ಸಮಿತಾರವರ ವಠಾರದ ಮನೆಯಿಂದ ಹತ್ತಿರದ ಅಪಾರ್ಟಮೆಂಟುಗಳಿಗೆ ಬಟ್ಟೆಯ ಗಂಟುಗಳು ಓಡಾಡುವುದು ನಿಂತುಹೋಗಿದೆ. ಎರಡು ತಿಂಗಳ ಕೆಳಗಿನವರೆಗೂ ಪ್ರತಿದಿನ ಬೆಳಿಗ್ಗೆ ವಾಡಾ ಪೇಟೆಯ ಅಶೋಕವನ ಕಾಂಪ್ಲೆಕ್ಸಿನಲ್ಲಿರುವ ಮನೆಗಳಿಂದ ತೊಳೆದು ಜೋಡಿಸಿಟ್ಟ ಬಟ್ಟೆಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ತಲೆಯ ಮೇಲೊಂದು, ಕಂಕುಳಲ್ಲೊಂದು ಬಟ್ಟೆಯ ಗಂಟನ್ನು ಹೊತ್ತುಕೊಂಡು ಅದೇ ಪೇಟೆಯಲ್ಲಿ ಎರಡು ಕಿಮೀ ದೂರದಲ್ಲಿದ್ದ ಭಾನುಶಾಲಿ ವಠಾರಕ್ಕೆ ಹಿಂದಿರುಗುತ್ತಾರೆ. ಅಲ್ಲಿ ಅವರು ಅವುಗಳನ್ನು ಇಸ್ತ್ರಿ ಮಾಡಿ, ಅಚ್ಚುಕಟ್ಟಾಗಿ ಮಡಚಿದ ಮೇಲೆ ಅದೇದಿನ ಸಾಯಂಕಾಲ ಆಯಾ ಮನೆಗಳಿಗೆ ಕೊಟ್ಟುಬಿಡುತ್ತಾರೆ.
“ಲಾಕ್ ಡೌನ್ ಶುರುವಾದಾಗಿನಿಂದ, ಇಸ್ತ್ರಿಗೆ ಬಟ್ಟೆ ಬರುವುದೇ ನಿಂತುಹೋಗಿದೆ” ಅಸಹಾಯಕತೆಯಿಂದ ಹೇಳುತ್ತಾರೆ 32 ವಯಸ್ಸಿನ ಸಮಿತಾ ಮೋರೆ. ಮಾರ್ಚಿ, 24ರಂದು ಲಾಕ್ ಡೌನ್ ಶುರುವಾಗವರೆಗೆ ದಿನಕ್ಕೆ ಕನಿಷ್ಟ ನಾಲ್ಕು ಮನೆಯ ಬಟ್ಟೆಗಳಾದರೂ ಸಿಗುತ್ತಿತ್ತು. ಆದರೆ ಅದು ಈಗ ವಾರಕ್ಕೆ ಒಂದೆರಡಕ್ಕೆ ಇಳಿದಿದೆ. ಅಂಗಿ ಅಥವಾ ಪ್ಯಾಂಟೊಂದಕ್ಕೆ 5 ರೂ ಮತ್ತು ಒಂದು ಸೀರೆಗೆ 30 ರೂ. ಗಳಿಸುತ್ತಿದ್ದ- ದಿನವೊಂದಕ್ಕೆ 150-200 ರೂ. ಗಳಿಸುತ್ತಿದ್ದವರಿಗೆ ಏಪ್ರಿಲ್ಲಿನಲ್ಲಿ ವಾರಕ್ಕೆ ರೂ. 100 ದುಡಿಯಲಷ್ಟೇ ಸಾಧ್ಯವಾಗುತ್ತಿದೆ. “ಇಷ್ಟು ಹಣದಲ್ಲಿ ಬದುಕುವುದಾದರೂ ಹೇಗೆ?” ಎಂದು ಕೇಳುತ್ತಾರೆ.
ಸಮಿತಾರ ಗಂಡ 48 ವರ್ಷದ ಸಂತೋಷ್ ಈ ಹಿಂದೆ ಆಟೋ ರಿಕ್ಷಾದ ಡ್ರೈವರಾಗಿ ಕೆಲಸ ಮಾಡುತ್ತಿದ್ದರು. ಆದರೆ ವಾಡಾದ ಹತ್ತಿರ ಟೆಂಪೋದಲ್ಲಿ ಪ್ರಯಾಣಿಸುವಾಗ ಕಲ್ಲು ಹೊಡೆದದ್ದರಿಂದ, 2005 ರಲ್ಲಿ ಒಂದು ಕಣ್ಣನ್ನೇ ಕಳೆದುಕೊಂಡರು. “ಈಗ ನಾನು ಬೇರೆ ಯಾವ ಕೆಲಸ ಮಾಡಲೂ ಆಗುವುದಿಲ್ಲ. ಆದ್ದರಿಂದ ಇಸ್ತ್ರಿ ಮಾಡಲು ನನ್ನ ಹೆಂಡತಿಗೆ ಸಹಾಯ ಮಾಡುತ್ತೇನೆ. ಪ್ರತಿದಿನ ಸತತವಾಗೆ 4 ಗಂಟೆ ನಿಂತುಕೊಂಡೇ ಇಸ್ತ್ರಿ ಮಾಡುವುದರಿಂದ ನನ್ನ ಕಾಲುಗಳು ನೋಯುತ್ತವೆ” ಎನ್ನುತ್ತಾರೆ ಅವರು.
ಸಂತೋಷ್ ಮತ್ತು ಸಮಿತಾ 15 ವರ್ಷಗಳಿಂದ ಬಟ್ಟೆಗಳನ್ನು ಇಸ್ತ್ರಿ ಮಾಡುತ್ತಿದ್ದಾರೆ. “ಇವರಿಗೆ ಅಪಘಾತವಾದ ಮೇಲೆ, ಇನ್ನು ಊಟಕ್ಕಾಗಿ ಮತ್ತು ಇಬ್ಬರು ಮಕ್ಕಳನ್ನು ಶಾಲೆಗೆ ಕಳಿಸಲು ಹಣ ಬೇಕಲ್ಲವೆ? ಅದಕ್ಕೇ ಈ ಕೆಲಸ ಶುರು ಮಾಡಿದೆ. ಆದರೆ ಈ ಲಾಕ್ ಡೌನ್ ನಿಜವಾಗಿಯೂ ಕೆಟ್ಟದ್ದು” ಎನ್ನುತ್ತಾರೆ ಸಮಿತಾ. ಕಳೆದ ಕೆಲವು ವಾರಗಳಲ್ಲಿ ಈ ಕುಟುಂಬವು ಸಾಸಿವೆ ಡಬ್ಬದ ಸಣ್ಣ ಉಳಿತಾಯವನ್ನೂ ಕರಗಿಸಿದ್ದಾರೆ. ಮತ್ತೆ ದಿನಸಿಗಳನ್ನು ಕೊಳ್ಳಲು ಹಾಗೂ ಬಂದಿದ್ದ 900 ರೂಪಾಯಿಗಳ ಕರೆಂಟ್ ಬಿಲ್ಲನ್ನು ಕಟ್ಟಲು ಸಂಬಂಧಿಕರಿಂದ ರೂ. 4000ಗಳಷ್ಟು ಸಾಲ ಮಾಡಿಕೊಂಡಿದ್ದಾರೆ.
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಾಡಾ ಪಟ್ಟಣದಲ್ಲಿ ಸಮಿತಾರು ಇರುವ ರಸ್ತೆಯಲ್ಲಿಯೇ 45 ವರ್ಷದ ಅನಿತಾ ರಾವತ್ ಕೂಡ ಇದ್ದಾರೆ. ಅವರೂ ಬಟ್ಟೆ ಇಸ್ತ್ರಿ ಮಾಡುವ ಕಸುಬನ್ನೇ ಜೀವನಕ್ಕಾಗಿ ನೆಚ್ಚಿಕೊಂಡಿದ್ದಾರೆ. ಅನಿತಾರ ಗಂಡ ಅಶೋಕ್ 40ರ ಪ್ರಾಯಕ್ಕೇ ಪಾರ್ಶ್ವವಾಯು ಲಕ್ವದಿಂದ ತೀರಿಹೋಗಿದ್ದಾರೆ. “ಆರು ವರ್ಷಗಳ ಕೆಳಗೆ ನನ್ನ ಗಂಡನನ್ನು ಕಳೆದುಕೊಂಡಾಗಲೂ ಹೇಗೋ ಬದುಕಿದೆ. ಆದರೆ ಈ ಲಾಕ್ ಡೌನಿನಲ್ಲಿ ವ್ಯವಹಾರ ಪೂರ್ತಿ ನಿಂತುಹೋಗಿದೆ” ಎನ್ನುತ್ತಾರೆ ಅವರು.
ಅವರು ಅವರ ಮಗ ಭೂಷಣ್ (18 ವರ್ಷ) ಜೊತೆಗೆ ವಾಸಿಸುತ್ತಿದ್ದಾರೆ. ಅವರೂ ಇಸ್ತ್ರಿ ಕೆಲಸದಲ್ಲಿ ಸಹಾಯ ಮಾಡುತ್ತಾರೆ. ಅನಿತಾರು ಹೇಳುವಂತೆ “ನನ್ನ ಗಂಡ, ಅವರ ತಂದೆ ಮತ್ತು ಅವರ ಅಜ್ಜ ಎಲ್ಲರೂ ಇದೇ ಕಸುಬನ್ನು ಮಾಡುತ್ತಿದ್ದರು.” ಇವರು ಧೋಬಿ ಎಂದು ಕರೆಯಲ್ಪಡುವ ಪರೀಟ ಎನ್ನುವ ಹಿಂದುಳಿದ ಜಾತಿಗೆ ಸೇರಿದ್ದಾರೆ. (ಇಲ್ಲಿ ಹೇಳಿರುವ ಇತರೆ ಜನರು ಮರಾಠಾ ಅಥವಾ ಹಿಂದುಳಿದ ಜಾತಿಗಳಿಗೆ ಸೇರಿದ್ದಾರೆ.) ವಾಡಾದ ಜೂನಿಯರ್ ಕಾಲೇಜಿನಲ್ಲಿ 12ನೇ ತರಗತಿಯಲ್ಲಿ ಓದುತ್ತಿರುವ ಭೂಷಣ್ “ದಿನಕ್ಕೆ ಐದಾರು ಗಂಟೆಗಳು ನಿಂತುಕೊಂಡೇ ಬಟ್ಟೆಗಳಿಗೆ ಇಸ್ತ್ರಿ ಹಾಕುವುದರಿಂದ ತಾಯಿಯವರ ಕಾಲುಗಳು ಊದಿಕೊಳ್ಳುತ್ತವೆ. ಅದಕ್ಕೇ ನಾನೂ ಸ್ವಲ್ಪ ಕೆಲಸ ಮಾಡುತ್ತೇನೆ ಮತ್ತು ನಾನೇ ಬಟ್ಟೆಗಳನ್ನು ಕೊಟ್ಟು ಬರಲು ಹೋಗುತ್ತೇನೆ” ಎಂದರು.
“ಇವು ಮದುವೆ ಸುಗ್ಗಿಯ ತಿಂಗಳುಗಳು (ಏಪ್ರಿಲ್ ನಿಂದ ಜೂನ್), ಈ ಸಮಯದಲ್ಲಿ ಸೀರೆಗಳು ಮತ್ತು ಡ್ರೆಸ್ಸುಗಳನ್ನು (ಸೆಲ್ವಾರ್ ಕಮೀಜ್) ಇಸ್ತ್ರಿ ಮಾಡಲು ಸಾಕಷ್ಟು ಆರ್ಡರ್ ಸಿಗುತ್ತದೆ. ಆದರೆ ಈ ವೈರಸ್ಸಿನಿಂದ ಎಲ್ಲಾ ಮದುವೆಗಳು ನಿಂತು ಹೋದವು” ಎಂದರು ಅನಿತಾ. ತೆರೆದ ಚರಂಡಿಗಳಿರುವ ಸಣ್ಣ ಓಣಿಯಲ್ಲಿನ ಮನೆಯೆನ್ನುವ ಒಂದು ಕೋಣೆಗೆ ತಿಂಗಳಿಗೆ ರೂ. 1500 ಬಾಡಿಗೆ ಕೊಡುತ್ತಾರೆ. ಆರು ವರ್ಷದ ಕೆಳಗೆ ಅಶೋಕರವರಿಗೆ ಲಕ್ವ ಹೊಡೆದ ನಂತರ ಆಸ್ಪತ್ರೆಯ ಖರ್ಚಿಗೆ ತಮ್ಮ ತಂಗಿಯಿಂದ ಸಾಲ ಪಡೆದಿದ್ದರು. “ಕಳೆದ ವರ್ಷ ಮನೆ ಖರ್ಚಿಗೆಂದು ತಂಗಿಯ ಹತ್ತಿರ ಸ್ವಲ್ಪ ಹಣ ಪಡೆಯಬೇಕಾಯಿತು. ಈ ತಿಂಗಳು ವಾಪಾಸು ಕೊಡುತ್ತೇನೆಂದು ಹೇಳಿದ್ದೆ. ಆದರೆ ಈಗ ನಮಗೆ ವ್ಯಾಪಾರವೇ ಇಲ್ಲ. ಸಾಲ ಹೇಗೆ ತೀರಿಸಲಿ” ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು.
ವಾಡಾದ ಅದೇ ಭಾಗದಲ್ಲಿ ವಾಸಿಸುವ 47 ವರ್ಷದ ಅನಿಲ್ ದುರ್ಗುಡೆಯವರೂ ಕೂಡ ಏಪ್ರಿಲ್ ನಿಂದ ಜೂನ್ ವರೆಗಿನ ಮದುವೆ ಸುಗ್ಗಿಯಲ್ಲಿ ಹೆಚ್ಚಿನ ಕೆಲಸದ ನಿರೀಕ್ಷೆಯಲ್ಲಿದ್ದರು. ಇವರ ಬಲಗಾಲಿನ ಪಾದದ ವೆರಿಕೋಸ್ ವೆಯಿನ್ಸ್ ನ(ಕಾಲಿನ ನರ ಊತ) ಶಸ್ತ್ರ ಚಿಕಿತ್ಸೆಗಾಗಿ ಹಣದ ಅವಶ್ಯಕತೆ ಇದೆ. (ವೆರಿಕೋಸ್ ವೆಯಿನ್ಸ್ – ಕಾಲಿನ ರಕ್ತದ ಲೋಮನಾಳಗಳ ಗೋಡೆಗಳು ಮತ್ತು ಕವಾಟಗಳು ದುರ್ಬಲವಾಗಿರುವುದು ಅಥವಾ ಹಾನಿಯಾಗಿರುವುದು) “ನನಗೆ ಹೀಗೆ ಆಗಿ ಇಲ್ಲಿಗೆ ಎರಡು ವರ್ಷವಾಯಿತು. ವಾಡಾದಿಂದ 25 ಕಿಮೀ ದೂರದ ಖಾಸಗಿ ಆಸ್ಪತ್ರೆಯಲ್ಲಿ ಆಪರೇಶನ್ನಿಗಾಗಿ 70,000 ಬೇಕಾಗಬಹುದು.
“ಆದರೆ ಈ ಲಾಕ್ ಡೌನಿನಿಂದ ವ್ಯಾಪಾರವೇ ನಿಂತುಹೋಗಿದೆ” ಎಂದು ಎರಡು ವರ್ಷದಿಂದ ತಮ್ಮ ಕಾಲುನೋವನ್ನು ತಡೆದುಕೊಂಡಿರುವ ಅನಿಲ್ “ನಾನು ಇಸ್ತ್ರಿ ಮಾಡುತ್ತಾ ಕನಿಷ್ಟ ಆರು ಗಂಟೆಗಳು ನಿಂತೇ ಇರಬೇಕಾಗುತ್ತದೆ. ನನ್ನ ಹತ್ತಿರ ಸೈಕಲ್ಲೂ ಇಲ್ಲದಿರುವುದರಿಂದ, ಗಿರಾಕಿಗಳೇ ಬಟ್ಟೆಗಳನ್ನು ಮನೆಗೆ ತಂದು ಕೊಡುತ್ತಾರೆ. ಅವರು ಯಾವಾಗ ಬರಬೇಕೆಂದು ನಾನು ಹೇಳುತ್ತೇನೆ, ಆಗ ಬಂದು ಅವರ ಬಟ್ಟೆಗಳನ್ನು ತೆಗೆದುಕೊಂಡು ಹೋಗುತ್ತಾರೆ” ಎಂದು ಹೇಳುತ್ತಾರೆ. ಲಾಕ್ ಡೌನಿಗಿಂತ ಮುಂಚೆ ಅನಿಲ್ ತಿಂಗಳಿಗೆ ರೂ. 4000 ಗಳಿಸುತ್ತಿದ್ದರು. ಆದರೆ ಕಳೆದೆರಡು ತಿಂಗಳಿಂದ ಒಂದು ಒಂದೂವರೆ ಸಾವಿರವಷ್ಟೆ ಗಳಿಸಲು ಸಾಧ್ಯವಾಗಿದ್ದು, ಉಳಿತಾಯದ ಹಣದಲ್ಲಿ ಜೀವನ ನಡೆಯುತ್ತಿದೆ. ಎಂದರು.
“ನನ್ನ ಹೆಂಡತಿ ನಮ್ರತಾಗೆ ಇಸ್ತ್ರಿಪೆಟ್ಟಿಗೆಯಿಂದ ಬರುವ ಕಾವನ್ನು ತಡೆಯಲಾಗುವುದಿಲ್ಲ. ಮನೆಯ ಎಲ್ಲ ಕೆಲಸಗಳನ್ನು ಮಾಡಿಕೊಂಡು, ಅಂಗಡಿಯ ಕೆಲಸದ ಲೆಕ್ಕವನ್ನು ನೋಡಿಕೊಳ್ಳುತ್ತಾರೆ. ನಮಗೆ ಮಕ್ಕಳಿಲ್ಲ ಆದರೆ ತೀರಿ ಹೋದ ನನ್ನ ತಮ್ಮನ ಇಬ್ಬರು ಮಕ್ಕಳು ನಮ್ಮ ಹತ್ತಿರ ಇದ್ದಾರೆ. ಕಳೆದ ವರ್ಷ ಆದ ಅಪಘಾತವೊಂದರಲ್ಲಿ ತಮ್ಮ ತೀರಿಹೋದ” ಎಂದು ಅನಿಲ್ ವಿವರವಾಗಿ ಹೇಳಿದರು. ಈ ಮಕ್ಕಳ ತಾಯಿ ಹೊಲಿಗೆ ಕೆಲಸ ಮಾಡುತ್ತಾ, ರೂ. 5000 ದುಡಿಯುತ್ತಿದ್ದರು. ಆದರೆ ಅದಕ್ಕೂ ಈ ಲಾಕ್ ಡೌನಿನಿಂದ ಸಂಚಕಾರ ಬಂದಿದೆ. “ನಮಗೆ ನಿಜವಾಗಿಯೂ ಲಾಕ್ಡೌನ್ ಯಾಕಾಗಿ ಮಾಡಿದ್ದಾರೆ ಎಂದು ತಿಳಿಯುತ್ತಿಲ್ಲ. ಇದು ಯಾವಾಗ ಮೊದಲಿನಂತಾಗುವುದೋ ಅದೂ ಗೊತ್ತಾಗುತ್ತಿಲ್ಲ” ಎಂದರು ಅನಿಲ್.
ಈ ಲಾಕ್ ಡೌನ್ ಸುನಿಲ್ ಪಾಟೀಲರ ವರಮಾನಕ್ಕೂ ಕಂಟಕವಾಯಿತು – ಮಾರ್ಚಿ 25ರ ಮೊದಲು ಬಟ್ಟೆ ಇಸ್ತ್ರಿ ಮಾಡಿ ದಿನಕ್ಕೆ ಇನ್ನೂರನ್ನು, ಜೊತೆಗೆ ತನ್ನ ಸಣ್ಣ ಅಂಗಡಿಯಿಂದ 650ನ್ನೂ – ಬೇಳೆ, ಅಕ್ಕಿ, ಎಣ್ಣೆ, ಬಿಸ್ಕತ್ತು, ಸೋಪು ಮತ್ತು ಇತರೆ ವಸ್ತುಗಳನ್ನು ಮಾರುವ ‘ಮಹಾಲಕ್ಷ್ಮಿ ಕಿರಾಣಿ ಮತ್ತು ಜನರಲ್ ಸ್ಟೋರ್ಸ್’ – ಮೂಲಕ ಗಳಿಸುತ್ತಿದ್ದರು. “ಈಗ ನನ್ನ ದುಡಿಮೆ ದಿನಕ್ಕೆ 100- 200 ರೂಪಾಯಿಗೆ ಇಳಿದಿದೆ” ಎಂದರು.
2019ರ ಅಕ್ಟೋಬರಿನಲ್ಲಿ ತನ್ನ ಹೆಂಡತಿ ಅಂಜು ಮತ್ತು ಮೂವರು ಮಕ್ಕಳೊಂದಿಗೆ ವಾಡಾಕ್ಕೆ ಬರುವ ಮೊದಲು ಸುನಿಲ್ ದಿನಸಿ ಅಂಗಡಿಯೊಂದರಲ್ಲಿ ಕೆಲಸ ಮಾಡಿ ದಿನಕ್ಕೆ 150 ರೂ. ಗಳಿಸುತ್ತಿದ್ದರು. “ವಾಡಾದಲ್ಲಿ ಈ ಅಂಗಡಿಯ ಬಗ್ಗೆ ಅಕ್ಕ ನನಗೆ ಹೇಳಿದರು, ಅವರಿಂದಲೇ 6 ಲಕ್ಷ ರೂಪಾಯಿ ಸಾಲ ತೆಗೆದುಕೊಂಡು ಈ ಅಂಗಡಿ ಕೊಂಡುಕೊಂಡೆನು” ಎಂದರು. ಸ್ವಂತಕ್ಕೆ ಅಂಗಡಿ ಮಾಡಿಕೊಂಡಿದ್ದು ಒಂದು ದೊಡ್ಡ ಹೆಜ್ಜೆಯಾಗಿತ್ತು ಮತ್ತು ಕುಟುಂಬಕ್ಕೆ ಭರವಸೆ ತುಂಬಿತ್ತು.
ಸುನೀಲ್ ಅವರ ಅಂಗಡಿಯ ಮುಂದೆ ಇಸ್ತ್ರಿ ಮಾಡಲು ಟೇಬಲೊಂದನ್ನು ಹಾಕಿಕೊಂಡರು, ಲಾಕ್ ಡೌನಿಗೆ ಮೊದಲು ಸಾಮಾನ್ಯವಾಗಿ ನಾಲ್ಕೈದು ಇಸ್ತ್ರಿ ಮಾಡಲು ಸಿಗುತ್ತಿತ್ತು. “ನಾನು ಇಸ್ತ್ರಿ ಶುರು ಮಾಡಲು ಕಾರಣ ಅದರಿಂದ ನಿಯಮಿತ ವರಮಾನ ಸಿಗುತ್ತದೆ; ಅಂಗಡಿಯೂ ಇದೆ, ಆದರೆ ಒಮ್ಮೊಮ್ಮೆ ಅದರಿಂದ ಹಣ ಗಳಿಸುತ್ತೇವೆ ಮತ್ತೆ ಕೆಲವೊಮ್ಮೆ ಏನೂ ಸಿಗುವುದಿಲ್ಲ”
“ಬಟ್ಟೆಗೆ ಇಸ್ತ್ರಿ ಹಾಕಲು ನನ್ನ ಗಂಡನಿಗೆ ಸಹಾಯ ಮಾಡಬೇಕೆನಿಸುತ್ತದೆ, ಆದರೆ ಎರಡು ಗಂಟೆಗಿಂತ ಹೆಚ್ಚು ಸಮಯ ನಿಂತುಕೊಂಡರೆ, ಬೆನ್ನು ನೋಯಲು ಶುರು ಮಾಡುತ್ತದೆ. ಅದಕ್ಕಾಗಿ ನಾನು ಅಂಗಡಿ ನೋಡಿಕೊಳ್ಳಲು ಸಹಾಯ ಮಾಡುತ್ತೇನೆ. ಈಗ ನಾವು ಅಂಗಡಿಯನ್ನು ಮೂರು ಗಂಟೆ ಕಾಲ ಮಾತ್ರ ತೆರೆಯುತ್ತೇವೆ. (ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನದವರೆಗೆ) ನಾನು ಈವೊತ್ತು ಕೇವಲ ಎರಡು ಪ್ಯಾಕೆಟ್ ಪಾರ್ಲೆ-ಜಿ ಬಿಸ್ಕತ್ತನ್ನು ವ್ಯಾಪಾರ ಮಾಡಿದೆ. ಒಂದು ವೇಳೆ ಅಂಗಡಿಗೆ ಗಿರಾಕಿಗಳು ಬಂದರೂ ನಾವೇನು ವ್ಯಾಪಾರ ಮಾಡಲಿ? ನೀವೆ ನೋಡಿ, ಅಂಗಡಿ ಖಾಲಿಯಾಗಿದೆ” ಎಂದು ಮುಂದುವರೆಸಿ ಹೇಳಿದರು ಅಂಜು. ಮಹಾಲಕ್ಷ್ಮಿ- ಅಂಗಡಿಯಲ್ಲಿ ಲಾಕ್ ಡೌನಿಗೆ ಮೊದಲು ಹಾಕಿದ್ದ ಸ್ವಲ್ಪ ಸಾಮಾನುಗಳಿದ್ದವು, ಆದರೆ ಅವು ಕಪಾಟುಗಳಲ್ಲಿ ಅಲ್ಲಲ್ಲಿ ಕಾಣುತ್ತಿದ್ದವು. “ಅಂಗಡಿಗೆ ಸಾಮಾನು ಹಾಕಲು ದುಡ್ಡಿಲ್ಲ” ಎಂದರು ಸುನಿಲ್.
ಮಗಳು ಸುವಿಧಾ ತರುತ್ತಿದ್ದ – ವಾಡಾದಲ್ಲಿ ಮಕ್ಕಳಿಗೆ ಮನೆಪಾಠ ಹೇಳಿಕೊಟ್ಟು ಗಳಿಸುತ್ತಿದ್ದ ರೂ. 1200 – ಈಗ ಬರುತ್ತಿಲ್ಲ, ತರಗತಿಗಳು ಮುಚ್ಚಿವೆ. ಸುನೀಲರು “ಏಪ್ರಿಲ್ಲಿನಲ್ಲಿ ಲಾಕ್ಡೌನಾಗಿದ್ದರಿಂದ ಸುವಿಧಾಳ ಮದುವೆ ನಿಶ್ಚಯ ಕಾರ್ಯವನ್ನು ಮುಂದಕ್ಕೆ ಹಾಕಿದೆವು. ಹುಡುಗನ ತಂದೆ 50,000 ರೂಪಾಯಿಗಳನ್ನು ಕೊಡದಿದ್ದರೆ ಈ ಮದುವೆ ನಿಶ್ಚಯ ಬೇಡವೆಂದು ಬೆದರಿಕೆ ಹಾಕಿದ್ದಾರೆ. ಅವರೂ ಲಾಕ್ಡೌನಿನಿಂದ ನಷ್ಟದಲ್ಲಿದ್ದಾರೆ.” ಎಂದರು.
ಪಾಟೀಲರ ಕುಟುಂಬದ ಪಡಿತರ ಚೀಟಿಗೆ ವಾಡಾ ಪಟ್ಟಣದಲ್ಲಿ ದಿನಸಿ ಸಿಗಲಿಲ್ಲ, ಹಾಗಾಗಿ ಅವರು ಮಾರುಕಟ್ಟೆಯಲ್ಲಿ ಗೋಧಿ ಮತ್ತು ಅಕ್ಕಿಯನ್ನು ಕೊಂಡುಕೊಂಡರು. ಅದೂ ಅವರಿಗೆ ನಿಯಮಿತ ವರಮಾನ ಬರುತ್ತಿದ್ದಾಗ
ಅವರ ಇನ್ನಿಬ್ಬರು ಮಕ್ಕಳು ಅನಿಕೇತ್ (21) ಮತ್ತು ಸಾಜನ್ (26) ಕೆಲಸ ಹುಡುಕುತ್ತಿದ್ದಾರೆ. ನನ್ನ ಹಿರಿಮಗ ಭಿವಂಡಿಯಲ್ಲಿ ಕ್ಯಾಮರಾ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ, ಆದರೆ ಅದು ಮುಚ್ಚಿಹೋಯಿತು. (ಲಾಕ್ಡೌನಿಗೆ ಮೊದಲೇ). ಅನಿಕೇತ್ ಈಗ ತಾನೇ ಕಾಲೇಜು ಮುಗಿಸಿದ್ದಾನೆ. ಈ ಮಿತಿಮೀರಿದ ಒತ್ತಡಗಳಿಂದ ಒಮ್ಮೊಮ್ಮೆ ಸತ್ತು ಹೋಗಿಬಿಡಬೇಕೆನಿಸುತ್ತಿತ್ತು. ಆದರೆ ಇಲ್ಲಿ ನನಗೊಬ್ಬನಿಗೇ ಅಲ್ಲ, ಎಲ್ಲರಿಗೂ ಕಷ್ಟವಿದೆ ಎಂದರಿವಾಯಿತು. ನಮ್ಮ ಮನೆ ಪಕ್ಕದ ಕ್ಷೌರಿಕ ಸುಮಾರು ದಿನಗಳಿಂದ ಒಂದು ರೂಪಾಯಿ ದುಡಿಯಲಾಗಿಲ್ಲ. ಹಾಗಾಗಿ ಕೆಲವೊಮ್ಮೆ ನನ್ನ ಅಂಗಡಿಯಿಂದ ನಾನೇ ಸ್ವಲ್ಪ ಬಿಸ್ಕತ್ತು ಮತ್ತು ಬೇಳೆಯನ್ನು (ಉಳಿದದ್ದು) ಕೊಡುತ್ತೇನೆ.” ಎಂದು ಬೇಸರದಿಂದ ಹೇಳಿದರು ಸುನೀಲ್.
ಪಾಟೀಲರ ಕುಟುಂಬದ ರೇಶನ್ ಕಾರ್ಡು ಭಿವಂಡಿಯಲ್ಲಿ ನೋಂದಾಯಿಸಿದ್ದರಿಂದ ವಾಡಾದಲ್ಲಿ ಅದಕ್ಕೆ ರೇಶನ್ ಕೊಡಲಿಲ್ಲ. ಸೊಸೈಟಿಯಲ್ಲಿ ಗೋಧಿ ಕಿಲೋಗೆ ರೂ. 2 ಮತ್ತು ಅಕ್ಕಿ ಕಿಲೋಗೆ ರೂ. 3ಕ್ಕೆ ಸಿಗುತ್ತದೆ. “ನಾನು ಮಾರ್ಕೆಟ್ಟಿನಲ್ಲಿ ಕಿಲೋ ಗೋಧಿಗೆ ರೂ. 20 ಮತ್ತು ಕಿಲೋ ಅಕ್ಕಿಗೆ ರೂ. 30 ಕೊಟ್ಟು ಕೊಳ್ಳುತ್ತೇನೆ.” ಎಂದರು ಸುನೀಲ್. ಅದೂ ಅವರಿಗೆ ನಿಯಮಿತವಾಗಿ ವರಮಾನ ಬರುವಾಗ. “ಈಗಂತೂ ಅಂಗಡಿಯಲ್ಲಿ ಏನಾದರೂ ದುಡಿಮೆಯಾದರೆ ಮಾತ್ರ ವಾರಕ್ಕೊಮ್ಮೆ ಸ್ವಲ್ಪ ರೇಶನ್ ತರಲು ಸಾಧ್ಯ. ಅಂಗಡಿಯಲ್ಲಿ ವ್ಯಾಪಾರ ಇಲ್ಲದಿರುವಾಗ ದಿನಕ್ಕೆ ಒಪ್ಪತ್ತು ಮಾತ್ರ ಊಟ ಮಾಡುತ್ತೇವೆ” ಎನ್ನುವಾಗ ಸುನೀಲರ ಕಣ್ಣುಗಳು ತುಂಬಿದ್ದವು.
ಇನ್ನುಳಿದ ಕುಟುಂಬದವರೂ ಸಹ ಲಾಕ್ಡೌನ್ ಎದುರಿಸಲು ಕಾರ್ಯತಂತ್ರಗಳನ್ನು ಕಂಡುಕೊಂಡಿದ್ದಾರೆ. ಏಪ್ರಿಲ್ 1ರಿಂದ ಅನಿತಾ ಹತ್ತಿರದ ಮನೆಗಳಿಗೆ ಮನೆಗೆಲಸಕ್ಕೆ ಹೋಗುತ್ತಿದ್ದಾರೆ. ಅದರಿಂದ ತಿಂಗಳಿಗೆ ರೂ. 1000 ಸಿಗುತ್ತದೆ. “ನಾನು ಕೆಲಸಕ್ಕೆ ಹೊರಗೆ ಹೋಗದಿದ್ದರೆ ಉಪವಾಸ ಇರಬೇಕಾಗುತ್ತದೆ. ಹಳೆಯ ಬಟ್ಟೆಯೊಂದರಿಂದ ಮಾಸ್ಕೊಂದನ್ನು ಹೊಲಿದುಕೊಂಡಿದ್ದೇನೆ. ಕೆಲಸಕ್ಕೆ ಹೋಗುವಾಗ ಅದನ್ನು ಹಾಕಿಕೊಂಡು ಹೋಗುತ್ತೇನೆ” ಎಂದರು ಅವರು.
ಅನಿತಾ ಮತ್ತು ಸಮಿತಾ ಕುಟುಂಬಗಳೆರಡೂ ಪ್ರಧಾನ ಮಂತ್ರಿ ಜನಧನ ಯೋಜನೆಯಡಿಯಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಿಗೆ ರೂ. 500 ನಂತೆ ಪಡೆದಿದ್ದಾರೆ. ಮತ್ತು ಮೇ ತಿಂಗಳಲ್ಲಿ (ಏಪ್ರಿಲ್ ತಿಂಗಳಿನಲ್ಲಿ ಇಲ್ಲ) ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ 5 ಕಿಲೋ ಅಕ್ಕಿಯ ಜೊತೆಗೆ ಹೆಚ್ಚುವರಿ ಉಚಿತ 5 ಕಿಲೋ ಅಕ್ಕಿ ಪಡೆದಿದ್ದಾರೆ. ಸಾಧ್ಯವಾದಾಗಲೆಲ್ಲ ಸಮಿತಾ ಕೆಲವು ಬಟ್ಟೆಗಳನ್ನು ಇಸ್ತ್ರಿ ಮಾಡುತ್ತಿರುತ್ತಾರೆ. “ಈ ಲಾಕ್ಡೌನಿನಲ್ಲಿ ಜನರು ಇಸ್ತ್ರಿ ಮಾಡಿದ ಬಟ್ಟೆಗಳನ್ನು ಹಾಕದಿದ್ದರೂ, ಇಸ್ತ್ರಿ ಕೆಲಸ ಸಿಕ್ಕಿದರೆ ನಾನು ಹೊರಗೆ ಹೋಗುತ್ತೇನೆ. ಮನೆಯಿಂದ ಹೊಗೆ ಹೋಗಬೇಡವೆಂದು ನನ್ನ ಮಕ್ಕಳು ಹೇಳುತ್ತಾರೆ. ಆದರೆ ಬೇರೆ ದಾರಿ ಇಲ್ಲವೆಂದು ಅವರಿಗೆ ಗೊತ್ತಿಲ್ಲ. ಹೇಗಾದರೂ ಮಾಡಿ ಅವರಿಗಾಗಿ ದುಡ್ಡು ಗಳಿಸಬೇಕು” ಎಂದರು ಸಮಿತಾ.
ಮಗನು ಯೂಟ್ಯೂಬಿನಲ್ಲಿ ಹೇಗೆ ಕೈತೊಳೆಯಬೇಕೆಂಬುದನ್ನು ತೋರಿಸಿದ್ದಾನೆ. ಹಾಗೆಯೇ ಇಸ್ತ್ರಿ ಮಾಡಿದ ಬಟ್ಟೆಗಳನ್ನು ಕೊಟ್ಟು ಇಸ್ತ್ರಿಗೆ ಬಟ್ಟೆಗಳನ್ನು ಒಟ್ಟುಮಾಡಿ ಮನೆಗೆ ತಂದ ನಂತರ ತನ್ನ ಕೈಗಳನ್ನು ಸೋಪಿನಿಂದ ತೊಳೆದುಕೊಳ್ಳುತ್ತಾರೆ.
ಅನುವಾದ: ಬಿ.ಎಸ್. ಮಂಜಪ್ಪ