ಒಂದು ವೇಳೆ ಪೋಲೀಸರ ಹಿಂಸಾತ್ಮಕ ಹೊಡೆತಗಳು ಹಿನ್ನಡೆಯನ್ನುಂಟು ಮಾಡದೆ ಇದ್ದಲ್ಲಿ, ಉತ್ತರ ಪ್ರದೇಶದ ಬಾಘಪತ್ ಜಿಲ್ಲೆಯಲ್ಲಿ ಚಳವಳಿ ನಡೆಸುತ್ತಿರುವ ರೈತರು ಪ್ರತಿಭಟನಾ ಸ್ಥಳವನ್ನು ತೊರೆಯುತ್ತಿರಲಿಲ್ಲ. ” 40 ದಿನಗಳಿಂದ ಚಳುವಳಿ ನಡೆಯುತ್ತಿದೆ” ಎಂದು ಬರೌತ್ ಪಟ್ಟಣದಲ್ಲಿ ಧರಣಿ ಸತ್ಯಾಗ್ರಹದಲ್ಲಿ ನಿರತರಾಗಿರುವ ಕಬ್ಬು ಬೆಳೆಗಾರರಾಗಿರುವ ಬ್ರಿಜಪಾಲ್ ಸಿಂಗ್ (52) ಹೇಳುತ್ತಾರೆ.
“ಅದು ರಾಸ್ತಾ ರೋಖೋ ಕೂಡ ಆಗಿರಲಿಲ್ಲ, ನಾವು ಶಾಂತಿ ರೀತಿಯಿಂದ ನಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸುತ್ತಿದ್ದೆವು. ಜನವರಿ 27ರ ರಾತ್ರಿ ಪೋಲಿಸರು ಏಕಾಏಕಿ ನಮ್ಮ ಮೇಲೆ ಲಾಠಿ ಪ್ರಹಾರ ನಡೆಸಿದರು. ನಮ್ಮ ಟೆಂಟ್ ಗಳನ್ನು ನಾಶಪಡಿಸಿ ಅವರು ಅಲ್ಲಿರುವ ನಮ್ಮ ಪಾತ್ರೆ ಹಾಗೂ ಬಟ್ಟೆಗಳನ್ನು ತೆಗೆದುಕೊಂಡು ಹೋದರು. ಅಲ್ಲಿದ್ದ ಹಿರಿಯರು ಮತ್ತು ಮಕ್ಕಳ ಬಗ್ಗೆಯೂ ಕೂಡ ಅವರು ತಲೆಕೆಡಿಸಿಕೊಳ್ಳಲಿಲ್ಲ” ಎಂದು ಬರೌತ್ ನಲ್ಲಿ ಐದು ಎಕರೆ ಕೃಷಿ ಭೂಮಿಯನ್ನು ಹೊಂದಿರುವ ಬ್ರಿಜಪಾಲ್ ಹೇಳುತ್ತಾರೆ.
ಆ ಜನವರಿ ರಾತ್ರಿಯವರೆಗೂ, ಜಿಲ್ಲೆಯ ಎಲ್ಲೆಡೆಯಿಂದ ಸುಮಾರು 200 ರೈತರು ಹೊಸ ಕೃಷಿ ಕಾನೂನುಗಳಿಗೆ ವಿರುದ್ಧವಾಗಿ ಬರಾತ್ನ ಬಾಗಪತ್-ಸಹರಾನ್ಪುರ ಹೆದ್ದಾರಿಯಲ್ಲಿ ಚಳವಳಿ ನಡೆಸುತ್ತಿದ್ದರು. 2020ರ ಸೆಪ್ಟೆಂಬರ್ನಲ್ಲಿ ಕೇಂದ್ರ ಸರ್ಕಾರ ಮೂರು ಹೊಸ ಕೃಷಿ ಕಾನೂನುಗಳನ್ನು ಜಾರಿಗೆ ತಂದಾಗಿನಿಂದಲೂ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿರುವ ಲಕ್ಷಾಂತರ ರೈತರಲ್ಲಿ ಅವರು ಕೂಡ ಸೇರಿದ್ದಾರೆ.
ಈ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಬಾಘ್ಪತ್ ಮತ್ತು ಪಶ್ಚಿಮ ಉತ್ತರ ಪ್ರದೇಶದ (ಯುಪಿ) ಇತರ ಭಾಗಗಳಲ್ಲಿನ ರೈತರು ಈ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ನವಂಬರ್ 26ರಿಂದ ಪಂಜಾಬ್ ಮತ್ತು ಹರಿಯಾಣದಿಂದ ಬಂದಿರುವ ದೆಹಲಿಯ ಗಡಿ ಭಾಗದಲ್ಲಿ ಚಳುವಳಿಯನ್ನು ನಡೆಸುತ್ತಿದ್ದಾರೆ.
"ನಮಗೆ ಬೆದರಿಕೆಗಳು, ದೂರವಾಣಿ ಕರೆಗಳು ಬಂದಿವೆ" ಎಂದು ಬಾಗಪತ್ ಪ್ರದೇಶದ ತೋಮರ್ ಕುಲದ ಪುರುಷ ಮಂಡಳಿಯಾಗಿರುವ ದೇಶ್ ಖಾಪ್ ನ ಸ್ಥಳೀಯ ನಾಯಕರಾದ ಬ್ರಿಜ್ಪಾಲ್ ಹೇಳುತ್ತಾರೆ. ”ಜಿಲ್ಲಾ ಆಡಳಿತವು ನಮ್ಮ ಹೊಲಗಳನ್ನು ನೀರಿನಿಂದ ತುಂಬಿಸುವುದಾಗಿ ಬೆದರಿಕೆ ಹಾಕಿತು. ಇದು ಸಾಧ್ಯವಾಗದಿದ್ದರಿಂದಾಗಿ ಅವರು ನಾವು ಮಲಗಿದ್ದಾಗ ಪೋಲಿಸರ ಮೂಲಕ ಲಾಠಿ ಚಾರ್ಜ್ ಮಾಡಿದರು. ಈ ನಡೆ ನಮಗೆ ನಿಜಕ್ಕೂ ಅಚ್ಚರಿಯನ್ನು ತರಿಸಿತ್ತು.”
ಅವರ ಗಾಯ ವಾಸಿಯಾಗುವ ಮೊದಲು, ಬ್ರಿಜ್ಪಾಲ್ಗೆ ಮತ್ತೊಂದು ಆಘಾತವಾಯಿತು. ಅವರಿಗೆ ಫೆಬ್ರವರಿ 10ರಂದು ದೆಹಲಿಯ ಶಹದಾರಾ ಜಿಲ್ಲೆಯ ಸೀಮಾಪುರಿ ಪೊಲೀಸ್ ಠಾಣೆಯಲ್ಲಿ ಹಾಜರಾಗುವಂತೆ ದೆಹಲಿ ಪೊಲೀಸರಿಂದ ನೋಟಿಸ್ ಜಾರಿ ಮಾಡಲಾಯಿತು.ಜನವರಿ 26ರಂದು ದೆಹಲಿಯಲ್ಲಿ ನಡೆದ ರೈತರ ಗಣರಾಜ್ಯೋತ್ಸವದ ಟ್ರಾಕ್ಟರ್ ರ್ಯಾಲಿಯಲ್ಲಿ ನಡೆದ ಹಿಂಸಾಚಾರದ ಘಟನೆಗಳಿಗೆ ಸಂಬಂಧಿಸಿದಂತೆ ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿತ್ತು.
“ನಾನು ದೆಹಲಿಯಲ್ಲಿಯೂ ಇರಲಿಲ್ಲ, ಆಗ ನಾನು ಬೌರತ್ ನಲ್ಲಿ ನಡೆಯುತ್ತಿದ್ದ ಧರಣಿ ಸತ್ಯಾಗ್ರಹದಲ್ಲಿದ್ದೆ. ಈ ಹಿಂಸಾಚಾರ ನಡೆದಿರುವುದು ಇಲ್ಲಿ 70 ಕಿಲೋ ಮೀಟರ್ ದೂರದಲ್ಲಿ” ಆದ್ದರಿಂದ ತಾವು ಪೋಲೀಸರ ನೋಟಿಸ್ಗೆ ಪ್ರತಿಕ್ರಿಯಿಸಲಿಲ್ಲ ಎಂದು ಬ್ರಿಜಪಾಲ್ ಹೇಳುತ್ತಾರೆ.
ಬರಾತ್ನಲ್ಲಿ ರೈತರ ಪ್ರತಿಭಟನೆ ಜನವರಿ 27ರ ರಾತ್ರಿಯವರೆಗೆ ನಡೆಯುತ್ತಿತ್ತು ಎಂದು ಬಾಗಪತ್ನ ಹೆಚ್ಚುವರಿ ಜಿಲ್ಲಾಧಿಕಾರಿ ಅಮಿತ್ ಕುಮಾರ್ ಸಿಂಗ್ ಖಚಿತಪಡಿಸುತ್ತಾರೆ.
ಬರಾತ್ನಲ್ಲಿನ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಇತರ 8 ರೈತರಿಗೂ ದೆಹಲಿ ಪೊಲೀಸರಿಂದ ನೋಟಿಸ್ ಬಂದಿದೆ.’ನಾನು ಹೋಗಲಿಲ್ಲ’ ಎಂದು ಭಾರತೀಯ ಸೇನೆಯ ಮಾಜಿ ಸಿಪಾಯಿ 78 ವರ್ಷದ ಬಾಲ್ಜೋರ್ ಸಿಂಗ್ ಆರ್ಯ ಹೇಳುತ್ತಾರೆ.ಪೂರ್ವ ದೆಹಲಿ ಜಿಲ್ಲೆಯ ಪಾಂಡವ್ ನಗರ ಪೊಲೀಸ್ ಠಾಣೆಯಲ್ಲಿ ಫೆಬ್ರವರಿ 6ರಂದು ಹಾಜರಾಗಬೇಕಾಗಿತ್ತು ಎಂದು ಪೋಲೀಸರ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ. “ಈ ವಿಷಯದಲ್ಲಿ ನನ್ನನ್ನು ಏಕೆ ಎಳೆಯಲಾಗುತ್ತಿದೆ ಎಂಬುದರ ಬಗ್ಗೆ ನನಗೆ ಯಾವುದೇ ಮಾಹಿತಿ ಕೂಡ ಇಲ್ಲ. ಆಗ ನಾನು ಬಾಘ್ಪತ್ನಲ್ಲಿದ್ದೆ ”ಎಂದು ಮಲಕ್ಪುರ ಗ್ರಾಮದಲ್ಲಿ ಎರಡು ಎಕರೆ ಕೃಷಿ ಭೂಮಿ ಹೊಂದಿರುವ ಸಾಕುವ ಬಾಲ್ಜೋರ್ ಹೇಳುತ್ತಾರೆ.
ದೆಹಲಿ ನಡೆದ ಹಿಂಸಾಚಾರದ ಘಟನೆಗಳಿಗೆ ಸಂಬಂಧಿಸಿದಂತೆ ಬಾಘ್ಪತ್ನಲ್ಲಿರುವ ರೈತರು ಶಂಕಿತರ ಪಟ್ಟಿಯಲ್ಲಿದ್ದಾರೆ ಎಂದು ಪಾಂಡವ್ ನಗರ ನಿಲ್ದಾಣದ ಸಬ್ ಇನ್ಸ್ಪೆಕ್ಟರ್ ನೀರಜ್ ಕುಮಾರ್ ಹೇಳಿದ್ದಾರೆ.”ಅವರು ನನಗೆ ತನಿಖೆ ನಡೆಯುತ್ತಿದೆ ಎಂದು ಫೆಬ್ರುವರಿ 10 ರಂದು ತಿಳಿಸಿದರು”. ಆದರೆ ನೋಟಿಸ್ ಕಳುಹಿಸಿರುವ ಕಾರಣವನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಸೀಮಾಪುರಿಯ ಇನ್ಸ್ಪೆಕ್ಟರ್ ಪ್ರಶಾಂತ್ ಆನಂದ್ ಹೇಳುತ್ತಾರೆ. “ಅವರು ದೆಹಲಿಯಲ್ಲಿದ್ದಾರೋ ಇಲ್ಲವೋ ಎಂದು ನಾವು ಪರಿಶೀಲಿಸುತ್ತೇವೆ. ನಮ್ಮಲ್ಲಿ ಕೆಲವು ಇನ್ಪುಟ್ ನ ಮಾಹಿತಿಗಳಿವೆ. ಅದಕ್ಕಾಗಿಯೇ ನಾವು ನೋಟಿಸ್ ಕಳುಹಿಸಿದ್ದೇವೆ.”
ಬ್ರಿಜ್ಪಾಲ್ ಮತ್ತು ಬಾಲ್ಜೋರ್ ಅವರಿಗೆ ಕಳುಹಿಸಿದ ನೋಟಿಸ್ ನಲ್ಲಿ ದೆಹಲಿ ಪೊಲೀಸ್ ಠಾಣೆಗಳಲ್ಲಿ ನೋಂದಾಯಿಸಲಾದ ಎಫ್ಐಆರ್ ಗಳನ್ನು ಉಲ್ಲೇಖಿಸಿದೆ. ಇವುಗಳಲ್ಲಿ ಗಲಭೆ, ಕಾನೂನುಬಾಹಿರ ಸಭೆ, ಸಾರ್ವಜನಿಕ ಸೇವಕನ ಮೇಲೆ ಹಲ್ಲೆ, ದೌರ್ಜನ್ಯ ಮತ್ತು ಕೊಲೆ ಯತ್ನಕ್ಕೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ವಿವಿಧ ವಿಭಾಗಗಳನ್ನು ಪಟ್ಟಿ ಮಾಡಲಾಗಿದೆ. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ತಡೆಗಟ್ಟುವ ಕಾಯ್ದೆ, ಸಾಂಕ್ರಾಮಿಕ ರೋಗಗಳ ಕಾಯ್ದೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯಂತಹ ಕಾನೂನುಗಳ ವಿಭಾಗಗಳನ್ನು ಸಹ ಅದರಲ್ಲಿ ಸೇರಿಸಲಾಗಿದೆ.
ಆದರೆ ರೈತರು ತಮ್ಮ ಹಕ್ಕುಗಳ ಬೇಡಿಕೆಗಳಿಗಾಗಿ ಮಾತ್ರ ಆಗ್ರಹಿಸುತ್ತಿದ್ದರು ಎಂದು ಬರಾತ್ನಿಂದ ಎಂಟು ಕಿಲೋಮೀಟರ್ ದೂರದಲ್ಲಿರುವ ಖ್ವಾಜಾ ನಾಗ್ಲಾ ಗ್ರಾಮದ 68 ವರ್ಷದ ಕಬ್ಬು ಬೆಳೆಗಾರ ವಿಕ್ರಮ್ ಆರ್ಯ ಹೇಳುತ್ತಾರೆ. “ನಮ್ಮದು ಚಳವಳಿ ಮತ್ತು ಹೋರಾಟದ ಕರ್ಮಭೂಮಿ. ಪ್ರತಿ ಶಾಂತಿಯುತ ಹೋರಾಟಗಳಲ್ಲೂ ಗಾಂಧೀಜಿಯವರು ಇದ್ದಾರೆ. ನಮ್ಮ ಹಕ್ಕುಗಳಿಗಾಗಿ ನಾವು ಹೋರಾಟ ನಡೆಸುತ್ತಿದ್ದೇವೆ. ಆದರೆ ಮಹಾತ್ಮ ಗಾಂಧೀಜಿಯವರು ಹೊಂದಿದ್ದ ಎಲ್ಲ ಆಶಯಗಳನ್ನು ಕೇಂದ್ರ ಸರ್ಕಾರವು ತೊಡೆದು ಹಾಕಲು ಬಯಸಿದೆ” ಎಂದು “ಬರಾತ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿಕ್ರಮ್ ಹೇಳುತ್ತಾರೆ.
ಈಗ ರೈತರು ವಿರೋಧಿಸುತ್ತಿರುವ ಮೂರು ಕಾನೂನುಗಳೆಂದರೆ: ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಕಾಯ್ದೆ 2020 ; ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕುರಿತಂತೆ ರೈತರ ಜತೆ (ಸಬಲೀಕರಣ ಮತ್ತು ರಕ್ಷಣೆ) ಒಪ್ಪಂದ ಕಾಯ್ದೆ-2020 ,ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020 .
ರೈತರು ಈ ಕೃಷಿ ಕಾನೂನುಗಳನ್ನು ತಮ್ಮ ಜೀವನೋಪಾಯಕ್ಕೆ ವಿನಾಶಕಾರಿ ಎಂದು ಪರಿಗಣಿಸಿದ್ದಾರೆ.ಏಕೆಂದರೆ ಇದರಿಂದಾಗಿ ಬೃಹತ್ ಕಾರ್ಪೊರೇಟ್ ಕಂಪನಿಗಳು ಈಗ ರೈತರು ಹಾಗೂ ಕೃಷಿ ವಲಯದ ಮೇಲೆ ಇನ್ನೂ ಹೆಚ್ಚಿನ ಪ್ರಾಬಲ್ಯವನ್ನು ಸಾಧಿಸುತ್ತವೆ. ಈ ನೂತನ ಕೃಷಿ ಕಾನೂನುಗಳು ರೈತರಿಗೆ ಇರುವ ಪ್ರಮುಖ ಆಧಾರದ ಮೂಲಗಳನ್ನು ನಾಶಪಡಿಸುತ್ತವೆ . ಇವುಗಳಲ್ಲಿ ಪ್ರಮುಖವಾಗಿ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ), ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು (ಎಪಿಎಂಸಿ), ಉತ್ಪನ್ನಗಳನ್ನು ಸರ್ಕಾರವೇ ಖರೀದಿಸುವುದು, ಇಂತಹ ಇನ್ನೂ ಹಲವು ಆಧಾರದ ಮೂಲಗಳು ಇದರಲ್ಲಿ ಸೇರಿವೆ. ಇದರ ಜೊತೆಗೆ ಭಾರತೀಯ ಸಂವಿಧಾನದ 32 ನೇ ವಿಧಿಯನ್ನು ದುರ್ಬಲಗೊಳಿಸಿ, ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ನಿಷ್ಕ್ರಿಯಗೊಳಿಸುವ ನಡೆ ಪ್ರತಿಯೊಬ್ಬ ಭಾರತೀಯನ ಮೇಲೂ ಪರಿಣಾಮ ಬೀರುತ್ತದೆ ಎಂದು ಟೀಕಿಸಲಾಗುತ್ತದೆ.
ವಿಕ್ರಮ್ ಗೆ ಹೊಸ ಕಾನೂನುಗಳು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದ ನಂತರವೂ ಎಂಎಸ್ಪಿ ಮುಂದುವರಿಯುತ್ತದೆ ಎಂಬ ಸರ್ಕಾರದ ಹೇಳಿಕೆಯಲ್ಲಿ ಯಾವುದೇ ನಂಬಿಕೆ ಇಲ್ಲ.“ಖಾಸಗಿ ಕಂಪನಿಗಳು ಬಂದ ನಂತರ ಬಿಎಸ್ಎನ್ಎಲ್ ಸ್ಥಿತಿ ಏನಾಗಿದೆ? ನಮ್ಮ ಸಾರ್ವಜನಿಕ ಶಾಲೆಗಳು ಮತ್ತು ಆಸ್ಪತ್ರೆಗಳ ಸ್ಥಿತಿಗತಿ ಹೇಗಿದೆ ? ಇದೇ ರೀತಿ ರಾಜ್ಯದ ಮಂಡಿಗಳು ಕೂಡ ಕುಸಿದು,ಕೊನೆಗೆ ನಿಧಾನವಾಗಿ ಅವುಗಳು ಸಹಿತ ಇಲ್ಲವಾಗುತ್ತವೆ” ಎನ್ನುತ್ತಾರೆ.
ವಿಕ್ರಮ್ ಮತ್ತು ಬಾಲ್ಜೋರ್ರಂತಹ ರೈತರು ರಾಜ್ಯ-ನಿಯಂತ್ರಿತ ಮಂಡಿಗಳು (ಎಪಿಎಂಸಿಗಳು) ಅಪ್ರಸ್ತುತವಾಗುವುದರ ಬಗ್ಗೆ ಕಳವಳ ವ್ಯಕ್ತಪಡಿಸುವುದರ ಜೊತೆಗೆ ಕೃಷಿಯಲ್ಲಿ ಕಾರ್ಪೊರೇಟ್ ಘಟಕಗಳ ಉಪಸ್ಥಿತಿಗೆ ಭಯಪಡುತ್ತಾರೆ. "ಕಂಪನಿಗಳು ನಮ್ಮ ಉತ್ಪನ್ನಗಳ ಮೇಲೆ ಏಕಸ್ವಾಮ್ಯವನ್ನು ಹೊಂದಿರುತ್ತವೆ ಮತ್ತು ಅವು ರೈತರಿಗೆ ನಿಯಮಗಳನ್ನು ನಿರ್ದೇಶಿಸುತ್ತವೆ" ಎಂದು ವಿಕ್ರಮ್ ಹೇಳುತ್ತಾರೆ.“ಖಾಸಗಿ ಕಂಪನಿಗಳು ಲಾಭದ ಹೊರತಾಗಿ ಬೇರೆ ಇನ್ನ್ಯಾವುದರ ಬಗ್ಗೆ ಯೋಚಿಸಲು ಸಾಧ್ಯವೇ? ಅವರು ನಮನ್ನು ನ್ಯಾಯಯುತವಾಗಿ ನೋಡಿಕೊಳ್ಳುತ್ತಾರೆಂದು ನಂಬುವುದಾದರೂ ಹೇಗೆ?”
ಮುಖ್ಯವಾಗಿ ಕಬ್ಬನ್ನು ಬೆಳೆಯುವ ಪಶ್ಚಿಮ ಯುಪಿಯ ರೈತರು, ಖಾಸಗಿ ಸಂಸ್ಥೆಗಳೊಂದಿಗೆ ವ್ಯವಹಾರದ ಸ್ಥಿತಿ ಗತಿ ಹೇಗಿರುತ್ತದೆ ಎನ್ನುವುದನ್ನು ತಿಳಿದಿದ್ದಾರೆ ಎಂದು ಬಾಲ್ಜೋರ್ ಹೇಳುತ್ತಾರೆ.”ನಾವು ಕಬ್ಬಿನ ಕಾರ್ಖಾನೆಗಳೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದೇವೆ. ಬೆಲೆಗಳನ್ನು ರಾಜ್ಯ ಸರ್ಕಾರವು ನಿರ್ಧರಿಸುತ್ತದೆ [ರಾಜ್ಯ ಸಲಹಾ ಬೆಲೆ]. ಕಾನೂನಿನ ಪ್ರಕಾರ [ಉತ್ತರ ಪ್ರದೇಶದ ಕಬ್ಬು ಬೆಳೆ ಕಾಯ್ದೆ], ನಮ್ಮ ಬೆಳೆಗಳಿಗೆ ಬರಬೇಕಾದ ಹಣದ ಪಾವತಿ 14 ದಿನಗಳ ಒಳಗೆ ಸಂದಾಯವಾಗಬೇಕು. ಆದರೆ ಈಗ 14 ತಿಂಗಳುಗಳಾಗುತ್ತಾ ಬಂತು, ಈ ಹಿಂದಿನ ಋತುವಿನಲ್ಲಿ ನಾವು ಮಾರಾಟ ಮಾಡಿದ ಕಬ್ಬಿನ ಬೆಳೆ ಪಾವತಿ ನಮಗೆ ಇನ್ನೂ ಸಂದಾಯವಾಗಿಲ್ಲ.ರಾಜ್ಯ ಸರ್ಕಾರ ಕೂಡ ಈ ನಿಟ್ಟಿನಲ್ಲಿ ಯಾವುದೇ ಕ್ರಮವನ್ನು ಕೈಗೊಂಡಿಲ್ಲ” ಎಂದು ಅವರು ವಿವರಿಸುತ್ತಾರೆ.
1966-73ರಲ್ಲಿ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿದ ಬಾಲ್ಜೋರ್, ಸರ್ಕಾರವು ರೈತರ ವಿರುದ್ಧ ಸೈನಿಕರನ್ನು ಬಳಸಿಕೊಳ್ಳುತ್ತಿದೆ ಆಕ್ರೋಶ ಎಂದು ವ್ಯಕ್ತಪಡಿಸುತ್ತಾರೆ. “ಅವರು ಸೈನ್ಯವನ್ನು ದುರುಪಯೋಗಪಡಿಸಿಕೊಂಡು ಸುಳ್ಳು ರಾಷ್ಟ್ರೀಯತೆಯನ್ನು ಬಿಕರಿಗಿಟ್ಟಿದ್ದಾರೆ.ಅಂತಹ ಸೈನ್ಯದಲ್ಲಿ ಸೇವೆ ಸಲ್ಲಿಸಿರುವ ನಾನು ಅದನ್ನು ತೀವ್ರವಾಗಿ ವಿರೋಧಿಸುತ್ತೇನೆ” ಎಂದು ಹೇಳುತ್ತಾರೆ.
"ಪ್ರತಿಪಕ್ಷಗಳು ರೈತರ ಚಳವಳಿಯನ್ನು ರಾಜಕೀಯಗೊಳಿಸುತ್ತಿವೆ ಎಂದು ಇಡೀ ದೇಶಕ್ಕೆ ಸಾರುವಲ್ಲಿ ಮಾಧ್ಯಮ ನಿರತವಾಗಿದೆ" ಎಂದು ವಿಕ್ರಮ್ ಹೇಳುತ್ತಾರೆ.“ರಾಜಕೀಯ ಪಕ್ಷಗಳು ರಾಜಕೀಯದಲ್ಲಿ ತೊಡಗಿಸಿಕೊಳ್ಳದಿದ್ದರೆ, ಮತ್ತಿನ್ನ್ಯಾರು ಅದನ್ನು ಮಾಡುತ್ತಾರೆ? ಈ ಚಳುವಳಿ ರೈತರನ್ನು ಎಚ್ಚರಗೊಳ್ಳುವಂತೆ ಮಾಡಿದೆ. ನಾವು ದೇಶದ ಶೇ 70 ರಷ್ಟು ಜನರಿದ್ದೇವೆ. ಸುಳ್ಳು ಎಷ್ಟು ದಿನ ನಡೆಯುತ್ತೆ?” ಎಂದು ಪ್ರಶ್ನಿಸುತ್ತಾರೆ.
ಅನುವಾದ - ಎನ್ .ಮಂಜುನಾಥ್