ಪುಣೆಯ ಮುಲ್ಶಿ ತಾಲೂಕಿನ ಮೂವರು ಮಹಿಳೆಯರು ವಿವಾಹಿತ ಮಹಿಳೆಯ ಪತಿ ಅಥವಾ ಮಗನ ಮೇಲೆ ಯುವ ಮತ್ತು ಆಕರ್ಷಕ ಮಹಿಳೆಯ ವರ್ತನೆಯು ಬೀರುವ ಪ್ರಭಾವದ ಕುರಿತಾದ ಹಾಡುಗಳನ್ನು ಹಾಡಿದ್ದಾರೆ. ಅವರು ಅವಳನ್ನು ತಮ್ಮ ಸಂತೋಷಕ್ಕೆ ಕುತ್ತು ತರಬಲ್ಲವಳಂತೆ ಕಾಣುತ್ತಾರೆ

ಪುರುಷ ಪ್ರಧಾನ ಸಮಾಜವು ಕೇವಲ ಮಹಿಳೆಯರ ಮೇಲೆ ದಬ್ಬಾಳಿಕೆಯನ್ನಷ್ಟೇ ಮಾಡುವುದಿಲ್ಲ. ಅದು ಜೊತೆಗೆ ಮಹಿಳೆಯರನ್ನೇ ಮಹಿಳೆಯರ ವಿರುದ್ಧ ನಿಲ್ಲಿಸುತ್ತದೆ. ಬೀಸುಕಲ್ಲಿನ ಪದಗಳು ಗ್ರಾಮೀಣ ಸಮುದಾಯಗಳ ಮಹಿಳೆಯರ ವ್ಯಾಪಕ ಅನುಭವಗಳನ್ನು ಒಳಗೊಂಡಿವೆ, ಅಲ್ಲಿ ಪುರುಷಪ್ರಾಧಾನ್ಯತೆಯ ಚೌಕಟ್ಟು ಬದುಕಿನ ಪ್ರತಿಯೊಂದು ಅಂಶವನ್ನು ನಿರ್ದೇಶಿಸುತ್ತದೆ. ಹೆಣ್ಣು ಮಗು ಜನಿಸುವುದು ಪೋಷಕರಿಗೆ ಆಪತ್ತು ಎಂದು ಈ ಹಾಡುಗಳನ್ನು ಹಾಡುತ್ತಿರುವ ಮಹಿಳೆಯರು ಸಮಾಜದ ನಿಯಮಗಳನ್ನು ಪ್ರತಿಭಟಿಸಿ ಗೋಳಾಡುತ್ತಾರೆ. ಅವರ ಹಾಡುಗಳು, ಗಂಡು ಮಕ್ಕಳು ಮತ್ತು ಹೆಣ್ಣುಮಕ್ಕಳು ಒಂದೇ ಮರದ ಕಿತ್ತಳೆಹಣ್ಣಿನಂತಿರುವಾಗ, ಅವರನ್ನು ನಡೆಸಿಕೊಳ್ಳುವ ರೀತಿ ಏಕೆ ಭಿನ್ನವಾಗಿರುತ್ತದೆ - ಮತ್ತು ಮಹಿಳೆ ನಿರ್ವಹಿಸುವ ಕೆಲಸಕ್ಕೆ ಏಕೆ ಯಾವುದೇ ಬೆಲೆ ಇಲ್ಲವೆಂದು ಪ್ರಶ್ನಿಸುತ್ತವೆ. ಆದರೂ ಈ ಹಾಡುಗಳಲ್ಲಿ ಹೆಣ್ಣಿಗೆ ಮದುವೆ ಬದುಕಿನ ಅಂತಿಮ ಗುರಿಯೆಂದೂ, ಅದೇ ಅವರ ಸಂತೋಷದ ಮಾರ್ಗವೆಂದೂ ಹೇಳುವ ಹಾಡುಗಳೂ ಇವೆ.

ಬೀಸುಕಲ್ಲಿನ ಪದಗಳು ಮಹಿಳೆಯರನ್ನು ಪರಸ್ಪರ ಸಂಪರ್ಕಿಸುವ ಮತ್ತು ವಿಭಜಿಸುವ, ಸಾಮಾಜಿಕ ವ್ಯವಸ್ಥೆಯನ್ನು ಪುನರುತ್ಪಾದಿಸುವ ಮತ್ತು ಪ್ರಶ್ನಿಸುವ ಮತ್ತು ಗಾಯಕರು ಮತ್ತು ಕೇಳುಗರ ಪೀಳಿಗೆಯನ್ನು ಮುಕ್ತಗೊಳಿಸುವ ಪರಿಸ್ಥಿತಿಗಳನ್ನು ಹೊಂದಿರುವ ಸಾಂಸ್ಕೃತಿಕ ಆಚರಣೆಗೆ ಉತ್ತಮ ಉದಾಹರಣೆಯಾಗಿವೆ. ಈ ಪರಿಸರದಲ್ಲಿಯೇ ಮಹಿಳೆಯರಲ್ಲಿ ಸ್ನೇಹ ಮತ್ತು ಸೋದರತ್ವದ ಪ್ರಜ್ಞೆಯನ್ನು ಆಚರಿಸಲಾಗುತ್ತದೆ - ಇಲ್ಲಿನ ಅನೇಕ ಹಾಡುಗಳಲ್ಲಿರುವಂತೆ.

ಅದಾಗ್ಯೂ, ಇಲ್ಲಿ ಮಹಿಳೆಯರ ನಡುವಿನ ಸ್ಪರ್ಧೆಯನ್ನು ಹೊರಗೆಡುವುವ ಮತ್ತು ಅವುಗಳನ್ನು ಪ್ರತಿಬಿಂಬಿಸುವ ಹಾಡುಗಳೂ ಈ ಬೀಸುಕಲ್ಲಿನ ಪದಗಳಲ್ಲಿವೆ. ಈ ಪೈಪೋಟಿಯನ್ನು ಗಂಡ ಅಥವಾ ಮಗನಂತಹ ಪುರುಷನ ಮೇಲೆ ತನ್ನ ಪ್ರಭಾವವನ್ನು ಹಂಚಿಕೊಳ್ಳುವ ಕುರಿತು ಹುಟ್ಟುವ ಪೈಪೋಟಿಯೆಂದು ಗುರುತಿಸಲಾಗುತ್ತದೆ. ಈ ಹಾಡುಗಳು ಮಹಿಳೆಯರ ಬದುಕು ಎಷ್ಟು ದುರ್ಬಲವೆನ್ನುವುದನ್ನು ಹೇಳುತ್ತವೆ. ಮತ್ತು ಅವರ ಬದುಕು ಗಂಡ, ಸಹೋದರರಂತಹ ಗಂಡಸರು ನೀಡುವ ಮಾನ್ಯತೆಯನ್ನು ಅವಲಂಬಿಸಿರುತ್ತದೆನ್ನುವುದನ್ನು ತಮ್ಮ ಹಾಡುಗಳಲ್ಲಿ ಹೇಳುತ್ತಾರೆ. ಇಲ್ಲಿ ನೀಡಲಾಗಿರುವ ಹಾಡುಗಳಲ್ಲಿಯೂ ಮಹಿಳೆಯ ಬದುಕು ಗಂಡ ಅಥವಾ ಮಗನಿಂದ ಪಡೆಯುವ ಮಾನ್ಯತೆಯನ್ನು ಅವಲಂಬಿಸಿರುತ್ತದೆ.

ಈ ಓವಿಗಳಲ್ಲಿ, ವಯಸ್ಸಾದ, ವಿವಾಹಿತ ಮತ್ತು ಈ ಕಾರಣಕ್ಕೆ ಗೌರವಾನ್ವಿತಳಾದ ಮಹಿಳೆಯನ್ನು ಕಿರಿಯ, ಅವಿವಾಹಿತ ಮಹಿಳೆಯ ಎದುರು ನಿಲ್ಲಿಸಲಾಗುತ್ತದೆ, ಅವಳನ್ನು ಅನುಮಾನದಿಂದ ನೋಡಲಾಗುತ್ತದೆ, ವಿಶೇಷವಾಗಿ ಅವಳು ಆಕರ್ಷಕ ಮುಕ್ತ ಸ್ವಭಾವದವಳು ಎನ್ನುವ ಕಾರಣಕ್ಕೆ. ಮೊದಲ ಮೂರು ಓವಿಗಳಲ್ಲಿ, ಒಬ್ಬ ಕಿರಿಯ ಮಹಿಳೆಯ ಮೇಲೆ ಅಸಭ್ಯ ವರ್ತನೆಯ ಆರೋಪವಿದೆ. ಅವಳ ಕ್ರಿಯೆಗಳನ್ನು ವಿವರಿಸಲು, ಈ ಪದ್ಯವು ಮರಾಠಿ ಗಾದೆಯನ್ನು ಸೂಚಿಸುತ್ತದೆ: "ಚಾಡಿ ಹೇಳುವ ಹೆಣ್ಣೊಬ್ಬಳು ಮಾಇನ ನೀರನ್ನು ಮನೆಯೊಳಗೆ ಇಳಿಯುವಂತೆ ಮಾಡಿದ್ದಾಳೆ." ಅವಳ ದುಷ್ಟ ಕೃತ್ಯಗಳು ಎಷ್ಟು ಎಂದು ಹೇಳಲಾಗುತ್ತದೆಯೆಂದರೆ, "ಒಂದು ಮಡಕೆ ನೀರು ಖಾಲಿಯಾಯಿತು... [ಮತ್ತು] ಮಹಿಳೆ ಆಮೆಯನ್ನು ಬಾವಿಯ ನೀರಿಗೆ ಜಾರುವಂತೆ ಮಾಡಿದಳು." ಈ ನುಡಿಗಟ್ಟುಗಳು ಇನ್ನೊಬ್ಬ ಮಹಿಳೆಯ ಸಂತೋಷವನ್ನು ನಾಶಪಡಿಸುವ ಅವಳ ನಡವಳಿಕೆಯ ಉದ್ದೇಶಪೂರ್ವಕ ಸ್ವರೂಪವನ್ನು ಸೂಚಿಸುತ್ತವೆ.

PHOTO • Antara Raman

'ಅವಳು ಮಡಕೆಗೆ ನೀರು ತುಂಬಿಸಿದಾಗ ಅದರಲ್ಲಿ ಪೇರಲ ತೇಲುತ್ತದೆ... ನನ್ನ ಮಗ ತಮಾಷೆ ಮಾಡುತ್ತಾನೆ ಅವಳದೊಂದು ನಗುವಿಗಾಗಿ'

ಮುಂದಿನ 14 ದ್ವಿಪದಿಗಳಲ್ಲಿ, ಗಾಯಕಿ ಯುವತಿಯ ನಡವಳಿಕೆಯನ್ನು ವಿವರಿಸುತ್ತಾಳೆ. ಆ ಯುವತಿಯ ಸೌಂದರ್ಯಕ್ಕೆ ಪತಿ ಬಲಿಯಾಗಬಹುದೆಂಬ ಭಯ ನಿರೂಪಕಳಿಗಿದೆ. ಹೀಗಾಗಿ, ಹೆಂಡತಿ "ನಿನ್ನ ಯೌವನವು ನನ್ನ ಸೀರೆಯಷ್ಟು.. [ಅಥವಾ] ನನ್ನ ಕಾಲುಂಗುರದಷ್ಟು ಮಾತ್ರ" ಎಂದು ಹೇಳುವ ಮೂಲಕ ಅವಳ ಆಕರ್ಷಣೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಾಳೆ. ಇದರೊಂದಿಗೆ, ಗಾಯಕಿ ತನ್ನ ಮಗ ಹುಡುಗಿಯನ್ನು ಪ್ರೀತಿಯಿಂದ ಕೆಣಕಲು ಮಾಡಲು ಮಾಡಿದ ಪ್ರಯತ್ನದ ಬಗ್ಗೆಯೂ ಪ್ರತಿಕ್ರಿಯಿಸಿದ್ದಾಳೆ. ಅವಳು ತನ್ನ ಮಗನನ್ನು ರಾಘು (ಗಿಳಿ) ಎಂದು ಪ್ರೀತಿ ಮತ್ತು ಬಾಂಧವ್ಯದಿಂದ ಕರೆಯುತ್ತಾಳೆ. ಈ ಪ್ರೀತಿಯ ಪದವನ್ನು ಬೀಸುಕಲ್ಲಿನ ಪದಗಳಲ್ಲಿ ಮಗ ಅಥವಾ ತಮ್ಮನನ್ನು ಉಲ್ಲೇಖಿಸಲು ಬಳಸಲಾಗುತ್ತದೆ.

ಕೊನೆಯ ಎರಡು ದೀರ್ಘ ಪದ್ಯಗಳು ಆರಂಭಿಕ 17 ದ್ವಿಪದಗಳಿಗಿಂತ ಭಿನ್ನವಾಗಿವೆ. ಇವುಗಳಲ್ಲಿ, ಮಹಿಳೆ ತನ್ನ ಮಗನ ಜೀವನದ ಎಲ್ಲಾ ಗೊಂದಲಗಳನ್ನು ಇಲ್ಲವಾಗಿಸುವ ಮಾರ್ಗವನ್ನು ಕಂಡುಕೊಳ್ಳಲು ಬಯಸುತ್ತಾಳೆ. ಅವಳು ತನ್ನ ಮಗನನ್ನು ನಿಯಂತ್ರಿಸಲಾಗದ ಅಥವಾ ಸರಪಳಿಯಿಂದ ಬಂಧಿಸಲಾಗದ ಹುಲಿಗೆ ಹೋಲಿಸುತ್ತಾಳೆ. ಅವಳು ತನ್ನ ಮಗನನ್ನು ಮದುವೆಯಾಗಬೇಕೆಂದು ಬಯಸುತ್ತಾಳೆ. ಅವಳು ತನ್ನ ಮಗನ ವಧುವನ್ನು, ಅಂದರೆ ತನ್ನ ಸೊಸೆಯನ್ನು ತನ್ನ ಮನೆಗೆ ಸ್ವಾಗತಿಸಲು ಬಯಸುತ್ತಾಳೆ. ಇದರೊಂದಿಗೆ ಅವಳನ್ನು ತನ್ನನ್ನು ಅತ್ತೆ ಎಂದು ಕರೆಯಲಾಗುವುದರಿಂದ ಆ ಯುವತಿಯ ಮೇಲೆ ಕೆಲವು ಹಕ್ಕುಗಳನ್ನು ಪಡೆಯುತ್ತಾಳೆ. ಬಹುಶಃ, ಇದರ ಹಿಂದೆ ಒಬ್ಬ ಮಗನನ್ನು ಸಾಂಪ್ರದಾಯಿಕ, ವೈವಾಹಿಕ ಮತ್ತು ಪಿತೃಪ್ರಭುತ್ವದ ರಚನೆಯ ಹೊರಗೆ ಯಾವುದೇ ರೀತಿಯ ಸಂಬಂಧವನ್ನು ಹೊಂದದಂತೆ ರಕ್ಷಿಸುವ ಅರ್ಥವಿದೆ. ಅಥವಾ ಮದುವೆಯ ನಂತರ ತನ್ನ ಮಗ ಬೀದಿ ಅಲೆದಾಡುವುದನ್ನು ನಿಲ್ಲಿಸುತ್ತಾನೆ ಎಂಬುದು ತಾಯಿಯ ಮುಗ್ಧ ನಂಬಿಕೆ.

ಇಲ್ಲಿನ ಹಲವು ಓವಿಗಳು (ಬೀಸುಕಲ್ಲಿನ ಪದಗಳು) "ನಾ ಬಾಯಿ..." ಎಂದು ಕೊನೆಗೊಳ್ಳುತ್ತವೆ, ಇವು ಈ ಹಾಡುಗಳ ಸಂವಾದಾತ್ಮಕ ಸ್ವರೂಪವನ್ನು ಪ್ರತಿಬಿಂಬಿಸುತ್ತದೆ. ‘ಏನಾಯಿತು ಗೊತ್ತಾ...’ ಎಂಬ ಪದವನ್ನು ಹಲವಾರು ಬಾರಿ ಬಳಸಲಾಗಿದ್ದು, ಇಲ್ಲಿನ ಸನ್ನಿವೇಶದಲ್ಲಿ ಗಾಯಕಿ ಬೀಸುಕಲ್ಲನ್ನು ತಿರುಗಿಸುತ್ತಾ ಪಕ್ಕದಲ್ಲಿ ಕುಳಿತ ಇತರ ಮಹಿಳೆಯರಿಗೆ ಕಥೆಗಳನ್ನು ಹೇಳುತ್ತಿರುವಂತೆ ತೋರುತ್ತದೆ.

ಪುಣೆ ಜಿಲ್ಲೆಯ ಮುಲ್ಶಿ ತಾಲೂಕಿನ ಮೂವರು ಗಾಯಕಿಯರು ಈ ಹತ್ತೊಂಬತ್ತು ಓವಿಗಳನ್ನು ಹಾಡಿದ್ದಾರೆ: 'ನಂದಗಾಂವ್' ಗ್ರಾಮದ ಕುಸುಮ್ ಸೋನವಾನೆ ಮತ್ತು ಶಾಹು ಕಾಂಬಳೆ ಮತ್ತು ಕೊಲವಡೆ ಗ್ರಾಮದ ಖಡಕವಾಡಿ ಬಸ್ತಿಯ ತಾರಾ ಉಭೆ. ಹಾಡುಗಳನ್ನು ಅಕ್ಟೋಬರ್ 5, 1999ರಂದು ಮೂಲ 'ಗ್ರೈಂಡ್‌ಮಿಲ್ ಸಾಂಗ್ಸ್ ಪ್ರಾಜೆಕ್ಟ್' ಸಂಸ್ಥಾಪಕರಾದ ಹೇಮಾ ರಾಯಿರ್ಕರ್ ಮತ್ತು ಗಯ್ ಪೊಯಿಟ್ವಾನ್  ಅವರ ಪುಣೆಯಲ್ಲಿರುವ ಬಂಗಲೆಯಲ್ಲಿನ ಮೀಟಿಂಗ್‌ ರೂಮಿನಲ್ಲಿ ರೆಕಾರ್ಡ್ ಮಾಡಲಾಯಿತು.

ತಾರಾ ಉಭೆ, ಕುಸುಮ್ ಸೊನಾವಣೆ ಮತ್ತು ಶಾಹು ಕಾಂಬ್ಳೆ ಇವರ ದನಿಯಲ್ಲಿ ಈ ಸಂಚಿಕೆಯ ಬೀಸುಕಲ್ಲಿನ ಪದಗಳನ್ನು ಮೂಲ ಭಾಷೆ ಮರಾಠಿಯಲ್ಲಿ ಕೇಳಿ

ಆ ಬಿನ್ನಾಣಗಿತ್ತಿಯ ನಡೆನುಡಿಯೆಲ್ಲವೂ ಅತಿರೇಕ ಹೌದೇ ಹೌದು
ಆ ಕೆಡುಕುಗಾತಿ ಮಾಡಿನಲ್ಲಿ ಹೋಗುತ್ತಿದ್ದ ನೀರನ್ನು ಸೂರಿನೊಳಗಿಳಿಸಿದಳು

ಆ ಕೆಟ್ಟ ಹೆಣ್ಣಿನ ಕೆಟ್ಟ ನಡವಳಿಕೆ ಮತ್ತೆ ಮತ್ತೆ ಕಾಣುತ್ತಿದೆ
ಪೂರ್ತಿ ತುಂಬಿದ ಕೊಡ ನೀರಿಲ್ಲದಂತೆ ಖಾಲಿಯಾಗಿದೆ

ಆ ಬಿನ್ನಾಣಗಿತ್ತಿ ಹೆಣ್ಣು, ಎಷ್ಟೊಂದು ಸಲ ಕೆಟ್ಟದಾಗಿ ನಡದುಕೊಂಡಳು
ಗೆಳತಿಯರೇ, ನಾನು ಏನು ಹೇಳಲಿ, ಅವಳು ಆಮೆಯನ್ನು ಬಾವಿಗೆ ಹೋಗ ಬಿಟ್ಟಳು

ಚೆಲುವೆಯೊಬ್ಬಳು ಸುಡು ಯೌವ್ವನದೊಡನೆ ಮನೆಗೆ ಬರುತಾಳೆ ಆಗಾಗ್ಗೆ
ನನ್ನ ಮಗ, ನನ್ನ ಗಿಳಿ (ರಾಘು)ಯ ಯೌವನ ಹೊಳೆವ ಚಿನ್ನದ ಬಣ್ಣದ ಸಂಪಿಗೆಯಂತೆ

ಓ ನಡು ಯೌವ್ವನದ ಹೆ‍ಣ್ಣೇ, ನಿಲ್ಲಲ್ಲಿ ಮಾತಾಡು ನನ್ನೊಡನೆ ಒಮ್ಮೆ
ನಿನ್ನ ಯೌವನವೆನ್ನುವುದು ನನ್ನ ಚಂದದ ಸೀರೆಗೂ ಸಮವಲ್ಲ

ನನ್ನ ಮುಂದೆ ಹಾದು ಹೋದ ಚೆಲುವಿನ ಹೆಣ್ಣೇ
ನಿನ್ನ ಯೌವನವು ನನ್ನ ಕಾಲುಂಗುರಕ್ಕೂ ಸಮವಲ್ಲ

ಹೆಚ್ಚು ಬೀಗಬೇಡ ಚೆಲುವಿನ ಕುರಿತು ಓ ಹೆಣ್ಣೇ
ನೊಣವೂ ಸುಳಿಯುವುದಿಲ್ಲ ಚೆಲುವು ಬಾಡಿದರೆ ಒಮ್ಮೆ

ನನ್ನೊಡನೆ ಮಾತನಾಡುವ ಹೆಣ್ಣಿಗೆ ಇನಿತೂ ವಿನಯವಿಲ್ಲ
ಅವಳುಟ್ಟ ಜರತಾರಿ, ನಾನುಟ್ಟ ಸಾದಾ ಸೀರೆಗೂ ಸಮವಿಲ್ಲ

ಓ ತುಂಬು ಯೌವ್ವನದ ಹೆಣ್ಣೇ, ಯಾರಿಗೆ ಚೆಲುವು ತೋರಿಸುತ್ತಿರುವೆ?
ನಿನ್ನ ಹಣೆಯ ಕುಂಕುಮದ ಕೆಳಗೆ ಕರಿಬೊಟ್ಟು ಏಕೆ ಧರಿಸಿರುವೆ?

ಓ ಜವ್ವನದ ಹೆ‍ಣ್ಣೇ, ನೀನು ಆಕರ್ಷಕಳು, ನಿನ್ನ ಸೌಂದರ್ಯ ಬಹಳ ಗಟ್ಟಿ
ಎಚ್ಚರದಿಂದಿರು ನೀರು ತರುವ ದಾರಿಯಲ್ಲಿ, ನನ್ನ ಮಗ ಜಗಜಟ್ಟಿ

ಓ ಚೆಲುವಿನ ಹೆಣ್ಣೇ, ತಗ್ಗಿಸು ನಿನ್ನ ಯೌವನದ ಆಕರ್ಷಣೆಯನ್ನು
ನನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗ ಗೊಂದಲದಲ್ಲಿದ್ದಾನೆ

ಪೇರಲ ತೇಲುತ್ತಿದೆ ಆಕೆಯ ಕೊಡದಲ್ಲಿ, ಹೆಂಗಸು ನೀರಿಗೆ ಹೊರಡುತ್ತಿದ್ದಂತೆ
ನಗೆ ಚಟಾಕಿ ಹಾರಿಸುತ್ತಾನೆ ನನ್ನ ಮಗ, ಅವಳ ನಗೆಯ ಬೆಳಕ ಕಾಣಲೆಂದು

ನನ್ನ ಮನೆಗೆ ಆಗಾಗ ಬರುತ್ತಾಳವಳು ತುಂಬು ಯೌವ್ವನದ ಚೆಲುವೆ
ಓ ಗೆಳತಿ, ಹುಡುಕುತ್ತಾಳವಳು ಮಗನ ರುಮಾಲಿಗಾಗಿ ಬಟ್ಟೆ ಒಣಗಿಸಿದಲ್ಲಿ

ಆ ಹೆ‍ಣ್ಣು ಹೋಗುತ್ತಾಳೆ ಕೆರೆಗೆ ನೀರು ತರಲು, ಬಾವಿಗಲ್ಲ
ನನ್ನ ಮಗ ಕಾಯುತ್ತಿರುತ್ತಾನೆ ಮೂಲೆಯೊಂದರಲ್ಲಿ ಸೈನಿಕನಂತೆ ಎಚ್ಚರದಲಿ

ಆ ಹೆ‍ಣ್ಣು ಹೋಗುತ್ತಾಳೆ ಕೆರೆಗೆ ನೀರು ತರಲು, ಬಾವಿಗಲ್ಲ
ನನ್ನ ಮಗ ನಿಂತಿರುತ್ತಾನೆ ಅಲ್ಲಿ ಕಾವಲಿ ಭಟನಂತೆ

ನನ್ನ ಮನೆಗೆ ಆಗಾಗ ಬರುತ್ತಾಳವಳು ತುಂಬು ಯೌವ್ವನದ ಚೆಲುವೆ
ಹೇಳಿ ಸಾಕಾಗಿದೆ ನನಗೆ ಮಗನು ಮನೆಯೊಳಗಿಲ್ಲವೆಂದು

ನನ್ನ ಮನೆಯ ಅಂಗಳದಲ್ಲಿ ನನ್ನ ಮಗುವಿನ ಬಟ್ಟೆಗಳು ಒಣಗುತ್ತಿವೆ
ಅದನ್ನು ದಾಟುತ್ತಿದ್ದಾಳೆ ಬಂಜೆ, ಅವಳ ಯೌವನಕ್ಕೆ ಬೆಂಕಿ ಬೀಳಲಿ

ಕೇಳು ಹುಡುಗಿ, ಅಲ್ಲಿ ಇಲ್ಲಿ ಒಬ್ಬಳೇ ಅಲೆದಾಡಬೇಡ
ಕುದುರೆಯನ್ನು ಪಳಗಿಸು, ಅಲಂಕರಿಸು, ಮದುವೆ ಮೆರವಣಿಗೆ ಬರಲಿ
ನನ್ನ ಮಗನ ವಧುವನ್ನು ಮನೆಗೆ ಸ್ವಾಗತಿಸುತ್ತೇನೆ ನಾನು

ಓ ನನ್ನ ಬಹದ್ದೂರ್‌ ಮಗನೇ, ಹಗ್ಗವಿಲ್ಲದ ಹುಲಿಯಂತಹವನೇ
ಓಹ್, ರಾಖು ಈಗ ಏನು ಹೇಳಲಿ ನಾನು, ಅವನ ಗಮನವು ಅವಳ ಮೇಲಷ್ಟೇ
ಮದುವೆಯ ದಿನವಿಂದು, ಸಂಭ್ರಮ ನಡೆಯುತ್ತಿದೆ
ಕುದುರೆಯನ್ನು ಕೊಂಡು ಹೋಗು, ನೀನು ಅದನ್ನು ಪಳಗಿಸಿ ಮೆರವಣಿಗೆಯನ್ನು ಹೊರಡಿಸು
ನನ್ನ ಮಗನ ವಧುವನ್ನು ಮನೆಗೆ ಸ್ವಾಗತಿಸುವೆ ನಾ


PHOTO • Patrick Faucher

ಪ್ರದರ್ಶಕರು/ಗಾಯಕರು: ತಾರಾಬಾಯಿ ಉಭೇ

ಗ್ರಾಮ: ಕೊಲವಾಡೆ

ಊರು: ಖಡಕ್‌ವಾಡಿ

ತಾಲ್ಲೂಕು: ಮುಲ್ಶಿ

ಜಿಲ್ಲೆ : ಪುಣೆ

ಜಾತಿ: ಮರಾಠ

ವಯಸ್ಸು: 70

ಮಕ್ಕಳು: ಮೂವರು ಹೆ‍ಣ್ಣು ಮಕ್ಕಳು

ಉದ್ಯೋಗ: ರೈತ. ಅವಳ ಕುಟುಂಬವು ಒಂದು ಎಕರೆ ಭೂಮಿಯನ್ನು ಹೊಂದಿದ್ದಾರೆ ಮತ್ತು ಅಕ್ಕಿ, ಗೋಧಿ, ರಾಗಿ ಮತ್ತು ಸ್ವಲ್ಪ ನವಣೆಯನ್ನು ಬೆಳೆಯುತ್ತಾರೆ.


PHOTO • Namita Waikar

ಪ್ರದರ್ಶಕರು/ಗಾಯಕರು: ಕುಸುಮ್‌ ಸೊನಾವಣೆ

ಗ್ರಾಮ: ನಂದಗಾಂವ್

ತಾಲ್ಲೂಕು: ಮುಲ್ಶಿ

ಜಿಲ್ಲೆ: ಪುಣೆ

ಜಾತಿ: ನವ ಬೌದ್ಧ

ವಯಸ್ಸು: 73

ಮಕ್ಕಳು: ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣುಮಕ್ಕಳು

ಉದ್ಯೋಗ: ಬೇಸಾಯ


PHOTO • Samyukta Shastri

ಪ್ರದರ್ಶಕರು/ಗಾಯಕರು : ಶಾಹು ಕಾಂಬ್ಳೆ

ಗ್ರಾಮ: ನಂದಗಾಂವ್

ತಾಲ್ಲೂಕು: ಮುಲ್ಶಿ

ಜಿಲ್ಲೆ: ಪುಣೆ

ಜಾತಿ: ನವ ಬೌದ್ಧ

ವಯಸ್ಸು: 70 (ಗರ್ಭಾಶಯದ ಕ್ಯಾನ್ಸರಿನಿಂದ ಆಗಸ್ಟ್ 2016ರಲ್ಲಿ ನಿಧನರಾದರು)

ಮಕ್ಕಳು: ಇಬ್ಬರು ಪುತ್ರರು ಮತ್ತು ಇಬ್ಬರು ಹೆಣ್ಣುಮಕ್ಕಳು

ಉದ್ಯೋಗ: ಬೇಸಾಯ

ದಿನಾಂಕ: ಈ ಹಾಡುಗಳನ್ನು ಅಕ್ಟೋಬರ್ 5, 1999ರಂದು ರೆಕಾರ್ಡ್ ಮಾಡಲಾಯಿತು.


ಪೋಸ್ಟರ್: ಊರ್ಜಾ

ಹೇಮಾ ರಾಯಿರ್ಕರ್ ಮತ್ತು ಗೈ ಪೊಯಿಟೆವಿನ್ ಸ್ಥಾಪಿಸಿದ ಮೂಲ ಗ್ರಿಂಡ್ ಮಿಲ್ ಸಾಂಗ್ಸ್ ಪ್ರಾಜೆಕ್ಟ್ ಬಗ್ಗೆ ಓದಿ .

ಅನುವಾದ: ಶಂಕರ ಎನ್‌. ಕೆಂಚನೂರು

نمیتا وائکر ایک مصنفہ، مترجم اور پاری کی منیجنگ ایڈیٹر ہیں۔ ان کا ناول، دی لانگ مارچ، ۲۰۱۸ میں شائع ہو چکا ہے۔

کے ذریعہ دیگر اسٹوریز نمیتا وائکر
PARI GSP Team

پاری ’چکی کے گانے کا پروجیکٹ‘ کی ٹیم: آشا اوگالے (ترجمہ)؛ برنارڈ بیل (ڈجیٹائزیشن، ڈیٹا بیس ڈیزائن، ڈیولپمنٹ اور مینٹیننس)؛ جتیندر میڈ (ٹرانس کرپشن، ترجمہ میں تعاون)؛ نمیتا وائکر (پروجیکٹ لیڈ اور کیوریشن)؛ رجنی کھلدکر (ڈیٹا انٹری)

کے ذریعہ دیگر اسٹوریز PARI GSP Team
Illustration : Antara Raman

انترا رمن سماجی عمل اور اساطیری خیال آرائی میں دلچسپی رکھنے والی ایک خاکہ نگار اور ویب سائٹ ڈیزائنر ہیں۔ انہوں نے سرشٹی انسٹی ٹیوٹ آف آرٹ، ڈیزائن اینڈ ٹکنالوجی، بنگلورو سے گریجویشن کیا ہے اور ان کا ماننا ہے کہ کہانی اور خاکہ نگاری ایک دوسرے سے مربوط ہیں۔

کے ذریعہ دیگر اسٹوریز Antara Raman
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru