“ಪಾನ್ [ವೀಳ್ಯದೆಲೆ] ಬೆಳೆ ಉಳಿದಿದ್ದರೆ ನನಗೆ [2023ರಲ್ಲಿ] ಕನಿಷ್ಠ ಎರಡು ಲಕ್ಷ ರೂಪಾಯಿಗಳ ಆದಾಯ ದೊರೆಯುತ್ತಿತ್ತು” ಎಂದು 29 ವರ್ಷದ ಧೂರಿ ಗ್ರಾಮದ ರೈತ ಮಹಿಳೆ ಕರುಣಾ ದೇವಿ ವಿಷಾದದ ದನಿಯಲ್ಲಿ ಹೇಳುತ್ತಾರೆ. 2023ರಲ್ಲಿ ಬಿಹಾರದ ನವಾಡಾ ಜಿಲ್ಲೆಯಲ್ಲಿ ಬೀಸಿದ ಬಿಸಿ ಗಾಳಿ ಅವರ ವೀಳ್ಯದೆಳೆ ಸಾಗುವಳಿಯನ್ನು ನಾಶಗೊಳಿಸಿತು. ಸೊಂಪಾದ ತೋಟವಾಗಿ ನಳ ನಳಿಸುತ್ತಿದ್ದ ಅವರ ಬರೇಜಾ ಅಂದು ತನ್ನ ಹೊಳೆವ ಎಲೆಗಳನ್ನು ಕಳೆದುಕೊಂಡು ಕೇವಲ ಬಳ್ಳಿಗಳ ಅಸ್ಥಿಪಂಜರವಾಗಿ ಮಾರ್ಪಟ್ಟಿತು. ಇದರಿಂದಾಗಿ ಅವರು ಬೇರೆಯವರ ಬರೇಜಾಗಳಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆಗೆ ಒಳಗಾದರು.
ಆ ಸಮಯದಲ್ಲಿ ಹಲವಾರು ದಿನಗಳವರೆಗೆ ತೀವ್ರ ಬಿಸಿಲನ್ನು ಎದುರಿಸಿದ ಒಂದು ಡಜನ್ ಜಿಲ್ಲೆಗಳಲ್ಲಿ ನವಾಡಾ ಕೂಡಾ ಒಂದು. ಆ ವರ್ಷದ ಬಿಸಿಲನ್ನು ವಿವರಿಸುತ್ತಾ, ಅವರು ಹೇಳುತ್ತಾರೆ, “ಲಗ್ತಾ ಥಾ ಕೀ ಅಸ್ಮಾನ್ ಸೇ ಆಗ್ ಬರಾಸ್ ರಹಾ ಹೈ ಔರ್ ಹಮ್ ಲೋಗ್ ಜಲ್ ಜಾಯೇಂಗೆ. ದೋಪಹರ್ ಕೋ ತೋ ಗಾಂವ್ ಏಕ್ ದಮ್ ಸಂಸಾನ್ ಹೋ ಜಾತಾ ಥಾ ಜೈಸೇ ಕಿ ಕರ್ಫು ಲಗ್ ಗಯಾ ಹೋ [ಆಕಾಶದಿಂದ ಬೆಂಕಿಯ ಉಂಡೆಗಳು ಸುರಿವಂತೆ ತೋರುತ್ತಿತ್ತು, ಮತ್ತು ನಾವು ಸುಟ್ಟು ಬೂದಿಯಾಗುತ್ತೇವೆಯೇನೋ ಎನ್ನುವಂತಿತ್ತು. ಮಧ್ಯಾಹ್ನದ ವೇಳೆಗೆ ಕರ್ಫ್ಯೂ ವಿಧಿಸಿದಂತೆ ಗ್ರಾಮವು ಸಂಪೂರ್ಣವಾಗಿ ನಿರ್ಜನವಾಗುತ್ತಿತ್ತು.]” ಜಿಲ್ಲೆಯ ವಾರಿಸಲಿಗಂಜ್ ಹವಾಮಾನ ಇಲಾಖೆಯು ಈ ಸಮಯದಲ್ಲಿ 45.9 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನವನ್ನು ದಾಖಲಿಸಿದೆ. ಜೂನ್ 18, 2023ರಂದು 'ದಿ ಹಿಂದೂ' ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಘಟನೆಯ ನಂತರ ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಸುಡುವ ಬಿಸಿಲಿನ ನಡುವೆಯೂ “ನಾವು ಬರೇಜಾಕ್ಕೆ ಹೋಗುತ್ತಿದ್ದೆವು” ಎಂದು ಕರುಣಾ ದೇವಿ ಹೇಳುತ್ತಾರೆ. ಆರು ಕಟ್ಟಾ ಪ್ರದೇಶದಲ್ಲಿ (ಎಕರೆಯ ಹತ್ತನೇ ಒಂದು ಭಾಗ) ಹರಡಿರುವ ಮಗಹಿ ವೀಳ್ಯದೆಲೆ ಬರೇಜಾದಲ್ಲಿ ಎಲೆ ಬೆಳೆಯಲು ಕುಟುಂಬವು 1 ಲಕ್ಷ ರೂ.ಗಳ ಸಾಲವನ್ನು ತೆಗೆದುಕೊಂಡಿದ್ದರಿಂದ ಕುಟುಂಬವು ಸುಮ್ಮನೆ ಕೂರುವಂತಿರಲಿಲ್ಲ.

ವೀಳ್ಯದೆಲೆ ಬೆಳೆಗಾರರಾದ ಕರುಣಾ ದೇವಿ ಮತ್ತು ಸುನಿಲ್ ಚೌರಾಸಿಯಾ, ಎಕರೆಯ ಹತ್ತನೇ ಒಂದು ಭಾಗದಷ್ಟು ಜಾಗದಲ್ಲಿ ಹರಡಿರುವ ತಮ್ಮ ಬರೇಜಾದಲ್ಲಿ. ಅವರ ಮಗ ವೀಳ್ಯದೆಲೆ ಬಳ್ಳಿಗಳ ಪಕ್ಕದಲ್ಲಿ [ಸ್ವಂತ ಬಳಕೆಗಾಗಿ] ಬೆಳೆದ ಕೆಲವು ಸೋರೆಕಾಯಿಗಳನ್ನು ಕೈಯಲ್ಲಿ ಹಿಡಿದಿದ್ದಾನೆ, ಇದೊಂದೇ ಬೆಳೆ ಅವರ ಪಾಲಿಗೆ ಉಳಿದುಕೊಂಡಿದ್ದು


ನೆವಾಡಾ ಜಿಲ್ಲೆಯು 2023ರ ಬೇಸಿಗೆಯಲ್ಲಿ ತೀವ್ರ ಬಿಸಿಲನ್ನು ಎದುರಿಸಿತು, ಮತ್ತು ಇದರಿಂದಾಗಿ ಸುನಿಲ್ (ಎಡ) ಅವರಂತಹ ಅನೇಕ ವೀಳ್ಯದೆಲೆ ರೈತರು ತೀವ್ರವಾಗಿ ನಷ್ಟಕ್ಕೀಡಾದರು. ಕರುಣಾ ದೇವಿ (ಬಲ) ಇತರ ರೈತರ ವೀಳ್ಯದೆಲೆ ತೋಟಗಳಲ್ಲಿ ದಿನಗೂಲಿ ಕೆಲಸವನ್ನು ಸಹ ಮಾಡುತ್ತಾರೆ, ಈ ಮೂಲಕ ಅವರು ದಿನಕ್ಕೆ 200 ರೂ.ಗಳನ್ನು ಗಳಿಸುತ್ತಾರೆ
ವೀಳ್ಯದೆಲೆ ತೋಟವನ್ನು ಬಿಹಾರದಲ್ಲಿ ಬರೇಜಾ ಅಥವಾ ಬರೇಥಾ ಎಂದು ಕರೆಯಲಾಗುತ್ತದೆ. ಈ ಗುಡಿಸಲಿನಂತಹ ಮಾದರಿಯು ಈ ಸೂಕ್ಮ ಎಲೆಗಳನ್ನು ಬೇಸಗೆ ಸೂರ್ಯನ ಪ್ರಖರ ಬಿಸಿಲಿನಿಂದ ಮತ್ತು ಚಳಿಗಾಲದ ಕೆಟ್ಟ ಗಾಳಿಯಿಂದ ಕಾಪಾಡುತ್ತದೆ. ಇದನ್ನು ಸಾಮಾನ್ಯವಾಗಿ ಬಿದಿರಿನ ಗಳ ಬಳಸಿ ಕಟ್ಟಿ ಅದರ ಮೇಲೆ ತಾಳೆ, ತೆಂಗಿನ ಗರಿಗಳು, ನಾರು, ಭತ್ತದ ಹುಲ್ಲು ಮತ್ತು ಧಾನ್ಯಗಳ ಫಸಲಿನ ಕಡ್ಡಿಯನ್ನು ಹೊದಿಸಲಾಗುತ್ತದೆ. ಬರೇಜಾದ ಒಳಗೆ ಏರಿಯ ರೀತಿಯಲ್ಲಿ ಉಳುಮೆ ಮಾಡಿ ಬಳ್ಳಿಗಳಿಗೆ ನೀರು ತಗುಲಿ ಕೊಳೆಯದ ರೀತಿಯಲ್ಲಿ ನಾಟಿ ಮಾಡಲಾಗುತ್ತದೆ.
ಈ ಸೂಕ್ಷ್ಮ ಬಳ್ಳಿಗಳು ವೀಪರಿತ ಹವಾಗುಣವನ್ನು ತಾಳುವ ಗುಣವನ್ನು ಹೊಂದಿಲ್ಲ.
ಕಳೆದ ವರ್ಷ ಸುಡುವ ಬಿಸಿಲಿನಿಂದ ಬಳ್ಳಿಗಳನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ “ದಿನಕ್ಕೆ 2-3 ಬಾರಿಯಷ್ಟೇ ನೀರು ಹಾಯಿಸಲು ಸಾಧ್ಯವಾಯಿತು. ಅದಕ್ಕಿಂತಲೂ ಹೆಚ್ಚು ನೀರು ಹಾಯಿಸಲು ಮತ್ತಷ್ಟು ಖರ್ಚು ಮಾಡಬೇಕಿತ್ತು. ಅದು ನಮ್ಮ ಮಿತಿಯನ್ನು ಮೀರಿದ ಮಾತು. ಆದರೆ ಬಿಸಿಲು ಎಷ್ಟು ತೀಕ್ಷ್ಣವಾಗಿತ್ತೆಂದರೆ ಬಳ್ಳಿಗಳು ಉಳಿಯಲೇ ಇಲ್ಲ” ಎಂದು ಕರುಣಾದೇವಿಯವರ ಪತಿ ನೆನಪಿಸಿಕೊಳ್ಳುತ್ತಾರೆ. “ದಿನ ಕಳೆದಂತೆ ಬಳ್ಳಿಗಳು ಒಣಗತೊಡಗಿದವು. ಬರೇಜಾ ಪೂರ್ತಿ ಹಾಳಾಯಿತು. ವೀಳ್ಯದೆಲೆ ಬೆಳೆ ಸಂಪೂರ್ಣವಾಗಿ ನಾಶವಾಯಿತು” ಎನ್ನುವ 40 ವರ್ಷ ಪ್ರಾಯದ ಸುನಿಲ್ ಚೌರಸಿಯಾ “ಈಗ ಸಾಲ ತೀರಿಸುವುದು ಹೇಗೆಂದು ತಿಳಿಯುತ್ತಿಲ್ಲ” ಎಂದು ಆತಂಕದಿಂದ ಹೇಳುತ್ತಾರೆ.
ಈ ಪ್ರದೇಶದಲ್ಲಿ ಅಧ್ಯಯನ ನಡೆಸುತ್ತಿರುವ ಹವಾಮಾನ ವಿಜ್ಞಾನಿಗಳು ಮಗಧ ಪ್ರದೇಶದಲ್ಲಿ ಹವಾಮಾನದ ಸ್ವರೂಪ ಬದಲಾಗುತ್ತಿದೆ ಎಂದು ಹೇಳುತ್ತಾರೆ. ಪರಿಸರ ವಿಜ್ಞಾನಿ ಪ್ರೊಫೆಸರ್ ಪ್ರಧಾನ್ ಪಾರ್ಥ ಸಾರಥಿ ಹೇಳುತ್ತಾರೆ, "ಈ ಹಿಂದೆ ಇರುತ್ತಿದ್ದ ಏಕರೂಪದ ಹವಾಮಾನ ಮಾದರಿಯು ಈಗ ಗಮನಾರ್ಹವಾಗಿ ಹದಗೆಟ್ಟಿರುವುದನ್ನು ನೋಡುತ್ತಿದ್ದೇವೆ. ಇದ್ದಕ್ಕಿದ್ದಂತೆ ತಾಪಮಾನ ಹೆಚ್ಚಾಗುತ್ತದೆ ಮತ್ತು ಕೆಲವೊಮ್ಮೆ ಒಂದು ಅಥವಾ ಎರಡು ದಿನಗಳಲ್ಲಿ ಭಾರೀ ಮಳೆ ಪ್ರಾರಂಭವಾಗುತ್ತದೆ.”
2022ರಲ್ಲಿ ಸೈನ್ಸ್ ಡೈರೆಕ್ಟ್ ಜರ್ನಲ್‌ನಲ್ಲಿ ಪ್ರಕಟವಾದ 'ಭಾರತದ ದಕ್ಷಿಣ ಬಿಹಾರದಲ್ಲಿನ ಪರಿಸರ ಬದಲಾವಣೆ ಮತ್ತು ಅಂತರ್ಜಲ ವ್ಯತ್ಯಾಸ' ಎಂಬ ಸಂಶೋಧನಾ ಪ್ರಬಂಧವು 1958-2019ರ ಅವಧಿಯಲ್ಲಿ ಇಲ್ಲಿನ ಸರಾಸರಿ ತಾಪಮಾನವು 0.5 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ ಎಂದು ಹೇಳುತ್ತದೆ. 1990ರ ದಶಕದಿಂದೀಚೆಗೆ ಮುಂಗಾರು ಹಂಗಾಮಿನ ಮಳೆಯಲ್ಲಿ ಭಾರಿ ಅನಿಶ್ಚಿತತೆ ಕಂಡುಬಂದಿದೆ ಎನ್ನುತ್ತದೆ.


ಮಗಹಿ ಪಾನ್ ಬೆಳೆಗೆ ಬಿಹಾರದ ಮಗಧ ಪ್ರದೇಶದ ಫಲವತ್ತಾದ ಜೇಡಿ ಮಣ್ಣು ಹೇಳಿ ಮಾಡಿಸಿದಂತಿರುತ್ತದೆ. ಈ ಬೆಳೆ ಬೆಳೆಯುವ ಜಾಗದಲ್ಲಿ ನೀರು ನಿಲ್ಲುವಂತಿದ್ದರೆ ಅದು ಬೆಳೆಗೆ ಅಪಾಯಕಾರಿಯಾಗಿ ಪರಿಣಮಿಸಬಹುದು. ಹೀಗಾಗಿ ರೈತರು ಸರಿಯಾಗಿ ನೀರು ಹರಿದು ಹೋಗುವಂತಹ ಜಮೀನಿನಲ್ಲೇ ಬೆಳೆಯುತ್ತಾರೆ


ಬಿಹಾರದಲ್ಲಿ ವೀಳ್ಯದೆಲೆ ತೋಟವನ್ನು ಬರೇಜಾ ಎಂದು ಕರೆಯಲಾಗುತ್ತದೆ. ಈ ಗುಡಿಸಲಿನಂತಿರುವ ರಚನೆಯು ಬೇಸಿಗೆಯಲ್ಲಿ ಸುಡುವ ಬಿಸಿಲಿನಿಂದ ಮತ್ತು ಚಳಿಗಾಲದಲ್ಲಿ ತಂಪಾದ ಗಾಳಿಯಿಂದ ಸೂಕ್ಷ್ಮವಾದ ಬಳ್ಳಿಗಳನ್ನು ರಕ್ಷಿಸುತ್ತದೆ. ಇದು ಸಾಮಾನ್ಯವಾಗಿ ಬಿದಿರಿನ ಗಳ, ತಾಳೆ ಮತ್ತು ತೆಂಗಿನ ಗರಿಗಳು, ತೆಂಗಿನ ನಾರು, ಭತ್ತದ ಹುಲ್ಲು ಮತ್ತು ಧಾನ್ಯದ ಕಡ್ಡಿಗಳನ್ನು ಸಹ ಬಳಸಿ ಮುಚ್ಚಲಾಗುತ್ತದೆ. ಬರೇಜಾದ ಒಳಗೆ, ಏರಿ ಮಾಡಲಾಗುತ್ತದೆ. ಬೇರುಗಳ ಬಳಿ ನೀರು ಸಂಗ್ರಹವಾಗದಂತೆ ಮತ್ತು ಸಸ್ಯಗಳು ಕೊಳೆಯದಂತೆ ಬಳ್ಳಿಗಳನ್ನು ನೆಡಲಾಗುತ್ತದೆ
ಧೂರಿ ಗ್ರಾಮದ ಮತ್ತೊಬ್ಬ ರೈತ ಅಜಯ್ ಪ್ರಸಾದ್ ಚೌರಸಿಯಾ ಮಾತನಾಡಿ, “ಮಗಹಿ ಪಾನ್ ಕಾ ಖೇತಿ ಜುವಾ ಜೈಸಾ ಹೈ [ಮಗಹಿ ವೀಳ್ಯದೆಲೆ ಬೇಸಾಯ ಮಾಡುವುದು ಜೂಜಾಡಿದಂತೆ]” ಎಂದರು. ಇದರಿಂದ ನಷ್ಟ ಅನುಭವಿಸಿರುವ ಹಲವು ಮಗಹಿ ರೈತರ ಅಭಿಪ್ರಾಯವನ್ನೇ ಅವರು ಸಹ ಹೇಳುತ್ತಿದ್ದಾರೆ. ಅವರು ಹೇಳುತ್ತಾರೆ, “ನಾವು ಕಷ್ಟಪಟ್ಟು ಕೆಲಸ ಮಾಡುತ್ತೇವೆ, ಆದರೆ ವೀಳ್ಯದೆಲೆಗಳು ಉಳಿಯುತ್ತವೆ ಎನ್ನುವುದಕ್ಕೆ ಯಾವ ಭರವಸೆಯೂ ಇಲ್ಲ.
ಸಾಂಪ್ರದಾಯಿಕವಾಗಿ ವೀಳ್ಯದೆಲೆ ಬೇಸಾಯವನ್ನು ಚೌರಸಿಯಾ ಸಮುದಾಯ ಮಾಡುತ್ತದೆ. ಈ ಸಮುದಾಯವನ್ನು ಬಿಹಾರದಲ್ಲಿ ಅತಿ ಹಿಂದುಳಿದ ವರ್ಗ ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಬಿಹಾರ ಸರ್ಕಾರ ನಡೆಸಿದ ಜಾತಿ ಗಣತಿಯ ಪ್ರಕಾರ ಬಿಹಾರದಲ್ಲಿ ಆರು ಲಕ್ಷಕ್ಕೂ ಹೆಚ್ಚು ಚೌರಸಿಯಾ ಸಮುದಾಯದ ಜನರಿದ್ದಾರೆ.
ಧೂರಿ ಗ್ರಾಮ ನವಾಡಾ ಜಿಲ್ಲೆಯ ಹಿಸುವಾ ಬ್ಲಾಕಿಗೆ ಸೇರುತ್ತದೆ. ಈ ಗ್ರಾಮದ ಜನಸಂಖ್ಯೆ 1,549 (ಜನಗಣತಿ 2011). ಇವರಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಜನಸಂಖ್ಯೆ ಬೇಸಾಯದಲ್ಲಿ ತೊಡಗಿಕೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ವಿಪರೀತ ಹವಾಗುಣವು ಈ ಪ್ರದೇಶದಲ್ಲಿ ಮಗಹಿ ಪಾನ್ ಬೆಳೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತಿದೆ.

ʼಮಗಹಿ ವೀಳ್ಯದೆಲೆ ಬೇಸಾಯ ಮಾಡುವುದು ಜೂಜಾಟದ ಹಾಗಾಗಿದೆ... ತುಂಬಾ ಕಷ್ಟಪಟ್ಟು ದುಡಿಯುತ್ತೇವೆ, ಆದರೆ ವೀಳ್ಯದೆಲೆ ಗಿಡಗಳು ಉಳಿಯುವ ಯಾವ ಗ್ಯಾರಂಟಿಯೂಇಲ್ಲ’ ಎನ್ನುತ್ತಾರೆ ವೀಳ್ಯದೆಲೆ ಕೃಷಿ ಮಾಡುತ್ತಿರುವ ರೈತ ಅಜಯ್ ಚೌರಸಿಯಾ
2023ರ ಬಿಸಿಗಾಳಿಗೂ ಮುನ್ನ 2022ರಲ್ಲಿ ಭಾರಿ ಮಳೆಯಾಗಿತ್ತು. "ಲಗ್ತಾ ಥಾ ಜೈಸೆ ಪ್ರಳಯ್ ಆನೆ ವಾಲಾ ಹೋ. ಅಂಧೇರಾ ಚಾ ಜತಾ ಥಾ ಮತ್ತು ಲಗಾತರ್ ಬರ್ಸಾತ್ ಹೋತಾ ಥಾ. ಹಮ್ ಲೋಗ್ ಭೀಗ್ ಭೀಗ್ ಕರ್ ಖೇತ್ ಮೇ ರಹತೇ. ಬಾರಿಶ್ ಮೇ ಭೀಗ್ನೆ ಸೆ ತೋ ಹಮ್ಕೊ ಬುಖಾರ್ ಭಿ ಆ ಗಯಾ ಥಾ [ಪ್ರಳಯವೇ ಆಗುತ್ತದೆ ಎನ್ನುವಂತಹ ಮಳೆ ಬಂದಿತ್ತು. ಎಲ್ಲೆಡೆ ಕತ್ತಲೆ ತುಂಬಿತ್ತು. ನಾವು ಮಳೆಯಲ್ಲಿ ನೆನೆದುಕೊಂಡೇ ಹೊಲದಲ್ಲಿರುತ್ತಿದ್ದೆವು. ಮಳೆಯಲ್ಲಿ ನೆನೆದು ನಮಗೆ ಜ್ವರ ಸಹ ಬಂದಿತ್ತು]" ಎಂದು ರಂಜಿತ್ ಚೌರಸಿಯಾ ಹೇಳುತ್ತಾರೆ.
ಆ ಬಳಿಕ ಜ್ವರ ಬಂದು ಅಪಾರ ನಷ್ಟ ಅನುಭವಿಸಬೇಕಾಯಿತು ಎನ್ನುತ್ತಾರೆ ರಂಜಿತ್ (55). “ನಮ್ಮ ಊರಿನಲ್ಲಿ ಹೆಚ್ಚಿನ ವೀಳ್ಯದೆಲೆ ಬೆಳೆಯುವ ರೈತರು ಆ ವರ್ಷ ನಷ್ಟವನ್ನು ಅನುಭವಿಸಿದರು. ನಾನು ಐದು ಕೊಠ್ಠಾಗಳಲ್ಲಿ [ಸುಮಾರು 0.062 ಎಕರೆ] ವೀಳ್ಯದೆಲೆಯನ್ನು ನೆಟ್ಟಿದ್ದೆ. ನೀರು ನಿಂತಿದ್ದರಿಂದಾಗಿ ವೀಳ್ಯದೆಲೆ ಬಳ್ಳಿಗಳು ಒಣಗಿ ಹೋದವು.” ಆ ಸಮಯದಲ್ಲಿ ‘ಅಸನಿ’ ಚಂಡಮಾರುತದಿಂದಾಗಿ ಒಡಿಶಾದಲ್ಲಿ ಮೂರ್ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗಿತ್ತು.
"ನಿರಂತರ ಬೀಸುವ ಬಿಸಿಗಾಳಿ ಮಣ್ಣನ್ನು ಒಣಗಿಸುತ್ತದೆ, ಬೆಳವಣಿಗೆಯನ್ನು ತಡೆಯುತ್ತದೆ ಮತ್ತು ಹಠಾತ್ ಮಳೆಯಾದಾಗ, ಸಸ್ಯಗಳು ಒಣಗುತ್ತವೆ" ಎಂದು ಇಲ್ಲಿನ ಮಗಹಿ ಪಾನ್ ಉತ್ಪಾದಕ್ ಕಲ್ಯಾಣ್ ಸಮಿತಿಯ ಅಧ್ಯಕ್ಷರೂ ಆಗಿರುವ ರಂಜಿತ್ ಹೇಳುತ್ತಾರೆ.
ಅವರು ಹೇಳುತ್ತಾರೆ, "ಗಿಡಗಳನ್ನು ಹೊಸದಾಗಿ ಹಾಕಲಾಗಿತ್ತು, ಅವುಗಳನ್ನು ಆ ಸಮಯದಲ್ಲಿ ಮಗುವಿನಂತೆ ನೋಡಿಕೊಳ್ಳಬೇಕು. ಹಾಗೆ ಮಾಡದವರ ತೋಟದಲ್ಲಿನವೀಳ್ಯದೆಲೆ ಬಳ್ಳಿಗಳು ಒಣಗುತ್ತವೆ, ನಾನು ಹಲವಾರು ಬಾರಿ ನೀರು ಹಾಯಿಸುತ್ತಿದ್ದೆ. ಕೆಲವೊಮ್ಮೆ ದಿನಕ್ಕೆ 10 ಬಾರಿ ನೀರುಣಿಸಿದ್ದೂ ಇದೆ.”

ಹವಾಮಾನದ ಅನಿಶ್ಚಿತತೆ ಮತ್ತು ನಂತರದ ನಷ್ಟಗಳು ಧೂರಿ ಗ್ರಾಮದ ಅನೇಕ ರೈತರನ್ನು ವೀಳ್ಯದೆಲೆ ಕೃಷಿಯನ್ನು ತ್ಯಜಿಸುವಂತೆ ಮಾಡಿದೆ. ‘10 ವರ್ಷಗಳ ಹಿಂದೆ 150ಕ್ಕೂ ಹೆಚ್ಚು ರೈತರು 10 ಹೆಕ್ಟೇರ್ ವಿಸ್ತೀರ್ಣದಲ್ಲಿ ವೀಳ್ಯದೆಲೆ ಬೆಳೆಯುತ್ತಿದ್ದರು, ಈಗ ಅವರ ಸಂಖ್ಯೆ 100ಕ್ಕಿಂತ ಕಡಿಮೆಯಾಗಿ ಪ್ರಸ್ತುತ 7-8 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ’ ಎಂದು ರಂಜಿತ್ ಚೌರಸಿಯಾ ಹೇಳುತ್ತಾರೆ
ಇನ್ನೊಬ್ಬ ಮಗಹಿ ಬೆಳೆಗಾರ 45 ವರ್ಷದ ಅಜಯ್ ಪ್ರಕಾರ, ಇಂತಹ ಹವಾಗುಣದಿಂದಾಗಿ ಐದು ವರ್ಷಗಳಲ್ಲಿ ಎರಡು ಬಾರಿ ನಷ್ಟವನ್ನು ಎದುರಿಸಬೇಕಾಯಿತು. 2019ರಲ್ಲಿ, ಅವರು ನಾಲ್ಕು ಕಟ್ಟಾಗಳಲ್ಲಿ (ಸುಮಾರು ಒಂದು ಎಕರೆಯ ಹತ್ತನೇ ಒಂದು ಭಾಗ) ವೀಳ್ಯದೆಲೆ ಬೆಳೆದಿದ್ದರು. ತೀವ್ರವಾದ ಚಳಿಯಿಂದಾಗಿ ಅವರ ಬೆಳೆ ನಾಶವಾಯಿತು. ಅಕ್ಟೋಬರ್ 2021ರಲ್ಲಿ ಬೀಸಿದ ಗುಲಾಬ್ ಚಂಡಮಾರುತವು ಭಾರೀ ಮಳೆಗೆ ಕಾರಣವಾಯಿತು ಮತ್ತು ಇದರೊಂದಿಗೆ ಎಲೆಗಳು ಸಂಪೂರ್ಣವಾಗಿ ನಾಶವಾದವು. ಅವರು ನೆನಪಿಸಿಕೊಳ್ಳುತ್ತಾರೆ, “ಎರಡೂ ವರ್ಷಗಳಲ್ಲಿ ನಾನು ಒಟ್ಟು ಸುಮಾರು 2 ಲಕ್ಷ ರೂಪಾಯಿ ನಷ್ಟವನ್ನು ಅನುಭವಿಸಿದೆ.”
*****
ಅಜಯ್ ಚೌರಸಿಯಾ ಅವರು ವೀಳ್ಯದೆಲೆ ಬಳ್ಳಿಗಳು ಅಲುಗಾಡದಂತೆ ಮತ್ತು ಬೀಳದಂತೆ ಬಿದಿರು ಅಥವಾ ಜೊಂಡುಗಳ ತೆಳುವಾದ ಕಾಂಡಗಳಿಗೆ ಕಟ್ಟುತ್ತಿದ್ದಾರೆ. ವೀಳ್ಯದೆಲೆಯ ಹೃದಯ ಆಕಾರದ ಹೊಳೆಯುವ ಹಸಿರು ಎಲೆಗಳು ಬಳ್ಳಿಯ ಮೇಲೆ ನೇತಾಡುತ್ತವೆ. ಅವು ಕೆಲವೇ ದಿನಗಳಲ್ಲಿ ಕೊಯ್ಲಿಗೆ ಸಿದ್ಧವಾಗುತ್ತವೆ.
ಈ ಹಚ್ಚಹಸಿರಿನ ರಚನೆಯ ಒಳಗಿನ ತಾಪಮಾನವು ಹೊರಗಿನ ತಾಪಮಾನಕ್ಕಿಂತ ತಂಪಾಗಿರುತ್ತದೆ. ವಿಪರೀತ ಶಾಖ, ಚಳಿ ಮತ್ತು ಅತಿಯಾದ ಮಳೆಯು ವೀಳ್ಯದೆಲೆಗೆ ದೊಡ್ಡ ಅಪಾಯ ಎಂದು ಅಜಯ್ ಹೇಳುತ್ತಾರೆ. ಸುಡುವ ಬೇಸಿಗೆಯಲ್ಲಿ, ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ಮೀರಿದರೆ, ನಂತರ ಮೇಲಿನಿಂದ ಅವುಗಳ ಮೇಲೆ ನೀರನ್ನು ಸಿಂಪಡಿಸಬೇಕಾಗುತ್ತದೆ. ಅವರು ಸುಮಾರು ಐದು ಲೀಟರ್ ನೀರನ್ನು ಹೊಂದಿರುವ ಮಣ್ಣಿನ ಮಡಕೆಯನ್ನು ತನ್ನ ಭುಜದ ಮೇಲೆ ಹೊತ್ತುಕೊಂಡು, ನೀರನ್ನು ಚಿಮುಕಿಸುತ್ತಿರುವಾಗ ಬಳ್ಳಿಗಳ ನಡುವೆ ನಿಧಾನವಾಗಿ ನಡೆಯುತ್ತಾ ನೀರಿನ ಹರಿವನ್ನು ಚದುರಿಸಲು ತನ್ನ ಅಂಗೈಯನ್ನು ಬಳಸುತ್ತಾರೆ. "ಬಿಸಿಲು ಬಹಳ ಇದ್ದಾಗ, ನಾವು ಹಲವಾರು ಬಾರಿ ನೀರು ಹಾಕಬೇಕಾಗುತ್ತದೆ. ಆದರೆ ಮಳೆ ಮತ್ತು ಚಳಿಯಿಂದ ಅವುಗಳನ್ನು ರಕ್ಷಿಸಲು ಯಾವುದೇ ಮಾರ್ಗವಿಲ್ಲ" ಎಂದು ಅವರು ವಿವರಿಸುತ್ತಾರೆ.
"ಹವಾಗುಣ ಬದಲಾವಣೆಯು ಅನಿಯಮಿತ ಹವಾಮಾನಕ್ಕೆ ಎಷ್ಟರ ಮಟ್ಟಿಗೆ ಕೊಡುಗೆ ನೀಡಿದೆ ಎಂಬುದರ ಕುರಿತು ಯಾವುದೇ ಅಧ್ಯಯನ ನಡೆದಿಲ್ಲವಾದರೂ, ಬದಲಾಗುತ್ತಿರುವ ಹವಾಮಾನ ಮಾದರಿಗಳು ಹವಾಗುಣ ಬದಲಾವಣೆಯ ಪರಿಣಾಮವನ್ನು ಸೂಚಿಸುತ್ತವೆ" ಎಂದು ಗಯಾದಲ್ಲಿನ ದಕ್ಷಿಣ ಬಿಹಾರದ ಕೇಂದ್ರೀಯ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಅರ್ಥ್, ಬಯೋಲಾಜಿಕಲ್ ಮತ್ತು ಎನ್ವಿರಾನ್ಮೆಂಟಲ್ ಸೈನ್ಸ್ ಸಂಸ್ಥೆಯ ಡೀನ್ ಆಗಿರುವ ಸಾರಥಿ ಹೇಳುತ್ತಾರೆ.
ಅಜಯ್ ಅವರ ಬಳಿ ಸ್ವಂತ ಎಂಟು ಕಟ್ಟಾದಷ್ಟು ಅಳತೆಯ ಭೂಮಿಯಿದೆ, ಆದರೆ ಅದು ವಿವಿಧೆಡೆ ಚದುರಿಹೋಗಿದೆ. ಹಾಗಾಗಿ ಅವರು ವಾರ್ಷಿಕ 5000 ರೂ. ಬಾಡಿಗೆಗೆ ಮೂರು ಕಟ್ಟಾ ಅಳತೆಯ ಜಮೀನು ತೆಗೆದುಕೊಂಡಿದ್ದಾರೆ. ಗುತ್ತಿಗೆ ಜಮೀನಿನಲ್ಲಿ ಮಗಹಿ ವೀಳ್ಯದೆಲೆ ಕೃಷಿಗೆ 75 ಸಾವಿರ ಖರ್ಚು ಮಾಡಿದ್ದಾರೆ. ಇದಕ್ಕಾಗಿ ಸ್ಥಳೀಯ ಸ್ವಸಹಾಯ ಸಂಘದಿಂದ 40 ಸಾವಿರ ಸಾಲ ಮಾಡಿದ್ದು, ಮುಂದಿನ ಎಂಟು ತಿಂಗಳವರೆಗೆ ಪ್ರತಿ ತಿಂಗಳು 6 ಸಾವಿರ ರೂಪಾಯಿಗಳಂತೆ ಮರುಪಾವತಿ ಮಾಡಬೇಕಿದೆ. ಸೆಪ್ಟೆಂಬರ್ 2023ರಲ್ಲಿ ನಮ್ಮೊಂದಿಗೆ ಮಾತನಾಡುತ್ತಾ, "ಇಲ್ಲಿಯವರೆಗೆ ನಾನು ಕೇವಲ 12,000 ರೂಗಳನ್ನು ಎರಡು ಕಂತುಗಳಲ್ಲಿ ಕಟ್ಟಿದ್ದೇನೆ" ಎಂದು ಹೇಳಿದ್ದರು.

ಅಜಯ್ ಅವರು ವೀಳ್ಯದೆಲೆ ಬಳ್ಳಿಗಳಿಗೆ ನೀರು ಹನಿಸುತ್ತಿರುವುದು. ಅವರು ತೋಡಿನ ಮೂಲಕ ನಡೆದು ಹೋಗುತ್ತಾ ಹೆಗಲಿ ಮೇಲಿರುವ ಕೊಡದಿಂದ ಸುರಿಯುವ ನೀರಿಗೆ ಕೈ ಅಡ್ಡ ಹಿಡಿದು ಅದು ಎಲ್ಲೆಡೆ ಚಿಮ್ಮುವಂತೆ ಮಾಡುತ್ತಾರೆ

ಅಜಯ್ ಅವರ ಪತ್ನಿ ಗಂಗಾ ದೇವಿ ತಮ್ಮದೇ ಆದ ಬರೇಜಾವನ್ನು ಹೊಂದಿದ್ದಾರೆ, ಆದರೆ ನಷ್ಟದಿಂದಾಗಿ ಅವರು ಹೊರಗೆ ಕೆಲಸ ಮಾಡಬೇಕಾದ ಅನಿವಾರ್ಯತೆಗೆ ಒಳಗಾಗಿದ್ದಾರೆ
ಅಜಯ್ ಅವರ ಪತ್ನಿ ಗಂಗಾದೇವಿ (40) ಕೆಲವೊಮ್ಮೆ ಗಂಡನಿಗೆ ತೋಟದ ಕೆಲಸದಲ್ಲಿ ಸಹಾಯ ಮಾಡುತ್ತಾರೆ ಮತ್ತು ಇತರ ರೈತರ ಹೊಲಗಳಲ್ಲಿ ಕೂಲಿ ಕೆಲಸವನ್ನೂ ಮಾಡುತ್ತಾರೆ. ತನ್ನ ಕೂಲಿ ಕೆಲಸದ ಬಗ್ಗೆ ಹೇಳುತ್ತಾ, “ಇದು ಕಷ್ಟದ ಕೆಲಸ, ಆದರೆ ದಿನಕ್ಕೆ ಕೂಲಿ ಕೇವಲ 200 ರೂ.ಪಾಯಿ ಮಾತ್ರ” ಎನ್ನುತ್ತಾರೆ. ಅವರ ನಾಲ್ಕು ಮಕ್ಕಳು - ಒಂಬತ್ತು ವರ್ಷದ ಮಗಳು ಮತ್ತು 14, 13 ಮತ್ತು 6 ವರ್ಷ ವಯಸ್ಸಿನ ಮೂವರು ಗಂಡು ಮಕ್ಕಳು - ಧೂರಿಯ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ.
ಹವಾಗುಣ ವೈಪರೀತ್ಯದಿಂದ ಬೆಳೆ ಉಂಟಾದ ನಷ್ಟದ ಕಾರಣಕ್ಕೆ ವೀಳ್ಯದೆಲೆ ಬೆಳೆಗಾರರು ಬೆಳೆ ಬಗ್ಗೆ ತಿಳಿವಳಿಕೆ ಹೊಂದಿರುವ ಕಾರಣ ಇತರ ರೈತರ ಹೊಲಗಳಲ್ಲಿ ಕೂಲಿ ಕೆಲಸ ಮಾಡುವ ಅನಿವಾರ್ಯತೆಗೂ ಒಳಗಾಗಿದ್ದಾರೆ.
*****
ಈ ವೀಳ್ಯದೆಲೆಗೆ ಮಗಹಿ ಎನ್ನುವ ಹೆಸರು ಈ ಪ್ರದೇಶದ ಹೆಸರಾದ ಮಗಧದಿಂದ ಬಂದಿದೆ. ವಿಶೇಷವಾಗಿ ಇಲ್ಲಿ ಈ ವೀಳ್ಯದೆಲೆಯನ್ನು ಬೆಳೆಯಲಾಗುತ್ತದೆ. ಬಿಹಾರದ ಮಗಧ ಪ್ರದೇಶವು ದಕ್ಷಿಣ ಬಿಹಾರದ ಗಯಾ, ಔರಂಗಾಬಾದ್, ನವಾಡ ಮತ್ತು ನಳಂದ ಜಿಲ್ಲೆಗಳನ್ನು ಒಳಗೊಂಡಿದೆ. ರೈತ ರಂಜಿತ್ ಚೌರಸಿಯಾ ಹೇಳುತ್ತಾರೆ, "ಮಗಹಿ ಬಳ್ಳಿಯ ಮೊದಲ ತುಂಡನ್ನು ಇಲ್ಲಿಗೆ ಯಾರು ತಂದರೋ ಗೊತ್ತಿಲ್ಲ. ಆದರೆ ಇದರ ಕೃಷಿ ಇಲ್ಲಿ ತಲೆಮಾರುಗಳಿಂದ ನಡೆಯುತ್ತಿದೆ. ಇದರ ಮೂಲ ಮಲೇಷಿಯಾ ಎಂದು ಹೇಳುವದನ್ನು ಕೇಳಿದ್ದೇವೆ." ರಂಜಿತ್ ಅವರಿಗೆ ವೀಳ್ಯದೆಲೆ ಬೇಸಾಯದಲ್ಲಿ ವಿಶೇಷ ಆಸಕ್ತಿಯಿದ್ದು ಅವರು ಮಗಹಿ ವೀಳ್ಯದೆಲೆಗೆ ಗ್ಲೋಬಲ್ ಇಂಡಿಕೇಷನ್ (ಜಿಐ) ಟ್ಯಾಗ್ ಪಡೆಯುವ ಸಲುವಾಗಿ ಅರ್ಜಿಯನ್ನು ಸಲ್ಲಿಸಿದ್ದರು.
ಮಗಹಿ ಎಲೆಯು ಚಿಕ್ಕ ಮಗುವಿನ ಅಂಗೈ ಗಾತ್ರದಲ್ಲಿರುತ್ತದೆ - 8ರಿಂದ 15 ಸೆಂ.ಮೀ ಉದ್ದ ಮತ್ತು 6.6ರಿಂದ 12 ಸೆಂ.ಮೀ ಅಗಲ. ಸ್ಪರ್ಶಕ್ಕೆ ಪರಿಮಳಯುಕ್ತ ಮತ್ತು ಮೃದುವಾದ ಅನುಭವವನ್ನು ನೀಡುತ್ತದೆ, ಈ ಎಲೆಯಲ್ಲಿ ಬಹುತೇಕ ಯಾವುದೇ ನಾರು ಇರುವುದಿಲ್ಲ, ಆದ್ದರಿಂದ ಅದು ಬಾಯಿಯಲ್ಲಿ ಬಹಳ ಸುಲಭವಾಗಿ ಕರಗುತ್ತದೆ - ಇದು ಇತರ ಜಾತಿಯ ವೀಳ್ಯದೆಲೆಗಳಲ್ಲಿ ಇಲ್ಲದ ವಿಶಿಷ್ಟ ಅತ್ಯುತ್ತಮ ಗುಣವಾಗಿದೆ. ಇದರ ಶೆಲ್ಫ್ ಬಾಳಿಕೆ ಕೂಡ ದೀರ್ಘವಾಗಿರುತ್ತದೆ. ಕಿತ್ತ ನಂತರ, ಇದನ್ನು 3-4 ತಿಂಗಳುಗಳ ತನಕ ಇಡಬಹುದು.


ಎಲೆಗಳ ಭಾರಕ್ಕೆ ಬಳ್ಳಿ ಕುಸಿಯದ ಹಾಗೆ ಮಾಡಲು ಅಜಯ್ ಕಡ್ಡಿಯೊಂದನ್ನು ಆಸರೆಯಾಗಿ ನೀಡಲು ಪ್ರಯತ್ನಿಸುತ್ತಿದ್ದಾರೆ. ಮಗಹಿ ಎಲೆಗಳು ಸುವಾಸನೆಯಿಂದ ಕೂಡಿರುತ್ತವೆ ಜೊತೆಗೆ ಕೈಗಳಿಗೆ ಮೃದುವಾದ ಅನುಭವ ನೀಡುತ್ತವೆ. ಈ ಎಲೆಗಳಲ್ಲಿ ಬಹುತೇಕ ನಾರೂ ಇರುವುದಿಲ್ಲ. ಈ ಎಲೆಯ ಈ ಗುಣವೇ ಅದನ್ನು ವಿಶಿಷ್ಟವಾಗಿಸುತ್ತದೆ
ಒದ್ದೆ ಬಟ್ಟೆಯಲ್ಲಿ ಸುತ್ತಿ ತಣ್ಣನೆಯ ಜಾಗದಲ್ಲಿ ಇಟ್ಟು ದಿನವೂ ಎಲೆ ಕೊಳೆಯುತ್ತಿದೆಯೇ ಎಂದು ಪರೀಕ್ಷಿಸಬೇಕು, ಇದ್ದರೆ ಅದನ್ನು ತಕ್ಷಣ ತೆಗೆಯಬೇಕು, ಇಲ್ಲದಿದ್ದರೆ ಅದು ಎಲೆಗಳಿಗೂ ಹರಡುತ್ತದೆ’ ಎನ್ನುತ್ತಾರೆ ರಂಜಿತ್. ಅವರು ಮಾತನಾಡುತ್ತಾ ತನ್ನ ಪಕ್ಕಾ ಮನೆಯ ನೆಲದ ಮೇಲೆ ಕುಳಿತು ಎಲೆಗಳನ್ನು ಕಟ್ಟುಗಳಾಗಿ ಕಟ್ಟುತ್ತಿದ್ದರೆ, ನಾವು ಅವರ ಕೈಚಳಕವನ್ನು ನೋಡುತ್ತಿದ್ದೆವು.
ಅವರು 200 ಎಲೆಗಳನ್ನು ಒಂದರ ಮೇಲೊಂದು ಇರಿಸಿ ಅವುಗಳ ತೊಟ್ಟನ್ನು ಬ್ಲೇಡ್ ಬಳಸಿ ಕತ್ತರಿಸುತ್ತಾರೆ. ನಂತರ ಎಲೆಗಳನ್ನು ದಾರದಿಂದ ಕಟ್ಟಿ ಬಿದಿರಿನ ಬುಟ್ಟಿಯಲ್ಲಿ ಇಡುತ್ತಾರೆ.
ವೀಳ್ಯದ ಬಳ್ಳಿಗಳನ್ನು ಕತ್ತರಿಸಿ ಅದರ ದಂಟುಗಳನ್ನು ನೆಡಲಾಗುತ್ತದೆ. ಏಕೆಂದರೆ ಅವು ಹೂವುಗಳನ್ನು ಉತ್ಪಾದಿಸುವುದಿಲ್ಲವಾದ ಕಾರಣ ಅವು ಬೀಜಗಳನ್ನು ಹೊಂದಿರುವುದಿಲ್ಲ. ರಂಜಿತ್ ಚೌರಸಿಯಾ ಹೇಳುತ್ತಾರೆ, "ಸಹ ರೈತನ ಬೆಳೆ ವಿಫಲವಾದಾಗ, ಅವನ ಹೊಲವನ್ನು ಮರುನಿರ್ಮಾಣ ಮಾಡಲು ಇತರ ರೈತರು ತಮ್ಮ ಉತ್ಪನ್ನಗಳನ್ನು ಅವನೊಂದಿಗೆ ಹಂಚಿಕೊಳ್ಳುತ್ತಾರೆ. ಇದಕ್ಕಾಗಿ ನಾವು ಎಂದಿಗೂ ಪರಸ್ಪರ ಹಣವನ್ನು ತೆಗೆದುಕೊಳ್ಳುವುದಿಲ್ಲ."
ಬರೇಜಾದಲ್ಲಿ ಬಳ್ಳಿಗಳನ್ನು ಬೆಳೆಯಲಾಗುತ್ತದೆ ಮತ್ತು ಒಂದು ಕಟ್ಟಾ (ಸುಮಾರು 0.031 ಎಕರೆ) ಭೂಮಿಯಲ್ಲಿ ಬರೇಜಾ ತಯಾರಿಸಲು ಸುಮಾರು 30,000 ರೂ. ಖರ್ಚಾಗುತ್ತದೆ. ಈ ವೆಚ್ಚವು ಎರಡು ಕಟ್ಟಾಗಳಿಗೆ 45,000 ರೂ.ಗಳಷ್ಟಾಗುತ್ತದೆ. ಮಣ್ಣನ್ನು ಉಳುಮೆ ಮಾಡಿ ಏರಿ ಮಾಡಲಾಗುತ್ತದೆ. ನಂತರ ಅದರ ಬುಡದಲ್ಲಿ ನಿಲ್ಲದಂತೆ ಎತ್ತರದಲ್ಲಿ ನೆಡಲಾಗುತ್ತದೆ.


ರಂಜಿತ್ ಚೌರಸಿಯಾ ಅವರ ತಾಯಿ (ಎಡ) ವೀಳ್ಯದೆಲೆಗಳನ್ನು ಬೇರ್ಪಡಿಸುತ್ತಿದ್ದಾರೆ. ಎಲೆಗಳನ್ನು 3-4 ತಿಂಗಳುಗಳವರೆಗೆ ಸಂಗ್ರಹಿಸಬಹುದು, ಆದರೆ ಒಂದು ಕೊಳೆತ ಎಲೆಯು ಉಳಿದ ಎಲೆಗಳನ್ನು ಹಾಳುಮಾಡುತ್ತದೆ. ಅವುಗಳನ್ನು ಒದ್ದೆ ಬಟ್ಟೆಯಲ್ಲಿ ಸುತ್ತಿ ತಣ್ಣನೆಯ ಜಾಗದಲ್ಲಿ ಇಡಬೇಕು ಮತ್ತು ಎಲೆ ಕೊಳೆಯುತ್ತಿದೆಯೇ ಎಂದು ಪ್ರತಿದಿನ ಪರೀಕ್ಷಿಸಬೇಕು ಮತ್ತು ಕೊಳೆತ ಎಲೆ ಕಂಡಲ್ಲಿ ಇತರ ಎಲೆಗಳಿಗೆ ಹರಡದಂತೆ ಅದನ್ನು ತಕ್ಷಣ ತೆಗೆದುಹಾಕಬೇಕು ಎಂದು ರಂಜಿತ್ (ಬಲ) ಹೇಳುತ್ತಾರೆ


ಮಗಹಿ ವೀಳ್ಯದೆಲೆ ಬಳ್ಳಿ ತನ್ನ ಒಂದು ವರ್ಷದ ಜೀವಿತಾವಧಿಯಲ್ಲಿ ಕನಿಷ್ಠ 50 ಎಲೆಗಳನ್ನು ಉತ್ಪಾದಿಸುತ್ತದೆ. ಈ ಎಲೆಯನ್ನು ಸ್ಥಳೀಯ ಮಾರುಕಟ್ಟೆಗಳಲ್ಲಿ ಹಾಗೂ ಉತ್ತರ ಪ್ರದೇಶದ ಬನಾರಸ್ ನಗರದ ಸಗಟು ಮಾರುಕಟ್ಟೆಯಲ್ಲಿ ಒಂದು ಅಥವಾ ಎರಡು ರೂಪಾಯಿಗೆ ಮಾರಾಟ ಮಾಡಲಾಗುತ್ತದೆ. ಇದು ನಗದು ಬೆಳೆ, ಆದರೆ ಬಿಹಾರ ಸರ್ಕಾರ ಇದನ್ನು ತೋಟಗಾರಿಕೆ ಎಂದು ಪರಿಗಣಿಸುತ್ತದೆ, ಆದ್ದರಿಂದ ರೈತರಿಗೆ ಕೃಷಿ ಯೋಜನೆಗಳ ಪ್ರಯೋಜನಗಳು ಸಿಗುವುದಿಲ್ಲ
ಮಗಹಿ ವೀಳ್ಯದೆಲೆ ಬಳ್ಳಿ ತನ್ನ ಒಂದು ವರ್ಷದ ಜೀವಿತಾವಧಿಯಲ್ಲಿ ಕನಿಷ್ಠ 50 ಎಲೆಗಳನ್ನು ಉತ್ಪಾದಿಸುತ್ತದೆ.. ಸ್ಥಳೀಯ ಮಾರುಕಟ್ಟೆಯಲ್ಲದೆ, ದೇಶದಲ್ಲೇ ಅತಿ ದೊಡ್ಡ ವೀಳ್ಯದೆಲೆ ಮಾರುಕಟ್ಟೆಯಾಗಿರುವ ಉತ್ತರ ಪ್ರದೇಶದ ವಾರಣಾಸಿಯ ಸಗಟು ಮಾರುಕಟ್ಟೆಯಲ್ಲಿ ಒಂದು ಎಲೆ ಒಂದು ಅಥವಾ ಎರಡು ರೂಪಾಯಿಗೆ ಮಾರಾಟವಾಗುತ್ತದೆ.
ಮಗಹಿ ವೀಳ್ಯದೆಲೆ 2017ರಲ್ಲಿ ಜಿಐ ಟ್ಯಾಗ್ ಪಡೆದುಕೊಂಡಿದೆ . ಈ ಜಿಐ ಮಗಧ್‌ನ ಭೌಗೋಳಿಕ ಪ್ರದೇಶದ 439 ಹೆಕ್ಟೇರ್‌ಗಳಲ್ಲಿ ಪ್ರತ್ಯೇಕವಾಗಿ ಬೆಳೆದ ಎಲೆಗಳಿಗೆ ಮತ್ತು ಜಿಐ ಟ್ಯಾಗ್ ಪಡೆಯಲು ರೈತರು ಉತ್ಸುಕರಾಗಿದ್ದರು ಮತ್ತು ಪಡೆದ ನಂತರ ನಿರಾಳರಾಗಿದ್ದಾರೆ.
ಆದರೆ ಇದೆಲ್ಲ ಆಗಿ ವರ್ಷಗಳು ಕಳೆದಿದ್ದರೂ ರೈತರು ತಮಗೆ ಪ್ರಯೋಜನವಾಗಿಲ್ಲ ಎಂದು ಹೇಳುತ್ತಾರೆ. "ಸರ್ಕಾರವು ಮಗಹಿಯನ್ನು ಪ್ರಚಾರ ಮಾಡುತ್ತದೆ ಎಂದು ನಾವು ನಿರೀಕ್ಷಿಸಿದ್ದೆವು, ಅದು ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸುತ್ತದೆ ಮತ್ತು ನಮಗೆ ಉತ್ತಮ ದರ ಸಿಗುತ್ತದೆ ಎಂದು ನಾವು ನಿರೀಕ್ಷಿಸಿದ್ದೆವು, ಆದರೆ ಅಂತಹದ್ದು ಏನೂ ಸಂಭವಿಸಲಿಲ್ಲ" ಎಂದು ರಂಜಿತ್ ಚೌರಸಿಯಾ ನಮಗೆ ಹೇಳುತ್ತಾರೆ. "ದುಖ್ ತೋ ಯೇ ಹೈ ಕೀ ಜಿಐ ಟ್ಯಾಗ್ ಮಿಲ್ನೆ ಕೆ ಬಾವ್ಜೂದ್ ಸರ್ಕಾರ್ ಕುಚ್ ನಹೀ ಕರ್ ರಹಿ ಹೈ ಪಾನ್ ಕಿಸಾನೋ ಕೇಲಿಯೆ. [ಜಿಐ ಟ್ಯಾಗ್ ಸಿಕ್ಕರೂ ಸರ್ಕಾರವು ವೀಳ್ಯದೆಲೆ ಬೆಳೆಗಾರರಿಗಾಗಿ ಏನನ್ನೂ ಮಾಡುತ್ತಿಲ್ಲ ಎಂಬುದು ದುಃಖದ ಸಂಗತಿ. ಸರ್ಕಾರವು ವೀಳ್ಯದೆಲೆಯನ್ನು ಕೃಷಿ ಎಂದು ಪರಿಗಣಿಸುತ್ತಿಲ್ಲ]" ಎಂದು ಅವರು ಹೇಳುತ್ತಾರೆ.
"ಬಿಹಾರ ಸರ್ಕಾರವು ಎಲೆಯನ್ನು ತೋಟಗಾರಿಕೆಯ ಡಿಯಲ್ಲಿ ಗುರುತಿಸಿದೆ, ಹೀಗಾಗಿ ರೈತರಿಗೆ ಬೆಳೆ ವಿಮೆಯಂತಹ ಕೃಷಿ ಯೋಜನೆಗಳ ಪ್ರಯೋಜನಗಳನ್ನು ಸಿಗುತ್ತಿಲ್ಲ. “ಪ್ರತಿಕೂಲ ಹವಾಮಾನದಿಂದ ನಮ್ಮ ಬೆಳೆಗಳು ಹಾನಿಗೊಳಗಾದಾಗ ನಮಗೆ ಸಿಗುವ ಏಕೈಕ ಪ್ರಯೋಜನವೆಂದರೆ ಪರಿಹಾರ, ಆದರೆ ಪರಿಹಾರದ ಮೊತ್ತವು ಹಾಸ್ಯಾಸ್ಪದವಾಗಿರುತ್ತದೆ "ಎಂದು ಒಂದು ಹೆಕ್ಟೇರ್ (ಸರಿಸುಮಾರು 79 ಕಟ್ಟಾ) ಹಾನಿಗೆ ತಮಗೆ ಸಿಕ್ಕಿದ 10,000 ರೂ.ಗಳ ಪರಿಹಾರದ ಬಗ್ಗೆ ರಂಜಿತ್ ಚೌರಸಿಯಾ ಹೇಳುತ್ತಾರೆ. "ನೀವು ಅದನ್ನು ಕಟ್ಟಾದ ಲೆಕ್ಕದಲ್ಲಿ ಲೆಕ್ಕ ಹಾಕಿದರೆ, ಪ್ರತಿ ರೈತನು ಒಂದು ಕಟ್ಟಾ ಅಳತೆಯ ತೋಟದ ನಷ್ಟಕ್ಕೆ ಸುಮಾರು 126 ರೂ.ಗಳನ್ನು ಪಡೆಯುತ್ತಾನೆ." ಮತ್ತು ಇದನ್ನು ಪಡೆಯಲು ಸಹ ರೈತರು ಅನೇಕ ಬಾರಿ ಜಿಲ್ಲಾ ಕೃಷಿ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ. ಇಷ್ಟೆಲ್ಲ ಓಡಾಡಿದ ನಂತರವೂ ಕೆಲವೊಮ್ಮೆ ಪರಿಹಾರ ಸಿಗುವುದಿಲ್ಲ.
*****


ಎಡ: ಕರುಣಾ ದೇವಿ ಮತ್ತು ಅವರ ಪತಿ ಸುನಿಲ್ ಚೌರಸಿಯಾ ತಮ್ಮ ಮನೆಯಲ್ಲಿ. ಕರುಣಾ ದೇವಿ ಮಗಹಿ ವೀಳ್ಯದೆಲೆ ಕೃಷಿಗಾಗಿ 1 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಕೊಯ್ಲು ಮುಗಿದ ನಂತರ ಸಾಲ ತೀರಿಸಬಹುದೆಂದು ಅವರು ಭಾವಿಸಿದ್ದರು. ಜೊತೆಗೆ ಅವರು ತಮ್ಮ ಕೆಲವು ಆಭರಣಗಳನ್ನು ಸಹ ಅಡವಿಟ್ಟಿದ್ದರು. ಬಲ: ಅಜಯ್ ಮತ್ತು ಅವರ ಪತ್ನಿ ಗಂಗಾ ದೇವಿ ಧೌರಿ ಗ್ರಾಮದಲ್ಲಿರುವ ತಮ್ಮ ಮನೆಯಲ್ಲಿ. 2019ರಲ್ಲಿ, ಅಕ್ಟೋಬರ್ 2021ರಲ್ಲಿ ಗುಲಾಬ್ ಚಂಡಮಾರುತದಿಂದ ಉಂಟಾದ ತೀವ್ರ ಶೀತಲ ವಾತಾವರಣ ಮತ್ತು ಭಾರಿ ಮಳೆಯಿಂದಾಗಿ, ಅವರ ಬೆಳೆ ನಾಶವಾಯಿತು. "ಎರಡೂ ವರ್ಷಗಳಿಂದ ನಾನು ಸುಮಾರು 2 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದೇನೆ" ಎಂದು ಅವರು ಹೇಳುತ್ತಾರೆ
2023ರಲ್ಲಿ ತೀವ್ರ ಬಿಸಿಲಿಗೆಅವರ ಬೆಳೆ ನಾಶವಾದ ನಂತರ, ಸುನೀಲ್ ಮತ್ತು ಅವರ ಪತ್ನಿ ಈಗ ಇತರ ರೈತರ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದಾರೆ. "ಘರ್ ಚಲಾನೆ ಕೆಲಿಯೆ ಮಜ್ದೂರಿ ಕರ್ನಾ ಪಡ್ತಾ ಹೈ. ಪಾನ್ ಕೆ ಖೇತ್ ಮೇ ಕಾಮ್ ಕರ್ನಾ ಆಸಾನ್ ಹೈ ಕ್ಯೂಂಕಿ ಹಮ್ ಶುರು ಸೆ ಯೇ ಕರ್ ರಹೇ ಹೈನ್ ಇಸ್ಲಿಯೇ ಪಾನ್ ಕೆ ಖೇತ್ ಮೇ ಹೀ ಮಜ್ದೂರಿ ಕಾರ್ತೇ ಹೈ, [ಮನೆ ನಿರ್ವಹಣೆಗೆ ಕೂಲಿ ಕೆಲಸ ಮಾಡಲೇಬೇಕು, ಮೊದಲಿನಿಂದಲೂ ವೀಳ್ಯದೆಲೆ ಬೇಸಾಯದ ಕೆಲಸ ಮಾಡುತ್ತಿರುವುದರಿಂದ ವೀಳ್ಯದೆಲೆ ತೋಟಗಳಲ್ಲಿ ದುಡಿಯುವುದು ಸುಲಭ. ಹಾಗಾಗಿ ವೀಳ್ಯದೆಲೆ ತೋಟದಲ್ಲಿ ಮಾತ್ರ ಕೂಲಿ ಕೆಲಸ ಮಾಡುತ್ತೇವೆ ]” ಎನ್ನುತ್ತಾರೆ.
ಕೂಲಿಯಿಂದ ಸುನಿಲ್ ಪ್ರತಿದಿನ 300 ರೂ. ಗಳಿಸುತ್ತಿದ್ದು, ಅವರ ಪತ್ನಿ ಕರುಣಾ ದೇವಿ 8-10 ಗಂಟೆ ದುಡಿದು ದಿನಕ್ಕೆ 200 ರೂ. ಗಳಿಸುತ್ತಿದ್ದಾರೆ. ಈ ಆದಾಯವು ಆರು ಜನರ ಕುಟುಂಬವನ್ನು ಪೋಷಿಸಲು ಸಹಾಯ ಮಾಡುತ್ತದೆ, ಇದರಲ್ಲಿ ಮೂರು ವರ್ಷದ ಮಗಳು ಮತ್ತು ಒಂದು, ಐದು ಮತ್ತು ಏಳು ವರ್ಷದ ಮೂವರು ಗಂಡು ಮಕ್ಕಳು ಸೇರಿದ್ದಾರೆ.
2020ರಲ್ಲಿ ವಿಧಿಸಲಾದ ಕೋವಿಡ್-19ರ ಲಾಕ್‌ಡೌನ್ ಸಾಕಷ್ಟು ನಷ್ಟವನ್ನು ತಂದೊಡ್ಡಿತ್ತು, “ಲಾಕ್‌ಡೌನ್ ಸಮಯದಲ್ಲಿ, ಮಾರುಕಟ್ಟೆಗಳಿಂದ ಸಾರಿಗೆಯವರೆಗೆ ಎಲ್ಲವನ್ನೂ ಮುಚ್ಚಲಾಯಿತು. ನನ್ನ ಮನೆಯಲ್ಲಿ 500 ಧೋಲಿ [200 ವೀಳ್ಯದೆಲೆಗಳ ಕಟ್ಟು] ಪಾನ್ ಇಟ್ಟುಕೊಂಡಿದ್ದೆ. ಆದರೆ ಅದನ್ನು ಮಾರಲು ಸಾಧ್ಯವಾಗಲಿಲ್ಲ. ಎಲ್ಲವೂ ಇಟ್ಟಲ್ಲೇ ಕೊಳೆತು ಹೋದವು” ಎಂದು ಅವರು ನೆನಪಿಸಿಕೊಳ್ಳುತ್ತಾರೆ.
ಕರುಣಾ ದೇವಿ
ಹೇಳುತ್ತಾರೆ, "[ವೀಳ್ಯದೆಲೆ]
ಕೃಷಿಯನ್ನು ಬಿಡುವಂತೆ ನಾನು ಆಗಾಗ್ಗೆ ಅವರಿಗೆ ಹೇಳುತ್ತೇನೆ." ಆದರೆ ಸುನಿಲ್ ತನ್ನ
ಪತ್ನಿಯ ಕಳವಳವನ್ನು ತಳ್ಳಿಹಾಕುತ್ತಾ, "ಇದು ನಮ್ಮ ಪೂರ್ವಜರ ಪರಂಪರೆಯಾಗಿದೆ. ನಾವು ಅದನ್ನು ಹೇಗೆ ಬಿಡಲು ಸಾಧ್ಯ? ಒಂದು ವೇಳೆ ಬಿಟ್ಟರೂ ಬೇರೆ ಏನು ಮಾಡಲು ಸಾಧ್ಯ?"
ಎಂದು ಕೇಳುತ್ತಾರೆ.
ಈ ವರದಿಯನ್ನು ಬಿಹಾರದಲ್ಲಿ ಅಂಚಿನಲ್ಲಿರುವ ಜನರಿಗಾಗಿ ಹೋರಾಡುವ ಟ್ರೇಡ್ ಯೂನಿಯನಿಸ್ಟ್ ನೆನಪಿಗಾಗಿ ನೀಡುವ ಫೆಲೋಶಿಪ್‌ನ ಬೆಂಬಲದಿಂದ ತಯಾರಿಸಲಾಗಿದೆ.
ಅನುವಾದ: ಶಂಕರ. ಎನ್. ಕೆಂಚನೂರು