ಛಾಯಾಗ್ರಹಣ ಎಂದಿಗೂ ಅಂಚಿನಲ್ಲಿರುವ ಸಮುದಾಯಗಳ ಯೋಚನೆಯಲ್ಲಿಯೂ ಇರಲಿಲ್ಲ, ಏಕೆಂದರೆ ಕ್ಯಾಮರಾ ಅವರಿಗೆ ಕೈಗೆಟುಕುವ ಸಾಧನವಾಗಿರಲಿಲ್ಲ. ಈ ಹೋರಾಟವನ್ನು ಗಮನಿಸಿ ನಾನು ಈ ದೊಡ್ಡ ಬಿರುಕನ್ನು ಸರಿಪಡಿಸಲು ಮತ್ತು ಛಾಯಾಗ್ರಹಣವನ್ನು ಅಂಚಿನಲ್ಲಿರುವ, ಅದರಲ್ಲೂ ದಲಿತರು, ಮೀನುಗಾರರು, ಟ್ರಾನ್ಸ್ ಸಮುದಾಯಗಳು, ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಗಳು ಹಾಗೂ ಸತತವಾಗಿ ತುಳಿತಕ್ಕೆ ಒಳಪಟ್ಟ ಸಮುದಾಯಗಳ ಯುವ ಪೀಳಿಗೆಯ ಬದುಕಿನಲ್ಲಿ ತರಲು ಬಯಸಿದೆ.

ನನ್ನ ವಿದ್ಯಾರ್ಥಿಗಳು ತಮಗೆ ಅಲ್ಪಸ್ವಲ್ಪ ತಿಳಿದ ಕಥೆಗಳನ್ನು ತಮ್ಮದೇ ದಾಟಿಯಲ್ಲಿ ಹೇಳುವುದು ನನಗೆ ಬೇಕಾಗಿತ್ತು. ಈ ಕಾರ್ಯಾಗಾರಗಳಲ್ಲಿ ಅವರು ತಮ್ಮ ದೈನಂದಿನ ಜೀವನದ ಸಂಗತಿಗಳನ್ನು ಫೋಟೋಗ್ರಾಫಿ ಮೂಲಕ ಹೇಳುತ್ತಿದ್ದಾರೆ. ಇವು ಅವರದೇ ಸ್ವಂತ ಕಥೆಗಳು, ಅವರ ಹೃದಯಕ್ಕೆ ತುಂಬಾ ಹತ್ತಿರವಾದ ಕಥೆಗಳು. ಅವರು ಕ್ಯಾಮೆರಾ ಮತ್ತು ಶೂಟಿಂಗ್ ಮಾಡುವುದನ್ನು ಸಂಭ್ರಮಿಸುತ್ತಾರೆ. ಅವರು ಹಾಗೆ ಮಾಡಬೇಕೆಂಬುದು, ಫ್ರೇಮ್‌ ಹಾಗೂ ಆಂಗಲ್‌ಗಳ ಬಗ್ಗೆ ಯೋಚಿಸಬೇಕೆಂಬುದು ನನ್ನ ಬಯಕೆಯಾಗಿತ್ತು.

ಅವರು ತಮ್ಮ ಜೀವನದ ಫೋಟೋಗಳನ್ನು ಕ್ಲಿಕ್ ಮಾಡಿದ್ದಾರೆ; ಎಲ್ಲವೂ ವಿಭಿನ್ನವಾಗಿವೆ.

ನನಗೆ ಅವರು ಫೋಟೋಗಳನ್ನು ತೋರಿಸುವಾಗ ನಾನು ಫೋಟೋಗಳ ಹಿಂದಿರುವ ರಾಜಕೀಯ ಮತ್ತು ಪರಿಸ್ಥಿತಿಯಯನ್ನು ಅದು ಹೇಗೆ ತೋರಿಸುತ್ತದೆ ಎಂಬ ಬಗ್ಗೆ ವಿವರಿಸುತ್ತೇನೆ. ಕಾರ್ಯಾಗಾರದ ಕೊನೆಯಲ್ಲಿ ಅವರು ಸಾಮಾಜಿಕ-ರಾಜಕೀಯ ವಿಚಾರಗಳ ಬಗ್ಗೆ ತಿಳಿದುಕೊಳ್ಳುತ್ತಾರೆ.

Left: Maga akka showing the photos she took to a fishermen at Nagapattinam beach.
PHOTO • M. Palani Kumar
Right: Hairu Nisha taking pictures in Kosasthalaiyar river near Chennai.
PHOTO • M. Palani Kumar

ಎಡ: ಮಗಾ ಅಕ್ಕ ತಾನು ತೆಗೆದ ಫೋಟೋಗಳನ್ನು ನಾಗಪಟ್ಟಿಣಂ ಬೀಚ್‌ನಲ್ಲಿ ಮೀನುಗಾರರಿಗೆ ತೋರಿಸುತ್ತಿರುವುದು. ಬಲ: ಹೈರು ನಿಶಾ ಚೆನ್ನೈ ಬಳಿಯ ಕೊಸಸ್ತಲೈಯಾರ್ ನದಿಯಲ್ಲಿ ಫೋಟೋ ತೆಗೆಯುತ್ತಿರುವುದು

M. Palani Kumar taking a photography class with students of Dr. Ambedkar Pagutharivu Padasalai in Vyasarpadi, Chennai.
PHOTO • Nandha Kumar

ಚೆನ್ನೈನ ವ್ಯಾಸರಪಾಡಿಯಲ್ಲಿರುವ ಡಾ. ಅಂಬೇಡ್ಕರ್ ಪಗುತರಿವು ಪಡಸಾಲೈ ವಿದ್ಯಾರ್ಥಿಗಳಿಗೆ ಫೋಟೋಗ್ರಾಫಿ ತರಗತಿ ತೆಗೆದುಕೊಳ್ಳುತ್ತಿರುವ ಎಂ.ಪಳನಿ ಕುಮಾರ್

ಹೆಚ್ಚಿನ ಫೋಟೋಗಳು ಕ್ಲೋಸ್‌ಅಪ್‌ಗಳು. ಅದು ಅವರ ಕುಟುಂಬ ಮತ್ತು ಮನೆಯಾಗಿರುವುದರಿಂದ ಈ ಕ್ಲೋಸ್‌ಅಪ್‌ ಶಾಟ್‌ಗಳನ್ನು ತೆಗೆಯಹುದು. ಬೇರೆ ಯಾರಾದರೂ ಹೊರಗಿನವರಾಗಿದ್ದರೆ ಸ್ವಲ್ಪ ಅಂತರ ಕಾಯ್ದುಕೊಳ್ಳಬೇಕಾಗುತ್ತದೆ. ಇವರು ಹಾಗೆ ಮಾಡುವುದಿಲ್ಲ, ಇವರು ಈಗಾಗಲೇ ಸಬ್ಜೆಕ್ಟ್‌ನೊಂದಿಗೆ ಒಂದು ಸಂಬಂಧವನ್ನು ಬೆಳೆಸಿಕೊಂಡಿದ್ದಾರೆ.

ಸಮಾನ ಮನಸ್ಕರ ಸಹಕಾರದೊಂದಿಗೆ ನಾನು ಟ್ರೈನಿಗಳಿಗಾಗಿ ಕ್ಯಾಮೆರಾಗಳನ್ನು ಖರೀದಿಸಿದೆ. ಡಿಎಸ್‌ಎಲ್‌ಅರ್‌  ಕ್ಯಾಮರಾವನ್ನು ಮುಟ್ಟಿ ನೇರಾನೇರ ಅನುಭವ ಪಡೆಯುವುದರಿಂದ ಅವರಿಗೆ ವೃತ್ತಿಪರವಾಗಿ ಬೆಳೆಯಲು ಸುಲಭವಾಗುತ್ತದೆ.

ಅವರ ಕೆಲವು ಫೋಟೋಗಳು ‘ರೀಫ್ರೇಮ್ಡ್ - ನಾರ್ತ್ ಚೆನ್ನೈ ಥ್ರೂ ಯಂಗ್ ರೆಸಿಡೆಂಟ್ಸ್’ ಎಂಬ ವಿಷಯದಡಿಯಲ್ಲಿವೆ. ಇವು ಹೊರಗಿನ ಜನರಿಗೆ ಒಂದು ಕೈಗಾರಿಕಾ ಕೇಂದ್ರವಾಗಿ ತೋರುವ ಉತ್ತರ ಚೆನ್ನೈನ ರೂಢಿಯಿಂದ ಬಂದ ಚಿತ್ರಣವನ್ನುಒಡೆದು, ಪುನರ್ನಿರ್ಮಿಸಲು ಸಮಾಜಕ್ಕೆ ನೀಡುವ ಎಚ್ಚರಿಕೆಯ ಸಂಕೇತವಾಗಿ ಕಾಣುತ್ತವೆ.

ಮಧುರೈನ ಮಂಜಮೇಡುವಿನ ಪೌರ ಕಾರ್ಮಿಕರ ಮಕ್ಕಳಾದ ಹದಿನಾರರಿಂದ ಇಪ್ಪತ್ತೊಂದು ವರ್ಷ ಪ್ರಾಯದ ಹನ್ನೆರಡು ಮಂದಿ ಯುವಕರು ನನ್ನೊಂದಿಗೆ 10 ದಿನಗಳ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಇದು ಹಿಂದುಳಿದ ಸಮುದಾಯದ ಮಕ್ಕಳಿಗಾಗಿ ನಡೆಸಿದ ಮೊದಲ ಕಾರ್ಯಾಗಾರವಾಗಿತ್ತು. ಈ ಕಾರ್ಯಾಗಾರದಲ್ಲಿ ಮೊದಲ ಬಾರಿಗೆ ವಿದ್ಯಾರ್ಥಿಗಳು ತಮ್ಮ ಪೋಷಕರ ಕೆಲಸದ ಪರಿಸ್ಥಿತಿಗಳನ್ನು ವೀಕ್ಷಿಸಿದರು. ಅವರು ತಮ್ಮ ಕಥೆಯನ್ನು ಜಗತ್ತಿಗೆ ತಿಳಿಸುವ ಉತ್ಸಾಹವನ್ನು ಹೊಂದಿದ್ದರು.

ಒಡಿಶಾದ ಗಂಜಾಂನಲ್ಲಿ ಏಳು ಜನ ಮತ್ತು ತಮಿಳುನಾಡಿನ ನಾಗಪಟ್ಟಣಂನಲ್ಲಿ ಎಂಟು ಜನ ಮಹಿಳಾ ಮೀನುಗಾರರಿಗಾಗಿ ನಾನು ಮೂರು ತಿಂಗಳ ಕಾರ್ಯಾಗಾರವನ್ನು ನಡೆಸಿದ್ದೆ. ಗಂಜಾಂ ನಿರಂತರವಾದ ಕಡಲ ಕೊರೆತದಿಂದಾಗಿ ವ್ಯಾಪಕವಾದ ಹಾನಿಗೊಳಗಾದ ಪ್ರದೇಶವಾಗಿದೆ. ನಾಗಪಟ್ಟಿಣಂ ಆಗಾಗ ಶ್ರೀಲಂಕಾ ನೌಕಾ ಪಡೆಗಳಿಂದ ದಾಳಿಗೆ ಒಳಗಾಗುವ ಹೆಚ್ಚು ವಲಸೆ ಕಾರ್ಮಿಕರು ಮತ್ತು ಮೀನುಗಾರರನ್ನು ಹೊಂದಿರುವ ಕರಾವಳಿ ಪ್ರದೇಶ.

ಈ ಕಾರ್ಯಾಗಾರಗಳಿಂದಾಗಿ ಅವರಿಗೆ ತಮ್ಮ ಸುತ್ತ ಇರುವ ಸವಾಲುಗಳ ಫೋಟೋ ತೆಗೆಯಲು ಸಾಧ್ಯವಾಯಿತು.

Fisherwomen in Nagapattinam (left) and Ganjam (right) during a photography class with Palani
PHOTO • Ny Shajan
Fisherwomen in Nagapattinam (left) and Ganjam (right) during a photography class with Palani.
PHOTO • Satya Sainath

ಪಳನಿ ಅವರೊಂದಿಗೆ ಛಾಯಾಗ್ರಹಣ ತರಗತಿಯಲ್ಲಿರುವ ನಾಗಪಟ್ಟಿಣಂ (ಎಡ) ಮತ್ತು ಗಂಜಾಂನ (ಬಲ) ಮಹಿಳಾ ಮೀನುಗಾರು

. ಪ್ರತಿಮಾ , 22
ದಕ್ಷಿಣ್‌ ಫೌಂಡೇಷನ್‌ನ ಕ್ಷೇತ್ರ ಸಿಬ್ಬಂದಿ
ಪೊಡಂಪೇಟ , ಗಂಜಾಂ , ಒಡಿಶಾ

ಫೋಟೋಗ್ರಾಫಿ ನನ್ನ ಸಮುದಾಯ ಮಾಡುವ ಕೆಲಸಕ್ಕೆ ಗೌರವವನ್ನು ತೋರಿಸಲು ಒಂದು ಅವಕಾಶ ಮಾಡಿಕೊಟ್ಟಿತು. ಮಾತ್ರವಲ್ಲ, ನನ್ನ ಸುತ್ತಲಿನ ಜನರೊಂದಿಗೆ ನಾನು ಬೆರೆಯುವಂತೆ ಮಾಡಿತು.

ನದಿಯಲ್ಲಿ ಮಕ್ಕಳು ತಮಾಷೆಗಾಗಿ ದೋಣಿಯನ್ನು ತಿರುಗಿಸುತ್ತಿರುವುದು ನನ್ನ ಮೆಚ್ಚಿನ ಫೋಟೋಗಳಲ್ಲಿ ಒಂದು. ಫೋಟೋಗ್ರಾಫಿಗೆ ಒಂದು ಕ್ಷಣವನ್ನು ಫ್ರೀಜ್ ಮಾಡುವ ಶಕ್ತಿಯಿರುವುದನ್ನು ನಾನು ತಿಳಿದುಕೊಂಡೆ.

ಮೀನುಗಾರ ಸಮುದಾಯದ ಸದಸ್ಯರೊಬ್ಬರು ಕಡಲ ಕೊರೆತದಿಂದ ಹಾನಿಗೊಳಗಾದ ತಮ್ಮ ಮನೆಯಿಂದ ಸಾಮಾನುಗಳನ್ನು ರಕ್ಷಿಸುವ ಫೋಟೋವನ್ನು ನಾನು ಸೆರೆಹಿಡಿದಿದ್ದೇನೆ. ಹವಾಮಾನ ಬದಲಾವಣೆಯಿಂದಾಗಿ ಅಂಚಿನಲ್ಲಿರುವ ಈ ಸಮುದಾಯಗಳು ಎದುರಿಸುತ್ತಿರುವ ಸವಾಲುಗಳನ್ನು ಈ ಫೋಟೋ ತೋರಿಸುತ್ತದೆ. ನಾನು ಈ ಫೋಟೋ ತೆಗೆದದ್ದು ಒಂದು ಹೆಮ್ಮೆಯ ಸಂಗತಿ.

ನಾನು ಮೊದಲ ಬಾರಿಗೆ ಕ್ಯಾಮೆರಾ ಹಿಡಿದಾಗ ಅದನ್ನು ಸಮರ್ಪಕವಾಗಿ ಬಳಸುತ್ತೇನೋ ಇಲ್ಲವೋ ಎಂಬ ಅನುಮಾನವಿತ್ತು.  ಭಾರವಾದ ಯಾವುದೋ ಯಂತ್ರವನ್ನು ಹೊತ್ತಂತೆ ತೋರುತ್ತಿತ್ತು. ಅದೊಂದು ಹೊಸ ಅನುಭವವಾಗಿತ್ತು. ನಾನು ನನ್ನ ಮೊಬೈಲ್‌ನಲ್ಲಿ ಹೀಗೇ ಸುಮ್ಮನೆ ಏನೇನೋ ಫೋಟೋಗಳನ್ನು ತೆಗೆಯುತ್ತಿದ್ದೆ. ಆದರೆ ಈ ಕಾರ್ಯಾಗಾರವು ಫೋಟೋಗಳ ಮೂಲಕ ಬಾಂಧವ್ಯವನ್ನು ಬೆಳಸುವ ಮತ್ತು ಕಥೆಗಳನ್ನು ಹೇಳುವ ಕಲೆಯತ್ತ ನನ್ನನ್ನು ಆಕರ್ಷಿಸಿತು. ಆರಂಭದಲ್ಲಿ ಛಾಯಾಗ್ರಹಣದ ಸೈದ್ಧಾಂತಿಕ ಅಂಶಗಳು ಗೊಂದಲವನ್ನುಂಟು ಮಾಡುತ್ತಿದ್ದವು. ಆದರೆ ಕ್ಷೇತ್ರಕಾರ್ಯ ಮತ್ತು ಕ್ಯಾಮೆರಾದೊಂದಿಗಿನ ಅನುಭವ ದಕ್ಕಿದ ನಂತರ ಎಲ್ಲವನ್ನೂ ಕ್ಲಿಕ್ ಮಾಡಲು ಶುರುಮಾಡಿದೆ. ವರ್ಗ ಸಿದ್ಧಾಂತವನ್ನು ನೈಜ ಪ್ರಪಂಚಕ್ಕೆ ಅನ್ವಯಿಸಲು ಸಾಧ್ಯವಾಯಿತು.

Fishermen in Podampeta cleaning their nets at the landing center.
PHOTO • Ch. Pratima

ಪೊದಂಪೇಟಾದಲ್ಲಿ ಮೀನುಗಾರರು ಲ್ಯಾಂಡಿಂಗ್ ಸೆಂಟರ್ ನಲ್ಲಿ ತಮ್ಮ ಬಲೆಗಳನ್ನು ಸ್ವಚ್ಛಗೊಳಿಸುತ್ತಿರುವುದು

Fishermen getting ready to use the nets to fish in Ganjam district, Odisha.
PHOTO • Ch. Pratima

ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಮೀನುಗಾರರು ಬಲೆ ಬಳಸಿ ಮೀನು ಹಿಡಿಯಲು ತಯಾರಾಗುತ್ತಿರುವುದು

At an auction of the mackeral fish at the Arjipally fish harbour in Odisha
PHOTO • Ch. Pratima

ಒಡಿಶಾದ ಅರ್ಜಿಪಲ್ಲಿ ಮೀನು ಬಂದರಿನಲ್ಲಿ ನಡೆಯುತ್ತಿರುವ ಬಂಗುಡೆ ಮೀನಿನ ಹರಾಜು

In Podampeta, a house damaged due to sea erosion is no longer livable.
PHOTO • Ch. Pratima

ಪೊದಂಪೇಟೆಯಲ್ಲಿ ಕಡಲ್ಕೊರೆತದಿಂದ ಹಾನಿಗೀಡಾದ ಈ ಮನೆ ಈಗ ವಾಸಕ್ಕೆ ಯೋಗ್ಯವಾಗಿಲ್ಲ

A student from Podampeta village walks home from school. The route has been damaged due to years of relentless erosion by the sea; the entire village has also migrated due to this.
PHOTO • Ch. Pratima

ಪೊದಂಪೇಟ ಗ್ರಾಮದ ವಿದ್ಯಾರ್ಥಿಯೊಬ್ಬ ಶಾಲೆಯಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವುದು . ನಿರಂತರ ಕಡಲ ಕೊರೆತದಿಂದಾಗಿ ರಸ್ತೆ ಹಾನಿಗೊಳಗಾಗಿದೆ ; ಇದರಿಂದ ಇಡೀ ಗ್ರಾಮಕ್ಕೆ ಗ್ರಾಮವೇ ವಲಸೆ ಹೋಗಿದೆ

Constant erosion by the sea has damaged the houses
PHOTO • Ch. Pratima

ನಿರಂತರ ಕಡಲ ಕೊರೆತದಿಂದಾಗಿ ಹಾನಿಗೊಳಗಾಗಿರುವ ಮನೆಗಳು

Ongoing erosion in Arjipally village of Odisha's Ganjam district.
PHOTO • Ch. Pratima

ಒಡಿಶಾದ ಗಂಜಾಂ ಜಿಲ್ಲೆಯ ಅರ್ಜಿಪಲ್ಲಿ ಗ್ರಾಮದ ಕಡಲ ಸವೆತ

Auti looks at the remains of a home in Podampeta village
PHOTO • Ch. Pratima

ಪೊಡಂಪೇಟ ಗ್ರಾಮದ ಮನೆಯೊಂದರ ಅವಶೇಷಗಳನ್ನು ನೋಡುತ್ತಿರುವ ಆಟಿ

*****

ಪಿ . ಇಂದ್ರ , 22
ಡಾ. ಅಂಬೇಡ್ಕರ್ ಸಂಜೆ ಶಿಕ್ಷಣ ಕೇಂದ್ರದ ಬಿಎಸ್ಸಿ ಭೌತಶಾಸ್ತ್ರದ ವಿದ್ಯಾರ್ಥಿ
ಅರಪಾಲಯಂ , ಮಧುರೈ , ತಮಿಳುನಾಡು

"ನೀವು ನಿಮ್ಮ, ನಿಮ್ಮ ಸುತ್ತಮುತ್ತಲಿನವರ ಮತ್ತು ನಿಮ್ಮ ಜನರು ಮಾಡುವ ಕೆಲಸಗಳನ್ನು ದಾಖಲಿಸಿ."

ಪಳನಿ ಅಣ್ಣ ನನಗೆ ಕ್ಯಾಮೆರಾ ಕೊಡುವಾಗ ಹೇಳಿದ್ದು ಹೀಗೆ. ನನ್ನ ಅಪ್ಪ ಮೊದಮೊದಲು ವರ್ಕ್‌ಶಾಪ್‌ಗೆ ಹೋಗಲು ನನಗೆ ಅನುಮತಿ ನೀಡಲಿಲ್ಲ. ಆದರೆ ನನಗೆ ಇಲ್ಲಿಗೆ ಬರುವುದನ್ನು ನೆನೆದುಕೊಂಡಾಗ ಒಂದು ರೀತಿಯ ಥ್ರಿಲ್ ಉಂಟಾಗುತ್ತಿತ್ತು. ಅವರನ್ನು ಒಪ್ಪಿಸುವುದು ನನಗೆ ಅಗತ್ಯವಿತ್ತು. ಕೊನೆಯಲ್ಲಿ ಅವರೇ ನನ್ನ ಫೋಟೋಗ್ರಾಫಿಯ ವಿಷಯವಾದರು.

ನಾನು ಪೌರ ಕಾರ್ಮಿಕರ ನಡುವೆ ವಾಸಿಸುತ್ತೇನೆ. ನನ್ನ ಅಪ್ಪನಂತೆ ಅವರೂ ಕೂಡ ಜಾತಿ ದಬ್ಬಾಳಿಕೆಯಿಂದಾಗಿ ಈ ಉದ್ಯೋಗದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ನನ್ನ ಅಪ್ಪನೂ ಅವರಲ್ಲಿ ಒಬ್ಬರಾಗಿದ್ದರೂ ಕಾರ್ಯಾಗಾರಕ್ಕೆ ಬರುವ ಮೊದಲು ಅವರ ಕೆಲಸ ಮತ್ತು ಸವಾಲುಗಳ ಬಗ್ಗೆ ಏನೇನೂ ತಿಳಿದಿರಲಿಲ್ಲ. ನನಗೆ ಹೇಳಿದ್ದು ಒಂದೇ ಒಂದು ಮಾತು- ಚೆನ್ನಾಗಿ ಓದಿ ಸ್ಟೇಟ್‌ ಜಾಬ್ ಪಡೆಯಬೇಕು ಮತ್ತು ಯಾವತ್ತಿಗೂ ಪೌರ ಕಾರ್ಮಿಕನಾಗಬೇಡ ಎಂದು. ನಮ್ಮ ಶಾಲೆಯ ಶಿಕ್ಷಕರು ಕೂಡ ನಮಗೆ ಇದನ್ನೇ ಹೇಳುತ್ತಿದ್ದರು.

ಕೊನೆಗೆ ಎರಡು ಮೂರು ದಿನ ನನ್ನ ಅಪ್ಪನ ಕೆಲಸವನ್ನು ದಾಖಲು ಮಾಡುವಾಗ ನನಗೆ ಅವರ ಕೆಲಸದ ಬಗ್ಗೆ ತಿಳಿಯಿತು. ತ್ಯಾಜ್ಯ ವಿಲೇವಾರಿ ಮಾಡುವ ಪೌರ ಕಾರ್ಮಿಕರ ಕೆಲಸದ ಪ್ರತಿಕೂಲ ಪರಿಸ್ಥಿತಿಗಳನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಸರಿಯಾದ ಕೈಗವಸುಗಳು ಮತ್ತು ಬೂಟುಗಳಿಲ್ಲದೆ ಮನೆಗಳ ವಿಷಕಾರಿ ತ್ಯಾಜ್ಯವನ್ನು ಸಂಗ್ರಹಿಸುತ್ತಿದ್ದರು. ಅವರು ಬೆಳಿಗ್ಗೆ ಆರು ಗಂಟೆಗೆ ಕೆಲಸಕ್ಕೆ ಹೋಗುತ್ತಾರೆ. ಒಂದು ಸೆಕೆಂಡ್ ತಡವಾಗಿ ಹೋದರೂ ಕೆಲಸ ಕೊಡುವ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಅವರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಾರೆ.

ನನ್ನ ಸ್ವಂತ ಜೀವನವನ್ನು ನನ್ನ ಕಣ್ಣುಗಳೇ ಗಮನಿಸದೆ ಇದ್ದರೂ ನನ್ನ ಕ್ಯಾಮರಾ ಅದನ್ನು ತೋರಿಸಿದೆ. ಆ ಅರ್ಥದಲ್ಲಿ, ಇದು ನನ್ನ ಮೂರನೇ ಕಣ್ಣು ಎಂದಾಯ್ತು.  ನಾನು ನನ್ನ ತಂದೆಯ ಫೋಟೋಗ್ರಾಫಿ ಮಾಡುವಾಗ ಅವರು ತಮ್ಮ ದೈನಂದಿನ ಹೋರಾಟಗಳನ್ನು ಮತ್ತು ತಮ್ಮ ಯೌವನದ ದಿನಗಳಿಂದಲೂ ಈ ಕೆಲಸಕ್ಕೆ ಹೇಗೆ ಸಿಕ್ಕಿಬಿದ್ದರೆಂಬುದನ್ನು ನನಗೆ ಹೇಳಿದರು. ಈ ಸಂಭಾಷಣೆ ನಮ್ಮ ನಡುವಿನ ಬಾಂಧವ್ಯವನ್ನು ಇನ್ನೂ ಗಟ್ಟಿಗೊಳಿಸಿತು.

ಈ ವರ್ಕ್‌ಶಾಪ್‌ನಿಂದಾಗಿ ನಮ್ಮೆಲ್ಲರ ಜೀವನದಲ್ಲಿ ಒಂದು ಪ್ರಮುಖ ತಿರುವು ಸಿಕ್ಕಿತು.

Residents at home Komas palayam, Madurai
PHOTO • P. Indra

ಮಧುರೈನ ಕೋಮಾಸ್ ಪಾಳ್ಯಂನ ನಿವಾಸಿಗಳು ತಮ್ಮ ಮನೆಯಲ್ಲಿ

Pandi, P. Indra's father was forced to take up sanitation work at 13 years as his parents couldn't afford to educate him – they were sanitation workers too. Workers like him suffer from skin diseases and other health issues due to the lack of proper gloves and boots
PHOTO • P. Indra

ಇಂದ್ರ ಅವರ ಅಪ್ಪ ಪಾಂಡಿ ಪಿ ತಮ್ಮ 13 ವರ್ಷ ಪ್ರಾಯಕ್ಕೇ ಈ ತ್ಯಾಜ್ಯ ವಿಲೇವಾರಿ ಮಾಡುವ ಕೆಲಸಕ್ಕೆ ಇಳಿದವರು. ಅವರ ಪೋಷಕರಿಗೆ ತಮ್ಮ ಮಗನಿಗೆ ಶಿಕ್ಷಣ ನೀಡಲು ಸಾಧ್ಯವಾಗಿರಲಿಲ್ಲ . ಏಕೆಂದರೆ, ಅವರೂ ಪೌರ ಕಾರ್ಮಿಕರಾಗಿದ್ದರು. ಸರಿಯಾದ ಕೈಗವಸು ಮತ್ತು ಬೂಟುಗಳಿಲ್ಲದೆ ಕಾರ್ಮಿಕರು ಚರ್ಮ ರೋಗಗಳು ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ

Pandi cleaning public toilets without safety gear. His earning ensure that his children get an education; today they pursuing their Bachelors.
PHOTO • P. Indra

ಸುರಕ್ಷತಾ ಸಾಧನಗಳಿಲ್ಲದೆ ಸಾರ್ವಜನಿಕ ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಿರುವ ಪಾಂಡಿ . ಅವರ ಈ ಸಂಪಾದನೆಯಿಂದಲೇ ಅವರ ಮಕ್ಕಳು ಪದವಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ

Kaleshwari is a daughter and wife of a sanitation worker. She says that education is the only means to release her children from this vicious cycle
PHOTO • P. Indra

ಕಾಳೇಶ್ವರಿಯವರು ಪೌರ ಕಾರ್ಮಿಕರೊಬ್ಬರ ಮಗಳಾಗಿದ್ದು, ಅವರ ಪತಿಯೂ ಅದೇ ಕೆಲಸ ಮಾಡುತ್ತಾರೆ. ತನ್ನ ಮಕ್ಕಳು ವಿಷವರ್ತುಲದಿಂದ ಹೊರಬರಲು ಶಿಕ್ಷಣವೊಂದೇ ಮಾರ್ಗ ಎಂದು ಅವರು ಹೇಳುತ್ತಾರೆ

*****

ಸುಗಂತಿ ಮಾಣಿಕ್ಕವೇಲ್ , 27 ವರ್ಷ
ಮೀನುಗಾರ್ತಿ
ನಾಗಪಟ್ಟಣಂ , ತಮಿಳುನಾಡು

ಕ್ಯಾಮೆರಾ ನನ್ನ ಇಡೀ ದೃಷ್ಟಿಕೋನವನ್ನೇ ಬದಲಿಸಿತು. ಕ್ಯಾಮರಾ ಹಿಡಿದ ಮೇಲೆ ನನಗೆ ಒಂದು ರೀತಿಯ ಸ್ವತಂತ್ರ ಭಾವ ಮತ್ತು ಆತ್ಮವಿಶ್ವಾಸವ ಹೆಚ್ಚಾಗಿದೆ. ಇದು ನನಗೆ ತುಂಬಾ ಜನರೊಂದಿಗೆ ಮಾತುಕತೆ ನಡೆಸುವಂತೆ ಮಾಡಿತು. ನಾನು ನನ್ನ ಜೀವನದುದ್ದಕ್ಕೂ ನಾಗಪಟ್ಟಿಣಂನಲ್ಲಿ ವಾಸಿಸುತ್ತಿದ್ದರೂ, ಕ್ಯಾಮೆರಾದೊಂದಿಗೆ ಬಂದರಿಗೆ ಬಂದದ್ದು ಇದೇ ಮೊದಲು.

ನಾನು ಐದು ವರ್ಷದಿಂದ ಮೀನುಗಾರರಾಗಿ ಕೆಲಸ ಮಾಡುತ್ತಿರುವ 60 ವರ್ಷ ಪ್ರಾಯದ ನನ್ನ ತಂದೆ ಮಾಣಿಕ್ಕವೇಲ್‌ ಅವರ ಕೆಲಸವನ್ನು ದಾಖಲು ಮಾಡಿದ್ದೇನೆ. ಉಪ್ಪುನೀರಿಗೆ ದೀರ್ಘಕಾಲದವರೆಗೆ ತಮ್ಮನ್ನು ಒಡ್ಡಿಕೊಳ್ಳುವುದರಿಂದ ಅವರ ಕಾಲ್ಬೆರಳುಗಳು ಜಡ್ಡುಗಟ್ಟಿ ಹೋಗಿವೆ. ಅಲ್ಲಿ ರಕ್ತ ಸಂಚಾರ ಮಾತ್ರ ನಡೆಯುತ್ತಿದೆ. ಆದರೂ ನಮ್ಮ ಹೊಟ್ಟೆಬಟ್ಟೆಗಾಗಿ ಅವರು ಪ್ರತಿದಿನ ಮೀನು ಹಿಡಿಯುತ್ತಾರೆ.

ವೆಲ್ಲಪಳ್ಳಂ ಮೂಲದ 56 ವರ್ಷ ಪ್ರಾಯದ ಪೂಪತಿ ಅಮ್ಮನ ಪತಿ 2002 ರಲ್ಲಿ ಶ್ರೀಲಂಕಾದ ನೌಕಾ ಪಡೆಗಳಿಂದ ಕೊಲ್ಲಲ್ಪಟ್ಟರು. ಅಂದಿನಿಂದ ಅವರು ಬದುಕು ಕಟ್ಟಿಕೊಳ್ಳಲು ಮೀನುಗಳನ್ನು ಖರೀದಿಸಿ ಮಾರುತ್ತಿದ್ದಾರೆ.  ನಾನು ಫೋಟೋ ತೆಗೆದ ಇನ್ನೊಬ್ಬ ಮೀನುಗಾರ್ತಿ ತಂಗಮ್ಮಾಳ್. ಅವರ ಪತಿ ಸಂಧಿವಾತದಿಂದ ನರಳುತಿದ್ದು, ಮಕ್ಕಳು ಶಾಲೆಗೆ ಹೋಗುತ್ತಾರೆ. ಆದ್ದರಿಂದ ಅವರು ನಾಗಪಟ್ಟಣಂನ ಬೀದಿಗಳಲ್ಲಿ ಮೀನು ಮಾರಲು ಶುರು ಮಾಡಿದರು. ಪಾಲಂಗಲ್ಲಿಮೇಡುವಿನ ಮಹಿಳೆಯರು ಸೀಗಡಿಗಳ ಬಲೆಗಳನ್ನು ಬಳಸಿ ಸಮುದ್ರದಿಂದ ಮೀನು ಹಿಡಿಯುತ್ತಾರೆ. ನಾನು ಈ ಎರಡೂ ಜೀವನೋಪಾಯಗಳನ್ನು ದಾಖಲಿಸಿದ್ದೇನೆ.

ನಾನು ಮೀನುಗಾರರ ಹಳ್ಳಿಯಲ್ಲಿ ಜನಿಸಿದರೂ, ಒಂದು ನಿರ್ದಿಷ್ಟ ವಯಸ್ಸಿನ ನಂತರ ಕಡಲ ತೀರಕ್ಕೆ ಹೋಗುವುದನ್ನೇ ನಿಲ್ಲಿಸಿದ್ದೆ. ನಾನು ಫೋಟೋಗಳ ಮೂಲಕ ದಾಖಲಾತಿ ಪ್ರಾರಂಭಿಸಿದಾಗ ನನ್ನ ಸಮುದಾಯ ಮತ್ತು ನಮ್ಮ ದೈನಂದಿನ ಜೀವನದಲ್ಲಿ ನಾವು ಎದುರಿಸುತ್ತಿರುವ ಹೋರಾಟಗಳು ಅರ್ಥವಾದವು.

ಈ ವರ್ಕ್‌ಶಾಪ್‌ ನನ್ನ ಜೀವನದಲ್ಲಿಯೇ ಒಂದು ದೊಡ್ಡ ಅವಕಾಶ ಎಂದು ನಾನು ಭಾವಿಸುತ್ತೇನೆ.

In Velappam, Nagapattinam, Sakthivel and Vijay pull the nets that were placed to trap prawns.
PHOTO • Suganthi Manickavel

ಶಕ್ತಿವೇಲ್ ಮತ್ತು ವಿಜಯ್ ನಾಗಪಟ್ಟಿನಂನ ವೇಲಪ್ಪಂನಲ್ಲಿ ಸೀಗಡಿಗಳನ್ನು ಹಿಡಿಯಲು ಹಾಕಿದ್ದ ಬಲೆಗಳನ್ನು ಎಳೆಯುತ್ತಿರುವುದು

Kodiselvi relaxes on the shore in Vanavanmahadevi after collecting prawns from her nets.
PHOTO • Suganthi Manickavel

ಕೋಡಿಸೆಲ್ವಿ ತನ್ನ ಬಲೆಗಳಿಂದ ಸಿಗಡಿಗಳನ್ನು ಸಂಗ್ರಹಿಸಿ ವನವನ್ಮಹಾದೇವಿಯ ದಡದಲ್ಲಿ ವಿಶ್ರಾಂತಿ ಪಡೆಯುತ್ತಿರುವುದು

Arumugam and Kuppamal thoroughly check the net for prawns at Vanavanmahadevi in Nagapattinam.
PHOTO • Suganthi Manickavel

ಅರ್ಮುಗಂ ಮತ್ತು ಕುಪ್ಪಮಾಲ್ ನಾಗಪಟ್ಟಿನಂನ ವನವನ್ಮಹಾದೇವಿಯಲ್ಲಿ ಸಿಗಡಿಗಾಗಿ ಇಡೀ ಬಲೆಯನ್ನು ಪರಿಶೀಲಿಸುತ್ತಿರುವುದು

Indira Gandhi (in focus) ready to pull the prawn nets.
PHOTO • Suganthi Manickavel

ಸಿಗಡಿ ಬಲೆಗಳನ್ನು ಎಳೆಯಲು ಸಿದ್ಧರಾಗಿರುವ ಇಂದಿರಾ ಗಾಂಧಿ ( ಫೋಕಸ್ )

In Avarikadu, Kesavan prepares to throw the nets in the canal.
PHOTO • Suganthi Manickavel

ಅವರಿಕಾಡು ಎಂಬಲ್ಲಿ ಕಾಲುವೆಗೆ ಬಲೆ ಬೀಸಲು ತಯಾರಾಗುತ್ತಿರುವ ಕೇಶವನ್

When sardines are in season, many fishermen are required for a successful catch
PHOTO • Suganthi Manickavel

ಸಾರ್ಡೀನ್‌ಗಳ ಸೀಸನ್‌ನಲ್ಲಿ ಯಶಸ್ವಿಯಾಗಿ ಮೀನು ಹಿಡಿಯಲು ಹೆಚ್ಚಿನ ಮೀನುಗಾರರ ಅಗತ್ಯವಿದೆ

*****

ಲಕ್ಷ್ಮಿ ಎಂ ., 42
ಮೀನುಗಾರ್ತಿ
ತಿರುಮುಲ್ಲೈವಾಸಲ್ , ನಾಗಪಟ್ಟಣಂ , ತಮಿಳುನಾಡು

ಛಾಯಾಗ್ರಾಹಕ ಪಳನಿ ಮಹಿಳಾ ಮೀನುಗಾರರಿಗೆ ತರಬೇತಿ ನೀಡಲು ಮೀನುಗಾರರ ಗ್ರಾಮವಾದ ತಿರುಮುಲ್ಲೈವಾಸಲ್‌ಗೆ ಬಂದಾಗ ನಾವು  ಏನು ಫೋಟೋ ತೆಗೆಯುತ್ತೇವೆಯೋ, ಹೇಗೆ ತೆಗೆಯುತ್ತೇವೆಯೋ ಎಂದೆಲ್ಲಾ ಆತಂಕವನ್ನು ಹೊಂದಿದ್ದೆವು. ಆದರೆ ನಾವು ಕ್ಯಾಮೆರಾವನ್ನು ಕೈಯಲ್ಲಿ ಹಿಡಿದ ತಕ್ಷಣ ಆ ಚಿಂತೆಗಳು ಮಾಯವಾದವು. ಈಗ ನಾವು ಹೆಚ್ಚು ಆತ್ಮವಿಶ್ವಾಸವನ್ನು ಹೊಂದಿದ್ದೇವೆ ಮತ್ತು ನಮ್ಮಲ್ಲಿ ನಮಗೆ ನಂಬಿಕೆಯಿದೆ.

ನಾವು ಆಕಾಶ, ಸಮುದ್ರತೀರ ಮತ್ತು ಸುತ್ತಮುತ್ತ ಕಾಣುವುದೆಲ್ಲದರ ಫೋಟೋ ತೆಗೆಯಲು ತೀರಕ್ಕೆ ಹೋದಾಗ ಮೊದಮೊದಲು ನಾವು ಏನು ಮಾಡುತ್ತಿದ್ದೇವೆ ಎಂದು ಪ್ರಶ್ನಿಸಿ ಗ್ರಾಮದ ಮುಖ್ಯಸ್ಥರು ನಮಗೆ ಅಡ್ಡಿಪಡಿಸಿದರು. ಅವರಿಗೆ ನಾವು ಹೇಳುವುದನ್ನು ಕೇಳುವ ಸಹನೆ ಇರಲಿಲ್ಲ ಮತ್ತು ಫೋಟೋಗಳನ್ನು ತೆಗೆಯದಂತೆ ನಮ್ಮನ್ನು ತಡೆಯುತ್ತಲೇ ಇದ್ದರು. ನಾವು ಮುಂದಿನ ಗ್ರಾಮ ಚಿನ್ನಕುಟ್ಟಿಗೆ ಹೋದಾಗ ಇಂತಹ ಅಡ್ಡಿಗಳನ್ನು ಎದುರಿಸಲು ಗ್ರಾಮ ಪಂಚಾಯತ್ ಅಧ್ಯಕ್ಷರ ಅನುಮತಿ ಕೇಳಿದೆವು.

ನಾವು ಮಬ್ಬು ಮಬ್ಬಾದ ಫೋಟೋಗಳನ್ನು ತೆಗೆದಾಗ ಮತ್ತೆ ಶೂಟ್ ಮಾಡುವಂತೆ ಪಳನಿ ಯಾವಾಗಲೂ ಒತ್ತಾಯಿಸುತ್ತಾರೆ; ಇದರಿಂದ ತಪ್ಪುಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸರಿಪಡಿಸಲು ನಮಗೆ ಸಹಾಯವಾಗುತ್ತದೆ. ಆತುರದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವುದಾಗಲೀ ಅಥವಾ ಕೆಲಸ ಮಾಡುವುದಾಗಲೀ ಮಾಡಬಾರದು ಎಂಬುದನ್ನು ನಾನು ಕಲಿತಿದ್ದೇನೆ. ಇದು ತುಂಬಾ ಒಳ್ಳೆಯ ಅನುಭವವಾಗಿತ್ತು.

*****

ನೂರ್ ನಿಶಾ ಕೆ ., 17
ಬಿ.ವೊಕ್ ಡಿಜಿಟಲ್ ಜರ್ನಲಿಸಂ , ಲೊಯೋಲಾ ಕಾಲೇಜು
ತಿರುವೊಟ್ಟಿಯೂರ್ , ಉತ್ತರ ಚೆನ್ನೈ , ತಮಿಳುನಾಡು

ಮೊಟ್ಟಮೊದಲ ಬಾರಿಗೆ ಕ್ಯಾಮರಾ ಕೈಗೆ ಸಿಕ್ಕಿದಾಗ ಅದು ಇಷ್ಟು ದೊಡ್ಡ ಬದಲಾವಣೆಗಳನ್ನು ತರಲಿದೆ ಎಂಬುದನ್ನು ನಾನು ಊಹಿಸಿರಲಿಲ್ಲ. ಫೋಟೋಗ್ರಾಫಿಯ ಮೊದಲು ಮತ್ತು ನಂತರ ಎಂದು ನಾನು ನನ್ನ ಬದುಕನ್ನು ಎರಡು ಭಾಗಗಳನ್ನಾಗಿ ಮಾಡುತ್ತೇನೆ.  ನಾನು ಚಿಕ್ಕ ವಯಸ್ಸಿನಲ್ಲೇ ನನ್ನ ತಂದೆಯನ್ನು ಕಳೆದುಕೊಂಡೆ. ನಮ್ಮನ್ನು ಸಾಕಲು ತಾಯಿ ತುಂಬಾ ಕಷ್ಟಪಡುತ್ತಿದ್ದಾರೆ.

ಲೆನ್ಸ್ ಮೂಲಕ ಪಳನಿ ಅಣ್ಣ ನನಗೆ ವಿಭಿನ್ನವಾದ ಮತ್ತು ಹೊಸದಾದ ಜಗತ್ತನ್ನು ತೋರಿಸಿದರು. ನಾವು ಸೆರೆಹಿಡಿಯುವ ಫೋಟೋಗಳು ಕೇವಲ ಫೋಟೋಗಳಲ್ಲ, ಅನ್ಯಾಯವನ್ನು ಪ್ರಶ್ನಿಸುವ ದಾಖಲೆಗಳು ಎಂದು ನಾನು ಅರ್ಥಮಾಡಿಕೊಂಡಿದ್ದೇನೆ.

ಅವರು ಒಂದು ವಿಷಯವನ್ನು ಆಗಾಗ ಹೇಳುತ್ತಾರೆ: "ಫೋಟೋಗ್ರಾಫಿಯನ್ನು ನಂಬಿ, ಅದು ನಿಮ್ಮ ಅಗತ್ಯಗಳನ್ನು ಪೂರೈಸುತ್ತದೆ," ಎಂದು.  ಇದು ನಿಜವೆಂದು ನನಗೆ ಅರ್ಥವಾಗಿದೆ. ಈಗ ಕೆಲವೊಮ್ಮೆ ಕೆಲಸಕ್ಕೆ ಹೋಗಲು ಸಾಧ್ಯವಾಗದ ನನ್ನ ತಾಯಿಗೆ ನಾನು ನೆರವಾಗುತ್ತೇನೆ.

Industrial pollutants at the Ennore port near Chennai makes it unfit for human lives. Despite these conditions, children are training to become sportspersons.
PHOTO • Noor Nisha K.

ಚೆನ್ನೈ ಬಳಿಯ ಎನ್ನೋರ್ ಬಂದರಿನಲ್ಲಿರುವ ಕೈಗಾರಿಕಾ ಮಾಲಿನ್ಯಗಳು ಮಾನವ ಜೀವಕ್ಕೆ ಕಂಟಕವಾಗಿವೆ. ಈ ಪರಿಸ್ಥಿತಿಗಳ ಹೊರತಾಗಿಯೂ ತಮ್ಮ ಮಕ್ಕಳನ್ನು ಕ್ರೀಡಾ ಪಟುಗಳನ್ನಾಗಿ ಮಾಡಲು ತರಬೇತಿ ನೀಡುತ್ತಿದ್ದಾರೆ

Young sportspersons from the community must train close to the industrial plants spewing toxic gases everyday.
PHOTO • Noor Nisha K.

ಸಮುದಾಯದ ಯುವ ಕ್ರೀಡಾಪಟುಗಳು ಪ್ರತಿದಿನ ವಿಷಕಾರಿ ಅನಿಲಗಳನ್ನು ಉಗುಳುವ ಕೈಗಾರಿಕಾ ಸ್ಥಾವರಗಳ  ಸಮೀಪವೇ ತರಬೇತಿ ಪಡೆಯಬೇಕಾಗಿದೆ

*****

ಎಸ್ . ನಂದಿನಿ , 17
ಎಂ,ಒ.ಪಿ ವೈಷ್ಣವ್ ಮಹಿಳಾ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿನಿ
ವ್ಯಾಸರಪಾಡಿ, ಉತ್ತರ ಚೆನ್ನೈ, ತಮಿಳುನಾಡು

ನನ್ನ ಮನೆಯ ಹತ್ತಿರ ಆಟವಾಡುತ್ತಿದ್ದ ಮಕ್ಕಳೇ ನನ್ನ ಫೋಟೋಗ್ರಾಫಿಯ ಮೊದಲ ಸಬ್ಜೆಕ್ಟ್‌ಗಳು. ಅವರು ಆಟವಾಡುತ್ತಿರುವಾಗ ನಾನು ಅವರ ಮುಖಗಳಲ್ಲಿ ಕಾಣುವ ಆನಂದವನ್ನು ಸೆರೆಹಿಡಿದೆ. ನಾನು ಕ್ಯಾಮೆರಾದ ಮೂಲಕ ಜಗತ್ತನ್ನು ಹೇಗೆ ನೋಡಬೇಕೆಂಬುದನ್ನು ಕಲಿತಿದ್ದೇನೆ. ದೃಶ್ಯ ಭಾಷೆಯು ಸುಲಭವಾಗಿ ಗ್ರಹಿಸಬಹುದಾದ ಭಾಷೆ ಎಂದು ನಾನು ಭಾವಿಸಿದ್ದೇನೆ.

ಕೆಲವೊಮ್ಮೆ ನೀವು ಫೋಟೋ ತೆಗೆಯಲು ನಡೆದಾಡುವಾಗ ನಿರೀಕ್ಷಿಸದಿದ್ದನ್ನು ನೀವು ಎದುರಿಸುತ್ತೀರಿ. ನನಗೆ ಅಲ್ಲಿಂದ ಒಂದಿಂಚೂ ಕದಲಲು ಮನಸ್ಸು ಬರುವುದಿಲ್ಲ. ಛಾಯಾಗ್ರಹಣ ನನಗೆ ಸಂತೋಷವನ್ನು ತಂದಿದೆ. ಒಂದು ರೀತಿಯ ಬೆಚ್ಚಗಿನ ಅನುಭವವನ್ನು ನೀಡಿದೆ.

ನಾನು ಡಾ.ಅಂಬೇಡ್ಕರ್ ಪಗುತರಿವು ಪಾಡಸಾಲೆಯಲ್ಲಿ ಓದುತ್ತಿದ್ದಾಗ ಡಾ.ಅಂಬೇಡ್ಕರ್ ಸ್ಮಾರಕಕ್ಕೆ ಒಂದು ದಿನ ಪ್ರವಾಸಕ್ಕೆ ಹೋಗಿದ್ದೆವು. ಆ ಪ್ರವಾಸದಲ್ಲಿ ಫೋಟೋಗಳೇ ನನ್ನೊಂದಿಗೆ ಮಾತಾಡಿದವು. ಪಳನಿ ಅಣ್ಣ ಬರಿಗೈಯಲ್ಲಿ ಮಲಹೊರುವವರ ಸಾವು ಮತ್ತು ದುಃಖದಲ್ಲಿರುವ ಅವರ ಕುಟುಂಬವನ್ನು ದಾಖಲಿಸಿದ್ದಾರೆ. ಆ ಕುಟುಂಬದ ಸದಸ್ಯರ ಪದಗಳಲ್ಲಿ ಹೇಳಲಾಗದ ಹಂಬಲ, ನಷ್ಟ ಮತ್ತು ನೋವನ್ನು ಫೋಟೋಗಳು ಹೇಳುತ್ತವೆ. ಅವರನ್ನು ಭೇಟಿಯಾದ ನಂತರ ನಮಗೂ ಅಂತಹ ಫೋಟೋಗಳನ್ನು ತೆಗೆಯುವ ಸಾಮರ್ಥ್ಯವಿದೆ ಎಂದು ಧೈರ್ಯ ತುಂಬಿದರು.

ಅವರು ತರಗತಿಗಳನ್ನು ತೆಗೆದುಕೊಳ್ಳಲು ಶುರುಮಾಡುವಾಗ ನಾನು ಶಾಲಾ ಪ್ರವಾಸದಲ್ಲಿದ್ದ ಕಾರಣ ನನಗೆ ಹಾಜರಾಗಲು ಸಾಧ್ಯವಾಗಲಿಲ್ಲ. ನಾನು ವಾಪಾಸ್‌ ಬಂದ ನಂತರ ಅವರು ನನಗೆ ಪ್ರತ್ಯೇಕವಾಗಿ ಕಲಿಸಿದರು. ಫೋಟೋಗಳನ್ನು ತೆಗೆಯಲು ನನ್ನನ್ನು ಪ್ರೋತ್ಸಾಹಿಸಿದರು. ಕ್ಯಾಮರಾ ಹೇಗೆ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ನನಗೆ ಸ್ವಲ್ಪವೂ ತಿಳಿದಿರಲಿಲ್ಲ. ಆದರೆ ಪಳನಿ ಅಣ್ಣ ನನಗೆ ಕಲಿಸಿದರು. ನಮಗೆ ಫೋಟೋಗ್ರಾಫಿಗೆ ಬೇಕಾದ  ವಿಷಯವನ್ನು ಹುಡುಕಲು ಅವಕಾಶ ನೀಡುವ ಮೂಲಕ ಅವರು ಮಾರ್ಗದರ್ಶನ ನೀಡಿದರು. ಈ ಪಯಣದಲ್ಲಿ ನಾನು ಸಾಕಷ್ಟು ಹೊಸ ದೃಷ್ಟಿಕೋನಗಳನ್ನು ಮತ್ತು ಅನುಭವವನ್ನು ಪಡೆದುಕೊಂಡಿದ್ದೇನೆ.

ನನ್ನ ಫೋಟೋಗ್ರಾಫಿಯ ಅನುಭವವು ಪತ್ರಿಕೋದ್ಯಮವನ್ನು ಆಯ್ಕೆ ಮಾಡುವಂತೆ ಮಾಡಿತು.

An aerial view of Vyasarpadi, a neighbourhood in north Chennai
PHOTO • S. Nandhini

ಉತ್ತರ ಚೆನ್ನೈನ ಸಮೀಪದಲ್ಲಿರುವ ವ್ಯಾಸರಪಾಡಿಯ ಪಕ್ಷಿನೋಟ

A portrait of Babasaheb Ambedkar at Nandhini’s home
PHOTO • S. Nandhini

ನಂದಿನಿ ಅವರ ಮನೆಯಲ್ಲಿರುವ ಬಾಬಾಸಾಹೇಬ್ ಅಂಬೇಡ್ಕರ್ ಭಾವಚಿತ್ರ

Students of Dr. Ambedkar Pagutharivu Padasalai in Chennai
PHOTO • S. Nandhini

ಚೆನ್ನೈನ ಡಾ . ಅಂಬೇಡ್ಕರ್ ಪಗುತರಿವು ಪಾಡಸಾಲೈನ ವಿದ್ಯಾರ್ಥಿಗಳು

At the Dr. Ambedkar Pagutharivu Padasalai, enthusiastic students receive mentorship from dedicated community coaches
PHOTO • S. Nandhini

ಡಾ . ಅಂಬೇಡ್ಕರ್ ಪಗುತರಿವು ಪಾಡಸಲೈನ ಉತ್ಸಾಹಿ ವಿದ್ಯಾರ್ಥಿಗಳು ಸಮುದಾಯ ತರಬೇತುದಾರರಿಂದ ಮಾರ್ಗದರ್ಶನ ಪಡೆಯುತ್ತಿರುವುದು

Children playing kabaddi
PHOTO • S. Nandhini

ಕಬಡ್ಡಿ ಆಡುತ್ತಿರುವ ಮಕ್ಕಳು

The winning team after a football match
PHOTO • S. Nandhini

ಫುಟ್ಬಾಲ್ ಪಂದ್ಯದಲ್ಲಿ ಗೆದ್ದ ತಂಡ

These birds often remind me of how my entire community was caged by society. I believe that teachings of our leaders and our ideology will break us free from these cages,' says Nandhini (photographer).
PHOTO • S. Nandhini

ʼ ತಮ್ಮ ಇಡೀ ಸಮುದಾಯವನ್ನು ಸಮಾಜವು ಹೇಗೆ ಪಂಜರದಲ್ಲಿ ಬಂಧಿಸಿದೆ ಎಂಬುದನ್ನು ಪಕ್ಷಿಗಳು ಆಗಾಗ್ಗೆ ನೆನಪಿಸುತ್ತವೆ . ನಮ್ಮ ನಾಯಕರ ಬೋಧನೆಗಳು ಮತ್ತು ಸಿದ್ಧಾಂತಗಳು ನಮ್ಮನ್ನು ಪಂಜರಗಳಿಂದ ಮುಕ್ತಗೊಳಿಸುತ್ತವೆ ಎಂಬ ನಂಬಿಕೆ ನನಗಿದೆ ' ಎನ್ನುತ್ತಾರೆ ನಂದಿನಿ ( ಛಾಯಾಗ್ರಾಹಕರು )

*****

ವಿ . ವಿನೋದಿನಿ , 19
ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ ವಿದ್ಯಾರ್ಥಿ
ವ್ಯಾಸರಪಾಡಿ , ಉತ್ತರ ಚೆನ್ನೈ , ತಮಿಳುನಾಡು

ನಾನು ಈ ಇಷ್ಟು ವರ್ಷಗಳಿಂದ ನನ್ನ ನೆರೆಹೊರೆಯವರಿಗೆ ತುಂಬಾ ಹತ್ತಿರವಾಗಿದ್ದೇನೆ. ಆದರೆ ಕ್ಯಾಮೆರಾದ ಮೂಲಕ ಅವರನ್ನು ನೋಡಿದಾಗ ಹೊಸ ದೃಷ್ಟಿಕೋನವೊಂದು ಸಿಕ್ಕಿದೆ. "ಫೋಟೋಗಳು ನಿಮ್ಮ ಜನರ ಜೀವನವನ್ನು ಸೆರೆಹಿಡಿಯಬೇಕು" ಎಂದು ಪಳನಿ ಅಣ್ಣ ಹೇಳುತ್ತಾರೆ. ಅವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುವಾಗ ನೀವು ಫೋಟೋಗಳು, ಕಥೆಗಳು ಮತ್ತು ಜನರ ಮೇಲಿನ ಅವರ ಪ್ರೀತಿಯನ್ನು ಕಾಣಬಹುದು. ನನ್ನ ಮೆಚ್ಚಿನ ನೆನಪೆಂದರೆ ಅವರು ತಮ್ಮ ಬಟನ್ ಫೋನ್‌ನಲ್ಲಿ ತಮ್ಮ ಮೀನುಗಾರ್ತಿ ತಾಯಿಯ ಫೋಟೋ ತೆಗೆದದ್ದು.

ನಾನು ತೆಗೆದ ಮೊದಲ ಫೋಟೋ ದೀಪಾವಳಿಯಂದು ತೆಗೆದ ನನ್ನ ನೆರೆಮನೆಯವರ ಕುಟುಂಬದ ಫೋಟೋ. ತುಂಬಾ ಚೆನ್ನಾಗಿ ಬಂದಿತ್ತು. ನಂತರ ನಾನು ನನ್ನ ಜನರ ಕಥೆಗಳು ಮತ್ತು ಅನುಭವಗಳ ಮೂಲಕ ನನ್ನ ಪಟ್ಟಣವನ್ನು ದಾಖಲಿಸುವ ಕೆಲಸವನ್ನು ಮುಂದುವರೆಸಿದೆ.

ಫೋಟೋಗ್ರಾಫಿ ಇಲ್ಲದಿದ್ದರೆ ನನ್ನನ್ನು ನೋಡುವ ಅವಕಾಶ ನನಗೆ ಸಿಗುತ್ತಿರಲಿಲ್ಲ.

*****

ಪಿ . ಪೂಂಕೋಡಿ
ಮೀನುಗಾರ್ತಿ
ಸೆರುತೂರ್ , ನಾಗಪಟ್ಟಿಣಂ , ತಮಿಳುನಾಡು

ನಾನು ಮದುವೆಯಾಗಿ 14 ವರ್ಷಗಳಾಗಿವೆ. ಅಂದಿನಿಂದ ನಾನು ನನ್ನ ಸ್ವಂತ ಹಳ್ಳಿಯಲ್ಲಿ ಒಮ್ಮೆಯೂ ಸಮುದ್ರ ತೀರಕ್ಕೆ ಹೋಗಿರಲಿಲ್ಲ. ಆದರೆ ನನ್ನ ಕ್ಯಾಮರಾ ನನ್ನನ್ನು ಸಮುದ್ರದ ಕಡೆಗೆ ಕರೆದೊಯ್ಯಿತು. ದೋಣಿಗಳನ್ನು ಸಮುದ್ರಕ್ಕೆ ಹೇಗೆ ತಳ್ಳುತ್ತಾರೆ, ಮೀನುಗಾರಿಕೆ ಪ್ರಕ್ರಿಯೆ ಮತ್ತು ಮೀನುಗಾರರ ಸಮುದಾಯಕ್ಕೆ ಮಹಿಳೆಯರ ಕೊಡುಗೆಯನ್ನು ಏನೆಂಬುದನ್ನು ನಾನು ದಾಖಲಿಸಿದ್ದೇನೆ.

ಕೇವಲ ಫೋಟೋಗಳನ್ನು ಕ್ಲಿಕ್ಕಿಸಲು ಯಾರಿಗಾದರೂ ತರಬೇತಿ ಕೊಡುವುದು ಸುಲಭ. ಆದರೆ ಫೋಟೋಗಳ ಮೂಲಕ ಕಥೆಗಳನ್ನು ಹೇಳುವುದು ಹೇಗೆಂಬ ತರಬೇತಿ ನೀಡುವುದು ಸಣ್ಣ ವಿಷಯವಲ್ಲ. ಆದರೆ ಪಳನಿ ನಮಗೆ ಅದನ್ನು ಕಲಿಸಿದ್ದಾರೆ. ನಮ್ಮ ತರಬೇತಿಯಲ್ಲಿ ಫೋಟೋಗಳನ್ನು ತೆಗೆಯುವ ಮೊದಲು ನಾವು ಜನರೊಂದಿಗೆ ಹೇಗೆ ಬಾಂಧವ್ಯವನ್ನು ಬೆಳೆಸಿಕೊಳ್ಳಬೇಕು ಎಂಬುದನ್ನು ತಿಳಿಸಿದರು. ಇದರಿಂದ ಜನರ ಫೋಟೋ ತೆಗೆಯಲು ನನಗೆ ಆತ್ಮವಿಶ್ವಾಸ ಬಂತು.

ನಾನು ಮೀನುಗಾರ ಸಮುದಾಯದ ಬೇರೆ ಬೇರೆ ಉದ್ಯೋಗಗಳನ್ನು ದಾಖಲಿಸಲು ಹೋದೆ. ಇದರಲ್ಲಿ ಮೀನು ಮಾರಾಟ, ಸ್ವಚ್ಛಗೊಳಿಸುವಿಕೆ ಮತ್ತು ಹರಾಜು ಎಲ್ಲವೂ ಸೇರಿದೆ. ಇದರಿಂದಾಗಿ ಮಾರಾಟಗಾರರಾಗಿ ಕೆಲಸ ಮಾಡುವ ಸಮುದಾಯದ ಮಹಿಳೆಯರ ಜೀವನಶೈಲಿಯನ್ನು ನೋಡಲು ಮತ್ತು ಅರ್ಥಮಾಡಿಕೊಳ್ಳಲು ನನಗೆ ಸಾಧ್ಯವಾಯಿತು. ಈ ಕೆಲಸ ಮಾಡಲು ಅವರಿಗೆ ತಲೆಯ ಮೇಲೆ ಭಾರವಾದ ಬುಟ್ಟಿಗಳ ತುಂಬಾ ಮೀನುಗಳನ್ನು ತುಂಬಿ ಸಮತೋಲನದಿಂದ ನಡೆಯುವುದು ಗೊತ್ತಿರಬೇಕು.

ಕುಪ್ಪುಸ್ವಾಮಿ ಅವರ ಬಗ್ಗೆ ಇರುವ ನನ್ನ ಫೋಟೋ ಸ್ಟೋರಿ ಮಾಡುವಾಗ ನಾನು ಅವರ ಜೀವನದ ಬಗ್ಗೆ ತಿಳಿದೆ.  ಅವರು ಗಡಿಭಾಗದಲ್ಲಿ ಮೀನುಗಾರಿಕೆ ಮಾಡುತ್ತಿದ್ದಾಗ ಸಮುದ್ರದಲ್ಲಿ ಅವರ ಮೇಲೆ ಶ್ರೀಲಂಕಾ ನೌಕಾಪಡೆ ಹೇಗೆ ಗುಂಡು ಹಾರಿಸಿತು ಎಂಬ ಬಗ್ಗೆ ತಿಳಿದೆ. ಇದರಿಂದಾಗಿ ಅವರು ತಮ್ಮ ಕೈಕಾಲುಗಳನ್ನು ಮಾತ್ರವಲ್ಲ, ಮಾತನ್ನು ಸಹ ಕಳೆದುಕೊಂಡರು.

ಬಟ್ಟೆ ಒಗೆಯುವುದು, ತೋಟಗಾರಿಕೆ ಮತ್ತು ಶುಚಿಗೊಳಿಸುವುದು ಮುಂತಾದ ಅವರ ದೈನಂದಿನ ಕೆಲಸಗಳನ್ನು ಮಾಡುತ್ತಿದ್ದಾಗ ನಾನು ಅವರನ್ನು ಭೇಟಿ ಮಾಡಿ ಹಿಂಬಾಲಿಸಿದೆ. ಅವನು ತನ್ನ ಕೈ ಮತ್ತು ಕಾಲುಗಳನ್ನು ಬಳಸಲು ಸಾಧ್ಯವಿಲ್ಲದ ಕಾರಣ ಅವರು ಎದುರಿಸಬೇಕಾದ ಕಷ್ಟಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಅವರು ಕೆಲಸ ಮಾಡುವುದರಲ್ಲಿ ಹೇಗೆ ಹೆಚ್ಚು ಸಂತೋಷ ಪಡೆಯುತ್ತಾರೆ ಎಂಬುದನ್ನು ನನಗೆ ತೋರಿಸಿದರು. ಅಂಗವೈಕಲ್ಯದಿಂದಾಗಿ ಹೊರಗಿನ ಪ್ರಪಂಚ ಅವರನ್ನು ನಿರಾಕರಿಸಿದ ಬಗ್ಗೆ ಅವರಿಗೆ ಚಿಂತೆಯಿಲ್ಲ. ಕೆಲವೊಮ್ಮೆ ಅವರು ಒಂಟಿತನವನ್ನು ಅನುಭವಿಸುತ್ತಾರೆ, ಸಾವನ್ನೂ ಬಯಸುತ್ತಾರೆ ಎಂದು ಹೇಳಿದರು.

ಮೀನುಗಾರರು ಸಾರ್ಡೀನ್ ಮೀನುಗಳನ್ನು ಹಿಡಿಯುವ ಫೋಟೋ ಸರಣಿಯನ್ನು ನಾನು ಮಾಡಿದ್ದೇನೆ. ಸಾರ್ಡೀನ್‌ಗಳು ಸಾಮಾನ್ಯವಾಗಿ ನೂರಾರು ಸಂಖ್ಯೆಯಲ್ಲಿ ಸಿಗುತ್ತವೆ. ಆದ್ದರಿಂದ ಅವುಗಳನ್ನು ಸ್ವತಃ ಒಬ್ಬನೇ ನಿರ್ವಹಿಸುವುದು ದೊಡ್ಡ ಸವಾಲು. ಈ ಮೀನುಗಳನ್ನು ಬಲೆಗಳಿಂದ ತೆಗೆದುಹಾಕಲು ಮತ್ತು ಐಸ್ ಬಾಕ್ಸ್‌ಗಳಲ್ಲಿ ತುಂಬಲು ಪುರುಷರು ಮತ್ತು ಮಹಿಳೆಯರು ಹೇಗೆ ಒಟ್ಟಾಗಿ ಕೆಲಸ ಮಾಡುತ್ತಾರೆ ಎಂಬುದನ್ನು ನಾನು ಇಲ್ಲಿ ದಾಖಲಿಸಿದ್ದೇನೆ.

ಮಹಿಳಾ ಛಾಯಾಗ್ರಾಹಕಿಯಾಗಿ , ಅದರಲ್ಲೂ ಅದೇ ಸಮುದಾಯಕ್ಕೆ ಸೇರಿ ಕೂಡ ಇದೊಂದು ಸವಾಲು. 'ನೀವು ಯಾಕೆ ಅವರ ಫೋಟೋ ತೆಗೆಯುತ್ತಿದ್ದೀರಿ? ಮಹಿಳೆಯರು ಏಕೆ ಫೋಟೋಗ್ರಾಫಿ ಮಾಡಬೇಕು?’ ಎಂಬ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ.

ಈಗ ಫೋಟೋಗ್ರಾಫರ್ ಎಂದು ಗುರುತಿಸಿಕೊಳ್ಳುತ್ತಿರುವ ಈ ಮೀನುಗಾರ್ತಿಯ ಹಿಂದಿನ ದೊಡ್ಡ ಶಕ್ತಿಯೇ ಪಳನಿ ಅಣ್ಣ.

V. Kuppusamy, 67, was shot by the Sri Lankan Navy while he was out fishing on his kattumaram.
PHOTO • P. Poonkodi

67 ವರ್ಷ ಪ್ರಾಯದ ವಿ. ಕುಪ್ಪುಸಾಮಿ ಅವರು ಕಟ್ಟುಮಾರಂನಲ್ಲಿ ಮೀನು ಹಿಡಿಯಲು ಹೋಗಿದ್ದಾಗ ಅವರ ಮೇಲೆ ಶ್ರೀಲಂಕಾ ನೌಕಾಪಡೆ ಗುಂಡು ಹಾರಿಸಿತು

*****

Taken on Palani Studio's opening day, the three pillars of Palani's life in photography: Kavitha Muralitharan, Ezhil anna and P. Sainath. The studio aims to train young people from socially and economically backward communities.
PHOTO • Mohamed Mubharakh A

ಪಳನಿ ಸ್ಟುಡಿಯೊ ಆರಂಭಿಸುವಾಗ ತೆಗೆದ ಫೋಟೋ. ಇದರಲ್ಲಿ ಪಳನಿಯವರ ಜೀವನದ ಮೂರು ಸ್ತಂಭಗಳಾದ ಕವಿತಾ ಮುರಳೀಧರನ್, ಎಳಿಲ್ ಅಣ್ಣಾ ಮತ್ತು ಪಿ. ಸಾಯಿನಾಥ್ ಇದ್ದಾರೆ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಯುವಜನರಿಗೆ ತರಬೇತಿ ನೀಡುವುದು ಈ ಸ್ಟುಡಿಯೋದ ಗುರಿ

Palani's friends at his studio's opening day. The studio has produced 3 journalism students and 30 photographers all over Tamil Nadu.
PHOTO • Mohamed Mubharakh A

ಪಳನಿ ಅವರ ಸ್ಟುಡಿಯೋ ಉದ್ಘಾಟನೆಯ ದಿನದಂದು ಅವರ ಸ್ನೇಹಿತರು. ಸ್ಟುಡಿಯೋ ತಮಿಳುನಾಡಿನಾದ್ಯಂತ 3 ಪತ್ರಿಕೋದ್ಯಮ ವಿದ್ಯಾರ್ಥಿಗಳನ್ನು ಮತ್ತು 30 ಛಾಯಾಗ್ರಾಹಕರನ್ನು ಸೃಷ್ಟಿಸಿದೆ

ಪಳನಿ ಸ್ಟುಡಿಯೋ ಪ್ರತಿ ವರ್ಷ ತಲಾ 10 ಮಂದಿ ಭಾಗವಹಿಸುವ ಎರಡು ಛಾಯಾಗ್ರಹಣ ಕಾರ್ಯಾಗಾರಗಳನ್ನು ಆಯೋಜಿಸುವ ಉದ್ದೇಶವನ್ನು ಹೊಂದಿದೆ. ಕಾರ್ಯಾಗಾರದ ನಂತರ ಭಾಗವಹಿಸುವವರಿಗೆ ಆರು ತಿಂಗಳ ಕಾಲ ತಮ್ಮ ಕಥೆಗಳನ್ನು ಅಭಿವೃದ್ಧಿಪಡಿಸಲು, ಅದರ ಮೇಲೆ ಕೆಲಸ ಮಾಡಲು ಅನುದಾನವನ್ನು ಕೂಡ ನೀಡಲಾಗುತ್ತದೆ. ಅನುಭವಿ ಛಾಯಾಗ್ರಾಹಕರು ಮತ್ತು ಪತ್ರಕರ್ತರನ್ನು ಕರೆದು ಈ ಕಾರ್ಯಾಗಾರಗಳಲ್ಲಿ ಕೆಲಸವನ್ನು ಪರಿಶೀಲಿಸಲಾಗುತ್ತದೆ ಮತ್ತು ಅವುಗಳ ಪ್ರದರ್ಶನ ಕೂಡ ಮಾಡಲಾಗುತ್ತದೆ.

ಅನುವಾದ: ಚರಣ್‌ ಐವರ್ನಾಡು

M. Palani Kumar

M. Palani Kumar is Staff Photographer at People's Archive of Rural India. He is interested in documenting the lives of working-class women and marginalised people. Palani has received the Amplify grant in 2021, and Samyak Drishti and Photo South Asia Grant in 2020. He received the first Dayanita Singh-PARI Documentary Photography Award in 2022. Palani was also the cinematographer of ‘Kakoos' (Toilet), a Tamil-language documentary exposing the practice of manual scavenging in Tamil Nadu.

Other stories by M. Palani Kumar
Translator : Charan Aivarnad

Charan Aivarnad is a poet and a writer. He can be reached at: [email protected]

Other stories by Charan Aivarnad