ಅಲಂಕಾರಿಕ ಆಭರಣಗಳನ್ನು ತಯಾರಿಸಲು ನಾನು ಶೋಲಾಪಿತ್ [ಶೋಲಾ ಮರದ ತಿರುಳು] ಬಳಸುತ್ತೇನೆ. ಇದು ಬಳಕೆಗೆ ಸುಲಭವಾಗಿದ್ದು ಇದನ್ನು ವಿವಿಧ ಆಕಾರಗಳಲ್ಲಿ ಮತ್ತು ವಿನ್ಯಾಸಗಳಲ್ಲಿ ಕತ್ತರಿಸಬಹುದು. ಇದು ಹಗುರವಾಗಿಯೂ ಇರುತ್ತದೆ. ನಾವು ಇದನ್ನು ಒಡಿಶಾದಲ್ಲಿ ಶೋಲಾಪಿತ್ ಕಾಮ [ಶೋಲಾಪಿತ್ ಕೆಲಸ] ಎಂದು ಕರೆಯುತ್ತೇವೆ.
ನಾನು ನೆಕ್ಲೇಸ್ಗಳು, ದಸರಾ ಕಸೂತಿ, ಹೂವುಗಳು ಮತ್ತು ಇತರ ಶೋಪೀಸ್ಗಳನ್ನು ಮಾಡಬಲ್ಲೆ, ಆದರೆ ತಹಿಯಾ ತಯಾರಿಕೆಗೆ ಹೆಸರುವಾಸಿಯಾಗಿದ್ದೇನೆ - ಒಡಿಸ್ಸಿ ನೃತ್ಯಗಾರರು ವೇದಿಕೆಯಲ್ಲಿ ಪ್ರದರ್ಶನ ನೀಡುವಾಗ ಧರಿಸುವ ಅಲಂಕಾರಿಕ ಕಿರೀಟ.
ಪ್ಲಾಸ್ಟಿಕ್ ತಹಿಯಾಗಳು ಸಹ ಲಭ್ಯವಿವೆ ಆದರೆ ಅವು ನರ್ತಕಿಯ ನೆತ್ತಿಗೆ ಕಿರಿಕಿರಿ ಉಂಟುಮಾಡುತ್ತವೆ, ಇದರಿಂದಾಗಿ ಬಹಳ ಹೊತ್ತಿನವರೆಗೆ ಧರಿಸಲು ಕಷ್ಟವಾಗುತ್ತದೆ. ಅಲ್ಲದೆ, ಪ್ಲಾಸ್ಟಿಕ್ಕನ್ನು ವಿವಿಧ ವಿನ್ಯಾಸಗಳಲ್ಲಿ ಕೆತ್ತಲು ಸಾಧ್ಯವಿಲ್ಲ.
ಇತರ ಅನೇಕ ನುರಿತ ಕುಶಲಕರ್ಮಿಗಳು ತಹಿಯಾ ತಯಾರಿಸುವುದನ್ನು ನಿಲ್ಲಿಸಿದ್ದಾರೆ, ಆದರೆ ನಾನು ನನ್ನ ಕೆಲಸವನ್ನು ಪ್ರೀತಿಸುತ್ತೇನೆ.
ಒಡಿಸ್ಸಿ ನೃತ್ಯದ ಮಹಾನ್ ಪ್ರತಿಪಾದಕರಾದ ಕೇಲುಚರಣ್ ಮೊಹಾಪಾತ್ರ ಅವರ ಸ್ನೇಹಿತ ಕಾಶಿ ಮೊಹಾಪಾತ್ರ ಶಾಸ್ತ್ರೀಯ ನೃತ್ಯಗಾರರು ತಮ್ಮ ಕೂದಲಿನಲ್ಲಿ ಧರಿಸುವ ಹೂವುಗಳನ್ನು ಬದಲಾಯಿಸಲು ಶೋಲಾಪಿತ್ ಬಳಸಿ ತಹಿಯಾಗಳನ್ನು ತಯಾರಿಸುವ ಕಲ್ಪನೆಯನ್ನು ತಂದರು. ನಾನು ವಿನ್ಯಾಸಗಳ ತಯಾರಿಯಲ್ಲಿ ಕೆಲಸ ಮಾಡಿದ್ದೇನೆ.
ಶೋಲಾಪಿತ್ ಅಲ್ಲದೆ, ತಹಿಯಾ ತಯಾರಿಸಲು ಬಕ್ರಾಮ್ [ಗಟ್ಟಿಯಾದ ಹತ್ತಿ] ಬಟ್ಟೆ, ಗೇಜ್ ತಂತಿ, ಫೆವಿಕಾಲ್ ಗಮ್, ಕಪ್ಪು ದಾರ, ಚುನಾ [ಸುಣ್ಣದ ಕಲ್ಲು], ಕಪ್ಪು ಕಾಗದ ಮತ್ತು ಹಸಿರು ಕಾಗದ ಬೇಕು. ಒಬ್ಬ ವ್ಯಕ್ತಿಯು ತಹಿಯಾ ತಯಾರಿಸುವ ಸಂಪೂರ್ಣ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರೆ, ಅವನು ಒಂದೇ ದಿನದಲ್ಲಿ ಎರಡಕ್ಕಿಂತ ಹೆಚ್ಚು ಪೂರ್ಣಗೊಳಿಸಲು ಸಾಧ್ಯವಿಲ್ಲ. ಆದರೆ ನಮ್ಮಲ್ಲಿ ಅನೇಕ ಜನರು ಕೆಲಸದ ವಿವಿಧ ಭಾಗಗಳನ್ನು ಮಾಡುತ್ತಿದ್ದಾರೆ - ಕೆಲವೊಮ್ಮೆ ಆರರಿಂದ ಏಳು ಜನರವರೆಗೆ ಇರುತ್ತಾರೆ.
ನಾಗೇಶ್ವರ [ನಾಗಸಂಪಿಗೆ] ಮತ್ತು ಸೆಬಾಟಿ [ಸೇವಂತಿಗೆ] ತಹಿಯಾ ಉತ್ಪಾದನೆಯಲ್ಲಿ ಬಳಸಲಾಗುವ ಎರಡು ಪ್ರಮುಖ ಹೂವುಗಳಾಗಿವೆ. ಇತರ ಹೂವುಗಳಿಗೆ ಹೋಲಿಸಿದರೆ, ಸೆಬಾಟಿ ಹೂವುಗಳು ಸುಮಾರು ಎಂಟು ದಿನಗಳವರೆಗೆ ಇರುತ್ತದೆ, ಆದರೆ ನಾಗೇಶ್ವರ ಹೂವುಗಳು ಸುಮಾರು 15 ದಿನಗಳವರೆಗೆ ಇರುತ್ತದೆ - ಅದಕ್ಕಾಗಿಯೇ ಈ ಹೂವುಗಳನ್ನು ತಹಿಯಾ ತಯಾರಿಕೆಯಲ್ಲಿ ಮೊದಲು ಬಳಸಲಾಯಿತು.
ಹೂವಿನ ಮೊಗ್ಗುಗಳು, ವಿಶೇಷವಾಗಿ ಮಲ್ಲಿ [ಮಲ್ಲಿಗೆ], ತಹಿಯಾದ ಕಿರೀಟ ವಿಭಾಗದಲ್ಲಿ ಸ್ಪೋಕ್ ಎಫೆಕ್ಟ್ ರಚಿಸಲು ಬಳಸಲಾಗುತ್ತದೆ. ಮೊಗ್ಗುಗಳು ಅರಳುವ ಮೊದಲು ಸಾಮಾನ್ಯವಾಗಿ ಬಿಳಿಯಾಗಿರುತ್ತವೆ ಆದ್ದರಿಂದ ತಹಿಯಾಗಳನ್ನು ರಚಿಸುವಾಗ ನಾವು ಅದನ್ನು ಬಿಳಿಯಾಗಿರಿಸುತ್ತೇವೆ.
ವಿನ್ಯಾಸವನ್ನು ರೂಪಿಸಲು ಕೆಲವು ಮೊಗ್ಗುಗಳ ತುದಿಯ ಮೇಲೆ ಒತ್ತಬೇಕಾಗುತ್ತದೆ, ಮತ್ತು ಈ ಸೂಕ್ಷ್ಮ ಕೆಲಸವನ್ನು ಸಾಮಾನ್ಯವಾಗಿ ಮಹಿಳೆಯರು ಮಾಡುತ್ತಾರೆ.
ಭಗವಾನ್ ಜಗನ್ನಾಥನನ್ನು ಪೂಜಿಸುವ ಉದ್ದೇಶದಿಂದ ಪುರಿಯಲ್ಲಿ ಶೋಲಪಿತ್ ಕೆಲಸ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ. ಈಗ ಇದನ್ನು ಸ್ಥಳೀಯ ವಿನ್ಯಾಸಗಳನ್ನು ತೋರಿಸುವ ಸಲುವಾಗಿ ಹೋಟೆಲ್ ಹಾಗೂ ಸಮಾರಂಭಗಳಲ್ಲೂ ಬಳಸಲಾಗುತ್ತದೆ.
ನಮ್ಮ ಕೆಲಸಕ್ಕೆ ಯಾವುದೇ ನಿಗದಿತ ಸಮಯವಿಲ್ಲ; ಬೆಳಗ್ಗೆ 6:00 ಗಂಟೆಗೆ, 7:00 ಗಂಟೆಗೆ, ಅಥವಾ 4:00 ಗಂಟೆಗೆ ಎದ್ದೇಳಬಹುದು ಮತ್ತು 1:00 ಗಂಟೆ ಅಥವಾ 2:00 ಗಂಟೆಯವರೆಗೆ ದಿನವಿಡೀ ಕೆಲಸ ಮಾಡಬಹುದು. ಒಬ್ಬ ಕೆಲಸಗಾರನು ಒಂದು ತಹಿಯಾ ತಯಾರಿಸಿದರೆ 1,500 - 2,000 ರೂಪಾಯಿಗಳ ನಡುವೆ ಗಳಿಸಬಹುದು.
1996ರಲ್ಲಿ ಒಡಿಶಾದ ಸಂಬಲ್ಪುರದಲ್ಲಿ ಶರತ್ ಮೊಹಾಂತಿ ಅವರ ಬಳಿ ತರಬೇತಿ ಪಡೆಯುತ್ತಿದ್ದಾಗ ನನಗೆ ಪ್ರಶಸ್ತಿ ಸಿಕ್ಕಿತು.
"ಕಲಾ ಕಾ ರ್ ಜಮಾ ಕಹರಿ ಸಂಪತಿ ನುಹೆ. ಕಲಾ ಹೀ ಎಪಾರಿ ಸಂಪತಿ, ನಿಜೇ ನಿಜಾ ಕಥಾ ಕುಹೆ. [ಕುಶಲಕರ್ಮಿ ಸಂಪತ್ತಲ್ಲ. ಕಲೆಯೇ ಸಂಪತ್ತಿನ ಮೂಲ ಮತ್ತು ಅದು ಸ್ವತಃ ತಾನೇ ಮಾತನಾಡುತ್ತದೆ.]”
"ನನ್ನ ಸಂಪತ್ತು ನನ್ನ 37 ವರ್ಷದ ಕರಕುಶಲತೆ. ನನ್ನ ಕುಟುಂಬವು ಹಸಿದು ಮಲಗದಿರಲು ಇದು ಸಹಾಯ ಮಾಡಿದೆ" ಎಂದು ಉಪೇಂದ್ರ ಕುಮಾರ್ ಪುರೋಹಿತ್ ಹೇಳುತ್ತಾರೆ.
ಅನುವಾದ: ಶಂಕರ. ಎನ್. ಕೆಂಚನೂರು