹಾಸಿಗೆ ಮತ್ತು ಡುಲಿ ಬುಟ್ಟಿಗಳನ್ನಿಡಲು ಒಂದಷ್ಟು ಶೇಖರಣಾ ಸ್ಥಳವನ್ನು ಹೊಂದಿರುವ ಒಂದು ಗ್ಯಾರೇಜ್.

ತಂದೆ ಮತ್ತು ಮಗ ಮಲವಿಸರ್ಜನೆ ಮಾಡಲು ರಸ್ತೆಯ ಬದಿಯ ತೆರೆದ ಸ್ಥಳಗಳನ್ನು ಬಳಸುತ್ತಾರೆ; ಸ್ನಾನ ಮಾಡಲು, ಹತ್ತಿರದ ಹ್ಯಾಂಡ್ ಪಂಪಿನಿಂದ ನೀರನ್ನು ತೆಗೆದುಕೊಳ್ಳುತ್ತಾರೆ. "ಈ ಪರಿಸ್ಥಿತಿಯಲ್ಲಿ ಉಳಿಯಲು ನನಗೆ ಯಾವುದೇ ಸಮಸ್ಯೆ ಇಲ್ಲ. ಮೇ ಹಮೇಶಾ ಅಪ್ನೆ ಕಾಮ್ ಕೆ ಸುರ್ ಮೇ ರೆಹ್ತಾ ಹೂಂ [ನಾನು ಸದಾ ನನ್ನ ಕೆಲಸದ ಲಯದಲ್ಲಿರುತ್ತೇನೆ]" ಎಂದು ಬಬನ್ ಹೇಳುತ್ತಾರೆ. ಅವರು ಮನೆಯ ಹೊರಗಿನ ಭಾಗದಲ್ಲಿ ಡುಲಿಯನ್ನು ತಯಾರಿಸಿ ಮಾರಾಟ ಮಾಡುತ್ತಾರೆ, ಮತ್ತು ಒಳಗೆ ಅಡುಗೆ ಮಾಡುತ್ತಾರೆ ಮತ್ತು ಮಲಗುತ್ತಾರೆ.

ಮನೆಗೆ ಹೊರಡುವುದೆಂದರೆ ಬಹಳ ನೋವಿನ ವಿಷಯ ಎನ್ನುತ್ತಾರೆ ಈ ಕುಶಲಕರ್ಮಿ: “ಮಾ, ನಮ್ಮ ಮನೆ ಮಾಲಕಿ ಮನೆಯಲ್ಲೇ ಬೆಳೆದ ತೇಜ್‌ ಪತ್ತಾ (ಒಣ ಲವಂಗದ ಎಲೆ) ಎಲೆಗಳನ್ನು ಊರಿಗೆ ಕೊಂಡು ಹೋಗಲೆಂದು ಕಟ್ಟಿ ಕೊಟ್ಟಿದ್ದಾರೆ.”

*****

ಭತ್ತದ ಸಂಗ್ರಹಕ್ಕೆ ಪ್ಲಾಸ್ಟಿಕ್‌ ಚೀಲಗಳ ಬಳಕೆ ಮತ್ತು ಸಂಸ್ಕರಣೆ ಮತ್ತು ಸಂಗ್ರಹಣೆಯ ಬದಲಾಗುತ್ತಿರುವ ಮಾದರಿಗಳು ಡುಲಿ ತಯಾರಕರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತಿವೆ. “ಕಳೆದ ಐದು ವರ್ಷಗಳಿಂದ ಈ ಪ್ರದೇಶದಲ್ಲಿನ ಅಕ್ಕಿ ಮಿಲ್ಲುಗಳು ನಮ್ಮ ಕೆಲಸದ ಮೇಲೆ ಪರಿಣಾಮ ಬೀರಿವೆ. ರೈತರು ತಮ್ಮ ಭತ್ತವನ್ನು ಮೊದಲಿನಂತೆ ಸಂಗ್ರಹಿಸುವ ಬದಲು ಮುಂದಿನ ಸಂಸ್ಕರಣೆಗಾಗಿ ಹೊಲಗಳಿಂದ ನೇರವಾಗಿ ಗಿರಣಿಗಳಿಗೆ ಮಾರಾಟ ಮಾಡುತ್ತಾರೆ. ಸಾಕಷ್ಟು ಜನರು ಸಂಗ್ರಹಣೆಗಾಗಿ ಪ್ಲಾಸ್ಟಿಕ್ ಚೀಲಗಳನ್ನು ಬಳಸಲು ಪ್ರಾರಂಭಿಸಿದ್ದಾರೆ" ಎಂದು ಬಿಹಾರದ ದುಲಿ ತಯಾರಕರ ಗುಂಪು ಪರಿಗೆ ತಿಳಿಸಿದೆ.

PHOTO • Gagan Narhe
PHOTO • Gagan Narhe

ಎಡ: ಡುಲಿ ತಯಾರಕರು ಈ ಋತುವಿನಲ್ಲಿ (2024) ತಮ್ಮ ಎಲ್ಲಾ ಬುಟ್ಟಿಗಳನ್ನು ಮಾರಾಟ ಮಾಡಲು ಸಾಧ್ಯವಾಗಿಲ್ಲ. ಬಲ: ರೈತರು ಅಗ್ಗ ಮತ್ತು ಸಂಗ್ರಹಿಸಲು ಸುಲಭ ಎನ್ನುವ ಕಾರಣಕ್ಕಾಗಿ ಬಸ್ತಾ (ಪ್ಲಾಸ್ಟಿಕ್ ಚೀಲ) ಬಳಕೆಗೆ ಆದ್ಯತೆ ನೀಡುತ್ತಿದ್ದಾರೆ

ಇತರ, ಸಣ್ಣ ಗಾತ್ರದ ಬುಟ್ಟಿಗಳನ್ನು (ಟೋಕ್ರಿಗಳು) ತಯಾರಿಸುವ ಸಾಧ್ಯತೆಯಿದೆ, ಆದರೆ ಅವರು ಅದನ್ನು ತಯಾರಿಸಿದರೆ ಸ್ಥಳೀಯವಾಗಿ ಅದನ್ನು ತಯಾರಿಸುವವರ ನಿಷ್ಟುರ ಕಟ್ಟಿಕೊಳ್ಳಬೇಕಾಗುತ್ತದೆ. ಅಲ್ಲದೆ ಇವರ ಬಳಿ ಸ್ಥಳೀಯರು 'ದೇಖೋ ಭಾಯ್, ಯೇ ಮತ್ ಬನಾವೊ, ಅಪ್ನಾ ಬಡಾ ವಾಲಾ ಡುಲಿ ಬನಾವೊ… ಹಮ್ಲೋಗ್ ಕಾ ಪೆಟ್ ಮೇ ಲಾತ್ ಮತ್ ಮಾರೋ" [ಅಣ್ಣಾ, ದಯವಿಟ್ಟು ಸಣ್ಣ ಬುಟ್ಟಿಗಳನ್ನು ತಯಾರಿಸಬೇಡಿ. ನೀವು ನಿಮ್ಮ ದೊಡ್ಡ ಬುಟ್ಟಿಗಳನ್ನು ಮಾತ್ರ ಮಾಡಿ. ಸಣ್ಣದನ್ನೂ ಮಾಡುವ ಮೂಲಕ ನಮ್ಮ ಹೊಟ್ಟೆಯ ಮೇಲೆ ಹೊಡೆಯಬೇಡಿ'] ಮನವಿ ಕೂಡಾ ಮಾಡಿಕೊಂಡಿದ್ದಾರೆ.

ಕೂಚ್ ಬೆಹಾರ್ ಮತ್ತು ಅಲಿಪುರ್‌ ದ್ವಾರ್ ಜಿಲ್ಲೆಗಳ ಸಂತೆಗಳಲ್ಲಿ ಬಸ್ತಾ (ಪ್ಲಾಸ್ಟಿಕ್‌ ಚೀಲ)ವೊಂದಕ್ಕೆ 20 ರೂಪಾಯಿ ಬೆಲೆಯಿದೆ. ಆದರೆ ಒಂದು ಡುಲಿಗೆ 600ರಿಂದ 1,000 ರೂ.ಗಳಷ್ಟು ಬೆಲೆಯಿದೆ. ಒಂದು ಚೀಲದಲ್ಲಿ 40 ಕೇಜಿಯಷ್ಟು ಅಕ್ಕಿಯನ್ನು ತುಂಬಬಹುದು ಆದರೆ ಸಾಮಾನ್ಯ ಡುಲಿಯಲ್ಲಿ 500 ಕಿಲೋ ಅಕ್ಕಿಯನ್ನು ತುಂಬಬಹುದು.

ಸುಶೀಲಾ ರೈ ಭತ್ತದ ಕೃಷಿಕರಾಗಿದ್ದು, ಅವರು ಡುಲಿಯನ್ನು ಇಷ್ಟಪಡುತ್ತಾರೆ. ಅಲಿಪುರ್ದುವಾರ್ ಜಿಲ್ಲೆಯ ದಕ್ಷಿಣ ಚಕೋಯಖೇತಿ ಗ್ರಾಮದ 50 ವರ್ಷದ ಈ ಮಹಿಳೆ ಹೇಳುತ್ತಾರೆ, "ನಾವು ಭತ್ತವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸಿದರೆ, ಅದು ಕಪ್ಪು ಕೀಟಗಳಿಂದ [ಭತ್ತದ ಹುಳುಗಳು] ಪೀಡಿತವಾಗುತ್ತದೆ. ಹೀಗಾಗಿ, ನಾವು ಡುಲಿ ಬಳಸುತ್ತೇವೆ. ವರ್ಷದ ವೈಯಕ್ತಿಕ ಬಳಕೆಗಾಗಿ ನಾವು ಅಕ್ಕಿಯ ದೊಡ್ಡ ಸಂಗ್ರಹವನ್ನು ಇಟ್ಟುಕೊಂಡಿದ್ದೇವೆ."

ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಈ ವರದಿಯ ಪ್ರಕಾರ, ಪಶ್ಚಿಮ ಬಂಗಾಳವು 2021-22ರಲ್ಲಿ ವಾರ್ಷಿಕವಾಗಿ 16.76 ಮಿಲಿಯನ್ ಟನ್ ಅಕ್ಕಿ ಉತ್ಪಾದನೆಯೊಂದಿಗೆ ದೇಶದ ಅತಿದೊಡ್ಡ ಅಕ್ಕಿ ಉತ್ಪಾದಕನಾಗಿ (ಭಾರತದ ಒಟ್ಟು ಅಕ್ಕಿ ಉತ್ಪಾದನೆಯ 13 ಪ್ರತಿಶತ) ಹೊರಹೊಮ್ಮಿದೆ.

PHOTO • Shreya Kanoi
PHOTO • Gagan Narhe

ಎಡ: ಅಲಿಪುರ್ದುವಾರ್ ಜಿಲ್ಲೆಯ ಕೊಯ್ಲು ಮಾಡಿದ ಭತ್ತದ ಗದ್ದೆಗಳ ಮೂಲಕ ಬಬನ್ ಅರ್ಧ ತಯಾರಾಗಿರುವ ಡುಲಿಯನ್ನು ಸಾಗಿಸುತ್ತಿದ್ದಾರೆ. ಬಲ: ಕೊಯ್ಲು ಮಾಡಿದ ಭತ್ತವನ್ನು ಮುಂದಿನ ವರ್ಷದಲ್ಲಿ ರೈತರ ಬಳಕೆಗಾಗಿ ಸಂಗ್ರಹಿಸಲು ಬುಟ್ಟಿಗಳನ್ನು ಬಳಸಲಾಗುತ್ತದೆ. ಗೋಬರ್ (ಸಗಣಿ) ಲೇಪಿಸುವ ಮೂಲಕ ಬುಟ್ಟಿಯಲ್ಲಿನ ತೆರೆದ ಭಾಗಗಳನ್ನು ಮುಚ್ಚಿ ಅಕ್ಕಿ ಉದುರುವುದನ್ನು ತಡೆಯಲಾಗುತ್ತದೆ

*****

ವಲಸೆ ಬಂದಿರುವ ಬಬನ್ ಅಕ್ಟೋಬರ್ ಮಧ್ಯದಿಂದ ಡಿಸೆಂಬರ್ ತನಕದ ಸಮಯವನ್ನು ಪಶ್ಚಿಮ ಬಂಗಾಳದಲ್ಲಿ ಕಳೆಯಲಿದ್ದು, ನಂತರ ಸ್ವಲ್ಪ ವಿರಾಮಕ್ಕಾಗಿ ಬಿಹಾರಕ್ಕೆ ಮರಳಲಿದ್ದಾರೆ. ಫೆಬ್ರವರಿಯಲ್ಲಿ, ಅವರು ಅಸ್ಸಾಂನ ಚಹಾ ಎಸ್ಟೇಟುಗಳಿಗೆ ತೆರಳುತ್ತಾರೆ. ಆ ಸಮಯದಲ್ಲಿ ಅಲ್ಲಿ ಚಹಾ ಎಲೆಗಳನ್ನು ಆರಿಸುವ ಹಂಗಾಮು ನಡೆಯುತ್ತಿರುತ್ತದೆ. ಮುಂದಿನ ಆರರಿಂದ ಎಂಟು ತಿಂಗಳುಗಳನ್ನು ಅವರು ಅಲ್ಲಿ ಕಳೆಯುತ್ತಾರೆ. "ಅಸ್ಸಾಂನಲ್ಲಿ ನಾನು ಹೋಗದ ಸ್ಥಳವಿಲ್ಲ... ದಿಬ್ರೂಘರ್, ತೇಜ್ಪುರ್, ತಿನ್ಸುಕಿಯಾ, ಗೋಲಾಘಾಟ್, ಜೋರಾಹಾಟ್, ಗುವಾಹಟಿ" ಎಂದು ಅವರು ದೊಡ್ಡ ಪಟ್ಟಣಗಳು ಮತ್ತು ನಗರಗಳ ಹೆಸರುಗಳನ್ನು ಹೇಳುತ್ತಾರೆ.

ಅಸ್ಸಾಮಿನಲ್ಲಿ ಅವರು ತಯಾರಿಸುವ ಬಿದಿರಿನ ಬುಟ್ಟಿಗಳನ್ನು ಧೋಕೊ ಎಂದು ಕರೆಯಲಾಗುತ್ತದೆ. ಡುಲಿಗೆ ಹೋಲಿಸಿದರೆ, ಡೋಕೊ ಎತ್ತರದಲ್ಲಿ ಬಹಳ ಚಿಕ್ಕದು - ಎಲ್ಲವೂ ಮೂರು ಅಡಿಗಳಷ್ಟು ಎತ್ತರ. ಟೀ ಎಲೆಗಳನ್ನು ಕೀಳುವಾಗ ಇವುಗಳನ್ನು ಬಳಸಲಾಗುತ್ತದೆ. ಅಲ್ಲಿ ಅವರು ತಿಂಗಳಿಗೆ 400 ಬುಟ್ಟಿಗಳನ್ನು ತಯಾರಿಸುತ್ತಾರೆ, ಕೆಲಸದಲ್ಲಿರುವಾಗ ಬೇಡಿಕೆಯನ್ನು ಸಲ್ಲಿಸುವ ಟೀ ತೋಟಗಳೇ ಅವರಿಗೆ ವಸತಿ ಮತ್ತು ಬಿದಿರನ್ನು ಒದಗಿಸುತ್ತವೆ.

"ಬಾನ್ಸ್ ಕಾ ಕಾಮ್ ಕಿಯಾ, ಗೋಬರ್ ಕಾ ಕಾಮ್ ಕಿಯಾ, ಮಾಟಿ ಕಾ ಕಾಮ್ ಕಿಯಾ, ಖೇತಿ ಮೇ ಕಾಮ್ ಕಿಯಾ, ಐಸ್ ಕ್ರೀಮ್ ಕಾ ಭಿ ಕಾಮ್ ಕಿಯಾ... [ಬಿದಿರಿನ ಕೆಲಸ ಮಾಡಿದ್ದೇನೆ, ಜೇಡಿಮಣ್ಣಿನ ಕೆಲಸ ಮಾಡಿದ್ದೇನೆ, ಹಸುವಿನ ಗೊಬ್ಬರ ತೆಗೆಯುವ ಕೆಲಸ ಮಾಡಿದ್ದೇನೆ, ಕೃಷಿ ಮಾಡುತ್ತಿದ್ದೇನೆ ಮತ್ತು ಜೀವನೋಪಾಯಕ್ಕಾಗಿ ಐಸ್ ಕ್ರೀಮ್ ಸಹ ಮಾರಾಟ ಮಾಡಿದ್ದೇನೆ.) ಎಂದು ಬಹುಮುಖ ಪ್ರತಿಭೆಯ ಬಬನ್ ತಾನು ವರ್ಷವಿಡೀ ಮಾಡುವ ಕೆಲಸವನ್ನು ವಿವರಿಸುತ್ತಾ ಹೇಳುತ್ತಾರೆ.

ಅಸ್ಸಾಮಿನಲ್ಲಿ ಬುಟ್ಟಿಗೆ ಬೇಡಿಕೆ ಕಡಿಮೆಯಾದರೆ, ಅವರು ರಾಜಸ್ಥಾನ ಅಥವಾ ದೆಹಲಿಗೆ ಹೋಗಿ ಬೀದಿ ವ್ಯಾಪಾರಿಯಾಗಿ ಐಸ್ ಕ್ರೀಮ್ ಮಾರುತ್ತಾರೆ. ಅವರ ಊರಿನ ಹಲವರು ಈ ರೀತಿ ವ್ಯಾಪಾರದಲ್ಲಿ ತೊಡಗಿದ್ದು, ಅಗತ್ಯವಿದ್ದಾಗ ಹೋಗಿ ಇವರು ಅವರನ್ನು ಸೇರಿಕೊಳ್ಳುತ್ತಾರೆ. "ರಾಜಸ್ಥಾನ, ದೆಹಲಿ, ಅಸ್ಸಾಂ, ಬಂಗಾಳ - ನನ್ನ ಇಡೀ ಜೀವನವನ್ನು ಈ ಸ್ಥಳಗಳ ನಡುವೆ ಕಳೆದಿದ್ದೇನೆ" ಎಂದು ಅವರು ಹೇಳುತ್ತಾರೆ.

PHOTO • Shreya Kanoi
PHOTO • Shreya Kanoi

ಎಡ: ಡುಲಿಯ ತಳವನ್ನು ಸಿದ್ಧಪಡಿಸಲು, ಬಬನ್ ಎಚ್ಚರಿಕೆಯಿಂದ ಲೆಕ್ಕಾಚಾರಗಳನ್ನು ಮಾಡಬೇಕಾಗುತ್ತದೆ ಮತ್ತು ಇದು ಕರಗತ ಮಾಡಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುವ ಕೌಶಲ. ತಳವು ಬುಟ್ಟಿಯ ಸಮತೋಲನವನ್ನು ಕಾಪಾಡಿಕೊಳ್ಳುತ್ತದೆ. ಬಲ: ಬಬನ್ ಪೂರ್ಣಗೊಳಿಸಿದ ಡುಲಿಯನ್ನು ತಲುಪಿಸಲು ಸಿದ್ಧರಾಗಿದ್ದಾರೆ. ಪರಿಣಿತ ಬುಟ್ಟಿ ನೇಯುವವರಾದ ಅವರಿಗೆ ಒಂದು ಬುಟ್ಟಿ ತಯಾರಿಸಲು ಕೇವಲ ಒಂದು ದಿನ ಸಾಕು

ಕುಶಲಕರ್ಮಿಯಾಗಿ ದಶಕಗಳನ್ನು ಕಳೆದ ನಂತರವೂ, ಬಬನ್ ಅವರ ಬಳಿ ಕರಕುಶಲ ಅಭಿವೃದ್ಧಿ ಆಯುಕ್ತರ ಕಚೇರಿ (ಜವಳಿ ಸಚಿವಾಲಯದ ಅಡಿಯಲ್ಲಿ) ನೀಡುವ ಕುಶಲಕರ್ಮಿ ಗುರುತಿನ ಚೀಟಿ (ಪೆಹಚಾನ್ ಕಾರ್ಡ್) ಇಲ್ಲ. ಈ ಕಾರ್ಡ್ ಕುಶಲಕರ್ಮಿಗೆ ವಿವಿಧ ಸರ್ಕಾರಿ ಯೋಜನೆಗಳನ್ನು ಪಡೆಯಲು ಮತ್ತು ಸಾಲ, ಪಿಂಚಣಿ, ಕರಕುಶಲತೆಯನ್ನು ಗುರುತಿಸುವ ಪ್ರಶಸ್ತಿಗಳಿಗೆ ಅರ್ಹತೆ, ಜೊತೆಗೆ ಕೌಶಲ ಉನ್ನತೀಕರಣ ಮತ್ತು ಮೂಲಸೌಕರ್ಯ ಬೆಂಬಲವನ್ನು ಪಡೆಯಲು ಔಪಚಾರಿಕ ಗುರುತನ್ನು ನೀಡುತ್ತದೆ.

"ನಮ್ಮಲ್ಲಿ ಬಹಳಷ್ಟು (ಕರಕುಶಲ ವ್ಯಕ್ತಿಗಳು) ಇದ್ದಾರೆ, ಆದರೆ ಬಡವರ ಬಗ್ಗೆ ಯಾರು ಚಿಂತಿಸುತ್ತಾರೆ? ಪ್ರತಿಯೊಬ್ಬರೂ ತಮ್ಮ ಸ್ವಂತ ಜೇಬನ್ನು ಅವಲಂಬಿಸಿ ಬದುಕುತ್ತಿದ್ದಾರೆ" ಎಂದು ಬ್ಯಾಂಕ್ ಖಾತೆಯನ್ನು ಸಹ ಹೊಂದಿರದ ಬಬನ್ ಹೇಳುತ್ತಾರೆ. "ನಾನು ನನ್ನ ಎಂಟು ಮಕ್ಕಳನ್ನು ಬೆಳೆಸಿದ್ದೇನೆ. ನನ್ನಲ್ಲಿ ಶಕ್ತಿ ಉಳಿದಿರುವವರೆಗೆ ದುಡಿದು ಸಂಪಾದಿಸುತ್ತೇನೆ ಮತ್ತು ತಿನ್ನುತ್ತೇನೆ. ಇದಕ್ಕಿಂತ ನನಗೆ ಇನ್ನೇನು ಬೇಕು? ಇದಕ್ಕಿಂರ ಹೆಚ್ಚಿಗೆ ಏನು ಮಾಡಲು ಸಾಧ್ಯ?"

ಕಥಾನಕವನ್ನು ಮೃಣಾಲಿನಿ ಮುಖರ್ಜಿ ಫೌಂಡೇಶನ್ (ಎಂಎಂಎಫ್) ಫೆಲೋಶಿಪ್ ಬೆಂಬಲದೊಂದಿಗೆ ತಯಾರಿಸಲಾಗಿದೆ.

ಅನುವಾದ: ಶಂಕರ. ಎನ್. ಕೆಂಚನೂರು

Shreya Kanoi

Shreya Kanoi is a design researcher working at the intersection of crafts and livelihood. She is a 2023 PARI-MMF fellow.

Other stories by Shreya Kanoi

Gagan Narhe is a professor of communication design. He has served as a visual journalist for BBC South Asia.

Other stories by Gagan Narhe
Photographs : Shreya Kanoi

Shreya Kanoi is a design researcher working at the intersection of crafts and livelihood. She is a 2023 PARI-MMF fellow.

Other stories by Shreya Kanoi
Editor : Priti David

Priti David is the Executive Editor of PARI. She writes on forests, Adivasis and livelihoods. Priti also leads the Education section of PARI and works with schools and colleges to bring rural issues into the classroom and curriculum.

Other stories by Priti David
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru