ಅದು ಬೆಳಗ್ಗಿನ ಒಂಬತ್ತು ಗಂಟೆ, ಮುಂಬೈಯ ಆಜಾದ್‌ ಮೈದಾನದಲ್ಲಿ ವಾರಾಂತ್ಯದಲ್ಲಿ ಕ್ರಿಕೇಟ್‌ ಆಡಲು ಯುವಕರು ಸಿದ್ಧರಾಗುತ್ತಿದ್ದರು. ಮೈದಾನದ ತುಂಬಾ ಆಟ ಆಡುತ್ತಾ ಅವರು ಹಾಕುತ್ತಿದ್ದ ಗೆಲುವು ಸೋಲಿನ ಕೇಕೆ ಕೇಳಿಬರುತ್ತಿತ್ತು.

ಕೇವಲ 50 ಮೀಟರ್ ದೂರದಲ್ಲಿ ಇನ್ನೊಂದು 'ಆಟ' ನಡೆಯುತ್ತಿತ್ತು. ಇದರಲ್ಲಿ ಸೇರಿದ್ದ 5,000 ಮಂದಿ ಮೌನವಾಗಿ ಕುಳಿತಿದ್ದರು. ಇದು ಸುಮಾರು ಸಮಯದಿಂದ ನಡೆಯುತ್ತಿದೆ. ತಮ್ಮ ಹಕ್ಕನ್ನು ಪ್ರತಿಪಾದಿಸಲು ಸಾವಿರಾರು ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯರು (ಆಶಾ) ಕಳೆದ ತಿಂಗಳು ಮುಂಬೈನ ಆಜಾದ್ ಮೈದಾನದಲ್ಲಿ ಪ್ರತಿಭಟನೆ ನಡೆಸಿದ್ದರು. ಫೆಬ್ರವರಿ 9 ರಂದು ಪ್ರಾರಂಭವಾದ ಈ ಆಂದೋಲನದ ಮೊದಲ ವಾರದಲ್ಲೇ 50 ಕ್ಕೂ ಹೆಚ್ಚು ಮಹಿಳಾ ಆರೋಗ್ಯ ಕಾರ್ಯಕರ್ತೆಯರು ಆಸ್ಪತ್ರೆಗೆ ದಾಖಲಾದರು.

ಬಿಡುವಿಲ್ಲದ ರಸ್ತೆಯನ್ನು ನೋಡುತ್ತಾ 30 ರ ಹರೆಯದ ಆಶಾ ಕಾರ್ಯಕರ್ತೆಯೊಬ್ಬರು ಮೈದಾನದಲ್ಲಿ ಕುಳಿತುಕೊಳ್ಳುತ್ತಾರೆ. ಅವರು ಭಯದಿಂದ ಸುತ್ತಮುತ್ತ ನೋಡುತ್ತಾರೆ, ಹಾದುಹೋಗುವ ಜನರು ತನ್ನ ಕಡೆ ನೋಡದಂತೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ತಕ್ಷಣ ಅವರ ಸುತ್ತ ಮಹಿಳೆಯರ ಗುಂಪೊಂದು ಬಂದು ದುಪ್ಪಟ್ಟಾ ಮತ್ತು ಹೊದಿಕೆಯಿಂದ ಮುಚ್ಚುವಾಗ, ಅವರು ತಮ್ಮ ಬಟ್ಟೆ ಬದಲಾಯಿಸುತ್ತಾರೆ.

ಕೆಲ ಗಂಟೆಗಳ ನಂತರ, ಊಟದ ಸಮಯದಲ್ಲಿ ಸುಡುವ ಮಧ್ಯಾಹ್ನದ ಬಿಸಿಲಿನಲ್ಲಿ ತನ್ನ ಸಹೋದ್ಯೋಗಿ ರೀಟಾ ಚಾವ್ರೆ ಅವರ ಸುತ್ತ ಕುಳಿತಿರುವ ಇತರ ಆಶಾಗಳ ಜೊತೆಗೆ ಸೇರಿಕೊಳ್ಳುತ್ತಾರೆ. ಪ್ರತಿಯೊಬ್ಬರೂ ಖಾಲಿ ಟಿಫಿನ್ ಬಾಕ್ಸ್‌ಗಳು, ಪ್ಲೇಟ್‌ಗಳು ಮತ್ತು ಬಾಕ್ಸಿನ ಮುಚ್ಚಳಗಳನ್ನು ಹಿಡಿದು ಕುಳಿತುಕೊಳ್ಳುತ್ತಾರೆ. 47 ವರ್ಷ ವಯಸ್ಸಿನ ರೀಟಾ ತಮ್ಮ ಮನೆಯಲ್ಲಿ ತಯಾರಿಸಿ ತಂದ ಊಟವನ್ನು ಎಲ್ಲರಿಗೂ ಬಡಿಸುವಾಗ ತಾಳ್ಮೆಯಿಂದ ತಮ್ಮ ಸರದಿಯಲ್ಲಿ ಕಾಯುತ್ತಾರೆ. "ನಾನು ಇಲ್ಲಿ ಪ್ರತಿಭಟನೆ ನಡೆಸುತ್ತಿರುವ ಸುಮಾರು 80-100 ಆಶಾ ಕಾರ್ಯಕರ್ತೆಯರಿಗೆ ಊಟ ನೀಡುತ್ತೇನೆ," ಎಂದು 17 ಇತರ ಆಶಾಗಳೊಂದಿಗೆ ಥಾಣೆ ಜಿಲ್ಲೆಯ ಟಿಸ್‌ಗಾಂವ್‌ನಿಂದ ಆಜಾದ್ ಮೈದಾನಕ್ಕೆ ಪ್ರತಿದಿನ ಸುಮಾರು ಎರಡು ಗಂಟೆಗಳ ಕಾಲ ಪ್ರಯಾಣಿಸಿ ಪ್ರತಿಭಟನೆಗೆ ಬಂದಿರುವ ರೀಟಾ ಹೇಳುತ್ತಾರೆ.

“ಯಾವುದೇ ಆಶಾ ಹಸಿವಿನಿಂದ ಬಳಲದಂತೆ ನೋಡಿಕೊಳ್ಳುತ್ತೇವೆ. ಆದರೆ ನಾವೂ ಅನಾರೋಗ್ಯಕ್ಕೆ ಒಳಗಾಗುತ್ತಿದ್ದೇವೆ. ಮತ್ತು ನಾವು ದಣಿದಿದ್ದೇವೆ,” ಎಂದು ಅವರು 2024ರ ಫೆಬ್ರವರಿ ತಿಂಗಳ ಕೊನೆಯಲ್ಲಿ ಪರಿಗೆ ಹೇಳುತ್ತಾರೆ.

PHOTO • Swadesha Sharma
PHOTO • Swadesha Sharma

ಕಳೆದ ತಿಂಗಳು ಮುಂಬೈನ ಆಜಾದ್ ಮೈದಾನದಲ್ಲಿ ಮಾನ್ಯತೆ ಪಡೆದ ಸಾವಿರಾರು ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯರು (ಆಶಾ) ಧರಣಿ ಕುಳಿತಿದ್ದರು. ಕಲ್ಯಾಣ್‌ನ ರೀಟಾ ಚಾವ್ರೆ ಮತ್ತು ಇತರ 17 ಆಶಾ ಕಾರ್ಯಕರ್ತೆಯರು ಪ್ರತಿಭಟನಾ ನಿರತ ಮಹಿಳೆಯರಿಗೆ ತಮ್ಮಿಂದ ಸಾಧ್ಯವಿರುವಷ್ಟು ಊಟದ ವ್ಯವಸ್ಥೆ ಮಾಡಲು 21 ದಿನಗಳ ಕಾಲ ಮುಂಬೈನ ಆಜಾದ್ ಮೈದಾನಕ್ಕೆ ಪ್ರತಿದಿನ ಬಂದು ಹೋಗುತ್ತಿದ್ದರು. ರೀಟಾ (ಬಲ) 2006 ರಲ್ಲಿ ಆಶಾ ಆಗಿ ತಮ್ಮ ಸೇವಾವೃತ್ತಿಯನ್ನು ಆರಂಭಿಸಿದರು ಮತ್ತು ಮಹಾರಾಷ್ಟ್ರದ ಟಿಸ್‌ಗಾಂವ್‌ನ 1,500 ಕ್ಕಿಂತ ಹೆಚ್ಚು ನಿವಾಸಿಗಳಿಗೆ ಆರೋಗ್ಯ ಸೇವೆ ನೀಡುತ್ತಿದ್ದಾರೆ

PHOTO • Swadesha Sharma
PHOTO • Ujwala Padalwar

ರಾಜ್ಯದ 36 ಜಿಲ್ಲೆಗಳ ಆಶಾ ಕಾರ್ಯಕರ್ತೆಯರು ಒಂದಾಗಿ ಪ್ರತಿಭಟನೆ ನಡೆಸುತ್ತಾ 21 ಹಗಲು ರಾತ್ರಿಗಳನ್ನು ಇಲ್ಲಿಯೇ ಕಳೆದಿದ್ದಾರೆ ಮತ್ತು ಅವರಲ್ಲಿ ಅನೇಕರು ಆಸ್ಪತ್ರೆಗೆ ಕೂಡ ದಾಖಲಾಗಬೇಕಾಯಿತು

21 ದಿನಗಳ ಪ್ರತಿಭಟನೆಯ ನಂತರ ಮುಖ್ಯಮಂತ್ರಿಗಳು, “ಆಶಾ ಚಿ ನಿರಾಶಾ ಸರ್ಕಾರ್ ಕರ್ನರ್ ನಹಿ. [ಆಶಾಗಳನ್ನು ಸರ್ಕಾರ ನಿರಾಶೆಗೊಳಿಸುವುದಿಲ್ಲ]” ಎಂದು ಘೋಷಿಸಿದ ನಂತರ ಆಶಾ ಕಾರ್ಯಕರ್ತೆಯರು ಮಾರ್ಚ್ 1 ರಂದು ತಮ್ಮ ತಮ್ಮ ಮನೆಗೆ ತೆರಳಿದರು. ಅದಕ್ಕೂ ಹಿಂದಿನ ದಿನ ಮಹಾರಾಷ್ಟ್ರ ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮಾತನಾಡಿದ್ದರು.

ಆಶಾಗಳು 70 ಕ್ಕೂ ಹೆಚ್ಚು ಆರೋಗ್ಯ ಸೇವೆಗಳನ್ನು ಒದಗಿಸುವ ಮಹಿಳೆಯರ ಒಂದು ಕಾರ್ಯಪಡೆ. ಅವರನ್ನು ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳ ಕಾರ್ಯಕ್ರಮ (ಐಸಿಡಿಎಸ್) ಮತ್ತು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ (ಎನ್‌ಆರ್‌ಎಚ್‌ಎಂ) ಅಡಿಯಲ್ಲಿ ಕೇವಲ 'ಸ್ವಯಂಸೇವಕರು' ಎಂದು ಮಾತ್ರ ಗುರುತಿಸಲಾಗಿದೆ. ಆರೋಗ್ಯ ಸೇವೆಗಳನ್ನು ನೀಡಿದಕ್ಕಾಗಿ ಅವರಿಗೆ ನೀಡುವ ಹಣವನ್ನು 'ಗೌರವಧನ' ಎಂದು ಉಲ್ಲೇಖಿಸಲಾಗಿದೆ, ವೇತನ ಅಥವಾ ಸಂಬಳವೆಂದು ಪರಿಗಣಿಸಿಲ್ಲ.

ಗೌರವಧನದ ಹೊರತಾಗಿ, ಅವರು ಪಿಬಿಪಿಗೆ (ಕಾರ್ಯಕ್ಷಮತೆ ಆಧಾರಿತ ಪಾವತಿ ಅಥವಾ ಪ್ರೋತ್ಸಾಹಧನ) ಅರ್ಹರಾಗಿದ್ದಾರೆ. ಸಾರ್ವತ್ರಿಕ ಪ್ರತಿರೋಧಕ ವಿತರಣೆ, ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ (ಆರ್‌ಸಿಎಚ್) ಮತ್ತು ಇತರ ಕಾರ್ಯಕ್ರಮಗಳನ್ನು ಉತ್ತೇಜಿಸುವ ಕೆಲಸಕ್ಕಾಗಿ ಆಶಾಗಳು ತಮ್ಮ ಕೆಲಸದ ಕ್ಷಮತೆಯ ಆಧಾರದ ಮೇಲೆ ಪ್ರೋತ್ಸಾಹಧನ ಪಡೆಯುತ್ತಾರೆ ಎಂದು ಎನ್‌ಆರ್‌ಎಚ್‌ಎಂ ಹೇಳುತ್ತದೆ.

ಆಶಾ ಕಾರ್ಯಕರ್ತೆಯರಲ್ಲಿ ಒಬ್ಬರಾದ ರಮಾ ಮನಾಟ್ಕರ್ ಅವರು ಹೇಳುವಂತೆ ಇವರಿಗೆ ಈ ಹಣ ಸಾಕಾಗುವುದಿಲ್ಲ. “ಬಿನ್ ಪಗಾರಿ, ಫುಲ್ ಅಧಿಕಾರಿ [ಹಣ ನೀಡಲ್ಲ, ಕೆಲಸ ಮಾತ್ರ]! ನಾವು ಅಧಿಕಾರಿಗಳಂತೆ ಕೆಲಸ  ಮಾಡುವುದು ಅವರಿಗೆ ಬೇಕು, ಆದರೆ  ಸಂಬಳ ನೀಡಲು ಅವರು ಸಿದ್ಧರಿಲ್ಲ,” ಎಂದು ಅವರು ಹೇಳುತ್ತಾರೆ.

ಮುಖ್ಯಮಂತ್ರಿಯವರು ಕಳೆದ ಕೆಲವು ತಿಂಗಳುಗಳಲ್ಲಿ ನೀಡಿದ ಹಲವು ಅಧಿಕೃತ ಭರವಸೆಗಳಲ್ಲಿ ಇದೂ ಒಂದಾಗಿದೆ. ಈ ವರದಿಯನ್ನು ಪ್ರಕಟಿಸುವ ಸಮಯದಲ್ಲಿ ಇದನ್ನು ಸರ್ಕಾರಿ ನಿರ್ಣಯವಾಗಿ (ಜಿಆರ್) ಪರಿಗಣಿಸಿರಲಿಲ್ಲ. ಯಾವ ಕಡೆಯಿಂದ ನೋಡಿದರೂ, ಆಶಾಗಳು ಮುಂದೆ ನೆರವೇರಬಹುದಾದ ಭರವಸೆಗಳಿಗಾಗಿ ಎದುರು ನೋಡುತ್ತಿರುವಂತೆ ಕಾಣುತ್ತದೆ.

ಪ್ರತಿಭಟಿಸುತ್ತಿರುವ ಸಾವಿರಾರು ಆಶಾ ಕಾರ್ಯಕರ್ತೆಯರು ತಾನು ನೀಡಿದ ಭರವಸೆಗೆ ಬದ್ಧವಾಗಿರುವಂತೆ ಮಹಾರಾಷ್ಟ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಸಂಬಳ ಹೆಚ್ಚಿಸಲು ಸರ್ಕಾರಿ ನಿರ್ಣಯ (ಜಿಆರ್‌) ಹೊರಡಿಸುವ ನಿರ್ಧಾರವನ್ನು ಮೊದಲ ಬಾರಿಗೆ 2023 ಅಕ್ಟೋಬರ್ ತಿಂಗಳಲ್ಲಿ ಸರ್ಕಾರ ಮಾಡಿತ್ತು.

PHOTO • Ritu Sharma
PHOTO • Ritu Sharma

ಎಡ: ನಾಗಪುರದ ವನಶ್ರೀ ಫುಲ್ಬಂಧೆ 14 ವರ್ಷಗಳಿಂದ ಆಶಾ ಆಗಿ ಕೆಲಸ ಮಾಡುತ್ತಿದ್ದಾರೆ. ಬಲ: ಯವತ್ಮಾಲ್ ಜಿಲ್ಲೆಯ ಆಶಾಗಳಾದ ಪ್ರೀತಿ ಕರ್ಮಾಂಕರ್ (ಎಡ) ಮತ್ತು ಅಂತಕಲಾ ಮೋರೆ (ಬಲ) ಅವರಿಗೆ 2023ನ ಡಿಸೆಂಬರ್ ತಿಂಗಳಿಂದ ಗೌರವಧನ ಸಿಕ್ಕಿಲ್ಲ ಎಂದು ಹೇಳುತ್ತಾರೆ

“ಜನರು ತಮ್ಮ ಮನೆಯವರಿಗಿಂತ ಹೆಚ್ಚು ಆಶಾಗಳನ್ನು ನಂಬುತ್ತಾರೆ! ಆರೋಗ್ಯ ಇಲಾಖೆ ಕೂಡ ನಮ್ಮ ಮೇಲೆ ಅವಲಂಬಿತವಾಗಿದೆ,” ಎಂದು ವನಶ್ರೀ ಫುಲ್ಬಂದೆ ಹೇಳುತ್ತಾರೆ. ಇವರ ಮೂಲಭೂತ ಕರ್ತವ್ಯವೆಂದರೆ ಸಮಾಜದ ಅಂಚಿನಲ್ಲಿರುವ ಸಮುದಾಯಗಳಿಗೆ ಆರೋಗ್ಯ ಸೇವೆಗಳು ಸುಲಭವಾಗಿ ಸಿಗುವಂತೆ ಮಾಡುವುದು. ವನಶ್ರೀ ಹೇಳುತ್ತಾರೆ: "ಹೊಸ ವೈದ್ಯರು ಬಂದಾಗಲೆಲ್ಲಾ ಮೊದಲು ಅವರು ಕೇಳುವುದು: ಆಶಾ ಕಾರ್ಯಕರ್ತೆಯರು ಎಲ್ಲಿದ್ದಾರೆ? ಎಷ್ಟು ಜನ ಆಶಾಗಳು ಇದ್ದಾರೆ? ಎಂದು."

ವಂಶಶ್ರೀ ಅವರು 14 ವರ್ಷಗಳಿಂದ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. "ನಾನು 150 ರುಪಾಯಿ ಗೌರವಧನದಿಂದ ಪ್ರಾರಂಭಿಸಿದೆ ... ಇದು ಒಂದು ರೀತಿಯಲ್ಲಿ ವನವಾಸದಂತೆ ಅಲ್ಲವೇ? 14 ವರ್ಷಗಳ ನಂತರ ಶ್ರೀರಾಮನು ಅಯೋಧ್ಯೆಗೆ ವಾಪಾಸ್ ಬಂದಾಗ, ಅವನನ್ನು ಸ್ವಾಗತಿಸಲಾಯಿತು, ಅಲ್ಲವೇ? ನೀವು ನಮ್ಮನ್ನು ಸ್ವಾಗತಿಸಬೇಡಿ, ಆದರೆ ನಮಗೆ ಗೌರವದಿಂದ ಮತ್ತು ಪ್ರಾಮಾಣಿಕತೆಯಿಂದ ಬದುಕಲು ಬೇಕಾದ ಮಾನಧನ [ಗೌರವ ಸಂಭಾವನೆ] ಪಡೆಯಲು ಅನುವು ಮಾಡಿಕೊಡಿ,” ಎಂದು ಅವರು ಹೇಳುತ್ತಾರೆ.

ಮತ್ತು ಇವರಲ್ಲಿ ಇನ್ನೊಂದು ಬೇಡಿಕೆಯಿದೆ: ದಯವಿಟ್ಟು ಅವರು ಎಲ್ಲರಂತೆ ಪ್ರತಿ ತಿಂಗಳು ತಮ್ಮ ಸಂಬಳವನ್ನು ಪಡೆಯುವಂತೆ ಮಾಡಬಹುದೇ? ಮೂರು ತಿಂಗಳು ತಡವಾಗಿ ಅಲ್ಲ.

"ನಮಗೆ ತಡವಾಗಿ ಹಣ ಗೌರವಧನ ನೀಡಿದರೆ, ನಾವು ಕೆಲಸ ಮಾಡುವುದು ಹೇಗೆ?" ಎಂದು ಯವತ್ಮಾಲ್‌ ಜಿಲ್ಲೆಯ ಜಿಲ್ಲಾ ಉಪಾಧ್ಯಕ್ಷೆ, ಆಶಾ ಕಾರ್ಯಕರ್ತೆ ಪ್ರೀತಿ ಕರ್ಮಾಂಕರ್ ಪ್ರಶ್ನಿಸುತ್ತಾರೆ. “ಆಶಾ ಸೇವೆಯನ್ನು ನೀಡುತ್ತಾಳೆ, ಆದರೆ ಅವಳೂ ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಕೆಲಸ ಮಾಡಬೇಕು. ಅವಳಿಗೆ ಸಂಬಳ ನೀಡದಿದ್ದರೆ ಬದುಕುವುದು ಹೇಗೆ?” ಎಂದು ಕೇಳುತ್ತಾರೆ.

ಆರೋಗ್ಯ ಇಲಾಖೆ ಆಯೋಜಿಸಿದ ಕಡ್ಡಾಯ ಕಾರ್ಯಾಗಾರಗಳು ಮತ್ತು ಜಿಲ್ಲಾವಾರು ಸಭೆಗಳಿಗೆ ಬರಲು ಅವರಿಗೆ ನೀಡಬೇಕಾದ ಪ್ರಯಾಣ ಭತ್ಯೆಯೂ ಮೂರರಿಂದ ಐದು ತಿಂಗಳು ತಡವಾಗಿ ಬರುತ್ತದೆ. "2022 ರಿಂದ ಆರೋಗ್ಯ ಇಲಾಖೆ ಆಯೋಜಿಸಿದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಕ್ಕೆ ನಾವು ಒಂದೇ ಒಂದು ರುಪಾಯಿ ಪಡೆದಿಲ್ಲ,” ಎಂದು ಯವತ್ಮಾಲ್‌ನ ಕಲಾಂಬ್‌ನಿಂದ ಬಂದಿರುವ ಅಂತಕಲಾ ಮೋರೆ ಹೇಳುತ್ತಾರೆ. "2023ರ ಡಿಸೆಂಬರ್ ತಿಂಗಳಲ್ಲಿ ನಾವು ಮುಷ್ಕರ ನಡೆಸಿದ್ದೆವು. ಕುಷ್ಠರೋಗದ ಸಮೀಕ್ಷೆ ನಡೆಸುವ ಕೆಲಸಕ್ಕೆ ನಮ್ಮನ್ನು ಹಾಕಿದರು. ಆದರೆ ಇನ್ನೂ ನಮಗೆ ಅದರ ಹಣ ನೀಡಿಲ್ಲ,” ಎಂದು ಅವರು ಹೇಳುತ್ತಾರೆ. “ಕಳೆದ ವರ್ಷದ ಪೋಲಿಯೊ, ಹಟ್ಟಿ ರೋಗ [ ಲಿಂಪ್ಯಾಟಿಕ್‌ ಫೈಲೇರಿಯಾಸಿಸ್] ಮತ್ತು ಜಂತುಹುಳು ನಾಶಕ [ನಿವಾರಣಾ] ಕಾರ್ಯಕ್ರಮಗಳಿಗೆ ಕೂಡ ನಾವು ಹಣ ಪಡೆದಿಲ್ಲ," ಎಂದು ಪ್ರೀತಿ ಹೇಳುತ್ತಾರೆ.

*****

ರೀಟಾ 2006 ರಲ್ಲಿ ಆಶಾ ಆಗಿ ವೃತ್ತಿ ಆರಂಭಿಸುವಾಗ ಅವರ ಸಂಬಳ 500 ರುಪಾಯಿ ಇತ್ತು. "ಈಗ ತಿಂಗಳಿಗೆ ನನಗೆ 6,200 ರೂಪಾಯಿ ಬರುತ್ತದೆ, ಅದರಲ್ಲಿ 3,000 ರುಪಾಯಿ ಕೇಂದ್ರ ಸರ್ಕಾರದಿಂದಲೂ, ಉಳಿದವು ಪುರಸಭೆಯಿಂದಲೂ ಬರುತ್ತದೆ."

ನವೆಂಬರ್ 2, 2023 ರಂದು ರಾಜ್ಯ ಆರೋಗ್ಯ ಸಚಿವ ತಾನಾಜಿರಾವ್ ಸಾವಂತ್ ಅವರು ಮಹಾರಾಷ್ಟ್ರದ 80,000 ಆಶಾ ಕಾರ್ಯಕರ್ತರು ಮತ್ತು 3,664 ಘಟ ಪ್ರವರ್ತಕರಿಗೆ (ಗುಂಪು ಪ್ರವರ್ತಕರು) 7,000 ರುಪಾಯಿ ಮತ್ತು 6,200 ರುಪಾಯಿಗಳ ವೇತನದ ಜೊತೆಗೆ ತಲಾ 2,000 ರುಪಾಯಿಗಳ ದೀಪಾವಳಿ ಬೋನಸ್ ನೀಡುವುದಾಗಿ ಘೋಷಿಸಿದ್ದರು .

PHOTO • Courtesy: Rita Chawre
PHOTO • Swadesha Sharma

ಕೊರೋನಾ ಸಾಂಕ್ರಾಮಿಕದ ಸಮಯದಲ್ಲಿ, ಆಶಾ ಕಾರ್ಯಕರ್ತೆಯರು ತುರ್ತು ಆರೋಗ್ಯ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿದ್ದರು. ಅವರನ್ನು 'ಕೊರೋನಾ ವಾರಿಯರ್ಸ್' ಎಂದು ಶ್ಲಾಘಿಸಲಾಗಿತ್ತು, ಆದರೂ ಬದ್ಲಾಪುರದ ಆಶಾ (ಬಲಭಾಗದಲ್ಲಿ ಕುಳಿತಿರುವ) ಮಮತಾ ಅವರು ತಮಗೆ ಆ ಸಂದರ್ಭದಲ್ಲಿ ಬಹಳ ಕಡಿಮೆ ರಕ್ಷಣಾ ಸಾಧನಗಳನ್ನು ನೀಡಿದರು ಎಂದು ಹೇಳುತ್ತಾರೆ

PHOTO • Courtesy: Ujwala Padalwar
PHOTO • Swadesha Sharma

ಎಡಭಾಗದಲ್ಲಿ: ಧರಣಿಯ ಮೊದಲ ವಾರದಲ್ಲಿ 50 ಕ್ಕೂ ಹೆಚ್ಚು ಮಹಿಳೆಯರು ಆಸ್ಪತ್ರೆಗೆ ದಾಖಲಾದರೂ, ಅವರಲ್ಲಿ ಅನೇಕರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಲು ಮರಳಿ ಆಜಾದ್ ಮೈದಾನಕ್ಕೆ ಬಂದರು ಎಂದು ಪ್ರತಿಭಟನಾಕಾರರಲ್ಲಿ ಒಬ್ಬರಾದ ಉಜ್ವಲಾ ಪಡಲ್ವಾರ್ (ನೀಲಿ ಬಣ್ಣ) ಹೇಳುತ್ತಾರೆ. ಬಲ: ಹಗಲು-ರಾತ್ರಿ ಪ್ರತಿಭಟನೆ ನಡೆಸಿದ ನಂತರ, ಮುಖ್ಯಮಂತ್ರಿಗಳು ಅವರನ್ನು ನಿರಾಶೆಗೊಳಿಸುವುದಿಲ್ಲ ಎಂದು ಭರವಸೆ ನೀಡಿದ ಮೇಲೆ ಆಶಾಗಳು ಮಾರ್ಚ್ 1, 2024 ರಂದು ಕೊನೆಗೂ ತಮ್ಮ ತಮ್ಮ ಮನೆಗೆ ಮರಳಿದರು

ಮಮತಾ ಕೋಪದಿಂದ, "ದೀಪಾವಳಿ ಹೌಂ ಆತಾ ಹೋಳಿ ಆಲಿ [ದೀಪಾವಳಿ ಹೋಯ್ತು ಮತ್ತು ಈಗ ಹೋಳಿ ಬಂದಿದೆ] ಆದರೆ ನಮ್ಮ ಕೈಯಲ್ಲಿ ಏನೂ ಇಲ್ಲ," ಎಂದು ಹೇಳುತ್ತಾರೆ. “ನಾವು 7,000 ಅಥವಾ 10,000 ರುಪಾಯಿಗಳ ವೇತನ ಹೆಚ್ಚಳವನ್ನು ಕೇಳುತ್ತಿಲ್ಲ. ಅಕ್ಟೋಬರ್‌ನಲ್ಲಿ ನಡೆಸಿದ ನಮ್ಮ ಮೊದಲ ಮುಷ್ಕರ ಹೆಚ್ಚುವರಿ ಆನ್‌ಲೈನ್ ಕೆಲಸದ ವಿರುದ್ಧವಾಗಿತ್ತು. ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಲ್ಲಿ (ಪಿಎಂಎಂವಿವೈ) ಪ್ರತಿದಿನ 100 ಗ್ರಾಮಸ್ಥರನ್ನು ನೋಂದಾಯಿಸುವ ಕೆಲಸ ನಮಗೆ ಕೊಟ್ಟಿದ್ದರು,” ಎಂದು ಅವರು ಹೇಳುತ್ತಾರೆ.

ಅಧಿಕೃತ ವೆಬ್‌ಸೈಟ್‌ನಲ್ಲಿ ಹೇಳಿರುವಂತೆ ಈ ಯೋಜನೆಯಲ್ಲಿ, "ಗರ್ಭಧಾರಣೆಯ ಸಮಯದಲ್ಲಿ ವೇತನ ನಷ್ಟವಾದಾಗ ವೇತನದ ಅರ್ಧ ಪರಿಹಾರವನ್ನು ಪ್ರೋತ್ಸಾಹಧನವಾಗಿ ನೀಡಲಾಗುತ್ತದೆ." ಹೊಸದಾಗಿ ಪ್ರಾರಂಭಿಸಲಾದ ಯು-ವಿನ್ ಅಪ್ಲಿಕೇಶನ್‌ನ ಗುರಿಯೂ ಇದೇ ಆಗಿದೆ. ಇದನ್ನು ಗರ್ಭಿಣಿ ಮಹಿಳೆಯರು ಮತ್ತು ಮಕ್ಕಳ ವ್ಯಾಕ್ಸಿನೇಷನ್ ದಾಖಲೆಗಳನ್ನು ಸಂಗ್ರಹಿಸಲು ವಿನ್ಯಾಸಗೊಳಿಸಲಾಗಿದೆ.

ಇದಕ್ಕೂ ಮೊದಲು ಫೆಬ್ರವರಿ 2024 ರಲ್ಲಿ, 10,000 ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಶಹಪುರದಿಂದ ಥಾಣೆ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ 52 ಕಿಲೋಮೀಟರ್ ದೂರ ಮೆರವಣಿಗೆ ನಡೆಸಿದ್ದರು. “ಚಾಲುನ್ ಅಲೋಯ್, ತಾಂಗ್ಡ್ಯಾ ತುಟ್ಲ್ಯಾ [ನಾವು ಎಲ್ಲರೂ ನಡೆದುಕೊಂಡೇ ಹೋದೆವು, ನಮ್ಮ ಕಾಲುಗಳೂ ಕೆಲಸ ಮಾಡಲಿಲ್ಲ]. ಇಡೀ ರಾತ್ರಿ ಥಾಣೆಯ ಬೀದಿಗಳಲ್ಲಿ ಕಳೆದೆವು,” ಎಂದು ಮಮತಾ ನೆನಪಿಸಿಕೊಳ್ಳುತ್ತಾರೆ.

ತಿಂಗಳುಗಟ್ಟಲೆ ನಡೆಯುತ್ತಿರುವ ಪ್ರತಿಭಟನೆ ಅವರ ಮೇಲೆ ಪರಿಣಾಮ ಬೀರುತ್ತಿದೆ. "ಆರಂಭದಲ್ಲಿ ಆಜಾದ್ ಮೈದಾನದಲ್ಲಿ 5,000 ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಇದ್ದರು. ಅವರಲ್ಲಿ ಹಲವು ಗರ್ಭಿಣಿಯರಿದ್ದರು ಮತ್ತು ಕೆಲವರು ತಮ್ಮ ನವಜಾತ ಶಿಶುಗಳೊಂದಿಗೆ ಬಂದಿದ್ದರು. ಮೈದಾನದಲ್ಲಿ ಇರುವುದು ಕಷ್ಟವಾದ್ದರಿಂದ ಮನೆಗೆ ಹೋಗುವಂತೆ ಮನವಿ ಮಾಡಿದೆವು,” ಎಂದು ಉಜ್ವಲಾ ಪಡಲ್ವಾರ್ ಹೇಳುತ್ತಾರೆ. ಇವರು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ನಿನ (ಸಿಐಟಿಯು) ರಾಜ್ಯ ಕಾರ್ಯದರ್ಶಿ ಮತ್ತು ಪ್ರತಿಭಟನೆಯ ಸಂಘಟಕರಲ್ಲಿ ಒಬ್ಬರು. ಅನೇಕ ಮಹಿಳೆಯರು ಎದೆ ನೋವು, ಹೊಟ್ಟೆ ನೋವು ಎಂದು ಹೇಳುತ್ತಿದ್ದರು, ಕೆಲವರಿಗೆ ತಲೆನೋವು ಇತ್ತು, ನಿರ್ಜಲೀಕರಣದಿಂದ ಬಳಲುತ್ತಿದ್ದರು ಮತ್ತು ಅವರನ್ನು ಆಸ್ಪತ್ರೆಗೆ ಸೇರಿಸಬೇಕಾಯಿತು ಎಂದು ಅವರು ಹೇಳುತ್ತಾರೆ.

ಆಶಾಗಳು ಆಸ್ಪತ್ರೆಯಿಂದ ಮರಳಿ ಮತ್ತೆ ಮೈದಾನಕ್ಕೆ ಬಂದರು, ಒಂದೇ ಧ್ವನಿಯಲ್ಲಿ: “ಆತಾ ಆಮ್ಚಾ ಏಕಾಚ್ ನಾರಾ, ಜಿಆರ್ ಕಾಧಾ! [ನಮ್ಮೆಲ್ಲರ ಕೂಗು ಒಂದೇ! ಜಿಆರ್‌ ಬಿಡುಗಡೆ ಮಾಡಿ!]," ಎಂದು ಘೋಷಣೆ ಕೂಗಿದರು.

*****

PHOTO • Swadesha Sharma

2023ರ ಅಕ್ಟೋಬರ್ ತಿಂಗಳಲ್ಲಿ ಮಹಾರಾಷ್ಟ್ರದ ಆರೋಗ್ಯ ಸಚಿವರು ಆಶಾಗಳಿಗೆ ತಲಾ 2,000 ರೂಪಾಯಿಗಳ ದೀಪಾವಳಿ ಬೋನಸ್ ನಿಡುವುದಾಗಿ ಘೋಷಿಸಿದ್ದರು. ‘ದೀಪಾವಳಿ ಹೋಗಿ ಹೋಳಿ ಬಂದಿದೆ, ಆದರೆ ನಮ್ಮ ಕೈಯಲ್ಲಿ ನಯಾ ಪೈಸೆ ಇಲ್ಲʼ ಎನ್ನುತ್ತಾರೆ ಮಮತಾ

ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಎಲ್ಲಾ ಜನರಿಗೆ ತಲುಪಿಸುವುದು ಆಶಾ ಕಾರ್ಯಕರ್ತೆಯರ ಕೆಲಸ. ಆದರೆ ಸಮುದಾಯದ ಬಗೆಗಿನ ಅವರ ಕಾಳಜಿ ಅದನ್ನೂ ಮೀರಿದ್ದು. 2023ನ ಸೆಪ್ಟೆಂಬರ್ ತಿಂಗಳಲ್ಲಿ, ಬದ್ಲಾಪುರದ ಸೋನಿವಾಲಿ ಗ್ರಾಮದ ಗರ್ಭಿಣಿ ಆದಿವಾಸಿ ಮಹಿಳೆಯೊಬ್ಬರನ್ನು ಮನೆಯಲ್ಲಿ ಹೆರಿಗೆಯಾಗುವ ಬದಲು ಆಸ್ಪತ್ರೆಗೆ ಹೋಗಲು ಮನವೊಲಿಸುವಲ್ಲಿ ಯಶಸ್ವಿಯಾದ ಆಶಾ ಕಾರ್ಯಕರ್ತೆ ಮಮತಾ ಅವರೇ ಇದಕ್ಕೆ ಒಂದು ಉದಾಹರಣೆ.

“ಮಹಿಳೆಯ ಪತಿ ಅವಳೊಂದಿಗೆ ಹೋಗಲು ಒಪ್ಪಲಿಲ್ಲ ಮತ್ತು ಸ್ಪಷ್ಟವಾಗಿ, ‘ನನ್ನ ಹೆಂಡತಿಗೆ ಏನಾದರೂ ಆದರೆ ನೀವೇ ಜವಾಬ್ದಾರರುʼ ಎಂದು ಹೇಳಿದ್ದ. ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ನಾನೇ ಅವರನ್ನು ಬದ್ಲಾಪುರದಿಂದ ಉಲ್ಲಾಸನಗರಕ್ಕೆ ಕರೆದುಕೊಂಡು ಹೋದೆ,” ಎಂದು ಮಮತಾ ನೆನಪಿಸಿತ್ತಾರೆ. ಹೆರಿಗೆ ಆದ ಮೇಲೆ ತಾಯಿ ಬದುಕುಳಿಯಲಿಲ್ಲ, ಅದಕ್ಕೂ ಮೊದಲೇ ಮಗು ಹೊಟ್ಟೆಯಲ್ಲಿ ಸತ್ತು ಹೋಗಿತ್ತು.

“ನಾನು ವಿಧವೆ, ಆ ಸಂದರ್ಭದಲ್ಲಿ ನನ್ನ ಮಗ 10 ನೇ ತರಗತಿಯಲ್ಲಿದ್ದ. ನಾನು ಬೆಳಿಗ್ಗೆ 6 ಗಂಟೆಗೆ ಮನೆಯಿಂದ ಹೊರಟೆ, ಮತ್ತು ಆ ಮಹಿಳೆ ರಾತ್ರಿ 8 ಗಂಟೆಗೆ ನಿಧನ ಹೊಂದಿದ್ದರು. ನಡು ರಾತ್ರೆ ಕಳೆದು 1:30 ಗಂಟೆಯವರೆಗೆ ಆಸ್ಪತ್ರೆಯ ವರಾಂಡಾದಲ್ಲಿ ಕಾಯುವಂತೆ ನನಗೆ ಹೇಳಿದರು, ಪಂಚನಾಮ ಮುಗಿದ ನಂತರ, 'ಆಶಾ ತಾಯಿ ಈಗ ನೀವು ಮನೆಗೆ ಹೋಗಬಹುದು' ಎಂದು ಹೇಳಿದರು. ದೀದ್ ವಾಜ್ತಾ ಮೀ ಏಕತೀ ಜಾಉ? [ನಾನು ರಾತ್ರಿ 1:30 ಗಂಟೆಗೆ ಒಬ್ಬಳೇ ಮನೆಗೆ ಹೋಗಬೇಕೇ]?” ಎಂದು ಮಮತಾ ಕೇಳುತ್ತಾರೆ.

ಮರುದಿನ ಅವರು ದಾಖಲೆಗಳನ್ನು ಅಪ್‌ಡೇಟ್‌ ಮಾಡಲು ಆ ಗ್ರಾಮಕ್ಕೆ ಹೋದಾಗ, ಮೃತ ಮಹಿಳೆಯ ಪತಿ ಸೇರಿದಂತೆ ಕೆಲವರು ಆಶಾ ಅವರನ್ನೇ ಈ ಸಾವಿಗೆ ಕಾರಣ ಎಂದು ಆರೋಪಿಸಿ ನಿಂದಿಸಿದರು. ಒಂದು ತಿಂಗಳ ನಂತರ, ಮಮತಾ ಅವರನ್ನು ಜಿಲ್ಲಾ ಸಮಿತಿ ವಿಚಾರಣೆಗೆ ಕರೆದಿತ್ತು. "ಅವರು 'ತಾಯಿ ಹೇಗೆ ಸತ್ತಳು ಮತ್ತು ಆಶಾ ತಾಯಿ ಮಾಡಿದ ತಪ್ಪೇನು?' ಎಂದು ಕೇಳಿದರು. ಕೊನೆಗೆ ಎಲ್ಲವನ್ನೂ ನಮ್ಮ ತಲೆಗೆ ಕಟ್ಟುವುದಾದರೆ, ನಮ್ಮ ಗೌರವಧನವನ್ನು ಏಕೆ ಹೆಚ್ಚು ಮಾಡಬಾರದು?" ಎಂದು ಮಮತಾ ಕೇಳುತ್ತಾರೆ.

ಕೊರೋನಾ ಸಾಂಕ್ರಾಮಿಕ ರೋಗದ ಉದ್ದಕ್ಕೂ, ಸರ್ಕಾರ ಆಶಾ ಕಾರ್ಯಕರ್ತರನ್ನು ಹೊಗಳಿತು. ರಾಜ್ಯದಾದ್ಯಂತ ದೂರ ದೂರದ ಹಳ್ಳಿಗಳಿಗೆ ಹೋಗಿ ಔಷಧಿಗಳನ್ನು ವಿತರಿಸುವಲ್ಲಿ ಮತ್ತು ಸೋಂಕಿತರನ್ನು ಪತ್ತೆಹಚ್ಚುವಲ್ಲಿ ಅವರು ವಹಿಸಿದ ನಿರ್ಣಾಯಕ ಪಾತ್ರಕ್ಕಾಗಿ ಅವರನ್ನು "ಕರೋನಾ ಯೋಧರು" ಎಂದು ಶ್ಲಾಘಿಸಿತು. ಹಾಗಿದ್ದೂ, ಅವರಿಗೆ ವೈರಸ್‌ನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬೇಕಾದ ಯಾವುದೇ ಸುರಕ್ಷತಾ ಸಾಧನಗಳನ್ನು ನೀಡಲಿಲ್ಲ.

PHOTO • Swadesha Sharma
PHOTO • Swadesha Sharma

ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಎಲ್ಲರಿಗೂ ತಲುಪಿಸುವುದು ಆಶಾಗಳ ಕೆಲಸ. ಆದರೆ ಸಮುದಾಯದ ಬಗೆಗಿನ ಅವರ ಕಾಳಜಿ ಅದಕ್ಕೂ ಮಿಗಿಲಾದದ್ದು. ಮಂದಾ ಖಾತನ್ (ಎಡ) ಮತ್ತು ಶ್ರದ್ಧಾ ಘೋಗಲೆ (ಬಲ) 2010 ರಲ್ಲಿ ಆಶಾ ಕಾರ್ಯಕರ್ತೆಯರಾಗಿ ತಮ್ಮ ವೃತ್ತಿಯನ್ನು ಪ್ರಾರಂಭಿಸಿದರು, ಇಂದು ಅವರು ಮಹಾರಾಷ್ಟ್ರದ ಕಲ್ಯಾಣ್‌ನ 1,500 ಜನಗಳ ಸೇವೆ ಮಾಡುತ್ತಿದ್ದಾರೆ

ಕಲ್ಯಾಣ್‌ನ ನಂದಿವಲಿ ಗಾಂವ್‌ನ ಆಶಾ ಕಾರ್ಯಕರ್ತೆಯರಾದ ಮಂದಾ ಖಾತನ್ ಮತ್ತು ಶ್ರದ್ಧಾ ಘೋಗಲೆ ಕೊರೋನಾ ಸಮಯದ ತಮ್ಮ ಅನುಭವವನ್ನು ನೆನಪಿಸಿಕೊಳ್ಳುತ್ತಾರೆ: “ಒಮ್ಮೆ, ಹೆರಿಗೆಯ ನಂತರ ಮಹಿಳೆಯೊಬ್ಬರಿಗೆ ಕೋವಿಡ್‌ ಪರೀಕ್ಷೆ ಮಾಡಿದಾಗ ಪಾಸಿಟಿವ್‌ ಬಂತು. ಆಕೆ ಸೋಂಕಿಗೆ ಒಳಗಾಗಿದ್ದೇನೆಂದು ತಿಳಿದಾಕ್ಷಣ, ಗಾಬರಿಯಿಂದ [ನವಜಾತ ಮಗುವಿನೊಂದಿಗೆ] ಆಸ್ಪತ್ರೆ ಬಿಟ್ಟು ಓಡಿಹೋದಳು.”

"ಆಕೆ ತನ್ನನ್ನು [ಮತ್ತು ತನ್ನ ಮಗುವನ್ನು] ಹಿಡಿದು ಕೊಲ್ಲುತ್ತಾರೆ ಎಂದು ಭಾವಿಸಿದ್ದಳು," ಎಂದು ಶ್ರದ್ಧಾ ಹೇಳುತ್ತಾರೆ. ಆ ಸಂದರ್ಭದಲ್ಲಿ ವೈರಸ್ ಸುತ್ತ ಬೆಳೆದ ಭಯ ಮತ್ತು ತಪ್ಪು ಕಲ್ಪನೆ ಹೀಗಿತ್ತು.

“ಅವಳು ತನ್ನ ಮನೆಯಲ್ಲಿ ಅಡಗಿಕೊಂಡಿದ್ದಾಳೆ ಎಂದು ಯಾರೋ ನಮಗೆ ಹೇಳಿದರು. ನಾವು ಅವಳ ಮನೆಗೆ ಹೋದೆವು, ಆದರೆ ಅವಳು ಬಾಗಿಲು ಹಾಕಿಕೊಂಡಿದ್ದಳು,” ಎಂದು ಮಂದಾ ಹೇಳುತ್ತಾರೆ. ಆ ಮಹಿಳೆ ಏನಾದರೂ ತಪ್ಪು ನಿರ್ಧಾರ ತೆಗೆಕೊಳ್ಳುತ್ತಾಳೆ ಎಂದು ಹೆದರಿ, ಅವರು ರಾತ್ರಿ 1:30 ರವರೆಗೆ ಅವಳ ಮನೆಯ ಹೊರಗೆ ನಿಂತು ಕಾದರು. “ನೀವು ನಿಮ್ಮ ಮಗುವನ್ನು ಪ್ರೀತಿಸುತ್ತೀರಾ, ಇಲ್ಲವೇ ಎಂದು ನಾವು ಕೇಳಿದೆವು. ಮಗುವನ್ನು ತನ್ನ ಬಳಿಯೇ ಇರಿಸಿಕೊಂಡರೆ, ಅದಕ್ಕೂ ಸೋಂಕು ತಗಲಿ ಜೀವಕ್ಕೆ ಅಪಾಯ ಬರಬಹುದು ಎಂದು ಸಲಹೆ ನೀಡಿದೆವು,” ಎಂದು ಅವರು ಹೇಳಿದರು.

ಮೂರು ಗಂಟೆಗಳ ಕಾಲ ಕೌನ್ಸಿಲಿಂಗ್ ನಡೆಸಿದ ನಂತರ ಆ ಮಹಿಳೆ ಮನೆ ಬಾಗಿಲು ತೆರೆದರು. “ಆಂಬ್ಯುಲೆನ್ಸ್ ಸಿದ್ಧವಾಗಿತ್ತು. ಬೇರೆ ಯಾವುದೇ ವೈದ್ಯಕೀಯ ಸಿಬ್ಬಂದಿಗಳು ಅಥವಾ ಗ್ರಾಮ ಸೇವಕರು ಇರಲಿಲ್ಲ, ನಾವಿಬ್ಬರು ಮಾತ್ರ ಇದ್ದೆವು." ಕಣ್ಣಲ್ಲಿ ನೀರು ತುಂಬಿಕೊಂಡು ಮಂದಾ, "ಮರಳಿ ಹೋಗುವ ಮೊದಲು ಆ ತಾಯಿ ನನ್ನ ಕೈ ಹಿಡಿದು, 'ನಾನು ನಿಮ್ಮನ್ನು ನಂಬುತ್ತೇನೆ ಎಂಬ ಕಾರಣಕ್ಕೆ ನನ್ನ ಮಗುವನ್ನು ಬಿಟ್ಟು ಹೋಗುತ್ತಿದ್ದೇನೆ. ದಯವಿಟ್ಟು ನನ್ನ ಮಗುವನ್ನು ಚೆನ್ನಾಗಿ ನೋಡಿಕೊಳ್ಳಿ,’ ಎಂದು ಹೇಳಿದರು,” ಎಂದು ನೆನಪಿಸಿ ಕೊಳ್ಳುತ್ತಾರೆ. ಮುಂದಿನ ಎಂಟು ದಿನಗಳವರೆಗೆ ಆ ನವಜಾತ ಶಿಶುವಿಗೆ ಬಾಟಲಿಯಲ್ಲಿ ಹಾಲುಣಿಸಲು ನಾವು ಪ್ರತಿದಿನ ಅವರ ಮನೆಗೆ ಹೋಗುತ್ತಿದ್ದೆವು. ನಾವು ವೀಡಿಯೊ ಕಾಲ್ ಮೂಲಕ ಮಗುವನ್ನು ಅವರಿಗೆ ತೋರಿಸುತ್ತಿದ್ದೆವು. ಈಗಲೂ ಆ ತಾಯಿ ನಮಗೆ ಫೋನ್‌ ಮಾಡಿ ಧನ್ಯವಾದ ಹೇಳುತ್ತಾರೆ.

"ನಾವು ಒಂದು ವರ್ಷ ನಮ್ಮ ಮಕ್ಕಳಿಂದ ದೂರವಿದ್ದೆವು, ಆದರೆ ನಾವು ಇತರರ ಮಕ್ಕಳನ್ನು ಉಳಿಸಿದ್ದೇವೆ," ಎಂದು ಮಂದಾ ಹೇಳುತ್ತಾರೆ. ಆಗ ಇವರ ಮಗು 8 ನೇ ತರಗತಿಯಲ್ಲಿದ್ದರೆ, ಶ್ರದ್ಧಾರವರ ಪುಟ್ಟ ಮಗುವಿಗೆ ಕೇವಲ 5 ವರ್ಷ ಪ್ರಾಯವಾಗಿತ್ತು.

PHOTO • Cortesy: Shraddha Ghogale
PHOTO • Courtesy: Rita Chawre

ಎಡ: ಲಾಕ್‌ಡೌನ್ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆ ಶ್ರದ್ಧಾ ಅವರು ಕೋವಿಡ್ ರೋಗಿಗಳೊಂದಿಗೆ ಸಂಪರ್ಕದಲ್ಲಿ ಇರಬೇಕಿತ್ತು. ತನ್ನ 5 ವರ್ಷದ ಮಗು ಮತ್ತು ಕುಟುಂಬದಿಂದ ದೂರ ಉಳಿಯಬೇಕಾಯ್ತು ಎಂದು ಅವರು ಹೇಳುತ್ತಾರೆ. ಬಲ: ರಕ್ಷಣಾತ್ಮಕ ಗೇರ್ ಮತ್ತು ಮಾಸ್ಕ್‌ಗಳ ಕೊರತೆಯಿಂದಾಗಿ ರೀಟಾ (ಎಡ) ವೈರಸ್‌ನಿಂದ ತನ್ನನ್ನು ತಾವು ರಕ್ಷಿಸಿಕೊಳ್ಳಲು ದುಪಟ್ಟಾದಿಂದ ತನ್ನ ಮುಖ ಮುಚ್ಚಿಕೊಳ್ಳುತ್ತಿದ್ದರು

ತಮ್ಮ ಹಳ್ಳಿಯ ಜನ ಮನೆ ಬಾಗಿಲು ಮುಚ್ಚಿದ ಘಟನೆಯನ್ನು ಶ್ರದ್ಧಾ ನೆನಪಿಸಿಕೊಳ್ಳುತ್ತಾರೆ. "ನಾವು ಅವರನ್ನು ಹಿಡಿದುಕೊಂಡು ಹೋಗಲು ಬಂದಿದ್ದೇವೆ ಎಂದು ಭಾವಿಸಿ, ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ) ಕಿಟ್‌ಗಳನ್ನು ಧರಿಸಿರುವ ನಮ್ಮನ್ನು ನೋಡಿ ಓಡಿಹೋಗುತ್ತಿದ್ದರು. ಅಷ್ಟೇ ಅಲ್ಲದೇ, ನಾವು ಇಡೀ ದಿನ ಕಿಟ್‌ಗಳನ್ನು ಧರಿಸಬೇಕಿತ್ತು. ಕೆಲವೊಮ್ಮೆ ನಾವು ಒಂದೇ ದಿನದಲ್ಲಿ ನಾಲ್ಕು ಬಾರಿ ಬದಲಾಯಿಸಬೇಕಾಗಿತ್ತು. ಗಂಟೆಗಟ್ಟಲೆ ಅವುಗಳನ್ನು ಧರಿಸಿ ನಮ್ಮ ಮುಖ ಕಪ್ಪಾಗಿತ್ತು. ನಾವು ಅವನ್ನು ಹಾಕಿಕೊಂಡೇ ಬಿಸಿಲಿನಲ್ಲಿ ಓಡಾಡುತ್ತಿದ್ದೆವು. ಇದರಿಂದ ತುರಿಕೆಯಾಗಿತ್ತು ಮತ್ತು ನಮ್ಮ ಚರ್ಮ ಸುಡುವಂತೆ ಭಾಸವಾಗುತ್ತಿತ್ತು,” ಎಂದು ಶ್ರದ್ಧಾ ನೆನಪು ಮಾಡಿಕೊಳ್ಳುತ್ತಾರೆ.

ಇವರು ಹೇಳುತ್ತಿದ್ದಂತೆ ಮಧ್ಯದಲ್ಲಿ ಮಾತಿಗಳಿದ ಮಂದಾ, “ಆದರೆ ಪಿಪಿಇಗಳು ಮತ್ತು ಮಾಸ್ಕ್‌ಗಳು ಆಮೇಲೆ ತಡವಾಗಿ ಕೊಟ್ಟರು. ಕೊರೋನಾ ಕಾಲದಲ್ಲಿ ನಾವು ಓಡಾಡುವಾಗ ನಮ್ಮ ಪಲ್ಲಸ್ ಮತ್ತು ದುಪಟ್ಟಾಗಳಿಂದ ಮುಖ ಮುಚ್ಚಿಕೊಳ್ಳುತ್ತಿದ್ದೆವು” ಎಂದು ಹೇಳಿದರು.

“ಹಾಗಾದರೆ, [ಕೊರೋನಾ ಸಮಯದಲ್ಲಿ] ನಮ್ಮ ಜೀವಕ್ಕೆ ಬೆಲೆ ಇರಲಿಲ್ಲವೇ?” ಎಂದು ಮಮತಾ ಕೇಳುತ್ತಾರೆ, “ಕರೋನಾ ವಿರುದ್ಧ ಹೋರಾಡಲು ನೀವು ನಮಗೆ ರಕ್ಷಣಾ ಕವಚವನ್ನು ನೀಡಿದ್ದೀರಾ? ಸಾಂಕ್ರಾಮಿಕ ರೋಗ ಪ್ರಾರಂಭವಾದಾಗ ನೀವು [ಸರ್ಕಾರ] ನಮಗೆ ಏನನ್ನೂ ಕೊಡಲಿಲ್ಲ. ನಮ್ಮ ಆಶಾ ತಾಯಿಗಳಿಗೆ ಕೋವಿಡ್‌ ಬರಲು ಆರಂಭವಾದಾಗ, ಅವರು ಉಳಿದ ರೋಗಿಗಳಂತೆಯೇ ಅದೇ ದುರಾದೃಷ್ಟವನ್ನು ಎದುರಿಸಿದರು. ಲಸಿಕೆಗಳು ಪ್ರಾಯೋಗಿಕ ಹಂತದಲ್ಲಿದ್ದಾಗಲೂ, ಆಶಾಗಳು ಸ್ವಯಂಸೇವಕರಾಗಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದರು,” ಎಂದು ಹೇಳುತ್ತಾರೆ.

ವನಶ್ರೀ ಫುಲ್ಬಂಧೆ ಅವರು ತನ್ನ ಬದುಕಿನ ಒಮ್ಮೆ ಆಶಾ ಕಾರ್ಯಕರ್ತೆಯ ವೃತ್ತಿಯನ್ನು ಬಿಡಲು ಬಹುತೇಕ ತೀರ್ಮಾನಿಸಿದ್ದರು. "ಇದು ನನ್ನ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಲು ಆರಂಭಿಸಿತು," ಎಂದು ಅವರು ಹೇಳುತ್ತಾರೆ. 42 ವರ್ಷ ವಯಸ್ಸಿನ ಇವರು ನಾಗ್ಪುರ ಜಿಲ್ಲೆಯ ವಡೋಡಾ ಗ್ರಾಮದಲ್ಲಿ 1,500 ಕ್ಕೂ ಹೆಚ್ಚು ಜನರ ಸೇವೆ ಮಾಡುತ್ತಾರೆ. “ನನಗೆ ನೆನಪಿದೆ, ಒಮ್ಮೆ ನಾನು ಕಿಡ್ನಿಯಲ್ಲಿ ಕಲ್ಲುಗಳಾಗಿ ತೀವ್ರ ನೋವಿನಿಂದ ಬಳಲುತ್ತಿದ್ದೆ. ನಾನು ನನ್ನ ಸೊಂಟಕ್ಕೆ ಬಟ್ಟೆಯನ್ನು ಕಟ್ಟಿಕೊಂಡು ಕೆಲಸ ಮಾಡುತ್ತಿದ್ದೆ,” ಎಂದು ನೆನಪಿಸಿಕೊಳ್ಳುತ್ತಾರೆ.

ಒಬ್ಬರು ರೋಗಿ ಮತ್ತು ಅವರ ಪತಿ ವನಶ್ರೀ ಮನೆಗೆ ಬಂದರು, “ಅವರು ಮೊದಲ ಬಾರಿಗೆ ತಾಯಿಯಾಗಿದ್ದರು. ಅವರು ಗೊಂದಲದಲ್ಲಿದ್ದರು. ನಾನು ಏನನ್ನೂ ಮಾಡುವ ಸ್ಥಿತಿಯಲ್ಲಿಲ್ಲ ಎಂದು ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದೆ. ಆದರೆ ಅವರು ಹೆರಿಗೆಯ ಸಮಯದಲ್ಲಿ ನಾನು ಇರಲೇ ಬೇಕೆಂದು ಒತ್ತಾಯಿಸಿದರು. ‘ಇಲ್ಲ’ ಎಂದು ಹೇಳುವುದು ಕಷ್ಟವಾದ್ದರಿಂದ, ನಾನು ಅವರ ಜೊತೆಗೆ ಹೋದೆ. ಮಗು ಜನಿಸುವ ವರೆಗೆ ನಾನು ಆಸ್ಪತ್ರೆಯಲ್ಲಿಯೇ ಎರಡು ದಿನ ಇದ್ದೆ. ಅವರ ಸಂಬಂಧಿಕರು ನಾನು ಸೊಂಟಕ್ಕೆ ಬಟ್ಟೆ ಕಟ್ಟಿಕೊಂಡಿರುವುದನ್ನು ನೋಡಿ, ʼಇದು ಪೇಷೆಂಟಿನ ಹೆರಿಗೆಯೋ, ಇಲ್ಲ ನಿಮ್ಮದೋ!" ಎಂದು ತಮಾಷೆ ಮಾಡುತ್ತಾ ನನ್ನನ್ನು ಕೇಳುತ್ತಿದ್ದರು.

PHOTO • Ritu Sharma
PHOTO • Ritu Sharma

ವನಶ್ರೀ (ಕನ್ನಡಕ ಧರಿಸಿರುವ) ಮತ್ತು ಪೂರ್ಣಿಮಾ ಮುಂಬೈನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಫೆಬ್ರವರಿ 7, 2024 ರಂದು ನಾಗಪುರದ ತಮ್ಮ ಹಳ್ಳಿಗಳಿಂದ ಬಂದರು. ಮುಷ್ಕರದ ಒಂಬತ್ತನೇ ದಿನದಂದು ವನಶ್ರೀ ತನ್ನ ಮನೆಯವರೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಾರೆ

ಲಾಕ್‌ಡೌನ್ ಸಮಯದಲ್ಲಿ ಅವರು ತಮ್ಮ ಆಶಾ ಕೆಲಸವನ್ನು ಮುಗಿಸಿ, ರೋಗಿಗಳಿಗೆ ಆಹಾರವನ್ನು ವಿತರಿಸುವ ತಮ್ಮ ದಿನಚರಿಯನ್ನು ನೆನಪಿಸಿಕೊಳ್ಳುತ್ತಾರೆ. "ಇದು ಕೊನೆಯಲ್ಲಿ ನನ್ನ ಆರೋಗ್ಯದ ಮೇಲೆಯೇ ಪರಿಣಾಮ ಬೀರಿತು. ನಾನು ಹಲವು ದಿನಗಳಿಂದ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದೆ ಮತ್ತು ನಾನು ಈ ಕೆಲಸವನ್ನೇ ಬಿಡಬೇಕು ಎಂದು ಯೋಚಿಸಿದೆ,” ಎಂದು ವನಶ್ರೀ ಹೇಳುತ್ತಾರೆ. ಆದರೆ ವನಶ್ರೀ ಅವರ ಅತ್ತೆ “ನಾನು ಮಾಡುತ್ತಿರುವುದು ಪುಣ್ಯದ ಕೆಲಸ. [ತಾಯಿ ಮತ್ತು ಮಗುವಿನ] ಎರಡು ಜೀವಗಳು ನನ್ನ ಮೇಲೆ ಅವಲಂಬಿತವಾಗಿದೆ. ನಾನು ಈ ಕೆಲಸವನ್ನು ಎಂದಿಗೂ ಬಿಡಬಾರದು,” ಎಂದು ಉತ್ತೇಜನ ನೀಡಿದ್ದನ್ನು ನೆನಪಿಸಿಕೊಳ್ಳುತ್ತಾರೆ.

ಅವರು ತಮ್ಮ ಕಥೆಯನ್ನು ಹೇಳುತ್ತಾ ಆಗಾಗ ತಮ್ಮ ಫೋನನ್ನು ನೋಡುತ್ತಿದ್ದರು. "ನಾನು ಯಾವಾಗ ಮನೆಗೆ ಬರುತ್ತೇನೆ ಎಂದು ನನ್ನ ಮನೆಯವರು ಕೇಳುತ್ತಿದ್ದಾರೆ. ನಾನು 5,000 ರುಪಾಯಿ ಹಿಡಿದುಕೊಂಡು ಇಲ್ಲಿಗೆ ಬಂದಿದ್ದೇನೆ. ನನ್ನ ಬಳಿ ಈಗ ಕೇವಲ 200 ರುಪಾಯಿ ಇದೆ,” ಎಂದು ಅವರು ಹೇಳಿದರು. ಅವರಿಗೆ ಡಿಸೆಂಬರ್ 2023 ರಿಂದ ಮಾಸಿಕ ಗೌರವಧನವನ್ನು ಸಿಕ್ಕಿಲ್ಲ.

ಆಶಾ ಕಾರ್ಯಕರ್ತೆ ಪೂರ್ಣಿಮಾ ವಸೆ ನಾಗಪುರದ ಪಾಂಡುರ್ಣ ಗ್ರಾಮದವರು. “ನಾನು ಎಚ್‌ಐವಿ ಪಾಸಿಟಿವ್ ಮಹಿಳೆಯೊಬ್ಬರ ಹೆರಿಗೆಯಲ್ಲಿ ಆಂಬ್ಯುಲೆನ್ಸ್‌ನಲ್ಲಿಯೇ ಸಹಾಯ ಮಾಡಿದ್ದೆ. ಆಸ್ಪತ್ರೆಯಲ್ಲಿದ್ದ ಜನರು ಆಕೆಗೆ ಎಚ್‌ಐವಿ ಪಾಸಿಟಿವ್ ಎಂದು ತಿಳಿದ ಮೇಲೆ,” ಎಂದು 45 ವರ್ಷ ಪ್ರಾಯದ ಈ ಆಶಾ ಕಾರ್ಯಕರ್ತೆ ಹೇಳುತ್ತಾರೆ. “ಅವರು ಅದೊಂದು ದೊಡ್ಡ ವಿಷಯ ಎಂಬಂತೆ ವರ್ತಿಸಿದರು. ಓರ್ವ ಆಶಾ ಕಾರ್ಯಕರ್ತೆಯಾಗಿ, ಕೈಗವಸುಗಳು ಮತ್ತು ನನ್ನ ಸ್ವಂತ ಸ್ಕಾರ್ಫ್ ಹೊರತುಪಡಿಸಿ ಬೇರೆ ಯಾವುದೇ ಸಲಕರಣೆಗಳಿಲ್ಲದೆ ಹೆರಿಗೆ ನಡೆಯಲು ನೆರವಾಗಿದ್ದೆ. ʼನೀವು ಯಾಕೆ ಈ ರೀತಿ ವರ್ತಿಸುತ್ತೀರಿ?ʼ' ಎಂದು ನಾನು ಆಸ್ಪತ್ರೆಯವರಿಗೆ ಕೇಳಿದೆ,” ಎಂದು ನೆನಪು ಮಾಡಿಕೊಳ್ಳುತ್ತಾರೆ.

2009 ರಿಂದ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿರುವ ಪೂರ್ಣಿಮಾ ಅವರು 4,500 ಕ್ಕಿಂತ ಹೆಚ್ಚು ಜನರ ಸೇವೆ ಮಾಡುತ್ತಾರೆ. "ನಾನೂ ಪದವೀಧರೆ. ನನಗೆ ಹಲವು ಉದ್ಯೋಗಗಳ ಆಫರ್‌ಗಳು ಬರುತ್ತಿವೆ. ಆದರೆ, ಆಶಾ ಆಗುವುದು ನನ್ನ ನಿರ್ಧಾರವಾಗಿತ್ತು ಮತ್ತು ನಾನು ನನ್ನ ಜೀವನದುದ್ದಕ್ಕೂ ಆಶಾ ಆಗಿಯೇ ಬದುಕುತ್ತೇನೆ. ನನಗೆ ಹಣ ಸಿಗುತ್ತದೆಯೋ ಇಲ್ಲವೋ, ಅಗರ್ ಮುಜೆ ಕರ್ನಿ ಹೈ ಸೇವಾ ತೋ ಮರ್ತೇ ದಮ್ ತಕ್ ಆಶಾ ಕಾ ಕಾಮ್ ಕರುಂಗಿ [ನನಗೆ ಸೇವೆ ಮಾಡುವ ಇಚ್ಛೆ ಇರುವುದರಿಂದ, ಸಾಯುವ ವರೆಗೆ ನಾನು ಆಶಾ ಆಗಿಯೇ ಬದುಕುತ್ತೇನೆ],” ಎಂದು ಪೂರ್ಣಿಮಾ ಹೇಳುತ್ತಾರೆ.

ಆಜಾದ್ ಮೈದಾನದಲ್ಲಿ ಕ್ರಿಕೆಟ್ ಆಟ ನಡೆಯುತ್ತಲೇ ಇದೆ. ಈ ಮಧ್ಯೆ ಆಶಾ ಕಾರ್ಯಕರ್ತೆಯರು ತಮ್ಮ ಹೋರಾಟವನ್ನು ಮೈದಾನದಿಂದ ಹಿಂತೆಗೆದುಕೊಂಡಿದ್ದಾರೆ.

ಅನುವಾದ: ಚರಣ್‌ ಐವರ್ನಾಡು

Ritu Sharma

ریتو شرما، پاری میں خطرے سے دوچار زبانوں کی کانٹینٹ ایڈیٹر ہیں۔ انہوں نے لسانیات سے ایم اے کیا ہے اور ہندوستان میں بولی جانے والی زبانوں کی حفاظت اور ان کے احیاء کے لیے کام کرنا چاہتی ہیں۔

کے ذریعہ دیگر اسٹوریز Ritu Sharma
Swadesha Sharma

سودیشا شرما، پیپلز آرکائیو آف رورل انڈیا (پاری) میں ریسرچر اور کانٹینٹ ایڈیٹر ہیں۔ وہ رضاکاروں کے ساتھ مل کر پاری کی لائبریری کے لیے بھی کام کرتی ہیں۔

کے ذریعہ دیگر اسٹوریز Swadesha Sharma

پی سائی ناتھ ’پیپلز آرکائیو آف رورل انڈیا‘ کے بانی ایڈیٹر ہیں۔ وہ کئی دہائیوں تک دیہی ہندوستان کے رپورٹر رہے اور Everybody Loves a Good Drought اور The Last Heroes: Foot Soldiers of Indian Freedom کے مصنف ہیں۔

کے ذریعہ دیگر اسٹوریز پی۔ سائی ناتھ
Translator : Charan Aivarnad

Charan Aivarnad is a poet and a writer. He can be reached at: [email protected]

کے ذریعہ دیگر اسٹوریز Charan Aivarnad