"ಈ ಎಲ್ಲಾ ಅರ್ಜಿಗಳನ್ನು ಹಿಂದಕ್ಕೆ ತೆಗೆದುಕೊಂಡು ಅವುಗಳನ್ನು ಹರಿದು ಹಾಕಿ" ಎಂದು ಚಮಾರು ಹೇಳಿದರು. "ಅವು ಮಾನ್ಯವಲ್ಲ. ಈ ನ್ಯಾಯಾಲಯವು ಅವುಗಳನ್ನು ಪರಿಗಣಿಸುವುದಿಲ್ಲ."

ಅವರು ನಿಜವಾಗಿಯೂ ಮ್ಯಾಜಿಸ್ಟ್ರೇಟ್ ಆಗಿರುವುದನ್ನು ಆನಂದಿಸಲು ಪ್ರಾರಂಭಿಸಿದ್ದರು.

ಅದು 1942ರ ಆಗಸ್ಟ್ ತಿಂಗಳು ಮತ್ತು ದೇಶವು ದೇಶದಲ್ಲಿ ಆಕ್ರೋಶ ಉಕ್ಕೇರುತ್ತಿತ್ತು. ಇದನ್ನು  ಸಂಬಲ್ಪುರದ ನ್ಯಾಯಾಲಯದಲ್ಲಿಯೂ ್ತ್ತುಕಾಣಬಹುದಿತ್ತು. ಚಮಾರು ಪರಿಡಾ ಮತ್ತು ಅವರ ಸಂಗಾತಿಗಳು ಅದನ್ನು ವಶಕ್ಕೆ ಪಡೆದಿದ್ದರು. ಚಮಾರು ತನ್ನನ್ನು ತಾನು ನ್ಯಾಯಾಧೀಶನೆಂದು ಘೋಷಿಸಿಕೊಂಡಿದ್ದರು. ಜಿತೇಂದ್ರ ಪ್ರಧಾನ್ ಅವರ "ಆರ್ಡರ್ಲಿ". ಪೂರ್ಣಚಂದ್ರ ಪ್ರಧಾನ್ ಅವರನ್ನು  ಪೇಶ್ಕರ್ ಅಥವಾ ನ್ಯಾಯಾಲಯದ ಗುಮಾಸ್ತರನ್ನಾಗಿ ಆಯ್ಕೆ ಮಾಡಿದ್ದರು.

ಕ್ವಿಟ್ ಇಂಡಿಯಾ ಚಳುವಳಿಗೆ ಅವರ ಕೊಡುಗೆಯ ಭಾಗವಾಗಿ ಅವರೆಲ್ಲರೂ ನ್ಯಾಯಾಲಯವನ್ನು ವಶಪಡಿಸಿಕೊಂಡಿದ್ದರು.

"ಈ ಅರ್ಜಿಗಳ ಕುರಿತು ರಾಜ್ ಗೆ ತಿಳಿಸಲಾಗುತ್ತದೆ" ಎಂದು ಚಮಾರೂ ನ್ಯಾಯಾಲಯದಲ್ಲಿ ಅಚ್ಚರಿಯಿಂದ ಕೂಡಿದ್ದ ಸಭೆಯಲ್ಲಿ ಹೇಳಿದರು. "ನಾವು ಸ್ವತಂತ್ರ ಭಾರತದಲ್ಲಿ ವಾಸಿಸುತ್ತಿದ್ದೇವೆ. ಈ ಪ್ರಕರಣಗಳನ್ನು ಪರಿಗಣಿಸಬೇಕೆಂದು ನೀವು ಬಯಸಿದರೆ, ಅವುಗಳನ್ನು ಹಿಂದಕ್ಕೆ ತೆಗೆದುಕೊಳ್ಳಿ. ನಿಮ್ಮ ಅರ್ಜಿಗಳನ್ನು ತಿದ್ದಿರಿ. ಅರ್ಜಿಯನ್ನು ಮಹಾತ್ಮಾ ಗಾಂಧಿ ಅವರನ್ನು ಉದ್ದೇಶಿಸಿ ಬರೆಯಿರಿ ಮತ್ತು ನಾವು ಅವುಗಳ ಬಗ್ಗೆ ಸೂಕ್ತ ಗಮನ ನೀಡುತ್ತೇವೆ."

ಅರವತ್ತು ವರ್ಷಗಳ ನಂತರವೂ, ಚಮಾರು ಈಗಲೂ ಸಂಭ್ರಮದಿಂದ ಆ ಕಥೆಯನ್ನು ಹೇಳುತ್ತಾರೆ. ಅವರಿಗೆ ಈಗ 91 ವರ್ಷ. 81 ವರ್ಷದ ಜಿತೇಂದ್ರ ಅವರ ಪಕ್ಕದಲ್ಲಿ ಕುಳಿತಿದ್ದಾರೆ. ಆದರೆ, ಪೂರ್ಣಚಂದ್ರ ಈಗಿಲ್ಲ. ಅವರು ಈಗಲೂ ಒಡಿಶಾದ ಬರ್ಘರ್ ಜಿಲ್ಲೆಯ ಪಾಣಿಮಾರಾ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟ ಉತ್ತುಂಗದಲ್ಲಿದ್ದಾಗ, ಈ ಗ್ರಾಮವು ಆಶ್ಚರ್ಯಕರ ಸಂಖ್ಯೆಯ ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳನ್ನು ಯುದ್ಧಕ್ಕೆ ಕಳುಹಿಸಿತು. 1942ರಲ್ಲಿಯೇ ಇಲ್ಲಿಂದ 32 ಜನರು ಜೈಲಿಗೆ ಹೋದರು ಎಂದು ದಾಖಲೆಗಳು ಹೇಳುತ್ತವೆ. ಚಾಮಾರು, ಜಿತೇಂದ್ರ ಸೇರಿದಂತೆ ಏಳು ಮಂದಿ ಪ್ರಸ್ತುತ ಜೀವಂತವಾಗಿದ್ದಾರೆ.

ಒಂದು ಹಂತದಲ್ಲಿ, ಇಲ್ಲಿನ ಪ್ರತಿಯೊಂದು ಕುಟುಂಬವೂ ಹೋರಾಟಕ್ಕೆ ಸತ್ಯಾಗ್ರಹಿಯನ್ನು ಕಳುಹಿಸಿತು. ಅದು ಬ್ರಿಟಿಷರನ್ನು ಕೆರಳಿಸಿದ ಗ್ರಾಮವಾಗಿತ್ತು. ಅದರ ಐಕ್ಯತೆ ಅಲುಗಾಡದಂತೆ ಒಟ್ಟಾಗಿನಿಂತಿತ್ತು. ಅದರ ದೃಢನಿಶ್ಚಯವು ದಂತಕತೆಯಂತೆ ಬೆಳೆಯಿತು. ಅಂದು ರಾಜನನ್ನು ಎದುರಿಸುತ್ತಿದ್ದವರೆಂದರೆ ಬಡ, ಅಕ್ಷರರಹಿತ ರೈತರು. ಸಣ್ಣ ಹಿಡುವಳಿದಾರರು ತಮ್ಮ ದೈನಂದಿನ ಗುರಿಗಳನ್ನು ಪೂರೈಸಲು ಹೆಣಗಾಡುತ್ತಿದ್ದವರು. ಹೆಚ್ಚಿನವರ ಪರಿಸ್ಥಿತಿ ಇಂದಿಗೂ ಹಾಗೆಯೇ ಉಳಿದಿವೆ.

ಆದರೆ, ಇತಿಹಾಸ ಪುಸ್ತಕಗಳಲ್ಲಿ ಅವರನ್ನು ಎಲ್ಲಿಯೂ ಉಲ್ಲೇಖಿಸಲಾಗಿಲ್ಲ ಎಂಬುದು ಬಹಳ ವಿಚಿತ್ರ. ಅದರರ್ಥ, ಒಡಿಶಾ ಅವರನ್ನು ಮರೆತಿದೆಯೆಂದಲ್ಲ. ಬಾರ್‌ಗಢದಲ್ಲಿ ಇದು ಈಗಲೂ ಸ್ವಾತಂತ್ರ್ಯ ಹೋರಾಟಗಾರರ ಗ್ರಾಮವಾಗಿದೆ. ಇಲ್ಲಿ ಈ ಹೋರಾಟದಿಂದ ವೈಯಕ್ತಿಕ ಲಾಭ ಪಡೆದವರು ಒಬ್ಬರೂ ಇಲ್ಲ. ಮತ್ತು ಅವರಲ್ಲಿ ಯಾರಿಗೂ ಯಾವುದೇ ಪ್ರಶಸ್ತಿ, ಸ್ಥಾನ ಅಥವಾ ಉದ್ಯೋಗ ದೊರೆತಿಲ್ಲ ಎಂಬುದು ಖಚಿತ. ಅವರಿಗೆ ದೊರೆತಿದ್ದೇನಿದ್ದರೂ ವೈಯಕ್ತಿಕ ಕಷ್ಟ ಕಾರ್ಪಣ್ಯಗಳು. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಇವರು.

ಅವರು ಸ್ವಾತಂತ್ರ್ಯದ ಕಾಲಾಳುಗಳು. ಅದರಲ್ಲೂ ಬರಿಗಾಲಿನ ಕಾಲಾಳುಗಳು, ಏಕೆಂದರೆ ಅವರಲ್ಲಿ ಯಾರ ಬಳಿಯೂ ಶೂಗಳನ್ನು ಖರೀದಿಸಿ ಧರಿಸಲು ಸಾಕಷ್ಟು ಹಣವಿರಲಿಲ್ಲ.

Seated left to right: Dayanidhi Nayak, 81, Chamuru Parida, 91, Jitendra Pradhan, 81, and (behind) Madan Bhoi, 80, four of seven freedom fighters of Panimara village still alive
PHOTO • P. Sainath

ಎಡದಿಂದ ಬಲಕ್ಕೆ ಕುಳಿತವರು: ದಯಾನಿಧಿ ನಾಯಕ್, 81, ಚಾಮರೂ ಪರಿಡಾ, 91, ಜಿತೇಂದ್ರ ಪ್ರಧಾನ್, 81, ಮತ್ತು (ಹಿಂದೆ) ಮದನ್ ಭೋಯ್, 80, ಪಾನಿಮಾರ ಗ್ರಾಮದ ಏಳು ಸ್ವಾತಂತ್ರ್ಯ ಹೋರಾಟಗಾರರಲ್ಲಿ ನಾಲ್ವರು ಇನ್ನೂ ಜೀವಂತವಾಗಿದ್ದಾರೆ

"ನ್ಯಾಯಾಲಯದಲ್ಲಿದ್ದ ಪೊಲೀಸರು ಆಘಾತಕ್ಕೊಳಗಾಗಿದ್ದರು" ಎಂದು ಚಾಮರು ನಗುವಿನೊಂದಿಗೆ ಹೇಳುತ್ತಾರೆ. ''ಅವರಿಗೆ ಏನು ಮಾಡಬೇಕೆಂದು ತಿಳಿದಿರಲಿಲ್ಲ. ಅವರು ನಮ್ಮನ್ನು ಬಂಧಿಸಲು ಪ್ರಯತ್ನಿಸಿದಾಗ, 'ನಾನು ಮ್ಯಾಜಿಸ್ಟ್ರೇಟ್. ನೀವು ನಮ್ಮ ಆದೇಶಗಳನ್ನು ಪಾಲಿಸಬೇಕು. ನೀವು ಭಾರತೀಯರಾಗಿದ್ದರೆ, ನನ್ನ ಮಾತನ್ನು ಕೇಳಿ. ಮತ್ತು ನೀವು ಇಂಗ್ಲಿಷ್ ಆಗಿದ್ದಲ್ಲಿ, ನಿಮ್ಮ ದೇಶಕ್ಕೆ ಹಿಂತಿರುಗಿ." ಎಂದೆ.

ನಂತರ ಪೊಲೀಸರು ನಿಜವಾದ ಮ್ಯಾಜಿಸ್ಟ್ರೇಟ್ ಬಳಿ ಹೋದರು, ಅವರು ಆ ದಿನ ಅವರ ನಿವಾಸದಲ್ಲಿದ್ದರು. "ನಮ್ಮ ಬಂಧನ ಆದೇಶಕ್ಕೆ ಸಹಿ ಹಾಕಲು ಮ್ಯಾಜಿಸ್ಟ್ರೇಟ್ ನಿರಾಕರಿಸಿದರು ಏಕೆಂದರೆ ಪೊಲೀಸರು ವಾರಂಟ್‌ನಲ್ಲಿ ಹೆಸರುಗಳನ್ನು ಬರೆದಿರಲಿಲ್ಲ" ಎಂದು ಜಿತೇಂದ್ರ ಪ್ರಧಾನ್ ಹೇಳುತ್ತಾರೆ. "ಪೊಲೀಸರು ಅಲ್ಲಿಂದ ಹಿಂತಿರುಗಿ ನಮ್ಮ ಹೆಸರುಗಳನ್ನು ಕೇಳಿದರು. ನಾವು ಯಾರೆಂದು ಅವರಿಗೆ ಹೇಳಲು ನಾವು ನಿರಾಕರಿಸಿದೆವು.

ದಿಗ್ಭ್ರಮೆಗೊಂಡ ಪೊಲೀಸ್ ತುಕಡಿ ಸಂಬಲ್ಪುರದ ಕಲೆಕ್ಟರ್ ಬಳಿ ಹೋಯಿತು. ಅವರ ಮುಖದಲ್ಲಿನ ದಣಿವನ್ನು ನೋಡಿ, 'ಕೆಲವು ಜನರ ಹೆಸರುಗಳನ್ನು ಬರೆಯಿರಿ. ಈ ಜನರ ಹೆಸರುಗಳನ್ನು 'ಎ', 'ಬಿ' ಮತ್ತು 'ಸಿ' ಎಂದು ಬರೆಯಿರಿ ಮತ್ತು ಅದಕ್ಕೆ ಅನುಗುಣವಾಗಿ ಫಾರ್ಮ್ ಅನ್ನು ಭರ್ತಿ ಮಾಡಿ ಎಂದರು. ಪೊಲೀಸರು ಅದನ್ನೇ ಮಾಡಿದರು, ಮತ್ತು ಇದರಿಂದಾಗಿ ನಾವು ಎ, ಬಿ ಮತ್ತು ಸಿ ಅಪರಾಧಿಗಳಾಗಿ ಬಂಧಿಸಲ್ಪಟ್ಟೆವು”ಎಂದು ಚಮಾರೂ ಹೇಳುತ್ತಾರೆ.

ಆ ಇಡೀ ದಿನ ಪೊಲೀಸರಿಗೆ ಸಾಕು ಸಾಕಾಗಿ ಹೋಗಿತ್ತು. ಇದಾದ ನಂತರ ಚಮಾರೂ ನಗುತ್ತಾ, “ಜೈಲಿನಲ್ಲಿರುವ ವಾರ್ಡನ್ ನಮ್ಮನ್ನು ಕರೆದುಕೊಂಡು ಹೋಗಲು ನಿರಾಕರಿಸಿದರು. ಪೊಲೀಸರು ಮತ್ತು ಆತನ ನಡುವೆ ವಾಗ್ವಾದ ನಡೆಯಿತು. ವಾರ್ಡನ್ ಅವರಿಗೆ: 'ನೀವು ನನ್ನನ್ನು ಕತ್ತೆ ಎಂದುಕೊಂಡಿದ್ದೀರಾ? ಇವರೆಲ್ಲ ನಾಳೆ ಓಡಿಹೋದರೆ ಅಥವಾ ಕಣ್ಮರೆಯಾದರೆ? ಎ, ಬಿ ಮತ್ತು ಸಿ ಓಡಿಹೋದರೆಂದು ವರದಿಯಲ್ಲಿ ನಾನು ಬರೆಯಬೇಕೇ? ಮೂರ್ಖ ಮಾತ್ರ ಇದನ್ನು ಮಾಡಬಹುದು '. ಆತ ತನ್ನ ಪಟ್ಟು ಸಡಿಲಿಸಲಿಲ್ಲ.

ವಾಗ್ವಾದ ಹಲವಾರು ಗಂಟೆಗಳ ಕಾಲ ಮುಂದುವರೆಯಿತು, ನಂತರ  ಪೊಲೀಸರು ಆತನನ್ನು ಜೈಲಿನ ಭದ್ರತೆಗೆ ಒಪ್ಪಿಸಿದರು. "ನಾವು ನ್ಯಾಯಾಲಯದಲ್ಲಿ ಹಾಜರಾದಾಗ ಈ ನಾಟಕ ಉತ್ತುಂಗಕ್ಕೇರಿತು" ಎಂದು ಜಿತೇಂದ್ರ ಹೇಳುತ್ತಾರೆ. "ಮುಜುಗರಕ್ಕೊಳಗಾದ ಹಾಗೆಯೇ ಆರ್ಡರ್ಲಿ ಕೂಗಬೇಕಾಯಿತು: ಎ, ಹಾಜಿರ್ ಹೋ! ಬಿ, ಹಾಜಿರ್ ಹೋ! ಸಿ, ಹಾಜಿರ್ ಹೋ! [ಎ, ಬಿ ಮತ್ತು ಸಿ, ನೀವು ಹಾಜರಾಗಿ]'. ಮತ್ತು ನ್ಯಾಯಾಲಯವು ನಂತರ ನಮ್ಮೊಂದಿಗೆ ವ್ಯವಹರಿಸಿತು."

ವ್ಯವಸ್ಥೆಯು ತನಗಾದ ಮುಜುಗರಕ್ಕೆ ಸೇಡು ತೀರಿಸಿಕೊಂಡಿತು. ಅವರಿಗೆ ಆರು ತಿಂಗಳ ಕಠಿಣ ಸೆರೆವಾಸವನ್ನು ನೀಡಲಾಯಿತು ಮತ್ತು ಅಪರಾಧಿಗಳಾಗಿ ಜೈಲಿಗೆ ಕಳುಹಿಸಲಾಯಿತು. "ಸಾಮಾನ್ಯವಾಗಿ, ಅವರು ತಮ್ಮ ರಾಜಕೀಯ ಕೈದಿಗಳನ್ನು ಹೊಂದಿರುವ ಸ್ಥಳಗಳಿಗೆ ನಮ್ಮನ್ನು ಕಳುಹಿಸುತ್ತಿದ್ದರು" ಎಂದು ಚಮಾರೂ ಹೇಳುತ್ತಾರೆ. "ಆದರೆ ಇದು ಪ್ರತಿಭಟನೆಯ ಉತ್ತುಂಗವಾಗಿತ್ತು. ಮತ್ತು ಅದೇನೇ ಇದ್ದರೂ, ಪೊಲೀಸರು ಯಾವಾಗಲೂ ಕ್ರೂರ ಮತ್ತು ಸೇಡಿನ ಮನೋಭಾವವನ್ನು ಹೊಂದಿದ್ದರು.

"ಆ ದಿನಗಳಲ್ಲಿ ಮಹಾನದಿಗೆ ಯಾವುದೇ ಸೇತುವೆಯಿರಲಿಲ್ಲ. ಅವರು ನಮ್ಮನ್ನು ದೋಣಿಯಲ್ಲಿ ಕರೆದೊಯ್ಯಬೇಕಾಗಿತ್ತು. ನಮ್ಮ ಸ್ವಂತ ಇಚ್ಛಾಶಕ್ತಿಯಿಂದ ನಮ್ಮನ್ನು ಬಂಧಿಸಲಾಗಿದೆ, ಆದ್ದರಿಂದ ನಮಗೆ ಓಡಿಹೋಗುವ ಉದ್ದೇಶವಿಲ್ಲ ಎಂದು ಅವರಿಗೆ ತಿಳಿದಿತ್ತು. ಇದರ ಹೊರತಾಗಿಯೂ, ಅವರು ನಮ್ಮ ಕೈಗಳನ್ನು ಕಟ್ಟಿದರು, ನಂತರ ನಮ್ಮೆಲ್ಲರನ್ನೂ ಒಟ್ಟಿಗೆ ಕಟ್ಟಿದರು. ದೋಣಿ ಮುಳುಗಿದ್ದರೆ - ಮತ್ತು ಇದು ಸಾಮಾನ್ಯ ಘಟನೆಯಾಗಿದ್ದರೆ - ನಮಗೆ ಬದುಕುಳಿಯುವ ಅವಕಾಶವಿಲ್ಲ. ಆ ಪರಿಸ್ಥಿತಿಯಲ್ಲಿ ನಾವೆಲ್ಲರೂ ಸಾಯುತ್ತಿದ್ದೆವು.

"ಪೊಲೀಸರು ನಮ್ಮ ಕುಟುಂಬ ಸದಸ್ಯರಿಗೆ ಕಿರುಕುಳ ನೀಡಲು ಪ್ರಾರಂಭಿಸಿದರು. ಒಮ್ಮೆ ನಾನು ಜೈಲಿನಲ್ಲಿದ್ದೆ, ಮತ್ತು ನನಗೂ 30 ರೂಪಾಯಿ ದಂಡ ವಿಧಿಸಲಾಯಿತು (ವಿ.ಸೂ: ಆ ಸಮಯದಲ್ಲಿ ಅದು ಒಂದು ದೊಡ್ಡ ಮೊತ್ತವಾಗಿತ್ತು. ಆ ದಿನಗಳಲ್ಲಿ ದಿನವಿಡೀ ದುಡಿದರೆ ಎರಡು ಆಣೆ ದೊರೆಯುತ್ತಿತ್ತು. ) ಅವರು ನನ್ನ ತಾಯಿಯ ಬಳಿ ದಂಡ ವಸೂಲಿಗೆ ಹೋಗಿದ್ದರು. ಅವರು ತಾಯಿಯ ಬಳಿ ಅವನ ದಂಡವನ್ನು ಕಟ್ಟಿ ಇಲ್ಲವಾದರೆ ಇನ್ನಷ್ಟು ಕಠಿಣ ಶಿಕ್ಷೆ ನೀಡಲಾಗುವುದು ಎಂದು ಹೆದರಿಸಿದ್ದರು.

The stambh or pillar honouring the 32 ‘officially recorded’ freedom fighters of Panimara
PHOTO • P. Sainath

ಪಾಣಿಮಾರದ 23 'ಅಧಿಕೃತವಾಗಿ ದಾಖಲಾದ' ಸ್ವಾತಂತ್ರ್ಯ ಹೋರಾಟಗಾರರ ಗೌರವಾರ್ಥ ನಿಲ್ಲಿಸಲಾಗಿರುವ ಸ್ತಂಭ

"ನನ್ನ ತಾಯಿ ಹೇಳಿದರು: 'ಅವನು ನನ್ನ ಮಗನಲ್ಲ, ಅವನು ಈ ಹಳ್ಳಿಯ ಮಗ. ಅವನು ನನಗಿಂತ ಹಳ್ಳಿಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾನೆ. ಆದರೂ ಅವರು ಕೇಳಲಿಲ್ಲ ಮತ್ತು ಅವರ ಮೇಲೆ ಒತ್ತಡ ಹೇರುತ್ತಲೇ ಇದ್ದರು. ಆಗ ಅವರು ಹೇಳಿದರು: 'ಈ ಹಳ್ಳಿಯ ಯುವಕರು ಎಲ್ಲರೂ ನನ್ನ ಮಕ್ಕಳು. ಜೈಲಿನಲ್ಲಿರುವ ಎಲ್ಲರಿಗೂ ದಂಡವನ್ನು ನಾನು ಪಾವತಿಸಬೇಕೇ?'''

ಪೊಲೀಸರು ಅಸಮಾಧಾನಗೊಂಡರು. "ಅವರು ಹೇಳಿದರು, 'ಸರಿ, ನಾವು ವಶ ಪಡಿಸಿಕೊಂಡಿದ್ದು ಎಂದು ತೋರಿಸಬಹುದಾದ ಯಾವುದನ್ನಾದರೂ ನಮಗೆ ನೀಡಿ. ಕುಡಗೋಲು ಅಥವಾ ಏನಾದರೂ ಸರಿ'. ಅವರು ಉತ್ತರಿಸಿದರು: 'ನಮ್ಮ ಬಳಿ ಕುಡಗೋಲು ಇಲ್ಲ'. ನಂತರ ಅವರು ಹಸುವಿನ ಗಂಜಲವನ್ನು ಸಂಗ್ರಹಿಸಲು ಪ್ರಾರಂಭಿಸಿ ಅವರು ನಿಂತಿರುವ ಸ್ಥಳವನ್ನು ಶುದ್ಧೀಕರಿಸಲು ಬಯಸಿದ್ದಾಗಿ ಹೇಳಿದರು. ದಯವಿಟ್ಟು ಇಲ್ಲಿಂದ ಹೊರಡುತ್ತೀರಾ ಎಂದು ಕೇಳಿದರು?" ಕೊನೆಗೆ ಅವರು ಹೊರಟುಹೋದರು.

* * *

ನ್ಯಾಯಾಲಯದ ಕೋಣೆಯಲ್ಲಿ ಈ ತಮಾಷೆ ನಡೆಯುತ್ತಿರುವಾಗ, ಪಾಣಿಮಾರದ ಸತ್ಯಾಗ್ರಹಿಗಳ ಮತ್ತೊಂದು ದಳವು ಅವರ ಕೆಲಸದಲ್ಲಿ ನಿರತವಾಗಿತ್ತು. "ನಮ್ಮ ಕೆಲಸವೆಂದರೆ ಸಂಬಲ್ಪುರ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳುವುದು ಮತ್ತು ಇಂಗ್ಲಿಷ್ ಸರಕುಗಳನ್ನು ನಾಶಪಡಿಸುವುದು" ಎಂದು ದಯಾನಿಧಿ ನಾಯಕ್ ಹೇಳುತ್ತಾರೆ. ಅವರು ಚಾಮರೂ ಅವರಿಗೆ ಸೋದರಳಿಯನಾಗಬೇಕು. "ನಾನು ಅವರನ್ನು ನಾಯಕರನ್ನಾಗಿ ನೋಡುತ್ತೇನೆ. ನಾನು ಹುಟ್ಟಿದ ಸಮಯದಲ್ಲಿ ನನ್ನ ತಾಯಿ ತೀರಿಕೊಂಡಿದ್ದರು, ನಂತರ ಚಾಮರೂ ನನ್ನನ್ನು ಬೆಳೆಸಿದರು."

ದಯಾನಿಧಿಯವರು ಬ್ರಿಟಿಷರೆದುರು ಮೊದಲ ಬಾರಿಗೆ ಮುಖಾಮುಖಿಯಾದಾಗ, ಆ ಸಮಯದಲ್ಲಿ ಅವರಿಗೆ ಕೇವಲ 11 ವರ್ಷ. 1942ರ ಹೊತ್ತಿಗೆ ಅವರು 21 ವರ್ಷ ವಯಸ್ಸಿನವರಾಗಿದ್ದರು, ಮತ್ತು ಆ ಹೊತ್ತಿಗೆ ಅವರು ನುರಿತ ಹೋರಾಟಗಾರರಾಗಿದ್ದರು. ಈಗ 81ನೇ ವಯಸ್ಸಿನಲ್ಲಿಯೂ ಅವರು ಪ್ರತಿಯೊಂದು ಘಟನೆಯನ್ನು ಚೆನ್ನಾಗಿ ನೆನಪಿಸಿಕೊಳ್ಳುತ್ತಾರೆ.

ದೇಶಾದ್ಯಂತ ಬ್ರಿಟಿಷರ ವಿರುದ್ಧ ತೀವ್ರ ದ್ವೇಷದ ವಾತಾವರಣವಿತ್ತು. ನಮ್ಮನ್ನು ಬೆದರಿಸುವ ಬ್ರಿಟಿಷರ ಪ್ರಯತ್ನವು ವಾತಾವರಣವನ್ನು ಇನ್ನಷ್ಟು ಉದ್ರಿಕ್ತಗೊಳಿಸಿತು. ಅವರು ನಮ್ಮನ್ನು ಹೆದರಿಸಲು ತಮ್ಮ ಶಸ್ತ್ರಸಜ್ಜಿತ ಪೋಲೀಸರಿಗೆ ಹಲವಾರು ಬಾರಿ ಗ್ರಾಮವನ್ನು ಮುತ್ತಿಗೆ ಹಾಕಲು ಮತ್ತು ಧ್ವಜ ಮೆರವಣಿಗೆಗಳನ್ನು ನಡೆಸಲು ಆದೇಶಿಸಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ.

ಬ್ರಿಟಿಷರ ವಿರುದ್ಧದ ಆಕ್ರೋಷವು ಪ್ರತಿಯೊಂದು ವಿಭಾಗದಲ್ಲೂ, ಭೂಹೀನ ಕಾರ್ಮಿಕರಿಂದ ಹಿಡಿದು ಶಾಲಾ ಶಿಕ್ಷಕರವರೆಗೆ ಇತ್ತು. ಶಿಕ್ಷಕರು ಈ ಚಳವಳಿಯೊಂದಿಗೆ ಇದ್ದರು. ಅವರು ರಾಜೀನಾಮೆ ನೀಡಲಿಲ್ಲ, ಬದಲಿಗೆ ಕೆಲಸ ನಿಲ್ಲಿಸಿದರು. ಮತ್ತು ಅವರು ಅದಕ್ಕೆ ದೊಡ್ಡ ಕಾರಣವನ್ನೂ ಹೊಂದಿದ್ದರು. ಅವರು ಹೇಳುತ್ತಿದ್ದರು: 'ನಮ್ಮ ರಾಜೀನಾಮೆಯನ್ನು ನಾವು ಅವರಿಗೆ ಏಕೆ ನೀಡಬೇಕು? ನಾವು ಬ್ರಿಟಿಷರನ್ನು ಪರಿಗಣಿಸುವುದಿಲ್ಲ. ಅದಕ್ಕಾಗಿಯೇ ಅವರು ರಾಜೀನಾಮೆ ನೀಡಲಿಲ್ಲ ಮತ್ತು ಕೆಲಸವನ್ನೂ ಮಾಡಲಿಲ್ಲ.

"ಆ ದಿನಗಳಲ್ಲಿ ನಮ್ಮ ಗ್ರಾಮವನ್ನು ಹಲವು ವಿಧಗಳಲ್ಲಿ ಸಂಪರ್ಕರಹಿತವಾಗಿಸಲಾಯಿತು. ಬಂಧನಗಳು ಮತ್ತು ದಾಳಿಗಳಿಂದಾಗಿ, ಕಾಂಗ್ರೆಸ್ ಕಾರ್ಯಕರ್ತರು ಕೆಲವು ದಿನಗಳವರೆಗೆ ಬರಲಿಲ್ಲ. ಇದರರ್ಥ ನಾವು ಹೊರಗಿನ ಪ್ರಪಂಚದ ಸುದ್ದಿಗಳನ್ನು ಪಡೆಯಲು ಸಾಧ್ಯವಿಲ್ಲ. ಆಗಸ್ಟ್ 1942ರ ಇಡೀ ವರ್ಷ ಇದೇ ರೀತಿ ಮುಂದುವರೆಯಿತು. ”ಇದರ ನಂತರ ದೇಶದಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯಲು  ಗ್ರಾಮವು ಕೆಲವು ಜನರನ್ನು ಕಳುಹಿಸಿತು.“ ಇದರೊಂದಿಗೆ ಚಳವಳಿಯ ಈ ಹಂತವು ಈ ರೀತಿಯಾಗಿ ಪ್ರಾರಂಭವಾಯಿತು. ನಾನು ಎರಡನೇ ಗುಂಪಿನೊಂದಿಗೆ ಇದ್ದೆ.

"ನಮ್ಮ ಗುಂಪಿನಲ್ಲಿದ್ದ ಎಲ್ಲಾ ಐದು ಹುಡುಗರು ತುಂಬಾ ಚಿಕ್ಕವರಾಗಿದ್ದರು. ಮೊದಲು ನಾವು ಸಂಬಲ್ಪುರದ ಕಾಂಗ್ರೆಸ್ಸಿಗ ಫಕೀರಾ ಬೆಹೆರಾ ಅವರ ಮನೆಗೆ ಹೋದೆವು. ನಮಗೆ ಹೂಗಳು ಮತ್ತು 'ಡು ಆರ್ ಡೈ' ಎಂದು ಬರೆದಿದ್ದ ಕೈ ಪಟ್ಟಿ ನೀಡಲಾಯಿತು. ನಾವು ಸಾಕಷ್ಟು ಶಾಲಾ ಮಕ್ಕಳು ಮತ್ತು ಇತರರೊಂದಿಗೆ ಮಾರುಕಟ್ಟೆಗೆ ಮೆರವಣಿಗೆ ನಡೆಸಿದೆವು.

"ಮಾರುಕಟ್ಟೆಯಲ್ಲಿ, ನಾವು ಕ್ವಿಟ್ ಇಂಡಿಯಾ ಕರೆಯನ್ನು ಓದಿದೆವು. ನಾವು ಕರೆಯನ್ನು ಓದಿದ ಕ್ಷಣವೇ 30ಕ್ಕೂ ಹೆಚ್ಚು ಶಸ್ತ್ರಸಜ್ಜಿತ ಪೊಲೀಸರು ನಮ್ಮನ್ನು ಬಂಧಿಸಿದರು.

"ಇಲ್ಲಿಯೂ ಗೊಂದಲವಿತ್ತು ಮತ್ತು ಅವರು ತಕ್ಷಣವೇ ನಮ್ಮಲ್ಲಿ ಕೆಲವರನ್ನು ಹೋಗಲು ಬಿಟ್ಟರು."

ಯಾಕೆ?

At the temple, the last living fighters in Panimara
PHOTO • P. Sainath

ದೇವಾಲಯದಲ್ಲಿ, ಪಾಣಿಮಾರದ ಕೊನೆಯ ಜೀವಂತ ಹೋರಾಟಗಾರರು

"ಏಕೆಂದರೆ, 11 ವರ್ಷದ ಹುಡುಗರನ್ನು ಬಂಧಿಸಿ ನಂತರ ಕೈ ಕಟ್ಟಿಹಾಕುವುದು ಅವರಿಗೆ ಸಮಸ್ಯೆಗಳನ್ನು ಸೃಷ್ಟಿಸುತ್ತಿತ್ತು. ಅದಕ್ಕಾಗಿಯೇ, ನಮ್ಮಲ್ಲಿ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗರನ್ನು ಬಿಟ್ಟುಬಿಡಲಾಯಿತು. ಆದರೆ, ಇಬ್ಬರು ಕಿರಿಯ ಹುಡುಗರಾದ ಜೋಗೇಶ್ವರ ಜೆನಾ ಮತ್ತು ಇಂದ್ರಜಿತ್ ಪ್ರಧಾನ್ ಮರಳಿ ಹೋಗಲು ನಿರಾಕರಿಸಿದರು. ಅವರು ಗುಂಪಿನೊಂದಿಗೆ ಇರಲು ಬಯಸಿದ್ದರು, ಆದರೆ ನಾವು ನಿರಾಕರಿಸಿ ಅವರನ್ನು ವಾಪಸ್ ಕಳುಹಿಸಿದೆವು. ಉಳಿದವರನ್ನು ಬಾರ್‌ಗಢದ ಜೈಲಿಗೆ ಕಳುಹಿಸಲಾಯಿತು. ದಿಬ್ಯಾ ಸುಂದರ್ ಸಾಹು, ಪ್ರಭಾಕರ್ ಸಾಹು ಮತ್ತು ನನ್ನನ್ನು 9 ತಿಂಗಳು ಜೈಲಿಗೆ ಕಳುಹಿಸಲಾಯಿತು.

* * *

80 ವರ್ಷದ ಮದನ್ ಭೋಯ್ ಈಗಲೂ ಉತ್ತಮ ಧ್ವನಿಯಲ್ಲಿ ಹಾಡಬಲ್ಲರು. "ಇದು ನಮ್ಮ ಗ್ರಾಮದ ಮೂರನೇ ತುಕಡಿಯವರು ಸಾಂಬಲ್ಪುರದ ಕಾಂಗ್ರೆಸ್ ಕಚೇರಿಗೆ ಹೋಗುವಾಗ ಹಾಡಿದ ಹಾಡು." ದಂಗೆಕೋರ ಚಟುವಟಿಕೆಗಳ ಆರೋಪದ ಮೇಲೆ ಈ ಕಚೇರಿಯನ್ನು ಬ್ರಿಟಿಷರು ಮೊಹರು ಮಾಡಿದರು.

ಮೂರನೆಯ ತುಕಡಿಯ ಗುರಿ ಹೀಗಿತ್ತು: ಮೊಹರು ಹಾಕಿದ ಕಾಂಗ್ರೆಸ್ ಕಚೇರಿಯನ್ನು ಸ್ವತಂತ್ರಗೊಳಿಸುವುದು.

"ನಾನು ಚಿಕ್ಕವನಿದ್ದಾಗ ನನ್ನ ಪೋಷಕರು ಜಗತ್ತನ್ನು ತೊರೆದರು. ನನ್ನನ್ನು ನೋಡಿಕೊಳ್ಳುತ್ತಿದ್ದ ಚಿಕ್ಕಪ್ಪ ಮತ್ತು ಚಿಕ್ಕಮ್ಮ ನನ್ನ ಬಗ್ಗೆ ಹೆಚ್ಚು ಕಾಳಜಿ ವಹಿಸಲಿಲ್ಲ. ನಾನು ಕಾಂಗ್ರೆಸ್ ಸಭೆಗಳಿಗೆ ಹೋದಾಗ ಅವರು ಗಾಬರಿಗೊಂಡರು. ನಾನು ಸತ್ಯಾಗ್ರಹಿಗಳೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸಿದಾಗ, ಅವರು ನನ್ನನ್ನು ಕೋಣೆಗೆ ನೂಕಿ ಬೀಗ ಹಾಕಿದರು. ನಾನು ಇನ್ನು ಹಾಗೆ ಮಾಡುವುದಿಲ್ಲ, ನಾನು ಸುಧಾರಿಸುತ್ತೇನೆ ಎಂದು ಸುಳ್ಳು ಹೇಳಿದೆ. ಆಗ, ಅವರು ನನ್ನನ್ನು ಮುಕ್ತಗೊಳಿಸಿದರು. ನಾನು ಕೆಲಸಕ್ಕೆ ಹೋಗುತ್ತಿದ್ದೇನೆ ಎಂಬಂತೆ ಗುದ್ದಲಿ, ಬುಟ್ಟಿ ಮತ್ತು ಇತರ ಪರಿಕರಗಳೊಂದಿಗೆ ಜಮೀನಿಗೆ ಹೋದೆ. ಜಮೀನಿನಿಂದಲೇ ಬಾರ್‌ಗಢದ ಸತ್ಯಾಗ್ರಹದ ಕಡೆಗೆ ಹೋದೆ. ಅಲ್ಲಿ ನನ್ನ ಗ್ರಾಮದಿಂದ ಇನ್ನೂ 13 ಜನರು ಸಂಬಲ್ಪುರದ ಕಡೆಗೆ ಮೆರವಣಿಗೆ ಮಾಡಲು ಸಿದ್ಧರಾಗಿ ಕುಳಿತಿದ್ದರು. ಖಾದಿಯನ್ನು ಮರೆತುಬಿಡಿ, ಆ ಸಮಯದಲ್ಲಿ ನಾನು ಧರಿಸಲು ಶರ್ಟ್ ಕೂಡ ಇರಲಿಲ್ಲ. ಗಾಂಧೀಜಿಯನ್ನು ಆಗಸ್ಟ್ 9ರಂದೇ ಬಂಧಿಸಲಾಗಿತ್ತು, ಆದರೆ ಈ ಸುದ್ದಿ ಹಲವಾರು ದಿನಗಳ ನಂತರ ನಮ್ಮ ಗ್ರಾಮಕ್ಕೆ ತಲುಪಿತು. ಅದೂ ಮೂರು ಅಥವಾ ನಾಲ್ಕು ಪ್ರತಿಭಟನಾಕಾರರನ್ನು ಹಳ್ಳಿಯಿಂದ ಸಂಬಲ್ಪುರಕ್ಕೆ ಕಳುಹಿಸುವ ಯೋಜನೆ ರೂಪಿಸುತ್ತಿದ್ದಾಗ.

"ಆಗಸ್ಟ್ 22ರಂದು ಮೊದಲ ಗುಂಪನ್ನು ಬಂಧಿಸಲಾಯಿತು. ಆಗಸ್ಟ್ 23ರಂದು ನಮ್ಮನ್ನು ಬಂಧಿಸಲಾಯಿತು. ಚಮಾರೂ ಮತ್ತು ಅವರ ಸ್ನೇಹಿತರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದಾಗ ಎದುರಿಸಿದ ತಮಾಷೆಗೆ ಬೆದರಿ ಪೊಲೀಸರು ಪೊಲೀಸರು ನಮ್ಮನ್ನು ನ್ಯಾಯಾಲಯಕ್ಕೆ ಕರೆದೊಯ್ಯಲಿಲ್ಲ. ಕಾಂಗ್ರೆಸ್ ಕಚೇರಿಗೆ ಹೋಗಲು ನಮಗೆ ಎಂದಿಗೂ ಅವಕಾಶವಿರಲಿಲ್ಲ. ನಮ್ಮನ್ನು ನೇರವಾಗಿ ಜೈಲಿಗೆ ಕಳುಹಿಸಲಾಯಿತು."

ಪಾಣಿಮಾರ ಈಗ ಕುಖ್ಯಾತವಾಗಿತ್ತು. "ಈಗ ನಮ್ಮೂರನ್ನು ಬದ್ಮಾಶ್ ಗಾಂವ್ (ರಾಕ್ಷಸ ಗ್ರಾಮ) ಎಂದು ವ್ಯಾಪಕವಾಗಿ ಕರೆಯಲ್ಪಡುತ್ತಿತ್ತು" ಎಂದು ಭೋಯ್ ಒಂದಷ್ಟು ಹೆಮ್ಮೆಯಿಂದ ಹೇಳುತ್ತಾರೆ.

ಫೋಟೊಗಳು: ಪಿ. ಸಾಯಿನಾಥ್

ಈ ಲೇಖನವು ಮೂಲತಃ ಅಕ್ಟೋಬರ್ 20, 2002ರಂದು ದಿ ಹಿಂದೂ ಸಂಡೇ ಮ್ಯಾಗಜಿನ್ನಲ್ಲಿ ಕಾಣಿಸಿಕೊಂಡಿತು.

ಸರಣಿಯ ಇನ್ನಷ್ಟು ಬರಹಗಳು ಇಲ್ಲಿವೆ:

‘ಸಾಲಿಹಾನ್’ ಸರಕಾರದ ಮೇಲೆ ಎರಗಿದಾಗ

ಪಾನಿಮಾರದಲ್ಲಿನ ಸ್ವಾತಂತ್ರ್ಯ ಹೋರಾಟದ ಕಾಲಾಳುಗಳು - 2

ಲಕ್ಷ್ಮಿ ಪಾಂಡಾರ ಕೊನೆಯ ಯುದ್ಧ

ಒಂಬತ್ತು ದಶಕಗಳ ಅಹಿಂಸೆ

ಶೇರ್‌ಪುರ: ದೊಡ್ಡ ತ್ಯಾಗ, ಸಣ್ಣ ಸ್ಮರಣೆ

ಗೋದಾವರಿ: ಮತ್ತು ಪೊಲೀಸರು ಈಗಲೂ ಆಕ್ರಮಣಕ್ಕಾಗಿ ಕಾಯುತ್ತಿದ್ದಾರೆ

ಸೋನಾಖಾನ್:‌ ವೀರ್‌ ನಾರಯಣ್‌ ಎರಡೆರಡು ಬಾರಿ ಮಡಿದಾಗ

ಕಲ್ಲಿಯಶ್ಶೆರಿ: ಸುಮುಕನ್ ಹುಡುಕಾಟದಲ್ಲಿ

ಕಲ್ಲಿಯಶ್ಶೆರಿ: 50 ವರ್ಷಗಳ ನಂತರವೂ ಮುಂದುವರೆದಿರುವ ಹೋರಾಟ


ಅನುವಾದ: ಶಂಕರ ಎನ್. ಕೆಂಚನೂರು

پی سائی ناتھ ’پیپلز آرکائیو آف رورل انڈیا‘ کے بانی ایڈیٹر ہیں۔ وہ کئی دہائیوں تک دیہی ہندوستان کے رپورٹر رہے اور Everybody Loves a Good Drought اور The Last Heroes: Foot Soldiers of Indian Freedom کے مصنف ہیں۔

کے ذریعہ دیگر اسٹوریز پی۔ سائی ناتھ
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru