ತಾರಿಖ್‌ ಅಹಮದ್‌ ಶಿಕ್ಷಕನಾಗಿ ಹತ್ತು ವರ್ಷಗಳನ್ನು ಕಳೆದಿದ್ದಾರೆ. ಪ್ರಾಥಮಿಕ ಶಿಕ್ಷಕರಾಗಿ ಅವರು ಮಕ್ಕಳಿಗೆ ಶಿಕ್ಷಣದ ಆರಂಭಿಕ ಹಂತದ ಜ್ಞಾನವನ್ನು ನೀಡುತ್ತಿದ್ದರು. 37 ವರ್ಷದ ಅವರು 2009-2019ರವರೆಗೆ ಕೇಂದ್ರ ಸಮಗ್ರ ಶಿಕ್ಷಾ ಯೋಜನೆಯಲ್ಲಿ ಶೈಕ್ಷಣಿಕ ಸ್ವಯಂಸೇವಕರಾಗಿದ್ದರು. ಲದಾಖ್‌ (ಲಡಾಖ್)‌ ಪ್ರದೇಶಕ್ಕೆ ತಮ್ಮ ಕುರಿ-ಮೇಕೆಗಳೊಡನೆ ವಲಸೆ ಬರುವ ಪಶುಪಾಲಕ ಕುಟುಂಬಗಳ ಮಕ್ಕಳಿಗೆ ಕಲಿಸುವ ಸಲುವಾಗಿ ಅವರನ್ನು ದ್ರಾಸ್‌ ಪ್ರದೇಶದ ಬೆಟ್ಟಗಳ ಮೇಲೆ ನಿಯೋಜಿಸಲಾಗಿತ್ತು.

ಆದರೆ 2019 ರಲ್ಲಿ, ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲದಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆಯಾದ ಸಂದರ್ಭದಲ್ಲಿ ಅವರು ಕೆಲಸ ಕಳೆದುಕೊಂಡರು. ಜಮ್ಮು ಮತ್ತು ಕಾಶ್ಮೀರದ ನಿವಾಸಿಯಾಗಿ - ಅವರ ಮನೆ ರಾಜೌರಿ ಜಿಲ್ಲೆಯ ಕಲಕೋಟೆಯಲ್ಲಿದೆ – ಈ ಕಾರಣದಿಂದ ಅವರು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ಹೊರಗಿನ ಮಕ್ಕಳಿಗೆ ಕಲಿಸಲು ಅರ್ಹರಲ್ಲ.

“ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ ದಿನದಿಂದ ನಮ್ಮ ಮಕ್ಕಳ ಪ್ರಾಥಮಿಕ ಶಿಕ್ಷಣ ಅಸ್ತವ್ಯಸ್ತವಾಗಿದೆ” ಎಂದು ತಾರಿಖ್‌ ಹೇಳುತ್ತಾರೆ. ಈ ಮಕ್ಕಳನ್ನು ಮರೆತ ಅಧಿಕಾರಿಗಳ ಕುರಿತು ಅವರು ಆಕ್ರೋಶ ವ್ಯಕ್ತಪಡಿಸುತ್ತಾರೆ.

“ಕಾರ್ಗಿಲ್‌ ಜಿಲ್ಲೆಯ ಝೀರೋ ಪಾಯಿಂಟಿನಿಂದ ದ್ರಾಸ್‌ ತನಕ ಒಂದೇ ಒಂದು ಸಂಚಾರಿ ಶಾಲೆ ಅಥವಾ ಹಂಗಾಮಿ ಶಿಕ್ಷಕರಿಲ್ಲ. ಈಗ ನಮ್ಮ ಮಕ್ಕಳು ಸುಮ್ಮನೆ ಅಲೆದಾಡುತ್ತಿರುತ್ತವೆ ಅಥವಾ ಆಹಾರಕ್ಕಾಗಿ ಸ್ಥಳೀಯರನ್ನು ಬೇಡುತ್ತಿರುತ್ತವೆ” ಎಂದು ಕಲಕೋಟೆಯ ಬತೇರಾ ಗ್ರಾಮದ ಸರಪಂಚ್ ಶಮೀಮ್ ಅಹ್ಮದ್ ಬಜ್ರಾನ್ ಹೇಳುತ್ತಾರೆ.

ಜಮ್ಮು ಮತ್ತು ಕಾಶ್ಮೀರದ ಒಳಗೆ ವಲಸಿಗ ಮಕ್ಕಳಿಗಾಗಿ ಸಾವಿರಾರು ತಾತ್ಕಾಲಿಕ ಶಾಲೆಗಳನ್ನು ನಿರ್ಮಿಸಲಾಗಿದೆ. ತಮ್ಮ ಮಕ್ಕಳು ಮೇ ಮತ್ತು ಅಕ್ಟೋಬರ್‌ ನಡುವೆ ವಲಸೆ ಹೋದ ಸಮಯದಲ್ಲಿ ಶಾಲೆ ತಪ್ಪಿಸಿಕೊಳ್ಳುತ್ತಾರೆ ಎನ್ನುತ್ತಾರೆ ಬಕರ್ವಾಲ್‌ ಸಮುದಾಯದ ಪೋಷಕರು. ಈ ಸಮಯದಲ್ಲಿ ಇಲ್ಲಿನ ಎಳೆಯ ಮಕ್ಕಳು ಶಿಕ್ಷಣದೊಂದಿಗೆ ಸಂಪರ್ಕ ಕಡಿದುಕೊಂಡು ಕಲಿಕೆಯಲ್ಲಿ ತಮ್ಮ ಸಹಪಾಠಿಗಳಿಗಿಂತ ಹಿಂದೆ ಬೀಳುತ್ತಾರೆ. ಬಕರ್ವಾಲ್ ಸಮುದಾಯದ ಒಟ್ಟು ಸಾಕ್ಷರತೆ ಪ್ರಮಾಣ ಶೇಕಡಾ 32ರಷ್ಟಿದ್ದು,  ರಾಜ್ಯದ ಉಳಿದ ಬುಡಕಟ್ಟುಗಳ ಸಾಕ್ಷರತೆಯ ಮಟ್ಟಕ್ಕೆ ಹೋಲಿಸಿದರೆ ಅತ್ಯಂತ ಕಡಿಮೆಯೆನ್ನುತ್ತದೆ 2013ರ ಪರಿಶಿಷ್ಟ ಪಂಗಡಗಳ ವರದಿ .

A Bakarwal settlement in Meenamarg, Kargil district of Ladakh. The children of pastoralists travel with their parents who migrate every year with their animals
PHOTO • Muzamil Bhat
A Bakarwal settlement in Meenamarg, Kargil district of Ladakh. The children of pastoralists travel with their parents who migrate every year with their animals
PHOTO • Muzamil Bhat

ಲದಾಖ್‌ನ ಕಾರ್ಗಿಲ್‌ ಜಿಲ್ಲೆಯ ಮೀನಾಮಾರ್ಗದಲ್ಲಿರುವ ಬಕರ್ವಾಲ್‌ ನೆಲೆ. ಈ ಪಶುಪಾಲಕ ಕುಟುಂಬಗಳು ತಮ್ಮ ಜಾನುವಾರುಗಳೊಂದಿಗೆ ವಲಸೆ ಹೋಗುವಾಗ ತಮ್ಮ ಮಕ್ಕಳನ್ನೂ ಕರೆದೊಯ್ಯುತ್ತಾರೆ

“ವಲಸೆ ಸಮಯದಲ್ಲಿ ನಮ್ಮ ಮಕ್ಕಳು ಓದಲು ಬಯಸಿದರೂ ನಾವು ಅಸಹಾಯಕರು. ವಲಸೆ ಸಮಯದಲ್ಲಿ ನಮಗೆ ಕನಿಷ್ಟ 100 ಕಿಲೋಮೀಟರ್ ವ್ಯಾಪ್ತಿಯಲ್ಲಿ ಶಾಲೆ ಸಿಗುವುದಿಲ್ಲ. ಇದೇ ಕಾರಣದಿಂದಾಗಿ ಅವರ ಓದು ನಿಲ್ಲುತ್ತಿದೆ” ಎಂದು ಐದು ವರ್ಷದ ಹುಜೈಫ್ ಮತ್ತು ಮೂರು ವರ್ಷದ ಶೋಯೆಬ್ ಎನ್ನುವ ಮಕ್ಕಳ ತಂದೆ ಅಮ್ಜದ್ ಅಲಿ ಬಜ್ರಾನ್ ಹೇಳುತ್ತಾರೆ. ಅವರ ಕುಟುಂಬವು ಮೀನಾಮಾರ್ಗದಿಂದ ದ್ರಾಸ್‌ ತನಕ ಇರುವ 16 ಬಕರ್ವಾಲ್ ಕುಟುಂಬಗಳ ವಾಸಸ್ಥಳದ ಭಾಗವಾಗಿದೆ.

"ನಾವು ರಾಜೌರಿಯಿಂದ ವಲಸೆ ಹೊರಡುವಾಗ ಜೊತೆಗೆ ಮಕ್ಕಳನ್ನೂ ಕರೆದೊಯ್ಯುತ್ತೇವೆ. 5-6 ತಿಂಗಳು ಕುಟುಂಬವನ್ನು ಬಿಟ್ಟಿರುವುದು ನಮ್ಮಿಂದ ಸಾಧ್ಯವಿಲ್ಲ” ಎನ್ನುತ್ತಾರೆ ಈ 30 ವರ್ಷದ ಪಶುಪಾಲಕ.

ಈ ಪ್ರದೇಶದ ಶಿಕ್ಷಣ ಅಧಿಕಾರಿಗಳು ವರದಿಯನ್ನು ಸಲ್ಲಿಸಿದ ನಂತರವೇ ಈ ಶಾಲೆಗಳಿಗೆ ವ್ಯವಸ್ಥೆ ಮಾಡಬಹುದು ಎಂದು ಸರ್ಕಾರ ಹೇಳುತ್ತದೆ. ಆದರೆ, "ಅಲೆಮಾರಿ ಗುಂಪು ನಮ್ಮ ಗಡಿಗಳನ್ನು ಮೀರಿ (ಕಾಶ್ಮೀರದಿಂದ ಲದಾಖಿನ ಕಾರ್ಗಿಲ್ ತನಕ) ಹೋಗಿರುವುದರಿಂದ, ಲಡಾಖ್ ಕಾರ್ಗಿಲ್ ಪ್ರದೇಶದ ಮುಖ್ಯ ಶಿಕ್ಷಣ ಅಧಿಕಾರಿಗಳಿಗೆ (ಸಿಇಒ) ಜಮ್ಮು ಮತ್ತು ಕಾಶ್ಮೀರದ ನಾಗರಿಕರ ವಿಷಯದಲ್ಲಿ ಯಾವುದೇ ಆಡಳಿತಾತ್ಮಕ ನಿಯಂತ್ರಣವಿಲ್ಲ" ಎಂದು ದೀಪ್ ರಾಜ್ ಕನೆಥಿಯಾ ಹೇಳುತ್ತಾರೆ. ಶಾಲಾ ಶಿಕ್ಷಣ ಇಲಾಖೆಯ ಸಮಗ್ರ ಶಿಕ್ಷಾ ಯೋಜನೆಯ ಯೋಜನಾ ನಿರ್ದೇಶಕರಾದ ಅವರು ನಮ್ಮ ಕೈಗಳನ್ನು ಕಟ್ಟಿ ಹಾಕಲಾಗಿದೆ ಎಂದು ಹೇಳುತ್ತಾರೆ. "ರಾಜ್ಯವನ್ನು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳಾಗಿ ಪರಿವರ್ತಿಸಿದ ನಂತರ ಕಾರ್ಗಿಲ್ ಪ್ರದೇಶದ ಶಿಕ್ಷಣದ ಮೇಲೆ ನಮಗೆ ಯಾವುದೇ ಆಡಳಿತಾತ್ಮಕ ನಿಯಂತ್ರಣವಿಲ್ಲ.”

ವಾರ್ಷಿಕ ಶಿಕ್ಷಣ ಸ್ಥಿತಿಗತಿ ವರದಿ (ಗ್ರಾಮೀಣ 2022) ಪ್ರಕಾರ , ಜಮ್ಮು ಮತ್ತು ಕಾಶ್ಮೀರದಲ್ಲಿ 2022ರಲ್ಲಿ ಶೇಕಡಾ 55.5ರಷ್ಟು ಮಕ್ಕಳು ಸರ್ಕಾರಿ ಶಾಲೆಗಳಿಗೆ ದಾಖಲಾಗಿದ್ದಾರೆ. ಈ ಅಂಕಿ ಅಂಶವು 2018ರಲ್ಲಿ ಶೇಕಡಾ 58.3ರಷ್ಟಿತ್ತು.

Left: Tariq Ahmad is a herder who was a teacher for 10 years. Here in Meenamarg he spends a few hours every day teaching children ages 3-10.
PHOTO • Muzamil Bhat
Right: Ishrat, Rifat and Nawaz (from left to right) reading under Tariq's watchful eye
PHOTO • Muzamil Bhat

ಎಡ: ತಾರಿಕ್ ಅಹ್ಮದ್ ಓರ್ವ ಪಶುಪಾಲಕ, ಅವರು 10 ವರ್ಷಗಳ ಕಾಲ ಶಿಕ್ಷಕರಾಗಿದ್ದರು. ಇಲ್ಲಿ ಮೀನಾಮಾರ್ಗದಲ್ಲಿ, ಅವರು ಪ್ರತಿದಿನ ಕೆಲವು ಗಂಟೆಗಳ ಕಾಲ 3-10 ವರ್ಷದ ಮಕ್ಕಳಿಗೆ ಮಕ್ಕಳಿಗೆ ಪಾಠ ಮಾಡುತ್ತಾರೆ. ಬಲ: ಇಶ್ರತ್, ರಿಫಾತ್ ಮತ್ತು ನವಾಜ್ (ಎಡದಿಂದ ಬಲಕ್ಕೆ) ತಾರೀಖ್ ಅವರ ಕಣ್ಗಾವಲಿನಲ್ಲಿ ಓದುತ್ತಿದ್ದಾರೆ

PHOTO • Muzamil Bhat

ಮಕ್ಕಳು ತಾವು ಕಲಿತಿದ್ದನ್ನು ಮರೆಯದಿರಲಿ ಎನ್ನುವ ಕಾರಣಕ್ಕೆ ತಾವು ಆಗಾಗ ಪರೀಕ್ಷೆ ನಡೆಸುವುದಾಗಿ ಹೇಳುತ್ತಾರೆ ತಾರಿಖ್

‌ಲದಾಖ್‌ ಕಾರ್ಗಿಲ್‌ನ ಈ ಪ್ರದೇಶದಲ್ಲಿ ಅಲೆಮಾರಿ ಮಕ್ಕಳಿಗೆ ಕಲಿಸಲೆಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಆರು ಹಂಗಾಮಿ ಶಿಕ್ಷಕರನ್ನು ನೇಮಿಸಿದೆ ಎಂದು ಸರಪಂಚ್ ಶಮೀಮ್ ಹೇಳುತ್ತಾರೆ. "ಅವರು ವಲಸೆ ಋತುವಿನ ಕೊನೆಯಲ್ಲಿ ಬರುತ್ತಾರೆ ಮತ್ತು ಅವರು ಕೆಲಸವನ್ನೇ ಮಾಡದೆ ಸಿಇಒ ಅವರ ಹಾಜರಿ ಪಟ್ಟಿಯಲ್ಲಿ ಸಹಿ ಹಾಕುತ್ತಾರೆ" ಎಂದು ಅವರು ದೂರಿದರು.

“ನಾವು ಅಸಹಾಯಕರು, ಇದೇ ಕಾರಣದಿಂದಾಗಿ ನಮ್ಮ ಮಕ್ಕಳು ಓದುವುದನ್ನು ಬಿಟ್ಟು ಕುರಿ ಮೇಯಿಸುವುದು ಅಥವಾ ಇತರ ಕೆಲಸಗಳನ್ನು ಹಿಡಿಯುತ್ತಾರೆ” ಎನ್ನುತ್ತಾರೆ ಅಮ್ಜದ್.‌ “ಯಾರಿಗೆ ತಾನೆ ತಮ್ಮ ಮಕ್ಕಳು ಚೆನ್ನಾಗಿ ಓದಿ ಒಳ್ಳೆಯ ಭವಿಷ್ಯವನ್ನು ಹೊಂದಲಿ ಎನ್ನುವ ಆಸೆಯಿರುವುದಿಲ್ಲ ಹೇಳಿ?

ಅದೃಷ್ಟವಶಾತ್ ಅಮ್ಜದ್ ಮತ್ತು ಇತರ ಪಶುಪಾಲಕರ ಮಕ್ಕಳ ಪಾಲಿಗೆ ತರಬೇತಿ ಪಡೆದ ಶಿಕ್ಷಕ ತಾರಿಖ್ ಇದ್ದಾರೆ. ಅವರಿಗೆ ಸಮಗ್ರ ಶಿಕ್ಷಾ ಉದ್ಯೋಗವಿಲ್ಲದಿದ್ದರೂ, ಇಂಗ್ಲಿಷ್, ಗಣಿತ, ವಿಜ್ಞಾನ ಮತ್ತು ಉರ್ದು ಕಲಿಯುತ್ತಿರುವ ಮೀನಾಮಾರ್ಗದಲ್ಲಿರುವ ಬಕರ್ವಾಲ್ ಮಕ್ಕಳಿಗೆ ಕಲಿಸುವುದನ್ನು ಅವರು ನಿಲ್ಲಿಸಿಲ್ಲ. "ಈ ಮಕ್ಕಳಿಗೆ ಕಲಿಸುವುದು ನನ್ನ ಸಮುದಾಯಡೆಗಿನ ನನ್ನ ಕರ್ತವ್ಯ ಎಂದು ನಾನು ಭಾವಿಸುತ್ತೇನೆ. ಇದು ನನಗೆ ಸಂತೋಷ ಮತ್ತು ಖಷಿಯನ್ನು ನೀಡುತ್ತದೆ" ಎಂದು ಈ ಯುವ ಬಕರ್ವಾಲ್ ಹೇಳುತ್ತಾರೆ.

ಅವರೀಗ ವೇತನ ಸಹಿತ ಶಿಕ್ಷಕರಲ್ಲದ ಕಾರಣ ಕುರಿ-ಆಡು ಮೇಯಿಸುವ ಕೆಲಸವನ್ನೂ ಮಾಡುತ್ತಾರೆ- ಬೆಳಿಗ್ಗೆ 10 ಗಂಟೆಗೆ ಹೊರಟು ಸಂಜೆ 4 ಗಂಟೆಗೆ ಹಿಂತಿರುಗುತ್ತಾರೆ. ತಾರಿಖ್ ಅವರ ಕುಟುಂಬವು 60 ಪ್ರಾಣಿಗಳನ್ನು ಹೊಂದಿದೆ - ಕುರಿ ಮತ್ತು ಮೇಕೆ ಎರಡೂ - ಮತ್ತು ಅವರು ತಮ್ಮ ಪತ್ನಿ ಮತ್ತು ಮಗಳು ರಫೀಕ್ ಬಾನೊ ಅವರೊಂದಿಗೆ ಇಲ್ಲಿದ್ದಾರೆ.

ಅಮ್ಜದ್‌ ಅವರ ಓದಿನ ಹಾದಿಯೂ ಸುಲಭದ್ದಾಗಿರಲಿಲ್ಲ. ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡ ಅವರು, “ಪದೇ ಪದೇ ಓದಿಗೆ ಅಡ್ಡಿಯಾಗಬಾರದೆನ್ನುವ ಕಾರಣಕ್ಕಾಗಿ ನಾನು ಶ್ರೀನಗರಕ್ಕೆ ಹೋದೆ” ಎಂದು ಹೇಳುತ್ತಾರೆ. ನಂತರ ತಾರಿಕ್ 2003 ರಲ್ಲಿ ಸೌರಾ ಶ್ರೀನಗರದ ಸರ್ಕಾರಿ ಬಾಲಕರ ಹೈಯರ್ ಸೆಕೆಂಡರಿ ಶಾಲೆಯಲ್ಲಿ 12 ನೇ ತರಗತಿಯನ್ನು ಪೂರ್ಣಗೊಳಿಸಿದರು.

PHOTO • Muzamil Bhat
PHOTO • Muzamil Bhat

ತಾತ್ಕಾಲಿಕ ಶಾಲೆಯಲ್ಲಿ ಸಾಮಾನ್ಯವಾಗಿ ಶಿಕ್ಷಕರು ಇರುವುದಿಲ್ಲ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ. 'ಇದರಿಂದಾಗಿಯೇ ನಮ್ಮ ಮಕ್ಕಳು ಸಹ ಕುರಿ ಮೇಯಿಸುವುದು ಅಥವಾ ಇನ್ಯಾವುದಾದರೂ ಕೂಲಿ ಕೆಲಸ ಮಾಡುತ್ತಾರೆ' ಎಂದು ಪೋಷಕರಾದ ಅಮ್ಜದ್ ಹೇಳುತ್ತಾರೆ

ಸ್ವತಃ ಬಕರ್ವಾಲ್‌ ಸಮುದಾಯಕ್ಕೆ ಸೇರಿದವರಾದ ಅವರು, ಇದು ತಾನು ಸಮುದಾಯದಿಂದ ಪಡೆದಿದ್ದನ್ನು ಮರಳಿಸುವ ಸಮಯ ಎನ್ನುತ್ತಾರೆ. "ಅಪ್ಪ [ತಂದೆ] ಇಲ್ಲಿ ನಮಗೆ ಎಲ್ಲಾ ವಿಷಯಗಳನ್ನು ಕಲಿಸುತ್ತಾರೆ, ಆದರೆ ನಮ್ಮ ಶಾಲೆಯಲ್ಲಿ ಪ್ರತಿ ವಿಷಯಕ್ಕೂ ಬೇರೆ ಬೇರೆ ಶಿಕ್ಷಕರಿದ್ದಾರೆ" ಎಂದು ರಫೀಕ್ ಬಾನೊ ಹೇಳುತ್ತಾಳೆ. ರಾಜೌರಿ ಜಿಲ್ಲೆಯ ಕಲಕೋಟೆ ತಹಸಿಲ್ನ ಪಾಣಿಹಾರ್ ಗ್ರಾಮದ ಜಮ್ಮ ಮತ್ತು ಕಾಶ್ಮೀರ ಸರ್ಕಾರಿ ಬಾಲಕಿಯರ ಮಾಧ್ಯಮಿಕ ಶಾಲೆಯಲ್ಲಿ ಈ 10 ವರ್ಷದ ಬಾಲಕಿ 6ನೇ ತರಗತಿಯಲ್ಲಿ ಓದುತ್ತಿದ್ದಾಳೆ.

“ನಾನು ಓದಿ ದೊಡ್ಡವಳಾದ ನಂತರ ಶಿಕ್ಷಕಿಯಾಗುತ್ತೇನೆ ಇಲ್ಲಿ ಮಕ್ಕಳಿಗೆ ಕಲಿಸಬಲ್ಲ ಶಿಕ್ಷಕರಿಲ್ಲ. ನನ್ನ ಅಪ್ಪನ ಹಾಗೆ ನಾನೂ ಇಲ್ಲಿನ ಮಕ್ಕಳಿಗೆ ಓದು ಬರಹ ಕಲಿಸುತ್ತೇನೆ” ಎನ್ನುತ್ತಾಳೆ ಈ ಪುಟ್ಟ ಬಾಲಕಿ.

ಮೊದಲು ಆಟಗಳನ್ನು ಆಡುತ್ತಾ ಅಥವಾ ಬೆಟ್ಟಗಳಲ್ಲಿ ಅಲೆಯುತ್ತಾ ಸಮಯ ಕಳೆಯುತ್ತಿದ್ದ ಮಕ್ಕಳು ಈಗ ತಾರಿಖ್‌ ಅವರ ದೆಸೆಯಿಂದಾಗಿ ದಿನದ ಕೆಲವು ಗಂಟೆಗಳನ್ನು ಓದಿಗೆ ಮೀಸಲಿಡುತ್ತಾರೆ. ಜುಲೈನಲ್ಲಿ ಈ ವರದಿಗಾರ ಅವರನ್ನು ಭೇಟಿಯಾದ ದಿನ ಅವರು ತಮ್ಮ ಪುಸ್ತಕಗಳನ್ನು ಓದುತ್ತಿದ್ದರು. ಮೀನಾ ಮಾರ್ಗದಲ್ಲಿರುವ ತಮ್ಮ ಮನೆಯೆದುರು ತಮ್ಮ ಮನೆಗಳ ಎದುರಿನ ಮರದ ನೆರಳಿನಡಿ ಕುಳಿತು ತಾರಿಖ್‌ ಈ 3-10 ವರ್ಷದ 25 ಮಕ್ಕಳ ಗುಂಪನ್ನು ನೋಡಿಕೊಳ್ಳುತ್ತಿದ್ದರು..

“ಈ ಮಕ್ಕಳಿಗೇನೊ ನಾನು ಕಲಿಸುತ್ತೇನೆ. ಆದರೆ ಬೆಟ್ಟದ ಎತ್ತರದ ಪ್ರದೇಶಗಳ ಮೇಲೂ ಮಕ್ಕಳಿವೆ ಆ ಮಕ್ಕಳ ಕತೆಯೇನು? ಅವರಿಗೆ ಯಾರು ಕಲಿಸುತ್ತಾರೆ?” ಎಂದು ಕೇಳುವ ಈ ಶಿಕ್ಷಕ ಯಾವುದೇ ಶುಲ್ಕದ ಆಸೆಗೆ ಬೀಳದೆ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.

ಕಾರ್ಗಿಲ್‌ ಇತ್ತೀಚಿಗೆ (2019) ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಲ್ಪಟ್ಟಿರುವ ಲದಾಖ್‌ಗೆ ಸೇರಿದೆ. ಇದು ಮೊದಲು ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಸೇರಿತ್ತು.

ಅನುವಾದ: ಶಂಕರ. ಎನ್. ಕೆಂಚನೂರು

Muzamil Bhat

مزمل بھٹ، سرینگر میں مقیم ایک آزاد فوٹو جرنلسٹ اور فلم ساز ہیں۔ وہ ۲۰۲۲ کے پاری فیلو تھے۔

کے ذریعہ دیگر اسٹوریز Muzamil Bhat
Editor : PARI Desk

پاری ڈیسک ہمارے ادارتی کام کا بنیادی مرکز ہے۔ یہ ٹیم پورے ملک میں پھیلے نامہ نگاروں، محققین، فوٹوگرافرز، فلم سازوں اور ترجمہ نگاروں کے ساتھ مل کر کام کرتی ہے۔ ڈیسک پر موجود ہماری یہ ٹیم پاری کے ذریعہ شائع کردہ متن، ویڈیو، آڈیو اور تحقیقی رپورٹوں کی اشاعت میں مدد کرتی ہے اور ان کا بندوبست کرتی ہے۔

کے ذریعہ دیگر اسٹوریز PARI Desk
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru