ಗಣಂಗೂರಿನ ರೈತರಾದ ಸ್ವಾಮಿಯವರು ಹೇಳುತ್ತಾರೆ, "ರಾಜಕಾರಣಿಗಳು ತಮ್ಮ ಭರವಸೆಗಳನ್ನು ಟಿವಿಯಲ್ಲಿ ಮಾತ್ರ ನೀಡುತ್ತಾರೆ". ಗಣಂಗೂರು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಸುಮಾರು 1,500 ಜನಸಂಖ್ಯೆ ಹೊಂದಿರುವ ಊರಾಗಿದೆ.

ಮೇ 12 ರಂದು ಕರ್ನಾಟಕದಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯ ಮುನ್ನಾ ದಿನ, ಪ್ರಣಾಳಿಕೆಗಳಲ್ಲಿ, ಗ್ರೌಂಡ್‌ʼನಲ್ಲಿ ಮತ್ತು ದೂರದರ್ಶನ ಚಾನೆಲ್‌ಗಳಲ್ಲಿ ಕಹಿ ರಾಜಕೀಯ ಚರ್ಚೆಗಳು ನಡೆದಿವೆ. ಜನತಾದಳ ಸೆಕ್ಯುಲರ್ ಪಕ್ಷವು (ಜೆಡಿಎಸ್) ತನ್ನ ಪ್ರಣಾಳಿಕೆಯಲ್ಲಿ ಒಂದು ವರ್ಷದೊಳಗೆ ಪ್ರತಿಯೊಬ್ಬ ರೈತರ ಸಾಲವನ್ನು ಮನ್ನಾ ಮಾಡುವುದಾಗಿ, ಜೊತೆಗೆ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳ ಸಾಲವನ್ನು ಮನ್ನಾ ಮಾಡುವುದಾಗಿ ಹೇಳುತ್ತದೆ. ಈವರೆಗಿನ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್‌ಗಳಿಂದ ರೈತರು ಪಡೆದಿರುವ 1 ಲಕ್ಷ ರೂ ವರೆಗಿನ ಕೃಷಿ ಸಾಲವನ್ನು ಮನ್ನಾ ಮಾಡುವುದಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಭರವಸೆ ನೀಡಿದೆ. ಕಾಂಗ್ರೆಸ್ ಪಕ್ಷವು ಸಾಲ ಮನ್ನಾ ಮಾಡುವ ಬಗ್ಗೆ ಪ್ರಸ್ತಾಪಿಸಿಲ್ಲ, ಆದರೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಹೇಳಿದೆ ಮತ್ತು ಮುಂದಿನ ಐದು ವರ್ಷಗಳಲ್ಲಿ (2018 ರಿಂದ 2023) ನೀರಾವರಿಗಾಗಿ 1.25 ಲಕ್ಷ ಕೋಟಿ ರೂಪಾಯಿಗಳು, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ರಾಜ್ಯಾದ್ಯಂತ ನೀರಾವರಿ ಯೋಜನೆಗಳಿಗೆ ಮುಂದಿನ ಐದು ವರ್ಷಗಳಲ್ಲಿ 1.5 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡುವುದಾಗಿ ಹೇಳಿವೆ.

ಗಣಂಗೂರಿನ ರೈತರು ರಾಜಕಾರಣಿಗಳ ಸುಳ್ಳು ಪೊಳ್ಳು ಆಶ್ವಾಸನೆಗಳಿಂದ ಬೇಸತ್ತು ಹೋಗಿದ್ದಾರೆ. "ಟಿವಿಯಲ್ಲಿ ಭರವಸೆಗಳನ್ನು ನೀಡುವ ಬದಲಿಗೆ, ರಾಜಕಾರಣಿಗಳು ಕಾವೇರಿ ಸಮಸ್ಯೆಯನ್ನು ತಕ್ಷಣ ನಿಂತು ಪರಿಹರಿಸಬೇಕು. ಆಗ ನಾವು ನಮ್ಮ ಹೊಲಗಳಲ್ಲಿ ಒಳ್ಳೆಯ ಬೆಳೆ ಬೆಳೆಯಬಹುದು ಮತ್ತು  ಯಾವುದೇ ಚಿಂತೆ ಇಲ್ಲದೆ ಊಟ ಮಾಡಬಹುದು ಜೀವನ ನಡೆಸಬಹುದು" ಎಂದು ಸ್ವಾಮಿ ಹೇಳುತ್ತಾರೆ (ಈ ಗ್ರಾಮದ ರೈತರು ತಮ್ಮ ಹೆಸರಿನ ಮೊದಲ ಪದವನ್ನು ಮಾತ್ರ ಬಳಸಬೇಕೆಂದು ಬಯಸಿದ್ದರು).

Three farmers and a woman sitting in the front of a home
PHOTO • Vishaka George
A farmer sitting in front of a home
PHOTO • Vishaka George

ಸ್ವಾಮಿ (ಬಲಕ್ಕೆ) ʼರಾಜಕಾರಣಿಗಳು ಟಿವಿಯಲ್ಲಿ ಮಾತ್ರ ಭರವಸೆ ನೀಡುತ್ತಾರೆ' ಎಂದು ಹೇಳುತ್ತಾರೆ, ಆಶ್ವಾಸನೆಯಿಂದ ಬೇಸರಗೊಂಡ ಗಣಂಗೂರಿನ ರೈತರು, ಕಾವೇರಿ ವಿವಾದ ಬಗೆಹರಿದು ಅಂತಿಮವಾಗಿ ಕೃಷಿಗೆ ನೀರು ಸಿಗಬೇಕೆಂಬುದು ನಮ್ಮ ಆಸೆ ಎನ್ನುತ್ತಾರೆ

ಸ್ವಾಮಿಯವರ ಮನೆಯ ವರಾಂಡದಲ್ಲಿ ಕಲ್ಲು ನಾರಿನ ಛಾವಣಿಯ ಕೆಳಗೆ ಕುಳಿತ ಮೂರು ಜನ ರೈತರು ಮಧ್ಯಾಹ್ನ 3 ಗಂಟೆ ಸುಮಾರಿಗೆ ದಿನದ ದುಡಿಮೆಗೆ ವಿರಾಮ ತೆಗೆದುಕೊಳ್ಳುತ್ತಾರೆ. ನಾವು ಮಾತನಾಡುವುದನ್ನು ನೋಡಿ ಅಲ್ಲಿ  ಐದಕ್ಕಿಂತ ಹೆಚ್ಚು ಜನರು ಸೇರುತ್ತಾರೆ. ಹಾಗೆಯೇ ಮಾತುಕತೆ ನಡೆಯುತ್ತದೆ ಅವರಲ್ಲಿ ಒಬ್ಬರಾದ ನರಸಿಂಹಯ್ಯ ಎನ್ನುವವರು “ನಿಮಗೆ ನಮ್ಮ ಚಿನ್ನ ಬೇಕಾ ಅಥವಾ ಹಣ ಬೇಕಾ? ನಾವು ಮೊದಲೇ ಹಗರಣಗಳಿಗೆ ಬಲಿಯಾಗಿದ್ದೇವೆ!” ಎಂದು ಅವರು ನಮ್ಮನ್ನು ಕೇಳುತ್ತಾರೆ. ನಂತರ: "ಅಯ್ಯೋ ಆ ಮಾಧ್ಯಮಗಳಾ - ಈ ರಾಜಕಾರಣಿಗಳು ತಮ್ಮ ದೊಡ್ಡ ಭರವಸೆಗಳನ್ನು ನೀಡುವ ಕಾರಣಕ್ಕಾಗಿ ಮಾಧ್ಯಮಗಳನ್ನು ಇಷ್ಟ ಪಡುತ್ತಾರೆ" ಎಂದು ವ್ಯಂಗ್ಯವಾಡುತ್ತಾರೆ.

ಮಂಡ್ಯ ಜಿಲ್ಲೆಯು ಕರ್ನಾಟಕ ಮತ್ತು ತಮಿಳುನಾಡು ನಡುವೆ ದೀರ್ಘಕಾಲದ ಕಾವೇರಿ ನದಿ ನೀರು ಹಂಚಿಕೆ ವಿವಾದದ ಕೇಂದ್ರಬಿಂದುವಾಗಿದೆ. 1942ರಲ್ಲಿ ಮಂಡ್ಯ ಜಿಲ್ಲೆಯ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಕೃಷ್ಣರಾಜ ಸಾಗರ ಅಣೆಕಟ್ಟಿನಿಂದ ಅದರ ಅರ್ಧದಷ್ಟು ಕೃಷಿ ಭೂಮಿಯು (ಕರ್ನಾಟಕ ಸರ್ಕಾರದ 2014 ರ ಮಾನವ ಅಭಿವೃದ್ಧಿ ವರದಿಯ ಪ್ರಕಾರ ಜಿಲ್ಲೆಯ 524,471 ಹಿಡುವಳಿಗಳು ಒಟ್ಟು 324,060 ಹೆಕ್ಟೇರ್ ಪ್ರದೇಶವನ್ನು ಒಳಗೊಂಡಿವೆ,) ನೀರಾವರಿಯ ಅನುಕೂಲವನ್ನು ಪಡೆಯುತ್ತದೆ. ಈ ಕೃಷಿ ಪ್ರದೇಶದ ನೀರಾವರಿಗೆ ಹೇಮಾವತಿ ನದಿಯು ಅಪಾರ ಕೊಡುಗೆಯನ್ನು ನೀಡಿದೆ..

ಮುಂಗಾರು ಇಲ್ಲದ ಕಾರಣ ಮತ್ತು ಕ್ಷೀಣಿಸುತ್ತಿರುವ ನೀರಿನ ಮಟ್ಟದಿಂದಾಗಿ ಮತ್ತು ಇತರ ಕಾರಣಗಳಿಂದಾಗಿ – ಕಬ್ಬಿನಂತಹ ಬೆಳೆಗಳನ್ನು ಬೆಳೆಯಲಾಗದ ಸ್ಥಿತಿ ಉಂಟಾಗಿದೆ. ಅಂತರ್ಜಲದ ತೀವ್ರ ಹೊರತೆಗೆಯುವಿಕೆ, ಮರಳು ಗಣಿಗಾರಿಕೆ ಮತ್ತು ನಿರ್ಮಾಣದ ಕೆಲಸಗಳು ಸೇರಿದಂತೆ ವಿವಿಧ ಅಂಶಗಳಿಂದಾಗಿ ಮಂಡ್ಯದ ರೈತರಿಗೆ ತೀವ್ರ ಹೊಡೆತ ಬಿದ್ದಿದೆ. ಕರ್ನಾಟಕವು ನಾಲ್ಕು ದಶಕಗಳಲ್ಲೇ ಅತ್ಯಂತ ಭೀಕರ ಬರಗಾಲವನ್ನು ಅನುಭವಿಸುತ್ತಿದೆ ಎಂದು ಹೇಳಲಾಗುತ್ತದೆ. ಸುಮಾರು 1.81 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಜಿಲ್ಲೆ ಮಂಡ್ಯ, ಕರ್ನಾಟಕದಲ್ಲಿ ರೈತರು ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುವಂತಹ ಜಿಲ್ಲೆಗಳಲ್ಲಿ ಒಂದಾಗಿದೆ.

ಗಣಂಗೂರಿನಲ್ಲಿ ನೆರಳಿನಲ್ಲಿ ಕುಳಿತ ರೈತರ ಎದುರುಗಡೆಯೇ ನೀರಿಲ್ಲದ ಗದ್ದೆಗಳಿವೆ. ಅವುಗಳಿಗೆ ನೀರುಣಿಸಲು ನೀರಿನ ಕಾಲುವೆಗಳು ಇವೆ.  ಆದರೆ ಅವುಗಳಲ್ಲಿ ನೀರು ಹರಿಯದೆ ಒಣಗಿದ ಮೂಳೆಗಳಂತೆ ಆಗಿವೆ.

Two men standing under a roof
PHOTO • Vishaka George
An old man and a young boy under the shade of a tree
PHOTO • Vishaka George

ಎಡಕ್ಕೆ: ಕಾಲುವೆಗಳಿಗೆ ಎರಡು ತಿಂಗಳಿಂದ ನೀರು ಬಂದಿಲ್ಲ ಎನ್ನುತ್ತಾರೆ ಭತ್ತ ಬೆಳೆಯುವ ರೈತ ಬೆಳ್ಳು(ಬಲಕ್ಕೆ). ಬಲಕ್ಕೆ: ನೀರಾವರಿ, ಮಳೆ ಇಲ್ಲದೆ ಪುಟ್ಟೇಗೌಡರು ತಮ್ಮ ಕಟಾವಿನ ಚಿಂತೆಯಲ್ಲಿದ್ದಾರೆ

''ಕಳೆದ ಎರಡು ತಿಂಗಳಿಂದ ನಮ್ಮ ಕಾಲುವೆಗಳಿಗೆ ನೀರು ಬಂದಿಲ್ಲ. ನಾವು ಬೆಳೆದ ಭತ್ತ ಹಾಳಾಗಿದೆ’ ಎನ್ನುತ್ತಾರೆ ಎರಡು ಎಕರೆಯಲ್ಲಿ ಟೊಮೆಟೊ, ರಾಗಿ ಬೆಳೆದಿರುವ ರೈತ ಬೆಳು. “ಹಾಗಾಗಿ ನಾವು ಸ್ವಲ್ಪ ಕಾಸು ದುಡಿಯಲು, ನಮ್ಮ ಜಾನುವಾರುಗಳನ್ನು ಅವಲಂಬಿಸಿದ್ದೇವೆ. ನಾವು ಸಂಗ್ರಹಿಸಿದ ಧಾನ್ಯಗಳನ್ನು ಖಾಲಿಯಾಗುವವರೆಗೆ ಬಳಸುತ್ತೇವೆ, ಆದರೆ ನಮಗೆ ನೀರು ಮಾತ್ರ ಬೇಕು – ಈ ಸಮಸ್ಯೆಯೇ ಇಲ್ಲಿ ನಮ್ಮ ದೊಡ್ಡ ಸಮಸ್ಯೆಯಾಗಿದೆ ಎಂದು ನರಸಿಂಹಯ್ಯ ಹೇಳಿಕೊಳ್ಳುತ್ತಾರೆ.

“ನಾವು ಸಹಕಾರಿ ಸಂಘಗಳಿಂದ ಹಣದ ಸಾಲ ಪಡೆಯುವ ಮೂಲಕ ಕೆಲಸ ಮಾಡುತ್ತೇವೆ ಮತ್ತು ಜೀವನ ಸಾಗಿಸುತ್ತೇವೆ. ತೆಗೆದುಕೊಂಡಿರುವ ಸಾಲಕ್ಕೆ ಬಡ್ಡಿಯ ದರ ಹೆಚ್ಚೇನೂ ಇಲ್ಲ ಆದರೆ ಈ ಇಷ್ಟು ಕಡಿಮೆ ನೀರಿನ ಪೂರೈಕೆ ಇದ್ದಾಗ ಬೆಳೆ ಬೆಳೆಯಲಾಗುವುದಿಲ್ಲ. ಹಾಗಾಗಿ ನಾವು ಸಾಲವಾಗಿ ಪಡೆದ ಹಣವನ್ನು ಸ್ವಲ್ಪ ಕೂಡ ಮರುಪಾವತಿಸಲು ಸಹ ಕಷ್ಟವಾಗಿದೆ” ಎಂದು ಸ್ವಾಮಿ ಹೇಳುತ್ತಾರೆ.

ಗ್ರಾಮದ ಹೊಲಗಳಲ್ಲಿ ಖಾಸಗಿಯಾಗಿ ಅಳವಡಿಸಲಾಗಿರುವ ಬೋರ್‌ವೆಲ್‌ಗಳು ಸುಮಾರು 60 ಇವೆ, ಇದು ನರಸಿಂಹಯ್ಯನವರು ಮಾಡಿರುವ ಅಂದಾಜು - ವಿದ್ಯುತ್ ಸರಬರಾಜು ತುಂಬಾ ಕಡಿಮೆ ಇದೆ. 2014 ರ ಮಾನವ ಅಭಿವೃದ್ಧಿ ವರದಿಯು ಮಂಡ್ಯದಲ್ಲಿ ಸುಮಾರು 83.53 ಪ್ರತಿಶತ ಮನೆಗಳಿಗೆ ವಿದ್ಯುತ್ ನೀಡಲಾಗಿದೆ ಎಂದು ಹೇಳುತ್ತದೆ. "ಆದರೆ ನಮ್ಮ ಮನೆಗಳಿಗೆ ದಿನಕ್ಕೆ 2-3 ಗಂಟೆಗಳ ಕಾಲ ಮಾತ್ರ ವಿದ್ಯುತ್ ಸರಬರಾಜು ಆಗುತ್ತದೆ!" ಎಂದು ಬೇಸರಗೊಂಡ ರೈತರು ಹೇಳಿಕೊಳ್ಳುತ್ತಾರೆ.

ಗಣಂಗೂರಿನಿಂದ 20 ಕಿಲೋಮೀಟರ್ ದೂರದಲ್ಲಿರುವ ಪಾಂಡವಪುರ ತಾಲೂಕಿನ ಸುಮಾರು 2,500 ಜನಸಂಖ್ಯೆಯ ಕ್ಯಾತನಹಳ್ಳಿಯವರಾದ ಬಿ.ಪುಟ್ಟೇಗೌಡ ಹೇಳುತ್ತಾರೆ, “ಕಳೆದ 20 ದಿನಗಳಿಂದ ಕಾಲುವೆಗಳಿಂದ ನೀರು ಬಂದಿಲ್ಲ, ಸಾಕಷ್ಟು ಮಳೆಯೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾನು ಹೇಗೆ ಯಶಸ್ವಿಯಾಗಿ ಭತ್ತದ ಕೊಯ್ಲು ಮಾಡಲು ಸಾಧ್ಯ? ಎನ್ನುತ್ತಾರೆ. ಅವರ ಸಹೋದರ ಸ್ವಾಮಿಗೌಡ ಅವರು ಹೇಳುತ್ತಾರೆ, “ನನಗೆ ಎರಡು ಎಕರೆ ಜಮೀನಿದೆ. ಕಳೆದ ಐದು ತಿಂಗಳಿಂದ ನಾನು ಬೆಳೆದ ಭತ್ತಕ್ಕೆ ಒಂದು ಲಕ್ಷ ರೂ ಖರ್ಚು ಮಾಡಿದ್ದೇನೆ. ಕೂಲಿಯ ಖರ್ಚು, ಗೊಬ್ಬರ ಮತ್ತು ಕಾಮಗಾರಿಗಳಿಗೆ ಹಣ ಹೋಗುತ್ತದೆ. ನನ್ನ ಹೊಲಗಳಿಗಾಗಿ ಸಹಕಾರಿ ಸಂಘದಲ್ಲಿ ಸಾಲ ಮಾಡಿದ್ದೇನೆ. ಬಡ್ಡಿಯ ದರ ತುಂಬಾ ಇದೆ ಏನೂ ಮಾಡಲಾಗುವುದಿಲ್ಲ ನಾನು ಸಾಲ ಹಿಂದಿರುಗಿಸಬೇಕಲ್ಲವೆ. ಸರಿ? ನಮ್ಮಲ್ಲಿ ಮಳೆಯಿಲ್ಲದಿದ್ದರೆ ನಾನು ಹೇಗೆ ಕೃಷಿ ಮಾಡಲು ಸಾಧ್ಯ? ಕಾವೇರಿ ನೀರು ನಮ್ಮ ಹೊಲಗಳಿಗೆ ಬರಲಿ, ಎಲ್ಲರೂ ಕುಡಿಯಲಿ ಎನ್ನುವುದು ನಮ್ಮ ಆಶಯ.

ಚುನಾಯಿತರಾದ ನಂತರ - ಈ ಕುಂದುಕೊರತೆಗಳನ್ನು ಯಾರು ಉತ್ತಮವಾಗಿ ಪರಿಹರಿಸಬಹುದು ಎಂದು ಕೇಳಿದಾಗ, ಸ್ವಾಮಿ ಹೇಳುತ್ತಾರೆ, “ರಾಜಕಾರಣಿಗಳ ಆಸ್ತಿ ಕೋಟಿಗಟ್ಟಲೆಗೆ ಬೆಲೆ ಬಾಳುತ್ತದೆ, ಆದರೆ ಸಾಮಾನ್ಯ ಜನರು ತಮ್ಮ ಇಡೀ ಜೀವಿತಾವಧಿಯಲ್ಲಿ ಕೆಲವು ಲಕ್ಷಗಳನ್ನು ನೋಡುವುದಿಲ್ಲ. ಬಹುಶಃ ಈಗಿರುವ ಕುಂದುಕೊರತೆಗಳನ್ನು ಯುವಕರು, ವಿದ್ಯಾವಂತರು ಮತ್ತು ಭ್ರಷ್ಟರಲ್ಲದವರು ಹೊಗಲಾಡಿಸಬಹುದು ಮತ್ತು ಅವರೇ ಕೊನೆಗೊಳಿಸುತ್ತಾರೆ ಎನ್ನುವ ಮಾತನ್ನು ಸೇರಿಸುತ್ತಾರೆ.

ಅನುವಾದ: ಅಶ್ವಿನಿ ಬಿ ವಡ್ಡಿನಗದ್ದೆ

Vishaka George

وشاکھا جارج، پاری کی سینئر ایڈیٹر ہیں۔ وہ معاش اور ماحولیات سے متعلق امور پر رپورٹنگ کرتی ہیں۔ وشاکھا، پاری کے سوشل میڈیا سے جڑے کاموں کی سربراہ ہیں اور پاری ایجوکیشن ٹیم کی بھی رکن ہیں، جو دیہی علاقوں کے مسائل کو کلاس روم اور نصاب کا حصہ بنانے کے لیے اسکولوں اور کالجوں کے ساتھ مل کر کام کرتی ہے۔

کے ذریعہ دیگر اسٹوریز وشاکا جارج
Editor : Sharmila Joshi

شرمیلا جوشی پیپلز آرکائیو آف رورل انڈیا کی سابق ایڈیٹوریل چیف ہیں، ساتھ ہی وہ ایک قلم کار، محقق اور عارضی ٹیچر بھی ہیں۔

کے ذریعہ دیگر اسٹوریز شرمیلا جوشی
Translator : Ashwini B. Vaddinagadde

Ashwini B. is a Bengaluru based accountant and translator and writer by passion.

کے ذریعہ دیگر اسٹوریز Ashwini B. Vaddinagadde