ಒಂದು ಉತ್ತಮವಾಗಿ ನೇಯಲ್ಪಟ್ಟ ಕಮಲ್‌ಕೊಶ್‌ ಚಾಪೆಯನ್ನು ಎಲ್ಲೋ ಕೆಲವರಷ್ಟೇ ಗುರುತಿಸಿ ಹೊಗಳಬಲ್ಲರು.

ಮತ್ತೆ ಅದನ್ನು ನೇಯಲು ಕೆಲವೇ ಕೆಲವರಿಗಷ್ಟೇ ಸಾಧ್ಯ.

ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯಲ್ಲಿ ತಯಾರಿಸಲಾಗುವ ಈ ವಿವರಪೂರ್ಣ ಬೆತ್ತದ ಚಾಪೆಗಳನ್ನು ಗಂಜಿ ಹಾಕಿದ ಬೆತ್ತದ ಎಳೆ ಬಳಸಿ ನೇಯಲಾಗುತ್ತದೆ. ಈ ಚಾಪೆಗಳ ಮೇಲಿನ ಸಾಂಸ್ಕೃತಿಕ ಲಕ್ಷಣಗಳು ಈ ಚಾಪೆಯನ್ನು ಇತರ ಚಾಪೆಗಳಿಂಗಿಂತಲೂ ಭಿನ್ನವೆನ್ನಿಸುವಂತೆ ಮಾಡುತ್ತವೆ.

"ಸಾಂಪ್ರದಾಯಿಕ ಕಮಲಕೊಶ್‌ ಅನ್ನು ಕೋಲಾ ಗಾಚ್ [ಬಾಳೆ ಗಿಡ], ಮಯೂರ್ [ನವಿಲು], ಮಂಗಲ್ ಘಾಟ್ [ತೆಂಗಿನಕಾಯಿ ಹೊಂದಿರುವ ಕಲಶ], ಸ್ವಸ್ತಿಕ್ [ಯೋಗಕ್ಷೇಮದ ಸಂಕೇತ] ನಂತಹ ಮಂಗಳಕರ ಅಂಶಗಳಿಂದ ಅಲಂಕರಿಸಲಾಗುತ್ತದೆ" ಎಂದು ಪ್ರಭತಿ ಧರ್ ಹೇಳುತ್ತಾರೆ.

ಇವುಗಳನ್ನು ಚಾಪೆಯ ಮೇಲೆ ಮೂಡಿಸಬಲ್ಲ ಬೆರಳೆಣಿಕೆಯಷ್ಟು ಕಮಲಕೊಶ್ ನೇಕಾರರಲ್ಲಿ ಪ್ರಭತಿ ಕೂಡ ಒಬ್ಬರು, ಮತ್ತು ಅವರು ತನಗೆ 10 ವರ್ಷವಿರುವಾಗ ಈ ನೇಯ್ಗೆಯನ್ನು ಆರಂಭಿಸಿದರು. "ಈ ಹಳ್ಳಿಯ [ಘೇಗಿರ್‌ಘಾಟ್ ಗ್ರಾಮ] ಪ್ರತಿಯೊಬ್ಬರೂ ಚಿಕ್ಕ ವಯಸ್ಸಿನಿಂದಲೇ ಚಾಪೆ ನೇಯಲು ಆರಂಭಿಸುತ್ತಾರೆ" ಎಂದು 36 ವರ್ಷದ ಅವರು ಹೇಳುತ್ತಾರೆ. "ನನ್ನ ತಾಯಿ ಕಮಲಕೊಶ್ವನ್ನು ಭಾಗಶಃ ಮಾತ್ರ ನೇಯಬಲ್ಲರು, ಆದರೆ ತಂದೆಯವರಿಗೆ ವಿನ್ಯಾಸದ ಕುರಿತು ಉತ್ತಮ ಗ್ರಹಿಕೆಯಿತ್ತು ಮತ್ತು 'ಈ ವಿನ್ಯಾಸವನ್ನು ಈ ರೀತಿ ನೇಯ್ಗೆ ಮಾಡಲು ಪ್ರಯತ್ನಿಸಿ' ಎಂದು ಚೆನ್ನಾಗಿ ವಿವರಿಸುತ್ತಿದ್ದರು. ಅವರಿಗೆ ನೇಯ್ಗೆ ಮಾಡಲು ಸಾಧ್ಯವಿರಲಿಲ್ಲವಾದರೂ ಅವರು ಅವರ ವಿವರಪೂರ್ಣ ಹೇಳಿಕೊಡುವಿಕೆ ತನಗೆ ಇದನ್ನು ಕಲಿಯುವಲ್ಲಿ ಹೆಚ್ಚು ಸಹಾಯ ಮಾಡಿತು ಎನ್ನುವುದು ಪ್ರಭತಿಯವರ ನಂಬಿಕೆ.

ನಾವು ಘೇಗಿರ್‌ಘಾಟ್‌ ಗ್ರಾಮದಲ್ಲಿರುವ ಪ್ರಭತಿಯವರ ಮನೆಯ ವರಾಂಡದಲ್ಲಿ ಕುಳಿತಿದ್ದೆವು. ಇಲ್ಲಿನ ಜನರು ಸಾಮನ್ಯವಾಗಿ ಮುಚ್ಚಿದ ಮಾಡಿರುವ ಅಂಗಳವನ್ನು ತಮ್ಮ ಕೆಲಸಕ್ಕೆ ಆಯ್ದುಕೊಳ್ಳುತ್ತಾರೆ. ಅವರ ಸುತ್ತ ಅವರ ಕುಟುಂಬವೂ ಇತ್ತು. ಅವರೆಲ್ಲರೂ ಪ್ರಭತಿಯವರ ನೇಯ್ಗೆಗೆ ಸಂಬಂಧಿಸಿದ ವಿವಿಧ ಕೆಲಸಗಳಿಗೆ ಸಹಾಯ ಮಾಡುತ್ತಾರೆ. ಚಾಪೆಯ ಎಳೆಗಳ ಒಳಗೆ ಮೂಡಬೇಕಿರುವ ಚಿತ್ರಗಳ ನೇಯ್ಗೆಯನ್ನು ಮಾತ್ರ ತಮ್ಮದೇ ಪರಿಕಲ್ಪನೆಯನ್ನು ಗಳಸಿ ಅವರೇ ಮಾಡಿದರು. “ಇದನ್ನು ನಮ್ಮ ನೆನಪಿನಿಂದ ಮಾಡುವ ಮೂಲಕ ಅಭ್ಯಾಸ ಮಾಡಿಕೊಂಡಿದ್ದೇವೆ” ಎಂದು ಅವರು ತಮ್ಮ ವಿನ್ಯಾಸ ಪ್ರಕ್ರಿಯೆಯ ಬಗ್ಗೆ ಹೇಳುತ್ತಾರೆ.

PHOTO • Shreya Kanoi
PHOTO • Shreya Kanoi

ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯ ಕಮಲಕೊಶ್ ನೇಯಬಲ್ಲ ಬೆರಳೆಣಿಕೆಯಷ್ಟು ಜನರಲ್ಲಿ ಪ್ರಭತಿ ಧರ್ ಕೂಡ ಒಬ್ಬರು. ಘೇಗಿರ್‌ಘಾಟ್ ಗ್ರಾಮದಲ್ಲಿರುವ ಅವರ ಮನೆಯ ಜಗಲಿ ಮತ್ತು ಅಂಗಳದಲ್ಲಿ ಅವರು ಮತ್ತು ಅವರ ಕುಟುಂಬದವರು ಬೆತ್ತದ ಚಾಪೆಗಳನ್ನು ನೇಯುವ ಕೆಲಸವನ್ನು ಮಾಡುತ್ತಾರೆ

PHOTO • Shreya Kanoi

ಪ್ರಭತಿ ಮತ್ತು ಅವರ ಪತಿ ಮನೋರಂಜನ್ ಸಿದ್ಧಪಡಿಸಿದ ಚಾಪೆ

ಕೃಷ್ಣ ಚಂದ್ರ ಭೌಮಿಕ್ ಪಕ್ಕದ ಧಲಿಯಾಬರಿ ಪಟ್ಟಣದಲ್ಲಿ ವ್ಯಾಪಾರಿಯಾಗಿದ್ದು, ಅವರು ಆಗಾಗ ಮಾರಾಟಕ್ಕಾಗಿ ಪ್ರಭತಿಯವರಿಂದ ಕಮಲಕೊಶ್ ಚಾಪೆಯನ್ನು ಕೊಳ್ಳುತ್ತಾರೆ. "ಕಮಲ್‌ಕೋಶ್ ಹೋಲೋ ಏಕ್ಟಿ ಶೌಕೀನ್ ಜಿನೀಶ್. [ಕಮಲ್ಕೋಶ ರಸಿಕರಿಂದ ಗೌರವಿಸಲ್ಪಡುವ ವಸ್ತು.] ಉತ್ತಮ ಪಾಟಿಯ ಮೌಲ್ಯ ಬಂಗಾಳಿ ವ್ಯಕ್ತಿಗಷ್ಟೇ ಗೊತ್ತಿರುತ್ತದೆ. ಹೀಗಾಗಿ ಅವರೇ ಉತ್ತಮ ಚಾಪೆಗಳ ಖರೀದಿದಾರರು" ಎಂದು ಅವರು ಪರಿಗೆ ತಿಳಿಸಿದರು.

ಧರ್ ಕುಟುಂಬವು ಘೇಗಿರ್‌ಘಾಟ್ ಗ್ರಾಮದಲ್ಲಿ ವಾಸಿಸುತ್ತಿದೆ, ಇದು ಬಹುತೇಕ ನೇಕಾರರೇ ವಾಸವಿರುವ ಊರು, ಹಾಗೆ ನೋಡಿದರೆ ಇಡೀ ಕೂಚ್ ಬೆಹಾರ್-1 ಬ್ಲಾಕ್ ನೇಕಾರರ ನೆಲೆ. ಇವರು ಬಾಂಗ್ಲಾದೇಶದಲ್ಲಿ ಬೇರುಗಳನ್ನು ಹೊಂದಿರುವ ಪಾಟಿ ನೇಕಾರರು, ಇಲ್ಲಿನ ಪ್ರತಿಯೊಬ್ಬರೂ ತಾವು ಬಣದ ಸ್ಥಳಕ್ಕೆ ಅನುಗುಣವಾಗಿ ಭಿನ್ನ ಶೈಲಿ ಮತ್ತು ಕರಕುಶಲತೆಯನ್ನು ಹೊಂದಿದ್ದಾರೆ. ಆದರೆ ಅದು ಮತ್ತೊಂದು ಕಥೆಯಾಗಿದ್ದು ಶೀಘ್ರದಲ್ಲೇ ಪ್ರಕಟವಾಗಲಿದೆ.

ಚಾಪೆಗಳ ನೇಯ್ಗೆಯನ್ನು ವಿಶಾಲವಾಗಿ ಪಾಟಿ (ಪಟ್ಟಿ) ನೇಯ್ಗೆ ಎಂದು ವರ್ಗೀಕರಿಸಲಾಗಿದೆ ಮತ್ತು ಅವುಗಳ ಶ್ರೇಣಿ ಮೋಟಾ ಪಾಟಿ (ಒರಟು ಚಾಪೆಗಳು) ಯಿಂದ ಹಿಡಿದು ಅತ್ಯುತ್ತಮ ಮತ್ತು ಅಪರೂಪದ ಕಮಲಕೊಶ್‌ ತನಕ ಇರುತ್ತವೆ. ಇದಕ್ಕೆ ಬಳಸಲಾಗುವ ಬೆತ್ತ (ಶುಮನ್ನಿಯಾಂಥಸ್ ಡಿಕೋಟೋಮಸ್) ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಪ್ರದೇಶದಲ್ಲಿ ಕಂಡುಬರುವ ಸ್ಥಳೀಯ ತಳಿಯಾಗಿದೆ.

ಕಮಲಕೊಶ್‌ ಚಾಪೆಗಳನ್ನು ತಯಾರಿಸಲು ಬೆತ್ತದ ಹೊರ ಪದರವನ್ನು ಬೆಟ್‌ ಎಂದು ಕರೆಯಲಾಗುವ ತೆಳುವಾದ ಪಟ್ಟಿಗಳಾಗಿ ಎಚ್ಚರಿಕೆಯಿಂದ ಕತ್ತರಿಸಬೇಕು. ನಂತರ ಅವುಗಳಿಗೆ ಹೆಚ್ಚುವರಿ ಹೊಳಪು ನೀಡಲು ಮತ್ತು ಬಿಳಿ ಬಣ್ಣ ತರಲು ಪಟ್ಟಿಗಳನ್ನು ಗಂಜಿಯಲ್ಲಿ ಬೇಯಿಸಲಾಗುತ್ತದೆ. ಈ ಪ್ರಕ್ರಿಯೆ ಅದಕ್ಕೆ ಉತ್ತಮ ರೀತಿಯಲ್ಲಿ ಡೈಯಿಂಗ್‌ ಮಾಡಲು ಸಹಾಯ ಮಾಡುತ್ತದೆ.

ಈ ನಿರ್ಣಾಯಕ ಪೂರ್ವಸಿದ್ಧತಾ ಕೆಲಸವನ್ನು ಅವರ ಪತಿ ಮನೋರಂಜನ್ ಧರ್ ಮಾಡುತ್ತಾರೆ. ಮದುವೆಯಾದ ಹೊಸದರಲ್ಲಿ ಅವರು ತನ್ನ ಗಂಡನ ಬಳಿ ನನಗೆ ಚಾಪೆ ನೇಯಲು ಬರುತ್ತದೆ ಆದರೆ ಅದಕ್ಕೆ ಕಚ್ಚಾ ವಸ್ತುಗಳ ಅಗತ್ಯವಿದೆ ಎಂದು ಹೇಳಿದ್ದನ್ನು ನೆನಪಿಸಿಕೊಳ್ಳುತ್ತಾರೆ. “ನಂತರ ನನ್ನ ಗಂಡ ಕಮಲಕೊಶ್‌ ನೇಯಲು ಬೇಕಾಗುವ ಉತ್ತಮ ಬೆತ್ತದ ಪಟ್ಟಿಗಳನ್ನು ಕತ್ತರಿಸಲು ಕಲಿತರು.”

PHOTO • Shreya Kanoi
PHOTO • Shreya Kanoi

ಎಡ: ಹೊಸದಾಗಿ ತಯಾರಿಸಿದ ಸೀತಲ್‌ಪಾಟಿಯನ್ನು ಪ್ರಭತಿಯವರ ಡೈಯಿಂಗ್ ಶೆಡ್ ಗೋಡೆಗೆ ಒರಗಿಸಿ ಇಟ್ಟಿರುವುದು. ಅದರ ಪಕ್ಕದಲ್ಲಿ 'ಪಾಟಿಬೆಟ್' ಎಂದು ಕರೆಯಲ್ಪಡುವ ಹೊಸದಾಗಿ ಕೊಯ್ಲು ಮಾಡಿದ ಬೆತ್ತದ ಗೆಣ್ಣುಗಳನ್ನು ಜೋಡಿಸಲಾಗಿದೆ, ಇದನ್ನು ಚಾಪೆಗಳನ್ನು ನೇಯಲು ಬಳಸಲಾಗುತ್ತದೆ. ಬಲ: ಕುದಿಸುವ ಮತ್ತು ಬಣ್ಣ ಹಾಕುವ ಪ್ರಕ್ರಿಯೆಗಳಿಗಾಗಿ ಬೆತ್ತದ ಪಟ್ಟಿಗಳನ್ನು ಈ ರೀತಿ ಜೋಡಿಸಲಾಗುತ್ತದೆ

PHOTO • Shreya Kanoi
PHOTO • Shreya Kanoi

ಪ್ರಭತಿ (ಎಡ) ಗಂಜಿ ಹಚ್ಚಲಾದ ಕಮಲಕೊಶ್‌ಗೆ ಬಣ್ಣ ಹಾಕುತ್ತಿದ್ದಾರೆ. ನಂತರ ಅವುಗಳನ್ನು ಒಣಗಲು ಇಡುತ್ತಾರೆ (ಬಲ)

ಪ್ರಭತಿ ನಮ್ಮೊಂದಿಗೆ ಮಾತನಾಡುತ್ತಿದ್ದರೆ ನಾವು ಅವರ ಕೈಗಳನ್ನೇ ಗಮನಿಸುತ್ತಿದ್ದೆವು. ಅವರ ಚುರುಕಾದ ಬೆರಳುಗಳ ನಡುವೆ ಇದ್ದ ಬೆತ್ತದ ಪಟ್ಟಿಗಳ ಸದ್ದು ಮಾತ್ರವೇ ಕೇಳುತ್ತಿತ್ತು. ಅದು ಹತ್ತಿರ ಹತ್ತಿರದಲ್ಲೇ ಮನೆಗಳು ಇರುವ ಊರು. ಆಗೊಮ್ಮೆ ಈಗೊಮ್ಮೆ ಸಾಗುವ ವಾಹನಗಳ ಸದ್ದು ಮಾತ್ರವೇ ಇಲ್ಲಿ ಕೇಳುತ್ತಿತ್ತು. ಮನೆಯ ಸುತ್ತಲೂ ಅಡಿಕೆ ಹಾಗೂ ಬಾಳೆ ಗಿಡಗಳಿದ್ದವು. ಎಳು ಅಡಿ ಎತ್ತರದ ಬೆತ್ತದ ಕಾವಲು ಕೂಡಾ ಮನೆಯಿಂದ ಕಾಣಿಸುತ್ತಿತ್ತು.

ಈ ನುರಿತ ಕುಶಲಕರ್ಮಿ ಚಾಪೆ ನೇಯುವಾಗ ಸಾಂಪ್ರದಾಯಿಕ ಕೈ ಅಳತೆಗಳನ್ನೇ ಬಳಸುತ್ತಾರೆ. ʼಏಕ್‌ ಹಾತ್‌ʼ ಎಂದರೆ 18 ಇಂಚುಗಳು. ಎರಡೂವರೆ ಕೈಗಳ ಅಗಲ ಮತ್ತು ನಾಲ್ಕು ಕೈಗಳ ಉದ್ದದ ಚಾಪೆಯು ಸರಿಸುಮಾರು ನಾಲ್ಕರಿಂದ ಆರು ಅಡಿಗಳಷ್ಟಿರುತ್ತದೆ.

ಪ್ರಭತಿ ತನ್ನ ಮೊಬೈಲಿನಲ್ಲಿದ್ದ ಫೋಟೊಗಳನ್ನು ನಮಗೆ ತೋರಿಸಲೆಂದು ತಮ್ಮ ಕೆಲಸ ನಿಲ್ಲಿಸಿದರು. ಅದರಲ್ಲಿದ್ದ ಕೆಲವು ಕಮಲ್‌ಕೊಶ್‌ ಚಿತ್ರಗಳನ್ನು ನಮಗೆ ತೋರಿಸಿದರು. “ಕಮಲ್‌ಕೊಶ್‌ ಚಾಪೆಗಳನ್ನು ಬೇಡಿಕೆಯಿದ್ದಾಗ ಮಾತ್ರ ತಯಾರಿಸಲಾಗುತ್ತದೆ. ಸ್ಥಳೀಯ ವ್ಯಾಪಾರಿಗಳು ಬೇಡಿಕೆ ಸಲ್ಲಿಸಿದಾಗ ನಾವು ನೇಯ್ದು ಕೊಡುತ್ತೇವೆ. ಈ ವಿಶೇಷ ಚಾಪೆಗಳು ನಿಮಗೆ ಹಾಟ್‌ [ವಾರದ ಸಂತೆ] ಯಲ್ಲಿ ಸಿಗುವುದಿಲ್ಲ.”

ಈಗ ಕಮಲಕೊಶ್ ಹೊಸದಾಗಿ ಚಾಪೆಗಳಲ್ಲಿ ಹೆಸರು ಮತ್ತು ತಾರೀಖುಗಳನ್ನು ನೇಯುವ ಟ್ರೆಂಡ್‌ ಕೂಡಾ ಬಂದಿದೆ.‌ “ಮದುವೆಗಾಗಿ ನಮಗೆ ಬೇಡಿಕೆ ಸಲ್ಲಿಸಿದವರು ಜೋಡಿಯ ಹೆಸರನ್ನು ಹೇಳುತ್ತಾರೆ. ನಾವು ಅದನ್ನು ಚಾಪೆಯ ಮೇಲೆ ಮೂಡಿಸುತ್ತೇವೆ. ಜೊತೆಗೆ ವಿಜಯದಶಮಿಗೆ ಶುಭ ಕೋರಲು ಬಳಸಲಾಗುವ ಶುಭೊ ಬಿಜೊಯ್‌ ಎನ್ನುವಂತಹ ಪದಗಳ ನೇಯ್ಗೆಗೂ ಬೇಡಿಕೆ ಬರುತ್ತದೆ.” ಇಂತಹ ಚಾಪೆಗಳನ್ನು ಮದುವೆ, ಹಬ್ಬ ಮುಂತಾದ ಶುಭ ಸಂದರ್ಭಗಳಲ್ಲಿ ಖರೀದಿಸಲಾಗುತ್ತದೆ. “ಚಾಪೆಯ ಮೇಲೆ ಬಂಗಾಳಿ ಅಕ್ಷರಗಳಿಗಿಂತಲೂ ಇಂಗ್ಲಿಷ್‌ ಅಕ್ಷರಗಳನ್ನು ಮೂಡಿಸುವುದು ಸುಲಭ.“ ಎನ್ನುತ್ತಾರೆ ಪ್ರಭತಿ. ಬಂಗಾಳಿಯಂತ ಓರೆ ಗೆರೆಯ ಅಕ್ಷರಗಳನ್ನು ಚಾಪೆಯ ಮೇಲೆ ಮೂಡಿಸುವುದು ಸವಾಲಿನ ಕೆಲಸ

PHOTO • Shreya Kanoi
PHOTO • Shreya Kanoi

ಮದುವೆಯ ಸಂಭ್ರಮವನ್ನು ಹೆಚ್ಚಿಸಲು ದಂಪತಿಗಳಿಗೆ ನವಿಲಿನ ಚಿತ್ರವಿರುವ ಚಾಪೆಯನ್ನು ಉಡುಗೊರೆಯಾಗಿ ಕೊಡಲಾಗುತ್ತದೆ

PHOTO • Shreya Kanoi

ಕೂಚ್ ಬೆಹಾರ್ ಘುಗುಮರಿಯಲ್ಲಿನ ಪಾಟಿ ಮ್ಯೂಸಿಯಂನರುವಲ್ಲಿ ಕಮಲ್ಕೊಶ್‌

ಕೂಚ್ ಬೆಹಾರ್-1 ಬ್ಲಾಕ್ ಪಾಟಿ ಶಿಲ್ಪಾ ಸಮಬೇ ಸಮಿತಿಯ ಕಾರ್ಯದರ್ಶಿ ಪ್ರದೀಪ್ ಕುಮಾರ್ ರೈ ಹೇಳುವಂತೆ ಇದೊಂದು ಅಪರೂಪದ ಕೌಶಲ. ಸ್ವತಃ ನೇಕಾರರಾಗಿರುವ ಅವರು ಹೇಳುತ್ತಾರೆ, "ಇಡೀ ಕೂಚ್ ಬೆಹಾರ್ ಜಿಲ್ಲೆಯಲ್ಲಿ ಸರಿಸುಮಾರು 10,000 ಚಾಪೆ ನೇಕಾರರಿದ್ದಾರೆ. ಆದರೂ, ಈ ಪ್ರದೇಶದಲ್ಲಿ ಹುಡುಕಿದರೂ 10-12 ಕಮಲಕೊಶ್ ನೇಕಾರರು ಸಿಗುವದಿಲ್ಲ.

ಈ ಸಮಿತಿ 1992ರಲ್ಲಿ ಪ್ರಾರಂಭವಾಯಿತು ಮತ್ತು ಪ್ರಸ್ತುತ ಅದು 300 ನೇಕಾರರನ್ನು ಹೊಂದಿದೆ. ಇದು ಈ ಪ್ರದೇಶದಲ್ಲಿನ ಚಾಪೆ ನೇಯ್ಗೆಗಾರರ ಅಗ್ರಗಣ್ಯ ಸಹಕಾರಿ ಸಂಘ ಮತ್ತು ಘುಗುಮರಿಯಲ್ಲಿ ವಾರಕ್ಕೆರಡು ಬಾರಿ ಪಾಟಿ ಹಾಟ್ (ವಾರದ ಚಾಪೆ ಸಂತೆ) ನಡೆಸುತ್ತದೆ - ಕೂಚ್ ಬೆಹಾರ್ ಪ್ರದೇಶದ ಏಕೈಕ ಚಾಪೆಗೆ ಮೀಸಲಾದ ಮಾರುಕಟ್ಟೆ. ಈ ಸಂತೆಯಲ್ಲಿ ಸುಮಾರು ಒಂದು ಸಾವಿರ ನೇಕಾರರು ಮತ್ತು ಸುಮಾರು 100 ವ್ಯಾಪಾರಿಗಳು ಭಾಗವಹಿಸುತ್ತಾರೆ.

ಈ ಪ್ರದೇಶದ ಕೊನೆಯ ಕೆಲವು ಕಮಲಕೊಶ್‌ ಚಾಪೆ ನೇಕಾರರಲ್ಲಿ ಒಬ್ಬರು. ಮತ್ತು ಅವರು ಈ ಹೊಣೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. “ನನ್ನ ಅಮ್ಮ ಪ್ರತಿದಿನ ನೇಯ್ಗೆ ಕೆಲಸ ಮಾಡುತ್ತಾರೆ. ಒಂದು ದಿನವೂ ಅವರು ರಜೆ ತೆಗೆದುಕೊಳ್ಳುವುದಿಲ್ಲ. ಸಣ್ಣ ತಿರುಗಾಟ ಅಥವಾ ಅಜ್ಜನ ಮನೆಗೆ ಹೋಗಬೇಕಿರುವಾಗಲಷ್ಟೇ ಅವರು ಅವರು ನಮ್ಮೊಂದಿಗೆ ಬರುತ್ತಾರೆ" ಎಂದು ಅವರ ಮಗಳು ಮಂದಿರಾ ಹೇಳುತ್ತಾರೆ, ಅವರು ಕೇವಲ ಐದು ವರ್ಷದವರಾಗಿದ್ದಾಗಿನಿಂದ ಅಮ್ಮನ ಕೆಲಸ ನೋಡುವ ಮೂಲಕ ಈ ಕೌಶಲವನ್ನು ಕಲಿತಿದ್ದಾರೆ.

ಪ್ರಭತಿ ಮತ್ತು ಮನೋರಂಜನ್ ದಂಪತಿಗೆ 15 ವರ್ಷದ ಮಂದಿರಾ ಮತ್ತು 7 ವರ್ಷದ ಪಿಯೂಷ್ (ಪ್ರೀತಿಯಿಂದ ಟೋಜೊ ಎಂದು ಕರೆಯಲಾಗುತ್ತದೆ) ಎಂಬ ಇಬ್ಬರು ಮಕ್ಕಳಿದ್ದಾರೆ. ಇಬ್ಬರೂ ಶಾಲಾ ಸಮಯದ ಹೊರಗೆ ಸಿಗುವ ಸಮಯದಲ್ಲಿ ಕರಕುಶಲತೆಯನ್ನು ಸಕ್ರಿಯವಾಗಿ ಕಲಿಯುತ್ತಿದ್ದಾರೆ. ಮಂದಿರಾ ಪ್ರಭತಿಯವರ ಹೆತ್ತವರೊಂದಿಗೆ ಉಳಿದಿದ್ದು ನೇಯ್ಗೆ ಕೆಲಸದಲ್ಲಿ ತಾಯಿಗೆ ಸಹಾಯ ಮಾಡಲು ವಾರಕ್ಕೆ ಎರಡು ಬಾರಿ ಮನೆಗೆ ಭೇಟಿ ನೀಡುತ್ತಾರೆ. ಪುಟ್ಟ ಉತ್ಸಾಹಿ ಟೋಜೊ ಕೂಡ ಗಂಭೀರವಾಗಿ ಇದನ್ನು ಕಲಿಯುತ್ತಿದ್ದಾನೆ, ಮತ್ತು ನೇಯ್ಗೆಗಾಗಿ ಕಬ್ಬಿನ ಪಟ್ಟಿಗಳನ್ನು ಪ್ರಾಮಾಣಿಕವಾಗಿ ಸಿದ್ಧಪಡಿಸುತ್ತಾನೆ. ಸುತ್ತಮುತ್ತಲಿನ ಸ್ನೇಹಿತರು ಕ್ರಿಕೆಟ್ ಆಡುತ್ತಿರುವಾಗ, ಅವನು ಕೆಲಸ ಮಾಡುತ್ತಿರುತ್ತಾನೆ.

PHOTO • Shreya Kanoi
PHOTO • Shreya Kanoi

ಎಡ: ತಾಯಿ ಪ್ರಭತಿ ಮತ್ತು ಮಗಳು ಮಂದಿರಾ ಬೆಳಗ್ಗೆ ಆಚರಣೆಯೆನ್ನುವಂತೆ ಒಟ್ಟಿಗೆ ನೇಯ್ಗೆ ಮಾಡುತ್ತಾರೆ. ಅವರ ಪಿಯೂಷ್‌ ಬೆತ್ತವನ್ನು ಕತ್ತರಿಸುತ್ತಿದ್ದಾನೆ. ಈ ಪ್ರಕ್ರಿಯೆಯನ್ನು ಬೆಟ್ ಶೋಲೈ ಎಂದು ಕರೆಯಲಾಗುತ್ತದೆ. ಅವನ ಗೆಳೆಯ ಕ್ರಿಕೆಟ್‌ ಆಡಲು ಹೋಗಲೆಂದು ಗೆಳಯನ ಕೆಲಸ ಮುಗಿಯುವದನ್ನು ಕಾಯುತ್ತಿದ್ದಾನೆ

PHOTO • Shreya Kanoi
PHOTO • Shreya Kanoi

ಎಡ: ನೆರೆಹೊರೆಯ ಮಕ್ಕಳು ಕಥೆ ಹೇಳುವ ಚಾಪೆಗಳನ್ನು ನೇಯುವುದನ್ನು ಕಲಿಯಲು ಪ್ರಭತಿಯವರ ಮನೆಗೆ ಬರುತ್ತಾರೆ. ಗೀತಾಂಜಲಿ ಭೌಮಿಕ್, ಅಂಕಿತಾ ದಾಸ್ ಮತ್ತು ಮಂದಿರಾ ಧರ್ (ಎಡದಿಂದ ಬಲಕ್ಕೆ) ಚಾಪೆಯ ಬದಿಗಳನ್ನು ನೇಯ್ಗೆ ಮಾಡುವ ಮೂಲಕ ಪ್ರಭತಿಯವರಿಗೆ ಸಹಾಯ ಮಾಡುತ್ತಿದ್ದಾರೆ. ಬಲ: ಪ್ರಭತಿಯವರ ಪಾಟಿ ನೇಯ್ಗೆ ಕುಟುಂಬ: ಪತಿ ಮನೋರಂಜನ್ ಧರ್, ಮಗ ಪಿಯೂಷ್ ಧರ್; ಮಗಳು ಮಂದಿರಾ ಧರ್, ಪ್ರಭತಿ ಧರ್ ಮತ್ತು ಅವರ ನೆರೆಮನೆಯ ಅಂಕಿತಾ ದಾಸ್

ನೆರೆಹೊರೆಯ ಮಕ್ಕಳು ಪ್ರಭತಿಯವರ ಬಳಿ ನೇಯ್ಗೆ ಕಲಿಯಲು ಬರುತ್ತಾರೆ. ಈ ಕಲೆ ಪ್ರಯೋಗಕ್ಕೆ ಅವಕಾಶ ನೀಡುತ್ತದೆ ಎನ್ನುವುದು ಅವರ ಅಭಿಪ್ರಾಯ. “ನನ್ನ ನೆರೆ ಮನೆಯವರ ಮಗಳು ಕಾಕಿ ನನಗೂ ಕಲಿಸಿ” ಎಂದು ಕೇಳಿಕೊಂಡಳು. ಅವರ ಮನೆ ರಜಾದಿನಗಳಲ್ಲಿ ಮತ್ತು ವಾರಾಂತ್ಯಗಳಲ್ಲಿ ಸೃಜನಶೀಲ ಸ್ಥಳವಾಗಿ ಮಾರ್ಪಾಡಾಗುತ್ತದೆ. “ಅವರು ಚಾಪೆಯಲ್ಲಿ ಮರ ಮತ್ತು ನವಿಲುಗಳನ್ನು ನೇಯುವುದನ್ನು ಕಲಿಯಲು ಉತ್ಸುಕರಾಗಿದ್ದಾರೆ. ಆದರೆ ಈಗಲೇ ಅವರು ಅದನ್ನು ಮಾಡಲು ಸಾಧ್ಯವಿಲ್ಲ. ಹೀಗಾಗಿ ನಾನು ಮೊದಲು ಅವರಿಗೆ ಚಾಪೆಯ ಅಂಚುಗಳನ್ನು ನೇಯಲು ಹೇಳುತ್ತೇನೆ. ಜೊತೆಗೆ ನಾನು ನೇಯುವಾಗ ಅದನ್ನು ಗಮನಿಸುವಂತೆಯೂ ಹೇಳುತ್ತೇನೆ. ಮುಂದೆ ನಿಧಾನವಾಗಿ ಅವರಿಗೆ ಅದನ್ನೂ ಕಲಿಸುತ್ತೇನೆ” ಎಂದು ಅವರು ಹೇಳುತ್ತಾರೆ.

ಮಂದಿರಾ ಕಮಲಕೊಶ್‌ ನೇಯುವುದನ್ನು ಕಲಿತ್ತಿದ್ದಾರಾದರೂ ತಾನು ಹೆಚ್ಚು ಸಂಬಳ ಮತ್ತು ಬಿಡುವು ನೀಡುವ ಕೆಲಸವನ್ನು ಹುಡುಕಿಕೊಳ್ಳುವುದಾಗಿ ಖಚಿತವಾಗಿ ಹೇಳುತ್ತಾರೆ. “ಬಹುಶಃ ನಾನು ನರ್ಸಿಂಗ್‌ ಕೋರ್ಸ್‌ ಮಾಡುತ್ತೇನೆ” ಎಂದು ಅವರು ಹೇಳುತ್ತಾರೆ. “ಚಾಪೆ ನೇಯಲು ಸಾಕಷ್ಟು ಶ್ರಮ ಹಾಕಬೇಕು. [ಬೇರೆ] ಕೆಲಸಕ್ಕೆ ಹೋದರೆ ಆರಾಮಾಗಿ ಕುಳಿತು ದುಡಿಯಬಹುದು, ವಿಶ್ರಾಂತಿಯನ್ನೂ ಪಡೆಯಬಹುದು. ಇಡೀ ದಿನ ದುಡಿಯಬೇಕಾದ ಅವಶ್ಯಕತೆ ಇರುವುದಿಲ್ಲ. ಹೀಗಾಗಿಯೇ [ನನ್ನ ತಲೆಮಾರಿನ] ಯಾರೂ ಈ ಚಾಪೆ ನೇಯುವ ಕೆಲಸ ಮಾಡಲು ಬಯಸುವುದಿಲ್ಲ.”

ತನ್ನ ಈ ಅಭಿಪ್ರಾಯವನ್ನು ಸಾಬೀತುಪಡಿಸಲು ಅವರು ತನ್ನ ತಾಯಿಯ ದಿನಚರಿಯನ್ನು ಪಟ್ಟಿ ಮಾಡುತ್ತಾರೆ: "ಅಮ್ಮ ದಿನಾ 5:30ಕ್ಕೆ ಏಳುತ್ತಾರೆ. ಎದ್ದ ನಂತರ ಮನೆಯನ್ನು ಗುಡಿಸಿ ಸ್ವಚ್ಛಗೊಳಿಸುತ್ತಾರೆ. ನಂತರ ಒಂದು ಗಂಟೆ ಚಾಪೆ ನೇಯಲು ಕುಳಿತುಕೊಳ್ಳುತ್ತಾರೆ. ಬೆಳಗಿನ ತಿಂಡಿ ತಯಾರಿಸಿ ನಂತರ ಅವರು ತಿನ್ನುತ್ತಾರೆ. ನಂತರ ಮತ್ತೆ ಮಧ್ಯಾಹ್ನದ ತನಕ ನೇಯ್ಗೆ ಮಾಡುತ್ತಾರೆ. ಮತ್ತೆ ಸ್ನಾನಕ್ಕೆಂದು ವಿರಾಮ ತೆಗೆದುಕೊಂಡು ಸ್ನಾನ ಮುಗಿದ ನಂತರ ಮತ್ತೆ ಮನೆ ಗುಡಿಸಿ ನೇಯ್ಗೆ ಕೆಲಸಕ್ಕೆ ಕೂರುತ್ತಾರೆ. ಹಾಗೆ ಕುಳಿತವು ರಾತ್ರಿ 9 ಗಂಟೆಯ ತನಕ ನೇಯ್ಗೆ ಮಾಡುತ್ತಾರೆ. ಮತ್ತೆ ಎದ್ದು ಅಡುಗೆ ಮಾಡುತ್ತಾರೆ. ಅದಾದ ಮೇಲೆ ನಾವೆಲ್ಲ ಊಟ ಮಾಡಿ ಮಲಗುತ್ತೇವೆ.”

“ನನ್ನ ಪೋಷಕರು ಮೇಳಗಳಿಗೆ ಹೋಗುವುದಿಲ್ಲ. ಏಕೆಂದರೆ ಅವರಿಗೆ ಮನೆಯಲ್ಲೇ ಸಾಕಷ್ಟು ಕೆಲಸವಿರುತ್ತದೆ. ನಾವು ಒಂದು ದಿನವೂ ತಪ್ಪದಂತೆ ದುಡಿಯಬೇಕು ಆಗಷ್ಟೇ ನಾವು ನಮ್ಮ ಅಗತ್ಯ ವೆಚ್ಚಗಳಿಗೆ ಬೇಕಾಗುವ ದೈನಂದಿನ ವೆಚ್ಚಗಳಿಗೆ ಅಗತ್ಯವಿರುವ ಮಾಸಿಕ 15,000 ರೂ.ಗಳ ಕುಟುಂಬ ಆದಾಯವನ್ನು ಪಡೆಯಲು ನಮಗೆ ಸಾಧ್ಯವಾಗುತ್ತದೆ" ಎಂದು ಮಂದಿರಾ ಹೇಳುತ್ತಾರೆ.

PHOTO • Shreya Kanoi
PHOTO • Shreya Kanoi

ಪ್ರಭತಿ ನೇಯ್ಗೆಯ ಜೊತೆಗೆ, ತನ್ನ ಮನೆ ಮತ್ತು ಕುಟುಂಬವನ್ನು ಸಹ ನೋಡಿಕೊಳ್ಳುತ್ತಾರೆ

*****

ಪಾಟಿ ತಯಾರಿಸುವ ಪ್ರಕ್ರಿಯೆಯನ್ನು ಸ್ಥಳೀಯವಾಗಿ ಸಮಸ್ತಿಗತ ಕಾಜ್ ಎಂದು ಕರೆಯಲಾಗುತ್ತದೆ - ಇದೊಂದು ಕುಟುಂಬ ಮತ್ತು ಸಮುದಾಯದ ಸಾಮೂಹಿಕ ಪ್ರಯತ್ನವಾಗಿದೆ. "ಎಟಾ ಶಿಲ್ಪಿರ್ ಕಾಜ್ ತಾ ಎಕೋಕ್ ಭಾಭೆ ಹೋಯೆ ನಾ. ಟಾಕಾ ಜೋಡತೆ ಗೆಲೆ ಶೊಬಾಯಿ ಹಾತ್‌ ದಿಟೆ ಹೋಯೆ [ನಮ್ಮ ಚಾಪೆ ನೇಯುವ ಕೆಲಸ ಒಬ್ಬರಿಂದ ಸಾಧ್ಯವಾಗುವುದಿಲ್ಲ. ಒಂದು ಸಾಧಾರಣ ಆದಾಯ ಗಳಿಸಲು ಎಲ್ಲರೂ ಕೈಜೋಡಿಸಬೇಕು]” ಎಂದು ಪ್ರಭತಿ ಹೇಳುತ್ತಾರೆ. ಅವರು ಈ ಪ್ರಕ್ರಿಯೆಯಲ್ಲಿ ತಮ್ಮ ಇಡೀ ಕುಟುಂಬವನ್ನು ತೊಡಗಿಸಿಕೊಳ್ಳುತ್ತಾರೆ.

ಈ ಕೆಲಸವನ್ನು "ಮಾಠೇರ್ ಕಾಜ್ [ಕ್ಷೇತ್ರ ಕೆಲಸ] ಮತ್ತು ಬರಿರ್ ಕಾಜ್ [ಮನೆ ಆಧಾರಿತ ಕೆಲಸ] ಎಂದು ವಿಂಗಡಿಸಲಾಗಿದೆ" ಎಂದು ನೇಯ್ಗೆ ಕುಟುಂಬದಿಂದ ಬಂದ ಮತ್ತು ಕರಕುಶಲತೆಯ ಬಗ್ಗೆ ಪರಿಣತಿ ಹೊಂದಿರುವ ಕಾಂಚನ್ ಡೇ ಹೇಳುತ್ತಾರೆ. ಗಂಡಸರು ಬೆತ್ತದ ಗಿಡವನ್ನು ಕತ್ತರಿಸಿ ತಂದು ನಂತರ ಅದನ್ನು ಸೀಳಿ ಚಾಪೆ ನೇಯಲು ಬೇಕಾಗುವಂತೆ ತಯಾರಿಸುತ್ತಾರೆ. ಹೆಂಗಸರು ಬೆತ್ತವನ್ನು ಗಂಜಿಯಲ್ಲಿ ಕುದಿಸಿ ಚಾಪೆ ನೇಯುತ್ತಾರೆ ಎಂದು ಅವರು ವಿವರಿಸುತ್ತಾರೆ. ಮಕ್ಕಳು ಸಹ ಇದರಲ್ಲಿ ಭಾಗವಹಿಸುತ್ತಾರೆ. ಹೆಣ್ಣುಮಕ್ಕಳು ನೇಯ್ಕೆಗೆ ನೋಡಲು ಬಂದರೆ, ಗಂಡು ಮಕ್ಕಳು ಬೆತ್ತವನ್ನು ಸೀಳಲು ಪ್ರಯತ್ನಿಸುತ್ತಾರೆ. ಕಾಂಚನ್‌ ಡೇ ನೆರೆಯ ಗಂಗಲೇರ್ ಕುಥಿ ಗ್ರಾಮದ ಶಾಲೆಯೊಂದರ ಶಿಕ್ಷಕ.

6 x 7 ಅಡಿಗಳ ಪ್ರಮಾಣಿತ ಗಾತ್ರದ ಒಂದು ಪಾಟಿ [ಚಾಪೆ] ಉತ್ಪಾದಿಸಲು ಅಗತ್ಯವಿರುವ ಪಾಟಿಬೆಟ್ [ಬೆತ್ತದ ಕೋಲು] ಸಂಖ್ಯೆ 160. ಈ ಕೋಲುಗಳನ್ನು ಸಿದ್ಧವಾದ ಪಟ್ಟಿಗಳಾಗಿ ತಯಾರಿಸಲು ಗಂಡಸರಿಗೆ ಎರಡು ದಿನ ಬೇಕಾಗುತ್ತೆ. ಬೆಟ್ ಶೋಲೈ ಮತ್ತು ಬೆಟ್ ಟೋಲಾ ಎಂದು ಕರೆಯಲ್ಪಡುವ ದ್ವಿಮುಖ ಪ್ರಕ್ರಿಯೆಯು ಗೆಣ್ಣನ್ನು ಅನೇಕ ಪಟ್ಟಿಗಳಾಗಿ ಛೇದಿಸುವುದು, ಬೆತ್ತದ ಒಳಭಾಗವನ್ನು ತೆಗೆದುಹಾಕುವುದು ಮತ್ತು ನಂತರ ಪ್ರತಿ ತೆಳುವಾದ ಪಟ್ಟಿಯನ್ನು 2 ಮಿಮೀಯಿಂದ 0.5 ಮಿಮೀ ದಪ್ಪಕ್ಕೆ ಎಚ್ಚರಿಕೆಯಿಂದ ಸೀಳುವುದು ಒಳಗೊಂಡಿರುತ್ತದೆ. ಇದು ಸಂಕೀರ್ಣ ಪ್ರಕ್ರಿಯೆಯಾಗಿದ್ದು, ಉತ್ತಮ ವಿಭಜನೆಗೆ ಅನುಭವಿ ಮತ್ತು ನಿಖರವಾದ ಕೈ ಬೇಕು.

PHOTO • Shreya Kanoi
PHOTO • Shreya Kanoi

ಮನೋರಂಜನ್ ಧರ್ ತನ್ನ ಹೊಲದಲ್ಲಿ (ಎಡ) ಬೆತ್ತವನ್ನು ಕತ್ತರಿಸುತ್ತಿದ್ದಾರೆ. ಅವರ ಮಗ ಪಿಯೂಷ್ (ಬಲ) ಬೆತ್ತದ ಪಟ್ಟಿಗಳನ್ನು ಸಿದ್ಧಪಡಿಸುತ್ತಿದ್ದಾನೆ. ಪಿಯೂಷ್ ಬೆಟ್ ಶೋಲೈ ಮಾಡುತ್ತಿದ್ದಾನೆ, ಇದು ಬೆತ್ತವನ್ನು ಅನೇಕ ಪಟ್ಟಿಗಳಾಗಿ ಕತ್ತರಿಸುವ ಮತ್ತು ಒಳಗಿನ ಮರದ ತಿರುಳನ್ನು ತೆಗೆದುಹಾಕುವ ಪ್ರಾಥಮಿಕ ಪ್ರಕ್ರಿಯೆ. ಮನೋರಂಜನ್ ಬೆಟ್ ತುಲಾ ಮಾಡುತ್ತಿದ್ದು, ಬೆಟ್, ಬುಕಾ ಮತ್ತು ಚೋಟು ಎಂಬ ಮೂರು ಪದರಗಳನ್ನು ಒಳಗೊಂಡಿರುವ ಬೆತ್ತದ ಪಟ್ಟಿಯಿಂದ ಅಂತಿಮ ಪದರವನ್ನು ಹೊರತೆಗೆಯುತ್ತಿದ್ದಾರೆ. ನೇಯ್ಗೆಗೆ ಮೇಲಿನ ಭಾಗವನ್ನು ಮಾತ್ರ ಬಳಸಲಾಗುತ್ತದೆ

PHOTO • Shreya Kanoi
PHOTO • Shreya Kanoi

ಮನೋರಂಜನ್ ಸಿದ್ಧವಾಗಿರುವ ಚಾಪೆಯನ್ನು ಪರಿಶೀಲಿಸುತ್ತಿದ್ದಾರೆ. ಪಾಟಿಯನ್ನು ಮಾಡುವ ಪ್ರಕ್ರಿಯೆಯು ಕುಟುಂಬ ಮತ್ತು ಸಮುದಾಯದ ಸಾಮೂಹಿಕ ಪ್ರಯತ್ನ. 'ತಿಂಗಳ ಕೊನೆಯಲ್ಲಿ ಯೋಗ್ಯವಾದ ಆದಾಯವನ್ನು ಗಳಿಸಲು ಪ್ರತಿಯೊಬ್ಬರೂ ಕೆಲಸದಲ್ಲಿ ಕೈಜೋಡಿಸಬೇಕಾಗುತ್ತದೆ' ಎಂದು ಸಿದ್ಧತೆಗಾಗಿ ತನ್ನ ಕುಟುಂಬವನ್ನು ಅವಲಂಬಿಸಿರುವ ಪ್ರಭತಿ ಹೇಳುತ್ತಾರೆ

ನೇಯ್ಗೆಯ ನಂತರ ಚಾಪೆಯನ್ನು ಒಣಗಿಸುವುದು. ಸಾಮಾನ್ಯ ಚಾಪೆಗಳನ್ನು ನೈಸರ್ಗಿಕ ಬಣ್ಣದ ಬೆತ್ತದ ಪಟ್ಟಿ ಬಳಸಿ ನೇಯಲಾಗುತ್ತದೆ, ಆದರೆ ಕಮಲಕೊಶ್‌ ಚಾಪೆಯನ್ನು ಸಾಮಾನ್ಯವಾಗಿ ಎರಡು ಬಣ್ಣಗಳಲ್ಲಿ ನೇಯಲಾಗುತ್ತದೆ" ಎಂದು ಅವರು ಹೇಳುತ್ತಾರೆ, ಅವರು ಗಂಟೆಗಳ ಕಾಲ ಕುಕ್ಕುರುಗಾಲಿನಲ್ಲಿ ಕುಳಿತುಕೊಳ್ಳಬೇಕು, ಕೆಲವೊಮ್ಮೆ ಬೆಂಬಲಕ್ಕಾಗಿ ಮರದ ಪಿರಿ (ಸಣ್ಣ ಸ್ಟೂಲ್) ಬಳಸುತ್ತಾರೆ. ಪ್ರಭತಿ ತನ್ನ ಪಾದಗಳನ್ನು ಈಗಾಗಲೇ ನೇಯ್ದ ಭಾಗಗಳ ಅಂಚುಗಳ ಮೇಲೆ ಹಿಡಿತವಾಗಿ ಬಳಸುತ್ತಾರೆ. ಆ ಮೂಲಕ ಅವು ಬಿಚ್ಚಿಕೊಳ್ಳದ ಹಾಗೆ ತಡೆಯುತ್ತಾರೆ; ನೇಯ್ಗೆಯ ಮಾದರಿಗೆ ಅನುಗುಣವಾಗಿ ನಿಗದಿತ ಬೆತ್ತದ ಪಟ್ಟಿಗಳನ್ನು ಎತ್ತಲು ಎರಡೂ ಕೈಗಳನ್ನು ಬಳಸಲಾಗುತ್ತದೆ.

ಅವರು ಒಂದು ಸಮಯದಲ್ಲಿ ಸುಮಾರು 70 ಬೆತ್ತದ ಪಟ್ಟಿಗಳನ್ನು ನಿರ್ವಹಿಸುತ್ತಾರೆ. ತಾನು ನೇಯ್ಗೆ ಮಾಡುವ ಬೆತ್ತದ ಚಾಪೆಯ ಪ್ರತಿಯೊಂದು ಪೂರ್ಣ ಸಾಲಿಗೆ, ಪ್ರಭತಿ ಸುಮಾರು 600 ಬೆತ್ತದ ಪಟ್ಟಿಗಳನ್ನು ಎತ್ತಿ ನೇಯಬೇಕಾಗುತ್ತದೆ, ಮತ್ತು ಮೇಲಕ್ಕೆ ಮತ್ತು ಕೆಳಗೆ ಜೋಡಿಸಬೇಕಾಗುತ್ತದೆ, ಇದಕ್ಕಾಗಿ ತನ್ನ ಕೈಗಳನ್ನು ಹೊರತುಪಡಿಸಿ ಬೇರೆ ಯಾವುದೇ ಉಪಕರಣವನ್ನು ಅವರು ಬಳಸುವುದಿಲ್ಲ. ಆರರಿಂದ ಏಳು ಅಡಿಗಳಷ್ಟು ಚಾಪೆಯನ್ನು ನೇಯಲು ಇದನ್ನು ಸರಿಸುಮಾರು 700 ಬಾರಿ ಮಾಡಬೇಕಾಗುತ್ತದೆ

ಒಂದು ಕಮಲಕೊಶ್‌ ತಯಾರಿಸುವ ಸಮಯದಲ್ಲಿ 10 ಸಾಮಾನ್ಯ ಚಾಪೆಗಳನ್ನು ತಯಾರಿಸಬಹುದು. ಇದನ್ನು ಅದಕ್ಕಿರುವ ಬೆಲಯಲ್ಲಿ ಕಾಣಬಹುದು. “ಕಮಲಕೊಶ್‌ ತಯಾರಿಸುವುದು ಬಹಳ ಕಷ್ಟದ ಕೆಲಸ. ಆದರೆ ಅದರಲ್ಲಿ ಹೆಚ್ಚು ಹಣವೂ ಇದೆ.” ಎಂದು ಪ್ರಭತಿ ಹೇಳುತ್ತಾರೆ. ಕಮಲಕೊಶ್‌ ಚಾಪೆಗಳಿಗೆ ಬೇಡಿಕೆ ಇಲ್ಲದಿರುವ ಸಮಯದಲ್ಲಿ ಪ್ರಭತಿ ಸಾಮಾನ್ಯ ಚಾಪೆಗಳನ್ನು ನೇಯುತ್ತಾರೆ. ಈ ಚಾಪೆಗಳ ಕೆಲಸ ಬೇಗನೆ ಮುಗಿಯುತ್ತದೆಯಾದ್ದರಿಂದ ಅವರು ಸಂಖ್ಯೆಯಲ್ಲಿ ಇವುಗಳನ್ನು ಕಮಲಕೊಶ್‌ ಸಂಖ್ಯೆಗಿಂತಲೂ ಹೆಚ್ಚು ನೇಯುವುದಾಗಿ ಹೇಳುತ್ತಾರೆ.

PHOTO • Shreya Kanoi
PHOTO • Shreya Kanoi

ಬೆತ್ತದ  ಪಟ್ಟಿಗಳನ್ನು ಬಳಸಿಕೊಂಡು ಮಾದರಿಗಳು ಮತ್ತು ಆಕಾರಗಳನ್ನು ಹೇಗೆ ಪರಸ್ಪರ ಬೆಸೆಯಲಾಗಿದೆ ಎನ್ನುವುದನ್ನು ತೋರಿಸುವ ಚಾಪೆಯ ಕ್ಲೋಸ್-ಅಪ್. ಪರಸ್ಪರ ಲಂಬವಾಗಿ ಚಲಿಸುವ ಬೆತ್ತದ ಎಳೆಗಳು ಚಾಪೆಯ ಉದ್ದಕ್ಕೂ ಭಾಗಗಳಾಗಿ ಚಲಿಸುತ್ತವೆ. ಇದು ಈ ನೇಯ್ಗೆಯ ಲಯ. ಇದನ್ನು ನೇರವಾಗಿ ನೇಯುವುದಿಲ್ಲ ಬದಲಿಗೆ ವಿಭಾಗಗಳಲ್ಲಿ ನೇಯಲಾಗುತ್ತದೆ. ಮನೋರಂಜನ್ (ಬಲ) ಚಾಪೆಯನ್ನು ನೇರಗೊಳಿಸಲು ಅದನ್ನು ಮೊದಲು ಒಂದು ಬದಿಗೆ ಮತ್ತು ನಂತರ ಇನ್ನೊಂದು ಬದಿಗೆ ತಿರುಗಿಸುತ್ತಾರೆ

PHOTO • Shreya Kanoi
PHOTO • Shreya Kanoi

ಸೀತಾಲಪಾಟಿ ನೇಯ್ಗೆ ಮಾಡುವಾಗ (ಎಡದಿಂದ ಬಲಕ್ಕೆ) ಬಳಸಲಾಗುವ ಪಿರಿ ಅಥವಾ ಕಡಿಮೆ ಎತ್ತರದ ಮರದ ಸ್ಟೂಲ್. ಬೆತ್ತವನ್ನು ವಿಭಜಿಸಲು ಬಳಸುವ ದಾವೋ ಅಥವಾ ಬೋಟಿ ಎಂಬ ಸಾಧನ; ಬೆಟ್ಕಟಾವನ್ನು ಬೆತ್ತ ಕಡಿಯಲು ಬಳಸಲಾಗುತ್ತದೆ. ಚಾಪೆ ನೇಯ್ಗೆ ಪೂರ್ಣಗೊಂಡ ನಂತರ ಚಾಪೆಯ ಅಂಚುಗಳನ್ನು ಪೂರ್ಣಗೊಳಿಸಲು ಮತ್ತು ಹೊರಬಂದ ಬೆತ್ತದ ಎಳೆಗಳನ್ನು ಕತ್ತರಿಸಲು ಬಳಸುವ ಛೂರಿ. ನೇಯ್ಗೆಯಾಗಿ ವ್ಯಾಪಾರಿಗೆ ತಲುಪಿಸಲು ಮಡಚಿಟ್ಟ ಕಮಲಕೊಶ್‌ ಜೊತೆಗೆ ಪ್ರಭತಿ

ಪ್ರಭತಿ ಕಮಲಕೊಶ್‌ ನೇಯ್ಗೆಯ ಖ್ಯಾತಿಯ ಜೊತೆಗೆ ಪೋಷಕರಾಗಿ ತಮ್ಮ ಪಾತ್ರವನ್ನೂ ಆನಂದಿಸುವುದಾಗಿ ಹೇಳುತ್ತಾರೆ. “ನನಗೆ ಕಮಲಕೊಶ್‌ ನೇಯುವ ಸಾಮರ್ಥ್ಯವಿದೆ ಹಾಗಾಗಿ ನಾನು ಅದನ್ನು ನೇಯುತ್ತೇನೆ. ಅಮಿ ಗರ್ಭಬೊಧ್‌ ಕೊರಿ. ನನಗೆ ಈ ಬಗ್ಗೆ ಹೆಮ್ಮೆಯಿದೆ.”

ಸ್ವಲ್ಪ ಹಿಂಜರಿಕೆಯ ನಂತರ, ಅವರು ಹೇಳುತ್ತಾರೆ, "ಎಷ್ಟೋ ಜನರಿಗೆ ಇದನ್ನು ನೇಯಲು ಬರುವುದಿಲ್ಲ. ಈಗ ನೀವು ಬಂದಿರುವುದು ಕೂಡಾ ನನಗೆ ಇದನ್ನು ನೇಯಲು ಬರುತ್ತದೆ ಎನ್ನುವ ಕಾರಣಕ್ಕಲ್ಲವೆ? ಇಲ್ಲದೆ ಹೋಗಿದ್ದರೆ ನೀವು ನನ್ನನ್ನು ಹುಡುಕಿಕೊಂಡು ಬರುತ್ತಿರಲಿಲ್ಲ ಅಲ್ಲವೆ!"

ಈ ವರದಿ ಮೃಣಾಲಿನಿ ಮುಖರ್ಜಿ ಫೌಂಡೇಶನ್ (ಎಂಎಂಎಫ್) ನ ಫೆಲೋಶಿಪ್ ಬೆಂಬಲದೊಂದಿಗೆ ತಯಾರಾಗಿದೆ.

ಅನುವಾದ: ಶಂಕರ. ಎನ್. ಕೆಂಚನೂರು

Shreya Kanoi

Shreya Kanoi is a design researcher working at the intersection of crafts and livelihood. She is a 2023 PARI-MMF fellow.

Other stories by Shreya Kanoi
Editor : Priti David

Priti David is the Executive Editor of PARI. She writes on forests, Adivasis and livelihoods. Priti also leads the Education section of PARI and works with schools and colleges to bring rural issues into the classroom and curriculum.

Other stories by Priti David
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru